ವಿಷಯಕ್ಕೆ ಹೋಗು

ಪುಟ:Mrutyunjaya.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.




      ೩೫೮                                ಮೃತ್ಯುಂಜಯ 

ಭಟರನ್ನು ಸೆರ್ಕೆಟ್ ಕರೆಸಿದ. ಬಿಸಿಲಲ್ಲಿ ಅವರ ಈಟಿ ಮೊನೆಗಳು ಹೊಳೆದುವು.ಜನರು ಹಿಂದಕ್ಕೆ ಸರಿದರು. ಸರಿದು, ನಿಂತರು. ಅಲ್ಲಿಂದ ಕದಲಲಿಲ್ಲ. ಹೊರಗೆ ಬರುತ್ತ ಮಹಾ ಅರ್ಚಕನೆಂದ: “ನಾನು ಏಕಾಂತದ ಕೊಠಡಿಗೆ ಹೋಗಿ ಬಿಡಲೆ? ಆತ ಭೇಟಿಗೆ ಸಾಯಂಕಾಲ ಬರಲಿ” ಮಾತುಕತೆ ಏನಿದ್ದರೂ ತನ್ನ ಮನೆಯಲ್ಲಿ ಆಗಲಿ ಎಂಬ ಆಸೆ ಮುಖ್ಯ ಅರ್ಚಕನಿಗೆ. “ಈಗ, ಸಾಯಂಕಾಲ-ಎರಡೂ ಒಂದೇ.ಹೇಗಿದ್ದರೂ ಆಗಬೇಕಾದ ಭೇಟಿ." "ಸರಿ ಹಾಗಾದರೆ." ಹೇಪಾಟ್ ಮರದ ಹಾವುಗೆಗಳನ್ನು ಮೆಟ್ಟಿಕೊಂಡ. “ಅಧಿಕಾರ ದಂಡ ತಾ," ಎಂದ ತನ್ನ ಆಪ್ತ ಸಹಾಯಕ ದೇವ ಸೇವಕನಿಗೆ. ಆತ ಹೇಪಾಟ್ ನ ಏಕಾಂತದ ಕೊಠಡಿಗೆ ಧಾವಿಸಿ, ಬೆಳ್ಳಿಹಿಡಿಯ ಆ ದಂಡವನ್ನು ತಂದ. ಜತೆಯಲ್ಲಿ ಮುಖ್ಯ ಅರ್ಚಕನನ್ನೂ ತನ್ನ ಆಪ್ತ ಸಹಾಯಕನನ್ನೂ ಹಿಂಬಾಲಿಸಲು ಸಿದ್ಧರಾಗಿದ್ದ ಮಂದಿರದ ದೇವಸೇವಕರನ್ನೂ ಕರೆದುಕೊಂಡು, ಹೇಪಾಟ್ ಮುಂದೆ ಸಾಗಿದ. ಹೇಪಾಟ್ ಬರುತ್ತಲೇ ಮುಖ್ಯ ಅರ್ಚಕನ ಮನೆಯ ಪಡಸಾಲೆಯಲ್ಲಿ ಇದ್ದವರೆಲ್ಲ ಎದ್ದರು. "ರಾ ಪುತ್ರ ಪೆರೋನ ಆಯುರಾರೋಗ್ಯ ವರ್ಧಿಸಲಿ !" ಎಂದು ನುಡಿದು ಹೆಖ್ವೆಟ್ ತಲೆಬಾಗಿ ನಮಿಸಿದ. ಉಳಿದವರೆಲ್ಲ ನಡುಬಗ್ಗಿಸಿ, ವಂದಿಸಿದರು. ಹೇಪಾಟ್ "ವರ್ಧಿಸಲಿ !" ಎಂದಷ್ಟೇ ಹೇಳಿ, ಮುಖ್ಯ ಅರ್ಚಕ ತನ್ನನ್ನು ಕರೆದೊಯ್ದು ತೋರಿಸಿದ ಪೀಠದ ಮೇಲೆ ಆಸೀನನಾದ. ಒಂದು ಕ್ಷಣ ದೃಷ್ಟಿಗಳಿಂದಷ್ಟೇ ಪರಸ್ಪರ ತಿವಿತ. ಹೆಖ್ವೆಟ್ ಮುಗುಳು ನಗೆ ಬೀರಿದ, ಹೇಪಾಟ್ ಮುಖದ ಸ್ನಾಯುಗಳನ್ನು ಸಡಿಲಿಸಲಿಲ್ಲ.