೧೯.ವಿಕ್ರಯದ ವೈಖರಿ
ಗಂಗಾ-ಯಮುನಾ ಸಂಗಮದ ಪುಣ್ಯಕ್ಷೇತ್ರ. ಪ್ರತಿಷ್ಠಾನ ನಗರ ಲಕ್ಷ್ಮಿಯು ನೋಡಿಕೊಳ್ಳುವ ರನ್ನಗನ್ನಡಿಯೋ ಎಂಬಂತೆ, ಆ ಜಲರಾಶಿಯು ವಿಸ್ತಾರವಾಗಿ ನಿರ್ಮಲವಾಗಿ ಇದ್ದು ಆ ನಗರದ ಪ್ರತಿಬಿಂಬವನ್ನು ಧರಿಸಿದೆ. ಅತ್ತಲಿಂದ ಬಂದ ಶುದ್ಧ ನೀಲದಂತಿರುವ ಯಮುನಾಜಲವು ವಜ್ರದಂತೆ ಥಳಥಳಿಸುವ ಗಂಗಾಜಲದೊಡನೆ ಸೇರಿ, ರತ್ನಖಚಿತವಾದಂತೆ ಇರುವ ಆ ಜಲರಾಶಿಯ ಗರ್ಭವನ್ನು ಭೇದಿಸಿ ಮುಂದೆ ಹೋಗುತ್ತಿರುವುದನ್ನು ನೋಡುತ್ತಾ ಬೆಸ್ತರ ಗುಂಪು ದಡದಲ್ಲಿ ನಿಂತಿದೆ. ಯಜಮಾನನು ಮುಂದೆ ನಿಂತು ನೋಡುತ್ತಿದ್ದಾನೆ. ದೇಹವು ಭೂಮಿಯ ಮೇಲೆ ನಿಂತಿದ್ದರೂ ಮನಸ್ಸು ಆ ನೀರಿನೊಳಗೆ ವಿಹರಿಸಲು ಹೊರಟುಹೋಗಿರುವುದರ ಗುರುತೋ ಎಂಬಂತೆ ಕೈಗಳು ಬೆನ್ನಹಿಂದೆ ಒಂದನ್ನೊಂದು ಹಿಡಿದುಕೊಂಡು ನಿಶ್ಚಲವಾಗಿವೆ. ಕಣ್ಣು ನೊರೆತೆರೆಗಳನ್ನು ಭೇದಿಸಿಕೊಂಡು ಒಳನುಗ್ಗಿ ಅಲ್ಲೆಲ್ಲಾ ಅಲೆದಾಡಿಕೊಂಡು ಬರುತ್ತಿದೆ.
ಒಂದು ಗಳಿಗೆಯಾಯಿತು. ಯಜಮಾನನು ಮಾತನಾಡಿದನು : “ದಿಟ, ಮೀನುಗಳೆಲ್ಲ ಬಂದು ಸೇರಿವೆ. ನಾಳಿದ್ದು ಉಣ್ಣಿಮೆ. ತಾನಕ್ಕೆ ಬರುವವರ ಗದ್ದಲವೆಲ್ಲ ಮದ್ದಿನಕ್ಕೆ ಮುಗಿದು ಓಯ್ತದೆ. ನಾವು ಒತ್ತಾರೆ ಊಟ ಮಾಡ್ಕೊಂಡು ಒತ್ತು ನೆತ್ತಿ ಮೇಲೆ ಬರೋಕೆ ಮುನ್ನ ಇಲ್ಲಿ ಬಂದು ಬಿಡೋವಾ. ಬಲೆಗಳು ಮಾತ್ರ ಬಲವಾಗಿರಬೇಕು. ಈ ತುಯ್ತಾ ಬಂದಾಗ ಕಡೀಬಾರದು. ಅದೆಲ್ಲಾ ನೋಡಿಕೊಳ್ಳಿ. ಜೊತೆಗೆ ಅಂಬಿಗರಿಗೂ ಏಳಿಬುಡಿ. ಎರಡು ದೋಣಿ ಸಾಲದಾ?”
“ಇಲ್ಲ, ಮಾವಾ, ನಾಕು ದೋಣಿಯಿದ್ದರೆ ಚೆನ್ನಾ!”
“ಅಂಗೇ ಮಾಡಿ, ನಾನೂ ಬರಬೇಕಾ ?”
“ಇದೀಗ ಚೆನ್ನಾಯ್ತು. ನೀನಿಲ್ಲದಿದ್ದರೆ ನಾವು ನೀರಿಗಾದರೂ ಇಳಿದೇವಾ? ನೀನು ಬರಲೇಬೇಕು. ನಿಂಗೆ ಸರಣು ಮಾಡಲ್ಲವಾ ನಾವು ನೀರಿಗಿಳಿಯೋದು?”
“ಆಗಲಿ ಕಣಪ್ಪ ! ಗಂಗಮ್ಮನ ಬಲಿ ತಪ್ಪಿಸಬೇಡಿ ಕಣ್ರೋ ! ಒಂದು ಒಳ್ಳೇ ಕುರಿ, ನಾಕು ಬುದ್ದಲಿ ಎಂಡ. ಅರಿಸಿನ, ಕುಂಕುಮ, ಬಳೆ, ಬಿಚ್ಚೋಲೆ, ಕಾಯಿ, ಅಣ್ಣು, ಊವು, ದೂಪ, ದೀಪ, ಅಡಿಕೆಲೆ, ಕಾಣಿಕೆ ಎಲ್ಲಾ ತರಿಸಿ, ಅಂಗೇ