ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಆಸ್ಪತ್ರೆ

ವಿಕಿಸೋರ್ಸ್ದಿಂದ

ನುರಿತ ವೈದ್ಯರೂ ಸಿಬ್ಬಂದಿಯೂ ಇದ್ದು ಆರೋಗ್ಯ ಕೆಟ್ಟವರ, ಗಾಯವಾದವರ ರೋಗವನ್ನು ಕಂಡುಕೊಂಡು ಬೇಕಿರುವಷ್ಟು ದಿನ ಚಿಕಿತ್ಸೆ ಆರೈಕೆಗಳನ್ನು ಒದಗಿಸುವ ಸ್ಥಳ (ಹಾಸ್ಪಿಟಲ್). ಚಿಕಿತ್ಸಾಲಯ (ಕ್ಲಿನಿಕ್), ಔಷಧಶಾಲೆಗಳು (ಡಿಸ್ಪೆನ್ಸರಿಗಳು) ದಿನವೂ ನಡೆದು ಮನೆಗೆ ಹಿಂದಿರುಗಲು ಸಾಧ್ಯವಿರುವ ರೋಗಿಗಳಿಗೆ ಮಾತ್ರ. ಅಶಕ್ತಪೋಷಕಶಾಲೆಯಲ್ಲಿ ಅಷ್ಟಾಗಿ ಚಿಕಿತ್ಸೆಯ ಏರ್ಪಾಡಿಲ್ಲದಿದ್ದರೂ ಅದು ರೋಗದಿಂದ ಚೇತರಿಸಿಕೊಳ್ಳುವವರಿಗೆ, ಮುದುಕರಿಗೆ, ಭಿಕ್ಷುಕರಿಗೆ, ಇತರ ದುರ್ಬಲರಿಗೆ ರಕ್ಷಣಾಗೃಹವಾಗಿದೆ. ಲ್ಯಾಟಿನ್ ಮೂಲ ಪದ ಹಾಸ್ಪಿಷಿಯಮ್ನಿಂದ (ಸತ್ಕಾರದ ಮನೆ, ಅತಿಥಿ ಮಂದಿರ), ಹಾಸ್ಪಿಟಲ್ (ಸತ್ಕಾರ) ಬಂದಿದೆ. ಇದೇ ಅರ್ಥ ಕೊಡುವ ಹಾಸ್ಪೀಸ್, ಹೋಪಿಟಲ್, ಹೋಟೆಲ್, ಸ್ಪಿಟಲ್, ಹಾಸ್ಟಲ್ ಪದಗಳೆಲ್ಲಕ್ಕೂ ಮೂಲತಃ ಅತಿಥಿಗಳು ಎಂಬ ಒಂದೇ ಅರ್ಥವಿದ್ದರೂ ಈಗ ಅವಕ್ಕೆ ಬೇರೆ ಬೇರೆ ಅರ್ಥವಿದೆ. ಸತ್ಕಾರವೆಂಬ (ಹಾಸ್ಪಿಟ್ಯಾಲಿಟಿ) ಪದದಿಂದ ಕೊನೆಗೆ ಸತ್ಕಾರ, ಆರೈಕೆ ಮಂದಿರ (ಹಾಸ್ಪಿಟಲ್) ಆಯಿತು. ಯಾತ್ರಿಕರೂ, ದಾರಿಹೋಕರೂ ತಂಗಲು ಕ್ರೈಸ್ತ ಧರ್ಮಕರ್ತರು ರೋಮನ್ ಚಕ್ರಾಧಿಪತ್ಯದಲ್ಲಿ ಛತ್ರಗಳನ್ನು (ಹಾಸ್ಪೀಸ್) ಮೊತ್ತಮೊದಲು ಏರ್ಪಡಿಸಿದ್ದರು.

ಚರಿತ್ರೆ[ಸಂಪಾದಿಸಿ]

ಆರೋಗ್ಯ ಕೆಟ್ಟವರನ್ನು ಬೇರೊಂದು ಮಂದಿರದಲ್ಲಿಟ್ಟು ಆರೈಕೆ ಮಾಡುವ ಹಂಚಿಕೆ ಮೊದಲು ಎಲ್ಲಿ ಹೇಗೆ ಹುಟ್ಟಿತೆಂದು ಹೇಳುವುದು ಕಷ್ಟ. ಆದಿಯಿಂದಲೂ ಮತ, ಪುಜೆ ಪುನಸ್ಕಾರಗಳೊಡನೆ ರೋಗಗಳ ಚಿಕಿತ್ಸೆ ಸೇರಿಕೊಂಡಿದೆ. ಪುರ್ವದಲ್ಲಿ ಅರ್ಚಕರೇ ವೈದ್ಯರಾಗಿ ಆತ್ಮ, ಮನಸ್ಸು, ಕಾಯಗಳ ಚಿಕಿತ್ಸೆಗಳನ್ನು ಪುಜೆ, ಬಲಿ, ಮಂತ್ರ, ಮದ್ದುಗಳಿಂದ ನಡೆಸುತ್ತಿದ್ದರು. ಭಾರತದಲ್ಲಿ ಇವರಿಗೆ ಅಥರ್ವಣರು ಎಂಬ ಹೆಸರಿತ್ತು. ಪ್ರ.ಶ.ಪು. 4000ದ ಹೊತ್ತಿಗೆ ಕೆಲವು ಮತಗಳಲ್ಲಿ ಒಂದೊಂದು ರೋಗಕ್ಕೂ ಒಬ್ಬೊಬ್ಬ ದೇವರನ್ನು ಪುಜಿಸುತ್ತಿದ್ದರು. ಶನಿ, ಮತ್ತು ಹೈಜಿಯ (ಈಸ್ಕುಲೇಪಿಯಸ್) ದೇವತೆಗಳಿಗಾಗಿ ಕಟ್ಟಿದ ದೇಗುಲಗಳು ವಿಶ್ರಾಂತಿಗೃಹ ಅಥವಾ ಚಿಕಿತ್ಸಾಮಂದಿರಗಳಾಗಿದ್ದುವು. ಮುಂದುವರಿದ ದೇಶಗಳಲ್ಲಿನ ಆಸ್ಪತ್ರೆಗಳು ಬಹುವಾಗಿ ಕ್ರೈಸ್ತಮತದವು. ಗ್ರೀಸ್, ಈಜಿಪ್ಟ್, ಬ್ಯಾಬಿಲೋನಿಯ, ಭಾರತಗಳಲ್ಲಿ ಹಿಂದಿನ ಕಾಲದಲ್ಲಿ ಈ ರೀತಿಯ ಮಂದಿರಗಳಿದ್ದುದಕ್ಕೆ ಆಧಾರಗಳಿವೆ. ರಾಜ್ಯದಲ್ಲಿ ಎಲ್ಲೆಡೆಗಳಲ್ಲೂ ಆಸ್ಪತ್ರೆಗಳಾದುದು ಮೊತ್ತಮೊದಲು ಭಾರತದಲ್ಲಿ ಎಂದು ತಿಳಿದುಬಂದಿದೆ. ಪ್ರಶ.ಪು. 500ರ ಹೊತ್ತಿಗೆ, ಸುಶ್ರುತ ಮತ್ತು ಚರಕ ಸಂಹಿತೆಗಳ ಪ್ರಕಾರ ಚಿಕಿತ್ಸಾಲಯಗಳೂ ಮಠಗಳೂ ಇದ್ದುವು. ಪ್ರ.ಶ.ಪು. 300ರ ಹೊತ್ತಿಗೆ ಚಿಕಿತ್ಸಾಲಯಗಳು ಇದ್ದುದರ ಸಂಗತಿ ಅಶೋಕನ ಶಾಸನಗಳಿಂದ ತಿಳಿಯುತ್ತದೆ. ಸು. 402ರಲ್ಲಿ ಸುಮಾರಿಗೆ ಭಾರತಕ್ಕೆ ಬಂದ ಚೀನೀ ಯಾತ್ರಿಕ ಫಾಹಿಯಾನ್ ಹಲವು ಕಡೆಗಳಲ್ಲಿ ಆಸ್ಪತ್ರೆಗಳನ್ನು ಕಂಡಿದ್ದನ್ನು ವಿವರಿಸಿದ್ದಾನೆ. ಪ್ರ.ಶ.ಪು.5ನೆಯ ಶತಮಾನದಲ್ಲಿ ಸಿಲೋನಿನಲ್ಲಿ ಆಸ್ಪತ್ರೆಗಳಿದ್ದುವು.

ರೋಗಿಮಂದಿರಗಳೆಂಬ (ವೇಲಿಟ್ಯೊಡಿನೇರಿಯ) ಆಗಿನ ಕಾಲದ ಸೇನೆಯ ಆಸ್ಪತ್ರೆಗಳು ರೋಮನ್ನರಲ್ಲಿದ್ದುವು. ಡುಸೆಲ್ಡಾರ್ಫಿನ ಬಳಿ ಪ್ರ.ಶ. 100ರಲ್ಲಿದ್ದ ಒಂದರಲ್ಲಿ ಇಂದಿನವಂತೆ ಕೋಣೆಗಳ ಬಾಗಿಲುಗಳು ಪಡಸಾಲೆಗೆ ತೆರೆಯುತ್ತಿದ್ದವು. 335ರಲ್ಲಿ ಕಾನ್ಸ್ಪಾಂಟೈನಿನ ಅಪ್ಪಣೆಯ ಮೇರೆಗೆ ಇವನ್ನು ಮುಚ್ಚಿದರೂ ಮುಂದೆ ಅವೇ ಕ್ರಿಸ್ತರ ಆಸ್ಪತ್ರೆಗಳಾಗಿ ತೆರೆಯಲ್ಪಟ್ಟವು. ಅರಬ್ಬೀ ವೈದ್ಯಶಾಲೆಗಳೊಂದಿಗೆ ಸೇರಿದಂತೆ ಹಲವಾರು ದೊಡ್ಡ ಆಸ್ಪತ್ರೆಗಳಿದ್ದುವು. ಕ್ರಿಸ್ತನ ಅನಂತರ 400 ವರ್ಷಗಳವರೆಗೆ ದಾರಿಗರು, ಯಾತ್ರಿಕರು, ದಿಕ್ಕಿಲ್ಲದವರು, ವಯಸ್ಸಾದವರು, ಆಕಸ್ಮಿಕಗಳಲ್ಲಿ ನೊಂದವರು-ಇಂಥವರಿಗೆ ಮಾತ್ರ ಕ್ರೈಸ್ತರು ಆಸ್ಪತ್ರೆಗಳನ್ನು ಕಟ್ಟಿ ಅನ್ನಾಹಾರ, ನೆರಳುಗಳನ್ನು ಒದಗಿಸುತ್ತಿದ್ದರು. 400ರ ಹೊತ್ತಿಗೆ ರೋಮನ್ ಚಕ್ರಾಧಿಪತ್ಯದ ಕ್ರೈಸ್ತಮಠಗಳಲ್ಲಿ ಕುಷ್ಠರಿಗೆ, ಹೆಳವರಿಗೆ, ದರಿದ್ರ ರೋಗಿಗಳಿಗೆ ಆಸ್ಪತ್ರೆಗಳ ಸ್ಥಾಪನೆಯಾಯಿತು. 542ರಲ್ಲಿ ಫ್ರಾನ್ಸಿನ ಲಯನ್್ಸ ಪಟ್ಟಣಗಳಲ್ಲಿ ರೋಗಿಗಳ ಆರೈಕೆಯಾಗಿ ಹೊಟೆಲ್ ಡಯು (ದೇವರ ಹೋಟಲು) ಸ್ಥಾಪನೆಯಾಯಿತು. ಇದೇ ತೆರನ ಆಸ್ಪತ್ರೆಗಳು ಎಲ್ಲೆಲ್ಲೂ ಹರಡಿದುವು. ಫ್ರಾನ್ಸಿನಲ್ಲಿ ಹಲವಾರು ಪಟ್ಟಣಗಳ ದೊಡ್ಡ ಆಸ್ಪತ್ರೆಗಳಿಗೆ ಈಗಲೂ ಇದೇ ಹೆಸರಿದೆ. ಇಟಲಿಯಲ್ಲಿ ಬಲು ಹಳೆಯ ಆಸ್ಪತ್ರೆಯಾದ ಸಿಯನದ ಸಾಂತ ಮೇರಿಯ ಡೆಲ್ಲ ಸ್ಕೇಲ 898ರಲ್ಲಿ ಸ್ಥಾಪನೆಯಾಯಿತು. ಅರೇಬಿಯ ರಾಜ್ಯಕ್ಕೆ ಸೇರಿದ್ದ ಸ್ಪೇನ್, ಉತ್ತರ ಆಫ್ರಿಕ, ಪಶ್ಚಿಮ ಏಷ್ಯಗಳಲ್ಲಿ ಅರಬ್ಬೀ ಆಸ್ಪತ್ರೆಗಳು ಹರಡಿದುವು. ಇವು ಬಹುವಾಗಿ ಭಾರತದ ಸಂಪರ್ಕದಿಂದ ಬಂದವು. ಆಗಾಗ ನಡೆಯುತ್ತಿದ್ದ ಯುದ್ಧಗಳು ವೈದ್ಯಶಾಲೆಗಳ ಮತ್ತು ವೈದ್ಯವಿಜ್ಞಾನದ ಪ್ರಗತಿಗೆ ಕಾರಣಗಳಾದುವು. ಗಾಯಗಳ ಚಿಕಿತ್ಸೆಯಿಂದ ಶಸ್ತ್ರವೈದ್ಯ ಬೆಳೆಯಲು ಹೆಚ್ಚು ಅವಕಾಶ ಒದಗಿತು. ಭಾರತದಲ್ಲಿ ಧನ್ವಂತರಿ ಎಂಬ ಹೆಸರು ಯುದ್ಧಗಳಲ್ಲಿ ನಾಟಿಕೊಂಡ ಬಾಣಗಳ ಅಲಗುಗಳನ್ನು ತೆಗೆಯುವ ಪ್ರವೀಣನಿಗೆ ಮೊದಲು ಬಂದ ಹೆಸರೆಂಬ ಪ್ರತೀತಿಯಿದೆ. ಸೈನ್ಯಗಳಲ್ಲಿ ವೈದ್ಯರು ರೋಗಿಗಳನ್ನು ವ್ಯಾಧಿಗಳಿಗೆ ತಕ್ಕಂತೆ ವಿಂಗಡಿಸಿ ಹಲತೆರನಾದ ಯುಕ್ತ ಚಿಕಿತ್ಸೆಗಳನ್ನು ಕೊಡಲು ಕ್ರಮೇಣ ಕಲಿತರು. ಸೈನಿಕ ಆಸ್ಪತ್ರೆಗಳು ವೈದ್ಯಕ್ಕೆ ಸಂಬಂಧಿಸಿದ ತಿಳಿವು, ತಂತ್ರ, ಆರೈಕೆ, ಮೇಲ್ವಿಚಾರಣೆಗಳಿಗೆ ತೌರುಮನೆ ಗಳಾದುವು. 1000-1400ರ ಹೊತ್ತಿಗೆ ಗಾಯಗೊಂಡವರಿಗೆ ವಿಶ್ರಾಂತಿ ಶಾಲೆಗಳೇರ್ಪಟ್ಟುವು. 14ನೆಯ ಶತಮಾನದಲ್ಲಿ ಪ್ಲೇಗು ಹರಡಿದ್ದರಿಂದ ಇನ್ನಷ್ಟು ಆಸ್ಪತ್ರೆಗಳಾದುವು. ಸಾರ್ವಜನಿಕವಾಗಿದ್ದ ಹಾಸ್ಪಿಷಿಯಂಗಳು ಮೊದಲು ಮತನಿಬಂಧನೆಯನ್ನು ಹೊಂದಿರಲಿಲ್ಲ. ಬರಬರುತ್ತ ಇವುಗಳಲ್ಲಿ ಮತೀಯ ಸಂಘಗಳು ಪಾಲುಗೊಂಡುವು.

ಮೊದಲು ಆಸ್ಪತ್ರೆಗಳಿಗೆ ನಿರ್ಗತಿಕರು ಹೆಚ್ಚಾಗಿ ಹೋಗುತ್ತಿದ್ದರು. ಕ್ರೈಸ್ತಮತದಲ್ಲಿ ರೋಗಿಗಳ ಆರೈಕೆಗೆ ಹೆಚ್ಚು ಗಮನ ದೊರೆಯುತ್ತ ಬಂದು ಪ್ರಪಂಚದಲ್ಲೆಲ್ಲ ಮಿಷನರಿ ಆಸ್ಪತ್ರೆಗಳಾಗುತ್ತ ಬಂದುವು. 1123ರಲ್ಲಿ ಲಂಡನ್ನಿನಲ್ಲಿ ಸಂತ ಬಾರ್ತೊಲೊಮ್ಯೊ ಆಸ್ಪತ್ರೆಯ ಸ್ಥಾಪನೆಯಾಯಿತು. ಆಗಲೇ ಇಂಗ್ಲೆಂಡಿನಲ್ಲಿ 18 ಆಸ್ಪತ್ರೆಗಳಿದ್ದುವಂತೆ. ಹಣವಿದ್ದವರೇನೋ ವೈದ್ಯರು, ಔಷಧ ವ್ಯಾಪಾರಿಗಳು, ರಕ್ತತೆಗೆದುಹಾಕುವ ಶಸ್ತ್ರವೈದ್ಯರಿಂದ ಚಿಕಿತ್ಸೆಗಳನ್ನು ತಮ್ಮ ಮನೆಗಳಲ್ಲೇ ಹೊಂದುತ್ತಿದ್ದರು. ಸಂತ ಥಾಮಸನ ಆಸ್ಪತ್ರೆ ಲಂಡನ್ನಿನಲ್ಲಿ ತೆರೆದ ಹೊತ್ತಿಗೆ ಇಂಗ್ಲೆಂಡಿನಲ್ಲಿ 170 ಆಸ್ಪತ್ರೆಗಳಿದ್ದುವಂತೆ. 1155ರಲ್ಲಿ ಸಂತ ಅಗಸ್ಟೈನ್ ನನ್್ಸ ಎಂಬ ಮೊದಲ ಶುಶ್ರೂಷಾ (ದಾದಿಯರ) ವ್ಯವಸ್ಥೆ ಮೊದಲಾಯಿತು. 1400ರ ತರುವಾಯ ಅಂಧಕಾರ (ಮೂಢ ನಂಬಿಕೆ) ಯುಗ ತೊಲಗಿ ತಿಳಿವಳಿಕೆ ಮರುಹುಟ್ಟಿದಾಗ, ವೈದ್ಯದಲ್ಲಿ ವಿಜ್ಞಾನದ ಮಹತ್ತ್ವಕ್ಕೆ ಮನ್ನಣೆ ದೊರೆಯಲು ಮೊದಲಾಯಿತು. ಇಂಗ್ಲೆಂಡಿನಲ್ಲಿ ಮತವಿರುದ್ಧ ನಡೆಸಿದ ಪುನರ್ಯೋಜನೆಯಲ್ಲಿ ಸಂತ ಬಾಲ್ತೊಲೊಮ್ಯೊ ಆಸ್ಪತ್ರೆಗೆ ಪುದುವಟ್ಟನ್ನು ಒದಗಿಸಿ ಮೊದಲ ಬಾರಿ ಮತ ಸಂಬಂಧವಿಲ್ಲದೆ ಸರ್ಕಾರದಿಂದ ನೆರವನ್ನು ಆಸ್ಪತ್ರೆಗೆ ಒದಗಿಸಿದ ಹಿರಿಮೆ 8ನೆಯ ಹೆನ್ರಿಯದು.

18ನೆಯ ಶತಮಾನದಲ್ಲಿ ವೈಜ್ಞಾನಿಕ ಪ್ರಗತಿಯ ಫಲ ಆಸ್ಪತ್ರೆಗಳಲ್ಲಿ ಬಳಕೆಗೆ ಬರಲಾರಂಭಿ ಸಿತು. ಸಿಡುಬು ತಡೆಯಲು ದೇವಿ ಹಾಕುವುದನ್ನು ಜೆನ್ನರ್ ಇಂಗ್ಲೆಂಡಿನಲ್ಲಿ ಜಾರಿಗೆ ತಂದ (1796) ಹಾಗೆಯೇ ಮನೋರೋಗಿಗಳನ್ನು ಕಟ್ಟಿಹಾಕುವ ಪದ್ಧತಿ ಫ್ರಾನ್ಸಿನಲ್ಲಿ ರದ್ದಾಯಿತು (1798).

ನಂಜುರೋಧಕ (ಆ್ಯಂಟಿಸೆಪ್ಟಿಕ್), ನಂಜಿರದ (ಎಸೆಪ್ಟಿಕ್) ಶಸ್ತ್ರವೈದ್ಯ 19ನೆಯ ಶತಮಾನ ದಲ್ಲಿ ಜಾರಿಗೆ ಬಂದಂದಿನಿಂದ ಇಂದಿನ ಆಸ್ಪತ್ರೆಗಳ ಚರಿತ್ರೆ ಕಾಲಿಟ್ಟಿತು. ಅಂದಿನಿಂದ ಅವು ಕೇವಲ ಬೇನೆಬಿದ್ದಿರುವ ಬಡವರ, ಗತಿಗೆಟ್ಟವರ ಸತ್ರಗಳಾಗದೆ ಎಲ್ಲ ತೆರನ ಜನರಿಗೆ ಎಲ್ಲ ಬಗೆಯ ರೋಗಗಳ ಚಿಕಿತ್ಸೆಗಳ ವೈದ್ಯಕೇಂದ್ರಗಳಾದುವು. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಹೆಚ್ಚಿನ ಮುನ್ನಡೆ ಕಂಡಿತು. ಯುರೋಪಿನಲ್ಲೂ ಹೀಗೇ ಆಯಿತು. ವೃದ್ಧರು, ಹೆಳವರು, ಅಂಗವಿಕಲರು, ಬಡರೋಗಿಗಳು ಮತ್ತು ಸಾಂಕ್ರಾಮಿಕ ರೋಗಿಗಳಿಗೆ ಸರ್ಕಾರಿ ಕಟ್ಟಡಗಳಾ ದುವು. ಚರ್ಚಿಗೆ ಸೇರಿದ ಆಸ್ಪತ್ರೆಗಳು ಮುಖ್ಯವಾಗಿ ಬಡ ರೋಗಿಗಳಿಗೆ ಮಾತ್ರ ಆಗಿದ್ದವು. ಅನುಕೂಲಸ್ಥರಿಗೆ ಮನೆಗಳಲ್ಲೇ ಚಿಕಿತ್ಸಾಲಯಗಳುಳ್ಳ ಖಾಸಗಿ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿತ್ತು.

ಸೇನೆಯ ಆಸ್ಪತ್ರೆಗಳು[ಸಂಪಾದಿಸಿ]

ಇವು ಆಸ್ಪತ್ರೆಗಳ ಹಾಗೂ ವೈದ್ಯದ ಚರಿತ್ರೆಯನ್ನೇ ಬದಲಾಯಿಸಿ ದುವು. ಕ್ರಿಸ್ತಪುರ್ವದಲ್ಲೇ ಸೈನಿಕ ಶಸ್ತ್ರವೈದ್ಯರಿದ್ದರು. ಮಧ್ಯ ಯುಗದಲ್ಲಿ ಸೈನ್ಯ ಹಾದುಹೋಗುವ ದಾರಿಗಳಲ್ಲಿ ಗಾಯಗೊಂಡವರಿಗೆ ವಿಶ್ರಾಂತಿಮನೆಗಳಾಗಿ ಮತದ ಪ್ರಭಾವವುಳ್ಳ ಆಸ್ಪತ್ರೆಗಳಾದುವು. ಗಾಯಗಳ ಚಿಕಿತ್ಸೆಯಿಂದ ಹೊಸ ಶಸ್ತ್ರವೈದ್ಯ ಪದ್ಧತಿಗಳೂ ವಿಧಾನಗಳೂ ಹುಟ್ಟಿದುವು. ಕದನಗಳಲ್ಲಿ ಶಸ್ತ್ರವೈದ್ಯವಾಗಬೇಕಿದುದ್ದರಿಂದ, ಮದ್ದುಕೊಡುವ ಸೈನ್ಯದ ವೈದ್ಯರು ಮಾತ್ರ ಗಮನಿಸಬೇಕಿರುವವರನ್ನು ಬೇರ್ಪಡಿಸಲಾಯಿತು.

ಕ್ರೀಮಿಯ ಯುದ್ಧದಲ್ಲಿನ ಬ್ರಿಟಿಷ್ ಸೈನ್ಯದಲ್ಲಿ ಸ್ವಯಂಸೇವಕ ದಾದಿ ಫ್ಲಾರೆನ್್ಸ ನೈಟಿಂಗೇಲ್ (ನೈಟಿಂಗೇಲ್ ಫ್ಲಾರೆನ್ಸ್) ವೈಜ್ಞಾನಿಕ ವೈದ್ಯ, ಮಾನವೀಯತೆ ಸೇರಿದ ಶುಶ್ರೂಷೆಯನ್ನು 1854ರಲ್ಲಿ ಮೊದಲು ಮಾಡಿ ತೋರಿದಳು. ಆಕೆಯ ಸಿದ್ಧಾಂತಗಳು ಮೂಲಸೂತ್ರಗಳು ಬೇಗನೆ ಪ್ರಪಂಚದಲ್ಲೆಲ್ಲ ಹರಡಿದುವು. 1924ರಿಂದ ಆಕೆಯ ಹುಟ್ಟುದಿನವಾದ ಮೇ 12ನೆಯ ತಾರೀಖನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ, ರಾಷ್ಟ್ರೀಯ ಆಸ್ಪತ್ರೆ ದಿನ ಎಂದು ನಾಡಹಬ್ಬವಾಗಿ ಆಚರಿಸುತ್ತ ಬಂದಿದ್ದಾರೆ. ಆಕೆಯ ಪ್ರಭಾವದಿಂದ 1863ರಲ್ಲಿ ಹುಟ್ಟಿಕೊಂಡ ರೆಡ್ ಕ್ರಾಸ್ ಸಂಸ್ಥೆ (ನೋಡಿ) ಬೆಂಕಿ, ಪ್ರವಾಹ, ಕ್ಷಾಮ ಮತ್ತು ಸೈನ್ಯ ಬಿಡಾರಗಳಿಂದ ಊರಿನ ಜನಕ್ಕೆ ಉಪದ್ರವ ಉಂಟಾದಾಗ ಆಸ್ಪತ್ರೆ ಸೇವೆಗಳನ್ನು ಸಲ್ಲಿಸಿದೆ.

ಎರಡು ಮಹಾಯುದ್ಧಗಳು ಮುಗಿವ ವೇಳೆಗೆ ಆಸ್ಪತ್ರೆಗಳಲ್ಲಿನ ಸೇವೆ ಮತ್ತಷ್ಟು ಉತ್ತಮವಾಯಿತು. ಹೀಗಾದ ಹೆಚ್ಚಿನ ಮುನ್ನಡೆಗಳಲ್ಲಿ ಮುಖ್ಯವಾದವಿವು :

  1. ಮನೆ, ಸೇನಾಡೇರೆ, ಹಡಗು, ರೈಲು, ಪ್ರಥಮ ಚಿಕಿತ್ಸೆಯ ಗಾಡಿ , ವಿಮಾನ, ಜಲಾಂತರ್ಗಾಮಿ (ನೀರಾಳನಾವೆ, ಸಬ್ಮೆರೀನ್)-ಹೀಗೆ ಎಲ್ಲದರಲ್ಲೂ ಒಳ್ಳೆಯ ವೈದ್ಯಕೀಯ ನೆರವನ್ನು ಕೊಡಬಹುದೆನಿಸಿತು.
  2. ವೈದ್ಯರೂ ದಾದಿಯರೂ ಮದ್ದುಗಳೊಂದಿಗೆ ಮೋಟಾರು ಗಾಡಿಗಳಲ್ಲಿ ಸುತ್ತಾಡುವ ಆಸ್ಪತ್ರೆಗಳು ಬಂದುವು.
  3. ಗುಣಮುಖವಾಗುತ್ತಿರುವ ರೋಗಿಗಳನ್ನು ಒಟ್ಟೊಟ್ಟಾಗಿ ಬಹುದೂರ ಸಾಗಿಸುವುದು ಹಿಂದೆ ಸಾಧ್ಯವಿಲ್ಲ ಎಂದಿದ್ದುದು ಸಾಧ್ಯವೆನಿಸಿತು.
  4. ಅಂಟುರೋಗಗಳ ನಿಯಂತ್ರಣ ಬಲುಮಟ್ಟಿಗೆ ಸಾಧ್ಯವಾಗಿ ಸೈನಿಕರಲ್ಲದ ಸಾಮಾನ್ಯರಿಗೂ ದೊರೆಯಿತು.

ರೋಗಗಳ ಪ್ರಕಾರ ಆಸ್ಪತ್ರೆಗಳಲ್ಲಿ ಬಲುಮಟ್ಟಿಗೆ ಎಲ್ಲ ತೆರನ ರೋಗಗಳಿಗೂ ಮದ್ದು, ಆರೈಕೆ, ಶಸ್ತ್ರಕ್ರಿಯೆಗಳನ್ನು ಮಾಡುವ ಸಾಮಾನ್ಯ (ಜನರಲ್) ಆಸ್ಪತ್ರೆಗಳು, ವಿಶೇಷ ಆಸ್ಪತ್ರೆಗಳು ಇವೆ. ಹೆರಿಗೆ ಮತ್ತು ಹೆಂಗಸರು, ಮಕ್ಕಳು, ಕಣ್ಣು, ಕ್ಷಯ, ಮನೋರೋಗ, ಸಾಂಕ್ರಾಮಿಕಗಳು ಇವುಗಳಿಗೆ ಸಂಬಂಧಿಸಿದವು ಇಂಥ ವಿಶೇಷ ಆಸ್ಪತ್ರೆಗಳು. 1940ರಿಂದ ಈಚೆಗೆ ಇವುಗಳಲ್ಲಿ ಕೆಲವಂತೂ ಸಾಮಾನ್ಯ ಆಸ್ಪತ್ರೆಗಳಲ್ಲೇ ಬೇರೆ ಭಾಗಗಳಾಗಿವೆ. ಅಮೆರಿಕ ಸಂಯುಕ್ತ ಸಂಸ್ಥಾನಗಳನ್ನು ಬಿಟ್ಟರೆ ಮಿಕ್ಕ ದೇಶಗಳಲ್ಲಿ ಸರ್ಕಾರಿ ಆಸ್ಪತ್ರೆಗಳೇ ಹೆಚ್ಚು.. ಪ್ರಪಂಚದ ಆಸ್ಪತ್ರೆಗಳಲ್ಲಿ ನೂರಕ್ಕೆ 5ರಷ್ಟು ಖಾಸಗಿ ಸಂಸ್ಥೆಗಳವು.

ಕಿಂಗ್ ಎಡ್ವರ್ಡನ ಆಸ್ಪತ್ರೆ ಇಂಗ್ಲೆಂಡಿನಲ್ಲಿ ಮೊತ್ತಮೊದಲು ಸ್ಥಾಪನೆಗೊಂಡ ಲಾಭರಹಿತ ಆಸ್ಪತ್ರೆ (1897) ಮೊದಲು ರಾಜಮನೆತನದವರಿಂದಲೂ ಹಣವಂತರಿಂದಲೂ ನಿಧಿ ಸಂಗ್ರಹವಾಯಿತು. ಅದೇ ಪರಂಪರೆ ಇಂದಿಗೂ ಬೆಳೆದು ಬಂದಿದೆ. ಸಂಯುಕ್ತ ಸಂಸ್ಥಾನಗಳಲ್ಲಿ ಧರ್ಮಾರ್ಥ ಆಸ್ಪತ್ರೆಗಳನ್ನು ಚರ್ಚು, ಇತರ ಮತೀಯ ಗೌರವ ಸಂಸ್ಥೆಗಳು ಮುಂತಾದುವು ನಡೆಸುತ್ತಿವೆ. ಇಲ್ಲಿ ಸಾಮಾನ್ಯವಾಗಿ ವೈದ್ಯರ ಸೇವೆ ಗೌರವಾರ್ಥವಾಗಿದೆ.

ಇಂಗ್ಲೆಂಡಿನಲ್ಲಿ[ಸಂಪಾದಿಸಿ]

ಬ್ರಿಟಿಷ್ ಆಸ್ಪತ್ರೆಗಳು 1948ರಲ್ಲಿ ಸರ್ಕಾರದ ರಾಷ್ಟ್ರೀಯ ಸಾಮಾಜಿಕ ಆರೋಗ್ಯಸೇವೆಗೆ ಒಳಗಾದುವು. ಇದರಲ್ಲಿ ಮದ್ದುಗಳಿಂದಾಗುವ ಚಿಕಿತ್ಸೆ, ಹಲ್ಲುಚಿಕಿತ್ಸೆ, ಮದ್ದುಗಳು, ರೋಗಿಗಳು ಚೇತರಿಸಿಕೊಳ್ಳುವ ವಿಭಾಗಗಳು ಸೇರಿದುವು. ತಾವಾಗಿ ನಡೆಸುವ ಆಸ್ಪತ್ರೆಗಳನ್ನು ನಡೆಸಲು ಜನಸೇವೆಯ ಕೈಗಾರಿಕೆಯ ವೈದ್ಯಸದಸ್ಯರಿರುವ ಸಮಿತಿಗಳಿವೆ. ಇವು ರಾಷ್ಟ್ರದ ಆರೋಗ್ಯ ಸಚಿವ ಖಾತೆಗೆ ಸೇರಿದವು. ರಾಷ್ಟ್ರೀಯ ಆರೋಗ್ಯ ಮಸೊದೆಯಿಂದ (ಜುಲೈ 7, 1948) ಖಾಸಗಿ ಆಸ್ಪತ್ರೆಗಳ ಆಡಳಿತ ಸಹಕಾರಯುತವಾಯಿತು. ಖರ್ಚುಗಳನ್ನು ನೋಡಿಕೊಳ್ಳಲು ಬೇರೆ ಅಧಿಕಾರಿ ಇರುತ್ತಾನೆ. ಸಮಿತಿಗಳು ಈ ಅಧಿಕಾರಿಗಳಿಗೆ ಆಡಳಿತದ ಸಲಹೆಗಳನ್ನು ಕೊಡುತ್ತವೆ. ಒಟ್ಟು 14 ಪ್ರದೇಶ ಸಮಿತಿಗಳಿವೆ. ವೈದ್ಯಶಾಲೆಗಳಿಗೆ ಸೇರಿದ ಆಸ್ಪತ್ರೆಗಳು ಈ ಏರ್ಪಾಡಿನಲ್ಲಿ ಸೇರಿಲ್ಲ. ಆರೋಗ್ಯ ಸಚಿವರಿಗೆ ಸಲಹೆಗಳನ್ನು ಕೊಡಲು ಒಂದು ಕೇಂದ್ರ ಆರೋಗ್ಯ ಸೇವಾಸಮಿತಿ ಇದೆ. ಈ ಸಮಿತಿಯ ಸದಸ್ಯರಿಗೂ ಸಂಬಳವಿಲ್ಲ. ವೈದ್ಯ, ಸ್ನಾತಕೋತ್ತರ ವಿದ್ಯಾರ್ಥಿಗಳ ವಿದ್ಯಾವ್ಯವಸ್ಥೆ ನೇರವಾಗಿ ಆರೋಗ್ಯ ಮಂತ್ರಿಗಳ ಕೈಕೆಳಗಿನ ಸಮಿತಿಗಳಿಗೆ ಸೇರಿದೆ.

ಆಸ್ಪತ್ರೆಗಳಲ್ಲಿ ರೋಗಿಗಳ ಚಿಕಿತ್ಸೆ ಉಚಿತ. ವೈದ್ಯ ಪರಿಣತರು ಪುರ್ಣಸರ್ಕಾರಿ ನೌಕರರು ದಿನವೂ ಸ್ವಲ್ಪ ಕಾಲ ಸೇವೆ ಸಲ್ಲಿಸುವ ತಮ್ಮವೇ ಚಿಕಿತ್ಸಾಲಯಗಳುಳ್ಳ ವೈದ್ಯರೂ ಇದ್ದಾರೆ. ರಾಷ್ಟ್ರೀಯ ಆರೋಗ್ಯದ ಮಸೊದೆಗೆ ಒಳಪಟ್ಟ ಈ ಜನಸೇವೆಗೆ ಒಬ್ಬೊಬ್ಬ ವಯಸ್ಕನಿಂದಲೂ ಹಣ ವಸೂಲಾಗಿ ಬರುತ್ತದೆ. ಸರ್ಕಾರದ ಬೊಕ್ಕಸದಿಂದಲೂ ಒದಗುತ್ತದೆ. ಈ ಮಸೊದೆಗೆ ಒಳಪಡುವ ಖಾಸಗಿ ವೈದ್ಯಶಾಲೆಗಳಲ್ಲಿ ಬಲ್ಲಿದರು ಎಂದಿನಂತೆ ದುಡ್ಡು ತೆತ್ತು ಚಿಕಿತ್ಸೆ ಪಡೆಯಬಹುದು.

ಕೆನಡದಲ್ಲಿ[ಸಂಪಾದಿಸಿ]

ರಾಷ್ಟ್ರೀಯ ಆಸ್ಪತ್ರೆ ವಿಮಾ ಯೋಜನೆಯಂತೆ, ಕೆನಡದ ಆಸ್ಪತ್ರೆಗಳಿಗೆಲ್ಲ ಹಣವನ್ನು ಒದಗಿಸಲು ಕೇಂದ್ರ ಮತ್ತು ಪ್ರದೇಶ ವ್ಯವಸ್ಥೆ 1958ರಲ್ಲಿ ಆರಂಭವಾಯಿತು. ಇದರಿಂದ ಕೇಂದ್ರ ಸರ್ಕಾರ ಪ್ರಾದೇಶಿಕ ಆಡಳಿತದ ಆಸ್ಪತ್ರೆಗಳ ಖರ್ಚುಗಳಲ್ಲಿ ಸಮಭಾಗಿಯಾ ಯಿತು. ಇದರಿಂದ ಆಸ್ಪತ್ರೆಗಳ ಒಡೆತನ, ಆಡಳಿತಗಳಿಗೆ ಅಡ್ಡಿಯಾಗಲಿಲ್ಲ. ವೈದ್ಯರ ಸಂಭಾವನೆ ಇದರಲ್ಲಿ ಸೇರಿಲ್ಲ. ಕೇಂದ್ರ ಸರ್ಕಾರದ ಈ ಯೋಜನೆಗೆ ನಾಡಿನ ತೆರಿಗೆ ಆದಾಯವೇ ಮೂಲ. ಪ್ರದೇಶ ಸರ್ಕಾರಗಳಿಗೆ ತೆರಿಗೆ ಆದಾಯ, ಆರೋಗ್ಯವಿಮೆ ಮಾಡಿದವರ, ಮತ್ತವರ ಕುಟುಂಬಗಳ ವಿಮೆ ಕಂತುಗಳ ಹಣವೇ ಆಧಾರ.

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ[ಸಂಪಾದಿಸಿ]

ಆಸ್ಪತ್ರೆಗಳ ಸಂಖ್ಯೆ 7,000, ಇವುಗಳಲ್ಲಿ ರೋಗಿಗಳಿಗಾಗಿ 16.7 ಲಕ್ಷ ಹಾಸಿಗೆಗಳಿವೆ. ವರ್ಷದಲ್ಲಿ 2.55 ಕೋಟಿ ರೋಗಿಗಳು ಸೇರಿಕೊಳ್ಳುತ್ತಾರೆ. (ಅಂದರೆ, ಸಾವಿರ ಜನರಿಗೆ 92 ಹಾಸಿಗೆಗಳಿದ್ದು ವರ್ಷವರ್ಷ 130 ರೋಗಿಗಳು ಚಿಕಿತ್ಸೆ ಪಡೆವರು. ಸಂಸ್ಥಾನಗಳಲ್ಲೆಲ್ಲ ದಿವಸಕ್ಕೆ ಸರಾಸರಿ 13.9 ಲಕ್ಷ ರೋಗಿಗಳಿರು ತ್ತಾರೆ). ಶೇ.85 ಹಾಸಿಗೆಗಳು ತುಂಬಿರುತ್ತವೆ. ಒಬ್ಬ ರೋಗಿ ಆಸ್ಪತ್ರೆಯಲ್ಲಿ ಸರಾಸರಿ 7.5 ದಿವಸಗಳಿರುತ್ತಾನೆ. ವರ್ಷದಲ್ಲಿ ಸು. 40 ಲಕ್ಷ ಹೆರಿಗೆಗಳಾಗುತ್ತವೆ. ದಾಖಲಾದ ಜನನಗಳಲ್ಲಿ ಶೇ. 94 ಆಸ್ಪತ್ರೆಗಳಲ್ಲಾಗುತ್ತವೆ. ಶೇ. 32 ಆಸ್ಪತ್ರೆಗಳು ಸರ್ಕಾರದವು. ಇವುಗಳಲ್ಲಿ ಒಟ್ಟು ಹಾಸಿಗೆಗಳ ಶೇ. 70 ರಷ್ಟು ಇಲ್ಲಿವೆ. ಆದರೆ ವರ್ಷದ ಸೇರ್ಪಡೆಗಳಲ್ಲಿ ಶೇ. 24 ರಷ್ಟು ಮಾತ್ರ ಇಲ್ಲಿ ಸೇರುವರು. ಏಕೆಂದರೆ ಮಾನಸಿಕ ರೋಗಿಗಳು ಸರಾಸರಿ 3 ವರ್ಷಗಳು, ಕ್ಷಯ ರೋಗಿಗಳು ಸು.10 ತಿಂಗಳು ಆಸ್ಪತ್ರೆಗಳಲ್ಲಿರುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 28 ಹಾಸಿಗೆಗಳಿದ್ದರೂ ಅವರಲ್ಲಿ ಶೇ. 74 ರೋಗಿಗಳು ಕೆಲವೇ ದಿವಸಗಳು ಉಳಿಯುವರು. ಬಲುಮಟ್ಟಿಗೆ ಸರ್ಕಾರಿ ಆಸ್ಪತ್ರೆಗಳು ದೊಡ್ಡವು. ಕೆಲವು ಆಸ್ಪತ್ರೆಗಳಲ್ಲಂತೂ 2,000ಕ್ಕೂ ಮೀರಿ ಹಾಸಿಗೆಗಳಿವೆ. ಆಸ್ಪತ್ರೆಗಳ ಹಣದ ವ್ಯವಸ್ಥೆ: ಸಂಯುಕ್ತ ಸಂಸ್ಥಾನಗಳಲ್ಲಿರುವ ಆಸ್ಪತ್ರೆಗಳ ಹೂಡಿಕೆ ಹಣ ಸುಮಾರು 21 ಕೋಟಿ ಡಾಲರುಗಳು. ಇದನ್ನು ನಡೆಸಲು ವರ್ಷದ ಖರ್ಚು ಸುಮಾರು ಒಂದು ಕೋಟಿ ಡಾಲರುಗಳು. ಅಂದರೆ ಜನರಲ್ಲಿ ಒಬ್ಬೊಬರಿಗೆ 57 ಡಾಲರ್ ಖರ್ಚು ಬೀಳುತ್ತದೆ. 18.4 ಲಕ್ಷ ನೌಕರರ ಸಂಬಳ ವರ್ಷಕ್ಕೆ 7.3 ಕೋಟಿ ಡಾಲರ್. ಇದು ಆಸ್ಪತ್ರೆಗಳ ಒಟ್ಟು ಖರ್ಚಿನಲ್ಲಿ 2/3 ಭಾಗ. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ 93% ರಷ್ಟು ಆದಾಯವಿದೆ. ಜನರು ಮುಂಗಡ ವಿಮೆಯ ಮೂಲಕ ಹಣಕೊಡುವ ಏರ್ಪಾಡಿನಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಖರ್ಚಿನ ವ್ಯವಸ್ಥೆ ಚೆನ್ನಾಗಿದೆ. ಸು. 14 ಕೋಟಿ ಜನ ಈ ರೀತಿ ಅನುಕೂಲ ಪಡೆದಿದ್ದಾರೆ. ಇದರಿಂದ 10.2 ಕೋಟಿ ರೋಗಿಗಳ ಶಸ್ತ್ರಕ್ರಿಯೆ, ಮದ್ದುಗಳ ಖರ್ಚಿಗೆ ನೆರವಾಗುತ್ತದೆ. ಈ ಮುಂಗಡ ಹಣ ಕೊಡುವ ಏರ್ಪಾಡು 1929ರಲ್ಲಿ ಬ್ಲೂ ಕ್ರಾಸ್ ವಿಮೆ ಯೋಜನೆಗಳಿಂದ ಮೊದಲಾಯಿತು. ಹೊರ ರೋಗಿಗಳ ಸೇವೆ ಕೆಲವು ನಗರ ಆಸ್ಪತ್ರೆಗಳಲ್ಲಿ ಒಳ ರೋಗಿಗಳಿಗಿಂತ ಹೆಚ್ಚು.. ಸಂಯುಕ್ತ ಸಂಸ್ಥಾನಗಳ ಸು. 4,000 ಆಸ್ಪತ್ರೆಗಳಲ್ಲಿ ವರ್ಷಕ್ಕೆ ಸುಮಾರು 11 ಕೋಟಿ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಆಸ್ಪತ್ರೆಗಳ ಬಳಿಯಲ್ಲೇ ತಮ್ಮವೇ ಚಿಕಿತ್ಸಾಲಯಗಳುಳ್ಳ ವೈದ್ಯರು ಹೆಚ್ಚುತ್ತಿರುವರು. ಅವರ ರೋಗಿಗಳಲ್ಲಿ ಕೆಲವರನ್ನು ಆಸ್ಪತ್ರೆಗೆ ಹೆಚ್ಚಿನ ಸೇವೆಗೆ ಕಳುಹಿಸಲು ಇದರಿಂದ ಅನುಕೂಲ.

ಆಸ್ಪತ್ರೆಗಳ ಸಹಕಾರ ವ್ಯವಸ್ಥೆ[ಸಂಪಾದಿಸಿ]

ಸಣ್ಣ ಆಸ್ಪತ್ರೆಗಳು ಬಲುಮಟ್ಟಿಗೆ ದೊಡ್ಡ ಆಸ್ಪತ್ರೆಗಳಿಂದ ವೈದ್ಯ ಪರಿಣತರ, ಸಲಕರಣೆಗಳ, ಹೆಚ್ಚಿನ ನೆರವನ್ನು ಪಡೆಯುತ್ತವೆ. ಇದರಿಂದ ಅವುಗಳಿಗೆ ಖರ್ಚು ಕಡಿಮೆ. 1946ರಲ್ಲಿ ಕಾನೂನಾದ ಆಸ್ಪತ್ರೆಗಳ ಪರಿಶೀಲನೆ. ನಿರ್ಮಾಣಗಳ ಮಸೂದೆ ಸಂಯುಕ್ತ ಸಂಸ್ಥಾನಗಳ ಕಾಂಗ್ರೆಸ್ಸು ಆಸ್ಪತ್ರೆಗಳಿಗೆ ಹೆಚ್ಚು ನೆರವು ನೀಡುವಂತೆ ವಿಧಿಸಿತು. ಇದರಿಂದ ವರ್ಷದ ಸರಾಸರಿ ಖರ್ಚು 12.5 ಕೋಟಿ ಡಾಲರುಗಳಿಗೇರಿತು. ಇದರಲ್ಲಿ 2/3 ರಷ್ಟನ್ನು ಪ್ರದೇಶ ಸರ್ಕಾರವೂ ಸ್ಥಳೀಯ ಸಂಸ್ಥೆಗಳೂ ಕೊಡುತ್ತವೆ.

1899ರಲ್ಲಿ ರೂಪುಗೊಂಡ ಅಮೆರಿಕ ಆಸ್ಪತ್ರೆಗಳ ಸಂಘ ಒಂದು ರಾಷ್ಟ್ರೀಯ ಸಂಸ್ಥೆ. ಆಸ್ಪತ್ರೆಗಳ ಆಡಳಿತದಲ್ಲಿ ಸಲಹೆ ನೀಡುವುದು, ಸಾರ್ವಜನಿಕ ಸಂಪರ್ಕ ಮುಂತಾದ ರಚನಾತ್ಮಕ ಕ್ರಿಯೆಗಳಲ್ಲಿ ಇದು ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಅಮೆರಿಕದ ಆಸ್ಪತ್ರೆ ಆಡಳಿತಗಾರರ ಸಂಘ 1933ರಲ್ಲಿ ಪ್ರಾರಂಭವಾಯಿತು. ಇದರ ಸದಸ್ಯರ ಸಂಖ್ಯೆ 3,700. ಇದು ವೈದ್ಯಕಲಿಕೆ, ಸೇವೆಗಳು ಉತ್ತಮ ಮಟ್ಟದಲ್ಲಿರುವಂತೆ ಶ್ರಮಿಸುತ್ತದೆ.

ಪ್ರಪಂಚದಲ್ಲೆಲ್ಲ ವೈದ್ಯರ, ದಾದಿಗಳ ತರಬೇತಿಗೆ ಆಸ್ಪತ್ರೆಗಳೇ ಕೇಂದ್ರಗಳು. ಸಂಯುಕ್ತ ಸಂಸ್ಥಾನಗಳಲ್ಲಿ ವೈದ್ಯಶಿಕ್ಷಣದ ಮಂಡಲಿ, ವೈದ್ಯಶಿಕ್ಷಣ ಮತ್ತು ಅಮೆರಿಕದ ವೈದ್ಯಸಂಘ ಆಸ್ಪತ್ರೆಗಳ ಆಡಳಿತಗಳ ಮೇಲ್ವಿಚಾರಣೆ ನೋಡುತ್ತವೆ. 1960ರಿಂದೀಚೆಗೆ ಮನ್ನಣೆ ಪಡೆದ ಒಂದೊಂದು ವೈದ್ಯಶಾಲೆಯೊಂದಿಗೆ ಒಂದೋ ಹೆಚ್ಚೋ ಆಸ್ಪತ್ರೆಗಳು ಸೇರಿವೆ. ಈ ತೆರನ 870 ಕಾಲೇಜುಗಳು ಆಸ್ಪತ್ರೆಗಳ ವಿದ್ಯಾರ್ಥಿನಿಲಯಗಳಲ್ಲಿರುವ ಹೊಸ ಪದವೀಧರ ವೈದ್ಯರಿಗೂ ಸ್ನಾತಕೋತ್ತರ ಪದವೀಧರರಿಗೂ ವಿಶೇಷ ವೈದ್ಯಗಳಲ್ಲಿ ತರಬೇತು ನೀಡಿದುವು. ಸಂಯುಕ್ತ ಸಂಸ್ಥಾನಗಳ ಆಸ್ಪತ್ರೆಗಳಲ್ಲಿ ಸು. 1,000 ಶಾಲೆಗಳು 1.2 ಲಕ್ಷ ದಾದಿಯರಿಗೆ ತರಬೇತು ಕೊಟ್ಟವು.

1946ರಲ್ಲಿ ಸ್ಥಾಪಿತವಾದ ಫಿಲಡೆಲ್ಫಿಯದ ಆಸ್ಪತ್ರೆಮಂಡಲಿಯಿಂದ ದೊಡ್ಡ ನಗರಗಳಲ್ಲಿ ಆಸ್ಪತ್ರೆಯ ಸೇವೆ, ಆಡಳಿತದಲ್ಲಿ ಹೊಸ ವಿಧಾನಗಳ ಶೋಧನೆ, ಖಾಸಗಿ ಸಂಸ್ಥೆಗಳೊಡನೆ ವ್ಯವಹಾರ, ದಾದಿಗಳ ತರಬೇತು, ಒಂದೇ ರೀತಿಯ ಲೆಕ್ಕಪತ್ರ, ವೈದ್ಯವೃತ್ತಿಯೊಡನೆ ಸಂಬಂಧ-ಇವುಗಳ ವಿಚಾರವಾಗಿ ಮುನ್ನಡೆಯಾಗಿದೆ.

ಆಸ್ಪತ್ರೆಗಳ ಆಡಳಿತ ಮತ್ತು ಕಾರ್ಯಕ್ರಮ[ಸಂಪಾದಿಸಿ]

ಇಂದಿನ ಆಸ್ಪತ್ರೆಗಳನ್ನು ನಡೆಸುವಲ್ಲಿ ಅನಸರಿಸುವ ಕೆಲವು ಕ್ರಮಗಳು:

  1. ಕೋಣೆಗಳಲ್ಲಿ ನಾಲ್ಕಾರು ಮಂಚಗಳಿಗೆ ಹೆಚ್ಚಿಲ್ಲದೆ ಇರುವುದರಿಂದ ಅವನ್ನು ಸಮಯಕ್ಕೆ ಬೇಕಾದ ಹಾಗೆ ವಯಸ್ಸು, ಲಿಂಗ, ರೋಗಗಳಿಗೂ ತಕ್ಕಂತೆ ಬಳಸಬಹುದು. ರೋಗಿಗಳಿಗೂ ಇಕ್ಕಟ್ಟಾಗಿರದೆ ಆರಾಮವಾಗಿರಬಹುದು.
  2. (ಹವಾನಿಯಂತ್ರಣ ವ್ಯವಸ್ಥೆಯಿಂದ) ಸದಾ ಒಂದೇ ಸಮವಾದ ತಾಪದ ಗಾಳಿಯನ್ನು ರೋಗಿಗಳಿಗೆ ಒದಗಿಸುವುದರಿಂದ, ಕ್ರಿಮಿ ಕೀಟಗಳ ಹಾವಳಿ ತಗ್ಗಿ, ರೋಗಗಳು ಬೇಗ ವಾಸಿಯಾಗುವುವು. ರೋಗಿಗಳಿಗೂ ಹಿತಕರ.
  3. ಹೆಚ್ಚು ಅಂತಸ್ತುಗಳಿಂದ ಕಟ್ಟಡದ ಖರ್ಚು ಸಲೆಯೂ ಕಡಿಮೆಯಾಗಿ ಆರೈಕೆಗಾರರು ಓಡಾಡುವ ದೂರ, ಸಮಯ ತಗ್ಗಿ ರೋಗಿಗಳ ಸೇವೆ ಇನ್ನೂ ಅಚ್ಚುಕಟ್ಟಾಗುವುದು. 15 ಅಂತಸ್ತುಗಳ ಕಟ್ಟಡ ಚಿಕಾಗೊ ನಗರದಲ್ಲಿ ಮೊದಲು (1925) ಎದ್ದಿತು.
  4. ವಿಜ್ಞಾನದ ಸಲಕರಣೆಗಳು ಬಲು ಹೆಚ್ಚಿರುವುದರಿಂದ ಹೊರರೋಗಿಗಳು ಪಡೆವ ಸೌಕರ್ಯಗಳು ಹೆಚ್ಚಿ ಅವರು ಬೇಗ ಗುಣ ಹೊಂದುವರು. ಆಸ್ಪತ್ರೆಯಲ್ಲಿ ಸೇರಿರುವವರ ಕಷ್ಟವೂ ತಗ್ಗುತ್ತದೆ.
  5. ಪುರ್ಣ ಮತ್ತು ಸ್ವಲ್ಪ ಕಾಲದ ವೈದ್ಯರು ತಂಡಗಳಲ್ಲಿ, ಆಸ್ಪತ್ರೆಯ ಸೌಕರ್ಯಗಳನ್ನು ಎಲ್ಲರ ಬುದ್ಧಿ ಅನುಭವಗಳನ್ನೂ ಒಟ್ಟಿಗೆ ಬಳಸಿಕೊಂಡು ಇನ್ನೂ ಒಳ್ಳೆಯ ಚಿಕಿತ್ಸೆಯನ್ನು ಕೊಡಬಹುದು.
  6. ದಾದಿಯರ ಶಾಲೆ, ರೋಗಿಕೋಣೆಗಳು ಆಸ್ಪತ್ರೆಯಲ್ಲೇ ಇರುವುದರಿಂದ ರೋಗಿಗಳ ಚಿಕಿತ್ಸೆ ಮತ್ತು ಚೆನ್ನಾಗಿ ನಡೆಯುತ್ತದೆ.
  7. ಸಮಾಜ ಕಾರ್ಯಕರ್ತರು ನೆರವಾಗಿ ರೋಗಿಗಳ ತೊಂದರೆಗಳನ್ನು ಕಡಿಮೆಮಾಡಿ, ಅವರ ಅಲ್ಲದೆ ಸುತ್ತಮುತ್ತಲಿನ ವಿಷಯಗಳಿಗೆ ಗಮನ ಕೊಡುತ್ತಾರೆ.
  8. ಪಟ್ಟಣಗಳಲ್ಲಿ ಆಸ್ಪತ್ರೆಗಳು ಹೆಚ್ಚುವುದರಿಂದ ರೋಗ ವಾಸಿಯಾದವರಿಗೆ ಹೆಚ್ಚು ಆರೈಕೆ ಮಾಡಲು ಅನುಕೂಲ.
  9. ಸ್ವಯಂಸೇವಕರ ಸೇವೆಯಿಂದ ಈಗ ಆಸ್ಪತ್ರೆಗಳಲ್ಲಿ ಹೆಚ್ಚು ಸೌಕರ್ಯವುಂಟು. ಸಂಯುಕ್ತ ಸಂಸ್ಥಾನಗಳಲ್ಲಿ ಈಗ 15 ಲಕ್ಷಕ್ಕೂ ಮೀರಿ ಇಂಥ ಸೇವಕರು ವಾರದಲ್ಲಿ ಕೆಲವು ದಿನಗಳು, ಕೆಲವು ತಾಸುಗಳ ಹೊತ್ತು, ಈ ಸೇವೆಯನ್ನು ಇಷ್ಟಪಟ್ಟು ಮಾಡುತ್ತಾರೆ.

ಆಸ್ಪತ್ರೆಗಳಲ್ಲಿ ಸಿಬ್ಬಂದಿ, ಸವಲತ್ತುಗಳು, ಮದ್ದುಗಳು ಸಾಕಷ್ಟಿಲ್ಲದಿದ್ದರೆ ತೊಂದರೆ. ಎಲ್ಲ ಅನುಕೂಲಗಳಿದ್ದರೂ ವೈದ್ಯರ ಅನುಭವ, ಆಡಳಿತ ಕ್ರಮ ಸರಿಯಾಗಿಲ್ಲದಿದ್ದರೆ ಆಸ್ಪತ್ರೆಯ ಸೇವೆ ಬೀಳಾಗುತ್ತದೆ. ಆದರೂ ಹಿಂದಿನ ಕಾಲದಲ್ಲಿ ಜನರಿಗೆ ಆಸ್ಪತ್ರೆಗಳಲ್ಲಿದ್ದ ನಂಬಿಕೆಗಿಂತಲೂ ಈಗ ಹೆಚ್ಚು ಭರವಸೆಯಿದೆ. ನವೀನ ಆಸ್ಪತ್ರೆ ರೋಗಚಿಕಿತ್ಸೆಗಷ್ಟೇ ಅಲ್ಲದೆ ರೋಗನಿವಾರಣೆಗೂ ಕೇಂದ್ರ ಆಗಿರಬೇಕು.

ಭಾರತದಲ್ಲಿ[ಸಂಪಾದಿಸಿ]

ಆಸ್ಪತ್ರೆಗಳು ಜನಸಂಖ್ಯೆಗೆ ಸಾಕಾಗುವಷ್ಟಿಲ್ಲ. ಜನಸಂಖ್ಯೆಗೆ ತಕ್ಕಂತೆ ಹೆಚ್ಚು ಹೆಚ್ಚಾಗಿ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಪಂಚವಾರ್ಷಿಕ ಯೋಜನೆಗಳಲ್ಲಿ ಹೊಸ ವೈದ್ಯ ಕಾಲೇಜುಗಳನ್ನು ತೆರೆಯಲಾಗಿದೆ. 1947ರಲ್ಲಿ 22 ಕಾಲೇಜುಗಳಿದ್ದುದು, 1966ರ ಹೊತ್ತಿಗೆ 90 ಕಾಲೇಜುಗಳಾದವು. ಇವುಗಳಲ್ಲಿ ಸರ್ಕಾರಿ ಕಾಲೇಜುಗಳೇ ಹೆಚ್ಚು. ಮುಂಬಯಿಯಲ್ಲಿ ಪುರಸಭೆಯ ಕಾಲೇಜುಗಳಿವೆ. ಸ್ನಾತಕೋತ್ತರ ಶಿಕ್ಷಣ ಹಲವೆಡೆಗಳಲ್ಲಿ ಆರಂಭವಾಗಿದೆ. ಕಾಲೇಜುಗಳಿಗೆ ಸೇರಿದ ಆಸ್ಪತ್ರೆಗಳು ಚೆನ್ನಾಗಿ ಬೆಳೆಯುತ್ತಿವೆ, ಉತ್ತಮ ಚಿಕಿತ್ಸೆಯನ್ನು ಕೊಡುತ್ತಿವೆ. ಕೋಲ್ಕತ್ತದಲ್ಲಿ ಮೊದಲ ವೈದ್ಯಕಾಲೇಜು 1835ರಲ್ಲೂ ಮುಂಬಯಿಯಲ್ಲಿ 1845ರಲ್ಲೂ ಚೆನ್ನೈನಲ್ಲಿ 1850ರಲ್ಲೂ ತೆರೆದುವು.

ವಿಶ್ವ ಆರೋಗ್ಯ ಸಂಸ್ಥೆ, ಯೂನಿಸೆಫ್ ಮುಂತಾದವು ಮದ್ದುಗಳು, ಯಂತ್ರಗಳು, ಸಲಕರಣೆಗಳು, ಸಲಹೆಗಳ ರೂಪದಲ್ಲಿ ಭಾರತಕ್ಕೆ ವಿಶೇಷ ನೆರವು ಕೊಡುತ್ತಿವೆ. ಹಿಂದೆ ಇದ್ದ ಸಿಡುಬು, ಪ್ಲೇಗ್, ಕಾಲರ, ಮಲೇರಿಯ ಉಪದ್ರವಗಳು ಈಗಿಲ್ಲ. ಬೇರೆ ಬೇರೆಯಾಗಿ ಇದ್ದ ಆರೋಗ್ಯ, ವೈದ್ಯ ಇಲಾಖೆಗಳು ಈಗ ಒಂದಾಗಿವೆ. ಭಾರತದ ಆಸ್ಪತ್ರೆಗಳ ಸ್ಥೂಲ ಆಡಳಿತ ವಿಚಾರಗಳು ಡೈರೆಕ್ಟರ್ ಜನರಲ್ ಆಫ್ ಹೆಲ್್ತ ಸರ್ವಿಸಸ್ ಅಂಡ್ ಫ್ಯಾಮಿಲಿ ಪ್ಲಾನಿಂಗ್, ನವದೆಹಲಿ ಅವರ ಕೈಯಲ್ಲಿದೆ. ಇತ್ತೀಚೆಗೆ ಕುಟುಂಬ ಯೋಜನೆಯೂ ಆಸ್ಪತ್ರೆಗಳಿಗೆ ಸೇರಿದ್ದು, ಯಶಸ್ವಿಯಾಗಿ ನಡೆಯುತ್ತಿದೆ.

ಭಾರತದಲ್ಲಿ ಸರ್ಕಾರಿ ಆಸ್ಪತ್ರೆಗಳೇ ಹೆಚ್ಚು. ಹಲವೆಡೆ ಚಿಕ್ಕ ಪುರಸಭೆ ಆಸ್ಪತ್ರೆಗಳೂ ಇವೆ. ಹಿಂದೆ ಕ್ರೈಸ್ತಧರ್ಮ ಪ್ರಚಾರಕರೂ ಹಲವೆಡೆಗಳಲ್ಲಿ ಆಸ್ಪತ್ರೆಗಳನ್ನು ತೆರೆದರು. ಆ ತೆರನ ಆಸ್ಪತ್ರೆಗಳಲ್ಲಿ ವೆಲ್ಲೊರಿನಲ್ಲಿರುವ ಕ್ರೈಸ್ತ ಮಿಷನರಿ ಆಸ್ಪತ್ರೆ ದೊಡ್ಡದು. ದೊಡ್ಡ ಪಟ್ಟಣಗಳ ಆಸ್ಪತ್ರೆಗಳಲ್ಲಿ ಹೆಚ್ಚು ಸಲಕರಣೆ, ಸವಲತ್ತುಗಳಿದ್ದು ಮುಂಬೈಯಲ್ಲಿ ಗುಂಡಿಗೆ ನಾಟಿಮಾಡುವ ಪ್ರಯೋಗವೂ ನಡೆದಿದೆ.

ಕರ್ನಾಟಕ ರಾಜ್ಯದಲ್ಲಿ 1966ರ ಮೊದಲಲ್ಲಿ 978 ಆಸ್ಪತ್ರೆಗಳಿದ್ದವು. ಇವುಗಳಲ್ಲಿ ಸರ್ಕಾರಿಯವು 328, ಸ್ಥಳೀಯ ಸಂಸ್ಥೆಯವು 594, ಸರ್ಕಾರದಿಂದ ನೆರವು ಪಡೆಯುವವು 19, ಇತರÀವು 37. ಇವುಗಳಲ್ಲಿ ದಿನವೂ 17,222 ಒಳ ರೋಗಿಗಳೂ 83,823 ಹೊರರೋಗಿ ಗಳೂ ಚಿಕಿತ್ಸೆ ಪಡೆಯುತ್ತಾರೆ. ಸರಾಸರಿ 24,076 ಜನರಿಗೆ ಒಂದು ಆಸ್ಪತ್ರೆಯಿದೆ. ಬೆಂಗಳೂರಲ್ಲಿ ವಿಕ್ಟೋರಿಯ ಆಸ್ಪತ್ರೆಯನ್ನು 1900ರಲ್ಲಿ, ಮೈಸೂರಿನಲ್ಲಿ ಶ್ರೀಕೃಷ್ಣರಾಜೇಂದ್ರ ಆಸ್ಪತ್ರೆಯನ್ನು 1916ರಲ್ಲಿ ಕಟ್ಟಲಾಯಿತು. ಈಗ 190 ವಿಶೇಷ ಆಸ್ಪತ್ರೆಗಳಿವೆ: ಕಣ್ಣಿಗೆ 1, ಕ್ಷಯಕ್ಕೆ 12, ಹೆರಿಗೆಗೆ 54, ಮನೋರೋಗಕ್ಕೆ 2, ಕುಷ್ಠರೋಗಕ್ಕೆ 5, ಸಾಂಕ್ರಾಮಿಕಗಳಿಗೆ 3. ಬೆಂಗಳೂರಿ ನಲ್ಲಿರುವ ಮನೋರೋಗದ ಆಸ್ಪತ್ರೆ ಕೇಂದ್ರಸರ್ಕಾರದ ಆಡಳಿತದಲ್ಲಿದೆ. ಇತರ ಪ್ರದೇಶಗಳಿಗಿಂತ ಕರ್ಣಾಟಕದಲ್ಲಿ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ 4 ಸರ್ಕಾರಿಯವು, ಅದರಲ್ಲಿ 2 ಸ್ವಾಯತ್ತತೆ ಪಡೆದಿವೆ. 5 ಖಾಸಗಿ, ಬ್ರಿಟಿಷರ ಕಾಲದಲ್ಲಿದ್ದ ಮಹಾರಾಜರ ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವೇ ಮೊದಲು ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜನ್ನು ಸ್ಥಾಪಿಸಿದುದು (1924). ಸ್ನಾತಕೋತ್ತರ ಶಿಕ್ಷಣ 1962ರಲ್ಲಿ ಮೊದಲಾಯಿತು.