ಪುಟ:Mrutyunjaya.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೮

ಮೃತ್ಯುಂಜಯ

 ಮುಖ್ಯ ನೋಡಿ. ಇಲ್ಲೂ ಒಂದು ಶರೀರ ಸಿದ್ಧವಾಯ್ತು. ಅದಕ್ಕೇ ಅಬ್ಟು
ವಿಗೆ ಶ್ರೇಷ್ಠ ಸ್ಥಾನ. ಏನು ಹೇಳುತ್ತಾ ಇದ್ದೆ ಅಂದ್ರೆ, ಐಸಿಸ್ ನ ಹಾಗೆ
ಉತ್ಸವದ ಒಂದು ಚೂರು ನಾವೂ ನೋಡ್ಬೌದು. ಅದರ ಆಧಾರದ ಮೇಲೆ
ಉಳಿದಿದ್ದನ್ನು ಕಲ್ಪಿಸಿಕೋಬೇಕು.

ಮೆನೆಪ್ಟಾ ಕೇಳಿದ :
"ಅಣ್ಣ, ಹಿಂದೆ ಈ ಉತ್ಸವ ನೋಡಿದ್ದೀ ಏನು ?"
"ಓಹೋ ! ಮೂರು ಬಾರಿ. ಒಂದೊಂದ್ಸಲ ಒಂದೊಂದು ಕಡೆ
ನಿಂತಿದ್ದೆ. ಮೊದಲ್ನೇ ಸಲ ಗರ್ಭಗುಡಿಯ ಹತ್ತಿರವೇ ಇದ್ದೆ...."
ನೆರೆದವರ ಎಡೆಯಿಂದ ಒಂದು ಸ್ವರ ಕೇಳಿಸಿತು :
"ಏನೇನ್ಕಂಡೆ ಹೇಳು ಮತ್ತೆ."
"ಹತ್ತಿರದಿಂದ, ಈ ಎರಡೂ ಕಣ್ಣುಗಳಿಂದ, ಎಲ್ಲಾ ನೋಡ್ದೆ...."

****

....ಸೂರ್ಯೋದಯಕ್ಕೆ ಮುಂಚೆ, ಕತ್ತಲು ದಟ್ಟವಾಗಿದ್ದಾಗಲೇ
ಮುಖ್ಯ ದೇವ ಸೇವಕನೂ ಹನ್ನೆರಡು ಜನ ಕಿರಿಯ ದೇವಸೇವಕರೂ ದೇಗುಲದ
ಬಳಿಯ ಪವಿತ್ರ ಕೊಳದಲ್ಲಿ ಸ್ನಾನ ಮಾಡುತ್ತಾರೆ. ಒದ್ದೆ ಬಟ್ಟೆಯಲ್ಲೇ
ದೇಗುಲಕ್ಕೆ ಬರುತ್ತಾರೆ. ಬಟ್ಟೆ ಮುಖ್ಯಸ್ಥನ ಮೈಮೇಲೆ ಮಾತ್ರ___ಒಂದಿಷ್ಟು.
ಉಳಿದವರಿಗೆ ಬರೇ ಕೌಪೀನ. ಅವರ ಮೆರವಣಿಗೆ ಮಹಾದ್ವಾರವನ್ನು
ಪ್ರವೇಶಿಸಿ, ಗರ್ಭಗುಡಿಯತ್ತ ಸಾಗುತ್ತದೆ. ಪ್ರಾಂಗಣದಲ್ಲಿ ಕಟಾಂಜನದ
ಈಚೆಗೆ ಪ್ರೇಕ್ಷಕರ ನೂಕು ನುಗ್ಗಲು. ಜನರು ಅದನ್ನು ದಾಟಿ ಮುಂದಕ್ಕೆ
ಹೋಗುವಂತಿಲ್ಲ.
ಗರ್ಭಗುಡಿಯ ಬಾಗಿಲಿನ ಮೇಲೆ ಆವೆಮಣ್ಣಿನ ಮುದ್ರೆ. ಮುಖ್ಯ
ದೇವಸೇವಕ ಆ ಮುದ್ರೆಯನ್ನು ಒಡೆಯುತ್ತಾನೆ. ದಿಗಂತದಲ್ಲಿ ಸೂರ್ಯ
ಕಾಣಿಸಿಕೊಂಡು ಮೊದಲ ರಶ್ಮಿಗಳನ್ನು ತೂರಿದಾಗ, ಗರ್ಭಗುಡಿಯ ಬಾಗಿಲು
ತೆರೆಯುತ್ತಾನೆ. ಒಳಗಿರುವ ದೇವ ಮೂರ್ತಿಯ ಮೇಲೆ ಬೆಳಕು ಬೀಳುತ್ತದೆ.
ಬಟ್ಟೆ ಸುತ್ತಿದ ಮೂರ್ತಿ. ನಾಲ್ಕೈದು ಮೊಳ ಎತ್ತರ. ಮುಖ್ಯ ದೇವ
ಸೇವಕ ಅದರ ಮುಂದೆ ಸಾಷ್ಟಾಂಗ ಪ್ರಣಾಮ ಮಾಡುತ್ತಾನೆ. ಎದ್ದು, ಮಂತ್ರ