ಪುಟ:Mrutyunjaya.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೮ ಮೃತ್ಯುಂಜಯ ಚುರುಕು ಚಲನೆಯ ಟೆಹುಟ ಚಂಗನೆ ಎದ್ದು ನಿಂತ. ಸ್ಥೂಲಕಾಯ ಪ್ರಾಂತಪಾಲನೂ ಗಡಿಬಡಿಸಿ ಎದ್ದ. ಮೆಲ್ಲ ಮೆಲ್ಲನೆ ಮೇಲೇರತೊಡಗಿದ್ದ ಸೂರ್ಯ ನನ್ನೊಮ್ಮೆ ನೋಡಿ ಟೆಹುಟ ಅಂದ : " ಕೆಳಗೆ ಹೋಗೋಣ... ಮನವಿ ಸಲ್ಲಿಸೋ ಮಹಾನುಭಾವರು ದಯ ಮಾಡಿಸಬಹುದು! ನೋಡಿರಿ." ಇಬ್ಬರೂ ಮಹಡಿಯಿಂದ ಇಳಿದು ಬಂದರು, ಪಡಸಾಲೆಗೆ. ಅದರೆದುರು ಅಂಗಳ. ಅಂಗಳದಾಚೆ ಎತ್ತರದ ಹಿತ್ತಿಲು ಗೋಡೆ. ಆ ಗೋಡೆಯಲ್ಲಿ ಮಹಾದ್ವಾರ. ದ್ವಾರದ ಆ ಕಡೆ ಈ ಕಡೆ ನಿಂತಿದ್ದರು, ಟೆಹುಟಿಯ ಜತೆ ಬಂದಿದ್ದ ಆರು ಕರಿಯ ಭಟರಲ್ಲಿ ಇಬ್ಬರು–ಗದಾಧಾರಿಗಳು. ಆ ದ್ವಾರಕ್ಕೆ ಎದುರಾಗಿ ಪಡಸಾಲೆಯ ಈ ಅಂಚಿನಲ್ಲಿತ್ತು ವೇದಿಕೆ. ಅದರ ಮೇಲೆ, ಮರದ ಎರಡು ಕುರ್ಚಿಗಳು. ಕೆಳಗೆ ಎಡಬಲಗಳಲ್ಲಿ ಆರೆಂಟು ಸಾಧಾರಣ ಕುರ್ಚಿಗಳು. ವೇದಿಕೆಯ ಮುಂದುಗಡೆ ನೆಲದ ಮೇಲೆ ಒಂದು ಪೆಟಾರಿ. ಕಂದಾಯ ಅಧಿಕಾರಿಯೂ ಪ್ರಾಂತಪಾಲನೂ ಕಾಣಿಸಿಕೊಂಡೊಡನೆ, ಅಳುಗಳು ಸುಗಂಧ ದ್ರವ್ಯಗಳನ್ನು ಉರಿಸಿದರು. ವೇದಿಕೆಯ ಮೇಲಿನ ಪೀಠಗಳಲ್ಲಿ ಟೆಹುಟ ಮತ್ತು ಗೇಬು ಕುಳಿತರು. ಟೆಹುಟಿಯ ತಂಡದ ಮೂವರು ಕರಿಯ ಭಟರು ವೇದಿಕೆಯ ಹಿಂದೆ ನಿಂತರು. ಆ ಭಟರ ಮುಖಂಡ ಒಂದು ಕಂಬದ ಬಳಿ, ಮಹಾಶಿಲ್ಪಿಯೊಬ್ಬ ಕಡೆದ ಶಿಲಾ ಪ್ರತಿಮೆಯಂತಾದ. ತೊಳೆದ ಕೆಂಡದ ಮೈಬಣ್ಣ, ಕುಳ್ಳು. ಹೃಷ್ಟಪುಷ್ಟ ಮಾಂಸ ಖಂಡಗಳು, ದಪ್ಪ ತುಟ, ನುಣ‍್ಣನೆ ಬೋಳಿಸಿದ ತಲೆ, ಪುಟ್ಟಮೂಗು, ಕ್ರೌರ್ಯ ಘನೀಭವಿಸಿದ ಜವ್ವನದ ಕಣ್ಣುಗಳು. ನಡು ಪಟ್ಟಿಯಲ್ಲಿ ಸುರುಳಿ ಸುತ್ತಿದ ಚಾವಟಿ. ಆತ ನುಬಿಯ ದೇಶದಿಂದ ಬಂದು ಐಗುಪ್ತ ಆಡಳಿತದ ಕೀಲಿಯಾಗಿದ್ದ ಬಕಿಲ. " ಬಕಿಲ!" -ಟೆಹುಟ ಕರೆದ. ಶಿಲಾಪ್ರತಿಮೆಯ ದೃಷ್ಟಿ ಒಡೆಯನತ್ತ ಹೊರಳಿತು. ಟೆಹುಟ ನುಡಿದ :