ಪುಟ:Rangammana Vathara.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಂಗಮ್ಮನ ವಠಾರ

123

"ಅಹಲ್ಯಾ ಕಣ್ರೀ, ನೋಡಿದಳೋ ಏನೋ?"
"ಏನನ್ನ?"
"ನಾಚಿಕೆ ಇಲ್ಲ ನಿಮಗೆ..."
"ನಿನಗಿದೆ, ಅಲ್ಲ?"
"ಹೋಗ್ರಿ."
"ನೋಡಲಿ ಬಿಡು. ಕಲಿತ್ಕೋತಾಳೆ. ಹಾಡು ಹ್ಯಾಗೂ ಹೇಳಿಕೊಡ್ತಿದೀಯಾ.
ಇದನ್ನೂ-"
"ಸಾಕು, ಥೂ!"
ಒಲೆಯ ಉರಿ ಮತ್ತೊಮ್ಮೆ ಆರಿ ಹೋಗಿತ್ತು. ಚಂಪಾ ಊದುಕೊಳವೆಯನ್ನೆತ್ತಿ
ಕೊಂಡಳು. ಶಂಕರನಾರಾಯಣಯ್ಯ ಸೌತೆಕಾಯಿ ಹೆಚ್ಚತೊಡಗಿದ
...ಹೊರಗೆ ಹೆಸರು-ಹಲಿಗೆ ಗೋಡೆಗೆ ತಗಲಿ ತೂಗುತ್ತಿತ್ತು.
'ಚಂದರ್ ಶೇಖರ್.'
ಚಂದ್ರಶೇಖರಯ್ಯನೆಂದುಕೊಂಡ:
'ಒಳ್ಳೇ ಶಂಕರನಾರಾಯಣಯ್ಯ. ಹೆಸರು ಹಲಿಗೆ ಬರಕೊಡೀಂತ ತಮಾಷೆಗೆ
ಅಂದಿದ್ರೆ ಬರೆದೇ ಬಿಟ್ಟಿದ್ದಾನೆ!.
ಮೋಜು. ರಂಗಮ್ಮನ ವಠಾರದಲ್ಲೊಂದು ಕೊಠಡಿ ಮನೆಗೆ ಹೆಸರು-ಹಲಿಗೆ:
ಹರಿದ ಸೀರೆ ಹಳೆಯ ಚಪ್ಪಲಿಗಳ ಕರಿಯ ಹೆಂಗಸು ಕೈಯಲ್ಲಿ ವ್ಯಾನಿಟಿಬ್ಯಾಗ್ ಹಿಡಿದ
ಹಾಗಿತ್ತು.
ಆ ಮನೆಯನ್ನು ಬಿಟ್ಟುಬಿಡಬೇಕೇಂದು ಎಷ್ಟೋ ಸಾರೆ ಆತ ಯೋಚಿಸಿದ್ದ. ಆದರೆ
ಬೇರೆ ಒಳ್ಳೆಯ ಕೊಠಡಿಯನ್ನು ಹುಡುಕಲು ಆತನಿಗೆ ಬಿಡುವೇ ದೊರೆತಿರಲಿಲ್ಲ. ಬಿಡು
ವಿದ್ದಾಗ ಆಯಾಸವೆನಿಸುತಿತ್ತು. ಆಯಾಸವಿಲ್ಲದೆ ಇದ್ದಾಗ ಹಾಳು ಬೇಸರ. 'ಯಾವು
ದಾದರೂ ಸಿನಿಮಾ ನೋಡೋಣ' ಎನಿಸುತ್ತಿತ್ತು.
ಅಗತ್ಯದ ಕೆಲಸವಿದ್ದರೆ ಉತ್ಸಾಹದಿಂದ ಒಂದೇ ಸಮನೆ ಆತ ದುಡಿಯುತ್ತಿದ್ದ.
ಪ್ರವಾಸ ಹೊಗುತ್ತಿದ್ದ. ದನಿವೆಂಬುದನ್ನೇ ಅವನು ಅರಿಯ. ಅದು ಮುಗಿದು
ಒಮ್ಮೆ ಕಾಲುಚಾಚಿದನೆಂದರೆ, ಚಂದ್ರಶೇಖರಯ್ಯ ಮಹಾ ಸೋಮಾರಿ. ಊಟ
ಮಾಡುವುದಕ್ಕೂ ಹೋಟೆಲಿಗೆ ಹೊತ್ತಿಗೆ ಸರಿಯಾಗಿ ಹೂಗುತ್ತಿರಲಿಲ್ಲ. ತಡವಾಗಿ
ಹೋಗಿ, ಊಟವಿಲ್ಲವೆಂದು, ಪಕ್ಕದ ಹೋಟೆಲಿನಲ್ಲಿ ತಿಂಡಿ ತಿಂದು ಕಾಫಿ ಕುಡಿಯು
ತ್ತಿದ್ದ. ನೈರ್ಮಲ್ಯ ಆತನಿಗೆ ಇಷ್ಟವಾದರೂ ಅದನ್ನು ಕಾಪಾಡಲು ಆತ ಪ್ರಯತ್ನಿಸು
ತ್ತಿರಲಿಲ್ಲ. ಎಂದಾದರೊಮ್ಮೆ ಕೊಠಡಿಯನ್ನು ಅಚ್ಚುಕಟ್ಟಾಗಿಡಲು ಅವನು ಯತ್ನಿಸು
ವುದಿತ್ತು. ಆದರೆ ಒಂದೆರಡು ದಿನಗಳಲ್ಲಿ ಎಲ್ಲವು ಮೊದಲಿನಂತೆಯೇ ಮಾರ್ಪಡು
ತ್ತಿದ್ದುವು.
ಮದುವೆಯಾಗಿದೆಯೆಂದು ಸುಳ್ಳು ಹೇಳಿ ಕೊಠಡಿ ಮನೆ ದೊರಕಿಸಿಕೊಂಡ.