ಪುಟ:Mahakhshatriya.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಂದೆ?” ಎಂದು ಕೇಳಿದನು. ಅವನು “ಸೋಮಿ, ತಮ್ಮಂಗೆ ತಿಳಿದೋರು ಹೇಳಿರೋದ ಕೇಳಿವ್ನಿ ಏಳೆಜ್ಜೆ ಒಟ್ಟಿಗೆ ನಡೆದರೆ, ಏಳು ಮಾತು ಆಡಿದರೆ ನಂಟತನ ಗಂಟು ಬೀಳ್ತದೆ ಅಂತ. ತಾವೂ ನಾವೂ ಎರಡೂ ಮಾಡಿದ್ದೀವಿ. ನಮಗೂ ತಮಗೂ ನಂಟತನ ಗಂಟುಬಿದ್ದದೆ. ಒಂದು ಸಲ ನಮ್ಮ ಅಟ್ಟೀವರೆಗೂ ತಾವು ಬಂದೂ ಆಲೂ ಅಣ್ಣು ಒಪ್ಪಸ್ಕೋಬೇಕು ನನ್ನೊಡೆಯ!” ಎಂದು ಅಡ್ಡಬಿದ್ದನು.

“ಆಯಿತು, ನಾನು ಯಾವಾಗ ಏಳು ಹೆಜ್ಜೆ ನಿಮ್ಮ ಜೊತೆಯಲ್ಲಿ ನಡೆದುದು?”

“ತಮ್ಮನ್ನ ನೀರಿಂದ ಎಳೆಯೋವಾಗ.”

ಚ್ಯವನನು ನಕ್ಕು ‘ಆಗಲಿ’ ಎಂದು, “ಅರಸ, ಇವರು ಕಾರಣಬಾಂಧವರು. ಮೊದಲು ಇವರ ಕೋರಿಕೆಯನ್ನು ನೆರವೇರಿಸಿ ಆನಂತರ ನಾನು ನಿನ್ನ ಅತಿಥಿಯಾಗ ತಕ್ಕವನು” ಎಂದನು.

ಅರಸನು ಮಹರ್ಷಿಯ ಜೊತೆಯಲ್ಲಿ ಬೆಸ್ತರ ಪಾಳ್ಯಕ್ಕೆ ಹೋದನು. ಮಹರ್ಷಿ ರಾಜರ್ಷಿಗಳಿಬ್ಬರೂ ಆ ಬೆಸ್ತರು ಸಲ್ಲಿಸಿದ ಗೌರವವನ್ನು ಸ್ವೀಕರಿಸಿ ಅರಮನೆಗೆ ಬಂದರು.

* * * *