ವಿಷಯಕ್ಕೆ ಹೋಗು

ಭವತೀ ಕಾತ್ಯಾಯನೀ/೩೮ನೆಯ ಗ್ರಂಥ/೧ನೆಯ ಪ್ರಕರಣ

ವಿಕಿಸೋರ್ಸ್ದಿಂದ
ಶ್ರೀ ಯಾಜ್ಞವಲ್ಕ್ಯ ಗುರುಭ್ಯೋನಮಃ

ಭಗವತೀ-ಕಾತ್ಯಾಯನೀ.

೧ನೆಯ ಪ್ರಕರಣ.

ಯೋಗೀಶ್ವರನು |

वंदेऽहं मंगलात्मानं भास्वंतं वेदविप्रहं ॥

याज्ञवल्क्यं मुनिश्रेष्ठं जिष्णुं हरिहरप्रभु ॥

ಪೂರ್ವದಲ್ಲಿ ದೇವರಾತನೆಂಬ ಹೆಸರಿನ ತಪೋಧನನಾದ ಬ್ರಾಹ್ಮಣನೊಬ್ಬನು ಇದ್ದನು. ಆತನು ಪರಮ ಶಿವಭಕ್ತನು , ಅನ್ನದಾನತತ್ಪರನು . ಆತನು ಪುತ್ರೇಚ್ಛೆಯಿಂದ ಕೇದಾರ ಕ್ಷೇತ್ರದಲ್ಲಿ ಘೋರತಪಸ್ಸನ್ನಾಚರಿಸಲು, ಸಾಕ್ಷಾತ್ ಪರಮೇಶ್ವರನೇ ಪುತ್ರರೂಪದಿಂದ ಆತನ ಉದರದಲ್ಲಿ ಜನಿಸಿದನು. ದೇವರಾತನು ಮಗನಿಗೆ ಯಾಜ್ಞವಲ್ಕ್ಯನೆಂದು ಹೆಸರಿಟ್ಟನು. ಪರಮತೇಜಸ್ವಿಯಾದ ಯಾಜ್ಞವಲ್ಕ್ಯನು ಲೋಕಾನಂದಕರನಾಗಿ ಬೆಳೆಯುತ್ತಿರಲು, ದೇವರಾತನು ಯಥಾವಿಧಿ ಆತನ ಮೌಂಜೀಬಂಧನವನ್ನು ಮಾಡಿದನು. ಮೇಖಲಾ, ಕೃಷ್ಣಾ ಜಿನಾದಿ ಬ್ರಹ್ಮಚರ್ಯಲಕ್ಷಣಗಳಿಂದ ಯುಕ್ತನಾಗಿ ಆತನು ವೇದಪ್ರತಿಪಾದಿತವಾದ ಬ್ರಹ್ಮಚರ್ಯವ್ರತವನ್ನು ಆಚರಿಸಹತ್ತಿದನು. ಪಾತಃಸ್ನಾನ, ಸಂಧ್ಯಾವಂದನ, ಅಗ್ನಿಕಾರ್ಯ, ಆಚಾರ್ಯೋಪಾಸನಾದಿ ಕರ್ಮಗಳನ್ನು ಮಾಡುತ್ತ, ಗುರುಕುಲವಾಸದಿಂದ ವೇದಾಧ್ಯಯನವನ್ನು ಮಾಡಹತ್ತಿದನು. ಮೊದಲು ಬಾಷ್ಕಲನೆಂಬ ಋಷಿಯಬಳಿಯಲ್ಲಿ ಆ ಗುರುಸೇವಾತತ್ಪರನ ಋಗ್ವೇದಾಧ್ಯಯನವು ಸಂಪೂರ್ಣವಾಗಿ ಆಯಿತು. ಆಮೇಲೆ ಜೈಮಿನಿಯಬಳಿಯಲ್ಲಿ ಆತನು ಸಾಮವೇದದ ಸಹಸ್ರಶಾಖೆಗಳ, ಹಾಗು ಅಥರ್ವಣವೇದದ ಅಧ್ಯಯನವನ್ನು ಮಾಡಿದನು. ಆ ಮೇಲೆ ಯಜುರ್ವೇದಾಧ್ಯಯನಮಾಡುವ ಉತ್ಸುಕತೆಯಿಂದ ಆ ಮಹಾವಿದ್ಯಾಂಸನಾದ ಯಾಜ್ಞವಲ್ಕ್ಯನು ವೈಶಂಪಾಯನರ ಬಳಿಯಲ್ಲಿ ಬ್ರಹ್ಮಚರ್ಯದಿಂದ ಯಜುರ್ವೇದಾಧ್ಯಯನವನ್ನು ಮಾಡಿದನು. ಶಾಂತಿ, ಇಂದ್ರಿಯನಿಗ್ರಹ, ವಿರಕ್ತಿ, ಸಹನಶೀಲತೆ, ಗುರುಸೇವಾ ತತ್ಪರತೆ, ನಿರಹಂಕಾರಾದಿಗುಣಗಳು ಶ್ರೀ ಯಾಜ್ಞವಲ್ಕ್ಯರಲ್ಲಿ ಮೂರ್ತಿಮತ್ತಾಗಿ ಇದ್ದದ್ದರಿಂದ, ಅಷ್ಟಸಿದ್ದಿಗಳು ಅವರನ್ನು ಸದಾಸೇವಿಸುತ್ತಲಿದ್ದವು. ವೈಶಂಪಾಯನರ ಬಳಿಯಲ್ಲಿ ಮುನ್ನೂರಾಅರವತ್ತು ಜನಶಿಷ್ಯರು ಇದ್ದರು. ಅವರಲ್ಲಿ ಯಾಜವಲ್ಕ್ಯರು ಪರಮತೇಜಸ್ಸಿಗಳಾಗಿ ನಕ್ಷತ್ರಗಳ ಮಧ್ಯದಲ್ಲಿ ಚಂದ್ರನಂತೆ ಒಪ್ಪುತ್ತಲಿದ್ದರು. 

2

ಹೀಗಿರುವಾಗ ಯಾಜ್ಞವಲ್ಕ್ಯ ರಿಗೂ, ವೈಶಂಪಾಯನರಿಗೂ ವಿವಾದವುಂಟಾಯಿತು.

ವಿವಾದದ ಕಾರಣಗಳು ಬೇರೆಬೇರೆ ಪುರಾಣಗಳಲ್ಲಿ ಬೇರೆಬೇರೆ ವಿಧವಾಗಿ ಹೇಳಲ್ಪಟ್ಟರುವವು, ಈ ಸಂಬಂಧದಿಂದ ಭಾಗವತ, ಹಾಗು ವಿಷ್ಣು ಪುರಾಣಗಳಲ್ಲಿ ಹೇಳಿರುವದರ ಸಾರಾಂಶವೇನಂದರೆ-ವ್ಯಾಸಶಿಷ್ಯರಾದ ವೈಶಂಪಾಯನರು ತಮಗೆ ದೊರೆತ ಯಜುರ್ವೇದದ ಇಪ್ಪತ್ತೇಳು ಶಾಖೆಗಳನ್ನು ಮಾಡಿ, ಶಿಷ್ಯರಿಗೆ ಅಧ್ಯಯನಮೂಡಿಸಿದರು. ಆ ಶಿಷ್ಯರಲ್ಲಿ ಯಾಜ್ಞವಲ್ಕ್ಯರು ಇದ್ದರು. ಅವರು ಅತ್ಯಂತಗುರುಭಕ್ತಿಪರಾಯಣರಾಗಿದ್ದರು. ಮುಂದೆ ಒಂದುದಿವಸ ಎಲ್ಲ ಋಷಿಗಳು ಕೂಡಿ-" ಇಂದು ಎಲ್ಲರೂ ಮೇರುಪರ್ವತಕ್ಕೆ ಹೋಗ ಬೇಕು, ಇದಕ್ಕೆ ಯಾರಾದರೂ ತಪ್ಪಿದರೆ ಅವರಿಗೆ ಏಳುದಿನ ಬ್ರಹ್ಮಹತ್ಯೆಯ ದೋಷವು ಘಟಿಸುವದು ” ಎಂದು ನಿಯಮಮಾಡಿಕೊಂಡರು. ಈ ನಿಯಮವನ್ನು ವೈಶಂಪಾಯನರು ತಪ್ಪಿ ಬ್ರಹ್ಮಹತ್ಯೆಗೆ ಗುರಿಯಾದದ್ದಲ್ಲದೆ, ಅವರು ಕಾರಣವಶಾತ್ ಗಡಿಬಿಡಿಯಿಂದ ಹೋಗುತ್ತಿರುವಾಗ ಪ್ರಾಮಾದದಿಂದ ತಮ್ಮ ತಂಗಿಯ ಸಣ್ಣ ಕೂಸನ್ನು ತುಳಿಯಲು, ಕೂಡಲೆ ಅದರ ಪ್ರಾಣೋತ್ಕ್ರಮಣವಾಗಿ ಬಾಲಹತ್ಯೆಯ ದೋಷವೂ ಘಟಿಸಿತು. ಆಗ ವೈಶಂಪಾಯನರು ತಮ್ಮ ಶಿಷ್ಯರನ್ನೆಲ್ಲ ಕರೆದು “ನಮ್ಮಿಂದ ಬ್ರಹ್ಮಹತ್ಯೆಯ ಪಾತಕವು ಒದಗಿರುವದು. ಅದರ ನಾಶಕ್ಕಾಗಿ ನೀವೆಲ್ಲರೂ ತಪಸ್ಸನ್ನಾಚರಿಸಬೇಕು,” ಎಂದು ಆಜ್ಞಾಪಿಸಿದರು. ಅದನ್ನು ಕೇಳಿ ಯಾಜ್ಞವಲ್ಕ್ಯರು-"ಇಂಥ ತಪಸ್ಸನ್ನಾಚರಿಸಲಿಕ್ಕೆ ಇವರು ಸಮರ್ಥರಲ್ಲ, ಸುಮ್ಮನೆ ಇವರಿಗೆ ಆಯಾಸವನ್ನು ಯಾಕೆ ಉಂಟುಮಾಡುವಿರಿ ? ನಾನೊಬ್ಬನೇ ತಪಸ್ಸನ್ನಾಚರಿಸಿ, ನಿಮ್ಮ ಬ್ರಹ್ಮಹತ್ಯೆಯ ಪಾತಕವನ್ನು ಕಳೆಯುವೆನು” ಅನ್ನಲು, ಶಿಷ್ಯನ ಈ ಔದ್ಧತ್ಯಕ್ಕಾಗಿ ವೈಶಂಪಾಯನರಿಗೆ ಕೋಪವುಂಟಾಯಿತು. ಅವರು ಯಾಜ್ಞವಲ್ಕ್ಯರನ್ನು ಕುರಿತು- "ನೀನು ಇವರನ್ನು ಅಸಮರ್ಥರೆಂದು ಹೀಯಾಳಿಸುವದರಿಂದ ವಿಪ್ರಾವಮಾನಕನಿರುತ್ತೀ; ಮೇಲಾಗಿ ತನ್ನ ಆಜ್ಞಾಭಂಗ ಮಾಡಿರುತೀ; ಆದ್ದರಿಂದ ಇಂಥ ಶಿಷ್ಯನು ನನಗೆ ಬೇಡ. ನೀನು ನನ್ನಲ್ಲಿ ಮಾಡಿದ ಅಧ್ಯಯನವನ್ನು ನನಗೆ ಒಪ್ಪಿಸು,”ಎಂದು ನಿಷ್ಟುರವಾಗಿ ನುಡಿದರು. ಅದಕ್ಕೆ ಯಾಜ್ಞವಲ್ಕ್ಯರು-" ನಾನು ತಮ್ಮ ಮೇಲಿನ ಉತ್ಕಟಭಕ್ತಿಯಿಂದ ಹೀಗೆ ನುಡಿದೆನಲ್ಲದೆ, ವಿಪ್ರಾವಮಾನಕ್ಕಾಗಿ ನುಡಿದವನಲ್ಲ. ನಾನು ನಿರಪರಾಧಿಯಿದ್ದು, ತಾವು ಹೀಗೆ ನುಡಿಯುವದರಿಂದ ನಿಮ್ಮ ವೇದವನ್ನು ನೀವು ತೆಗೆದುಕೊಳ್ಳಿರಿ,ಎಂದು ಗುರುಗಳನ್ನು ನಮಸ್ಕರಿಸಿ, ವೇದವ ವಮನಮಾಡಿ ಹೊರಟುಹೋದರು. ಹೀಗೆ ರಕ್ತರೂಪದಿಂದ ವಮನಮಾಡಿದ ವೇದವನ್ನು ಗುರುಗಳಾದ ವೈಶಂಪಾಯನರ ಆಜ್ಞೆಯಂತೆ ಉಳಿದ ಶಿಷ್ಯರು ತಿತ್ತಿರಿಪಕ್ಷಿಗಳ ರೂಪದಿಂದ ಗ್ರಹಣಮಾಡಲು, ತೈತ್ತಿರೀಯವೆಂಬ ಉತ್ತಮಶಾಖೆಯು ಉಂಟಾಯಿತು. ಮುಂದೆ ಯಾಜ್ಞವಲ್ಕರು ಸೂರ್ಯನ ಆರಾಧನೆಯಿಂದ ಶುಕ್ಲಯಜುರ್ವೇದವನ್ನು ಸಂಪಾದಿಸಿದರು.

ಇದು ವಿಷ್ಣುಪುರಾಣ-ಭಾಗವತಗಳಲ್ಲಿಯ ಸಂಗತಿಯಾಯಿತು. ಇನ್ನು ಮಹಾ ಭಾರತದ ಶಾಂತಿಪರ್ವದ ಮೋಕ್ಫಧರ್ಮದ ೩೧೮ನೆಯ ಅಧ್ಯಾಯದಲ್ಲಿ ವಿವಾದದ ಕಾರಣವು ಬೇರೆ ವಿಧವಾಗಿ ಹೇಳಲ್ಪಟ್ಟಿದೆ. ಆ ಕಾರಣವನ್ನು ಸ್ವತಃ ಯಾಜ್ಞವಲ್ಕ್ಯರೇ

3

ಜನಕರಾಜನಮುಂದೆ ಹೇಳಿದ್ದು ಹೇಗೆಂದರೆ-"ಜನಕರಾಜನೇ, ನಿನ್ನ ತಂದೆಯು ಯಜ್ಞ ಮಾಡಿದಾಗ, ನನ್ನ ಸೋದರಮಾವಂದಿರಾದ ವೈಶಂಪಾಯನರ ಸಲುವಾಗಿ ನಾನು ಹೋಗಿ ಯಜ ವನ್ನು ಸಾಂಗಮಾಡಿದೆನು. ಆಗ ದೇವಲಋಷಿಯ ಸಾಕ್ಷಿಯಿಂದ ನಾನು ಅರ್ಧ ದಕ್ಷಿಣೆಯನ್ನು ತಕ್ಕೊಳ್ಳಲು, ಆ ದಕ್ಷಿಣೆಯ ಸಲುವಾಗಿ ವೈಶಂಪಾಯನರು ನನ್ನ ಸಂಗಡ ಜಗಳವಾಡಿದರು. ಆಗ ನಿನ್ನ ತಂದೆಯೂ, ಸುಮಂತು, ಪೈಲ, ಜೈಮಿನಿ ಮೊದಲಾದ ಋಷಿಗಳೂ ನನ್ನನ್ನು ಬಹುಮಾನಪೂರ್ವಕ ಸಮಾಧಾನಪಡಿಸಿದರು. ಆಮೇಲೆ ನಾನು ಸೂರ್ಯನನ್ನು ಆರಾಧಿಸಿದೆನು. ಆತನ ಪ್ರಸಾದದಿಂದ ಪ್ರತ್ಯಕ್ಷ ಸರಸ್ವತಿಯು ನನ್ನ ಮುಖದಲ್ಲಿಪ್ರವೇಶಿಸಿದಳು. ಆಮೇಲೆ ಹದಿನೈದು ಶಾಖೆಗಳನ್ನೂ, ಶತಪಥಬ್ರಾಹ್ಮಣವನ್ನೂ, ರಹಸ್ಯಯುಕ ಸರ್ವವೇದಜಾತವನ್ನೊ ಶಿಷ್ಯರಿಗೆ ಉಪದೇಶಿಸಿ, ಆ ವಿದ್ಯೆಯು ಸುಪ್ರತಿಷ್ಠ ತವಾದಮೇಲೆ ನಾನು ಅಧ್ಯಾತ್ಮಚಿಂತನದಲ್ಲಿ ತೊಡಗಿದೆನು.”

ಇವುಗಳ ಹೊರತು ಸ್ಕಂದಪುರಾಣದ ಗೋದಾವರೀಖಂಡದ ವಿರಜಾಮಾಹಾತ್ಮ್ಯ

ದಲ್ಲಿರುವ ಕಥೆಯ ತಾತ್ಪರ್ಯವೇನಂದರೆ, -- ಯಜ್ಞವಲ್ಕ್ಯರು ತಮ್ಮಗುರುಗಳ ಬಳಿಯಲ್ಲಿ ಅಧ್ಯಯನಮಾಡುತಿರುವಾಗ, ಗುರುಗಳ ಆಶ್ರಮದ ಸಮೀಪದಲ್ಲಿ ದ್ರುಮನೆಂಬ ಅರಸನ ರಾಜಧಾನಿಯು ಇತ್ತು. ಆ ಅರಸನಿಗೆ ಪ್ರತಿನಿತ್ಯ ಫಲಮಂತ್ರಾಕ್ಷತೆಯು ಶಿಷ್ಯಮುಖಾಂ ತರವಾಗಿ ಸರತಿಯಿಂದ ಮುಟ್ಟುತ್ತಿತ್ತು. ಒಂದುದಿನ ಯಾಜ್ಞವಲ್ಕ್ಯರ ಸರತಿಯು ಬರ ಲು, ಅವರು ಫಲಮಂತ್ರಾಕ್ಷತೆಯನ್ನು ತಕ್ಕೊಂಡು ಅರಮನೆಗೆ ಹೋದರು. ಆಗ ಅರಸ ನಿದ್ದಿಲ್ಲ, ರಾಜಸ್ತ್ರೀಯರು ಕುಳಿತುಕೊಂಡಿದ್ದರು. ಅವರು ಯಾಜ್ಞವಲ್ಕ್ಯರ ಅನಾದರ ಮಾಡಿ, ಇವನಾವನೋ ಜಟಾಧಾರಿಯಾದ ನಪುಂಸಕನು ಬಂದಿರುವನೆಂದು ತಮ್ಮೊಳಗೆ ಉಪಹಾಸಮಾಡುತ್ತ, ಫಲಮಂತ್ರಾಕ್ಷತೆಯನ್ನು ತಕ್ಕೊಳ್ಳದೆ ಹಾಗೇ ಒಳಗೆ ಹೊರಟುಹೋ ದರು. ಇದನ್ನು ನೋಡಿ ಋಷಿವರ್ಯರಾದ ಯಾಜ್ಞವಲ್ಕ್ಯರು ಅಶ್ವಶಾಲೆಯೊಳಗಿನ ಖಂಬಗಳ ಮೇಲೆ --"ಫಲಿನೋಯೇ ಫಲೈರ್ಹಿನಾಃ ಪುಷ್ಪರ್ಹೀನಾಶ್ಚ ಪುಷ್ಪಣಃ ಮತ್ಪ್ರಸಾದೇನ ತೇಸರ್ವೇ ಸಫಲಾಶ್ಚ ಭವಂತ್ವಿತಿ ”|| ಎಂಬ ಆಶೀರ್ವಚನಪೂರ್ವಕ ವಾಗಿ ಮಂತ್ರಾಕ್ಷತೆಯನ್ನುಚಲ್ಲಿದರು. ಕೂಡಲೆ ಆ ಕಂಬಗಳೆಲ್ಲ ಪುಷ್ಟಫಲ ಸಂಪನ್ನ ವಾದವು. ಬಳಿಕ ಯಾಜ್ಞವಲ್ಕ್ಯರು ಗುರ್ವಾಶ್ರಮಕ್ಕೆ ತಿರುಗಿಹೋದರು. ಮುಂದೆ ಕೆಲವು ಹೊತ್ತಿನಮೇಲೆ ಅರಸನು ಬರಲು, ಈ ಅಲೌಕಿಕ ಚಮತ್ಕಾರವು ಆತನ ಕಣ್ಣಿಗೆ ಬಿದ್ದಿತು. ಆಗ ಆತನು ಇಂದು ಇಲ್ಲಿಗೆ ಯಾರು ಬಂದಿದ್ದರೆಂದು ಕೇಳಲು, ಸ್ತ್ರೀಯರು ನಡೆದ ಸಂಗತಿಯನ್ನೆಲ್ಲ ಹೇಳಿದರು . ಅದನ್ನು ಕೇಳಿ ಅರಸನು ಸಾನಂದಾಶ್ಚರ್ಯ ಗೊಂಡನು. ಕೂಡಲೆ ಆತನು ವೈಶಂಪಾಯನರಬಳಿಗೆ- “ ಇಂದು ನಮ್ಮಮನೆಗೆ ಬಂದ ಶಿಷ್ಯನನ್ನೇ ದಿನಾಲು ಕಳಿಸುತ್ತ ಹೋಗಬೇಕು, ” ಎಂದು ಹೇಳಿಕಳಿಸಿದನು. ಅರಸನ ಈ ಸಾಚನೆಯಂತೆ ನಡೆದುಕೊಳ್ಳುವದಕ್ಕಾಗಿ ಯಾಜ್ಞವಲ್ಕ್ಯರನ್ನು ಆಜ್ಞಾಪಿಸ ಬೇಕೆಂದು ವೈಶಂಪಾಯನರು ಅವರನ್ನು ಕರೆಸಿ, ಅರಸನ ಏಚಾರವನ್ನು ಅವರಿಗೆ ಹೇಳಿ

"ಪ್ರತಿನಿತ್ಯ ಅರಮನೆಗೆ ನೀನೇಹೋಗಬೇಕೆಂ"ದು ಕಟ್ಟುನೊಡಿದರು. ಅದಕ್ಕೆ ಯಜ್ಞ
4

ವಲ್ಕ್ಯರು-“ನಾನು ದಿನಾಲು ಹೋಗುವದಿಲ್ಲ. ನನ್ನ ಸರತಿಬಂದಾಗ ಹೋಗುವೆನು" ಎಂದು ಉತ್ತರಕೊಟ್ಟರು. ಅದನ್ನು ಕೇಳಿ ವೈಶಂಪಾಯನರು ಕೋಪಗೊಂಡು-- "ಆಮ್ನಾಯಂ ದೇಹಿ ಮೇ ಶೀಘ್ರಂ ಯದಿ ತತ್ರ ನ ಗಚ್ಛಸಿ| ನಿರ್ಗಚ್ಚ ಭವನಾದಸ್ಮಾ ನ್ನೃಶಂಸ ಗುರುನಿಂದಕ || ” ಅಂದರೆ, “ ಅರಸನ ಬಳಿಗೆ ಹೋಗದಿದ್ದರೆ ನನ್ನ ವೇದವನ್ನು ನನಗೆ ತಿರುಗಿ ಕೊಟ್ಟು ಇಲ್ಲಿಂದ ಹೊರಟುಹೋಗು; ಯಾಕಂದರೆ ನೀನು ಗುರ್ವಾಜ್ಞೆ ಯನ್ನು ಮೀರುವವನೂ, ಗುರುನಿಂದಕನೂ ಆಗಿರುತ್ತೀ ” ಎಂದು ನುಡಿದರು. ಆಗ ಯಜ್ಞವಲ್ಕ್ಯರು ರಕ್ತರೂಪದಿಂದ ವೇದವನ್ನು ಕಾರಿ, ಗುರುವನ್ನು ನಮಸ್ಕರಿಸಿ ಹೊರ ಟುಹೋದರು. ಉಳಿದ ಶಿಷ್ಯರು ಗುರುವಿನ ಆಪ್ಪಣೆಯಿಂದ ತಿತ್ತಿರಿರೂಪಗಳನ್ನು ಧರಿಸಿ ಆ ಕಾರಿಕೆಯನ್ನು ಭಕ್ಷಿಸಿದರು. ಆದ್ದರಿಂದ ತೈತ್ತಿರೀಯಶಾಖೆಯು ಉತ್ಪನ್ನವಾಯಿತು. ಮುಂದೆ ಯಜ್ಞವಲ್ಕ್ಯರು ವಿರಜಾತೀರ್ಥಕ್ಕೆ ಬಂದು ಶಿವನನ್ನು ಆರಾಧಿಸಿದರು. ಆಗ ಶಿವನು ಪ್ರತ್ಯಕ್ಷನಾಗಿ ಯಾಜ್ಞವಲ್ಕ್ಯರನ್ನು ಸೂರ್ಯನ ಬಳಿಗೆ ಕಳಿಸಿದನು. ಅಲ್ಲಿ ಹೋಗಿ ಯಜ್ಞವಲ್ಕ್ಯರು ಋಗಾದಿ ಯಾವತ್ತು ವೇದಗಳ ಅಧ್ಯಯನ ಮೂಡಿದರು.

ಈ ವಿವಾದದ ರಹಸ್ಯವು ವಿಚಾರಣೀಯವಾಗಿರುತ್ತದೆ; ಇತ್ತ ವೈಶಂಪಾಯನರು

ಸಾಮನ್ಯರಲ್ಲ ; ಬ್ರಹ್ಮಜ್ಞರು, ಶಾಂತರು, ವ್ಯಾಸಶಿಷ್ಯರು. ಅತ್ತ ಯೊಜ್ಞವಲ್ಕ್ಯರೂ ಸಾಮನ್ಯರಲ್ಲ ; ಮಹಾಜ್ಞಾನಿಗಳು, ಅತ್ಯಂತ ತೇಜಸ್ವಿಗಳು, ತಮ್ಮ ಆಶೀರ್ವಚನದಿಂದ ನಿರ್ಜೀವವಸ್ತುವನ್ನು ಸಜೀವಗೊಳಿಸುವಂಥ ಮಹಾಮಹಿಮೆಯುಳ್ಳವರು. ಅಂದಬಳಿಕ ಇಂಥವರಲ್ಲಿ ವಿವಾದವು ಉತ್ಪನ್ನವಾದ ಬಗೆಯೇನು ? ಲೋಕಕಲ್ಯಾಣಕ್ಕಾಗಿ ಪ್ರಕಟ ವಾಗುವ ಸತ್ಪುರುಷರೂಪ ವಿಭೂತಿಗಳ ಪ್ರತಿಒಂದು ಕೃತಿಯಿಂದ - ಆಕೃತಿಯು ಶ್ಲಾಘ್ಯ ವಿರಲಿ, ಅಶ್ಲಾ‍ಘ್ಯವಿರಲಿ ಲೋಕಕಲ್ಯಾಣವೇ ಆಗುವದೆಂದು ಹೇಳಬೇಕಾಗುತ್ತದೆ. ಅಜ್ಞಾ ನಿಗಳುಮಾತ್ರ ಇದನ್ನು ಎಣಿಸದೆ ವಿಕಲ್ಪವನ್ನು ಭಾವಿಸುವರು. ಮಹಾಮಹಾಋಷಿಗಳು ಪ್ರತ್ಯಕ್ಷ ದೇವರನ್ನು ಶಪಿಸಿ ಲೋಕಕಲ್ಯಾಣವನ್ನುಂಟುಮೂಡಿರುವರು. ಭಗವಂತನ ದಶಾ ವತಾರಗಳೇ ಇದಕ್ಕೆ ಸಾಕ್ಷಿಯಾಗಿರುವವು. ಸತ್ಪುರುಷರ ನಿಗ್ರಹಾನುಗ್ರಹಗಳಂತ, ಅವರ ಸ್ನೇಹ-ಕಲಹಗಳೆರಡೂ ಕಲ್ಯಾಣಕಾರಕಗಳಾಗಿಯೇ ಇರುವವೆಂಬದನ್ನು ಮರೆಯಲಾ ಗದು. ಮಹಾತ್ಮರಾದ ವೈಶಂಪಾಯನರು ಬ್ರಹ್ಮಹತ್ಯಾದೋಷದಿಂದ ವ್ಯಾಕುಲಚಿತ್ತರಾಗಿ ಶಿಷ್ಯನನ್ನು ನಿಗ್ರಹಿಸಿದಂತೆ ತೋರಿದರೂ, ಅದರಿಂದ ಶಿಷ್ಯನ ನಿಜವಾದ ತೇಜೋವೈಭವವು ಪ್ರಕಟವಾಗಿ, ಅದು ಜಗತ್ತಿನ ಕಲ್ಯಾಣಕ್ಕೇ ಕಾರಣವಾದದ್ದರಿಂದ ಇದೊಂದು ಈಶ್ವರೀ ಸಂಕಲ್ಪವೆಂತಲೇ ಒಪ್ಪಬೇಕಾಗುವದು. ಇರಲಿ. ಯೋಗೀಶ್ವರರಾದ ಯಾಜ್ಞವಲ್ಕ್ಯರು ಗುರ್ವಾಜ್ಞೆಯಂತೆ ಯಜುರ್ವೇದವನ್ನು ಕಾರಿ, ಸೂರ್ಯನಾರಾಯಣನನ್ನು ಕುರಿತು ತಪ ಸ್ಪನ್ನಾಚರಿಸಲು, ಆ ಲೋಕಚಕ್ಷುವು ಪ್ರಸನ್ನನಾಗಿ- "ಎಲೈ ಬ್ರಾಹ್ಮಣಶ್ರೇಷನೇ, ನಿನಗೆ ಕಲ್ಯಾಣವಾಗಲಿ. ನಿನ್ನ ತಪಸ್ಸು ಸಿದ್ಧವಾಗಿರುವದು. ನಿನಗೆ ಬೇಕಾದದ್ದನ್ನು ಬೇಡಿಕೋ” ಎಂದು ಹೇಳಿದನು. ಆಗ ಯಾಜ್ಞವಲ್ಕ್ಯರು ಸೂರ್ಯನಾರಾಯಣನನ್ನು ಪೂಜಿಸಿ ಕೈ

ಜೋಡಿಸಿ ನಿಂತುಕೊಂಡು-- "ನೀನು ವರಪ್ರದಾನವೂಡುವದಾದರೆ, ನಮ್ಮ ಗುರುಗಳಾದ 
5

ವೈಶಂಪಾಯನರಿಗೆ ಯಾವದು ಗೊತ್ತಿರುವದಿಲ್ಲವೋ, ಯಾವದರ ಹೊರತು ಯಾವ ಶ್ರೇಷ ಕೃತ್ಯವೂ ಸಿದ್ದವಾಗುವದಿಲ್ಲವೋ ಅಂಥ ಯಜುರ್ವೇದವನ್ನು ನನಗೆ ದಯಪಾಲಿಸು.” ಎಂದು ಬೇಡಿಕೊಂಡರು. ಆಗ ಅಶ್ವರೂಪಧಾರಣಮಾಡಿದ ಆ ಮಹಾಮುನಿಯನ್ನು ಶ್ರೀಸೂರ್ಯನು ತನ್ನರಥದಲ್ಲಿ ಕರಕೊಂಡು ಸುಹಾಸ್ಯವದನದಿಂದ – "ಪೂರ್ವದಲ್ಲಿ ಋಷಿಗಳು ಮಂದಮತಿಗಳ ಉದ್ಧಾರಕ್ಕಾಗಿ ವೇದರಾಶಿಯಲ್ಲಿ ನಾಲ್ಕು ಭಾಗಮಾಡು ವಾಗ, ಯಜುರ್ವೇದ ಶಾಖೆಯೊಳಗಿನದೊಂದು ಮುಷ್ಟಿಯನ್ನು, ಮುಂದೆ ನೀನು ಬೇ ಡುವೆಯೆಂಬ ಭವಿಷ್ಯವನ್ನರಿತು ನನ್ನಬಳಿಯಲ್ಲಿ ಇಟ್ಟು ಉಳಿದ ಎಲ್ಲವೇದದ ವಿಸ್ತಾರ ವನ್ನು ಜಗತ್ತಿನಲ್ಲಿ ಮಾಡಿದರು. ಯಾವವೇದದಲ್ಲಿ ಕರ್ಮ, ಉಪಾಸನಾ, ಜ್ಞಾನ ಗಳೆಂಬ ಮೂರು ಪ್ರಕರಣಗಳು ಇರುವವೋ ಆ ಅಯಾತಯಾಮ ಸಂಜ ಕವಾದ ವೇದ ವನ್ನು ನಾನು ನಿನಗೆ ಉಪದೇಶಿಸುವೆನು. ಈ ವೇದದಲ್ಲಿ ಶ್ರೌತಕರ್ಮದ ಆಚಾರಗಳೆಲ್ಲ ಸಾದ್ಯಂತವಾಗಿ ಹೇಳಲ್ಪಟ್ಟಿರುವವು. ಮಧ್ಯಭಾಗದಲ್ಲಿ ಮುಕ್ತಿದಾಯಕವಾದ ಶಿವೋ ಪಾಸನೆಯು ಹೇಳಲ್ಪಟ್ಟಿರುವದು. ಜೀವಬ್ರಮ್ಹವಿಷಯದ ಭ್ರಮವನ್ನು ದೂರಮಾಡು ವಂಥ, ಆತ್ಮಸಾಕ್ಷಾತ್ಕಾರವನ್ನುಂಟುಮಾಡುವಂಥ, ನಾಮದಿಂದಲೂ, ಅರ್ಥದಿಂದಲೂ ಶ್ರೇಷ್ಟವಾಗಿರುವಂಥ " ಈಶ " ವೆಂಬ ಉಪನಿಷದ್ರತ್ನವು ಆವೇದದ ಕಡೆಯಭಾಗದಲ್ಲಿ ಒಪ್ಪುತ್ತಿರುವದು. ಇದಲ್ಲದೆ ಬ್ರಹದಾರಣ್ಯಕವೆಂಬ ಶ್ರೇಷ್ಟ ಉಪನಿಷತು ಈ ಶುಕ್ಲ ಯಜುರ್ವೇದಕ್ಕೆ ಸಂಬಂಧಿಸಿರುವದು. ನಿನ್ನಸಲುವಾಗಿ ಬಹುಪ್ರಯಾಸದಿಂದ ಕಾದು ಇಟ್ಟಿದ್ದ ಪರಮಶ್ರೇಷ್ಟವಾದ ಯಜುರ್ವೇದದ ಈ ಶಾಖೆಯನ್ನು ನಿನಗೆ ಉಪದೇಶಿಸು ವನು. ಮೊದಲೇ ವೇದವು ತೇಜೋಮಯ , ಅದರಲ್ಲಿ ನನ್ನತೇಜಸ್ಸು ಬೆರೆತಿರುವದು.” ಎಂದು ಹೇಳಿ , ವೇದವನ್ನು ಉಪದೇಶಿಸಿ ಅಂತರ್ಧಾನಹೊಂದಿದನು.

ಹೀಗೆ ಅಗಾಧ ತಪಸ್ಸಿನಿಂದ ಸಂಪಾದಿಸಿದ ಅಯಾತಯಾಮ ವೇದವನ್ನೂ, ಉ

ಳಿದ ಋಗಾದಿ ವೇದಗಳನ್ನೂ ಉಪದೇಶಿಸುವದಕ್ಕಾಗಿ ಶ್ರೀಯಾಜ ವಲ್ಕ್ಯರು ಪಾಠಶಾಲೆ ಯನ್ನು ಏರ್ಪಡಿಸಿದರು. ಯಾಜ್ಞವಲ್ಕ್ಯರ ಕೀರ್ತಿಪ್ರಭೆಯು ಸಮಸ್ತದಿಗಂತವನ್ನು ಬೆಳಗುತಿ ತ್ತು. ವಿದ್ಯಾರ್ಥಿಗಳು ನಾಲ್ಕೂ ದಿಕ್ಕುಗಳಿಂದ ಗುಂಪುಗುಂಪಾಗಿ ಹೊರಟು, ಯಾಜ್ಞವಲ್ಕ್ಯರಲ್ಲಿ ಗುರುಕುಲವಾಸಮಾಡಬೇಕೆಂದು ಬರುತ್ತಿದ್ದರು. ಅಲ್ಪಕಾಲದಲ್ಲಿಯೇ ಪಾಠಶಾಲೆಯು ವಿದ್ಯಾರ್ಥಿಗಳಿಂದ ತುಂಬಿಹೋಯಿತು. ಜನಕನು ಆ ವೇದ ಶಾಲೆಗೆ ಪ್ರೋತ್ಸಾಹಕನಾಗಿ, ಒಂದು ವೇದಮಂದಿರವನ್ನು ಕಟ್ಟಿಸಿ, ಅಲ್ಲಿ ವಿದ್ಯಾರ್ಥಿ ಗಳ ಅನ್ನಪಾನಗಳ ಅನುಕೂಲತೆ ಮಾಡಿಕೊಟ ದ್ದನು. ಆ ಮಂದಿರದಲ್ಲಿ ವಿದ್ಯಾರ್ಥಿ ಗಳೆಲ್ಲರೂ ಯಾಜ ವಲ್ಕ್ಯರ ಸಹಾಯೋಪಾಧ್ಯಾಪಕರ ವ್ಯವಸ್ಥೆಗೆ ಒಳಪಟ್ಟು, ವಿದ್ಯಾ ಭ್ಯಾಸವನ್ನು ಮಾಡುತ್ತಲಿದ್ದರು. ಯಾಜವಲ್ಕ್ಯರು ಒಂದು-ನಿಯಮಿತಕಾಲದಲ್ಲಿ ತಾವೇ ಅಲ್ಲಿಗೆ ಹೋಗಿ ವೇದಪಾಠವನ್ನು ಹೇಳುತ್ತಿದ್ದರು. ಅಲ್ಲಿ ಸೇರಿದ್ದ ವಿದ್ಯಾರ್ಥಿಗಳಲ್ಲಿ ಬ್ರಾ ಹ್ಮಣ, ಕ್ಷತ್ರಿಯ, ವೈಶ್ಯರೆಂಬ ಮೂರುಬಗೆಯ ದ್ವಿಜರಿದ್ದರು. ಪಾಠಶಾಲೆಯಲ್ಲಿ ಆರು

ವೇದಾಂಗಗಳ ಬೇರೆಬೇರೆ ತರಗತಿಗಳಿದ್ದವು. ಯಾಜ್ಞವಲ್ಕ್ಯರ ಹೆಸರು, ಸಾಮಾನ್ಯ
6

ವಾಗಿ ಯಜುರ್ವೇದದ ವಿಷಯದಲ್ಲಿ ಬಹಳ ಪ್ರಸಿದ್ಧವಾಗಿದ್ದರೂ, ಅವರಿಗೆ ಋಕ್ಸಾಮಾದಿಗಳಲ್ಲಿಯೂ ಅಪಾರವಾದ ಪರಿಚಯವಿತ್ತು. ಅವರು ಈ ಮೂರುವೇದ ಗಳಲ್ಲಿಯೂ ಪಾಠವನ್ನು ಹೇಳುತ್ತಲಿದ್ದರು; ಆದರೆ ಅವರ ಶುಕ್ಲ ಯಜುರ್ವೇದ ವಿಷಯದ ಉಪನ್ಯಾಸಗಳು, ಉಳಿದವೇದವೇದಾಂಗಗಳ ಉಪನ್ಯಾಸಗಳಿಗಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳ ಚಿತ್ತವನ್ನು ಆಕರ್ಷಿಸುತ್ತಲಿದ್ದವು. ವೇದವ್ಯಾಸರ ಮೊಮ್ಮಗನಾದ (ಮಗಳಮಗನಾದ) ಮಹಾಯೋಗಿ ಬ್ರಹ್ಮದತ್ತನು ಯಾಜ್ಞವಲ್ಕ್ಯರ ಶಿಷ್ಯನಾಗಿ, ನಾಲ್ಕೂ ವೇದಗಳ ಅಧ್ಯಯನಮಾಡಿದನು. ಮುಂದೆ ಬ್ರಹ್ಮದತ್ತನು ಒಂದುಶ್ರೇಷ್ಠ ವಾದ ಯಜ್ಞವನ್ನು ಆರಂಭಿಸಲು, ವೈಶಂಪಾಯನ, ಪೈಲ, ಮೊದಲಾದ ದೊಡ್ಡದೊಡ್ಡ ಋಷಿಗಳು ಕೂಡಿದರು. ಆಗ ಕೆಲವರು ಶಂಕಿತರಾಗಿ ಯಾಜ್ಞವಲ್ಕ್ಯರನ್ನು ಕುರಿತು -- "ಪೌರುಷೇಯವಾಗಿ ತೋರುವ ಈ ಶುಕ ಯಜುರ್ವೇದದ ಅಧ್ಯಯನವನ್ನು ನೀವು ಯಾರಬಳಿಯಲ್ಲಿ ಮಾಡಿದಿರಿ ?” ಎಂದು ಪ್ರಶ್ನೆಮಾಡಲು, ಯಾಜ್ಞವಲ್ಕ್ಯರು ಅವರಿಗೆ -- "ಸಾವಧಾನಚಿತ್ತದಿಂದ ಸ್ವಲ್ಪಹೊತ್ತು ಕುಳಿತುಕೊಳ್ಳಿರಿ, ಅಂದರೆ ಈ ವೇದವನ್ನು ಉಪ ದೇಶಿಸಿದ ಗುರುವನ್ನು ತೋರಿಸುವೆನು” ಎಂದು ಹೇಳಿದರು.

ಈ ಮೇರೆಗೆ ನುಡಿದು ಯಾಜ್ಞವಲ್ಕ್ಯರು ಏಕಾಗ್ರಚಿತ್ತರಾಗಿ ಸೂರ್ಯನನ್ನು ಧ್ಯಾ-

ನಿಸತೊಡಗಿದರು. ಆಗ ಸೂರ್ಯನಾರಾಯಣನು ಪ್ರಕಟನಾಗಲು, ಎಲ್ಲರ ಕಣ್ಣುಗಳು ಮುಚ್ಚಬಡಿದದ್ದರಿಂದ "ರಕ್ಷಿಸು, ರಕ್ಷಿಸು” ಎಂದು ಅವರು ಪ್ರಾರ್ಥಿಸತೊಡಗಿದರು. ಆಗ ಮೇಘದಂಥ ಗಂಭೀರಧ್ವನಿಯಿಂದ ಶ್ರೀಸೂರ್ಯನಾರಾಯಣನು ಋಷಿಗಳನ್ನು ಕುರಿತು -- “ಈ ಅಯಾತಯಾಮ ಸಂಜ್ಞಕವಾದ ವೇದವನ್ನು ಯಾಜ್ಞವಲ್ಕ್ಯರಿಗೆ ನಾನು ಉಪದೇಶಿಸಿರುವೆನು. ಪೌರುಷೇಯವಾಗಿ ತೋರುವ ಈ ವೇದದ ವಿಷಯವಾಗಿ ಯಾವ ಬಗೆಯ ಸಂಶಯವನ್ನೂ ಪಡಬಾರದು. ನಿಃಸಂಶಯವಾದ ಅಂತಃಕರಣದಿಂದ ಯಾಜ್ಞ ವಲ್ಕ್ಯರಿಂದ ಸಹಿತರಾಗಿ, ಶುದ್ಧವಾದ ಅಧ್ವರಭಾಗದೊಡನೆ ಒಪ್ಪುತ್ತಿರುವ ಶುಕ್ಲಯಜುರ್ವೇದದಿಂದ ಯಜ್ಞಭಾಗವನ್ನು ಸಂಪೂರ್ಣವಾಗಿ ಮಾಡಿರಿ” ಎಂದು ಹೇಳಿ, ಆ ಜಗಚ್ಚಕ್ಷುವು ಅಂತರ್ಧಾನವನ್ನು ಹೊಂದಿದನು. ಆ ಮೇಲೆ ಋಷಿಗಳೆಲ್ಲರೂ ಕಣ್ದೆ ರೆದು ಯಾಜ್ಞವಲ್ಕ್ಯರ ಸೋತ್ರಮಾಡಿದರು. ತಮ್ಮ ಶಿಷ್ಯನ ಮಹತ್ವವನ್ನು ನೋಡಿ ವೈಶಂಪಾಯನರು ಸಂತೋಷಭರಿತರಾಗಿ ಸದ್ಗದಿತಾಂತಃಕರಣದಿಂದ ಯಾಜ್ಞವಲ್ಕ್ಯರನ್ನು ಬಿಗಿಯಾಗಿ ಅಪ್ಪಿಕೊಂಡರು; ಮತ್ತು ತಮ್ಮ ಶಿಷ್ಯನ ಅದ್ಭುತವಾದ ಯೋಗಶಕ್ತಿಯನ್ನು ಯಾವತ್ತು ಋಷಿಗಳಮುಂದೆ ಶ್ಲಾಘಿಸಿ, ಶಿಷ್ಯ ನನ್ನು ಆಶೀರ್ವದಿಸಿ ತಾವು ಆ ಯಜ್ಞದಲ್ಲಿ ಋತ್ವಿಕ್ಕರ್ಮವನ್ನು ಸ್ವೀಕರಿಸುವವರಾದರು. ಆಮೇಲೆ ಯಾಜ್ಞವಲ್ಕ್ಯರು ಯಾವತ್ತು ಋಷಿಗಳೊಡನೆ ಬ್ರಹ್ಮದತ್ತನ ಯಜ್ಞವನ್ನು ಸಾಂಗಗೊಳಿಸಿದರು. ಇಂಥ ಮಹಾ ಪ್ರಭಾವಶಾಲಿಗಳಾದ ಶ್ರೀಯಾಜ್ಞವಲ್ಕ್ಯರಿಂದ ಶುಕ್ಲ ಯಜುರ್ವೇದವು ಹೀಗೆ ಪ್ರಸ್ಥಾ ಪಿತವಾಯಿತು.

ಒಮ್ಮೆ ಜನಕಮಹಾರಾಜನು ಏಕಾಂತದಲ್ಲಿ ಕುಳಿತಿದ್ದ ಯಾಜ್ಞವಲ್ಕ್ಯರನ್ನು

07

ಭಕ್ತಿ ಪುರಸ್ಸರ ನಮಸ್ಕರಿಸಿ ವಿನಯದಿಂದ -- “ ಸದ್ಗುರುವೇ , ಬ್ರಹ್ಮಜ್ಞಾನೋಪ ದೇಶದಿಂದ ನನ್ನನ್ನು ಘೋರಸಂಸಾರಸಾಗರದಿಂದ ಮುಕ್ತಮಾಡಬೇಕು . ” ಎಂದು ಪ್ರಾರ್ಥಿಸಿದನು. ಅದಕ್ಕೆ ಯಾಜ್ಞವಲ್ಕ್ಯರು -- " ಎಲೈ ಮಹಾಮತಿಯೇ, ನೀನು ಒಂದು ಯಜ್ಞಮಾಡಿ ಅದಕ್ಕೆ ಯಾವತು ಮಹರ್ಷಿಗಳನ್ನು ಕರಿಸು. ಹೀಗೆ ಯಜ್ಞಾ ರ್ಥವಾಗಿ ಬಂದ ಋಷಿಗಳಲ್ಲಿ ನಿನ್ನ ಬುದ್ಧಿಯಿಂದ ಬ್ರಹ್ಮನಿಷ್ಠರನ್ನು ಆರಿಸಿ, ಅವರಿಗೆ ನೀನು ಶರಣು ಹೋಗು. ಅಂದರೆ ಸದ್ಗುರುವಿನಲ್ಲಿ ದೃಢಭಕ್ತಿಯು ಉತ್ಪನ್ನವಾಗಿ ನೀನು ಮುಕ್ತನಾಗುವೆ . ದೃಢಭಕ್ತಿಯ ಹೊರತು ಬ್ರಹ್ಮಜ್ಞಾನವು ಆಗಲಾರದು, ಸದ್ಗುರುವು ಪ್ರಾಪ್ತನಾದವನಿಗೇ ಬ್ರಹ್ಮತತ್ವದ ಜ್ಞಾನವಾಗುವುದೆಂದು ಶ್ರುತಿವಚ ನವಿರುತ್ತದೆ . ” ಎಂದು ಹೇಳಲು, ಯೋಗೀಶ್ವರರ ಅಪ್ಪಣೆಯಂತೆ ಜನಕಮಹಾರಾ ಜನು ಒಂದು ಶ್ರೇಷ್ಠಯಜ್ಞವನ್ನು ಆರಂಭಿಸಿದನು. ಕರೆಕಳುಹಿದಂತೆ ದೊಡ್ಡದೊಡ್ಡ ಬ್ರಹ್ಮರ್ಷಿಗಳೂ , ಅರಸರೂ, ಪಂಡಿತರೂ ಯಜ್ಞಮಂಟಪಕ್ಕೆ ಬಂದರು. ಅವರಲ್ಲಿ ಕಹೋಳ, ಆಶ್ವಲ, ಶಾಕಲ್ಯ, ವೇದವ್ಯಾಸ , ಪೈಲಾದಿ ಬ್ರಾಹ್ಮಣರೂ, ಶಿಷ್ಯರಿಂದ ಸಹಿತರಾಗಿ ಯಾಜ್ಞವಲ್ಕ್ಯರೂ , ಬಾಷ್ಕಳಾದಿ ಮಹಾ ಮಹಾಋಷಿಗಳೂ ಇದ್ದರು. ಎಲ್ಲರೂ ಕೂಡಿ ಜನಕರಾಜನ ಯಜ್ಞವನ್ನು ಸಾಂಗಗೊಳಿಸಿದರು. ಅವಭೃತಸ್ನಾನ ವಾದ ಮೇಲೆ ಬ್ರಹ್ಮಜ್ಞರ ಶೋಧಕ್ಕಾಗಿ ಜನಕಮಹಾರಾಜನು ಸುವರ್ಣಾಲಂಕಾರಗ ಳಿಂದ ಅಲಂಕೃತಗಳಾದ ಸಹಸ್ರ ಆಕಳುಗಳನ್ನು ಯಜ್ಞಮಂಟಪದಲ್ಲಿ ತಂದು ನಿಲ್ಲಿಸಿ- "ಬ್ರಾಹ್ಮಣರೇ, ಬ್ರಹ್ಮಜ್ಞಾನಿಯಾದವನು ಈ ಸಹಸ್ರಗೋಗಳ ಸ್ವೀಕಾರಮಾಡ ಬೇಕು ” ಎಂದು ವಿಜ್ಞಾಪಿಸಿದನು . ಅದನ್ನು ಕೇಳಿ ಎಲ್ಲ ಬ್ರಾಹ್ಮಣರು ವಿಚಾರ ಮಗ್ನರಾಗಿ ಸುಮ್ಮನೆ ಕುಳಿತುಕೊಂಡರು. ಒಂದು ಪ್ರಹರವಾದ ಮೇಲೆ ಪುನಃ ಜನಕ ರಾಜನು ಬ್ರಾಹ್ಮಣರಿಗೆ -- "ಬ್ರಹ್ಮಜ್ಞನು ಈ ಧೇನುಗಳನ್ನು ಸ್ವೀಕರಿಸಬೇಕು" ಎಂದು ಪ್ರಾರ್ಥಿಸಿದನು. ಆದರೂ ಒಬ್ಬ ಬ್ರಾಹ್ಮಣನೂ ಏಳದಾದನು. ಈ ಸಭೆ ಯಲ್ಲಿ ನಾನೊಬ್ಬನೇ ಬ್ರಹ್ಮಜ್ಞನೆಂದು ಯಾರು ಮುಂದೆ ಬರುವರು? ಅದನ್ನು ನೋಡಿ ಮತ್ತೆ ಜನಕರಾಜನು-- " ಈ ಕೃತಯುಗದಲ್ಲಿ ಬ್ರಹ್ಮಜ್ಯರಹಿತ ಪೃಥ್ವಿಯಾಯಿತೇ" ಎಂದು ಕೇಳಿದನು.ಆಗ ಯಾಜ್ಞವಲ್ಕ್ಯರು ಎದ್ದು ನಿಂತು ಸಾಮಶ್ರವನೆಂಬ ತಮ್ಮ ಶಿಷ್ಯ ನನ್ನು ಕರೆದು--"ಸಾಮಶ್ರವಾ, ಈ ಆಕಳುಗಳನ್ನು ಅಟ್ಟಿಕೊಂಡು ಆಶ್ರಮಕ್ಕೆ ನಡೆ' ಎಂದು ಹೇಳಿದರು. ಯಾಜ್ಞವಲ್ಕ್ಯರ ಈ ಮಾತನ್ನು ಕೇಳಿ ಯಾವತ್ತು ಬ್ರಾಹ್ಮ ಣರು ಕ್ರೋಧಸಂತಪ್ತರಾದರು. ಅವರು ಆಕಳುಗಳನ್ನು ಅಟ್ಟಿಕೊಂಡು ಹೋಗ ಬಂದ ಸಾಮಶ್ರವನನ್ನು ತಡೆದು ಆವೇಶದಿಂದ-- "ನೀನು ಈ ಆಕಳುಗಳನ್ನು ಮುಟ್ಟ ಲಾಗದು. ಯಾಜ್ಞವಲ್ಕ್ಯಾ, ಈ ದೊಡ್ಡ ದೊಡ್ಡ ಬ್ರಹ್ಮಜ್ಞ ಬ್ರಾಹ್ಮಣರು ಇರು ತ್ತಿರಲು , ನೀನೇ ಶ್ರೇಷ್ಠ ಹ್ಯಾಗೆ ? ಇಷ್ಟು ಜನಬ್ರಾಹ್ಮಣರಲ್ಲಿ ಬ್ರಹ್ಮಜ್ಞತ್ವದ ಗರ್ವವನ್ನೂ , ಆಕಳುಗಳ ವಿಷಯದ ಇಚ್ಛೆಯನ್ನೂ ಪ್ರಕಟಿಸುವ ನೀನು ಬ್ರಹ್ಮ

ಜ್ಞನು ಹೇಗೆ ಇದ್ದೀ ? ನೀನು ಬ್ರಹ್ಮಜರಲ್ಲಿ ಶ್ರೇಷ್ಠನಾಗಿದ್ದರೆ ನಮ್ಮ ಪ್ರಶ್ನೆಗಳಿಗೆ
8

ಉತ್ತರಕೊಡು. ನಿನ್ನ ಉತ್ತರಗಳು ಯೋಗ್ಯವಾಗಿ ತೋರಿದರೆ, ನಾವು ಗೆಲ್ಲಲ್ಪ ಟ್ಟವರಾಗುವೆವು , ಆಮೇಲೆ ಈ ಆಕಳುಗಳನ್ನು ನಿನ್ನ ಆಶ್ರಮಕ್ಕೆ ಅಟ್ಟಿಕೊಂಡು ಹೋಗುವೆಯಂತೆ ; ಅಲ್ಲಿಯವರೆಗೆ ಈ ಆಕಳುಗಳನ್ನು ಮುಟ್ಟಲಾಗದು,” ಎಂದು ನಿರ್ಬಂಧಿಸಿದರು.

ಬ್ರಾಹ್ಮಣರ ಈ ನಿರ್ಬಂಧವನ್ನು ಕೇಳಿ ಯಾಜ್ಞವಲ್ಕ್ಯರು ಆಸನದಿಂದ ಎದ್ದು

ನಿಂತು ಬ್ರಾಹ್ಮಣರನ್ನು ನಮಸ್ಕರಿಸಿ ಕೈಜೋಡಿಸಿಕೊಂಡು -- "ನಾನು ಬ್ರಹ್ಮಜ್ಞ ನಲ್ಲ , ಬ್ರಹ್ಮಜ್ಞರಾದ ಬ್ರಾಹ್ಮಣಶ್ರೇಷ್ಠರೇ, ನಿಮ್ಮನ್ನು ನಮಸ್ಕರಿಸುವೆನು. ನಾನು ಗೋ ಕಾಮುಕನಾಗಿರುವದು ನಿಜವು; ಆದರೆ ತಮ್ಮ ಇಚ್ಚೆಯಿದ್ದರೆ ಪ್ರಶ್ನೆ ಮಾಡ ಬಹುದು . ಯಥಾವತಿ ಅವುಗಳಿಗೆ ಉತ್ತರಕೊಡುವೆನು. ಇದು ದೊಡ್ಡಜನರೊಳ ಗಿನ ವಾದವಿರುವದರಿಂದ , ದುರಾಗ್ರಹಕ್ಕೆ ಆಸ್ಪದವಿರಬಾರದು , ಶ್ರುತಿಮಾರ್ಗವ ನ್ನನುಸರಿಸಿ ವಿಚಾರವಾಗಬೇಕು . ಕುತರ್ಕಗಳು ಹೊರಡಲಾಗದು. ಇಂಥ ಬ್ರಹ್ಮ ವಾದದ ಕಾಲದಲ್ಲಿ ಸ್ವಾಭಿಮಾನವು ಮಹಾಪುರುಷರ ವೈರಿಯಾಗಿರುವದು; ಆದ್ದರಿಂದ ಅದನ್ನು ಬಿಟ್ಟುಕೊಟ್ಟು ಸುಖಸಮಾಧಾನದಿಂದ ವಾದವಿವಾದವನ್ನು ಮಾಡಬೇಕು. ಈ ಮಂತ್ರಿತವಾದ ಕುಶಗ್ರಂಥಿಯು ಈ ವಾದದಲ್ಲಿ ಅನ್ಯಾಯಮಾಡುವವರ ಶಾಸನ ಕ್ಕಾಗಿ ವಜ್ರದಂತೆ ಇರುವದು. ಇದನ್ನರಿತು ವಾದವಿವಾದವನ್ನು ಅವಶ್ಯವಾಗಿ ಮಾಡತಕ್ಕದ್ದು.

ಹೀಗೆ ನುಡಿದು ಯಾಜ್ಞವಲ್ಕ್ಯರು ಕುಳಿತುಕೊಳ್ಳಲು, ಅವರ ಮೇಲೆ ಪ್ರಶ್ನೆಗಳ

ಮಳೆಗರೆಯಹತ್ತಿತು. ಆ ಮಹಾ ಸಭೆಯಲ್ಲಿ ಪ್ರಶ್ನೆ ಮಾಡದವರು ಉಳಿಯಲೇ ಇಲ್ಲವೆಂ ದು ಹೇಳಬಹುದು. ಜನಕರಾಜನ ಆ ಯಜ್ಞದಲ್ಲಿ ಹೋತೃಭಾಗವನ್ನು ಸಾಗಿಸುವ ಆಶ್ವಲನೆಂಬ ಋಷಿಯೂ, ಜರತ್ಕಾರುವೂ, ಬಾಹ್ಯಾನನ ಪುತ್ರನಾದ ಭುಜ್ಯುಋಷಿಯೂ, ಚಕ್ರಾಯಣ ಪುತ್ರನಾದ ಉಪಸ್ತಾ ಎಂಬ ಋಷಿಯೂ, ಕೌಷೀತಕನ ಮಗನಾದ ಕಹೋ ಲಋಷಿಯೂ ಆಧ್ಯಾತ್ಮಜ್ಞಾನದ ಸಂಬಂಧದಿಂದ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞ ವಲ್ಕ್ಯರ ಸಮರ್ಪಕ ಉತ್ತರದಿಂದ ಸಮಾಧಾನಪಟ್ಟು , ಯಾಜ್ಞವಲ್ಕ್ಯರು ಬ್ರಹ್ಮಜ್ಞ ರೆಂದು ಒಡಂಬಟ್ಟು ಸುಮ್ಮನೆ ಕುಳಿತುಕೊಂಡರು. ಈ ವಾದದಲ್ಲಿ ಜರತ್ಕಾರುವಿಗೆ ಆತ್ಮಜ್ಞಾನವಾಯಿತು. ಆ ಮೇಲೆ ವಾಚಕ್ರವಿಯ ಮಗಳಾದ ಗಾರ್ಗಿಯೆಂಬ ದಿಗಂಬರ ವೃತ್ತಿಯ ಸ್ತ್ರೀಯು ಯಾಜ್ಞವಲ್ಕ್ಯರಿಗೆ ಹಲವು ಪ್ರಶ್ನೆಗಳನ್ನು ಮಾಡಿ, ಯಾಜ್ಞವಲ್ಕ್ಯರ ಬ್ರಹ್ಮಜ್ಞತ್ವವನ್ನು ಒಡಂಬಟ್ಟು, ಇವರು ಬ್ರಹ್ಮವಿದ್ವರಿಷ್ಟರೆಂದು ಉಳಿದ ಋಷಿಗಳಿಗೆ ಹೇಳಿದಳು. ಆ ಮೇಲೆ ಅರುಣಪುತ್ರನಾದ ಉದ್ದಾಲಕನು ಮುಂದಕ್ಕೆ ಬಂದು --“ಯಾ ಜ್ಞವಲ್ಕ್ಯಾ, ಅಯೋಗ್ಯ ಪ್ರಶ್ನೆ ಮಾಡಿದರೆ ಶಿರಚ್ಛೇದವಾದೀತೆಂದು ದರ್ಭಗ್ರಂಥಿಯ ಭಯ ವನ್ನು ತೋರಿಸಿ, ಜನರನ್ನು ನಿಷ್ಕಾರಣ ಬೆದರಿಸಬೇಡ. ನೀನು ಗೋಕಾಮುಕನಾಗಿ ರುವದರಿಂದ ನಿನ್ನ ಶಿರಚ್ಛೇದವು ಯಾಕಾಗಬಾರದು ಹೇಳು. ಬ್ರಹ್ಮಜರು ನಿರಿಚ್ಛರಾ

ಗಿರುವರು." ಎಂದು ಹೇಳಿ, ಹಲವು ಪ್ರಶ್ನೆಗಳನ್ನು ಮಾಡಿದನು. ಅವುಗಳಿಗೆಲ್ಲ
9

ಯಾಜ್ಞವಲ್ಕ್ಯರು ಸಮರ್ಪಕ ಉತ್ತರಕೊಟ್ಟರು. ಆಗ ಉದ್ದಾಲಕನು ಯಾಜ್ಞ ವಲ್ಕ್ಯರನ್ನು ನಮಸ್ಕರಿಸಿ ಸುಮ್ಮನಾದನು. ಆಮೇಲೆ ಮಹಾಪಂಡಿತರಾದ ಶಾಕಲ್ಯ ಋಷಿಗಳು ವಾದಾರ್ಥವಾಗಿ ಮುಂದಕ್ಕೆ ಸರಿದರು. ಅವರು ಹಲವು ಪ್ರಶ್ನಗಳನ್ನು ಮಾಡುತ್ತ ಕಡೆಗೆ ಅಯೋಗ್ಯ ಪ್ರಶ್ನ ಮಾಡಲು, ಯಾಜ್ಞವಲ್ಕ್ಯರು--"ಎಲೈ ಶಾಕ ಲ್ಯನೇ, ಹೀಗೆ ಮಾರ್ಗಬಿಟ್ಟು ಪ್ರಶ್ನಮಾಡಬೇಡ, ನಿನ್ನ ಶಿರಚ್ಛೇದವಾದೀತು,” ಎಂದು ಹೇಳಿದರು; ಆದರೆ ಶಾಕಲ್ಯರು ಅದನ್ನು ಲೆಕ್ಕಿಸದೆ ಪುನಃ ಅದೇ ಪ್ರಶ್ನಮಾಡಿದರು. ಆಗ ಒಮ್ಮಿಂದೊಮ್ಮೆ ಶಾಕಲ್ಯರ ಶಿರಚ್ಛೇದವಾಯಿತು. ಅದನ್ನು ನೋಡಿ ಸಭಾಸದರೆ ಲ್ಲರೂ ಬೆದರಿ ಸುಮ್ಮನೆ ಕುಳಿತುಕೊಂಡರು. ಆಗ ಯಾಜ್ಞವಲ್ಕ್ಯರು ಯಾವತ್ತು ಋಷಿಗಳನ್ನು ವಂದಿಸಿ -- "ಸಭಾಸದರೇ , ಇನ್ನು ಏನಾದರೂ ಪ್ರಶ್ನಮಾಡುವದಿದ್ದರೆ ಭಯಪಡದೆ ಮಾಡಬೇಕು ; ಅಥವಾ ನಾನೇ ಯಾವದೊಂದು ಪ್ರಶ್ನಮಾಡಲೋ ” ಎಂದು ಕೇಳಲು , ದರ್ಭಗ್ರಂಥಿಯ ಭಯದಿಂದ ಯಾರೂ ಮಾತಾಡದೆ ಸುಮ್ಮನೆ ಕುಳಿ ತುಕೊಂಡರು. ಇದನ್ನರಿತು ಯಾಜ್ಞ ವಲ್ಕ್ಯರು ತಾವು ಒಂದು ಪ್ರಶ್ನಮಾಡಿ ಇದರ ಉತ್ತರ ಹೇಳಬೇಕೆಂದು ಕೇಳಿಕೊಂಡರು. ಅದಕ್ಕೆ ಋಷಿಗಳು--"ಇದರ ಉತ್ತರವು ನಮಗೆ ಗೊತ್ತಿಲ್ಲ , ನೀವೇ ಹೇಳಬೇಕು ” ಎಂದು ನುಡಿಯಲು , ಯಾಜ್ಞವಲ್ಕ್ಯರು ಉತ್ತರ ಹೇಳಿ ,ನಿಜವಾದ ಬ್ರಹ್ಮಜ್ಞರೇ ಈ ಮೃತಶಾಕಲ್ಯನನ್ನು ಬದುಕಿಸಬಲ್ಲರು, ಎಂದು ನುಡಿದರು . ಆಗ ಯಾವತ್ತು ಋಷಿಗಳು ಯಾಜ್ಞವಲ್ಕ್ಯರನ್ನು ವಿಜ್ಞಾಪಿ ಸಲು , ಅವರು ತಮ್ಮ ಶಾಂತವಾದ ಹಸ್ತಸ್ಪರ್ಶದಿಂದ ಶಾಕಲ್ಯಋಷಿಯನ್ನು ಬದುಕಿ ಸಿದರು ! ಆಗ ಯಾಜ್ಞವಲ್ಕ್ಯರು ಬ್ರಹ್ಮಜ್ಞರೆಂದು ಜಯಜಯಕಾರವಾಯಿತು. ಆ ಶಾಕಲ್ಯಋಷಿಗಳು ಯಾಜ್ಞವಲ್ಕ್ಯರನ್ನು ದೃಢವಾಗಿ ಅಪ್ಪಿಕೊಂಡು ಸಾಮಶ್ರವ ನಿಗೆ-- "ಆಕಳುಗಳನ್ನು ಒಯ್ಯಬೇಕೆಂ"ದು ಆದರದಿಂದ ಹೇಳಿದರು. ಮುಂದೆ ಜನಕ ಮಹಾರಾಜನು ಬ್ರಹ್ಮವಿದ್ವರಿಷ್ಠರಾದ ಯಾಜ್ಞವಲ್ಕ್ಯರಿಂದ ಬ್ರಹ್ಮಜ್ಞಾನವನ್ನು ಪಡೆದು ವಿದೇಹಜನಕನೆಂದು ಪ್ರಸಿದ್ಧನಾದನು.

೨ ನೆಯ ಪ್ರಕರಣ.

ನಿರ್ಮಲ ಹೃದಯಪ್ರಭಾವ.

ನಕಮಹಾರಾಜನು ನೆರಿಸಿದ ಮಹಾಸಭೆಯಲ್ಲಿ ಭಗವಾನ್ ಯಾಜವಲ್ಕ್ಯರೊ

ಡನೆ ಬೇರೆ ಬೇರೆ ಋಷಿವರ್ಯರು ಮಾಡಿದ ವಿವಾದವನ್ನು ನಾವು ಉಲ್ಲೇಖಿಸದಿರುವದನ್ನು ನೋಡಿ ವಾಚಕರು ನಮ್ಮ ಮೇಲೆ ಸಿಟ್ಟಾಗಬಾರದು; ಯಾಕಂದರೆ, ಭಗವತೀ ಕಾತ್ಯಾಯನಿಗೆ ಆಶ್ರಯಭೂತನಾಗಿರುವ ಮಹಾತ್ಮನ ಘನತರವಾದ ಯೋಗ್ಯತೆಯನ್ನು ತಿಳಿಸುವದಕ್ಕಾಗಿ ಮಾತ್ರ ನಾವು ಹಿಂದಿನ ಪ್ರಕರಣನ್ನು ಬರೆದಿರುವೆವು. ಸಾಮಾನ್ಯಜನ