ಪುಟ:Rangammana Vathara.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

122

ಸೇತುವೆ

ಕೆಳಗೆ ಹಾಕುತ್ತಿದ್ದ ಸಹಿ ಒಂದೇ- ರೂಪ್ ಆರ್ಟ್ಸ್. ಆ ಸಂಸ್ಥೆಯ ಒಡೆಯ ಚಿತ್ರಕಾರ
ನಾಗಿರಲಿಲ್ಲ. ಆದರೆ ಆತ ಸಮರ್ಥನಾದ ಕೊಳ್ಳುವ-ಮಾರುವ, ಮಾರಾಟವನ್ನೇ
ರ್ಪಡಿಸುವ ಯುವಕನಾಗಿದ್ದ. ಅವನ ಸ್ವಂತದ್ದೇ ಆದ ಜಾಹೀರಾತು ಸಂಸ್ಥೆಯೊಂದಿತ್ತು.
ಮೂರು ವರ್ಷಗಳ ಉದ್ಯಮದ ಬಳಿಕ ನಾಲ್ಕು ಕಾಸು ಸುಲಭವಾಗಿ ಆತನ ಕೈಯಲ್ಲಿ
ಓಡಾಡುವಂತಾಗಿತ್ತು. ಆ ಸಂಸ್ಥೆಯ ಚಲಿಸುವ ಒಂದು ಯಂತ್ರ ಶಂಕರನಾರಾಯ
ಣಯ್ಯ. ಆ ಕೆಲಸ ಎಷ್ಟೋ ವೇಳೆ ನೀರಸವಾಗಿ ಆತನಿಗೆ ತೋರಿದರೊ, ಆ ಆವರಣ
ದೊಳಗೇ ಒಂದಿಷ್ಟು ರಸಿಕತೆಯನ್ನು ತುಂಬಲೆತ್ನಿಸುತ್ತ, ಕಲೆಯನ್ನು ಹೊಟ್ಟೆ ಹೊರೆ
ಯುವ ಸಾಧನವಾಗಿ ಬಳಸಿ ಆತ ಕಾಲ ಕಳೆಯುತ್ತಿದ್ದ.
ಹೀಗಿದ್ದರೂ ಆಗೊಮ್ಮೆ ಈಗೊಮ್ಮೆ ಕೈಗೊಡದ ಬಯಕೆಗಳು ಕಣ್ಣು ತೆರೆದು
ಆತನನ್ನುಮಾತನಾಡಿಸುತ್ತಿದ್ದುವು.
ಆಗ ಹೇಗೆ ವರ್ತಿಸಬೇಕೆಂಬುದು ಚಂಪಾವತಿಗೆ ಗೊತ್ತಿತ್ತು.
ಅಂತಹದೇ ಸನ್ನಿವೇಶವಾದ ಈ ಸಂಜೆ...
ಚಂಪಾ ಮೆಲುದನಿಯಲ್ಲಿ ಕೇಳಿದಳು:
"ಸೌತೆಕಾಯಿ ಇದೆ. ಏನು ಮಾಡ್ಲಿ?"
"ಏನಾದರು ಮಾಡೇ."
"ಕೋಸಂಬರಿ ಮಾಡ್ಲೇನು?"
"ಹೂಂ."
ಒಲೆಯ ಎದುರು ಮಗುವನ್ನೆತ್ತಿಕೊಂಡು ಗೋಡೆಗೊರಗಿ ಕುಳಿತಿದ್ದ ಗಂಡಸಿನತ್ತ
ಸರಿದಳು ಚಂಪಾ.
"ಎಷ್ಟೊಂದು ಮುದ್ದಿಸೋದು ಮಗೂನ. ಇಲ್ಕೊಡಿ!"
ಮಗುವನ್ನೆತ್ತಿಕೊಂಡು ಆಕೆ ಬದಿಗೆ ಸರಿದಳು. ಬಾಹುಗಳಿಂದ ಗಂಡನ ಕೊರ
ಳನ್ನು ಬಳಸಿ ಮುಖಕ್ಕೆ ಮುತ್ತು ಕೊಟ್ಟಳು- ಮತ್ತೊಂದು.
"ನನ್ನ ದೇವರಿಗೆ ನೋವಾಯ್ತಲ್ಲ- ಅದಕ್ಕೆ."
ತನ್ನ ತೋಳಿನಿಂದ ಆಕೆಯನ್ನು ಶಂಕರನಾರಾಯಣಯ್ಯ ಆಧರಿಸಿದ. ಉಳಿದು
ದೆಲ್ಲ ಆತನಿಗೆ ಮರೆತು ಹೋಯಿತು.
"ಅಯ್ಯೋ! ಅದೇನೊ ಸದ್ದಾಯ್ತು. ಯಾರು ಬಂದರೊ?"
-ಎಂದು ಚಂಪಾ ಗಡಬಡಿಸಿ ಎದ್ದು ಹೊರಬಂದಳು. ಒಳಗೆ ಕಾಲಿರಿಸಿದ್ದ
ಅಹಲ್ಯಾ ಸರಕ್ಕನೆ ಹಿಂತಿರುಗಿ ಹೋಗುತ್ತಿದ್ದುದು ಕಾಣಿಸಿತು.
ಕರೆದು ನಿಲ್ಲಿಸಬೇಕೆಂದು ಆಕೆಯ ಹೆಸರು ನಾಲಿಗೆಯ ತುದಿಗೆ ಬಂದರೂ ಚಂಪಾ
ತನ್ನನ್ನು ತಾನೇ ತಡೆದಳು.
ಒಳಕ್ಕೆ ಹಿಂತಿರುಗಿದ ಹೆಂಡತಿಯನ್ನು ಶಂಕರನಾರಾಯಣಯ್ಯ ಕೇಳಿದ:
"ಯಾರು ಚಂಪಾ?"