ಈ ಪುಟವನ್ನು ಪರಿಶೀಲಿಸಲಾಗಿದೆ
೨೬೮ ಮೃತ್ಯುಂಜಯ
ಒಳಗೆ ಅಲ್ಪೋಪಹಾರ ಸ್ವೀಕರಿಸುತ್ತಿದ್ದ ಇನೇನಿಗೆ ಪಡಸಾಲೆಯ ಮಾತು ಕೇಳಿಸಿತು.ಕಿರಿಯ ದೇವಸೇವಕನೊಬ್ಬ ಹೊರಬಂದು ಔಟ ಬೆಕ್ ರನ್ನು ನೊಡಿ, “ ಇರಿ. ಈಗ್ಬರ್ತಾರೆ,” ಎಂದು ಹೇಳಿ ಹೋದ. ಯುವತಿಯೊಡನೆ ಮಾತುಕತೆ ಮುಂದುವರಿಸೋಣ ಎಂದು ಬೆಕ್ ಯೋಚಿಸುವಷ್ಟರಲ್ಲಿ ಇನೇನಿ ಬಂದ. ವಂದಿಸುತ್ತಿದ್ದ ಬೆಕ್ ಔಟರನ್ನು ಅವನು ಕೇಳಿದ: “ಬಟಾ ಬರಲಿಲ್ಲವೇ ?” ಔಟ ಉತ್ತರಿಸಿದ : “ಇಲ್ಲ. ನಾನು ಔಟ. ಇವನು ಬೆಕ್. ನಿನ್ನೆ ರಾತ್ರೆ ಲೇಪನಕ್ಕೆ ಬೇರು ಕೊಟ್ಟಿದ್ರಿ. ಇವತ್ತು ಬೆಳಿಗ್ಗೆ ಇವನಿಗೂ ಶುರುವಾಗಿದೆ.” “ಸ್ವಲ್ಪ ಇರಿ. ಈ ಮಗುವಿನ ಚಿಕಿತ್ಸೆ ಇಷ್ಟು ಮುಗಿಸ್ಬಿಡ್ತೇನೆ.” “ಆಗಲಿ. ನಮಗೇನೂ ಅವಸರವಿಲ್ಲ.” “ಇವತ್ತು ನಾಯಕರಿಗೇನೂ ಕಾರ್ಯಕ್ರಮ ಇಲ್ಲ ಅಂತ ತೋರ್ತದೆ.” “ఇల్ల." “ಹವೆ ಬದಲಾಗ್ತಿದೆ. ಚೇತನಗಳು ಊರಿಂದೂರಿಗೆ ಅಲೆಯೋ ಹೊತ್ತು. ಹಾಲು ತೆನೆಯಾಗಿ ಕಾಳಾಗೋ ಕಾಲ. ಅದೃಷ್ಟ ಕೆಟ್ಟಿದ್ದರೆ ಉಸಿರಿಗೆ ತೊಡಕಾಗೋ ಸಂಭವ. ಎಷ್ಟು ಹುಷಾರಾಗಿದ್ದರೂ ಸಾಲ್ದು.” ಮಾತಾಡುತ್ತಿದ್ದ ಅರ್ಚಕನ ದೃಷ್ಟಿ ಅಲ್ಲಿ ಕುಳಿತಿದ್ದ ಯುವತಿಯ ಅಂಗಾಂಗಗಳ ಮೇಲೆ ಹರಿದಾಡುತ್ತಿದೆ ಎನಿಸಿತು ಬೆಕ್ ಗೆ. ಸಣ್ಣನೆ ಸಿಟ್ಟು ಬಂತು. ದಾರಿ ಕಾಣದೆ ಉಗುರು ಕಚ್ಚಿದ. ಧ್ವನಿ ಏರಿಸಿ ಇನೇನಿ ಅಂದ : “ತಗೊಂಡ್ಬಾರೋ.” ಕಿರಿಯ ದೇವಸೇವಕ ಜೊಂಡಿನಿಂದ ಹೆಣೆದ ಒಂದು ತಟ್ಟೆಯನ್ನು ತಂದು ಆ ಹೆಂಗಸಿನ ಬಳಿ ಇರಿಸಿದ. ಅದರಲ್ಲಿ ಮಗುವನ್ನು ಹೋಲುತ್ತಿದ್ದ ಆವೆ ಮಣ್ಣಿನ ಬೊಂಬೆ ಇತ್ತು. ಅದರ ಕತ್ತಿನಲ್ಲಿ ಕರಿಕಾಯಿಗಳ ಸರ. ಕೈಯಲ್ಲಿ ಗಂಟು ಹಾಕಿದ ತುಂಡುದಾರ. ಅರ್ಥವಾಗದ ಅಂಕಿತವಿದ್ದ ಬಟ್ಟೆಯ ಚೂರು ಪಕ್ಕದಲ್ಲಿತ್ತು.