ಪುಟ:Rangammana Vathara.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

46

ಸೇತುವೆ

"ಚಿತ್ರ ಬರಿಯೋದು ಅಂದ್ರೇನೆ ಅಹಲ್ಯಾ?"
"ಹಾಗಂದ್ರೆ? ಚಿತ್ರ ಬರಿಯೋದು ಕಣ್ರೀ."
"ಫೋಟೋ ತೆಗೆಯೋದೇ?"
"ಉಹುಂ. ಕೈಲಿ ಚಿತ್ರ ಬರೆದು ಬಣ್ಣ ಹಾಕೋದು."
"ಅಷ್ಟೇನಾ?"
ಆ ನಿರಾಸಕ್ತಿಯ ಧ್ವನಿಯ ಕಾರಣ ಅಹಲ್ಯೆಗೆ ತಿಳಿಯಲಿಲ್ಲ.
ಬರಲಿರುವ ಸಂಸಾರದಲ್ಲಿ ತನ್ನ ಓರಗೆಯ ಹುಡುಗಿಯರು ಯಾರೂ ಇಲ್ಲವೆಂದು
ರಾಧೆಗೆ ವ್ಯಸನವಾಯಿತು. ರಾಧೆಯನ್ನಲ್ಲದೆ ಬೇರೆ ಗೆಳತಿಯರ ಯೋಚನೆಯನ್ನೇ
ಎಂದೂ ಮಾಡದ ಅಹಲ್ಯ ಮಾತ್ರ ಆ ಅಂಶವನ್ನು ಗಮನಿಸಲಿಲ್ಲ. ಆದರೆ, ಅಹಲ್ಯೆಯ
ತಾಯಿಯೂ ರಾಧೆಯ ತಾಯಿಯೂ ಹೊಸ ಸಂಸಾರದ ಸದಸ್ಯರು ಯಾರು ಯಾರೆಂಬು
ದನ್ನು ಕೇಳದಿರಲಿಲ್ಲ. ವಿವರ ತಿಳಿದಾಗ ಅವರು ಸಂತೋಷ ಸೂಚಿಸಲೂ ಇಲ್ಲ.
ಬೇರೆ ಮಾತುಗಳೂ ಕೇಳಿಸಿದುವು:
"ಆತನಿಗೆಷ್ಟೊ ವಯಸ್ಸು?"
"ಮೂವತ್ತೊ ನಾಲ್ವತ್ತೊ ಇರಬೇಕು."
"ಮಗು ಚಿಕ್ಕದಂತೆ."
"ಎಂಥವರೊ?"
ಈ ಮಾತುಕತೆಗಳೆಲ್ಲ ನಡೆದುದು ಎರಡು ನಿಮಿಷಗಳ ಕಾಲ ಮಾತ್ರ. ದಿನದ
ದುಡಿತದಿಂದ ಗಂಡಸರು ಹಿಂತಿರುಗಿದರು. ವಠಾರಕ್ಕೆ ಹೊಸ ಬಿಡಾರ ಬರಲಿದೆಯೆಂದು
ಅವರೇನೂ ಆಸಕ್ತಿ ತೋರಿಸಲಿಲ್ಲ. ಹೆಂಗಸರು ಮನೆಗೆಲಸಗಳಲ್ಲಿ ನಿರತರಾದರು.
ಪುಟ್ಟ ಮಕ್ಕಳು ದೀಪ ಹತ್ತಿಕೊಂಡ ಸ್ವಲ್ಪಹೊತ್ತಿನಲ್ಲೆ 'ಹಸಿವು ಹಸಿವು' ಎಂದು
ಕೂಗಾಡಿ ನಿದ್ದೆ ಹೋಗಿದ್ದುವು. ತಮ್ಮನ್ನು ಮಾತನಾಡಿಸಲು ಬಂದ ಹುಡುಗರನ್ನು
'ದೂರ ಹೋಗಿ' ಎಂದು ಗದರಿಸಿ ಗಂಡಸರು, ಹೊರಗಿನ ಗಾಳಿಯಾದರೂ ಮೈಗೆ
ತಗಲೀತೇನೋ ಎಂಬ ಅಸೆಯಿಂದ, ತಗಲಬಹುದೆಂಬ ಭ್ರಮೆಯಿಂದ, ಮನೆಬಾಗಿಲು
ಗಳಲ್ಲಿ ನಿಂತರು.
ರಂಗಮ್ಮ ಆ ವಠಾರದಲ್ಲಿ ಮನಸ್ಸು ಬಿಚ್ಚಿ ಏಕಾಂತದಲ್ಲಿ ಮಾತನಾಡುತ್ತಿದ್ದುದು
ಸುಬ್ಬುಕೃಷ್ಣಯ್ಯನೊಡನೆ ಮಾತ್ರ. ಆತ ವಠಾರದ ಮೊದಲ ಬಾಡಿಗೆದಾರ. ಆಂಗಡಿ
ಯಲ್ಲಿ ಶ್ರೀನಿವಾಸಶೆಟ್ಟರ ನಂಬಿಕೆಗೆ ಅರ್ಹನಾಗಿದ್ದಂತೆ, ವಠಾರದಲ್ಲಿ ರಂಗಮ್ಮನ ವಿಶ್ವಾ
ಸಕ್ಕೆ ಆತ ಪಾತ್ರನಾಗಿದ್ದ. ಇನ್ನೊಬ್ಬರಿಗೆ ವಿಧೇಯನಾಗಿ ನಿಷ್ಠಾವಂತನಾಗಿ ಬಾಳ್ವೆ
ನಡೆಸುವುದೇ ಸುಬ್ಬುಕೃಷ್ಣಯ್ಯನ ಬದುಕಿನ ಪರಮ ಗುರಿಯಾಗಿತ್ತೆಂದರೂ ತಪ್ಪಾಗ
ಲಾರದು. ತನ್ನ ಬಗ್ಗೆ ಮೆಚ್ಚಿಗೆ ಸೂಚಿಸಿ ಯಾರಾದರೂ ಬರಿದೆ ಮಾತಾಡಿದರೂ
ಸಾಕು. ಅಷ್ಟರಲ್ಲೇ ಅವನಿಗೆ ತೃಪ್ತಿಯಾಗುತ್ತಿತ್ತು.
ಮುಖ್ಯ ಕೆಲಸವೊಂದನ್ನು ಸಾಧಿಸಿದ ರಂಗಮ್ಮ ಈ ದಿನ ಸುಬ್ಬುಕೃಷ್ಣಯ್ಯನ