ಪುಟ:Vimoochane.pdf/೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
....ಬುಧವಾರ

ಹೇಮಾವತಿ ತುಂಬಿ ಹರಿಯುತ್ತಿತ್ತು. ನನ್ನ ತಂದೆಯ ಕೊರಳಿನ
ಸುತ್ತಲೂ ಕಾಲು ಹಾಕಿ, ಭುಜದಮೇಲೆ ಕುಳಿತು ಆತನ ತಲೆಯನ್ನು
ನನ್ನ ಪುಟ್ಟ ಕೈಗಳಿಂದ ಬಿಗಿಹಿಡಿದಿದ್ದೆ. ತಾಯಿ, ಚಿಂದಿ ಸೀರೆ ಬಟ್ಟೆ
ಬರೆಗಳ, ದೇವರ, ಗಂಟು ಹೊತ್ತು ನಮ್ಮ ಹಿಂದೆಯೆ ನಿಂತಿದ್ದಳು.
ನದಿ ದಾಟಿ ನಗರಕ್ಕೆಂದು ನಾವು ಸಾಗಿ ಬರಬೇಕು. ಬಹಳ ದಿನಗಳ
ಮೇಲೆ ತಂದೆ ತೀರಿಕೊಂಡಾಗ "ರಾಮ ರಾಮ" ಎನ್ನುತ್ತಾ ಆ ವಿಷ
ಘಳಿಗೆಯನ್ನೇ ಸ್ಮರಿಸುತ್ತಾ ಆ ಬಗ್ಗೆ ನನಗೆ ಹೇಳುತ್ತಿದ್ದರು; "ಚಂದ್ರು
ನಿಂಗೆ ನೆಪ್ಪಯ್‌ತಾ? ನಿಮ್ಮಮ್ಮ ---ನೆಪ್ಪಯ್‌ತೇನೋ."

ನನಗೆ ನೆನಪಿತ್ತು. ನನಗೆ ಚೆನ್ನಾಗಿ ನೆನಪಿತ್ತು. ಎಲ್ಲವೂ
ಕಳೆದುಹೋದಾಗ, ಕೈಬಿಟ್ಟ ಹೊಲದೊಡನೆ ಮೂಲೆಯಲ್ಲಿದ್ದ ನಮ್ಮ
ಗುಡಿಸಲು ಹೊರಟುಹೋದಾಗ, ಆ ಬಡಹಳ್ಳಿಯಲ್ಲಿ ಪಾಠ ಹೇಳಿ
ಕೊಡುವ ಕೆಲಸವನ್ನು ನಮ್ಮ ತಂದೆ ಕಳೆದುಕೊಂಡಾಗ, ನಾವು
ಅಲ್ಲಿಂದ ಹೊರಟೆವು. ದುಡಿದು ಬದುಕುವ ಆಸೆಯಿಂದ ಹೊರಟೆವು.
ನಗರದಲ್ಲಿ ಇದ್ದ ಯಾರೋ ಪರಿಚಿತರ ನೆರವನ್ನು ಪಡೆದು ಕೆಲಸ
ಹುಡುಕಬೇಕೆಂಬುದು ತಂದೆಯ ತೀರ್ಮಾನವಾಗಿತ್ತು. ಅದಕ್ಕಾಗಿಯೇ
ತಂದೆ, ತಾಯಿ, ನಾನು, ಹಳ್ಳಿ ಬಿಟ್ಟು ಬಂದೆವು. ಹಳ್ಳಿಯನ್ನು ಹಿಂದೆ
ಬಿಟ್ಟು, ನದಿಯ ದಂಡೆಯಮೇಲೆ ನಿಂತೆವು.

ಆ ಮೊದಲ ನೆನಪು -----

ತಂದೆ, ತಾಯಿಯನ್ನು ಕೇಳಿದ: " ಏನ್ಮಾಡೋಣಾಂತೀಯಾ ರುಕ್ಕೂ?"

೨೪