ಪುಟ:Mrutyunjaya.pdf/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ೩೩೯ ಮುಂದೆ ನ್ಯಾಯಾಧೀಶನಾಗಬೇಕಿತ್ತು. ಅಮಾತ್ಯನಾಗಬೇಕಿತ್ತು .ಬದಲು ಸರುಸಭೆಯ ಹಿರಿಯ ಸಲಹೆಗಾರನಾದೆ. ಅಷ್ಟಕ್ಕೇ ತೃಪ್ತನಾಗಬೇಕಾಯಿತು. ತನಗಿಂತ ಕಿರಿಯವನಾದ ಆಮೆರಬ್ ಮೇಲೇರಿದ, ದಕ್ಷನೆಂದು ಹೆಸರು ಗಳಿಸಿದ, ಮೆರೆದ. ಆತ ಅಮಾತ್ಯನಾದ ಸಮಯದಲ್ಲಿ ಹೇಪಾಟ್ ಗೆ ತನ್ನ ಬಲದ ಅರಿವಿರಲಿಲ್ಲ. ಆಗ ಅವನು ಶಕ್ತಿಶಾಲಿಯಾಗಿದ್ದು , ಅವನ ಮೈತ್ರಿ ತನಗೆ ಲಭ್ಯ ವಾಗಿದ್ದರೆ ಅಮಾತ್ಯ ಪದವಿ ತನ್ನದಾಗುತ್ತಿತ್ತು.

ಸೆಣಸಾಟದಲ್ಲಿ ಪೆರೋ ಶಕ್ತಿಹೀನನಾಗಿ ಆಮೆರಬ್ ಪದವಿ ಕಳೆದುಕೊಂಡರೆ?ಆ ಸ್ಥಾನವೇನೂ ತನ್ನದಾಗುವುದಿಲ್ಲ.ಟೆಹುಟಿ ಅಧಿಕಾರಕ್ಕೆ ಬರುತ್ತಾನೆ. ಜೇನು ಕುಡಿದ ಕರಡಿ.ನೀಲನದಿಗೇ ಬೆಂಕಿ ಇಡಲು ಹೊರಡುವ ಮೂರ್ಖ. ಅವನೆದುರಲ್ಲಿ ತಾನು ಮೂಲೆಗುಂಪಾಗುತ್ತೇನೆ. ಆಗ. ಶಾಶ್ವತ ಭವನಕ್ಕೆ-ಗೋರಿಗೆ-ತಡ ಮಾಡದೆ ತಾನು ಸಾಗಬಹುದು.

ಮಾಗಿ ಕಳೆದ ಮೇಲೆ ಗಾಳಿಯಲ್ಲಿ ಕುಳಿರಿನ ಸೋಂಕಿಲ್ಲ. ಬಿಸಿಲಿನಲ್ಲಿ ಅದು ಚುರುಕು.

ಆಪ್ತ ಸೇವಕ ಕೇಳಿದ:

“ಪಾನೀಯ ಏನಾದರೂ ?”

"ತಾ.”

ಅರಮನೆಯ ಔತಣದಲ್ಲಿ ತಾನು ಕುಡಿದ ದ್ರಾಕ್ಷಾಸುರೆ ಚೆನಾಗಿತ್ತು. ಅಮಾತ್ಯನಿಗೆ ಅರಸನ ಉಗ್ರಾಣದಿಂದ ಉದಾರ ಸರಬರಾಜು .ಸರು ಸದಸ್ಯರಿಗೆ-ಅವರಲ್ಲಿ ಅತ್ಯಂತ ಹಿರಿಯನಾದ ತನಗೂ-ನಿಗದಿಯಾದಷ್ಟು ಮಾತ್ರ. ವಿಸ್ತಾರ ಹೊಲಗಳೂ ಹೇರಳ ರಾಸುಗಳೂ ಇರುವುದರಿಂದ, ಅಭಾವದ ಅನುಭವವಾಗುತ್ತಿಲ್ಲ. ಒಬ್ಬನೇ ಮಗ. ಅವನಿಗೆ ಮಧ್ಯವಯಸ್ಸು ಸಮೀಪಿಸುತ್ತಿದೆ. ತನ್ನ ಸಿಡುಕು ಮೊಂಡುತನ ಅವನವಾದುವು. ಬುದ್ದಿ ಮಾತ್ರ ಅದೆಲ್ಲಿ ಕರಗಿ ಹೋಯಿತೋ? ಒಬ್ಬ ಪ್ರಾಂತಪಾಲನ ಹುದ್ದೆಯನಾದರೂ ಅವನಿಗೆ ಕೊಡಿಸುವ ಆಸೆ. ಸಾಧ್ಯವಾಗುತ್ತದೊ, ಇಲ್ಲವೊ?

ಹಗುರವಾದ ಸಣ್ಣ ಹೂಜೆಯಲ್ಲಿ ದ್ರಾಕ್ಷಾಸುರೆ. ದೋಣಿ ಅಲುಗಿದರೂ ಒಂದು ಹನಿಯೂ ಚೆಲ್ಲದು. ಒಂದೊಂದೆ ಗುಟುಕು. ಹೀಗಿಯೇ ದೂರ,ದೂರ.