ಪುಟ:Mahakhshatriya.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎರಡನೆಯ ತುತ್ತು ಯಜಮಾನನಿಗೆ ಒಪ್ಪಿಸಿ, ಅವನ ಅಪ್ಪಣೆ ಪಡೆದು ತಾವೂ ತಿಂದರು. ಯಜಮಾನನು ಸೂರ್ಯನಿಗೆ ನಮಸ್ಕಾರ ಮಾಡಿ, ಗಂಗಮ್ಮನ ಅಪ್ಪಣೆ ಕೇಳಿ, ದೋಣಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ದೋಣಿಯನ್ನು ಹತ್ತಿದನು.

ದೋಣಿಯು ಅಷ್ಟು ದೂರ ಹೋಯಿತು. ಅದರ ಹಿಂದೆ ಮಿಕ್ಕ ಮೂರು ದೋಣಿಗಳು ಬಲೆಗಳನ್ನೂ ಕಾಳು ಪುರಿಮೂಟೆಗಳನ್ನೂ ಹೊತ್ತುಕೊಂಡು ಹೋದವು. ಕಾಳುಪುರಿಗಳನ್ನು ಚೆಲ್ಲಿ, ಮೀನುಗಳೆಲ್ಲಾ ಒಂದೆಡೆ ಸೇರುತ್ತಲೂ ಬಲೆಯನ್ನು ಹಾಕುವ ಕೆಲಸವು ಮೊದಲಾಯಿತು. ಯಜಮಾನನು ಬಂದು ದಡವನ್ನು ಸೇರುವುದರೊಳಗಾಗಿ ಬಲೆ ಹಾಕಿದುದು ಮುಗಿಯಿತು : ಬೇಕೆಂದರೆ ಒಂದೊಂದರಲ್ಲಿ ನಾಲ್ಕು ನಾಲ್ಕು ಕೋಣಗಳನ್ನು ಕಟ್ಟಬಹುದು. ಅಂಥಾ ಹುರಿಯ ನೂಲು ಹಗ್ಗಗಳು.

ಅಷ್ಟು ಹೊತ್ತಾದ ಮೇಲೆ ಬಲೆಗಳನ್ನು ಎಳೆಯುವ ಕೆಲಸವು ಮೊದಲಾಯಿತು. ತುಯ್ಯುವುದರಲ್ಲಿಯೇ ಬೆಸ್ತರಿಗೆ ಗೊತ್ತು ಬೇಟೆ ಬೇಕಾದ ಹಾಗೆ ಸಿಕ್ಕಿದೆಯೆಂದು. ಹಗ್ಗಗಳನ್ನು ಎಳೆದು ತಂದು ಎಡದಲ್ಲಿ ಭಾರಿಯ ಮರಕ್ಕೆ ಕಟ್ಟಿದರು. ಸುಮಾರು ಮಧ್ಯಾಹ್ನ ಒಂದು ಝಾವವಾಗಿರಬಹುದು, ಬಲೆಗಳು ದಡಕ್ಕೆ ಬಂದವು. ಆಳಾಳು ಉದ್ದದ ಮೀನುಗಳು, ಸಣ್ಣಪುಟ್ಟವೆಲ್ಲಾ ದೊಡ್ಡ ಕಣ್ಣಿನ ಬಲೆಯಲ್ಲಿ ತಪ್ಪಿಸಿಕೊಂಡು ಹೋಗಿವೆ. ಮೊಳದುದ್ದಕ್ಕೆ ಕಡಿಮೆಯಾದ ಮೀನೇ ಇಲ್ಲ. ಪುಳಪುಳನೆ ಒದ್ದಾಡುತ್ತವೆ. ಅವರಿಗಂತೂ ಅದನ್ನು ನೋಡುವುದಕ್ಕೇ ಒಂದು ಸಂತೋಷ.

ಬಲೆಗಳನ್ನು ದಡದ ಮೇಲಕ್ಕೆ ಎಳೆದು ತಂದುದೂ ಆಯಿತು. ಕೊಂಚ ಹೊತ್ತಿನಲ್ಲಿ ಮೀನುಗಳೆಲ್ಲಾ ಮಂಕಾಗುತ್ತ ಬಂದುವು. ಇನ್ನೂ ಅಷ್ಟು ಹೊತ್ತು ವಿಲವಿಲನೆ ಒದ್ದಾಡಿದವು. ಮಾರಣಹೋಮವು ಆರಂಭವಾಯಿತು. ಒಂದೊಂದನ್ನು ಹಿಡಿದು ಹಿಡಿದು ಗೋಣು ಮುರಿದು ರಾಶಿ ಹಾಕಿದರು.

ಕೊನೆಯಲ್ಲಿ ಒಂದು ವಿಚಿತ್ರದ ಮೀನು. ಅದಕ್ಕೆ ಮನುಷ್ಯರಿಗಿರುವಂತೆ ಕೈಕಾಲು ತಲೆಯಿರುವಂತಿದೆ. ಮೈಮೇಲೆ ಪಾಚಿಯು ಬೆಳೆದು ಹೋಗಿದೆ. ಹಿಡಿತ ಹಿಡಿಯುವುದೇ ಕಷ್ಟ ಕೊನೆಗೆ ಕಷ್ಟಪಟ್ಟು ನೀರಿನ ಹತ್ತಿರ ತೆಗೆದುಕೊಂಡು ಹೋಗಿ ತೊಳೆದರು. ಕೂದಲು ಬೆಳದು ಜಡೆಕಟ್ಟಿಹೋಗಿವೆ. ಆ ಜಡೆಗಳಲ್ಲೆಲ್ಲಾ ಶಂಖದ ಹುಳುಗಳು ಅಂಟಿಕೊಂಡಿವೆ. ಉಗುರುಗಳೂ ಗೇಣುಗೇಣುದ್ದ ಬೆಳೆದಿವೆ. ಅದರಲ್ಲಿ ನೀರಿನ ಹುಳುಹುಪ್ಪಟ್ಟಿಗಳು ಗೂಡುಮಾಡಿಕೊಂಡಿವೆ. ಮನುಷ್ಯ