ಪುಟ:Naavu manushyare - Niranjana.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭಾರತದ ದೇಶೀಯ ಭಾಷೆಗಳಲ್ಲಿ ಈ ಶತಮಾನದ ಎರಡು ಮೂರನೆಯ ದಶಕಗಳಲ್ಲಿ ನವೋದಯ ಉಂಟಾಗಲು ಕಾರಣ, ತಿಲಕ-ಗಾಂಧಿಯರ (ಬಳಿಕ ಗಾಂಧಿ-ಜವಾಹರರ) ನೇತೃತ್ವದ ಸ್ವಾತಂತ್ರ್ಯ ಸಂಗ್ರಾಮ, ಸಾಹಿತ್ಯ, ಸಂಸ್ಕೃತಿ ಹೊಸನೆಲೆಯನ್ನು ಅರ್ಥವನ್ನು ಸಾಧಿಸಲು ಯತ್ನಿಸಿದ ಕಾಲ ಅದು. ಆ ವಾತಾವರಣದಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡು ಕೊಂಡವರು ಸಹಸ್ರಾರುಜನ. ಒಬ್ಬೊಬ್ಬರದು ಒಂದೊಂದು ಬಗೆ. ಅದರಲ್ಲೊಂದು ಕಾರಂತಶೈಲಿ. ಈ ಶೈಲಿಯಿಂದ ಪ್ರಭಾವಿತವಾದ ಕ್ಷೇತ್ರ ದಕ್ಷಿಣ ಕನ್ನಡ. 1930-40ರ ದಶಕದಲ್ಲಿ ಪುತ್ತೂರಿನ ದಸರೆ-ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಹೆಸರುವಾಸಿಯಾಗಿತ್ತು. ಕಾರಂತರೇ ಹೇಳಿರುವಂತೆ "ಪುತ್ತೂರಿನ ನನ್ನ ಆಶ್ರಯದಾತರಾದ ಮೊಳಹಳ್ಳಿ ಶಿವರಾಯರು ಆ ಊರನ್ನು ಬಿಡುವ ಸ್ವಲ್ಪ ಕಾಲದ ಮೊದಲೇ ಅಲ್ಲಿನ ದಸರಾ ಉತ್ಸವ ನಿಂತಿತು." ನನ್ನ ಹನ್ನೊಂದು ಹನ್ನೆರಡನೆಯ ವಯಸ್ಸಿನಲ್ಲಿ (1935 ಮತ್ತು 1936) ಪುತ್ತೂರಿನ ದಸರೆ ನೋಡಲು, ಸವಿಯಲು ಸುಳ್ಯದಿಂದ ನಾನು ಬಂದಿದ್ದೆ. 1936ರಲ್ಲಿ ಒಂದು ದೃಶ್ಯಾವಳಿಯಲ್ಲಿ ಗುಡುಗು ಮಿಂಚು ಆರ್ಭಟಕ್ಕೆ ಬೆದರುವ ಆದಿವಾಸಿಯ ಪಾತ್ರವಹಿಸಿದ್ದೆ. ಪ್ರೇಕ್ಷಕರ ಮುಂದೆ ನಾನು ಹೀಗೆ ಕಾಣಿಸಿಕೊಂಡದ್ದು ಒಂದೆರಡು ನಿಮಿಷ ಮಾತ್ರ.

ಶಾಲೆಯ ವಾರ್ಷಿಕೋತ್ಸವದಲ್ಲಿ ಯಾವಾಗಲೂ ವಿವಿಧ ವಿನೋದಾವಳಿ ಇರುತ್ತಿತ್ತು. ಒಂದು ಬಾರಿ ಇದ್ದಕ್ಕಿದ್ದಂತೆ ರಂಗಸ್ಥಲದ ಮೇಲೆ ಬುದ್ಧ ಪ್ರತ್ಯಕ್ಷನಾದ. ಬೋಳುತಲೆ, ಆಕರ್ಷಕ ದುಂಡುಮುಖ, ನೀಳವಸನ. 1 ಬುದ್ಧ ಕೈಗಳಲ್ಲಿ ఆ ದಿನವೋ ವಾರವೋ ಹುಟ್ಟಿರಬಹುದಾದ ಮುದ್ದಾದ ಆಡಿನಮರಿ. ಆ ಪಾತ್ರಧಾರಿ ನನ್ನ ಹಿರಿಯ ಕನ್ನಡ ಅಧ್ಯಾಪಕ ಬಿ. ಶಂಕರನಾರಾಯಣ ರಾವ್. ನಶ್ಯಪ್ರಿಯ-ಸದಾಮಿಡಿಯುವ ಭಾವಜೀವಿ!


1 ಕಿರಿಯ ಕನ್ನಡ ಅಧ್ಯಾಪಕರು ಕೆ. ಎಸ್. ವೆಂಕಪ್ಪ ಭಟ್. ನಾಲ್ಕನೆಯ ತರಗತಿಯಲ್ಲಿ ನಾನು ಬರೆದ ಒಂದು ಪ್ರಬಂಧದ ಮಾರ್ಜಿನ್ ನಲ್ಲಿ ಇಂಗ್ಲಿಷಿನಲ್ಲಿ ಕೆಂಪು ಮಸಿಯಲ್ಲಿ Good ಎಂದು ಬರೆದವರು. ಅದು ನನಗೆ ದೊರೆತ ಮೊದಲ ಮೆಚ್ಚುಗೆ. ಮುಂದೆ ಬೇರೆ ಬೇರೆ ಪಾಠಗಳಲ್ಲೂ ಗುಡ್-ವೆರಿಗುಡ್ ಗಳ ಪರಿಚಯ ಆಗಾಗ್ಗೆ ಆಯಿತೆನ್ನಿ.