ಪುಟ:Vimoochane.pdf/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ


ಅದು ಕೆಟ್ಟ ಕಾಲ.ಈ ಶತಮಾನದ ಮೂವತ್ತೊಂದನೆಯ
ಇಸವಿ ಮುಕ್ತಾಯಕ್ಕೆ ಬರುತ್ತಿತ್ತು. ಹೋರಾಟ-ನಿರುದ್ಯೋಗದ ಮಾತುಗಳೇ ಕೇಳಿಬರುತ್ತಿದ್ದವು. ನಾನು ಉದ್ಯೋಗ ಹುಡುಕುತ್ತಿದ್ದೆ. ಆದರೆ ಜನ ನಿರುದ್ಯೋಗದ ಮಾತನ್ನಾಡುತ್ತಿದ್ದರು. ಹಿಂದೆ ನನ್ನ ತಂದೆ ದುಡಿಯುತ್ತಿದ್ದ ಕಾರ್ಖಾನೆಗಳ ಅಪ್ಪನಂತಹ ಹಲವಾರು ಕಾರ್ಖಾನೆ ಗಳು ಅಲ್ಲಿದ್ದವು. ಆದರೆ ಅವುಗಳಲ್ಲಿ ಹಲವು ಈಗ ಹೊಗೆ ಉಗುಳು ವುದರ ಬದಲು, ಹಲವಾರು ಜನರನ್ನು ಹೊರಕ್ಕೆ ಉಗುಳುತ್ತಿದ್ದವು. ಒಮ್ಮೆಲೆ ಸಹಸ್ರ ಸಹಸ್ರ ಜನ ನಿರುದ್ಯೋಗಿಗಳಾಗಿ ಬೀದಿ ಪಾಲಾ ಗುತ್ತಿದ್ದರು.

‍‍

ಯಾಕೆ ಹಾಗೆ ಎಂಬುದು ನನಗೆ ಆಗ ತಿಳಿದಿರಲಿಲ್ಲ. ನಮ್ಮ ಸಮಾಜದ ಆರ್ಥಿಕ ವ್ಯವಸ್ಥೆಯ ಪರಿಣಾಮವಾಗಿ ಕಾಲಕಾಲಕ್ಕೆ ಇಂತಹ ಕುಸಿತ ಆಗಲೇಬೇಕೆಂಬುದು ಆಗ ನನಗೆ ತಿಳಿದಿರಲಿಲ್ಲ....... ........ನಿರುದ್ಯೋಗ ಹೆಚ್ಚುತ್ತಿದ್ದಾಗ ನಾನು ಉದ್ಯೋಗ ಹುಡುಕಿದೆ. ಹೋಟೆಲುಗಳಲ್ಲಿ ಕಾರ್ಖಾನೆಗಳಲ್ಲಿ ಬಂದರದಲ್ಲಿ ಆಫೀಸುಗಳಲ್ಲಿ--- ಎಲ್ಲಲ್ಲೂ-ಕೆಲಸ ದೊರೆಯಲೇ ಇಲ್ಲ.

ಅಜ್ಜಿ ಕಟ್ಟಿಕೊಟ್ಟಿದ್ದ ತಿಂಡಿಯ ಪೊಟ್ಟಣ ಎಂದೋ ಕರಗಿ ಹೋಗಿತ್ತು. ನನ್ನ ಪಾಲಿಗೆ ಉಳಿದಿದ್ದುದು ಅಜ್ಜಿಯ ನೆನಪುಮಾತ್ರ. ಇನ್ನೂ ಖರ್ಚಾಗದೇ ಇದ್ದ ಹತ್ತು ಹನ್ನೆರಡು ರೂಪಾಯಿಗಳು ಮಾತ್ರ. ಕಾಗದ ಬರೆಯಬೇಕೆಂದು ಅಜ್ಜಿ ಹೇಳಿದ್ದರು. ನಾನು ಆವರೆಗೆ ಯಾರಿಗೂ ಕಾಗದ ಬರೆದಿರಲಿಲ್ಲ. ಆಗ ಬರೆದೆ. ಸುಖವಾಗಿದ್ದೀನಿ ಕೆಲಸ ಸಿಕ್ಕಿದೆ. ನೀವು ಹೇಗಿದ್ದೀರಿ? ಎಮ್ಮೆಗಳು ಹೇಗಿವೆ? ದೊಡ್ಡೆಮ್ಮೆ ಕರು ಹಾಕಿತೆ-ಎಂದೆಲ್ಲಾ ಕೇಳಿ ಬರೆದೆ. ಅಂಚೆಯ ಲಕ್ಕೋಟೆಯಮೇಲೆ ಅಜ್ಜಿಯ ಮನೆ ಎಂತಹವರಿಗಾದರೂ ಗೊತ್ತಾಗುವಹಾಗೆ ವಿಳಾಸವನ್ನು ವಿವರಿಸಿ ಬರೆದೆ. ಅಜ್ಜಿಗೆ ಮನಸ್ಸಮಾಧಾನವಾಗುವಂತೆ ಮಾಡು ವುದೇ ನನ್ನ ಉದ್ದೇಶವಾಗಿತ್ತು.

ಅಜ್ಜಿಯಿಂದ ನನಗೆ ಉತ್ತರ ಬರಲಿಲ್ಲ. ನಾನು ವಿಳಾಸಕೊಟ್ಟಿ ದ್ದರಲ್ಲವೆ ಬರುವುದು? ನನಗೆ ವಿಳಾಸವಿದ್ದರಲ್ಲವೆ ನಾನು ಕೊಡುವುದು?