ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ
ಅಂತಾರಾಷ್ಟ್ರೀಯ ಕೃಷಿ ಸಂಸ್ಥೆ
[ಸಂಪಾದಿಸಿ]ಇದು 1905ರಲ್ಲಿ, ರೋಮ್ ನಗರದಲ್ಲಿ ಇಟಲಿಯ ರಾಜ ಕರೆದ 40 ರಾಷ್ಟ್ರಗಳ ಪ್ರತಿನಿಧಿಗಳ ಸಭೆಯ ನಿರ್ಣಯದ ಪ್ರಕಾರ ಸ್ಥಾಪಿಸಲ್ಪಟ್ಟಿತು. 1906ರಲ್ಲಿ 24 ರಾಷ್ಟ್ರಗಳು ಕೂಡಿ ಒಪ್ಪಂದದ ಕರಡು ತಯಾರಿಸಿ, ಅದನ್ನು ಕಾರ್ಯರೂಪಕ್ಕೆ ತಂದುವು. ಅನಂತರ 77 ರಾಷ್ಟ್ರಗಳು ಈ ಸಂಸ್ಥೆಯ ಸದಸ್ಯರಾದುವು.
ಈ ಯೋಜನೆಯನ್ನು ಸೂಚಿಸಿದ್ದು ಧರ್ಮಪ್ರಚಾರಕ ಡೇವಿಡ್ ಲೂಬಿನ್. ವಾಣಿಜ್ಯ ಅಭಿವೃದ್ಧಿಗೆ ಕೃಷಿಸಂಪತ್ತು ಆಧಾರವಾಗಿದ್ದು, ಕೃಷಿ ಮತ್ತು ಕೈಗಾರಿಕೆಗಳ ನಡುವೆ ಸಮತೋಲ ಸಾಧಿಸಲು ಇಂಥ ಸಂಸ್ಥೆ ಆವಶ್ಯಕವೆಂಬುದು ಅವರ ಅಭಿಮತವಾಗಿತ್ತು. ಈ ಒಪ್ಪಂದ ಕೃಷಿ ಸಂಬಂಧಿತ ಪುಸ್ತಕಾಲಯಕ್ಕೆಡೆಮಾಡಿತು (ಅದು ಕ್ರಮೇಣ ಪತ್ರಾಗಾರವಾಗಿ ಆರ್ಕೈವ್ಸ ಬೆಳೆದು ಈಗ ಪ್ರಪಂಚದ ಅತಿ ದೊಡ್ಡ ಕೃಷಿಸಂಖ್ಯಾಸಂಗ್ರಹಣ ನಿಲಯವಾಗಿದೆ). ಜೊತೆಗೆ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಾಧಾರಣ ಸಭೆಯನ್ನು ಕರೆಯಲು ಮತ್ತು ಸಂಸ್ಥೆಯ ಕಾರ್ಯ ರೂಪರೇಷೆಯನ್ನು ತಯಾರಿಸಲು ಅವಕಾಶ ಮಾಡಿಕೊಟ್ಟಿದೆ.
ಈ ಸಂಸ್ಥೆಯ ಕಾರ್ಯಕ್ಷೇತ್ರ ಬಹು ವಿಶಾಲವಾಗಿದೆ. ಬೆಳೆ, ಪಶು, ಜನಸಂಖ್ಯೆ, ವ್ಯಾಪಾರ, ಧಾರಣೆ, ಕೂಲಿ, ರೋಗ ಮತ್ತು ಬೆಳೆಗಳ ಪೀಡೆಗಳ ಬಗ್ಗೆ ಅಂಕಿ ಅಂಶ ಸಂಗ್ರಹಿಸುವುದು, ವೈಜ್ಞಾನಿಕ, ಆರ್ಥಿಕ ಮಾಹಿತಿಯ ಸಂಗ್ರಹಣೆ, ವಿಶ್ಲೇಷಣೆ, ಪ್ರಕಟಣೆ ಮತ್ತು ಹಂಚುವಿಕೆ, ವ್ಯವಸಾಯ, ಸಹಕಾರ, ವಿಮೆ, ಹಾಗೂ ವೈಜ್ಞಾನಿಕ ಮತ್ತು ವ್ಯವಸಾಯದ ಪರಿಷತ್ತುಗಳ ನಿರ್ಧಾರಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಯ ಅಧ್ಯಯನ - ಇವು ಸಂಸ್ಥೆಯ ಕೆಲವು ಮುಖ್ಯ ಕೆಲಸಗಳು. ಇವೆಲ್ಲ ಧೋರಣೆಗಳು ಈ ಸಂಸ್ಥೆಯನ್ನು ಜಗತ್ತಿನ ಸಮಸ್ತ ಕೃಷಿ ಸಮಸ್ಯೆಗಳನ್ನೂ ಪರಿಶೀಲಿಸಿ, ಪರಿಹರಿಸುವ ಸಂಸ್ಥೆಯನ್ನಾಗಿಸಿವೆ. ಕ್ರಮೇಣ ಈ ಸಂಸ್ಥೆ ಕೃಷಿ ಕಾನೂನು, ಸಾಮಾಜಿಕ ಸಮಸ್ಯೆಗಳು, ವಲಸೆ ಹೋಗುವಿಕೆ, ಅರಣ್ಯಸಂಬಂಧಿ ವಿಷಯಗಳು ಮುಂತಾದುವನ್ನು ತನ್ನ ವ್ಯಾಪ್ತಿಗೆ ಒಳಪಡಿಸಿಕೊಂಡು ಬೆಳೆಯಿತು.
ಈ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಕೆಳಗೆ ಅನೇಕ ವಿಭಾಗಗಳಲ್ಲಿ ನೂರಾರು ರಾಷ್ಟ್ರಗಳ ಸುಮಾರು ಸಾವಿರಾರು ಸ್ತ್ರೀಪುರುಷರ ಸಿಬ್ಬಂದಿ ಕೆಲಸ ಮಾಡುತ್ತದೆ.
ರೋಮ್ನಲ್ಲಿ ಎರಡು ವರ್ಷಗಳಿಗೊಮ್ಮೆ ಸೇರುತ್ತಿದ್ದ ಸಾಮಾನ್ಯ ಸಭೆಗಳಿಗೆ ಮತ್ತು ಯುರೋಪಿನ ನೂರಾರು ಸ್ಥಳಗಳಲ್ಲಿ ಆಗಾಗ ಸೇರುತ್ತಿದ್ದ ವಿಶೇಷ ಸಭೆಗಳಿಗೆ ಸೂಕ್ತ ಸಿದ್ಧತೆಗಳನ್ನು ಮಾಡುವುದು ಇದರ ಮುಖ್ಯ ಕೆಲಸಗಳಲ್ಲೊಂದಾಗಿತ್ತು. ಲೀಗ್ ಆಫ್ ನೇಷನ್್ಸ, ಅಂತಾರಾಷ್ಟ್ರೀಯ ಕಾರ್ಮಿಕ ಕಚೇರಿ ಮತ್ತು 1927, 1933, 1939ರಲ್ಲಿ ಸಮಾವೇಶಗೊಂಡ ಆರ್ಥಿಕ ಸಮ್ಮೇಳನಗಳೊಂದಿಗೆ ಈ ಸಂಸ್ಥೆ ಪುರ್ಣ ಸಹಕಾರ ತೋರಿತಲ್ಲದೆ ಜಾಗತಿಕ ಅರಣ್ಯ ಪರಿಷತ್ತು. ಕುಕ್ಕುಟ ಮತ್ತು ಕ್ಷೀರ ಸಂವರ್ಧನ ಪರಿಷತ್ತುಗಳ ಸಭೆಗಳಲ್ಲಿ ಭಾಗವಹಿಸಿತು.
ಈ ಸಂಸ್ಥೆಯ ಕಾರ್ಯಗಳನ್ನು ಅನೇಕ ಶ್ರೇಣಿಗಳಲ್ಲಿ ಪ್ರಚುರಪಡಿಸಿ ವಿವರಗಳನ್ನು ಸರ್ಕಾರ ಹಾಗೂ ಸಾರ್ವಜನಿಕರಿಗೆ ಹಂಚಲಾಯಿತು. ಈ ಸಂಸ್ಥೆ ಇಂಗ್ಲಿಷ್, ಫ್ರೆಂಚ್ ಭಾಷೆಗಳನ್ನೊಳಗೊಂಡು ಹಲವು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಒಕ್ಕಲುತನ ಕಾಯಿದೆಯ ವಾರ್ಷಿಕ ಗ್ರಂಥಗಳು, ಅಂತಾರಾಷ್ಟ್ರೀಯ ಅರಣ್ಯ ಸಂಖ್ಯಾ ಸಂಗ್ರಹಣ ವಾರ್ಷಿಕ ಗ್ರಂಥಗಳು ಮತ್ತು ರಾಷ್ಟ್ರೀಯ ಒಕ್ಕಲುತನ ವಿಮರ್ಶಿಸುವ ಮಾಸಿಕ ಪತ್ರಿಕೆಗಳು ಇತ್ಯಾದಿ ಅತ್ಯುಪಯುಕ್ತವಾದ ಪುಸ್ತಕಗಳನ್ನು ಪ್ರಕಟಿಸಿತು.
ಎರಡನೆಯ ಮಹಾಯುದ್ಧ ಕಾಲದಲ್ಲಿ ಈ ಸಂಸ್ಥೆಯ ಅಂತಾರಾಷ್ಟ್ರೀಯ ಧೋರಣೆಯನ್ನು ಒಪ್ಪದ ಯುದ್ಧಾಸಕ್ತ ರಾಷ್ಟ್ರಗಳ ಬಲದಿಂದಾಗಿ ಇದರ ಕಾರ್ಯಾಸಕ್ತಿ ಕ್ಷೀಣಿಸಿತು. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಆಹಾರ ಮತ್ತು ಕೃಷಿಸಂಸ್ಥೆ (ಎಫ್.ಎ.ಒ.) 1943ರಲ್ಲಿ ಸ್ಥಾಪನೆಗೊಂಡಾಗ ಖ್ಯಾತ ಡೇವಿಡ್ ಲೂಬಿನ್ ಸ್ಮಾರಕ ಗ್ರಂಥಾಲಯದ ಎಲ್ಲ ಗ್ರಂಥಗಳನ್ನೂ ರೋಮ್ ನಗರದ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಧಾನ ಕಚೇರಿಗೆ ರವಾನಿಸಲಾಯಿತು (1946) (ನೋಡಿ-ಆಹಾರ ಮತ್ತು ಕೃಷಿ ಸಂಸ್ಥೆ).