ಪುಟ:Mrutyunjaya.pdf/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೩೪೦ ಮೃತ್ಯುಂಜಯ

ಎಡದಂಡೆಯುದ್ದಕ್ಕೂ ದೃಷ್ಟಿ ಬಳಲುವವರೆಗೂ ಗೋರಿಗಳು.ದೊಡ್ಡವು,ಚಿಕ್ಕವು.

ತನ್ನ ಆ ಲೋಕದ ವಾಸಕ್ಕಾಗಿ ತಾನು ನಿರ್ಮಿಸುತ್ತಿರುವ ಗೋರಿ ಭವ್ಯ ವಾದದ್ದು. ನೋಡಿದ ಪ್ರತಿಷ್ಟ ತರೆಲ್ಲ ಅದನ್ನು ಮೆಚ್ಚಿದರು. (ಕತ್ತೆಗಳು ! ಕರುಬಿದರು...) ಆ ಗೋರಿಯ ನಿರ್ಮಾಣಕ್ಕೆ ಆಧಾರ-ಪೆರೋನ ಶಿಲ್ಪಿಯೇ ತನ್ನ ಬಿಡುವಿನ ವೇಳೆಯಲ್ಲಿ ರಚಿಸಿದ್ದ ನಕಾಶೆ. 'ಗೋರಿಯ ಒಳಗೋಡೆಗಳು ಬೋಳಾಗಿ ಕಾಣ್ತಿವೆ.' ಸುಳ್ಳೆ! ಶಿಲ್ಪಿ ಹಾಗೆ ಹೇಳಿದ್ದೇ ఇల్ల, ತನ್ನ ಈಗಿನ ಮಹತ್ಸಾಧನೆಗಳೂ ದಾಖಲಾಗುವಂತೆ ಮಾಡಲು ತಾನು ಹಾಗೆಂದೆ. ಕಲಾವಿದರು ಈಗಾಗಲೇ ರಚಿಸಿರುವ ಚಿತ್ರಮಾಲಿಕೆ ಅಪೂರ್ವ ಕಲಾಸೃಷ್ಟಿ. ತಾನು ನಾವೆಯಲ್ಲಿ ವಿಹಾರ ಹೋಗುತ್ತಿರುವ ಚಿತ್ರ, ಕಾಡು ಬಾತುಕೋಳಿಯ ಬೇಟೆ.ಹೆಂಡತಿ ಮಕ್ಕಳ ಜತೆ ಭೋಜನ ;ಇನ್ನೊಂದು ಸಾಲಿನಲ್ಲಿ-ತನ ಸೇವಕರಿಂದ ಹೊಲದ ಉಳುಮೆ; ನಾಟಿ; ಬೆಳೆಯ ಕುಯಿಲು; ಕಾಳೊಕ್ಕುವುದು; ರೊಟ್ಟಿ ತಟ್ಟುವುದು;ಮತ್ತೊಂದು ಸಾಲಿನಲ್ಲಿ-ಹಸುವನ್ನು ಏರಿರುವ ಹೋರಿ;ಹಸು ಈಯುವುದು; ವಯಸ್ಸಾದ ರಾಸು ಕಸಾಯಿಯವನ ಬಳಿ; ಅದನ್ನು ಕಡಿದು ಮಾಂಸ ಸಿದ್ಧಪಡಿಸುವುದು; ಬೇಯಿಸಿದ ಬಿಸಿಮಾಂಸವನ್ನು ಪಾತ್ರೆಯಿಂದೆತ್ತಿ ತನ್ನ ತಾಟಿಗೆ ಬಡಿಸುವುದು...ಚಿತ್ರಗಳಾದರೆ ಸಾಕೆ? ತಾನು ಈಗ ಬಳಸುವ ಎಲ್ಲ ಸಾಮಗ್ರಿಗಳ ಪ್ರತಿರೂಪಗಳನ್ನೂ ಮೂಡಿಸಬೇಕು– ಗೋರಿಯಲ್ಲಿಡುವುದಕ್ಕೋಸ್ಕರ. ಒಳ್ಳೆಯ ಒಂದು ಮಂಚ, ಉತ್ತಮ ಪೀಠ ಪಲ್ಲಕಿ. ನೂರಾರು ದಾಸದಾಸಿಯರ ಪುಟ್ಟಿ ಪ್ರತಿರೂಪಗಳು....ಸಾಯುವುದಕ್ಕೆ ಮುನ್ನ ತಾನು ಮಾಡಿ ಮುಗಿಸಬೇಕಾದ ಕೆಲಸಗಳು ಇನ್ನೂ ಎಷ್ಟೊಂದಿವೆ! ('ಎಲಾ! ಈ ಹೂಜೆಯಲ್ಲಿ ಸುರೆಯೇ ಇಲ್ಲವಲ್ಲ. ತಳ ಮೇಲಕ್ಕೆ ಎತ್ತಿದರೂ ಬೀಳ್ತಾ ಇಲ್ಲ !')....

ಸೇವಕ ತನ್ನ ಒಡೆಯ ಪಡುತ್ತಿದ್ದ ಪಾಡು ನೋಡಿ, ತಲೆ ತಗ್ಗಿಸಿಕೊಂಡು ಮನಸ್ಸಿನೊಳಗೇ ನಕ್ಕು, ಮತ್ತಷ್ಟು ಸುರೆಯನ್ನು ತಂದು ಹೂಜೆಗೆ ಸುರಿದ. (ಮನೆಯಲ್ಲಾಗಿದ್ದರೆ ಸೇವಕ ಚಾಮರ ಬೀಸುವ ಹೊತ್ತು. ನದಿಯ ಅಲೆ ಗಳನ್ನು ಸೀಳುತ್ತ ಹೋಗುವಾಗ ಆ ದುಡಿಮೆ ಅನಗತ್ಯ.)