ಪೊನ್ನಮ್ಮ
ಪೊನ್ನಮ್ಮ
ಗೌರಮ್ಮ
ಮನೋಹರ ಗ್ರಂಥ ಭಂಡಾರ
ಧಾರವಾಡ
ಪೊನ್ನಮ್ಮ
ದಿವಂಗತ ಸೌ. ಗೌರಮ್ಮನವರು
(ಮಿಸೆಸ್ ಬಿ. ಟಿ. ಜಿ. ಕೃಷ್ಣ )
ಮನೋಹರ ಗ್ರಂಥ ಭಾಂಡಾರ
ಧಾರವಾಡ
ಪ್ರಕಾಶಕರು:
ದ. ಬಾ. ಕುಲಕರ್ಣಿ
ಮನೋಹರ ಗ್ರಂಥ ಭಾಂಡಾರ
ಧಾರವಾಡ
ಶ್ರೀಮತಿ ಗೌರಮ್ಮನವರ
ಎರಡು ಕಥಾ ಸಂಗ್ರಹಗಳು
ಕಂಬನಿ ಒಂದು ರೂ.
ಚಿಗುರು ಅಚ್ಚಿನಲ್ಲಿ
ಮುದ್ರಕರು:
ಶೇ. ಗೋ. ಕುಲಕರ್ಣಿ
ಸಾಧನ ಪ್ರೆಸ್, ಧಾರವಾಡ
ಪೊನ್ನಮ್ಮ
[ಸಂಪಾದಿಸಿ]ಇದು ಬಹಳ ವರ್ಷಗಳ ಹಿಂದಿನ ಕತೆ, ಒಂದೂರಿನಲ್ಲಿ ಒಬ್ಬ ಕೊಡಗನೂ ಒಬ್ಬ ಕೊಡಗಿತಿಯೂ ಇದ್ದರು. ಅವರಿಗೆ ಒಬ್ಬ ಮಗಳಿದ್ದಳು. ಅವಳ ಹೆಸರು ಪೊನ್ನಮ್ಮ, ಪೊನ್ನಮ್ಮ ಬಹಳ ಚೆಂದದ ಹುಡುಗಿ, ಅವಳ ತಾಯಿಯು ಮನೆಗೆಲಸ ಮಾಡುವಾಗ ಚಿಕ್ಕ ಪೊನ್ನಮ್ಮ ಅಂಗಳದಲ್ಲಿ ಆಟವಾಡಿಕೊಂಡಿರುತ್ತಿದ್ದಳು. ಅವಳು ಎಂದೂ ಅತ್ತು ಕೊಂಡು ತಾಯಿಯನ್ನು ತೊಂದರೆಪಡಿಸುತ್ತಿರಲಿಲ್ಲ. ಅವಳ ತಂದೆ' ಅವಳಿಗೊಂದು ಪುಟ್ಟ ನಾಯಿಮರಿಯನ್ನು ತಂದುಕೊಟ್ಟಿದ್ದನು. ಅದನ್ನು ಅವಳು ಬಹಳ ಪ್ರೀತಿಯಿಂದ ಸಾಕುತ್ತಿದ್ದಳು. ಅದಕ್ಕೆ 'ಮೋತಿ' ಎಂದು ಹೆಸರಿಟ್ಟು ಕೊಂಡು ಅದರ ಜೊತೆಯಲ್ಲಿ ಆಡುತ್ತಿದ್ದಳು. ತಾಯಿಯ ಮನೆಗೆಲಸಗಳು ಮುಗಿಯುವ ಹೊತ್ತಿಗೆ ತಂದೆಯು ಗದ್ದೆ ಯಿಂದ ಮನೆಗೆ ಬರುತ್ತಿದ್ದನು. ತಂದೆ ಮನೆಗೆ ಬಂದ ಮೇಲೆ ಪುಟ್ಟ ಪೊನ್ನಮ್ಮನನ್ನು ಹತ್ತಿರ ಕರೆದು ಕೂರಿಸಿ ಕೊಂಡು ಪಾಠ ಹೇಳಿಕೊಡುತ್ತಿದ್ದನು. ತಾಯಿ ಕತೆಗಳನ್ನು ಹೇಳುತ್ತಿದ್ದಳು ಹೀಗೆ ಅವರೆಲ್ಲರೂ ಬಹಳ ಸುಖವಾಗಿ ಇದ್ದರು.
ಪೊನ್ನಮ್ಮನಿಗೆ ಆರು ವರ್ಷಗಳಾದವು. ಅವಳು ಶಾಲೆಗೆ ಹೋಗತೊಡಗಿದಳು. ಶಾಲೆಯಲ್ಲಿಯೂ ಅವಳು ಬಹಳ ಚೆನ್ನಾಗಿ ಪಾಠ ಕಲಿತು ಒಳ್ಳೆಯವಳೆನಿಸಿಕೊಳ್ಳ ಹತ್ತಿದಳು. ಹೀಗಿರುವಾಗ ಒಂದು ದಿನ ಅವಳು ಶಾಲೆ ಯಿಂದ ಮನೆಗೆ ಬರುವಾಗ ಎಂದಿನಂತೆ ಅವಳ ತಾಯಿ ಬಾಗಿಲಲ್ಲಿರಲಿಲ್ಲ. ಯಾವಾಗಲೂ ಅವಳು ಬರುವುದನ್ನೇ ಕಾಯುತ್ತ ಅವಳ ತಾಯಿ ಬಾಗಿಲಲ್ಲಿ ನಿಂತಿರುವುದು ವಾಡಿಕೆ. ಆ ದಿನ ತಾಯಿಯನ್ನು ಕಾಣದೆ ಪೊನ್ನಮ್ಮನಿಗೆ ಆಶ್ಚರ್ಯವಾಯಿತು. ಅವಳು ಓಡುತ್ತ ಒಳಗೆ ಹೋಗಿ 'ಅಮ್ಮಾ, ಅಮ್ಮಾ' ಎಂದು ಕೂಗಿದಳು. ಅವಳ ತಾಯಿ ಮಲಗಿದ್ದಳು. ಪೊನ್ನಮ್ಮನನ್ನು ನೋಡಿ ಇಲ್ಲಿ ಬಾ ಪೊನ್ನು' ಎಂದಳು. ಪೊನ್ನಮ್ಮ ತಾಯಿಯ ಹತ್ತಿರ ಹೋದಳು. ಅವಳ ತಾಯಿಗೆ ಬಹಳ ಜ್ವರ ಬಂದಿತ್ತು. ಅಷ್ಟು ಹೊತ್ತಿಗೆ ಅವಳ ತಂದೆಯೂ ಬಂದನು. ತಾಯಿಗೆ ಜ್ವರ ಬಂದು ದನ್ನು ನೋಡಿ ಮದ್ದು ತಂದುಕೊಟ್ಟನು. ಆ ದಿವಸವೆಲ್ಲ ಪೊನ್ನಮ್ಮ ತಾಯಿಯ ಹತ್ತಿರವೇ ಕೂತುಕೊಂಡು ಅವಳ ಸೇವೆ ಮಾಡಿದಳು. ಆದರೆ ಜ್ವರ ಮಾತ್ರ ಬಿಡಲೇ ಇಲ್ಲ. ಬೆಳಗಾಗುವ ಮೊದಲೇ ಅವಳ ತಾಯಿ ಸತ್ತು ಹೋದಳು. ಪೊನ್ನಮ್ಮನಿಗೂ ಅವಳ ತಂದೆಗೂ ಬಹಳ ವ್ಯಸನ ವಾಯಿತು. ಅವರಿಬ್ಬರೂ ಬಹಳ ಅತ್ತರು.
ತಾಯಿ ಸತ್ತು ಹೋದ ಮೇಲೆ ಪೊನ್ನಮ್ಮನನ್ನು ನೋಡಿಕೊಳ್ಳಲು ಯಾರೂ ಇಲ್ಲದೆ ಹೋದರು. ಅವಳ ತಂದೆಗೆ ಗದ್ದೆಯ ಕೆಲಸವಿತ್ತು. ಪೊನ್ನಮ್ಮನಿಗೆ ಸ್ನಾನ ಮಾಡಿಸಿ, ಊಟ ಉಣಿಸಿ, ಕತೆ ಹೇಳಿ ಮುದ್ದಿಸಲು ಅವನಿಗೆ ಸಮಯವಿರುತ್ತಿರಲಿಲ್ಲ. ಆದುದರಿಂದ ಏನು ಮಾಡುವುದು ಎಂದು ಬಹಳ ಯೋಚಿಸಿ ಕೊನೆಗೆ ಒಬ್ಬಳನ್ನು ಮದುವೆಯಾದನು. ಅವಳ ತಂದೆ ಮದುವೆಯಾದ ಎರಡನೆಯ ಹೆಂಡತಿ ಪೊನ್ನಮ್ಮನಿಗೆ ಚಿಕ್ಕ ತಾಯಿಯಾದಳು. ಈ ಚಿಕ್ಕ ತಾಯಿಯು ಬಂದ ಸುರುವಿನಲ್ಲಿ ಪೊನ್ನಮ್ಮನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಸ್ವಲ್ಪ ದಿನಗಳಲ್ಲಿ ಅವಳಿಗೂ ಒಂದು ಮಗು ಆಯಿತು. ಆ ಮಗುವಿನ ಹೆಸರು ಬೋಜಮ್ಮ, ಬೋಜಮ್ಮ ಹುಟ್ಟಿದ ಮೇಲೆ ಚಿಕ್ಕತಾಯಿ ಪೊನ್ನಮ್ಮನನ್ನು ಮೊದಲಿನಷ್ಟು ಪ್ರೀತಿಸುತ್ತಿರಲಿಲ್ಲ.
ಮನೆಗೆಲಸಗಳನ್ನೆಲ್ಲ ಪೊನ್ನಮ್ಮನಿಂದಲೇ ಮಾಡಿಸು ತಿದ್ದಳು, ಕೋಳಿ ಕೂಗುವ ಮೊದಲೇ ಪೊನ್ನಮ್ಮ ಎದ್ದು ಎಲ್ಲ ಕೆಲಸಗಳನ್ನೂ ಮಾಡಬೇಕಾಯಿತು. ಚಿಕ್ಕತಾಯಿಯು ಅವಳನ್ನು ಶಾಲೆಗೆ ಹೋಗಲೂ ಬಿಡುತ್ತಿರಲಿಲ್ಲ. ಬೋಜಮ್ಮನನ್ನು ಮಾತ್ರ ಒಳ್ಳೊಳ್ಳೆಯ ಬಟ್ಟೆಗಳನ್ನು ಹಾಕಿ ಶಾಲೆಗೆ ಕಳಿಸುತ್ತಿದ್ದಳು. ಬೋಜಮ್ಮನಿಗೆ ಒಳ್ಳೊಳ್ಳೆಯ ಆಟಿಗೆಗಳನ್ನೂ ಬೋಂಬೆಗಳನ್ನೂ ಕೊಡುತ್ತಿದ್ದಳು. ಪೊನ್ನಮ್ಮನಿಗೆ ಏನೂ ಕೊಡುತ್ತಿರಲಿಲ್ಲ.
ಆದರೆ ಪೊನ್ನಮ್ಮ ಬಹಳೇ ಒಳ್ಳೆಯ ಹುಡುಗಿ, ಅವಳಿಗೆ ಕೆಲಸಮಾಡಲು ಸ್ವಲ್ಪವಾದರೂ ಬೇಸರವಿರಲಿಲ್ಲ. ಚಿಕ್ಕ ತಾಯಿಯು ಅವಳನ್ನು ಪ್ರೀತಿಸದಿದ್ದರೂ ಪೊನ್ನಮ್ಮ ಅವಳನ್ನು ಪ್ರೀತಿಸುತ್ತಿದ್ದಳು. ಅವಳು ಹೇಳಿದ ಯಾವ ಮಾತನ್ನೂ ಮೀರುತ್ತಿರಲಿಲ್ಲ.
ಪೊನ್ನಮ್ಮನಿಗೆ ಪ್ರಾಣಿಗಳ ಮೇಲೆ ಬಹಳ ದಯೆ ಇತ್ತು. ಅವಳು ಅವುಗಳಿಗೆ ಹೊಡೆಯುತ್ತಿರಲಿಲ್ಲ. ಅದರಿಂದಲೇ ಹಟ್ಟಿಯ ನಾಯಿಗಳೂ ಕೊಟ್ಟಿಗೆಯ ದನಗಳೂ ಅವಳನ್ನು ಬಹಳವಾಗಿ ಪ್ರೀತಿಸುತ್ತಿದ್ದವು. ಸಿಡುಕಿನ ಸ್ವಭಾವದವಳಾದ ಬೋಜಮ್ಮನನ್ನು ಕಂಡರೆ ಅವುಗಳಿಗಾಗುತ್ತಿರಲಿಲ್ಲ.
ಹೀಗಿರುವಾಗ ಒಂದು ದಿನ ಚಿಕ್ಕ ತಾಯಿಯು ಒಂದು ಹರಕು ಕುಕ್ಕೆ (ಬುಟ್ಟಿ)ಯಲ್ಲಿ ಸ್ವಲ್ಪ ಅಕ್ಕಿನುಚ್ಚನ್ನು ಹಾಕಿ ಪೊನ್ನಮ್ಮನ ಹತ್ತಿರ ಕೊಟ್ಟು “ ಕಾಲುವೆಗೆ ಹೋಗಿ ತೊಳೆದುಕೊಂಡು ಬಾ” ಎಂದಳು. ಕುಕ್ಕೆ ಹರಿದಿದ್ದುದರಿಂದ ಪೊನ್ನಮ್ಮ ತೊಳೆಯುವಾಗ ನುಚ್ಚೆಲ್ಲಾ ನೀರಿಗೆ ಬಿದ್ದು ಹರಿದುಹೋಯಿತು. ಅದನ್ನು ಕೇಳಿ ಚಿಕ್ಕ ತಾಯಿಯು ಕೊಪದಿಂದ “ ನುಚ್ಚನ್ನು ತರದೆ ಮನೆಗೆ ಬರಬೇಡ ” ಎಂದು ಗದರಿಸಿ ಅಟ್ಟಿಬಿಟ್ಟಳು.
ಪಾಪ! ಪೊನ್ನಮ್ಮ ನೀರಿನಲ್ಲಿ ಹೋದ ನುಚ್ಚನ್ನು ತರುವುದು ಹೇಗೆ? ಅವಳಿಗೆ ಬಹಳ ವ್ಯಸನವಾಯಿತು. ತನ್ನ ಸತ್ತ ತಾಯಿಯನ್ನು ನೆನಿಸಿಕೊಂಡು ಗೊಳೋ ಎಂದು ಅತ್ತಳು.
ಅಳುತ್ತಾ ಅಳುತ್ತಾ ಪೊನ್ನಮ್ಮ ಹರಿದುಹೋಗುತ್ತಿರುವ ನುಚ್ಚಕ್ಕಿಯನ್ನು ಕುರಿತು 'ನುಚ್ಚಕ್ಕಿ ನುರಿಯಕ್ಕೀ ನಾ ಬಪ್ಪೀ ನೀ ನಿಲ್ಲೂ” ಅಂದರೆ "ನುಚ್ಚಕ್ಕೀ ನುರಿಯಕ್ಕಿ ನಾನು ಬರುತ್ತೇನೆ ನೀನು ನಿಲ್ಲೂ” ಎಂದುಕೊಂಡು ಕಾಲುವೆಯ ಏರಿಯ ಮೇಲೆಯೇ ಹಿಂಬಾಲಿಸತೊಡಗಿದಳು.
ಹೀಗೆಯೇ ಹೋಗುತ್ತಿರುವಾಗ ದಾರಿಯಲ್ಲಿ ಒಂದು ದನವು ಬಹಳ ಸೋತು ಏಳಲಾರದೆ ಬಿದ್ದು ಕೊಂಡಿತ್ತು. ಅದನ್ನು ನೋಡಿ ಪೊನ್ನಮ್ಮನಿಗೆ ಬಹಳ ವ್ಯಸನವಾಯಿತು. ಅದಕ್ಕೆ ನೀರು ಕುಡಿಸಿ ಹುಲ್ಲು ಕುಯಿದು ತಂದುಹಾಕಿದಳು. ದನಕ್ಕೆ ಸಂತೋಷವಾಗಿ ಹುಲ್ಲು ತಿನ್ನತೊಡಗಿತು. ತರುವಾಯ ಪೊನ್ನಮ್ಮ ಮುಂದೆ ಹೊರಟಳು. ಸ್ವಲ್ಪ ದೂರ ಹೋಗುವಾಗ ದಾರಿಯಲ್ಲಿ ಒಬ್ಬ ಹಣ್ಣು-ಹಣ್ಣು ಮುದುಕನು ಕೂತಿದ್ದನು. ಅವನನ್ನು ನೋಡಿ ಪೊನ್ನಮ್ಮನು "ಅಜ್ಜಯ್ಯಾ ಇಲ್ಲಿ ಏಕೆ ಕೂತಿದ್ದಿರಿ ?” ಎಂದು ಕೇಳಿದಳು.ಅದಕ್ಕೆ ಆ ಮುದುಕ "ಮಗೂ ಇಲ್ಲಿ ಹತ್ತಿರವೇ ನನ್ನ ಮನೆ ಇದೆ. ಆದರೆ ನನಗೆ ನಡೆಯಲು ಶಕ್ತಿಯೇ ಇಲ್ಲ" ಎಂದನು. ಅದನ್ನು ಕೇಳಿ ಕನಿಕರದಿಂದ ಪೊನ್ನಮ್ಮ, ಆತನನ್ನು ಮೆಲ್ಲನೆ ಕೈ ಹಿಡಿದು ಎಬ್ಬಿಸಿ ಅವನ ಮನೆಗೆ ಕರೆದುಕೊಂಡು ಹೋದಳು.
ಆ ಮುದುಕನಿಗೆ ಬಹಳ ಸಂತೋಷವಾಯಿತು. ಅವನು ಪೊನ್ನಮ್ಮನಿಂದ ಅವಳ ಕತೆಯನ್ನೆಲ್ಲಾ ಕೇಳಿ ತಿಳಿದುಕೊಂಡನು. ಅವನಿಗೆ ವ್ಯಸನವಾಯಿತು. ಅವಳಿಗೆ ಒಂದು ಸೇರು ನುಚ್ಚನ್ನೂ ಒಂದು ಪೆಟ್ಟಿಗೆ ತುಂಬ ಚಿನ್ನವನ್ನೂ ಕೊಟ್ಟನು. ಪೊನ್ನಮ್ಮ ಆತನಿಗೆ ನಮಸ್ಕರಿಸಿ ಪೆಟ್ಟಗೆಯನ್ನು ಹೊತ್ತು ಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಪೊನ್ನಮ್ಮ ನೀರು ಕುಡಿಸಿದ್ದ ದನವು ಅವಳ ಜೊತೆಯಲ್ಲಿಯೇ ಹೊರಟಿತು. ಪೊನ್ನಮ್ಮ ಪೆಟ್ಟಿಗೆಯನ್ನು ತೆಗೆದುಕೊಂಡು ದನದ ಜೊತೆಯಲ್ಲಿ ಸಾಯಂಕಾಲದ ಹೊತ್ತಿಗೆ ಮನೆಗೆ ತಲುಪಿದಳು. ಚಿಕ್ಕ ತಾಯಿಯು ಹೊಟ್ಟೆ ಕಿಚ್ಚಿನಿಂದ ಪೊನ್ನಮ್ಮನನ್ನು ಅಟ್ಟಿದ್ದರೂ ಪೊನ್ನಮ್ಮ ಒಳ್ಳೆಯವಳಾದುದರಿಂದ ಅವಳಿಗೆ ದೇವರು ಒಳ್ಳೆಯದನ್ನೇ ಮಾಡಿದನು. ಇದನ್ನು ನೋಡಿ ಚಿಕ್ಕ ತಾಯಿಗೆ ಬುದ್ಧಿಬಂತು. ಅವಳು ಪೊನ್ನಮ್ಮನನ್ನು ಪುನಃ ಪ್ರೀತಿಸತೊಡಗಿದಳು. ಬೋಜಮ್ಮನೂ ಪೊನ್ನಮ್ಮನನ್ನು ನೋಡಿ ಅವಳಂತೆಯೇ ಒಳ್ಳೆಯವಳಾಗಲು ಪ್ರಯತ್ನಿಸತೊಡಗಿದಳು. ಇದನ್ನು ಕಂಡು ಪೊನ್ನಮ್ಮ ಬೋಜಮ್ಮನನ್ನು ಮೊದಲಿಗಿಂತಲೂ ಮಿಗಿಲಾಗಿ ಪ್ರೀತಿಸಹತ್ತಿದಳು.
ಹೀಗೆ ಎಲ್ಲರೂ ಸುಖವಾಗಿ ಇದ್ದರು. ಪೊನ್ನಮ್ಮನಂತೆ ಮಕ್ಕಳು ಒಳ್ಳೆಯವರಾಗಿದ್ದರೆ ಎಲ್ಲರೂ ಅವರನ್ನು ಪ್ರೀತಿಸುತ್ತಾರೆ. ಆದುದರಿಂದ ನಾವೆಲ್ಲರೂ ಒಳ್ಳೆಯವರಾಗಬೇಕು. ಪ್ರಾಣಿಗಳಲ್ಲಿ ದಯೆಯನ್ನಿಡಬೇಕು.
ಬೇಬಿ
[ಸಂಪಾದಿಸಿ]ಬೇಬಿ ವಸಂತನ ಸುದ್ದಿಯಲ್ಲದೆ ಇನ್ನಾರ ಸುದ್ದಿಯನ್ನೂ ಬರೆಯಬೇಡ ಎಂದು ಹೇಳಿದ್ದೀಯಾ. ಅವನ ವಿಷಯವನ್ನೇ ಬರೆಯುತ್ತೇನೆ.
ಬೇಬಿ ನಿಲ್ಲುತ್ತಾನೆ; ಬೇಬಿ ಕೂತುಕೊಳ್ಳುತ್ತಾನೆ; ಬೇಬಿ ಮಲಗುತ್ತಾನೆ. ಬೇಬಿ ನಗುತ್ತಾನೆ; ಬೇಬಿ ಅಳುತ್ತಾನೆ. ಬೇಬಿ ನಿದ್ರೆ ಮಾಡುತ್ತಾನೆ; ಬೇಬಿ ನಿದ್ರೆ ಮಾಡುವದಿಲ್ಲ. ಬೇಬಿಗೆ ನಾಲ್ಕು ಹಲ್ಲುಗಳಿವೆ; ನಾಲ್ಕೇ ಹಲ್ಲುಗಳಾದರೂ ದಿನಕ್ಕೆ ಆರು ಗ್ಲೇಕ್ಸೋ ಬಿಸ್ಕತ್ತುಗಳನ್ನು ತಿನ್ನುತ್ತಾನೆ; ಅದು ಸಾಲದೆಂತ ಅಳುತ್ತಾನೆ. ಬೇಬಿ ಹಿಡಿಯದೇ ನಿಲ್ಲುತ್ತಾನೆ. ನಾನು ಬರೆಯುತ್ತಾ ಕೂತರೆ ನನ್ನ ಬೆನ್ನ ಮೇಲೆ ಹತ್ತುತ್ತಾನೆ. ನನ್ನ ಕಿವಿಗಳನ್ನು ಕಚ್ಚುತ್ತಾನೆ; ನನ್ನ ಕಿವಿಗಳನ್ನು ಕಚ್ಚಿ ಗಾಯಮಾಡಿದ್ದಾನೆ. ಭಾರತಿಯ ಜಡೆಯನ್ನು ಹಿಡಿದು ಎಳೆಯುತ್ತಾನೆ. ಊಟ ಮಾಡುವಾಗ ಎಲೆಯನ್ನು ಹಿಡಿಯಲು ಬರುತ್ತಾನೆ. ಬೆಂಕಿಯನ್ನು ಎಳೆಯಲು ಪ್ರಯತ್ನ ಮಾಡುತ್ತಾನೆ. ನನ್ನನ್ನು ಕೇಳದೆಯೇ
ಗೌರಮ್ಮ-ಬೇಬಿ
ಅಂಗಳಕ್ಕೆ ಓಡಿ ಹೋಗುತ್ತಾನೆ. ಬಟ್ಟೆಯನ್ನು ಕೊಳೆ ಮಾಡಿಕೊಳ್ಳುತ್ತಾನೆ. ಹೆದರಿಸಿದರೆ ನಗುತ್ತಾ ಮೈಮೇಲೆ ಹತ್ತುತ್ತಾನೆ. ಬಿಳಿ ಬಟ್ಟೆಯವರನ್ನು ಕಂಡರೆ, ನೀನೆಂತ ಅವರ ಹತ್ತಿರ ಓಡುತ್ತಾನೆ. ನಾನೆರಡು ಡೆಹಿಲಿಯಾ ಗಿಡಗಳನ್ನು ಬೆಳೆಸಿಕೊಂಡಿದ್ದೆನೆ; ಅವುಗಳನ್ನು ಹೋಗಿ ಕೀಳುತ್ತಾನೆ.
ಮೇಜಿನ ಮೇಲೆ ಒಂದು ಪಾತ್ರೆಯಲ್ಲಿ ಹೂವಿಟ್ಟಿದ್ದೆ. ಮೇಜಿನ ಬಟ್ಟೆಯನ್ನು ಬೇಬಿ ಎಳೆದ. ಹೂವಿನ ಸಮೇತ ಪಾತ್ರ ಕೆಳಗೆ ಬಿತ್ತು. ನೆಲವೆಲ್ಲಾ ಗಾಜಿನ ಚೂರು, ಅವುಗಳ ಮಧ್ಯೆ ಅಲ್ಲೊಂದು ಇಲ್ಲೊಂದು ಹೂವು, ಬಿದ್ದ ಹೂಗಳನ್ನು ತೆಗೆದು ತಿನ್ನಲು ಸುರುಮಾಡಿದ. ಆಫೀಸಿಗೆ ಹೋಗಿ ಮೇಜಿನಡಿಯಲ್ಲಿ ಕೂತುಕೊಳ್ಳುತ್ತಾನೆ; ಕೆಳಗೇನಾದರೂ ಇದ್ದರೆ ಅದನ್ನು ಹರಿದುಹಾಕುತ್ತಾನೆ; ಸೇಫಿನ ಬಾಗಿಲನ್ನು ಹಿಡಿದು ತೆಗೆಯಲು ಪ್ರಯತ್ನಿಸುತ್ತಾನೆ. ಸೀತಾರಾಮನ ಪಂಚೆಯನ್ನು ಹಿಂದುಗಡೆಯಿಂದ ಹೋಗಿ ಎಳೆಯುತ್ತಾನೆ. ನನಗೆ ಹೇಳದೆಯೆ ಮೀನಾಕ್ಷಿಯ ಜೊತೆಯಲ್ಲಿ ಅವಳ ಮನೆಗೆ ಹೋಗಿಬಿಡುತ್ತಾನೆ.
ಮೀಯಿಸುವಾಗ ಎದ್ದು ಕೂತುಕೊಂಡು ಚೊಂಬನ್ನು ಕಿತ್ತು ಕೊಳ್ಳುತ್ತಾನೆ. ಸಾಬೂನನ್ನು ಬಾಯಲ್ಲಿಟ್ಟುಕೊಳ್ಳುತ್ತಾನೆ. ಮೈಯನ್ನು ಉಜ್ಜಲು ಬಿಡುವದಿಲ್ಲ; ಬಲಾತ್ಕಾರ ದಿಂದ ಉಜ್ಜಿದರೆ ಬಹಳ ಅಳುತ್ತಾನೆ. ವಿಶ್ವನಾಥನು ಓದು ತಿದ್ದರೆ ಅವನ ಪುಸ್ತಕ ಕಿತ್ತುಕೊಂಡು ಹರಿಯುತ್ತಾನೆ. ನಾನು ಪಾತ್ರೆಯಲ್ಲಿ ನೀರಿಟ್ಟುಕೊಂಡಿದ್ದರೆ ಅದನ್ನು ಚೆಲ್ಲುತ್ತಾನೆ.
ಬೇಬಿ ಸುದ್ದಿ ಬರೆಯುವದಾದರೆ ಒಂದು ಪುಸ್ತಕ ತುಂಬಾ ಬರೆದರೂ ಮುಗಿಯುವದಿಲ್ಲ. ಇನ್ನೊಂದು ಸಾರಿ ಬರೆಯುತ್ತೇನೆ.
ಗೌರಮ್ಮ
ಮುಳ್ಳುಬೇಲಿ
ಇಂಗ್ಲಿಷ್ ಪ್ರಸಿದ್ಧ ಕಾದಂಬರಿಯೊಂದರ
ಅನುವಾದ
"ಚಾಲುಕ್ಯ"
ಪ್ರೇಮವು ಕುರುಡು ಎಂದು ಕಣ್ಣಿದ್ದ ಜಗವು ಕರೆಯಿತು. ಆದರೆ ಕುರುಡು ಪ್ರೇಮವು ಕಂಡ ಕಣಸನ್ನು ನನಸಾಗಿ ಕಾಣುವ ಜಗದ ಕಣ್ಣು ಇನ್ನೂ ತೆರೆದಿಲ್ಲ. ಪ್ರೇಮವು ಜಾತಿ– ಪಂಥಗಳ ಕಟ್ಟನ್ನು ಲೆಕ್ಕಿಸದು; ಆದರೂ ಜೀವನದ ಸಫಲತೆಯಾಗದುಳಿಗಯದು. ಎಂಬ ಕಥೆಯು ಇದರಲ್ಲಿ ಸರಸವಾಗಿ ವರ್ಣಿತವಾಗಿದೆ.
ಚಿಗುರು
ಮಿಸೆಸ್ ಬಿ. ಟಿ. ಜಿ. ಕೃಷ್ಣ ಅವರ ಇನ್ನೊಂದು ಕಥಾಸಂಗ್ರಹ
ಕಥಾ ಪಾತ್ರಗಳ ಮನದ ಏರಿಳಿತಗಳ ಉಯ್ಯಾಲೆಯಲ್ಲಿ ಒಂದೊಂದು ಮಾತುಗಳೂ ವೀಣೆಯ ತಂತಿಯನ್ನು ಮೀಟಿದಂತೆ ಓದುಗರ ಹೃದಯದಲ್ಲಿ ತರಂಗವನ್ನೆಬ್ಬಿಸುವವು, ಕಟುಕ ಜೀವಿಗೂ ಕರಣಿಯ ದರ್ಶನವಾಗುವದು. ಶೈಲಿಯ ಸೊಬಗೂ ಭಾಷೆಯ ಬೆಡಗೂ ಕತೆಗಳಿಗೆ ಮೆರಗುಕೊಟ್ಟಿವೆ! ಈಗಾಗಲೆ ಜನ ಪ್ರಿಯವಾದ 'ಕಂಬನಿ'ಗಿಂತ ವಿವಿಧ ಸನ್ನಿವೇಶಗಳು!