ಪುಟ:Mahakhshatriya.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೭.ಗೆಲುವೇ ಸೋಲು

ಇನ್ನು ಅಷ್ಟು ಹೊತ್ತಿನೊಳಗೆ ವೃತ್ರನು ಗಾಬರಿಗೊಂಡು ಎದ್ದನು. ಮುಖ, ಕಣ್ಣು ಎಲ್ಲವೂ ಗಾಬರಿಯನ್ನು ಸೂಚಿಸುತ್ತ ಇತ್ತು. ಕಣ್ಣು ಬಿಟ್ಟು ನೋಡುತ್ತಾನೆ. ಇಂದ್ರನು ಅತಿ ವಿನಯದಿಂದ ಕುಳಿತಿದ್ದಾನೆ. ತನ್ನ ಪರಿವಾರದ ದಾನವೇಂದ್ರರೆಲ್ಲರೂ ಎಲ್ಲೆಲ್ಲಿದ್ದವರು ಅಲ್ಲಲ್ಲಿಯೇ ಒರಗಿದ್ದಾರೆ. ಒಂದೇ ಗಳಿಗೆಯೊಳಗಾಗಿ ಸುತ್ತಲೂ ನೋಡಿ, ಎಲ್ಲವೂ ಸಹಜವಾಗಿರುವುದನ್ನು ಕಂಡು ವೃತ್ರನು ನಗುತ್ತ “ಇಂದ್ರ, ನನಗೊಂದು ಕನಸಾಯಿತು. ಕನಸು ನಿಜವಾಗಿಯೇ ಇದ್ದಂತೆ ತೋರಿತಲ್ಲ ! ನೋಡಿದೆಯೋ ?” ಎಂದನು.

ಇಂದ್ರನು ತನ್ನನ್ನು ವೃತ್ರನು ಇಂದ್ರನೆಂದು ಸಂಬೋಧಿಸಿದುದನ್ನು ಗಮನಿಸದಂತೆ ಇದ್ದು “ಹೌದು ಪ್ರಭು.ಕನಸಿನ ವೈಭವವೇ ಅದು. ನಿಜದ ತಲೆಯನ್ನು ಮೆಟ್ಟಿಹಾಕಿದಂತೆ ಇರುತ್ತದೆ. ಅದೇನೆಂದು ಕೇಳಬಹುದೇ ?” ಎಂದನು.

ವೃತ್ರನು ಗಟ್ಟಿಯಾಗಿ ನಗುತ್ತ “ಕನಸಿನಲ್ಲಿ ನಾವಿಬ್ಬರೂ ಯುದ್ಧಮಾಡುತ್ತೇವೆ. ನೀನು ನನ್ನನ್ನು ಎದುರಿಸಿ ಹೊಡೆಯಲು ಬರುತ್ತೀಯೆ. ನನಗೇಕೋ ದಿಗಿಲಾಗುತ್ತಿದೆ. ನಾನು ಕಿರುಚಿಕೊಂಡು ಓಡುತ್ತೇನೆ. ನೀನು ಬಂದು ನನ್ನ ಕತ್ತು ಕಡಿಯುತ್ತೀಯೆ. ನಾನು ಯತ್ನವಿಲ್ಲದೆ ಕತ್ತು ಹೋದ ಮೇಲೂ ‘ಮರೆತೆಯಾ ? ವೃತ್ರನು ಸದೇಹನಾಗಿರುವುದಕ್ಕಿಂತ ವಿದೇಹನಾಗಿ ಹೆಚ್ಚು ಬಲಿಷ್ಠನು’ ಎಂದು ನಿನ್ನನ್ನು ಹಿಡಿದುಕೊಳ್ಳುತ್ತೇನೆ. ಆದರೂ ದಿಗಿಲಾಗಿ ಎಚ್ಚರವಾಯಿತು” ಎಂದು ನಗುತ್ತಾ “ನಿನಗೆ ನನ್ನನ್ನು ಕೊಲ್ಲುವ ಬುದ್ಧಿಯಿಲ್ಲವಲ್ಲಾ ?” ಎಂದು ಹೇಳುತ್ತಾನೆ ಇಂದ್ರನು, “ನನಗಂತಹ ಬುದ್ಧಿಯೇ ? ಚೆನ್ನಾಯಿತು’ ಎಂದು ನಗುತ್ತಾ ಒಳಗೊಳಗೆ “ದೇವ, ಈ ಕನಸು ನಿಜವಾಗಲಿ. ಈ ಭೂತವಿಂದು ಸಾಯಲಿ” ಎಂದು ನಾರಾಯಣನಿಗೆ ಕೈಮುಗಿಯುತ್ತಾನೆ.

ವೃತ್ರ ಹಾಗೆಯೇ ಅರೆಗಣ್ಣು ಮುಚ್ಚಿ ನಿದ್ದೆಯ ಜೋಂಪನ್ನು ಅನುಭವಿಸುತ್ತಾ ಒಂದಷ್ಟು ಹೊತ್ತು ಇದ್ದು, ಮೈಮುರಿದು ಎಚ್ಚರಮಾಡಿಕೊಂಡು, ಸುತ್ತಲೂ ಬಿದ್ದಿದ್ದ ದಾನವೇಂದ್ರರನ್ನು ತಿರಸ್ಕಾರವಾಗಿ ನೋಡುತ್ತಾ “ನೋಡು, ನಾವು ನಾಳೆಯ ಬೆಳಿಗ್ಗೆಯವರೆಗೆ ಹೀಗೇ ಬಿದ್ದಿರುವೆವೋ ಏನೋ ? ಹುಂ” ಎಂದು