ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ಥಶಾಸ್ತ್ರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಸಂಪತ್ತು ಮತ್ತು ಕ್ಷೇಮಾಭ್ಯುದಯಶಾಸ್ತ್ರ ಎಂದು ಕೆಲವರ ಮತ; ಮಾನವ ತನ್ನ ಬಯಕೆಗಳನ್ನು ಪುರೈಸಿಕೊಳ್ಳುವಲ್ಲಿ ಅನುಸರಿಸುವ ರೀತಿಯ ಅಧ್ಯಯನ ಎಂದು ಇತರರ ಮತ (ಎಕನಾಮಿಕ್ಸ್ ). ಸಮಾಜವಿಜ್ಞಾನಗಳಲ್ಲಿ ಅರ್ಥಶಾಸ್ತ್ರಕ್ಕೆ ಪ್ರಮುಖ ಸ್ಥಾನವಿದೆ. ಮಾನವನ ಆರ್ಥಿಕ ಸಮಸ್ಯೆಗಳ ಕೂಲಂಕಷಾಭ್ಯಾಸ ಮತ್ತು ಪರಿಹಾರಾನ್ವೇಷಣೆ ಅದರ ಧ್ಯೇಯ. ಮನುಷ್ಯನ ಬಯಕೆಗಳು ನಿರಂತರವಾಗಿ ಬೆಳೆಯುತ್ತವೆ. ಆಹಾರ, ವಸತಿ, ಬಟ್ಟೆ, ಅನುಕೂಲತೆ ವಿಶಿಷ್ಟದರ್ಜೆಯ ಸೇವೆ ಇತ್ಯಾದಿ. ಈ ಬಯಕೆಗಳ ತೃಪ್ತಿಗೋಸ್ಕರ ಪ್ರಕೃತಿಯ ಕೊಡುಗೆ, ಮನುಷ್ಯ ಪ್ರಯತ್ನ ಪರಸ್ಪರ ಪೂರಕವಾಗಿ ಮುಂದುವರಿಯಬೇಕು. ಬಯಕೆ, ಪ್ರಯತ್ನ, ತೃಪ್ತಿ ಈ ನಿರಂತರ ಚಕ್ರದ ಅಂಗವಾಗಿ ಉತ್ಪಾದನೆ, ವಿನಿಮಯ, ಅನುಭೋಗ ಇವೆ. ಇವುಗಳಿಂದ ಉಂಟಾಗುವ ಸಮಸ್ಯೆಗಳ ಅಭ್ಯಾಸ ಅರ್ಥಶಾಸ್ತ್ರ.


ಸಂಪತ್ತು ಮತ್ತು ಕ್ಷೇಮಾಭ್ಯುದಯ ವ್ಯಾಖ್ಯೆ[ಸಂಪಾದಿಸಿ]

ಆಡಮ್ ಸ್ಮಿತ್ ಮತ್ತು ಇನ್ನೂ ಇತರ ಪ್ರಾಚೀನ ಪಂಥದ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರಕ್ಕೆ ಈ ವ್ಯಾಖ್ಯೆ ನೀಡಿದರು. ಆಡಮ್ ಸ್ಮಿತ್ ತಾನು ಬರೆದ ಗ್ರಂಥವನ್ನು ರಾಷ್ಟ್ರಗಳ ಸಂಪತ್ತಿನ ಬಗ್ಗೆ ವಿಚಾರಮಥನ ಎಂದು ಕರೆದಿದ್ದಾನೆ. ಸಂಪತ್ತಿನ ಉತ್ಪಾದನೆ, ವಿನಿಮಯ ಮತ್ತು ವಿತರಣೆಗೆ ಸಂಬಂಧಿಸಿದ ಶಾಸ್ತ್ರ ಅರ್ಥಶಾಸ್ತ್ರ ಎಂದು ಅವನು ವ್ಯಾಖ್ಯಾನಿಸಿದ್ದಾನೆ. ಸಂಪತ್ತಿನ ಕ್ರೋಡೀಕರಣೆಯೇ ಪ್ರಮುಖ ಗುರಿಯಾಗಿದ್ದ ಅರ್ಥಶಾಸ್ತ್ರವನ್ನು 19 ನೆಯ ಶತಮಾನದ ಆದಿಯಲ್ಲಿ ಧಾರ್ಮಿಕ ಬರೆಹಗಾರರುಗಳಾದ ಕಾರ್ಲೈಲ್, ರಸ್ಕಿನರೇ ಮೊದಲಾದವರು ನಿರುತ್ಸಾಹಿ ವಿಜ್ಞಾನ ಮತ್ತು ಐಶ್ವರ್ಯದೂತ ಎಂದು ವರ್ಣಿಸಿದರು. ಸಂಪತ್ತೇ ಪ್ರಧಾನ; ಮನುಷ್ಯ ಕೇವಲ ಸಂಪತ್ತನ್ನು ಆಶಿಸುವ ಆರ್ಥಿಕ ವ್ಯಕ್ತಿ ಎಂಬ ವಿಚಾರ ಸರಣಿ ಅನೇಕರಿಗೆ ಒಪ್ಪಿಗೆಯಾಗದೆ ಜನರು ಅರ್ಥವಿಜ್ಞಾನವನ್ನು ಕೀಳಾಗಿ ನೋಡತೊಡಗಿದರು. ಆಡಮ್ ಸ್ಮಿತ್‍ನ ವ್ಯಾಖ್ಯೆಯ ಲೋಪದೋಷಗಳನ್ನು ತೆಗೆದು ಹಾಕಿ ದಾರ್ಶನಿಕರ ಕಟುಟೀಕೆಯಿಂದ ಅದನ್ನು ವಿಮುಕ್ತಿಗೊಳಿ ಸಲು ಮಾರ್ಷಲ್, ಪಿಗೊ ಮುಂತಾದ ಅರ್ಥಶಾಸ್ತ್ರಜ್ಞರು ಪ್ರಯತ್ನಪಟ್ಟರು. ಮಾನವ ಕಲ್ಯಾಣವನ್ನು ಸಾಧಿಸಲು ಸಂಪತ್ತನ್ನು ಯಾವ ರೀತಿಯಲ್ಲಿ ಉಪಯೋಗಿಸಬೇಕೆಂದು ತಿಳಿಸುವ ಶಾಸ್ತ್ರ ಅರ್ಥಶಾಸ್ತ್ರ ಎಂದು ಇವರು ವಾದಿಸಿದರು. ಮಾರ್ಷಲ್ ಹೇಳಿರುವಂತೆ ಐಹಿಕ ಸಂಪತ್ತಿನ ಸಾಧನೆ ಮತ್ತು ಅದರ ಅನುಭೋಗ ಇವೇ ಅರ್ಥಶಾಸ್ತ್ರದ ಅಧ್ಯಯನ ವಿಷಯಗಳು. ಅರ್ಥಶಾಸ್ತ್ರ ಸಂಪತ್ತಿನ ವಿಜ್ಞಾನ ಮಾತ್ರವಲ್ಲ; ಮೂಲತಃ ಒಂದು ಮಾನವೀಯ ವಿಜ್ಞಾನ. ಮಾನವ ಸಂಪತ್ತು ಗಳಿಸಿ ತನ್ನ ಸುಖಕ್ಕಾಗಿಯೇ ಅದನ್ನು ಉಪಯೋಗಿಸುತ್ತಾನೆ. ಈ ಸಂಪಾದನೆ ಹಾಗೂ ಉಪಯೋಗಗಳನ್ನು ಅರ್ಥಶಾಸ್ತ್ರ ಪರೀಶೀಲಿಸುತ್ತದೆ. ಹೀಗೆ ಒಂದು ಕಡೆ ಸಂಪತ್ತಿನ ಪರಿಶೀಲನೆ ಮತ್ತು ಇನ್ನೊಂದು ಕಡೆ ಮುಖ್ಯವಾಗಿ ಮಾನವನ ಪರಿಶೀಲನೆ ಮಾಡುತ್ತದೆ. ಸಂಪತ್ತು ಮಾನವನಿಗೋಸ್ಕರ; ಮಾನವ ಸಂಪತ್ತಿಗೋಸ್ಕರವಲ್ಲ. ಸಂಪತ್ತು ಮಾನವಕಲ್ಯಾಣವನ್ನು ಸಾಧಿಸಲು ಒಂದು ಸಾಧನ. ಇದೇ ಮಾರ್ಷಲ್ನ ವ್ಯಾಖ್ಯೆಯ ಸಾರಾಂಶ. ಮಾರ್ಷಲ್ ಮತ್ತು ಅವನ ಅನುಯಾಯಿಗಳು ಕೊಟ್ಟ ಕ್ಷೇಮಾಭ್ಯುದಯ ವ್ಯಾಖ್ಯೆ ಅರ್ಥಶಾಸ್ತ್ರದಲ್ಲಿ ಇದ್ದ ಕೆಲವು ತಪ್ಪುಭಾವನೆಗಳನ್ನು ಹೋಗಲಾಡಿಸಿ ಅದು ಮನುಷ್ಯನ ಸುಖ ಸಂಪತ್ತನ್ನು ಮತ್ತು ಕ್ಷೇಮಾಭ್ಯುದಯವನ್ನು ಸಾಧಿಸುವ ಶಾಸ್ತ್ರವಾಯಿತು.


ವಿರಳತೆ ವ್ಯಾಖ್ಯೆ[ಸಂಪಾದಿಸಿ]

ಬಯಕೆಗಳ ಪುರೈಕೆ ಎಂದು ವಿವರಿಸುವ ಎರಡನೆಯ ಮತಕ್ಕೆ ಈ ಹೆಸರಿದೆ. ಲಯೋನಲ್ ರಾಬಿನ್ಸ್‌ನ ಅರ್ಥಶಾಸ್ತ್ರದ ಸ್ವರೂಪವನ್ನು ಕುರಿತ ಪ್ರಸಿದ್ಧ ಪ್ರಬಂಧ (1932) ಅರ್ಥಶಾಸ್ತ್ರದ ವ್ಯಾಖ್ಯೆ ಮತ್ತು ವ್ಯಾಪ್ತಿಯ ಬಗ್ಗೆ ಹೊಸ ಚರ್ಚೆಯನ್ನು ಆರಂಭಿಸಿತು. ಹಿಂದಿನ ಲೇಖಕರಂತೆ ಸಂಪತ್ತಿನ ಅಥವಾ ಕ್ಷೇಮಾಭ್ಯುದಯದ ಗೊಡವೆಗೆ ರಾಬಿನ್ಸ್‌ ಹೋಗದೆ, ಒಂದು ನೂತನ ವಿಚಾರಸರಣಿಯನ್ನೇ ಮುಂದಿಟ್ಟ. ಮಾನವನ ಬಯಕೆಗಳು ಅಮಿತ; ಅವುಗಳನ್ನು ಸಂತೃಪ್ತಿಸಬಲ್ಲ ಸಾಮಗ್ರಿಗಳು ವಿರಳ. ಈ ವಿರಳ ಸಾಮಗ್ರಿಗಳಿಂದ ಅತ್ಯಂತ ಹೆಚ್ಚಿನ ತೃಪ್ತಿಯನ್ನು ಪಡೆಯಲು ಮಾನವ ತನ್ನ ಅನೇಕ ಬಯಕೆಗಳಲ್ಲಿ ಆಯ್ಕೆ ಮಾಡಬೇಕಾಗುತ್ತದೆ. ಆದ್ದರಿಂದ ಆದ್ಯತೆ ಪಟ್ಟಿ ಮಾಡಬೇಕಾದ ಸಮಸ್ಯೆಗಳು ಉದ್ಭವಿಸುತ್ತದೆ. ಇವೇ ಮುಖ್ಯ ಆರ್ಥಿಕ ಸಮಸ್ಯೆಗಳು. ಅತ್ಯಂತ ಹೆಚ್ಚಿನ ತೃಪ್ತಿಯನ್ನು ಹೊಂದಲು ಸರಿಯಾದ ದಾರಿ ಯಾವುದೆಂಬುದು ಮಾನವನ ಆರ್ಥಿಕ ಸಮಸ್ಯೆ. ಅವನಿಗಿರುವ ಬಯಕೆಗಳು ಮಿತಿಯುಳ್ಳ ಮತ್ತು ವಿವಿಧ ಉಪಯೋಗಗಳಿಗೆ ಆಗುವ ಸಾಧನಗಳು. ಈ ಕಾರಣಗಳಿಂದ ಉದ್ಭವಿಸುವ ಆಯ್ಕೆ-ಈ ಪರಿಸ್ಥಿತಿಯಲ್ಲಿ ಮನುಷ್ಯ ನಡೆದುಕೊಳ್ಳುವ ರೀತಿಯನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರದ ಹೆಗ್ಗುರಿಯಾಗಿದೆ. ಇದು ರಾಬಿನ್ಸ್‌ನ ವ್ಯಾಖ್ಯೆ ಒಳಗೊಂಡಿರುವ ಮುಖ್ಯಾಂಶ.

ಅರ್ಥಶಾಸ್ತ್ರದ ಕ್ಷೇತ್ರ ನಿರೂಪಣೆಯಲ್ಲಿ ಈಗ ಮಾರ್ಷಲ್‌ನ ದಾರಿಯನ್ನು ಅನುಸರಿಸುವವರೂ ಇದ್ದಾರೆ; ರಾಬಿನ್ಸ್ ದಾರಿಯನ್ನು ಅನುಸರಿಸುವವರೂ ಇದ್ದಾರೆ. ಕ್ಷೇಮಾಭ್ಯುದಯ ಮತ್ತು ಮಾನವನ ಸಾಮಾಜಿಕ ಸ್ವಭಾವ ಇವುಗಳಿಗೆ ಸರಿಯಾದ ಸ್ಥಾನವನ್ನು ರಾಬಿನ್ಸ್ ಕೊಟ್ಟಿಲ್ಲ; ಇದರಿಂದ ಮಾರ್ಷಲ್‌ನ ವಿತರಣೆಯ ದೃಷ್ಟಿಕೋನವೇ ಸರಿ ಎಂದು ಕೆಲವು ಅರ್ಥವಿಜ್ಞಾನಿಗಳು ವಾದಿಸುತ್ತಾರೆ. ವಿರಳತೆ ಅಥವಾ ದುರ್ಬಲತೆ ಮತ್ತು ಇದರಿಂದ ಉದ್ಭವಿಸುವ ಸಮಸ್ಯೆಗಳ ಪರಿಶೀಲನೆಗೆ ಮಿತಿಗೊಳಿಸಿದ ಅರ್ಥಶಾಸ್ತ್ರ ವ್ಯಾಸಂಗಕ್ಷೇತ್ರದಲ್ಲಿ ಒಂದು ಏಕತೆ ಇದೆ. ಆದ್ದರಿಂದ ರಾಬಿನ್ಸ್‌ನ ಮೇಲ್ಪಂಕ್ತಿ ಉತ್ತಮವಾದು ದೆಂದು ಅನೇಕ ಅರ್ಥಶಾಸ್ತ್ರ ಬರೆಹಗಾರರ ಅಭಿಪ್ರಾಯ. ಇಂಥ ಭಿನ್ನಾಭಿಪ್ರಾಯಗಳು ಅನಿವಾರ್ಯ. ಮನುಷ್ಯ ಮತ್ತು ಸಮಾಜಕ್ಕೆ ಸಂಬಂಧಿಸಿದ ಅಧ್ಯಯನ ಅರ್ಥಶಾಸ್ತ್ರ; ಮಾನವನ ನಡೆವಳಿಕೆ, ಸಮಾಜದ ನ್ಯಾಯ, ನೀತಿ ಮತ್ತು ಆಗುಹೋಗುಗಳನ್ನು ನಿರ್ದಿಷ್ಟವಾಗಿ ಆರ್ಥಿಕ, ರಾಜಕೀಯ, ನೈತಿಕ ಇತ್ಯಾದಿಯಾಗಿ ಬೇರ್ಪಡಿಸುವುದು ಅಸಾಧ್ಯ. ಆದ್ದರಿಂದ ವಿವಿಧ ಸಮಾಜ ಶಾಸ್ತ್ರಗಳ ಎಲ್ಲೆಗಳೂ ಒಂದರೊಡನೆ ಒಂದು ಸೇರಿಹೋಗುವುವು. ಈ ಕಾರಣದಿಂದ ಅರ್ಥಶಾಸ್ತ್ರಕ್ಕೆ ಸರ್ವಸಮ್ಮತ ವ್ಯಾಖ್ಯೆಯನ್ನು ನೀಡುವುದಾಗಲಿ, ಎಲ್ಲೆಯನ್ನು ಮಿತಗೊಳಿಸುವುದಾಗಲಿ ಸುಲಭ ಕಾರ್ಯವಲ್ಲ.

ಅರ್ಥಶಾಸ್ತ್ರ ಅತ್ಯಂತ ಉಪಯುಕ್ತವಾದ ಅಧ್ಯಯನಗಳಲ್ಲಿ ಒಂದು ಎಂಬ ಮನ್ನಣೆ ಪಡೆದಿದೆ. ಇದು ಕೇವಲ ಜ್ಞಾನಪ್ರಕಾರವಷ್ಟೇ ಆಗಿರದೆ ಫಲದಾಯಕವೂ ಆಗಿದೆ. ತಾತ್ತ್ವಿಕ ಅರ್ಥಶಾಸ್ತ್ರ (ಥಿಯೊರೆಟಿಕಲ್ ಇಕನಾಮಿಕ್ಸ್ ) ಸಮಸ್ಯಾ ವಿಶ್ಲೇಷಣೆಗೆ ಹೆಚ್ಚು ನಿರ್ದಿಷ್ಟ ಮಾರ್ಗಗಳನ್ನು ತೋರಿಸಿದೆ. ಈ ಎರಡು ವಿಭಾಗಗಳ ಅಧ್ಯಯನದ ಮುನ್ನಡೆಯ ಫಲವಾಗಿ ಇಂದು ಅರ್ಥಶಾಸ್ತ್ರದ ಮಹತ್ತ್ವ ಹೆಚ್ಚಿದೆ. ವಿವಿಧ ಸಾಮಾಜಿಕ ಆರ್ಥಿಕ ವ್ಯವಸ್ಥೆಗಳ ಅನುಕೂಲ ಪ್ರತಿಕೂಲಗಳನ್ನು ತಿಳಿಸಿ ಯೋಗ್ಯ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ನಮಗೆ ಸಹಾಯಕವಾಗಿದೆ. ಆಧುನಿಕ ಪ್ರಪಂಚದಲ್ಲಿ ಸುಶಿಕ್ಷಿತ ನಾಗರಿಕರು ಅವರ ಜವಾಬ್ದಾರಿಗಳನ್ನು ಯೋಗ್ಯವಾಗಿ ನಿರ್ವಹಿಸಲು ತಿಳಿಯಬೇಕಾದ ವಿಷಯಗಳಲ್ಲಿ ಆರ್ಥಿಕಜ್ಞಾನ ಮುಖ್ಯವಾದುದು. ಸರ್ಕಾರದ ಆರ್ಥಿಕ ಚಟುವಟಿಕೆಗಳೂ ಹೊಣೆಗಾರಿಕೆಯೂ ಹೆಚ್ಚಿರುವ ಇಂದು ಸರ್ಕಾರದ ನೀತಿ ನಿರೂಪಕರೂ ಕಾರ್ಯನಿರ್ವಾಹಕರೂ ಅರ್ಥಶಾಸ್ತ್ರದ ಅಧ್ಯಯನದಿಂದ ಪ್ರಯೋಜನ ಪಡೆಯುವರು. ಆರ್ಥಿಕ ನಿರ್ವಹಣೆಯಲ್ಲಿ ಭಾಗವಹಿಸಿರುವ ಉದ್ಯಮಿಗಳು ಕಾರ್ಮಿಕರು ಇತ್ಯಾದಿ ಪಂಗಡಗಳ ಆರ್ಥಿಕತೆಗೂ ತಮಗೂ ಸಂಬಂಧಪಟ್ಟ ಸಮಸ್ಯೆಗಳನ್ನು ನಿಷ್ಪಕ್ಷಪಾತ ರೀತಿಯಲ್ಲಿ ವಸ್ತು ನಿಷ್ಠೆಯಿಂದ ವಿವೇಚಿಸುವ ಶಕ್ತಿ ಬೆಳೆಸಿಕೊಳ್ಳಲು ಅರ್ಥಶಾಸ್ತ್ರಜ್ಞರು ಸಹಾಯ ಮಾಡಬಲ್ಲರು.

ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರಗಳಿಗೆ ನಿಕಟ ಬಾಂಧವ್ಯವಿದೆ. ಆರ್ಥಿಕ ಚಟುವಟಿಕೆಗಳು ಒಂದು ನಿರ್ದಿಷ್ಟ ರಾಜಕೀಯ ಚೌಕಟ್ಟಿನೊಳಗೆ ನಡೆಯುವುದೂ ಆರ್ಥಿಕತೆಯಲ್ಲಿ ಸರ್ಕಾರಗಳ ಪಾತ್ರ ಮುಖ್ಯವಾಗಿರುವುದೂ ಇದರ ಕಾರಣ. ಅರ್ಥಶಾಸ್ತ್ರದ ನಿಯಮಗಳೂ ಅಧ್ಯಯನವೂ ಮಾನವನ ವರ್ತನೆಗೆ ಸಂಬಂಧಿಸಿದುದರಿಂದ ಈ ವರ್ತನೆಯನ್ನು ವೈಜ್ಞಾನಿಕ ಮಾರ್ಗದಲ್ಲಿ ಅಧ್ಯಯನ ಮಾಡಿ ನಿರೂಪಿಸಲಾಗುವ ಮನಶ್ಯಾಸ್ತ್ರದ ಸಿದ್ಧಾಂತಗಳು ಅರ್ಥಶಾಸ್ತ್ರದಲ್ಲಿ ಬಹು ಉಪಯುಕ್ತ. ಆರ್ಥಿಕ ವ್ಯವಹಾರ ಮತ್ತು ಪ್ರಗತಿಗೂ ಜನರ ನೈತಿಕಮಟ್ಟಕ್ಕೂ ಸಂಬಂಧವಿದೆ ಎಂದು ಹೇಳುವುದಾದರೆ ಈ ನೈತಿಕ ಮೌಲ್ಯಗಳನ್ನು ಪರಿಶೀಲಿಸುವ ನೀತಿಶಾಸ್ತ್ರಕ್ಕೂ ಅರ್ಥಶಾಸ್ತ್ರಕ್ಕೂ ಇರುವ ಸಂಬಂಧ ತಿಳಿಯುವುದು. ಅರ್ಥಶಾಸ್ತ್ರ ಶಿಲ್ಪವಿಜ್ಞಾನದೊಡನೆಯೂ ಸಂಬಂಧ ಹೊಂದಿದೆ. ಶಿಲ್ಪ ವಿಜ್ಞಾನ ಆರ್ಥಿಕ ಪ್ರಗತಿಯ ಒಂದು ತಳಹದಿ.


ಇತ್ತೀಚಿನ ಬೆಳೆವಣಿಗೆ[ಸಂಪಾದಿಸಿ]

1920ರಿಂದೀಚೆಗೆ ಅರ್ಥಶಾಸ್ತ್ರದಲ್ಲಾದ ಮಹತ್ತರ ಪ್ರಗತಿಯನ್ನು ನಾಲ್ಕು ಶೀರ್ಷಿಕೆಗಳಡಿಯಲ್ಲಿ ವಿಶ್ಲೇಷಿಸಬಹುದು. ಸುಖೀ ಅರ್ಥಶಾಸ್ತ್ರ, ಏಕಸ್ವಾಮ್ಯಸ್ಪರ್ಧೆಯ ತತ್ತ್ವ, ರಾಷ್ಟ್ರೀಯ ಆದಾಯ ನಿರ್ಧರಿಸುವ ತತ್ತ್ವ ಮತ್ತು ಉದ್ಯೋಗ, ಗಣಿತೀಯ ಅರ್ಥಶಾಸ್ತ್ರ ಈ ಬೆಳೆವಣಿಗೆಯ ಅಸ್ತಿಭಾರವನ್ನು ಮೊದಲಿನ ಕೆಲಸಗಳಲ್ಲಿ ಗುರುತಿಸಬಹುದು. ವೈಜ್ಞಾನಿಕ ವಿಶ್ಲೇಷಣೆ ಮತ್ತು ಅದಕ್ಕೆ ದೊರೆತ ವಿಶೇಷ ಗಮನ ತೀರ ಇತ್ತೀಚಿನದು.

  • ಸುಖೀ ಅರ್ಥಶಾಸ್ತ್ರದ ಬಗ್ಗೆ ಇದು ಪುರ್ಣ ಸತ್ಯ. 20ನೆಯ ಶತಮಾನದಲ್ಲಿ ಇದು ಪ್ರತ್ಯೇಕ ಮತ್ತು ಸವಿವರಣೆಯ ವಿಭಾಗದ ಇಲಾಖೆಯಾಗಿದೆ. ಆರ್ಥಿಕ ಧೋರಣೆಯ ತತ್ತ್ವವನ್ನು ಸುಖೀ ಅರ್ಥಶಾಸ್ತ್ರವೆನ್ನಬಹುದು. ವಿವಿಧ ಆರ್ಥಿಕ ವಿಷಯಗಳು ಮತ್ತು ಸರ್ಕಾರದ ನೀತಿ ಇವು ಸುಖೀ ಸಮಾಜದ ಮೇಲೆ ಮಾಡುವ ಪರಿಣಾಮದ ಅನ್ವೇಷಣೆಯನ್ನು ನಡೆಸುತ್ತಿವೆ. ಸರ್ಕಾರದ ಧೋರಣೆಯಿಂದ ವಿವಿಧ ಮಾರುಕಟ್ಟೆಗಳ ಮೇಲಾಗುವ ಪರಿಣಾಮ (ಏಕಸ್ವಾಮ್ಯ ಮತ್ತು ಸ್ಪರ್ಧೆ) ಆರ್ಥಿಕ ಸಂಪತ್ತಿನ ವಿತರಣೆ ಜನತೆಯ ಆಕಾಂಕ್ಷೆಗಳಿಗೆ ಅವುಗಳ ಸಂಬಂಧಗಳಿಗೆ ಇದು ಹೆಚ್ಚು ಗಮನವೀಯುತ್ತದೆ. ವಿವಿಧ ಮಾದರಿಯ ತೆರಿಗೆಗಳ ಪರಿಣಾಮ, ಆಮದು ತೆರಿಗೆ, ಬೆಲೆನಿಯಂತ್ರಣ, ಪಡಿತರ ರಾಷ್ಟ್ರೀಕರಣ, ಸಮಾಜವಾದ ಮೊದಲಾದ ವಿಷಯಗಳ ಬಗ್ಗೆಯೂ ಅಧ್ಯಯನ ನಡೆಸಲಾಗಿದೆ ಈ ದಾರಿಯಲ್ಲಿ ಆರ್ಥರ್ ಸಿಸಿಲ್ ಪಿಗೂನ ದಿ ಎಕನಾಮಿಕ್ಸ್ ಆಫ್ ವೆಲ್ಫೇರ್ (1920) ಪುಸ್ತಕ ವ್ಯವಸ್ಥಿತವಾಗಿ ಮಾಡಿದ ಪ್ರಥಮ ಮತ್ತು ಮಹತ್ತ್ವವಾದ ಕೆಲಸ. 1940ರ ಅನಂತರದ ಕೆಲಸಗಳೆಲ್ಲ ಸುಖೀ ಅರ್ಥಶಾಸ್ತ್ರದ ತಾತ್ತ್ವಿಕ ವಿಷಯಗಳನ್ನೊಳಗೊಂಡಿವೆ. ಆದರೆ ತೀರ ಇತ್ತೀಚೆಗೆ ಸರ್ಕಾರದ ಬಂಡವಾಳ ಹೂಡುವಿಕೆ ಧೋರಣೆಯನ್ನು ಕುರಿತು ಆಸಕ್ತಿ ಹುಟ್ಟಿದೆ.
  • ಅರ್ಥಶಾಸ್ತ್ರ ತತ್ತ್ವದಲ್ಲಿಯ ಎರಡನೆಯ ಮುಖ್ಯ ಬೆಳೆವಣಿಗೆ ಏಕಸ್ವಾಮ್ಯ ಸ್ಪರ್ಧೆಯ ತತ್ತ್ವ. ಇದು ಅಪ್ಪಟ ಸ್ಪರ್ಧೆ ಮತ್ತು ಅಪ್ಪಟ ಏಕಸ್ವಾಮ್ಯಕ್ಕೆ ಮಾರುಕಟ್ಟೆಯಲ್ಲಿ ಸಂಪುರ್ಣ ವಾಗಿ ಮಾನ್ಯತೆ ನೀಡಿತು. ಈ ವಿಷಯದ ಬಗ್ಗೆ ಬಹಳ ಜನ ಅರ್ಥಶಾಸ್ತ್ರಜ್ಞರು ತಮ್ಮ ಗಮನವನ್ನಿತ್ತರು. ಇವರಲ್ಲಿ ಮುಖ್ಯವಾಗಿ ಜೆಕೊಬ್ ವಿನರ್, ರೋಯ್ ಎಫ್ ಹೆರೊಡ್ ಮತ್ತು ಫ್ರೆಡ್ರಿಕ್ ಝೀತನ್ ಇವರುಗಳನ್ನು ಹೆಸರಿಸಬಹುದು. ಈ ಸಿದ್ಧಾಂತದ ಪ್ರಕಾರ ಪ್ರತಿಯೊಬ್ಬ ವ್ಯಾಪಾರಿಯೂ ತನ್ನ ಸರಕುಗಳನ್ನೊಯ್ಯುವಾಗ ಗ್ರಾಹಕನನ್ನು ದೃಷ್ಟಿಯಲ್ಲಿಟ್ಟು ಕೊಳ್ಳುತ್ತಾನೆ. ಇದರಿಂದ ವ್ಯಾಪಾರಿಗೆ ಆಂಶಿಕ ಏಕಸ್ವಾಮ್ಯ ಪಡೆಯಲು ಅನುಕೂಲವಾಗುತ್ತದೆ. ಬೃಹತ್ ಉದ್ದಿಮೆಗಳು ಅಲ್ಪ ಸಂಖ್ಯೆಯಲ್ಲಿರುವ ಒಂದು ಕೈಗಾರಿಕಾ ಕ್ಷೇತ್ರದಲ್ಲಿನ ಅಲ್ಪಾಧಿಕಾರ ವನ್ನು (ಆಲಿಗೊಪೊಲಿ) ವಿಶ್ಲೇಷಿಸಲಾಯಿತು. ಏಕಸ್ವಾಮ್ಯ ಮತ್ತು ಅಲ್ಪಾಧಿಕಾರದಲ್ಲಿರುವ ವ್ಯತ್ಯಾಸವನ್ನು ಇದು ತೋರಿಸಿತು. ಏಕಾಧಿಕಾರವಿರುವಲ್ಲಿ ಸಾಮಗ್ರಿಯನ್ನು ವಿವಿಧ ಬೆಲೆಗಳಿಗೆ ಮಾರಲಾಗುತ್ತಿದ್ದು, ಏಕಕ್ರಯವಿರುವಲ್ಲಿ (ಮೊನೊಪ್ಸೊನಿ) ಒಬ್ಬನೆ ಖರೀದಿದಾರನಿರುತ್ತಾನೆ. ಈ ವಿಶ್ಲೇಷಣೆ ವಿಶೇಷ ಆಸಕ್ತಿಯನ್ನು ಪ್ರಚೋದಿಸಿತು.ಆದರೆ ಇದರ ದಾರಿಯಲ್ಲಿರುವ ಅನೇಕ ಜಟಿಲ ಸಮಸ್ಯೆಗಳು ಈ ವಿಶ್ಲೇಷಣೆಯ ಪ್ರಗತಿಗೆ ಪ್ರತಿಬಂಧಕವಾಗಿವೆ.
  • ಆದಾಯನಿರ್ಧಾರತತ್ತ್ವ ಮೂರನೆಯ ಪ್ರಮುಖ ಬೆಳೆವಣಿಗೆ. ಜಾನ್ ಮೇಯ್ ನಾರ್ಡ್ ಕೀನ್ಸ್‌ನ ಹೆಸರು ಇದಕ್ಕೆ ಸಂಬಂಧಿಸಿದೆ. ದಿ ಜನರಲ್ ಥಿಯೊರಿ ಆಫ್ ಎಂಪ್ಲಾಯ್ಮೆಂಟ್, ಇಂಟರೆಸ್ಟ್, ಅಂಡ್ ಮನಿ (1936) ಎಂಬ ಇವನ ಪುಸ್ತಕದಲ್ಲಿ ಆದಾಯನಿರ್ಧಾರತತ್ತ್ವ ಒಬ್ಬನ ಕೆಲಸಕ್ಕೆ ಸಂಬಂಧಿಸಿದ್ದು ಎಂದಿದ್ದಾನೆ. ಈತನ ವಿಶ್ಲೇಷಣೆಯ ಪ್ರಕಾರ ಉತ್ಪಾದಕರ ಮತ್ತು ಗ್ರಾಹಕರ ವಸ್ತುಗಳಿಗಿರುವ ಪರಿಣಾಮಕಾರಿ ಬೇಡಿಕೆ ಕೆಲವು ವೇಳೆ ದೇಶದ ಉತ್ಪಾದನಾ ಸಾಮರ್ಥ್ಯಕ್ಕಿಂತ ಕಡಿಮೆಯಾಗಬಹುದು ಅಥವಾ ಹೆಚ್ಚಾಗ ಬಹುದು. ಮೊದಲನೆಯದರಲ್ಲಿ ನಿರುದ್ಯೋಗ ಸಮಸ್ಯೆ ಮತ್ತು ಹಣದುಬ್ಬರ ಇವು ಕಂಡುಬರುತ್ತವೆ. ಎರಡನೆಯದು ಆರ್ಥಿಕ ಕುಸಿತಕ್ಕೆ (ಡಿಪ್ರೆಷನ್) ಮಾರ್ಗ ಮಾಡಿಕೊಡುತ್ತದೆ. ಪರಿಣಾಮಕಾರಿ ಬೇಡಿಕೆಯನ್ನು ನಿರ್ಧರಿಸುವುದರ ಬಗ್ಗೆ ಅವನು ಚರ್ಚಿಸುತ್ತಾನೆ. ಒಟ್ಟಾರೆ ಗ್ರಾಹಕನ ಬೇಡಿಕೆಯ ನಿರ್ಧಾರ ರಾಷ್ಟ್ರೀಯ ಆದಾಯವನ್ನವಲಂಬಿಸಿದೆ. ಅಂದರೆ ಗ್ರಾಹಕನ ಕೊಂಡುಕೊಳ್ಳುವ ಶಕ್ತಿಯನ್ನವಲಂಬಿಸಿದೆ. ಉತ್ಪಾದಕರ ಸಾಮಗ್ರಿಗಿರುವ ಬೇಡಿಕೆ ಮುಖ್ಯವಾಗಿ ಲಾಭ ಮತ್ತು ಸರಕುಗಳನ್ನು ಕೊಂಡುಕೊಳ್ಳಲು ಅವರು ವಿನಿಯೋಗಿಸುವ ಬಂಡವಾಳ ಹೂಡಿಕೆ ಜಮಾ-ಖರ್ಚು ಇವುಗಳನ್ನವಲಂಬಿಸಿದೆ. ಬಡ್ಡಿಯ ದರ ಹೆಚ್ಚಾದರೆ ನೂತನ ಯಂತ್ರ-ಸಾಮಗ್ರಿಗಳನ್ನು ಸ್ಥಾಪಿಸಲು ಹಣ ಪಡೆಯುವುದು ಅಸಾಧ್ಯ; ಹೆಚ್ಚಿನ ಬಡ್ಡಿದರ ಉತ್ಪನ್ನದ ಸಾಮಗ್ರಿಗಳ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಇದು ಒಮ್ಮೊಮ್ಮೆ ನಿರುದ್ಯೋಗ, ಹಣದುಬ್ಬರಗಳನ್ನು ತಡೆಗಟ್ಟಲು ವಿವಿಧ ಮಾರ್ಗಗಳನ್ನು ಸೂಚಿಸುತ್ತದೆ. ಉದಾಹರಣೆ, ಕುಸಿತದ ಕಾಲದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬಹುದು: ಹಣದ ಸರಬರಾಜು ಕಡಿಮೆ ಮಾಡುವುದು; ಬಡ್ಡಿ ದರವನ್ನು ಹೆಚ್ಚಿಸಿ ಉತ್ಪಾದಕರ ವಸ್ತುಗಳಿಗೆ ಬೇಡಿಕೆ ಕಡಿಮೆ ಮಾಡುವುದು; ಸರ್ಕಾರಿ ವೆಚ್ಚವನ್ನು ಕಡಿಮೆಮಾಡಿ ಅದರಿಂದ ಸರಕುಗಳಿಗಿರುವ ಬೇಡಿಕೆ ತಗ್ಗಿಸುವುದು; ತೆರಿಗೆಗಳನ್ನು ಏರಿಸಿ ಅಥವಾ ಸರಕಾರಿ ಭದ್ರತಾ ಠೇವಣಿಗಳನ್ನು ಸಾರ್ವಜನಿಕ ರಿಗೆ ನೀಡಿ ಗ್ರಾಹಕರ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುವುದು. ಇವೆಲ್ಲ ತಂತ್ರಗಳಿಗೂ ಅಡೆತಡೆಗಳಿರುವುದಿಲ್ಲ. ಆದರೆ ನಿರುದ್ಯೋಗ ಮತ್ತು ಹಣದುಬ್ಬರಗಳು ತುಂಬಾ ಗಂಭೀರವಾಗಿದ್ದರೆ ಮಾತ್ರ ಇಂಥ ಕ್ರಮಕೈಗೊಳ್ಳುವುದು ಉಚಿತ. ಇಂಥ ಧೋರಣೆ ಗಳು ಸರ್ಕಾರಕ್ಕೆ ಯುದ್ಧ ಕಾಲದಲ್ಲಿ ಹಣದುಬ್ಬರ ಅಥವಾ ನಿರುದ್ಯೋಗವನ್ನು ತಡೆಗಟ್ಟಲು ಸಹಾಯಕಾರಿ, ಸಂಬಳದಲ್ಲಿ ಖೋತಾ ಮಾಡುವುದು ನಿರುದ್ಯೋಗಕ್ಕೆ ಪರಿಣಾಮಕಾರಿಯಾದ ಪರಿಹಾರವಲ್ಲವೆಂದು ಕೀನ್ಸ್‌ ಹೇಳಿದ್ದಾರೆ. ಪ್ರಾರಂಭದಲ್ಲಿ ಉತ್ಪಾದನಾ ವೆಚ್ಚದಲ್ಲಿ ಇಳಿತವನ್ನು ತೋರಿಸಿದರೂ ಇದು ಜನಸಾಮನ್ಯರ ಕೊಂಡುಕೊಳ್ಳುವ ಶಕ್ತಿ ಕಡಿಮೆ ಮಾಡುತ್ತದೆ.
  • ಗಣಿತೀಯ ಅರ್ಥಶಾಸ್ತ್ರದ ವಿಸ್ತರಣೆ ನಾಲ್ಕನೆಯ ಮಹತ್ತರ ಪ್ರಗತಿ (ಅರ್ಥಮಿತಿ ಅಥವಾ ಅರ್ಥಮಾಪನಶಾಸ್ತ್ರ). ಕಲನಶಾಸ್ತ್ರದ ವಿಸ್ತೃತ ಅನ್ವಯ ಅರ್ಥಶಾಸ್ತ್ರದ ಹಲವಾರು ಸಮಸ್ಯೆಗಳನ್ನು ಪರಿಮಾಣೀಕರಿಸಿ ನಿರಪೇಕ್ಷವಾದ ವಿಶ್ಲೇಷಣೆಯನ್ನು ಸಾಧ್ಯವಾಗಿ ಸಿದೆ. ಇತ್ತೀಚೆಗೆ ಆರ್ಥಿಕ ಚಲನಶಾಸ್ತ್ರ, ಚಟುವಟಿಕೆ ವಿಶ್ಲೇಷಣಶಾಸ್ತ್ರ, ಕ್ರೀಡಾಸಿದ್ಧಾಂತ (ಗೇಮ್ ಥಿಯೊರಿ) ಇವು ಸ್ವತಂತ್ರ ಶಾಖೆಗಳಾಗಿ ಬೆಳೆದು ಅರ್ಥ ಮತ್ತು ಗಣಿತ ವಿಜ್ಞಾನಗಳ ನಿಕಟ ಮತ್ತು ನಿರಂತರ ಬಾಂಧವ್ಯಗಳನ್ನು ಸ್ಥಿರಗೊಳಿಸಿವೆ.

ಅರ್ಥಶಾಸ್ತ್ರ ವ್ಯಕ್ತಿಯ, ಸಮಾಜದ, ಸರ್ಕಾರದ, ಅಂತಾರಾಷ್ಟ್ರೀಯ ವ್ಯವಹಾರದ ಪ್ರತಿ ಚಟುವಟಿಕೆಯಲ್ಲಿಯೂ ಹಾಸುಹೊಕ್ಕಾಗಿದೆ. (ಹಣ, ಬ್ಯಾಂಕುಗಳು, ವ್ಯಾಪಾರ ಸಂಸ್ಥೆಗಳು, ವಿಮೆ, ಸಹಕಾರ ಸಂಘಗಳು, ರಾಷ್ಟ್ರೀಯ ಆಯವ್ಯಯ, ಅಂತಾರಾಷ್ಟ್ರೀಯ ಆರ್ಥಿಕ ಮಂಡಲಿ, ಅಂತಾರಾಷ್ಟ್ರೀಯ ದ್ರವ್ಯನಿಧಿ, ಅಂತಾರಾಷ್ಟ್ರೀಯ ತೀರುವೆ ಬ್ಯಾಂಕು).