ಪುಟ:Vimoochane.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

......ಕತ್ತಲೆಯ ಗವಿಯಂತೆ ಬಲು ಆಳವಾಗಿರುವ ಗತ

ಕಾಲದ ನನ್ನ ಬಾಳ್ವೆಯಿಂದ ಇಷ್ಟು ಸಂಗತಿಗಳನ್ನು ಈ ದಿನ ಹೊರ ತೆಗೆದು ನಿಮ್ಮ ಮುಂದಿರಿಸಿದ್ದೇನೆ. ಬೆಳಗಿನಿಂದ ಹಿಡಿದು, ನಡುವೆ ಹೆಚ್ಚಿನ ವಿರಾಮಕ್ಕೂ ಅವಕಾಶವಿಲ್ಲದ ಹಾಗೆ, ಈಗ ಈ ನಡುವಿರುಳಿನ ವರೆಗೂ ಬರೆದಿದ್ದೇನೆ. ಅತ್ಯಂತ ಕಟುವಾದ ಈ ಅಂಶಗಳನ್ನು ಬರೆ ಯುವ ಕೆಲಸ ಸುಲಭವಾಗಿಲ್ಲ, ನನ್ನ ಮುಂದೆ ಹಲವು ಹಾದಿಗಳಿ ದುವು–ಎಲ್ಲರ ಮುಂದೆಯೂ ಇರುವಂತೆ. ಆದರೆ ಬೇರೆ ಗತಿ ಇಲ್ಲದೆ, ನಾನು ನನ್ನ ಜೀವನದ ಹಾದಿಯನ್ನು ಆ ರೀತಿ ರೂಪಿಸಿಕೊಂಡೆ. ಅದನ್ನು ನಿಮ್ಮೆದುರು ವಿವರಿಸುತ್ತಾ ಸಮರ್ಥಿಸುವ ಇಚ್ಛೆ ನನಗಿಲ್ಲ. ನಿಮ್ಮನ್ನು ಯಾವುದೇ ನಿರ್ದಿಷ್ಟ ಅಭಿಪ್ರಾಯದತ್ತ ಒಯು ತಲಪಿಸುವ ಉದ್ದೇಶ ನನ್ನದಲ್ಲ, ನಾನು ಮಾಡಬೇಕಾದ ಕೊನೆಯ ಕರ್ತವ್ಯ ವೆಂದು ಇದನ್ನು ಬರೆಯುತ್ತಿದ್ದೇನೆ.

ಒಣ ವಾದ ನಿಮಗೆ ಇಷ್ಟವಿಲ್ಲದಿರಬಹುದು. ನನಗೂ ಅದು

ಇಷ್ಟವಿಲ್ಲ, ಇಲ್ಲಿಗೆ ಸಾಕು.

ನಾಳೆ ಶನಿವಾರ, ನನ್ನ ವಕೀಲರು ಬಂದು ಹೋಗಬಹುದು.

ಅವರಿಗೆ ನನ್ನಿಂದ ಸರಿಯಾದ ಸಹಕಾರ ದೊರೆಯದಲ್ಲಾ ಎಂದು ನನಗೆ ದುಃಖವಾಗುತ್ತಿದೆ.....

ಲೇಖನಿಯನ್ನು ಕೆಳಗಿಟ್ಟು, ನೆಟಿಕೆಗಳನ್ನು ಮುರಿದು, ದೇಹ

ವನ್ನು ಸಡಿಲಿಸಿ, ಈ ಚಾಪೆಯ ಮೇಲೆ ಕಾಲು ಚಾಚಿಕೊಳ್ಳುವೆ. ನಿದ್ದೆಹೋಗುವೆ. ಕನಸಿನಲ್ಲಿ ಯಾರು ಬೇಕಾದರೂ ಬರಬಹುದು– ಯಾರು ಬೇಕಾದರೂ.