ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೃತ್ಯುಂಜಯ ೫೦೭ ಸಾಕಷ್ಟು ವೇಗವಾಗಿ ಬಟಾನ ದೋಣಿ ಬಂದಿತ್ತು, ಎಷ್ಟೋ ನಾವೆಗಳನ್ನು ಅದು ಹಿಂದಿಕ್ಕಿತು. ಆದರೆ, ಇನ್ನು ಒಂದು ದಿನದ ಪಯಣ ಎನ್ನುವಾಗ ನದಿಯಲ್ಲಿ ದೋಣಿಗಳ ದಟ್ಟಣೆ ಹೆಚ್ಚಿತು. ದೋಣಿಯ ಮೂಲೆಯಲ್ಲಿದ್ದ ಅಮನ್ ದೇವರಿಗೆ ಅವನೆಷ್ಟೋ ಪ್ರಾರ್ಥನೆ ಸಲ್ಲಿಸಿದ. ನಿಧಾನವಾಗಿ ಸಾಗುತ್ತಿದ್ದ ದೋಣಿಗಳು ಹಲವು. ಬಟಾನ ಅವಸರ ಕಂಡು ಅವರಲ್ಲಿ ಎಷ್ಟೋ ಜನ ಅ೦ದರು :
"ನೀವು ಎಷ್ಟೇ ಬೇಗ ಹೋದರೂ ಮೆರವಣಿಗೆ ನೋಡಲಾರಿರಿ. ನಿಧಾನ ಮಾಡಿ. ದೀಪಾಲಂಕಾರದ ಹೊತ್ತಿಗೆ ಹೋಗ್ತೀರಿ. ಅದು ಮೆರವಣಿಗೆಗಿಂತಲೂ ಚೆನ್ನಾಗಿರ್‍ತದೆ.” ನಿಧಾನ ಹೋಗುವ ದೋಣಿಗಳನ್ನು ಒರೆಸಿಕೊಂಡು ಹೋಗಬೇಕು. ಎಷ್ಟು ಕೂಗಿ ಹೇಳಿದರೂ ದಾರಿ ಬಿಡದವರನ್ನು ಹಿಡಿದು ಥಳಿಸಬೇಕು–ಎನ್ನುವಷ್ಟು ಸಿಟ್ಟು ಬಟಾನಿಗೆ. ಆದರೆ ಒಳಗಿನ ವಿವೇಕ ಎಚ್ಚರಿಕೆ ನೀಡಿತು: ತಾಳ್ಮೆತಪ್ಪಿ ಜಗಳಕ್ಕೆ ಇಳಿದೆಯೆಂದರೆ ಮತ್ತೂ ತಡವಾಗ್ತದೆ. 'ನಾನು ಮೆಂಫಿಸ್ ಬಿಡುವವರೆಗೂ ಎಲ್ಲ ಚೆನಾಗಿತ್ತು, ಅಲ್ಲಿಂದ ಹೊರಟೊಡನೆ ಸೆತ್ ತನ್ನ ಆಟ ಆರಂಭಿಸಿದ ' ಎಂದು ಭಾವಿಸುತ್ತ ಬಟಾ ಮನಸ್ಸಿನಲ್ಲೇ ಗೋಳಾಡಿದ. ಕೆಫ್ಟು ಅಂದಿದ್ದ : 'ಸೆಡ್ ಉತ್ಸವದ ಮುನ್ನಾ ದಿನದಿಂದಲೇ ಮೆನ್ನ ನಿಮ್ಮ ದಾರಿ ನೋಡ್ತಾನೆ. ದೋಣಿಕಟ್ಟೆಯಲ್ಲಿ ಅಲ್ಲ. ಎಡ ದಂಡೆಯ ಮೇಲೆ.' ಆ ಮುನ್ನಾದಿನ ಕಳೆದು ಇರುಳಾಯಿತು. ಸೆಡ್ ಉತ್ಸವದ ಬೆಳಕು ಹರಿಯಿತು. ಬಿಸಿಲೇರಿತು. ಅಪರಹ್ನವಾಯಿತು. 'ದಾರಿ ನೋಡಿ ಬೇಸತ್ತು ಮೆನ್ನ ಹೊರಟು ಹೋಗಿರಬಹುದು.....ಕತ್ತಲಾದ್ಮೇಲೆ ಜತನದಿಂದ ಅರಮನೆಯ ಹತ್ತಿರಕ್ಕೆ ಹೋಗಿ ಅವನನ್ನು ಹುಡುಕಬೇಕು. ಎಲ್ಲ ಸರಿ ಹೋಯಿತೆಂದರೆ, ಮೆನೆಪ್‍ಟಾ ಅಣ್ಣನನ್ನು ಕರೆದುಕೊಂಡು ಇವತ್ತು ರಾತ್ರಿಯೇ ಊರಿಗೆ ಹೊರಟು ಬಿಡಬೇಕು.' ಬಟ್ಟೆಯನ್ನು ಮೇಲಕ್ಕೆ ಹಾರಿಸಿ ಕುಣಿಯುತ್ತಿರುವ ಆತ ! ಯಾಕೆ ಸಂದೇಹ ? ಮೆನ್ನನೇ, ಮೆನ್ನನೇ.