ಪುಟ:Vimoochane.pdf/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತಿಲ್ಲದೆ ಮತ್ತೂ ದೂರ ನಡೆದೆವು. ಉಪಾಧ್ಯಾಯರ ಮನೆಸಮಾಪಿಸುತ್ತಿತ್ತು.

"ನಾಳೆ ಸ್ಕೂಲ್ಗೆ ಬರಲಿ. ಇನ್ಮುಂದೆ ಹೀಗಾಗ್ಬಾರ್ದು. ಇನ್ನೂ ನಾಲ್ಕು ಜನ ಹುಡುಗರಿಗೆ ಹೊಡೆದಾಂತಂದರೆ ನನ್ನನ್ನೇ ಡಿಸ್ ಮಿಸ್ಮಾಡ್ತಾರೆ ಅಷ್ಟೆ. ಏನಪ್ಪ ಚಂದ್ರು? ಒಳ್ಳೆಯವನಾಗಿ ಇರ್ತಿಯೋ ಹ್ಯಾಗೆ?"

"ಇರ್ತಿನಿ ಸಾರ್."

ಉಪಾದ್ಯಾಯರು ತಮ್ಮ ಮನೆಯ ಗೇಟು ತೆರೆಯುತ್ತಾ ಅಂಗಳದಲ್ಲಿ ಒಡಯದೇ ಬಿದ್ದಿದ್ದ ಒಂದು ಗಾಡಿಯಷ್ಟು ಸೌದೆ ರಾಶಿಯನ್ನು ನೋಡಿದರು.

"ಏನಪ್ಪ ಸೌದೆ ಒಡೆಯೋಕೆ ಬರುತ್ತೇನು ನಿಂಗೆ?"

"ಒಡೀತೀನಿ ಸ್ವಾಮಿ," ಎಂದರು ತಂದೆ. ಆ ಸ್ವರದಲ್ಲಿ ಕೃತಜ್ಞತೆ ಇತ್ತು.

ಉಪಾದ್ಯಾಯರು ಏನು ಕೆಲಸ ಹೇಳಿದರೂ ಪ್ರಾಯಶಃ ತಂದೆ ಮಾಡುತ್ತಿದ್ದನೋ ಏನೊ. ಆ ದಿನ ಕೆಲಸವಿರಲಿಲ್ಲ ಅವನಿಗೆ, ಆ ಕೆಲಸ ಈಗ ಸಿಕ್ಕಿತು ಆದರೆ ಸಂಬಳವಿಲ್ಲದ ಕೆಲಸ. ಉಪಾಧ್ಯಾಯರು ಹಿಡಿ ಅಲುಗಾಡುತ್ತಿದ್ದ ಒಂದು ಕೊಡಲಿಯನ್ನು ತಂದು ಹಾಕಿದರು.

"ಚಂದ್ರು, ನೀನು ಮನೆಗೆ ಹೋಗು, ನಾನು ಬೇಗನೆ ಬಂದ್ಬಿಡ್ತೀನಿ, ಎಂದ ನಮ್ಮಪ್ಪ.

ತಾನು ಬೆವರಿಳಿಸಿ ದುಡಿಯುವಾಗ, ಮುಂದೆ ದೊಡ್ಡಮನುಷ್ಯ ನಾಗಲಿದ್ದ ತನ್ನ ಮಗ ನೋಡಬಾರದೆಂಬ ಉದ್ದೇಶವಿತ್ತೋ ಏನೋ. ಉಪಾಧ್ಯಾಯರು ಮನೆಯ ಒಳ ಹೋಗುತ್ತಿದ್ದಂತೆ ನಾನು ಗೇಟಿನಿಂದ ಹೊರಬಿದ್ದು ಮನೆಗೆ ಓಡಿದೆ.

ಅಜ್ಜಿ ಕೇಳಿದರು.

"ಏನಾಯ್ತಪ್ಪ ಚಂದ್ರು? ಏನೆಂದರು ನಿಮ್ಮೇಷ್ಟ್ರು?"

"ನಾಳೆ ಸ್ಕೂಲಿಗೆ ಬಾ ಅಂತಂದ್ರು."

"ಎಲ್ಲಿ ನಿನ್ನಪ್ಪ?"