ಪುಟ:Mrutyunjaya.pdf/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೩೪೫

"ಮಹಾಮಂದಿರದಿಂದ ಕಳಿಸಿದ್ರು,ಬಂದೆ. నిನ್ನೆ ರಾತ್ರಿಯೇ ವಾಪಸು ಹೋಗ್ಬೇಕಾಗಿತ್ತು. ದೋಣಿ ಸಿಗಲಿಲ್ಲ. ಈಗ ಹೊರಟಿದ್ದೇನೆ."

" ಹಾಗಾದರೆ ಇಲ್ಲಿ ಇಲ್ಲದ ಸಂಬಂಧಿಕನನ್ನು ಯಾಕೆ ಹುಟ್ಟಿಸ್ಕೊಂಡೆ ? "

" ಅದು ಹಿರಿಯ ದೇವಸೇವಕರ ನಿರ್ದೇಶ, ಸ್ವಾಮೀ.”

"ಭೇ‍‌ಷ್.ನಾನು ನಿನ್ನೆ ‌‌ ಬೆಳಿಗ್ಗೆಯೇ ಹೊರಟಿದ್ದರೂ ನನ್ನ ಪ್ರಯಾಣದ ಸುದ್ದಿ ಮಹಾ ಅರ್ಚಕರಿಗೆ ಗೊತ್ತಿರ್‍ತಿತ್ತು. ಅಲ್ಲ ?"

"ಈಗ ನೀವು ಹೇಳಿದ್ದೆಲ್ಲ ನಿಮ್ಮ ಊಹೆ. ನಾನು ಏನೂ ಹೇಳಿಲ್ಲ. ಅಸ್ವಸ್ಥ ಸಂಬಂಧಿಕನನ್ನು ನೋಡೋದಕ್ಕೆ ಅಂತಲೇ ನಾನು ಬಂದದ್ದು. ನೋಡಿಯಾಯ್ತು. ಹೋಗ್ತಿದ್ದೇನೆ."

ಹೆಖ್ವೇಟ್ ತನ್ನ ಪರಿವಾರದ ಲಿಪಿಕಾರನತ್ತ ಹೊರಳಿ, " ಅಸಾಧಾರಣ ಕುಳ ಕಣಯ್ಯ, నిನ್ನ ಸ್ನೇಹಿತ. ಮುಂದೆ ಒಂದು ದಿವಸ ಇವನು ಮಹಾ ಅರ್ಚಕನಾಗಲೂ ಬಹುದು," ಎಂದ.

ದೂತನಾಗಿ ಬಂದಿದ್ದ ದೇವಸೇವಕ ಹಲ್ಲುಕಿರಿದ. ಅಷ್ಟರಲ್ಲಿ ಪೀಠಪಲ್ಲಕಿ ಬಂತು. ಸ್ವರ್ಣಖಚಿತ ಆಸನವಲ್ಲ; ಆದರೂ ಸಾಕಷ್ಟು ಚೆನ್ನಾಗಿತ್ತು. ಅದು ತಲುಪಿದ ಕೆಲ ಕ್ಷಣಗಳಲ್ಲಿ ನಗರಾಧಿಕಾರಿ ಸೆರ್ಕೆಟ್ ಏದುಸಿರು ಬಿಡುತ್ತ ಬಂದ. ಅವನೆಂದ: " ಕ್ಷಮಿಸ್ಬೇಕು. ಸರುಸಭೆಯ ಹಿರಿಯ ಸಲಹೆಗಾರರು ಆನ್ ನಗರಿಗೆ ಬರೋದು ನನಗೆ ತಿಳಿದಿರಲಿಲ್ಲ." " ಅಧಿಕೃತವಾಗಿ ಯಾರೂ ತಿಳಿಸಿರಲಿಲ್ಲ, ಅಲ್ಲವಾ ?" ಎಂದು ಹೆಖ್ವೇಟ್ ಕೇಳಿದ.

ನಗರಾಧಿಕಾರಿ ತಬ್ಬಿಬಾದ. "ಹೌದು,ತಿಳಿಸಿರಲಿಲ್ಲ,"ಎಂದು ತೊದಲಿದ.

ದೇವಸೇವಕನಿಗಾಗಿ ಹೆಖ್ವೆಟ್ ಅತ್ತಿತ್ತ ದೃಷ್ಟಿ ಹರಿಸಿದ.ಹುಡುಗ ಕಾಣಿಸಲಿಲ್ಲ.

"ಸೆರ್ಕೆಟ್! ಅಧಿಕೃತವಾಗಿ ತಿಳಿಸದೆ ಇದ್ದರೇನು? ಬೇರೆ ರೀತಿಯ ಸುದ್ದಿಗಳು ಬರೋದೇ ಇಲ್ಲವೆ?"

"ಒಮ್ಮೊಮ್ಮೆ ಬರ್‍ತವೆ...."