ಪುಟ:Vimoochane.pdf/೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ತಂದೆ, ಕೂದಲನ್ನು ಹಿಡಿಹಿಡಿಯಾಗಿ ಹಿಡಿದೆಳೆಯುತ್ತಾ ರೋದಿಸುತ್ತಿದ್ದುದನ್ನು ಕಂಡೆ -"ರುಕ್ಕೂ-ರುಕ್ಕೂ-"

ನನ್ನ ತಾಯಿ ತೇಲಿ ಹೋಗಿದ್ದಳು. ಹೇಮಾವತಿ ನದಿ ಎಲ್ಲಿಗೋ ಅವಳನ್ನು ಒಯ್ದಿತ್ತು. ನಾನು,"ಅಪ್ಪಾ ಅಪ್ಪಾ" ಎಂದೆ ತಂದೆ ಮೆಲ್ಲ ಮೆಲ್ಲೆನೆ ಬಂಡೆಯನ್ನಿಳಿದು ದಡವನ್ನೇರಿ ನನ್ನ ಬಳಿಗೆ ಬಂದರು.ನನ್ನನ್ನು ತಬ್ಬಿಕೊಂಡರು. ಮಳೆ ಸುರಿಯುತ್ತಿತ್ತು, ನಮ್ಮ ಕಣ್ಣುಗಳಲ್ಲೂ ಕೂಡಾ. ಆದರೆ ಕಣ್ಣೀರು ಇಂಥದೇ ಎಂದು ನಾನು ಬಲ್ಲೆ. ತಣ್ಣಗಿನ ಮಳೆಯ ನೀರಲ್ಲೂ ನಮ್ಮ ಕಣ್ಣಹನಿ ಬಿಸಿಯಾಗಿರುತ್ತಿತ್ತು.

ತಂದೆ ಮತ್ತು ನಾನು ಬಲು ದೂರ ದಂಡೆಯ ಉದ್ದಕ್ಕೆ ಹೋದೆವು. ಮಳೆ ಬರುತ್ತಿದ್ದಾಗಲೂ-ಮಳೆ ನಿಂತ ಮೇಲೂ. ನನ್ನ ತಾಯಿ ಸಿಗಲಿಲ್ಲ. ಸಿಗಲೇ ಇಲ್ಲ.

ಆಕೆಯೊಡನೆ ನಮ್ಮ ಸರ್ವಸ್ವವಾಗಿದ್ದ ಅರಿವೆ ಅಂಚಡಿಯ ಗಂಟೂ ಹೊರಟು ಹೋಗಿತ್ತು. ಗಂಟಿನಲ್ಲಿದ್ದ ದೇವರೂ ತೇಲಿಹೋಗಿದ್ದರು. ಹಸುರು ಹೊಲ ಮನೆ ಮಠಗಳಿರುವ ಸಹಸ್ರ ಸಹಸ್ರ ಜನ ನಗುತ್ತ ವಾಸಿಸುತ್ತಿರುವ ಈ ಪ್ರಪಂಚದಲ್ಲಿ ನಾವು ನಿರ್ಗತಿಕರಾಗಿದ್ದೆವು.

ಕಾಡಿನಲ್ಲೇ ಸಾಯಲು ಸುಮ್ಮ ಸುಮ್ಮನೆ ಯಾರು ಇಷ್ಟ ಪಡುತ್ತಾರೆ? ನಾವು ಮತ್ತೆ ಮನುಷ್ಯರ ಮುಖ ನೋಡಿದೆವು.ಬದುಕಬೇಕೆಂಬ ಬಯಕೆ, ನಮಗೆ ತಿಳಿಯದೆಯೇ ನಮ್ಮನ್ನು ಮುಂದು ಮುಂದಕ್ಕೆ ತಳ್ಳುತ್ತಿತ್ತು.

ಈಗ ಸರಿಯಾಗಿ ತಿಳಿದುಕೊಳ್ಳಬಲ್ಲೆ. ಆರು ವರ್ಷದವನಾಗಿದ್ದ ನನ್ನನ್ನು ದೊಡ್ಡವನಾಗಿ ಬೆಳೆಸಿ, ವಿದ್ಯೆ ಕಲಿಸಿ, ಸಂಪಾದಿಸಬಲ್ಲ ಸಮರ್ಥನಾಗಿ ಮಾಡುವುದೇ ತಂದೆಯ ಏಕ ಮಾತ್ರ ಗುರಿಯಾಗಿತ್ತು.ಹಾಗೆ ಮಾಡಿ ತನ್ನದಾದ ಇನ್ನೊಂದು ದೀಪವನ್ನು ಹಚ್ಚಿಟ್ಟು, ನಿಶ್ಚಿಂತೆಯಿಂದ ಪ್ರಾಣ ನೀಗಲು ಅವನು ಅಪೇಕ್ಷೆ ಪಟ್ಟಿದ್ದ. ಆದರೆ ಆ ಅಪೇಕ್ಷೆ!

ಹಾದಿಯಲ್ಲಿ ನಾವು ಬೇಡಬೇಕಾಗಿ ಬಂತು. "ನಾವು ಭಿಕ್ಷೆ ಯವರಲ್ಲ" ಎಂದುಪ್ರತಿಯೊಬ್ಬರಿಗೂ ತಂದೆ ವಿವರಣೆ ಕೊಡುತ್ತಿದ್ದ.