...ಅಮೀರನೊಡನೆ ನಾನು ಲಾಕಪ್ಪಿನ ಸವಿ ನೋಡಿದೆ ಎಂದರೆ ನಿಮಗೆ ಆಶ್ಚರ್ಯವಾಗಲಾರದು. ಆದರೆ ನಾವು ಕಳ್ಳರಾಗಿ ಅಲ್ಲಿಗೆ ಹೋಗಲಿಲ್ಲ ; ರಾಜ ಅತಿಥಿಗಳಾಗಿ ದೇಶಪ್ರೇಮಿಗಳಾಗಿ ಹೋದೆವು ; ---ಎಂದರೆ ನಿಮಗೆ ಆಶ್ಚರ್ಯವಾದೀತು.
ಅದು ನಡೆದುದು ಹೀಗೆ.
ಚೌಪಾಟಿಯಲ್ಲಿ ಆ ದಿನ ಸಂಜೆ ಗಾಂಧಿ ಸಭೆ ಜರುಗಿತು. ಯಾರೋ ವೃದ್ಧರಾದ ಮುಖಂಡರೊಬ್ಬರು, ಆವೇಶಪೂರಿತವಾದ ಭಾಷಣ ಮಾಡಿದರು. ಉಪ್ಪಿನ ಸತ್ಯಾಗ್ರಹ, ಉಪ್ಪು ತಯಾರಿಸಿ ಸರ್ಕಾ ರದ ಕಾನೂನು ಕಟ್ಟಳೆಗಳನ್ನು ಮುರಿಯುವ ಸತ್ಯಾಗ್ರಹ, ಯಶಸ್ವಿ ಯಾಗಬೇಕೆಂದು ಕರೆಕೊಟ್ಟರು. ಸಭೆಯಾದ ಮೇಲೆ ಮೆರವಣಿಗೆ ಹೊರಟಿತು. ದೊರಗು ದೊರಗಾದ ಬಿಳಿಯ ಬಟ್ಟೆಯುಟ್ಟು ಆ ಜನ ತಲೆಯ ಮೇಲೆ ಬಿಳಿಯ ಟೋಪಿ ಧರಿಸಿದ್ದರು. ಏನಾದರೂ ಗೊಂದಲ ವಾಗುವಲ್ಲೆಲ್ಲಾ ಹಾಜರಿರುವುದು ಆಮೀರನ ಅಭ್ಯಾಸ. ನಾವಿಬ್ಬರೂ ಅಲ್ಲಿದ್ದೆವು. ಆಮೀರ್ ಭಾಷಣಕ್ಕೆ ಕಿವಿಗೊಡುತ್ತಿರಲಿಲ್ಲ. ಭಾಷಣ ಕೇಳುತ್ತಾ ಗುಂಪುಗುಂಪಾಗಿ ದೂರದೂರ ನಿಂತಿದ್ದವರಲ್ಲಿ ಕೆಲವರ ಜೇಬು ಖಾಲಿಮಾಡುವ ಕಾರ್ಯದಲ್ಲಿ ಆತ ನಿರತನಾಗಿರುತ್ತಿದ್ದ. ನಾನು ಭಾಷಣ ಕೇಳುತ್ತಿದ್ದೆ. ಆ ಮಾತುಗಳೆಲ್ಲವೂ ನನಗೆ ಅರ್ಥ ವಾಗುತ್ತಿರಲಿಲ್ಲ. ಆದರೂ ಕಿವಿಗೊಟ್ಟು ಕೇಳಬೇಕು ಎನ್ನಿಸುತ್ತಿತ್ತು. ಸ್ವಾತಂತ್ರ್ಯ---ದಾಸ್ಯ, ಸಾಮ್ರಾಜ್ಯಶಾಹಿ---ಕಾಂಗ್ರೆಸ್ಸು, ಈ ಮಾತು ಗಳೆಲ್ಲಾ ಪದೇಪದೇ ನನ್ನೆದುರು ಹಾರಾಡುತ್ತಿದ್ದುವು.
ಆಮೀರ್ ನನ್ನೆಡೆಗೆ ಬಂದು ಭುಜ ಕುಲುಕಿ ನಕ್ಕು ನುಡಿದ.
"ಒಂದು ಟೋಪಿ ತಂದ್ಕೊಡ್ಲೇನು ? ಲೀಡರ್ ಆಗ್ಬುಡು. ಒಳ್ಗೆ ಕರ್ಕೋಂಡ್ಹೋಗಿ ರೊಟ್ಟಿ ಹಾಕ್ತಾರೆ. ಹಿಂದೆ ಕಳ್ಳತನ ಮಾಡಿ ಸಿಕ್ಹಾಕ್ಕೊಂಡ್ರೆ ಮಾತ್ರ ಜೈಲು ಸಿಕ್ತಿತ್ತು. ಈಗ ಜೈ ಜೈ ಎಂದರೂ ಜೈಲಿಗೆ ಕಳಿಸ್ತಾರೆ."
ನಾನು ಉತ್ತರ ಕೊಡಬೇಕೆನ್ನುವಷ್ಟರಲ್ಲಿ ಆ ಘಟನೆ ನಡೆಯಿತು. ಸಭೆ ಮೆರವಣಿಗೆಯಾಗಿ ಮಾರ್ಪಾಟು ಹೊಂದಿ ಬೀದಿ ಸೇರುತ್ತಿತ್ತು.