ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ತಿಗಳು-ಜವಾಬ್ದಾರಿಗಳು

ವಿಕಿಸೋರ್ಸ್ದಿಂದ

ಒಂದು ವ್ಯವಹಾರಸಂಸ್ಥೆಗೆ ಅದರ ಗ್ರಾಹಕರಿಂದಲೂ ಇತರರಿಂದಲೂ ಬರಬೇಕಾದ ಸಾಲಗಳೇ ಅಲ್ಲದೆ ಅದು ತನ್ನ ವ್ಯವಹಾರ ಮೂಲವಾಗಿಯೂ ಮೂಲಕವಾಗಿಯೂ ಪಡೆದುಕೊಂಡ ಎಲ್ಲ ಮೂರ್ತಾಮೂರ್ತ ವಸ್ತುಗಳೂ ಹಕ್ಕುಗಳೂ ಅದರ ಆಸ್ತಿಗಳು (ಅಸೆಟ್್ಸ); ಅದು ಇತರರಿಗೆ ತೆರಬೇಕಾಗಿ ಬಂದ ಎಲ್ಲ ಸಾಲಗಳೂ ಅದರ ಜವಾಬ್ದಾರಿಗಳು (ಲೈಅಬಿಲಿಟೀಸ್).

ವ್ಯವಹಾರಸಂಸ್ಥೆಯ ದೃಷ್ಟಿಯಿಂದ ಅದರ ಆಸ್ತಿಗಳನ್ನು ಸ್ಥೂಲವಾಗಿ ಹೀಗೆ ವಿಂಗಡಿಸ ಬಹುದು:

  1. ಸ್ಥಿರ (ಫಿಕ್ಸೆಡ್) ಆಸ್ತಿಗಳು;
  2. ಚರ (ಫ್ಲೋಟಿಂಗ್) ಅಥವಾ ಚಾಲ್ತಿ (ಕರೆಂಟ್) ಆಸ್ತಿಗಳು;
  3. ದ್ರವ (ಲಿಕ್ವಿಡ್) ಆಸ್ತಿಗಳು:
  4. ತಳ್ಳಿಟ್ಟ (ಡೆಫರ್ಡ್) ಆಸ್ತಿಗಳು;
  5. ಅಗೋಚರ (ಇನ್ಟ್ಯಾಂಜಿಬಲ್) ಆಸ್ತಿಗಳು.

ಸ್ಥಿರ ಆಸ್ತಿಗಳು[ಸಂಪಾದಿಸಿ]

ಮಾರಾಟ ಮಾಡುವ ಉದ್ದೇಶವಿಲ್ಲದೆ ವ್ಯವಹಾರದಲ್ಲಿ ಖಾಯಮ್ಮಾಗಿ ಬಳಸುವ ಉದ್ದೇಶದಿಂದ ಪಡೆದ ಆಸ್ತಿಗಳು. ಉದಾಹರಣೆ : ಜಮೀನು ಮತ್ತು ಕಟ್ಟಡ, ಯಂತ್ರ ಹಾಗೂ ಯಂತ್ರಸ್ಥಾವರ, ಅಣೆಕಟ್ಟು ಅಥವಾ ಪೀಠೋಪಕರಣ (ಫರ್ನಿಚರ್). ಪದಾರ್ಥಗಳ ಉತ್ಪಾದನೆಯಲ್ಲಿ ನಿರತವಾದ ಉದ್ಯಮಗಳಲ್ಲಿ ಬಂಡವಾಳದ ಹೆಚ್ಚಿನ ಪ್ರಮಾಣ ವನ್ನು ಸ್ಥಿರ ಆಸ್ತಿಗಳಿಗಾಗಿ ವಿನಿಯೋಗ ಮಾಡಬೇಕಾಗುತ್ತದೆ. ಪದಾರ್ಥಗಳನ್ನು ಕೊಂಡು ಮಾರುವ ಸಂಸ್ಥೆಗಳಲ್ಲಿ ಸ್ಥಿರ ಆಸ್ತಿಗಳು ಸಾಮಾನ್ಯವಾಗಿ ಅವುಗಳ ಒಟ್ಟು ಬಂಡವಾಳದ ಅಲ್ಪ ಪ್ರಮಾಣದಲ್ಲಿರುತ್ತವೆ.

ಸ್ಥಿರ ಆಸ್ತಿಗಳ ಬಗ್ಗೆ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಇವು:

  1. ಈ ವಿಧವಾದ ಆಸ್ತಿಗಳನ್ನು ಮೇಲಿಂದ ಮೇಲೆ ಉಪಯೋಗಿಸುತ್ತಿರುವು ದರಿಂದ ಸಾಮಾನ್ಯವಾಗಿ ಇವುಗಳ ಮೌಲ್ಯ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ. ಈ ಕಾರಣದಿಂದ ಇಂಥ ಆಸ್ತಿಗಳಿಗೆ ನಶಿಸುವ (ವೇಸ್ಟಿಂಗ್) ಆಸ್ತಿಗಳೆಂದೂ ಹೆಸರು. ನಶಿಸುವ ಆಸ್ತಿಗೆ ಉತ್ತಮ ಉದಾಹರಣೆಗಳೆಂದರೆ ಗಣಿಗಳು. ಯಂತ್ರವೇ ಮುಂತಾದ ಆಸ್ತಿಗಳು ಸವೆಯುವುದು ಮಾತ್ರವೇ ಅಲ್ಲದೆ ಅಪ್ರಚಲಿತವಾಗಬಹುದು; ಹೊಸ ಯಂತ್ರಗಳು ಬಂದಾಗ ಹಳೆಯ ಯಂತ್ರಗಳನ್ನೇ ಬಳಸುವುದು ಲಾಭದಾಯಕವಾಗದೆ ಹೋಗಬಹುದು. ಆದ್ದರಿಂದ ಇಂಥ ಆಸ್ತಿ ಸವೆದಾಗ ಅಥವಾ ಅಪ್ರಚಲಿತವಾಗಿ ಲುಪ್ತಪ್ರಾಯವಾದಾಗ ಅವುಗಳ ಬದಲು ಹೊಸ ಯಂತ್ರಗಳನ್ನು ಕೊಳ್ಳುವ ಉದ್ದೇಶದಿಂದ ವರ್ಷೇ ವರ್ಷೇ ಒಂದು ನಿಶ್ಚಿತವಾದ ಮೊಬಲಗನ್ನು ಲಾಭ-ನಷ್ಟ ಖಾತೆಗೆ ಸವಕಳಿ ಋಣಿಸಿ (ಖರ್ಚು ಹಾಕಿ) ಒಂದು ನಿಧಿ ಏರ್ಪಡಿಸಬಹುದು. ಈ ಆಸ್ತಿ ಅನುಪಯುಕ್ತವಾದಾಗ ಈ ನಿಧಿಯಿಂದ ಹೊಸ ಆಸ್ತಿ ಕೊಳ್ಳಬಹುದು.
  2. ಇಂಥ ಆಸ್ತಿಯನ್ನು ಕೊಂಡಿರುವುದು ಪುನರ್ ಮಾರಾಟಕ್ಕಾಗಿ ಅಲ್ಲ. ಆದ್ದರಿಂದ ಮಾರುಕಟ್ಟೆಯಲ್ಲಿ ಇದರ ಬೆಲೆ ಹೆಚ್ಚಿದಾಗ ಸಾಮಾನ್ಯವಾಗಿ ಇದನ್ನು ಗಣನೆಗೆ ತೆಗೆದು ಕೊಳ್ಳಬಾರದು. ಆದರೆ ಇದರ ಬೆಲೆ ಕಡಿಮೆಯಾದ ಸಂದರ್ಭದಲ್ಲಿ ಇದರ ಪುನರ್ಮೌಲ್ಯವನ್ನು ನಿರ್ಧರಿಸಿ, ಇದರ ಪುಸ್ತಕಮೌಲ್ಯಕ್ಕೂ ಪುನರ್ನಿರ್ಧರಿಸಿದ ಮೌಲ್ಯಕ್ಕೂ ಇರುವ ವ್ಯತ್ಯಾಸವನ್ನು ಸವೆತವೆಂದು ಭಾವಿಸಿ ಅದನ್ನು ಲಾಭ-ನಷ್ಟ ಖಾತೆಗೆ ಋಣಿಸಬೇಕು. ಮೌಲ್ಯವನ್ನು ಪುನರ್ನಿರ್ಧರಿಸಿದಾಗ ಅಂದುಕೊಂಡ ಬೆಲೆಗಿಂತ ಹೆಚ್ಚಾಗಿದ್ದ ಪಕ್ಷದಲ್ಲಿ ಈ ಹೆಚ್ಚುವರಿಯನ್ನು ಆಸ್ತಿಯ ಲೆಕ್ಕದಲ್ಲಿ ಲೇಖಿಸುವುದು ಉಚಿತವಲ್ಲ. ಆ ಆಸ್ತಿಯನ್ನು ಮಾರುವ ಉದ್ದೇಶದಿಂದ ಕೊಂಡಿರುವುದಲ್ಲವಾದ್ದರಿಂದ ಈ ಹೆಚ್ಚುವರಿಯನ್ನು ಲಾಭವೆಂದು ಪರಿಗಣಿಸುವುದು ನಿಯಮದ ಉಲ್ಲಂಘನೆಯಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಎಲ್ಲ ಸ್ಥಿರ ಆಸ್ತಿಗಳ ಪುನರ್ಮೌಲ್ಯ ನಿರ್ಣಯ ಮಾಡಿ ಅವುಗಳ ಪುಸ್ತಕ ಮೌಲ್ಯಗಳಿಗೂ ಪುನರ್ನಿರ್ಧರಿಸಿದ ಮೌಲ್ಯಗಳಿಗೂ ಇರುವ ವ್ಯತ್ಯಾಸಗಳನ್ನು ದಾಖಲೆ ಮಾಡಬೇಕಾಗಿ ಬರಬಹುದು. ಉದಾ: ವ್ಯಾಪಾರಸಂಸ್ಥೆಯನ್ನು ಮಾರುವಾಗ, ಹೊಸಬರು ಪಾಲುದಾರರಾಗಿ ಸಂಸ್ಥೆಗೆ ಬರುವಾಗ ಅಥವಾ ಪಾಲುದಾರರೊಬ್ಬರು ಸಂಸ್ಥೆಯಿಂದ ನಿರ್ಗಮಿಸುವಾಗ, ಎಲ್ಲ ಸ್ಥಿರ ಆಸ್ತಿಗಳ ಮೌಲ್ಯಗಳನ್ನೂ ಪುನರ್ನಿರ್ಧರಿಸಿದಾಗ ಒಟ್ಟಿನಲ್ಲಿ ಬರುವ ಹೆಚ್ಚುವರಿಯ ಮೊಬಲಗನ್ನು ಆಸ್ತಿ ಜವಾಬ್ದಾರಿ ತಖ್ತೆಯ (ಶಿಲ್ಕು ತಖ್ತೆಯ) ಎಡಪಾಶರ್್ವದಲ್ಲಿ ಮೀಸಲು ಖಾತೆಯಲ್ಲಿ ಸೇರಿಸಬಹುದು; ಅಥವಾ ಅದನ್ನು ಸೂಕ್ತ ಕಂಡ ರೀತಿಯಲ್ಲಿ ವಿನಿಯೋಗಿಸಬಹುದು.

ಒಂದು ಸಂಸ್ಥೆಯ ಸ್ಥಿರ ಆಸ್ತಿಗಳ ಮೇಲಿನ ಬಂಡವಾಳ ಆದಷ್ಟು ಕಡಮೆಯಿರಬೇಕು. ಅದು ಆ ಸಂಸ್ಥೆಯ ಲಾಭದ ಪ್ರಮಾಣಕ್ಕೆ ಅನುಗುಣವಾಗಿರಬೇಕು. ತಾಂತ್ರಿಕಯುಗದಲ್ಲಿ ಸಂಭವಿಸುತ್ತಿರುವ ಶೀಘ್ರ ಬದಲಾವಣೆಗಳ ದುಷ್ಪರಿಣಾಮಗಳನ್ನು ಸರಿತೂಗಿಸುವ ರೀತಿಯಲ್ಲಿರ ಬೇಕು. ಯಂತ್ರೋಪಕರಣವೇ ಮುಂತಾದ ರೂಪಗಳಲ್ಲಿರುವ ಸ್ಥಿರ ಆಸ್ತಿಗಳ ಮೌಲ್ಯದ ಇಳಿತವನ್ನು ಲೆಕ್ಕ ಪುಸ್ತಕಗಳಲ್ಲಿ ದಾಖಲು ಮಾಡುವಾಗ, ಮೊದಲ ವರ್ಷಗಳಲ್ಲಿ ಈ ಮೊಬಲಗು ಹೆಚ್ಚಾಗಿದ್ದು ಕ್ರಮೇಣ ಇದು ಕಡಿಮೆಯಾಗುತ್ತ ಹೋಗಬೇಕು. ಏಕೆಂದರೆ ಇಂಥ ಆಸ್ತಿಗಳು ಹಳೆಯದಾದಂತೆಲ್ಲ ಇವುಗಳ ದುರಸ್ತು ವೆಚ್ಚ ಹೆಚ್ಚುತ್ತ ಹೋಗುವುದರಿಂದ ಆ ವರ್ಷಗಳಲ್ಲಿ ಸವಕಳಿಯ ಮೊಬಲಗು ಹೆಚ್ಚಾಗಿದ್ದರೆ ಅದರಿಂದ ಸಂಸ್ಥೆಯ ಲಾಭ ಅನಾವಶ್ಯಕವಾಗಿ ಕಡಿಮೆಯಾಗಬಹುದು. ಮೊದಲ ವರ್ಷಗಳಲ್ಲಿ ಹೆಚ್ಚು ಸವಕಳಿಯೂ ಕಡಿಮೆ, ದುರಸ್ತು ವೆಚ್ಚವೂ ಅನಂತರದ ವರ್ಷಗಳಲ್ಲಿ ಹೆಚ್ಚು ದುರಸ್ತು ವೆಚ್ಚವೂ, ಕಡಿಮೆ ಸವಕಳಿಯೂ ಇದ್ದರೆ ಅದರಿಂದ ಒಟ್ಟಿನಲ್ಲಿ ಆಸ್ತಿಯ ಪ್ರಾಯದ ಅವಧಿಯಲ್ಲಿ ಎಲ್ಲ ವರ್ಷಗಳಲ್ಲೂ ಇವೆರಡೂ ಖಾತೆಗಳ (ಸವಕಳಿ ಹಾಗೂ ದುರಸ್ತು) ಒಟ್ಟು ಖರ್ಚು ಸ್ಥೂಲವಾಗಿ ಒಂದೇ ಸಮನಾಗಿರುತ್ತದೆ. ಲಾಭನಷ್ಟ ಖಾತೆಯಲ್ಲಿ ಅವಾಸ್ತವಿಕವಾದ ಏರು-ತಗ್ಗುಗಳಿಲ್ಲದಂತಾಗುತ್ತದೆ. ಚರ ಆಸ್ತಿಗಳು: ಮಾರುವ ಉದ್ದೇಶದಿಂದ ಕೊಂಡ ಸರಕು, ಅಸಿದ್ಧವಸ್ತು, ಅರ್ಧಸಿದ್ಧವಸ್ತು, ಸಿದ್ಧವಸ್ತು, ಬರಬೇಕಾದ ಸಾಲ ಮುಂತಾದುವು. ಜಮೀನು, ಕಟ್ಟಡ, ಯಂತ್ರ ಮುಂತಾದುವುಗ ಳಂತೆ ಇವು ಸ್ಥಿರವಲ್ಲ. ಮಾರಲು ಕೊಂಡ ಸರಕುಗಳು, ಅಸಿದ್ಧವಸ್ತುಗಳು ಮುಂತಾದವನ್ನು ಆಸ್ತಿ ಜವಾಬ್ದಾರಿ ತಖ್ತೆಯಲ್ಲಿ ತೋರಿಸುವಾಗ ಅವುಗಳ ಅಸಲುಬೆಲೆಯನ್ನೂ ಮಾರುಕಟ್ಟೆಯ ಬೆಲೆಯನ್ನೂ ಪರಿಶೀಲಿಸಿ, ಇವೆರಡರಲ್ಲಿ ಯಾವುದು ಕಡಿಮೆಯಾಗಿದೆಯೋ ಅದನ್ನೇ ನಮೂದಿಸುವುದು ಯುಕ್ತ ಮಾರ್ಗ.

ದ್ರವ ಆಸ್ತಿಗಳು[ಸಂಪಾದಿಸಿ]

ನಗದು ಹಾಗೂ ಸುಲಭವಾಗಿ ನಗದಾಗಿ ಪರಿವರ್ತಿಸಬಹುದಾದ ಆಸ್ತಿಗಳು. ಉದಾ: ಬ್ಯಾಂಕಿನಲ್ಲಿಟ್ಟ ನಗದು, ಲೇಣೆ ಹುಂಡಿ, ಷೇರು, ಋಣಪತ್ರ (ಡಿಬೆಂಚರ್) ಇತ್ಯಾದಿ. ತಳ್ಳಿಟ್ಟ ಆಸ್ತಿಗಳು: ಮುಂಗಡವಾಗಿ ಕೊಟ್ಟ ಚಂದಾ, ವಿಮೆಯ ಕಂತು, ಬಾಡಿಗೆ ಇತ್ಯಾದಿ ಖರ್ಚುಗಳಲ್ಲಿ ಮುಂದಿನ ಹಣಕಾಸಿನ ಅವಧಿಗೆ ಸಂಬಂಧಿಸಿದ ಭಾಗ. ಪ್ರಚಲಿತ ಅವಧಿಯಲ್ಲೇ ಇವನ್ನು ಕೊಟ್ಟಿರುವುದಾದರೂ ಇವು ಈ ಅವಧಿಗೆ ಸಂಬಂಧಿಸಿದ ಖರ್ಚುಗಳಲ್ಲ ವಾದ್ದರಿಂದ ಇವನ್ನು ತಾತ್ಕಾಲಿಕವಾಗಿ ಆಸ್ತಿಗಳೆಂದು ಪರಿಗಣಿಸುವುದು ಅವಶ್ಯ. ಪ್ರಚಲಿತ ಹಣಕಾಸಿನ ಅವಧಿಗೆ ಸಂಬಂಧಿಸಿದ ವರಮಾನಗಳು ಯಾವುವಾದರೂ ಈ ಅವಧಿಯ ಅಂತ್ಯದ ವೇಳೆಗೆ ಇನ್ನೂ ಬಾರದಿದ್ದರೆ ಇವೂ ಆಸ್ತಿಗಳೇ. ಉದಾ: ಬರಬೇಕಾದ ಲಾಭಾಂಶ, ಬಡ್ಡಿ, ಬಾಡಿಗೆ, ಈ ಎಲ್ಲ ಮುಂಗಡ ವೆಚ್ಚಗಳನ್ನು ಗಳಿಸಿಯೂ ಪಡೆಯದಿರುವ ವರಮಾನ ಗಳನ್ನೂ ತಳ್ಳಿಟ್ಟ ಆಸ್ತಿಗಳೆಂದು ಪರಿಗಣಿಸಿ ಆಸ್ತಿ-ಜವಾಬ್ದಾರಿ ತಖ್ತೆಯಲ್ಲಿ ತೋರಿಸಬೇಕು. ಅಗೋಚರ ಆಸ್ತಿಗಳು: ಕಣ್ಣಿಗೆ ಕಾಣಿಸದಿದ್ದರೂ ಬೆಲೆಬಾಳುವ ಆಸ್ತಿಗಳು. ಉದಾ: ಸಂಸ್ಥೆಯ ಸುನಾಮ.

ಜವಾಬ್ದಾರಿಗಳು[ಸಂಪಾದಿಸಿ]

ಒಂದು ಸಂಸ್ಥೆಗೆ ಬರಬೇಕಾದ ಎಲ್ಲ ಬಗೆಯ ಸಾಲಗಳು, ಸಂಸ್ಥೆಯ ಸ್ವಂತ ಬಂಡವಾಳ ಸಾಲದೆ ಬಂದಾಗ ಇತರರಿಂದ ನಾನಾ ರೀತಿಯಲ್ಲಿ ಸಾಲ ಪಡೆಯ ಬೇಕಾಗುತ್ತದೆ. ಋಣಪತ್ರಗಳನ್ನು ನೀಡಿಯೋ ಸಂಸ್ಥೆಯ ಆಸ್ತಿಗಳನ್ನು ಈಡು ಮಾಡಿಯೋ ಪಡೆದ ಸಾಲಗಳು ಸಾಮಾನ್ಯವಾಗಿ ದೀರ್ಘಾವಧಿಯವು. ಬ್ಯಾಂಕಿನಿಂದ ಪಡೆದ ಅಲ್ಪಾವಧಿ ಋಣವೂ ಸಾಲದಾತರಿಂದ (ಕ್ರೆಡಿಟರ್) ಸಾಲ ಪಡೆದ ಸರಕುಗಳ ಹಣವೂ ಚಾಲ್ತಿ ಜವಾಬ್ದಾರಿಗಳಿಗೆ ಉದಾಹರಣೆ. ಒಂದು ಹಣಕಾಸಿನ ಅವಧಿಗೆ ಸಂಬಂಧಿಸಿದ್ದರೂ ಆ ಅವಧಿಯ ಅಂತ್ಯದಲ್ಲಿ ಇನ್ನೂ ಕೊಡದಿರುವ ಖರ್ಚುಗಳೂ ಮುಂಗಡವಾಗಿ ಪಡೆದ ಲಾಭಗಳೂ ಜವಾಬ್ದಾರಿಗಳೇ. ಇವನ್ನೆಲ್ಲ ಆಸ್ತಿ ಜವಾಬ್ದಾರಿ ತಃಖ್ತೆಯ ಎಡಪಾಶರ್್ವದಲ್ಲಿ ತೋರಿಸಬೇಕು.

ಸಾಮಾನ್ಯವಾಗಿ ಒಂದು ಸಂಸ್ಥೆಯ ಒಟ್ಟು ಆಸ್ತಿಗಳ ಮೊಬಲಗು ಅದರ ಜವಾಬ್ದಾರಿಗಳ ಮೊಬಲಿಗಿಗಿಂತ ಹೆಚ್ಚಾಗಿರುತ್ತದೆ. ಅದರ ಜವಾಬ್ದಾರಿ (ಹೊಣೆ) ಗಳಿಗಿಂತ ಅದರ ಆಸ್ತಿ ಎಷ್ಟು ಅಧಿಕವಾಗಿರುತ್ತದೋ ಅಷ್ಟು ಅದರ ಬಂಡವಾಳವೆಂದು ಸ್ಥೂಲವಾಗಿ ಹೇಳಬಹುದು. (ಬಂಡವಾಳ)