ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗಿಬನ್

ವಿಕಿಸೋರ್ಸ್ದಿಂದ
ಗಿಬನ್


ಸಸ್ತನಿವರ್ಗದ ಪ್ರೈಮೇಟ್ ಗಣಕ್ಕೆ ಸೇರಿದ ವೃಕ್ಷವಾಸಿ ವಾನರ. ಹೈಲಾಬಟೀಸ್ ಮತ್ತು ಸಿಂಫಲ್ಯಾಂಗಸ್ ಎಂಬ ಎರಡು ಮುಖ್ಯಜಾತಿಗಳನ್ನು ಒಳಗೊಂಡಿದೆ. ಒರಾಂಗೂಟಾನ್, ಗೊರಿಲ, ಚಿಂಪ್ಯಾಂಜಿಗಳ ಹತ್ತಿರ ಸಂಬಂಧಿ. ಅವುಗಳಂತೆಯೇ ಇದಕ್ಕೂ ಬಾಲವಿಲ್ಲ. ಮನುಷ್ಯನನ್ನೂ ಒಳಗೊಂಡಿರುವ ಹೋಮಿನಾಯ್ಡಿಯ ಅಧಿಕುಟುಂಬದ ಹೈಲೋಬ್ಯಾಟಿಡೀ ಕುಟುಂಬಕ್ಕೆ ಸೇರಿದೆ. ಆಗ್ನೇಯ ಏಷ್ಯದ ಮೂಲವಾಸಿಯಾದ ಇದು ಅಸ್ಸಾಂ, ಬರ್ಮ, ಮಲಯ, ಇಂಡೋನೇಷ್ಯಗಳ ದಟ್ಟವಾದ ಕಾಡುಗಳಲ್ಲಿ ಕಾಣಬರುತ್ತದೆ; ಸಮುದ್ರಮಟ್ಟದಿಂದ ಹಿಡಿದು 2500 ಮೀ ಎತ್ತರದ ಪರ್ವತ ಪ್ರದೇಶಗಳಲ್ಲೆಲ್ಲ ಬಲು ಸಾಮಾನ್ಯ.


ಇದು ವಾನರಗಳಲ್ಲೆಲ್ಲ ಅತ್ಯಂತ ಚಿಕ್ಕಗಾತ್ರದ್ದು, ಇದರ ಎತ್ತರ ಸಾಮಾನ್ಯವಾಗಿ 1 ಮೀ, ತೂಕ ಸುಮಾರು 14 ಕೆಜಿ. ಮೈಬಣ್ಣ ಸಾಮಾನ್ಯವಾಗಿ ಕಪ್ಪು. ಕೆಲವು ಬಗೆಗಳಲ್ಲಿ ಕಂದು, ಬೂದಿ ಮುಂತಾದ ಬಣ್ಣವಿರುವುದೂ ಉಂಟು. ಗಿಬನ್ನಿನ ಕೈಗಳು ಬಲು ಉದ್ದ. 1ಮೀ ಎತ್ತರದ ಗಿಬನ್ನಿನ ಕೈಹರವು ಸುಮಾರು 1.3 ಮೀ ಇರುವುದುಂಟು. ಈ ಉದ್ದ ಕೈಗಳ ಸಹಾಯದಿಂದ ಗಿಬನ್ ಮರದಿಂದ ಮರಕ್ಕೆ ಯಾವ ಬಗೆಯ ಶ್ರಮವೂ ಇಲ್ಲದೆ ಅತ್ಯಂತ ವೇಗವಾಗಿ ತೂಗಿ ತೊನೆಯುತ್ತ, ಜಿಗಿಯುತ್ತ ಸಾಗಬಲ್ಲದು. ಒಂದೊಂದು ಸಲದ ಜಿಗಿತಕ್ಕೂ ಸುಮಾರು 6-9 ಮೀ ದೂರವನ್ನು ಕ್ರಮಿಸಬಲ್ಲುದು. ಹೀಗೆ ಗಿಬನ್ ರೆಂಬೆಯಿಂದ ರೆಂಬೆಗೆ ಹಾರಿ ಸಾಗುವ ನೈಪುಣ್ಯವನ್ನೂ ವೇಗವನ್ನೂ ಇನ್ನಾವುದೇ ವಾನರವಾಗಲಿ, ಕಪಿಯಾಗಲಿ ತೋರಲಾರದು. ಈ ರೀತಿಯ ಚಲನೆಗೆ ಮತ್ತು ರೆಂಬೆಗಳನ್ನು ಹಿಡಿಯುವುದಕ್ಕೆ ಅನುಕೂಲವಾಗುವಂತೆ ಗಿಬನ್ನಿನ ಕೈ ಮತ್ತು ಕಾಲುಗಳ ಬೆರಳುಗಳೂ ಬಲು ಉದ್ದವಾಗಿವೆ. ಅಲ್ಲದೆ ತೋರುಬೆರಳು ಮತ್ತು ಹೆಬ್ಬೆರಳುಗಳ ಅಂತರ ಆಳವಾದ ಸೀಳಿನಂತಿದೆ. ಹೆಬ್ಬೆರಳು ಉಳಿದ ಬೆರಳುಗಳಿಗಿಂತ ಮೋಟಾಗಿದೆ. ಹೀಗೆ ಗಿಬನ್ನಿನ ಕೈಕಾಲುಗಳು ಮರಗಳ ಮೇಲಿನ ಚಲನೆಗೆ ಅತ್ಯಂತ ಉಪಯುಕ್ತವಾಗಿದ್ದರೂ ಗಿಬನ್ ನೆಲದ ಮೇಲೆ ಮನುಷ್ಯನಂತೆಯೇ ನೆಟ್ಟಗೆ, ಕೇವಲ ತನ್ನ ಎರಡು ಕಾಲುಗಳಿಂದ ಮಾತ್ರವೇ ನಡೆಯಬಲ್ಲದು. ವಾನರಗಳಲ್ಲೆಲ್ಲ ಇದೊಂದು ಮಾತ್ರವೇ ಹೀಗೆ ನಡೆಯಲು ಸಮರ್ಥವಾಗಿರುವುದು (ಉಳಿದ ವಾನರಗಳು ಹೀಗೆ ನಡೆಯುವಾಗ ಕೈಗಳ ನೆರವನ್ನು ಪಡೆಯುತ್ತವೆ.) ಆದರೆ ಕೈಗಳು ಬಲು ಉದ್ದವಾಗಿದ್ದು ನೆಲವನ್ನು ಮುಟ್ಟುವಂತಿರುವುದರಿಂದ ಗಿಬನ್ ನಡೆಯುವಾಗ ಸರ್ಕಸಿನಲ್ಲಿ ತಂತಿ ಮೇಲೆ ನಡೆಯುವವರಂತೆ ಕೈಗಳನ್ನು ಮೇಲಕ್ಕೆತ್ತಿ ಅಕ್ಕಪಕ್ಕಕ್ಕೆ ಚಾಚಿಕೊಂಡು ವಕ್ರವಾಗಿ ನಡೆಯುತ್ತದೆ. ಕೈಗಳನ್ನು ಮೇಲಕ್ಕೆತ್ತುವುದರಿಂದ ದೇಹವನ್ನು ಸಮತೋಲವಾಗಿರಿಸುವುದಕ್ಕೆ ಸಾಧ್ಯವಾಗುತ್ತದೆ. ಗಿಬನ್ನಿನ ಇನ್ನಿತರ ಲಕ್ಷಣಗಳಲ್ಲಿ ಮುಖ್ಯವಾದವು ಅದರ ತೆಳುವಾದ ದೇಹ, ಉದ್ದವಾದ ಹಾಗೂ ಕಿರಿದಾದ ವಸ್ತಿಕುಹರ, ಚೆನ್ನಾಗಿ ರೂಪುಗೊಂಡಿರುವ ರೊಂಡಿಯ ಜಡ್ಡುಭಾಗಗಳು ಮತ್ತು ಚಪ್ಪಟೆಯಾದ ಮೂತಿ. ಗಿಬನ್ನಿನ ಮಿದುಳು ಬಹಳ ಚಿಕ್ಕಗಾತ್ರದ್ದು. ಬುದ್ಧಿಶಕ್ತಿಯಲ್ಲಿ ಗಿಬನ್ ಉಳಿದ ವಾನರಗಳಿಗಿಂತ ಅತ್ಯಂತ ಕೆಳಮಟ್ಟ ದಲ್ಲಿದೆ. ಹೆಚ್ಚು ಕಡಿಮೆ ಕೋತಿಗಳಿಗಿ ರುವಷ್ಟು ಬುದ್ಧಿ ಇದಕ್ಕೆ ಇದೆ ಎನ್ನಬಹುದು. ಆದರೂ ಕೆಲವು ಬಣ್ಣಗಳನ್ನೂ ಗಾತ್ರವ್ಯತ್ಯಾಸಗಳನ್ನೂ ಗುರುತಿಸಬಲ್ಲದು. ಗಿಬನ್ ಸ್ವಭಾವತಃ ಸಾಧುಪ್ರಾಣಿ. ಇದನ್ನು ಪಳಗಿಸಿ ಮುದ್ದಿನ ಪ್ರಾಣಿಯಾಗಿ ಸಾಕಬಹುದು. ಗಿಬನ್ ಸ್ವಇಚ್ಛೆಯಿಂದ ನೀರಿಗಿಳಿಯಲು ಹೆದರುತ್ತದಾದರೂ ತನ್ನ ದೇಹವನ್ನು ಸಾಕಷ್ಟು ಶುದ್ಧವಾಗಿ ಇಟ್ಟುಕೊಳ್ಳುತ್ತದೆ. ಎರಡು ಪ್ರಾಣಿಗಳು ಸೇರಿದುವೆಂದರೆ ಒಂದರ ದೇಹವನ್ನು ಇನ್ನೊಂದು ಶುಚಿಮಾಡುತ್ತವೆ.


ಹಣ್ಣುಹಂಪಲು, ಎಲೆಗಳು, ಎಳೆಯಕುಡಿಗಳು ಗಿಬನ್ನಿನ ಪ್ರಮುಖ ಆಹಾರ. ಕೀಟಗಳನ್ನೂ ತಿನ್ನುವುದುಂಟು. ಜೇಡವನ್ನು ಬಲು ಮೆಚ್ಚಿನಿಂದ ತಿನ್ನುತ್ತದೆ. ಆಗಾಗ್ಗೆ ಹಕ್ಕಿಗಳ ಮೊಟ್ಟೆಗಳನ್ನೂ ಮರಿಹಕ್ಕಿಗಳನ್ನೂ ತಿನ್ನುವುದುಂಟು. ಗಿಬನ್ ಸಂಘಜೀವಿ; ಸಣ್ಣಗುಂಪುಗಳಲ್ಲಿ ವಾಸಿಸುತ್ತದೆ. ಸಾಮಾನ್ಯವಾಗಿ ಒಂದು ಗುಂಪಿನಲ್ಲಿ ಒಂದು ಗಂಡು, ಒಂದು ಹೆಣ್ಣು ಮತ್ತು ಹಲವಾರು ಮರಿಗಿಬನ್‍ಗಳಿರುತ್ತವೆ. ಒಂದೊಂದು ಕುಟುಂಬಕ್ಕೂ ಅದರದೇ ಆದ ಅಧೀನಗಡಿ ಪ್ರಾಂತ್ಯವಿರುತ್ತದೆ. ಇಂಥ ಪ್ರಾಂತ್ಯದ ವಿಸ್ತಾರ ಸುಮಾರು 30-100 ಎಕರೆಯಷ್ಟಿರಬಹುದು. ಇದರಲ್ಲಿ ಗಿಬನ್‍ಗಳಿಗೆ ಆಹಾರವೊದಗಿಸುವ ಮತ್ತು ಮಲಗಲು ಪ್ರಶಸ್ತವಾದ ಮರಗಳು ವಿಪುಲವಾಗಿರುತ್ತವೆ. ಗಿಬನ್‍ಗಳು ನೆಲಮುಟ್ಟದೆ ಮರದಿಂದ ಮರಕ್ಕೆ ಸುಸೂತ್ರವಾಗಿ ಹೋಗಲು ತಮ್ಮದೇ ಆದ ದಾರಿ ಮಾಡಿಕೊಂಡಿರುತ್ತವೆ. ಒಂದು ಗಿಬನ್ ಕುಟುಂಬದ ಪ್ರಾಂತ್ಯಕ್ಕೆ ಮತ್ತೊಂದು ಗುಂಪು ಬರುವುದು ವಿರಳ. ಹಾಗೇನಾದರೂ ಬಂದರೆ ಅವುಗಳ ನಡುವೆ ಯುದ್ಧವೇ ನಡೆಯುತ್ತದೆ. ಯುದ್ಧವೆಂದರೆ ಮುಷ್ಟಾಮುಷ್ಟಿಯಲ್ಲ, ಬರಿಯ ವಾಗ್ಯುದ್ಧ. ಅದರಲ್ಲಿ ಸೋತ ಗುಂಪು ಓಡಿಹೋಗುತ್ತದೆ. ತಮ್ಮ ಧ್ವನಿಶಕ್ತಿಗೆ ಹೆಸರಾಗಿರುವ ಗಿಬನ್‍ಗಳು ಬಲು ಜೋರಾಗಿ, ಕಿವಿಗಡಚಿಕ್ಕುವಂತೆ, ಕಾಡಿಗೆ ಕಾಡೇ ಅನುರಣಿತವಾಗುವಂತೆ ಕೂಗುತ್ತವೆ. ಬೆಳಗಿನ ಜಾವ ಮತ್ತು ಸಂಜೆ ಸೂರ್ಯ ಮುಳುಗುವ ಮುನ್ನ ಇವುಗಳ ಗದ್ದಲದಿಂದ ಇಡೀ ಕಾಡೇ ಮೊಳಗುತ್ತಿರುತ್ತದೆ. ಆಹಾರವನ್ನು ಅರಸಿಕೊಂಡು ತಮ್ಮ ಎಲ್ಲೆಯನ್ನು ಬಿಟ್ಟು ಹೊರಟಾಗಲೂ ಅಸಾಧ್ಯವಾಗಿ ಬೊಬ್ಬೆಯಿಡುತ್ತವೆ. ಹೀಗೆ ಹೊರಟಾಗ ಎರಡು ಗುಂಪುಗಳು ಪರಸ್ಪರ ಸಂಧಿಸಿದಾಗ ಮತ್ತೆ ಕೂಗಿನ ಕಾಳಗ ನಡೆಯುತ್ತದೆ. ಇಲ್ಲೂ ಹೆಚ್ಚು ಗದ್ದಲ ಮಾಡುವ ಗುಂಪಿಗೇ ಜಯ. ಸಿಂಫಲ್ಯಾಂಗಸ್ ಜಾತಿಯ ಗಿಬನ್‍ಗಳಲ್ಲಿ ಧ್ವನಿವರ್ಧಕಚೀಲಗಳಿರುವುದರಿಂದ ಇವುಗಳ ಕೂಗು ಇನ್ನೂ ತೀವ್ರವಾಗಿರುತ್ತದೆ. ಆದರೆ ಹವೆ ಪ್ರತಿಕೂಲವಾಗಿದ್ದಾಗ ನಿಶ್ಯಬ್ದವಾಗಿಬಿಡುವುದು ಇವುಗಳ ಮರ್ಜಿ. ಗಿಬನ್ಗಳು ಗೂಡುಗಳನ್ನೇನೂ ಕಟ್ಟುವುದಿಲ್ಲ. ವಿಶ್ರಮಿಸುವಾಗ ಮರಗಳ ಪೊಟರೆಗಳಲ್ಲಿ ಇಲ್ಲವೆ ರೆಂಬೆಗಳ ಸಂದಿಗಳಲ್ಲಿ ಅಡಗುತ್ತವೆ.


ಗಿಬನ್‍ಗಳ ಗರ್ಭಾವಧಿಯ ಕಾಲ ಸುಮಾರು 7 ತಿಂಗಳುಗಳು. ಒಂದು ಸಲಕ್ಕೆ ಒಂದೇ ಮರಿ; ಸಾಧಾರಣವಾಗಿ 2 ವರ್ಷಕ್ಕೊಂದು. ಮರಿಯ ಪಾಲನೆ, ಪೋಷಣೆಗಳ ಹೊಣೆಯೆಲ್ಲ ತಾಯಿಯದೆ. ಚಿಕ್ಕಮರಿಗಳು ಯಾವಾಗಲೂ ಚಟುವಟಿಕೆಯಿಂದ ಆಟವಾಡುತ್ತಿರುತ್ತವೆ. ಅನೇಕವೇಳೆ ಬೆಳೆದ ಗಿಬನ್ಗಳೂ ಮರಿಗಳೊಡನೆ ಸೇರುವುದುಂಟು. 7 ವರ್ಷ ವಯಸ್ಸಾದ ಅನಂತರ ಗಿಬನ್ ಲೈಂಗಿಕ ಪ್ರಬುದ್ಧಾವಸ್ಥೆಗೆ ಬರುತ್ತದೆ.