ಪುಟ:Rangammana Vathara.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

176

ಸೇತುವೆ

__"ನೀನು ಪದವೀಧರನಲ್ಲ."
__"ಜಾತಿ?"
__"ಷಾರ್ಟ್ ‌ಹ್ಯಾಂಡ್ ಟೈಪ್‌ರೈಟಿಂಗ್ ತಿಳೀದು ಹಾಗಾದ್ರೆ?"
ಆತ ಪದವೀಧರನಾಗುವ ಮಾತೇ ಇರಲಿಲ್ಲ.
ಜಾತಿಯ ವಿಷಯದಲ್ಲಿ ಆತನೇನೂ ಮಾಡುವಂತಿರಲಿಲ್ಲ.
ಆದರೆ ಕೊನೆಯದು ಸಾಧ್ಯವಿತ್ತು.
ಶೀಘ್ರಲಿಪಿಯನ್ನೂ ಟೈಪು ಮಾಡುವದನ್ನೂ ಕಲಿಸಿಕೊಡುವ ಶಾಲೆಗೆ ಆತ
ವಿದ್ಯಾರ್ಥಿಯಾಗಿ ಹೋದ.
ಆತನ ಬರವಣಿಗೆ ನಡೆದೇ ಇತ್ತು. ಅಹಲ್ಯೆಯ ಮದುವೆಯನ್ನು ಹಿನ್ನೆಲೆ
ಯಾಗಿಟ್ಟು ಹೃದಯಸ್ಪರ್ಶಿಯಾದೊಂದು ಕತೆಯನ್ನು ಆತ ಬರೆದ. ಅದನ್ನೋದುತ್ತ
ರಾಧಾ ಒಂದೇ ಸಮನೆ ಕಣ್ಣೀರು ಸುರಿಸಿದಳು. ಅದನ್ನು ಪತ್ರಿಕೆಗೆ ಕಳುಹಿಸಬೇಕೆಂದಿದ್ದ
ಜಯರಾಮು. ಆದರೆ ರಾಧಾ ಬಿಡಲಿಲ್ಲ. "ಇದನ್ನು ಬೇರೆ ಯಾರೂ ಓದಬಾರದಣ್ಣ."
ಎಂದಳು. ಅಹಲ್ಯೆಯ ಬಗೆಗೆ ತನ್ನ ತಂಗಿ ತೋರಿದ ಪ್ರೀತಿಯನ್ನು ಕಂಡು ಜಯ
ರಾಮು ಮೂಕನಾಗಿ ಹೋದ.
ಉದ್ಯೋಗದ ಬೇಟೆ ಹಲವಾರು ಕಥಾವಸ್ತುಗಳನ್ನು ಆತನಿಗೆ ಒದಗಿಸಿತು.
'ದಿನಚರಿ ಕತೆಗಳು' ಎಂದು ಹೆಸರಿಟ್ಟು ಆ ಅನುಭವಗಳನ್ನೆಲ್ಲ ಆತ ಟಿಪ್ಪಣಿ ಮಾಡುತ್ತ
ಹೋದ. ಆದರೆ ಅದರಿಂದ ದುಡ್ಡು ಬರುತ್ತಿರಲಿಲ್ಲ.
ಶಂಕರನಾರಾಯಾಣಯ್ಯ ಹೇಳಿರಲಿಲ್ಲವೆ ಒಂದು ದಿನ?
"ಚಿತ್ರ ಬರೆದರೆ ದುಡ್ಡು ಬರೋದಿಲ್ಲ ಜಯರಾಮು."
ಆ ಮಾತು ಸಾಹಿತ್ಯದ ವಿಷಯದಲ್ಲೂ ಸತ್ಯವಾಗಿತ್ತು. ಆದರೆ ಬರವಣಿಗೆಯನ್ನು
ಬಿಟ್ಟುಕೊಡುವುದು ಮಾತ್ರ ಸಾಧ್ಯವಿರಲಿಲ್ಲ.
....ಎರಡು ತಿಂಗಳ ಅನಂತರವೊಂದು ಸಂಜೆ, ವಠಾರಕ್ಕೆ ಬೇಗನೆ ಹಿಂದಿರುಗಿದ
ಚಂದ್ರಶೇಖರಯ್ಯ, ಜಯರಾಮುವನ್ನು ಕರೆದು ಕೇಳಿದ:
ನಮ್ಮ ವಿಮಾ ಸಂಸ್ಥೆ ಕಚೇರೀಲಿ ಒಂದು ಗುಮಾಸ್ತೆ ಕೆಲಸ ಖಾಲಿ ಬಿದ್ದಿದೆ.
ಬರ್ತೀರೇನು?_"
ಅದೇನೋ ಕನಸಿನ ಸಂಭಾಷಣೆಯೆಂಬಂತೆ ಜಯರಾಮು ಉತ್ತರಿಸಿದ:
"ಓ ಬರ್ತೀನಿ. ಯಾವ ಕೆಲಸ ಮಾಡೋದಕ್ಕೂ ಸಿದ್ಧವಾಗಿದೀನಿ ನಾನು."
"ಸಂಬಳ ಕಮ್ಮಿ. ಈಗ ನಲ್ವತ್ತೈದು ಕೊಡ್ತಾರೆ. ಒಂದು ವರ್ಷ ಆದ್ಮೇಲೆ
ಖಾಯಂ ಮಾಡೋ ವಿಷಯದ ಪರಿಶೀಲನೆ. ಖಾಯಂ ಆದರೆ, ಸಂಬಳ ಜಾಸ್ತಿ
ಮಾಡ್ತಾರೆ. ಬೇಕಿದ್ದರೆ ನಿಮ್ಮ ತಂದೆಗೆ ಕಾಗದ ಬರೆದು ಕೇಳಿ. ಆದರೆ ತಡವಾಗ
ಬಾರದು. ತಮ್ಮ ತಮ್ಮವರಿಗೇ ಕೆಲಸ ಕೊಡಿಸೋಕೆ ಅಲ್ಲಿ ಪ್ರಯತ್ನ ಪಡೋ ಜನ
ಬೇಕಾದಷ್ಟಿದಾರೆ."