ರಂಗಣ್ಣನ ಕನಸಿನ ದಿನಗಳು

ವಿಕಿಸೋರ್ಸ್ದಿಂದ

ರಂಗಣ್ಣನ ಕನಸಿನ ದಿನಗಳು  (1951) 
by ಎಂ. ಆರ್. ಶ್ರೀನಿವಾಸಮೂರ್ತಿ

Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles). ಇದನ್ನು ಡೌನ್ಲೋಡ್ ಮಾಡಿ!

ರಂಗಣ್ಣನ ಕನಸಿನ ದಿನಗಳು





ಎಂ. ಆರ್. ಶ್ರೀನಿವಾಸಮೂರ್ತಿ







ಸತ್ಯಶೋಧನ ಪ್ರಕಟನ ಮಂದಿರ

ಕೊಟಿ, ಕಂಗಳೂರು ನಗರ,

೧೯೫೧

ಪ್ರಥಮ ಮುದ್ರಣ ೧೯೪೯
ದ್ವಿತೀಯ ಮುದ್ರಣ ೧೯೫೧

ಸಾದಾ ಪ್ರತಿ
ನಾಲ್ಕು ರೂಪಾಯಿ

ಕ್ಯಾಲಿಕೋ ಪ್ರತಿ
ಆರು ರೂಪಾಯಿ










ಎಲ್ಲ ಹಕ್ಕುಗಳ ಗ್ರಂಥಕರ್ತೃವಿಗೆ ಸೇರಿವೆ







ಶ್ರೀಕಂಠಯ್ಯ ಅಚ್ಚು ಕೂಟ, ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು ನಗರ
೧೯೫೧


ಮುನ್ನುಡಿ[ಸಂಪಾದಿಸಿ]

ನಮ್ಮ ದೇಶದ ಪ್ರಾಥಮಿಕ ವಿದ್ಯಾಭ್ಯಾಸ ಕ್ರಮದಲ್ಲಿರುವ ಕೆಲವು ಲೋಪದೋಷಗಳು, ಅವುಗಳನ್ನು ತಿದ್ದಿ ಕೊಳ್ಳ ಬಹುದಾದ ಮಾರ್ಗಗಳು, ಉಪಾಧ್ಯಾಯರ ಬಡತನದ ಜೀವನ, ಅವರ ಕಷ್ಟ ಕಾರ್ಪಣ್ಯಗಳು, ಅವರ ಶೀಲ ಸ್ವಭಾವಗಳು, ಸಾರ್ವಜನಿಕ ಮುಖಂಡರಲ್ಲಿ ಸ್ವಾರ್ಥಿಗಳು ನಿಸ್ಪ್ಯಾರ್ಥಿಗಳು, ಹಳ್ಳಿಯ ಜನ, ಕೆಲವು ಸರಿ ಸಾರಚಿತ್ರಗಳು ಮೊದಲಾದುವನ್ನೆಲ್ಲ ಈ ಕಥೆಯಲ್ಲಿ ಕಾಣಬಹುದಾಗಿದೆ. ಕಥೆಯಾದರೂ ಇದರಲ್ಲಿ ಒಂದು ನಿಷ್ಕರ್ಷೆಯಾದ ವಸ್ತುವಿಲ್ಲ. ಈ ಗ್ರಂಥ ಸಾಹಿತ್ಯದ ಯಾವ ಜಾತಿಗೆ ಸೇರಬಹುದು ಎಂಬ ವಿಚಾರವನ್ನು ಓದುಗರೂ ವಿಮರ್ಶಕರೂ ತೀರ್ಮಾನಮಾಡ ಬಹುದಾಗಿದೆ. ಒಟ್ಟಿನಲ್ಲಿ ಗ್ರಂಥ ಮನೋರಂಜಕವಾಗಿದೆಯೆಂದೂ ಬೋಧಪ್ರದವಾಗಿರವುದೆಂದೂ ನಾಲ್ಕು ಜನ ಹೇಳಿದರೆ ಅಷ್ಟೇ ಸಾಕು.

ಈಗ ಉಪಾಧ್ಯಾಯರ ಸಂಬಳಗಳನ್ನು ಹೆಚ್ಚಿಸಿದ್ದಾರೆ; ಪದಾರ್ಥಗಳ ಬೆಲೆ ಬಹಳವಾಗಿ ಏರಿರುವುದರಿಂದ ತುಟ್ಟಿ ಭತ್ಯವನ್ನೂ ಧಾರಾಳವಾಗಿ ಸರಕಾರದವರು ಕೊಡುತ್ತಿದಾರೆ. ಈ ಗ್ರಂಥದಲ್ಲಿ ಬರುವ ಸಂಗತಿಗಳು ಹತ್ತು ಹದಿನೈದು ವರ್ಷಗಳ ಹಿಂದಿನವು. ಆಗ ಉಪಾಧ್ಯಾಯರಿಗೆ, ೧೫ ರೂಪಾಯಿ, ೧೬ ರೂಪಾಯಿ, ೧೭-೧-೨೦ ರೂಪಾಯಿ ಎಂದು ಮುಂತಾಗಿ ಸಂಬಳಗಳಿದ್ದುವು. ಸಂಬಳ ಕಡಮೆಯಿದ್ದು ದರ ಜೊತೆಗೆ ಹತ್ತಾರು ವರ್ಷಗಳ ಕಾಲ ಸರ್ವಿಸ್ ಮಾಡಿದರೂ ಬಡತಿ ದೊರೆಯುತ್ತಿರಲಿಲ್ಲ. ಈಗ ಸಂಬಳಗಳು ಹೆಚ್ಚಿ, ತುಟ್ಟಿ ಭತ್ಯವೂ ದೊರೆಯುತ್ತಿದೆ. ಆದರೆ ಆರ್ಥಿಕ ಮುಗ್ಗಟ್ಟು ಬಲವಾಗಿರುವುದರಿಂದ, ಉಪಾಧ್ಯಾಯರ ಕಷ್ಟ ನಿವಾರಣೆಯಾಗಿಲ್ಲ ; ಅವರ ಸಂಸಾರ ನಿರ್ವಹಣೆ ಸುಲಭವಾಗಿಲ್ಲ. ಹಿಂದೆ ಇದ್ದಂತೆ ರೂಪಾಯಿಗೆ ಹದಿನಾರು ಇಪ್ಪತ್ತು ಸೇರು ರಾಗಿ, ರೂಪಾಯಿಗೆ ಆರು ಏಳು ಸೇರು ಅಕ್ಕಿ ದೊರೆಯುವಂತಾಗಿ, ತುಟ್ಟಿ ಭತ್ಯವೂ ಸೇರಿದ ಈಗಿನ ಹೆಚ್ಚಿನ ಸಂಬಳಗಳೇ ಮುಂದಕ್ಕೂ ಉಪಾಧ್ಯಾಯರಿಗೆ ನಿಗದಿಯಾಗಿ, ಸ್ಥಿತಿ ಸುಧಾರಿಸಿದರೆ ಆ ಬಡ ಉಪಾಧ್ಯಾಯರು ಸಂತೋಷದಿಂದ ತಮ್ಮ ಕರ್ತವ್ಯವನ್ನು ನೆರವೇರಿಸಿ ಯಾರು ಸುಖವಾಗಿ ಸಂಸಾರವನ್ನು ನಡಸಿಯಾರು. ಆದರೆ ಆ ರಾಮರಾಜ್ಯ ಯಾವಾಗ ಬರುವುದೊ ಗೊತ್ತಿಲ್ಲ.

ಪ್ರಾಥಮಿಕ ವಿದ್ಯಾಭ್ಯಾಸದ ಅಸಮರ್ಪಕ ಸ್ಥಿತಿಯನ್ನು ಸರಕಾರದವರೂ ಕಂಡುಕೊಂಡಿದ್ದಾರೆ, ಹಿಂದೆ ದ್ರವ್ಯಾಭಾವದಿಂದ ಪಾಠ ಶಾಲೆಗಳ ಸಂಖ್ಯೆ ತಕ್ಕಷ್ಟು ಇರಲಿಲ್ಲ ; ಮತ್ತು ಇನ್ಸ್ಪೆಕ್ಟರುಗಳ ಸಂಖ್ಯೆಯಲ್ಲಿ ಕಾರ್ಪಣ್ಯ ವಿದ್ದು ಒಬ್ಬೊಬ್ಬರಿಗೆ ನೂರೈವತ್ತರಿಂದ ಇನ್ನೂರು, ಇನ್ನೂ ರೈವತ್ತು ಸ್ಕೂಲುಗಳ ಮೇಲ್ವಿಚಾರಣೆ ಮತ್ತು ತನಿಖೆ ತಲೆಗೆ ಕಟ್ಟಿದ್ದು ವು. ಈಗ ರೇಂಜುಗಳ ಸಂಖ್ಯೆಯನ್ನು ಬಹಳವಾಗಿ ಹೆಚ್ಚಿಸಿದ್ದಾರೆ, ವರ್ಷ ವರ್ಷವೂ ಹೆಚ್ಚಿಸುತ್ತಲೇ ಇದ್ದಾರೆ ; ಬಹುಮಟ್ಟಿಗೆ ಒಬ್ಬ ಇನ್ ಸ್ಪೆಕ್ಟರಿಗೆ ನೂರರೊಳಗೆ ಪಾಠಶಾಲೆಗಳಿವೆ; ಹಲವು ಕಡೆಗಳಲ್ಲಿ ಬಲಾತ್ಕಾರ ವಿದ್ಯಾಭ್ಯಾಸವನ್ನೂ ಜಾರಿಗೆ ತಂದಿದ್ದಾರೆ ; ಅಲ್ಲೆಲ್ಲ ಒಬ್ಬ ಇನ್ ಸ್ಪೆಕ್ಟರಿಗೆ ಮುವ್ವತ್ತರಿಂದ ಐವತ್ತರ ವರೆಗೆ ಪಾಠ ಶಾಲೆಗಳು ಸೇರಿವೆ.ಈಗ ಪ್ರಜಾ ಸರಕಾರ ಪೀಠೋಪಸ್ಕರಗಳಿಗಾಗಿಯೂ ಕಟ್ಟಡಗಳಿಗಾಗಿಯೂ ಹತ್ತಾರು ಲಕ್ಷ ರೂಪಾಯಿಗಳನ್ನು ಒದಗಿಸುತ್ತಿದೆ. ಹಿಂದೆ ವಿದ್ಯಾಭ್ಯಾಸಕ್ಕಾಗಿ ಒಟ್ಟು ಅರುವತ್ತು ಎಪ್ಪತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತಿದ್ದರು ; ಈಗ ಸುಮಾರು ಮೂರು ಕೋಟಿ ರೂಪಾಯಿಗಳಷ್ಟು ಖರ್ಚು ಮಾಡುತ್ತಿದಾರೆ. ಆದ್ದರಿಂದ ಸ್ಥಿತಿ ಮಾರ್ಪಾಟಾಗುತ್ತಲಿದೆ. ರಾಜಕೀಯ ಕಾರಣಗಳಿಂದ ಜನರಲ್ಲಿ ಜಾಗೃತಿಯುಂಟಾಗುತ್ತಲಿದೆ. ಹಳ್ಳಿಗಳಲ್ಲಿ ನಾವು ನಿರೀಕ್ಷಿಸುವಷ್ಟಾಗಲಿ, ಪತ್ರಿಕೆಗಳಲ್ಲಿ ಪ್ರಕಟನೆ ಮಾಡುತ್ತಿರುವಷ್ಟಾಗಲಿ, ವಿದ್ಯಾ ವಿಚಾರದಲ್ಲಿ ಶ್ರದ್ಧಾಸಕ್ತಿಗಳು ಬೆಳೆಯದೇ ಹೋಗಿರಬಹುದು ಆದರೆ ಕಾಲಕ್ರಮದಲ್ಲಿ ತಾತ್ಸಾರ ಜಾಡ್ಯ ತೊಲಗಿ ಹಳ್ಳಿ ಯವರೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾವಂತರಾಗುತ್ತಾರೆಂದು ನಾವು ಆಶಿಸಬಹುದು.

ಪಾಠಶಾಲೆಗಳ ಸಂಖ್ಯೆ ಹೆಚ್ಚಬಹುದು ; ಕಟ್ಟಡಗಳು ಸಾವಿರಾರು ಸಿದ್ಧವಾಗಬಹುದು ; ಪೀಠೋಪಸ್ಕರಗಳೂ, ಪಾಠೋಪಕರಣಗಳೂ ಯಥೇಷ್ಟವಾಗಿ ಒದಗಿಬರಬಹುದು, ಆದರೆ ಪಾಠಶಾಲೆಯೆಂಬ ಒಡಲಿಗೆ ಉಪಾಧ್ಯಾಯರೇ ಜೀವ. ಕ್ಷೀಣದೆಶೆಯಲ್ಲಿರುವ ಪಾಠ ಶಾಲೆಗೆ ದಕ್ಷರೂ ಶ್ರದ್ದಾವಂತರೂ ಆದ ಉಪಾಧ್ಯಾಯರು ವರ್ಗವಾಗಿ ಹೋದರೆ ಅದನ್ನು ಒಂದು ವರ್ಷದೊಳಗಾಗಿ ಊರ್ಜಿತ ಮಾಡಿ, ಐವತ್ತು ಅರುವತ್ತು ಮಕ್ಕಳು ತುಂಬಿದ ಪಾಠಶಾಲೆಯನ್ನಾಗಿ ಮಾಡುತ್ತಾರೆ ; ಮತ್ತು ಗ್ರಾಮಸ್ಥರ ಗೌರವವನ್ನು ಸಂಪಾದಿಸಿ ಗಣ್ಯ ವ್ಯಕ್ತಿಗಳಾಗುತ್ತಾರೆ. ಉತ್ತಮ ಸ್ಥಿತಿಯಲ್ಲಿರುವ ಪಾಠಶಾಲೆಗೆ ಯೋಗ್ಯತೆಯಿಲ್ಲದ ಮತ್ತು ಶ್ರದ್ಧಾ ಹೀನರಾದ ಉಪಾಧ್ಯಾಯರು ಹೋದರೆ ಮೂರು ತಿಂಗಳಲ್ಲಿ ಅದನ್ನು ಕ್ಷೀಣದೆಶೆಗೆ ತಂದುಬಿಡುತ್ತಾರೆ. ಆದ್ದರಿಂದ ವಿದ್ಯಾಭ್ಯಾಸದ ಇಲಾಖೆಯಲ್ಲಿ ಯಾರು. ಯಾರನ್ನೊ ಉಪಾಧ್ಯಾಯರನ್ನಾಗಿ ನೇಮಕ ಮಾಡುವುದು ಸರಿಯಲ್ಲ. ಮೊದಲನೆಯದಾಗಿ, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿಯೂ ಟೈನಿಂಗ್ ಪರೀಕ್ಷೆಯಲ್ಲಿಯೂ ತೇರ್ಗಡೆಯಾದವರನ್ನು ಉಪಾಧ್ಯಾಯರನ್ನಾಗಿ ನೇಮಕ ಮಾಡಬೇಕು. ಎರಡನೆಯದಾಗಿ, ಅಧಿಕಾರಿಗಳಿಗೂ ಉವಾಧ್ಯಾಯರಿಗೂ ಮಧುರ ಬಾಂಧವ್ಯ ಬೆಳೆದು ಬರಬೇಕು. ಮೂರನೆಯದಾಗಿ, ಉಪಾಧ್ಯಾಯರಿಗೆ ತಿಳಿವಳಿಕೆಯನ್ನು ಕೊಡತಕ್ಕವರು ಮತ್ತು ಅವರ ಕೆಲಸದಲ್ಲಿ ಸಹಾಯಮಾಡತಕ್ಕವರು ಇನ್ಸ್ಪೆಕ್ಟರ್ ಕೆಲಸಗಳಿಗೆ ನೇಮಕವಾಗಬೇಕು. ವಿದ್ಯಾಭ್ಯಾಸದ ಇಲಾಖೆಯಲ್ಲಿರುವ ಅಧಿಕಾರಿಗಳು ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳನ್ನು ಚೆನ್ನಾಗಿ ಬಲ್ಲವರಾಗಿ ಶಿಕ್ಷಣ ಶಾಸ್ತ್ರ, ವ್ಯವಸಾಯ ಶಾಸ್ತ್ರ, ಸಹಕಾರ ತತ್ವಗಳು, ಮೊದಲಾದುವುಗಳಲ್ಲೆಲ್ಲ ಒಳ್ಳೆಯ ಪಾಂಡಿತ್ಯವನ್ನು ಸಂಪಾದಿಸಿಕೊಂಡು ಗ್ರಾಮಾಂತರಗಳಲ್ಲಿ ಸಂಚರಿಸುವಾಗ ಹಳ್ಳಿಯವರ ಸಭೆಗಳನ್ನು ಸೇರಿಸಿ ಭಾಷಣಗಳ ಮೂಲಕ ಜ್ಞಾನ ಪ್ರಚಾರ ಮಾಡುವ ಶಕ್ತಿಯುಳ್ಳವರಾಗಿರಬೇಕು.

ಈಗ ಪಾಠಶಾಲೆಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸುತ್ತಿದ್ದಾರೆ. ಅನೇಕ ಪಾಠ ಶಾಲೆಗಳಲ್ಲಿ ಉಪಾಧ್ಯಾಯರುಗಳಿಲ್ಲ; ಅಥವಾ ಅವರ ಸಂಖ್ಯೆ ಕಡಮೆ, ಟೈನಿಂಗ್ ಆಗಿಲ್ಲದವರನ್ನೆಲ್ಲ ಸೇರಿಸಿಕೊಂಡು ಅವರಿಗೆ ಯಾವುದೊಂದು ಅಲ್ಪಾವಧಿಯ ಶಿಕ್ಷಣವನ್ನೂ ಕೊಡದೆ ಉಪಾಧ್ಯಾಯಯರನ್ನಾಗಿ ಕಳಿಸುತ್ತಿದಾರೆ. ಅವರ ಸರ್ವಿಸ್ಸು ಅರ್ಧ ಮುಗಿಯುವ ಹೊತ್ತಿಗೋ ಏನೋ ಟೈನಿಂಗಿಗೆ ಕಳಿಸಿಕೊಡುತ್ತಾರೆ. ಏತನ್ಮಧ್ಯೆ ಆ ಅನನುಭವಿಗಳು ತಮಗೆ ತೋರಿದಂತೆ ಪಾಠಗಳನ್ನು ಮಾಡುತ್ತಾರೆ. ಈ ದೋಷಗಳೆಲ್ಲ ನಿವಾರಣೆಯಾಗಬೇಕಾಗಿದೆ. ನಮಗೆ ಪ್ರತಿಯೊಂದು ಜಿಲ್ಲೆ ಯಲ್ಲಿಯೂ ಈಗ ನಾಲ್ ಸ್ಕೂಲುಗಳು ಬೇಕು. ಎಸ್.ಎಸ್.ಎಲ್.ಸಿ, ಆದವರಿಗೆ ಸ್ಕಾಲರ್ ಷಿಪ್ ಕೊಟ್ಟು ಒಂದು ವರ್ಷಕಾಲ ಆ ಪಾಠಶಾಲೆಗಳಲ್ಲಿ ಶಿಕ್ಷಣ ವನ್ನು ಒದಗಿಸಿ ಉಪಾಧ್ಯಾಯರನ್ನಾಗಿ ನೇಮಕ ಮಾಡುತ್ತ ಹೋಗ ಬೇಕು. ಪ್ರತಿವರ್ಷವೂ ಹೀಗೆ ಐನೂರು ಮಂದಿಯಾದರೂ ತರಬೇ ತಾಗಿ ಬರುತ್ತಿದ್ದರೆ ನಮ್ಮ ಪ್ರಾಥಮಿಕ ವಿದ್ಯಾಭ್ಯಾಸದ ಸಮಸ್ಯೆ ಬಹುಮಟ್ಟಿಗೆ ಬಗೆಹರಿದೀತು.

ಈ ಕಥೆಯಲ್ಲಿ ಇಂಗ್ಲಿಷು ಮತ್ತು ಹಿಂದೂಸ್ಥಾನೀ ಪದಗಳನ್ನು ಧಾರಾಳವಾಗಿ ಉಪಯೋಗಿಸಿದೆ. ಆಡಳಿತದ ಭಾಷೆಯಲ್ಲಿ ರೂಢಿಯಾಗಿರುವ ಮತ್ತು ಜನರು ಬಳಕೆಯಲ್ಲಿಯೂ ಉಪಯೋಗಿಸುತ್ತಿರುವ ಆ ಪದಗಳನ್ನು ನಾವು ಕನ್ನಡ ಕೋಶಕ್ಕೆ ಸೇರಿಸಿಕೊಳ್ಳಬೇಕಾಗಿದೆ. ಒಂದೊಂದು ಸಂದರ್ಭದಲ್ಲಿ ಸಾಮಾನ್ಯ ಜನರ ಬಳಕೆಯಲ್ಲಿಲ್ಲದ, ಆದರೆ ಅಧಿಕಾರಿಗಳ ಬಾಯಲ್ಲಿ ಬರುವ ಟ್ಯಾಕ್ಸ್ (Tact= ಸಮಯೋನಾಯ), ಆಟ್ ಹೋಮ್ (At-home= ಮಿತ್ರಕೂಟ ) ಮೊದಲಾದ ಪದಗಳನ್ನೂ ಉಪಯೋಗಿಸಿದೆ. ಇವುಗಳ ಪಟ್ಟಿ ಯನ್ನು ಅರ್ಥದೊಂದಿಗೆ ಪ್ರತ್ಯೇಕವಾಗಿ ಕೊಟ್ಟಿಲ್ಲ. ಸಂದರ್ಭದಿಂದ ಅವುಗಳ ಅರ್ಥ ಹೊರಪಡುವುದೆಂದು ತಿಳಿದು ಆ ಪ್ರಯತ್ನವನ್ನು ಕೈಬಿಟ್ಟಿದ್ದೇನೆ.

ಈ ಗ್ರಂಥದಲ್ಲಿರುವ 'ಬೋರ್ಡು ಒರಸುವ ಬಟ್ಟೆ' ಮತ್ತು 'ಮೆಷ್ಟ್ರು ಮುನಿಸಾಮಿ' ಎಂಬ ಎರಡು ಕಥೆಗಳನ್ನು ಮೂರು ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಾಂತ ಶಾಖೆಯವರು ಏರ್ಪಡಿಸಿದ್ದ

'ದೀಪಾವಳಿಯ ಹಾಸ್ಯದ ಚಟಾಕಿಗಳು ' ಎಂಬ ಭಾಷಣ ಮಾಲೆಯಲ್ಲಿ ನಾನು ಹೇಳಿದ್ದೆ. ಕೆಲವು ತಿಂಗಳ ನಂತರ ಯಾರೋ ಪುಣ್ಯಾತ್ಮರು ನನ್ನ ಅಪ್ಪಣೆಯಿಲ್ಲದೆ ನನಗೆ ತಿಳಿವಳಿಕೆಯನ್ನೂ ಕೊಡದೆ ನನ್ನ ಹೆಸರನ್ನೂ ಹಾಕದೆ, 'ಕತೆಗಾರ' ಮಾಸಪತ್ರಿಕೆಯಲ್ಲಿ ವಿರೂಪಮಾಡಿ, ಅವುಗಳ ಸ್ವಲ್ಪ ಭಾಗವನ್ನು ಪ್ರಕಟಿಸಿದರು. ಇದನ್ನು ನನ್ನ ಮಾನ್ಯ ಸ್ನೇಹಿತರಾದ ಶ್ರೀ. ಸಿ. ಕೆ. ನಾಗರಾಜ ರಾಯರು ನನ್ನ ಗಮನಕ್ಕೆ ತಂದರು ; 'ಕತೆಗಾರ' ಮಾಸಪತ್ರಿಕೆಯ ಸಂಪಾದಕರನ್ನು ಸಹ ಕಂಡು ಮಾತನಾಡಿದರು. ಆದರೆ ಈಗಿನ ಕಾಲದಲ್ಲಿ ಭಾಷಣ ಚೌರ್ಯಗಳೂ ಗ್ರಂಥ ಚೌರ್ಯಗಳೂ ರಾಜಾರೋಷವಾಗಿಯೇ ನಡೆಯುತ್ತಿವೆ. ಲೇಖಕರಾಗಬೇಕೆಂಬ ಹೆಬ್ಬಯಕೆಯುಳ್ಳ ನಮ್ಮ ತರುಣರಿಗೆ ನಾನು ಏನು ಬುದ್ಧಿವಾದವನ್ನು ಹೇಳಬಹುದು? ನಮ್ಮಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ನೀತಿಯ ಮಟ್ಟ ಏರಬೇಕಾಗಿದೆ.

ಈ ಗ್ರಂಥ ರಚನೆಗೆ ನನ್ನ ಸ್ನೇಹಿತರ ಪ್ರೋತ್ಸಾಹವೇ ಮುಖ್ಯವಾದ ಸ್ಫೂರ್ತಿಯನ್ನೊದಗಿಸಿತು. ಹಿಂದೆ ಇದರ ಕೆಲವು ಭಾಗಗಳನ್ನು ನನ್ನ ಸ್ನೇಹಿತರಾದ ಶ್ರೀ. ಎ. ಆರ್. ಕೃಷ್ಣಶಾಸ್ತ್ರಿಗಳಿಗೆ ಹೇಳಿದ್ದೆನು. ಅವರು ಅವುಗಳನ್ನೆಲ್ಲ ಸೇರಿಸಿ ಗ್ರಂಥ ರೂಪಕ್ಕೆ ತಂದರೆ ಚೆನ್ನಾಗಿರುತ್ತದೆಂದು ಪ್ರೋತ್ಸಾಹಿಸಿದರು. 'ದೀಪಾವಳಿಯ ಹಾಸ್ಯದ ಚಟಾಕಿ'ಗಳಲ್ಲಿ ಭಾಷಣವಾದಮೇಲೆ ಇತರ ಸ್ನೇಹಿತರೂ ನನ್ನನ್ನು ಪ್ರೋತ್ಸಾಹಿಸಿದರು. ಅವರುಗಳಲ್ಲಿ ಮುಖ್ಯವಾಗಿ ಆಸ್ಥಾನ ವಿದ್ವಾನ್ ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿಗಳ ಪ್ರೋತ್ಸಾಹ ಮತ್ತು ಸಹಾಯಗಳನ್ನು ನಾನು ಒತ್ತಿ ಹೇಳಬೇಕಾಗಿದೆ. ಹಲವು ಸಲಹೆಗಳನ್ನು ಕೊಟ್ಟು, ಅಚ್ಚಿನ ಕರಡುಗಳನ್ನೂ ತಿದ್ದಿ ಅವರು ಬಹಳ ಸಹಾಯ ಮಾಡಿದ್ದಾರೆ; ಪ್ರತಿಯೊಂದು ಫಾರ ಮ್ಮನ್ನೂ ತಿದ್ದಿ ಹಿಂದಕ್ಕೆ ಕೊಟ್ಟಾಗಲೆಲ್ಲ ಪ್ರೋತ್ಸಾಹಿಸುತ್ತ ಬಂದಿದ್ದಾರೆ. ಅವರಿಗೆ ನನ್ನ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಿಸುತ್ತೇನೆ. ಸತ್ಯ ಶೋಧನ ಪ್ರಕಟಮಂದಿರದ ಮಾಲೀಕರಾದ ಶ್ರೀ. ನಿಟ್ಟೂರು ಶ್ರೀನಿವಾಸರಾಯರು ಎಂದಿನಂತೆ ನನ್ನಲ್ಲಿ ವಿಶ್ವಾಸವಿಟ್ಟು ಈ ಗ್ರಂಥವನ್ನು ಪ್ರಕಟಿಸಿ ಉಪಕಾರ ಮಾಡಿದ್ದಾರೆ, ಓಂಕಾರ ಪ್ರೆಸ್ಸಿನ ಮಾಲೀಕರಾದ ಶ್ರೀ ಬಿ. ಎಸ್. ನಾರಾಯಣರಾಯರು ಶೀಘ್ರದಲ್ಲಿಯೇ ಅಂದವಾಗಿ ಮುದ್ರಣ ಮಾಡಿ ಕೊಟ್ಟು ಸಹಾಯ ಮಾಡಿದ್ದಾರೆ ಹೀಗೆ ಈ ಗ್ರಂಥರಚನೆಗೂ, ಮುದ್ರಣಕ್ಕೂ, ಪ್ರಕಾಶನಕ್ಕೂ ಸಹಾಯ ಮಾಡಿದ ಎಲ್ಲ ಮಹನೀಯರಿಗೂ ನನ್ನ ವಂದನೆಗಳು,

ಎಂ. ಆರ್. ಶ್ರೀ.

ಎರಡನೆಯ ಮುದ್ರಣ[ಸಂಪಾದಿಸಿ]

ಮೊದಲನೆಯ ಮುದ್ರಣದ ಪ್ರತಿಗಳು ಬೇಗ ಮಾರಾಟವಾಗಿ ಮುಗಿದು ಹೋದದ್ದೂ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯ ಪುಸ್ತಕ ಸಮಿತಿಯವರು ಈ ಗ್ರಂಥವನ್ನು ಈ ವರ್ಷದ ಜೂನಿಯರ್ ಇಂಟರ್ ಮೀಡಿಯೆಟ್ ತರಗತಿಗೆ ಪಠ್ಯ ಪುಸ್ತಕವನ್ನಾಗಿ ಇಟ್ಟಿದ್ದೂ ನನಗೆ ಬಹಳ ಪ್ರೋತ್ಸಾಹವನ್ನು ಕೊಟ್ಟಂತಾಗಿದೆ, ಮತ್ತು ಗ್ರಂಥದ ಎರಡನೆಯ ಮುದ್ರಣಕ್ಕೂ ಕಾರಣವಾಗಿದೆ. ಎಲ್ಲ ಮಹನೀಯರಿಗೂ ನನ್ನ ಕೃತಜ್ಞತೆಯನ್ನು ಈ ಮೂಲಕ ತಿಳಿಯಬಯಸುತ್ತೇನೆ.

ಬೆಂಗಳೂರು
೯-೭-೧೯೫೧

ಎಂ. ಆರ್. ಶ್ರೀ.




ವಿಷಯ ಸೂಚಿಕೆ[ಸಂಪಾದಿಸಿ]

ಪ್ರಕರಣ

ವಿಷಯ

ಪುಟ

೧.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೩.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೬
೪.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೨
೫.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೩೫
೬.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೪೭
೭.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೫೬
೮.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೬೬
೯.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೮೦
೧೦.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೯೭
೧೧.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೦೩
೧೨.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೧೧
೧೩.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೨೮
೧೪.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೩೮
೧೫.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೪೫
೧೬.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೬೪
೧೭.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೭೩
೧೮.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೮೧
೧೯.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೯೦
೧೦.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೧೯೮
೧೧.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೦೮
೧೨.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೨೩
೧೩.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೪೧
೨೪.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೫೨
೨೫.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೬೬
೨೬.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೭೭
೨೭.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೨೯೧
೨೮.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೩೦೧
೨೯.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೩೧೫
೩೦.
. . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . . .
೩೨೭

ರಂಗಣ್ಣನ ಕನಸಿನ ದಿನಗಳು


ಪ್ರಕರಣ ೧.

ತಿಮ್ಮರಾಯಪ್ಪನ ಕಥೆ


ರಂಗಣ್ಣ ಎರಡು ತಿಂಗಳ ಕಾಲ ರಜ ತೆಗೆದುಕೊಂಡು ಬೆ೦ಗಳೂರಿಗೆ ಬಂದು ವಾಸಮಾಡುತ್ತಿದ್ದನು, ಶಿವಮೊಗ್ಗದಲ್ಲಿ ಪಿತ್ತವೇರಿಸುವ ತುಂಗಾ ಪಾನವನ್ನು ನಿತ್ಯವೂ ಮಾಡಿ, ಕಿವಿ ಮೂಗು ಬಾಯಿಗಳಿಗೆಲ್ಲ ಮುಸುರುವ ಸೊಳ್ಳೆಗಳ ಗಾನವನ್ನು ಹಗಲಿರಳೂ ಕೇಳಿ, ಸಾಲದುದಕ್ಕೆ ಅವುಗಳಿಂದ ಮುತ್ತಿಡಿಸಿಕೊಂಡು ಮನೆಯ ಮಂದಿಯೆಲ್ಲ ಮಲೇರಿಯಾ ಜ್ವರದಲ್ಲಿ ನರಳಿ, ಬದುಕಿದರೆ ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಿಸುತ್ತೇನೆಂದು ಹರಕೆ ಮಾಡಿಕೊಂಡು ಬೆಂಗಳೂರಿಗೆ ಸಂಸಾರ ಸಮೇತನಾಗಿ ಬಂದಿದ್ದನ, ಬೆಂಗಳೂರಿಗೆ ಬಂದಮೇಲೆ ಸ್ನೇಹಿತರ ಮನೆಗಳಿಗೆ ಹೋಗುವುದು, ಅವರ ಯೋಗಕ್ಷೇಮಗಳನ್ನು ವಿಚಾರಿಸುವುದು, ತನ್ನ ಮತ್ತು ಮನೆಯವರ ಆನಾರೋಗ್ಯದ ವಿಷಯಗಳನ್ನು ತಿಳಿಸುವುದು, ಅವರು ಹೇಳುವ ಪ್ರೀತಿ ಪೂರ್ವಕವಾದ ಸಮಾಧಾನದ ವಾಕ್ಯಗಳನ್ನು ಕೇಳುವುದು, ಕಡೆಗೆ ಮನೆಗೆ ಹಿಂದಿರುಗಿ ಊಟಮಾಡಿ, ಮಧ್ಯಾಹ್ನ ನಿದ್ರೆ ಮಾಡುವುದು ಅವನ ದಿನಚರಿಯಾಗಿತ್ತು. ಸಾಯಂಕಾಲ ಪೇಟೆಯ ಕಡೆಗೋ ಲಾಲ್ ಬಾಗಿನ ಕಡೆಗೋ ಹೋಗುತ್ತಿದ್ದನು.

ಸೋಮವಾರ ಇರಬಹುದು, ಸಾಯಂಕಾಲ ಆರು ಗಂಟೆ ಸಮಯ. ರಂಗಣ್ಣ ಸರಿಗೆಯ ಪಂಚೆಯನ್ನು ಉಟ್ಟುಕೊಂಡು ಒಳ್ಳೆಯ ಸರ್ಜ್ ಕೋಟನ್ನು ತೊಟ್ಟುಕೊಂಡು ಒಂದಂಗುಲ ಸರಿಗೆಯ ರುಮಾಲನ್ನು ಇಟ್ಟು ಕೊಂಡು ಪೇಟೆಯ ಕಡೆಗೆ ಹೊರಟಿದ್ದಾನೆ. ಮಾರ್ಕೆಟ್ ಚೌಕದ ಬಳಿಯ ಗಲಾಟೆಗಳನ್ನು ದಾಟಿಕೊಂಡು ದೊಡ್ಡ ಪೇಟೆಯ ಇಕ್ಕಟ್ಟು ರಸ್ತೆಯಲ್ಲಿ ಜನಸಂದಣಿಯಲ್ಲಿ ನುಸುಳಿಕೊಂಡು ಹೋಗುತ್ತಿದ್ದಾನೆ. ದೊಡ್ಡ ಪೇಟೆಯ ಚೌಕ ಬಂದಿತು. ತಲೆಯನ್ನು ಬಗ್ಗಿಸಿಕೊಂಡು ಹೋಗುತ್ತಿದ್ದಾಗ ಯಾರೋ ಹಿಂದಿನಿಂದ ಬಂದು ಬೆನ್ನಮೇಲೆ ತಟ್ಟಿ, ಏನು ರಂಗಣ್ಣ?' ಎಂದು ಸಂಬೋಧಿಸಿದರು. ತಿರುಗಿ ನೋಡುತ್ತಾನೆ, ತಿಮ್ಮರಾಯಪ್ಪ ! ಅವನು ತನ್ನ ಪೂರ್ವದ ಸಹಪಾಠಿ, ಹಿಂದಿನ ಕಾಲದ ಸ್ನೇಹಿತ. ತಿಮ್ಮರಾಯಪ್ಪ ಸ್ಕೂಲಕಾಯದವನು ; ದೊಡ್ಡ ತಲೆ, ದೊಡ್ಡ ಹೊಟ್ಟೆ, ಅವನಿಗೆ ಒಂದು ಸೂಟಿಗೆ ಆರು ಗಜ ಡಬ್ಬಲ್ ಪನ್ನ ಬಟ್ಟಿ ಇಲ್ಲದಿದ್ದರೆ ಆಗದು. ಅಕಸ್ಮಾತ್ತಾಗಿ ಸಂಧಿಸಿದ ಸ್ನೇಹಿತನ ಕುಶಲ ಪ್ರಶ್ನೆ ಮಾಡಿದ್ದಾಯಿತು. ತಿಮ್ಮರಾಯಪ್ಪ ! ಬಹಳ ದಿನಗಳಾಗಿ ಹೋದವು ; ನಡೆ, ಆನಂದಭವನಕ್ಕೆ ಹೋಗೋಣ. ಇಲ್ಲಿಯೇ ಇದೆ'- ಎಂದು ರಂಗಣ್ಣ ಆವನ ಕೈ ಹಿಡಿದುಕೊಂಡು ಚಿಕ್ಕ ಪೇಟೆಯ ರಸ್ತೆಗೆ ತಿರುಗಿದನು. ತಿಮ್ಮರಾಯಪ್ಪನಿಗೂ ಹೋಟೆಲ್ ತಿಂಡಿ ಎಂದರೆ ಹೆಚ್ಚಿನ ಒಲವು.

ಆನಂದ ಭವನದ ಮಹಡಿಯ ಮೇಲೆ ಸ್ನೇಹಿತರಿಬ್ಬರೂ ಕುಳಿತು ತಿಂಡಿಗಳನ್ನು ತಿನ್ನುತ್ತ ಮಾತಿಗಾರಂಭಿಸಿದರು.

'ಈಗ ನೀನು ಯಾವುದೋ ಕಂಪೆನಿಯ ಕಚೇರಿಯಲ್ಲಿ ಇರುವುದಾಗಿ ಪತ್ರಿಕೆಗಳಲ್ಲಿ ಓದಿದೆ. ಹೌದೇ? ಸಂಬಳ ಎಷ್ಟು? ಆಲೋಯನ್ನ್ ಏನಾದರೂ ಉಂಟೋ?

'ನೋಡಪ್ಪ ! ನಾನು ಇಲ್ಲಿಗೆ ಬಂದು ಆರು ತಿಂಗಳಾದುವು. ಏತಕ್ಕೆ ಬಂದೆನೋ ಶಿವನೇ ! ಎಂದು ಪೇಚಾಡುತ್ತಿದೇನೆ.”

'ಅದೇತಕ್ಕೆ ? ಮೊದಲಿನ ಸಂಬಳವೇ ಬರುತ್ತಿದೆಯೇ ? ಅಲೋಯನ್ಸ್ ಇಲ್ಲವೇ ?'

'ಎಲ್ಲಾ ಇದೆಯಪ್ಪ, ಇಲಾಖೆಯಲ್ಲಿದ್ದಾಗ ನೂರೆಪ್ಪತ್ತೈದು ರೂಪಾಯಿಗಳ ಸಂಬಳ ಬರುತ್ತಿತ್ತು. ಮೇಲೆ ಭತ್ಯೆ ಬರುತ್ತಿತ್ತು. ಇಲ್ಲಿ ಇನ್ನೂರು ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಮೇಲೆ ಎಪ್ಪತ್ತೈದು ರೂಪಾಯಿ ಅಲೋಯನ್ಸ್ ಕೊಡುತ್ತಾರೆ. ಆದರೂ........?

'ಇನ್ನೇನು ಆದರೂ ? ಹಿಂದಿನದಕ್ಕಿಂತ ನೂರು ರೂಪಾಯಿ ಹೆಚ್ಚಾಗಿ ಗಿಟ್ಟಿಸುತ್ತಾ ಇದ್ದೀಯೆ. ನಿನಗೆ ಅಸಮಾಧಾನಕ್ಕೇನೂ ಕಾರಣವೇ ಇಲ್ಲವಲ್ಲ. ನಿಮ್ಮ ಜನಕ್ಕೆ ಶಿಫಾರಸುಗಳಿರುತ್ತೆ, ಬಡ್ತಿಗಳು ದೊರೆಯುತ್ತೆ, ಅಲ್ಲಿ ಇಲ್ಲಿ ಅಲೋಯೆನ್ಸ್ ಬರುವ ಕಡೆ ಹುದ್ದೆಗಳು ದೊರೆಯುತ್ತವೆ. ನಮ್ಮನ್ನು ಕೇಳುವವರಾರು ? ತೀರ್ಥಹಳ್ಳಿ ಕೊಂಪೆಗೋ ಮೂಡಗೆರೆಗೋ ಮಿಡಲ್ ಸ್ಕೂಲ್ ಹೆಡ್ ಮಾಸ್ಟರ್ ಕೆಲಸಕ್ಕೆ ನಮ್ಮನ್ನು ಹಾಕುತ್ತಾರೆ ?'

'ಅದು ನಿನ್ನ ಅಭಿಪ್ರಾಯ. ಕೇಳು ರಂಗಣ್ಣ ! ಬೆಂಗಳೂರಿಗೆ ಬಂದ ಮೇಲೆ ಹದಿನೈದು ಪೌಂಡು ತೂಕದಲ್ಲಿ ಇಳಿದು ಹೋಗಿದ್ದೇನೆ ! ಮನೆಯಲ್ಲಿ ದಿನವೂ ಆಕೆ,- ಏಕೆ ಬಂದಿರೋ ಈ ಹಾಳು ಕೆಲಸಕ್ಕೆ ? ಆಗಲೇ ಮೂಳೆ ಬಿಟ್ಟು ಕೊಂಡಿದ್ದೀರಿ ; ನಮಗೆ ಈ ಕೆಲಸ ಬೇಡ ; ಹಿಂದಿನ ಕೆಲಸಕ್ಕೆನೇ ಹೊರಟು ಹೋಗೋಣ ಎಂದು ಹೇಳುತ್ತಿದ್ದಾಳೆ.'

'ವಿಚಿತ್ರದ ಮನುಷ್ಯರು ನೀವು ! ಈಗ ನಿನ್ನ ತೂಕ ಎಷ್ಟು ? ನಿನ್ನಾಕೆಯ ತೂಕ ಎಷ್ಟು ?'

'ನನ್ನ ತೂಕ ಈಗ ಇನ್ನೂರ ಐದು ಪೌಂಡು. ಆಕೆಯದು ನೂರತೊಂಬತ್ತು ಪೌಂಡು, ಹಿಂದಿನಗಿಂತ ನೂರು ರೂಪಾಯಿ ಹೆಚ್ಚಿಗೆ ಸಂಬಳ ಸಾರಿಗೆ ಬರುತ್ತಿದೆ ಎಂದು ನೀನೇನೋ ಹೇಳಿದೆ. ಆದರೆ ಕೇಳು ಮಹಾರಾಯ ! ನಾನು ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟು ಗಂಟೆಯಾದರೂ ಮನೆಗೆ ಬರುವುದು ಕಷ್ಟ, ಈ ದಿನವೇನೋ ಅಕಸ್ಮಾತ್ತಾಗಿ ಬೇಗ ಹೊರಟು ಬಂದೆ. ದಿನಾಗಲೂ ಬೆಳಗ್ಗೆ ಅಷ್ಟು ಹೊತ್ತಿಗೆಲ್ಲ ಊಟಮಾಡಿ ಅಭ್ಯಾಸವಿಲ್ಲ, ಟರ್ಫಿ ಕ್ಯಾರಿಯರಿನಲ್ಲಿ ಅನ್ನ ಹುಳಿ ಇತ್ಯಾದಿಯನ್ನು ಮಧ್ಯಾಹ್ನ ತರಿಸಿಕೊಳ್ಳಬೇಕು. ಕಚೇರಿಯಲ್ಲೂ ಒಂದು ಕ್ಷಣ ವಿರಾಮವಿಲ್ಲ, ಮೂಟೆಗಳನ್ನು ತೂಕ ಮಾಡಿ ಮಾಡಿ, ಆ ಲೆಕ್ಕಗಳನ್ನೆಲ್ಲ ಬರೆದೂ ಬರೆದೂ ಸುಸ್ತಾಗಿ ಹೋಗುತ್ತೆ, ದಿನಾಗಲೂ ಒಂದೇ ವಿಧವಾದ ಕೆಲಸ. ಬೇಜಾರು ಹೇಳತೀರದು. ನನಗೇನೂ ಈ ಹಾಳು ಕೆಲಸ ಬೇಕಾಗಿರಲಿಲ್ಲ. ಆದರೂ ಗಂಟು ಬಿತ್ತು.”

'ಇದೇನು ಹೀಗೆ ಹೇಳುತ್ತೀಯೆ? ಈ ಕೆಲಸ ನಿನಗೆ ಬೇಕಾಗಿರಲಿಲ್ಲವೆ ? ನಿನ್ನ ಪ್ರಯತ್ನವಿಲ್ಲದೆಯೆ ಇದು ಕೈಗೂಡಿತೆ? ಈ ಆವುಟ ಯಾರ ಹತ್ತಿರ ಎತ್ತುತ್ತೀಯ ? ಈಚೆಗೆ ನೀನೂ ಸ್ವಲ್ಪ ಪಾಲಿಟಿಕ್ಸ್ (politics) ಕಲಿತ ಹಾಗೆ ಕಾಣುತ್ತದೆ.?'

'ಇಲ್ಲ ನನ್ನಪ್ಪ ! ಶಿವನಾಣೆ ರಂಗಣ್ಣ ! ನಾನು ಪ್ರಯತ್ನ ಪಡಲಿಲ್ಲ, ಈಗಲೂ ನನಗೆ ಬೇಕಾಗಿಲ್ಲ, ಬಿಟ್ಟು ಬಿಟ್ಟರೆ ನನ್ನ ಹಿಂದಿನ ಕೆಲಸಕ್ಕೆ ಈ ಕ್ಷಣ ಹೊರಟು ಹೋದೇನು. ಆದರೆ ನಮ್ಮ ಜನರ ಕಾಟ ಹೇಳತೀರದು. ಆ ಸಿದ್ದಪ್ಪ ನಮ್ಮ ಜನರಲ್ಲಿ ಮುಖಂಡ ಎಂದು ಹಾರಾಡುತ್ತಾನೆ. ದಿವಾನರನ್ನು ಅನುಸರಿಸಿಕೊಂಡು ನಡೆಯುತ್ತ ಪ್ರತಿಷ್ಠೆ ತೋರಿಸಿಕೊಳ್ಳುತ್ತಾನೆ. ಅವನು ನಮ್ಮನ್ನೆಲ್ಲ ಉದ್ದಾರ ಮಾಡುತ್ತೇನೆಂದು ತಿಳಿದುಕೊ೦ಡು ದಿವಾನರ ಹತ್ತಿರ ಹೋಗಿ ಅರಿಕೆ ಮಾಡಿಕೊಂಡನಂತೆ, ಅವರೋ ಬಹಳ ಬುದ್ಧಿವಂತರು, ಒಬ್ಬ ಮುಖಂಡನನ್ನು ಜೇಬಿಗೆ ಹಾಕಿಕೊಂಡ ಹಾಗಾಯಿತು ಎಂದುಕೊಂಡರು. ಸರ್ಕಾರಕ್ಕೇನೂ ನಷ್ಟವಿಲ್ಲ, ಕಂಪೆನಿಯವರು ಹೆಚ್ಚು ಸಂಬಳ ಕೊಡುತ್ತಾರೆ, ಆಗಬಹುದು ಎಂದು ಹೇಳಿ ಈ ಏರ್ಪಾಟು ಮಾಡಿ ಕೊಟ್ಟರು. ಸಿದ್ಧಪ್ಪ ನನ್ನ ಹತ್ತಿರ ಬಂದು,- ದಿವಾನರಿಗೆ ಶಿಫಾರಸು ಮಾಡಿ ನಿನಗೆ ಬೇರೆ ಕಡೆ ಕೆಲಸ ಮಾಡಿಸಿ ಕೊಟ್ಟಿದ್ದೇನೆ ; ತಿಂಗಳಿಗೆ ನೂರು ರೂಪಾಯಿ ಹೆಚ್ಚಾಗಿ ಬರುತ್ತೆ ; ಮುಂದೆ ಇನ್ನೂ ಹೆಚ್ಚಾಗಿ ಬರುತ್ತೆ ; ನಮ್ಮ ಕೋಮಿನ ನಾಲ್ಕು ಜನಕ್ಕೆ ಅನುಕೂಲಮಾಡಿಕೊಟ್ಟ ಪುಣ್ಯ ನನಗೆ ಬರಲಿ-- ಎಂದು ಹೇಳಿದನು. ಈ ಕೆಲಸ ನನಗೆ ಬೇಡ ಎಂದು ನಾನು ಹೇಳಿದೆ. ಅವನು- ನನ್ನ ಮರ್ಯಾದೆ ತೆಗೆಯಬೇಡ ತಿಮ್ಮರಾಯಪ್ಪ ! ನಮ್ಮ ಜನ ಹಿಂದೆ ಬಿದ್ದಿದ್ದಾರೆ ಸಹಾಯ ಮಾಡಬೇಕು ಎಂದು ನಾನು ಕೇಳಿ, ಅವರು ಆಗಲಿ ಎಂದು ಹೇಳಿ ಮಾಡಿ ಕೊಟ್ಟಮೇಲೆ, ನೀನು ಹೀಗೆ ಹಟಮಾಡಿದರೆ ಹೇಗೆ ? ಮತ್ತೆ ಅವರ ಹತ್ತಿರ ನಾನು ಮುಖ ತೋರಿಸುವುದು ಹೇಗೆ ? ಅವರು ನನ್ನನ್ನು ಮುಖಂಡ ಎಂದು ತಿಳಿದಾರೆಯೇ ? ಹಾಗೆಲ್ಲ ಮಾಡಬೇಡ ಎಂದು ಬಲಾತ್ಕಾರ ಮಾಡಿ ನನ್ನ ತಲೆಗೆ ಈ ಕೆಲಸವನ್ನು ಕಟ್ಟಿದ್ದಾನೆ.'

' ಈಗೇನು ? ಒಳ್ಳೆಯದೇ ಆಯಿತು. ನನಗೂ ಯಾವನಾದರೊಬ್ಬ ಮುಖಂಡ ಶಿಫಾರಸು ಮಾಡಿ, ಹಾಗೆ ಬಲಾತ್ಕಾರದಿಂದ ತಲೆಗೆ ಕಟ್ಟಿದರೆ ಸಂತೋಷದಿಂದ ತಲೆಗೆ ಕಟ್ಟಿಸಿಕೊಂಡೇನು.'

' ರಂಗಣ್ಣ ನಿನಗೇನು ಗೊತ್ತು. ಇಲ್ಲಿ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ದುಡಿದು ಮೈ ಕೈ ನೋಯಿಸಿಕೊಂಡು ಇನ್ನೂರು ರೂಪಾಯಿಗಳ ಸಂಬಳ ತೆಗೆದುಕೊಳ್ಳುವುದು ಜಾಣತನವೋ ಅಥವಾ ಅಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕಚೇರಿಗೆ ಹೋದ ಶಾಸ್ತ್ರ ಮಾಡಿ ಆಟ ಆಡಿಕೊಂಡಿದ್ದು ನೂರೆಪ್ಪತ್ತೈದು ರೂಪಾಯಿಗಳ ಸಂಬಳ ತೆಗೆದು ಕೊಳ್ಳುವುದು ಜಾಣತನವೋ ? ಅಲ್ಲಿ ಸುಖವಾಗಿದ್ದೆ. ಇನ್ ಸ್ಪೆಕ್ಟರು ಎಂದು ಗೌರವ ಇತ್ತು. ಮೇಷ್ಟ್ರುಗಳೋ ಶ್ಯಾನುಭೋಗರುಗಳೋ ಉಪ್ಪಿಟ್ಟು, ದೋಸೆ, ಕಾಫಿ, ಎಳನೀರು, ಬಾಳೇಹಣ್ಣು ಮುಂತಾದುವನ್ನು ತಂದು ಕೊಟ್ಟು, ಉಪಚಾರ ಮಾಡುತ್ತಿದ್ದರು. ಮೂರು ಹೊತ್ತ ಪುಷ್ಕಳವಾಗಿ ತಿಂಡಿ ತೀರ್ಥಗಳ ನೈವೇದ್ಯ ಮಾಡಿಸಿ ಕೊಂಡು ಹಾಯಾಗಿ ಕಾಲಕಳೆದುಕೊಂಡು ಇದ್ದವನನ್ನು ತಂದು ಈ ಸೆರೆಮನೆಯಲ್ಲಿ ಕೂಡಿ ಖೈದಿಯ ಕೈಯಲ್ಲಿ ಕೆಲಸ ತೆಗೆಯುವಂತೆ ತೆಗೆಯುತ್ತಿದ್ದರೆ ಸಹಿಸಿಕೊಂಡು ಬದುಕಿರಬಹುದೇ? ಇದು ಏನು ಬಾಳು ರಂಗಣ್ಣ ? ಸ್ವಾತಂತ್ರವಿಲ್ಲ ಸಂತೋಷವಿಲ್ಲ ; ಒಂದು ಒಳ್ಳೆಯ ನೋಟವಿಲ್ಲ ಊಟವಿಲ್ಲ.

' ತಿಮ್ಮರಾಯಪ್ಪ ! ನೀನು ಹೇಳುತ್ತಿರುವ ವರ್ಣನೆ ನನ್ನ ಬಾಯಲ್ಲಿ ನೀರೂರಿಸುತ್ತಿದೆಯಲ್ಲ ! ಹಾಗೆ ಆಟ ಆಡಿಕೊಂಡು ಸಂಬಳ ತೆಗೆದುಕೊಳ್ಳಬಹುದೇ ? ಕಚೇರಿಯಲ್ಲಿ ಕೆಲಸ ಹೆಚ್ಚಲ್ಲವೇ ? ಹೊರಗಡೆ ಹೋದರೆ ಸ್ಕೂಲುಗಳ ತನಿಖೆ, ಅವುಗಳ ವರದಿ ಬರೆಯುವುದು, ಗ್ರಾಮಸ್ಥರಿಗೆ ಸಮಾಧಾನ ಹೇಳುವುದು, ವಿದ್ಯಾಭಿವೃದ್ಧಿಯನ್ನು ದೇಶದಲ್ಲುಂಟುಮಾಡುವುದು-ಇವೆಲ್ಲ ಜವಾಬ್ದಾರಿಯ ಕಷ್ಟ ಕರವಾದ ಕೆಲಸಗಳಲ್ಲವೆ ? ?'

' ಹುಚ್ಚಣ್ಣ ನೀನು, ರಂಗಣ್ಣ ! ಶಿವನಾಣೆ ನಿನಗೆ ಹೇಳುತ್ತೇನೆ ಕೇಳು. ನೀನೆಲ್ಲೋ ಹುಡುಗರಿಗೆ ಪಾಠ ಹೇಳಿಕೊಂಡು ಇರುವ ಮನುಷ್ಯ. ಈಚೆಗೆ ಮೇಷ್ಟುಗಳಿಗೂ ನಾರ್ಮಲ್ ಸ್ಕೂಲಿನಲ್ಲಿ ಸ್ವಲ್ಪ ಪಾಠ ಹೇಳಿದ್ದೀಯೆ. ನಿನಗೆ ಹೊರಗಿನ ಪ್ರಪಂಚ ಏನೂ ತಿಳಿಯದು. ಸ್ಕೂಲು ಗೀಲು ಉದ್ದಾರವಾಗುವುದು ಇನ್ನು ಒಂದು ಶತಮಾನಕ್ಕೋ ಎರಡು ಶತಮಾನಕ್ಕೋ ! ಬ್ರಿಟಿಷರೆಲ್ಲ ಗಂಟು ಮೂಟೆ ಕಟ್ಟಿಕೊಂಡು ಓಡಿ ಹೋದರೆ, ನಮ್ಮ ಮಹಾತ್ಮ ಗಾಂಧಿ ಭರತಖಂಡದ ಚಕ್ರವರ್ತಿ ಆದರೆ, ಸೌರಾಷ್ಟ್ರ ಸೋಮನಾಥನ ದೇವಾಲಯ ಮತ್ತೆ ಊರ್ಜಿತವಾದರೆ ನಿನ್ನ ಸ್ಕೂಲು ಉದ್ಧಾರವಾಗುತ್ತದೆ ! ವಿದ್ಯಾಭಿವೃದ್ಧಿ ಆಗುತ್ತದೆ ! ?'

' ಅಷ್ಟೇನೆ ? - ಸರಿ, ಬಿಡು ; ಆಗದ ಹೋಗದ ಮಾತು. ಮತ್ತೆ ದೇಶದ ತುಂಬ ಅಷ್ಟೊಂದು ಸ್ಕೂಲುಗಳಿವೆ ; ಅಷ್ಟೊಂದು ಸಿಬ್ಬಂದಿ ಕೆಲಸ ಮಾಡುತ್ತಾ ಇದ್ದಾರೆ ; ಅಷ್ಟೊಂದು ಹಣ ಖರ್ಚು ಮಾಡುತ್ತಾ ಇದ್ದಾರೆ ; ನಾವು ಸಹ ಮೇಷ್ಟರುಗಳನ್ನು ತಯಾರುಮಾಡಿ ಕಳಿಸುತ್ತಾ ಇದ್ದೇವೆ.'

' ಆದರೇನು ರಂಗಣ್ಣ ! ಅಲ್ಲಿ ಇಲ್ಲಿ ಕೆಲವರು ಮೇಷ್ಟರುಗಳು ಭಯಭಕ್ತಿಗಳಿಂದ ಕೆಲಸ ಮಾಡಿ ಕೊಂಡು ಹೋಗುತ್ತಿದ್ದಾರೆ. ಆದರೆ ಹಲವರಿಗೆ ಪಾಠ ಹೇಳಿಕೊಡುವುದು ಗೊತ್ತಿಲ್ಲ. ಗ್ರಾಮಸ್ಥರಿಗೆ ಸುತರಾಂ ಶ್ರದ್ಧೆ ಹುಟ್ಟಿಲ್ಲ. ನಾನೂ ಸ್ಕೂಲ್ ತನಿಖೆಗಳನ್ನು ಮಾಡಿದೆ. ಏನಿದೆ ಆಲ್ಲಿ ನೋಡುವುದು? ಬರಿಯ ಸೊನ್ನೆ ! ಇನ್ನು ಸುಮ್ಮನೆ ಬಡ ಮೇಷ್ಟರ ಮೇಲೆ ಹಾರಾಡಿ ಪ್ರಯೋಜನವಿಲ್ಲ ಎಂದುಕೊಂಡು ಸುಮ್ಮನಾದೆ. ಉಪಾಧ್ಯಾಯರ ಸಭೆ ಮಾಡುವುದು, ತಿಂಡಿ ತೀರ್ಥ ಹೊಡೆಯುವುದು, ಒಂದೆರಡು ಭಾಷಣ ಮಾಡುವುದು, ವರದಿಗಳನ್ನು ಗೀಚಿ ಮೇಲಕ್ಕೆ ಕಳಿಸಿ ಬಿಡುವುದು, ತಿ೦ಗಳುಗುತ್ತಲೂ ಜೇಬಿಗೆ ಸಂಬಳ ಇಳಿಬಿಡುವುದು ಹೀಗೆ ರಾಮರಾಜ್ಯದಲ್ಲಿದ್ದ ಮನುಷ್ಯ ಇಲ್ಲಿಗೆ ಬಂದು ನರಳುತ್ತಾ ಇದ್ದೆನಲ್ಲ ! !

' ಆದರೂ ನೂರು ರೂಪಾಯಿ ಹೆಚ್ಚಾಗಿ ಬರುತ್ತಿದೆಯಲ್ಲ ತಿಮ್ಮರಾಯಪ್ಪ ! ನೀನು ಸಿದ್ದಪ್ಪನವರಿಗೆ ಕೃತಜ್ಞನಾಗಿರಬೇಕು.'

'ಅಯ್ಯೋ ಶಿವನೇ ! ಕೃತಜ್ಞನಾಗೇನೋ ಇದ್ದೇನೆ. ಆದರೆ ನೋಡು, ನಾವು ವ್ಯಾಪಾರದವರು, ನೀನು ಕಂಡಿದ್ದೀಯಲ್ಲ. ನಾನು ಕೋಲಾರದಲ್ಲಿದ್ದಾಗ ಮನೆಯ ಬಾಡಿಗೆ ಹತ್ತೋ ಹನ್ನೆರಡೋ ರೂಪಾಯಿ ಕೊಡುತ್ತಿದ್ದೆ. ಒಬ್ಬ ಮೇಷ್ಟನ್ನೇ ಅಡಿಗೆಗೆ ಇಟ್ಟು ಕೊಂಡಿದ್ದೆ. ಅವನಿಗೆ ನಾನೇನೂ ಸಂಬಳ ಕೊಡುತ್ತಿರಲಿಲ್ಲ. ಈಗಲೂ ನನ್ನಾಕೆ ನನಗೆ ಹೇಳುತ್ತಾಳೆ : ಹಾಳು ಬೆಂಗಳೂರಿಗೆ ಬಂದು ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವ ಸ್ಥಿತಿ ಬಂದಿದೆಯಲ್ಲ ; ಹುಣಿಸೆ ಹಣ್ಣಿಗೆ ದುಡ್ಡು ಹಾಕಬೇಕಾಗಿದೆಯಲ್ಲ; ಅವರೆಕಾಯಿಗೆ ದುಡ್ಡು ಕೊಟ್ಟು ತಿನ್ನಬೇಕಾಗಿದೆಯಲ್ಲ ; ಬರಿಯ ತರಕಾರಿಗೇನೆ ತಿಂಗಳಿಗೆ ಹದಿನೈದು ರೂಪಾಯಿಗಳಾಗುತ್ತೆ. ಈ ಸಂಸಾರ ಹೇಗೆ ಪೂರೈಸುತ್ತೆ ? ನನ್ನ ಕೈಯಲ್ಲಾಗದು ಎನ್ನುತ್ತಾಳೆ. ಜೊತೆಗೆ ಇಲ್ಲಿ ಮನೆಯ ಬಾಡಿಗೆ ನಲವತ್ತು ರೂಪಾಯಿ. ನನ್ನ ಹೆಂಡತಿ ಅಡಿಗೆ ಮಾಡಲಾರಳು ; ಅಡಿಗೆಯವನಿಗೆ ತಿಂಗಳಿಗೆ ಇಪ್ಪತೈದು ರೂಪಾಯಿ. ನನ್ನ ಮಕ್ಕಳ ಮನೆಮೇಷ್ಟರಿಗೆ ಕೋಲಾರದಲ್ಲಿ ಏನನ್ನೂ ಕೊಡುತ್ತಿರಲಿಲ್ಲ; ಇಲ್ಲಿ ತಿಂಗಳಿಗೆ ಹದಿನೈದು ರೂಪಾಯಿ. ಏನಾಯಿತು ಈ ಲೆಕ್ಕಾಚಾರವೆಲ್ಲ? ಹೇಳು ರಂಗಣ್ಣ. ಕಷ್ಟವೂ ಹೆಚ್ಚಿತು, ಆದಾಯವೂ ಇಳಿಯಿತು. ಎರಡು ದಿನ ನೀನೂ ಇನ್ ಸ್ಪೆಕ್ಟರ್ ಗಿರಿ ಮಾಡಿದರೆ ಆ ಸುಖ ಆ ಭೋಗ ಗೊತ್ತಾಗುತ್ತದೆ ; ಈಗಿನ ನನ್ನ ಅವಸ್ಥೆ ಅರಿವಾಗುತ್ತದೆ.

ಈ ಮಾತುಗಳು ಮುಗಿಯುವ ಹೊತ್ತಿಗೆ ತಿಂಡಿ ತಿನ್ನುವುದು ಮುಗಿಯಿತು. ಮಾಣಿ ಬಿಲ್ಲನ್ನು ತಂದು ಕೊಟ್ಟನು. ತಿಮ್ಮರಾಯಪ್ಪನೇ ಹಣವನ್ನು ಕೊಟ್ಟನು. ಹೋಟಲನ್ನು ಬಿಟ್ಟು ಬರುತ್ತೆ ಪರಸ್ಪರವಾಗಿ ಸಂಸಾರದ ಮಾತುಗಳನ್ನು ಆಡುತ್ತ ಮಕ್ಕಳೆಷ್ಟು ? ಹೆಣ್ಣು ಮಕ್ಕಳಿಗೆ ಮದುವೆ ಆಗಿದೆಯೆ? ಹುಡುಗರು ಯಾವ ತರಗತಿಗಳಲ್ಲಿ ಓದುತ್ತಿದ್ದಾರೆ. ಇತ್ಯಾದಿ ಪ್ರಶೋತ್ತರಗಳಿಂದ ದಾರಿಯನ್ನು ಸಾಗಿಸುತ್ತ ವಿಶ್ವೇಶ್ವರಪುರದ ಸಜ್ಜನರಾಯರ ಸರ್ಕಲ್ ಬಳಿಗೆ ಬಂದರು. ರಂಗಣ್ಣನು ಅಲ್ಲಿ ನಿಂತು ಇನ್ನು ನಾನು ಮನೆಗೆ ಹೋಗುತ್ತೇನೆ. ನಾಳೆ ನಾಳಿದ್ದರಲ್ಲಿ ಭೇಟಿಯಾಗುತ್ತೇನೆ' ಎಂದು ಹೇಳಿದನು. ತಿಮ್ಮರಾಯಪ್ಪ ಗವೀಪುರದ ಬಡಾವಣೆಗೆ ಹೋಗಬೇಕಾಗಿತ್ತು. ಅವನು ಅತ್ತಕಡೆಗೆ ಹೊರಟು ಹೋದನು.

ರಂಗಣ್ಣ ರಾತ್ರಿ ಊಟ ಮಾಡಿ ಹೆಂಡತಿಯೊಡನೆ ಆ ದಿನ ಸಂಜೆ ನಡೆದ ವೃತ್ತಾಂತವನ್ನೆಲ್ಲ ಹೇಳಿದನು. ಆಕೆ, " ಅಯ್ಯೋ ! ಭಾಗ್ಯವನ್ನು ನಾವು ಕೇಳಿಕೊಂಡು ಬಂದಿದ್ದೇವೆಯೆ ? ಅದಕ್ಕೆಲ್ಲ ಪುಣ್ಯ ಮಾಡಿರಬೇಕು. ಅಮಲ್ದಾರರ ಹೆಂಡತಿ, ಪೊಲೀಸ್ ಇನ್ಸ್ಪೆಕ್ಟರ ಹೆಂಡತಿ- ಅವರ ಜೊತೆಯಲ್ಲಿ ಸರಿಸಮನಾಗಿ ಊರಲ್ಲಿ ಓಡಾಡುವುದನ್ನು ಈ ಜನ್ಮದಲ್ಲಿ ಕಾಣೆ'-ಎಂದು ಚಿಂತಾಕ್ರಾಂತಳಾಗಿ ಹೇಳಿದಳು, ಆ ರಾತ್ರಿ ರಂಗಣ್ಣನಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಕನಸುಗಳು ಮತ್ತು ಕಲ್ಪನೆಗಳು ತಲೆಯಲ್ಲಿ ತುಂಬಿಕೊಳ್ಳುತ್ತಿದ್ದುವು. ತನಗೆ ಇನ್ ಸ್ಪೆಕ್ಟರ್‌ಗಿರಿ ಆಯಿತೆಂದೇ ಕನಸು ಬಿತ್ತು. ತಾನು ಹಳ್ಳಿಯ ಕಡೆ ಸರ್ಕಿಟು ಹೋದಂತೆಯೂ ತಿಮ್ಮರಾಯಪ್ಪ ವರ್ಣಿಸಿದ ಹಾಗೆ ಗ್ರಾಮಸ್ಥರು ಮರದ ಕೆಳಗೆ ಗುಂಪು ಸೇರಿ ಹೂವಿನ ಹಾರ, ಹಣ್ಣುಗಳು, ಎಳನೀರು ಮೊದಲಾದುವನ್ನು ಇಟ್ಟು ಕೊಂಡು ಕಾದಿದ್ದಂತೆಯೂ ಕಾಫಿ ಉಪ್ಪಿಟ್ಟು ದೋಸೆಗಳು ಬಾಳೆಯೆಲೆಯ ಮುಸುಕಿನಲ್ಲಿ ಸೇರಿಕೊಂಡು ವಾಸನೆ ಬೀರುತ್ತಿದ್ದಂತೆಯೂ ಸುಖ ಸ್ವಪ್ನವನ್ನು ಕಂಡು ರಾತ್ರಿಯನ್ನು ಕಳೆದನು.

ಪ್ರಕರಣ ೨

ಕನಸು ದಿಟವಾಯಿತು

ಸೂರ್ಯೋದಯವಾಯಿತು. ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಕಾಫಿ ಸೇವನೆಯನ್ನು ಮಾಡುತ್ತಾ ರಂಗಣ್ಣನು ಹೆಂಡತಿಗೆ ಕನಸಿನ ಸಮಾಚಾರವನ್ನು ತಿಳಿಸಿದನು. ಆಕೆ--- ಸರಿ, ಇನ್ನು ಈ ಹುಚ್ಚೊಂದು ನಿಮಗೆ ಹತ್ತಿತೆ ? ಸಾಕು. ಕಾಫಿ ಕುಡಿದು ಬಿಟ್ಟು ಏನಾದರೂ ತರಕಾರಿ ತಂದುಹಾಕಿ. ಹೋಗಿ ಸ್ನೇಹಿತರ ಮನೆಯಲ್ಲಿ ಕುಳಿತುಬಿಟ್ಟು ಈ ಹುಚ್ಚನ್ನೆಲ್ಲಾ ಬಿಚ್ಚಿ ಊಟದ ಹೊತ್ತಿಗೆ ಬರಬೇಡಿ ' --- ಎಂದು ತಾತ್ಸಾರದಿಂದ ಹೇಳಿದಳು. ರಂಗಣ್ಣನು ತರಕಾರಿಯನ್ನೆನೊ ತಂದು ಮನೆಗೆ ಹಾಕಿದನು. ಆದರೆ ಸ್ನೇಹಿತರ ಮನೆಗೆ ಹೋಗದೆ ಬಿಡಲಿಲ್ಲ. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮನೆಗೆ ಹಿಂದಿರುಗಿದನು. ಆವನು ಮನೆಯನ್ನು ಸೇರುವುದಕ್ಕೂ ಪಕ್ಕದ ಮನೆಯಿಂದ ಟಪಾಲಿನವನು ಹೊರಕ್ಕೆ ಬರುವುದಕ್ಕೂ ಸರಿಹೋಯಿತು. ಟಪಾಲಿನವನು ಒಂದು ಸರ್ಕಾರಿ ಲಕ್ಕೋಟೆಯನ್ನು ಕೈಗೆ ಕೊಟ್ಟು ಹೊರಟು ಹೋದನು. ಲಕ್ಕೋಟೆ ಡೆಪ್ಯುಟಿ ಡೈರೆಕ್ಟರವರ ಕಚೇರಿಯಿಂದ ಬಂದದ್ದು. ಒಡೆದು ನೋಡುತ್ತಾನೆ ! ಜನಾರ್ದನ ಪುರಕ್ಕೆ ಇನ್ ಸ್ಪೆಕ್ಟರಾಗಿ ವರ್ಗ ಮಾಡಿದ್ದಾರೆ! ರಜದಿಂದ ಹಿಂದಿರುಗಿ ಬರಬೇಕೆಂದೂ ಕೂಡಲೆ ಹೋಗಿ ಅಧಿಕಾರ ವಹಿಸಿಕೊಳ್ಳಬೇಕೆಂದೂ ತುರ್ತು ಅಜ್ಞೆ ಮಾಡಿದ್ದಾರೆ! ರಂಗಣ್ಣ ತನ್ನ ಕಣ್ಣುಗಳನ್ನು ನಂಬಲಿಲ್ಲ. ತಾನು ಎಲ್ಲಿರುವನೆಂಬ ಅರಿವೂ ಅವನಿಗೆ ಆಗಲಿಲ್ಲ. ಅದೇನು ಸಾಚಾನೇ ಖೋಟಾನೇ ಎಂದು ಎರಡು ಮೂರು ಬಾರಿ ನೋಡಿದನು, ಓದಿದನು. ಎಲ್ಲವೂ ಸಾಚಾ, ಟೈಪಾಗಿದೆ, ಸಾಹೇಬರ ರುಜುವಾಗಿದೆ, ಅಸಿಸ್ಟೆಂಟರ ರುಜು ಬಿದ್ದಿದೆ. ತನ್ನದೊಂದೇ ವರ್ಗವಲ್ಲ ; ಇತರರ-ನಾಲೈದು ಮಂದಿಯ ವರ್ಗಗಳೂ ಇವೆ. ರಂಗಣ್ಣನಿಗೆ ಇದೇನೋ ದೈವಮಾಯೆ ಎನ್ನಿಸಿತು. ಒಳಕ್ಕೆ ಹೋಗಿ ಹೆಂಡತಿಗೆ ಲಕ್ಕೋಟೆಯನ್ನೂ ವರ್ಗದ ಆರ್ಡರನ್ನೂ ತೋರಿಸಿ ಸಮಾಚಾರವನ್ನು ತಿಳಿಸಿದನು. ಆಕೆ ನಂಬಲಿಲ್ಲ. ತನ್ನನ್ನು ಗೇಲಿ ಮಾಡುವುದಕ್ಕಾಗಿ ಗಂಡನು ಹಾಗೆ ಮಾಡುತ್ತಿದ್ದಾನೆಂದು ಆಕೆ ಬಗೆದಳು. ಆ ಮೇಲೆ ಅದು ತಮಾಷೆಯಲ್ಲ, ನಿಜ ಎನ್ನು ವುದು ಆಕೆಗೂ ಗೊತ್ತಾಯಿತು. ಬೇಗ ಒಗ್ಗರಣೆ ಹಾಕಿ, ದೇವರ ಮನೆಗೆ ಹೋಗಿ ದೀಪಗಳನ್ನು ಹಚ್ಚಿ ದೇವರ ಪೆಟ್ಟಿಗೆಗೆ ನಮಸ್ಕಾರ ಮಾಡಿದಳು, ಹೊರಕ್ಕೆ ಬರುತ್ತ, ' ನೋಡಿ, ನಾನು ಮಹಾ ಪತಿವ್ರತೆಯಾದ್ದರಿಂದ ನಿಮಗೆ ಈ ಆರ್ಡರು ಬಂತು. ನಿಮ್ಮ ಸಂಬಳ ಏನಾದರೂ ಮಾಡಿಕೊಳ್ಳಿ. ಅದರೆ ಭತ್ಯದ ದುಡ್ಡು ಒಂದು ಕಾಸನ್ನೂ ಮುಟ್ಟ ಕೂಡದು. ನನ್ನ ಹತ್ತಿರ ತಂದು ಕೊಟ್ಟು ಬಿಡಬೇಕು'- ಎಂದು ಕರಾರು ಹಾಕಿದಳು. ರಂಗಣ್ಣನು, " ನಾನು ಊಟ ಮಾಡಿಕೊಂಡು ಕಚೇರಿಗೆ ಹೋಗಿ ಎಲ್ಲವನ್ನೂ ವಿಚಾರಿಸುತ್ತೇನೆ. ಬೇಗ ಬಡಿಸು- ಎಂದು ಹೇಳಿದನು. ಆದರ೦ತೆ ಆಕೆ ಎಲೆ ಮಣೆ ಎಲ್ಲವನ್ನೂ ಹಾಕಿದಳು. ಅನ್ನವನ್ನು ಬಡಿಸಿದಳು. ದಿನವೂ ಎರಡು ಮಿಳ್ಳೆ ತುಪ್ಪ ಹಾಕುತ್ತಿದ್ದವಳು ಆ ದಿನ ನಾಲ್ಕು ಮಿಳ್ಳೆ ತುಪ್ಪ ಹಾಕಿದಳು.

ರಂಗಣ್ಣ ಊಟವನ್ನು ಮುಗಿಸಿಕೊಂಡು ಸೂಟನ್ನು ಧರಿಸಿಕೊಂಡು ಡೆಪ್ಯುಟಿ ಡೈರಕ್ಟರವರ ಕಚೇರಿಗೆ ಹೋಗಿ ವಿಚಾರಿಸಿದನು. ವರ್ಗದ ಆರ್ಡರು ಸರಿ ಎಂದು ಗೊತ್ತಾಯಿತು. ಸಾಹೇಬರನ್ನು ನೋಡಿ ತನ್ನ ಕೃತಜ್ಞತೆಯನ್ನು ಸೂಚಿಸಿ ಹಿಂದಿರುಗಿದನು. ಈ ಸಮಾಚಾರವನ್ನು ತಿಮ್ಮರಾಯಪ್ಪನಿಗೆ ತಿಳಿಸಬೇಕೆಂದು ಅವನಿಗೆ ದೊಡ್ಡದೊಂದು ಆತುರ. ಆದರೆ ಸಾಯಂಕಾಲದವರೆಗೂ ಅವನು ಮನೆಗೆ ಬರುವುದಿಲ್ಲ ಎಂದು ತಿಳಿದಿತ್ತು. ಹೇಗೋ ಕಾದಿದ್ದು ಗವೀಪುರದ ಬಡಾವಣೆ ಕಡೆಗೆ ಸಾಯಂಕಾಲ ಆರು ಗಂಟೆಗೆ ಹೋದನು. ತಿಮ್ಮರಾಯಪ್ಪ ಮನೆಗೆ ಬಂದಿರಲಿಲ್ಲ. ರಂಗಣ್ಣ ಆ ಬಡಾವಣೆಯ ಗುಹೇಶ್ವರನ ಗುಡ್ಡದ ಮೇಲೆ ಏಳು ಗಂಟೆಯವರೆಗೂ ಕುಳಿತುಕೊಂಡಿದ್ದು ಪುನಃ ಹೋಗಿ ಮನೆಯಲ್ಲಿ ವಿಚಾರಿಸಿದನು. ಆಗಲೂ ತಿಮ್ಮರಾಯಪ್ಪ ಬಂದಿರಲಿಲ್ಲ. ' ಎಷ್ಟು ಹೊತ್ತಿಗೆ ಬರುತ್ತಾರೆ ? ಎಂದು ಕೇಳಿದ್ದಕ್ಕೆ, ' ಗೊತ್ತಿಲ್ಲ. ಎಂಟು, ಒಂಬತ್ತು, ಹತ್ತು ಗಂಟೆ ಆದರೂ ಆಗುತ್ತದೆ' ಎಂದು ಉತ್ತರ ಬಂದಿತು. ಏನು ಮಾಡುವುದು ? ಊಟಮಾಡಿ ಕೊಂಡಾದರೂ ಬರೋಣವೆಂದು ರಂಗಣ್ಣ ಮನೆಗೆ ಹಿಂದಿರುದನು.

ಊಟವಾದ ಮೇಲೆ ಹೊಟ್ಟೆ ಭಾರವಾಯಿತು. ಪುನಃ ಗವೀಪುರದ ಬಡಾವಣೆ ಕಡೆಗೆ ಹೊರಡಲು ಮೊದಲು ಮನಸ್ಸಾಗಲಿಲ್ಲ. ಆದರೆ ಮಾರನೆಯ ದಿನ ಬೆಳಗ್ಗೆ ಹೋಗೋಣವೆಂದರೆ ಬೆಳಗ್ಗೆ ಎಂಟು ಗಂಟೆಗೆಲ್ಲ ತಿಮ್ಮರಾಯಪ್ಪ ಮನೆ ಬಿಟ್ಟು ಹೊರಟು ಹೋಗುತ್ತಾನೆ ಎ೦ಬುದು ತಿಳಿದಿತ್ತು. ಆದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ತಿಮ್ಮರಾಯಪ್ಪನಿಗೆ ವರ್ತಮಾನ ಕೊಡಬೇಕು, ಇನ್ಸ್ಪೆಕ್ಟರಾಗಿ ಹೋಗುವವನು ಕಷ್ಟ ಪಡಲು ಹಿಂಜರಿದರೆ ಹೇಗೆ ? ಎಂದು ಮುಂತಾಗಿ ಚರ್ಚೆ ಮಾಡಿ ಕೊಂಡು – ರಂಗಣ್ಣ ಮನೆಯನ್ನು ಬಿಟ್ಟು ಹೊರಟನು. ತಿಮ್ಮರಾಯಪ್ಪನ ಮನೆಗೆ ಬಂದಾಗ ರಾತ್ರಿ ಒಂಬತ್ತು ಗಂಟೆಯಾಯಿತು ; ಮನೆಯ ದೀಪಗಳು ಕ್ಷಣ ಆರಿ ಪುನ: ಹೊತ್ತಿಕೊಂಡವು. ವಿಚಾರಿಸಿದರೆ, ಇನ್ನೂ ಬಂದಿಲ್ಲ ಎಂದು ತಿಳಿಯಿತು. ಹಿಂದಿನ ದಿನ ತಿಮ್ಮರಾಯಪ್ಪ ಹೇಳಿದ್ದ ಕಥೆಯೆಲ್ಲ ರಂಗಣ್ಣನ ನೆನಪಿಗೆ ಬಂತು. ಅಯ್ಯೋ ಪಾಪ ! ಅವನು ಹೇಳಿದ್ದೆಲ್ಲ ನಿಜ' ಎಂದು ಕೊಂಡು ಹಿಂದಕ್ಕೆ ಹೊರಡಲು ಸಿದ್ಧನಾಗುತ್ತಿದ್ದಾಗ, ತಿಮ್ಮರಾಯಪ್ಪ, ಉಸ್ಸಪ್ಪ ' ಎಂದು ಹೇಳಿಕೊಳ್ಳುತ್ತಾ ಬೈಸಿಕಲ್ಲಿನಿಂದ ಇಳಿದನು ಬೈಸಿಕಲ್ಲು ಸಹ 'ಉಸ್ಸಪ್ಪಾ! ಬದುಕಿಕೊಂಡೆ !'- ಎಂದು ಲಘುವಾಯಿತು. ರಾತ್ರಿ ಅಷ್ಟು ಹೊತ್ತಿನಲ್ಲಿ ರಂಗಣ್ಣ ಬಂದಿರುವುದನ್ನು ನೋಡಿ ತಿಮ್ಮರಾಯಪ್ಪನಿಗೆ ಆಶ್ಚರ್ಯವಾಯಿತು. ಆ ದಿನದ ವಿಶೇಷ ವರ್ತಮಾನವನ್ನು ತಿಳಿಸುವುದು ರಂಗಣ್ಣನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ' ಭಲೆ ! ಭೇಷ್! ರಂಗಣ್ಣ ಶಿವನಾಣೆ ! ನನಗೆ ಬಹಳ ಸಂತೋಷ ಬಾ, ಒಳಕ್ಕೆ ಹೋಗೋಣ ? ಎಂದು ತಿಮ್ಮರಾಯಪ್ಪ ಹೇಳುತ್ತ ರಂಗಣ್ಣನ ಭುಜವನ್ನು ತಟ್ಟಿ ಒಳಕ್ಕೆ ಕರೆದುಕೊಂಡು ಹೋದನು.

ಕೊಟಡಿ ಅಚ್ಚು ಕಟ್ಟಾಗಿದ್ದಿತು. ಕುರ್ಚಿಗಳು, ಮೇಜು, ಸೋಫಾ ಮತ್ತು ನೆಲಕ್ಕೆ ಜಂಖಾನ ಇದ್ದುವು. ತಿಮ್ಮರಾಯಪ್ಪ ಸ್ವಲ್ಪ ರಸಿಕನೂ ಭೋಗಿಯೂ ಆಗಿದ್ದನೆಂದು ಆ ಅಚ್ಚು ಕಟ್ಟಿನಿಂದ ಹೇಳಬಹುದಾಗಿತ್ತು. ರಂಗಣ್ಣನನ್ನು ಸೋಫಾದಲ್ಲಿ ಕುಳ್ಳಿರಿಸಿ ತನ್ನ ಬಟ್ಟೆಗಳನ್ನು ಬದಲಾಯಿಸಿ ಕೊಂಡು, ' ಐದು ನಿಮಿಷ ವಿರಾಮಕೊಡು ಮಹಾರಾಯ ! ಊಟ ಮಾಡಿಕೊಂಡು ಬರುತ್ತೇನೆ. ನೀನು ಸ್ವಲ್ಪ ಹಾಲು ಹಣ್ಣನ್ನಾದರೂ ತೆಗೆದುಕೊ, ನೀನು ನಮ್ಮಲ್ಲಿ ಊಟ ಮಾಡುವುದಿಲ್ಲ ' - ಎಂದು ಹೇಳಿ ಒಳಕ್ಕೆ ಹೋದನು. ಕೆಲವು ನಿಮಿಷಗಳಲ್ಲಿ ಹಿಂದಿರುಗಿ ಬಂದು ಬೆಳ್ಳಿಯ ಲೋಟದ ತುಂಬ ಹದವಾದ ಹಾಲು, ಬೆಳ್ಳಿಯ ತಟ್ಟೆಯಲ್ಲಿ ಬಾಳೆಯ ಹಣ್ಣು ಮತ್ತು ಕಿತ್ತಳೆ ಹಣ್ಣುಗಳನ್ನು ತಂದಿಟ್ಟು, ಇದನ್ನು ಊಟ ಮಾಡು ' ಎಂದು ನಗುತ್ತ ಹೇಳಿದನು.

'ನಿನ್ನ ಮನೆಯಲ್ಲಿ ಊಟ ಮಾಡುವ ಕಾಲವೂ ನಿನ್ನ ಮಗಳನ್ನು ನನ್ನ ಮಗನಿಗೆ ಕೊಟ್ಟು ಮದುವೆ ಮಾಡುವ ಕಾಲವೂ ಬಂದಾಗ ನಮ್ಮ ದೇಶ ಉದ್ಧಾರವಾಗುತ್ತದೆ. ಏನೋ ಹಿಂದಿನವರು ಮಾಡಿಟ್ಟ ಆಚಾರ ವ್ಯವಹಾರ. ಅ೦ತೂ ಸವೆದ ಹಾದಿಯಲ್ಲೇ ಹೋಗುತ್ತಿದ್ದೇವೆ. '

ಶಿವನಿದಾನೆ ಬಿಡು ! ಅವನು ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ' ಎಂದು ಹೇಳಿ ತಿಮ್ಮರಾಯಪ್ಪ ಊಟಕ್ಕೆ ಹೋದನು. ರಂಗಣ್ಣನು ತಟ್ಟಿ ಯಲ್ಲಿದ್ದುದನ್ನೂ ಲೋಟದಲ್ಲಿದ್ದುದನ್ನೂ ಚೆನ್ನಾಗಿಯೇ ಊಟ ಮಾಡಿದನು. ಹದಿನೈದು ನಿಮಿಷಗಳ ತರುವಾಯ ತಿಮ್ಮರಾಯಪ್ಪ ಹಿಂದಿರುಗಿದನು. ಗಂಡ ಹೆಂಡರಿಗೆ ಏನೋ ಮಾತು ಬೆಳೆದ ಹಾಗಿತ್ತು. ಆಕೆ ಹಿಂದೆಯೇ ಬರುತ್ತ, ನಾನು ಆ ದಿನದಿಂದಲೂ ಹೇಳುತ್ತಿದ್ದೇನೆ. ನಮಗೆ ಬಿಲ್ ಕೊಲ್ ಈ ಹಾಳು ಕೆಲಸ ಬೇಡ. ಹಿಂದಿನ ಕೆಲಸಕ್ಕೆನೆ ಹೊರಟು ಹೋಗೋಣ, ಈಗ ನಿಮ್ಮ ಸ್ನೇಹಿತರಿಗೆ ಎಷ್ಟು ಸುಲಭದಲ್ಲಿ ಇನ್ಸ್ಪೆಕ್ಟರ್ ಕೆಲಸ ಆಯಿತು. ನೀವೇ ನೋಡಿ --- ಎಂದು ರೇಗಾಡಿದಳು. ಋಣಾನುಬಂಧ ಇರುವವರೆಗೂ ನಡೆಯಲಿ, ಬಿಟ್ಟು ಹೋಗುವಾಗ ಬಿಟ್ಟು ಹೋಗಲಿ. ನೀನೇಕೆ ರೇಗಾಡುತ್ತೀಯೆ ? ಹೋಗಿ ಮಲಗಿಕೋ ? ಎಂದು ಹೇಳುತ್ತ ತಿಮ್ಮರಾಯಪ್ಪ ಕೊಟಡಿಯೊಳಕ್ಕೆ ಬಂದನು.

ಪುನಃ ಸ್ನೇಹಿತರಿಬ್ಬರೂ ಮಾತನಾಡಲಾರಂಭಿಸಿದರು. ಹತ್ತು ಗಂಟೆ ಹೊಡೆಯಿತು. ಹೊತ್ತಾಯಿತೆಂದು ರಂಗಣ್ಣ ಎದ್ದನು. ತಿಮ್ಮರಾಯಪ್ಪ ಜೊತೆಯಲ್ಲಿ ಎದ್ದು, ' ಸರಿ, ಹೊರಡು, ಬೇಗನೆಯೆ ಹೋಗಿ ಕೆಲಸಕ್ಕೆ ಸೇರಿಕೊ, ನಾನು ಹೇಳಿದ ಮಾತುಗಳನ್ನು ಮಾತ್ರ ಮರೆಯ ಬೇಡ, ಮೇಷ್ಟರುಗಳು ಬಡವರು. ಅವರ ಹೊಟ್ಟೆಯ ಮೇಲೆ ಹೊಡೆಯಬೇಡ, ಒಂದು ವೇಳೆ ಜುಲ್ಮಾನೆ ಹಾಕಬೇಕಾದರೆ, ಎರಡು ತಿಂಗಳ ಅನಂತರ ವಜಾ ಮಾಡಿ ಬಿಡು, ಯಾವುದನ್ನೂ ಮನಸ್ಸಿಗೆ ಬಹಳವಾಗಿ ಹಚ್ಚಿಸಿಕೊ೦ಡು ಹೋಗಬೇಡ, ನನ್ನಿಂದಲೇ ದೇಶೋದ್ಧಾರವಾಗುತ್ತದೆ, ನಾನೇ ಉದ್ಧಾರ ಮಾಡಿ ಬಿಡುತ್ತೇನೆ ಎಂಬ ಭಾವನೆ ಇಟ್ಟು ಕೊಳ್ಳಬೇಡ. ಆರೋಗ್ಯ ಕೆಡುವಂತೆ ಹೆಚ್ಚಾಗಿ ಸರ್ಕೀಟು ತಿರುಗಬೇಡ ; ಹೆಚ್ಚಾಗಿ ಬೈಸ್ಕಲ್ ತುಳಿಯಬೇಡ, ಗ್ರಾಮಸ್ಥರನ್ನು ವಿರೋಧ ಮಾಡಿಕೊಳ್ಬೇಡ, ಸರ್ಕೀಟು ಹೋದಾಗ ಮೇಷ್ಟರೋ ಗ್ರಾಮಸ್ಥರೋ ಏನಾದರೂ ಹಾಲೂ ಮೊಸರೂ ಹಣ ತಂದುಕೊಡುತ್ತಾರೆ. ಬಿಗುಮಾನ ಮಾಡಿಕೊಂಡು ತಿರಸ್ಕರಿಸ ಬೇಡ, ಇವುಗಳಲ್ಲೆಲ್ಲ ದೋಷವಿಲ್ಲ. ಪುಡಿ ಕಾಸುಗಳಿಗೆ ನೀನು ಆಶೆ ಪಡುವುದಿಲ್ಲವೆಂಬುದು ನನಗೆ ಗೊತ್ತು. ನೀನು ನೀತಿ ಕೆಡುವುದಿಲ್ಲ ಎನ್ನುವುದೂ ನನಗೆ ಗೊತ್ತು, ನಗುನಗುತಾ ಕೆಲಸ ಮಾಡು ; ನಗು ನಗುತಾ ಅವರೂ ಕೆಲಸಮಾಡುವಂತೆ ನೋಡಿಕೊ. ಜನಾರ್ದನಪುರ ಸ್ವಲ್ಪ ಪು೦ಡು ರೇಂಜು ಸಾಲದ್ದಕ್ಕೆ ಅಲ್ಲಿ ಕೆಲವರು ಮುಖಂಡರ ಕಾಟ ಹೆಚ್ಚು. ಇಷ್ಟೇ ರಂಗಣ್ಣ ! ಸ್ವಲ್ಪ ಎಚ್ಚರಿಕೆಯಿರಲಿ; ಗುಮಾಸ್ತೆಯ ಮೇಲೆ ಕಣ್ಣಿರಲಿ, ಸರ್ವಜ್ಞನ ವಚನ ನೆನಪಿದೆಯೋ ಇಲ್ಲವೊ ? - ನಂಬಿದಂತಿರಬೇಕು, ನಂಬದಲೆ ಇರಬೇಕು, ನಂಬಿದವ ಕೆಟ್ಟ ಸರ್ವಜ್ಞ.'

' ಒಳ್ಳೆಯದು ತಿಮ್ಮರಾಯಪ್ಪ! ಜ್ಞಾಪಕದಲ್ಲಿಟ್ಟುಕೊಂಡಿರುತ್ತೇನೆ. ಇದಕ್ಕಾಗಿಯೇ ನಿನ್ನ ಹತ್ತಿರಕ್ಕೆ ನಾನು ಬಂದದ್ದು.'

' ಬೆಂಗಳೂರು ಬಿಟ್ಟು ಹೊರಡುವ ಮೊದಲು ಇನ್ನೊಂದಾವೃತ್ತಿ ಬಾ , ತಾಂಬೂಲ ತೆಗೆದುಕೊಂಡು ಹೋಗು.'

' ಹಾಗೇ ಆಗಲಿ. ನಿನಗೆ ಹೇಳದೆ ನಾನು ಹೊರಡುತ್ತೇನೆಯೆ ? ಎಂದು ಉತ್ತರ ಹೇಳಿ ಬೈಸ್ಕಲ್ಲನ್ನು ಹತ್ತಿಕೊಂಡು ರಂಗಣ್ಣ ತನ್ನ ಮನೆಗೆ ಹಿಂದಿರುಗಿ ಬಂದನು.

ಮುಂದಿನ ಕೆಲವು ದಿನಗಳೆಲ್ಲ ಇನ್‌ಸ್ಪೆಕ್ಟರಗಿರಿಗೆ ತಕ್ಕಂತೆ ಸಜ್ಜುಮಾಡಿಕೊಳ್ಳುವುದರಲ್ಲಿ ಕಳೆದುವು. ಹೊಸದಾಗಿ ಕೆಲವು ಸರ್ಜ್ ಸೂಟುಗಳು, ಸರ್ಕೀಟಿಗೆ ಬೇಕಾದ ಮೆತ್ತೆ, ಹೋಲ್ಡ್ ಆಲ್ ಚೀಲ, ದಿಂಬು ಗಳು, ಕಾಶ್ಮೀರ ಶಾಲು, ಟವಲ್ಲುಗಳು ಮೊದಲಾದುವನ್ನೆಲ್ಲ ಒದಗಿಸಿಕೊಂಡದ್ದಾಯಿತು. ಹಳೆಯ ಬೈಸ್ಕಲ್ಲನ್ನು ಮಾರಿಬಿಟ್ಟು ಹೊಸ ಬಿ. ಎಸ್. ಎ. ಬೈಸ್ಕಲ್ಲನ್ನು ತಂದದ್ದಾಯಿತು ಸರ್ಕಿಟಿನಲ್ಲಿ ಅಡಿಗೆಗೆ ಬೇಕಾದ ಸಾಮಾನುಗಳನ್ನು ಇಟ್ಟು ಕೊಳ್ಳುವುದಕ್ಕೆ ಅಡಕವಾದ ಸಣ್ಣ ಡಬ್ಬಗಳು, ಆ ಡಬ್ಬಗಳನ್ನಿಡುವುದಕ್ಕೆ ಒಂದು ಟ್ರಂಕು - ಇವುಗಳ ಏರ್ಪಾಡಾಯಿತು. ತನ್ನ ಬಟ್ಟೆಗಳನ್ನು ಇಟ್ಟು ಕೊಳ್ಳುವುದಕ್ಕೆ ಎರಡು ಸೂಟ್ ಕೇಸುಗಳು, ಮುಖ ಕ್ಷೌರಕ್ಕೆ ಬೇಕಾದ ಕನ್ನಡಿ ಮೊದಲಾದ ಉಪಕರಣಗಳು, ಹಲ್ಲನ್ನುಜ್ಜಿ ಕೊಳ್ಳುವ ಬ್ರಷ್, ಪೇಸ್ಟ್- ಎಲ್ಲವನ್ನೂ ತಂದುಕೊಂಡದ್ದಾಯಿತು. ರಂಗಣ್ಣನಿಗೆ ತಾನೊಬ್ಬ ದೊಡ್ಡ ಸಾಹೇಬನೆಂದೂ ತನ್ನ ದರ್ಬಾರು ಡೆಪ್ಯುಟಿ ಕಮಿಷನರ್ ಸಾಹೇಬರ ದರ್ಬಾರನ್ನು ಮೀರಿಸುವಂತಿರಬೇಕೆಂದೂ ಭಾವನೆಗಳಿದ್ದು ವು. ಕೆಲವು ಕಡೆಗಳಲ್ಲಿ ಅಸಿಸ್ಟೆಂಟ್ ಇನ್ ಸ್ಪೆಕ್ಟರುಗಳೆಂದರೆ ಅರಳಿಟ್ಟಿನ ಇನ್ಸ್ಪೆಕ್ಟರೆಂದೋ ಅವಲಕ್ಕಿ ಇನ್ ಸ್ಪೆಕ್ಟರೆಂದೋ ಹಾಸ್ಯಕ್ಕೀಡಾಗಿದ್ದು ದನ್ನು ಅವನು ತಿಳಿದಿದ್ದುದರಿ೦ದ ಆ ಮಟ್ಟಕ್ಕಿಳಿಯದೆ ಎಲ್ಲರಿಗೂ ಮೇಲ್ಪಂಕ್ತಿಯಾಗಿರಬೇಕೆಂಬ ಮಹತ್ವಾಕಾಂಕ್ಷೆ ಅವನಲ್ಲಿ ತುಂಬಿದ್ದಿತು. ಒಟ್ಟಿನಲ್ಲಿ ಸರೀಕರಲ್ಲಿ ತನ್ನ ಗೌರವವನ್ನು ಉಳಿಸಿಕೊಂಡು ಇಲಾಖೆಯ ಗೌರವವನ್ನೂ ಹೆಚ್ಚಿಸಬೇಕೆಂಬುದು ಅವನ ಇಚ್ಛೆ.

ಈ ರೀತಿ ಸಜ್ಜುಗಳಾಗುತ್ತಿದ್ದಾಗ ರಂಗಣ್ಣನ ಹೆಂಡತಿ ತನಗೆ ಸರಿಗೆಯಿರುವ ಎರಡು ಒಳ್ಳೆಯ ಧರ್ಮಾವರದ ಸೀರೆಗಳೂ ಕುಪ್ಪಸಗಳೂ ಬೇಕೆಂದು ಕೇಳಿದಳು, ಆ ಬೇಡಿಕೆ ನ್ಯಾಯವೆಂದು ರಂಗಣ್ಣನಿಗೆ ತೋರಿತು. ಪೇಟೆಗೆ ಹೋಗಿ ಆಕೆಗೆ ಬೇಕಾದ ಸೀರೆ ಕುಪ್ಪಸಗಳನ್ನು ತಂದದ್ದಾಯಿತು. ಇಷ್ಟಕ್ಕೆ ಸಜ್ಜು ಮುಗಿಯಬಹುದೆಂದು ರಂಗಣ್ಣನು ತಿಳಿದುಕೊಂಡಿದ್ದನು. ಆದರೆ ಅದು ಮುಗಿಯಲಿಲ್ಲ. “ನೋಡಿ, ಹುಡುಗರಿಗೆ ತಕ್ಕ ಬಟ್ಟೆ ಬರೆ ಇಲ್ಲ. ಪರದೇಶಿ ಮಕ್ಕಳಂತೆ ಅವರು ಓಡಾಡುವುದಕ್ಕಾಗುತ್ತದೆಯೇ ? ಸ್ಕೂಲಿನಲ್ಲಿ ಅಮಲ್ದಾರರ ಮಕ್ಕಳು ಒಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಕುಳಿತಿದ್ದರೆ ನಿಮ್ಮ ಮಕ್ಕಳು ಈ ಹಳೆಯ ಚಿಂದಿಗಳನ್ನು ತೊಟ್ಟುಕೊಂಡು ಕುಳಿತಿರುವುದೆ ? ಖಂಡಿತ ಆಗುವುದಿಲ್ಲ. ಇಷ್ಟೆಲ್ಲಾ ಹಣ ಖರ್ಚಾಯಿತು. ಇನ್ನು ಒಂದು ನೂರು ರೂಪಾಯಿ ಖರ್ಚು ಮಾಡಿದರೆ ಅವರಿಗೂ ಬಟ್ಟೆ ಬರೆ ಆಗುತ್ತದೆ' ಎಂದು ಆಕೆಯ ಒತ್ತಾಯವಾಯಿತು.

' ಕೈಯಲ್ಲಿರುವ ಹಣವೆಲ್ಲ ಖರ್ಚಾಗಿಹೋಯಿತು. ಬ್ಯಾಂಕಿನಲ್ಲಿ ಇನ್ನೂರು ರೂಪಾಯಿ ಸಾಲವಾಯಿತು. ಪ್ರಯಾಣದ ವೆಚ್ಚಗಳಿಗೆ ಮಾತ್ರ ಹಣವಿದೆ. ಹುಡುಗರಿಗೆಲ್ಲ ಆಮೇಲೆ ಬಟ್ಟೆ ಬರೆಗಳನ್ನು ಒದಗಿಸೋಣ, ಇನ್ನೆರಡು ತಿಂಗಳು ಕಾಲ ತಾಳು.'

' ಖಂಡಿತ ಆಗೋದಿಲ್ಲ. ಖರ್ಚಿನಲ್ಲಿ ಖರ್ಚು ಆಗಿ ಹೋಗಲಿ. ಇನ್ನೂ ಒಂದು ನೂರು ರೂಪಾಯಿ ಬ್ಯಾಂಕಿನಿಂದ ತನ್ನಿ : ಮುಂದೆ ನಿಮ್ಮ ಸಂಸಾರವನ್ನು ಬಹಳ ಹಿಡಿತದಿಂದ ನಡೆಸಿ ಹಣವನ್ನು ಉಳಿಸಿ ಕೊಡುತ್ತೇನೆ. ಈ ಸಾಲವೆಲ್ಲ ತೀರಿ ಹೋಗುತ್ತದೆ.'

ರಂಗಣ್ಣನು ವಿಧಿಯಿಲ್ಲದೆ ಮತ್ತೆ ಹಣವನ್ನು ತಂದು ಮಕ್ಕಳಿಗೂ ಬಟ್ಟೆ ಬರೆಗಳನ್ನು ಒದಗಿಸಿದನು. ಹೀಗೆ ಎಲ್ಲ ಏರ್ಪಾಟುಗಳೂ ಆದುವು. ತಿಮ್ಮರಾಯಪ್ಪನ ಮನೆಗೆ ಹೋಗಿ ಎಲ್ಲವನ್ನೂ ತಿಳಿಸಿದ್ದಾಯಿತು, ಅವನಿಂದ ಬೀಳ್ಕೊಂಡದ್ದಾಯಿತು.

ಪ್ರಕರಣ ೩

ಜಂಬದ ಕೋಳಿ

ಜನಾರ್ದನಪುರದ ಹಳೆಯ ಇನ್ಸ್ಪೆಕ್ಟರಿಗೆ ಮೇಷ್ಟರುಗಳೆಲ್ಲ ಬೀಳ್ಕೊಡುವ ಔತಣವನ್ನು ಏರ್ಪಾಟು ಮಾಡಿದ್ದಾರೆ. ಹಳೆಯ ಇನ್ ಸ್ಪೆಕ್ಟರು ಒಂದು ಸಾಮಾನ್ಯ ಪಂಚೆಯನ್ನು ಉಟ್ಟುಕೊಂಡು, ಒಂದು ಚೆಕ್ಕುಕೋಟನ್ನೂ, ಸರಿಗೆಯಿಲ್ಲದ ರುಮಾಲನ್ನೂ ಹಾಕಿಕೊಂಡಿದ್ದಾರೆ. ಅವರ ಪಕ್ಕದಲ್ಲಿ ಹೊಸದಾಗಿ ಪ್ರೊಬೇಷನರಿ ಅಸಿಸ್ಟೆಂಟ್ ಕಮಿಷನರ್ ಹುದ್ದೆಗೆ ಬಂದ ದಿವಾನರ ಆಳಿಯನೋ, ಕೌನ್ಸಿಲರ ಮಗನೋ ಎನ್ನುವಂತೆ ರಂಗಣ್ಣ ದಿವ್ಯವಾದ ಸರ್ಜ್ ಸೂಟನ್ನು ಧರಿಸಿ ಒ೦ದೂವರೆ ಅ೦ಗುಲದ ಭಾರಿ ಶೆಟ್ಟರ ಸರಿಗೆ ರುಮಾಲನ್ನು ಇಟ್ಟುಕೊಂಡಿದ್ದಾನೆ. ಕೈಯಲ್ಲಿ ದಂತದ ಕೈಪಿಡಿಯ ಒಳ್ಳೆಯ ಹೊಳಪಿನ ಕರಿಯ ಬೆತ್ತ. ಅವನ ಇಬ್ಬರು ಸಣ್ಣ ಹುಡುಗರು ಒಳ್ಳೆಯ ಬಟ್ಟೆಗಳನ್ನು ಧರಿಸಿಕೊಂಡು ಪಕ್ಕದಲ್ಲಿ ಗಂಭೀರವಾಗಿ ನಿಂತಿದ್ದಾರೆ. ಹಳಬರಿಗೂ ಹೊಸಬರಿಗೂ ಸಂಭಾಷಣೆ ನಡೆಯುತ್ತಿದೆ. ಮೇಷ್ಟರುಗಳು ಅಲ್ಲಲ್ಲೇ ಗುಂಪು ಸೇರಿ ಮಾತುಗಳನ್ನಾಡುತ್ತಿದಾರೆ. ಹೊಸ ಇನ್ಸ್ಪೆಕ್ಟರ ಠೀವಿಯನ್ನು ನೋಡಿ ಬೆರಗಾಗಿದ್ದಾರೆ. ಕೆಲವರು ಕದೀಮರು, ' ಈ ರೀತಿಯಲ್ಲಿ ಎರಡು ದಿನ. ಇಲ್ಲಿ ಬಹಳ ದಿನ ಈ ಇನ್ ಸ್ಪೆಕ್ಟರು ಇರೋದಿಲ್ಲ' ಎಂದು ಕಾಲಜ್ಞಾನ ಹೇಳುತ್ತಿದ್ದಾರೆ. ಹಳ್ಳಿಗಳ ಕಡೆಯಿಂದ ಬಂದ ಕೆಲವರು ಮೇಷ್ಟರುಗಳು ಕೈಯಲ್ಲಿ ನಿಂಬೇಹಣ್ಣುಗಳನ್ನು ಹಿಡಿದು ಕೊಂಡು ಆ ಇನ್ಸ್ಪೆಕ್ಟರುಗಳ ಬಳಿಗೆ ಹೋಗಿ ನಮಸ್ಕಾರ ಮಾಡಿ ಆ ಹಣ್ಣುಗಳನ್ನು ಕೊಡುತ್ತಿದಾರೆ. ಹಳೆಯ ಇನ್‌ಸ್ಪೆಕ್ಟರು ಆ ಮೇಷ್ಟರುಗಳ ಯೋಗಕ್ಷೇಮವನ್ನು ವಿಚಾರಿಸುತ್ತ ಒಳ್ಳೆಯ ಮಾತು ಆಡುತ್ತಿದಾರೆ. ಆದರೆ ರಂಗಣ್ಣನಿಗೆ ಆ ಮಾತಿನ ಸರಣಿ ಮೆಚ್ಚಿಕೆಯಾಗಲಿಲ್ಲ. 'ಒಳ್ಳೆಯದು ಹೋಗು, ನಿನಗೆ ಹೊಸಹಳ್ಳಿಗೇನೆ ವರ್ಗ ಮಾಡಿಕೊಡುವಂತೆ ಇವರಿಗೆ ಹೇಳುತ್ತೇನೆ. 'ನಿನ್ನದೇನು ಅರಿಕೆ ?ಪ್ರಮೋಷನ್ ಬೇಕೆಂದು. ಆಗಲಿ, ಚೆನ್ನಾಗಿ ಕೆಲಸಮಾಡುತ್ತಾ ಇರು. ಸಾಹೇಬರು ಪ್ರಮೋಷನ್ ಕೊಡುತ್ತಾರೆ' ಎಂದು ಮುಂತಾಗಿ ಮೇಷ್ಟ ರುಗಳನ್ನು ಏಕವಚನದಲ್ಲಿಯೇ ಆ ಇನ್ಸ್ಪೆಕ್ಟರ್‌ ಮಾತನಾಡಿಸುತ್ತಾರಲ್ಲ, ಉಪಾಧ್ಯಾಯರಿಗೆ ತಕ್ಕ ಗೌರವವನ್ನು ತೋರಿಸುವುದಿಲ್ಲವಲ್ಲ, ಜವಾನರಿಗಿಂತ ಕೀಳಾಗಿ ಹೀಗೆ ಸಂಬೋಧಿಸಬಹುದೇ? ಹಿಂದೆ ಭಾಭಾಸಾಹೇಬರು ಹಳ್ಳಿಯ ಸ್ಕೂಲುಗಳಿಗೆ ಭೇಟಿ ಕೊಡುತ್ತಿದ್ದಾಗ ಉಪಾಧ್ಯಾಯರನ್ನು - ಆಗ ಅವರಿಗೆ ತಿಂಗಳಿಗೆ ಐದೇ ರುಪಾಯಿ ಸಂಬಳ - ಬಹಳ ಮರ್ಯಾದೆಯಿಂದ ಮಾತನಾಡಿಸುತ್ತಿದ್ದರೆ೦ಬುದನ್ನು ಈಗಲೂ ಜನರು ಹೇಳುತ್ತಾರೆ '- ಎಂದು ಮೊದಲಾಗಿ ಮನಸ್ಸಿನಲ್ಲೇ ಹೇಳಿಕೊಳ್ಳುತ್ತ ಚಿಂತಿಸುತ್ತಿದ್ದನು. ಆದ್ದರಿಂದ ಆ ಉಪಾಧ್ಯಾಯರು ತನಗೆ ಕೈ ಮುಗಿದಾಗ, ' ಏನು ಮೇಷ್ಟರೆ ? ಆರೋಗ್ಯವಾಗಿದ್ದೀರಾ ? ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ ? ಪಾಠಶಾಲೆಯಲ್ಲಿ ಎಷ್ಟು ಜನ ಮಕ್ಕಳಿದ್ದಾರೆ ?' ಎಂದು ಮರ್ಯಾದೆಯಿಂದ ಮಾತನಾಡಿಸಿದನು. ಸಾಮಾನ್ಯ ಪಂಚೆಯ ಹಳೇ ಇನ್ಸ್ಪೆಕ್ಟರು ಸರ್ಜ್ ಸೂಟಿನ ಹೊಸ ಇನ್ ಸ್ಪೆಕ್ಟರನ್ನು ದುರುಗುಟ್ಟಿಕೊಂಡು ನೋಡುತ್ತ, “ಎಲ್ಲಿಯೋ ಎಳಸು. ಹೊಸದಾಗಿ ಕಣ್ಣು ಬಿಡುತ್ತಿದೆ'- ಎಂದು ಮನಸ್ಸಿನಲ್ಲಿಯೇ ಆಡಿಕೊಂಡರು.

ಸಭೆ ಸೇರಿತು. ವೇದಿಕೆಯ ಮೇಲೆ ಹೊಸಬರೂ ಹಳಬರೂ ಕುರ್ಚಿಗಳ ಮೇಲೆ ಕುಳಿತರು. ಪದ್ಧತಿಯಂತೆ ದೇವರ ಸ್ತೋತ್ರ, ಹುಡುಗಿಯರಿಂದ ಹಾಡು, ಸ್ವಾಗತ ಪದ್ಯಗಳು ಮತ್ತು ಭಾಷಣಗಳು ಆದುವು. ಹಳೆಯ ಇನ್ ಸ್ಪೆಕ್ಟ ರು ಉಪಾಧ್ಯಾಯರಿಗೆಲ್ಲ ದೊಡ್ಡದೊಂದು ಹಿತೋಪದೇಶವನ್ನು ಮಾಡಿದರು. ತರುವಾಯ ಹೊಸಬರು ಮಾತನಾಡಬೇಕೆಂದು ಉಪಾಧ್ಯಾಯರು ಪ್ರಾರ್ಥನೆ ಮಾಡಿಕೊಂಡರು. ಏನು ಮಾಡುವುದು? ಭಾಷಣಕ್ಕೆ ರಂಗಣ್ಣ ಸಿದ್ಧನಾಗಿ ಬಂದಿರಲಿಲ್ಲ. ನಾಲ್ಕು ಮಾತುಗಳನ್ನಾದರೂ ಹೇಳಬೇಕು. ಹಿಂದಿನ ಇನ್‌ಸ್ಪೆಕ್ಟರುಗಳಂತೆಯೇ ಕರುಣೆಯಿಂದ ಕಾಪಾಡಿಕೊಂಡು ಬರುವ ಭರವಸೆ ಕೊಡಬೇಕು. ಈಗ ನೋಡಿದರೇನೇ ಭಯವಾಗುತ್ತದೆ. ಮುಂದೆ ಹೇಗೆ ತಾನೆ ನಿಭಾಯಿಸುತ್ತೇವೊ ತಿಳಿಯದು :- ಎಂದು ಕುಚೋದ್ಯದ ಕಾರ್ಯದರ್ಶಿ ಕೈ ಮುಗಿದುಕೊಂಡು ಹೇಳಿದನು. ಆಗ ರಂಗಣ್ಣನು ನಗುತ್ತ ಎದ್ದು ನಿಂತುಕೊಂಡು, 'ಉಪಾಧ್ಯಾಯರನ್ನು ಕಂಡರೆ ನನಗೇನ ಭಯವಾಗುತ್ತದೆ. ಅದರಲ್ಲಿಯೂ ನಿಮ್ಮ ಕಾರ್ಯ ದರ್ಶಿಗಳಂಥ ಕದೀಮರನ್ನು ನಾನು ಹೇಗೆ ತಾನೆ ನಿಭಾಯಿಸುತ್ತೇನೆಯೋ ತಿಳಿಯದು, ಸದ್ಯ ನೀವುಗಳೆಲ್ಲ ಕರುಣೆಯಿಂದ ನನ್ನನ್ನು ಕಾಪಾಡಿ ಕೊಂಡು ಬರಬೇಕ೦ದು ಅರಿಕೆ ಮಾಡಿಕೊಳ್ಳುತ್ತೇನೆ' – ಎಂದು ಹೇಳಿ ದನು. ಕೂಡಲೇ ಸಭೆಯಲ್ಲಿ ಕರತಾಡನಗಳೂ ಹರ್ಷ ಸೂಚಕ ಧ್ವನಿಗಳೂ ತುಂಬಿ ಹೋದುವು. ಬಳಿಕ ನಾಲ್ಕು ಉಪಚಾರದ ಮಾತುಗಳನ್ನು ಹೇಳಿ ತನ್ನ ಕೈಲಾದಷ್ಟು ಮಟ್ಟಿಗೆ ಉಪಾಧ್ಯಾಯರ ಹಿತರಕ್ಷಣೆಯನ್ನು ಮಾಡುವು ದಾಗಿಯೂ ಎಲ್ಲರೂ ತಂತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕತೆಯಿಂದ ಮಾಡಬೇಕೆಂದೂ ತಿಳಿಸಿದನು. * ಮುಖ್ಯವಾಗಿ, ಉಪಾಧ್ಯಾಯರಿಗೆ ಹೇಳಬೇಕಾದ ಒಂದು ಮಾತಿದೆ. ನೀವುಗಳು ಯಾರೂ ಅರ್ಜಿಗಳನ್ನು ಸಲ್ಲಿ ಸುವುದಕ್ಕಾಗಲಿ ಅಹವಾಲುಗಳನ್ನು ಹೇಳಿಕೊಳ್ಳುವುದಕ್ಕಾಗಲಿ ನಿಮ್ಮ ನಿಮ್ಮ ಹಳ್ಳಿಗಳನ್ನು ಬಿಟ್ಟು ಜನಾರ್ದನ ಪುರಕ್ಕೆ ಬರಬೇಡಿ. ಆ ಬಗ್ಗೆ ಶ್ರಮವಹಿಸಬೇಡಿ ; ಹಣ ಖರ್ಚು ಮಾಡಬೇಡಿ. ಮನೆಯ ಮುಂದೆ, ಕಚೇರಿಯ ಮುಂದೆ ನಿಂತು ಕಾಯುವುದು ಉವಾಧ್ಯಾಯರ ಗೌರವಕ್ಕೆ ಬೇಕಾದ ವಿಷಯವನ್ನು ಕಾಗದದಲ್ಲಿ ತಿಳಿಸಿ ಟಾಲಿನಲ್ಲಿ ಹಾಕಿ. ನಿಮಗೆ ಖರ್ಚೆ ನೂ ಆಗುವುದಿಲ್ಲ. ತಕ್ಕ ಪರಿಹಾರವನ್ನು ನಾನೇ ಮಾಡಿ ಕೊಡುತ್ತೇವೆ, ಸರ್ಕಿಟಿನ ಕಾಲದಲ್ಲಿ ಮತ್ತು ಉಪಾಧ್ಯಾಯರ ಸಂಘಗಳ ಸಭೆ ನಡೆಯುವ ಕಾಲದಲ್ಲಿ, ನಾವೇ ನಮ್ಮ ಯೋಗಕ್ಷೇಮ ವನ್ನು ವಿಚಾರಿಸುತ್ತೇವೆ. ಧಾರಾಳವಾಗಿ ನಮ್ಮ ಹತ್ತಿರ ನಿಮ್ಮ ಕಷ್ಟ ದುಃಖಗಳನ್ನು ಆಗ ಹೇಳಿಕೊಳ್ಳಬಹುದು. ನಮ್ಮ ಗುಮಾಸ್ತರಿಗೆ ದಕ್ಷಿಣೆ ಕೊಟ್ಟು ಅನುಗ್ರಹ ಸಂಪಾದಿಸಲು ಪ್ರಯತ್ನ ಪಡಬೇಡಿ, ಏನಿದ್ದರೂ ನೇರವಾಗಿ ನಮ್ಮ ಬಳಿಗೆ ಬಂದು ಹೇಳಿಕೊಳ್ಳಿ, ನಿಮ್ಮ ಗೌರವವನ್ನು ಕಾಪಾಡಿಕೊಳ್ಳುವ ಹಾಗೆ ವರ್ತಿಸುತ್ತೀರೆಂದು ನಂಬುತ್ತೇವೆ' ಎಂದು ಹೇಳಿ ಕುಳಿತುಕೊಂಡನು. ಹೂವು ಗಂಧಗಳ ವಿನಿಯೋಗವಾಯಿತು. ಸಭೆ ಮುಕ್ತಾಯವಾಯಿತು. ಹಳಬರು ಹೊರಟು ಹೋದರು ; ಹೊಸಬರು. ಇನ್ ಸ್ಪೆಕ್ಟರ್‌ ಸ್ಥಾನದಲ್ಲಿ ಸ್ಥಾಪಿತರಾದರು. ಇದೆಲ್ಲ ನಡೆದು ಒಂದು ವಾರವಾಯಿತು. ಕಚೇರಿಯ ಕೆಲಸದ ಮರ್ಮಗಳನ್ನೆಲ್ಲ ರಂಗಣ್ಣ ತಿಳಿದುಕೊಳ್ಳಲು ಪ್ರಯತ್ನ ಪಟ್ಟನು. ತನ್ನ ರೇ೦ಜಿನ ವ್ಯಾಪ್ತಿಯನ್ನು ನಕ್ಷೆಯನ್ನಿಟ್ಟು ಕೊಂಡು ನೋಡಿದನು. ಹಳ್ಳಿಗಳ ಕಡೆ ಸರ್ಕೀಟು ಹೋಗಬೇಕೆಂದು ಅವನಿಗೆ ಆಶೆ ಬಹಳವಾಗಿತ್ತು, ಸರ್ಕೀಟು ಹೋದರೆ ಊಟಕ್ಕೆ ಏನು ಮಾಡಬೇಕು? ಅಡಿಗೆ ಮಾಡುವವರು ಯಾರು ? ಗುಮಾಸ್ತ ಶಂಕರಪ್ಪನನ್ನು ಕರೆದು: ಸರ್ಕೀಟಿನ ವಿವರಗಳನ್ನು ಕೇಳಿ ತಿಳಿದುಕೊಂಡನು. ಹಿಂದಿನ ಇನ್ ಸ್ಪೆಕ್ಟರು ಒಂದೊಂದು ದಿನ ಬೆಳಗ್ಗೆ ಹೋಗಿ ಸಾಯಂಕಾಲಕ್ಕೆ ಹಿಂದಿರುಗುತ್ತಿದ್ದರು ; ಒಂದೊಂದು ಸಂದರ್ಭದಲ್ಲಿ ಮೇಷ್ಟರುಗಳ ಮನೆಗಳಲ್ಲಿ ಊಟ ಮಾಡುತ್ತಿದ್ದರು; ಒಂದೊಂದು ಸಂದರ್ಭದಲ್ಲಿ ಯಾರಾದರೂ ಗ್ರಾಂಟ್ ಸ್ಕೂಲು ಮೇಷ್ಟರು ಸಮೀಪದಲ್ಲಿದ್ದರೆ ಅವರಿಂದ ಅಡಿಗೆ ಮಾಡಿಸುತ್ತಿದ್ದರು,- ಹೀಗೆ ಸಂದರ್ಭ ನೋಡಿಕೊಂಡು ಮಾಡುತ್ತಿದ್ದರು ಎಂದು ಅವನು ಹೇಳಿದನು. ಶಂಕರಪ್ಪ ಸ್ವಲ್ಪ ಹಳಬ, ಲೌಕಿಕ ತಿಳಿದವನು. 'ಸ್ವಾಮಿಯವರಿಗೆ ಹಿಂದಿನವರ ಪದ್ಧತಿ ಸರಿಬೀಳುವುದಿಲ್ಲ. ತಾವು ಶ್ರೀಮಂತರು, ತಮ್ಮ ಗೌರವಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತೀರಿ. ತಮ್ಮ ಹಾಗೆ ಇಲ್ಲಿಯ ಅಮಲ್ದಾರರೇ ಉಡುಪು ಧರಿಸುವುದಿಲ್ಲ, ಇನ್ನು ತಾವು ಆಡಿಗೆಯವನಿಲ್ಲದೆ ಸರ್ಕೀಟು ಹೋಗುವುದಿಲ್ಲ ಎಂಬುದನ್ನು ಯಾರಾದರೂ ಹೇಳಬಲ್ಲರು. ಹಿಂದಿನವರ ಕಾಲದಲ್ಲೆಲ್ಲ ಇಲಾಖೆಯ ಗೌರವವನ್ನು ಕಾಪಾಡಿಕೊಂಡು ಬರಲಿಲ್ಲ. ತಮ್ಮ ಕಾಲದಲ್ಲಿ ಆ ಗೌರವವನ್ನು ಎತ್ತಿ ಹಿಡಿಯಬೇಕು ' ಎಂದು ಹೇಳಿದನು,

ರಂಗಣ್ಣನಿಗೆ ಆ ಸ್ತೋತ್ರ ಶ್ರವಣದಿಂದ ಸಂತೋಷವಾಯಿತು, 'ಶಂಕರಪ್ಪ ! ಇಲ್ಲಿ ಅಡಿಗೆಯವರು ಸಿಕ್ಕುತ್ತಾರೆಯೇ ? ಏನು ಸಂಬಳ ಕೊಡ ಬೇಕಾದೀತು ?' ಎಂದು ಕೇಳಿದನು.

'ಸ್ವಾಮಿ, ವಿಚಾರಿಸಿದರೆ ಸಿಕ್ಕ ಬಹುದು. ಯಾರಾದರೂ ಹೋಟೆಲ್ ಮಾಣಿಗಳನ್ನು ಕೇಳಬೇಕು, ಹದಿನೈದು ರೂಪಾಯಿಗಳನ್ನಾದರೂ ಸಂಬಳ ಕೇಳಬಹುದು. ಆದರೆ ಅಷ್ಟೆಲ್ಲ ಖರ್ಚು ಅನಾವಶ್ಯಕ ಸ್ವಾಮಿ ಈಗ ನಮ್ಮ ಕಚೇರಿಯಲ್ಲಿ ಒಬ್ಬ ಜವಾನನ ಕೆಲಸ ಖಾಲಿಯಿದೆ. ತಿಂಗಳಿಗೆ ಹತ್ತು ರೂಪಾಯಿ ಸಂಬಳ, ಸರ್ಕಿಟಿನಿಂದ ಭತ್ಯ ಸರಾಸರಿ ಅವನಿಗೆ ತಿಂಗಳಿಗೆ ಐದು ರೂಪಾಯಿ ಗಿಟ್ಟುತ್ತದೆ. ಅಪ್ಪಣೆಯಾದರೆ ಒಬ್ಬ ಬ್ರಾಹ್ಮಣನನ್ನು ಗೊತ್ತು ಮಾಡುತ್ತೇನೆ. ನಮ್ಮ ಪೈಕಿಯೆ ಒಬ್ಬಾತ ಇದ್ದಾನೆ.'

ರಂಗಣ್ಣನಿಗೆ ಆ ಸಲಹೆ ಚೆನ್ನಾಗಿದೆಯೆಂದು ತೋರಿತು. ಹಾಗೆಯೇ ಮಾಡಿ ಶಂಕರಪ್ಪ ! ಆದರೆ ಮನುಷ್ಯ ಚೊಕ್ಕಟವಾಗಿರಬೇಕು ; ಮತ್ತು ಕೈದುಡುಕು ಇರಬಾರದು' ಎಂದು ಹೇಳಿದನು. ಅದರಂತೆ ಗೋಪಾಲ ಎಂಬ ಯುವಕನನ್ನು ನೇಮಕ ಮಾಡಿಕೊಂಡದ್ದಾಯಿತು. ಈ ಮಾತುಗಳು ಮುಗಿಯುವ ಹೊತ್ತಿಗೆ ಟಪಾಲು ಬಂತು. ಅದರಲ್ಲಿ ಶಂಕರಪ್ಪನ ವಿಳಾಸಕ್ಕೆ ಮೈಸೂರು ಸರ್ಕಾರಿ ಮೇಲೆ ಕಳುಹಿಸಿದ್ದ ದಪ್ಪವಾದೊಂದು ಕಟ್ಟೊಂದು ಬಂದಿತ್ತು. ರಂಗಣ್ಣ ಅದನ್ನು ಅವನ ಕೈಗೆ ಕೊಟ್ಟು 'ಇದೇನು ಶಂಕರಪ್ಪ ! ಈ ಕಟ್ಟು?' ಎಂದು ಕೇಳಿದನು. ಅವನು ಒಂದು ಕ್ಷಣ ಮೌನವಾಗಿದ್ದು ಬಳಿಕ, 'ಸ್ವಾಮಿಯವರಿಗೆ ಇದೆಲ್ಲ ಹೊಸದು. ರೇಂಜುಗಳಲ್ಲಿ ಹೀಗೆಲ್ಲ ನಡೆಯುತ್ತದೆ' ಎಂದನು. ಆ ಉತ್ತರದಿಂದ ರಂಗಣ್ಣನಿಗೆ ಏನೊಂದೂ ಅರ್ಧ ವಾಗಲಿಲ್ಲ.

'ಇವೇನು ಕಚೇರಿಯ ಕಾಗದಗಳೇ ?' ಎಂದು ರಂಗಣ್ಣ ಊಹೆ ಮಾಡಿ ಕೇಳಿದನು.

'ಹೌದು ಸ್ವಾಮಿ! ಇನ್ ಸ್ಪೆಕ್ಟರವರು ಫೈಸಲ್ ಆಗದೇ ಇದ್ದ ಕೆಲವು ಕಾಗದಗಳನ್ನೂ ಅರ್ಜಿಗಳನ್ನೂ ಜೊತೆಯಲ್ಲಿ ತೆಗೆದು ಕೊಡು ಹೋಗಿದ್ದರು. ಈಗ ಅವುಗಳಿಗೆಲ್ಲ ಉತ್ತರಗಳನ್ನು ಬರೆದು ಕಳಿಸಿದ್ದಾರೆ. ಜೊತೆಗೆ ಸ್ಕೂಲುಗಳ ತನಿಖೆ ವರದಿಗಳನ್ನು ಹಿಂದೆ ಬರೆದಿರಲಿಲ್ಲ ; ಅವುಗಳನ್ನೂ ಬರೆದು ಕಳಿಸಿದ್ದಾರೆ.'

'ಆ ಕಾಗದಗಳನ್ನೆಲ್ಲ ನಾನೇ ಫೈಸಲ್ ಮಾಡುತ್ತಿದ್ದೆನಲ್ಲ ??

'ತಾವು ಹೊಸಬರು ; ತಮಗೆ ಆ ವಿಷಯಗಳ ಪರಿಚಯ ಆಗಿರುವುದಿಲ್ಲ. ಅವರು ಅದನ್ನೆಲ್ಲ ಪರಿಚಯ ಮಾಡಿಕೊಂಡಿದ್ದವರು. ಆದ್ದರಿಂದ ಅವರೇ ಫೈಸಲ್ ಮಾಡಬೇಕೆಂದು ತೆಗೆದುಕೊಂಡು ಹೋಗಿದ್ದರು.'

'ನನಗೆ ತಿಳಿಯದೆ ಇಂಥ ಕಾರಬಾರು ನಡೆಯಬಾರದು ಶಂಕರಪ್ಪ! ಆ ಕಾಗದಗಳನ್ನು ನನ್ನ ಕೈಯಲ್ಲಿ ಕೊಟ್ಟು ಹೀಗೆ ಮಾಡಿ ಎಂದು ಸಲಹೆ ಕೊಟ್ಟಿದ್ದರೆ ನಾನೇ ಫೈಸಲ್ ಮಾಡುತ್ತಿದ್ದೆ. ಚಾರ್ಜು ಕೊಟ್ಟು ಹೋದ ಮೇಲೆ ಇಲ್ಲಿಯ ಕಾಗದಗಳನ್ನೆಲ್ಲಾ ನನಗೆ ಕೊಟ್ಟು ಹೋಗಬೇಕಾಗಿತ್ತು. ಒಳ್ಳೆಯದು. ಆ ಕಟ್ಟಿನಲ್ಲಿರುವುದನ್ನು ನನಗೆ ಮೊದಲು ತೋರಿಸಿ ಆಮೇಲೆ ರವಾನೆ ಮಾಡಿ. ಎಲ್ಲಕ್ಕೂ ಹಿಂದಿನ ತಾರೀಕನ್ನು ಹಾಕಿ ರುಜು ಮಾಡಿದ್ದಾರೆ ಎಂದು ಕಾಣುತ್ತದೆ.'

'ಹೌದು ಸ್ವಾಮಿ.'

' ಸರಿ. ನಾನೇ ಅವರಿಗೆ ಬರೆಯುತ್ತೇನೆ. ಉಳಿದಿರುವ ಕಾಗದಗಳನ್ನೆಲ್ಲ ಹಿಂದಕ್ಕೆ ಕಳಿಸಿ ಬಿಡಲಿ.'

ಅಪ್ಪಣೆ ಸ್ವಾಮಿ!

'ನಾಳೆ ಬೆಳಗ್ಗೆ ಯಾವುದಾದರೂ ಒಂದೆರಡು ವಾರ ಶಾಲೆಗಳನ್ನು ನೋಡಿ ಕೊಂಡು ಬರುತ್ತೇನೆ ಹತ್ತನೆಯ ತಾರೀಕಿನಿಂದ ಸರ್ಕೀಟು ಹೊರಡೋಣ

'ಅಪ್ಪಣೆ ಸ್ವಾಮಿ !?

ಶಂಕರಪ್ಪನು ಹೊರಟು ಹೋದನು. ರಂಗಣ್ಣನಿಗೆ ಹೀಗೆ ಕಚೇರಿಯ ಹೊಸ ಹೊಸ ಅನುಭವಗಳುಂಟಾದುವು. ಗೋಡೆಗೆ ನೇತು ಹಾಕಿದ್ದ ನಕ್ಷೆಯನ್ನು ನೋಡುತ್ತ -- " ನಾಳೆ ಕಂಬದಹಳ್ಳಿ ಕಡೆಗೆ ಹೋಗಿ ಬರುತ್ತೇನೆ ರಸ್ತೆ ಇರುವ ಹಾಗೆ ಕಾಣುತ್ತದೆ : ಹೋಗಿ ಬರುವುದು ಎಲ್ಲ ಹತ್ತು ಹನ್ನೆರಡು ಮೈಲಿಗಳಷ್ಟು ದೂರ ಆಗುತ್ತದೆ. ಆದ್ದರಿಂದ ಬೈ ಸ್ಕಲ್ ಮೇಲೆ ಬೆಳಗ್ಗೆ ಏಳು ಗಂಟೆಗೆ ಹೊರಟರೆ ಹತ್ತು ಗಂಟೆಗೆಲ್ಲ ಹಿಂದಿರುಗಿಬರಬಹುದು ಎಂದು ತೀರ್ಮಾನಿಸಿ ಕೊಂಡನು.

ಪ್ರಕರಣ ೪.

ಕಂಬದಹಳ್ಳಿಗೆ ಭೇಟಿ

ಮಾರನೆಯ ದಿನ ಪ್ರಾತಃಕಾಲ ಆರು ಗಂಟೆಗೆಲ್ಲ ರಂಗಣ್ಣನು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ಉಡುಪುಗಳನ್ನು ಧರಿಸುವುದಕ್ಕೆ ತೊಡಗಿದನು. ಬೈಸ್ಕಲ್ ಮೇಲೆ ಪ್ರಯಾಣ ಮಾಡಬೇಕಾದ್ದರಿಂದ ಸರ್ಜ್ ಸೂಟು ಬೇಡವೆಂದು ಬದಿಗೊತ್ತಿ ಚೆಕ್ ಸೂಟನ್ನು ಧರಿಸಿಕೊಂಡನು. ಅದನ್ನು ಹೊಸದಾಗಿ ಹೋಲಿಸಿದ್ದುದರಿಂದ ಇಸ್ತ್ರಿ ಮಾಡಿದ್ದು ಮಾಡಿಟ್ಟ ಹಾಗೆಯೇ ಇದ್ದಿತು ; ಮತ್ತು ಚೆನ್ನಾಗಿಯೂ ಇದ್ದಿತು. ಜವಾನನು ಬೂಟ್ಸುಗಳಿಗೆ ಪಾಲಿಷ್ ಕೊಟ್ಟು ಮೆರಗು ಬರುವಂತೆ ಮಾಡಿಟ್ಟಿದ್ದನು. ಕಾಲರು, ನೆಕ್ ಟೈ, ಮೊದಲಾದ ಪಾಶ್ಚಾತ್ಯ ರೀತಿಯ ಉಡುಪಿನ ಸಜ್ಜು ರಂಗಣ್ಣನಿಗೆ ಪ್ರಿಯವಾಗಿದ್ದುವು. ಅವುಗಳನ್ನೆಲ್ಲ ಧರಿಸಿಕೊಂಡು ದೊಡ್ಡ ಕನ್ನಡಿಯಲ್ಲಿ ತನ್ನ ಅಂದ ಚೆಂದಗಳನ್ನು ನೋಡಿಕೊಳ್ಳುತಿದ್ದಾಗ ಹೊಗೆಯಾಡುತ್ತಿದ್ದ ಉಪ್ಪಿಟ್ಟು, ಕಾಫಿ ಮೇಜಿನ ಮೇಲೆ ಬಂದು ಕುಳಿತುವು. ರಂಗಣ್ಣನ ಹೆಂಡತಿ ಸ್ವತಃ ಸಿದ್ಧ ಮಾಡಿ ತಂದಿಟ್ಟ ಉಪಾಹಾರ, ಅವುಗಳನ್ನೆಲ್ಲ ಸ್ವೀಕರಿಸಿ ಬೆಳಗ್ಗೆ ಏಳು ಗಂಟೆಗೆ ಸರಿಯಾಗಿ ರಂಗಣ್ಣ ಮನೆ ಬಿಟ್ಟು ಹೊರಟನು. ಏಳೂವರೆ ಗಂಟೆಗೆ ಪಾಠಶಾಲೆ ಪ್ರಾರಂಭವಾಗುತ್ತದೆ. ಅರ್ಧ ಗಂಟೆಯಲ್ಲಿ ನಾಲ್ಕು ಮೈಲಿ ದೂರದ ಕಂಬದಹಳ್ಳಿಗೆ ಬೈ ಸ್ಕಲ್ ಮೇಲೆ ಹೋಗಬಹುದು ; ಅದರಲ್ಲೂ ಹೊಸಾ ಬಿ. ಎಸ್. ವಿ. ಬೈಸ್ಕಲ್ಲುಎಂದುಕೊಂಡು ಹೊರಟನು.

ದೊಡ್ಡ ರಸ್ತೆ ಚೆನ್ನಾಗಿತ್ತು, ಅರ್ಧಮೈಲಿ ದೂರ ಹೋದಮೇಲೆ ಬಲಕ್ಕೆ ಬೇರೆ ರಸ್ತೆ ಸಿಕ್ಕಿತು. ಆ ಡಿಸ್ಟ್ರಿಕ್ಟ್ ಬೋರ್ಡ್ ರಸ್ತೆಯಲ್ಲಿ ಮುಂದೆಹೋಗಬೇಕಾಗಿತ್ತು. ಆ ಸೀಳು ರಸ್ತೆಯಲ್ಲಿ ನಾಲ್ಕು ಫರ್ಲಾಂಗು ಹೋದನೋ ಇಲ್ಲವೋ ರಸ್ತೆ ಏಕೊ ಆವ್ಯವಸ್ಥೆಯಲ್ಲಿದ್ದ ಹಾಗೆ ಕಂಡಿತು, ಸಾಲದ್ದಕ್ಕೆ ಹಿಂದಿನ ರಾತ್ರಿ ಸ್ವಲ್ಪ ಮಳೆಯೂ ಬಿದ್ದಿತ್ತು, ಬೆಂಗಳೂರು ಮೈಸೂರುಗಳಲ್ಲಿಯೇ ಹೆಚ್ಚಾಗಿ ಓಡಾಡಿ ಅಭ್ಯಾಸವಿದ್ದವನು ರಂಗಣ್ಣ. ಕಡೆಗೆ ಡಿಸ್ಟ್ರಿಕ್ಟಿನ ಮುಖ್ಯ ಸ್ಥಳಗಳಲ್ಲಿ ಮೂರು ನಾಲ್ಕನ್ನು ಕೂಡ ಸರಿಯಾಗಿ ನೋಡಿರಲಿಲ್ಲ. ಆದ್ದರಿಂದ ಒಳನಾಡಿನಲ್ಲಿ ಬೋರೆಗೌಡನ ರಸ್ತೆಗಳು ಹೇಗಿರುತ್ತವೆ ಎನ್ನುವ ಅನುಭವವೇ ಇರಲಿಲ್ಲ. ನಕ್ಷೆಯಲ್ಲಿ ರಸ್ತೆ ಯ ಗೀಟನ್ನು ನೋಡಿ, ರಸ್ತೆ ಎಂದರೆ ಬೆಂಗಳೂರು ಪಟ್ಟಣದ ಕೃಷ್ಣರಾಜೇ೦ದ್ರ ರಸ್ತೆ ನರಸಿ೦ಹರಾಜ ರಸ್ತೆ ಅಲ್ಲದಿದ್ದರೂ ವಿಶ್ವೇಶ್ವರಪುರದ ಸಂದು ರಸ್ತೆಗಳಂತಾದರೂ ಇರಬಹುದು – ಎಂದು ತಿಳಿದುಕೊಂಡಿದ್ದನು. ಆದರೆ ಈ ರಸ್ತೆ ಹಾಗಿರಲಿಲ್ಲ. ರಸ್ತೆಗೆ ಜಲ್ಲಿ ಎಂದರೆ ಏನೆಂಬುದು ತಿಳಿದೇ ಇರಲಿಲ್ಲ. ಅಗಲ ಕಿರಿದು ; ಪಕ್ಕಗಳಲ್ಲಿ ಹಳ್ಳಗಳು, ಕೆಲವು ಕಡೆ ಆ ಹಳ್ಳಗಳಲ್ಲಿ ನೀರು. ರಸ್ತೆಯಲ್ಲಿ ಎತ್ತಿನ ಗಾಡಿಗಳು ಓಡಾಡಿ ಓಡಾಡಿ ಒಂದೊಂದು ಅಡಿಯಷ್ಟು ಹಳ್ಳಗಳು ಬಿದ್ದಿದ್ದ ಉದ್ದನೆಯ ಹಾದಿ; ಆ ಹಳ್ಳಗಳ ನಡುವೆ ಕಿರಿದಾದ ದಿಣ್ಣೆ; ಪಕ್ಕಗಳಲ್ಲಿ ಮತ್ತು ಅಡ್ಡಲಾಗಿ ಸಹ ಕೊರಕಲುಗಳು. ರಂಗಣ್ಣನಿಗೆ ಬೈಸ್ಕಲ್ ಮೇಲೆ ಹೋಗುವುದು ಬರುಬರುತ್ತಾ ದುಸ್ತರವಾಯಿತು. ಅಲ್ಲಲ್ಲಿ ಬೈಸ್ಕಲ್ ಮೇಲೆ ಸರ್ಕಸ್ ಮಾಡಬೇಕಾಗಿ ಬಂತು ; ಒಂದೆರಡು ಸಲ ಚಕ್ರಗಳು ಜಾರಿ ಬಂಡಿ ಜಾಡಿನ ಹಳ್ಳಕ್ಕೆ ಬೀಳಿಸಿದುವು. ಇದೇನೋ? ಫಜೀತಿಗೆ ಇಟ್ಟು ಕೊಂಡಿತು ಎಂದುಕೊಳ್ಳುತ್ತ, ಬೈಸ್ಕಲ್ಲಿಂದ ಇಳಿದು ಆದನ್ನು ತಳ್ಳಿಕೊಂಡು ಮುಂದಕ್ಕೆ ಹೊರಟನು. ಮುಂದೆ ರಸ್ತೆ ಉತ್ತಮ ವಾಗಿರಬಹುದು ಎಂಬುದೊಂದು ಆಶೆ ; ಹೊರಟವನು ಕೆಲಸವನ್ನು ಮುಗಿಸದೆ ಹಿಂದಿರುಗಬಾರದೆಂಬ ಸ್ವಾಭಿಮಾನ, ಆದ್ದರಿಂದ ಬೈಸ್ಕಲ್ಲನ್ನು ತಳ್ಳಿಕೊಂಡು ಮುಂದಕ್ಕೆ ಹೊರಟನು. ಒಂದು ಫರ್ಲಾಂಗು ದೂರ ಹೀಗೆ ಹೋದಮೇಲೆ ಅವನು ನಿರೀಕ್ಷಿಸಿದ್ದಂತೆಯೇ ಅಲ್ಲಿ ಗಟ್ಟಿನೆಲ, ಸಮ ರಸ್ತೆ ಇತ್ತು. ರಂಗಣ್ಣನಿಗೆ ಮನಸ್ಸಿನಲ್ಲಿ ಸಂತೋಷವಾಯಿತು. ಪಟ್ಟು ಹಿಡಿದು ಕೆಲಸ ಮಾಡಿದರೆ ಕಾರ್ಯ ಕೈಗೂಡುವುದು ಖಂಡಿತ ಎಂಬ ಹಿರಿಯರ ವಾಕ್ಯ ಜ್ಞಾಪಕಕ್ಕೆ ಬಂತು. ಬೈ ಸ್ಕಲ್ ಹತ್ತಿಕೊಂಡು ಹೊರಟನು. ಎರಡು ಫರ್ಲಾಂಗು ದೂರ ಹೋದಮೇಲೆ ಬೈಸ್ಕಲ್ ಇಳಿಯಬೇಕಾಯಿತು, ಮುಂದೆ ರಸ್ತೆಯಲ್ಲಿ ಅಡ್ಡಲಾಗಿ ಐವತ್ತು ಅಡಿ ಅಗಲಕ್ಕೆ ನೀರು. ಬಲಗಡೆಗೆ ನೋಡುತ್ತಾನೆ; ಜನಾರ್ದನಪುರದ ಭಾರಿ ಕೆರೆ ಕಾಣುತ್ತಾ ಇದೆ ; ಅದರ ನೀರು ಹಿಂದಕ್ಕೆ ಒತ್ತು ಕೊಂಡು ಬಂದಿದೆ. ಜಾರಾಗಿ ನೀರಿನಲ್ಲಿ ಅದೃಶ್ಯವಾಗಿ ಐವತ್ತು ಅಡಿಗಳ ತರುವಾಯ ಪುನಃ ಏರುತ್ತಾ ಹೊರಟಿದೆ ಎಡಗಡೆ ಎಲ್ಲಿಯಾದರೂ ದಾಟಬಹುದೆನೋ ಎಂದು ಪರೀಕ್ಷೆ ಮಾಡಿದರೆ ಅಲ್ಲಿಯೂ ನೀರು, ಕೊಚ್ಚೆ, ಆಚೆಗೆ ಬೇಲಿ, ಬೇಲಿಯಾಚೆ ಗದ್ದೆಗಳು. ರಂಗಣ್ಣನಿಗೆ ಪ್ಯಾದ್ ಮತ್ ಆಗಿ ಹೋಯಿತು. ನೀರು ಎಷ್ಟು ಆಳವಿದೆಯೋ ತಿಳಿಯದು. ರಸ್ತೆ ಯಲ್ಲಿ ಜನರ ಓಡಾಟ ಕಾಣಲಿಲ್ಲ. ಹಿಂದಕ್ಕೆ ಹೊರಟು ಹೋಗೋಣವೆಂದರೆ ಪ್ರಥಮ ಪ್ರಯತ್ನದಲ್ಲಿಯೇ ಹೀಗೆ ಭಂಗಪಡುವುದೇ? ಉತ್ತರ ಕುಮಾರನಂತೆ ಬೆನ್ನು ತೋರಿಸಿ ಓಡುವುದೇ ? ಕೂಡದು ಎಂಬ ಹೆಮ್ಮೆ, ಸ್ವಲ್ಪ ಹೊತ್ತಿನೊಳಗಾಗಿ ಎದುರು ಕಡೆಯಿಂದ ಒಂದು ಎತ್ತಿನಗಾಡಿ ಬಂತು ಅದರ ಹಿಂದೆ ಕೆಲವರು ಗಂಡಸರೂ ಹೆಂಗಸರೂ ಬರುತ್ತಿದ್ದರು. ಗಾಡಿ ಸರಾಗವಾಗಿ ನೀರಿನಲ್ಲಿ ಇಳಿದು ಈಚೆಗೆ ಬಂತು. ಜನರೆಲ್ಲ ನೀರಿನಲ್ಲಿ ಇಳಿದು ಧಾರಾಳವಾಗಿ ನಡೆದು ಕೊಂಡು ಬಂದು ಬಿಟ್ಟರು. ನೀರಿನ ಆಳ ಮೊಣಕಾಲು ಮಟ್ಟಿಗೆ ಮಾತ್ರ ಎನ್ನುವುದು ತಿಳಿಯಿತು. ನೀರನ್ನು ದಾಟಿಬಂದ ಜನ ರಂಗಣ್ಣನನ್ನು ನೋಡಿ, " ಯಾಕ್' ಸೋಮಿ ಅಂಗ್ ನೋಡ್ತಾ ನಿಂತಿದ್ರಿ? ಮೊಣಕಾಲ್ ಮಟ್ಟ ನೀರೈ ತೆ, ಅಷ್ಟೆ. ಬೈಸ್ಕೂಲ್ ಮೇಗೇನೆೇ ನಡೀರಲಾ ಮತ್ತೆ' ಎಂದು ಹೇಳುತ್ತಾ ಹೊರಟು ಹೋದರು.

ರಂಗಣ್ಣ ಎರಡು ನಿಮಿಷಗಳ ಕಾಲ ಆಲೋಚನೆ ಮಾಡಿ, ಬೂಟ್ಸುಗಳನ್ನು ಬಿಚ್ಚಿ, ಕಾಲುಚೀಲಗಳನ್ನು ತೆಗೆದು ಷರಾಯನ್ನು ಮೊಣಕಾಲ ಮೇಲಕ್ಕೆ ಮಡಿಸಿಕೊಂಡು, ಆ ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದುಕೊಂಡು ನೀರಿನಲ್ಲಿ ಇಳಿದನು. ಬೈಸ್ಕಲ್ಲನ್ನು ತಳ್ಳುತ್ತ ಆಚೆಯ ದಂಡೆಯನ್ನು ಸೇರಿದನು. ಆ ದಿಗ್ವಿಜಯದ ಸಂತೋಷ ಹೇಳತೀರದು. ಆಚೆಗೆಹೋದಮೇಲೆ ಪುನಃ ಬೂಟ್ಸುಗಳನ್ನು ಹಾಕಿಕೊಳ್ಳುವುದು ಕಷ್ಟವಾಯಿತು. ಬೈಸ್ಕಲ್ಲನ್ನು ಒರಗಿಸಿಡುವುದಕ್ಕೆ ಮರವಿಲ್ಲ, ಗಿಡವಿಲ್ಲ; ಕಡೆಗೆ ಎತ್ತರದ ಒಂದು ಕಲ್ಲು ಸಹ ಇಲ್ಲ! ಆದರೆ ರಂಗಣ್ಣ ಒಳ್ಳೆಯ ಹಂಚಿಕೆಗಾರ. ಹಿಂದೆ ಸ್ಕೌಟುಮಾಷ್ಟರಾಗಿ ಇದ್ದವನು ! ಬೈಸ್ಕಲ್ಲನ್ನು ನೆಲದಮೇಲೆ ಮಲಗಿಸಿ ಏಕಪಾದ ಲೀಲೆಯನ್ನು ತಾಳಿ ಜಯಶೀಲನಾದನು. ಹೀಗೆ ಬೂಟ್ಸು ಗಳನ್ನು ಧರಿಸಿದಮೇಲೆ ಗಡಿಯಾರವನ್ನು ನೋಡಿ ಕೊಳ್ಳುತ್ತಾನೆ. ಏಳೂವರೆ ಗಂಟೆ ಆಗಿಹೋಗಿತ್ತು. ಚಿಂತೆಯಿಲ್ಲ. ಇನ್ನೊಂದು ಅರ್ಧ ಗಂಟೆಯೊಳಗೆ ಕಂಬದಹಳ್ಳಿಯನ್ನು ಮುಟ್ಟುತ್ತೇನೆ. ಎಂದು ಧೈರ್ಯ ತಂದುಕೊಂಡು ಬೈ ಸ್ಕಲ್ಲನ್ನು ಹತ್ತಿ ಹೊರಟನು. ರಸ್ತೆ ಮೊದಲಿನಷ್ಟು ಕೆಡುಕಾಗಿರಲಿಲ್ಲ. ಆದರೆ ಅರ್ಧ ಮೈಲಿ ದೂರ ಹೋದನೋ ಇಲ್ಲವೋ ಜನಾರ್ದನ ಪುರದ ಕೆರೆಯ ನೀರು ಒದ್ದು ಕೊಂಡಿದ್ದ ಎರಡನೆಯ ಹರವು ಅಡ್ಡಲಾಯಿತು. ಆದರೆ ರಂಗಣ್ಣನಿಗೆ ಮೊದಲ ಹರವಿನ ಅನುಭವ ಇದ್ದುದರಿ೦ದಲೂ, ಅದರಲ್ಲಿ ತಾನು ಜಯಶಾಲಿಯಾಗಿದ್ದುದರಿ೦ದಲೂ ಈ ವಿಘ್ನ ಅವನನ್ನು ಹೆದರಿಸಲಿಲ್ಲ. ಮೊದಲಿನಂತೆಯೇ ರಂಗಣ್ಣ ಬೂಟುಗಳನ್ನು ಬಿಚ್ಚಿ ನೀರಿನ ಹರವನ್ನು ದಾಟಲು ಬೈಸ್ಕಲ್ಲನ್ನು ತಳ್ಳಿಕೊಂಡು ಇಳಿದನು. ಹತ್ತು ಅಡಿ ಹೋದಮೇಲೆ ನೀರು ಮೊಣಕಾಲ ಮಟ್ಟಕ್ಕೆ ಬಂತು. ಇನ್ನು ಐದು ಅಡಿ ಹೋಗುವುದರೊಳಗಾಗಿ ಆವನ ಷರಾಯಿಯ ಕೊನೆಗಳೆಲ್ಲ ತೊಯ್ದು ಹೋದವು. ಇನ್ನು ಐದು ಅಡಿಗಳ ದೂರ ಹೋಗುತ್ತಲೂ ತೊಡೆಗಳ ಅರ್ಧಕ್ಕೆ ನೀರಿನ ಮಟ್ಟ ಬಂತು. ಆಗ ರಂಗಣ್ಣನಿಗೆ ಪೇಚಾಟಕ್ಕಿಟ್ಟುಕೊ೦ಡಿತು ! ಆಳ ಇನ್ನೂ ಹೆಚ್ಚಾಗಿದೆಯೋ ಏನೋ ? ಮುಂದಕ್ಕೆ ಹೋಗುವುದೆ ? ಅಥವಾ ಹಿಂದಕ್ಕೆ ಹೊರಟು ಹೋಗುವುದೇ ? ಏನು ಮಾಡಲಿ ? ಎಂದು ಕೊಂಚ ಕಾಲ ಅವನು ಜಲಮಧ್ಯದಲ್ಲಿ ನಿಂತು ಸ್ಫೂರ್ತಿಗಾಗಿ ಉಗ್ರ ತಪಸ್ಸು ಮಾಡಿದನು ಗಾಡಿಗಳೂ ಜನರೂ ಓಡಾಡುವ ರಸ್ತೆ, ಬಹಳ ಆಳವಿದ್ದರೆ ಅವರು ಹೇಗೆ ತಾನೆ ಓಡಾಡಲು ಸಾಧ್ಯ? ಆದ್ದರಿಂದ ತೊಡೆಯ ಅರ್ಧಕ್ಕಿಂತ ಹೆಚ್ಚು ಆಳ ಇರಲಾರದು. ಹೀಗೆ ಪೂರ್ವಪಕ್ಷ ಪ್ರಮೇಯಗಳನ್ನು ಜೋಡಿಸಿ ಕೊಂಡು ಸಿದ್ದಾಂತ ಮಾಡಿದನು. ಅವನು ತರ್ಕಶಾಸ್ತ್ರದಲ್ಲಿ ದೊಡ್ಡ ಪಂಡಿತನಾಗಿದ್ದಿರಬೇಕೆಂದು ಯಾರಾದರೂ ಹೇಳಬಹುದು. ಆದರೆ ಅವನು ಹಿಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಹುಡುಗ ! ತರ್ಕ ಗ್ರಂಥದ ಗಂಧವನ್ನೇ ಅರಿಯದ ಪಶು. ಕಡೆಗೆ ಅವನು ತರ್ಕಿಸಿದಂತೆಯೇ ನೀರು ತೊಡೆಯ ಅರ್ಧದಷ್ಟೇ ಆಳವಿದ್ದಿ ತು. ಸ್ವಲ್ಪ ಪ್ರಯಾಸಪಟ್ಟುಕೊಂಡು ರಂಗಣ್ಣ ಆಚೆಯ ದಂಡೆಯನ್ನು ಸೇರಿದನು. ತನ್ನ ಅವಸ್ಥೆಯನ್ನು ನೋಡಿ ಕೊಂಡು, `ನಕ್ಷೆ ನೋಡಿ ಮೋಸವಾಯಿತು. ಶಂಕರಪ್ಪ ನನ್ನಾದರೂ ಕೇಳಿದ್ದಿದ್ದರೆ ಚೆನ್ನಾಗಿರುತಿತ್ತು. ಈಗ ಷರಾಯಿಯಲ್ಲಿ ಅರ್ಧದ ಮೇಲೆ ನೆನೆದುಹೋಯಿತಲ್ಲ. ಒಳಗಿನ ಚಡ್ಡಿ ಸಹ ಕೊನೆಗಳಲ್ಲಿ ನೆನೆದು ಹೋಗಿದೆ. ಕಾಲುಗಳೆಲ್ಲ ತಣ್ಣಗಾಗಿ ಕೊರೆಯುತ್ತಿವೆ'- ಎಂದು ಹೇಳಿಕೊಂಡನು. ಇನ್‌ಸ್ಪೆಕ್ಟರ್ ಗಿರಿಯ ಉತ್ಸಾಹ ಸಹ ಅರ್ಧ ತಣ್ಣಗಾಯಿತು.

ಪುನಃ ಬೂಟ್ಟುಗಳನ್ನು ಕಟ್ಟಿಕೊಂಡು ಒದ್ದೆ ಷರಾಯಿಗಳಲ್ಲಿಯೇ ಬೈಸ್ಕಲ್ಲನ್ನು ಏರಿಕೊಂಡು ಮುಂದಕ್ಕೆ ಹೊರಟನು. ದಾರಿಯಲ್ಲಿ ಎದುರು ಬಿದ್ದ ಗಂಡಸರಲ್ಲಿ, ' ಅಯ್ಯೋ ಪಾಪ ! ಅಯ್ನೋರು ನೆನೆದುಹೋದರು ಎಂದವನೊಬ್ಬ; ' ಅಯ್ನೋರಲ್ಲ ಕಣೋ! ಯಾರೋ ಸಾಹೇಬ್ರು. ಠೀಕಾಗವ್ರೆ' ಎಂದವನು ಮತ್ತೊಬ್ಬ, ಆ ಮಾತುಗಳನ್ನು ಅರ್ಧಂಬರ್ಧ ಆಲಿಸಿ ತನ್ನ ಅವಸ್ಥೆಗೆ ಒಳಗೊಳಗೇ ನಗುತ್ತ ಇನ್ನೆರಡು ಮೈಲಿ ದೂರ ಹೋಗುತ್ತಲೂ ದೂರದಲ್ಲಿ ಹಳ್ಳಿ ಇರುವುದು ಗೋಚರವಾಯಿತು. ಬಹುಶಃ ಅದೇ ಕಂಬದಹಳ್ಳಿ ಇರಬೇಕೆಂದು ತೀರ್ಮಾನಿಸಿಕೊಂಡನು. ಇನ್ನು ಸ್ವಲ್ಪ ದೂರ ಮುಂದಕ್ಕೆ ಬರುತ್ತಲೂ ಕಂಬದಹಳ್ಳಿಯ ಭಾರಿ ಕೆರೆ ದೊಡ್ಡ ಕನ್ನಡಿಯ ಹಾಗೆ ಕಣ್ಣಿಗೆ ಬಿತ್ತು. ಅದನ್ನು ನೋಡಿದಾಗ ಆ ಪ್ರಕೃತಿಯ ಸೌಂದರ್ಯಕ್ಕೆ ಸ೦ತೊಷವೂ ಹಿಂದಿನ ನೀರ ಹರವುಗಳ ಜ್ಞಾಪಕದಿಂದ ಮುಂದೇನು ದೊಡ್ಡ ವಿಘ್ನವಿದೆಯೋ ಎಂಬ ಭಯವೂ ಏಕಕಾಲದಲ್ಲಿ ರಂಣ್ಣನಿಗೆ ಉಂಟಾದುವು. ಇಷ್ಟು ದೂರ ಬಂದದ್ದ೦ತೂ ಆಯಿತು; ಹಳ್ಳಿ ಸಹ ಕಾಣುತ್ತಾ ಇದೆ ; ಇನ್ನೆಲ್ಲ ಅರ್ಧ ಮೈಲಿ, ಏನು ವಿಘ್ನವಿದ್ದರೂ ದಾಟುವುದೇ ಸರಿ ಎಂದು ನಿಶ್ಚಯ ಮಾಡಿಕೊಂಡು ಮುಂದಕ್ಕೆ ಹೊರಟನು, ಕೆರೆಯ ಕೋಡಿ ಬಳಿ ಬಂದಾಗ ರಸ್ತೆ ಬಹಳ ಇಳಿಜಾರಾಗಿದ್ದುದು ಕಂಡಿತು. ತಾನಿರುವ ಮಟ್ಟಕ್ಕೂ ಕೆಳಗಿನ ಮಟ್ಟಕ್ಕೂ ಇಪ್ಪತ್ತು ಅಡಿಗಳಮೇಲೆ ಹಳ್ಳ ಏರುವುದಾಗಿ ಕಂಡಿತು. ಅಷ್ಟೇ ಅಲ್ಲ, ಕೆರೆ ಕೋಡಿ ಬಿದ್ದು ನೀರು ರಸ್ತೆಗೆ ಅಡ್ಡಲಾಗಿ ಹರಿಯುತ್ತಿರುವುದು ಕಂಡಿತು. ಹಳ್ಳಿಯ ಹೆಂಗಸರು ಮೇಲುಗಡೆ, ಆಚೆಯ ದಂಡೆಯಲ್ಲಿ ಪಾತ್ರೆಗಳನ್ನು ಬೆಳಗುತ್ತಿರುವುದು, ಸೀರೆಗಳನ್ನು ಒಗೆಯುತ್ತಿರುವುದು, ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವುದು - ಮೊದಲಾದುವೆಲ್ಲ ಕ೦ಡಿತು. ರಂಗಣ್ಣ ಬೈಸಿಕಲ್ಲಿಂದ ಇಳಿದು ನಡೆದು ಕೊಂಡು ಹೊರಟನು. ನೀರು ಸ್ವಲ್ಪ ರಭಸವಾಗಿಯೇ ಹರಿಯುತ್ತಿದೆ. ಏನು ಮಾಡಬೇಕು ? ಆಳ ಎಷ್ಟಿದೆಯೋ ? ಎಂದು ಆಲೋಚಿಸುತ್ತ ನಿಂತಿದ್ದಾಗ, ಎದುರುಗಡೆಯಿಂದ ಗಾಡಿಯೊಂದು ಇಳಿದು ಬಂತು. ಆಳ ಎಷ್ಟಿದೆಯೇ ಎಂದು ರಂಗಣ್ಣನು ಕುತೂಹಲದಿಂದ ನೋಡಿದನು. ಚಕ್ರಗಳ ಗುಂಬ ನೀರಿನಲ್ಲಿ ಮುಳುಗಿಹೋಯಿತು. ಎತ್ತುಗಳ ಕಾಲುಗಳು ಕಾಣಿಸಿದ್ದವು. ಗಾಡಿ ಸಹ ಎಲ್ಲಿ ಕೊಚ್ಚಿ ಕೊ೦ಡುಹೋಗುವುದೋ ಎನ್ನುವ ಹೆದರಿಕೆ ಯ ಇತ್ತು. ಆದರೆ ಎತ್ತುಗಳು ಬಲ ವಾಗಿದ್ದುವು ; ಗಾಡಿಯವನೂ ಕಟ್ಟು ಮಸ್ತಾಗಿದ್ದನು. ಆದ್ದರಿಂದ ಗಾಡಿ ನೀರಹರವನ್ನು ದಾಟಿ ಈಚೆಯ ದಂಡೆಯನ್ನು ಹತ್ತಿ ಹೊರಟು ಹೋಯಿತು. ರಂಗಣ್ಣ ಆಧೈರ್ಯ ದಿಂದ ನಿಂತು ನೋಡುತ್ತಾ ಇದ್ದಾನೆ! ಕೆಲವರು ಗಂಡಸರು ಮೂಟೆಗಳನ್ನು ಹೊತ್ತು ಕೊಂಡು ಎದುರು ಕಡೆಯಿಂದ ಬರುತ್ತಿದ್ದಾರೆ. ಅವರೇನು ಮಾಡುತ್ತಾರೋ ನೋಡೋಣ. ಹಿಂದಕ್ಕೆ ಹೊರಟು ಹೋಗುತ್ತಾರೋ ಏನೋ ? ಎಂದು ರಂಗಣ್ಣ ನೋಡುತ್ತಿದ್ದಾನೆ. ಏನೊಂದು ಎಗ್ಗೂ ಇಲ್ಲದೆ ಬಟ್ಟೆಗಳನ್ನು ಮೇಲಕ್ಕೆತ್ತಿಕೊಂಡು ನೀರನ್ನು ದಾಟಿ ಹೊರಟೇ ಹೋದರು ! ಆ ದೃಶ್ಯವನ್ನು ನೋಡಿದ ಮೇಲೆ ರಂಗಣ್ಣನಿಗೆ, - ತನ್ನ ಸ್ವಾಭಿಮಾನ ಭಂಗ ವಾದರೂ ಚಿಂತೆಯಿಲ್ಲ, ಜನಾರ್ದನಪುರಕ್ಕೆ ಹಿಂದಿರುಗೋಣ-ಎಂದು ಆಲೋಚನೆ ಬಂತು. ಪುನಃ ಇಷ್ಟು ದೂರ ಬಂದಿದ್ದೇನೆ, ಹಳ್ಳಿ ಸಹ ಕಾಣುತ್ತಿದೆ, ಫಲ ಕೈಗೆ ಎಟಕುತ್ತಿರುವಾಗ ಪ್ರಯತ್ನವನ್ನು ಕೈಬಿಟ್ಟವರುಂಟೆ ? ಎಂದು ಮತ್ತೊಂದು ಆಲೋಚನೆ ಬಂತು. ಹೀಗೆ ಡೋಲಾಯಮಾನ ಸನಾಗಿದ್ದಾಗ ಎದುರಿಗೆ ಕೆಲವರು ಹೆಂಗಸರು ತಲೆಯಮೇಲೆ ಬುಟ್ಟಿಗಳನ್ನು ಹೊತ್ತು ಕೊಂಡು ಬರುತ್ತಿದ್ದ ರು. ಅವರು ಸಹ ನೀರಿಗಿಳಿದರು ! ಸಭ್ಯನಾದ ರಂಗಣ್ಣ ಬೈ ಸ್ಕಲ್ಲನ್ನು ತಿರುಗಿಸಿಕೊಂಡು ರಸ್ತೆಯನ್ನು ಹತ್ತಿ ಮೇಲಕ್ಕೆ ಹೊರಟನು. ಸ್ವಲ್ಪ ಹೊತ್ತಿನೊಳಗಾಗಿ ಹಿಂದೆ ಇದ್ದ ಹೆಂಗಸರು ನೀರನ್ನು ದಾಟಿ ರಂಗಣ್ಣನ ಮುಂದೆಯೇ ಹಾದು ಹೊರಟು ಹೋದರು. ಆಗ ರಂಗಣ್ಣ ದೃಢನಿಶ್ಚಯ ಮಾಡಿದನು. ಹೆಂಗಸರು ಕೂಡ ಹೆದರದೆ ನೀರನ್ನು ದಾಟಿ ಹೊರಟುಹೋದರು, ನಾನು ಅವರಿಗಿಂತ ಕೀಳಾಗಬೇಕೇ ? ಬಟ್ಟೆ ನೆನೆದರೆ ನೆನೆಯಲಿ, ಜೀವ ನೆನೆದರೆ ನೆನೆಯಲಿ. ಈಸಬೇಕು, ನುಗ್ಗಿ ಜೈ ಸಬೇಕು' ಎಂದು ಹುರುಪುಗೊಂಡು ಬೂಟ್ಸುಗಳನ್ನು ಬಿಚ್ಚಿದನು. ಆಗ ಹಳೆಯ ಇನ್ ಸ್ಪೆಕ್ಟರಿನ ಸಾಮಾನ್ಯ ಪಂಜೆಯ ನೆನಪಾಯಿತು ! ಆತನಂತೆಯೇ ತಾನೂ ಸಹ ಇದ್ದಿದ್ದರೆ ಆಗಿತ್ತಲ್ಲ ಎಂದು ವಿವೇಕೋದಯವಾಯಿತು. ಇವೆಲ್ಲ ಅನುಭವಕ್ಕೆ ಬರುವುದು ಒಳ್ಳೆಯದು. ಎಂದು ಹೇಳಿಕೊಳ್ಳುತ್ತ ಷರಾಯಿಯನ್ನೂ ಅಂಗಿಯನ್ನೂ ತೆಗೆದು ಬಿಟ್ಟು ಬರಿ ಚೆಡ್ಡಿಯಲ್ಲಿ ನಿಂತು ಕೊಂಡನು. ಎಲ್ಲವನ್ನೂ ಗಂಟು ಕಟ್ಟಿ ಕೊರಳಿಗೆ ಸುತ್ತಿಕೊಂಡು ಬೂಟ್ಸುಗಳನ್ನು ಎಡಗೈಯಲ್ಲಿ ಹಿಡಿದೆತ್ತಿಕೊ೦ಡು ಬಲಗೈಯಿಂದ ಬೈ ಸ್ಕಲ್ಲನ್ನು ತಳ್ಳಿಕೊಂಡು ನೀರಿನೊಳಕ್ಕೆ ರಂಗಣ್ಣ ಇಳಿದನು. ಆಗಿನ ಅವನ ವಿಚಿತ್ರವೇಷವನ್ನು ಅವನ ಹೆಂಡತಿ ನೋಡಬೇಕಾಗಿತ್ತು ! ನೀರಿನಲ್ಲಿ ಇಳಿದು ಅರ್ಧಕ್ಕೆ ಬಂದಾಗ ಸೆಳೆವು ಹೆಚ್ಚಾಗಿದ್ದಂತೆ ತೋರಿತು ; ಕಾಲುಗಳು ಅಸ್ಥಿರವಾದುವು. ಆದರೆ ಹೇಗೋ ದೇವರು ಪಾರು ಮಾಡಿಸಿದನು. ರಂಗಣ್ಣ ನೀರನ್ನು ದಾಟಿಕೊಂಡು ಆಚೆಯ ದಡವನ್ನು ಸೇರಿ ರಸ್ತೆಯನ್ನು ಹತ್ತಿ ನೆಲಕ್ಕೆ ಬಂದನು ಬೈಸ್ಕಲ್ಲನ್ನು ಮರಕ್ಕೆ ಒರಗಿಸಿ ಅಲ್ಲಿನ ಕಲ್ಲಿನ ಮೇಲೆಕುಳಿತು ಕೊಂಡನು. ತನ್ನ ಚೆಡ್ಡಿ ಯೆಲ್ಲ ಒದ್ದೆಯಾಗಿದ್ದಿತು ; ನೀರುತೊಟ್ಟಿಕ್ಕುತ್ತಿತ್ತು. ಹಿಂದೆ ಅರ್ಧದ ವರೆಗೆ ನೆನೆದಿದ್ದ ಷರಾಯಿ ಈಗ ಏಕ ಮಾತ್ರ ಆಧಾರ. ಏನು ಮಾಡುವುದು ? ಚೆಡ್ಡಿಯನ್ನು ತೆಗೆದು ಉಪಾಯದಿಂದ ಷರಾಯಿಯನ್ನು ಹಾಕಿಕೊಳ್ಳ ಬೇಕು ಆದರೆ ಪಂಚೆಯನ್ನು ಬಿಚ್ಚಿ ಕಳಚುವಂತೆ ಚೆಡ್ಡಿಯನ್ನು ಕಳಚಲಾದೀತೆ ? ಈ ಸಂಕಟವನ್ನು ಅನುಭವಿಸಿದವರಿಗೆ ಅದರ ಆಗು ಹೋಗುಗಳು ಗೊತ್ತು. ಉಳಿದವರಿಗೆ ಹೇಗೆ ಗೊತ್ತಾಗಬೇಕು? ಚೆಡ್ಡಿ ಅದನ್ನು ಬಿಚ್ಚಿ ಬಿಟ್ಟು, ಗೊಮ್ಮಟೇಶ್ವರನಂತೆ ನಿಂತು ಷರಾಯಿಯನ್ನು ಹಾಕಿಕೊಳ್ಳುವುದಾದರೂ ಹೇಗೆ ? ಜನ ಓಡಾಡುತ್ತಾ ಇದ್ದಾರೆ. ಒದ್ದೆಯ ಚೆಡ್ಡಿ ಯ ಮೇಲೆಯೇ ಷರಾಯಿಯನ್ನು ಎಳೆದುಕೊ೦ಡು ಹಾಕಿಕೊಳ್ಳುವುದೇ ? ಅದರ ಸಂಪರ್ಕದಿಂದ ಷರಾಯಿಯ ಆ೦ಡಿನ ಭಾಗವೆಲ್ಲ ಒದ್ದೆಯೇ ಆಗುತ್ತದೆಯಲ್ಲ ! ಅದನ್ನು ತಪ್ಪಿಸುವುದು ಹೇಗೆ ? ಹಾಗೆಯೇ ಪಾಠಶಾಲೆಗೆ ಹೋದರೆ ತನ್ನನ್ನು ನೋಡಿ ಹುಡುಗರು ನಗುವುದಿಲ್ಲವೆ ? ಮೇಷ್ಟು ಏನೆಂದುಕೊಂಡಾನು ? ಎಲ್ಲರ ಹತ್ತಿರವೂ ಹೇಳಿ ಹೇಳಿ ಅಪಹಾಸ್ಯ ಮಾಡುವುದಿಲ್ಲವೆ ? ಹೀಗೆ ಭಾವನಾತರಂಗಗಳಲ್ಲಿ ಮುಳುಗುತ್ತ ಏಳುತ್ತ ಸಮಸ್ಯೆ ಬಗೆಹರಿಯದೆ ರಂಗಣ್ಣ ಕಲ್ಲ ಮೇಲೆಯೇ ಕೊಂಚ ಹೊತ್ತು ಒದ್ದೆ ಯಿಂದ ನಡುಗುತ್ತ ಕುಳಿತಿದ್ದನು. ಕಡೆಗೆ ಸಮಸ್ಯೆ ಪರಿಹಾರವಾಯಿತು. ರಂಗಣ್ಣ ತನ್ನ ಅಂಗಿಯನ್ನು ನಡುವಿಗೆ ಸುತ್ತಿ ಚೆಡ್ಡಿಯನ್ನು ಬಿಚ್ಚಿ , ಬರಿಯ ಷರಾಯಿಯನ್ನು ಹಾಕಿ ಕೊಂಡು ಜಯಶಾಲಿಯಾದನು. ' ಇಷ್ಟೊಂದು ಸುಲಭೋಪಾಯ ಮೊದಲೇ ಹೊಳೆಯಲಿಲ್ಲವಲ್ಲ !' ಎಂದು ತನ್ನ ಮಂದಬುದ್ಧಿಯನ್ನು ತಾನೇ ಹಳಿದುಕೊಂಡು ಮತ್ತೆ ಉಡುಪನ್ನು ಧರಿಸಿ, ಬೂಟ್ಸು ಹಾಕಿಕೊಂಡು ಹಳ್ಳಿಯ ಕಡೆಗೆ ಹೊರಟನು. ಗಡಿಯಾರವನ್ನು ನೋಡಿದರೆ ಆಗಲೇ ಒ೦ಬತ್ತು ಗಂಟೆ ಆಗಿಹೋಗಿತ್ತು.

ಹೀಗೆ ರಂಗಣ್ಣ ಸ್ವಲ್ಪ ಮಟ್ಟಿಗೆ ಭಂಗ ಪಟ್ಟದ್ದರಿಂದ ಇನ್ ಸ್ಪೆಕ್ಟರ ಲಸ ಹೂವಿನ ಹಾಸಿಗೆ ಅಲ್ಲವೆಂದೂ ಒಳನಾಡಿನಲ್ಲಿ ಸರ್ಕೀಟು ತಿರುಗುವುದು ಕಷ್ಟದ ಕೆಲಸವೆಂದೂ ಅರಿವಾಯಿತು. ಈಗ ಹೇಗೋ ದಾರಿಯಲ್ಲಿನ ನೀರಿನ ಹರವುಗಳನ್ನು ದಾಟಿ ಬಟ್ಟೆಗಳನ್ನು ತೊಯ್ಸಿಕೊಂಡು ಹಳ್ಳಿಯನ್ನು ಸೇರಿದ್ದಾಯಿತು. ಸ್ಕೂಲುಗಳನ್ನು ನೋಡಿದ ಮೇಲೆ ಜನಾರ್ದನ ಪುರವನ್ನು ಸೇರುವುದು ಹೇಗೆ ? ಪುನಃ ಫಜೀತಿಗೆ ಸಿಕ್ಕಿಕೊಳ್ಳ ಬೇಕಲ್ಲ. ಅದಕ್ಕೆನು ಪರಿಹಾರ ? ಎಂದು ಆಲೋಚಿಸಿದನು. ಮೇಷ್ಟರ ಸಹಾಯದಿಂದ ಹಿಂದಿರುಗುವುದಕ್ಕೆ ಬೇರೆದಾರಿಯನ್ನು ತಿಳಿದುಕೊಳ್ಳುವುದೋ ಇಲ್ಲದಿದ್ದರೆ ಒಂದು ಗಾಡಿಯನ್ನು ಗೊತ್ತುಮಾಡಿಕೊ೦ಡು ಬೈಸ್ಕಲ್ಲನ್ನು ಮೇಲೆ ಕಟ್ಟಿ ತಾನು ಒಳಗೆ ಕುಳಿತು ಕ್ಷೇಮವಾಗಿ ಹಿಂದಿರುಗುವುದೋ- ಈ ಎರಡರಲ್ಲಿ ಏನನ್ನಾದರೂ ಮಾಡೋಣವೆಂದು ನಿರ್ಧರಿಸಿಕೊಂಡನು, ಹಳ್ಳಿಯನ್ನು ಪ್ರವೇಶಿಸಿ ಅದರ ಇಕ್ಕಟ್ಟಾದ ಕೊಳಕು ಓಣಿಗಳಲ್ಲಿ ಹೋಗುತ್ತಿದ್ದಾಗ ರಂಗಣ್ಣನಿಗೆ ಬಹಳ ಅಸಹ್ಯವಾಯಿತು. ಇತ್ತ ಅತ್ತ ಹೇಸಿಗೆ ; ಬಚ್ಚಲ ನೀರೆಲ್ಲ ದಾರಿಯಲ್ಲೇ ; ಮೂಳೆ ಬಿಟ್ಟುಕೊಂಡು ನಿಂತಿದ್ದ ಕೆಲವು ರಾಸುಗಳು ; ತನ್ನನ್ನು ನೋಡಿ ಬಗುಳುತ್ತ ಓಡಿ ಹೋಗುತಿದ್ದ ನಾಯಿಗಳು ; ಸಗಣಿಯನ್ನು ಬೆರಣಿ ತಟ್ಟುತ್ತಿದ್ದ ಹೆಂಗಸರು ; ಕೆಲವು ಮನೆಗಳ ದಿಣ್ಣೆಗಳ ಮೇಲೆ ಕಂಬಳಿ ಹೊದ್ದು ಕೊಂಡು ಕೆಮ್ಮುತ್ತ ಉಗುಳುತ್ತ ಕುಳಿತಿದ್ದ ಮುದುಕರು. ಅವುಗಳನ್ನೆಲ್ಲ ನೋಡುತ್ತ ಒಂದಷ್ಟು ದೂರ ಹೋದಮೇಲೆ ಪಾಠ ಶಾಲೆ ಎಲ್ಲಿರುವುದೆಂಬುದನ್ನು ವಿಚಾರಿಸಲು ತೊಡಗಿದನು. ಪಕ್ಕದಲ್ಲಿ ಕೆಲವರು ಎಳೆಯ ಹುಡುಗರು ನಿಂತಿದ್ದರು. " ಇಲ್ಲಿ ಪಾಠಶಾಲೆ ಎಲ್ಲಿದೆ ? ತೋರಿಸುತ್ತೀಯಾ ? ' ಎಂದು ರಂಗಣ್ಣನು ಕೇಳಿದನು. ಉತ್ತರ ಹೇಳುವುದಕ್ಕೆ ಬದಲು ಆ ಹುಡುಗರು ಗಾಬರಿಯಾಗಿ " ಅಮ್ಮಾ!' ಎಂದು ಅಳುತ್ತಾ ಓಡಿ ಹೋದರು ! ಇನ್ನು ಸ್ವಲ್ಪ ದೂರ ಹೋದಮೇಲೆ ಎದುರಿಗೆ ಬರುತ್ತಿದ್ದ ಮಧ್ಯ ವಯಸ್ಸಿನ ಹಳ್ಳಿಯವನನ್ನು ನೋಡಿ, " ಅಯ್ಯಾ ! ಇಲ್ಲಿ ಪಾಠಶಾಲೆ ಎಲ್ಲಿದೆ' ಎಂದು ಕೇಳಿದನು,

'ನಂಗೊತ್ತಿಲ್ಲ ಸೋಮಿ. ಅದೇ ನೈತೋ ಅದೇ ನಿಲ್ಲೊ ಈ ಊರಾಗೆ, ನಾನೀಯೂರವನಲ್ಲ' ಎಂದು ಹೇಳುತ್ತ, ನಿಲ್ಲದೆ ಆ ಮನುಷ್ಯ ಹೊರಟೇ ಹೋದನು.

ರಂಗಣ್ಣ ಅಲ್ಲಿಯೇ ಸ್ವಲ್ಪ ನಿಂತು ಎದುರಿಗೆ ಬಂದ ಇಬ್ಬರು ಹಳ್ಳಿಯವರನ್ನು ನೋಡಿ, ಈ ಹಳ್ಳಿಯವರೇನಪ್ಪ ? ಕೇಳಿದನು.

'ಹೌದು ಸೋಮಿ !!

'ಇಲ್ಲಿ ಪಾಠಶಾಲೆ ಎಲ್ಲಿದೆ ? :

ಅವರು ಬೆಪ್ಪಾಗಿ ನಿಂತು ರಂಗಣ್ಣನನ್ನು ನೋಡುತ್ತ, ಶಾಲಾವ ? ಅದೇನ್ ಸೋಮಿ ಅಂಗಂದ್ರೆ ? ' ಎಂದು ಕೇಳಿದರು !

'ಸ್ಕೂಲ್, ಹುಡುಗರಿಗೆ ಪಾಠ ಹೇಳಿಕೊಡುವ ಶಾಲೆ ; ಪಾಠ ಶಾಲೆ.

'ಓಹೋ ! ಇಸ್ಕೊಲಾ ? ಹೈಕ್ಲಮನೆ, ಲೇ ಏಳ್ಲಾ ! ಎಲ್ಲಿತೋ ಇಸ್ಕೂಲು. ಸಾಹೇಬ್ರು ಕೇಳ್ತವ್ರೆ' ಎಂದು ಒಬ್ಬನು ಮತ್ತೊಬ್ಬನಿಗೆ ಹೇಳಿದನು.

'ಇಲ್ಲೇ ಎಲ್ಲೋ ಐತೆ ಸೋಮಿ ' ಎಂದು ಮತ್ತೊಬ್ಬನು ಹೇಳುತ್ತಾ ಬೆನ್ನು ನೋಟವನ್ನು ನಾಲ್ಕೂ ದಿಕ್ಕಿಗೂ ಬೀರುತ್ತಾ ನಿಂತೇ ಇದ್ದನು. ಅಷ್ಟು ಹೊತ್ತಿಗೆ ಕೆಲವರು ದೊಡ್ಡ ಹುಡುಗರು ಆ ಕಡೆ ಬರುತ್ತಿದ್ದರು, ಅವರನ್ನು ದೃಷ್ಟಿಸಿ, 'ತಾಳಿ ಸೋಮಿ ಆ ಹೈಕೃನ್ನ ಕೇಳಾಣ, ಅವರ್ಗೆ ಗೊತ್ತೋ ಏನೋ? ಎಂದು ಒಬ್ಬ ಗೌಡನು ಹೇಳಿದನು. ಆ ಹುಡುಗರು ಸ್ಕೂಲಿನ ವಿದ್ಯಾರ್ಥಿಗಳಂತೆ ಕಂಡು ಬಂದದ್ದರಿಂದ ರಂಗಣ್ಣನೇ ಅವರನ್ನು 'ಇಲ್ಲಿ ಸ್ಕೂಲು ಎಲ್ಲಿದೆ ? ಎಂದು ಕೇಳಿದನು. ಅವರು ' ತೋರ್ಸ್ತ್ತೇವೆ ಬನ್ನಿ ಸಾರ್' ಎ೦ದು ಹೇಳಿ ಕರೆದುಕೊಂಡು ಹೊರಟರು. ಹಳ್ಳಿಯವರು, ' ಎಂಗಾನ ಆಗಲಿ, ಇಸ್ಕೂಲ್ ತೋರ್ಸೋ ರು ಸಿಕ್ಕರಲ್ಲ ನಮ್ಮಳ್ಳಿಗೆ' ಎಂದು ಆಡಿಕೊಳ್ಳುತ್ತ ಮುಂದಕ್ಕೆ ಹೊರಟರು.

ಒಂದು ಫರ್ಲಾ೦ಗು ದೂರ ಎರಡು ಮೂರು ಡೊಂಕು ಓಣಿಗಳನ್ನು ದಾಟಿದ ಮೇಲೆ ಹಳ್ಳಿಯ ಆಚೆಯ ಕೊನೆಯಲ್ಲಿ ಹಳ್ಳಿ ಹೆಂಚು ಹೊದಿಸಿದ್ದ ಒಂದು ಸಣ್ಣ ಕಟ್ಟಡ ಸಿಕ್ಕಿತು. ರಂಗಣ್ಣನಿಗೆ ಬಂದ ಕೆಲಸ ಸದ್ಯ ನೆರವೇರಿತಲ್ಲಾ ಎಂದು ಸಂತೋಷವಾಯಿತು. ಮುಂದುಗಡೆ ಗೋಡೆಗೆ ಬೈಸ್ಕಲ್ಲನ್ನು ಒರಗಿಸಿಟ್ಟು ಒಳಕ್ಕೆ ಹೋದನು. ಅಲ್ಲಿ ಎಂಟು ಹತ್ತು ಹುಡುಗರು ಎದ್ದು ನಿಂತುಕೊಂಡು, “ ನಮಸ್ಕಾರ ಸಾರ್ ? ಎಂದು ಕಿಂಚಿದರು. ರಂಗಣ್ಣ ಅವರಿಗೆ ನಮಸ್ಕಾರ ಮಾಡಿದನು. ಮುಂದೆ ನೋಡಿದರೆ ಮೇಷ್ಟರು ಕಣ್ಣಿಗೆ ಬಿ ಕೆಳಲಿಲ್ಲ. ಕುರ್ಚಿ ಖಾಲಿಯಾಗಿತ್ತು.

'ಈ ದಿನ ಮೇಷ್ಟರು ಬರಲಿಲ್ಲವೇ ?'

'ಇಲ್ಲಾ ಸಾರ್", ರಜಾದ ಮೇಲವ್ರೆ.'

'ನನ್ನೆ ಬಂದಿದ್ದರೇನು ?'

'ಇಲ್ಲಾ ಸಾರ್, ಎರಡು ದಿವ್ಸ ಬರೋದಿಲ್ಲ. ಕೆಲಸ ಐತೆ- ಎಂದು ಹೇಳವ್ರೆ.'

'ಮತ್ತೆ ಸ್ಕೂಲ್ ಬಾಗಿಲು ತೆರೆದಿದೆಯಲ್ಲ ? ಬೀಗ ಯಾರು ತೆಗೆದರು ?'

'ಬೀಗದ ಕೈ ನಮ್ತಾವ ಕೊಟ್ಟು ಹೋಗ್ತಾರೆ ಸಾರ್, ನಾವೇ ಬೀಗ ತೆಗೆದು ಒಳಗೆಲ್ಲ ಗುಡಿಸಿ ಚೊಕ್ಕ ಮಾಡ್ತೇವೆ. ಮೇಷ್ಟು ಆಮೇಲೆ ಬಂದು ಪಾಠ ಮಾಡ್ತಾರೆ.'

'ಮೇಷ್ಟು ಎಲ್ಲಿ ವಾಸಮಾಡುತ್ತಾರೆ ?'

'ನಾಗೇನಳ್ಳಿ ಸಾರ್. ಇಲ್ಲಿಗೆ ಎರಡು ಮೈಲಿ, ಮೇಷ್ಟು ಬೈಸ್ಕಲ್ ಮಡಕ್ಕೊಂಡವ್ರೆ. ಮುಂದೆ ರಂಗಣ್ಣನಿಗೆ ಏನು ಮಾಡಬೇಕೆಂಬುದು ಹೊಳೆಯಲಿಲ್ಲ. ಐದು ನಿಮಿಷಗಳ ಕಾಲ ಕುರ್ಚಿಯಲ್ಲಿ ಕುಳಿತು ವಿಶ್ರಮಿಸಿಕೊಂಡನು. ಮೇಜಿಗೆ ಮತ್ತು ಪೆಟ್ಟಿಗೆಗೆ ಬೀಗಗಳು ಹಾಕಿದ್ದುವು. ಸ್ಕೂಲಿನ ದಾಖಲೆಗಳೆಲ್ಲ ಒಳಗಿದ್ದುವು. ರಂಗಣ್ಣ ಸಪ್ಪೆ ಮೋರೆ ಮಾಡಿಕೊಂಡು ಚಿ೦ತಿಸುತ್ತ ಕುಳಿತಿದ್ದನು. ಅವನಿಗೆ ಮುಂದಿನ ಹಳ್ಳಿಗಳಿಗೆ ಹೋಗ ಬೇಕೆ೦ಬ ಆಶೆ ಅಳಿದು ಹೋಯಿತು, ಜನಾರ್ದನಪುರಕ್ಕೆ ಹಿಂದಿರುಗಿದರೆ ಸಾಕಪ್ಪ ಎಂದಾಯಿತು. ಆದರೆ ಈಗ ಜನಾರ್ದನಪುರಕ್ಕೆ ಹಿಂತಿರುಗುವುದು ಹೇಗೆ ? ಎಂದು ದೊಡ್ಡ ಯೋಚನೆ ಹಿಡಿಯಿತು. ಬಂದ ದಾರಿ ಹಿಡಿದುಕೊಂಡು ಹೋಗುವುದೇ ಹೊರತು ಬೇರೆ ಉಪಾಯ ಹೊಳೆಯಲಿಲ್ಲ, ನಿಟ್ಟುಸಿರು ಬಿಟ್ಟು ಕೊಂಡು ಎದ್ದನು. ಹೊರಕ್ಕೆ ಬಂದು ಬೈಸ್ಕಲ್ ತಳ್ಳಿಕೊಂಡು ಹೊರಟನು. ಆವನ ಅದೃಷ್ಟಕ್ಕೆ ಕೆರೆಯ ಹತ್ತಿರ ಒಂದು ಬೋಳು ಎತ್ತಿನಗಾಡಿ ಜನಾರ್ದನಪುರದ ಕಡೆಗೆ ನಿಧಾನವಾಗಿ ಹೋಗುತ್ತಾ ಇತ್ತು. ಗಾಡಿಯವನನ್ನು ಸ್ವಲ್ಪ ಮಾತನಾಡಿಸಿ ನೋಡಿದನು. ಅವನು ಒಳ್ಳೆಯ ಮನುಷ್ಯ. ನಾನು ದಾಟಕ್ಕೆನೆ ಬನ್ನಿ ಸೋಮಿ ' ಎಂದು ಹೇಳಿ ಗಾಡಿ ನಿಲ್ಲಿಸಿದನು. ತಾನೇ ಇಳಿದು ಬಂದು ಬೈಸಲ್ಲನ್ನು ಎತ್ತಿ ಒಳಗಿಟ್ಟು, 'ಏರ್ಕೊಳ್ಳಿ ಸೋಮಿ ' ಎಂದನು.

ರಂಗಣ್ಣ ಎಂದೂ ಬೋಳ ಗಾಡಿಯಲ್ಲಿ ಪ್ರಯಾಣ ಮಾಡಿದವನೇ ಅಲ್ಲ. ಆದರೆ ಆಗಿನ ಸಂದರ್ಭದಲ್ಲಿ ಆದು ಪುಷ್ಪಕ ವಿಮಾನದಂತೆ ಮನೋಹರವಾಗಿ ಕಂಡಿತು, ಕೋಡಿಯ ನೀರನ್ನು ದಾಟಿದ್ದಾಯಿತು. ಸಮರಸ್ತೆಗೆ ಬಂದಮೇಲೆ ಗಾಡಿಯಿ೦ದ ರಂಗಣ್ಣ ಇಳಿದನು. ಗಾಡಿಯವನು ಮುಂದೆ ಎರಡು ಕಾಲುವೆ ಐತೆ ಸೋಮಿ. ಬರ್ತಾ ಎಂಗೆ ಬಂದ್ರೋ ಕಾಣೆ, ಗಾಡಿಯಲ್ಲಿ ಏರ್ಕೊಳ್ಳಿ, ನಿಮ್ಮ ಮನೇತಾವ ಬಿಟ್ ಬಿಡ್ತೇನಿ? ಎಂದು ಹೇಳಿದ. ಆ ಸಲಹೆ ಹಿತವಾಗಿಯೇ ಕಂಡಿತು. ಪುನಃ ರಂಗಣ್ಣ ಗಾಡಿಯನ್ನು ಹತ್ತಿದನು. ಗಾಡಿಯವನೊಡನೆ ಮಾತುಕತೆ ಆಡುತ್ತಿದ್ದಾಗ ಒಬ್ಬರಿಗೊಬ್ಬರ ಪರಿಚಯ ಬೆಳೆಯಿತು.

'ನೀವು ಇಸ್ಕೋಲ್ ಇನ್ ಚ್ ಪೆಟ್ರಾ ? ನಮ್ಮಳ್ಳಿಗೊಂದು ಇಸ್ಕೋಲ್ ಕೊಡಿ ಸೋಮಿ ! ಈ ಇಸ್ಕೊಲ್ ಮೇಷ್ಟೂ ನೂವೆ ನಮ್ಮ ನಾಗೇನಹಳ್ಳೀಲೇ ಅವ್ರೆ, ಅಲ್ಲೇ ಇಸ್ಕೋಲ್ ಕೊಟ್ರೆ ಅಲ್ಲೇ ಪಾಟ ಮಾಡೋಕೆ ಅವರ್ಗೂ ಅನ್ಕೂಲ.'

'ಒಳ್ಳೆಯದಪ್ಪ, ಆಗಲಿ ನೋಡೋಣ. ನಾನು ಇಲ್ಲಿಗೆ ಹೊಸದಾಗಿ ಬಂದಿದ್ದೇನೆ. ನಿಮ್ಮ ಹಳ್ಳಿಯ ಸ್ಥಿತಿ ನೋಡಿದಮೇಲೆ ಏನಾದರೂ ಮಾಡೋಣ.'

'ನಮ್ಮಳ್ಳಿ ದೊಡ್ಡದು ಸೋಮಿ ! ಬಾಳ ಮನೆಗಳಿವೆ. ನನ್ಗೆ ಲೆಕ್ಕ ಬರಾಕಿಲ್ಲ. ನೂರ ಮನೆ ಆದರೂ ಇರಬೋದೋ ಏನೋ. ಓದೋ ಹೈಕ್ಳು ಬಾಳ ಅವ್ರೆ.'

'ಆಗಲಪ್ಪ, ನಾನು ಬಂದು ನೋಡುತ್ತೇನೆ. ನಿಮ್ಮ ಮಕ್ಕಳಿಗೆಲ್ಲ ವಿದ್ಯೆ ಹೇಳಿಕೊಡುವುದಕ್ಕೇನೆ ನಮ್ಮ ಇಲಾಖೆ ಇರುವುದು.'

'ನಿಮ್ಮ ಮಕ್ಕಳೆಷ್ಟು ಸೋಮಿ ?'

'ಇಬ್ಬರು ಗಂಡು, ಇಬ್ಬರು ಹೆಣ್ಣು, ನಾಲ್ಕು ಮಕ್ಕಳಿದ್ದಾರೆ.'

'ಪುಣ್ಯವಂತರು ಸೋಮಿ! ಕೈತುಂಬ ಸಂಬಳ ಬರ್ತೈತೆ, ಮಕ್ಕಳು ಮರಿ ಅವ್ರೆ, ನಮ್ಕೇನೈತೆ ? ಒಪ್ಪೊತ್ತು ಹಿಟ್ಟು. ದೇವು ಅಂಗೇನೇ ನಡೆಸಿಕೊಂಡ್ ಬರ್ತಾನೆ.”

ಹೀಗೆಲ್ಲ ಮಾತುಗಳನ್ನಾಡುತ್ತ ನೀರಿನ ಹರವುಗಳನ್ನು ದಾಟಿದ ಮೇಲೆ ರಂಗಣ್ಣನಿಗೆ ಆ ಬೋಳ ಗಾಡಿಯಲ್ಲಿ ಊರೊಳಗೆ ಹೋಗುವುದಕ್ಕೆ ಮನಸ್ಸು ಒಪ್ಪಲಿಲ್ಲ. ಗಾಡಿಯಿಂದ ಇಳಿದು, 'ಮುಂದಕ್ಕೆ ರಸ್ತೆ ಸರಿಯಾಗಿದೆ. ಬೈಸ್ಕಲ್ ತೆಗೆದುಕೊಡು, ನಾನು ಹೋಗುತ್ತೇನೆ ' ಎಂದು ಹೇಳಿದನು. ಗಾಡಿಯವನು ಇಳಿದು ಬೈಸ್ಕಲ್ ತೆಗೆದುಕೊಟ್ಟನು. ' ನಿನ್ನ ಹೆಸರೇನಪ್ಪ ?' ಎಂದು ಕೇಳುತ್ತ ರಂಗಣ್ಣ ಒಳ ಜೇಬಿನಿಂದ ಎಂಟಾಣೆಯನ್ನು ತೆಗೆದು ಕೈಯಲ್ಲಿ ಹಿಡಿದುಕೊಂಡನು.

'ನನ್ನೆಸರು ಕರಿಹೈದ ಸೋಮಿ.'

ರಂಗಣ್ಣನು ಎಂಟಾಣೆ ಯನ್ನು ಕೊಡುವುದಕ್ಕೆ ಹೋದರೆ, ಕರಿಹೈದ ತೆಗೆದುಕೊಳ್ಳಲಿಲ್ಲ. 'ಅಯ್ಯೋ ಸೋಮಿ ! ನಂಗೆ ದುಡ್ಡು ಗಿಡ್ಡು ಬೇಡ, ಇದೇನು ದೊಡ್ಡದು. ಗಾಡಿ ಜನಾರ್ದನಪುರಕ್ಕೆ ಬರ್ತಿತ್ತು. ನೀವೇನೋ ಅನಿವಾರ್ಯ ಆಗಿ ಬಂದ್ರಿ, ಸುಮ್ ಸುಮ್ಗೆ ಬಂದೀರಾ ? ಇದಕ್ಕೆಲ್ಲ ದೊಡ್ಡದು ತೆಕ್ಕೊಂಡ್ರೆ ದೇವರು ಒಳ್ಳೇದ್ ಮಾಡಾಕಿಲ್ಲ ಸೋಮಿ' ಎಂದು ಹೇಳಿ ಬಿಟ್ಟನು.

ಪ್ರಕರಣ ೫

ಮೇಷ್ಟ್ರು ರಂಗಪ್ಪ

ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ ಅವನಿಗೆ ಪರಿಚಯವಾಯಿತು. ಹಲವು ಕಡೆಗಳಲ್ಲಿ ಪಾಠ ಶಾಲೆಗಳಿಗೆ ಕಟ್ಟಡಗಳಿಲ್ಲ. ಮಾರಿಗುಡಿ, ಆಂಜನೇಯನ ದೇವಸ್ಥಾನ, ಚಾವಡಿ,ಹಳೆಯ ಮರುಕಲು ಮನೆ- ಇವುಗಳಲ್ಲೇ ಬಹುಮಟ್ಟಿಗೆ ಪಾಠಶಾಲೆಗಳು ನಡೆಯುತ್ತಿದ್ದುವು. ಸರ್ಕಾರದ ಕಟ್ಟಡಗಳು ಕಲವು ಹಳ್ಳಿಗಳಲ್ಲಿ ಮಾತ್ರ ಇದ್ದುವು. ಅವುಗಳಲ್ಲಿ ಹಲವುದರ ನೆಲ ಕಿತ್ತು ಹೋಗಿ ಗೋಡೆಗಳು ಕೆತ್ತಿ ಹೋಗಿ, ಹಂಚುಗಳು ಹಲವು ಮುರಿದು ಹೋಗಿ ಆ ಕಟ್ಟಡಗಳೂ ಬಹಳ ಹೀನಸ್ಥಿತಿಯಲ್ಲಿದ್ದು ವು ಸಾಕಾದಷ್ಟು ಬೆಂಚುಗಳಿರಲಿಲ್ಲ, ಹಲಗೆಗಳಿರಲಿಲ್ಲ. ಕೆಲವು ಪಾಠ ಶಾಲೆಗಲ್ಲಿ ಬೋರ್ಡು ಸಹ ಇರಲಿಲ್ಲ. ಸಾಮಾನ್ಯವಾಗಿ ಒಬ್ಬರೇ ಮೇಷ್ಟರು ಇರುವ ಪಾಠ ಶಾಲೆಗಳ ಸಂಖ್ಯೆ ಹೆಚ್ಚು ; ಸೇಕಡಾ ಎಪ್ಪತ್ತರವರೆಗೆ ಎಂದು ಹೇಳಬಹುದಾಗಿತ್ತು. ಅಲ್ಲೆಲ್ಲಾ ಸರಾಸರಿ ಹುಡುಗರ ಸಂಖ್ಯೆ ಹದಿನೈದು. ಕೆಲವು ಪಾಠಶಾಲೆಗಳಲ್ಲಿ ಆರು ಏಳು ಮಕ್ಕಳು ಮಾತ್ರ. ಎಲ್ಲೋ ಅಪರೂಪವಾಗಿ ಒಂದೊಂದು ಕಡೆ ಮುವ್ವತ್ತೈದು ನಲವತ್ತು ಹುಡುಗರು. ಮೊದಲನೆಯ ತರಗತಿಯಲ್ಲಿ ನಾಲ್ಕೂ ಐದೂ ವರ್ಷ ಹಿಂದೆ ಬಿದ್ದಿದ್ದ ಹುಡುಗರು ಇರುತ್ತಿದ್ದರು. ಗ್ರಾಮಸ್ಥರಿಗೆ ಪಾಠಶಾಲೆಯ ವಿಷಯದಲ್ಲಿ ಅಕ್ಕರೆ ಕಡಿಮೆ. ಇವುಗಳನ್ನೆಲ್ಲ ನೋಡಿ ರಂಗಣ್ಣನಿಗೆ ಬಹಳ ವ್ಯಸನವಾಯಿತು.

ಒಂದು ದಿನ ಸಾಯಂಕಾಲ ಕೆಂಪಾಪುರದ ಬಂಗಲೆಯಲ್ಲಿ ರಂಗಣ್ಣ ಮೊಕ್ಕಾಂ ಮಾಡಿದ್ದಾನೆ. ಸಾಹೇಬರಿಗೆ ಗೋಪಾಲ ಕಾಫಿ ಮತ್ತು ಬೋಂಡ ತಯಾರುಮಾಡುತ್ತಾ ಅಡಿಗೆಯ ಮನೆಯಲ್ಲಿದ್ದಾನೆ. ಗುಮಾಸ್ತೆ ಶಂಕರಪ್ಪ ಒಳಗಿನ ಕೊಟಡಿಯಲ್ಲಿ ಹಳೆಯ ದಾಖಲೆಗಳನ್ನು ವಿಂಗಡಿಸುತ್ತಾ ಉತ್ತರಗಳು ಹೋಗಬೇಕಾದುವನ್ನು ಎತ್ತಿಡುತ್ತಿದ್ದಾನೆ. ರಂಗಣ್ಣ ಮುಂಭಾಗದ ಒಪ್ಪಾರದಲ್ಲಿ ಮೇಜಿನ ಮೇಲೆ ಕಚೇರಿಯ ಕಾಗದಗಳನ್ನಿಟ್ಟುಕೊಂಡು ಕುರ್ಚಿಯ ಮೇಲೆ ಕುಳಿತಿದ್ದಾನೆ. ಸಾಮಾನ್ಯವಾದೊಂದು ಸೂಟು, ತಲೆಗೆ ಸರಿಗೆ ರುಮಾಲು ಹಾಕಿಕೊಂಡಿದ್ದಾನೆ, ಆಗ ಸಮೀಪದ ಒಂದು ಹಳ್ಳಿಯಿಂದ ನಾಲ್ಕು ಜನ ಗೌಡರು ಒ೦ದು ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ಬಂದರು. ಪದ್ಧತಿಯಂತೆ ಎರಡೆರಡು ನಿಂಬೆಯ ಹಣ್ಣುಗಳನ್ನು ಒಪ್ಪಿಸಿ ಕೈಕಟ್ಟಿಕೊಂಡು ನಿಂತರು.

'ಯಾರಪ್ಪಾ ನೀವು ? ಯಾವ ಹಳ್ಳಿಯಿಂದ ಬಂದಿದ್ದೀರಿ ? ನಿಮಗೇನು ಬೇಕಾಗಿದೆ?' ಎಂದು ರಂಗಣ್ಣ ಕೇಳಿದನು. ಗೌಡನೊಬ್ಬನು ಅರ್ಜಿಯನ್ನು ಕೈಗೆ ಕೊಟ್ಟು, ನಮ್ಮಳ್ಳಿ ಗೊಂದು ಇನ್ ಫ್ರೆಂಟ್ರ ಇಸ್ಕೂಲ್ಕೊ ಡಬೇಕು ಮಾಸ್ವಾಮಿ !' ಎಂದನು. ರಂಗಣ್ಣನು ಅರ್ಜಿಯನ್ನು ಓದಿಕೊಂಡರೆ ಅದರಲ್ಲಿ ಗೌಡನು ಹೇಳಿದಂತೆಯೇ ಇನ್ ಫಂಟ್ರ ಸ್ಕೂಲಿಗೆ ಅರಿಕೆ ಇತ್ತು. ಇದೇನು! ಹಳ್ಳಿಯವರು ಇನ್ ಫಂಟ್ರಿ (Infantry) ಸ್ಕೂಲಿಗೆ ಅರ್ಜಿ ಕೊಡುತ್ತಾರೆ! ಪರವಾ ಇಲ್ಲ. ನಮ್ಮ ಜನರೂ ಸಹ ಸಿಪಾಯಿಗಳಾಗಬಯಸುತ್ತಾರೆ' - ಎಂದು ರಂಗಣ್ಣನು ಸಂತೋಷ ಪಟ್ಟುಕೊಂಡು, ಇನ್‌ಫೆಂಟ್ರಿ ಸ್ಕೂಲ್ ! ಇನ್ ಫಂಟ್ರಿ ಸ್ಕೂಲು ಬೇಕೇ?” ಎಂದನು.

'ಹೌದು ಸೋಮಿ|'

'ಇನ್ ಫಂಟ್ರಿ ಸ್ಕೂಲಿಗೆ ಬೇರೆ ಕಡೆ ಅರ್ಜಿ ಕೊಡಬೇಕು ಗೌಡರೆ, ನಾವು ಅದನ್ನು ಕೊಡುವುದಕ್ಕಾಗುವುದಿಲ್ಲ.'

'ಅಂಗೆಲ್ಲಾ ಹೇಳಬೇಡ್ರಿ ಬುದ್ದಿ ! ನೀವು ಕೊಡಾಕಿಲ್ಲ ಅಂದ್ರೆ ಮತ್ತಾರ್ ಕೊಟ್ಟಾರು ? ಖಂಡಿತ ಇನ್ಪೆಂಟ್ರ ಇಸ್ಕೊಲ್ ಕೊಟ್ಟೇ ತೀರಬೇಕು ತಮ್ಮ ಕಾಲ್ದಾ ಗೆ..?

'ಪ್ರೈಮರಿ ಸ್ಕೂಲು ಕೊಡುವ ವಿಚಾರ ಆಲೋಚನೆ ಮಾಡುತ್ತೇವೆ. ಇನ್‌ಫೆಂಟ್ರ ಸ್ಕೂಲನ್ನು ನಾವು ಕೊಡೋದಕ್ಕಾಗೋದಿಲ್ಲ. ? “ನಮ್ಗೆ ಪರ್‌ ಮರಿ ಗಿರ್‌ ಮರಿ ಇಸ್ಕೊಲ್ ಖಂಡಿತ ಬ್ಯಾಡ್ ಬುದ್ದಿ! ಅದೆಂತದೋ ಏನೋ, ನಮ್ಮ ಸರ್ಕಾರಿ ಇನ್ ಪೆಂಟ್ರ ಇಸ್ಕೊಲೇ ಆನ್ಲೈಕು, ಎಂಗಾನ ಮಾಡ್ರಲಾ.?

ಇನ್ ಫೆಂಟ್ರ ಸ್ಕೂಲಿಗೆ ಸೈನ್ಯದ ಇಲಾಖೆಗೆ ಅರ್ಜಿ ಕೊಡಬೇಕು. ನಾವು ಈ ಅರ್ಜಿ ತೆಗೆದುಕೊಳ್ಳೋದಿಲ್ಲ.”

ಅದ್ಯಾಕ್ಸಾಮಿ ನಮ್ಮಳ್ಳಿಗೆ ಮಾತ್ರ ಕೊಡಾಕಿಲ್ಲ? ಎಲ್ಲಾ ಹಳ್ಳಿಗೂ ಇನ್ ಪೆಂಟ್ರ ಇಸ್ಕೊಲ್ ಕೊಟ್ಟಿ, ನಾವೇನ್ ಸೋಮಿ ಪಾಪ ಮಾಡಿದ್ದು ? ಕಂದಾಯ ನಾವೂನೂ ಕೊಡಾಕಿಲ್ವಾ?

ರಂಗಣ್ಣನಿಗೆ ಆಗ ಜ್ಞಾನೋದಯವಾಯಿತು. ಗೌಡರು ಕೇಳುತ್ತಿರುವುದು ಇನ್ ಫೆಂಟ್ ಸ್ಕೂಲು (Infant School) ಇನ್ ಫೆಂಟ್ರಿ ಸ್ಕೂಲ್” (Irtfantry School) ಅಲ್ಲ ಎಂದು ಅರ್ಥವಾಯಿತು. ಹಳ್ಳಿ,ಯವರ ಉಚ್ಚಾರಣೆ ಹಾಗೆ ; ಉಚ್ಚಾರಣೆಯಂತೆ ಬರೆದಿದ್ದಾರೆ - ಎಂಬುದೆಲ್ಲ ಬುದ್ಧಿಗೆ ಹೊಳೆಯುತ್ತಲೂ ರಂಗಣ್ಣನಿಗೆ ಫಕ್ಕನೆ ನಗು ಬಂದು ಬಿಟ್ಟಿತು. * ನಾನೊಬ್ಬ ಮಡೆಯ ' ಎಂದುಕೊಂಡನು.

ನಿಮ್ಮ ಹಳ್ಳಿ ಇಲ್ಲಿಗೆ ಎಷ್ಟು ದೂರ ?

ಇಲ್ಲೇ ಸೊ ಮಿ ! ಆಚೆಯ ಕೆರೆ ದಾಟಿದರೆ ಒಂದು ಮೈಲಿ ಆಗುತ್ತೋ ಏನೋ ? :

ರಂಗಣ್ಣ ಶಂಕರಪ್ಪನನ್ನು ಕರೆದು ವಿಚಾರಿಸಿದನು. ಕೆಂಪಾಪುರಕ್ಕೆ ಐದು ಮೈಲಿ ದೂರ ಆಗ ಬಹುದು ; ನಾಳೆ ಅದರ ಹತ್ತಿರದ ಗುಂಡನ ಹಳ್ಳಿಯ ಸ್ಕೂಲ್ ತನಿಖೆ ಇದೆ ; ಅಲ್ಲಿಂದ ಹಾಗೆಯೇ ಹೋಗಿ ನೋಡಿಕೊಂಡು ಬರಬಹುದು ಎಂದು ಶಂಕರಪ್ಪ ಹೇಳಿದನು. ರಂಗಣ್ಣನು ಅರ್ಜಿದಾರರನ್ನು ನೋಡಿ, “ ಒಳ್ಳೆಯದು. ನಾಳೆ ಬೆಳಗ್ಗೆ ಹತ್ತೂವರೆ ಗಂಟೆಗೆ ಬರುತ್ತೆೇವೆ. ಕಟ್ಟಡ ವಗೈರೆ ಏನು ಆನುಕೂಲವಿದೆಯೋ ನೋಡಿ, ಆಮೇಲೆ ನಿಷ್ಕರ್ಷೆ ಮಾಡುತ್ತೇವೆ' ಎಂದು ಹೇಳಿದನು.

ಎಲ್ಲಾ ಅನ್ಕೂಲಾನು ಮೋಸ್ತೈತೆ ಸೋಮಿ, ಎಂಗಾನಾ ಮಾಡಿ ನಮ್ಮಳ್ಳಿಗೆ ಒಂದು ಇನ್ ಪಂಟ್ರ ಇಸ್ಕೊಲ್ ತಮ್ಮ ಕಾಲ್ದಾಗೆ ಕೊಡಬೇಕು' ಎಂದು ಅವರು ಹೇಳಿ ಕೈ ಮುಗಿದು ಹೊರಟು ಹೋದರು. ಕೆಲವು ನಿಮಿಷಗಳ ನಂತರ ಗೊಪಾಲ ಕಾಫಿ ಮತ್ತು ಬೋಂಡಾಗಳನ್ನು ತಂದು ಮೇಜಿನ ಮೇಲಿಟ್ಟನು. 'ಶಂಕರಪ್ಪನವರಿಗೆ ಕೊಟ್ಟಿಯೋ ಇಲ್ಲವೋ ?' ಎಂದು ರಂಗಣ್ಣ ಕೇಳಿದನು.

ಅವರು ಅಡಿಗೆಯ ಮನೆಗೇನೆ ಬಂದು ತೆಕೋತಾರೆ. ಅಲ್ಲಿಯೇ ಅವರಿಗೆ ಇಟ್ಟಿದ್ದೇನೆ.'

ಮೇಷ್ಟ ರು ಯಾರಾದರೂ ಬಂದರೆ ನಾಲ್ಕು ಬೋಂಡ ಇಟ್ಟಿದ್ದೀಯೇನು ?

ಇಟ್ಟಿದ್ದೇನೆ.”

ಸರಿ, ಹೋಗು' ಎಂದು ಹೇಳಿ ರಂಗಣ್ಣನು ಉಪಾಹಾರ ಸ್ವೀಕಾರಕ್ಕೆ ತೊಡಗಿದನು.

ಉಪಹಾರ ಮುಗಿಯುವ ಹೊತ್ತಿಗೆ ದೊಡ್ಡ ಸರಿಗೆ ರುಮಾಲು, ಭಾರಿ ಸರಿಗೆ ಪಂಚೆ, ಒಳ್ಳೆಯ ಕೋಟು ಧರಿಸಿದ್ದ ಮನುಷ್ಯರೊಬ್ಬರು ಸ್ವಲ್ಪ ದೂರದಲ್ಲಿ ಬಂದು ನಿಂತರು. ರಂಗಣ್ಣ ಥಟ್ಟನೆ ಎದ್ದು ನಿಂತುಕೊಂಡು ನಮಸ್ಕಾರ ಮಾಡಿದನು. ಡಿಸ್ಟಿಕು ಬೋರ್ಡ್ ಮೆಂಬರೋ, ಪ್ರಜಾಪ್ರತಿನಿಧಿ ಸಭೆಯ ಮೆಂಬರೋ ಇರಬಹುದೆಂದು ನಿರ್ಧರಿಸಿದನು. ಹೊಸದಾಗಿ ಬಂದ ಇನ್ ಸ್ಪೆಕ್ಟರ್ ಸಾಹೇಬರನ್ನು ನೋಡಲು ಬಂದಿರುವರೆಂದು ತಿಳಿದುಕೊಂಡು, ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವುದು ಒಳ್ಳೆಯದೆಂದು, " ದಯಮಾಡಬೇಕು ? ಎಂದು ಎದುರಿಗಿದ್ದ ಕುರ್ಚಿಯನ್ನು ತೋರಿಸಿದನು.

ಪರವಾ ಇಲ್ಲ, ಬನ್ನಿ, ಕುರ್ಚಿಯ ಮೇಲೆ ಕುಳಿತುಕೊಳ್ಳಿ' ಎಂದು ಒತ್ತಾಯ ಮಾಡಿದಮೇಲೆ ಆತನು ಕುರ್ಚಿಯ ಮೇಲೆ ಕುಳಿತುಕೊಂಡನು. ಆದರೆ ಆ ಮನುಷ್ಯ ಏನೋ ಮುಜಗರ ಪಡುತ್ತಿದ್ದಂತೆ ಅವನ ಚರ್ಯೆಯಲ್ಲಿ ಕಂಡು ಬಂದಿತು. ಅಷ್ಟು ಹೊತ್ತಿಗೆ ತಟ್ಟೆಯಲ್ಲಿ ಬೊಂಡ ಮತ್ತು ಲೋಟದಲ್ಲಿ ಕಾಫಿಯನ್ನು ಗೋಪಾಲ ತಂದಿಟ್ಟನು. ತೆಗೆದುಕೊಳ್ಳಿ, ಸಂಕೋಚಪಟ್ಟು ಕೊಳ್ಳಬೇಡಿ' ಎಂದು ರಂಗಣ್ಣನು ಒತ್ತಾಯ ಮಾಡಿದನು. ಸರಿಗೆ ರುಮಾಲಿನ ಮನುಷ್ಯ ಅವುಗಳನ್ನು ಸೇವಿಸುತ್ತಾ ಇದ್ದಾಗ, 'ನೀವು ಇದೇ ಊರಿನ ವಾಸಸ್ಥರೋ ಹೇಗೆ ? ' ಎಂದು ರಂಗಣ್ಣ ಕೇಳಿದನು.

'ಇಲ್ಲ ಸ್ವಾಮಿ ! ಇಲ್ಲಿಗೆ ಮೂರು ಮೈಲಿ ನಾನಿರುವ ಹಳ್ಳಿ. ಗುಂಡೇನಹಳ್ಳಿಯಲ್ಲಿ ನಾನಿರುವುದು.'

'ಬಹಳ ಸಂತೋಷ ! ನಿಮ್ಮ ಪರಿಚಯವಾದದ್ದು ನನಗೊಂದು ಲಾಭ, ನಿಮ್ಮಂಥ ಮುಖಂಡರ ಸಹಕಾರ ಸಹಾಯ ನನಗೆ ಆವಶ್ಯಕವಾಗಿ ಬೇಕಾಗಿದೆ. ಆ ಹಳ್ಳಿಯಲ್ಲಿ ಒಂದು ಸ್ಕೂಲಿದೆ. ನೀವು ನೋಡಿರ ಬಹುದು. ಅದರ ವಿಚಾರದಲ್ಲಿ ಆಸಕ್ತಿಯನ್ನೂ ತೋರಿಸುತ್ತಿರಬಹುದು. ಆ ಸ್ಕೂಲು ಚೆನ್ನಾಗಿ ನಡೆಯುತ್ತಿದೆಯೇ? ಮೇಷ್ಟು ಸರಿಯಾಗಿ ಪಾಠಶಾಲೆಗೆ ಬರುತ್ತಿದ್ದಾರೆಯೆ ?

'ನಾನೇ ಸ್ವಾಮಿ ಆ ಸ್ಕೂಲಿನ ಮೇಷ್ಟು ರಂಗಪ್ಪ !'

ಆಗ ರಂಗಣ್ಣನ ಮುಖವನ್ನು ಯಾರಾದರೂ ಫೋಟೋ ತೆಗೆಯಬೇಕಾಗಿತ್ತು ! ರಂಗಣ್ಣನು ಕಷ್ಟದಿಂದ ತನ್ನ ವಿಷಾದವನ್ನು ಅಡಗಿಸಿಕೊಂಡನು. ಇನ್ನೊಂದು ವಿಧದಲ್ಲಿಯೂ ಅವನಿಗೆ ಮುಖಭಂಗವಾಯಿತು. ತನ್ನ ಕೈ ಕೆಳಗಿನ ಉಪಾಧ್ಯಾಯರಲ್ಲಿ ಸಹ ನೆಮ್ಮದಿ ಕುಳ ಇದ್ದಾರೆ ; ಭಾರಿ ಸರಿಗೆ ಪಂಚೆ, ಭಾರಿ ಸರಿಗೆ ರುಮಾಲು ಧರಿಸಿಕೊಳ್ಳುವವರು ಇದ್ದಾರೆ. ಠೀಕಾದ ಉಡುಪನ್ನು ಧರಿಸುವವನು ತಾನೊಬ್ಬನೇ ಅಲ್ಲ - ಎಂದು ತಿಳಿವಳಿಕೆ ಬಂದು ಹೆಮ್ಮೆ ಮುರಿಯಿತು. ಈ ಮೇಷ್ಟು, ತನ್ನನ್ನು ಹಂಗಿಸುವುದಕ್ಕಾಗಿಯೇ ಹೀಗೆ ಉಡುಪು ಧರಿಸಿ ಬಂದಿರುವನೋ ಏನೋ - ಎಂದು ಅಸಮಾಧಾನವೂ ತಲೆದೋರಿತು. ಆದರೆ ಅವುಗಳಾವುದನ್ನೂ ತೋರ್ಪಡಿಸಿಕೊಳ್ಳದೆ, " ಒಳ್ಳೆಯದು ಮೇಷ್ಟೆ ! ನಾಳೆ ನಿಮ್ಮ ಸ್ಕೂಲಿನ ತನಿಖೆಗೆ ಬರುತ್ತೇವೆ. ನಿಮಗೆ ಗೊತ್ತಿದೆಯೋ ? ಎಂದು ಕೇಳಿದನು.

'ಗೊತ್ತಿದೆ ಸಾರ್ ! ಅದಕ್ಕೋಸ್ಕರವೇ ತಮ್ಮನ್ನು ಕಂಡು ಹೋಗೋಣ ಎಂದು ಬಂದಿದ್ದೇನೆ, ನಾಳೆ ಸ್ವಾಮಿಯವರು ಅಲ್ಲೇ ಮೊಕ್ಕಾಂ ಮಾಡಬೇಕೆಂದು ಗ್ರಾಮಸ್ಥರೆಲ್ಲಾ ಆಶೆ ಪಡುತ್ತಾರೆ.'

'ಮೇಷ್ಟೆ ! ಅಲ್ಲಿ ಮೊಕ್ಕಾಂ ಮಾಡುವುದಕ್ಕಾಗುವುದಿಲ್ಲ. ಮುಂದೆ ಬೀರನಹಳ್ಳಿಗೆ ಬೇರೆ ನಾವು ಹೋಗಬೇಕು. ಆ ಗ್ರಾಮಸ್ಥರು ಒಂದು ಸ್ಕೂಲ್ ಬೇಕು ಎಂದು ಕೇಳುತ್ತಿದಾರೆ. ?

'ಸ್ವಾಮಿಯವರು ಇನ್ ಸ್ಪೆಕ್ಷನ್ ಮುಗಿಸಿಕೊಂಡು ಕೆಂಪಾಪುರಕ್ಕೆ ವಾಪಸ್ ಬರಬೇಕಾದರೆ ಮಧ್ಯಾಹ್ನ ಬಹಳ ಹೊತ್ತಾಗುತ್ತೆ, ಗುಂಡೇನಹಳ್ಳಿಯಲ್ಲಿ ಮೊಕ್ಕಾಂ ಮಾಡುವುದಕ್ಕೆ ಶಾನೆ ವಸತಿ ಇದೆ. ತಮ್ಮ ಪ್ರಯಾಣಕ್ಕೆ ಗ್ರಾಮಸ್ಥರು ಗಾಡಿಯನ್ನು ಕೂಡ ಕಳಿಸಿಕೊಟ್ಟಿದ್ದಾರೆ.'

ರಂಗಣ್ಣ ಸ್ವಲ್ಪ ಆಲೋಚನೆ ಮಾಡಿದನು: ಈ ಮೇಷ್ಟು ಭಾರಿ ಒಕ್ಕಲ ಕುಳವಾಗಿ ಕಾಣುತ್ತಾನೆ ; ಮಧ್ಯಾಹ್ನದ ಹೊತ್ತಿನಲ್ಲಿ ಐದು ಮೈಲಿ ವಾಪಸ್ ಬರುವುದಕ್ಕೆ ಬದಲು ಮಧ್ಯಾಹ್ನ ಅಲ್ಲೇ ವಿಶ್ರಾಂತಿ ತೆಗೆದುಕೊಂಡು ಸಾಯಂಕಾಲಕ್ಕೆ ತಂಪು ಹೊತ್ತಿನಲ್ಲಿ ಹಿಂದಿರುಗಬಹುದಲ್ಲ. ಮೇಷ್ಟರ ಸಲಹೆ ಚೆನ್ನಾಗಿದೆ. ಹೀಗೆ ಆಲೋಚನೆ ಮಾಡಿಕೊಂಡು, ಒಳ್ಳೆಯದು ಮೇಷ್ಟೆ ! ನೀವು ಹೇಳಿದ ಹಾಗೆಯೆ? ಆಗಲಿ ಎಂದು ಒಪ್ಪಿಕೊಂಡನು. ಮೇಷ್ಟು ರಂಗಪ್ಪ ಕೈಮುಗಿದು, ' ರಾತ್ರಿ ಗಾಡಿ ಇಲ್ಲೇ ಇರುತ್ತೆ ಸಾರ್, ಬೆಳಗ್ಗೆ ದಯಮಾಡ ಬೇಕು ' ಎಂದು ಹೇಳಿ ಹೊರಟು ಹೋದನು.

ಶಂಕರಪ್ಪ ಉಪಾಹಾರವನ್ನು ಮುಗಿಸಿಕೊಂಡು ಬರುತ್ತಲೇ ರಂಗಣ್ಣ ನಾಳೆಯ ದಿನದ ಏರ್ಪಾಟನ್ನು ಅವನಿಗೆ ವಿವರಿಸಿದನು. " ಏರ್ಪಾಟು ಚೆನ್ನಾಗಿದೆ ಸ್ವಾಮಿ. ಗುಂಡೇನಹಳ್ಳಿಯಲ್ಲಿ ನೆಮ್ಮದಿ ಕುಳ ಬಹಳ ಜನ ಇದ್ದಾರೆ' ಎಂದು ಅವನು ಸಹ ಒಪ್ಪಿಗೆ ಕೊಟ್ಟನು. ಮಾರನೆಯ ದಿನ ಬೆಳಗ್ಗೆ ಎಂಟು ಗಂಟೆಗೆ ಗುಂಡೇನಹಳ್ಳಿಯಲ್ಲಿ ಇನ್ಸ್ಪೆಕ್ಟರ್ ಸಾಹೇಬರ ಮೊಕ್ಕಾಂ ಪ್ರಾರಂಭವಾಯಿತು. ಇಳಿದು ಕೊಳ್ಳುವುದಕ್ಕೆ ಅಲ್ಲಿ ಒಂದು ಮನೆಯನ್ನು ಖಾಲಿ ಮಾಡಿ ಕೊಟ್ಟಿದ್ದರು. ಅದು ತಾರಸಿನ ಮನೆ ; ಬತ್ತ ಮೊದಲಾದ ದವಸಗಳನ್ನು ಶೇಖರಿಸಿಡುವ ಮನೆ, ಬಲಗಡೆ ಕೋಣೆಯಲ್ಲಿ ಒ೦ದು ಮಂಚ ಒಂದು ಕುರ್ಚಿ ಮತ್ತು ಒಂದು ಮೇಜು ಅಣಿಯಾಗಿದ್ದು ವು. ನೆಲಕ್ಕೆ ಜಮಖಾನವನ್ನೂ ಹಾಸಿತ್ತು. ಅಡಿಗೆಯ ಮನೆ ಮತ್ತು ಮನೆಗಳು ಚೆನ್ನಾಗಿದ್ದುವು. ಬೆಳಗಿನ ಉಪಾಹಾರವನ್ನು ಮುಗಿಸಿಕೊಂಡು ರಂಗಣ್ಣ ಪಾಠ ಶಾಲೆಗೆ ತನಿಖೆಯ ಬಗ್ಗೆ ಹೊರಟನು. ಆ ದಿನ ಇನ್ ಸ್ಪೆಕ್ಟರು ಬರುತ್ತಾರೆಂದು ಮಾವಿನೆಲೆಗಳ ತೋರಣವನ್ನೂ ಬಾಳೆಯ ಕಂಬಗಳನ್ನೂ ಕಟ್ಟಡಕ್ಕೆ ಕಟ್ಟಿ ಅಲಂಕಾರ ಮಾಡಿದ್ದರು. ಕಟ್ಟಡದೊಳಕ್ಕೆ ಇನ್‌ಸ್ಪೆಕ್ಟರು ಪ್ರವೇಶಿಸುತ್ತಲೂ ಗಗನವನ್ನು ಭೇದಿಸುವಂತೆ “ನಮಸ್ಕಾರಾ ಸಾರ್' ಎಂಬುದಾಗಿ ಹುಡುಗರು ಕಿರಿಚಿಕೊ೦ಡರು. ರಂಗಣ್ಣ ಪ್ರತಿ ನಮಸ್ಕಾರ ಮಾಡಿ, 'ಹಾಗೆಲ್ಲಾ ಗಟ್ಟಿಯಾಗಿ ಕಿರಿಚಬಾರದು. ಎದ್ದು ನಿಂತುಕೊಂಡು ಮೌನವಾಗಿ ನಮಸ್ಕಾರ ಮಾಡಬೇಕು? ಎಂದು ತಿಳಿಸಿ, “ಮೇಷ್ಟ್ರೇ ! ಈ ವಿಚಾರದಲ್ಲಿ ನಾವು ಸರ್ಕ್ಯುಲರ್ ಕೊಟ್ಟಿದ್ದೆವು. ನೀವು ಹುಡುಗರಿಗೆ ಸರಿಯಾದ ತಿಳಿವಳಿಗೆ ಕೊಡಬೇಕು' ಎಂದು ಹೇಳಿದನು. ಮೇಷ್ಟು ರಂಗಪ್ಪ ಹಿಂದಿನ ದಿನದಂತೆಯೇ ದೊಡ್ಡ ಸರಿಗೆ ರುಮಾಲು ಭಾರಿ ಸರಿಗೆ ಪಂಚೆ ಮತ್ತು ಒಳ್ಳೆಯ ಕೋಟನ್ನು ಧರಿಸಿದ್ದನು. ರಂಗಣ್ಣನಿಗೆ ಆ ಮೇಷ್ಟ ವಿಚಾರದಲ್ಲಿ ಬಹಳ ಗೌರವ, ಸ್ವಲ್ಪ ಭಯ ಹುಟ್ಟಿದುವು. ಆ ವಾಠಶಾಲೆಯಲ್ಲಿ ಮೂರು ತರಗತಿಗಳು ಮಾತ್ರ ಇದ್ದುವು. ಮೊದಲನೆಯ ತರಗತಿಯಲ್ಲಿ ಇಪ್ಪತ್ತು ಮಕ್ಕಳು, ಎರಡನೆಯ ತರಗತಿಯಲ್ಲಿ ನಾಲ್ಕು ಮಕ್ಕಳು ಮತ್ತು ಮೂರನೆಯ ತರಗತಿಯಲ್ಲಿ ಇಬ್ಬರು ಹುಡುಗರು ಇದ್ದರು. ಮೂರನೆಯ ತರಗತಿಯವರಿಗೂ ಎರಡನೆಯ ತರಗತಿಯವರಿಗೂ ಕಪ್ಪು ಹಲಗೆಯ ಮೇಲೆ ಲೆಕ್ಕಗಳನ್ನು ಹಾಕಿ ರಂಗಣ್ಣನು ಮೊದಲನೆಯ ತರಗತಿಯ ಮಕ್ಕಳ ತನಿಖೆಗೆ ಪ್ರಾರಂಭಿಸಿದನು. ಆ ಮಕ್ಕಳಲ್ಲಿ ಹನ್ನೆರಡು ಜನ ಅ, ಆ ಮೊದಲುಗೊಂಡು ಪ ಫ ಬ ಭ ಮ ವರೆಗೆ ಅಕ್ಷರಗಳನ್ನು ಕಲಿತಿದ್ದರು. ಉಳಿದವರಲ್ಲಿ ನಾಲ್ಕು ಮಂದಿ 'ಆಗೋ ಕೋತಿ, ದೋಸೆ ಕೊಡು' ಮುಂತಾದ ಕಾಗುಣಿತದ ಪಾಠಗಳನ್ನು ಮಾಡಿದ್ದರು. ಉಳಿದ ನಾಲ್ಕು ಮಂದಿ ಒತ್ತಕ್ಷರದ ಪಾಠಗಳನ್ನು ಸುಮಾರಾಗಿ ಓದುವವರಾಗಿದ್ದರು, ಈ ನಾಲ್ಕು ಮಂದಿ ಮೂರು ವರ್ಷ ಆ ತರಗತಿಯಲ್ಲೇ ಇದ್ದ ವರು ; ಕಾಗುಣಿತದವರು ಎರಡು ವರ್ಷ ಹಿಂದೆ ಬಿದ್ದಿದ್ದವರು. ಆ ಮಕ್ಕಳಿಂದ ಸ್ವಲ್ಪ ಓದಿಸಿ, ಬರೆಯಿಸಿ ಆಯಿತು. ಕೊಂಚ ಲೆಕ್ಕಗಳನ್ನು ಕೇಳಿ ಆಯಿತು. ಅಕ್ಷರ ಜ್ಞಾನ ತಕ್ಕ ಮಟ್ಟಿಗಿತ್ತು, ಲೆಕ್ಕಗಳಲ್ಲಿ ಹಿಂದೆ ಬಿದ್ದಿದ್ದರು. ಆ ಹುಡುಗರ ಪರೀಕ್ಷೆ ಮುಗಿದಮೇಲೆ ಅವರನ್ನು ಆಟಕ್ಕೆ ಬಿಟ್ಟು ಮೇಲಿನ ತರಗತಿಗಳ ತನಿಖೆಯನ್ನು ರಂಗಣ್ಣನು ಪ್ರಾರಂಭಿಸಿದನು. ಲೆಕ್ಕಗಳಲ್ಲಿ ತಿಳಿವಳಿಕೆ ಚೆನ್ನಾಗಿತ್ತು. ಎರಡನೆಯ ತರಗತಿಯಲ್ಲಿ ಓದುಗಾರಿಕೆ ಸುಮಾರಾಗಿತ್ತು. ತರುವಾಯ ಮೂರನೆಯ ತರಗತಿಯಲ್ಲಿ ಪದ್ಯ ಪಾಠವನ್ನು ಸ್ವಲ್ಪ ಮಾಡುವಂತೆ ಇನ್ಸ್ಪೆಕ್ಟರ್ಸಾ ಹೇಬರು ಮೇಷ್ಟರಿಗೆ ಹೇಳಿದರು. ಹೀಗೆ ಕೇಳುತ್ತಾರೆಂದು ಆ ಮೇಷ್ಟರಿಗೆ ಮೊದಲೇ ವರ್ತಮಾನ ಬಂದಿದ್ದುದರಿಂದ ಅವನು ತಯಾ ರಾಗಿದ್ದನು. ಬೋರ್ಡನ್ನು ಒರಸಿ ಚೊಕ್ಕಟ ಮಾಡಿಟ್ಟು ' ಬಿಡುವು ಎಂಬ ಪದ್ಯ ಪಾಠವನ್ನು ಪ್ರಾರಂಭಿಸಿದನು. ಪಾಠಶಾಲೆಗಳಿಗೆ ರಜ ಬರುವ ಕಾಲ ಯಾವುದು ? ಹುಡುಗರು ಆಗ ಏನು ಮಾಡುತ್ತಾರೆ ? ಆಗ ಪ್ರಕೃತಿ ಹೇಗೆ ಕಾಣುತ್ತದೆ ? ಎಂತೆಲ್ಲ ಪ್ರಶ್ನೆಗಳನ್ನು ಕೇಳಿದನು. ಹುಡುಗರು ಚೆನ್ನಾಗಿ ಉತ್ತರ ಹೇಳಿದರು. ಆ ಉಪಾಧ್ಯಾಯನ ವಿಚಾರದಲ್ಲಿ ರಂಗಣ್ಣನಿಗೆ ಒಳ್ಳೆಯ ಅಭಿಪ್ರಾಯ ಬಂತು. ಪಾಠಕ್ಕೆ ಪೀಠಿಕೆ ಮುಗಿದ ನಂತರ ಹುಡುಗರು ಪದ್ಯವನ್ನು ಓದಲಾರಂಭಿಸಿದರು.

ಹೂಗಿಡದಲಿ ಹೂವರಳಿಹುದು
ಆಗಸಾ ತೊಳೆದಂತೆಸೆದಿಹುದು
ಕೂಗುವುವತ್ತಲು ಹಕ್ಕಿಗಳು
ಸಾಗುವೆವಾ ಬೆಟ್ಟದ ಬಳಿಗೆ,

ಎಂದು ಒಬ್ಬ ಹುಡುಗನು ಓದಿದನು. ರಂಗಣ್ಣನು ಸರಿಯಾಗಿ ಓದು, ತಪ್ಪಿಲ್ಲದೆ ಓದಬೇಕು' ಎಂದು ಸೂಚನೆ ಕೊಟ್ಟನು. ಆದರೂ ಪುನಃ ಹುಡುಗನು ಮೊದಲಿನಂತೆಯೇ ಓದಿದನು.

'ಮೇಷ್ಟೇ ! ನೀವು ಸರಿಯಾಗಿ ಓದಿ ತಿಳಿಸಿರಿ?'

ರಂಗಪ್ಪ ನು ಕೈಗೆ ಪುಸ್ತಕವನ್ನು ತೆಗೆದುಕೊಂಡು ವಿಕಾರ ರಾಗದಿಂದ 'ಹೂಗಿಡದಲಿ ಹೂವರಳಿಹುದು ; ಆಗಸ ತೊಳದಂತೆಸೆದಿಹುದು; ಕೂಗುವುವೆತ್ತಲು .......' ಎಂದು ಹುಡುಗನಂತೆಯೆ ಓದಿದನು.

'ಮೇಷ್ಟೇ ! ಆಗಸಾ ಎಂದು ಓದಬೇಡಿ. ಆಗಸ ಎಂದು ಓದಬೇಕು. ಪುಸ್ತಕ ಇಲ್ಲಿ ಕೊಡಿ ನೋಡೋಣ.'

'ಇದರಲ್ಲಿ ತಪ್ಪು ಬಿದ್ದಿದೆ ಸಾರ್ ! ಇಲಾಖೆಯ ಪುಸ್ತಕಗಳ ತುಂಬ ಬರೀ ತಪ್ಪುಗಳೇ ಇವೆ!' ಹೀಗೆ ರಂಗಪ್ಪ ಉತ್ತರಕೊಟ್ಟು ಮುಂದಕ್ಕೆ ಪಾಠ ಮಾಡತೊಡಗಿದನು.

'ಗಿಡಗಳಲ್ಲಿ ಎಷ್ಟು ವಿಧ'

'ನಾನಾವಿಧ ಸಾರ್'

'ಯಾವ್ಯಾವು ? ನೀನು ಹೇಳು'

'ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಸೊಪ್ಪಿನ ಗಿಡಗಳು, ಬೇಲಿಯ ಗಿಡಗಳು ಸಾರ್,?

'ಹೂವಿನ ಗಿಡಗಳು ಎಂದರೇನು ?'

'ಬರಿಯ ಹೂವು ಬಿಡುವ ಗಿಡಗಳು ಸಾರ್?'

'ಎರಡು ಉದಾಹರಣೆ ಕೊಡು.'

'ಜಾಜಿ ಮತ್ತು ಮಲ್ಲಿಗೆ ಸಾರ್ '

'ಆ ಹೂವುಗಳು ಅರಳಿದಾಗ ಹೇಗೆ ಕಾಣುತ್ತವೆ ?'

'ಬೆಳ್ಳಗೆ ಕಾಣುತ್ತೆ ಸಾರ್, ಅಗಸರು ಬಟ್ಟೆ ತೊಳೆದು ಮಡಿ ಮಾಡಿಟ್ಟ ಹಾಗೆ ಸಾರ್ !'

'ಸರಿಕುಳಿತುಕೊಳ್ಳಿ.'

ರಂಗಪ್ಪ ನು ತಾನು ಜಯಸಾಧನೆ ಮಾಡಿದೆನೆಂಬ ತೃಪ್ತಿ ಮತ್ತು ಸಂತೋಷಗಳಿ೦ದ ಇನ್ಸ್ಪೆಕ್ಟರ್ ಸಾಹೇಬರ ಕಡೆಗೆ ತಿರುಗಿಕೊಂಡು ಕೈ ಮುಗಿದನು.

'ಮೇಷ್ಟೆ ! ಮಕ್ಕಳನ್ನು ಆಟಕ್ಕೆ ಬಿಡಿ' ಎಂದು ರಂಗಣ್ಣ ಹೇಳಿದನು.

ಆದರಂತೆ ಮಕ್ಕಳು ಹೊರಕ್ಕೆ ಹೊರಟು ಹೋದರು.

'ಮೇಷ್ಟೇ ! ಪುಸ್ತಕದಲ್ಲಿ ಆಗಸ ತೊಳೆದಂತೆಸೆದಿಹುದು-ಎಂದು ಸರಿಯಾಗಿ ಮುದ್ರಣವಾಗಿದೆ. ನೀವು ತಪ್ಪು ತಪ್ಪಾಗಿ ಓದಿಕೊಂಡು ತಪ್ಪು ತಪ್ಪಾಗಿ ಮಕ್ಕಳಿಗೆ ಹೇಳಿಕೊಟ್ಟಿದ್ದೀರಿ. ನೀವು ತಿದ್ದಿಕೊಳ್ಳಬೇಕು'

'ಇಲ್ಲ ಸಾರ್ ! ಪುಸ್ತಕದಲ್ಲಿ ತಪ್ಪು ಬಿದ್ದಿದೆ ಸಾರ್ !' 'ಅದು ಹೇಗೆ ತಪ್ಪು?'

'ನಾವು ಅಗಸರು ಸಾರ್ ! ಮಡಿ ಮಾಡೋವು ! ತೊಳೆಯೋದು ಎಂದರೆ ಬಟ್ಟೆ ಒಗೆಯೋದು ಎಂದು ಆರ್ಥ ! ನಾನು ಕಸಬಿನವನು ಸಾರ್.!'

ರಂಗಣ್ಣ ಆ ಮೇಷ್ಟರನ್ನು ನಖಶಿಖಾಂತವಾಗಿ ನಾಲ್ಕು ಬಾರಿ ನೋಡಿದನು! ಆ ಭಾರಿ ಸರಿಗೆ ರುಮಾಲನ್ನೂ ಆ ಭಾರಿ ಸರಿಗೆ ಪಂಚೆಯನ್ನು ಬಾರಿಬಾರಿಗೂ ನೋಡಿದನು ! ತನ್ನ ಮನಸ್ಸಿನಲ್ಲಿ ನಗು ಉಕ್ಕಿ ಬರುತ್ತಿತ್ತು. ' ನಾನೆಂತಹ ವೆಚ್ಚು ! ಭಾರಿ ಒಕ್ಕಲ ಕುಳ ಎಂದು ತಿಳಿದು ಕೊಂಡೆನಲ್ಲ - ಎಂದು ಕೈ ವಸ್ತ್ರದಿಂದ ತನ್ನ ಬಾಯನ್ನು ಮರೆಮಾಡಿಕೊ೦ಡನು. ಎರಡು ನಿಮಿಷ ಸುಧಾರಿಸಿಕೊಂಡು, “ಮೇಷ್ಟ್ರೆ ! ಈ ಸ್ಟೂಲಿನ ಮೇಲೆ ಕುಳಿತುಕೊಳ್ಳಿ' ಎಂದು ಹೇಳುತ್ತ ಕೈ ಹಿಡಿದು ರಂಗಪ್ಪನನ್ನು ಕುಳ್ಳಿರಿಸಿದನು.

'ಈ ಪದ್ಯದಲ್ಲಿ ಹೂಗಿಡಗಳ ವಿಚಾರ ಮತ್ತೂ ಆಕಾಶದ ವಿಚಾರ ಹೇಳಿದೆ. ಹೂವಿನ ಗಿಡಗಳಲ್ಲಿ ಹೂವುಗಳೆಲ್ಲ ಅರಳಿವೆ ; ನೋಡುವುದಕ್ಕೆ ಚೆನ್ನಾಗಿ ಕಾಣುತ್ತವೆ ಎನ್ನುವುದು ಮೊದಲನೆಯ ಪಂಕ್ತಿಯ ಅಭಿಪ್ರಾಯ, ಆಕಾಶದಲ್ಲಿ ಮೋಡಗಳೇನೂ ಇಲ್ಲ ; ನಿರ್ಮಲವಾಗಿ ಕಾಣುತ್ತಿದೆ ಎನ್ನುವುದು ಎರಡನೆಯ ಪಂಕ್ತಿಯ ಅಭಿಪ್ರಾಯ. ಆಕಾಶ ಎನ್ನುವುದು ಸಂಸ್ಕೃತದ ಮಾತು. ಅದಕ್ಕೆ ಆಗಸ ಎನ್ನುವುದು ತದ್ಭವ, ಪುಸ್ತಕದಲ್ಲಿ ಸರಿಯಾಗಿದೆ. ನೀವು ಆಗಸರು, ಆದ್ದರಿಂದ ಪುಸ್ತಕದಲ್ಲಿಯೂ ಅಗಸ ಇರಬೇಕು ಎಂದು ತಪ್ಪು ತಿಳಿದುಕೊಂಡಿರಿ. ಈಗ ಅರ್ಥವಾಯಿತೋ?

'ಆಯಿತು ಸಾರ್ ! ನಮಗೆ ಯಾರೂ ಇದನ್ನು ತಿಳಿಸಲೇ ಇಲ್ಲ ಸಾರ್ ! >

ಒಳ್ಳೆಯದು. ಈಗ ನಾನು ತಿಳಿಸಿದ್ದೆನಲ್ಲ. ಮುಂದೆ ಹೀಗೆ ತಪ್ಪು ಮಾಡಬೇಡಿ. ನೀವು ಹಾಕಿಕೊಂಡಿರುವ ಈ ಜರ್ಬಿನ ಉಡುಪು ತೊಳೆಯುವುದಕ್ಕೋಸ್ಕರ ಬಂದಿದೆಯೋ ?

' ಹೌದು ಸಾರ್. ನಾಲ್ಕು ವಾರದ ಹಿಂದೆ ದೊಡ್ಡ ಗೌಡರ ಮಗನಿಗೆ ಮದುವೆ ಆಯಿತು. ಇವೆಲ್ಲ ಆಗ ವರನಿಗೆ ಕೊಟ್ಟಿದ್ದ ಬಟ್ಟೆಗಳು! ತೊಳೆಯುವುದಕ್ಕೆ ನಮ್ಮ ಮನೆಗೆ ತಂದುಹಾಕಿದ್ದರು. ಬಟ್ಟೆಗಳು ಇನ್ನೂ ಮಾಸಿರಲಿಲ್ಲ. ಹೊಸ ಬಟ್ಟೆಗಳು ಚೆನ್ನಾಗಿ ಮಾಸಿದ ಮೇಲೆ ತೊಳೆದರೆ ಬೆಳ್ಳಗಾಗುತ್ತವೆ. ಸ್ವಾಮಿಯವರ ಸವಾರಿ ಬರುತ್ತೆ ಎಂದು ವರ್ತಮಾನ ಬಂದ ಮೇಲೆ........!

ಠೀಕಾಗಿ ಇನ್ಸ್ಪೆಕ್ಟರ್ ಸಾಹೇಬರ ಮುಂದೆ ಕಾಣೋಣ ಎಂದು ಹಾಕಿಕೊ೦ಡರೋ ?

ಹೌದು ಸಾರ್ ?

ರಂಗಪ್ಪ ಅರ್ಧ ನಾಚಿಕೆಯಿಂದ ಮುಖವನ್ನು ತಗ್ಗಿಸಿಕೊಂಡನು.

ನೀವು ಚೆನ್ನಾಗಿ ಪಾಠ ಮಾಡುತ್ತಿರಿ ಮೇಷ್ಟೇ. ನೋಡಿ ಸಂತೋಷವಾಯಿತು, ”

ಈ ಪ್ರೋತ್ಸಾಹದ ಮಾತುಗಳಿಂದ ರಂಗಪ್ಪ ಮುಖವನ್ನು ಎತ್ತಿ, ಟೈನಿಂಗ್ ಆಗಿದೆ ಸಾರ್ ? ಎಂದನು.

ಈ ಪ್ರಕರಣ ಇಲ್ಲಿಗೆ ಮುಗಿಯಿತು. ಶಂಕರಪ್ಪ ಸ್ಕೂಲಿನ ದಾಖಲೆಗಳನ್ನು ನೋಡಬಂದವನು ಬೀರನಹಳ್ಳಿಗೆ ಹೋಗಿ ಬರುವ ಕಾರ್ಯಕ್ರಮ ಇದೆಯೆಂದು ಜ್ಞಾಪಕ ಕೊಟ್ಟನು. ಹಾಗಾದರೆ ಉಳಿದ ತನಿಖೆ ಮಧ್ಯಾಹ್ನ ಮಾಡೋಣ ” ಎಂದು ಹೇಳಿ ರಂಗಣ್ಣ ತನ್ನ ಬಿಡಾರಕ್ಕೆ ಹೊರಟನು. ಮೇಷ್ಟರು ರಂಗಪ್ಪನೂ ಜೊತೆಯಲ್ಲಿ ಬರುತ್ತ ತನಗೇನಾದರೂ ಪ್ರಮೋಷನ್ ಕೊಡಿಸಬೇಕೆಂದು ಅರಿಕೆ ಮಾಡಿಕೊಂಡನು. ಬೀಡಾರದ ಬಳಿ ಆ ಹಳ್ಳಿಯ ಮುಖಂಡರು ಮತ್ತು ಬಿಡದಿಯ ಮನೆಯ ಯಜಮಾನ - ಎಲ್ಲ ಐದಾರು ಜನ ಸೇರಿದ್ದರು. ಅವರು ಇನ್ಸ್ಪೆಕ್ಟರಿಗೆ ನಮಸ್ಕಾರ ಮಾಡಿ ನಿಂಬೇಹಣ್ಣುಗಳನ್ನು ಸಮರ್ಪಿಸಿದರು. ಒಳಗೆ ಹಜಾರದಲ್ಲಿ ಜಮಖಾನ ಹಾಸಿತ್ತು. ಕುರ್ಚಿ ಮೇಜು ಹಾಕಿತ್ತು. ಸಾಹೇಬರು ಕುರ್ಚಿಯ ಮೇಲೆ ಕುಳಿತುಕೊಂಡರು. ಉಳಿದವರು ಜಂಖಾನದ ಮೇಲೆ ಕುಳಿತುಕೊಂಡರು. ಮನೆಯ ಯಜಮಾನನು ಒಳಗಿನಿಂದ ಕಿತ್ತಳೆಹಣ್ಣು, ಬಾಳೆಯಹಣ್ಣು, ಖರ್ಜೂರ, ಬಾದಾಮಿ, ದ್ರಾಕ್ಷೆ ತುಂಬಿದ್ದ ಬೆಳ್ಳಿಯ ತಟ್ಟೆಯನ್ನು ತಂದಿಟ್ಟನು, ಹೊತ್ತಿನೊಳಗಾಗಿ ಗೋಪಾಲ ದೊಡ್ಡ ಲೋಟದ ತುಂಬ ಹದವಾದ ಹಾಲನ್ನು ತಂದು ಮೇಜಿನ ಮೇಲಿಟ್ಟನು. ಯಜಮಾನನು, 'ತಗೋಬೇಕು ಸ್ವಾಮಿಯವರು. ಈ ದಿನ ಇಲ್ಲಿ ಮೊಕ್ಕಾಂ ಮಾಡಿದ್ದು ನಮಗೆಲ್ಲ ಬಹಳ ಸಂತೋಷ ಸ್ವಾಮಿ, ತಮ್ಮ ಕಾಲದಾಗೆ ವಿದ್ಯೆ ಚೆನ್ನಾಗಿ ಹರಡಿದೆ ಸ್ವಾಮಿ' - ಎಂದು ಉಪಚಾರೋಕ್ತಿಯನ್ನಾಡಿದನು, ರಂಗಣ್ಣನು ಸಮಯೋಚಿತವಾಗಿ ಉತ್ತರ ಕೊಟ್ಟನು. ಮಾತನಾಡುತ್ತ ಹಾಲನ್ನು ಮುಗಿಸಿ ನಾಲ್ಕು ಬಾಳೆಯಹಣ್ಣು ಎರಡು ಕಿತ್ತಳೆ ಹಣ್ಣುಗಳನ್ನು ಹೊಟ್ಟೆಗೆ ಸೇರಿಸಿದನು. ಆ ಹೊತ್ತಿಗೆ ಎರಡು ಎಳನೀರು ಕೆ ಸಿದ್ಧವಾಗಿ ಬಂದುವು. ಅವುಗಳಲ್ಲಿ ಒಂದನ್ನು ಖಾಲಿ ಮಾಡಿದನು. ಇಷ್ಟೆಲ್ಲ ಸಿದ್ಧತೆ ಗಳನ್ನು ಮಾಡಿಕೊಂಡು ಗಾಡಿಯಲ್ಲಿ ಕುಳಿತು ಬೀರನಹಳ್ಳಿಗೆ ಹೊರಟನು. ಜೊತೆಯಲ್ಲಿ ಶಂಕರಪ್ಪ ಮತ್ತು ಮೇಷ್ಟು ರಂಗಪ್ಪ ಇದ್ದರು. ಅಲ್ಲಿಗೆ ಹೋಗಿ ವಿದ್ಯಮಾನಗಳನ್ನು ನೋಡಿ ಕೊಂಡು ಹಿಂದಿರುಗಬೇಕಾದರೆ ಮಧ್ಯಾಹ್ನ ಹನ್ನೆರಡೂವರೆ ಗಂಟೆಯಾಯಿತು. ಊಟ ಮಾಡಿದನಂತರ ಸ್ವಲ್ಪ ವಿಶ್ರಮಿಸಿಕೊಂಡು ಗುಂಡೇನಹಳ್ಳಿಯ ಸ್ಕೂಲಿನ ತನಿಖೆ ಮುಗಿಸಿ ಕೊಂಡು ರಾತ್ರಿ ಎಂಟು ಗಂಟೆಗೆ ಪುನಃ ಕೆಂಪಾಪುರವನ್ನು ಇನ್‌ಸ್ಪೆಕ್ಟರು

ತಲುಪಿದ್ದಾಯಿತು.

ಪ್ರಕರಣ ೬

ಬೋರ್ಡು ಒರೆಸುವ ಬಟ್ಟೆ

ಸುತ್ತಮುತ್ತಲಿನ ಕೆಲವು ಪಾಠಶಾಲೆಗಳನ್ನು ನೋಡಿಕೊಂಡು ರಂಗಣ್ಣ ಜನಾರ್ದನ ಪುರಕ್ಕೆ ನಾಲ್ಕು ದಿನಗಳ ನಂತರ ಹಿಂದಿರುಗಿದನು. ರೇ೦ಜಿನಲ್ಲಿ ಹಲವು ಸುಧಾರಣೆಗಳಾಗಬೇಕೆಂಬುದು ಅವನ ಅನುಭವಕ್ಕೆ ಬಂದಿತು. ತನಗೆ ತೋರಿದ ವಿಷಯಗಳನ್ನೆಲ್ಲ ಕ್ರೋಢೀಕರಿಸಿ ಉಪಾಧ್ಯಾಯರ ತಿಳಿವಳಿಕೆ ಬಗ್ಗೆ ಸರ್ಕ್ಯುಲರುಗಳನ್ನು ರಂಗಣ್ಣ ಕಳುಹಿಸಿದನು. ಉಪಾಧ್ಯಾಯರೊಡನೆ ಏಗುವುದರಲ್ಲಿ, ಅವರಿಗೆ ತಿಳಿವಳಿಕೆ ಕೊಡುವುದು ದೊಡ್ಡ ತೊಂದರೆಯಾಗಿರಲಿಲ್ಲ. ಕೊಟ್ಟ ತಿಳಿವಳಿಕೆಯನ್ನು ಆಚರಣೆಗೆ ತರುವಂತೆ ಮಾಡುವುದೇ ಕಷ್ಟವಾಗಿದ್ದ ಕೆಲಸ. ಹಲವರು ಆ ಸರ್ಕ್ಯುಲರ್‌ಗಳನ್ನು ಓದುತ್ತಲೇ ಇರಲಿಲ್ಲ. ಕೆಲವರು ಓದಿದರೂ ಅವುಗಳನ್ನು ಎಲ್ಲಿಯೋ ಪೆಟ್ಟಿಗೆಯಲ್ಲಿ ತುರುಕಿಬಿಡುತ್ತಿದ್ದರು. ದೊಡ್ಡ ದೊಡ್ಡ ಪಾಠಶಾಲೆಗಳಲ್ಲಿ ಮಾತ್ರ ಸರ್ಕ್ಯುಲರ್ ಗಳನ್ನು ಸರಿಯಾಗಿ ಜೋಡಿ ಸಿಟ್ಟು ಅವುಗಳಲ್ಲಿ ಕೊಟ್ಟಿರುವ ತಿಳಿವಳಿಕೆಯಂತೆ ನಡೆಯಲು ಪ್ರಯತ್ನ ಪಡುತ್ತಿದ್ದರು. ಉಳಿದ ಕಡೆಗಳಲ್ಲಿ ಅವುಗಳ ಕಡೆಗೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ.

ಒಂದು ದಿನ ಬೆಳಗ್ಗೆ ರಂಗಣ್ಣ ಬೈ ಸ್ಕಲ್ ಮೇಲೆ ಪಾಠ ಶಾಲೆಗಳ ಭೇಟಿಗೆಂದು ಹೊರಟನು. ಏಳೆಂಟು ಮೈಲಿಗಳ ದೂರ ಹೊರಟು ಎರಡು ಮೂರು ಪಾಠ ಶಾಲೆಗಳನ್ನು ನೋಡಿಕೊಂಡು ಒಳಭಾಗದ ಹಳ್ಳಿಗಳಿಗೆ ಹೋಗುವ ಕಾಡ ರಸ್ತೆಯಲ್ಲಿ ,ತಿರುಗಿದನು. ಎರಡು ಮೈಲಿ ಹೋದಮೇಲೆ ಸುದ್ದೇನಹಳ್ಳಿ ಸಿಕ್ಕಿತು. ಪಾಠಶಾಲೆಯ ಹತ್ತಿರ ಹೋಗಿ ಇಳಿದಾಗ ಬಾಗಿಲು ತೆರೆದಿತ್ತು. ಒಳಗೆ ಉಪಾಧ್ಯಾಯನೂ ಹುಡುಗರೂ ಇದ್ದರು. ಬಾಗಿಲ ಪಕ್ಕದಲ್ಲಿ ರಟ್ಟು ಕಾಗದದ ಮೇಲೆ' 'ಪಾಠ ಕಾಲದಲ್ಲಿ ಗ್ರಾಮಸ್ಥರು ಯಾರೂ ಅಪ್ಪಣೆಯಿಲ್ಲದೆ ಒಳಕ್ಕೆ ಬರಕೂಡದು ' ಎಂದು ನೋಟೀಸ್ ಹಾಕಿತ್ತು. ತನ್ನ ಸರ್ಕ್ಯುಲರ್ ಪ್ರಕಾರ ಮೇಷ್ಟು ಆ ನೋಟೀಸ್ ಹಾಕಿದ್ದುದರ ಬಗ್ಗೆ ರಂಗಣ್ಣನಿಗೆ ಸಂತೋಷವಾಯಿತು. ಬಾಗಿಲ ಬಳಿ ನಿಂತುಕೊಂಡು ನಗುತ್ತಾ, 'ಮೇಷ್ಟೆ, ನಾನು ಒಳಕ್ಕೆ ಬರಬಹುದೆ ?” ಎಂದು ಕೇಳಿದನು. ಮೇಷ್ಟು ಸ್ವಲ್ಪ ಗಾಬರಿಯಾಗಿ, ಬರಬಹುದು ಸ್ವಾಮಿ ! ತಮ್ಮ ಆಪ್ಪಣೆ ಪ್ರಕಾರ ಗ್ರಾಮಸ್ಥರ ತಿಳಿವಳಿಕೆ ಬಗ್ಗೆ ಆ ಬೋರ್ಡನ್ನು ತಗಲು ಹಾಕಿದ್ದೇನೆ, ಅಷ್ಟೇ' ಎಂದನು. ಒಳಕ್ಕೆ ಪ್ರವೇಶಿಸಿದಾಗ ಮಕ್ಕಳು ಎದ್ದು ನಿಂತುಕೊಂಡು ಕೈ ಮುಗಿದರು. ಹಿಂದೆ ಕಿರಿಚುತ್ತಿದ್ದಂತೆ 'ನಮಸ್ಕಾರಾ ಸಾರ್' ಎಂದು ಕಿರಿಚಲಿಲ್ಲ. ಅದನ್ನು ನೋಡಿ ರಂಗಣ್ಣನಿಗೆ ಸಂತೋಷವಾಯಿತು. ಮಕ್ಕಳಿಗೆ ಕೂತುಕೊಳ್ಳುವಂತೆ ಹೇಳಿದನು.

ಉಪಾಧ್ಯಾಯನಿಗೆ ಸುಮಾರು ನಲವತ್ತೈದು ವರ್ಷ. ಆದರೆ ಕೂದಲು ಆಗಲೇ ನೆರೆತಿತ್ತು. ಗಡ್ಡ ಉದ್ದವಾಗಿ ಬೆಳೆದಿರಲಿಲ್ಲ ; ಆದರೆ ಕ್ಷೌರ ಮಾಡಿಸಿಕೊಂಡು ಮೂರು ತಿಂಗಳು ಆಗಿದ್ದಿರಬಹುದು ಎಂದು ತೋರುತ್ತಿತ್ತು. ಎಣ್ಣೆಗೆಂಪಿನ ಬಣ್ಣ; ಮಧ್ಯಸ್ಥನಾದ ಎತ್ತರ, ಅಂಗಿ ಎರಡು ಮೂರು ಕಡೆ ಹರಿದಿತ್ತು ; ತಲೆಗೆ ಮಾಸಿಲ್ಲೊಂದು ರುಮಾಲು. ಮೇಷ್ಟರ ಹೆಸರು ಕೆಂಚಪ್ಪ, ಆತ ಒಕ್ಕಲಿಗ, ರಂಗಣ್ಣನು ಮೇಷ್ಟರನ್ನುನೋಡಿ, “ಮೂರನೆಯ ತರಗತಿಗೆ ಒಂದು ಲೆಕ್ಕ ಹಾಕಿ ಮೇಷ್ಟೆ ? ಎಂದು ಹೇಳಿದನು. ಆ ಮೇಷ್ಟು ಕಪ್ಪು ಹಲಗೆಯ ಮೇಲೆ ಹತ್ತಿ ಹತ್ತದಂಧ ಸುಣ್ಣದಿಂದ,378547896X5458945 ಎಂಬುದೊಂದು ಗುಣಾಕಾರದ ಲೆಕ್ಕವನ್ನು ಹಾಕಿದನು. 'ಮೇಷ್ಟೆ, ಅಷ್ಟು ದೊಡ್ಡ ಲೆಕ್ಕ ಬೇಡ, ಚಿಕ್ಕದೊಂದು ಲೆಕ್ಕ ಹಾಕಿ.ದೊಡ್ಡದು ಬೇಡ?

'ಮಾಡ್ತಾರೆ ಸ್ವಾಮಿ ! ಕಷ್ಟ ಪಟ್ಟು ಹೇಳಿ ಕೊಟ್ಟಿದ್ದೇನೆ. ಸ್ವಾಮಿಯವರು ನನ್ನ ಕಷ್ಟ ನೋಡಬೇಕು !

'ಕಷ್ಟ ಪಟ್ಟು ಹೇಳಿಕೊಟ್ಟಿದ್ದೀರಿ ಮೇಷ್ಟೆ, ಅಡ್ಡಿಯಿಲ್ಲ. ಆದರೆ ಅವರ ದರ್ಜೆಗೆ ಮೀರಿ ಲೆಕ್ಕ ಹಾಕಬಾರದು. ಪಾಠಗಳ ಪಟ್ಟಿಯಲ್ಲಿ ಮೂರು ಅಂಕಿಗಳಿಗಿಂತ ತಿಳಿಸಿರುವಂತೆ ಹೇಳಿಕೊಡಬೇಕು. ಪಾಠಗಳ ಪಟ್ಟಿ ಎಲ್ಲಿ ? ತೆಗೆದು ಕೊಡಿ.?

ಮೇಷ್ಟು ಪೆಟ್ಟಿಗೆಯಲ್ಲಿ ಹುಡುಕಿ ಹಳೆಯದೊಂದು ಪಟ್ಟಿಯನ್ನು ತೆಗೆದು ಕೊಟ್ಟನು. ಅದರಲ್ಲಿ ಮುದ್ರಿಸಿರುವುದನ್ನು ತೋರಿಸಿ, ಇದನ್ನು ನೀವು ನೋಡಿಲ್ಲವೇ ಮೇಷ್ಟೆ ?” ಎಂದು ರಂಗಣ್ಣ ಕೇಳಿದನು.

'ಇಲ್ಲ ಸ್ವಾಮಿ ? ನಾನು ಬಡವ. ಆದರೆ ಸುಳ್ಳು ಹೇಳೋ ಮನುಷ್ಯನಲ್ಲ.”

'ಒಳ್ಳೆಯದು. ಮುಂದೆ ಇದರಲ್ಲಿರುವುದನ್ನೆಲ್ಲ ನೋಡಿ ಕೊಂಡು ಸರಿಯಾಗಿ ಪಾಠಮಾಡಿ ಮೇಷ್ಟೇ.'

'ಅಪ್ಪಣೆ ಸ್ವಾಮಿ.'

ರಂಗಣ್ಣನು ಓದುವ ಪಾಠ, ಪದ್ಯ ಪಾರ ಮೊದಲಾದುವನ್ನು ಸ್ವಲ್ಪ ಪರೀಕ್ಷೆ ಮಾಡಿದನಂತರ “ಮೇಷ್ಟೇ ! ಉಕ್ತಲೇಖನ ಪಾರವನ್ನು ಮೂರನೆಯ ತರಗತಿಗೆ ಸ್ವಲ್ಪ ಮಾಡಿ ನೋಡೋಣ ” ಎಂದನು. ಮೇಷ್ಟು ಓದುವ ಪುಸ್ತಕದಿಂದ ಒಂದು ಭಾಗವನ್ನು ತೆಗೆದು, “ ಹೇಳುವುದನ್ನು ಬರೆಯಿರಿ' ಎಂದು ತಿಳಿವಳಿಕೆ ಕೊಟ್ಟು, ' ಒಂದು ಆಲದ ಮರದಲ್ಲಿ ಒಂದು ಆಲದ ಮರದಲ್ಲಿ, ಆಯಿತೇ, ಒಂದು ಆಲದ ಮರದಲ್ಲಿ, ಒಂದು ಕಾಗೆ, ಒಂದು ಕಾಗೆ, ಒಂದು ಕಾಗೆ, ಗೂಡು ಕಟ್ಟಿ ಕೊಂಡು , ಗೂಡು ಕಟ್ಟಿ ಕೊಂಡು, ಗೂಡು ಕಟ್ಟಿ ಕೊಂಡು' ಎಂದು ಮುಂತಾಗಿ ಹೇಳುತ್ತಾ ಹುಡುಗರಿಂದ ಬರೆಯಿಸುತ್ತಿದ್ದನು. ರಂಗಣ್ಣ, 'ಮೇಷ್ಟೆ, ಸ್ವಲ್ಪ ನಿಲ್ಲಿಸಿ' ಎಂದು ಅವನನ್ನು ತಡೆದು ಬೋರ್ಡಿನ ಹತ್ತಿರ ತಾನೇ ಹೋಗಿ ನಿಂತುಕೊಂಡನು. ಬೋರ್ಡ್ ಒರಸುವ ಬಟ್ಟೆ ಕೊಡಿ ಮೇಷ್ಟ್ರೇ .?

'ಸ್ವಾಮಿ!'

'ಬಟ್ಟೆ ಎಲ್ಲಿ ಮೇಷ್ಟೆ ?'

'ಸ್ವಾಮಿ ! ಸ್ವಾಮಿ !' ಎಂದು ನಡುಗುತ್ತ ಆ ಮೇಷ್ಟು ತಲೆಗಿದ್ದ ರುಮಾಲನ್ನು ತೆಗೆದು ಬೋರ್ಡನ್ನು ಒರಸಿ ಆ ರುಮಾಲನ್ನು ಮೇಜಿನ ಮೇಲಿಟ್ಟು ಬಿಟ್ಟನು ! ರಂಗಣ್ಣನಿಗೆ, 'ನಾನೆಂಥ ಪಾಪ ಮಾಡಿದೆ ದೇವರೇ! ಬಡವನಾದ ಆ ಮೇಷ್ಟರ ರುಮಾಲು ಹಾಳಾಯಿತಲ್ಲ ' ಎಂದು ಬಹಳವಾಗಿ ಮನಸ್ಸು ಕರಗಿಹೋಯಿತು.

'ಅದೇಕೆ ಹಾಗೆ ಮಾಡಿದಿರಿ ಮೇಷ್ಟೆ ? ಬೋರ್ಡು ಒರಸುವುದಕ್ಕೆ ಅಂಗೈಯಗಲ ಬಟ್ಟೆ ಇಟ್ಟು ಕೊಳ್ಳಬಾರದೇ ? ಸಾದಿಲ್ವಾರು ನಾಲ್ಕಾಣೆ ಇರುತ್ತದೆಯಲ್ಲ.”

'ಸಾದಿಲ್ವಾರು ಮೊಬಲಗು ಸಾಕಾಗುವುದಿಲ್ಲ ಸ್ವಾಮಿ !'

ರಂಗಣ್ಣನಿಗೂ ಅದೇ ಅಭಿಪ್ರಾಯವಾಗಿತ್ತು, ಒಂಟಿ ಉಪಾಧ್ಯಾಯರಿರುವ ಪಾಠಶಾಲೆಗಳಿಗೆ ತಿಂಗಳಿಗೆ ಎಂಟಾಣೆಯನ್ನಾದರೂ ಸಾದಿಲ್ವಾರಿಗೆ ಕೊಡಬೇಕು. ಅದರಂತೆ ಲೆಕ್ಕ ಮಾಡಿ ಹೆಚ್ಚು ಜನ ಉಪಾಧ್ಯಾಯರಿರುವ ಪಾರಶಾಲೆಗಳಿಗೂ ಸಾದಿಲ್ವಾರು ಮೊಬಲಗನ್ನು ಹೆಚ್ಚಿಸಬೇಕು ಎಂಬುದು ಅವನ ತೀರ್ಮಾನವಾಗಿತ್ತು. ಆದ್ದರಿಂದ ಆ ವಿಚಾರದಲ್ಲಿ ಮೇಲಕ್ಕೆ ಪುನಃ ಸಿಫಾರಸುಮಾಡಿ, ಒತ್ತಾಯಮಾಡಿ, ಅನುಕೂಲ ಪಡಿಸಬೇಕೆಂದು ನಿರ್ಧರಿಸಿದನು. ಬಳಿಕ ಬೋರ್ಡಿನ ಮೇಲೆ ಕೃಷ್ಣ ಸರ್ಪ,' ' ಹುತ್ತ ' ಎಂದು ಮಾತುಗಳನ್ನು ಬರೆಯತೊಡಗಿದಾಗ ಹಾಳು ಸೀಮೆಯ ಸುಣ್ಣ ಸರಿಯಾಗಿ ಬರೆಯದೇ ಹೋಯಿತು. * ಒಳ್ಳೆಯ ಸೀಮೆ ಸುಣ್ಣ ಕೊಂಡುಕೊಳ್ಳಬೇಕು ಮೇಷ್ಟೆ. ಇದೆಲ್ಲೋ ನಾಡು ಸುಣ್ಣ' ಎಂದು ಹೇಳಿದನು.

'ಅಪ್ಪಣೆ ಸ್ವಾಮಿ.'

ರಂಗಣ್ಣನು ಕಪ್ಪು ಹಲಗೆಯ ಮೇಲೆ ಕ್ಲಿಷ್ಟ ಪದಗಳನ್ನು ಬರೆದು ಮಕ್ಕಳಿಂದ ಅವುಗಳನ್ನು ಓದಿಸಿದನು. ಆಮೇಲೆ ಅವುಗಳನ್ನು ತಮ್ಮ ಕಪ್ಪು ಹಲಗೆಗಳಲ್ಲಿ ಮಕ್ಕಳು ಬರೆಯುವಂತೆ ಹೇಳಿದನು. ಹಾಗೆ ಬರೆದುದನ್ನು ನೋಡಿ ತಪ್ಪಿದ ಮಾತುಗಳನ್ನು ಬೋರ್ಡಿನ ಮೇಲಿರುವ ಮಾತುಗಳ ಸಹಾಯದಿಂದ ನೋಡಿ ಸರಿಪಡಿಸಿಕೊಳ್ಳುವಂತೆ ಹೇಳಿದನು. ಇದಾದ ಮೇಲೆ ಕಪ್ಪು ಹಲಗೆಗಳಲ್ಲಿ ಬರೆದಿರುವುದನ್ನೆಲ್ಲ ಅಳಿಸಿಬಿಡುವಂತೆ ಹೇಳಿ ತಾನು ಬೋರ್ಡನ್ನು ಒರಸಲು ತನ್ನ ಕರವಸ್ತ್ರಕ್ಕೆ ಕೈ ಹಾಕತೊಡಗಿದಾಗ ಮೆಷ್ಟು ಒ೦ದೇ ಬಾರಿಗೆ ಹಾರಿ ಮೇಜಿನ ಮೇಲಿದ್ದ ರುಮಾಲಿಂದ ಆ ಬೋರ್ಡನ್ನು ಒರಸಿಬಿಟ್ಟನು. “ಅಯ್ಯೋ ಮೇಷ್ಟೇ ! ಪುನಃ ರುಮಾಲನ್ನು ಹಾಳುಮಾಡಿಕೊಂಡಿರಲ್ಲಾ ! ಈ ಕೈವಸ್ತ್ರದಿಂದ ನಾನು ಒರಸುತ್ತಿದ್ದೆನೇ, ಇದನ್ನೇ ನಿಮಗೆ ಕೊಟ್ಟು ಬಿಟ್ಟು ಹೋಗುತ್ತೇನೆ. ಬೋರ್ಡು ಒರಸುವುದಕ್ಕೆ ಇಟ್ಟು ಕೊಳ್ಳಿ.

ಸ್ವಾಮಿಯವರ ಸೇವಕ ! ತಾಪೇದಾರ ! ಬಡವ ! ಆದರೆ ಸುಳ್ಳು ಹೇಳೋ ಮನುಷ್ಯ ಅಲ್ಲ. ಕಷ್ಟ ಪಟ್ಟು ಕೆಲಸ ಮಾಡಿದ್ದೇನೆ ಸ್ವಾಮಿ.'

ರಂಗಣ್ಣನು ಉಕ್ತಲೇಖನ ಪಾಠದ ಕ್ರಮವನ್ನು ಆ ಮೇಷ್ಟರಿಗೆ ಚೆನ್ನಾಗಿ ತಿಳಿಸಿ ಕೊಟ್ಟು, ಇನ್ನು ಮುಂದೆ ನಾನು ಹೇಳಿಕೊಟ್ಟ ಕ್ರಮದಲ್ಲಿ ಪಾಠಮಾಡಿ ಮೇಷ್ಟೇ ! ತಪ್ಪುಗಳನ್ನು ಬರೆಯದಂತೆ ನಾವು ಮಕ್ಕಳಿಗೆ ಸಹಾಯಮಾಡ ಬೇಕು. ಸುಮ್ಮನೆ ಪರೀಕ್ಷೆಯಲ್ಲಿ ಹೇಳಿದಂತೆ ಉಕ್ತಲೇಖನ ಮಾಡಬಾರದು. ಈಗ ಮಕ್ಕಳನ್ನು ಆಟಕ್ಕೆ ಬಿಡಿ ಮೇಷ್ಟೇ ' ಎಂದು ಹೇಳಿದನು. ಮಕ್ಕಳೆಲ್ಲ ಆಟಕ್ಕೆ ಹೊರಕ್ಕೆ ಹೋದರು. ರಂಗಣ್ಣನು ಸ್ಕೂಲಿನ ದಾಖಲೆಗಳನ್ನು ನೋಡಬೇಕೆಂದು ಬಯಸಿದಾಗ ಮೇಷ್ಟು ಎಲ್ಲ ರಿಜಿಸ್ಟರುಗಳನ್ನೂ ತೆಗೆದು ಮೇಜಿನ ಮೇಲಿಟ್ಟನು. ಆಡ್ಮಿರ್ಷ ರಿಜಿಸ್ಟರು ಮತ್ತು ಹಾಜರಿ ರಿಜಿಸ್ಟರುಗಳನ್ನು ರಂಗಣ್ಣನು ನೋಡುತ್ತಿದ್ದಾಗ ಮೇಷ್ಟು ಒಂದು ದೊಡ್ಡ ಲೋಟದಲ್ಲಿ ಕಾಸಿದ ಹಾಲು ಒಂದಿಷ್ಟು ಸಕ್ಕರೆ ಆರೇಳು ಬಾಳೆಯ ಹಣ್ಣುಗಳು, ಹತ್ತು ಹನ್ನೆರಡು ಹಲಸಿನ ಹಣ್ಣಿನ ತೊಳೆಗಳು- ಇವುಗಳನ್ನು ಸರಬರಾಜು ಮಾಡಿಕೊಂಡು ಬಂದು ಮೇಜಿನ ಮೇಲೆ ತಂದಿಟ್ಟನು.

ಸ್ವಾಮಿಯವರು ತೆಗೋಬೇಕು. ಬಹಳ ದಣಿದು ಬಂದಿದ್ದೀರಿ. ತಮ್ಮ ಕಾಲದಲ್ಲಿ ಮೇಷ್ಟರಿಗೆಲ್ಲ ಒಳ್ಳೆಯ ತಿಳಿವಳಿಕೆ ಕೊಡುತ್ತಿದ್ದೀರಿ ಸ್ವಾಮಿ ! ನಮ್ಮನ್ನೆಲ್ಲ ಕಾಪಾಡಿಕೊಂಡು ಬರಬೇಕು ಸ್ವಾಮಿ ! ನಾನು ಭಯಸ್ಥ ; ಕಷ್ಟ ಪಟ್ಟು ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ ಸ್ವಾಮಿ!? ಎಂದು ಉಪಾಧ್ಯಾಯನು ಹೇಳಿದನು. ರಂಗಣ್ಣನಿಗೆ ಈ ಹಾಲು ಹಣ್ಣು ಗಳ ನಿವೇದನೆ ಅಭ್ಯಾಸವಾಗಿ ಹೋಗಿತ್ತು. ಯಥಾಶಕ್ತಿ ಅವುಗಳನ್ನು ಸ್ವೀಕರಿಸಿ ಮುಂದೆ ದಾಖಲೆಗಳನ್ನು ನೋಡುತ್ತಾ ಹೋದನು. ಮೇಷ್ಟರು ಬರೆದಿದ್ದ ಟಿಪ್ಪಣಿ, ಡೈರಿ, ಸಂಬಳದ ಬಟವಾಡೆ ರಿಜಿಸ್ಟರು, ಸ್ಟಾಕ್ ರಿಜಿಸ್ಟರು - ಎಲ್ಲವನ್ನೂ ನೋಡಿ ಆಯಿತು. ಸಾದಿಲ್ವಾರ್ ರಿಜಿಸ್ಟರು ಕಣ್ಣಿಗೆ ಬೀಳಲಿಲ್ಲ.

'ಮೇಸ್ಟ್ರೆ, ಸಾದಿಲ್ವಾರ್ ರಿಜಿಸ್ಟರ್ ಎಲ್ಲಿ ?' ಎಂದು ಕೇಳಿದನು.

'ಅಲ್ಲೇ ಇದೆ ಸ್ವಾಮಿ, ಮೊದಲಿನ ರಿಜಿಸ್ಟರ್ ಹಿಂದೆಯೇ ಮುಗಿದೋಯ್ತು. ಆಫೀಸಿಗೆ ಯಾದಿ ಬರೆದೆ. ಸಪ್ಲೈ ಬರಲಿಲ್ಲ. ಒಂದು ನೋಟ್ ಪುಸ್ತಕ ಕೊಂಡುಕೊಂಡು ಅದರಲ್ಲಿ ಬರೆದಿಟ್ಟಿದ್ದೇನೆ ಸ್ವಾಮಿ.' ರಂಗಣ್ಣ ಕೆಳಗಿನ ದಾಖಲೆಗಳಲ್ಲಿ ಹುಡುಕಿದಾಗ ನಲವತ್ತು ಪುಟಗಳ ಒಂದು ನೋಟ್ ಪುಸ್ತಕ ಸಿಕ್ಕಿತು. ಮೇಲೆ 'ಸಾದಿಲ್ವಾರ್ ಖರ್ಚಿನ ಪುಸ್ತಕ ' ಎಂದು ಬರೆದಿತ್ತು. ಮೊದಲನೆಯ ಹಾಳೆಯಲ್ಲಿ,

ಮೇ ತಿಂಗಳ ಸಾದಿಲ್ವಾರ್ ಜಮಾ ಖರ್ಚು 0-4-0
ನೋಟ್ ಬುಕ್ 0-1-0
ಕಾಗದ 0-2-0
ಮಸಿ, ಮುಳ್ಳು 0-1-0
ಒಟ್ಟು 0-4-0
ಬಾಕಿ ಇಲ್ಲ

ಎಂದು ಬರೆದಿತ್ತು. ಮುಂದೆ ಜೂನ್ ತಿಂಗಳಿಗೆ ಸಾದಿಲ್ವಾರ್ ಜಮಾ ; 0-4-0. ಖರ್ಚು : ಇಲ್ಲಾ, ಎಂದು ಬರೆದಿತ್ತು. ಹಾಗೆಯೇ ಮುಂದಿನ ಪ್ರತಿ ತಿಂಗಳಿಗೂ ಬರೆದು ಯಾವುದೋ ತಿಂಗಳಲ್ಲಿ ' ಸಾದಿಲ್ವಾರ್ ಒಟ್ಟು ಜಮಾ : 2-0-0. ಖರ್ಚು : ಬೋರ್ಡ್ ಒರಸುವ ಬಟ್ಟೆ= 2–0–0

ಬಾಕಿ ಏನೂ ಇಲ್ಲ.

ಎಂದು ಬರೆದಿತ್ತು ; ಮೇಷ್ಟ ರುಜುವಿತ್ತು. ರಂಗಣ್ಣ ಕಣ್ಣು ಕಣ್ಣು ಬಿಡುತ್ತಾ ಕುಳಿತುಕೊಂಡನು ! “ಮೇಷ್ಟೇ ! ಇದೇನು? ಎಂಟು ತಿಂಗಳ ಸಾದಿಲ್ವಾರ್ ಮೊಬಲಿಗೆಗೆಲ್ಲ ಬೋರ್ಡ್ ಒರಸುವ ಬಟ್ಟೆಯ ಖರ್ಚು ತೋರಿಸಿದ್ದೀರಿ. ನಿಮ್ಮ ಬೋರ್ಡ್ ಒರಸುವುದಕ್ಕೆ ಆ೦ಗೈಯಗಲ ಬಟ್ಟೆ ಕೂಡ ಇರಲಿಲ್ಲವಲ್ಲ ? ಎಂದು ಕೇಳಿದನು.

'ಇಗೋ ಸ್ವಾಮಿ ಬೋರ್ಡ ಒರಸುವ ಬಟ್ಟೆ! ಮೇಜಿನ ಮೇಲೆ ಆಗಿನಿ೦ದ ಇಟ್ಟಿದ್ದೇನೆ ! ತಮ್ಮೆದುರಿಗೇನೇ ಬೋರ್ಡು ಒರಸಿದ್ದೇನೆ. ನಾನು ಬಡವ ಸ್ವಾಮಿ ! ಆದರೆ ಸುಳ್ಳು ಲೆಕ್ಕ ಬರೆದಿಲ್ಲ ; ಸುಳ್ಳು ಸುಳ್ಳು, ಹೇಳೊ ಮನುಷ್ಯ ಅಲ್ಲ.'

'ಮೇಷ್ಟ್ರೇ ! ಇದು ನಿಮ್ಮ ರುಮಾಲಲ್ಲವೆ ?'

'ಸ್ವಾಮಿ ! ನಾನು ಬಡವ, ಭಯಸ್ಥ ! ನೋಡಿ ಸ್ವಾಮಿ | ಅಂಗಿ ಎರಡು ಮೂರು ಕಡೆ ಹರಿದು ಹೋಗಿದೆ ; ಈ ಪ೦ಚೆ ಜೂಲು ಜಲಾಗಿದೆ ಸಂಬಳ ಹದಿನೈದೇ ರೂಪಾಯಿ. ಮನೆಯಲ್ಲಿ ನಾಲ್ಕು ಜನ ಮಕ್ಕಳು, ನನ್ನ ಹೆಂಡತಿ ಮತ್ತು ಅತ್ತೆ, ನಾನು ಸುಳ್ಳು ಹೇಳೋದಿಲ್ಲ ಸ್ವಾಮಿ ! ಮೇಜಿನ ಮೇಲಿರುವುದೇ ಬೋಡ್೯ ಒರಸುವ ಬಟ್ಟೆ, ದುಡ್ಡು ತಿ೦ದಿಲ್ಲ. ರಸೀತಿ ಮಡಗಿದ್ದೇನೆ ! ತಲೆಗೆ ರುಮಾಲಿಲ್ಲದಿದ್ದರೆ ಜುಲ್ಮಾನೆ ಹಾಕುತ್ತೀರಿ, ಅದಕ್ಕೇನೆ ಅದನ್ನು ರುಮಾಲಾಗಿ ಹಾಕಿಕೊಂಡಿದ್ದೆ ಸ್ವಾಮಿ ?

'ಮತ್ತೆ ರುಮಾಲಿಲ್ಲದೆ ಈಗ ನಿಂತಿದ್ದೀರಲ್ಲ ನೀವು ?'

'ಇಗೋ ಸ್ವಾಮಿ ಮಡಕ್ಕೋತೀನಿ ! ಕಾಪಾಡಿಕೊಂಡು ಬರಬೇಕು !

ಮೇಷ್ಟ್ರು ಭಯದಿಂದ ಆ ಧೂಳು ತುಂಬಿದ ರುಮಾಲನ್ನೆ ತೊಟ್ಟ. ಸೊಟ್ಟಾಗಿಟ್ಟುಕೊಂಡು ಕೈ ಮುಗಿದುಕೊಂಡು ನಿಂತನು. ರುಮಾಲಿನ ಒಂದು ಕೊನೆ ಸಡಲಿ ಹೋಗಿ ಭುಜದ ಮೇಲೆ ಇಳಿ ಬಿದ್ದದ್ದು ಕೂಡ ಆ ಮೇಷ್ಟಿಗೆ ಅರಿವಾಗಲಿಲ್ಲ. ಮೇ ಷ್ಟು ರುಮಾಲಿಂದ ಬೋರ್ಡನ್ನು ಒರಸಿದ್ದರ ಅರ್ಥ ಆಗ ರಂಗಣ್ಣನಿಗೆ ಸ್ಮರಿಸಿತು ! ಅವನಿಗೆ ಕೋಪ ಬರಲಿಲ್ಲ. ಕಣ್ಣುಗಳು ಹನಿಗೂಡಿ ಮಂಜು ಮಂಜಾದುವು. ಮುಖವನ್ನು ಎತ್ತದೆ, “ ಮೇಷ್ಟ್ರ ಬಡತನ ಯಾವಾಗ ಹೋದೀತೋ ? ಯಾವಾಗ ಅವರಿಗೆ ಹೊಟ್ಟೆಗೆ ಬಟ್ಟೆಗೆ ಸಾಕಾಗುವಷ್ಟು ಸಂಬಳ ದೊರೆತೀತೋ ? ಮೋಟಾರುಗಳಲ್ಲಿ ಜಬರ್ದಸ್ತಿನಿಂದ ಓಡಾಡುವ ಸೆಂಚುರಿ ಕ್ಲಬ್ಬಿನ ಲೋಲರಿಗೆ ದೇವರು ಯಾವಾಗ ಕರುಣೆ ತುಂಬುವನೋ ? ದೇವರೇ ಈ ಬಡವರ ರಕ್ಷಣೆಗೆ ಬರಬೇಕು ! ಎಂದು ನೊಂದುಕೊಂಡು ಎರಡು ನಿಮಿಷ ಮೌನವಾಗಿದ್ದನು. ಬಳಿಕ,

ಮೇಷ್ಟೆ ! ಸಾದಿಲ್ವಾರ್ ಮೊಬಲಗೆಲ್ಲ ಬೋರ್ಡು ಒರಸುವ ಬಟ್ಟೆ ಗೇ ಆಗಿ ಹೋಯಿತಲ್ಲಾ ! ಬೋರ್ಡು ಮೇಲೆ ಬರೆಯೋ ಸೀಮೆ ಸುಣ್ಣದ ಖರ್ಚಿಗೆ ಏನು ಮಾಡುತ್ತೀರಿ ? ಎಂದು ಕೇಳಿದನು.

ಅದನ್ನು ಕೊಂಡು ಕೊಂಡಿಲ್ಲ ಸ್ವಾಮಿ, ಆದ್ದರಿ೦ದ ಲೆಕ್ಕದಲ್ಲಿ ಬರೆದಿಲ್ಲ. ನಾನು ಸುಳ್ಳು ಲೆಕ್ಕ ಬರೆಯೋ ಮನುಷ್ಯ ಅಲ್ಲ ಸ್ವಾಮಿ !?

ಮತ್ತೆ ಸೀಮೆಸುಣ್ಣ ನಿಮಗೆ ಹೇಗೆ ದೊರೆಯುತ್ತೆ ??

ಈ ಹಳ್ಳಿ ಲಿ ದಾಸಯ್ಯಗಳು ಬಹಳ ಮಂದಿ ಇದ್ದಾರೆ ಸ್ವಾಮಿ ! ದಪ್ಪ ದಪ್ಪ ನಾಮ ಹಾಕ್ತಾರೆ. ಸ್ಕೂಲಿಗೆ ಬರೋ ಮಕ್ಕಳು ಮನೆಯಿಂದ ನಾಮದ ತುಂಡುಗಳನ್ನು ತಂದು ಕೊಡ್ತಾರೆ ಸ್ವಾಮಿ | ಅದನ್ನೇ ಉಪಯೋಗಿಸುತ್ತ ಕಷ್ಟ ಪಟ್ಟು ಮಕ್ಕಳಿಗೆ ವಿದ್ಯೆ ಹೇಳಿ ಕೊಟ್ಟಿದ್ದೇನೆ. ನಾನು ಸುಳ್ಳುಪಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ ?”

ಕಾಗದ, ಬರೆಯುವ ಮುಳ್ಳು, ಮಸಿ ಈಗ ನಿಮಗೆ ಬೇಕಾಗಿಲ್ಲವೋ ??

ಬೇಕು ಸ್ವಾಮಿ ! ಹಿಂದೆ ಕೊಂಡುಕೊಂಡು ನಾಜೂಕಾಗಿ ಉಪಯೋಗಿಸಿದೆ, ನಾಳೆ ತಿಂಗಳಿನ ಸಾದಿಲ್ವಾರ್ ಮೊಬಗಿನಲ್ಲಿ ಮತ್ತೆ ಕೊಂಡುಕೊಳ್ಳುತ್ತೇನೆ ಸ್ವಾಮಿ ! ಕಾಪಾಡಿಕೊಂಡು ಬರಬೇಕು.

ಒಳ್ಳೆಯದು ಮೇಷ್ಟೆ ! ಈ ಪುಸ್ತಕ ನನ್ನ ಹತ್ತಿರ ಇರಲಿ. ಮಧ್ಯಾಹ್ನಕ್ಕೆ ಆಫೀಸಿನ ಹತ್ತಿರ ಬನ್ನಿ ” ಎಂದು ಹೇಳಿ ಭೇಟಿಯನ್ನು ಮುಗಿಸಿಕೊಂಡು ಆ ಸಾದಿಲ್ವಾರ್ ಪುಸ್ತಕವನ್ನು ಜೇಬಿನಲ್ಲಿಟ್ಟು ಕೊಂಡು ರಂಗಣ್ಣ ಪಾಠಶಾಲೆಯಿಂದ ಹೊರಬಿದ್ದನು. ಮೇಷ್ಟು ಅಷ್ಟು ದೂರ ಹಿಂಬಾಲಿಸಿಕೊಂಡು ಬರುತ್ತ, 'ಪ್ರಮೋಷನ್ ಕೊಟ್ಟು ಕಾಪಾಡಿಕೊಂಡು ಬರಬೇಕು ಸ್ವಾಮಿ. ಕಷ್ಟ ಪಟ್ಟು ಕೆಲಸ ಮಾಡಿದ್ದೆ ನೆ. ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿ ಕೊಟ್ಟಿದ್ದೇನೆ ” ಎಂದನು.

'ಎಲ್ಲರನ್ನೂ ಕಾಪಾಡುವ ಭಗವಂತ ಮೇಲಿದ್ದಾನೆ ಮೇಷ್ಟೇ ! ನೀವು ಎಲ್ಲಿ ” ಎಂದು ಹೇಳಿ ರಂಗಣ್ಣನು ಬೈ ಸ್ಕಲ್ ಹತ್ತಿದನು. ಆ ಬೆಳಗ್ಗೆ ನಡೆದ ಪ್ರಕರಣವನ್ನು ಆಲೋಚನೆ ಮಾಡುತ್ತ ಮಾಡುತ್ತ ಪ್ರಯಾಣದಲ್ಲಿ ಏನು ಆಯಾಸವೂ ತೋರದೆ ಮನೆಗೆ ಬಂದು ಸೇರಿದನು. ಮಧ್ಯಾಹ್ನ

ಹನ್ನೆರಡು ಗಂಟೆ ಆಗಿದ್ದಿತು.

ಪ್ರಕರಣ ೭

ದೊಡ್ಡ ಬೋರೇಗೌಡರು

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ ಮುಖ್ಯವಾಗಿ ಇಂಗ್ಲಿಷು ಜನರಿಗೆ - ಇದೊಂದು ಮಾದರಿ ಸಂಸ್ಥಾನ ಎಂಬ ಅಭಿಪ್ರಾಯ ಹುಟ್ಟುವ ರೀತಿಯಲ್ಲಿ ಅಭಿವೃದ್ಧಿ ಪ್ರಕಾಶನ ಮಾಡುವುದರಲ್ಲಿಯೂ, ಕೇವಲ ಸಂಖ್ಯಾಬಾಹುಳ್ಯದಿಂದ ವಿದ್ಯಾ ಪ್ರಚಾರವನ್ನು ಅಳೆಯುವುದರಲ್ಲಿಯೂ ನಿರತರಾಗಿರುವರೆಂದು ಅವನಿಗೆ ಬೋಧೆಯಾಯಿತು. ಪ್ರಾಥಮಿಕ ದರ್ಜೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಓದುತ್ತಿರಬಹುದು. ಆದರೆ ಪ್ರಯೋಜನವೇನು ? ಅದರಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಾಗಿ ಮೊದಲನೆಯ ತರಗತಿಯಲ್ಲೇ ಕೊಳೆಯುತ್ತಿರುವರು ; ನಾಲ್ಕನೆಯ ತರಗತಿಗೆ ಬರುವ ಮಕ್ಕಳ ಸಂಖ್ಯೆ ಬಹಳ ಕಡಮೆ. ಮಧ್ಯೆ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಸಂಖ್ಯೆಗಳನ್ನು ಕಟ್ಟಿ ಕೊಂಡು ಏನು ಮಾಡಬೇಕು ? ಇನ್ಸ್ಪೆಕ್ಟರುಗಳೂ, ಮೇಲ್ಪಟ್ಟ ಅಧಿಕಾರಿಗಳೂ ಜುಲ್ಮಾನೆ, ಸಸ್ಪೆಂಡು ಮೊದಲಾದ ಉಗ್ರ ಕಾರ್ಯಕ್ರಮಗಳಿಂದ ಭಯೋತ್ಪಾದನೆ ಮಾಡುವವರೇ ಹೊರತು, ಸಹಾನು ಭೂತಿಯಿಂದ ತಿದ್ದಿ ತಿಳಿವಳಿಕೆ ಕೊಟ್ಟ ವರಲ್ಲ. ಆ ಅಧಿಕಾರಿಗಳನ್ನು ಕಂಡರೆ ಕೆಳಗಿನವರಿಗೆ ವಿಶ್ವಾಸವಾಗಲಿ ಗೌರವವಾಗಲಿ ಸುತರಾಂ ಇರ ಲಿಲ್ಲ. ಊರಿಗೆ ಪ್ಲೇಗುಮಾರಿ ಬರುವುದೂ ಸ್ಕೂಲುಗಳ ತನಿಖೆಗೆ ಅಥವಾ ಭೇಟಿಗೆ ಆಧಿಕಾರಿಗಳು ಬರುವುದೂ ಎರಡೂ ಒಂದೇ ಎಂಬ ಭಾವನೆ ಉಪಾಧ್ಯಾಯರಲ್ಲಿ ನೆಲಸಿತ್ತು. ಉಪಾಧ್ಯಾಯರಲ್ಲಿ ಕೆಲವರೇನೋ ಪುಂಡರು ಇದ್ದರು. ಆದರೆ ಅವರ ಸಂಖ್ಯೆ ತೀರ ಕಡಮೆ; ಸೇಕಡ ಹತ್ತು ಇದ್ದಿರಬಹುದು, ಅವರಿಗೆ ಬೆಂಬಲಕಾರರು ರಾಜಕೀಯದಲ್ಲಿಯ ಕೆಲ ವರು ಮುಖಂಡರು ; ಪ್ರಜಾ ಪ್ರತಿನಿಧಿ ಸಭೆಯ ಅಧವಾ ನ್ಯಾಯವಿಧಾಯಕ ಸಭೆಯ ಸದಸ್ಯರಲ್ಲಿ ಕೆಲವರು. ಆ ಪುಂಡು ಉಪಾಧ್ಯಾಯರೇ ಆ ಸದಸ್ಯರ ಏಜೆಂಟರುಗಳು, ಸರ್ಕಾರಿ ನೌಕರರ-ಅಮಲ್ದಾರರು, ಪೊಲೀ ಸ್ಇನ್ಸ್ಪೆಕ್ಟರು ಮೊದಲಾದವರ – ಓಡಾಟಗಳನ್ನು ಹೊಂಚು ನೋಡುತ್ತ ನಡೆದುದನ್ನೂ ಜೊತೆಗೆ ತಮ್ಮ ಕಲ್ಪನೆಯನ್ನೂ ಸೇರಿಸಿ ತಂ ತಮ್ಮ ಯಜಮಾನರುಗಳಿಗೆ ವರದಿ ಮಾಡುವುದು, ವರ್ತಮಾನ ಪತ್ರಿಕೆಗಳನ್ನು ಹಂಚುವುದು-ಇವೆಲ್ಲ ಆ ಉಪಾಧ್ಯಾಯರ ಕಾರ್ಯಕಲಾಪಗಳಲ್ಲಿ ಸೇರಿದುವು, ಇವರ ವರದಿಗಳನ್ನು ಸೇರಿಸಿ ಜೊತೆಗೆ ತಾವೂ ಸ್ವಲ್ಪ ಸೃಷ್ಟನೆ ಮಾಡಿ ಆ ಮುಖಂಡರೆನಿಸಿದವರು ಆಗಾಗ್ಗೆ ದಿವಾನರನ್ನೂ ಕೌನ್ಸಿಲರುಗಳನ್ನೂ ಇಲಾಖೆಗಳ ಮುಖ್ಯಾಧಿಕಾರಿಗಳನ್ನೂ ಕಂಡು ಚಾಡಿಗಳನ್ನು ಹೇಳುತ್ತಿದ್ದರು. ಇಂಥ ಪು೦ಡುಪಾಧ್ಯಾಯರನ್ನು ಹತೋಟಿಗೆ ತಂದುಕೊಳ್ಳುವುದು ಹೇಗೆ ? ಹಿಂದಿನ ಇನ್ ಸ್ಪೆಕ್ಟರುಗಳು ಒಮ್ಮೆ ಒಬ್ಬಬ್ಬರು ಪುಂಡ ರನ್ನು ರೇಂಜ್ ಬಿಟ್ಟು ವರ್ಗ ಮಾಡಿಸಲು ಪ್ರಯತ್ನ ಪಟ್ಟರು. ಮೇಲಿನ ಸಾಹೇಬರಿಂದ ವರ್ಗದ ಆರ್ಡರನ್ನು ತರಿಸಿ ಜಾರಿಗೆ ಕೊಟ್ಟರು ಆಗ ನಮ್ಮ ಮುಖಂಡರು ದೊಡ್ಡ ಸಾಹೇಬರಿಗೆ ಕಾಗದವನ್ನು ಬರೆದು ವರ್ಗದ ಆರ್ಡರನ್ನು ವಜಾ ಮಾಡ ಬೇಕೆಂದು ಹೇಳಿದರು ಮುಖಂಡರ ಆ ಕಾಗದ ಬಂದ ದಿನ ದೊಡ್ಡ ಸಾಹೇಬರು ಅದನ್ನು ಒಡೆದು ನೋಡುತ್ತಿದ್ದ ಹಾಗೆಯೇ ಆಳನ್ನು ಕರೆದು ತಂಬಿಗೆಗೆ ನೀರು ಹಾಕು ' ಎನ್ನುತ್ತ ಅವಸರವಸರವಾಗಿ ಕುರ್ಚಿ ಬಿಟ್ಟು ಹೊರಟರಂತೆ ! ಒಟ್ಟಿನಲ್ಲಿ ಪರಿಣಾಮವೇನಾಯಿತು ? ಆ ಕೆಳಗಿನ ಸಾಹೇಬರಿಗೆ ಮೇಲಿನ ಸಾಹೇಬರಿಂದ ಬೈಗಳು ; ತಿಳಿವಳಿಕೆ ಇಲ್ಲ, ದಕ್ಷತೆ ಇಲ್ಲ, ಇತ್ಯಾದಿ ಬಾಣಗಳು. ಕೂಡಲೇ ವರ್ಗವನ್ನು ವಜೆ ಮಾಡಿ ವರದಿ ಕಳುಹಿಸಬೇಕು ಎಂದು ಖಾಸಗಿ ಹುಕುಂ.

ಒಂದು ಬಾರಿ ಡೆಪ್ಯುಟಿ ಕಮಿಷನರ್ ಸಾಹೇಬರು ಜನಾರ್ದನಪುರದಲ್ಲಿ ಮೊಕ್ಕಾಂ ಮಾಡಿದ್ದರು. ತಿಮ್ಮನಹಳ್ಳಿಯಲ್ಲಿ ರೈತರನ್ನೆಲ್ಲ ಎತ್ತಿ ಕಟ್ಟಿ ಕಂದಾಯದ ರೆಮಿಷನ್ ಬಗ್ಗೆ ಬಂಡಾಯ ಎಬ್ಬಿಸುತ್ತಿರುವುದಾಗಿಯೂ, ಅಲ್ಲಿಯ ಪಂಚಾಯತಿಯಲ್ಲಿ ವ್ಯಾಜ್ಯಗಳನ್ನು ಹುಟ್ಟಿಸಿ ಅದರ ಕೆಲಸಗಳೆಲ್ಲ ನಿಂತು ಹೋಗುವಂತೆ ಮಾಡಿದುದಾಗಿಯೂ ಉಗ್ರಪ್ಪ ಮೇಷ್ಟ ಮೇಲೆ ರೆವಿನ್ಯೂ ಅಧಿಕಾರಿಗಳು ದೂರು ಕೊಟ್ಟಿದ್ದರು. ಡೆಪ್ಯುಟಿ ಕಮೀಷನರ್ ಸಾಹೇಬರನ್ನು ಕಾಣುವುದಕ್ಕಾಗಿ ಗ್ರಾಮಸ್ಥರು ಬ೦ದಿದ್ದರು. ಅವರಲ್ಲಿ ಆ ಮೇಷ್ಟು ಸಹ ಒಬ್ಬನು. ಡೆಪ್ಯುಟಿ ಕಮಿಷನರ್ ಸಾಹೇಬರು ಕೆಲವರು ರೈತರೊಡನೆ ಮಾತನಾಡಿ ಸ್ವಲ್ಪ ಸಮಾಧಾನ ಮಾಡಿದನಂತರ ಮೇಷ್ಟ್ರನ್ನು ಕರೆದು, " ಏನು ? ನೀನು ಬಹಳ ತುಂಟಾಟ ಮಾಡುತ್ತಿದ್ದೀಯಂತೆ ? ಎಚ್ಚರಿಕೆ ಇರಲಿ ; ಪೊಲೀಸ್ ಲಾಕಪ್ ರುಚಿ ತೋರಿಸಬೇಕಾದೀತು. ನೀನು ಸರ್ಕಾರಿ ನೌಕರ, ಹದಿನೈದು ರೂಪಾಯಿ ಮೇಷ್ಟು, ಸುಮ್ಮನೆ ಪಾಠ ಹೇಳಿಕೊಂಡಿರಬೇಕು. ಗೊತ್ತಿದೆಯೋ ? ಹುಷಾರ್ ' ಎಂದು ಜಬರ್ದಸ್ತಿ ಮಾಡಿದರು.

ಅದಕ್ಕೆ ಆ ಸಿಪಾಯಿ ಮೇಷ್ಟ್ರು, ' ಸ್ವಾಮಿ, ತಾವು ದೊಡ್ಡ ಮನುಷ್ಯರು, ದೊಡ್ಡ ಅಧಿಕಾರದಲ್ಲಿರತಕ್ಕವರು, ಡಿಸ್ಟ್ಟಿಕ್ಟ್ ಮ್ಯಾಜಿಸ್ಟ್ರೇಟರು, ನಾನು ಹದಿನೈದು ರೂಪಾಯಿ ಸಂಬಳದ ಬಡ ನೌಕರ. ತಮ್ಮ ದಫೇದಾರನಿಗೆ ಹೆಚ್ಚು ಸಂಬಳ ಬರುತ್ತಿರಬಹುದು. ಆದರೆ ಗೌರವದ ವಿಚಾರದಲ್ಲಿ ಮೇಷ್ಟಾದ ನಾನು ತಮಗೆ ಪಾಠ ಕಲಿಸಬೇಕಾಗಿದೆ. ಮರ್ಯಾದೆ ಕೊಟ್ಟು ಮರ್ಯಾದೆ ಪಡೆಯಬೇಕು ಎಂಬುದೊಂದು ನೀತಿ. ತಾವು ನನ್ನನ್ನು ಏಕವಚನದಲ್ಲಿ ಸಂಬೋಧಿಸಿದರೆ ನಾನು ಸಹ ತಮ್ಮನ್ನು ಏಕವಚನದಲ್ಲಿಯೇ ಸಂಬೋಧಿಸಬೇಕಾಗುತ್ತದೆ - ಎಂದು ಉತ್ತರ ಕೊಟ್ಟನು.

'ಏನ್ರಿ ! ಬಹಳ ಜೋರ್ ಮೇಲೆ ಇದ್ದೀರಿ. ನಾಳೆ ನಿಮ್ಮನ್ನು ಈ ಸ್ಥಳದಿಂದ ಮಲೆನಾಡಿಗೆ ವರ್ಗ ಮಾಡಿಸುತ್ತೇನೆ. ತಿಳಿಯಿತೋ ?'

'ಒಳ್ಳೆಯದು ಸ್ವಾಮಿ ! ಇಲ್ಲಿಗೆ ನಾನು ಬಂದಿರುವುದು ಮೇಷ್ಟರಾಗಲ್ಲ. ಅದು ತಮಗೆ ತಿಳಿಯಬೇಕು. ನಾನು ಕಂದಾಯ ಕಟ್ಟುವ ರೈತ. ವರ್ಷಕ್ಕೆ ಐವತ್ತು ರೂಪಾಯಿ ಕಂದಾಯ ಕಟ್ಟುತ್ತೇನೆ. ನಾನು ಶ್ರೀಮನ್ಮಹಾರಾಜರವರ ಪ್ರಜೆ ; ತಮ್ಮ ಸಂಬಳ ಕೊಡುತ್ತಿರುವ ರೈತ. ನೇಮಕರಾಗಿರುವುದು ನಮ್ಮ ಸೇವೆ ಮಾಡುವುದಕ್ಕೆ, ನಾವು ಧಣಿಗಳು, ನೀವು ಸೇವಕರು. ತಿಳಿಯಿತೋ ? ನನ್ನನ್ನು ವರ್ಗ ಮಾಡಿಸುತ್ತಿರಾ ನೀವು ? ನಿಮ್ಮ ಹಣೆಯಲ್ಲೇ ಬರೆದಿಲ್ಲ. ನಾನು ಇಚ್ಛೆಪಟ್ಟರೆ ನಿಮ್ಮನ್ನು ಒಂದು ವಾರದೊಳಗಾಗಿ ವರ್ಗ ಮಾಡಿಸುತ್ತೇನೆ. ಆಹವಾಲು ಹೇಳಿಕೊಳ್ಳುವುದಕ್ಕೆ ಬಂದ ಬಡ ರೈತನನ್ನು ಪೊಲೀಸ್ ಲಾಕಪ್ಪಿಗೆ ಹಾಕುವ ಈ ದಬ್ಬಾಳಿಕೆ ನಾಳೆ ನಾಳಿದ್ದರಲ್ಲಿ ಸಂಸ್ಥಾನವಾದ್ಯಂತ ಪತ್ರಿಕೆಗಳಲ್ಲಿ ಬರುವುದನ್ನು ನೀವೇ ಓದುತ್ತೀರಿ ! ' ಎಂದು ಆ ಸಿಪಾಯಿ ಮೇಷ್ಟರು ಹೇಳಿ, ಅಲ್ಲಿ ನಿಲ್ಲದೆ ಡೆಪ್ಯುಟಿ ಕಮಿಷನರಿಗೆ ನಮಸ್ಕಾರವನ್ನೂ ಮಾಡದೆ ಹೊರಟೇ ಹೋದನು .

ಮತ್ತೊಬ್ಬ ಪುಂಡು ಉಪಾಧ್ಯಾಯನು ಹಿಂದಿನ ಡಿಸ್ಟ್ರಿಕ್ಟ್ ಇನ್ ಸ್ಪೆಕ್ಟರ ಮೇಲೆ ಕೋರ್ಟುಗಳಲ್ಲಿ ಕೇಸುಗಳನ್ನು ದಾಖಲ್ಮಾಡಿ ಅವರಿಂದ ದಮ್ಮಯ್ಯ ಗುಡ್ಡೆ ಹಾಕಿಸಿಕೊಂಡನು.

ಹೀಗೆ ಕೆಲವರೇನೋ ಪುಂಡರು ಇದ್ದರು. ಅವರು ಆಯಾ ಪ್ರಾಂತಗಳಲ್ಲಿ ಪಾಳೆಯಗಾರರಾಗಿ ಭಯಗ್ರಸ್ತರಾದ ಇತರ ಮೇಷ್ಟ ರುಗಳನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಆಳುತ್ತಿದ್ದರು. ಹಿಂದಿನ ಕೆಲವರು ಇನ್ಸ್ಪೆಕ್ಟರುಗಳು ಅವರ ದೆಶೆಯಿಂದ ಬಹಳ ಭಂಗ ಪಟ್ಟದ್ದೂ ಉಂಟು ; ಕೆಲವರು ಅವರನ್ನೇ ಸ್ನೇಹಿತರನ್ನಾಗಿ ಮಾಡಿಕೊಂಡು, ಅವರ ಮುಖಂಡರ ಇಚ್ಛಾನುಸಾರ ವರ್ಗಗಳನ್ನು ಮಾಡುತ್ತಾ ಪ್ರಮೋಷನುಗಳನ್ನು ಕೊಡಿಸುತ್ತಾ ಇದ್ದುದೂ ಉಂಟು.

ಹೊರಗಿನವರ ಪ್ರಭಾವ ಬೀಳದೇ ಇದ್ದಾಗ ಸಾಮಾನ್ಯವಾಗಿ ರೇ೦ಜಿನಲ್ಲಿ ಶೇಕಡ ಎಪ್ಪತ್ತು ಮಂದಿ ಉಪಾಪಾಧ್ಯಾಯರು ತಂತಮ್ಮ ಕೆಲಸಗಳನ್ನು ಭಯದಿಂದ ಮಾಡಿ ಕೊಂಡು ಹೋಗುತ್ತಿದ್ದರು. ದೇವರು ಕೊಟ್ಟ ಬುದ್ಧಿಯನ್ನು ಉಪಯೋಗಿಸಿ ಪಾಠಗಳನ್ನು ಹೇಳಿಕೊಡುತ್ತಿದ್ದರು. ಒ೦ದು ವೇಳೆ ಟ್ರೈನಿಂಗ್ ಆಗಿದ್ದರೂ ಸಹ ಆ ನಾರ್ಮಲ್ ಸ್ಕೂಲುಗಳಲ್ಲಿ ಕಲಿತದ್ದನ್ನು ಆ ಋಣ ತಮಗೆ ಬೇಡವೆಂದು ಅಲ್ಲಿಯೇ ಗುರುದಕ್ಷಿಣೆ ಕೊಟ್ಟು ಬಿಟ್ಟು ತಮ್ಮ ಹಿಂದಿನ ಪದ್ದತಿಗಳಂತೆಯೇ ಪಾಠ ಮಾಡುತ್ತಿದ್ದರು. ಸುಮಾರು ಶೇಕಡ ಇಪ್ಪತ್ತು ಮಂದಿ ಒಳ್ಳೆಯ ದಕ್ಷರಾದ ಉಪಾಧ್ಯಾಯರು ಇರುತ್ತಿದ್ದರು; ಅವರು ಯಾರಿಂದಲೂ ಹೇಳಿಸಿಕೊಳ್ಳದೆ, ಯಾರ ಕಾವಲೂ ಮೇಲ್ವಿಚಾರಣೆಯೂ ಬೇಕಿಲ್ಲದೆ ತಂತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿಕೊ೦ಡು ಹೋಗುತ್ತಿದ್ದರು.

ಆದ್ದರಿಂದ ಪಾಠ ಶಾಲೆಗಳಿಗೆ ತಕ್ಕ ಕಟ್ಟಡಗಳೂ ಉಪಕರಣಗಳೂ ಇಲ್ಲದೇ ಇರುವುದರ ಜೊತೆಗೆ ಮೇಲೆ ಹೇಳಿದ ನಿರುತ್ಸಾಹಕ ಸನ್ನಿವೇಶಗಳನ್ನೂ ಸೇರ್ಪಡಿಸಿಕೊಂಡು ರೇ೦ಜಿನಲ್ಲಿ ವಿದ್ಯಾಭಿವೃದ್ಧಿಯನ್ನುಂಟು ಮಾಡಬೇಕಾಗಿತ್ತು ; ಉಪಾಧ್ಯಾಯರಲ್ಲಿ ಶಿಸ್ತನ್ನು ಬೆಳಸಬೇಕಾಗಿತ್ತು; ಅವರಲ್ಲಿ ಉತ್ಸಾಹವನ್ನೂ ತನ್ನ ಬಗ್ಗೆ ಪ್ರೇಮವನ್ನೂ ರಂಗಣ್ಣನು ಬೆಳಸಬೇಕಾಗಿತ್ತು. ಮೇಲಿನ ಆಲೋಚನಾತರಂಗಗಳಲ್ಲಿ ಮಗ್ನನಾಗಿ ರಂಗಣ್ಣನು ಹರಪುರದ ಬಂಗಲೆಯಲ್ಲಿ ಮಂಚದ ಮೇಲೆ ಮಲಗಿದ್ದನು. ಸೊಗಸಾದ ಮೆತ್ತನೆಯ ಹಾಸಿಗೆ; ಕಸೂತಿ ಕೆಲಸ ಮಾಡಿ ನೀಲಿ ದಾರದಲ್ಲಿ ಅವನ ಹೆಸರನ್ನು ಚಿತ್ರಿಸಿದ್ದ ಗವುಸುಳ್ಳ ದಿ೦ಬುಗಳು ; ಬ್ರಿಟಿಷ ತಯಾರಿಕೆಯ, ಬೂರ್ನಿಸು, ಶುಭ್ರವಾದ ಸೊಳ್ಳೆಯ ಪರದೆ. ಆ ವಿಲಾಸದ ಭೋಗದ ಶಯ್ಯೆಯಲ್ಲಿ ರಂಗಣ್ಣ ಮಲಗಿದ್ದಾನೆ. ಆ ಕೊಟಡಿಯಲ್ಲಿ ಮೇಜಿನ ಮೇಲೆ ಹಾಸಿದ್ದ ಸ್ವಂತವಾದ ಹಸು ಬಣ್ಣದ ನುಣುಪಾದ ಮುಚ್ಚು ಬನಾತು. ಅದರ ಮೇಲೆ ಕಚೇರಿಯ ಕೆಲವು ಕಾಗದಗಳು, ಪಕ್ಷದ ಸ್ಕೂಲಿನ ಮೇಲೆ ಕೊಳಪಿನ ಕಂಚಿನ ಕೂಜ, ಲೋಟ. ನೆಲಕ್ಕೆ ಹಾಕಿದ್ದ ಜಮಖಾನದ ಒಂದು ಕಡೆ ತಿಂಡಿಗಳು ತುಂಬಿದ್ದ ಚಿಕ್ಕ ಬೆತ್ತದ ನೆಟ್ಟಗೆ ; ದೂರದಲ್ಲಿ ಅದರ ಮೇಲೆ ಚೆನ್ನಾಗಿ ಮಡಿಸಿಟ್ಟಿದ್ದ ಕಾಲು, ಟರ್ಕಿ ಟವಲ್ಲುಗಳು ಮತ್ತು ಪಂಚೆಗಳು. ಅಂಗಿಯ ನಿಲುಕಟ್ಟಿನ ಮೇಲೆ, ಅವನ ಸೂಟುಗಳು ಮತ್ತು ರುಮಾಲು. ಆ ಸರ್ಕೀಟು ಜೀವನದ ಸೊಗಸನ್ನು ನೋಡಿ ದೇವತೆಗಳು ಭೂಮಿಯಲ್ಲಿ ಅವತರಿಸಲು ತವಕ ಪಡುತ್ತಿದ್ದರೆಂದಮೇಲೆ ಹೆಚ್ಚಾಗಿ ಹೇಳತಕ್ಕದ್ದೆನು ! ಬೇರೆ ಇಲಾಖೆಯವರು ಬೆರಗಾಗಿ ಹೋಗಿದ್ದರು, ಆ ದಿನ ಬೆಳಗ್ಗೆ ರಂಗಣ್ಣ ಬಹಳ ಸುತ್ತಾಡಿಕೊಂಡು ಬಂದಿದ್ದುದರಿಂದ ಊಟ ಮಾಡಿದ ಮೇಲೆ ಹೆಚ್ಚು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಿತ್ತು.

ಸಾಯಂಕಾಲ ನಾಲ್ಕು ಗಂಟೆಗೆ ಹಾಸಿಗೆಯಿಂದೆದ್ದು ಮುಖವನ್ನು ತೊಳೆದುಕೊಂಡು ಕೊಟಡಿಗೆ ರಂಗಣ್ಣನು ಬಂದನು. ಗೋಪಾಲ ತಟ್ಟೆಯಲ್ಲಿ ಸಜ್ಜಿಗೆ, ಲೋಟದಲ್ಲಿ ಕಾಫಿ, ನಾಲ್ಕು ರಸ ಬಾಳೆ ಹಣ್ಣುಗಳನ್ನು ತಂದಿಟ್ಟನು. ಆ ಹೊತ್ತಿಗೆ ಶಂಕರಪ್ಪ ತಲೆ ಹಾಕಿ, ' ಆವಲಹಳ್ಳಿಯ ದೊಡ್ಡ ಬೋರೇಗೌಡರು ಬಂದಿದ್ದಾರೆ' ಎಂದು ವರ್ತಮಾನವನ್ನು ಕೊಟ್ಟನು. ಒಂದು ಕುರ್ಚಿ ತಂದು ಹಾಕಿ, ಶಂಕರಪ್ಪ : ಗೋಪಾಲ ! ಗೌಡರಿಗೂ ಏನಾದರೂ ತ೦ದುಕೊಡು' ಎಂದು ಹೇಳಿ ರಂಗಣ್ಣನೇ ಎದ್ದು ಹೋಗಿ, ' ಬರಬೇಕು, ಗೌಡರು. ಕ್ಷಮಿಸಬೇಕು ; ಬಹಳ ಹೊತ್ತಿನಿಂದ ಕಾದಿದ್ದಿರೋ ಏನೋ ? ಎಂದು ಹಸ್ತಲಾಘವಕೊಟ್ಟು ಅವರನ್ನು ಸ್ವಾಗತಿಸಿ ಒಳಕ್ಕೆ ಕರೆದು ಕೊಂಡು ಬಂದನು. ದೊಡ್ಡ ಬೋರೇಗೌಡರು ಭಾರಿ ಒಕ್ಕಲಿಗರು. ವರ್ಷಕ್ಕೆ ಒಂದು ಸಾವಿರ ರೂಪಾಯಿಗಳ ಮೇಲೆ ಕಂದಾಯ ಕಟ್ಟುವ ಗಟ್ಟಿ ಕುಳ. ಆದರೆ ಅವರು ರಾಜಕೀಯದಲ್ಲಿ ಪ್ರವೇಶ ಮಾಡಿದವರಲ್ಲ ; ಅವರಿಗೆ ಪ್ರಜಾಪ್ರತಿನಿಧಿಸಭೆ ಮೊದಲಾದುವು ಬೇಕಾಗಿರಲಿಲ್ಲ. ತಮ್ಮ ಹಳ್ಳಿಯಲ್ಲಿ ಐದು ಸಾವಿರ ರುಪಾಯಿ ಖರ್ಚು ಮಾಡಿ ಪ್ರಾಥಮಿಕ ಪಾಠಶಾಲೆಗೆ ಒಳ್ಳೆಯ ಕಟ್ಟಡವನ್ನು ಕಟ್ಟಿಸಿಕೊಟ್ಟಿದ್ದರು. ಇತರ ವಿಧಗಳಲ್ಲಿಯೂ ಸಾರ್ವಜನಿಕ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದರು. ಗೋಪಾಲನು ಗೌಡರಿಗೂ ಉಪಾಹಾರವನ್ನು ತಂದಿಟ್ಟ ಮೇಲೆ ರಂಗಣ್ಣ ತನ್ನ ತಿಂಡಿಯ ಪೆಟ್ಟಿಗೆಯನ್ನು ತೆರೆದನು. ಅವನ ಹೆಂಡತಿ ಸರ್ಕೀಟು ಕಾಲದಲ್ಲಿ ಗಂಡನಿಗೆ ಕೈಗಾವಲು ತಿಂಡಿ ಇರಲೆಂದು ಮಾಡಿ ಕೊಟ್ಟಿದ್ದ ಶೇಂಗೊಳಲು, ಚಕ್ಕುಲಿ ಮತ್ತು ಬೇಸಿನ್ ಲಾಡುಗಳು ಅದರಲ್ಲಿದ್ದುವು. ಅವುಗಳಲ್ಲಿ ಕೆಲವನ್ನು ತೆಗೆದು ರಂಗಣ್ಣ ತಟ್ಟೆ ಯಲ್ಲಿಟ್ಟನು. ಗೌಡರು ಸಂತೋಷ ಪಟ್ಟ ದ್ದು ಒಂದೇ ಅಲ್ಲ; ಏನು ಸ್ವಾಮಿ ! ದೊಡ್ಡ ಸಾಹೇಬರಿಗೂ ಇ೦ಥ ಉಪಾಹಾರ ದೊರೆಯುವುದಿಲ್ಲವಲ್ಲ! ಪುಣ್ಯವಂತರು ಸ್ವಾಮಿ ತಾವು!' ಎಂದು ಮೆಚ್ಚಿಕೆಯ ಮಾತುಗಳನಾಡುತ್ತ ತಟ್ಟೆಯಲ್ಲಿದ್ದುದನ್ನು ತೆಗೆದುಕೊಂಡರು.

'ಗೌಡರೇ ? ನನಗೆ ಭತ್ಯದ ಹಣವನ್ನು ಸರ್ಕಾದವರು ಏನು ಕೊಡುತ್ತಾರೋ ಅದರ ಮೇಲೆ ಹತ್ತು ರೂಪಾಯಿಗಳನ್ನು ನಾನು ಖರ್ಚು ಮಾಡುತ್ತೇನೆ. ಭತ್ಯದ ಹಣದಲ್ಲಿ ಉಳಿತಾಯ ಮಾಡ ಹೋಗಿ ಹೊಟ್ಟೆಯನ್ನು ಒಣಗಿಸುವುದಿಲ್ಲ. ನಾನೂ ಹೊಟ್ಟೆ ತುಂಬ ತಿನ್ನುತ್ತೇನೆ ; ನಿಮ್ಮಂಥ ಸ್ನೇಹಿತರು ಬಂದರೆ ಯಧಾಶಕ್ತಿ ಕೊಡುತ್ತೇನೆ. ನನ್ನ ಸರ್ಕೀಟು ಜೀವನದ ಮರ್ಮ ಇದು. ಬೇರೆ ಏನೂ ಇಲ್ಲ.'

'ಹೌದು ಸ್ವಾಮಿ! ತಾವು ಹೇಳುವುದು ಸರಿ, ಹೊರಗೆ ಸುತ್ತಾಡುವ ಮನುಷ್ಯರು ಪುಷ್ಟಿಯಾಗಿ ಊಟಾ ಮಾಡಬೇಕು.'

'ನಾನು ಊಟ ಮಾಡುವಾಗಲೆಲ್ಲ ಬಡ ಉಪಾಧ್ಯಾಯಯರ ನೆನಪು ನನಗೆ ಬರುತ್ತದೆ ಗೌಡರೆ !'

'ಹಾದು ಸ್ವಾಮಿ! ಉಪಾಧ್ಯಾಯರಿಗೆ ಸಂಬಳ ಸಾಲದು. ಅದರಲ್ಲೂ ಆ ಗ್ರಾಂಟು ಸ್ಕೂಲ್ ಮೇಷ್ಟ ರುಗಳ ಗೋಳು ಹೇಳೋಕ್ಕಾಗೋದಿಲ್ಲ. ಏನು ಸ್ವಾಮಿ ! ಏಳು ರುಪಾಯಿ, ಎಂಟು ರುಪಾಯಿಗೆ ಜೀವನ ಹೇಗೆ ಮಾಡೋದು ? ಅವುಗಳನ್ನೆಲ್ಲ ಸರ್ಕಾರಿ ಸ್ಕೂಲುಗಳನ್ನಾಗಿ ಮಾಡಿಬಿಡಿ ಸ್ವಾಮಿ.'

'ಸರ್ಕಾರದಲ್ಲಿ ಹಣ ಇಲ್ಲ ಅನ್ನುತ್ತಾರೆ. ಮಾಡುವ ಖರ್ಚುಗಳನ್ನೇನೋ ಬೇರೆ ಕಡೆಗಳಲ್ಲಿ ಮಾಡಿ ಬಿಡುತ್ತಾರೆ ದೇಶಕ್ಕೆ ಇರುವುದೇ ವಿದ್ಯೆ, ಅದೇ ಸಂಪತ್ತು. ಆ ಉಪಾಧ್ಯಾಯರ ಸ್ಥಿತಿ, ಆ ವಿದ್ಯಾಭ್ಯಾಸದ ಸ್ಥಿತಿ ಜ್ಞಾಪಕಕ್ಕೆ ಬಂದುಬಿಟ್ಟರೆ ಬಹಳ ದುಃಖವಾಗುತ್ತದೆ.'

'ನಾವೇನು ಮಾಡುವುದು ಸ್ವಾಮಿ! ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಮೇಲಿನವರೋ ಬರಿಯ ಥಳಕು ಬಳಕು. ಮೊಟಾರುಗಳಲ್ಲಿ ಬಂದವರು ಬಂದದ್ದೇ, ಹೋದವರು ಹೋದದ್ದೆ ! ನಮ್ಮ ಊರಿನ ಕೆರೆ ಆರು ವರ್ಷಗಳಿಂದ ನಾದುರಸ್ತಿನಲ್ಲಿದೆ. ಎಷ್ಟು ಅರ್ಜಿ ಕೊಟ್ಟರೂ ಕೇಳುವವರೇ ಇಲ್ಲ '

'ಹೀಗೆ ! ನಡೆಯಲಿ ದರ್ಬಾರು. ಏನು ಗೌಡರು ಇಷ್ಟು ದೂರ ಬಂದದ್ದು ?'

'ಇಲ್ಲೇ ನಮ್ಮ ನೆಂಟರನ್ನ ನೋಡೋಣ ಅಂತ ಬಂದಿದ್ದೆ. ಸ್ವಾಮಿ ಯವರು ಸರ್ಕಿಟು ಬಂದಿದ್ದೀರಿ ಎನ್ನುವುದು ತಿಳಿಯಿತು. ಕಂಡು ಹೋಗೋಣ, ನಮ್ಮ ಹಳ್ಳಿಗೆ ಯಾವಾಗ ದಯಮಾಡಿಸ್ತಿರೋ ಕೇಳಿ ಕೊಂಡು ಹೋಗೋಣ ಅಂತ ಬಂದೆ.' 'ಸ೦ತೋಷ ಗೌಡರೇ ! ನಾವೇನೂ ಇತರ ಇಲಾಖೆಗಳ ಅಧಿಕಾರಿಗಳಂತೆ ಪ್ರಭಾವಶಾಲಿಗಳಲ್ಲ. ವಿದ್ಯಾಭ್ಯಾಸದ ಇಲಾಖೆಯ ನೌಕರರನ್ನು ಆದರಿಸುವವರು ಯಾರಿದ್ದಾರೆ? ಅಪರೂಪವಾಗಿ ನಿಮ್ಮಂಥ ದೊಡ್ಡ ಮನಸ್ಸಿನ ದೊಡ್ಡ ಗೌಡರು ಅಷ್ಟೇ.'

'ಸ್ವಾಮಿ, ತಾವು ಉಪಾಧ್ಯಾಯರಿಗೆಲ್ಲ ತಿಳಿವಳಿಕೆ ಕೊಟ್ಟು ಬಹಳ ಚೆನ್ನಾಗಿ ಪಾಠ ಶಾಲೆಗಳನ್ನು ಅಭಿವೃದ್ಧಿ ಸ್ಥಿತಿಗೆ ತರುತ್ತಿದ್ದೀರಿ ಎಂದು ಎಲ್ಲರೂ ಹೊಗಳುತ್ತಾರೆ.'

'ಆ ಹೊಗಳಿಕೆ ನನಗೆ ಬೇಡ. ಈ ದಿನ ಹೊಗಳಿಕೆ ನಾಳೆ ತೆಗಳಿಕೆ. ಸಾರ್ವಜನಿಕ ಜೀವನದಲ್ಲಿ ಇದೆಲ್ಲ ರೂಢಿ. ನಿಮ್ಮ ಹಳ್ಳಿಗೆ ಬರಬೇಕೆಂದು ಹೇಳುತ್ತಿದ್ದೀರಿ. ನನ್ನ ಮಾತನ್ನು ನೀವು ನಡಸಿಕೊಡುವ ಭರವಸೆ ಕೊಟ್ಟರೆ ಬರುತ್ತೇನೆ' ಎಂದು ಹೇಳಿ ರಂಗಣ್ಣ ನಕ್ಕನು.

'ಅದೇನು ಸ್ವಾಮಿ ನಾನು ಮಾಡಬೇಕಾದ್ದು ? '

'ಗೌಡರೇ ! ಈಗ ನೋಡಿ, ನಮ್ಮ ಉಪಾಧ್ಯಾಯರ ಸಂಘಗಳು ಅಲ್ಲಲ್ಲಿ ಸಭೆ ಸೇರುತ್ತವೆ. ಉಪಾಧ್ಯಾಯರು ಸರಿಯಾಗಿ ಬರುವುದಿಲ್ಲ. ಒಂದು ಗಂಟೆಯ ಕಾಲ ಅಥವಾ ಒಂದೂವರೆ ಗಂಟೆಯ ಕಾಲ ಏನೋ ಭಾಷಣ, ತಪ್ಪು ತಪ್ಪಾಗಿ ಒಂದು ಮಾದರಿ ಪಾಠ, ಸ್ವಲ್ಪ ಸಂಗೀತ ಇಷ್ಟನ್ನು ಮಾಡಿ ಊರುಗಳಿಗೆ ಹೊರಟುಹೋಗುತ್ತಾರೆ. ಪಾಠಶಾಲೆಗಳಲ್ಲಿ ನೋಡಿದರೆ ಟ್ರೈನಿಂಗ್ ಆದ ಉಪಾಧ್ಯಾಯ ಯರ ಸಂಖ್ಯೆ ಕಡಮೆ ; ಆಗಿದ್ದವರು ಎಲ್ಲವನ್ನೂ ಮರೆತುಕೊಂಡಿದ್ದಾರೆ. ಈ ಸಂಘದ ಸಭೆಗೆ ಇಲ್ಲಿ ನಿಜವಾಗಿಯೂ ಅವರಿಗೆ ಉಪಕಾರವಾಗುವ ಕೆಲಸ ನಡೆಯಬೇಕು. ಅದನ್ನು ಬಹಳ ದಿನಗಳಿಂದ ಆಲೋಚನೆ ಮಾಡುತ್ತಿದ್ದೇನೆ. ನಿಮಗೆ ದೇವರು ಕೃಪೆ ತೋರಿದ್ದಾನೆ ; ನೆಮ್ಮದಿ ಕುಳ ನೀವು. ನೀವು ಬಡ ಮೇಷ್ಟ ರುಗಳ ಮೇಲೆ ಕೃಪೆ ತೋರಿ ಒಪ್ಪತ್ತು ಅವರಿಗೆ ಊಟ ಹಾಕುವ ಏರ್ಪಾಟು ಮಾಡಿದರೆ ಆ ಸಭೆಯಲ್ಲಿ ಏನು ಕೆಲಸ ಮಾಡಬಹುದೆಂಬುದನ್ನು ನಾನು ತೋರಿಸುತ್ತೇನೆ. ವರ್ಷಕ್ಕೆ ಒಂದು ದಿನ, ಒಪ್ಪೊತ್ತು, ಮೇಷ್ಟರಿಗೆ ಅನ್ನ ಹಾಕಬೇಕು, ಅಷ್ಟೇ ನನ್ನ ಕೋರಿಕೆ'

'ಎಷ್ಟು ಮಂದಿ ಬಂದಾರು ಸ್ವಾಮಿ? ಇನ್ನೂರು ಜನ ಬಂದಾರಾ??

'ಎಲ್ಲಿ ಬ೦ತು ! ಈ ಪ್ರಾಂತದ ಮೇಷ್ಟರುಗಳು ನಲವತ್ತು ಜನ, ಮಿಡಲ್ ಸ್ಕೂಲಿನವರು ಹತ್ತು ಜನ- ಒಟ್ಟು ಐವತ್ತು ಜನ.

'ಇದೇನು ಹೆಚ್ಚು ಸ್ವಾಮಿ ! ಭೇಷಕ್ ಏರ್ಪಾಟು ಮಾಡುತ್ತೇನೆ. ಸಂಘದ ಸಭೆ ನಮ್ಮ ಊರಿನಲ್ಲಿ ಸೇರಿಸಿ ಸ್ವಾಮಿ, ನೀವೇನೂ ಯೋಚನೆ ಮಾಡಬೇಡಿ.'

'ಇದನ್ನು ನಿಮ್ಮಲ್ಲಿ ಪ್ರಸ್ತಾಪ ಮಾಡಬೇಕು ಎಂದು ಬಹಳ ದಿನಗಳಿ೦ದ ಯೋ ಚಿಸುತ್ತಿದ್ದೆ. ಈ ದಿನ ನೀವು ಇಲ್ಲಿಗೆ ಬಂದದ್ದು ಅನುಕೂಲವಾಯಿತು.

'ಆಗಲಿ ಸ್ವಾಮಿ. ಭರ್ಜರಿ ಏರ್ಪಾಟು ಮಾಡಿಸುತ್ತೇನೆ. ಇನ್ನೊಂದು ವಾರ ಬಿಟ್ಟು ಕೊಂಡುಸಭೆ ಸೇರಿಸುತ್ತೀರಾ ??

'ಹೌದು. ನಿಮಗೆ ಬಹಳ ಕೃತಜ್ಞನಾಗಿದ್ದೇನೆ ?

'ಆಯ್ಯೋ ಸ್ವಾಮಿ ! ಇದೇನು ? ನಮ್ಮ ಮಕ್ಕಳು, ನಮ್ಮ ಸ್ಕೂಲು ಉದ್ಧಾರವಾಗುವುದಕ್ಕೆ ನೀವು ಹೇಳಿದ್ದೀರಿ. ನಿಮ್ಮ ಹೊಟ್ಟೆಗೇನಲ್ಲವಲ್ಲ.'

ಹೀಗೆ ಮಾತುಕತೆಗಳು ಮುಗಿದುವು, ಸಾಯಂಕಾಲ ಗೌಡರೂ ರಂಗಣ್ಣನೂ ಗಾಳಿ ಸೇವನೆಗೆ ಹೊರಟರು. ಹಿಂದಿರುಗಿ ಬರುವಾಗ ಗೌಡರು ತಮ್ಮ ನೆಂಟರ ಮನೆಗೆ ರಂಗಣ್ಣನನ್ನು ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. ರಾತ್ರಿ ಎಂಟು ಗಂಟೆಗೆ ರಂಗಣ್ಣ ಬಂಗಲೆಗೆ ಹಿಂದಿರುಗಿದನು. ಆ ಸಾಯಂಕಾಲ ಅವನ ಮನಸ್ಸಿನಲ್ಲಿ ಬಹಳ ಉತ್ಸಾಹ ಸಂತೋಷಗಳು ತುಂಬಿದ್ದುವು. ಮೊದಲು ಒಂದು ಕಡೆ ಪ್ರಾರಂಭವಾಗಲಿ. ಆಮೇಲೆ ರೇ೦ಜಿನಲ್ಲೆಲ್ಲ ಇಂಧ ಏರ್ಪಾಟುಗಳನ್ನು ಮಾಡಿ ಬಿಡುತ್ತೇನೆ.

ತಿಂಗಳಿಗೊಂದು ದಿನವಾದರೂ ಉಪಾಧ್ಯಾಯರು ಕಾಷ್ಠ ವ್ಯಸನಗಳನ್ನು ಮರೆತು ಸಂತೋಷವಾಗಿರಲಿ ; ಉಪಾಧ್ಯಾಯ ಸಂಘಗಳ ಸಭೆಗಳು ನಾರ್ಮಲ್ ಸ್ಕೂಲಿನ ಪ್ರತಿರೂಪಗಳಾಗಿ ಮೇಷ್ಟರುಗಳಿಗೆ ತಿಳಿವಳಿಕೆ ಹೆಚ್ಚಲಿ ; ಉಪಾಧ್ಯಾಯರ ಮತ್ತು ಗ್ರಾಮಸ್ಥರ ಪರಸ್ಪರ ಸೌಹಾರ್ದ ಸಹಕಾರಗಳು ಬೆಳೆಯಲಿ' - ಎಂದು ಹಾರೈಸುತ್ತ ಊಟಕ್ಕೆ ಕುಳಿತನು.

ಪ್ರಕರಣ ೮

ಮೇಷ್ಟ್ರು ಮುನಿಸಾಮಿ

ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ' ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ. ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ ಮಾಡಿಕೊಂಡು ಮಧ್ಯಾಹ್ನದ ಹೊತ್ತಿಗೆ ಊರನ್ನು ಬಂದು ಸೇರುತ್ತೇನೆ ' ಎಂದು ಹೇಳಿ ಬೈಸ್ಕಲ್ ಹತ್ತಿಕೊಂಡು ಹೊರಟನು. ದಾರಿಯಲ್ಲಿ ಎರಡು ಪಾಠಶಾಲೆಗಳನ್ನು ನೋಡಿದಮೇಲೆ ಸ್ವಲ್ಪ ಅಡ್ಡದಾರಿ ತಿರುಗಿ ತೀರ ಒಳನಾಡಿನ ಬೈರಮಂಗಲದ ಪಾಠಶಾಲೆಯನ್ನು ನೋಡೋಣವೆಂಬ ಒಂದು ಹುಚ್ಚು ಆಲೋಚನೆ ಹುಟ್ಟಿಕೊಂಡಿತು. ಬೈಸ್ಕಲ್ ತಿರುಗಿಸಿ ಕಾಲ ರಸ್ತೆಯಲ್ಲಿ ಹೊರಟನು. ಆದರೆ ದಾರಿ ಬಹಳ ಒರಟಾಗಿದ್ದಿತು. ಹಳ್ಳಕೊಳ್ಳಗಳ ಜೊತೆಗೆ ಕಲ್ಲುಗಳು ಹೆಚ್ಚಾಗಿದ್ದುವು. ಆದ್ದರಿಂದ ಅಲ್ಲಲ್ಲಿ ಬೈಸ್ಕಲ್ಲಿಂದ ಇಳಿದಿಳಿದು ಅದನ್ನು ತಳ್ಳಿಕೊಂಡು ಹೋಗಬೇಕಾಗಿತ್ತು. ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗದೆ ಇದೇನು ಕಷ್ಟವನ್ನು ತಲೆಗೆ ಕಟ್ಟಿಕೊಂಡೆ? ಎಂದು ಪೇಚಾಡುತ್ತ, ಮುಖದಿಂದ ಇಳಿಯುತ್ತಿದ್ದ ಬೆವರನ್ನು ಒರಸಿಕೊಳ್ಳುತ್ತ ಹೋಗುತ್ತಿದ್ದನು. ರಸ್ತೆ ಸ್ವಲ್ಪ ಏರಾಗಿತ್ತು. ಆಗ ಎದುರು ಕಡೆಯಿಂದ ಒಬ್ಬ ಹಳ್ಳಿಯ ಮುದುಕನು - ಅರುವತ್ತು ವರ್ಷ ವಯಸ್ಸು ಮೀರಿದವನು - ನಿಧಾನವಾಗಿ ನಡೆದು ಬರುತ್ತಿದ್ದನು. ಆ ಗೌಡ ಹತ್ತಿರಕ್ಕೆ ಬರುತ್ತಲೂ, ‘ ಯಾವೂರ್ ಸೋಮಿ ?’ ಎಂದು ಕೇಳಿದನು.

‘ನಮ್ಮೂರು ಜನಾರ್ದನಪುರ.’

‘ಮತ್ತೆ ಈ ಕಾಡ ದಾರೀಲಿ ಬರ್ತಿವ್ರಿ.’

‘ಇಲ್ಲಿ ಸ್ಕೂಲ್ ನೋಡೋಣ ಎಂದು ಹೊರಟಿದ್ದೇನೆ.’

'ಇಸ್ಕೋಲ್ ಇನ್ಚ್ ಪೆಟ್ರಾ ! ಸರಿ ಸೋಮಿ. ಗಾಡಿ ಅತ್ತಿಕೊಂಡು ತುಳೀತಿದ್ರೆ ಅಂಡು ಉರಿಯಾಕಿಲ್ವಾ? ಏನು ಸೋಮಿ ??

ರಂಗಣ್ಣನಿಗೆ ನಗು ಬಂತು. ಕಾವ್ಯಗಳಲ್ಲಿ ಹೇಳುವಂತೆ ಸಂಸ್ಕೃತ ಪದ ಉಪಯೋಗಿಸಿದರೆ ಗಂಭೀರವಾಗಿರುತ್ತದೆ, ಮೋಹಕವಾಗಿರುತ್ತದೆ. ಹಳ್ಳಿಯವನು ಕನ್ನಡದ ಮಾತನ್ನೇ ಆಡಿದನು !

'ಉರೀತೈತಪ್ಪಾ ! ಏನು ಮಾಡೋದು ಹೇಳು ಮೇಷ್ಟು ಸರಿಯಾಗಿ ಬರುತ್ತಾರೋ ಇಲ್ಲವೋ, ಪಾಠ ಹೇಗೆ ಮಾಡ್ತಾರೋ ಏನೋ, ನೋಡ ಬೇಕೋ ಬೇಡವೋ ? ನಮ್ಮ ಕೆಲಸ ನಾವು ಮಾಡ ಬೇಡವೇ??

'ಅದ್ಯಾ ಕ್ಸೋಮಿ ನೀವು ಆ೦ಡುರಿಸಿಕೊಂಡು ಅಂಗೆಲ್ಲ ಸುತ್ತಾಡೋದು ? ಮೇಷ್ಟೆನು ಕಳ್ರಾ ? ಕೆಲಸ ಮಾಡ್ತವ್ರೆ, ನಮ್ಮೂರಾಗೂ ಒಬ್ಬ ಮೇಷ್ಟು ಆ, ಬೆಳಗಾನ ಆರು ಗಂಟೆಗೆಲ್ಲ ಬಾಕಲ್ ತಕ್ಕೊಂಡು ಕೆಲ್ಸ ಮಾಡಿ.”

ರಂಗಣ್ಣನಿಗೆ ಏನು ಉತ್ತರ ಕೊಡಬೇಕೆಂಬುದು ಗೊತ್ತಾಗಲಿಲ್ಲ. 'ಮೇಷ್ಟು ಸ್ಕೂಲಿನಲ್ಲಿದ್ದಾರೋ ?” ಎಂದು ಕೇಳಿದನು.

'ಹುಂ ಸೋಮಿ ಅವ್ರೆ. ನಡಕೊಂಡೇ ಹೋಗಿ ಸೋಮಿ ; ಬೈಸ್ಕೂಲ್ ಹೆಚ್ಚಾಗಿ ತುಳಿದ್ರೆ ದೇಹಕ್ಕೆ ಉಷ್ಣಾ ಆಗ್ತೈತೆ, ಮೈಗೊಳ್ಳೇದಲ್ಲ.' ಎಂದು ಹೇಳಿ ಗೌಡನು ಮುಂದಕ್ಕೆ ಹೊರಟನು.

ದಾರಿ ಚೆನ್ನಾಗಿಲ್ಲದ್ದರಿಂದ ರಂಗಣ್ಣ ನಡೆದುಕೊಂಡೇ ಹೋಗಬೇಕಾಯಿತು, ಆ ಮುದುಕ ಹೇಳಿದ ಬುದ್ಧಿವಾದ ರಂಗಣ್ಣನಿಗೆ ಕಣ್ಣು ಬಿಡಿಸಿತು, " ಹಳ್ಳಿಯ ಜನ ಅನ್ನುತ್ತೇವೆ. ಅವರಲ್ಲಿ ಎಷ್ಟು ವಿವೇಕವಿದೆ ? ಮೇಷ್ಟೆನು ಕಳ್ರಾ? ಎಂದು ನನಗೆ ಕೇಳಿದನಲ್ಲಾ. ನಮ್ಮ ಮನಸ್ಸಿನಲ್ಲಿರೋದು ಅದೇ ಭಾವನೆ ತಾನೆ ? ಮನಕ್ಕೆ ಮನವೇ ಸಾಕ್ಷಿ. ಉಪಾಧ್ಯಾಯರನ್ನು ಗೌರವದಿಂದ ಕಾಣಬೇಕು ಎಂದು ಉಪದೇಶ ಮಾಡುವ ನಾನು ಕಳ್ಳತನದ ಪತ್ತೆಗೆ ಹೊರಟ ಪೊಲೀಸಿನವನಾದೆ. ಇದು ನೀಚ ಕೆಲಸ, ಆದರೆ ಕೆಲವರು ಕಳ್ಳಾಟ ಆಡುತ್ತಾರಲ್ಲ, ಅದನ್ನು ತಪ್ಪಿಸುವುದು ಹೇಗೆ ? ಏನಾದರೂ ಉಪಾಯ ಮಾಡಬೇಕಲ್ಲ~ ಎಂದು ಆಲೋಚನೆ ಮಾಡುತ್ತ ಆ ಬೋರೆಯನ್ನು ಇಳಿದು ನಾಲ್ಕು ಫರ್ಲಾಂಗು ದೂರ ಹೋದನು. ಎದುರಿಗೆ ಎರಡು ಫರ್ಲಾಂಗು ದೂರದಲ್ಲಿ ಸ್ಕೂಲು ಕಟ್ಟಡ ಕ೦ಡಿತು. ಮುಂದುಗಡೆ ಹುಡುಗರು ಬಿಸಿಲಿನಲ್ಲಿ ಆಟವಾಡುತ್ತಿದ್ದರು. ಬೆಳಗಿನ ವಿರಾಮ ಕಾಲವಾದ್ದರಿಂದ ಆ ಹುಡುಗರು ಹೊರಕ್ಕೆ ಬಂದಿದ್ದರು. ಇನ್ನು ಒಂದು ಫರ್ಲಾಂಗು ಹೋದಾಗ ಸ್ಕೂಲ್ ಮುಂದಿದ್ದ ಹುಡುಗರು ಕೆಲವರು ಇನ್ಸ್ಪೆಕ್ಟರ್ ಬರುವುದನ್ನು ನೋಡಿ ಸ್ಕೂಲೊಳಕ್ಕೆ ಓಡಿಹೋಗಿ ಮೇಷ್ಟರಿಗೆ ವರ್ತಮಾನ ಕೊಟ್ಟು ಬಿಟ್ಟರು. ಕೂಡಲೇ ಸ್ಕೂಲಿನ ಗಂಟೆಯನ್ನು ಬಾರಿಸಿದ ಸದ್ದು ಕೇಳಿ ಬಂತು. ಹೊರಗಿದ್ದ ಮಕ್ಕಳೆಲ್ಲ ಬುಡು ಬುಡನೆ ಒಳಕ್ಕೆ ಹೊರಟು ಹೋದರು. ರಂಗಣ್ಣ ಕಟ್ಟಡದ ಸಮೀಪಕ್ಕೆ ಬರುವ ಹೊತ್ತಿಗೆ ಒಳಗಿನಿಂದ ನಾಲ್ಕು ಜನ ಹಳ್ಳಿಯವರು ತಲೆಗೆ ಮುಸುಕಿಟ್ಟು ಕೊಂಡು ಹೊರಕ್ಕೆ ಬಂದವರು ಓಡಿ ಹೋದರೆಂದೇ ಹೇಳಬೇಕು; ಅಷ್ಟು ವೇಗವಾಗಿ ಹೊರಟುಹೋದರು. ತಾನು ಬರುವುದನ್ನು ತಿಳಿದು ಪಲಾಯನ ಮಾಡಿದರೆಂದು ರಂಗಣ್ಣ ತಿಳಿದುಕೊಂಡು ಪಾಠಶಾಲೆಯೊಳಕ್ಕೆ ಪ್ರವೇಶಿಸಿದನು. ಮಕ್ಕಳು ಮೌನವಾಗಿ ಎದ್ದು ನಿಂತು ನಮಸ್ಕಾರ ಮಾಡಿ ಸ್ವಾಗತಿಸಿದರು. ಮೇಷ್ಟು ಸಹ ವಂದಿಸಿ ದೂರದಲ್ಲಿ ನಿಂತುಕೊಂಡನು. ರಂಗಣ್ಣನು ಮಕ್ಕಳನ್ನು ಕುಳಿತುಕೊಳ್ಳ ಹೇಳಿ ಗಡಿಯಾರವನ್ನು ನೋಡಿದನು. ಇನ್ನೂ ಆಟದ ವಿರಾಮ ಹತ್ತು ನಿಮಿಷಗಳಿದ್ದು ವು. ಅಷ್ಟರಲ್ಲಿ ಮಕ್ಕಳಿಲ್ಲ ಆಟ ಬಿಟ್ಟು ಒಳಕ್ಕೆ ಬಂದರಲ್ಲ ಎಂದು ಯೋಚಿಸಿ ಪುನಃ ಅವರನ್ನೆಲ್ಲ ಆಟಕ್ಕೆ ಕಳಿಸಿದನು. ಬಳಿಕ ಕುರ್ಚಿಯ ಮೇಲೆ ಕುಳಿತು ಮೇಜಿನ ಅರೆಯನ್ನು ಎಳೆಯಲು ಪ್ರಯತ್ನ ಪಟ್ಟಾಗ ಆ ಮೇಜು ತಿರುಗಮುರುಗಾಗಿತ್ತು ! ಸೆಳೆಖಾನೆ ಆಚೆಯ ಬದಿಗಿತ್ತು ! ಮೇಷ್ಟೆ ? ಹಾಜರಿ ಕಿಜಿಸ್ಟರ್ ಇತ್ತ ಕೊಡಿ. ಇದೇಕ ಮೇಜನ್ನು ತಿರುಗಿಸಿ ಹಾಕಿದ್ದೀರಿ? ಸರಿಯಾಗಿ ಹಾಕಿ.?

“ಸ್ವಾಮಿ ! ಸೆಳೆಖಾನೆ ಆಚೆ ಕಡೆಗೆ ಬಂದರೆ ಸ್ವಾಮಿಯವರಿಗೆ ತೊಂದರೆ, ಕುರ್ಚಿಯನ್ನು ಹಿಂದಕ್ಕೆ ಎಳೆದುಕೊಳ್ಳಬೇಕಾಗುತ್ತ, ಸ್ವಾಮಿ ಯವರಿಗೆ ನಾನೇ ತೆಗೆದುಕೊಡ್ತೇನೆ' ಎಂದು ಹೇಳಿ ಮೇಷ್ಟು ಒಳಗಿದ್ದ ಹಾಜರಿ ರಿಜಿಸ್ಟರನ್ನು ತೆಗೆದು ಮೇಜಿನ ಮೇಲಿಟ್ಟನು.

ರಂಗಣ್ಣ ಅದನ್ನು ತನಿಖೆ ಮಾಡಿದಾಗ ಹಾಜರಿಯಲ್ಲಿ ಗುರ್ತಿಸಿತ್ತು. ಸರ್ಕ್ಯುಲರಿನಂತೆ ಮೇಷ್ಟು ನಡೆದು ಕೊಂಡಿದ್ದನು. ರಂಗಣ್ಣನಿಗೆ ಸಂತೋಷ ವಾಗಿ ಮೇಷ್ಟರ ಮುಖವನ್ನು ನೋಡಿ ಮುಗುಳುನಗೆ ಸೂಸಿದನು. ಪ್ರಸನ್ನರಾಗಿದ್ದ ಇನ್ಸ್ಪೆಕ್ಟರನ್ನು ನೋಡಿ ಮೇಷ್ಟ್ರು ತನ್ನ ಗಡ್ಡವನ್ನು ಸವರಿ ಕೊಳ್ಳುತ್ತ ' ' ಸ್ವಾಮಿಯವರಿಗೆ ! ಸ್ವಲ್ಪ, ಸ್ವಾಮಿಯವರಿಗೆ !' ಎಂದನು. ರಂಗಣ್ಣನಿಗೆ ಅರ್ಥವಾಗಲಿಲ್ಲ. ಅಡ್ಮಿಷನ್ ರಿಜಿಸ್ಟರ್ ಕೊಡಿ ಮೇಷ್ಟೆ ” ಎಂದು ಕೇಳಿದನು. ಪೆಟ್ಟಿಗೆಯಿಂದ ಅದನ್ನು ಮೇಷ್ಟ್ರು ತೆಗೆದುಕೊಟ್ಟಿದ್ದಾಯಿತು. ಅದನ್ನು ತನಿಖೆಮಾಡುತ್ತ ಮತ್ತೊಮ್ಮೆ ಮೇಷ್ಟರನ್ನು ನೋಡಿದಾಗ, ' ಸ್ವಾಮಿಯವರಿಗೆ ! ಸ್ವಲ್ಪ ! ? ಎಂದು ಮೊದಲಿನಂತೆಯೇ ಗಡ್ಡವನ್ನು ಸವರಿಕೊಂಡು ಮೇಷ್ಟ್ರು ಹೇಳಿದನು. " ಏನು ಮೇಷ್ಟೆ ? ಸ್ವಾಮಿಯವರಿಗೇನು ? ಸ್ವಲ್ಪ ಏನು ? ಎಂದು ರಂಗಣ್ಣ ಕೇಳಿದನು.

'ಸ್ವಾಮಿಯವರಿಗೆ ಗಡ್ಡ ಸ್ವಲ್ಪ.......

'ಗಡ್ಡ ಏನಾಗಿದೆ ಮೇಷ್ಟೆ ? ಸ್ವಲ್ಪ ಬೆಳೆದಿದೆ. ಇವೊತ್ತು ನಾನು ಕ್ಷೌರ ಮಾಡಿಕೊಂಡು ಹೊರಡಲಿಲ್ಲ. ಊರು ಸೇರಿದ ಮೇಲೆ ಕ್ಷೌರ ಮಾಡಿಕೊಂಡು ಸ್ನಾನ ಮಾಡುತ್ತೇನೆ. ನಿಮಗೇಕೆ ಅದರ ವಿಚಾರ ??


'ಸ್ವಾಮಿಯವರಿಗೆ, ಅಪ್ಪಣೆ ಯಾದರೆ........ ? 'ಏನು ಅಪ್ಪಣೆಯಾದರೆ ?.... ಸಂಬಳ ಬಟವಾಡೆ ರಿಜಿಸ್ಟರ್ ಇಲ್ಲಿ ಕೊಡಿ )

'ಎಲ್ಲಾ ರೋಜಿ ಸ್ಟರ್‌ ಪಕ್ಕಾ ಮಡಗಿದ್ದೀನಿ ! ಸ್ವಾಮಿಯವರಿಗೆ, ಅಪ್ಪಣೆಯಾದರೆ....' ಎಂದು ಪುನಃ ಗಡ್ಡವನ್ನು ಸವರಿಕೊಳ್ಳುತ್ತ ಆ ಮೇಷ್ಟ್ರು ನಿಂತುಕೊಂಡನು.

'ಆಪ್ಪಣೆಯಾದರೆ ಏನು ಮಾಡ್ತೀರಿ ಮೇಷ್ಟೆ ? ಕ್ಷೌರದವನನ್ನು ಕರೆಸುತ್ತೀರಾ ? 'ಅದ್ಯಾಕೆ ಸ್ವಾಮಿ ಹೊರಗಿನವನು? ಒ೦ದು ಲಾಜಾದೊಳಗೆ ಮೈಸೂರು ಸೋಪು ಹಚ್ಚಿ ನುಣ್ಣಗೆ ಮಾಡಿ ಬಿಡ್ತನೆ !!

ರಂಗಣ್ಣ ಕಕ್ಕಾಬಿಕ್ಕಿಯಾಗಿ " ಏನ್ ಮೇಷ್ಟೆ ! ನೀವು ಕ್ಷೌರದವರೇ ? ” ಎಂದು ಕೇಳಿದನು.

'ತಮ್ಮ ಶಿಷ್ಯ ಸಾರ್ ! ನನ್ನ ಗುರುಗಳು ತಾವು ! '

ರಂಗಣ್ಣ ಹಾಗೆಯೇ ದುರುಗುಟ್ಟಿಕೊಂಡು ಆ ಮೇಷ್ಟರನ್ನು ನೋಡಿದನು. ಮುಖದ ಛಾಯೆ ಎಲ್ಲಿಯೋ ನೋಡಿದ ಜ್ಞಾಪಕ.

'ತಾವು ಮರೆತುಹೋಗಿದ್ದೀರಿ ಸಾ . ನಾನು ಮುನಿಸ್ವಾಮಿ, ತುಮಕೂರು ನಾರ್ಮಲ್ ಸ್ಕೂಲಿನಲ್ಲಿ ತಮ್ಮ ಶಿಷ್ಯ.'

ಆಗ ಸಮಸ್ಯೆ ಬಗೆ ಹರಿಯಿತು. ಒಳ್ಳೆಯ ಶಿಷ್ಯ ! ಒಳ್ಳೆಯ ಗುರು! ಹಜಾಮರ ಗುರು ! ದೊಡ್ಡ ಹಜಾಮನ ಪಟ್ಟ ತನಗೆ ಬಂದ ಹಾಗಾಯಿತು. ಒಂದು ನಿಮಿಷ ಹಾಗೆಯೇ ಆಲೋಚನಾ ಮಗ್ನನಾಗಿದ್ದು, ಪರೀಕ್ಷೆಗಳಿಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಹಜಾಮತ್ ಮಾಡುವ ಪರೀಕ್ಷಕರು ದೊಡ್ಡ ಹಜಾಮರಲ್ಲದೆ ಮತ್ತೆ ಏನು ? ನಾನು ಸಹ ಆ ಹಜಾಮನ ಕಲಸ ಮಾಡಿದ್ದೇನಲ್ಲ' ಎಂದು ಹೇಳಿಕೊಂಡನು. ಈಗೇನು ಮಾಡಲಿ ಮೇಷ್ಟೆ ? ನಿಮ್ಮ ಸ್ಕೂಲ್ ತನಿಖೆ ಮಾಡಲೇ ಬೇಡವೇ ? '

'ಆಗತ್ಯ ಮಾಡಿ ಸಾರ್, ಈ ದಿನ ಇಲ್ಲೇ ಮೊಕ್ಕಾಂ ಮಾಡಿ ಸ್ನಾನ, ಊಟ ಮುಗಿಸಿಕೊಂಡು ಸಾಯಂಕಾಲ ಊರು ಸೇರ ಬಹುದು. ಶ್ಯಾನುಭೋಗರು ಒಳ್ಳೆಯವರು ಎಲ್ಲಾ ಏರ್ಪಾಟು ಮಾಡ್ತಾರೆ ” ಎಂದು ಹೇಳಿ ಗೋಡೆಗೆ ಹಾಕಿದ್ದ ನೀಲಿಬಟ್ಟೆ ಯ ಪರದೆಯನ್ನು ಮೇಷ್ಟ್ರು ಎಳೆದನು, ಸೊಗಸಾದ ದೊಡ್ಡ ಕನ್ನಡಿ ! ರಂಗಣ್ಣನ ಮುಖ ಸೊಗಸಾಗಿ ಅದರಲ್ಲಿ ಕಂಡು ಬರುತ್ತಿತ್ತು ' ತಾವು ಕ್ರಾಪ್ ಬಿಟ್ಟಿದ್ದೀರಿ ಸಾರ್, ಒಳ್ಳೆ ಫ್ರೆಂಚ್ ಕಟ್ ಮಾಡುತ್ತೇನೆ. ಶಿಷ್ಯನ ಕೈವಾಡ ಸ್ವಲ್ಪ ನೋಡಿ !'

'ಮೇಷ್ಟೇ ! ಇದೇನು ? ಹೊರಗೆ ನೋಡಿದರೆ ಪ್ರಾಥಮಿಕ ಶಾಲೆ, ಒಳಗೆ ನೋಡಿದರೆ ಹಜಾಮ ಶಾಲೆ !' 'ಅದರ ಕಥೆ ಸ್ವಾಮಿಯವರಿಗೆ ಅರಿಕೆ ಮಾಡಿಕೊತೀನಿ, ಕಾಪಾಡಿಕೊಂಡು ಬರಬೇಕು ! ಶಿಷ್ಯನ ಮೇಲೆ ಅನುಗ್ರಹ ತೋರಿಸಬೇಕು ! ? ಎಂದು ಹೇಳಿದ್ದೆ ತಡ, ಮೇಷ್ಟು ಹೊರಕ್ಕೆ ಬಂದು ಹುಡುಗರಿಗೆಲ್ಲ ಇನ್ ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಎಲ್ಲಾರೂ ಊಟಾ ಮಾಡಿ ಕೊಂಡು ಒಳ್ಳೆಯ ಬಟ್ಟೆ ಹಾಕಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬಂದುಬಿಡಿ ' ಎಂದು ಹೇಳಿದನು. ಮಕ್ಕಳು ಒಳಕ್ಕೆ ಬಂದು ತಂತಮ್ಮ ಪ್ಲೇಟು ಪುಸ್ತಕಗಳನ್ನೆತ್ತಿಕೊಂಡು ಓಡಿದರು. ಶ್ಯಾನುಭೋಗರ ಹುಡುಗನಿಗೆ, “ ಇನ್ ಸ್ಪೆಕ್ಟರ್ ಸಾಹೇಬರು ಬಂದಿದ್ದಾರೆ. ಬಂದು ಕಾಣಬೇಕು ಎಂದು ನಿಮ್ಮ ತಂದೆಗೆ ತಿಳಿಸು' ಎಂದು ಹೇಳಿ ಕಳುಹಿಸಿದನು.

ರಂಗಣ್ಣ ಒಳಗಿನ ಏರ್ಪಾಟನ್ನು ಪರೀಕ್ಷಿಸುತ್ತಿದ್ದಾನೆ. ದೂರದಲ್ಲಿ ಒಂದು ಮೂಲೆಯಲ್ಲಿ ಮುಕ್ಕಾಲು ನಿಲುವು, ಪಿಂಗಾಣಿ ಬೇಸಿನ್ ಮತ್ತು ಟವಲ್ಲುಗಳಿವೆ. ಇತ್ತ ಗೋಡೆಗೆ ಒಳ್ಳೆಯ ಕನ್ನಡಿ ಇದೆ. ಆದರೆ ಕನ್ನಡಿಯನ್ನು ಬೇಕಾದಾಗ ಮುಚ್ಚುವಂತೆ ತೆರೆ ಇದೆ. ಮೇಷ್ಟ್ರು ಮುನಿಸಾಮಿ ಏನು ಮಾಡುತ್ತಾನೋ ನೋಡೋಣ ; ಅವನ ಕಥೆ ತಿಳಿದುಕೊಳ್ಳೋಣ ಎಂದು ರಂಗಣ್ಣನು ಕುತೂಹಲಾವಿಷ್ಟನಾಗಿ ಕುಳಿತಿದ್ದನು. ಮೇಷ್ಟ್ರು ಮೇಜಿನ ಸೆಳೆಖಾನೆಯಿಂದ ಸೊಗಸಾದ ರೇಜರ್, ಕ್ರಾಸ್ ಮಿಷನ್, ಹೊಸದಾದ ಸೋಪು ಬಿಲ್ಲೆ - ಇವುಗಳನ್ನು ತೆಗೆದು ಮೇಜಿನ ಮೇಲಿಟ್ಟನು. ಬೇರೆ ಒಂದು ಪೆಟ್ಟಿಗೆಯಿಂದ ಮಡಿ ಮಾಡಿದ್ದ ದೊಡ್ಡ ಬಿಳಿಯ ವಸ್ತ್ರವನ್ನು ತೆಗೆದನು. ಹಿಂಭಾಗದ ತನ್ನ ಮನೆಯಿಂದ ಬಿಸಿ ನೀರನ್ನು ತಂದು ಬ್ರಷ್ಟನ್ನು ಚೆನ್ನಾಗಿ ತೊಳೆದನು, ಶುಭ್ರವಾದ ಗಾಜಿನ ಬಟ್ಟಲಿನಲ್ಲಿ ಬಿಸಿನೀರನ್ನು ತಂದಿಟ್ಟು ಕೊಂಡು, ' ಸ್ವಾಮಿಯವರು ರುಮಾಲು ಕೋಟು ತೆಗೆದಿಡಬೇಕು ' ಎಂದನು, ಅಷ್ಟು ಹೊತ್ತಿಗೆ ಶ್ಯಾನುಭೋಗರ ಹುಡುಗ ಒಗೆದ ಒಳ್ಳೆಯ ಪಂಚೆಯನ್ನೂ ಒ೦ದು ಟವಲನ್ನೂ ತಂದುಕೊಟ್ಟನು. ರಂಗಣ್ಣ ಪಂಚೆಯನ್ನುಟ್ಟುಕೊಂಡು ಅಂಗಿ ಷರಾಯಿ ಮೊದಲಾದ ಉಡುಪುಗಳನ್ನೆಲ್ಲ ತೆಗೆದು ಕುರ್ಚಿಯಲ್ಲಿ ಕುಳಿತುಕೊಂಡನು. ರಂಗಣ್ಣನ ಕೊರಳಿಗೆ ಮೇಷ್ಟು ವಸ್ತ್ರವನ್ನು ಇಳಿಬಿಟ್ಟು ಕಟ್ಟಿ ತನ್ನ ಕಸುಬಿನ ಕೈಚಳಕವನ್ನು ತೋರಿಸಲು ಮೊದಲು ಮಾಡಿದನು. ರಂಗಣ್ಣನಿಗೆ ತಾನು ಸ್ಕೂಲು ಬಳಿ ಬಂದಾಗ ಒಳಗಿಂದ ತಲೆಗೆ ಮುಸುಕುಹಾಕಿಕೊಂಡು ಹೊರಕ್ಕೆ ಓಡಿ ಹೋದ ನಾಲ್ವರ ಜ್ಞಾಪಕ ಬಂತು ! ಎಲ್ಲವೂ ಅರ್ಥವಾಯಿತು. ತಿರುಗುಮುರುಗಾಗಿಟ್ಟಿದ್ದ ಮೇಜಿನ ಅರ್ಥವೂ ಆಯಿತು. ಮುನಿಸಾಮಿ ಸೋಪನ್ನು ಹಚ್ಚಿದ ಠೀವಿಯೇ ಠೀವಿ, ಇನ್ ಸ್ಪೆಕ್ಟರ್ ಸಾಹೇಬರಿಗೆ ಮೇಷ್ಟ್ರು ಕ್ಷೌರ ಮಾಡುವ ದೃಶ್ಯ, ಗುರುವಿಗೆ ಶಿಷ್ಯನೊಬ್ಬನು ಕ್ಷೌರ ಮಾಡುವ ದೃಶ್ಯ - ಆ ವಿಶ್ವಾಸ, ಆ ಭಕ್ತಿ, ಆ ಸಂತೋಷಗಳನ್ನು ಈ ಬಡ ಲೇಖನಿಗೆ ಚಿತ್ರಿಸಲು ಸಾಧ್ಯವಿಲ್ಲ. ಮುನಿಸಾಮಿ ತನ್ನ ಕಥೆ ಹೇಳ ತೊಡಗಿದನು :

'ನಾನು ಪುನಃ ಈ ಕಸುಬಿಗೆ ಕೈ ಹಾಕುತ್ತಿರಲಿಲ್ಲ ಸಾರ್, ಎಂತಿದ್ದರೂ ಮಿಡಲ್ ಸ್ಕೂಲ್ ಪರೀಕ್ಷೆ ಆಯಿತು. ತಮ್ಮ ದಯದಿಂದ ಟ್ರೈನಿಂಗ್ ಪರೀಕ್ಷೆಯೂ ಆಯಿತು. ಬ್ರಾಹ್ಮಣ ಮೇಷ್ಟರ ಹಾಗೆ ಹುಡುಗರಿಗೆ ಪಾಠ ಹೇಳಿಕೊಂಡು ಗುರು ಎಂದು ಗೌರವ ಪಡೆದುಕೊಂಡಿರೋಣ. ನನ್ನಪ್ಪನೊಂದಿಗೇನೆ ಈ ಕಸಬು ಕೊನೆಗಾಣಲಿ ಎಂದು ನಾನಿದ್ದೆ. ಆದರೆ ಇಲಾಖೆಯಲ್ಲಿ ಸಂಬಳ ಬಹಳ ಕಡಮೆ ಸಾರ್ ! ಇಷ್ಟು ವರ್ಷ ಸರ್ವೀಸ್ ಮಾಡಿನೂ ಹದಿನೈದೇ ರೂಪಾಯಿ ಸಂಬಳ ! ನನಗೂ ಮೂರು ಮಕ್ಕಳಾದರು. ಜೊತೆಗೆ ತಮ್ಮ ಇದ್ದಾನೆ. ಹೆಂಡತಿ, ಮಕ್ಕಳು, ತಮ್ಮ, ನಾನೂ – ಈ ಸಂಸಾರ ಹದಿನೈದು ರೂಪಾಯಿ ಸಂಬಳದಲ್ಲಿ ಪೂರೈಸೋದಿಲ್ಲ. ಒಂದು ದಿನ ಕೈಯ್ಯಲ್ಲಿ ಕಾಸಿರಲಿಲ್ಲ, ಮನೆಯಲ್ಲಿ ರಾಗಿ ಇರಲಿಲ್ಲ.'

;'ಮತ್ತೆ ಕೂಳಿಗೆ ಏನು ಮಾಡಿದಿರಿ ನೀವೆಲ್ಲ ?”

'ನಾನೇನು ಮಾಡಲಿ ಸಾರ್ ! ಹೇಗಾದರೂ ಸುಧಾರಿಸು ; ರೈತರ ಮನೆಗೆ ಹೋಗಿ ರಾಗಿ ಸಾಲ ತೆಗೆದು ಕೊಂಡು ಬಾ; ಇಲ್ಲವಾದರೆ ಒಂದು ರೂಪಾಯಿ ಸಾಲ ತರ್ತೇನೆ ; ರಾಗಿ ತಂದುಕೊಳ್ಳೋಣ ಹೆಂಡತಿಗೆ ಹೇಳಿದೆ.?

'ಸಾಲ ತಂದುಕೊಂಡಿರೋ?”

'ಇಲ್ಲ ಸಾರ್ ! ನನ್ನ ಹೆಂಡತಿ ಯವಾರಕ್ಕೆ ಬಂದಳು.ಈ ಇಸ್ಕೋಲ್ ಕೆಲಸ ಯಾಕಾಯ್ತ ನಿಮ್ಮ ! ದಿನಕ್ಕೆ ಎಂಟಾಣೆ ಕೂಲಿ. ಕುಂತ ಕಡೆ ನಾಲ್ಕು ಜನಕ್ಕೆ ತಲೆ ಕೆರೆದರೆ ಎಂಟಾಣೆ ಬರಾಕಿಲ್ವಾ ? ಎಂದು ಒಂದು ರೂಪಾಯಿ ಸಾಲ ತರ್ತಿನ್ನಿ ಅಂತ ಹೊರಟೀರಾ ! ಸಾಲ ತೀರೋದೆಂಗೆ ? ಅಲ್ಲಿ ಕುಕ್ಕರಿಸಿಕೊಂಡು ನಾಲ್ಕು ಜನಕ್ಕೆ ತಲೆ ಕೆರೀರಿ; ಎಂಟಾಣೆ ಬರ್ತೈತೆ. ನಿಮ್ಮ ಆಳಿಸ್ಕೋಲ್ಗೆ ಬೆಂಕಿ ಬೀಳಾ-ಎಂದು ತರಾಟೆಗೆ ತೆಗೆದುಕೊಂಡಳು. ನಾನೇನು ಮಾಡಲಿ ಸಾರ್ ? ಮಕ್ಕಳು- ಹಸಿವೋ ಎಂದು ಅಳುತ್ತಾ ನಿಂತುಕೊಂಡವು.”

'ಕಡೆಗೆ ಹೇಗೆ ಫೈಸಲ್ ಆಯ್ತು ನಿಮ್ಮ ಯವಾರ ?'

'ಹೇಗೆ ಎಂತ ಹೇಳಿ ಸಾರ್? ನಮ್ಮ ಈ ಹಳ್ಳಿಯಲ್ಲಿ ಹೈಸ್ಕೂಲ್ ಓದಿದ ಹುಡುಗರು ಕೆಲವರು, ಪೇಟೆ ಹೋಟಲಿಗೆ ಹಾಲು ಮಾರೊ ಯುವಕರು ಕೆಲವರು ಇದ್ದಾರೆ. ಊರ ಪೇಟೆ ಕಂಡವರು. ಇಬ್ಬರು ಹುಡುಗರು ನಮ್ಮ ಕೂಗಾಟ ಕೇಳಿ ಇತ್ತ ಬಂದರು. ನಾನು ತಮಾಷೆಗೆ- ಏಕೆ ಬಂದಿರಣ್ಣಾ ಇಲ್ಲಿಗೆ ? ಕ್ರಾಪ್ ಗ್ರೀಪ್ ಹೊಡೀಬೇಕಾ ನಿಮಗೆ ?- ಎಂದು ಕೇಳಿದೆ. ಅವರೂ ತಮಾಷೆಗೆ - ಹುಂ, ಕ್ರಾಪ್ ಕತ್ತರಿಸೋರು ನಮ್ಮ ಹಳ್ಳಿಲಿ ಯಾರಿದ್ದಾರೆ ? ತಲೆ ಏನೋ ಬೆಳೆದಿದೆ-ಎಂದರು. ನಾನು - ಅಮೇರಿಕನ್ ಕಟ್ಟಿಗೆ ನಾಲ್ಕಾಣೆ, ಫ್ರೆಂಚ್ ಕಟ್ಟಿಗೆ ಆರಾಣೆ, ಕುಳಿತುಕೊಂಡು ನೋಡಿ ಪರಮಾಯಿಷಿನ-ಎಂದೆ. ಆ ಹುಡುಗರು ಷೋಕಿ ಮೇಲೆ ಕುಳಿತೇ ಬಿಟ್ಟರು ಸಾರ್‌, ಒಬ್ಬನಿಗೆ ಅಮೆರಿಕನ್ ಕಟ್ ಮತ್ತೊಬ್ಬನಿಗೆ ಫ್ರೆಂಚ್ ಕಟ್ ಕ್ರಾಪು ಕತ್ತರಿಸಿದೆ. ಕೊಟ್ಟರು. ಎಲ್ಲಿ ಕಲಿತೆ ಮುನಿಸಾಮಿ ? ಒಳ್ಳೆಯ ಪಳಗಿದ ಕೈ ನಿನ್ನದು ಬೆಂಗಳೂರಿನಲ್ಲಿ ಕೂಡ ಇಂಥ ಕ್ರಾಪ್ ಕಟ್ ಕಾಣೆವು - ಎಂದು ಮೆಚ್ಚಿಕೊಂಡು ಹೊರಟು ಹೋದರು. ಆಮೇಲೆ ನನ್ನ ಹೆಂಡತಿಯ ಕೈಗೆ ಹತ್ತಾಣೆ ಕೊಟ್ಟೆ. ಅವಳು ದಿನಾ ನಾಲ್ಕು ಜನಕ್ಕೆ ಹೀಗೆ ಜುಟ್ಟು ಕತ್ತರಿಸಿ ಸಂಪಾದಿಸಿರಿ ; ಇಲ್ಲಾದ್ರೆ ನಿಮ್ಮೆ ಹಿಟ್ಟಾಕಾಕಿಲ್ಲ ಎಂದು ಹೇಳಿ ಬಿಟ್ಟಳು.”

'ಸರಿ, ಅಂದಿನಿಂದ ಈ ಪಾಠ ಶಾಲೆ ಹಜಾಮತ್ ಶಾಲೆ ಆಯಿತೊ ?'

'ಇಲ್ಲ ಸಾರ್. ಎರಡು ದಿನ ಯಾರೂ ಬರಲಿಲ್ಲ. ಆದರೆ ಆ ಇಬ್ಬರು ಹುಡುಗರು ತಮ್ಮ ಸ್ನೇಹಿತರಿಗೆಲ್ಲ ಕ್ರಾಪು ತೋರಿಸಿ ಪ್ರಚಾರ ಅವರು ಮಾಡಿಬಿಟ್ಟರು. ಆ ಮೇಲೆ ಈ ಹಳ್ಳಿ ಆ ಹಳ್ಳಿ, ಸುತ್ತಲಹಳ್ಳಿ ಎಲ್ಲ ಕಡೆಗಳಿಂದಲೂ ಷೋಕಿ ಹುಡುಗರು, ಹಾಲು ಮಾರೊ ಯುವಕರು ಬರುವುದಕ್ಕೆ ಪ್ರಾರಂಭಿಸಿದರು, ಬರಬರುತಾ ಗಿರಾಕಿ ಜಾಸ್ತಿ ಆಗಿ ಹೋಯಿತು. ಈಗ ಮೇಷ್ಟರ ಕಲಸಕ್ಕೆ ರಾಜೀನಾಮೆ ಕೊಟ್ಟು ಬಿಟ್ಟು ಈ ಕಟ್ಟಡದಲ್ಲೇ ಸೆಲೂನ್ ಮಡಗೋಣ ಅಂತ ಇದ್ದೀನಿ.'

'ಕೆಲಸಕ್ಕೆ ರಾಜೀನಾಮೆ ಕೊಡುತ್ತೀರಾ ಮೇಷ್ಟೆ ? ಈಗ ದಿನಕ್ಕೆ ಎಷ್ಟು ರೂಪಾಯಿ ಸಂಪಾದನೆ ಇದೆ ನಿಮಗೆ ??

'ದಿನಕ್ಕೆ ಎರಡು ರೂಪಾಯಿ ಗಿಟ್ಟುತ್ತೆ ಸಾರ್. ನನ್ನ ಖರ್ಚು ದಿನಕ್ಕೆ ಎಂಟಾಣೆ ಆಗುತ್ತೆ. ಒಟ್ಟಿನಲ್ಲಿ ತಿಂಗಳಿಗೆ ನಲವತ್ತು ನಲವತ್ತೈದು ರೂಪಾಯಿಗಳಿಗೆ ಮೋಸವಿಲ್ಲ. ಈಗ ಮೇಷ್ಟರ ಕೆಲಸ, ನನ್ನ ಕಸುಬಿನ ಕೆಲಸ ಎರಡೂ ಒಟ್ಟಿಗೆ ನಡೆಯೋದು ಕಷ್ಟ ಸಾರ್‌. ನಾನು ಪಾಠಶಾಲೆ ಹೊತ್ತಿನಲ್ಲಿ ಕಸುಬಿನ ಕೆಲಸ ಮಾಡುವುದಿಲ್ಲ. ಬೆಳಗ್ಗೆ ಆರೂವರೆಯಿಂದ ಏಳೂಕಾಲು ಗಂಟೆಯವರೆಗೆ, ಪುನಃ ಹತ್ತೂ ಮುಕ್ಕಾಲರಿಂದ ಹನ್ನೆರಡೂ ಮುಕ್ಕಾಲು ಗಂಟೆವರೆಗೆ ಕಸುಬಿನ ಕೆಲಸ ಮಾಡ್ತೀನೆ. ಕೆಲವರು ಮಧ್ಯಾಹ್ನ ಒಂದು ಗಂಟೆಗೆ ಎರಡು ಗಂಟಿಗೋ ಬರ್ತಾರೆ. ಒಂದೊಂದು ದಿನ ಹಳ್ಳಿ ಕಡೆಯಿಂದ ಕೆಲವರು ಒ೦ಬತ್ತು ಗಂಟೆಗೇನೆ ಬಂದು ಕುಳಿತುಕೊಳ್ಳುತ್ತಾರೆ.'

'ಮೇಷ್ಟರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಸೆಲೂನ್ ಮಡಗಿ, ಕಸುಬು ಬಿಡಬೇಡಿ.'

'ನನಗೂ ಹಾಗೆ ಅನ್ನಿಸಿದೆ ಸಾರ್. ಮನೇಲಿ ನನ್ನ ಹೆಂಡತಿ ಹಟಾ ಮಾಡ್ತಾಳೆ. ಈ ಕಟ್ಟಡದಾಗೆ ಇಸ್ಕೊಲ್ ಬೇಡ ; ಅವರು ಕೊಡೊ ಎರಡು ರೂಪಾಯಿ ಬಾಡಿಗೆ ನಮ್ಗೆ ಬೇಡ ; ಎರಡೊರ್ಸ ಆಗೋಯ್ತು, ಬಾಡಿಗೆ ಚಿಕ್ಕಾಸೂ ಬಂದಿಲ್ಲ. ಇಸ್ಕೊಲ್ ಎಲ್ಲಾದ್ರೂ ಮಾಡಿಕೊಳ್ಳಲಿ. ನಿಮ್ಮ ತಮ್ಮನಿಗೆ ಸೆಲೂನ್ ಕೆಲಸ ನೋಡಿಕೊಳ್ಳೋ ಹಾಗೆ ಮಾಡಿ. ನೀವು ಮೇಷ್ಟರ ಕೆಲಸದ ಜೊತೆಗೆ ಮಧ್ಯೆ ಮಧ್ಯೆ ತಲೆ ಕೆರೀರಿ, ರಜಾ ಬಂದಾಗ ನೀವೇನು ಮಾಡೋಕು- ಅಂತಾ ಹಟಾ ಮಾಡ್ತಾಳೆ.' ಹಳ್ಳಿಯವರ
'ಸ್ಕೂಲಿಗೆ ಬೇರೆ ಕಟ್ಟಡ ಇದೆಯೇ ಮೇಷ್ಟೆ ? 'ಅದೇ ಬಂಡಾಟ ಸಾರ್ ಈ ಹಳ್ಳಿಲಿ, ಬೇರೆ ಕಟ್ಟಡ ಇಲ್ಲ. ಪಂಚಾಯ್ತಿ ಕಟ್ಟಡ ಆಗಿಲ್ಲ, ಪಂಚಾಯ್ತಿಯವರನ್ನು ಕೇಳಿದರೆ ಎಂಗಾನಾ ಮಾಡಿಕೊಂಡು ಹೋಗು, ಇ ಸ್ಕೂಲಿಗೆ ಕಟ್ಟಡ ಇಲ್ಲ- ಅನ್ನುತ್ತಾರೆ'

ನೀವು ಕ್ಷೌರದವರಾಗಿ ಮೇಷ್ಟರಾಗಿದ್ದೀರಲ್ಲ. ಆಕ್ಷೇಪಣೆ ಇಲ್ಲವೇ ?

'ನಾನು ಅವರ ಮಕ್ಕಳನ್ನು ಮುಟ್ಟೋದಿಲ್ಲ ಸಾರ್. ಜೊತೆಗೆ ನನ್ನ ಉಡುಪು, ಠೀಕು ನೋಡಿ ಅವರೇ ಮೆಚ್ಚು ಕೋತಾರೆ ನಾನೂ ಚೊಕ್ಕಟವಾಗಿದ್ದೇನೆ. ಈ ಸ್ಕೂಲ್ ಕಟ್ಟಡ ಹೇಗಿದೆ ನೋಡಿ ಸಾರ್ ! ಎಷ್ಟು ಚೆನ್ನಾಗಿಟ್ಟು ಕೊಂಡಿದ್ದೇನೆ ! ತಮ್ಮ ಶಿಷ್ಯ ! ?

'ಅದಕ್ಕೇನೆ ಪುಕಾರು ಬರಲಿಲ್ಲ ಅಂತ ಕಾಣುತ್ತೆ.?

'ಪಂಚಾಯ್ತಿ ಮೆಂಬರುಗಳಿಗೆಲ್ಲ ಪುಕಸಟ್ಟೆ ಕ್ಷೌರ ಮಾಡುತ್ತೇನೆ ಸಾರ್ ! ಪುಕಾರು ಯಾಕೆ ಮಾಡ್ತಾರೆ ಅವರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟಿದ್ದೇನೆ. ನನ್ನ ಕ೦ಡರೆ ಈ ಊರಿನವರಿಗೆ ವಿಶ್ವಾಸ ಇದೆ ಸಾರ್.'

ಈ ಮಾತುಗಳು ಮುಗಿಯುವ ಹೊತ್ತಿಗೆ ರಂಗಣ್ಣನಿಗೆ ದಿವ್ಯವಾದ ಕ್ರಾಪ್' ಕಟ್ಟೂ ಕ್ಷೌರವೂ ಆದುವು. ಕೂದಲಿಗೆ ಸರಿಮಳಿಸುವ ಕೂದಲೆಣ್ಣೆ, ಕೆನ್ನೆಗಳಿಗೆ ಸ್ಪೋ ಹಚ್ಚಿ ಮುನಿಸಾಮಿ ರಂಗ್ ಮಾಡಿದನು ! ಶ್ಯಾನುಭೋಗರು ಬಂದು ಕೈ ಮುಗಿದರು, " ಏನು ಶ್ಯಾನುಭೋಗರೇ, ಸ್ನಾನ ಮಾಡ ಬೇಕಲ್ಲ, ನೀರು ಕಾಸಿಟ್ಟಿದೀರಾ ? ?

'ಕಾಸಿಟ್ಟ ದೇನೆ ಸ್ವಾಮಿ. ದಯಮಾಡಬೇಕು. ನಮ್ಮ ಹಳ್ಳಿಯಲ್ಲಿ ತಾವು ಮೊಕ್ಕಾಂ ಮಾಡಿದ್ದು ಬಹಳ ಸಂತೋಷ, ಬಡವರ ಮನೆಗೆ ನೀವೇಕೆ ಬಂದೀರಿ ?'

ರಂಗಣ್ಣ ಶ್ಯಾನುಭೋಗರ ಮನೆಗೆ ಹೋಗಿ ಸ್ನಾನಾದಿಗಳನ್ನು ತೀರಿಸಿಕೊಂಡನು. ಆ ಮೇಲೆ ಊಟ. ಆ ದಿವಸ ತೊವ್ವೆ, ಮಜ್ಜಿಗೆ ಹುಳಿ, ಆಂಬೊಡೆ, ನಿಂಬೆಹಣ್ಣಿನ ಚಿತ್ರಾನ್ನ, ರವೆ ಪಾಯಸ- ಇವು ಗಳನ್ನು ಇನ್‌ಸ್ಪೆಕ್ಟರಿಗಾಗಿ ಶ್ಯಾನುಭೋಗರು ಮಾಡಿಸಿದ್ದರು. ಅಡಿಗೆ ಚೆನ್ನಾಗಿತ್ತು. ಊಟ ಮಾಡುತ್ತಿದಾಗ ರಂಗಣ್ಣ ಮೇಷ್ಟರ ಮಾತೆತ್ತಿ ಆತ ಹಜಾಮರ ಜಾಕಿ ಎಂಬುದು ತಿಳಿದೂ ನಿಮ್ಮ ಆಕ್ಷೇಪಣೆ ಇಲ್ಲದಿರುವುದು ಆಶ್ಚರ್ಯ' ಎಂದು ಹೇಳಿದನು.

'ಸ್ವಾಮಿ.! ಈಗಿನ ಕಾಲವೇ ಹೀಗೆ, ನಾನಾ ಜಾತಿಯವರು, ಆದಿಕರ್ಣಾಟಕರು ಮೊದಲಾದವರೆಲ್ಲ ಸರ್ಕಾರದ ನೌಕರಿಯಲ್ಲಿದ್ದಾರೆ, ಉಪಾಧ್ಯಾಯರು, ಅಮಲ್ದಾರರು, ಡೆಪ್ಯುಟಿ ಕಮಾಷನರು, ಕೌನ್ಸಿಲರು, ಎಲ್ಲರೂ ನಾನಾ ಜಾತಿ, ಆದಿಕರ್ಣಾಟಕರೂ ನಾಳೆ ಕೌನ್ಸಿಲರು, ದಿವಾನರು ಆಗುತ್ತಾರೆ, ಏನು ಮಾಡುವುದು ಸ್ವಾಮಿ ? ರೈಲಿನಲ್ಲಿ, ಬಸ್ಸಿನಲ್ಲಿ ಯಾವ ಜಾತಿಯವರು ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆ ? ಎಂದು ಈಗ ನಾವು ಹೇಳುತ್ತೇವೆಯೇ ? ಕೇಳಿದರೆ ತಾನೆ ಏನು ? ಪರಿಹಾರವಿದೆಯೆ? ಕಾಲಕ್ಕೆ ತಕ್ಕ ಹಾಗೆ ಹೊಂದಿಕೊಂಡು ಹೋಗಬೇಕು ಸ್ವಾಮಿ, ಕೆಲವು ಸ್ಕೂಲುಗಳಲ್ಲಿ ಆದಿ ಕರ್ಣಾಟ ಕರು ಮೇಷ್ಟರಿದ್ದಾರೆ. ತಮಗೇ ಗೊತ್ತಿದೆಯಲ್ಲ.)

'ಶ್ಯಾನುಭೋಗರೇ ! ನಿಮ್ಮಷ್ಟು ತಿಳಿವಳಿಕೆ, ಸೈರಣೆ ನಮ್ಮ ಜನಗಳಿಗೆಲ್ಲ ಇದ್ದರೆ ದೇಶ ಉದ್ದಾರವಾದೀತು.

'ಎಲ್ಲರಿಗೂ ತಿಳಿವಳಿಕೆ ಬರುತ್ತದೆ ಸ್ವಾಮಿ. ತಾನಾಗಿ ಒಳಗಿಂದ ಬರದಿದ್ದರೆ ಹೊರಗಿಂದ ಬಲಾತ್ಕರ ಮಾಡಿ ತುಂಬುತ್ತಾರೆ.'

'ಈಗ ಆ ಮೇಷ್ಟು ಆ ಕೆಲಸ ಮಾಡುತ್ತಿರುವುದು ನಮ್ಮ ಇಲಾಖೆಯ ರೂಲ್ಸಿಗೆ ವಿರುದ್ಧ, ಮೇಷ್ಟ್ರ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬಿಡಿ ಎಂದು ಹೇಳಿದ್ದೇನೆ'

'ಇದೇನು ಸ್ವಾಮಿ ನಿಮ್ಮ ಇಲಾಖೆಯ ರೂಲ್ಕು ! ಜೀವನಕ್ಕೆ ಸಾಕಾಗುವಷ್ಟು ಸಂಬಳ ಕೊಡುವುದಿಲ್ಲ, ಏನೂ ಇಲ್ಲ. ಹದಿನೈದು ರೂಪಾಯಿಗಳಲ್ಲಿ ಒಬ್ಬನ ಜೀವನ ನಡೆಯುವುದೇ ಕಷ್ಟ. ಇನ್ನು ಹೆಂಡತಿ ಮಕ್ಕಳನ್ನು ಕಟ್ಟಿಕೊಂಡವರು ಹೇಗೆ ಜೀವನ ಮಾಡಬೇಕು ? ಏನೋ ತನ್ನ ಕಸುಬಿನಿಂದ ಎರಡು ರೂಪಾಯಿ ಸಂಪಾದಿಸಿಕೊಂಡರೆ ರೂಲ್ಸು ಮಾತು ಆಡುತ್ತೀರಿ. ಈಗ ಆ ಮೇಷ್ಟರಿಗೇನು, ಆ ಕಟ್ಟಡ ಅವನು ಬಿಡಿಸಿಕೊಂಡು ಸೆಲೂನ್ ಇಟ್ಟು ಕೊಂಡರೆ ಅವನ ಜೀವನ ನಡೆಯುತ್ತದೆ. ಆ ಮೇಷ್ಟು ಸಹ ನಮ್ಮೊಡನೆ ಹಿಂದೆಯೇ ಹೇಳಿದ. ಈಗ ಸ್ಕೂಲಿಗೆ ಬೇರೆ ಕಟ್ಟಡ ಇಲ್ಲ. ಪಂಚಾಯತಿ ಕಟ್ಟಡ ಇನ್ನೂ ಆರು ತಿಂಗಳಿಗೆ ಎದ್ದೀತು, ಆಮೇಲೆ ಏನಾದರೂ ಏರ್ಪಾಟು ಮಾಡಬಹುದು. ಎಷ್ಟು ಒಳ್ಳೆಯವನು, ಕೆಟ್ಟ ಅಭ್ಯಾಸಗಳಿಲ್ಲ ; ಚೆನ್ನಾಗಿ ಪಾಠ ಮಾಡುತ್ತಾನೆ. ಚೊಕ್ಕಟವಾಗಿದ್ದಾನೆ. ನಮ್ಮ ಪುಕಾರು ಏನೂ ಇಲ್ಲ. ನಿಮ್ಮ ಇಲಾಖೆಯ ರೂಲ್ಸ್ ನಮಗೇಕೆ ಸ್ವಾಮಿ ?'

'ಶ್ಯಾನುಭೋಗರೇ, ನೀವು ಹೇಳುವುದನ್ನೆಲ್ಲ ಒಪ್ಪುತ್ತೇನೆ. ಆದರೆ ರೂಲ್ಸ್ ಇರುವ ತನಕ ನಾನೇನೂ ಮಾಡುವ ಹಾಗಿಲ್ಲ. ಸ್ಕೂಲಿಗೆ ಎಲ್ಲಿಯಾದರೂ ಬೇರೆ ಕಟ್ಟಡ ನೀವು ಕೊಡಬೇಕು.'

'ಆಲೋಚನೆ ಮಾಡುತ್ತೇನೆ ಸ್ವಾಮಿ. ಈ ಮೇಷ್ಟರನ್ನು ಮಾತ್ರ ತಪ್ಪಿಸಬೇಡಿ. ಈಗ ಒಂದೂವರೆ ವರ್ಷದಿಂದ ಅವನ ಕಟ್ಟಡದಲ್ಲಿ ಸ್ಕೂಲು ನಡೆಯುತ್ತಾ ಇದೆ. ಹಿಂದಿನ ಇನ್‌ಸ್ಪೆಕ್ಟರವರ ಕಾಲದಲ್ಲಿ ಎರಡು ರೂಪಾಯಿ ಬಾಡಿಗೆಗೆ ಗೊತ್ತು ಮಾಡಿದ್ದಾಯಿತು. ಇದುವರೆಗೂ ಬಾಡಿಗೆ ಮಂಜೂರಾಗಿ ಬರಲಿಲ್ಲ. ಆದರೂ ಮೇಷ್ಟು ತಕರಾರ್ ಮಾಡದೆ ನಡೆಸಿಕೊಂಡು ಹೋಗುತ್ತಿದ್ದಾನೆ. ನಾಳೆ ದಿನ ಅವನು ಸ್ಕೂಲಿನ ಸಾಮಾನುಗಳನ್ನೆಲ್ಲ ತಂದು ನನ್ನ ಮನೆಯಲ್ಲಿ ಹಾಕಿ-ಸ್ಕೂಲು ಚಾರ್ಜು ತೆಗೆದುಕೊಳ್ಳಿ, ನಾನು ಕೆಲಸ ಬಿಟ್ಟಿದ್ದೇನೆ ಎಂದು ಹೇಳಿದರೆ ಅನ್ಯಾಯವಾಗಿ ಸ್ಕೂಲು ಮುಚ್ಚಿ ಹೋಗುತ್ತದೆ. ತಾವೂ ಆಲೋಚನೆಮಾಡಿ ಸ್ವಾಮಿ.'

ಊಟವಾಯಿತು, ಮಾತು ಮುಗಿಯಿತು, ರಂಗಣ್ಣನಿಗೆ ದೊಡ್ಡದೊಂದು ಸಮಸ್ಯೆ ಗಂಟು ಬಿತ್ತು. ತಿಮ್ಮರಾಯಪ್ಪನಿಗೆ ಕಾಗದ ಬರೆದು ಸಲಹೆ ಕೇಳಲೆ ? ಅಥವಾ ಸಾಹೇಬರಿಗೆ ತಿಳಿಸಿ ಅವರಿಂದ ಸಲಹೆ ಕೇಳಲಿ ? ಅಥವಾ ಸ್ಕೂಲು ಮುಚ್ಚಿ ಹೋದರೆ ಹೋಗಲಿ ಎಂದು ರೂಲ್ಸ್ ಪ್ರಕಾರ ಆಚರಿಸಲೆ? ಎಂದು ಆಲೋಚನೆ ಮಾಡುತ್ತಿದ್ದನು. ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡು, ಮಧ್ಯಾಹ್ನ ಪಾಠಶಾಲೆಯ ತನಿಖೆಗೆ ಹೊರಟನು. ಮಕ್ಕಳಲ್ಲಿ ಒಳ್ಳೆಯ ಉಡುಪುಗಳನ್ನು ಹಾಕಿ ಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಸ್ಕೂಲ್ ಕಟ್ಟಡವನ್ನು ಮಾವಿನೆಲೆ, ಬಣ್ಣ ಬಣ್ಣದ ಕಾಗದದ ಮಾಲೆ- ಇವುಗಳಿಂದ ಅಲಂಕರಿಸಿದ್ದರು. ತನಿಖೆಯೇನೋ ಆಯಿತು, ಉಪಾಧ್ಯಾಯರು ಚೆನ್ನಾಗಿ ಕೆಲಸ ಮಾಡಿದ್ದರು, ನಾರ್ಮಲ್ ಸ್ಕೂಲಿನಲ್ಲಿ ಬರೆದಿದ್ದ ಟಿಪ್ಪಣಿಗಳನ್ನು ಸಹ ಆತ ರಂಗಣ್ಣನಿಗೆ ತೋರಿಸಿದನು. ಸ್ಕೂಲ್ ಕಮಿಟಿ ಮೆಂಬರುಗಳು ಸಹ ಹಾಜರಿದ್ದು ಮೇಷ್ಟರ ಕೆಲಸದ ಬಗ್ಗೆ ಮೆಚ್ಚಿಕೆಯ ಮಾತುಗಳನ್ನು ಹೇಳಿದರು.

ಸಾಯಂಕಾಲ ಕಾಫಿ ಉಪ್ಪಿಟ್ಟು, ಬಾಳೆಯ ಹಣ್ಣು ಮತ್ತು ಎಳನೀರುಗಳ ಸಮಾರಾಧನೆ ಆದ ಮೇಲೆ ರಂಗಣ್ಣ ಅಲ್ಲಿಂದ ಜನಾರ್ದನಪುರಕ್ಕೆ ಹೊರಟನು. ಮೇಷ್ಟು ದೊಡ್ಡ ರಸ್ತೆ ಸಿಕ್ಕುವವರೆಗೂ ಜೊತೆಯಲ್ಲೇ ಬಂದನು. ರಂಗಣ್ಣನು, 'ಮೇಷ್ಟೆ ! ನೀವೊಂದು ಕೆಲಸ ಮಾಡಬೇಕು. ಸ್ಕೂಲಿನ ಹಿಂಭಾಗದಲ್ಲಿ ನಿಮ್ಮ ಮನೆ ಇದೆ. ಪಕ್ಕದಲ್ಲಿ ಬಯಲು ಸಹ ಇದೆ. ಆ ಬಯಲಲ್ಲಿ ಒ೦ದು ಗುಡಿಸಿಲನ್ನು ಕಟ್ಟಿ ಕೊಂಡು ಅಲ್ಲಿ ನಿಮ್ಮ ಸೆಲೂನ್ ಇಟ್ಟುಕೊಳ್ಳಿ, ನಿಮ್ಮ ತಮ್ಮನ್ನ ಅಲ್ಲಿ ಕೆಲಸಕ್ಕೆ ಹಾಕಿ, ಪಾಠ ಶಾಲೆಯ ಕಟ್ಟಡದಲ್ಲಿ ಪಾಠಗಳನ್ನು ಮಾತ್ರ ಮಾಡಿ, ಗುಡಿಸಿಲಿಗೆ ಖರ್ಚು ಎಷ್ಟಾಗುತ್ತೆ ಹೇಳಿ ? ' ಎಂದು ಕೇಳಿದನು.

'ಮುವ್ವತ್ತು ರೂಪಾಯಿ ಆಗಬಹುದು ಸಾರ್.'

'ಒಳ್ಳೆಯದು ಮೇಷ್ಟೇ. ಶ್ಯಾನುಭೋಗರನ್ನೂ ಕಮಿಟಿ ಮೆಂಬರಗಳನ್ನೂ ಕಂಡು ಅವರಿಗೆ ನನ್ನ ಸಲಹೆ ತಿಳಿಸಿ, ಅವರೆಲ್ಲ ನಿಮ್ಮಲ್ಲಿ ವಿಶ್ವಾಸವಾಗಿದ್ದಾರೆ. ಗುಡಿಸಿಲಿಗೆ ಸಹಾಯಮಾಡುತ್ತಾರೆ. ನಾನು ಹೇಳಿದೆ ಎಂದು ತಿಳಿಸಿ, ಗೊತ್ತಾಯಿತೋ ? ಅವರು ಸಹಾಯ ಮಾಡದಿದ್ದರೆ ನನಗೆ ಕಾಗದ ಬರೆಯಿರಿ ?'

'ನನ್ನ ಹತ್ತಿರ ಇಪ್ಪತ್ತು ರುಪಾಯಿ ಮಡಗಿಕೊಂಡಿದ್ದೇನೆ ಸಾರ್. ನನ್ನ ಹೆಂಡತಿ ಸೀರೆ ಇಲ್ಲ, ತೆಕ್ಕೊಡಿ ಅಂತ ವರಾತ ಮಾಡುತ್ತಿದ್ದಾಳೆ. ತಮ್ಮ ಸಲಹೆಯೇನೋ ಚೆನ್ನಾಗಿದೆ. ಅವಳನ್ನು ಕೇಳಿ ನೋಡುತ್ತೇನೆ ಸಾರ್ .' 'ಮೇಷ್ಟರೇ ! ನಿಮ್ಮ ರೂಪಾಯಿ ನಿಮ್ಮಲ್ಲಿರಲಿ. ಮೊದಲು ಶ್ಯಾನುಭೋಗರನ್ನು ಕಂಡು ಮಾತನಾಡಿ ; ಆ ಮೇಲೆ ನನಗೆ ಕಾಗದ ಬರೆಯಿರಿ. ನನ್ನ ಸಲಹೆ ಕೇಳದೆ ನಿಮ್ಮ ರೂಪಾಯಿ ಗುಡಿಸಿಲಿಗೆ ಖರ್ಚು ಮಾಡಬೇಡಿ ; ನಿಮ್ಮ ಹೆಂಡತಿಗೆ ಸೀರೆ ಇಲ್ಲದಂತೆ ಮಾಡಬೇಡಿ' ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿದನು.

'ಅಪ್ಪಣೆ ಸ್ವಾಮಿ.'

ಪ್ರಕರಣ ೯

ಆವಲಹಳ್ಳಿಯಲ್ಲಿ ಸಭೆ

ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳೆಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ ಮುಂದಾ ಗಿಯೇ ಕಂಡು ಅವರಿಗೆ ತಕ್ಕ ಸಲಹೆಗಳನ್ನು ಕೊಟ್ಟಿದ್ದನು.

ಆವಲಹಳ್ಳಿಯಲ್ಲಂತೂ ಏರ್ಪಾಟುಗಳು ಸಂಭ್ರಮದಿಂದ ನಡೆದಿದ್ದುವು. ಪಾಠ ಶಾಲೆಯ ಮುಂದುಗಡೆ ವಿಶಾಲವಾದ ಸೊಗಸಾದ ಹಸುರುವಾಣಿ ಚಪ್ಪರ, ಅದಕ್ಕೆ ಮಾವಿನೆಲೆಯ ತೋರಣಗಳು, ಬಾಳೆಯ ಕಂಬಗಳು, ಬಣ್ಣಬಣ್ಣದ ಕಾಗದದ ಮಾಲೆಗಳು- ಇವುಗಳ ಅಲಂಕಾರ. ಊರೆಲ್ಲ ಚೊಕ್ಕಟವಾಗಿದ್ದಿತು. ಏನೋ ದೊಡ್ಡದೊಂದು ಉತ್ಸವ ನೆರವೇರುತ್ತದೆಂದು ಹಳ್ಳಿಯವರೆಲ್ಲ ಬಹಳ ಸಂಭ್ರಮದಿಂದ ಚಪ್ಪರದ ಹತ್ತಿರ ಓಡಾಡುತ್ತಿದ್ದರು.

ಸಭೆ ಸೇರುವ ಶನಿವಾರದ ಬೆಳಗ್ಗೆ ಎಂಟು ಗಂಟೆಗೆಲ್ಲ ಹಳ್ಳಿಗಳಿಂದ ಉಪಾಧ್ಯಯರುಗಳು ಬಂದು ಸೇರಿದರು. ಚಪ್ಪರದಲ್ಲಿ ಸಭೆ ನಡೆಯಲು ಏರ್ಪಾಟಾಗಿದ್ದಿತು. ಹಳ್ಳಿಯ ಮುಖಂಡರು ಕುಳಿತುಕೊಳ್ಳುವುದಕ್ಕೆ ಸ್ಥಳವನ್ನು ಏರ್ಪಡಿಸಲಾಗಿತ್ತು. ದೊಡ್ಡ ಬೋರೇಗೌಡರಿಗೆ ರಂಗಣ್ಣ ತನ್ನ ಪಕ್ಕದಲ್ಲಿಯೇ ಕುರ್ಚಿಯನ್ನು ಹಾಕಿಸಿ ಅವರನ್ನು ಕೂಡಿಸಿಕೊಂಡಿ ದ್ದನು. ಸಭೆ ಎಂಟೂವರೆ ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು. ದೇವತಾ ಪ್ರಾರ್ಥನೆ ಮುಗಿದನಂತರ ರಂಗಣ್ಣ ಅಧ್ಯಕ್ಷರ ಆರಂಭ ಭಾಷಣ ವನ್ನು ಮಾಡಿದನು : ' ಈ ದಿವಸ ಆವಲಹಳ್ಳಿಯಲ್ಲಿ ಈ ಸಭೆ ಸೇರಿರುವುದಕ್ಕೆ ಕಾರಣರಾದವರು ನನ್ನ ಮಿತ್ರರಾದ ಶ್ರೀ ದೊಡ್ಡಬೋರೇಗೌಡರು. ಅವರು ತೋರಿಸಿರುವ ಆದರಾತಿಥ್ಯಗಳಿಗೆ ಪ್ರತ್ಯುಪಕಾರವನ್ನು ನಾವು ಮಾಡಬೇಕಾದರೆ ನಮ್ಮ ನಮ್ಮ ಕೆಲಸಗಳನ್ನು ಪ್ರಾಮಾಣಿಕತೆಯಿಂದಲೂ ದಕ್ಷತೆಯಿಂದಲೂ ನೆರವೇರಿಸಿ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕು. ಇದಕ್ಕೆ ಉಪಾಧ್ಯಾಯರ ಶ್ರದ್ಧಾಯುಕ್ತವಾದ ಪ್ರಯತ್ನ ಮತ್ತು ಗ್ರಾಮಸ್ಥರ ಸಂತೋಷ ಪೂರ್ವಕವಾದ ಸಹಕಾರ- ಇವೆರಡೂ ಆವಶ್ಯಕ. ಈಗ ಉಪಾಧ್ಯಾಯರಿಗೆ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಸಾಯಂಕಾಲ ಸಭೆ ಸೇರಿದಾಗ ಗ್ರಾಮಸ್ಥರಿಗೆ ಹೇಳಬೇಕಾದುದನ್ನು ಹೇಳುತ್ತೇನೆ. ನಾನು ಹೇಳುವ ಮಾತುಗಳಿಗೆ ಉಪಾಧ್ಯಾಯರಾರೂ ಕೋಪಿಸಿಕೊಳ್ಳಬಾರದೆಂದು ಮೊದಲಿನಲ್ಲೇ ಪ್ರಾರ್ಥಿಸಿಕೊಳ್ಳುತ್ತೇನೆ.'

'ಉಪಾಧ್ಯಾಯರು ಮೊದಲಿನಲ್ಲಿ ಇಲಾಖೆಯ ರೂಲ್ಸಿನಂತೆ ನಡೆದು ಸಂವಿಧಾನನ್ನು ಪಾಲಿಸಬೇಕು. ಈಗ ಮಕ್ಕಳನ್ನು ವರ್ಷದ ಎಲ್ಲಾ ತಿಂಗಳಲ್ಲಿ ಮೊದಲನೆಯ ದರ್ಜೆಗೆ ದಾಖಲ್ಮಾಡಿಸಿಕೊಳ್ಳುತ್ತಿದ್ದೀರಿ. ಇದು ತಪ್ಪು. ಬೇಸಗೆಯ ರಜ ಮುಗಿದು ಪಾಠಶಾಲೆ ಪ್ರಾರಂಭವಾಗುವಾಗ ಒಂದು ತಿಂಗಳು ಅವಧಿಯಲ್ಲಿ ಸೇರಿಸಿಕೊಳ್ಳಬೇಕು ; ಅನಂತರ ಸೇರಿಸಬಾರದು. ನವರಾತ್ರಿಯನಂತರ ಸೇರಿಸಬಹುದೆಂದು ನಿಯಮವೇನೋ ಇದೆ. ಆದರೆ ಸ್ಥಳಾವಕಾಶ, ಪಾಠ ಹೇಳಿಕೊಡುವುದಕ್ಕೆ ಉಪಾಧ್ಯಾಯರ ಸೌಕರ್ಯ– ಇವು ಇದ್ದರೆ ಮಾತ್ರ ಸೇರಿಸಬಹುದು ; ಇಲ್ಲವಾದರೆ ಸೇರಿಸಕೂಡದು. ಇದನ್ನು ಕಡ್ಡಾಯವಾಗಿ ಆಚರಣೆಗೆ ತರಬೇಕು. ಮಕ್ಕಳಿಗೆ ಅ, ಆ, ಇ, ಈ, ಎಂಬ ಕ್ರಮದಲ್ಲಿ ವರ್ಣಮಾಲೆಯ ಅಕ್ಷರಗಳನ್ನು ತಿದ್ದಿಸುತ್ತೀರಿ. ಈ ಕ್ರಮವನ್ನು ಬಿಟ್ಟು ಪುಸ್ತಕದಲ್ಲಿ ಪಾಠಗಳಿರುವ ಕ್ರಮದಲ್ಲಿಯೇ ಪಾಠಗಳನ್ನು ಕಲಿಸಬೇಕು ; ಮತ್ತು ಮಕ್ಕಳ ಅಭಿವೃದ್ಧಿಯ ತಃಖ್ತೆಯನ್ನು ತಪ್ಪದೆ ಇಡಬೇಕು. ಉಪಾಧ್ಯಾಯರಲ್ಲಿ ಹಲವರು ಶಿಕ್ಷಣಕ್ರಮಗಳ ಪ್ರಕಾರ ಪಾಠಮಾಡುತ್ತಿಲ್ಲ. ಕೆಲವರಿಗಂತೂ ಆ ಕ್ರಮಗಳೇ ಗೊತ್ತಿಲ್ಲ. ಈಗ ಸಭೆಯಲ್ಲಿ ಆ ಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನು ಕೊಡಲಾಗುತ್ತದೆ. ಉಪಾಧ್ಯಾಯರು ಅವುಗಳಿ೦ದ ಲಾಭ ಪಡೆಯಬೇಕು' ಎಂದು ಮುಂತಾಗಿ ಹೇಳಿದನು.

ತರುವಾಯ ಭಾಷೆಯ ಪಾಠಗಳನ್ನು ಕುರಿತು ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ಭಾಷಣ ಮಾಡಿದರು. ಒಂದು ಗದ್ಯದ ಪಾಠ, ಒಂದು ಪದ್ಯದ ಪಾಠ- ಇವುಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಕ್ರಮವನ್ನು ವಿವರಿಸಿದರು. ಇದಾದ ಮೇಲೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಗಣಿತದಲ್ಲಿ ಮೂರನೆಯ ತರಗತಿಗೆ ಮಾದರಿ ಪಾಠವನ್ನು ಮಾಡಿ ತೋರಿಸಿದರು. ಇನ್ನೊಬ್ಬರು ಮುಖ್ಯೋಪಾಧ್ಯಾಯರು ಭೂಗೋಳ ಪಾಠಗಳನ್ನು ಮಾಡುವ ಕ್ರಮವನ್ನು ವಿವರಿಸಿದರು. ಮಿಡಲ್ ಸ್ಕೂಲಿನ ಸಹಾಯೋಪಾಧ್ಯಾಯರೊಬ್ಬರು ಚರಿತ್ರೆಯ ಸಾರಗಳಿಗೆ ಬೇಕಾದ ಉಪಕರಣಗಳನ್ನೂ ಅವುಗಳನ್ನು ಶೇಖರಿಸುವ ಕ್ರಮವನ್ನೂ ಪಾಠಗಳಲ್ಲಿ ಉಪಯೋಗಿಸುವ ಕ್ರಮವನ್ನೂ ತಿಳಿಸಿದರು. ಇಷ್ಟು ಹೊತ್ತಿಗೆ ಹತ್ತೂವರೆ ಗಂಟೆ ಆಯಿತು ಆಮೇಲೆ ರಂಗಣ್ಣನು ಉಪಾಧ್ಯಾಯರನ್ನು ಕುರಿತು, ಭಾಷೆಯ ಪಾಠ ಮಾಡುವುದರಲ್ಲಿ ಮತ್ತು ಗಣಿತ ಪಾಠಗಳಲ್ಲಿ ನಿಮಗೆ ಏನಾದರೂ ಕಷ್ಟಗಳಿದ್ದರೆ ತಿಳಿಸಿ, ಅವುಗಳಿಗೆ ಪರಿಹಾರೋಪಾಯಗಳನ್ನು ಚರ್ಚಿಸೋಣ ” ಎಂದು ಹೇಳಿದನು. ಕೆಲವರು ಉಪಾಧ್ಯಾಯರು ನಿಂತುಕೊಂಡು ಕೆಲವು ಭಾಗಗಳ ಮೇಲೆ ವಿವರಣೆ ಕೇಳಿದರು. ಅವುಗಳಿಗೆಲ್ಲ ರಂಗಣ್ಣನೇ ಪರಿಹಾರಗಳನ್ನು ವಿವರಿಸಿದನು. ಪ್ರಾತಃಕಾಲದ ಸಭೆ ಹನ್ನೊಂದೂವರೆ ಗಂಟೆಯವರೆಗೂ ನಡೆಯಿತು. ಮುಕ್ತಾಯವಾಗುವಾಗ ರಂಗಣ್ಣನು, ' ಈಗ ತಿಳಿಸಿದ ಕ್ರಮಗಳನ್ನು ಆಚರಣೆಗೆ ತರಬೇಕಾದುದು ಮುಖ್ಯ. ಪ್ರತಿ ತಿಂಗಳಲ್ಲೂ ಹೀಗೆಯೇ ಪಾಠಗಳ ವಿಷಯದಲ್ಲಿ ತಿಳಿವಳಿಕೆಯನ್ನು ಕೊಡುತ್ತೇವೆ. ನೀವುಗಳು ಸಹ ಬೋಧನೆಯಲ್ಲಿ ನಿಮಗಿರುವ ತೊಡಕುಗಳನ್ನು ಗುರುತು ಹಾಕಿಕೊಂಡು ಬಂದು ಅವುಗಳಿಗೆ ಪರಿಹಾರವನ್ನು ಪಡೆಯಿರಿ. ಉಪಾಧ್ಯಾಯರಿಗೆಲ್ಲ ಹೇಳಬೇಕಾದ ಇನ್ನೊಂದು ಮುಖ್ಯ ವಿಚಾರವಿದೆ. ಈಗ ನನ್ನ ಅನುಭವದಲ್ಲಿ ಕೆಲವರು ಉಪಾಧ್ಯಾಯರು ನಿಯಮಗಳನ್ನು ಅತಿಕ್ರಮಿಸುತ್ತಲೂ ತಾತ್ಸಾರದಿಂದಲೂ ಕೆಲಸ ಮಾಡುತ್ತಿದಾರೆ. ಅವರನ್ನು ದಂಡಿಸುವ ಅಧಿಕಾರವನ್ನೇನೋ ಸರಕಾರದವರು ನನಗೆ ಕೊಟ್ಟಿದ್ದಾರೆ. ದಂಡನೆ ಮಾಡುವುದು ಯಾವಾಗಲೂ ಒಳ್ಳೆಯದಲ್ಲ. ಸೌಹಾರ್ದವನ್ನು ಕೆಡಿಸುತ್ತದೆ, ದ್ವೇಷವನ್ನು ಬೆಳೆಸುತ್ತದೆ. ಆದರೆ ಕರ್ತವ್ಯ ದೃಷ್ಟಿಯಿಂದ ದಂಡನೆಯನ್ನು ಮಾಡಲೇಬೇಕಾಗುತ್ತದೆ. ನಾನಾಗಿ ಮಾಡಿದರೆ ಇನ್ಸ್ಪೆಕ್ಟರ್ ಸಾಹೇಬರು ದಬ್ಬಾಳಿಕೆ ನಡೆಸುತ್ತಾರೆ ಎಂದು ಉಪಾಧ್ಯಾಯರು ದೂರುತ್ತಾರೆ. ಇದಕ್ಕಾಗಿ ನಾನೊಂದು ಆಲೋಚನೆ ಮಾಡಿದ್ದೇನೆ. ನೀವುಗಳೆಲ್ಲ ಒಪ್ಪುವಹಾಗಿದ್ದರೆ ಅದರಂತೆ ನಡೆಯಲು ನಾನು ಸಿದ್ಧನಾಗಿದ್ದೇನೆ. ನಿಮ್ಮ ಪ್ರತಿನಿಧಿಗಳಾಗಿ ನಾಲ್ಕು ಜನ ಉಪಾಧ್ಯಾಯರನ್ನು ಚುನಾವಣೆ ಮಾಡಿರಿ. ಅವರದೊಂದು ಸಮಿತಿ ಏರ್ಪಡಿಸೋಣ. ಅದಕ್ಕೆ ನಾನು ಅಧ್ಯಕ್ಷನಾಗಿರುತ್ತೇನೆ. ಆ ಸಮಿತಿಗೆ ಎಲ್ಲ ದಂಡನಾಧಿಕಾರವನ್ನೂ ಬಿಟ್ಟು ಕೊಡುತ್ತೇನೆ. ಉಪಾಧ್ಯಾಯರ ತಪ್ಪು ನಡತೆಯನ್ನೂ ಸಂಬಂಧಪಟ್ಟ ಕಾಗದಗಳನ್ನೂ ಸಮಿತಿಯ ಮುಂದೆ ಇಟ್ಟು, ಅಲ್ಲಿ ಆಗುವ ಬಹುಮತದ ತೀರ್ಮಾನದಂತೆ ನಡೆಯುತ್ತೇನೆ. ಅವರು ದಂಡನೆ ಮಾಡಕೂಡದು ಎಂದು ಹೇಳಿದರೆ ಮಾಡುವುದಿಲ್ಲ ; ಮಾಡಬೇಕು ಎಂದು ಹೇಳಿದರೆ ಮಾಡುತ್ತೇನೆ. ಈ ಸಲಹೆಯನ್ನು ಆಲೋಚನೆ ಮಾಡಿ- ಎಂದು ಹೇಳಿದನು. ಸ್ವಲ್ಪ ಚರ್ಚೆಗಳಾದ ನಂತರ ಉಪಾಧ್ಯಾಯರು, ' ಸ್ವಾಮಿ ! ಸಮಿತಿಯೇನೂ ಬೇಡ. ತಾವೇನೋ ಒಳ್ಳೆಯ ಸಲಹೆಯನ್ನೆ ಮಾಡಿದಿರಿ, ದಂಡನೆ ಮಾಡಬೇಕೆಂಬ ಅಭಿಲಾಷೆ ತಮಗಿಲ್ಲವೆಂಬುದು ಈ ರೇಂಜಿನ ಉಪಾಧ್ಯಾಯರಿಗೆಲ್ಲ ಗೊತ್ತು. ಆದರೆ ಈಗ ನಾವು ಯಾರಾದರೂ ತಪ್ಪು ಮಾಡಿದರೆ ಅದು ಆ ಉಪಾಧ್ಯಾಯರಿಗೆ ಮಾತ್ರ ಮತ್ತು ತಮಗೆ ಮಾತ್ರ ತಿಳಿದಿರುತ್ತದೆ. ಮುಂದೆ ಆ ತಪ್ಪು ಸಮಿತಿಗೆಲ್ಲ ತಿಳಿದು ಕಡೆಗೆ ಇತರರಿಗೂ ತಿಳಿದು ಉಪಾಧ್ಯಾಯರ ಮಾನ ಹೋಗುತ್ತದೆ. ಆದ್ದರಿಂದ ಏನಿದ್ದರೂ ಆ ತಪ್ಪುಗಳನ್ನು ದಯವಿಟ್ಟು ತಮ್ಮ ಹೊಟ್ಟೆಯಲ್ಲಿಯೇ ಇಟ್ಟು ಕೊಂಡು ನಮ್ಮನ್ನು ಕಾಪಾಡಿಕೊಂಡು ಬರಬೇಕು. ಮುಖ್ಯವಾಗಿ ಹೇಳುವುದಾದರೆ, ಹಿಂದಿನವರು ನಮಗೆ ಯಾವುದೆಂದು ತಿಳಿವಳಿಕೆಯನ್ನೂ ಕೊಡದೆ ಸುಮ್ಮನೆ ದಂಡನೆ ಮಾಡುತ್ತಿದ್ದರು. ಹಿಂದಿನ ಇನ್ ಸ್ಪೆಕ್ಷನ್ನಿನ ವರದಿಗಳನ್ನು ತಾವು ನೋಡಿದ್ದೀರಿ. ಬರೆದಿರುವುದೆಲ್ಲ ಇಂಗ್ಲಿಷಿನಲ್ಲಿ. ನಮಗೆ ಆ ಭಾಷೆ ಬರುವುದಿಲ್ಲವೆಂದು ಸ್ವಾಮಿಯವರಿಗೆ ಗೊತ್ತು, ಅವರು ಏನು ಬರೆದಿದ್ದಾರೆಂಬುದನ್ನು ತಿಳಿದು ಕೊಳ್ಳುವುದಕ್ಕೆ ನಾವು ಜನಾರ್ದನಪುರಕ್ಕೋ ಮತ್ತೆಲ್ಲಿಗೋ ಹೋಗಿ ಇಂಗ್ಲಿಷ್ ತಿಳಿದವರಿಂದ ಓದಿಸಿ ಅರ್ಥ ಹೇಳಿಸಿಕೊಳ್ಳಬೇಕಾಗಿತ್ತು. ಸ್ವಾಮಿಯವರ ಕಾಲದಲ್ಲಿ ಅವುಗಳೆಲ್ಲ ತಪ್ಪಿವೆ. ಆರು, ಏಳು ಪುಟಗಳಷ್ಟು ಕನ್ನಡದಲ್ಲಿಯೇ ತಮ್ಮ ವರದಿಗಳನ್ನು ಬರೆದು ತಿದ್ದಿಕೊಳ್ಳಬೇಕಾದ ಅಂಶಗಳನ್ನು ನಮೂದಿಸಿರುತ್ತೀರಿ. ಇನ್ನು ಮುಂದೆ ಉಪಾಧ್ಯಾಯಯರು ತಪ್ಪು ಮಾಡುವುದಕ್ಕೆ ಅವಕಾಶ ಕಡಮೆ. ಆದ್ದರಿಂದ ಸಮಿತಿಯೇನೂ ಇಲ್ಲದೆ ತಾವೇ ನಮ್ಮನ್ನು ಕಾಪಾಡಿಕೊಂಡು ಬರಬೇಕು? ಎಂದು ಹೇಳಿಬಿಟ್ಟರು.

ಒಳ್ಳೆಯದು. ಶ್ರೀ ದೊಡ್ಡಬೋರೇಗೌಡರ ಔದಾರ್ಯದಿಂದ ಈ ದಿನ ನಿಮಗೆಲ್ಲ ಔತಣದ ಏರ್ಪಾಟಾಗಿದೆ. ಇನ್ನು ಭೋಜನಕ್ಕೆ ಸಿದ್ಧರಾಗೋಣ. ಮಧ್ಯಾಹ್ನ ಎರಡೂವರೆಯಿಂದ ಮೂರುವರೆವರೆಗೆ ಡ್ರಾಯಿಂಗ್, ಮಣ್ಣಿನ ಕೆಲಸ ಮತ್ತು ಇತರ ಕೈ ಕೆಲಸಗಳ ವಿಚಾರದಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರಿಗೆ ತಿಳಿವಳಿಕೆ ಕೊಡಲಾಗುತ್ತದೆ. ಮೂರೂವರೆ ಗಂಟೆಯಿಂದ ಬಹಿರಂಗ ಸಭೆ ನಡೆಯುತ್ತದೆ' ಎಂದು ರಂಗಣ್ಣನು ಹೇಳಿ ಸಭೆಯನ್ನು ಮುಗಿಸಿದನು.

ಸ್ಥಳದ ಉಪಾಧ್ಯಾಯರೊಬ್ಬರು, ಅವನ ನೆಂಟನೊಬ್ಬನು ಮತ್ತು ಗೋಪಾಲ ಸೇರಿ ಆ ದಿನದ ಅಡಿಗೆಯನ್ನು ಮಾಡಿದ್ದರು. ಸಕ್ಕರೆಗುಂಬಳ ಕಾಯಿ ಹಾಕಿ ಬೇಳೆಹುಳಿ, ಹುರುಳಿಕಾಯಿಯ ಪಲ್ಯ, ಚಿತ್ರಾನ್ನ, ಬೋಂಡ ಮತ್ತು ಪಾಯಸ- ಆ ದಿನದ ಅಡಿಗೆ, ಅಡಿಗೆಯೆಲ್ಲ ಮುಗಿಯಿತೆಂದು ವರ್ತಮಾನ ಬರುತ್ತಲೂ ಎಲೆಗಳನ್ನು ಹಾಕುವುದಕ್ಕೆ ಪ್ರಾರಂಭಿಸಿದರು. ಆಗ ಆ ಊಟದ ಏರ್ಪಾಟಿನ ಬದನಾಮಿ ರಂಗಣ್ಣನಿಗೆ ತಿಳಿಯಿತು. ಏನೋ ಒಂದು ಉದಾತ್ತವಾದ ಧೈಯದಿಂದ ಕಾರ್ಯವೊಂದನ್ನು ಕೈಕೊಂಡರೆ ಉತ್ಸಾಹಭಂಗಮಾಡುವ ಸಂದರ್ಭಗಳು ಹೇಗೆ ಬಂದು ಕೂಡಿಕೊಳ್ಳುತ್ತವೆ ಎನ್ನುವುದು ಅವನ ಅನುಭವಕ್ಕೆ ಬಂದಿತು. ಬ್ರಾಹ್ಮಣ ಉಪಾಧ್ಯಾಯರು ಅಡಿಗೆಯ ಮನೆಯ ಸಮೀಪದಲ್ಲಿ ಎಲೆಗಳನ್ನು ಹಾಕಿಕೊಂಡು ಕುಳಿತರು. ಉಳಿದವರಿಗೆಲ್ಲ ಪಾಠ ಶಾಲೆಯ ಕಟ್ಟಡದಲ್ಲಿ ಎಲೆಗಳನ್ನು ಹಾಕಬಹುದೆಂದು ಆಲೋಚಿಸಿದ್ದರೆ ಉಪಾಧ್ಯಾಯರಲ್ಲಿ ಮೂವರು ಆದಿಕರ್ಣಾಟಕರಿದ್ದರು. ಆ ಉಪಾಧ್ಯಾಯರು ತಮಗೆ ಉತ್ತಮ ಜಾತಿಯವರೊಡನೆ ಸಹಪಂಕ್ತಿ ಭೋಜನ ಇಲ್ಲವೆಂಬುದನ್ನು ಮೊದಲೇ ತಿಳಿದುಕೊಂಡಿದ್ದರು. ಅವರು ರಂಗಣ್ಣನ ಬಳಿಗೆ ಬಂದು 'ಸ್ವಾಮಿ ! ನಾವು ಈ ಊರೊಳಗೆ ಬೇರೆ ಏರ್ಪಾಟು ಮಾಡಿಕೊಂಡಿದ್ದೇವೆ. ನಮ್ಮ ಜನ ಇದ್ದಾರೆ. ಅಪ್ಪಣೆ ಆದರೆ ಊಟ ಮಾಡಿ ಕೊಂಡು ಬರುತ್ತೇವೆ' ಎಂದರು. ರಂಗಣ್ಣ ಒಂದು ನಿಮಿಷ ಆಲೋಚನೆ ಮಾಡಿ ಅಡಿಗೆಯ ಮನೆಗೆ ಹೋಗಿ ದೊಡ್ಡ ಎಲೆಗಳಲ್ಲಿ ಚಿತ್ರಾನ್ನ ಮತ್ತು ಬೋಂಡಗಳನ್ನು ಕಟ್ಟಿಸಿ, ಪಾತ್ರೆಯೊಂದರಲ್ಲಿ ಪಾಯಸವನ್ನು ಹಾಕಿಸಿ ಉಪಾಧ್ಯಾಯರೊಬ್ಬರ ಕೈಯಲ್ಲಿ ತೆಗೆಸಿಕೊಂಡು ಬಂದನು. ಆ ಆದಿಕರ್ಣಾಟಕ ಉಪಾಧ್ಯಾಯರಿಗೆ ಅವುಗಳನ್ನು ಕೊಡಿಸಿ, ' ಮೇಷ್ಟೇ ! ನಿಮ್ಮ ಜನರ ಮನೆಯಲ್ಲಿ ಊಟ ಮಾಡಿ. ಜೊತೆಯಲ್ಲಿ ಇವುಗಳನ್ನೂ ಊಟ ಮಾಡಿ, ಮುಂದೆ ಒಳ್ಳೆಯ ಕಾಲ ಬರುತ್ತದೆ. ಆಗ ಈ ಭೇದಗಳೆಲ್ಲ ಹೋಗುತ್ತವೆ' ಎಂದು ಹೇಳಿ ಕೊಟ್ಟು ಕಳುಹಿಸಿದನು. ಆ ಉಪಾಧ್ಯಾಯರು, 'ಚಿಂತೆಯಿಲ್ಲ ಸ್ವಾಮಿ-ನಮಗೆ ಇದೆಲ್ಲ ರೂಢಿಯಾಗಿ ಹೋಗಿದೆ' ಎಂದು ಹೇಳಿ ಕೈ ಮುಗಿದು ಹೊರಟರು.

ಸದ್ಯ ಹೆಚ್ಚು ಗಲಭೆಯಿಲ್ಲದೆ ಈ ಪ್ರಕರಣ ಮುಗಿಯಿತೆಂದು ರಂಗಣ್ಣ ಹಿಂದಿರುಗುತ್ತಿದ್ದಾಗ ಇಬ್ಬರು ಉಪಾಧ್ಯಾಯರು- ದೊಡ್ಡ ದೊಡ್ಡ ನಾಮಗಳನ್ನು ಧರಿಸಿದವರು~ ಬಂದು ಕೈ ಮುಗಿದರು. 'ಏನು ಮೇಷ್ಟೆ ! ನಡೆಯಿರಿ ಊಟಕ್ಕೆ ಹೊರಡೋಣ ' ಎಂದು ರಂಗಣ್ಣನು ಹೇಳಿದನು.

' ಸಾರ್ ! ನಾವು ಇಲ್ಲಿ ಊಟ ಮಾಡುವುದಿಲ್ಲ. ನಾವು ಸ್ವಲ್ಪ ಬುತ್ತಿ ಕಟ್ಟಿಕೊಂಡು ಬಂದಿದ್ದೇವೆ' ಎಂದು ಅವರು ಹೇಳಿದರು.

ರಂಗಣ್ಣನು- ಇವನ್ಯಾರೋ ನಿಷ್ಠಾವಂತರಾದ ಐಯ್ಯಂಗಾರ್ ಮೇಷ್ಟರುಗಳಿರಬಹುದು, ನಲ್ಲಿ ನೀರು ಕುಡಿಯದೆ ಬಾವಿ ನೀರು ಕುಡಿಯುವ ಜನ. ಅವರ ಮಡಿ ಮತ್ತು ಆಚಾರಗಳಿಗೆ ನಾನೇಕೆ ಅಡ್ಡಿ ಬರಲಿ ? ಪುಳಿಯೊಗರೆ ಕಟ್ಟಿ ಕೊಂಡು ಬಂದಿರಬಹುದು--- ಎಂದು ಆಲೋಚನೆ ಮಾಡಿದನು. ಆದರೂ ಬ್ರಾಹ್ಮಣರಲ್ಲೇ ಈ ಒಳ ಪಂಗಡಗಳೇಕೆ ? ಒಬ್ಬಿಬ್ಬರು ಐಯ್ಯಂಗಾರ್‌ ಬ್ರಾಹ್ಮಣರು ಅಡಿಗೆಯ ಮನೆಯ ಹತ್ತಿರ ಕುಳಿತಿದ್ದಾರಲ್ಲ, ಅವರ ಜೊತೆಯಲ್ಲಿ ಇವರು ಸಹ ಕುಳಿತುಕೊಳ್ಳ ಬಹುದಲ್ಲ - ಎಂಬುದಾಗಿ ಪುನಃ ಆಲೋಚನೆ ಮಾಡಿ, 'ಮೇಷ್ಟೆ ! ನೀವು ಅಡಿಗೆಯ ಮನೆಯ ಹತ್ತಿರ ನಿಮ್ಮ ಜನರೊಂದಿಗೆ ಕುಳಿತುಕೊಳ್ಳಬಹುದಲ್ಲ' ಎಂದು ಸಲಹೆ ಕೊಟ್ಟನು.

'ಸಾರ್ ! ನಾವು ವೆಂಕಟಾಪುರದ ವೈಷ್ಣವರು ! ನಾವು ಅವರ ಜೊತೆಯಲ್ಲಿ ಸೇರುವುದಿಲ್ಲ.'

ವೆಂಕಟಾಪುರದ ವೈಷ್ಣವರು ಎಂಬುವರು ಯಾರು ? ಎನ್ನುವುದು ರಂಗಣ್ಣನಿಗೆ ತಿಳಿಯದು. ಅಂತೂ ಯಾರೋ ಬಹಳ ಆಚಾರವಂತರು ಎಂದು ತೀರ್ಮಾನಿಸಿಕೊಂಡು, 'ಒಳ್ಳೆಯದು ಮೇಷ್ಟ್ರೇ! ನಿಮ್ಮ ಬುತ್ತಿಯಲ್ಲಿ ನನಗೂ ಸ್ವಲ್ಪ ಮಿಗಿಸಿರಿ !' ಎಂದು ನಗುತ್ತಾ ಹೇಳಿ ಕಳುಹಿಸಿಬಿಟ್ಟನು.

ಬಳಿಕ ಪಾಠಶಾಲೆಯ ಕಟ್ಟಡದಲ್ಲಿ ಏನು ಏರ್ಪಾಡಿದೆಯೋ ನೋಡೋಣವೆಂದು ಬರುತ್ತಿದ್ದಾಗ ಇಬ್ಬರು ಉಪಾಧ್ಯಾಯರು ಬಂದು, 'ಸ್ವಾಮಿ ! ನಾವು ವಿಶ್ವಕರ್ಮ ಜನಾಂಗ, ಇಲ್ಲಿ ನಾವು ಊಟ ಮಾಡುವುದಿಲ್ಲ.' ಎಂದು ಹೇಳಿದರು.

'ಹಾಗಾದರೆ, ಉಪವಾಸ ಇರುತ್ತಿರಾ ?'

'ಇನ್ನೇನು ಮಾಡುವುದು ಸಾರ್ ! ಏನಾದರೂ ಬಾಳೇಹಣ್ಣು ದೊರೆತರೆ ತೆಗೆದುಕೊಂಡು ತಿನ್ನುತ್ತೇವೆ.' ರಂಗಣ್ಣನಿಗೆ ಬಹಳ ವ್ಯಥೆಯಾಯಿತು. ಇಷ್ಟೊಂದು ಜನ ಔತಣದ ಭೋಜನ ಮಾಡುವಾಗ ಈ ಇಬ್ಬರು ಉಪಾಧ್ಯಾಯರು ಹಸಿದುಕೊಂಡು ಸಪ್ಪೆ ಮುಖಗಳನ್ನು ಮಾಡಿಕೊಂಡು ಕುಳಿತಿದ್ದರೆ ಹೇಗೆ ತಾನೆ ಇತರರು ಸಂತೋಷದಿಂದ ಇರಬಹುದು ? ಇದಕ್ಕೆ ಪರಿಹಾರವೇನು ? ಎಂದು ಆಲೋಚನೆ ಮಾಡಿ, 'ಮೇಷ್ಟ್ರೇ ! ನಾಲ್ಕು ಬೊಂಡಾಗಳನ್ನಾದರೂ ತಿನ್ನುತ್ತೀರಾ ? ನೀವು ಜನಾರ್ದನಪುರಕ್ಕೆ ಬಂದಾಗಲೋ ಬೆಂಗಳೂರಿಗೆ ಹೋದಾಗಲೋ ಹೋಟಲುಗಳಲ್ಲಿ ತಿಂಡಿ ತೆಗೆದುಕೊಳ್ಳುವುದುಂಟಷ್ಟೆ ?' ಎಂದು ಕೇಳಿದನು. ಆ ಮೇಷ್ಟರುಗಳು ಒಬ್ಬರ ಮುಖವನ್ನೊಬ್ಬರು ನೋಡುತ್ತ ನಿಂತುಕೊಂಡು ಕಡೆಗೆ, 'ಅಲ್ಲಿ ನಮ್ಮ ಜನರ ಹೋಟೆಲುಗಳಿವೆ ಸಾರ್ ! ಅಲ್ಲಿ ತಿಂಡಿ ತೆಗೆದುಕೊಳ್ಳುತ್ತೇವೆ. ಇಲ್ಲಿ ನಾವು ಬೋಂಡಾ ಸಹಾ ತಿನ್ನೋದಿಲ್ಲ ' ಎಂದು ಹೇಳಿಬಿಟ್ಟರು.

'ನೀವು ಉಪವಾಸ ಇರಬೇಡಿ ಮೇಷ್ಟ್ರೇ, ನಿಮಗೆ ಹಾಲೂ ಹಣ್ಣು, ಕಡಲೆಕಾಯಿ, ಪುರಿ ಮೊದಲಾದುವನ್ನು ಕೊಡಿಸುತ್ತೇನೆ' ಎಂದು ಹೇಳಿ ರಂಗಣ್ಣನು ಅವುಗಳ ವ್ಯವಸ್ಥೆ ಮಾಡಿದನು.

ಆ ಉಪಾಧ್ಯಾಯರು ಅತ್ತ ಹೊರಟರು. ಇತ್ತ ಪಾಠಶಾಲೆಯ ಕಟ್ಟಡದಲ್ಲಿ ಗಲಾಟೆಗೆ ಪ್ರಾರಂಭವಾಗಿ ಸ್ವಲ್ಪ ಮಾರಾಮಾರಿ ನಡೆಯುವುದಾಗಿ ರಂಗಣ್ಣನಿಗೆ ಕಂಡುಬಂತು. ಬೇಗ ಒಳಕ್ಕೆ ಹೋಗಿ, ' ಏನಿದು ಮೇಷ್ಟರ ಗಲಾಟೆ ! ಊಟದ ಹೊತ್ತಿನಲ್ಲಿ ಎಲ್ಲರೂ ಸಿಪಾಯಿಗಳಾಗಿ ಯುದ್ಧಕ್ಕೆ ನಿಂತಿದ್ದಿರಿ' ಎಂದು ಸ್ವಲ್ಪ ಗದರಿಸಿದನು. ಒಳಗಿನ ವಾತಾವರಣ ಸ್ವಲ್ಪ ಶಾಂತವಾಯಿತು. ಒಬ್ಬ ಮೇಷ್ಟು ಕೈ ಮುಗಿದು, 'ನೋಡಿ ಸ್ವಾಮಿ ! ನಾವು ಒಕ್ಕಲಿಗರು, ಈ ಉಪ್ಪಾರ ಮೇಷ್ಟ್ರು ನಮ್ಮ ಮಧ್ಯೆ ಬಂದು ಕುಳಿತುಕೊಂಡಿದ್ದಾರೆ. ಅವರು ಜಾತಿಯಲ್ಲಿ ಕೀಳು. ಆ ಮೇಷ್ಟರಿಗೆ, ಎದ್ದು ದೂರ ಹೋಗು ಎಂದರೆ ಆತ ಹೋಗುವುದಿಲ್ಲ.' - ಎಂದು ದೂರು ಹೇಳಿದನು.

'ಆಗಲಿ, ಎಲ್ಲರಿಗೂ ತಕ್ಕ ಏರ್ಪಾಟು ಮಾಡುತ್ತೇವೆ' ಎಂದು ರಂಗಣ್ಣನು ಹೇಳಿ ಕೆಲವರನ್ನು ಪಕ್ಕದ ಎರಡು ಕೊಠಡಿಗಳಿಗೆ ಹಂಚಿ ಮಧ್ಯದ ಹಾಲಿನಲ್ಲಿ ಒಕ್ಕಲಿಗ ಮೇಷ್ಟರುಗಳಿಗೆ ಸ್ಥಳವನ್ನು ಬಿಡಿಸಿದನು. ಅಷ್ಟಕ್ಕೆ ಆ ಪುರಾಣ ಮುಗಿಯಲಿಲ್ಲ. ಕೊಠಡಿಗಳಲ್ಲಿ, ' ಸಾರ್ ! ನಾವು ಈ ಮೇಷ್ಟು ಮುನಿಸಾಮಿಯನ್ನು ನಮ್ಮ ಜೊತೆಯಲ್ಲಿ ಸೇರಿಸುವುದಿಲ್ಲ' ಎಂದು ಗಲಭೆ ಎದ್ದಿತು. ಕಡೆಗೆ ರಂಗಣ್ಣ ಆಯಾ ಉಪಾಧ್ಯಾಯರ ಜಾತಿಗಳನ್ನು ವಿಚಾರಿಸಿ, ಗೋಡೆಗಿದ್ದ ಕಪ್ಪು ಹಲಗೆಗಳನ್ನೆಲ್ಲ ಇಳಿಸಿ ಮಧ್ಯದಲ್ಲಿ ಅಡ್ಡವಿಟ್ಟು, ಕುಂಬಾರರು, ಕುಂಚಟಿಗರು, ಉಪ್ಪಾರರು, ನಾಯಿಂದರು, ಬಣಜಿಗರು-ಮೊದಲಾದವರಿಗೆಲ್ಲ ಬೇರೆ ಬೇರೆ ಅಂಕಣಗಳನ್ನು ಏರ್ಪಡಿಸಿ ಅಲ್ಲಿಂದ ಹೊರಟನು, ದೇವರೇ ! ಈ ಜನಾಂಗ ವನ್ನು ನೀನು ಹೇಗೆ ತಾನೆ ಉದ್ಧಾರ ಮಾಡುತ್ತಿರೋ ನನಗೆ ತಿಳಿಯದು. ಬ್ರಾಹ್ಮಣರು ಬ್ರಾಹ್ಮಣೇತರರು ಎಂಬ ಭೇದಭೂತವೊಂದು ದೇಶದಲ್ಲಿ ನಾಟ್ಯವಾಡುತ್ತಿದೆಯಲ್ಲ ! ಅದೆಂದಿಗೆ ತೊಲಗೀತೋ ಎಂದು ಹಾರೈಸುತ್ತಿದ್ದರೆ ಈ ಮರಿದೆವ್ವಗಳು ಅಸಂಖ್ಯಾತವಾಗಿ ತುಂಬಿ ಕೊಂಡಿವೆ. ಬೆಂಗಳೂರು ಮತ್ತು ಮೈಸೂರು ಪಟ್ಟಣಗಳಲ್ಲಿ ಭಾಷಣಗಳನ್ನೂ ಘೋಷಣೆಗಳನ್ನೂ ಮಾಡುವ ರಾಜಕೀಯ ಚಳವಳಿಗಾರರು ಮೊದಲು ಈ ಮರಿದೆವ್ವಗಳಿಗೆ ಮದ್ದು ಹುಡುಕಿದರೆ ಸಾಕು ; ದೇಶಕ್ಕೆ ದೊಡ್ಡ ಸೇವೆ ಮಾಡಿದ ಹಾಗಾಗುತ್ತದೆ. - ಎಂದು ಹೇಳಿಕೊಳ್ಳುತ್ತ ಭಗ್ನೋತ್ಸಾಹಿಯಾಗಿ ಹಿಂದಿರುಗಿದನು.

ಚಪ್ಪರದಲ್ಲಿ ಒಂದು ಕಡೆ ನಾಲ್ಕು ಜನ ಉಪಾಧ್ಯಾಯರ ಗುಂಪೊಂದು ಸೇರಿತ್ತು. 'ಈ ಮೇಷ್ಟರುಗಳು ಏನು ಮಸಲತ್ತು ಮಾಡುತ್ತಿದಾರೋ ! ಅವರು ಯಾವ ಜಾತಿಯೋ !' ಎಂದು ಕೊಂಡು ರಂಗಣ್ಣ ಅವರಲ್ಲಿಗೆ ಹೋದನು. ಆ ಗುಂಪಿನಲ್ಲಿದ್ದ ಬಸವಯ್ಯ ಎಂಬ ಮೇಷ್ಟು ಕೈ ಮುಗಿದು ಸ್ವಾಮಿಯವರಿಗೆ ಮೊದಲೇ ಗೊತ್ತಿದೆ. ನಾವೆಲ್ಲ ಲಿಂಗಾಯತರು. ಈ ಊರಲ್ಲಿ ನನ್ನ ನೆಂಟರು ಇದ್ದಾರೆ. ಅವರ ಮನೆಯಲ್ಲಿ ಊಟಕ್ಕೆ ಬರ ಹೇಳಿದ್ದಾರೆ, ಬಾರಪ್ಪ, ಊಟಕ್ಕೆ ಹೋಗೋಣ ಎಂದು ಕರೆದರೆ ಈ ರೇಣುಕಾರಾಧ್ಯ ಮೇಷ್ಟು ತಾನು ಅಲ್ಲಿಗೆ ಬರುವುದಿಲ್ಲ ಎಂದು ಹಟಮಾಡುತ್ತಿದ್ದಾನೆ. ಇದೊಂದು ಬಂಡಾಟ ಆಗಿದೆ. ಸ್ವಾಮಿಯವರು ಪರಿಹಾರ ಮಾಡಬೇಕು ? ಎಂದನು.

'ಅದೇಕೆ ಮೇಷ್ಟೆ ? ನೀವೆಲ್ಲ ಲಿಂಗಾಯತರು, ಒಂದು ಜನ. ಅವರು ವಿಶ್ವಾಸದಿಂದ ಊಟಕ್ಕೆ ಕರೆಯುವಾಗ ಹೋಗದೆ ಹಟ ಮಾಡುತ್ತೀರಿ, ಇದು ಚೆನ್ನಾಗಿಲ್ಲ, ”

'ನಾವು ಗುರುವರ್ಗದವರು ; ಆಚಾರ್ಯ ಸಂಪ್ರದಾಯದವರು ಸಾರ್ ! ಇವರದೆಲ್ಲ ಸಂಕರಜಾತಿ, ಬೇಕುಬೇಕೆಂದು ಈಗ ನನ್ನನ್ನು ಊಟಕ್ಕೆ ಕರೆಯುತ್ತಾರೆ. ನಾಳೆ ನಮ್ಮ ಮಠದವರಿಗೆ ತಿಳಿದರೆ ಅವರು ನನಗೆ ಬಹಿಷ್ಕಾರ ಹಾಕಿಬಿಡುತ್ತಾರೆ.'

ಬಸವಯ್ಯ ಮಧ್ಯೆ ಬಾಯಿ ಹಾಕಿ, 'ನಾವೇನೂ ಸಂಕರಜಾತಿ ಅಲ್ಲ ಸಾರ್ ! ನಮಗೂ ಅವರಿಗೂ ಭೇದ ಏನೂ ಇಲ್ಲ. ಈಚೆಗೆ ಇವರಿಗೆಲ್ಲ ಯಾರೋ ಹೇಳಿಕೊಟ್ಟಿದ್ದಾರೆ ; ಅದರ ಮೇಲೆ ತಾವೆಲ್ಲ ಬೇರೆ, ಗುರುವರ್ಗದವರು, ನಮಗಿಂತ ಹೆಚ್ಚು ಎಂದು ಹೇಳಿಕೊಳ್ಳುತ್ತಾರೆ' ಎಂದನು.

ರಂಗಣ್ಣನು 'ಮೇಷ್ಟೆ ! ನನಗೆ ಈ ಭೇದಗಳೊಂದೂ ಗೊತ್ತಿಲ್ಲ. ರೇಣುಕಾರಾಧ್ಯರನ್ನು ಬಲಾತ್ಕಾರ ಮಾಡಬೇಡಿ. ಸಂತೋ ಷವಾಗಿ ಬಂದರೆ ಕರೆದು ಕೊಂಡು ಹೋಗಿ. ಇಲ್ಲವಾದರೆ ಬಿಟ್ಟು ಬಿಡಿ. ಇಲ್ಲಿ ಜಾತಿ ಮತ್ತು ಮತಗಳ ವ್ಯಾಜ್ಯ ಮಾತ್ರ ಬೇಡ' ಎಂದು ಹೇಳಿ ನಿಟ್ಟುಸಿರು ಬಿಟ್ಟನು.

ಕಡೆಗೆ ಆ ಮೂವರು ಉಪಾಧ್ಯಾಯರು ಊಟಕ್ಕೆ ಹೋದರು ; ರೇಣುಕಾರಾಧ್ಯರೊಬ್ಬರೇ ಉಳಿದರು. ರಂಗಣ್ಣನು ಅವರನ್ನು ನೋಡಿ, ಮೇಷ್ಟೇ ! ನೀವು ಗುರುವರ್ಗದವರು ; ಉತ್ತಮ ಜಾತಿ. ನಾನು ಬ್ರಾಹ್ಮಣ ; ಉತ್ತಮ ಜಾತಿ. ನನ್ನ ಜೊತೆಯಲ್ಲಿ ಕುಳಿತುಕೊಂಡು ಊಟ ಮಾಡುತ್ತೀರಾ ? ಊಟ ಮಾಡುವ ಹಾಗಿದ್ದರೆ ಬನ್ನಿ ಹೋಗೋಣ ? ಎಂದು ಕರೆದನು.

'ಇಲ್ಲ ಸಾರ್, ನಾವು ಬ್ರಾಹ್ಮಣರ ಜೊತೆಯಲ್ಲಿ ಊಟ ಮಾಡುವುದಿಲ್ಲ. ಬಾಹ್ಮಣರು ಭವಿಗಳು.

'ಭವಿಗಳು ಎಂದರೇನು ಮೇಷ್ಟೆ ? ನಾವು ನಿಮಗಿಂತ ಕೀಳು ಜಾತಿಯೇ ?

'ನನಗೆ ಗೊತ್ತಿಲ್ಲ ಸಾರ್, ನೀವು ಲಿಂಗವನ್ನು ಕಟ್ಟುವುದಿಲ್ಲ. ನಾವು ಇಷ್ಟಲಿಂಗ ಕಟ್ಟಿದ್ದೆವೆ.?'

ರಂಗಣ್ಣನಿಗೆ ದಿಕ್ಕು ತೋರಲಿಲ್ಲ. ಆ ಮೇಷ್ಟು ಉಪವಾಸವಿರುತ್ತಾನಲ್ಲ ಎಂಬುದೊಂದೇ ವ್ಯಥೆ.'

'ಹಾಗಾದರೆ ಏನು ಮಾಡುತ್ತೀರಿ ಮೇಷ್ಟೆ ?'

'ನಮ್ಮ ಹಳ್ಳಿ ಇಲ್ಲಿಗೆ ಎರಡು ಮೈಲಿ ದೂರ ಇದೆ ಸಾರ್, ಅಪ್ಪಣೆ ಆದರೆ ಮನೆಗೆ ಹೋಗಿ ಊಟ ಮಾಡಿಕೊಂಡು ಮಧ್ಯಾಹ್ನ ಎರಡು ಗಂಟೆಗೆಲ್ಲ ಬರುತ್ತೇನೆ.'

'ಸಂತೋಷ ಮೇಷ್ಟೆ! ಊಟಕ್ಕೆ ಹೊರಡಿ, ಅನುಕೂಲವಾದರೆ ಮಧ್ಯಾಹ್ನದ ಸಭೆಗೆ ಬನ್ನಿ. ಇಲ್ಲವಾದರೆ ಮನೆಯಲ್ಲೇ ಇರಿ. ನಿಮಗೆ ಮಧ್ಯಾಹ್ನ ರಜ ಕೊಟ್ಟಿದ್ದೇನೆ.' 'ರಜಾ ಏತಕ್ಕೆ ಸಾರ್ ! ಎರಡೇ ಮೈಲಿ, ಸೈಕಲ್ ಇದೆ. ತಮ್ಮ ಊಟ ಆಗುವುದರೊಳಗಾಗಿ ಬಂದು ಹಾಜರಾಗುತ್ತೇನೆ.'

'ಭೇಷ್ ! ಬಹಳ ಸಂತೋಷ ಮೆಷ್ಟ್ರೇ! ಮನೆಯಿಂದ ಬರುವಾಗ ನನಗೂ ಒಂದು ಇಷ್ಟಲಿಂಗ, ಒಂದಿಷ್ಟು ಪ್ರಸಾದ ತನ್ನಿ, ನೀವು ಗುರುಗಳು, ನನಗೂ ಲಿಂಗ ಕಟ್ಟಿ ಬಿಡಿ !' ಎಂದು ನಗುತ್ತಾ ರಂಗಣ್ಣನು ಆ ಮೇಷ್ಟರನ್ನು ಬೀಳ್ಕೊಟ್ಟನು.

ಇಷ್ಟೆಲ್ಲ ಫಜೀತಿ ಗಂಡುಮೇಷ್ಟ್ರುಗಳಿಂದ ಆಯಿತಲ್ಲ. ಇನ್ನು ಆ ನಾಲ್ಕು ಹೆಣ್ಣು ಮೇಷ್ಟ್ರುಗಳ ವಿಚಾರ ಏನೋ ಎಂತೋ ? ಸ್ವಲ್ಪ ತಿಳಿದು ಕೊಳ್ಳೋಣ ಎಂದು ಸುತ್ತಲೂ ನೋಡಿದರೆ ಅವರು ಪತ್ತೆಯೇ ಇರಲಿಲ್ಲ. ಅವರು ಎಲ್ಲಿಗೆ ಹೋದರೋ ಎಂದುಕೊಂಡು ಅಡಿಗೆಯ ಮನೆಯ ಕಡೆಗೆ ಬಂದರೆ ಅವರು ಅಲ್ಲಿ ಹಾಜರಿದ್ದರು. ಅವರೆಲ್ಲ ಬಾಹ್ಮಣರೇ ಆಗಿದ್ದರು; ಸಾಲದುದಕ್ಕೆ ತಮ್ಮ ಸೇವೆ ಸ್ವಲ್ಪ ನಡೆಯಲೆಂದು ತಟ್ಟೆಗಳಲ್ಲಿ ಅನ್ನ, ಪಾತ್ರೆಗಳಲ್ಲಿ ಹುಳಿ ತುಂಬಿಕೊಂಡು ಬಡಿಸುವುದಕ್ಕೆ ಸಿದ್ಧವಾಗಿ ನಿಂತಿದ್ದರು! ಅವರು ಹಾಗೆ ಸಿದ್ಧವಾಗಿದ್ದುದನ್ನು ನೋಡಿ ರಂಗಣ್ಣನಿಗೆ ಪರಮಾನಂದವಾಯಿತು. ಆದರೆ ಅವರನ್ನು ಊಟಕ್ಕೆ ಕುಳ್ಳಿರಿಸಿ ಬಡಿಸುವ ಕೆಲಸವನ್ನು ಗಂಡಸರು ಮೇಷ್ಟರ ಕೈಯಿಂದ ಮಾಡಿಸುವುದು ಒಳ್ಳೆಯದೆಂದು ಅವನಿಗೆ ತೋರಿತು. ಆ ಮಾತನ್ನೇ ಅವರಿಗೆ ಹೇಳಿದನು : " ನೀವುಗಳೆಲ್ಲ ಅಬಲೆಯರು, ಆಗಲೇ ಆಯಾಸಪಟ್ಟಿದ್ದೀರಿ. ಈ ಮೇಷ್ಟರುಗಳು ಬಡಿಸುತ್ತಾರೆ. ನೀವುಗಳೆಲ್ಲ ಪಾತ್ರೆ ಮತ್ತು ಸೌಟುಗಳನ್ನು ಕೆಳಗಿಟ್ಟು ಊಟಕ್ಕೆ ಕುಳಿತುಕೂಳ್ಳಿ.' ಅವರು ಒಪ್ಪಲಿಲ್ಲ. ಬೇಡ ಸಾರ್ ! ಸಂಸಾರದಲ್ಲಿ ಅಬಲೆಯರದೇ ಆಡಳಿತ, ಇದೂ ಒಂದು ಮೇಷ್ಟರ ಸಂಸಾರ. ಈ ಸಂತೋಷ ನಮಗೆಲ್ಲಿ ಲಭ್ಯವಾಗುತ್ತದೆ. ತಾವು ಊಟಕ್ಕೆ ಕುಳಿತು ಕೊಂಡರೆ ನಾವು ಇದನ್ನೆಲ್ಲ ನಿರ್ವಾಹ ಮಾಡುತ್ತೇವೆ' ಎಂದರು.

'ನಾನು ಮೇಲ್ವಿಚಾರಣೆ ನೋಡಿಕೊಳ್ಳಬೇಕು. ನಾನು ಈಗಲೇ ಊಟಕ್ಕೆ ಕುಳಿತು ಕೊಳ್ಳುವುದಿಲ್ಲ. ಇದರ ಮೇಲೆ ಸ್ವಲ್ಪ ಚರ್ಚೆಗೆ ಪ್ರಾರಂಭವಾಯಿತು. ಇನ್ ಸ್ಪೆಕ್ಟರ್ ಸಾಹೇಬರು ಮೊದಲನೆಯ ಪಂಕ್ತಿಯಲ್ಲೇ ಕುಳಿತು ಊಟ ಮಾಡಬೇಕೆಂದು ಹಲವರು ಉಪಾಧ್ಯಾಯರು ಒತ್ತಾಯ ಮಾಡಿದರು. ಆದರೆ ರಂಗಣ್ಣ ಒಪ್ಪಲಿಲ್ಲ. ಬಡಿಸುವಾಗ ಏನು ಗಲಭೆಗಳಾಗುತ್ತವೆಯೋ ? ಎಂಬುದೊಂದು ದೊಡ್ಡ ಹೆದರಿಕೆ ಅವನಿಗೆ, ಒತ್ತಾಯ ಮಾಡಿ ಪ್ರಯೋಜನವಿಲ್ಲವೆಂದು ಉಪಾಧ್ಯಾಯರು ಸುಮ್ಮನಾದರು. ಬಡಿಸುವುದಕ್ಕೆ ಇಬ್ಬರು ಉಪಾಧ್ಯಾಯರೂ, ಆ ನಾಲ್ವರು ಉಪಾಧ್ಯಾಯಿನಿಯರೂ ಸಿದ್ಧರಾದರು. ರಂಗಣ್ಣನದು ಮೇಲ್ವಿಚಾರಣೆ, ಇನ್ನು ಹೆಚ್ಚು ಹೇಳಬೇಕಾದುದಿಲ್ಲ. ಎಲ್ಲರಿಗೂ ಪುಷ್ಕಳವಾಗಿ ಮೃಷ್ಟಾನ್ನ ಭೋಜನ ಆಯಿತು, ಮೊದಲಿನಲ್ಲಿ ಸ್ವಲ್ಪ ತೊಂದರೆ ತಿಸರುಗಳಿದ್ದರೂ ಮುಕ್ತಾಯದಲ್ಲಿ ಸುಖ ಸಂತೋಷಗಳೇ ತುಂಬಿದ್ದುವು. ಊಟವಾದ ಮೇಲೆ ಆಯಾ ಜಾತಿಯವರು ತಾವು ಕುಳಿತಿದ್ದ ಎಡೆಗಳನ್ನು ತಾವು ತಾವೇ ಜೊಕ್ಕ ಮಾಡಿ ಕೈ ತೊಳೆದುಕೊಂಡು ಬಂದು ಚಪ್ಪರದಲ್ಲಿ ಹಾಕಿದ್ದ ಜಮಖಾನದ ಮೇಲೆ ಕುಳಿತರು.

ಈ ಕಡೆ ರಂಗಣ್ಣ ಮತ್ತು ಉಳಿದಿದ್ದ ಉಪಾಧ್ಯಾಯರೂ ಉಪಾಧ್ಯಾಯಿನಿಯರೂ ತಂತಮ್ಮ ಊಟಗಳನ್ನು ಮುಗಿಸಿಕೊಂಡು ಚಪ್ಪರದಲ್ಲಿ ಹಾಜರಾದರು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆಯಾಯಿತು. ಅಲ್ಲಿ ತಾಂಬೂಲ ಚರ್ವಣ, ಸ್ವಲ್ಪ ಸಲಿಗೆಯ ಮತ್ತು ಹಾಸ್ಯ ಪ್ರವೃತ್ತಿಯ ಉಪಾಧ್ಯಾಯರು, ' ಸಾರ್ ! ತಮ್ಮ ಕೈಯೆಲ್ಲ ಸುಣ್ಣವಾಗಿ ಹೋಗುತ್ತೆ. ನಾವು ಸುಣ್ಣ ಹಚ್ಚಿ ಎಲೆ ಮಡಿಸಿ ಕೊಡುತ್ತೇವೆ' ಎಂದು ಹೇಳಿದರು. ಒಬ್ಬ ಮೇಷ್ಟು ಇನ್‌ಸ್ಪೆಕ್ಟರವರ ಕೈಯಲ್ಲಿ ಅಡಿಕೆಯ ಪುಡಿಯನ್ನು ಹಾಕಿದನು; ಮತ್ತೊಬ್ಬನು ವೀಳೆಯದೆಲೆಯ ತೊಟ್ಟುಗಳನ್ನು ತೆಗೆದು ಹದವಾಗಿ ಸುಣ್ಣ ಹಚ್ಚಿ ಮಡಿಸಿಕೊಟ್ಟನು. ಅವುಗಳನ್ನು ಇನ್ ಸ್ಪೆಕ್ಟರ್ ಸಾಹೇಬರು ಸ್ವೀಕರಿಸಿ ಚರ್ವಣ ಮಾಡುತ್ತಿದ್ದಾಗ, ಮತ್ತೊಂದು ಕಡೆಯಿಂದ ಮೇಷ್ಟ್ರು ಬಂದು, 'ಈ ಬೀಡ ನಾನು ತಯಾರಿಸಿದ್ದು ; ಇದರ ರುಚಿ ಪರಾಂಬರಿಸಬೇಕು ಸ್ವಾಮಿಯವರು '- ಎಂದು ಕಾಣಿಕೆ ಕೊಟ್ಟನು. ಮತ್ತೊಬ್ಬ ಮೇಷ್ಟ್ರು, 'ಬೀಡ ಮಾಡುವುದರಲ್ಲೇನು ಸಾರ್ ಚಮತ್ಕಾರ ? ಅಂಗಡಿಯವರೆಲ್ಲ ಮಾಡಿಡುತ್ತಾರೆ. ನಾನು ಬಾಳೆಯಗಿಡ ಮಾಡಿಕೊಡುತ್ತೇನೆ' ಎಂದು ಹೇಳಿ ಅರ್ಧ ನಿಮಿಷದಲ್ಲಿ ವೀಳೆಯದೆಲೆಗೆ ಸುಣ್ಣ ಹಚ್ಚಿ ಅದನ್ನು ಮಡಿಸಿ ಬಾಳೆಯ ಗಿಡವನ್ನು ಮಾಡಿ ಇನ್ ಸ್ಪೆಕ್ಟರಿಗೆ ಕೊಟ್ಟನು. ರಂಗಣ್ಣನಿಗೆ ಅವರ ಸಲಿಗೆಯನ್ನೂ ಕೈಚಳಕವನ್ನೂ ನೋಡಿ ಬಹಳ ಸಂತೋಷವಾಯಿತು, ಅಲ್ಲಿಯೇ ಸಮೀಪದಲ್ಲಿ ಮುನಿಸಾಮಿ ಕುಳಿತಿದ್ದ. ಅವನನ್ನು ನೋಡುತ್ತಲೂ ಇನ್ಸ್ಪೆಕ್ಟರಿಗೆ ಬಹಳ ನಗು ಬಂದಿತು. ಯಾರಿಗೂ ಕಾರಣ ತಿಳಿಯದು. ಸ್ವಲ್ಪ ನಗುವನ್ನು ತಡೆದುಕೊಂಡು, 'ಏನು ಮೇಷ್ಟೆ ! ಏನಾಯಿತು ? ಶ್ಯಾನುಭೋಗರು ಏನು ಹೇಳಿದರು ?' ಎಂದು ಕೇಳಿದನು. ' ಸಾರ್ ! ತಾವು ಹೇಳಿದ ಸಲಹೆ ಬಹಳ ಚೆನ್ನಾಗಿದೆ. ಆಗಿ ಹೋಯಿತು ಸಾರ್ ಗುಡಿಸಿಲು ಮೇಲೆ ಹುಲ್ಲು ಹೊಚ್ಚುವುದೊಂದೇ ಉಳಿದಿದೆ. ಅದರ ಆರಂಭೋತ್ಸವ ಮಾಡಬೇಕೆಂದು ಶ್ಯಾನುಭೋಗರು ಹೇಳಿದ್ದಾರೆ. ಖಂಡಿತ ತಮ್ಮನ್ನು ಕರೆದು ಕೊಂಡು ಬರಬೇಕೆಂದು ಹೇಳಿದ್ದಾರೆ. ಸ್ವಾಮಿಯವರನ್ನು ನೋಡುವುದಕ್ಕೆ ಶ್ಯಾನುಭೋಗರೂ ಕಮಿಟಿ ಮೆಂಬರುಗಳೂ ಜನಾರ್ದನ ಪುರಕ್ಕೆ ಬರುತ್ತಾರೆ.'

'ಖರ್ಚಿನ ಬಾಬತು ಹೇಗೆ ?'

'ಕಮಿಟಿ ಮೆ೦ಬರುಗಳೆ ಚಂದಾ ಹಾಕಿಕೊಂಡರು ಸಾರ್! ಆವರಿಗೇನ್ ಸಾರ್, ಎಲ್ಲರೂ ನೆಮ್ಮದಿ ಕುಳ.?'

ರಂಗಣ್ಣನಿಗೆ ಆ ಸಮಾಚಾರ ತಿಳಿದುದರಿಂದ ಮತ್ತೂ ಸಂತೋಷವಾಯಿತು, ಆ ಮಾತು ಈ ಮಾತು ಆಡುತ್ತ ಹರಟೆಗಳಲ್ಲಿ ಎರಡೂವರೆ ಗಂಟೆ ಹತ್ತಿರವಾಯಿತು. ಬೆಳಗ್ಗೆ ಸೂಚನೆ ಕೊಟ್ಟಿದ್ದಂತೆ ಉಪಾಧ್ಯಾಯರಿಗೆ ಮಣ್ಣಿನ ಕೆಲಸ, ಕಾಗದ ಮಡಿಸುವುದು ಮೊದಲಾದುವುಗಳಲ್ಲಿ ಒಂದು ಗಂಟೆಯ ಕಾಲ ಶಿಕ್ಷಣವನ್ನು ಕೊಡಲಾಯಿತು ಮಧ್ಯಾಹ್ನ ಮೂರೂವರೆ ಗಂಟೆಗೆ ಬಹಿರಂಗ ಸಭೆ ಸೇರಿತು.

ಚಪ್ಪರದಲ್ಲಿ ಹಳ್ಳಿಯಲ್ಲಿನ ಗಂಡಸರು ಹೆಂಗಸರು ನೂರಾರು ಜನ ಸೇರಿಬಿಟ್ಟ ರು. ದೊಡ್ಡ ಬೋರೇಗೌಡರೂ ಬಂದರು. ಮೊದಲಿನಂತೆಯೇ ಅವರನ್ನು ರಂಗಣ್ಣ ತನ್ನ ಪಕ್ಕದಲ್ಲಿ ಕುರ್ಚಿಯಲ್ಲಿ ಕುಳ್ಳಿರಿಸಿಕೊಂಡನು. ದೇವತಾ ಪ್ರಾರ್ಥನೆ ಎರಡು ನಿಮಿಷಗಳ ಕಾಲ ಆಯಿತು. ಆಮೇಲೆ ಕುಮಾರವ್ಯಾಸನ ಭಾರತದಿಂದ ಅರ್ಧ ಗಂಟೆಯ ಕಾಲ ವ್ಯಾಖ್ಯಾನದೊಂದಿಗೆ ವಾಚನ ನಡೆಯಿತು. ತರುವಾಯ ಹದಿನೈದು ನಿಮಿಷಗಳ ಕಾಲ ಉಪಾಧ್ಯಾಯರೊಬ್ಬರು ನಕಲಿ ಮಾಡಿದರು. ಇದಾದಮೇಲೆ ಇಪ್ಪತ್ತು ನಿಮಿಷಗಳ ಕಾಲ ಮಿಡಲ್ ಸ್ಕೂಲಿನ ಮುಖ್ಯೋಪಾಧ್ಯಾಯರು ' ಸಹಕಾರ ಸಂಘಗಳಿಂದ ಆಗುವ ಪ್ರಯೋಜನಗಳು' ಎಂಬ ವಿಷಯವನ್ನು ಕುರಿತು ಭಾಷಣ ಮಾಡಿದರು, ತರುವಾಯ ಹದಿನೈದು ನಿಮಿಷಗಳ ಕಾಲ ಉಪಾಧ್ಯಾಯರ ಗೋಷ್ಟಿಯಿಂದ ಸಂಗೀತ ನಡೆಯಿತು. ಅಧ್ಯಕ್ಷರ ಮುಕ್ತಾಯ ಭಾಷಣ ಬಂತು. ಆಗ ರಂಗಣ್ಣನು, ' ಬೆಳಗ್ಗೆ ನಾನು ಉಪಾಧ್ಯಾಯರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಿದೆ. ಈಗ ಗ್ರಾಮಸ್ಥರನ್ನು ಕುರಿತು ನಾಲ್ಕು ಮಾತುಗಳನ್ನು ಹೇಳಬೇಕೆಂಬ ಬಯಕೆ ಇದೆ, ಈ ದಿನ ನನಗೂ ನನ್ನ ಈ ಉಪಾಧ್ಯಾಯ ಮಂಡಲಿಗೂ ಆಗಿರುವ ಸಂತೋಷವನ್ನು ಬಾಯಿಮಾತಿನಿಂದ ಹೇಳಲು ಸಾಧ್ಯವೇ ಈ ದಿನದ ಕಾರ್ಯಕ್ರಮಗಳೆಲ್ಲ ದೇವರ ದಯೆಯಿಂದ ಸಾಂಗವಾಗಿ ನೆರವೇರಿವೆ. ನನ್ನ ಮಿತ್ರರಾದ ಶ್ರೀ ದೊಡ್ಡ ಬೋರೇಗೌಡರ ಔದಾರ್ಯದಿಂದ ನಮ್ಮೆಲ್ಲರಿಗೂ ಮೃಷ್ಟಾನ್ನ ಭೋಜನವೂ ಲಭಿಸಿತು. ಆದರೆ ಈ ಸಭೆಗಳನ್ನು ಏರ್ಪಡಿಸುವ ಉದ್ದೇಶ ಬರಿ ಊಟಮಾಡುವ ಸಲುವಾಗಿ ಅಲ್ಲ, ಈ ದಿನ ಬೆಳಗ್ಗೆ ನೀವುಗಳೆಲ್ಲ ನೋಡಿದಂತೆ ಉಪಾಧ್ಯಾಯರಿಗೆ ಬೋಧನಕ್ರಮಗಳ ವಿಚಾರದಲ್ಲಿ ತಿಳಿವಳಿಕೆಯನ್ನೂ ಮಧ್ಯಾಹ್ನ ದಲ್ಲಿ ಕೈ ಕೆಲಸಗಳಲ್ಲಿ ಶಿಕ್ಷಣವನ್ನೂ ಕೊಡಲಾಯಿತು. ಇವುಗಳನ್ನೆಲ್ಲ ಏರ್ಪಾಟು ಮಾಡಿರುವುದು ತಮ್ಮ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲಿ ಎಂಬ ದೊಡ್ಡ ಉದ್ದೇಶದಿಂದ, ಸದ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತಿಲ್ಲ. ಸರಕಾರದವರು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದರೆ ತಕ್ಕಷ್ಟು ಫಲ ದೊರೆಯುತ್ತಿಲ್ಲ. ನೀವುಗಳೆಲ್ಲ ಆಲೋಚನೆ ಮಾಡಿ : ಒಂದು ಎಕರೆ ಗದ್ದೆಗೆ ನೀವು ಮೂವತ್ತು ರೂಪಾಯಿಗಳವರೆಗೂ ಖರ್ಚು ಮಾಡಿ ಅದರಿಂದ ಇಪ್ಪತ್ತು ರೂಪಾಯಿಗಳ ವರಮಾನ ಪಡೆದರೆ ನಿಮಗೆ ವ್ಯಥೆಯಾಗುವುದಿಲ್ಲವೆ ? ಅದಕ್ಕೆ ಬದಲು ನೂರು ರೂಪಾಯಿ ವರಮಾನ ಬಂದರೆ ನಿಮಗೆ ಸಂತೋಷವಾಗುವುದಿಲ್ಲವೆ? ಮುಂದೆ ಸರಕಾರದವರು ಮಾಡಬೇಕಾದ ಕೆಲಸಗಳೇನೋ ಬಹಳವಿವೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ಚೆನ್ನಾಗಿ ಪ್ರಚಾರವಾಗಬೇಕಾದರೆ ಫೈಮರಿ ಸ್ಕೂಲುಗಳು ಹದಿನೈದು ಸಾವಿರ ಆದರೂ ಇರಬೇಕು ; ಮಿಡಲ್ ಸ್ಕೂಲುಗಳು ಸಾವಿರದ ಐನೂರು ಆದರೂ ಸ್ಥಾಪಿತವಾಗಬೇಕು ; ಹೈಸ್ಕೂಲುಗಳು ಐನೂರು ಆದರೂ ಆಗಬೇಕು. ವಿಶ್ವವಿದ್ಯಾನಿಲಯದ ಮಾತನ್ನು ನಾನು ಆಡುವುದಿಲ್ಲ, ನಮ್ಮ ಇಲಾಖೆಯ ಮಾತನ್ನು ಆಡುತ್ತೇನೆ. ಸಾವಿರ ಮತ್ತು ಅದಕ್ಕೆ ಹೆಚ್ಚಿನ ಪ್ರಜಾ ಸಂಖ್ಯೆಯುಳ್ಳ ಪ್ರತಿಯೊಂದು ಗ್ರಾಮದಲ್ಲಿಯೂ ಒಂದೊಂದು ಮಿಡಲ್ ಸ್ಕೂಲು ಇರಬೇಕು. ಅದಕ್ಕೆ ಸಮಾಜದಲ್ಲಿ ಹುಡುಗರನ್ನು ಒದಗಿಸತಕ್ಕೆ ಹತ್ತು ಹನ್ನೆರಡು ಪ್ರೈಮರಿಸ್ಕೂಲುಗಳು ಸುತ್ತಲೂ ಇರಬೇಕು, ಆಗ ವಿದ್ಯಾಭ್ಯಾಸ ಚೆನ್ನಾಗಿ ನಡೆಯುತ್ತದೆ. ಈ ವ್ಯವಸ್ಥೆಗೆಲ್ಲ ಮೂರು ಕೋಟಿ ರೂಪಾಯಿಗಳನ್ನಾದರೂ ನಾವು ಖರ್ಚು ಮಾಡಬೇಕಾಗುತ್ತದೆ. ಆ ಕಾಲ ಯಾವಾಗ ಬರುವುದೋ ದೇವರಿಗೇ ಗೊತ್ತು. ಈಗ ನಮ್ಮ ದೇಶದಲ್ಲಿ ನೂರು ಜನಕ್ಕೆ ಹನ್ನೆರಡು ಜನ ಮಾತ್ರ ಓದು ಬರೆಹ ಬಲ್ಲವರು. ಪಾಶ್ಚಾತ್ಯ ದೇಶಗಳಲ್ಲಿ ನೂರಕ್ಕೆ ತೊಂಬತ್ತೆದು, ತೊಂಬತ್ತೆಂಟು ಜನ ಓದು ಬರೆಹ ಬಲ್ಲವರು.'

'ಸದ್ಯದಲ್ಲಿರುವ ಅನುಕೂಲಗಳನ್ನು ಗ್ರಾಮಸ್ಥರು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾದುದು ಅವರ ಕರ್ತವ್ಯ, ಉಪಾಧ್ಯಾಯಯರ ವಿಚಾರವನ್ನು ನನಗೆ ಬಿಟ್ಟು ಬಿಡಿ. ಅವರನ್ನು ತಿದ್ದುವ ಮತ್ತು ಅವರಿಂದ ಕೆಲಸ ತೆಗೆಯುವ ಜವಾಬ್ದಾರಿ ನನಗೆ ಸೇರಿದ್ದು, ನೀವುಗಳು ಸಹ ಉಪಾಧ್ಯಾಯರನ್ನು ಗೌರವದಿಂದಲೂ ಪ್ರೇಮದಿಂದಲೂ ನೋಡಿಕೊಂಡರೆ ಅವರು ಸಂತೋಷವಾಗಿ ಕೆಲಸ ಮಾಡುತ್ತಾರೆ. ಈ ದಿನ ಇಲ್ಲಿ ಸೇರಿರುವ ಉಪಾಧ್ಯಾಯರು ಗ್ರಾಮಸ್ಥರ ವಿಷಯದಲ್ಲಿ ಕೃತಜ್ಞತೆಯಿಂದ ತುಂಬಿದ್ದಾರೆ. ಈ ದಿನದ ಆದರಾತಿಥ್ಯಗಳಿಗೆ ಹೇಗೆ ತಾನೆ ಪ್ರತ್ಯುಪಕಾರ ಮಾಡಬಹುದು ? ಗ್ರಾಮಸ್ಥರ ಮಕ್ಕಳಿಗೆಲ್ಲ ಚೆನ್ನಾಗಿ ಪಾಠ ಹೇಳಿಕೊಟ್ಟು ತಿಂದ ಬೋಂಡಗಳನ್ನು ಜೀರ್ಣಿಸಿಕೊಳ್ಳಬೇಕಾಗಿದೆ ಎಂದು ಅವರು ಆಲೋಚನೆ ಮಾಡುತ್ತಿದಾರೆ. ಉಂಡ ಮನೆಗೆ ಎರಡು ಬಗೆಯುವುದುಂಟೆ ? ಈಗ ಉಪಾಧ್ಯಾಯರಿಲ್ಲ ನವಚೈತನ್ಯ ಹುಟ್ಟಿದೆ ; ಅವರಲ್ಲಿ ಉತ್ಸಾಹ ಹೊರಸೂಸುತ್ತಿದೆ. ಅವರು ಹಿಂದಿನಿಗಿಂತ ಮುಂದೆ ಚೆನ್ನಾಗಿ ಕೆಲಸ ಮಾಡುತ್ತಾರೆ. ನೀವುಗಳು ನಾನು ಹೇಳುವುದನ್ನು ಸ್ವಲ್ಪ ಗಮನಿಸಿ.' ಮಕ್ಕಳನ್ನು ಪಾಠಶಾಲೆ ತೆರೆದ ಒಂದು ತಿಂಗಳೊಳಗಾಗಿ ಸೇರಿಸಿಬಿಡಿ, ಆಮೇಲೆ ಪಾಠಶಾಲೆಗೆ ಸೇರಿಸಬೇಕೆಂದು ಕರೆದುಕೊಂಡು ಹೋಗಬೇಡಿ, ಮೇಷ್ಟರಿಗೆ ಒತ್ತಾಯ ಮಾಡ ಬೇಡಿ. ಇದು ನಮ್ಮ ನಿಯಮಗಳಿಗೆ ವಿರೋಧವಾದುದು ; ಮತ್ತು ಇತರ ಮಕ್ಕಳ ವಿದ್ಯಾಭಿವೃದ್ಧಿಗೆ ಕುಂದಕ ತರುವಂಥದು. ಆಲೋಚನೆಮಾಡಿ : ನೀವು ಬಿತ್ತನೆ ಮಾಡುವಾಗ ಅಥವಾ ನಾಟಿ ಮಾಡುವಾಗ ಈ ತಿಂಗಳು ಒಂದಿಷ್ಟು, ಮುಂದಿನ ತಿಂಗಳು ಇನ್ನಷ್ಟು, ಮರುದಿಂಗಳು ಮತ್ತಿಷ್ಟು - ಹೀಗೆ ಪ್ರತಿ ತಿಂಗಳಲ್ಲಿ ಬಿತ್ತನೆ ಆಥವಾ ನಾಟಿ ಮಾಡುತ್ತಿರಾ ? ಏಕೆ ಮಾಡುವುದಿಲ್ಲ ? ಹಾಗೆಯೇ ನಮ್ಮ ಪಾಠ ಶಾಲೆಗಳಲ್ಲಿ ಕೂಡ

ಎರಡನೆಯದಾಗಿ, ಮಕ್ಕಳನ್ನು ಚೊಕ್ಕಟವಾಗಿ ಪ್ರತಿದಿನವೂ ಪಾಠ ಶಾಲೆಗೆ ಕಳಿಸಿಕೊಡಿ. ಹೆಣ್ಣು ಮಕ್ಕಳನ್ನು ಚೊಕ್ಕಟವಾಗಿ ಕಳಿಸುತ್ತೀರಿ. ಆ ಮಕ್ಕಳು ಬಾಚಿ ಕೊ೦ಡು ಹೆರಳು ಹಾಕಿಕೊಂಡು ಮುದ್ದು ಮುದ್ದಾಗಿ ಪಾಠ ಶಾಲೆಗೆ ಬರುತ್ತವೆ. ಹುಡುಗರು ಅರೆ ಬೆತ್ತಲೆಯಲ್ಲಿ, ಸರಿಯಾದ ಉಡುಪುಗಳಿಲ್ಲದೆ, ಹಲ್ಲುಜ್ಜದೆ, ಮುಖ ತೊಳೆಯದೆ, ಹಾಗೆಯೇ ಬಂದು ಕುಳಿತುಕೊಳ್ಳುತ್ತಾರೆ. ಇದು ಸರಿಯಲ್ಲ.”

ಮೂರನೆಯದಾಗಿ, ಹುಡುಗರಿಗೆ ಸ್ಲೇಟು ಪುಸ್ತಕಗಳನ್ನು ತೆಗೆದುಕೊಡಬೇಕು. ಈ ವಿಚಾರದಲ್ಲಿ ನನ್ನದೊಂದು ಸಲಹೆ ನೀವು ಪಾಠ ಶಾಲೆಗೆ ಸ್ಟೇಟುಗಳನ್ನೂ ಪುಸ್ತಕಗಳನ್ನೂ ದಾನಮಾಡಿ, ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ದಾನಮಾಡಿದ ಮಹನೀಯರ ಹೆಸರುಗಳನ್ನು ಪಟ್ಟಿಯಲ್ಲಿ ಬರೆದು ಪ್ರಕಟಿಸುತ್ತೇವೆ ; ಇಲಾಖೆಯವರ ಗಮನಕ್ಕೆ ಅವರ ಹೆಸರುಗಳನ್ನು ತರುಸುತ್ತೇವೆ. ಈ ದಾನದಿಂದ ಬಹಳ ಪ್ರಯೋಜನವಿದೆ. ಪ್ಲೇಟುಗಳನ್ನೂ ಪುಸ್ತಕಗಳನ್ನೂ ಪಾಠಶಾಲೆಯಲ್ಲಿ ಉಳಿಸಿಕೊಂಡು ನಿಮ್ಮ ಮಕ್ಕಳು ಬಂದಾಗ ಬರೆಯುವುದಕ್ಕೂ ಓದುವುದಕ್ಕೂ ಉಪಾಧ್ಯಾಯರು ಕೊಡುತ್ತಾರೆ. ಆಮೇಲೆ ಪೆಟ್ಟಿಗೆಯಲ್ಲಿ ಭದ್ರವಾಗಿ ತೆಗೆದಿಡುತ್ತಾರೆ. ಒಂದು ಬಾರಿ ಕೊಂಡು ಹೀಗೆ ಇಟ್ಟರೆ ಎರಡು ವರ್ಷಕಾಲವಾದರೂ ಅವು ಬಾಳಿಕೆ ಬರುತ್ತವೆ, ನಿಮಗೆ ಪದೇ ಪದೇ ಖರ್ಚುಮಾಡುವ ಕಷ್ಟ ತಪ್ಪುತ್ತದೆ. ಯಾರಾದರೂ ದಾನಮಾಡುತ್ತೀರಾ? ಈ ದಿನ ಶುಭದಿನ, ಇದೇ ಶುಭ ಮುಹೂರ್ತ....' ಎಂದು ಹೇಳುತ್ತಿದ್ದಾಗ ದೊಡ್ಡ ಬೋರೇಗೌಡರು, ' ಸ್ವಾಮಿ ! ನಾನು ಇವತ್ತು ಪ್ಲೇಟು, ಐವತ್ತು ಮೊದಲನೆಯ ಪುಸ್ತಕ, ಇಪ್ಪತ್ತು ಎರಡನೆಯ ಪುಸ್ತಕ ಕೊಡುತ್ತೇನೆ' ಎಂದು ಎದ್ದು ನಿಂತುಕೊಂಡು ಹೇಳಿದರು. ಸಭೆಯಲ್ಲೆಲ್ಲ ಕರತಾಡನ ಗಳೂ ಜಯಘೋಷಗಳೂ ತುಂಬಿ ಹೊದವು. ಐದು ನಿಮಿಷಗಳಲ್ಲಿ ಏಳೆಂಟು ಜನ ವಾಗ್ದಾನಮಾಡಿದರು. ಪಾಠ ಶಾಲೆಗೆ ನೂರು ಸ್ಲೇಟುಗಳು ಮತ್ತು ಬೇಕಾದಷ್ಟು ಪಠ್ಯ ಪುಸ್ತಕಗಳು, ಒಂದು ಮೈಸೂರು ಮ್ಯಾಪು ಒಂದು ಇಂಡಿಯಾ ಮ್ಯಾಪು ದೊರೆತುವು.

ರಂಗಣ್ಣನು ಆ ದಾತೃಗಳಿಗೆಲ್ಲ ಉಚಿತ ರೀತಿಯಲ್ಲಿ ವಂದನೆಗಳನ್ನರ್ಪಿಸಿ, ಇನ್ನು ಕೆಲವು ಹಿತೋಕ್ತಿಗಳನ್ನಾಡಿ ತನ್ನ ಅಧ್ಯಕ್ಷ ಭಾಷಣವನ್ನು ಮುಗಿಸಿದನು.

ದೊಡ್ಡ ಬೋರೇಗೌಡರು ವಂದನಾರ್ಪಣೆ ಮಾಡಿದರು. ಅವರು ದೊಡ್ಡ ವಿದ್ಯಾವಂತರಲ್ಲದಿದ್ದರೂ ಲೌಕಿಕದಲ್ಲಿ ಚೆನ್ನಾಗಿ ನುರಿತವರಾದ್ದರಿ೦ದ ಬಹಳ ಚೆನ್ನಾಗಿ ಮಾತನಾಡಿದರು. ಆ ದಿನದ ಕಾರ್ಯಕಲಾಪಗಳನ್ನು ಪ್ರಶಂಸೆಮಾಡಿ, ಉಪಾಧ್ಯಾಯರಿಗೂ ಗ್ರಾಮಸ್ಥರಿಗೂ ಸೌಹಾರ್ದ ಬೆಳೆಯುವುದಕ್ಕೆ ಹೀಗೆ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಡಿಸುವುದು ಒಳ್ಳೆಯದೆಂದು ಅನುಮೋದಿಸಿದರು. ಹೀಗೆ ಇಬ್ಬರನ್ನೂ ಕಲೆ ಹಾಕಿ, ಆ ಎರಡೆತ್ತುಗಳ ಮೇಲೂ ಆ ಸೌಹಾರ್ದದ ನೊಗವನ್ನು ಹೊರಿಸಿ, ಬಂಡಿಯಲ್ಲಿ ಮಕ್ಕಳನ್ನು ಕೂಡಿಸಿ ತಾವೇ ಸಾರಧಿಯಾಗಿ ನಡೆಸುತ್ತಿರುವ ಇನ್ಸ್ ಸ್ಪೆಕ್ಟರ್‌ ಸಾಹೇಬರವರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿ ಹೇಳಿ ದರು. ಆಮೇಲೆ ರಂಗಣ್ಣನಿಗೆ ತಾವೇ ಒಂದು ಒಳ್ಳೆಯ ಹೂವಿನ ಹಾರವನ್ನು ಹಾಕಿದರು.

ರಂಗಣ್ಣ ದೊಡ್ಡ ಬೋರೇಗೌಡರಿಗೆ ತಾನು ವಿಶೇಷವಾದ ರೀತಿಯಲ್ಲಿ ಮರ್ಯಾದೆ ಮಾಡಬೇಕೆಂದು ಏರ್ಪಾಟು ಮಾಡಿಕೊಂಡಿದ್ದನು. ಅವರ ಕೊರಳಿಗೆ ತಾನು ಸಿದ್ಧಪಡಿಸಿಕೊಂಡಿದ್ದ ಹೂವಿನ ಹಾರವನ್ನು ಹಾಕಿ ಹಸ್ತಲಾಘವ ಕೊಟ್ಟನು. ಆ ಬಳಿಕ ' ಕಾಯೌ ‌ಶ್ರೀ ಗೌರಿ' ಮತ್ತು ಜಯ ಘೋಷಗಳಿಂದ ಸಭೆ ಮುಕ್ತಾಯವಾಯಿತು,

ಪ್ರಕರಣ೧೦

ರಾಜಕೀಯ ಮುಖಂಡರು

ಆವಲಹಳ್ಳಿಯಲ್ಲಿ ನಡೆದ ಉಪಾಧ್ಯಾಯರ ಸಂಘದ ಸಭೆ ರೇಂಜಿನಲ್ಲೆಲ್ಲ ದೊಡ್ಡ ಜಾಗಟೆಯನ್ನು ಬಾರಿಸಿದಂತಾಯಿತು. ಕಾರ್ಯಕಲಾಪಗಳು, ಔತಣದ ವೈಖರಿ, ಇನ್ಸ್ ಪೆಕ್ಟರು ಸಲಿಗೆಯಿಂದ ಉಪಾಧ್ಯಾಯರೊಡನೆ ಮಿಳಿತವಾಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ತಕ್ಕ ರೀತಿ ಪರಿಹಾರ ಮಾಡುತ್ತಿದ್ದುದು ; ಗ್ರಾಮಸ್ಥರ ಸಹಕಾರ, ಪಾಠಶಾಲೆಗೆ ಸ್ಲೇಟುಗಳು, ಪುಸ್ತಕಗಳು ಮೊದಲಾದುವು ದಾನವಾಗಿ ಬಂದದ್ದು- ಇವುಗಳೆಲ್ಲ ಸ್ವಲ್ಪ ಉತ್ಪ್ರೇಕ್ಷೆಯಿಂದಲೇ ಪ್ರಚಾರವಾದುವು. ಆ ದಿನದ ಸಭೆಗೆ ಬಂದಿದ್ದ ಉಪಾಧ್ಯಾಯರಿಗೆ ತಮ್ಮ ಗ್ರಾಮಗಳಲ್ಲಿ ಸಹ ಹೀಗೆಯೇ ಸಭೆಗಳನ್ನು ಏರ್ಪಡಿಸಿ ಹೆಸರು ಪಡೆಯಬೇಕೆಂಬ ಆಕಾಂಕ್ಷೆ ಹುಟ್ಟಿಕೊಂಡಿತು. ಅಲ್ಲಲ್ಲಿ ಗ್ರಾಮ ಪಂಚಾಯತಿ ಚೇರ್ಮನ್ನರುಗಳಿಗೆ ಈ ವಿಚಾರದಲ್ಲಿ ಸ್ವಲ್ಪ ಸ್ಪರ್ಧೆ ಸಹ ಏರ್ಪಟ್ಟಿತು.

ಆವಲಹಳ್ಳಿಯ ಸಭೆ ನಡೆದು ಎರಡು ವಾರ ಆಗಿರಬಹುದು. ರಂಗಣ್ಣ ಕಚೇರಿಯಲ್ಲಿ ಕೆಲಸ ಮಾಡುತ್ತ ಕುಳಿತಿದ್ದಾಗ ಬೈರಮಂಗಲದ ಶಾನುಭೋಗರು ಮತ್ತು ಇತರ ಮೂವರು ಕಮಿಟಿ ಮೆಂಬರುಗಳು ಬಂದು ಕಾಣಿಸಿಕೊಂಡರು. ಮುಂದಿನ ತಿಂಗಳಿನಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಬೈರಮಂಗಲದಲ್ಲಿ ಸೇರಿಸಬೇಕೆಂದೂ ಇನ್ ಸ್ಪೆಕ್ಟರ್ ಸಾಹೇಬರು ಖಂಡಿತವಾಗಿ ದಯಮಾಡಿಸಬೇಕೆಂದೂ ಅವರು ಪ್ರಾರ್ಥನೆಯನ್ನು ಸಲ್ಲಿಸಿದರು. ರಂಗಣ್ಣ ಮೊದಲು ಆ ಗುಡಿಸಿಲಿನ ಮಾತೆತ್ತಿ ತನ್ನ ಮಾತನ್ನು ತಪ್ಪದೆ ನಡೆಸಿ ಕೊಟ್ಟುದಕ್ಕಾಗಿ ಅವರಿಗೆಲ್ಲ ಕೃತಜ್ಞತೆಯನ್ನು ತಿಳಿಸಿದನು. ಬಳಿಕ ಶಂಕರಪ್ಪನನ್ನು ಕರೆದು ಅವನ ಕೈಗೆ ಒಂದು ಚೀಟಿಯನ್ನು ಕೊಟ್ಟನು. ಆ ಚೀಟಿಯನ್ನು ನೋಡಿಕೊಂಡು ಶಂಕರಪ್ಪ ಹೊರಕ್ಕೆ ಬಂದನು. ರಂಗಣ್ಣನು ಉಪಾಧ್ಯಾಯರ ಸಂಘದ ವಿಚಾರ ಮಾತನಾಡುತ್ತ, 'ಸಭೆಯನ್ನೇನೋ ಬೈರಮಂಗಲದಲ್ಲಿ ಸೇರಿಸಬಹುದು, ಆದರೆ ಗ್ರಾಮ ಪಂಚಾಯತಿಯವರು ಸಂಘವನ್ನು ಆಹ್ವಾನಿಸುವ ಬಗ್ಗೆ ನಿರ್ಣಯವನ್ನು ಮಾಡಿ ಕಚೇರಿಗೆ ಕಳಿಸಿ ಕೊಡಬೇಕು ಮತ್ತು ಊಟದ ವ್ಯವಸ್ಥೆಗೆ ಏರ್ಪಾಡು ಏನು ಎಂಬುದನ್ನು ತಿಳಿಸಬೇಕು ” ಎಂದು ಹೇಳಿದನು.

ಶ್ಯಾನುಭೋಗರು, “ ಇವರೆಲ್ಲ ಪಂಚಾಯತಿಯ ಮೆ೦ಬರುಗಳು ಸ್ವಾಮಿ ! ನಾನೇ ಅದರ ಚೇರಮನ್ನು , ನಾಳೆಯೇ ನಿರ್ಣಯ ಮಾಡಿ ಕಳಿಸುತ್ತೇವೆ, ಊಟದ ಏರ್ಪಾಟನ್ನು ತಾವು ಆಲೋಚಿಸಬೇಕಾದ್ದಿಲ್ಲ. ನಾವು ವ್ಯವಸ್ಥೆ ಮಾಡುತ್ತೇವೆ' ಎಂದರು.

ಶ್ಯಾನುಭೋಗರೇ! ನಾನು ಆವಲ ಹಳ್ಳಿಯಲ್ಲಿ ಪಟ್ಟ ಫಜೀತಿ ನಿಮಗೆ ತಿಳಿಯದು. ಎಷ್ಟು ಪಂಗಡಗಳು ! ಎಷ್ಟು ಅ೦ಕಣಗಳು ! ಅದರ ಸಹವಾಸ ಸಾಕಪ್ಪ ಎನ್ನಿಸಿತು. ಆ ಊಟದ ಏರ್ಪಾಟನ್ನು ಬಿಟ್ಟು ಬಿಡುವುದಕ್ಕೆ ಮನಸ್ಸಿಲ್ಲ. ಒಂದು ದಿನವಾದರೂ ಮೇಷ್ಟ್ರುಗಳು ಸಂತೋಷದಿಂದಿರಲಿ ಎಂದು ನನಗೆ ಆಶೆ. ಎರಡನೆಯದಾಗಿ, ಇಂಥಾ ಕೂಟಗಳಲ್ಲಿ ವಿನೋದ ಮತ್ತು ಸಲಿಗೆ ಇರುತ್ತವೆ. ಆಯಾ ಮೇಷ್ಟ್ರುಗಳ ನಿಜ ಸ್ವರೂಪ ಪ್ರಕಾರಕ್ಕೆ ಬರುತ್ತದೆ, ನಾವು ಬರಿಯ ಇನ್ ಸ್ಪೆಕ್ಟರುಮತ್ತು ಉಪಾಧ್ಯಾಯರು ಎಂಬ ನೌಕರಿಯ ಸಂಬಂಧ ತಪ್ಪಿ ನಾವು ಮನುಷ್ಯರು, ಸ್ನೇಹಪರರು ಎಂಬ ಭಾವನೆ ಬೆಳೆಯುತ್ತದೆ. ಪ್ರೇಮ ಗೌರವಗಳು ವೃದ್ಧಿಯಾಗುತ್ತವೆ. ಇವುಗಳ ಪರಿಣಾಮ : ನಮ್ಮಿಂದ ಹೇಳಿಸಿಕೊಳ್ಳದೆಯೇ ಮೇಷ್ಟ್ರುಗಳು ತಂತಮ್ಮ ಕೆಲಸಗಳನ್ನು ಚೆನ್ನಾಗಿ ಮಾಡಿಕೊಂಡು ಹೋಗುತ್ತಾರೆ. ಆದ್ದರಿಂದ ಈ ಏರ್ಪಾಟನ್ನು ಕೈ ಬಿಡಲು ಇಷ್ಟವಿಲ್ಲ.”

ಒಳ್ಳೆಯದು ಸ್ವಾಮಿ: ! ತಮ್ಮಿಷ್ಟದಂತೆಯೇ ನಡೆಸುತ್ತೇವೆ. ತಾವು ಖಂಡಿತವಾಗಿಯೂ ನಮ್ಮಲ್ಲಿ ಸಭೆ ಸೇರಿಸಬೇಕು.”

ಈ ಮಾತುಕತೆಗಳಾಗುತ್ತಿದ್ದಾಗ ಹೋಟಲು ಮಾಣಿ ಐದು ತಟ್ಟೆಗಳಲ್ಲಿ ತಿಂಡಿಯನ್ನೂ ಐದು ಲೋಟಗಳಲ್ಲಿ ಕಾಫಿಯನ್ನೂ ತಂದು ಮೇಜಿನ ಮೇಲಿಟ್ಟನು. ಆಗ ಶ್ಯಾನುಭೋಗರ ಜೊತೆಯಲ್ಲಿ ಬಂದಿದ್ದ ಮೆಂಬರುಗಳು, ಇವೇನು ಸ್ವಾಮಿ ! ನಂಗೆಲ್ಲ ಕಾಫಿ ತಿಂಡಿ ! ಚೆನ್ನಾಯಿತು !' ಎಂದರು. ರಂಗಣ್ಣನು, “ ನಿಮ್ಮ ಹಳ್ಳಿಗೆ ನಾನು ಬಂದರೆ ಬಾಳೆಯಹಣ್ಣು ಎಳನೀರು ಮೊದಲಾದುವುನ್ನು ತಂದುಕೊಡುತೀರಲ್ಲ ! ನಿಮಗೆ ಇಲ್ಲಿ ಕಾಫಿಯನ್ನಾದರೂ ನಾನು ಕೊಡ ಬೇಡವೇ ? ಎಂದು ಹೇಳಿದನು. ಗೌಡರು, ' ಸ್ವಾಮಿ ! ನಾವು ಬೆಳೆಯೋ ಪದಾರ್ಥ ತಮಗೆ ಕೊಡುತ್ತೇವೆ, ತಾವು ಹೊಟೇಲಿನಿಂದ ದುಡ್ಡು ಕೊಟ್ಟು ತರಿಸುತೀರಿ. ಅಷ್ಟೆ ನೋಡಿ ವೆತ್ಯಾಸ ' ಎಂದರು. ಅವರ ಜಾಣತನವನ್ನು ನೋಡಿ ರಂಗಣ್ಣನಿಗೆ ಆಶ್ಚರ್ಯವಾಯಿತು. ಉಪಾಹಾರವಾಯಿತು. ಬೈರಮಂಗಲದಲ್ಲಿ ಮುಂದಿನ ಸಭೆ ಎ೦ದು ತಾತ್ಕಾಲಿಕವಾಗಿ ಗೊತ್ತಾಯಿತು. ಪಂಚಾಯತಿಯ ನಿರ್ಣಯ ಬಂದಮೇಲೆ ತಾರೀಕನ್ನು ಖಚಿತವಾಗಿ ತಿಳಿಸುವುದಾಗಿ ರಂಗಣ್ಣನು ಹೇಳಿ ಅವರನ್ನು ಬೀಳ್ಕೊಟ್ಟನು.

ಅರ್ಧ ಗಂಟೆ ಕಳೆದಮೇಲೆ ಬೇರೆ ಕೇಂದ್ರದ ಉಪಾಧ್ಯಾಯ ಸಂಘದ ಕಾರ್ಯದರ್ಶಿ ಇಬ್ಬರು ಗೌಡರುಗಳನ್ನು ಜೊತೆ ಮಾಡಿಕೊಂಡು ಬಂದು ಇನ್ಸ್ಪೆಕ್ಟರಿಗೆ ನಮಸ್ಕಾರ ಮಾಡಿದನು. ಅವರು ಬಂದ ಉದ್ದೇಶ ಬೈರಮಂಗಲದವರ ಉದ್ದೇಶದಂತೆಯೇ ಇತ್ತು. ಅವರಿಗೂ ಸಮಯೋಚಿತವಾಗಿ ಉತ್ತರ ಹೇಳಿ, “ ಪಂಚಾಯತಿಯಿಂದ ನಿರ್ಣಯ ಮಾಡಿ ಕಳಿಸಿಕೊಡಿ, ಮುಂದೆ ಒಂದು ತಿಂಗಳಲ್ಲಿ ನಿಮ್ಮ ಹಳ್ಳಿಯಲ್ಲಿ ಸಭೆ ಸೇರಿಸುತ್ತೇವೆ' ಎಂದು ತಿಳಿಸಿ ಅವರನ್ನು ಕಳುಹಿಸಿ ಕೊಟ್ಟದ್ದಾಯಿತು. ಆ ವೇಳೆಗೆ ಶಂಕರಪ್ಪ ಬಂದು, ' ಸ್ವಾಮಿಯವರಿಗೆ ನಾಳೆ ಮೀಟಿಂಗಿದೆ. ಬೆಂಗಳೂರಿಗೆ ಹೋಗಬೇಕೆಂದು ಹೇಳಿದ್ದಿರಿ' ಎಂದು ಜ್ಞಾಪಿಸಿದನು.

ರಂಗಣ್ಣನು ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಂಡು ರೈಲು ಹತ್ತಿ ಹೊರಟನು. ಒ೦ದೆರಡು ಸ್ಟೇಷನ್ನುಗಳನ್ನು ರೈಲು ದಾಟಿದಮೇಲೆ ಮುಂದಿನ ಸ್ಟೇಷನ್ನಿನಲ್ಲಿ ಕಲ್ಲೇಗೌಡರು ರೈಲು ಹತ್ತಿದರು. ಅವರು ದೊಡ್ಡ ಜಮೀನ್ದಾರರು, ಒಕ್ಕಲಿಗರ ಮುಖಂಡರಲ್ಲೊಬ್ಬರು ; ಮತ್ತು ನ್ಯಾಯವಿಧಾಯಕ ಸಭೆಯ ಸದಸ್ಯರು. ದಿವಾನರು ಮತ್ತು ಕೌನ್ಸಿಲರು ಗಳ ಹತ್ತಿರ ಅವರ ಓಡಾಟ ಹೆಚ್ಚು. ಸರ್ಕಾರದ ನೌಕರರು - ಭಾರಿ ಸಂಬಳ ತಗೆಯುವ ಅಧಿಕಾರಿಗಳು ಸಹ-ಅವರನ್ನು ಕಂಡರೆ ಹೆದರು ತ್ತಿದ್ದರು. ರಂಗಣ್ಣ ಕುಳಿತಿದ್ದ ಗಾಡಿಯನ್ನೇ ಅವರು ಅವ್ಯಾಜವಾಗಿ ಹತ್ತಿದರು. ಒಬ್ಬರೊಬ್ಬಗೆ ನಮಸ್ಕಾರಗಳು ಕುಶಲ ಪ್ರಶ್ನೆಗಳು ಆದುವು. ಕಲ್ಲೇಗೌಡರ ಬಾಯಿ ಸುಮ್ಮನಿರಲಿಲ್ಲ.

'ಏನು ! ಇನ್ ಸ್ಪೆಕ್ಟರವರ ಕಾರುಬಾರು ದರ್ಬಾರು ರೇಂಜಿನಲ್ಲೆಲ್ಲ ಬಹಳ ಕೋಲಾಹಲಕರವಾಗಿದೆ !!'

'ದರ್ಬಾರು ನಡೆಸುವುದಕ್ಕೆ ನಾವೇನು ದಿವಾನರೇ ? ರಾಜರೇ ? ಸ್ಕೂಲ್ ಇನ್ ಸ್ಪೆಕ್ಟರ್ ಏನು ದರ್ಬಾರು ನಡೆಸಬಹುದು ??'

'ಮೊನ್ನೆ ಆವಲಹಳ್ಳಿಯಲ್ಲಿ ಭಾರಿ ದರ್ಬಾರು ನಡೆಯಿತಂತೆ ! ಔತಣ ಸಮಾರಾಧನೆಗಳು ಇತ್ಯಾದಿ. ಬಡ ರೈತರನ್ನು ಸುಲಿಗೆ ಮಾಡುವುದಕ್ಕೆ ನಿಮ್ಮ ಇಲಾಖೆಯೂ ಕೈ ಹಾಕಿದ ಹಾಗಿದೆ.'

'ದೊಡ್ಡ ಬೋರೇಗೌಡರ ಆತಿಥ್ಯ ಉಪಾಧ್ಯಾಯರಿಗೆ ನಡೆಯಿತು. ಅವರೇನೂ ಬಡವರಲ್ಲ. ಅವರು ಕೊಟ್ಟ ಆಹ್ವಾನದ ಮೇಲೆ ಅಲ್ಲಿ ಸಭೆ ಸೇರಿತ್ತು.'

'ಆ ಹಾ ! ಬೋರೇಗೌಡನ್ನ ನಮ್ಮ ಮೇಲೆ ಎತ್ತಿ ಕಟ್ಟೋ ಹಂಚಿಕೆ ತೆಗೆದಿದ್ದೀರೇನೋ ? ನಿಮ್ಮ ಬೇಳೆ ಕಾಳು ನಮ್ಮ ಹತ್ತಿರ ಬೇಯೋದಿಲ್ಲ.'

'ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ. ನೀವು ಆಹ್ವಾನ ಕೊಟ್ಟರೆ ನಿಮ್ಮ ಹಳ್ಳಿಯಲ್ಲಿ ಸಭೆ ಸೇರಿಸುತ್ತೇನೆ. ಅದಕ್ಕೇನು !?

'ಮೆಲ್ಲನೆ ನನಗೂ ಬಲೆ ಬೀಸುತ್ತಿರೋ ? ನಿಮ್ಮ ಮಾತಿಗೆ ಮರುಳಾಗುವುದಕ್ಕೆ ನಾನೇನೂ ದೊಡ್ಡ ಬೋರೇಗೌಡ ಅಲ್ಲ.'

'ಕಲ್ಲೆ ಗೌಡರೇ ! ನಾನೇ ತಕ್ಕೆ ಬಲೆ ಬೀಸಲಿ. ನೀವು ದೊಡ್ಡ ಮುಖಂಡರು, ನಮ್ಮ ಸಂಸ್ಥಾನ ಮುಂದಕ್ಕೆ ಬರಬೇಕೆಂದು ಹಾರೈಸುತಿರುವವರು. ನ್ಯಾಯ ವಿಧಾಯಕ ಸಭೆಯ ಸದಸ್ಯರಾಗಿದ್ದೀರಿ. ವಿದ್ಯಾಭಿವೃದ್ಧಿ ಬಹಳ ಮುಖ್ಯವಾದ ವಿಚಾರ, ತಮ್ಮಂಥವರು ಮುಂದೆ ಬಂದು ನಮಗೆ ಸಹಾಯ ಮಾಡಬೇಕು. ನಾವು ದುಡಿಯುವುದಾದರೂ ಏತಕ್ಕೆ? ನನಗೇನು? ಎರಡು ದಿನ ಈ ರೇ೦ಜು, ನಾಳೆ ವರ್ಗವಾದರೆ ಬೇರೆ ರೇಂಜು, ಅಸಿಸ್ಟೆಂಟ್ ಇನ್ ಸ್ಪೆಕ್ಟರ್ ಗಿರಿ ತಪ್ಪಿದರೆ ಮೇಷ್ಟರ ಕೆಲಸ ಸಿದ್ಧವಾಗಿದೆ. ನಮ್ಮ ಸ್ಕೂಲುಗಳು ಬಹಳ ಹೀನಸ್ಥಿತಿಯಲ್ಲಿವೆಯಲ್ಲ. ನಮ್ಮ ಉಪಾಧ್ಯಾಯರಲ್ಲಿ ತಿಳಿವಳಿಕೆ ಮತ್ತು ಶಿಸ್ತು ಇಲ್ಲವಲ್ಲ. ಅವುಗಳನ್ನು ಏರ್ಪಡಿಸಿ ಯತ್ಕಿಂಚಿತ್ ಸೇವೆ ಸಲ್ಲಿಸೋಣವೆಂದು ಇದ್ದೇನೆ. ಈಗ ತಿಪ್ಪೂರು ದೊಡ್ಡ ರಸ್ತೆಯ ಪಕ್ಕದಲ್ಲಿರುವ ವಿಷಯ ನಿಮಗೆ ತಿಳಿದಿದೆ. ಅಲ್ಲಿಯ ಸ್ಕೂಲು ಕಟ್ಟಡ ನಿಮಗೆ ಸೇರಿದ್ದು. ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ ಬೇರೆ ತೆಗೆದುಕೊಳ್ಳುತ್ತಾ ಇದ್ದೀರಿ. ಆ ಕಟ್ಟಡಕ್ಕೆ ರಿಪೇರಿ ಆಗಿ ಎಷ್ಟೋ ವರ್ಷಗಳಾಗಿವೆ. ನೆಲ ಕಿತ್ತು ಹೋಗಿದೆ, ಗೋಡೆಗಳು ಬಿರುಕು ಬಿಟ್ಟಿವೆ, ಮೇಲ್ಛಾವಣಿ ಕುಗ್ಗಿ ಹೋಗಿ ಯಾವಾಗಲೋ ಮಕ್ಕಳ ಮೇಲೆ ಬೀಳುತ್ತದೆ. ನಮ್ಮ ಇಲಾಖೆಯ ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಅದನ್ನು ಆಕ್ಷೇಪಿಸಿದ್ದಾರೆ. ತಮಗೂ ಸಮಾಚಾರ ತಿಳಿದಿದೆ. ಆದರೂ ರಿಪೇರಿ ಮಾಡಿ ಕೊಟ್ಟಿಲ್ಲ. ತಮ್ಮಂಥವರು ನಮ್ಮೊಡನೆ ಸಹಕರಿಸದಿದ್ದರೆ ಹೇಗೆ ? :

ಏನಾಗಿದೆ ಆ ಕಟ್ಟಡಕ್ಕೆ ? ದಿವಾನರಿಗೆ ಅಲ್ಲಿ ಅಟ್ ಹೋಮ್ (At-home) ಕೊಟ್ಟರೆ ಕುಣಿಯುತ್ತಾ ಬಂದು ಕೂತು ಕೊತಾರೆ !?

ಆ ಮಾತುಗಳನ್ನು ಕೇಳಿ ರಂಗಣ್ಣನಿಗೆ ಬಹಳ ವ್ಯಸನವಾಯಿತು. ದಿನವೂ ಬೆಳಗಾದರೆ ದಿವಾನರ ಮನೆಯ ಬಾಗಿಲು ಕಾಯುತ್ತಾ ಚಿಲ್ಲರೆ ಪಲ್ಲರೆ ಸಹಾಯಕ್ಕಾಗಿ ಅನುಸರಿಸಿಕೊಂಡು ಹೋಗುವ ಈ ಮುಖಂಡರು ಅವರ ಬೆನ್ನ ಹಿಂದೆ ಎಷ್ಟು ಲಾಘವದಿಂದ ಅವರನ್ನು ಕಾಣುತ್ತಾರೆ ! ಆಡುತ್ತಾರೆ ! ಇಂಥವರೆಲ್ಲ ಮುಖಂಡರೆಂದು ಪ್ರತಿಷ್ಠೆ ಗಳಿಸಿರುವುದರಿಂದ ದೇಶ ಹೀನಸ್ಥಿತಿಗೆ ಬರುತ್ತಿದೆ, ನಿಜವಾದ ಮುಖಂಡರು ತಲೆಯೆತ್ತಿಕೊಂಡಾಗ ಇವರೆಲ್ಲ ಬಾಲ ಮುದುರಿಕೊಂಡು ಕು೦ಗುಟ್ಟುತ್ತ ಓಡುವ ನಾಯಿಗಳಂತೆ ಪಲಾಯನ ಮಾಡುತ್ತಾರೆ. ಎರಡು ದಿನ ಇವರ ಪ್ರಾಬಲ್ಯ; ನಡೆಯಲಿ. ಇದೂ ಒಂದು ನಾಟಕ- ಎಂದು ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಸುಮ್ಮನಾದನು. ಕಲ್ಲೇಗೌಡರಿಗೆ ಬಹಳ ಸಂತೋಷವಾದಂತೆ ಕಂಡಿತು.

ಇನ್ ಸ್ಪೆಕ್ಟರು ಬೆಂಗಳೂರಿಗೋ ?

ಹೌದು. ಅಲ್ಲಿ ಕೆಲಸವಿದೆ. ನೀವೆಲ್ಲ ಥರ್ಡ್ ಕ್ಲಾಸಿನಲ್ಲಿ ಪ್ರಯಾಣ ಮಾಡದೆ ಸೆಕೆಂಡ್ ಕ್ಲಾಸ್ ಜಂಬ ಏಕೆ ಮಾಡುತ್ತೀರಿ ?

ರಂಗಣ್ಣನಿಗೆ ಸ್ವಲ್ಪ ಕೋಪ ಬಂತು. ಯಾವ ಕ್ಲಾಸಿನಲ್ಲಿ ಪ್ರಯಾಣ ಮಾಡಿದರೆ ಇವರಿಗೇನು ? ಎನ್ಸಿಸಿತು.

ಕಲ್ಲೇಗೌಡರೇ ! ನಮ್ಮ ಗೌರವ ಉಳಿಸಿಕೊಳ್ಳುವುದಕ್ಕಾಗಿಯೂ ಸೌಕರ್ಯಕ್ಕಾಗಿಯೂ ಸೆಕೆಂಡ್ ಕ್ಲಾಸಿನಲ್ಲಿ ಪ್ರಯಾಣ ಮಾಡುತ್ತೆವೆ. ಜೊತೆಗೆ ನಾನು ಸರ್ಕಾರದ ಕೆಲಸಕ್ಕಾಗಿ ಹೋಗುತ್ತಿದ್ದೇನೆ. ನನಗೆ ಸೆಕೆಂಡ್ ಕ್ಲಾಸಿನ ರೈಲು ಚಾರ್ಜನ್ನು ಸರಕಾರದವರು ನಿಗದಿ ಮಾಡಿದ್ದಾರೆ. ಅವರು ಕೊಡುವ ಖರ್ಚನ್ನು ಮಿಗಿಸಿಕೊಳ್ಳದೆ ಈ ಪ್ರಯಾಣ ಮಾಡುತ್ತಿದ್ದೇನೆ. ಸರ್ಕಾರದವರು ಫಸ್ಟ್ ಕ್ಲಾಸ್ ಪ್ರಯಾಣದ ಖರ್ಚು ಕೊಟ್ಟರೂ ಸಹ ನಿಮ್ಮ ಸ್ನೇಹಿತರುಗಳಂತೆ ತಲೆಗೆ ಮುಸುಕು ಹಾಕಿಕೂಂಡು ತರ್ಡ್ ಕ್ಲಾಸಿನ ಸೀಟಿನ ಕೆಳಗೆ ಮಲಗಿಕೊಂಡು ಕಳ್ಳ ಪ್ರಯಾಣವನ್ನು ನಾನು ಮಾಡುವುದಿಲ್ಲ.

ಯಾರು ನನ್ನ ಸ್ನೇಹಿತರು ? ಹಾಗೆ ಕಳ್ಳ ಪ್ರಯಾಣ ಮಾಡಿದ್ದನ್ನು ನೀವೇನು ಕಂಡಿದ್ದೀರಾ ? ಎಂದು ಜಬರ್ದಸ್ತಿನಿಂದ ಕಲ್ಲೇಗೌಡರು ಗರ್ಜಿಸಿದರು.

ಹೆಸರನ್ನು ಏಕೆ ಹೇಳಲಿ ? ನಿಮಗೆಲ್ಲ ತಿಳಿದ ವಿಷಯ. ಕಣ್ಣಿನಿಂದ ನೋಡಿ, ಬಾಯಿಂದ ಮಾತಾಡಿಸಿ ಎಲ್ಲ ಆಗಿದೆ ?

ಏನು ಬಹಳ ಜೋರ್ ಮೇಲಿದ್ದೀರಿ ? ನಿಮ್ಮೊಡನೆ ನನಗೇಕೆ ಮಾತು ? ಈಗ ನಡೆದಿರುವುದೇ ಸಾಕು. ಕಾಲು ಕೆರೆದುಕೊಂಡು ಜಗಳಕ್ಕೆ ನಾನು ಬಂದಿಲ್ಲ. ಇರುವ ವಿಷಯ ತಿಳಿಸಿದೆ. ಅಷ್ಟೇ,

ಮುಂದಕ್ಕೆ ರಂಗಣ್ಣ ಮಾತನಾಡಲಿಲ್ಲ. ಬೆಂಗಳೂರು ಬರುವವರೆಗೂ ಇಬ್ಬರೂ ಮೌನವಾಗಿದ್ದರು. ರೈಲು ಬ೦ಡಿ ಇಳಿಯುತ್ತ ನಮಸ್ಕಾರ ಕಲ್ಲೇಗೌಡರಿಗೆ ! ಮುಂದಾದರೂ ಸ್ನೇಹ ಬೆಳೆಯಲಿ, ಎಂದು ರಂಗಣ್ಣ ಹೇಳಿ ಹೊರಟುಬಂದನು.

ಪ್ರಕರಣ ೧೧

ತಿಮ್ಮಪ್ಪರಾಯನ ಬುದ್ಧಿವಾದ

ಮಾರನೆಯ ದಿನ ತನ್ನ ಮೀಟಿಂಗ್ ಕೆಲಸವನ್ನು ಮುಗಿಸಿಕೊಂಡು ತಂಗಿಯ ಮನೆಯಲ್ಲಿ ಊಟಮಾಡಿಕೊಂಡು ರಾತ್ರಿ ಎಂಟು ಗಂಟೆಗೆ ತಿಮ್ಮರಾಯಪ್ಪನ ಮನೆಗೆ ರಂಗಣ್ಣ ಹೊರಟನು. ಆ ದಿನ ತಿಮ್ಮರಾಯಪ್ಪ ಮುಂಚಿತವಾಗಿಯೇ ಮನೆಗೆ ಬಂದಿದ್ದನು. ಸ್ನೇಹಿತರ ಪರಸ್ಪರ ಭೇಟಿ ಆಯಿತು.

'ನನ್ನ ಕಾಗದ ಬಂದು ಸೇರಿತೋ ?'

'ಸೇರಿತು ಮಹಾರಾಯ ! ಅದಕ್ಕಾಗಿಯೇ ಈ ದಿನ ಮುಂಚಿತವಾಗಿ ಕಚೇರಿಯಿಂದ ಬಂದೆ. ನೀನು ಬರುತ್ತೀಯೆಂದು ತಿಳಿದು ಮುಂಚಿತವಾಗಿ ಊಟಮಾಡಿ ನಿರೀಕ್ಷಿಸುತ್ತಾ ಕುಳಿತೆ.'

'ನನಗೇನನ್ನೂ ಮಿಗಿಸಲಿಲ್ಲವೆ ? ಎಲ್ಲವನ್ನೂ ನೀನೇ ಕಬಳಿಸಿಬಿಟ್ಟೆಯಾ ?'

'ಅಯ್ಯೋ ಶಿವನೆ ! ಎಲ್ಲವನ್ನೂ ನಾನು ಕಬಳಿಸುತ್ತೇನೆಯೆ ? ನಿನಗೂ ಮಡಗಿದ್ದೇನೆ. ಇನ್ಸ್ಪೆಕ್ಟರ್ ಗಿರಿ ರುಚಿ ಕಂಡವರು ತಿಂಡಿ ಪೋತರಾಗುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲವೆ ?' ಎಂದು ತಿಮ್ಮರಾಯಪ್ಪ ನಗುತ್ತಾ ಹೇಳಿ ಒಳಕ್ಕೆ ಎದ್ದು ಹೋದನು. ತಟ್ಟೆಯಲ್ಲಿ ಒಳ್ಳೆಯ ಬಾಳೆಯ ಹಣ್ಣುಗಳು, ಬಿಸ್ಕತ್ತುಗಳು ಲೋಟಾದಲ್ಲಿ ಹಾಲು ತಂದು ಮುಂದಿಟ್ಟು, 'ಊಟ ಮಾಡು ರಂಗಣ್ಣ ! ಈಗ ನೀನು ಎರಡು ಸುತ್ತು ದುಂಡಗಾಗಿದ್ದೀಯೆ. ಸರ್ಕೀಟು ಗೀರ್ಕೀಟು ಚೆನ್ನಾಗಿ ನಡೀತಿರಬೇಕು !' ಎಂದನು.

ಫಲಾಹಾರ ಸ್ವೀಕಾರ ಮಾಡುತ್ತ ರಂಗಣ್ಣ ತನ್ನ ಅನುಭವಗಳನ್ನೆಲ್ಲ ಹೇಳಿದನು. ತಿಮ್ಮರಾಯಪ್ಪನಿಗೆ ಬೋರ್ಡು ಒರೆಸುವ ಬಟ್ಟೆ ಮತ್ತು ಮೇಷ್ಟು ಮುನಿಸಾಮಿ― ಅವರ ಕಥೆಗಳನ್ನು ಕೇಳಿ ಬಹಳವಾಗಿ ನಗು ಬಂತು.

ಈ ದಿನ ಬೆಂಗಳೂರಲ್ಲಿ ಏನು ಮೀಟಿಂಗು ? ಕೇಳಿದನು.

ತಿಮ್ಮರಾಯಪ್ಪ ! ಏನೋ ಹಾಳು ಮಾಟಿಂಗು- ಅನ್ನು , ನಮ್ಮ ಇಲಾಖೆಯ ಜನವೋ - ಆ ಕಮಿಟಿಯ ಮೆ೦ಬರುಗಳೋ ! ಸಾಕಪ್ಪ ಅವರ ಸಹವಾಸ !!

ಅದೇಕೆ ಹಾಗೆ ಹೇಳುತ್ತೀಯೆ ?”

ಇನ್ನೇನು ಮಾಡಲಿ ಹೇಳದೆ ? ಉಪಾಧ್ಯಾಯರಿಗೆ ಸರಿಯಾದ ತಿಳಿವಳಿಕೆಯಿಲ್ಲ ; ಪಠ್ಯ ಪುಸ್ತಕಗಳಿಗೆಲ್ಲ ಒಂದೊಂದು ಕೈಪಿಡಿಯನ್ನು ತಯಾರಿಸಿಕೊಡಬೇಕು ; ಪ್ರತಿ ಪಾಠಕ್ಕೂ ಹಾಕಿಕೊಳ್ಳಬೇಕಾದ ಪೀಠಿಕೆ, ಉಪಯೋಗಿಸಬೇಕಾದ ಉಪಕರಣಗಳು, ಬೋಧನಕ್ರಮ, ಕೇಳಬೇಕಾದ ಪ್ರಶ್ನೆಗಳು, ಮಂದಟ್ಟು ಮಾಡಿಸಬೇಕಾದ ವಿಷಯ- ಇವುಗಳನೆಲ್ಲ ತಿಳಿಸುವ ಸೂಚನೆಗಳಿರಬೇಕು-ಎಂದು ನಾನು ಹೇಳಿದರೆ, ಒಬ್ಬೊಬರು ಒಂದೊಂದು ರೀತಿಯಾಗಿ ಹರಟಿದರು ಉಪಾಧ್ಯಾಯರ ಸ್ವಾತಂತ್ರ್ಯಕ್ಕೆ ಭಂಗ ತರಬಾರದು, ಅವರ ಮೇಧಾಶಕ್ತಿಗೆ ಸಂಪೂರ್ಣ ಅವಕಾಶ ಕೊಡಬೇಕು, ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತೆ ಈ ಕೈಪಿಡಿಯ ಸಲಹೆಗಳು ಬೇಡ ಎಂದು ಒಬ್ಬ ಮಹಾರಾಯ ! ಇಂಗ್ಲೆಂಡಿನಲ್ಲಿ ಉಪಾಧ್ಯಾಯರೆಲ್ಲ ಬಹಳ ಚಾಕಚಕ್ಯದಿಂದ ತಂತಮ್ಮ ಕೈಪಿಡಿಗಳನ್ನು ತಾವೇ ಸಿದ್ಧಗೊಳಿಸಿಕೊಳ್ಳುತ್ತಾರೆ ; ನಮ್ಮ ದೇಶದ ಉ ಪ್ಯಾಧ್ಯಾಯರೂ ಹಾಗೆಯೇ ರಚಿಸಿಕೊಳ್ಳಲಿ ; ನಾವು ಕೈಪಿಡಿ ಮಾಡಿ ಕೊಟ್ಟರೆ ಉಪಾಧ್ಯಾಯರ ಬುದ್ದಿ ಮಂದವಾಗುತ್ತದೆ - - ಎಂದು ಮತ್ತೊಬ್ಬ ಹ್ಯಾಟಿನ ದೊಡ್ಡ ಮನುಷ್ಯ ! ಕೈಪಿಡಿಗಳು ಬೇಕಾಗಿದ್ದರೆ ಖಾಸಗಿ ಸಂಸ್ಥೆಗಳು ತಯಾರಿಸಿ ಕೊಡುತ್ತವೆ. ನಮಗೇಕೆ ಆ ಜವಾಬ್ದಾರಿ ? ಎಂದು ಮಗುದೊಬ್ಬ ಬೃಹಸ್ಪತಿ ! ಅವರ ಪೈಕಿ ಒಬ್ಬರಾದರೂ ನಮ್ಮ ಮೇಷ್ಟರ ಮುಖ ನೋಡಿದವರಲ್ಲ. ನಾನು ಪುನಃ,' ಕನಿಷ್ಠತಮವಾದ ಸಲಹೆಗಳನ್ನು ನಾವು ಕೊಡೋಣ; ಹೆಚ್ಚಿನ ವಿಷಯಗಳನ್ನು ಉಪಾಧ್ಯಾಯರು ತಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸಿ ತಿಳಿಸಲಿ. ಈಗ ಹಲವರು ಉಪಾಧ್ಯಾಯರು ತಪ್ಪು ತಪ್ಪಾಗಿ ಹೇಳಿಕೊಡುತ್ತಿದ್ದಾರೆ, ನಮ್ಮಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರು ಹಲವರಿದ್ದಾರೆ. ಟ್ರೈನಿಂಗ್ ಆಗಿಲ್ಲದವರನ್ನೇ ಮೊದಮೊದಲು ನೇಮಕ ಮಾಡುತ್ತೀರಿ. ಆಮೇಲೆ ಯಾವಾಗಲೋ ಟ್ರೇನಿಂಗಿಗೆ ಕಳಿಸಿಕೊಡುತ್ತೀರಿ, ಟ್ರೈನಿಂಗ್ ಸಹ ಸಮರ್ಪಕವಾಗಿಲ್ಲ. ಆದ್ದರಿಂದ ಇಂಗ್ಲೆಂಡನ್ನೂ ನಮ್ಮ ದೇಶವನ್ನೂ ಹೋಲಿಸುವುದು ಬೇಡ ಎಂದು ಹೇಳಿದರೂ ಅವರು ಕೇಳಲಿಲ್ಲ ' ಸಿಟ್ ಡೌನ್ –ಕುಳಿತುಕೊಳ್ಳಿ' ಎಂದು ಹೇಳಿ ನನ್ನನ್ನು ಕೂಡಿಸಿ ಬಿಟ್ಟರು. ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಉಪಾಧ್ಯಾಯರ ಮಾತೃಭಾಷೆಯಲ್ಲೇ ಸಾವಿರಾರು ಪುಸ್ತಕಗಳು ದೊರೆಯುತ್ತವೆ. ಅವರಿಗೆ ಇತರ ಸೌಕರ್ಯಗಳೂ ಇವೆ. ನಮ್ಮಲ್ಲಿ ಮೇಷ್ಟರಿಗೆ ಇಂಗ್ಲೀಷು ಬರುವುದಿಲ್ಲ ; ಕನ್ನಡದಲ್ಲಿ ತಕ್ಕಷ್ಟು ಪುಸ್ತಕಗಳಿಲ್ಲ. ಇರುವ ಸ್ಥಿತಿಯನ್ನು ನಾವು ಹೇಳಲು ಹೋದರೆ ಆ ದೊಡ್ಡ ದೊಡ್ಡ ಸಾಹೇಬರುಗಳು ನಮ್ಮನ್ನು ಬಹಳ ಕೀಳಾಗಿ ಕಾಣುತ್ತಾರೆ. ನನಗೇಕೋ ಬಹಳ ಬೇಜಾರಾಗಿ ಹೋಯಿತು ತಿಮ್ಮರಾಯಪ್ಪ !?

ರಂಗಣ್ಣ ! ನನಗೆ ಇದೆಲ್ಲ ಗೊತ್ತು ಕಾಣಪ್ಪ , ಅದಕ್ಕೇನೇ ನಾನು ನಿನಗೆ ಹೇಳಿದ್ದು : ಯಾವುದನ್ನೂ ಹೆಚ್ಚಾಗಿ ಮನಸ್ಸಿಗೆ ಹಚ್ಚಿಸಿಕೊಂಡು ಹೋಗಬೇಡ ಎಂದು. ಶಿವನಾಣೆ ! ನಿನಗೆ ಹೇಳುತ್ತೇನೆ, ಕೇಳು, ದೇಶ ಉದ್ಧಾರವಾಗಬೇಕು, ಜನ ಮುಂದಕ್ಕೆ ಬರಬೇಕು- ಎಂದು ಯಾವ ಮಹಾರಾಯನಿಗೂ ಮನಸ್ಸಿನಲ್ಲಿಲ್ಲ. ತಾವು ತಾವು ನಾಲ್ಕು ಜನರ ಹತ್ತಿರ ಒಳ್ಳೆಯವರು ಎಂದು ಅನ್ನಿಸಿಕೊಂಡು, ಬೋರೇಗೌಡನ ಹಣವನ್ನು ದಾಮಾಷಾ ಪ್ರಕಾರ ಹಂಚಿಕೊಂಡು ಕಾಲ ಕಳೆಯಬೇಕು ಎಂಬುವುದೇ ಅವರ ಹಂಚಿಕೆ.'

ಅದು ಹೇಗೆ ಮನಸ್ಸಿಗೆ ಹಚ್ಚಿ ಸಿಕೊಳ್ಳದೇ ಇರುವುದು ? ಹೇಳು ತಿಮ್ಮರಾಯಪ್ಪ, ನಿನ್ನೆಯ ದಿನ ರೈಲಿನಲ್ಲಿ ನಿಮ್ಮ ಜನರ ಮುಖಂಡರೊಬ್ಬರು ಕಲ್ಲೇಗೌಡರು- ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ಅವರ ಕಟ್ಟಡವೊಂದನ್ನು ಸ್ಕೂಲಿಗೆ ಹತ್ತು ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದೆವೆ. ಕಟ್ಟಡ ಯುಗಾಂತರದ್ದು ; ರಿಪೇರಿ ಆದದ್ದು ಕ್ರಿಸ್ತ ಪೂರ್ವದಲ್ಲೋ ಏನೋ ! ಸ್ವಲ್ಪ ರಿಪೇರಿ ಮಾಡಿಸಿಕೊಡಿ ಎಂದರೆ ನನ್ನ ಮೇಲೆ ಬೀಳೋದಕ್ಕೆ ಬಂದರು. ನಮಗೋ ಮೇಲಿಂದ ತಗಾದೆ ಆ ಮನುಷ್ಯ ಮಾಡಿಕೊಡೋದಿಲ್ಲ. ಏನು ಮಾಡಬೇಕು ? ಹೇಳು, ಆ ಕಟ್ಟಡವನ್ನು ಬಿಟ್ಟು ಬಿಟ್ಟು ಬೇರೊಂದನ್ನು ಬಾಡಿಗೆಗೆ ಗೊತ್ತುಮಾಡ ಬೇಕೆಂದಿದ್ದೇನೆ.'

'ಸರಿ, ಆ ಮಾರಾಯ ನಿನಗೆ ಎದುರು ಬಿದ್ದಿದ್ದಾನೋ ! ಅವನ ತಂಟೆಗೆ ಹೋಗಬೇಡ ರಂಗಣ್ಣ, ಇಷ್ಟು ವರ್ಷವೂ ನಡೆದುಕೊಂಡು ಹೋದಂತೆ ಮುಂದಕ್ಕೂ ಹೋಗಲಿ.'

'ಈಗೆಲ್ಲ ಸಾಹೇಬರುಗಳು ಹೊಸಬರು ಬಂದಿದ್ದಾರೆ ತಿಮ್ಮರಾಯಪ್ಪ, ನಾನು ಮುಟ್ಟಾಳ ಪಟ್ಟ ಕಟ್ಟಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ದೊಡ್ಡ ರಸ್ತೆಯಲ್ಲಿರುವ ಕಟ್ಟಡ, ದಿನ ಬೆಳಗಾದರೆ ಯಾರಾದರೂ ದೊಡ್ಡ ಅಧಿಕಾರಿಗಳು ಭೇಟಿ ಕೊಡುತ್ತಾರೆ.'

'ನಿನಗೆ ಆ ಊರಲ್ಲಿ ಬೇರೆ ಕಟ್ಟಡ ಯಾರೂ ಕೊಡುವುದಿಲ್ಲ. ಕಲ್ಲೇಗೌಡನಿಗೆ ವಿರುದ್ಧವಾಗಿ ನಿಲ್ಲೋ ಗಂಡಸು ಆ ಊರಲ್ಲಿಲ್ಲ. ನೀನು ಲೌಕಿಕ ತಿಳಿಯದ ಸಾಚಾ ಮನುಷ್ಯ ; ಬೆಂಗಳೂರು ಮೈಸೂರುಗಳಲ್ಲೇ ಬೆಳೆದ ಪ್ರಾಣಿ. ಹಳ್ಳಿಯ ಹುಲಿಗಳ ಪ್ರಭಾವ ನಿನಗೆ ತಿಳಿಯದು.'

'ಹಾಗಾದರೆ ಅಪಮಾನ ಪಟ್ಟು ಕೊಂಡು, ಆತ ಹಂಗಿಸಿದರೆ ಸೈರಿಸಿಕೊಂಡು ನಾನು ಅಲ್ಲಿರಲೋ ?”

'ಹಾಗಾದರೆ ಒಂದು ಕೆಲಸ ಮಾಡು, ಕಲ್ಲೇಗೌಡನಿಗೆ ಮರ್ಯಾದೆಯಾಗಿ ಒಂದು ಕಾಗದ ಬರೆ. ಅವನನ್ನು ಚೆನ್ನಾಗಿ ಹೊಗಳು. ಕಡೆಯಲ್ಲಿ ಕಟ್ಟಡದ ರಿಪೇರಿ ಮಾಡಿಸಿಕೊಟ್ಟು ಉಪಕಾರ ಮಾಡಿದರೆ ಬಹಳ ಕೃತಜ್ಞನಾಗಿರುತ್ತೇನೆ" ಎಂದು ವಿನಯದಿಂದ ತಿಳಿಸು,”

'ಒಳ್ಳೆಯದಪ್ಪ ! ಆವನ ಕಾಲಿಗೆ ಹೋಗಿ ಬೀಳು, ದಮ್ಮಯ್ಯ ಗುಡ್ಡೆ ಹಾಕು ಎಂದು ಹೇಳುತ್ತೀಯೋ ನನಗೆ ?

'ಅಯ್ಯೋ ಶಿವನೆ! ಅದೇಕೆ ಹಾಗೆ ರೇಗಾಡ್ತೀ? ಕೆಲಸ ಆಗಬೇಕಾದರೆ ಕತ್ತೆಯ ಕಾಲಾದರೂ ಕಟ್ಟಬೇಕು. ಸ್ವಲ್ಪ ನಿಧಾನವಾಡಿ ಕೇಳು ರಂಗಣ್ಣ : ಹಾರಾಡಬೇಡ. ಹಾಗೆ ಮೊದಲು ಒಂದು ಕಾಗದ ಬರೆದು ಹಾಕು, ಅವನು ಮಹಾ ಜಂಬದ ಮನುಷ್ಯ. ಅವನಿಗೆ ಈ ಭೂಲೋಕದಲ್ಲಿ ಕಾಣಿಸುವವರು ಇಬ್ಬರೇ, ದಿವಾನರೊಬ್ಬರು, ಮಹಾರಾಜರಾಜರೊಬ್ಬರು. ಉಳಿದವರು ಅವನ ಗಣನೆಯಲ್ಲೇ ಇಲ್ಲ. ನಿನ್ನನ್ನು ಅವನು ಲಕ್ಷ್ಯದಲ್ಲಿಡುತ್ತಾನೆಯೇ ? ನಿನ್ನ ಕಾಗದಕ್ಕೆ ಅವನು ಉತ್ತರವನ್ನೇನೂ ಕೊಡುವುದಿಲ್ಲ, ಒಂದು ವಾರ ಬಿಟ್ಟು ಕೊಂಡು ಮರ್ಯಾದೆಯಾಗಿ ಒಂದು ಜ್ಞಾಪಕ ಕೊಡು. ಅದಕ್ಕೂ ಅವನು ಲಕ್ಷ್ಯ ಕೊಡುವುದಿಲ್ಲ. ಒಂದು ವಾರ ಪುನಃ ಬಿಟ್ಟು ಕೊಂಡು- ಈ ಬಾರಿ ರಿಜಿಸ್ಟರ್ ಮಾಡಿ- ಕಾಗದ ಹಾಕು, ಮೊದಲೆರಡು ಕಾಗದಗಳ ನಕಲನ್ನು ಒಳಗಿಡು. ಅದಕ್ಕೆ ಜವಾಬೇನಾದರೂ ಬರುತ್ತದೆಯೋ, ಯಾರ ಹತ್ತಿರವಾದರೂ ಹೇಳಿ ಕಳಿಸುತ್ತಾನೆಯೋ ನೋಡು. ಏನೂ ಫಲ ಕಾಣದಿದ್ದರೆ ಮತ್ತೊಂದು ರಿಜಿಸ್ಟರ್ಡ್ ಕಾಗದ ಹಾಕು. ಆಮೇಲೆ ನನ್ನ ಹತ್ತಿರ ಬಾ, ಮುಂದೆ ಮಾಡಬೇಕಾದ್ದನ್ನು ಹೇಳಿಕೊಡುತ್ತೇನೆ. ಈ ಮಧ್ಯೆ ಆ ಮನುಷ್ಯ ಎದುರು ಬಿದ್ದರೆ ನಿನ್ನ ಕೋಪಗೀಪ ತೋರಿಸಿಕೊಳ್ಳ ಬೇಡ ನಗುನಗುತ್ತಾ ಯೋಗಕ್ಷೇಮ ವಿಚಾರಿಸು. ದಿವಾನರ ಹತ್ತಿರ ಏನಾದರೂ ಶಿಫಾರಸು ಮಾಡಬೇಕೆಂದು ಹೇಳು.'

'ನನಗೆ ಅವನ ಶಿಫಾರಸು ಗಿಫಾರಸು ಬೇಕಿಲ್ಲ. ಉಳಿದ ಸಲಹೆಗಳಂತೆ ನಡೆಯುತ್ತೇನೆ. ಇನ್ನೊಂದು ವಿಷಯವನ್ನು ನಿನ್ನೊಡನೆ ನಾನು ಪ್ರಸ್ತಾಪ ಮಾಡಬೇಕು ?'

'ಏನದು ? ಹೇಳು. ಬಹಳ ಫಜೀತಿಯಲ್ಲಿ ಸಿಕ್ಕಿಕೊಂಡಿರುವ ಹಾಗೆ ಕಾಣುತ್ತದೆಯಲ್ಲ.'

'ಫಜೀತಿ ಏನೂ ಅಲ್ಲ. ನಾನಾಗಿ ಮಾಡಿಕೊಂಡದ್ದೂ ಅಲ್ಲ, ಆ ಮುಖಂಡರು ಅಂತ ಇರುತ್ತಾರಲ್ಲ ! ಅವರ ಅಪ್ರಾಮಾಣಿಕತೆಯಿಂದ ನಮಗೆ ಗಂಟುಬೀಳುವ ಪ್ರಸಂಗಗಳು.'

'ಮತ್ತಾವ ಮುಖಂಡ ? ಒಬ್ಬನದ೦ತೂ ಆಯಿತು. ಆ ಕರಿಯಪ್ಪನೂ ನಿನಗೆ ಎದುರು ಬಿದ್ದಿದ್ದಾನೆಯೋ ?'

'ಈಗ ನನಗೆ ಎದುರೇನೂ ಬಿದ್ದಿಲ್ಲ. ಮುಂದೆ ಬೀಳುತ್ತಾನೋ ಏನೋ ತಿಳಿಯದು.?' “ನೀನು ಅವರ ವಿರೋಧಗಳನ್ನೆಲ್ಲ ಕಟ್ಟಿಕೊಳ್ಳಬಾರದು ರಂಗಣ್ಣ! ಅವರು ಯಾವುದಕ್ಕೂ ಹೇಸುವವರಲ್ಲ. ನಿನಗೆ ಪ್ರಪಂಚ ಇನ್ನೂ ತಿಳಿಯದು.

ನಾನು ವಿರೋಧ ಕಟ್ಟಿಕೊಳ್ಳುವುದಕ್ಕೆ ಹಾತೊರೆಯುತ್ತಿದ್ದೇನೆಯೇ? ಇದೇನು ನಿನಗೆ ಹುಚ್ಚು ತಿಮ್ಮರಾಯಪ್ಪ ? ಕೇಳು. ಮಿಡಲ್ ಸ್ಕೂಲಿನಲ್ಲಿ ಸ್ಕಾಲರ್ ಷಿಪ್ಪುಳ ಹಂಚಿಕೆ ಹಿಂದುಳಿದ ಪಂಗಡಗಳಿಗೆ ಇವೆಯಲ್ಲ. ಹಿಂದಿನ ಇನ್ ಸ್ಪೆಕ್ಟರ ಕಾಲದಲ್ಲಿ ಅವುಗಳ ಹಂಚಿಕೆ ಆಯಿತು. ಕಮಿಟಿಯಲ್ಲಿ ಕರಿಯಪ್ಪನೂ ಒಬ್ಬ ಸದಸ್ಯ. ಸ್ಕಾಲರ್ ಷಿಪ್ಪು ಕೊಟ್ಟಿರುವ ವಿಚಾರದಲ್ಲಿ ತಕರಾರು ಅರ್ಜಿಗಳು ಬಂದಿವೆ. ನನಗೆ ಬಂದಿವೆ ಎಂದು ತಿಳಿಯಬೇಡ, ಡೈರಕ್ಟರಿಗೆ, ದಿವಾನರಿಗೆ ಎಲ್ಲರಿಗೂ ಅರ್ಜಿಗಳು ಹೋಗಿ ತನಿಖೆ ಬಗ್ಗೆ ನನ್ನ ಹತ್ತಿರ ಬಂದಿವೆ. ಒಬ್ಬ ಹುಡುಗ ಬಡವ ; ಅವನು ಎರಡನೆಯ ತರಗತಿಯಿಂದ ಮೂರನೆಯ ತರಗತಿಗೆ ತೇರ್ಗಡೆ ಪಡೆದಿದ್ದಾನೆ. ನಂಬರುಗಳು ಚೆನ್ನಾಗಿ ಬಂದಿವೆ. ಹಿಂದೆ ಅವನಿಗೆ ಸ್ಕಾಲರ್ ಷಿ ಷ್ಟು ಬರುತ್ತಿತ್ತು, ಮೂರನೆಯ ತರಗತಿಯಲ್ಲಿ ಅವನಿಗೆ ಸ್ಕಾಲರ್ ಷಿಪ್ಪು ಕೊಟ್ಟಿಲ್ಲ. ಅದಕ್ಕೆ ಬದಲು ಫೈಲಾಗಿ ಅದೇ ಮೂರನೆಯ ತರಗತಿಯಲ್ಲಿರುವ ಹುಡುಗನೊಬ್ಬನಿಗೆ ಸ್ಕಾಲರ್ ಷಿಪ್ಪು ಕೊಟ್ಟಿದ್ದಾರೆ- ಹೀಗೆ ಅನ್ಯಾಯ ನಡೆದಿದೆ ಸ್ವಾಮಿ ! ಆ ಫೈಲಾದ ಹುಡುಗ ನೆಮ್ಮದಿ ಕುಳ ; ಅವನ ತಂದೆ ಮುನ್ನೂರು ರೂಪಾಯಿ ಕಂದಾಯ ಕಟ್ಟುತ್ತಾನೆ ; ಮತ್ತು ಕರಿಯಪ್ಪನವರ ಖಾಸಾ ಅಣ್ಣನ ಮಗ ಆ ಹುಡುಗ ! ನಮ್ಮ ಹುಡುಗನಿಗೆ ಸ್ಕಾಲರ್ ಷಿಪ್ ತಪ್ಪಿಸಿ ಬಿಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಬೊಬ್ಬೆ ಹಾಕಿದ್ದಾನೆ ಆ ತಂದೆ !

ಶಿವನೇ ! ಎಂಥಾ ಜನ ನಮ್ಮವರು ! ?

ಸುಮ್ಮನೆ ನಮ್ಮವರು ಎಂದು ಎಲ್ಲರನ್ನೂ ಏತಕ್ಕೆ ದೂರುತ್ತೀಯ ? ಮುಖಂಡರು ಎಂದು ಹೇಳಿಕೊಳ್ಳುತ್ತ ಸಭೆಗಳಲ್ಲಿ ಬಂದು ಮಾತನಾಡುತ್ತಾರಲ್ಲ, ದಿವಾನರಿಗೆ ಔತಣಗಳನ್ನು ಕೊಡುತ್ತಾರಲ್ಲ-ಅವರನ್ನು ದೂರು. ಹಳ್ಳಿಗಳ ಕಡೆ ನಾನೇ ನೋಡಿದ್ದೇನಲ್ಲ. ಚಿನ್ನದಂಥ ಜನ ! ಏನೊಂದೂ ಕೋಮುವಾರು ಭಾವನೆ ಇಲ್ಲ. ಎಂತಹ ಸರಳ ಪ್ರಕೃತಿ, ಎಂತಹ ಪ್ರೀತಿ ಅವರದು

ಸರಿ ರಂಗಣ್ಣ! ಕರಿಯಪ್ಪನ ವಿಚಾರ ತಿಳಿಸು ನೋಡೋಣ.”

` ಹೇಳುವುದನ್ನು ಕೇಳು. ಆ ಅರ್ಜಿಗಳ ಮೇಲೆ ತನಿಖೆ ನಡೆಸಬೇಕಾಗಿ ಬಂತು. ಮಿಡಲ್ ಸ್ಕೂಲ್ ಹೆಡ್ ಮಾಸ್ಟರಿಗೆ ಕಾಗದ ಬರೆದು ದಾಖಲೆ ಪತ್ರಗಳನ್ನೆಲ್ಲ ತರಿಸಿದೆ. ಆ ಕರಿಯಪ್ಪ - ತನ್ನ ಅಣ್ಣನ ಮಗ ಬಹಳ ಬಡವನೆಂದು ತಾನೇ ಸರ್ಟಿಫಿಕೇಟ್ ಬರೆದು ರುಜುಮಾಡಿದ್ದಾನೆ. ಮತ್ತು ಆ ಹುಡುಗನ ತಂದೆ ರೈಲ್ವೆಯ ಗ್ಯಾಂಗ್ ಕೂಲಿ, ತಿಂಗಳಿಗೆ ಆರು ರೂಪಾಯಿ ಸಂಬಳ- ಎಂದು ಅರ್ಜಿಯಲ್ಲಿ ನಮೂದಿಸಿದೆ. ಈಗ ನಾನೇನು ಮಾಡಬೇಕು ? ಹೇಳು.

ಇನ್ನೊಂದು ಲೋಟ ಹಾಲು ಕುಡಿ ರಂಗಣ್ಣ ! ತಂದು ಕೊಡುತೇನೆ. ಉದ್ವೇಗ ಬೇಡ, ಸಮಾಧಾನ ಮಾಡಿಕೊ' ಎಂದು ತಿಮ್ಮ ರಾಯಪ್ಪ ಎದ್ದು ಹೋಗಿ ಮತ್ತಷ್ಟು ಬಾಳೆಯ ಹಣ್ಣು, ಬಿಸ್ಕತ್ತುಗಳು ಮತ್ತು ಹಾಲನ್ನು ತಂದು ಮುಂದಿಟ್ಟನು.

ಒಳ್ಳೆಯ ಘಾಟಿ ಇಸಂ ಕರಿಯಪ್ಪ !?

" ನೋಡಪ್ಪ ! ಇವರೇ ನಮ್ಮ ದೇಶವನ್ನು ಉದ್ಧಾರ ಮಾಡುವ ಮುಖಂಡರು ! ಸತ್ಯ ಹರಿಶ್ಚಂದ್ರರು !?

ರಂಗಣ್ಣ ! ನಮ್ಮವರ ಕೈಯಾಟಗಳನ್ನೆಲ್ಲ ನಾನು ನೋಡಿದ್ದೇನೆ. ಇದೇನೂ ಹೊಸದಲ್ಲ.'

ಈಗ ನಾನು ಮುಂದೆ ಏನನ್ನು ಮಾಡಬೇಕು ? ತಿಳಿಸು.'

ನೀನಾಗಿ ಏನನ್ನೂ ಮಾಡ ಬೇಡ, ಆ ಕಾಗದಪತ್ರಗಳನ್ನೆಲ್ಲ ಸಾಹೇಬರಿಗೆ ಹೊತ್ತು ಹಾಕು. ಅಪ್ಪಣೆ ಆದಂತೆ ನಡೆದುಕೊಳ್ಳುತ್ತೇನೆ -ಎಂದು ಸಲಹೆ ಕೇಳು, ತೆಪ್ಪಗೆ ಕುಳಿತುಕೋ. ಮೇಲಿಂದ ಏನು ಹುಕುಂ ಬರುತ್ತದೆಯೋ ನೋಡೋಣ. ಆಮೇಲೆ ಆಲೋಚನೆ ಮಾಡೋಣ.

ಸರಿ, ನೋಡಿದೆಯಾ ನನ್ನ ಇನ್ಸ್ಪೆಕ್ಟರ್ ಗಿರಿ.ನೀನು ಆ ದಿನ ಹೇಳಿದ ಉಪ್ಪಿಟ್ಟು ಮತ್ತು ದೋಸೆಗಳ ವರ್ಣನೆಗಳನ್ನು ಕೇಳಿ ಬಾಯಲ್ಲಿ ನೀರೂರಿತು. ಈಗ ನಾಲ್ಕು ಕಡೆಯಿಂದಲೂ ಗೂಟಗಳು, ಮಾತೆತ್ತಿದರೆ ಮೇಲಿನವರು, 'ಟ್ಯಾಕ್ಟ್' ಉಪಯೋಗಿಸಬೇಕು ಎಂದು ಬುದ್ಧಿವಾದ ಹೇಳುತ್ತಾರೆ.'

ಹೀಗೆ ಮಾತುಕತೆಗಳು ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದು ಗಂಟೆ ಆಗಿ ಹೋಯಿತು. 'ರಂಗಣ್ಣ! ಇಲ್ಲೇ ಬಿದ್ದುಕೋ, ಹಾಸಿಗೆ ಕೊಡುತ್ತೇನೆ. ಎಂದು ತಿಮ್ಮರಾಯಪ್ಪ ಹೇಳಿ ಹಾಸಿಗೆಯನ್ನು ಹವಣಿಸಿಕೊಟ್ಟನು. ತಾನೂ ತನ್ನ ಹಾಸಿಗೆಯನ್ನು ಪಕ್ಕದಲೇ ತಂದು ಹಾಕಿಕೊಂಡನು. ನಿದ್ರೆ ಹತ್ತು ವವರೆಗೂ ಇಬ್ಬರೂ ಹರಟೆ ಹೊಡೆಯುತ್ತಿದ್ದರು. ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ್ದಾಯಿತು. ತಿಮ್ಮರಾಯಪ್ಪ ಹೇಳಿಕೊಟ್ಟಿದ್ದ ಹಾಗೆ ಕಲ್ಲೇಗೌಡರಿಗೆ ಕಾಗದಗಳನ್ನು ಬರೆದದ್ದೂ ಆಯಿತು. ಕಡೆಗೆ ರಿಜಿಸ್ಟರ್ಡ್ ಕಾಗದವನ್ನೂ ಅದಕ್ಕೆ ಒಂದು ಜ್ಞಾಪಕದೋಲೆಯನ್ನೂ ಕಳಿಸಿದ್ದಾಯಿತು. ಕರಿಯಪ್ಪನವರ ಅಣ್ಣನ ಮಗನ ವಿಚಾರದಲ್ಲಿ ಸಾಹೇಬರಿಗೆ ಬರೆದು ಹಾಕಿದ್ದಕ್ಕೆ ಆ ಹುಡುಗನ ಸ್ಕಾಲರ್ ಷಿಪ್ಪನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕೆಂದೂ, ಇನ್ನೂ ಹೆಚ್ಚು ತನಿಖೆ ಮಾಡಿ ವಿವರಗಳನ್ನು ತಿಳಿಸಬೇಕೆಂದೂ ಅವರಿಂದ ಆಜ್ಞೆ ಬಂತು. ಹಿಂದಿನ ಸಾಹೇಬರಾಗಿದ್ದಿದ್ದರೆ ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಇತ್ತೀಚೆಗೆ ಬಂದವರು ರೂಲ್ಸು ಗೀಲ್ಸು ಎಂದು ಕೂಗಾಡಿ ಅವುಗಳಂತೆ ನಡೆಯುವವರಾಗಿದ್ದರು ; ಮತ್ತು ಉಪಾಧ್ಯಾಯರುಗಳನ್ನು ದಂಡಿಸುವುದರಲ್ಲಿಯೂ ಇನ್ ಸ್ಪೆಕ್ಟರುಗಳನ್ನು ಬಯ್ಯುವುದರಲ್ಲಿಯೂ ಬಹಳ ಹೆಸರು ಪಡೆದಿದ್ದರು. ಸಾಲದುದಕ್ಕೆ ಆ ಅಧಿಕಾರಿಗಳು ಮಾಡುವ ದಂಡನೆಯ ಪ್ರಮಾಣವನ್ನು ಅನುಸರಿಸಿ ಅವರ ದಕ್ಷತೆಯನ್ನು ಅಳೆಯುವ ಕಾಲವಾಗಿತ್ತು. ಅದರ ಪರಿಣಾಮವಾಗಿ ಅಧಿಕಾರಿಗಳಲ್ಲಿ ಸ್ಪರ್ಧೆ ಏರ್ಪಟ್ಟು ಹೈಸ್ಕೂಲು ಮತ್ತು ಮಿಡಲ್ ಸ್ಕೂಲು ಉಪಾಧ್ಯಾಯರುಗಳಲ್ಲಿ ದಂಡನೆಯನ್ನು ತಪ್ಪಿಸಿಕೊಂಡವರು ಬಹಳ ಅಪೂರ್ವವಾಗುತ್ತ ಬಂದರು. ಇನ್ನು ಪ್ರೈಮರಿ ಸ್ಕೂಲು ಉಪಾಧ್ಯಾಯರುಗಳ ವಿಚಾರವನ್ನು ಏಕೆ ಹೇಳಬೇಕು ! ಆ ಭಯಂಕರ ಕಾಲದಲ್ಲಿ ಇಲಾಖೆಗೆ ಬಹಳ ಹಣ ಉಳಿತಾಯವಾಯಿತೆಂದು ವೃತ್ತಪತ್ರಿಕೆಗಳಲ್ಲೆಲ್ಲ ಪ್ರಕಟವಾಗಿದ್ದುವು. ಹೀಗೊಂದು ನವೀನ ವಾತಾವರಣ ತಲೆದೋರಿದ್ದುದರಿಂದ ರಂಗಣ್ಣನ ಹೊಸ ಸಾಹೇಬರು ಹುಡುಗನ ಸ್ಕಾಲರ್ ಷಿಪ್ಪನ್ನು ನಿಲ್ಲಿಸಿ, ಹೆಚ್ಚಿನ ವಿವರಗಳನ್ನು ತಿಳಿಸಬೇಕೆಂದು ಅಪ್ಪಣೆ ಮಾಡಿದ್ದರು.

ರಂಗಣ್ಣನು ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ನಡೆಸುತ್ತ ಒಂದು ಕಡೆ ಉಪಾಧ್ಯಾಯರಿಗೆ ಬೋಧನಕ್ರಮ ಮತ್ತು ಸಂವಿಧಾನಗಳಲ್ಲಿ ತಿಳಿವಳಿಕೆಯನ್ನು ಕೊಡುತ್ತಲೂ, ಮತ್ತೊಂದು ಕಡೆಗ್ರಾಮಸ್ಥರಿಗೆ ಇಲಾಖೆಯ ನಿಯಮಗಳನ್ನು ಮತ್ತು ಅವುಗಳ ಉದ್ದೇಶಗಳನ್ನು ತಿಳಿಸುತ್ತಲೂ ಬರುತ್ತಿದ್ದನು. ಜೊತೆಗೆ ಗ್ರಾಮಸ್ಥರಿಗೆ ಉಪಯುಕ್ತವಾದ ನವೀನ ವ್ಯವಸಾಯ ಕ್ರಮ, ಗ್ರಾಮಸ್ಥರ ಆರ್ಥಿಕಾಭಿವೃದ್ಧಿಗೆ ಸಲಹೆಗಳು ನಮ್ಮ ಸಾಹಿತ್ಯ, ನಾಡಿನ ಗತವೈಭವ, ರಾಮಾಯಣ ಮಹಾಭಾರತಗಳಲ್ಲಿರುವ ಕಥೆಗಳು - ಇವುಗಳನ್ನು ತಿಳಿಸುತ್ತಲೂ ಬಂದನು. ಇವುಗಳ ಪರಿಣಾಮವಾಗಿ ಪಾಠ ಶಾಲೆಗಳಲ್ಲಿ ಹೆಚ್ಚು ಶಿಸ್ತು, ಗ್ರಾಮಸ್ಥರ ಸಹಕಾರ ಮತ್ತು ಸಹಾಯ, ಉಪಾಧ್ಯಾಯರಲ್ಲಿ ಹೆಚ್ಚು ಚಟುವಟಿಕೆ, ನಿಯಮಗಳ ಪ್ರಕಾರ ನಡೆಯುವುದು, ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ಇವೆಲ್ಲ ಹೆಚ್ಚುತ್ತ ಬಂದುವು. ಒಟ್ಟಿನಲ್ಲಿ ಕೆಲಸ ಚೆನ್ನಾಗಿ ನಡೆಯುತ್ತಿತ್ತು. ಇನ್ಸ್ಪೆಕ್ಟ ರವರು ಶಾಲೆಗೆ ಬಂದು ತಮ್ಮ ಕೆಲಸವನ್ನು ನೋಡಲಿ, ತಮ್ಮ ಶಾಲೆಗೆ ಬಂದು ನೋಡಲಿ ಎಂಬ ಸ್ಪರ್ಧೆ ಬೆಳೆಯಿತು. ಅಲ್ಲಲ್ಲಿ ಉಪಾಧ್ಯಾಯರ ಸಭೆಗಳು ನಡೆದಾಗ ಅವರು ಸಿದ್ಧಗೊಳಿಸಿದ್ದ ಉಪಕರಣಗಳು, ಟಿಪ್ಪಣಿಗಳು, ಕೈಗೆಲಸದ ಮಾದರಿಗಳು- ಇವುಗಳ ಸಣ್ಣದೊಂದು ಪ್ರದರ್ಶನವನ್ನು ರಂಗಣ್ಣನು ಏರ್ಪಾಟು ಮಾಡುತ್ತಿದ್ದನು. ಹೀಗೆ ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಕೂಡಿದ ಒಂದು ದೊಡ್ಡ ಸಂಸಾರದಂತೆ ರೇಂಜು ನಡೆದು ಕೊಂಡು ಹೋಗುತ್ತಿತ್ತು. ದಂಡನೆ ಮಾಡಬೇಕಾದ ಸಂದರ್ಭಗಳು ಬಹಳ ಕಡಮೆಯಾದುವು. ಇನ್ ಸ್ಪೆಕ್ಟರವರ ವಿಶ್ವಾಸವನ್ನು ಕಳೆದುಕೊಳ್ಳುವುದೇ ಒಂದು ದಂಡನೆಯೆಂದು ಉಪಾಧ್ಯಾಯರು ಭಾವಿಸುತ್ತ ಬಂದರು.

ಹೀಗೆ ಎಲ್ಲವೂ ಸುಮುಖವಾಗಿ ವ್ಯವಸ್ಥೆಗೆ ಬಂತು. ರಂಗಣ್ಣನಿಗೂ ಮನಸ್ಸಿನಲ್ಲಿ ಸಂತೋಷ ಬೆಳೆಯುತ್ತ ಬಂತು. ಒಂದು ದಿನ ಬೈಸ್ಕಲ್ ಮೇಲೆ ಸುಮಾರು ಒಂಬತ್ತು ಮೈಲಿ ದೂರದ ಬೊಮ್ಮನಹಳ್ಳಿಗೆ ತನಿಖೆ ಬಗ್ಗೆ ಹೊರಟನು. ಪಾಠಶಾಲೆಯ ಕಟ್ಟಡದ ಹತ್ತಿರ ಇಳಿದಾಗ ಬೆಳಗ್ಗೆ ಏಳು ಗಂಟೆ ಇಪ್ಪತ್ತು ನಿಮಿಷಗಳಾಗಿದ್ದುವು. ಬಾಗಿಲು ತೆರೆದಿತ್ತು ; ಹುಡುಗರು ಆರ್ಧಜನ ಬಂದಿದ್ದರು, ಇತರರು ಬರುತ್ತಲಿದ್ದರು. ಒಳಗೆ ಇಬ್ಬರು ಉಪಾಧ್ಯಾಯರಿದ್ದರು. ಆ ಹೊತ್ತಿಗೆ ಗ೦ಟಿಯನ್ನು ಬಾರಿಸಿದರು. ಪಕ್ಕದಿಂದ ಹೆಡ್ ಮಾಸ್ಟರ್ ಬಂದು ಕೈ ಮುಗಿದನು. ಆತನ ಹೆಸರು ವೆಂಕಟಸುಬ್ಬಯ್ಯ ; ಮುಳ್ಳು ಮುಖ, ಮೆಳ್ಳೆಗಣ್ಣು, ಸ್ವಲ್ಪ ಕಪ್ಪು ಮೈ ಬಣ್ಣ.. ಸುಮಾರಾಗಿ ಒಳ್ಳೆಯ ಬಟ್ಟೆಗಳನ್ನೆ ಹಾಕಿಕೊಂಡಿದ್ದ ನು. ಹಣೆಗೆ ದಟ್ಟವಾಗಿ ವಿಭೂತಿ ಪಟ್ಟಿಗಳಿದ್ದು ವು. ಸ್ವಲ್ಪ ನಿಷ್ಠಾವಂತನೆಂದು ಕಂಡಿತು. ಪಾಠಶಾಲೆಯ ಒಳಗಡೆ ದೇವರ ಪ್ರಾರ್ಥನೆಯ ಮೇಲೆ ಪುನಃ ಗಂಟೆಯನ್ನು ಬಾರಿಸಿದರು.

ಹೆಡ್ ಮಾಸ್ಟರೊಡನೆ ರಂಗಣ್ಣ ಒಳಕ್ಕೆ ಪ್ರವೇಶಿಸಿದನು. ಒಳಗೆ ಅಚ್ಚುಕಟ್ಟಾಗಿದ್ದಿತು ; ಕಶ್ಮಲಗಳೇನೂ ಇರಲಿಲ್ಲ. ವೇಳಾ ಪತ್ರಿಕೆ, ಪಾಠಗಳ ಹಂಚಿಕೆ ಪಟ್ಟಿ, ವಿದ್ಯಾಭಿವೃದ್ಧಿಯ ತಃಖ್ತೆ, ಮೊದಲಾದುವನ್ನೆಲ್ಲ ಆಯಾ ಸ್ಥಳಗಳಲ್ಲಿ ಗೋಡೆಗೆ ತಗಲು ಹಾಕಿದ್ದರು. ರಂಗಣ್ಣ ಹೆಡ್ ಮಾಸ್ಟರವರ ಕೊಟಡಿಯಲ್ಲಿ ಕುಳಿತುಕೊಂಡು, 'ಏನು ಹೆಡ್ ಮಾಸ್ಟ್ರರೇ ! ನಿಮ್ಮ ಪಾಠ ಶಾಲೆಯ ತನಿಖೆ ಮಾಡೋಣವೊ? ನಿಮಗೆ ಮುಂದಾಗಿ ವರ್ತಮಾನ ಕೊಡದೆ ಬಂದಿದ್ದೇನೆ. ಸಿದ್ಧ ಪಡಿಸಿಕೊಳ್ಳುವುದಕ್ಕೆ ನಿಮಗೆ ವಿರಾಮ ದೊರೆತಿಲ್ಲ' ಎಂದು ಮುಗಳುನಗೆಯಿಂದ ಹೇಳಿದನು.

'ಇನ್ ಸ್ಪೆಕ್ಷನ್ ಮಾಡಿ ಸ್ವಾಮಿ ! ನಾನೇನೂ ಹೆದರೋದಿಲ್ಲ ! ನಿಮಗ್ಯಾಕೆ ಸ್ವಾಮಿ ನಾವು ಹೆದರಬೇಕು ?'

'ನಾನೇನು ಹುಲಿಯೆ ? ಕರಡಿಯೆ ? ನೀವೇತಕ್ಕೆ ಹೆದರ ಬೇಕು ??'

'ನಾನು ಸ್ವಲ್ಪ ಒರಟು ಮನುಷ್ಯ, ಖಂಡಿತವಾದ ಸ್ವಾಮಿ ! ತಾವೇನೂ ತಿಳಿದುಕೊಳ್ಳಬೇಡಿ. ಮುಚ್ಚು ಮರೆ ನನಗೆ ಸರಿಬೀಳೋದಿಲ್ಲ, ನನಗೆ ಹೆದರಿಕೆ ಏಕೆ ಸ್ವಾಮಿ ? ತಾವು ಬರುವಾಗ ನಾನು ಗದ್ದೆ ಹತ್ತಿರ ಇದ್ದೆ, ತಮ್ಮ ಆಗಮನ ದೂರದಿಂದಲೇ ನನ್ನ ಕಣ್ಣುಗಳಿಗೆ ಬಿತ್ತು. ನನ್ನ ಗಡಿಯಾರ ನೋಡಿದೆ. ಏಳೂ ಕಾಲು ಗಂಟೆ ಆಗಿತ್ತು, ಸ್ಕೂಲ್ ಹತ್ತಿರ ಬರೋ ಹೊತ್ತಿಗೆ ನಾನೂ ಬಂದು ಸೇರಬಹುದು; ಕರಾರು ವಾಕ್ ಏಳು ಗಂಟೆ ಇಪ್ಪತ್ತು ನಿಮಿಷಕ್ಕೆ ನಾನು ಸ್ಕೂಲ್ ಹತ್ತಿರ ಇದ್ದರೆ ಆಯಿತಲ್ಲ ' - ಎಂದು ಕೊಂಡು ಹೊರಟು ಬಂದೆ. ಇದರಲ್ಲಿ ತಪ್ಪೇನು ಸ್ವಾಮಿ? ನಿಮಗೆ ಏತಕ್ಕೆ ಹೆದರಬೇಕು ? ನಾನು ದಿನಾಗಲೂ ಹೊಲಗದ್ದೆಗಳ ಕಡೆ ಹೋಗೋದುಂಟು ಸ್ವಾಮಿ ! ಆದರೆ ಸ್ಕೂಲ್ ಹೊತ್ತಿಗೆ ಈ ಹೊಸ್ತಿಲೊಳಗಿರುತ್ತೇನೆ, ಅದನ್ನು ಮಾತ್ರ ತಪ್ಪೋದಿಲ್ಲ. ಇದನ್ನು ಈ ದಿನ ತಮ್ಮೆದುರಿಗೆ ಮಾತ್ರ ಕಲ್ಪಿಸಿ ಕೊಂಡು ನಾನು ಹೇಳುತ್ತಿಲ್ಲ. ಬೇಕಾದನರನ್ನು ತಾವು ಕೇಳಬಹುದು. ನಿಮಗೇಕೆ ಸ್ವಾಮಿ ಹೆದರಿ ಕೊಂಡು ಸುಳ್ಳು ಹೇಳ ಬೇಕು ??

ಆ ಮೇಷ್ಟು ಒಂದು ವಿಚಿತ್ರ ಪ್ರಾಣಿ ಎಂದು ರಂಗಣ್ಣನಿಗೆ ತೋರಿತು. ಕೆಳ ನೌಕರ ಖ೦ಡಿತವಾದಿಯಾಗಿ ಒರಟು ಮಾತಡಿದರ ಮೇಲಿನವರು ಸೈರಿಸುವುದು ಅಪರೂಪ. ಮೇಲಿನವರಿಗೆಲ್ಲ ಬೇಕಾಗಿರುವುದು : “ಅಪ್ಪಣೆ ಮಹಾಸ್ವಾಮಿ ತನದ ಗುಲಾಮಗಿರಿ. ಎರಡನೆಯದಾಗಿ, ತಾನು ಕೆಲಸದಲ್ಲಿ ಕಟ್ಟು ನಿಟ್ಟಾಗಿ ಪ್ರಾಮಾಣಿಕನಾಗಿದ್ದ ಮಾತ್ರಕ್ಕೇನೆ ತನ್ನ ಒರಟು ಮಾತಿನಿಂದ ಮೇಲಿನವರನ್ನು ಕೆರಳಿಸುವುದು ವಿವೇಕವೇನೂ ಅಲ್ಲ. ಆದರೆ ರಂಗಣ್ಣನಿಗೆ ಕೋಪವಾಗಲಿ ಅಸಮಾಧಾನವಾಗಲಿ ಉಂಟಾಗಲಿಲ್ಲ. ಮೇಷ್ಟಗಳಲ್ಲಿ ಎಷ್ಟೋ ಬಗೆ; ಈ ಮೇಷ್ಟ್ರರನ್ನು ಮನಶ್ಶಾಸ್ತ್ರದ ಚಿಕಿತ್ಸಕ ದೃಷ್ಟಿಯಿಂದ ನೋಡೋಣ ಎಂದು ನಿರ್ಧರಿಸಿಕೊಂಡು ಸ್ವಲ್ಪ ಮುಗುಳು ನಗೆಯನ್ನು ಮಾತ್ರ ಸೂಸಿದನು.

ಕ್ರಮವಾಗಿ ಮೊದಲನೆಯ ತರಗತಿಯಿಂದ ತನಿಖೆ ಪ್ರಾರಂಭವಾಯಿತು. ಆ ಪಾಠಶಾಲೆಯಲ್ಲಿ ಮೊದಲನೆಯ ತರಗತಿಯಲ್ಲಿ ಎರಡೇ ತಂಡಗಳಿದ್ದುವು. ನಲವತ್ತು ಹುಡುಗರಲ್ಲಿ ಮುವ್ವತ್ತು ಹುಡುಗರು ಒತ್ತಕ್ಷರದ ಪಾಠಗಳನ್ನೆಲ್ಲ ಮುಗಿಸಿದ್ದರು ; ಉಳಿದ ಹತ್ತು ಮಂದಿ ಒತ್ತಕ್ಷರದ ಪಾಠಗಳನ್ನು ಪ್ರಾರಂಭಿಸಿದ್ದರು, ಇತರ ಪಾಠ ಶಾಲೆಗಳಲ್ಲಿ ಸಾಮಾನ್ಯವಾಗಿ ಮೊದಲನೆಯ ದರ್ಜೆಯಲ್ಲಿ ಆರು - ಏಳು ತಂಡಗಳಿರುವುದು ರಂಗಣ್ಣನ ಅನುಭವಕ್ಕೆ ಬಂದಿದ್ದಿತು. ಈ ತರಗತಿಯ ತನಿಖೆ ಮುಗಿದಮೇಲೆ ಎರಡನೆಯ ತರಗತಿಯದು ಪ್ರಾರಂಭವಾಯಿತು. ಆದರಲ್ಲಿ ಇಪ್ಪತ್ತೈದು ಹುಡುಗರಿದ್ದರು. ಗದ್ಯ ಪಾಠವನ್ನು ಮಾಡಬೇಕೆಂದು ರಂಗಣ್ಣ ಆ ತರಗತಿಯ ಉಪಾಧ್ಯಾಯರಿಗೆ ಹೇಳಿದನು. ಆತನು, 'ದೊರೆ ಮತ್ತು ಬಂದಿವಾನರು ' ಎಂಬ ಪಾಠವನ್ನು ತೆಗೆದು ಕೊಂಡು ಅದಕ್ಕೆ ಪೀಠಿಕೆ ಹಾಕಿದಮೆಲೆ ಹುಡುಗರನ್ನು ಓದುವಂತೆ ಹೇಳಿದನು. ಆ ಹುಡುಗರು ಒಬ್ಬೊಬ್ಬರು ಒಂದೊಂದು ವಾಕ್ಯವನ್ನು ಮಾತ್ರ ಓದುತ್ತ ಪಾಠವನ್ನು ಮುಂದುವರಿಸಿದರು. ಹುಡುಗರು ಓದಿ ಮುಗಿಸಿದರೋ ಇಲ್ಲವೋ ಹೆಡ್ ಮಾಸ್ಟರು ಕೆರಳಿ, ನನ್ನ ಮಾನವನ್ನು ಇನ್‌ಸ್ಪೆಕ್ಟರ ಮುಂದೆ ತೆಗೆದೆಯಲ್ಲಾ ನೀನು ! ಶುದ್ಧ ಮುಟ್ಟಾಳ ಕೆಲಸ ಮಾಡಿದೆ ! ಒಂದು ವಾಕ್ಯ ಬೃಂದವನ್ನು ಒಬ್ಬ ಹುಡುಗ ಓದಬೇಕು ; ಒಂದೊಂದೇ ವಾಕ್ಯ ಓದಕೂಡದು- ಎಂದು ತಿಳಿಸಿರಲಿಲ್ಲವೇ ? ನಾನು ಮೆಮೊ ಪುಸ್ತಕದಲ್ಲಿ ಬರೆದಿಲ್ಲವೇ ? ಕ್ರಮ ಹಿಡಿದು ಪಾಠಮಾಡು'- ಎಂದು ಝಂಕಿಸಿದನು ಇನ್ ಸ್ಪೆಕ್ಟರ್ ಸಾಹೇಬರು ಏನು ಮಾಡಬೇಕು ? 'ಹೆಡ್ ಮಾಸ್ಟರೇ ಕೋಪ ಮಾಡಬೇಡಿ. ಕ್ರಮತಪ್ಪಿದ್ದರೆ ನಾನು ತಿಳಿಸುತ್ತೇನೆ. ಪಾಠದ ಮಧ್ಯದಲ್ಲಿ ಉಪಾಧ್ಯಾಯರನ್ನು ಗದರಿಸಬಾರದು' ಎಂದು ರಂಗಣ್ಣ ಹೇಳಿದನು.

'ನನಗೆ ಮುಟ್ಟಾ ಳ ಪಟ್ಟ ಬ೦ತಲ್ಲ ಸ್ವಾಮಿ ! ನಾನೇ ಕ್ರಮ ಹೇಳಿಕೊಟ್ಟಿದ್ದೇನೆ ; ಪಾಠಮಾಡಿ ತೋರಿಸಿದ್ದೇನೆ. ನನ್ನ ಕೈ ಕಳಗಿನ ಮೇಷ್ಟರನ್ನು ತಾವು ತಿದ್ದುವುದಾದರೆ ನಾನೇತಕ್ಕೆ ಹೆಡ್ ಮಾಸ್ಟರ್ ಕೆಲಸ ಮಾಡಬೇಕು ಸ್ವಾಮಿ ?'

'ಇರಲಿ, ನಡೆಯುವವರು ಎಡವುತ್ತಾರಲ್ಲದೆ, ಕುಳಿತವರು ಎಡಹುತ್ತಾರೆಯೆ? ನೀವೂ ಮೇಷ್ಟರನ್ನು ತಿದ್ದಬೇಕು. ನಾನೂ ಸಹ ತಿದ್ದಬೇಕು' ಎಂದು ರಂಗಣ್ಣನು ಸಮಾಧಾನ ಹೇಳಿ ತರಗತಿಯ ಉಪಾಧ್ಯಾಯರಿಗೆ 'ಪ್ರಶ್ನೆಗಳನ್ನು ಕೇಳಿ ಮೇಷ್ಟೆ' ಎಂದು ಸೂಚನೆ ಕೊಟ್ಟನು. ಪ್ರಶ್ನೆಗಳೂ, ಅವುಗಳನ್ನು ಹಾಕಿದ ಕ್ರಮವೂ, ಉತ್ತರ ಹೇಳದೆ ತಪ್ಪಿದಾಗ ಮಕ್ಕಳಿಂದಲೇ ಸರಿಯಾದ ಉತ್ತರಗಳನ್ನು ಹೇಳಿಸಿದ್ದೂ, ಕಡೆಗೆ ಕಪ್ಪು ಹಲಗೆಯ ಸಾರಾಂಶ- ಇವುಗಳೆಲ್ಲ ಚೆನ್ನಾಗಿದ್ದುವು. ಹೆಡ್ ಮಾಸ್ಟರು, ಭೇಷ್! ಹಾಗೆ ಮಾಡಬೇಕು ಲಿಂಗಪ್ಪ ! ನನ್ನ ಶಿಷ್ಯ ಆದ್ದಕ್ಕೆ ಈಗ ಸಾರ್ಥಕವಾಯಿತು. ಈಗ ನನ್ನ ಮಾನ ಉಳಿಯಿತು' ಎಂದು ಹೇಳುತ್ತಾ ಇನ್ ಸ್ಪೆಕ್ಟರವರ ಕಡೆಗೆ ತಿರುಗಿ, 'ಪರಾಂಬರಿಸಬೇಕು ಸ್ವಾಮಿ! ಆತನಿಗೆ ಪ್ರೈವೇಟಿನಲ್ಲಿ ಮಿಡಲ್ ಸ್ಕೂಲ್ ಪರೀಕ್ಷೆ ಆಗಿದೆ. ನಾನೇ ಪಾಠ ಹೇಳಿ ಕೊಟ್ಟು ಫಸ್ಟ್ ಕ್ಲಾಸಿನಲ್ಲಿ ತೇರ್ಗಡೆಯಾಗುವಂತೆ ಮಾಡಿದ್ದೇನೆ. ಟ್ರೈನಿಂಗ್ ಸಹಾ ಆಗಿದೆ ' ಎಂದು ಶಿಫಾರಸು ಮಾಡಿದನು. ಇನ್ನು ಕೆಲವು ಪಠ್ಯ ವಿಷಯಗಳಲ್ಲಿ ತನಿಖೆಮಾಡಿದನಂತರ ಹೆಡ್ ಮಾಸ್ಟರು ಖುದ್ದು ಪಾಠ ಹೇಳುತ್ತಿದ್ದ ಮೂರು ಮತ್ತು ನಾಲ್ಕನೆಯ ತರಗತಿಗಳ ತನಿಖೆಗೆ ಪ್ರಾರಂಭವಾಯಿತು.

“ಸ್ವಾಮಿ ! ಮೂರನೆಯ ತರಗತಿಯಲ್ಲಿ ಇಪ್ಪತ್ತೈದು, ನಾಲ್ಕನೆಯ ತರಗತಿಯಲ್ಲಿ ಹದಿನೈದು ಮಕ್ಕಳಿದ್ದಾರೆ. ಹೆಚ್ಚಿಗೆ ಒಬ್ಬರು ಮೇಷ್ಟರನ್ನು ಕೊಡಬೇಕೆಂದು ತಮಗೆ ಹಿಂದೆಯೇ ಅರಿಕೆ ಮಾಡಿಕೊಂಡಿದ್ದೆ. ಸ್ವಾಮಿಯವರ ಮನಸ್ಸಿಗೆ ಬರಲಿಲ್ಲ. ಇಲ್ಲೇ ಅರ್ಧ ಮೈಲಿ ದೂರದಲ್ಲಿ ಸರಕಾರಿ ಸ್ಕೂಲಿದೆ. ಏಳೆಂಟು ಹುಡುಗರು ಸಹ ಅಲ್ಲಿ ಓದುತ್ತಾ ಇಲ್ಲ. ಎಲ್ಲರೂ ಈ ಪಾಠಶಾಲೆಗೆ ಬರುತ್ತಾರೆ. ಆ ಪಾಠ ಶಾಲೆಯನ್ನು ರದ್ದು ಮಾಡಿ ಆ ಮೇಷ್ಟ ರನ್ನು ಇಲ್ಲಿಗೆ ಕಳಿಸಿಕೊಟ್ಟರೆ ಸಾಕು, ಈಗ ಆ ಮೇಷ್ಟರಿಗೆ ದಂಡದ ಸಂಬಳ- ಪುಕಸಟ್ಟೆ ಹದಿನೈದು ರೂಪಾಯಿ ಕೊಡುತ್ತಾ ಇದ್ದೀರಿ. ಅದೇಕೆ ಸ್ವಾಮಿ ಮೇಷ್ಟರಿಗೆ ದಂಡದ ಸಂಬಳ ಕೊಡಬೇಕು ?' ಎಂದು ಹೆಡ್ ಮಾಸ್ಟರ್ ಹೇಳಿದನು.

'ಆಗಲಿ ವೆಂಕಟಸುಬ್ಬಯ್ಯ, ದಾಖಲೆಗಳನ್ನು ನೋಡಿ ಇತ್ಯರ್ಥ ಮಾಡುತ್ತೇನೆ.'

ಇನ್ ಸ್ಪೆಕ್ಟರ್ ಸಾಹೇಬರು ಮಕ್ಕಳನ್ನು ಪರೀಕ್ಷಿಸಿದರು. ಅವರು ಬಹಳ ಚೆನ್ನಾಗಿ ಉತ್ತರಗಳನ್ನು ಹೇಳಿದರು. ಉಕ್ತಲೇಖನದಲ್ಲಿ ಅನೇಕರು ತಪ್ಪುಗಳಿಲ್ಲದೆ ಬರೆದರು ; ಅಕ್ಷರಗಳು ದುಂಡಾಗಿ ಚೆನ್ನಾಗಿ ದ್ದುವು. ರೇ೦ಜಿನಲ್ಲೆಲ್ಲ ಶಿಸ್ತಿನಲ್ಲಿ ಬೋಧನಕ್ರಮಗಳ ಅನುಸರಣೆಯಲ್ಲಿ, ವಿದ್ಯಾಭಿವೃದ್ಧಿಯಲ್ಲಿಯೂ ಆ ಪಾಠಶಾಲೆ ಮೊದಲನೆಯದಾಗಿ ಕಂಡುಬಂತು. ಗೋಡೆಯಮೇಲೆ ನೇತುಹಾಕಿದ್ದ ಪಟ್ಟಿಗಳಲ್ಲಿ ಒಂದರ ಕಡೆಗೆ ರಂಗಣ್ಣನ ದೃಷ್ಟಿ ಹೋಯಿತು. ಅದನ್ನು ನೋಡಿದಾಗ ವಾಠಶಾಲೆಯ ನೈರ್ಮಲ್ಯ ಪಾಲನೆಯ ವಿಚಾರದಲ್ಲಿ ಹೆಡ್ ಮಾಸ್ಟರು ಏರ್ಪಡಿಸಿದ್ದ ಒಂದು ನಿಬಂಧನೆಯು ಕಂಡುಬಂತು. ಮೂರನೆಯ ಮತ್ತು ನಾಲ್ಕನೆಯ ತರಗತಿಗಳ ಒಟ್ಟು ಮಕ್ಕಳಲ್ಲಿ ಹತ್ತು ಮಂದಿ ಹುಡುಗಿಯರಿದ್ಧ ರು. ಉಳಿದ ಮುವ್ವತ್ತು ಹುಡುಗರನ್ನು ಐದು ಐದರಂತೆ ಆರು ತಂಡಗಳಾಗಿ ಮಾಡಿ ಒಂದೊಂದು ತಂಡದವರು ಒಂದೊಂದು ವಾರ ಪಾಠಶಾಲೆಯನ್ನು ಚೊಕ್ಕಟವಾಗಿಡಬೇಕೆಂದೂ, ಇಬ್ಬರು ಸಹಯೋಪಾಧ್ಯಾಯರಲ್ಲಿ ಒಬ್ಬೊಬ್ಬರು ಒಂದೊಂದು ಬದಲಾಯಿಸಿಕೊಂಡು ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದೂ ಆ ಪಟ್ಟಿಯಲ್ಲಿ ಬರೆದಿತ್ತು; ಮತ್ತು ಒಂದೊಂದು ತಂಡದವರ ಕೆಲಸವನ್ನು ನೋಡಿ ಆಯಾ ತಂಡಕ್ಕೆ ನಂಬರುಗಳನ್ನು ದಾಖಲ್ಮಾಡಿತ್ತು. ಆ ಪಟ್ಟಿಯನ್ನು ನೋಡುತ್ತಲೂ ರಂಗಣ್ಣನಿಗೆ ಬಹಳ ಸಂತೋ ಷವಾಯಿತು, ಏರ್ಪಾಡು ಚೆನ್ನಾಗಿದೆ ; ರೇ೦ಜಿನ ಎಲ್ಲಾ ಪಾಠಶಾಲೆಗಳಲ್ಲೂ ಅದನ್ನು ಆಚರಣೆಗೆ ತರಬೇಕು ಎನ್ನಿಸಿತು, ಹೆಡ್ ಮಾಸ್ಟರು, ' ಸ್ವಾಮೀ ! ಈ ಸ್ಕೂಲಿನಲ್ಲಿ ನೂರಕ್ಕೆ ಮೇಲ್ಪಟ್ಟು, ಹುಡುಗರಿದ್ದಾರೆ. ಒಬ್ಬ ಜವಾನನ್ನು ಕೊಡಬೇಕೆಂದು ಈಗ ಎರಡು ವರ್ಷಗಳಿಂದ ಕೇಳುತ್ತಿದ್ದೇನೆ. ತಾವು ಕೊಟ್ಟಿಲ್ಲ' ಎಂದು ಹೇಳಿದನು.

'ಜವಾನನನ್ನು ಕೊಟ್ಟರೆ ಇಷ್ಟು ಚೆನ್ನಾಗಿ ವಾಠಶಾಲೆಯ ಕಟ್ಟಡವನ್ನು ಚೊಕ್ಕಟವಾಗಿಟ್ಟು ಕೊಳ್ಳುತ್ತಾನೆಯೆ ! ಕೊಡಬೇಕಾದು ನ್ಯಾಯ. ಆಲೋಚನೆ ಮಾಡುತ್ತೇನೆ. ಆದರೆ ನಿಮ್ಮ ಏರ್ಪಾಟು ಬಹಳ ಚೆನ್ನಾಗಿದೆ. ವೆಂಕಟಸುಬ್ಬಯ್ಯ ! '

'ನಾನು ಬಹಳ ಕಟ್ಟು ನಿಟ್ಟಿನ ಮನುಷ್ಯ ಸ್ವಾಮಿ ! ಜವಾನ ಇರಲಿ ಇಲ್ಲದೇ ಇರಲಿ, ಸ್ಕೂಲನ್ನು ಚೊಕ್ಕಟವಾಗಿಟ್ಟಿರುತ್ತೇನೆ. ಇನ್ ಸ್ಪೆಕ್ಟರವರು ತನಿಖೆಗೆ ಬರಲಿ ಬರದೇ ಇರಲಿ, ಕೆಲಸದಲ್ಲಿ ಪಾಲುಮಾರುವುದಿಲ್ಲ, ಸರಿಯಾಗಿ ಕೆಲಸ ಮಾಡಿ ಕೊಂಡು ಹೋಗುತ್ತೇನೆ.'

'ಹಾಗೆಯೇ ಇರಬೇಕು ವೆಂಕಟಸುಬ್ಬಯ್ಯ ! ಮನೆಗಳಲ್ಲಿ ನಮ್ಮ ನಮ್ಮ ಗೃಹಿಣಿಯ ಮೇಲೆ ಯಾವಾಗಲೂ ಕಾವಲಿರುವುದಕ್ಕಾಗುಇದೆಯೇ ? ಅವರು ಪತಿವ್ರತೆಯರು. ಹಾಗೆಯೇ ಮೇಷ್ಟರುಗಳೂ ಇರಬೇಕು.'

'ಒಳ್ಳೆಯ ಮಾತು ಹೇಳಿದಿರಿ ಸ್ವಾಮಿ !

ಇದಾದಮೇಲೆ ಪಾಠಶಾಲೆಯ ರಿಜಿಸ್ಟರುಗಳನ್ನೂ ಇತರ ದಾಖಲೆ ಗಳನ್ನೂ ನೋಡಿದ್ದಾಯಿತು. ದೊಡ್ಡ ತಪ್ಪುಗಳೇನೂ ಇರಲಿಲ್ಲ. ತರುವಾಯ ರಂಗಣ್ಣ ಹೊರಡುವುದಕ್ಕಾಗಿ ಎದ್ದು ನಿಂತು,

'ಹೆಡ್ ಮಾಸ್ಟರೇ, ವಿಸಿಟರ್ ಬುಕ್ ಕೊಡಿ. ಅದರಲ್ಲಿ ತನಿಖೆಯ ರಿಪೋರ್ಟನ್ನು ಬರೆದು ಕೊಟ್ಟು ಕಳುಹಿಸುತ್ತೇನೆ' ಎಂದು ಹೇಳಿದನು.

'ಹಾಗೆ ಆಗೋದಿಲ್ಲ ಸ್ವಾಮಿ ! ಬಿಸಿ ಬಿಸಿಯಲ್ಲೇ ಕೆಲಸ ಆಗಿಹೋಗಬೇಕು ! ತಾವು ಇಲ್ಲೇ ರಿಪೋರ್ಟನ್ನು ಬರೆದು ಮುಗಿಸಿಬಿಡಬೇಕು ! !

ಇನ್ಸ್ಪೆಕ್ಟರ್ ಸಾಹೇಬರಿಗೆ- ಇದೇನು ? ಈ ಹೆಡ್ ಮಾಸ್ಟರು ತನಗೇನೇ ಆಜ್ಞೆ ಮಾಡುತ್ತಾನಲ್ಲ ಕೇಳಿದಂತೆ ಪುಸ್ತಕ ಕೊಡದೆ ತನಗೆ ಬುದ್ಧಿ ಹೇಳುವುದಕ್ಕೆ ಹೊರಟನಲ್ಲ ಎಂದು ಸ್ವಲ್ಪ ಕೆರಳಿತು. ಆದರೆ ಹುಡುಗರೆದುರಿಗೆ ಹೆಡ್ ಮಾಸ್ಟರನ್ನು ಏನೂ ಅನ್ನಬಾರದು ಎಂದು ಸೈರಿಸಿಕೊಂಡು , ' ಹೆಡ್‌ಮೇಷ್ಟರೇ ! ಈಗ ಹತ್ತೂವರೆ ಗಂಟೆ ಆಯಿತು ; ಹುಡುಗರನ್ನೆಲ್ಲ ಬಿಟ್ಟು ಬಿಡಿ. ಬೆಲ್ ಹೊಡಿಸಿ' ಎಂದು ಹೇಳಿದನು, ಅದರಂತೆಯೇ ಹುಡುಗರನ್ನು ಬಿಟ್ಟಿದ್ದಾಯಿತು.

'ಕುಳಿತು ಕೊಳ್ಳಿ ಸ್ವಾಮಿ ! ಎಷ್ಟು ಹೊತ್ತಿನ ಕೆಲಸ ! ಕಾಲುಗಂಟೆಯಲ್ಲಿ ತಾವು ಬರೆದ. ಬಿಡಬಹುದು. ಕೋಪ ಮಾಡಿಕೊಳ್ಳಬೇಡಿ! ? ಎಂದು ಹೆಡ್ ಮಾಸ್ಟರು ಹೇಳಿದನು.

ರಂಗಣ್ಣನಿಗೆ ತನ್ನ ಅಧಿಕಾರದ ದರ್ಪ ತೋರಿಸೋಣವೇ ? ಆಥವಾ ಆ ಮನುಷ್ಯ ಹೇಳಿದ ಹಾಗೆ ವರದಿಯನ್ನು ಬರೆದು ಕೈತೊಳೆದುಕೊಂಡು ಹೊರಟುಹೋಗೋಣವೇ ? ಎಂದು ಮನಸ್ಸು ಇಬ್ಬಗೆಯಾಯಿತು. ಒಂದು ನಿಮಿಷ ಹಾಗೆಯೆ : ಆಲೋಚಿಸಿ, ಒಳ್ಳೆಯದು ; ಬರೆದು ಬಿಟ್ಟೆ ಹೊರಡೋಣ.--- ಎಂದು ಕುಳಿತುಕೊಂಡು ತನಿಖೆಯ ವಿಚಾರವನ್ನೆಲ್ಲ ಬರೆದು ರೇ೦ಜಿನಲ್ಲೆಲ್ಲ ಈ ಪಾಠ ಶಾಲೆ ಎಲ್ಲಾ ವಿಚಾರಗಳಲ್ಲಿ ಮೊದಲನೆಯದಾಗಿ ನನಗೆ ತೋರುತ್ತದೆ; ಹೆಡ್‌ಮಾಸ್ಟರು ಬಹಳ ಶಿಸ್ತಿನ ಮನುಷ್ಯರು, ಕರ್ತವ್ಯಪರಾಯಣರು, ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ-ಎಂದು ಪ್ರಶಂಸೆಮಾಡಿ ಬರೆದನು. ವರದಿಯನ್ನು ಬರೆಯುತಿದ್ದಾಗ ಆ ಕೊಟಡಿಯಲ್ಲಿ ಹೆಡ್ ಮಾಸ್ಟರಾಗಲಿ, ಇತರಲಾಗಲಿ ಇರಲಿಲ್ಲ. ವರದಿ ಮುಗಿದಮೇಲೆ, 'ಹೆಡ್ ಮಾಸ್ಟರೆ ! ಬನ್ನಿ, ನಿಮ್ಮ ವಿಸಿಟರ್ಸ್ ಪುಸ್ತಕ ತೆಗೆದುಕೊಳ್ಳಿ' ಎಂದು ರಂಗಣ್ಣ ಕರೆದನು, ಹೆಡ್ಮಾಸ್ಟರು ಪುಸ್ತಕವನ್ನು ತೆರೆದು ನೋಡಲೇ ಇಲ್ಲ! ನೆಟ್ಟಿಗೆಯಲ್ಲಿಟ್ಟು ಬೀಗ ಹಾಕಿಬಿಟ್ಟನು !

'ಸ್ವಾಮಿ ! ನಾನು ಅದನ್ನು ಇನ್ನೊಂದು ವಾರ ನೋಡುವುದಿಲ್ಲ. ತಮ್ಮ ಇನ್ ಸ್ಪೆಕ್ಟರ್ ಕೆಲಸ ತಾವು ಮಾಡಿ ಮುಗಿಸಿಬಿಟ್ಟಿರಿ. ನನಗೂ ತಮಗೂ ನಿಶ್ಚಿಂತೆಯಾಯಿತು. ಎರಡು ನಿಮಿಷ ಕುಳಿತುಕೊಳ್ಳಿ' ಎಂದು ಹೇಳಿದನು. ಆ ಹೊತ್ತಿಗೆ ಹೆಡ್ ಮಾಸ್ಟರ ಹುಡುಗ ಬೆಳ್ಳಿಯ ತಟ್ಟೆಯಲ್ಲಿ ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು ಮತ್ತು ದೊಡ್ಡ ಬೆಳ್ಳಿಯ ಲೋಟದಲ್ಲಿ ಕಾಫಿ-- ಇಷ್ಟನ್ನು ತಂದು ಒಳಗಿಟ್ಟನು.'

'ತೆಗೆದು ಕೊಳ್ಳಬೇಕು ಸ್ವಾಮಿ ! ತಾವು ವರದಿಯನ್ನು ಬರೆದು ಆಗಿ ಹೋಗಿದೆ, ಏನಾದರೂ ಬರೆದಿರಿ, ನನಗೆ ಅದರ ಆಲೋಚನೆಯೇನೂ ಇಲ್ಲ. ಒಳ್ಳೆಯ ವರದಿ ಬರೆಯಬೇಕೆಂದು ನಾನೇನೂ ತಮಗೆ ಈ ಲಂಚವನ್ನು ಕೊಡುವುದಿಲ್ಲ.'

'ಈ ಸಣ್ಣ ಪುಟ್ಟ ಲಂಚಕ್ಕೆಲ್ಲ ಒಳ್ಳೆಯ ವರದಿ ಬರೆಯುತ್ತಾರೆಯೇ? ಪ್ರಮೋಷನ್ ಕೊಡಿಸುತ್ತಾರೆಯೇ ? ಅವಕ್ಕೆಲ್ಲ ಬೇರೆ ವಿಧವಾದ ಲಂಚ ಕೊಡಬೇಕು ಹೆಡ್ಮೇಷ್ಟೆ !” ನಗುನಗುತ್ತ ಉಪಾಹಾರ ಸ್ವೀಕಾರಕ್ಕೆ ಇನ್ ಸ್ಪೆಕ್ಟ ರು ಕುಳಿತರು.'

'ಆ ಲಂಚಗಿ೦ಚಗಳ ಮಾತು ಸ್ವಾಮಿಯವರ ಹತ್ತಿರ ಸಾಗೋದಿಲ್ಲ ! ಆ ಜನ ಬೇರೆ ಸ್ವಾಮಿ ! ನಾನೂ ಹಿಂದೆ ನೋಡಿದ್ದೇನೆ. ನನಗೂ ಇಪ್ಪತ್ತು ವರ್ಷ ಸರ್ವಿಸ್ ಆಯಿತು. ಹತ್ತಾರು ಹಳ್ಳಿಗಳ ನೀರು ಕುಡಿದದ್ದಾಯಿತು.'

'ನನಗೊಬ್ಬನಿಗೇನೆ ಈ ವಿನಿಯೋಗ ಆಗುತ್ತಿದೆಯಲ್ಲ ! ನೀವೂ ತೆಗೆದುಕೊಳ್ಳಿ.?'

'ನಾನು ದೇವರ ಪೂಜೆ ಮಾಡಬೇಕು ಸ್ವಾಮಿ ! ಆದ್ದರಿಂದ ತೆಗೆದುಕೊಳ್ಳುವುದಿಲ್ಲ. ನಮ್ಮ ಹುಡುಗ ತೆಗೆದು ಕೊಳ್ಳುತ್ತಾನೆ. ಅವನಿಗೆ ಅಲ್ಲಿ ಬೇರೆ ಇಟ್ಟಿದೆ ? ರಂಗಣ್ಣ ಬೋಂಡವನ್ನು ರುಚಿ ನೋಡಿದರೆ ಬಹಳ ಸೊಗಸಾಗಿತ್ತು; ತುಪ್ಪದಲ್ಲಿ ಕರದದ್ದು ; ಉಪ್ಪಿಟ್ಟು ಬಹಳ ರುಚಿಯಾಗಿತ್ತು ; ಕಾಫಿ ತರತೀಪಾಗಿತ್ತು. ಹಿಂದೆ ಎಲ್ಲಿಯೂ ಇಂಥ ರುಚಿಕರವಾದ ಉಪ್ಪಿಟ್ಟು ಬೋ೦ಡಗಳು ಅವನಿಗೆ ದೊರೆತಿರಲಿಲ್ಲ. ಉಪಾಹಾರವೆಲ್ಲ ಮುಗಿದಮೇಲೆ ಎಳನೀರುಗಳೆರಡು ಬಂದುವು. ಅವುಗಳಲ್ಲಿ ಒಂದನ್ನು ರಂಗಣ್ಣ ತೆಗೆದುಕೊಂಡು, 'ಹೆಡ್‌ಮೇಷ್ಟರೇ , ನೋಡಿ ! ನಮ್ಮ ರೇಂಜಿನಲ್ಲಿ ಕೆಲವರು ಉಪಾಧ್ಯಾಯರು ನನ್ನ ಅಪ್ಪಣೆಯಂತೆ ನಡೆಯುವುದಿಲ್ಲ. ಸಂಸಾರದಲ್ಲಿ ಒ೦ದೊ ಗಂಡನ ಮಾತಿನಂತೆ ಹೆಂಡತಿ ನಡೆಯಬೇಕು ; ಇಲ್ಲ ಹೆಂಡತಿಯ ಮಾತಿನಂತೆ ಗಂಡ ನಡೆಯಬೇಕು. ಆಗ ಸಂಸಾರದಲ್ಲಿ ವಿರಸ ಕಾಣುವುದಿಲ್ಲ. ಮೇಷ್ಟರ ಮಾತಿನಂತೆಯೇ ನಾನು ನಡೆದರೆ ವಿರಸ ತಪ್ಪುತ್ತದೆ. ಇಲ್ಲವೇ ? ನೀವು ಹೇಳಿದ ಹಾಗೆ ನಾನು ನಡೆದುಕೊಂಡಿದ್ದೇನೆ; ಉಪಾಹಾರವನ್ನೆಲ್ಲ ಮುಗಿಸಿದ್ದೇನೆ. ಇನ್ನು ನಾನು ಹೊರಡುತ್ತೇನೆ, ಎಂದು ಹೇಳಿ ಎದ್ದನು.

'ಖಂಡಿತ ತಾವು ಹೋಗ ಕೂಡದು ಸ್ವಾಮಿ! ಒಳ್ಳೆಯ ಮಧ್ಯಾಹ್ನದ ಹೊತ್ತು ! ಬೈಸ್ಕಲ್ ತುಳಿದು ಕೊಂಡು ಹತ್ತು ಮೈಲಿ ಹಿಂದಿರುಗುವುದೆಂದರೇನು ! ಖ೦ಡಿತ ಕೂಡದು. ನಾನು ಬ್ರಾಹ್ಮಣ, ಮಧ್ಯಾಹ್ನದ ಹೊತ್ತು ಅಭ್ಯಾಗತರಾಗಿ ಬಂದ ದೊಡ್ಡ ಮನುಷ್ಯರನ್ನು ಹಾಗೆಯೆ ಕಳುಹಿಸುವುದುಂಟೆ ?'

'ಹಾಗೆಲ್ಲ ನಾನು ಮೇಷ್ಟರ ಮನೆಯಲ್ಲಿ ಊಟ ಮಾಡುವುದಿಲ್ಲ.'

'ಅದೇಕೆ ಸ್ವಾಮಿ ? ತಮ್ಮ ಇನ್ ಸ್ಪೆಕ್ಟರ್ ಕೆಲಸ ಆಗಿಹೋಯ್ತು, ನನ್ನ ಮೇಷ್ಟರ ಕೆಲಸ ಪೂರೈಸಿಹೋಯಿತು. ಇನ್ನೆಂಥ ಮೇಷ್ಟ್ರು ನಾನು! ಇನ್ನೆಂಥ ಇನ್ ಸ್ಪೆಕ್ಟರ್‌ ನೀವು. ವರದಿ ಆಯಿತು, ಪೆಟ್ಟಿಗೆಯಲ್ಲಿ ಸೇರಿಹೋಯಿತು. ಅದಕ್ಕೋಸ್ಕರವೇ ಸ್ವಾಮಿ ! ನಾನು ಖಂಡಿತವಾಗಿ ಆಡಿಬಿಟ್ಟೆ, ತಮ್ಮ ಇನ್ಸ್ಪೆಕ್ಟರ್ ಗಿರಿಯೆಲ್ಲ ಮುಗಿದು ಹೋಗಲಿ ; ಬರಿಯ ಮನುಷ್ಯರಾಗಿ ಮಾತ್ರ ಉಳಿಯಲಿ ಎಂದು ಆಡಿಬಿಟ್ಟೆ. ಈಗ ನನಗೂ ತಮಗೂ ಇರುವ ಸಂಬಂಧ ಮನುಷ್ಯ ಮನುಷ್ಯರ ಸಂಬಂಧ ! ಊಟದ ಹೊತ್ತು, ತಾವು ಬಿಸಿಲಿನಲ್ಲಿ ಹೋಗಕೂಡದು.' 'ನೀವು ಹೇಳುವುದೆಲ್ಲ ಸರಿ ಮೇಷ್ಟೇ. ಆದರೂ ಬಡ ಉಪಾಧ್ಯಾಯರ ಅನ್ನ, ಅವರ ಮಕ್ಕಳ ಅನ್ನ ನಾನು ಕಿತ್ತು ಕೊಂಡು ತಿನ್ನಲೇ ? ಬೇಡ. ನನಗೆ ದೇವರು ಏನೂ ಕಡಮೆ ಮಾಡಿಲ್ಲ.'

'ಸ್ವಾಮಿ ! ನಾನು ಉಪಾಧ್ಯಾಯ ನಿಜ. ಬಡವರಾದರೂ ಸಹ ಒಪ್ರೊತ್ತು ತಮಗೆ ಅನ್ನ ಹಾಕುವುದರಿಂದ ಅವರು ಪಾಪರ್‌ ಎದ್ದು ಹೋಗುವುದಿಲ್ಲ. ತಾವು ಒಪ್ಪೊತ್ತು ಉಣ್ಣಲಿಲ್ಲ ಅನ್ನಿ, ಅವರೇನೂ ಅಷ್ಟರಿ೦ದಲೇ ಕುಬೇರರಾಗುವುದಿಲ್ಲ. ಬಡತನವಿದ್ದರೂ ಜೊತೆಗೆ ಪ್ರೀತಿ ವಿಶ್ವಾಸಗಳಿರುತ್ತವೆ ಸ್ವಾಮಿ ! ನನ್ನ ಮಟ್ಟಿಗೆ ನಾನು ಹೇಳುತ್ತೇನೆ. ಆತ್ಮಸ್ತುತಿ ಎಂದು ತಿಳಿಯಬೇಡಿ, ನಾನು ಮೂನ್ನೂರು ರೂಪಾಯಿ ಕಂದಾಯ ಕಟ್ಟುತ್ತೇನೆ ! ಹೊಲ, ಗದ್ದೆ, ತೆಂಗಿನ ತೋಪು, ಬಾಳೆಯ ತೋಟ ಮೊದಲಾದುವೆಲ್ಲ ನನಗಿದೆ. ಮನೆಯಲ್ಲಿ ಎರಡು ಹಸು, ಎರಡೆಮ್ಮೆ ಕರೆಯುತ್ತವೆ. ನಾಲ್ಕು ಏರು ನನ್ನ ಜಮೀನಿನಲ್ಲಿ ಸಾಗುವಳಿ ಮಾಡುತ್ತದೆ. ನನಗೆ ತಾವೇನೂ ಪ್ರಮೋಷನ್ ಕೊಡಬೇಡಿ, ನಾನು ತಮ್ಮಲ್ಲಿ ನೌಕರಿ ಸಂಬಂಧವಾಗಿ ಏನನ್ನೂ ಬೇಡುವುದಿಲ್ಲ. ಈ ಹಳ್ಳಿ ನನ್ನದು. ಚಿಕ್ಕಂದಿನಿಂದ ಬೆಳೆದ ಸ್ಥಳ; ಹಲವು ಕಡೆ ಸರ್ವಿಸ್ ಮಾಡಿ ಇಲ್ಲಿಗೆ ಬಂದಿದ್ದೇನೆ. ನಾನು ಬಂದಾಗ ಪಾಠಶಾಲೆಯಲ್ಲಿ ಮುವ್ವತ್ತು ಹುಡುಗರು ಮಾತ್ರ ಇದ್ದರು; ನಾನೊಬ್ಬನೇ ಉಪಾಧ್ಯಾಯ ಈಗ ನೋಡಿ ! ನೂರಕ್ಕೆ ಮೇಲ್ಪಟ್ಟು ಮಕ್ಕಳಿದ್ದಾರೆ. ನನ್ನ ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ವಿದ್ಯೆ ಕಲಿಯಲಿ ಎಂದು ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ. ನನ್ನನ್ನು ಬೇರೆ ಕಡೆಗೆ ವರ್ಗಮಾಡಿದರೆ ಕೆಲಸಕ್ಕೆ ರಾಜಿನಾಮೆ ಕೊಟ್ಟು, ಜಮೀನನ್ನು ನೋಡಿಕೊಳ್ಳುತ್ತೇನೆ. ಬೇಕಾದರೆ ಸ್ವಂತವಾಗಿ ಒಂದು ಪಾಠ ಶಾಲೆ ಇಟ್ಟು ಕೊಳ್ಳುತ್ತೇನೆ. ಆದ್ದರಿಂದ ತಾವೇನೂ ಆಲೋಚನೆ ಮಾಡಬೇಕಾಗಿಲ್ಲ. ಮನೆ ಯಲ್ಲಿ ಅಡಿಗೆ ಆಗಿದೆ. ಅಲ್ಲಿಗೆ ದಯಮಾಡಿಸಿ, ಸ್ನಾನಮಾಡಿ. ಮಡಿ ಕೊಡುತ್ತೇನೆ. ಅರ್ಧಗಂಟೆಯಲ್ಲಿ ದೇವರ ಪೂಜೆಯನ್ನು ಮುಗಿಸುತ್ತೇನೆ, ಊಟಮಾಡಿಕೊಂಡು, ವಿಶ್ರಾಂತಿ ತೆಗೆದು ಕೊಂಡು, ಸಾಯಂಕಾಲ ಐದು ಗಂಟೆಗೆ ಹೊರಟರೆ ದೊಡ್ಡ ರಸ್ತೆಯಲ್ಲಿ ಬಸ್ಸು ಬರುತ್ತದೆ. ಅದರಲ್ಲಿ ಕುಳಿತುಕೊಂಡು ಜನಾರ್ದನಪುರವನ್ನು ಸೇರಬಹುದು. ಆದ್ದರಿಂದ ಬೈಸ್ಕಲ್ ಇಲ್ಲಿರಲಿ. ತಾವು ನನ್ನ ಮನೆಗೆ ದಯಮಾಡಿಸಿ '-ಎಂದು ದೊಡ್ಡ ಭಾಷಣವನ್ನೇ ಹೆಡ್ಮಾಸ್ಟರು ಮಾಡಿದನು.

'ಇನ್ನು ಹಟ ಮಾಡಬಾರದು' ಎಂದು ವಿವೇಕವನ್ನು ತಂದುಕೊಂಡು ರಂಗಣ್ಣ ವೆಂಕಟಸುಬ್ಬಯ್ಯನ ಮನೆಗೆ ಹೊರಟನು.

ಬಡತನ ಇತ್ಯಾದಿ ಕಷ್ಟಗಳಿಲ್ಲದೆ ಸುಖವಾಗಿಯೂ ಸಂತೋಷವಾಗಿಯೂ ಇರುವ ಉವಾಧ್ಯಾಯರು ಒಬ್ಬರಾದರೂ ಇದ್ದಾರಲ್ಲ ಎಂದು ಮೆಚ್ಚಿಕೊಳ್ಳುತ್ತ, ಗ್ರಾಮದ ಮುಖಂಡರು ಮೊದಲಾದವರ ವಿಷಯಗಳನ್ನೆಲ್ಲ ಪ್ರಸ್ತಾಪಿಸುತ್ತ, ವೆಂಕಟಸುಬ್ಬಯ್ಯನ ಮನೆಗೆ ಬಂಗಣ್ಣ ಬಂದನು. ಮುಂದಿನ ಬಾಗಿಲನ್ನು ದಾಟುತ್ತಲೂ ವಿಶಾಲವಾದ ಅಂಗಳ ; ಅದರ ಎಡಗಡೆಯಲ್ಲಿ ದನಗಳ ಕೊಟ್ಟಿಗೆ ; ಬಲಗಡೆ ನೀರಮನೆ ಮತ್ತು ಚಿಲ್ಲರೆ ಸಾಮಾನುಗಳನ್ನು ಅಡಕಿದ್ದ ಒಪ್ಪಾರ, ನಡುವೆಯನ್ನು ದಾಟಿದಮೇಲೆ ಹಜಾರ. ಅದರ ಎದುರುಬದುರು ಪಕ್ಕಗಳಲ್ಲಿ ಎರಡೆರಡು ಕೊಟಡಿಗಳು ; ಅಲ್ಲಿಂದ ಮುಂದೆ ಊಟದ ಮನೆ ; ಅದರ ಬಲಗಡೆ ಅಡಿಗೆಯ ಮತ್ತು ದೇವರ ಪೂಜೆಯ ಕೋಣೆಗಳು. ಅಡಿಗೆಯ ಮನೆಯಿ೦ದಲೂ ಇತ್ತ ನೀರ ಮನೆಯಿಂದಲೂ ಹಿಂಬದಿಗೆ ಹೋಗಲು ಬಾಗಿಲುಗಳಿದ್ದವು. ಹಿಂಭಾಗದಲ್ಲಿ ಗೊಬ್ಬರದ ಗುಂಡಿಯೂ ಇತ್ತು, ಒಟ್ಟಿನಲ್ಲಿ ವೆಂಕಟಸುಬ್ಬಯ್ಯ ಸ್ಥಿತಿವಂತನೆಂಬುದು ಆ ಮನೆಯ ಅಚ್ಚುಕಟ್ಟಿನಿಂದ ತಿಳಿಯಬಹುದಾಗಿತ್ತು. ಹಜಾರದ ಬಲಗಡೆಯ ಕೊಟಡಿಯೊಂದರಲ್ಲಿ ಕುರ್ಚಿಯೊಂದನ್ನು ಹಾಕಿತ್ತು ; ನೆಲಕ್ಕೆ ಚಾಪೆಯನ್ನು ಹಾಸಿತ್ತು. ರಂಗಣ್ಣ ತನ್ನ ಉಡುಪು ಗಳನ್ನು ತೆಗೆಯುತ್ತಿದ್ದಾಗ ಒಂದು ಸರಿಗೆಯ ಪಂಚೆಯನ್ನು ವೆಂಕಟಸುಬ್ಬಯ್ಯ ತಂದು ಕೊಟ್ಟನು. ಆ ಸಂದರ್ಭದಲ್ಲಿ ಎದುರುಗಡೆಯ ಕೊಟಡಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆ ರಂಗಣ್ಣನ ಕಣ್ಣಿಗೆ ಬಿತ್ತು. 'ಏನು ವೆಂಕಟಸುಬ್ಬಯ್ಯ ! ಕಬ್ಬಿಣದ ಪೆಟ್ಟಿಗೆ ಬೇರೆ ಇಟ್ಟಿದ್ದೀರಿ. ಲೇವಾದೇವಿ ಏನಾದರೂ ಮಾಡುತ್ತಿದ್ದೀರಾ? ಒಳಗೆ ಹಣ ಭರ್ತಿ ಇದೆಯೋ?' ಎಂದು ನಗುತ್ತಾ ಕೇಳಿದನು. ಒಡನೆಯೆ ವೆಂಕಟಸುಬ್ಬಯ್ಯನ ಮುಖ ಸಪ್ಪಗಾಯಿತು ; - ಕಣ್ಣಲ್ಲಿ ನೀರು ಉಕ್ಕಿ ತು; ಗಂಟಲು ಕಟ್ಟಿ ತು ; ಮಾತು ಹೊರಡಲಿಲ್ಲ. ಏನು ಸಂಕಟದ ವಿಚಾರವೊ ! ತಾನೇಕೆ ಕೇಳಿದೆನೋ ಎಂದು ರಂಗಣ್ಣ ಪೇಚಾಡಿಹೋದನು. 'ಸ್ವಾಮಿ ! ಆ ಕಬ್ಬಿಣದ ಪೆಟ್ಟಿಗೆಯ ವಿಚಾರವನ್ನು ಏನೆಂದು ಹೇಳಲಿ! ಹೊಟ್ಟೆಯುರಿಯುತ್ತದೆ ! ಹೆತ್ತ ಹೊಟ್ಟೆ ಕೆಟ್ಟದ್ದು ಸ್ವಾಮಿ ! ಹೆಣ್ಣು ಮಕ್ಕಳನ್ನು ಹೆರಬಾರದು ! ಹೆರಬಾರದು !'- ಎಂದು ವೆಂಕಟಸುಬ್ಬಯ್ಯ ಹೇಳಿ ಕಣ್ಣೀರು ಮಿಡಿಯುತ್ತ, " ಅಮ್ಮ, ತಾಯಿ ! ಇನ್ ಸ್ಪೆಕ್ಟರ್ ರವರು ಬಂದಿದ್ದಾರೆ. ಬಂದು ನಮಸ್ಕಾರ ಮಾಡಮ್ಮ! ಅವರ ಆಶೀರ್ವಾದದ ಫಲದಿಂದ ಏನಾದರೂ ಒಳ್ಳೆಯದಾಗಲಿ' ಎಂದು ಮಗಳನ್ನು ಕರೆದನು.

ರಂಗಣ್ಣನ ಉತ್ಸಾಹವೆಲ್ಲ ಇಳಿದುಹೋಯಿತು. ' ಈ ಮನುಷ್ಯ ಸುಖವಾಗಿ ಮತ್ತು ಸಂತೋಷವಾಗಿ ಇದ್ದಾನೆ ಎಂದು ನಾನು ಅಂದು ಕೊಂಡಿದ್ದೇ ಪಾಪವಾಯಿತಲ್ಲ ! ಇ೦ಥ ಖಂಡಿತವಾದಿ, ಒರಟು ಮನುಷ್ಯ, ಒಂದೇ ನಿಮಿಷದಲ್ಲಿ ಬಸಿರ ಬೇಗೆಗೆ ಸಿಕ್ಕಿ ಬೆಣ್ಣೆಯಂತೆ ಕರಗಿ ಕಣ್ಣೀರು ಮಿಡಿಯುತ್ತಿದ್ದಾನೆ! ಇದೇನು ಶೋಕದ ವಿಚಿತ್ರ ! ' ಎಂದು ಹೇಳಿಕೊಳ್ಳುತ್ತಿದ್ದ ಹಾಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಿನ ಯುವತಿ ಬಹಳ ಸಂಕೋಚದಿಂದ ಬಂದು ರಂಗಣ್ಣನಿಗೆ ನಮಸ್ಕಾರ ಮಾಡಿದಳು. ಹಣೆಯಲ್ಲಿ ಕುಂಕುಮವಿತ್ತು. ಕೊರಳಲ್ಲಿ ತಾಳಿಯಿತ್ತು. ದೇವರು ಒಳ್ಳೆಯದನ್ನು ಮಾಡಲಮ್ಮ! ಇನ್ನು ಒಳಕ್ಕೆ ಹೋಗು ತಾಯಿ -ಎಂದು ರಂಗಣ್ಣನು ಹೇಳಿದನು. ಆಕೆ ಹೊರಟು ಹೋದಳು, ನೋಡಿದಿರಾ ಸ್ವಾಮಿ ! ಆ ಹುಡುಗಿ ನನ್ನ ಹಿರಿಯ ಮಗಳು. ಈ ಪಾಪಿಷ್ಟನ ಹೊಟ್ಟೆಯಲ್ಲಿ ಏಕೆ ಹುಟ್ಟಿ ದಳೊ ಕಾಣೆ ! ಆ ಹುಡುಗಿಯನ್ನು ನನ್ನ ಅಳಿಯ ಬಿಟ್ಟು ಬಿಟ್ಟು ನಾಲ್ಕು ವರ್ಷಗಳಾದುವು ! ಹೆತ್ತವರ ಸಂಕಟ ನೋಡಿ ಸ್ವಾಮಿ ! ನಾವು ತಿನ್ನೊ ಅನ್ನವೆಲ್ಲ ಆ ಹುಡುಗಿಯನ್ನ ನೋಡಿದರೆ ಭಸ್ಮವಾಗಿ ಹೋಗುತ್ತೆ ! '

'ಏಕೆ ಬಿಟ್ಟು ಹೋದ ? ಅಳಿಯನ ತಕರಾರೇನು ? '

'ಆಳಿಯ ನನ್ನ ಸಮೀಪ ಬಂಧು. ಹುಡುಗ ಯೋಗ್ಯನಾಗಿದ್ದ ; ಜಮೀನು ಸ್ವಲ್ಪ ಇದೆ, ಎಸ್.ಎಸ್.ಎಲ್.ಸಿ. ಪಾಸ್ ಮಾಡಿದ್ದಾನೆ. ಯಾರೊ ದುರ್ಬೋಧನೆ ಮಾಡಿದರು ಅಂತ ಕಾಣುತ್ತೆ. ಎರಡು ಎಕರೆ ಗದ್ದೆ, ಎರಡು ಸಾವಿರ ರೂಪಾಯಿ ನಗದು ಕೊಟ್ಟರೆ ನಿನ್ನ ಮಗಳೊಡನೆ ಸಂಸಾರ ನಡೆಸುತ್ತೇನೆ ; ಇಲ್ಲವಾದರೆ ನಿನ್ನ ಮನೆಯಲ್ಲಿ ತಂದು ಬಿಡುತ್ತೇನೆ ಎಂದು ನನಗೆ ಕಾಗದ ಬರೆದ. ನಾನೇನು ಮಾಡಲಿ ? ನನಗೆ ಒಟ್ಟು ಮೂರು ಹೆಣ್ಣು ಮಕ್ಕಳು, ಮೂರು ಗಂಡು ಮಕ್ಕಳು, ಎರಡನೆಯ ಹುಡುಗಿ ಏನೊಂದೂ ಗಲಭೆಯಿಲ್ಲದೆ ಗಂಡನೊಡನೆ ಸಂಸಾರ ಮಾಡಿಕೊಂಡಿದ್ದಾಳೆ. ಮೂರನೆಯ ಹುಡುಗಿ ಲಂಗ ಕಟ್ಟಿ ಕೊಂಡು ಓಡಾಡುತ್ತಿದಾಳೆ ; ಇನ್ನೂ ಅವಳಿಗೆ ಮದುವೆಯಿಲ್ಲ. ಹಿರಿಯ ಅಳಿಯನಿಗೆ ಅವನು ಕೇಳಿದ್ದನ್ನು ಕೊಟ್ಟರೆ, ಉಳಿದ ಅಳಿಯಂದರಿಗೂ ಹಾಗೆಯೇ ಕೊಡಬೇಕು. ಅರ್ಧ ಗದ್ದೆ ಯೆಲ್ಲ ಅವರಿಗೆ ಹೋದರೆ ನನ್ನ ಗಂಡು ಮಕ್ಕಳ ಗತಿ ? ನಾನೂ ಬಹಳ ಆಲೋಚನೆ ಮಾಡುತ್ತಿದ್ದೆ ಸ್ವಾಮಿ ! ಅವನಿಗೆ ಉತ್ತರ ಬರೆಯುವುದು ತಡವಾಯಿತು. ಹುಡುಗಿಯನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ದೊಡ್ಡ ರಸ್ತೆಯಲ್ಲಿ ಬಿಟ್ಟು ಬಿಟ್ಟು, ಹೋಗು ನಿಮ್ಮಮ್ಮನ ಮನೆಗೆ !' ಎಂದು ಹೇಳಿ ಬಸ್ಸಿಳಿಯದೆ ಹಾಗೆಯೇ ಹೊರಟು ಹೋದ. ಈ ನನ್ನ ಮಗಳು ಅಳುತ್ತಾ ಸಾಯಂಕಾಲ ಮನೆಗೆ ಬಂದು ಸೇರಿದಳು !'

'ನನ್ನ ಹೆಂಡತಿ ಕೊರಗಿ ಕೊರಗಿ, ಜಮೀನು ಹೋದರೆ ಹೋಗಲಿ ; ಗಂಡುಮಕ್ಕಳಾದರೇನು, ಹೆಣ್ಣು ಮಕ್ಕಳಾದರೇನು; ಎಲ್ಲರೂ ಹೊಟ್ಟೆಯಲ್ಲಿ ಹುಟ್ಟಿದವರೇ! ಎಲ್ಲರಿಗೂ ನಾನು ಬೇನೆ ಪಡಲಿಲ್ಲವೇ ? ಕೊಟ್ಟು ಬಿಡೋಣ- ಎಂದು ಹೇಳಿದಳು. ನಾನೂ ಅದೇ ನಿರ್ಧಾರಕ್ಕೆ ಬಂದೆ. ಆದರೆ ಆ ಹುಡುಗನ ನಡತೆ ಚೆನ್ನಾಗಿಲ್ಲ ಸ್ವಾಮಿ ! ನಾಟಕದ ಕಂಪೆನಿಯಲ್ಲಿ ಸೇರಿಕೊಂಡಿದ್ದಾನೆ ಸರಿಯಾದ ಸಹವಾಸ ಗಂಟು ಬಿದ್ದಿಲ್ಲ. ಅಲ್ಲಿಯ ನಟಿಯರಲ್ಲಿ ಲೋಲನಾಗಿದ್ದಾನೆ. ಈ ದಿನ ಗದ್ದೆ ಮತ್ತು ರೂಪಾಯಿಗಳನ್ನು ಕೊಟ್ಟೆನೋ, ನಾಳೆಯೇ ಪರಭಾರೆ ಮಾಡಿ ಬಿಡುತ್ತಾನೆ. ಆಮೇಲೆ ನನ್ನ ಮಗಳನ್ನು ತಂದು ಇಟ್ಟುಕೋ ನಿನ್ನ ಮಗಳನ್ನ ನಿನ್ನ ಮನೆಯಲ್ಲಿ ಎಂದು ಬಿಟ್ಟು ಹೋಗುತ್ತಾನೆ. ಏನು ಮಾಡುವುದಕ್ಕೂ ತೋಚುವುದಿಲ್ಲ. -

'ದೇವರು ಅವನಿಗೆ ಒಳ್ಳೆಯ ಬುದ್ದಿ ಕೊಡಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ರಂಗಣ್ಣ ಹೇಳಿದನು. 'ಪೆಟ್ಟಿಗೆ ವಿಚಾರ ಕೇಳಿದಿರಿ. ನೋಡಿ ಸ್ವಾಮಿ! ಯಥಾಶಕ್ತಿ ಆ ಹುಡುಗಿಗೆ ಒಡವೆ ವಸ್ತು ಕೊಟ್ಟಿದ್ದೇನೆ. ಸುಮಾರು ಎರಡು ಸಾವಿರ ರೂಪಾಯಿಗಳ ಬೆಲೆ ಆಗಬಹುದು. ಆ ಅಳಿಯನಿಗೆ ಒಳ್ಳೆಯ ಬುದ್ಧಿ ಹುಟ್ಟಿ, ಏನಾದರೂ ಮನೆಗೆ ಬಂದರೆ ಅವನಿಗೆ ಕೊಡುವುದಕ್ಕೆ ಎರಡು ಸಾವಿರ ರೂಪಾಯಿಗಳನ್ನು ನಗದು ಇಟ್ಟಿದ್ದೇನೆ. ಆ ಅಳಿಯನಿಗೆ ಕೊಡುತ್ತಲೂ ಎರಡನೆಯವನು ತಕರಾರು ಎಬ್ಬಿಸಬಹುದೆಂದು ಹೆದರಿ ಅವನ ನಾಲಿನದು ಎರಡು ಸಾವಿರ ರೂಪಾಯಿಗಳನ್ನು ಇಟ್ಟಿದ್ದೇನೆ. ಈ ಹಾಳು ಕೊಂಪೆಯಲ್ಲಿ ಆ ಹಣ, ಆ ಒಡವೆ ವಸ್ತುಗಳನ್ನು ಜೋಪಾನವಾಗಿಡಬೇಕಲ್ಲ ಎಂದು ಎರಡು ವರ್ಷಗಳ ಹಿಂದೆ ಕಬ್ಬಿಣದ ಪೆಟ್ಟಿಗೆಯನ್ನು ಕೊಂಡುಕೊಂಡು ಬಂದೆ. ಪೆಟ್ಟಿಗೆಯಲ್ಲಿ ಅವುಗಳನ್ನಿಟ್ಟಿದ್ದರೂ ಸಹ ರಾತ್ರಿ ಸರಿಯಾಗಿ ನಿದ್ರೆ ಹತ್ತು ವುದಿಲ್ಲ. ಆ ಹುಡುಗಿ ತನ್ನ ಗಂಡನ ಮನೆ ಸೇರಿ, ಅವನೂ ಒಂದು ಕಡೆ ನೆಲೆಯಾಗಿ ನಿಂತು, ನನ್ನ ಮೇಲಿನ ಭಾರ ಯಾವಾಗ ಇಳಿದೀತೋ ಭಗವಂತ- ಎ೦ದು ದಿನವೂ ಪ್ರಾರ್ಥಿಸುತ್ತಾ ಇದ್ದೇನೆ

'ವೆಂಕಟಸುಬ್ಬಯ್ಯ ! ನಿಮ್ಮ ಅಳಿಯನೇನೋ ಕೆಟ್ಟ ವನು. ಅವನಿಗೆ ಯಾರಾದರೂ ಬುದ್ದಿ ಹೇಳ ಬೇಕು.'

'ಈಗ ನನ್ನ ಎರಡನೆಯ ಮಗಳು ತನ್ನ ಪಾಡಿಗೆ ತಾನು ಸಂಸಾರ ನಡೆಸುತ್ತಿದ್ದಾಳೆ. ನನಗೆ ಎಷ್ಟೋ ಸಂತೋಷ. ಹಾಗೆಯೇ ನನ್ನ ಹಿರಿಯ ಮಗಳೂ ಸಂಸಾರ ನಡೆಸಿಕೊಂಡಿದ್ದಿದ್ದರೆ ಸಂತೋಷ ಇಮ್ಮಡಿಯಾಗುತ್ತಿತ್ತು. ಈಗಲೂ ನನಗೆ ಹಿರಿಯ ಅಳಿಯನ ವಿಚಾರದಲ್ಲಿ ಪ್ರೀತಿ. ಅವನು ನಾಳೆ ನಾಟಕದ ಕಂಪೆನಿ ಬಿಟ್ಟು ಇಲ್ಲಿ ಬಂದು ನೆಲಸಲಿ, ಬಾಚಿ ತಬ್ಬಿ ಕೊಳ್ಳುತ್ತೇನೆ ಬೇಕಾದ ಅನುಕೂಲ ಮಾಡಿ ಕೊಡುತ್ತೇನೆ.'

'ಒಳ್ಳೆಯದು ವೆಂಕಟಸುಬ್ಬಯ್ಯ ! ಆ ಕಾಲವೂ ಬರುತ್ತದೆ. ಅಲ್ಲಿಯವರೆಗೂ ನಿಮ್ಮ ಕಷ್ಟ ದುಃಖ ಸೈರಿಸಿ ಕೊಳ್ಳಬೇಕು ; ಹುಡುಗಿಯ ಮನಸ್ಸು ನೋಯದಂತೆ ನೋಡಿಕೊಳ್ಳಬೇಕು; ಆಕೆಯನ್ನು ಏನೂ ಆಡದೆ ಆದರಿಸಬೇಕು.' ಸ್ನಾನಾದಿಗಳು ಮುಗಿದಮೇಲೆ ವೆಂಕಟಸುಬ್ಬಯ್ಯ ದೇವತಾರ್ಚನೆ ಮಾಡಿದನು. ಬಳಿಕ ಊಟಕ್ಕೆ ಕುಳಿತಾಯಿತು. ಸೊಗಸಾದ ಅಡುಗೆ ! ಅದರಲ್ಲಿ ಪಾಯಸ ಬಹಳ ಸೊಗಸಾಗಿತ್ತು. ಮನೆಯಲ್ಲೇ ಯಥೇಷ್ಟವಾಗಿ ಹಾಲು ದೊರೆಯುತ್ತಿದುದರಿಂದ ವೆಂಕಟ ಸುಬ್ಬಯ್ಯಗೆ ಯೋಚನೆ ಇರಲಿಲ್ಲ. ಒಳ್ಳೆಯ ಹೆಪ್ಪು ಹಾಕಿದ ಧೈಂಡಿ ಮೊಸರು. ಎಲ್ಲವನ್ನೂ ಮನೆಯಾಕೆ ಧಾರಾಳವಾಗಿ ಬಡಿಸಿದಳು. ರಂಗಣ್ಣನೂ ಧಾರಾಳವಾಗಿಯೇ ಹೊಟ್ಟೆಗೆ ಸೇರಿಸಿದನು. ತಾನು ಸ್ವಲ್ಪ ಕಾಲದ ಹಿಂದೆ ಅಷ್ಟೊಂದು ಉಪ್ಪಿಟ್ಟು, ಬೋಂಡ, ರಸಬಾಳೆಹಣ್ಣು, ಕಾಫಿ ಮತ್ತು ಎಳನೀರುಗಳನ್ನು ತುಂಬಿಕೊ೦ಡು ತೇಗಿದ್ದವನು, ಎರಡು ದಿವಸಗಳ ಉಪವಾಸವಿದ್ದ ಗೋದಾವರಿಯ ಬ್ರಾಹ್ಮಣನಂತೆ ಆ ಕೂಟು, ಮಜ್ಜಿಗೆಹುಳಿ, ಚಿತ್ರಾನ್ನ, ಆಂಬೊಡೆ, ಹೋಳಿಗೆ ಮತ್ತು ಪಾಯಸಗಳನ್ನು ಮಹೇಂದ್ರಜಾಲ ಮಾಡಿದಂತೆ ಮಾಯಮಾಡಿಸಿದ್ದು ಅವನಿಗೇನೆ ಆಶ್ಚರ್ಯವಾಯತು. ಎಂತಹ ವಿಚಿತ್ರ !

ಆ ಭಾರಿ ಭೋಜನದ ಪರಿಣಾಮವಾಗಿ ಮಧ್ಯಾಹ್ನ ಶಯನೋತ್ಸವವಾಯಿತು. ಎದ್ದಾಗ ಸಾಯಂಕಾಲ ನಾಲ್ಕು ಗಂಟೆ, ಆ ಹೊತ್ತಿಗೆಹಜಾರದಲ್ಲಿ ಪಂಚಾಯತಿಯ ಮೆಂಬರುಗಳು ಸೇರಿದ್ದರು. ಪಾಠಶಾಲೆಯ ಸಹಾಯೋಪಾಧ್ಯಾಯರು ಬಂದು ಕುಳಿತಿದ್ದ ರು. ಸಾಹೇಬರು ಎದ್ದು ಕೈ ಕಾಲು ಮುಖಗಳನ್ನು ತೊಳೆದು ಕೊಂಡು ಬಂದು ಕುಳಿತರು. ಪಂಚಾಯತಿ ಮೆಂಬರುಗಳ ಪರಿಚಯವನ್ನು ಹೆಡ್ ಮಾಸ್ಟರ್ ಮಾಡಿಸಿಕೊಟ್ಟನು, ಅವರಿಗೆಲ್ಲ ಹೋಳಿಗೆ, ಆಂಬೊಡೆ ಮತ್ತು ಪಾಯಸಗಳ ವಿತರಣೆಯಾಯಿತು. ಇನ್ ಸ್ಪೆಕ್ಟರು ಬರಿ ಕಾಫಿಯನ್ನು ಮಾತ್ರ ತೆಗೆದುಕೊಂಡರು. ಮಾತುಕತೆಗಳಾಗುತ್ತಿದ್ದಾಗ ಉಪಾಧ್ಯಾಯರ ಸಂಘದ ಸಭೆಯನ್ನು ಬೊಮ್ಮನಹಳ್ಳಿ ಯಲ್ಲಿ ಸೇರಿಸಬೇಕೆಂದು ಪಂಚಾಯತಿಯವರು ವಿಜ್ಞಾಪನೆ ಮಾಡಿಕೊಂಡು ಪಂಚಾಯತಿಯ ನಿರ್ಣಯದ ನಕಲನ್ನು ಕೈಗೆ ಕೊಟ್ಟರು. ಅವರಿಗೆ ಉಚಿತವಾದ ಭರವಸೆಯನ್ನು ಕೊಟ್ಟು, ವಿದ್ಯಾಭಿವೃದ್ಧಿಯ ವಿಚಾರವಾಗಿ ಒಂದು ಸಣ್ಣ ಭಾಷಣ ಮಾಡಿ ರಂಗಣ್ಣ ಅಲ್ಲಿಂದ ಹೊರಟನು. ಜೊತೆಯಲ್ಲಿ ಒಂದು ದೊಡ್ಡ ಪರಿವಾರವೇ ಹೊರಟಿತು. ಪಾಠ ಶಾಲೆಯನ್ನು ಹೊಕ್ಕು ಅಲ್ಲಿಂದ ದೊಡ್ಡ ರಸ್ತೆಗೆ ಬರುವ ಹೊತ್ತಿಗೆ ಸಾಯಂಕಾಲ ಐದು ಗಂಟೆಯಾಯಿತು. ಬಸ್ಸು ಬಂತು. ಅಷ್ಟೊಂದು ಜನ ಸೇರಿರುವುದನ್ನು ನೋಡಿ ಬಸ್ಸು ನಿಂತಿತು. ಆದರೆ ಜನಾರ್ದನಪುರಕ್ಕೆ ಹೊರಟವರು ಇನ್‌ಸ್ಪೆಕ್ಟರೊಬ್ಬರೇ. ಬಸ್ ಹೊರಟಾಗ ಜಯಕಾರಗಳಾದುವು. ಆ ದಿನದ ಕಾರ್ಯಕಲಾಪಗಳನ್ನೆಲ್ಲ ಮನಸ್ಸಿನಲ್ಲಿ ಪುನರಾವರ್ತನೆಮಾಡುತ್ತ ರ೦ಗಣ್ಣ ಜನಾರ್ದನ ಪುರವನ್ನು ಸಾಯಂಕಾಲ ಐದೂಮುಕ್ಕಾಲು ಗಂಟೆಗೆ ಕ್ಷೇಮವಾಗಿ ಸೇರಿದನು. ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ ; ಒಂದೆರಡು ಸಾವುಗಳಾದುವು ; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ; ಹುಡುಗರು ಪಾಠಶಾಲೆಗೆ ಬರುತ್ತಿಲ್ಲ ಎಂಬುದಾಗಿ ದಿನಕ್ಕೆ ಎರಡು ಮೂರು ಹಳ್ಳಿಗಳಿಂದ ಕಾಗದಗಳು ಬರತೊಡಗಿದವು. ಕೆಲವು ಉಪಾಧ್ಯಾಯರು ಹೆದರಿಕೊಂಡು ರಜಾಗಳಿಗೆ ಬರೆದು ಹಾಕಿದರು. ರಂಗಣ್ಣನಿಗೆ ಬಹಳ ವ್ಯಸನವಾಯಿತು. ತಾನು ಉಪಾಧ್ಯಾಯರ ಸಹಕಾರದಿಂದ ಅಷ್ಟು ಮುತವರ್ಜಿ ವಹಿಸಿ ಮಾಡಿದ್ದ ಏರ್ಪಾಡುಗಳೆಲ್ಲ ಒಂದೇ ಒಂದು ಕ್ಷಣದಲ್ಲಿ ಪ್ಲೇಗಿನ ಅವಾಂತರದಿಂದ ಧ್ವಂಸವಾದುವಲ್ಲ; ಮನುಷ್ಯ ಪ್ರಯತ್ನದಲ್ಲಿ ಈಗೇನಿದೆ ? ಎಂದು ನೊಂದುಕೊಂಡು ಸ್ಥಳದ ಡಾಕ್ಟರಿಗೆ ಕಾಗದ ಬರೆದನು. ವಸ್ತುಸ್ಥಿತಿ ಏನು? ಯಾವ ಯಾವ ಹಳ್ಳಿಗಳಿಗೆ ಈ ಪಿಡುಗು ವ್ಯಾಪಿಸಿದೆ ?ದಯವಿಟ್ಟು ಬೇಗ ಇನಾಕ್ಯುಲೇಷನ್ ಮಾಡಿ ಜನಗಳಿಗೆ ಧೈರ್ಯ ಹೇಳುವುದು– ಎಂದು ಮುಂತಾಗಿ ಬರೆದನು. ಅವರಿಂದ ಉತ್ತರವೂ ಬಂತು. ಇಡಿಯ ಹೋಬಳಿಯಲ್ಲೇ ಪ್ಲೇಗಿನ ಸೋಂಕು ಇದೆ; ಇನಾಕ್ಯುಲೇಷನನ್ನು ಬಹುಮಂದಿಗೆ ಮಾಡಿದ್ದಾಗಿದೆ ; ಆದರೆ ಹಳ್ಳಿಯ ಜನ ಇನಾಕ್ಯುಲೇಷನ್ ಬೇಡ, ಮಾರಿಪೂಜೆ ಮಾಡಿದರೆ ಪ್ಲೇಗು ಮಾಯವಾಗುತ್ತದೆ ಎಂದು ಹಟ ಮಾಡುತ್ತಿದ್ದಾರೆ ; ಕೆಲವು ಕಡೆಗಳಲ್ಲಿ ಪಾಠಶಾಲೆಗಳನ್ನು ಹದಿನೈದು ದಿನಗಳವರೆಗೆ ಮುಚ್ಚುವುದು ಒಳ್ಳೆಯದು; ಆ ಬಗ್ಗೆ ಉಪಾಧ್ಯಾಯರಿಗೆ ಈಗಾಗಲೆ ತಿಳಿಸಿದೆ–ಎಂದು ಉತ್ತರ ಬಂತು.

ಪ್ಲೇಗು ಜಾಡ್ಯ ತಿಪ್ಪೂರು ಹೋಬಳಿ ಮೊದಲಾದ ಕಡೆಗಳಲ್ಲಿ ಪ್ರತಿವರ್ಷವೂ ತಲೆಹಾಕುವುದೆಂದೂ ಆಗ ಪಾಠಶಾಲೆಗಳಲ್ಲಿ ಒಂದೆರಡು ತಿಂಗಳ ಕಾಲ ಸರಿಯಾಗಿ ಕೆಲಸ ಮಾಡುವುದಿಲ್ಲವೆಂದೂ ರಂಗಣ್ಣನಿಗೆ ಆಮೇಲೆ ತಿಳಿದು ಬಂತು. ಹಳ್ಳಿಗಳ ಆರೋಗ್ಯ ಸ್ಥಿತಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗದಿದ್ದರೆ ವಿದ್ಯೆ ಹರಡಲು ಅವಕಾಶವಿಲ್ಲ ಎಂಬುದೂ ಜೊತೆಯಲ್ಲೇ ಕುಂಬಾರನಿಗೆ ಒಂದು ವರುಷ, ದೊಣ್ಣೆಗೆ ಒಂದು ನಿಮಿಷ~ ಎಂಬ ಗಾದೆಯಂತೆ ಆಯಿತಲ್ಲಾ ಎಂದು ನೊಂದುಕೊಂಡನು. ಪಾಠಶಾಲೆಗಳಿಗೆ ಹೊಲದಲ್ಲಿ ಗುಡಿಸಿಲುಗಳನ್ನಾದರೂ ಕಟ್ಟಿಸುವ ಏರ್ಪಾಡು ಮಾಡಬೇಕು ಎಂದು ತೀರ್ಮಾನಿಸಿದನು. ತಾನು ಆ ಪ್ರಾಂತ ಸರ್ಕೀಟು ಹೋಗಬೇಕಾಗಿದ್ದುದರಿಂದ ತಾನು ಮೊದಲು ಇನಾಕ್ಯುಲೇಷನ್ ಮಾಡಿಸಿಕೊಂಡನು. ತನ್ನ ಮನೆಯವರಿಗೂ ಮಾಡಿಸಿದನು.

ಮಾರನೆಯ ದಿನ ತಿಪ್ಪೂರಿನ ಪ್ರೈಮರಿ ಪಾಠಶಾಲೆಯಿಂದ ಕಾಗದ. ಊರಲ್ಲಿ ಇಲಿಗಳು ಬೀಳುತ್ತಾ ಇವೆ. ಪಾಠಶಾಲೆಯಲ್ಲೂ ಒಂದು ಇಲಿ ಬಿತ್ತು. ಅದನ್ನು ಡಾಕ್ಟರ್ ಬಳಿಗೆ ಕೊಟ್ಟು ಕಳಿಸಿದ್ದಾಯಿತು. ಹತ್ತು ದಿನಗಳವರೆಗೆ ಸ್ಕೂಲನ್ನು ಮುಚ್ಚಬೇಕೆಂದೂ ಒಳಗೆಲ್ಲ ಡಿಸಿನ್ ಫೆಕ್ಷನ್ ಮಾಡಿಸಬೇಕೆಂದೂ ಡಾಕ್ಟರು ಹೇಳಿದ್ದಾರೆ. ಸದ್ಯಕ್ಕೆ ಸ್ಕೂಲನ್ನು ಮುಚ್ಚಿದೆ. ಡಿಸಿನ್ ನೆಕ್ಷನ್ನಿಗೆ ಏರ್ಪಾಡು ಮಾಡಲಾಗುತ್ತದೆ ಎಂದು ಒಕ್ಕಣೆ ಯಿತ್ತು, ಆ ಕಟ್ಟಡವೇ ಕಲ್ಲೇಗೌಡರಿಗೆ ಸೇರಿದ್ದು, ಪ್ರಸ್ತಾಪವನ್ನು ಹಿಂದೆಯೇ ಮಾಡಿದ್ದೆ. ರಂಗಣ್ಣ ಆ ಕಾಗದವನ್ನು ಓದಿಕೊಂಡು ತಿಪ್ಪೂರು ಹೋಬಳಿಯ ಕಡೆಗೆ ಸರ್ಕೀಟು ಹೊರಟನು. ತಿಪ್ಯೂರಿನಲ್ಲಿ ಜನ ಊರನ್ನು ಖಾಲಿಮಾಡಿ ಹೊರಗಡೆ ಗುಡಿಸಿಲುಗಳನ್ನು ಹಾಕಿಕೊಂಡಿದ್ದರು. ಊರು ಬಿಕೋ ಎಂದು ಹಾಳುಬಡಿಯುತ್ತಿತ್ತು. ರಂಗಣ್ಣನು ಡಾಕ್ಟರನ್ನು ಕಂಡು ಸ್ಥಿತಿಯನ್ನು ತಿಳಿದುಕೊಂಡನು. ಅವರು * ಇನ್ ಸ್ಪೆಕ್ಟರೇ ! ಈಗೇಕೆ ಸರ್ಕಿಟು ಹೊರಟಿದ್ದಿರಿ ? ಹಳ್ಳಿಗಳಲ್ಲಿ ಪ್ಲೇಗು ಸೋಂಕು ; ಜನ ಇಲ್ಲ ; ಸ್ಕೂಲು ಬಾಗಿಲುಗಳು ಮುಚ್ಚಿವೆ. ನೀವು ಹಾಗೆಲ್ಲ ತಿರುಗಾಡುವುದು ನಿಮಗೆ ಅಪಾಯಕರ. ಹೀಗೆಯೇ ಎರಡು ತಿಂಗಳ ಕಾಲ. ಆಮೇಲೆ ಹತೋಟಿಗೆ ಬರುತ್ತದೆ. ಅಲ್ಲಿಯವರೆಗೂ ಬೇರೆ ಹೋಬಳಿಗಳಲ್ಲಿ ಸರ್ಕೀಟು ಇಟ್ಟು ಕೊಳ್ಳಿ --- ಎಂದು ಬುದ್ಧಿವಾದ ಹೇಳಿದರು. ಆ ಹೊತ್ತಿಗೆ ಆ ಊರಿನ ವೈಸ್ ಪ್ರೆಸಿಡೆಂಟರು ಬಂದರು. ಅವರೂ ಸಹ ಅದೇ ಬುದ್ಧಿವಾದ ಹೇಳಿದರು. 'ಅಗಲಿ; ರಂಗಣ್ಣ, ಈಗ ಬ೦ದದ್ದಾಯಿತು. ಒಂದೆರಡು ಹಳ್ಳಿ ನೋಡಿಕೊಂಡು ಹಿಂದಕ್ಕೆ ಹೋಗುತ್ತೇನೆ. ನಿಮೂರಿನ ಪ್ರೈಮರಿ ಸ್ಕೂಲ್ ಕಟ್ಟಡಕ್ಕೆ ಚೆನ್ನಾಗಿ ಡಿಸಿನ್ಫೆಕ್ಷನ್ ಮಾಡಿಸಿಕೊಡಿ ದೊಡ್ಡ ಉಪಕಾರವಾಗುತ್ತದೆ ” ಎಂದನು.

'ಓಹೋ ! ಕಲ್ಲೇಗೌಡರ ಅರಮನೆಗೊ ! ಏನು ಬಾಡಿಗೆ ಕೊಡುತಿದ್ದೀರಿ ? ' ಎಂದು ವೈಸ್ ಪ್ರೆಸಿಡೆಂಟ್ ನಗುತ್ತಾ ಕೇಳಿದರು.

'ಹೌದು ಹತ್ತು ರೂಪಾಯಿ ಬಾಡಿಗೆ ?

'ಸರಿ. ಆ ಕಟ್ಟಡಕ್ಕೆ ಡಿಸಿನ್ ಫೆಕ್ಷನ್ ಮಾಡಿಸುವ ಬದಲು ಉತ್ತ ಹೊಲಕ್ಕೆ ಮಾಡಿಸಬಹುದು ! ಗೊಬ್ಬರದ ಗುಂಡಿಗೆ ಮಾಡಿಸಬಹುದು ! )

'ಮತ್ತೆ ಪಾಠಶಾಲೆ ನಡೆಸಬೇಕಲ್ಲ ! ಅದಕ್ಕೇನು ಪರಿಹಾರ ?

'ನಿಮ್ಮ ಇಲಾಖೆಯವರು ಈ ಊರಿಗೆ ಒಂದು ಕಟ್ಟಡ ಕಟ್ಟಿ ಸಲಿಲ್ಲ. ನಾವೂ ಎಷ್ಟೋ ಬಾರಿ ಕೇಳಿಕೊಂಡೆವು ಕೇಳಿದಾಗಲೆಲ್ಲ ಕಲ್ಲೇಗೌಡರ ಕಟ್ಟಡ ಇದೆಯಲ್ಲ ! ಎಂದು ನಮಗೆ ಸಮಾಧಾನ ಹೇಳುತ್ತಾ ಬಂದಿದ್ದಾರೆ. ಅವರಿಗೆ ಹತ್ತು ರೂಪಾಯಿ ಬಾಡಿಗೆ ತೆರುತ್ತಾ ಬಂದಿದ್ದಾರೆ.'

'ನಮಗೇನು ಆ ಕಟ್ಟಡವೇ ಆಗಬೇಕೆಂಬ ಹಟವಿಲ್ಲ. ಬೇರೆ ಒಳ್ಳೆಯ ಕಟ್ಟಡ ಕೊಡಿಸಿ, ಆದೇ ಬಾಡಿಗೆ ಕೊಡುತ್ತೇವೆ. ಬೇಕಾದರೆ ಬಾಡಿಗೆ ಹೆಚ್ಚಾಗಿಯೇ ಕೊಡುತ್ತೇವೆ. '

'ಕಟ್ಟಡವೇನೋ ಇದೆ. ಆದರೆ ಅದರ ಮಾಲೀಕ ಕಲ್ಲೇಗೌಡರಿಗೆ ವಿರುದ್ಧವಾಗಿ ನಿಲ್ಲುವುದಿಲ್ಲ. ನೀವೇ, ಇಲಾಖೆಯವರೇ ಈ ದೊಡ್ಡ ಊರಿಗೆ ಬೇಕಾದ ಕಟ್ಟಡ ಕಟ್ಟಿಸಬೇಕು.'

'ಕಟ್ಟಡ ಆಗುವವರೆಗೂ ಪರಿಹಾರವೇನು ? ಇನ್ನು ಒಂದು ವರ್ಷವಾದರೂ ನಮಗೆ ಅವಕಾಶ ಬೇಕಲ್ಲ '

'ಹೇಗೋ ಮಾಡಿಕೊಳ್ಳಬೇಕು. ಬೆಳಗಿನ ಹೊತ್ತು ಮಿಡಲ್ ಸ್ಕೂಲು ಕಟ್ಟಡದಲ್ಲಿಯೇ ಪ್ರೈಮರಿ ಸ್ಕೂಲನ್ನು ನಡೆಸಬೇಕು.'

'ಊರಿನವರ ಆಕ್ಷೇಪಣೆಯಿಲ್ಲವೋ ?' 'ಊರಿನವರು ಎಂದರೆ ಯಾರು ಸಾರ್ ? ನಾನು ವೈಸ್ ಪ್ರೆಸಿಡೆಂಟ್ ! ನಾನು ಹೇಳುತ್ತೇನೆ : ನನ್ನ ಆಕ್ಷೇಪಣೆಯಿಲ್ಲ. ನಮ್ಮ ಊರಿನ ಕೌನ್ಸಿಲ್ಲಿನ ಆಕ್ಷೇಪಣೆ ಇಲ್ಲದಂತೆ ನಾನು ನೋಡಿಕೊಳ್ಳಬಲ್ಲೆ. ದಾರಿಯಲ್ಲಿ ಹೋಗುವವರ ಆಕ್ಷೇಪಣೆ ಕಟ್ಟಿ ಕೊಂಡು ನಿಮಗೇನು ?)

'ಕಲ್ಲೇಗೌಡರ ಆಕ್ಷೇಪಣೆ ಬರುವುದಿಲ್ಲವೋ ?”

'ತಮ್ಮ ಕಟ್ಟಡವನ್ನು ರಿಪೇರಿ ಮಾಡಿಸಿ ಕೊಡಲಿ ! ಅವರಿಗೇನು ಹಣವಿಲ್ಲವೇ ? ಕೈ ಕೆಳಗೆ ಆಳುಗಳಿಲ್ಲವೇ ? ಮನಸ್ಸು ಮಾಡಿದರೆ ಹದಿನೈದು ದಿನಗಳಲ್ಲಿ ಸೊಗಸಾಗಿ ರಿಪೇರಿ ಮಾಡಿ ಕೊಡಬಲ್ಲರು. ಸುಮ್ಮಸುಮ್ಮನೆ ಆಕ್ಷೇಪಣೆ ಮಾಡಿದರೆ ನಾವು ಕೇಳಬೇಕಲ್ಲ !?

ರಂಗಣ್ಣನಿಗೆ ಆ ಕಟ್ಟಡದ ವಿಚಾರದಲ್ಲಿ ಒಂದು ದಾರಿ ಕಂಡಹಾಗಾಯಿತು. “ಒಳ್ಳೆಯದು. ಆಲೋಚನೆ ಮಾಡುತ್ತೇನೆ' ಎಂದು ಉತ್ತರ ಕೊಟ್ಟು ಹಳ್ಳಿಯ ಕಡೆ ಹೊರಟನು. ಮೂರು ಮೈಲಿಗಳ ದೂರ ಹೋದನಂತರ ಒಂದು ಹಳ್ಳಿ ಸಿಕ್ಕಿತು. ಜನವೇ ಇರಲಿಲ್ಲ; ಪಾಠಶಾಲೆಯ ಬಾಗಿಲು ಮುಚ್ಚಿತ್ತು. ಎಲ್ಲಿ ಹುಡುಗರ ಕಲಕಲಧ್ವನಿಯೂ ಆಟ ಪಾಟಗಳೂ ಇರುತ್ತಿದ್ದುವೋ ಅಲ್ಲಿ ನೀರವ ! ಮೂದೇವಿ ಬಡಿಯುತ್ತಿತ್ತು ! ಪಾಠಶಾಲೆಯ ಕೈತೋಟ ನೀರಿಲ್ಲದೆ ಒಣಗುತ್ತಿತ್ತು. ಪ್ರಾಣಿಗಳು ಕೂಡ ಕಣ್ಣಿಗೆ ಬೀಳಲಿಲ್ಲ. ರಂಗಣ್ಣ ನಿಟ್ಟು ಸಿರು ಬಿಡುತ್ತ ಮುಂದೆ ಅರ್ಧ ಮೈಲಿ ಹೋದಮೇಲೆ ಗುಡಿಸಿಲುಗಳು ಕಂಡವು. ಅಲ್ಲಿ ಪ್ರಾಣಿಗಳ ಸಂಚಾರ, ಜನ ಸಂಚಾರ ಇತ್ತು, ಹತ್ತಿರದ ಒಂದು ಆಲದ ಮರದ ಕೆಳಗೆ ಹೋಗಿ ನಿಂತನು. ಐದು ನಿಮಿಷಗಳಲ್ಲಿ ನಾಲ್ಕಾರು ಹುಡುಗರು ಬಂದು ಸೇರಿದರು. ಇಬ್ಬರು ಓಡಿ ಹೋಗಿ ಹಿರಿಯರಿಗೆ ವರ್ತಮಾನ ಕೊಟ್ಟರು. ನಾಲ್ಕು ಜನ ಗೌಡಗಳು ಬಂದು ಕೈ ಮುಗಿದು, ' ಅಯ್ಯೋ ಸೋಮಿ ! ಯಾಕಾನ ಈ ಅಳ್ಳಿಗೆ ಬಂದ್ರೋ ! ಊರಾಗೇ ಹಾದು ಬಂದ್ರಾ ?' ಎಂದು ಕೇಳಿದರು.

“ಹೌದಪ್ಪ, ಹಳ್ಳಿಯನ್ನು ಹೊಕ್ಕೇ ಬಂದೆ, ಜನ ಯಾರೂ ಇರಲಿಲ್ಲ.'

'ಮಾರಿಗುಡಿ ಪಕ್ಕ ದಾಗೇ ಹಾದು ಬಂದ್ರಾ ಸೋಮಿ ?'

'ಹೌದಪ್ಪ !' “ಅಯ್ಯೋ ದ್ಯಾವರಾ !'

“ಅದೇಕ ಪ್ಪಾ ಹಾಗೆ ಹೇಳುತ್ತೀಯೆ ? ಊರಿಗೆ ಪ್ಲೇಗು ಬಂದರೆ ಮಾರಿ ಏನು ಮಾಡುತ್ತಾಳೆ ? ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿ ಕೊಂಡಿದ್ದೀರೋ ಇಲ್ಲವೊ ?'

'ಇಲ್ಲ ಸೋಮ. ನಮ್ಮಲ್ಲಿ ಇಬ್ಬರು ಮಾಡಿಸಿಕೊಂಡು ಬಂದರು. ಸತ್ತೇ ಹೋದ್ರು ! ಪ್ಲೇಗ್ ಚುಚ್ಚಿಸಿಕೊಂಡರೆ ಸಾಯಾಕಿಲ್ವಾ ? ಏನು ಸೋಮಿ ? ಆ ಡಾಕ್ಟರಪ್ಪ ಬಂದು ಎಲ್ಲರಿಗೂ ಚುಚ್ತೇನೆ, ನೀವು ಸಾಯಾಕಿಲ್ಲಾ ಎಂದು ಸುಳ್ಳೇ ಸುಳ್ಳೇ ಹೇಳಿ.'

'ಹಾಗಲ್ಲಪ್ಪ ! ನಿಮಗೆ ಆ ವಿಚಾರ ತಿಳಿಯದು. ವಿಷದಿಂದ ವಿಷಹೊಡೆಯೋ ತಂತ್ರ ಅದು ! ನೀವೆಲ್ಲ ಇನಾಕ್ಯುಲೇಷನ್ ಮಾಡಿಸಿಕೊಳ್ಳಬೇಕು ?

'ನಿಮ್ಗೆ ಈ ವಿಚಾರ ಗೊತ್ತಾಗಾಕಿಲ್ಲಾ, ಸುಮ್ನಿರಿ ಸೋಮಿ ! ನಮ್ಮ ಅಳ್ಳಿಲಿ ಮಾರಿಗುಡಿ ಪೂಜಾರಿ ಹನುಮಂತಯ್ಯ ಅಷ್ಟೆ. ಭಾಳ ಮಡಿ ಮಾಡ್ತವೆ, ತಿಂಗಳ ಹಿಂದೆ ದೂರದ ಅಳ್ಳ್ಯಾಗೆ ಇಲಿ ಬಿತ್ತು ಅಂತ ವರ್ತಮಾನ ಬಂತು, ನಾವೆಲ್ಲ ಹನುಮಂತಯ್ಯನ್ಗೆ- ಮಾರಿ ಪೂಜೆ ಮಾಡಲಾ! ಕಣಿ ಏನ್ ಬರ್ತಾಲೋ ಕೇಳಾಣ-- ಎಂದೆವು. ಅವನು ತಾನಾ ಮಾಡಿ, ಮಡಿಯುಟ್ಟು, ಮಾರಿಗೆ ಪೂಜೆ ಮಾಡಿ, ಅಲ್ಲೇ ಬಾಗಿಲ್ತಾವ ಕುಳಿತ. ಹಚ್ಚಿದ ಊದಬತ್ತಿ ಮಸಿ ನೋಡ್ತಾ ನೋಡ್ತಾ ಮಾರಿ ಆವೇಶ ಆಗೋಯ್ತು ! ನಾವೆಲ್ಲ ನಮಸ್ಕಾರ ಮಾಡಿ ಕೇಳಿ ಕೊಂಡೆವು ಸೋಮಿ ! ಆವಾಗ, 'ಮಕ್ಕಳಿರಾ ! ಎದ್ರ ಬೇಡ್ರಿ. ನಾನಿನ್ನಿ, ಕಾಪಾಡ್ಕೊಂಡು ಬರ್ತಿದ್ವಿ, ಎರಡು ಕುರಿ, ಎರಡು ಕೋಳಿ ತಪ್ಪದೆ ನಾಳೆ ಶನಿವಾರ ಬಲಿ ಕೊಡಿ' ಅಂತ ಧೈರ್ಯ ಹೇಳಿದ್ದು, ಅದರಂತೆ ಮಾಡಿದೆವು. ಪುನ ಹದಿನೈದು ದಿನ ಕಳೆಯುತ್ತಲೂ ನೆರೆ ಅಳ್ಳಿಲಿ ಇಲಿ ಬಿತ್ತು ಅ೦ತ ವರ್ತಮಾನ ಬಂತು, ಪುನ ಹನುಮಂತಯ್ಯ ಪೂಜೆಗೆ ಕೂಡಿಸಿದೆವು. ಮಾರಿ ಆವೇಶ ಆಗಿ ಮಕ್ಕಳಿರಾ ! ಎದ್ರ ಬೇಡ್ರಿ, ನಾನಿನ್ನಿ: ನಾಳೆ ಒಂದು ಕೋಣ ಬಲಿ ಕೊಡಿ ” ಅಂತ ಹೇಳಿದ್ದು, ಅದರಂತೆ ಮಾಡಿದೆವು. ಒಂದು ವಾರದ ಹಿಂದೆ ನಮ್ಮ ಅಳ್ಳಿಲೆ ಇಲಿ ಬಿತ್ತು ಸೋಮಿ ಪುನ ಹನುಮಂತರು ಕೂಡಿಸಿದೆವು. ಮಾರಿ ಆವೇಶ ಆಗಿ, ಮಕ್ಕಳಿರಾ ! ಇದ್ವರ್ಗೂ ನಿಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿದ್ದಿ, ಇನ್ ಮ್ಯಾಗೆ ನಿಮ್ಮ ಬುದ್ಧಿ ನಿಮ್ಮಲಿರ್ಲಿ, ಬೇರೊಬ್ಬರು ಏಳ್ದಂಗೆ ಕೇಳಬೇಡಿ' ಅಂತ ಬುದ್ದಿ ಹೇಳಿದ್ದು, ನಾವೂನೆ ಸಭೆ ಸೇರಿ ಮುಂದೆ ಎಂಗಾನ ಮಾಡಾಣ ? ನಮ್ ಬುದ್ಧಿ, ನಮ್ ಕೈಲಿರ್ಲಿ ಅಂತ ಮಾರಮ್ಮ ಹೇಳ ವ್ ಳೆ- ಅ೦ತ ಆಲೋಚಾ ಮಾಡೋ ಹೊತ್ತಿಗೆ ಇಬ್ಬರು ತಿಪ್ಪೂರಿಗೋಗಿ ಡಾಕ್ಟರಪ್ಪನ ಮಾತು ಕೇಳಿ ಪ್ಲೇಗ್ ಚುಚ್ಚಿಸಿಕೊಂಡು ಬಂದುಬಿಟ್ರು! ತಂದುಬಿಟ್ರು ಸೋಮಿ ನಮ್ಮಳ್ಳಿ ಗೆ ಪ್ಲೇಗ ! ಮಾರಿಗೆ ಕೋಪ ಬಂದು ಅವರನ್ನ ತಿಂದೇಬಿಟ್ಟ. ಇನ್ನು ಊರಾಗಿ ರೋದು ಸರಿಯಲ್ಲ, ಮಾರಿ ಕೋಪಾ ಮಾಂಡವಳೆ – ಅಂತ ತೀರ್ಮಾನ ಮಾಡಿ ಇಲ್ಲೇ ಗುಡಿಸಿಲು ಹಾಕಿಕೊಂಡೆವು. ಇಲ್ಲಿಗೆ ಬಂದಾಗ ಏನ್ಕಾಟಾನೂ ಇಲ್ಲ ಸೊಮಿ !'

ರಂಗಣ್ಣ ಅವರ ವಿಚಾರ ಸರಣಿಯನ್ನೆಲ್ಲ ಕೇಳಿ ಮರುಕಗೊಂಡು- ಈ ಜನರಲ್ಲಿ ಚೆನ್ನಾಗಿ ವಿದ್ಯೆ ಹರಡಿ ತಿಳಿವಳಿಕೆ ಬಂದ ಹೊರತು ದೇಶ ಉದ್ಧಾರವಾಗುವುದಿಲ್ಲ. ಏನು ಮಾಡುವುದು ಎಂದು ನಿಟ್ಟುಸಿರುಬಿಟ್ಟನು. ಬಳಿಕ, ' ಈ ಆಲದ ಮರ ಚೆನ್ನಾಗಿದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಿ ಪಾಠ ಮಾಡಬಹುದು. ಮೇಷ್ಟು ಎಲ್ಲಿದ್ದಾರೆ ನೋಡಿ ಕಳಿಸಿಕೊಡುತ್ತೇನೆ. ಮಕ್ಕಳಿಗೆ ಪಾಠ ತಪ್ಪಿ ಸಬೇಡಿ, ಅನುಕೂಲವಾದರೆ ನೀವು ಹಾಕಿಕೊಂಡಿರುವ ಹಾಗೆ ಒಂದು ಗುಡಿಸಿಲು ಹಾಕಿ ಕೊಡಿ ; ಅದರಲ್ಲೇ ಸ್ಕೂಲು ಮಾಡೋಣ'- ಎಂದು ಹೇಳಿದನು.

'ಆಗ್ಬೋದು ಸೋಮಿ ! ಆದ್ರೆ , ನೆರೆಹಳ್ಳಿ ಹುಡುಗರ ನಾವು ಇಲ್ಲಿ ಸೇರ್ಸಾಕಿಲ್ಲ. ಮತ್ತೆ ಆ ಮೇಷ್ಟು ಪ್ಲೇಗ್ ಚಚ್ಚಿಸಿಕೊಂಡು ಬಂದ್ರೆ ನಾವು ಸೇರ್ಸಾಕಿಲ್ಲ!' ಎಂದು ಗೌಡನೊಬ್ಬನು ಹೇಳಿದನು

ಮೋಟಾರುಗಳಲ್ಲಿ ಓಡಾಡುವ ದೊಡ್ಡ ಸಾಹೇಬರುಗಳಿಗೆ ನಮ್ಮ ಹಳ್ಳಿಯ ಜನರ ಪರಿಚಯ ಎಷ್ಟರಮಟ್ಟಿಗೆ ಇದೆಯೋ ಭಗವಂತ ಬಲ್ಲ. ಅವರ ಪ್ರಪಂಚವೆಲ್ಲ : ಬೆ೦ಗಳೂರು ಮತ್ತು ಮೈಸೂರು ; ಅಪ್ಪಿ ತಪ್ಪಿ ಡಿಸ್ಟ್ರಿಕ್ಟ್ ಹೆಡ್ ಕ್ವಾರ್ಟರುಗಳು ; ಅವುಗಳಲ್ಲಿ ಊರ ಹೊರಗಿನ ಬಂಗಲೆ ; ಮಧ್ಯೆ ಮಧ್ಯೆ ಔತಣಗಳು, ಹೂವಿನಹಾರಗಳು, ಸ್ತೋತ್ರಪಾಠಗಳು.

ರಂಗಣ್ಣ ಅಲ್ಲಿಂದ ಮುಂದಕ್ಕೆ ಎರಡು ಮೈಲಿ ದೂರ ಹೋದಮೇಲೆ ಮತ್ತೊಂದು ಹಳ್ಳಿ ಸಿಕ್ಕಿತು. ಹಳ್ಳಿಗೆ ಎರಡು ಫರ್ಲಾಂಗು ದೂರದಲ್ಲಿ ಪಾಠಶಾಲೆಯ ಕಟ್ಟಡ ಏತ್ತು ಕಲ್ಲಲ್ಲಿ ಕೆಲವು ಗುಡಿಸಿಲುಗಳು ಇದ್ದುವು. ಪಾಠ ಶಾಲೆ ತೆರೆದಿತ್ತು. ಒಳಗೆ ಮೇಷ್ಟು ಮತ್ತು ನಾಲ್ಕು ಹುಡುಗರು ಇದ್ದರು. ಹೆಚ್ಚು ಹುಡುಗರು ಏಕೆ ಬರುತ್ತಿಲ್ಲ !' ಎಂದು ರಂಗಣ್ಣ ವಿಚಾರಿಸಿದನು.

'ಭಯ, ಸ್ವಾಮಿ ! ಹಳ್ಳಿಯವರು ಕಳಿಸುವುದಿಲ್ಲ. ನಾನು ಬಹಳ ಧೈರ್ಯ ಹೇಳಿ ಈ ನಾಲ್ಕು ಜನ ಹುಡುಗರನ್ನು ಕರೆದುಕೊಂಡು ಬಂದಿದ್ದೇನೆ.'

'ನಿಮ್ಮ ಕೈ ತೋಟ ಇತ್ತಲ್ಲ. ಅದೆಲ್ಲಿ ? ಏನೂ ಕಾಣುವುದಿಲ್ಲವಲ್ಲ,

ಅದರಗಳ ಬೊಂಬು- ಎಲ್ಲವನ್ನೂ ಹಳ್ಳಿಯವರು ಗುಡಿಸಿಲು ಹಾಕಿಕೊಳ್ಳುವುದಕ್ಕೆ ಕಿತ್ತುಕೊಂಡು ಹೋಗಿಬಿಟ್ಟರು ಸ್ವಾಮಿ ! ಹಿಂದೆ ಅವರೇ ತೋಟಕ್ಕೆ ಬೇಲಿ ಕಟ್ಟಿಸಿ ಕೊಟ್ಟಿದ್ದರು. ಮತ್ತೆ ಕಟ್ಟಿಸಿ ಕೊಡ್ತವೆ, ಎಲ್ಲಿ ಹೋಗ್ತೈತೆ - ಅ೦ತ ಹೇಳಿ ಎತ್ತಿ ಕೊಂಡು ಹೋಗಿ ಬಿಟ್ಟರು. ಬೇಲಿ ಹೋದಮೇಲೆ ದನಕರುಗಳು ಬಂದು ಇದ್ದ ಗಿಡಗಳನ್ನೆಲ್ಲ ತಿಂದುಹಾಕಿ ಬಿಟ್ಟುವು. ತೋಟ ಹೋಗಿ ಬಿಡ್ತು ಸ್ವಾಮಿ.'

'ನೀವೆಲ್ಲಿ ವಾಸಮಾಡುತ್ತಾ ಇದ್ದೀರಿ ಮೇಷ್ಟೇ ?”

'ಇಲ್ಲೇ ಸ್ವಾಮಿ ? ನನಗೂ ಒಂದು ಗುಡಿಸಿಲನ್ನು ಅವರೇ ಹಾಕಿ ಕೊಟ್ಟಿದ್ದಾರೆ.'

'ಇನಾಕ್ಯುಲೇಷನ್ ಮಾಡಿಸಿಕೊಂಡಿದ್ದೀರಾ ಮೇಷ್ಟೆ?”

'ಇಲ್ಲಾ ಸ್ವಾಮಿ ! ಇನಾಕ್ಯುಲೇಷನ್ ಮಾಡಿಸಿಕೊಂಡರೆ ಹಳ್ಳಿಯಲ್ಲಿ ಸೇರಿಸೋದಿಲ್ಲ.'

“ನೀವು ಓದಿದವರಾಗಿ ತಿಳಿವಳಿಕಸ್ಥರಾಗಿ ಹಳ್ಳಿಯವರಂತೆ ನಡೆಯುತ್ತಿದ್ದೀರಲ್ಲ ಮೇಷ್ಟೆ ! ? 'ಏನು ಮಾಡುವುದು ಸ್ವಾಮಿ ? ಅವರ ಮಧ್ಯೆ ನಾನು ಬಾಳಬೇಕು ; ಅವರಂತೆ ನಾನು ನಡೆಯದಿದ್ದರೆ ಇಲ್ಲಿಂದ ಓಡಿಸಿಬಿಡುತ್ತಾರೆ. ಅವರಲ್ಲಿ ಹತ್ತು ಜನ ಇನಾಕ್ಯುಲೇಷನ್ ಮಾಡಿಸಿಕೊಂಡರೆ ಆಗ ನಾನೂ ಮಾಡಿಸಿಕೊಳ್ಳಬಹುದು ; ಇತರರೂ ಮಾಡಿಸಿಕೊಳ್ಳುತ್ತಾರೆ.'

'ಒಳ್ಳೆಯದು ಮೇಷ್ಟೆ ! ನೀವು ಹೇಳುವ ಬುದ್ಧಿ ಹೇಳಿ, ಡಾ| ಡಾಕ್ಟರು ಬಂದಾಗ ಸಹಾಯಮಾಡಿ, ”

ಹೀಗೆಂದು ಹೇಳಿ ರಂಗಣ್ಣ ಹಳ್ಳಿಯನ್ನು ಬಿಟ್ಟು ದೊಡ್ಡ ರಸ್ತೆ ಸೇರಲು ಹೊರಟನು. ಒಂದು ಮೈಲಿಯ ದೂರ ಬೈಸ್ಕಲ್ ತುಳಿದ ಮೇಲೆ ದಾರಿ ಬಹಳ ಒರಟಾಗುತ್ತ ಬಂದಿತು. ಹಳ್ಳ ಕೊಳ್ಳಗಳು, ಕಲ್ಲುಗುಂಡುಗಳು, ಈಚೆ ಆಚೆ ಮುಳ್ಳು ಪೊದರುಗಳು ಸಂಧಿಸಿದುವು. ಬೈಸಲ್ಲಿಂದ ಇಳಿಯಬೇಕಾಗಿ ಬಂತು. ಅದನ್ನು ತಳ್ಳಿ ಕೊ೦ಡು, ಪಾಠಶಾಲೆಗಳೆಲ್ಲ ಅನ್ಯಾಯವಾಗಿ ಮುಚ್ಚಿಹೋದುವಲ್ಲ ಎಂದು ಚಿಂತಿಸುತ್ತ ಆ ಹಾದಿಯಲ್ಲಿ ಹೋಗುತ್ತಿದ್ದಾಗ, ಅವನ ದೃಷ್ಟಿ ನಿಷ್ಕಾರಣವಾಗಿ ಎಡಕ್ಕೆ ತಿರುಗಿತು. ಸುಮಾರು ಇಪ್ಪತ್ತು ಅಡಿಗಳ ದೂರದಲ್ಲಿ ಐದಡಿ ಉದ್ದದ ಭಾರಿ ನಾಗರಹಾವು ! ಹೆಡೆಯೆತ್ತಿಕೊಂಡಿದೆ ! ಹುತ್ತದಿಂದ ಹೊರಕ್ಕೆ ಬಂದಿದೆ ! ರಂಗಣ್ಣನ ಧೈರ್ಯವೆಲ್ಲವೂ ಕುಸಿದು ಬಿದ್ದು ಹೋಯಿತು. ಬಾಯಿ೦ದ ಬ ಬ ಬು ಎಂಬ ಅರ್ಥವಿಲ್ಲದ ಸ್ವರ ಹೊರಟದ್ದು ಮಾತ್ರ ಜ್ಞಾಪಕ ; ಕಾಲುಗಳು ತಮ್ಮಷ್ಟಕ್ಕೆ ತಾವೆ? ಎಲ್ಲಿಗೋ ದೇಹವನ್ನು ಎತ್ತಿ ಕೊಂಡು ಹೋದ ಭಾವನೆ ಮಾತ್ರ ಜ್ಞಾಪಕ. ಆಮೇಲೆ ಪ್ರಜ್ಞೆ ಸಂಪೂರ್ಣವಾಗಿ ಹೋಗಿ ಬಿಟ್ಟಿತು.

ರಂಗಣ್ಣನಿಗೆ ಎಷ್ಟು ಹೊತ್ತಿನಮೇಲೆ ಎಚ್ಚರವಾಯಿತೋ ತಿಳಿಯದು. ಬಹುಶಃ ಅರ್ಧ ಗಂಟೆ ಅವನು ಜ್ಞಾನ ತಪ್ಪಿದ್ದಿರಬಹುದು. ಪ್ರಜ್ಞೆ ಬಂದು ಕಣ್ಣು ಬಿಟ್ಟಾಗ ತಾನು ನೆಲದ ಮೇಲೆ ಬಿದ್ದಿದ್ದು ದೂ ಸ್ವಲ್ಪ ದೂರದಲ್ಲಿ ಬೈ ಸಲ್ಲು ಮುಳ್ಳು ಬೇಲಿಮೇಲೆ ಬಿದ್ದಿದ್ದು ದೂ ಕಂಡು ಬಂತು. ಸ್ವಲ್ಪ ದೂರದಲ್ಲಿ ಇಬ್ಬರು ಗೌಡರು ನಿಂತಿದ್ದರು.

'ಮಾರಿ ಹೊಡೆದು ಬಿಟ್ಟವಳೆ ಕಾಣ ಪ್ಪ !' ಎಂದು ಒಬ್ಬ ಆಡಿದ್ದು ಕೇಳಿಸಿತು. ಪಾಣ ಐತೆ ಕಾಣಪ್ಪ ! ಗಡ್ಡೆ ಗಿಟ್ಟೆ ಎದ್ದೈತೋ ಏನೋ !' ಎಂದು ಇನ್ನೊಬ್ಬ ಹೇಳಿದ್ದೂ ಕೇಳಿಸಿತು. ರಂಗಣ್ಣ ಕಷ್ಟ ಪಟ್ಟು ಕೊಂಡು ಎದ್ದನು. ರುಮಾಲು ಎಲ್ಲೋ ದೂರದಲ್ಲಿ ಬಿದ್ದಿತ್ತು. ಸುತ್ತಲೂ ಭಯದಿಂದ ನೋಡಿದನು ; ಕಾಲಿಗೇನಾದರೂ ಸುತ್ತಿಕೊಂಡಿದೆಯೇನೋ ಎಂದು ನೋಡಿದನು. ಏನೂ ಕಾಣಲಿಲ್ಲ. ಹತ್ತಿರ ಹುತ್ತವೂ ಕಾಣಲಿಲ್ಲ. ತನ್ನ ಕೈ ಕಾಲು ತರಚಿಹೋಗಿತ್ತು, ಮುಖಕ್ಕೆ ಸಹ ಸ್ವಲ್ಪ ಏಟು ಬಿದ್ದಿತ್ತು. ಸ್ವಲ್ಪ ಸುಧಾರಿಸಿಕೊಂಡು ರುಮಾಲನ್ನು ಕೈಗೆ ತೆಗೆದುಕೊಂಡಾಗ ಗೌಡನೊಬ್ಬನು, ಎಲಾ, ನಮ್ಮಿನ್ಸ್‌ ಪೆಟ್ರು ಕಾಣಾ ! ಅಯ್ಯೋ ದ್ಯಾವ್ರೇ ! ಯಾಕಾನಾ ಬಂದ್ರೋ ' - ಎಂದು ಉದ್ಗಾರ ತೆಗೆದನು. ಮತ್ತೊಬ್ಬನು ಹಾಗೆಯೆ ನೋಡಿ, ' ಏನಾಯ್ತು ಸೋಮಿ ? ಬೈಸ್ಕಲ್ಲಿಂದ ಬಿದ್ರಾ ?” ಎಂದು ಕೇಳಿದನು. ರಂಗಣ್ಣನಿಗೆ ಇನ್ನೂ ಮಾತು ತೊದಲುತ್ತಲೇ ಇತ್ತು, ಕಾಲುಗಳಲ್ಲಿ ನಡುಕವೂ ಇತ್ತು. ಆದರೆ ಆ ನಿರ್ಜನ ಪ್ರದೇಶದಲ್ಲಿ ಆ ಇಬ್ಬರು ಗೌಡರನ್ನು ನೋಡಿ ಸ್ವಲ್ಪ ಧೈರ್ಯ ಬಂತು, ಆಗ ನಡೆದ ವಿಷಯವನ್ನು ತಿಳಿಸಿದನು. ಗೌಡನೊಬ್ಬನು, " ಅದ್ಯಾಕ್ ಸೋಮಿ ಅಂಗ್ ಎದ್ರೋದು? ಅದೇನ್ ಮಾಡ್ತೈತೆ | ನಮ್ಮ ಹೊಲದಾಗೆ ಗದ್ಯಾಗೆ ದಿನಾಲೂ ಓಡಾಡತಾವೆ. ಇಲಿಸಲಿ ಶಿಸ್ಕೊಂಡು ತನ್ ಪಾಡ್ಗೆ ತಾನಿರ್ತೈತೆ, ಅದರ ತಂಟೆಗೆ ನಾವು ಹೋಗದಿದ್ರೆ ಅದೂ ನಮ್ಮ ತಂಟೆಗೆ ಬರಾಕಿಲ್ಲ !' ಎಂದು ಹೇಳಿದನು.

ಎರಡನೆಯವನು, ಒಬ್ಬೊಬ್ಬರೇ ಇಂಗೆಲ್ಲ ಕಾಡದಾರಿಲಿ ಒಡ್ಯಾ ಡಬ್ಯಾಡಿ ಸೋಮಿ ! ಗರಚಾರ ಎಂಗಿರ್ತೈತೋ ಏನೋ ! ಈಗ ನಡೀರಲಾ ಮತ್ತೆ. ನಿಮ್ಮನ್ನ ದೊಡ್ಡರಸ್ತೆ ಸೇರ್ಸಿಬಿಟ್ ಬರ್ತೇವಿ. ಕಾಲಬಂಡಿ ತೆಕ್ಕೊಳ್ರಿ… ಕೈಗೆ ” ಎಂದು ಹೇಳಿದನು.

ರಂಗಣ್ಣ ತನ್ನ ಉಡುಪುಗಳನ್ನು ಕೊಡವಿಕೊಂಡು, ಕೈವಸ್ತ್ರದಿಂದ ಮುಖವನ್ನೂ ಸರಾಯಿ ಮತ್ತು ಅ೦ಗಿಗಳನ್ನೂ ಒರಸಿಕೊಂಡು, ರುಮಾಲನ್ನು ಹಾಕಿಕೊಂಡು, ಬೈಸ್ಕಲ್ಲನ್ನು ತಳ್ಳಿಕೊಂಡು ಹೊರಟನು. ಕೈ ದೊಣ್ಣೆಗಳನ್ನು ಹಿಡಿದಿದ್ದ ಆ ರೈತರು ಮುಂದೆ ನಡೆಯುತ್ತ ಹೊರಟರು. ಪ್ಲೇಗು ಹರಡಿರುವುದು, ಜನ ಅಲ್ಲಲ್ಲಿ ಸಾಯುತ್ತಿರುವುದು, ಇನಾಕ್ಯುಲೇಷನ್ಮಾ ಡಿಸಿಕೊಳ್ಳುವ ವಿಚಾರ - ಇವುಗಳನ್ನೆಲ್ಲ ಮಾತನಾಡುತ್ತ ರಂಗಣ್ಣ ತನ್ನ ಕೈಲಾದಷ್ಟು ತಿಳುವಳಿಕೆಯನ್ನು ಅವರಿಗೆ ಕೊಟ್ಟನು. “ನೀವೆಲ್ಲ ಪಟ್ಟಣದ ಜನ ಸೋಮಿ! ನೀವ್ ಎಂಗ್ ಮಾಡಿದ್ರೂನೂವೆ ತಡೀತೈತೆ. ನಮ್ಮ ಅಳ್ಯಾಗೆ ಒರಟು ಜನ ! ಅಯ್ ಸ್ಕೂಲ್ ಓದೋ ಹೈಕ್ಳು ನಾಲ್ಕು

ಜನ ನಮ್ಮಲ್ಲೂ ಆದ್ರೆ ಅಳ್ಳಿ ಜನ ಎಷ್ಟೊ ಸುದಾರಸ್ಯಾರು ? ಗೌಡನೊಬ್ಬನು ಹೇಳಿದನು. ದೊಡ್ಡ ರಸ್ತೆ ಸೇರಿದಮೇಲೆ ಅವರು ಕೈ ಮುಗಿದು, ರಸ್ತೆ ಸಲೀಸೈತೆ, ಹತ್ತಿಕೊಳ್ಳಿ ಸೋಮಿ ಗಾಡೀನಾ ? ಎಂದು ಹೇಳಿ ವಾಪಸು ಹೊರಟರು,

ಪ್ರಕರಣ ೧೪

ಶಿಫಾರಸು ಪತ್ರ

ಜನಾರ್ದನಪುರಕ್ಕೆ ರಂಗಣ್ಣ ಹಿಂದಿರುಗಿದ ಮೇಲೆ ಕೈ ಕಾಲು ನೋವು ಹೆಚ್ಚಾಗಿ ಎರಡು ದಿನ ರಜ ತೆಗೆದುಕೊಳ್ಳಬೇಕಾಯಿತು. ಅವನ ಹೆಂಡತಿ ' ಈ ಹಾಳು ಸರ್ಕಿ ಟು ಕಡಿಮೆಮಾಡಿ ಎಂದರೆ ನೀವು ಕೇಳು ವುದಿಲ್ಲ. ಗಟ್ಟಿಯಾಗಿರೋವರೆಗೂ ದುಡಿಯುತ್ತೀರಿ. ಹಾಸಿಗೆ ಹಿಡಿದರೆ ನಮ್ಮ ಗತಿಯೇನು ? ಅದೇತಕ್ಕೆ ಅಷ್ಟೆಲ್ಲ ಸುತ್ತಬೇಕು ? ಮೊನ್ನೆ ನಾಗರ ಹಾವಿನ ಕೈಗೆ ಸಿಕ್ಕಿ ಬೀಳುತ್ತಿದ್ದಿರಲ್ಲ ! ನನ್ನ ಓಲೆ ಭಾಗ್ಯ ಚೆನ್ನಾಗಿತ್ತು ! ಖಂಡಿತ ಇನ್ನು ಮುಂದೆ ಹಾಗೆಲ್ಲ ಒಂಟಿಯಾಗಿ ಸುತ್ತಬೇಡಿ, ಜೊತೆಯಲ್ಲಿ ಶಂಕರಪ್ಪನನ್ನೊ ಗೋಪಾಲನನ್ನೂ ಕರೆದುಕೊಂಡು ಹೋಗಿ. ಒ೦ದೋ ಬಸ್ಸಿನಲ್ಲಿ ಹೋಗಿ ಬಿಟ್ಟು ಬನ್ನಿ; ಇಲ್ಲವೋ ಎತ್ತಿನ ಗಾಡಿಯನ್ನು ಮಾಡಿಕೊಂಡು ಹೋಗಿ, ನೀವೆಷ್ಟು ಮೈ ಕೈ ನೋಯಿಸಿಕೊಂಡು ದುಡಿದರೂ ನಿಮ್ಮನ್ನು ಮೆಚ್ಚುವವರು ಯಾರೂ ಇಲ್ಲ. ಕೆಲಸಮಾಡದೆ ಸುಖವಾಗಿ ಸಂಬಳ ತಿನ್ನುವವರೂ ಒಂದೇ ನೀವೂ ಒ೦ದೇ ನಿಮ್ಮ ಇಲಾಖೆಯಲ್ಲಿ !' ಎಂದು ಕಾಂತಾಸಂಮಿತಿಯಿಂದಲೇ ಹಿತೋಪದೇಶವನ್ನು ಮಾಡಿದಳು.

ಒಂದು ವಾರದ ತರುವಾಯ ರಂಗಣ್ಣನ ದೇಹಸ್ಥಿತಿ ಸುಧಾರಿಸಿತು. ಆದರೆ ಸುತ್ತಾಟವನ್ನು ಕಡಿಮೆ ಮಾಡಬೇಕೆಂದು ನಿರ್ಧಾರ ಮಾಡಿಕೊಂಡನು. ಆ ದಿನದ ಟಪ್ಪಾಲಿನಲ್ಲಿ ಅವನ ಸ್ವಂತ ವಿಳಾಸಕ್ಕೆ ಮೂರು ಕಾಗದಗಳು ಬಂದುವು. ಒಂದು ದೊಡ್ಡ ಸಾಹೇಬರ ಕಚೇರಿಯಿಂದ ಬಂದಿತ್ತು. ಆತುರದಿಂದ ಅದನ್ನು ಒಡೆದು ನೋಡಿದನು. ರಂಗಣ್ಣನ ಮುಖ ಸಪ್ಪಗಾಯಿತು. ಅದರಲ್ಲಿ ನಾಲ್ಕೆ ಪಂಕ್ತಿಗಳ ಒಕ್ಕಣೆಯಿತ್ತು. ಇ೦ಗ್ಲಿಷಿನಲ್ಲಿದ್ದುದರ ಸರಿ ಸುಮಾರು ಭಾಷಾಂತರವಿದು : “ನೀವು ಈಚೆಗೆ ರಾಜಕೀಯದಲ್ಲಿ ಪ್ರವೇಶಿಸುತ್ತಿದ್ದೀರೆಂದೂ, ಪಾರ್ಟಿಗಳನ್ನು ಕಟ್ಟುತ್ತಿದ್ದೀ ರೆಂದೂ ನಮ್ಮ ಗಮನಕ್ಕೆ ಬಂದಿದೆ ಅಂತಹ ಹವ್ಯಾಸಗಳಿಗೆ ಹೋಗ ಕೂಡದೆಂದು ತೀವ್ರವಾಗಿ ಎಚ್ಚರಿಸಿದೆ. ಈ ಕಾಗದ ಸೇರಿದ್ದಕ್ಕೆ ಮರುಟಪಾಲಿನಲ್ಲಿ ಉತ್ತರ ಕೊಡಿ.”

ಎರಡನೆಯ ಕಾಗದ ಡಿ, ಇ, ಓ, ಸಾಹೆಬರದು, ಕಚೇರಿ ತನಿಖೆ ಮಾಡುವುದಕ್ಕಾಗಿಯೂ ರೇ೦ಜಿನ ಪಾಠಶಾಲೆಗನ್ನು ನೋಡುವುದಕ್ಕಾಗಿಯೂ ನಾಳೆಯೇ ಬರುವುದಾಗಿ ಅದರಲ್ಲಿ ಒಕ್ಕಣೆಯಿತ್ತು. ಮೂರ ನೆಯ ಕಾಗದ ತಿಮ್ಮರಾಯಪ್ಪನದು. ಅದನ್ನು ಒಡೆದು ನೋಡಿದಾಗ ಸಾರಾಂಶ ಈ ರೀತಿಯಿತ್ತು : " ನಿನ್ನ ಕಾಗದ ಬಂದು ಸೇರಿ ಅಭಿಪ್ರಾಯವಾಯಿತು. ನೀನು ಬಹಳ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಮೊದಲನೆಯ ಮನುಷ್ಯನೊಡನೆ ಪತ್ರವ್ಯವಹಾರ ನಡೆಸಬೇಡ, ಅವನಿಂದ ಏನೊಂದು ಸಮಜಾಯಿಷಿಗಳನ್ನೂ ಕೇಳಬೇಡ, ಅಮಲ್ದಾರರರಿಗೆ ಬರೆದು ಇರುವ ಜಮೀನುಗಳ ಮತ್ತು ಕಟ್ಟುವ ಕಂದಾಯಗಳ ವಿವರಗಳನ್ನು ಕೇಳು. ಸ್ಟೇಷನ್ ಮಾಸ್ಟರಿಗೆ ಕಾಗದ ಬರೆದು ಗ್ಯಾಂಗ್ ಕೊಲಿಗಳ ಪಟ್ಟಿಯನ್ನು ತರಿಸಿಕೋ. ಆ ಮನುಷ್ಯ ಗ್ಯಾಂಗ್ ಕೂಲಿಯೆ ಏನು ? ಜಂಬ ಬಗ್ಗೆ ಉತ್ತರ ತರಿಸಿಕೊ, ರಿಕಾರ್ಡುಗಳನ್ನು ಬಲಪಡಿಸಿ ಕೊಂಡು ಪತ್ತೆ ಕೊಡದೆ ನಿನ್ನ ವರದಿಯೊಂದಿಗೆ ಎಲ್ಲವನ್ನೂ ಮೇಲಕ್ಕೆ ಹೊತ್ತುಹಾಕು, ಎಲ್ಲ ಕಾಗದಗಳ: ನಕಲುಗಳನ್ನೂ ದಾಖಲೆಗಳನ್ನೂ ನಿನ್ನಲ್ಲಿಸ್ವಂತ ಪೆಟ್ಟಿಗೆಯಲ್ಲಿ ಇಟ್ಟುಕೊ. ಕಚೇರಿಯವರಿಗೆ ಏನನ್ನೂ ತಿಳಿಸಬೇಡ, ಏನನ್ನೂ ಕೊಡಬೇಡ.

'ಎರಡನೆಯ ದೊಡ್ಡ ಮನುಷ್ಯನ ವಿಚಾರ : ನೀನು ಮಾಡಬೇಕೆಂದಿರುವುದು ಸರಿ ಆದರೆ ಎಲ್ಲವೂ ಬರವಣಿಗೆಯಲ್ಲಿರಲಿ. ಬಾಯಿಮಾತು ಕೆಲಸಕ್ಕೆ ಬಾರದು. ಅದೂ ಅಲ್ಲದೆ ಗಾಳಿಹುಂಜದಂತೆ ಜನ ಹೇಗೆಂದರೆ ಹಾಗೆ ತಿರುಗಿಬಿಡುತ್ತಾರೆ; ಸಮಯದಲ್ಲಿ ಕೈ ಬಿಡುತ್ತಾರೆ; ಆದ್ದರಿಂದ ನಂಬಬೇಡ, ಅವರು ಹೇಳುವುದನ್ನೆಲ್ಲ ಬರೆದು ಕಳಿಸಲಿ, ರಿಕಾರ್ಡು ಬೆಳಸು. ಮಧ್ಯೆ ಬಿಡುವಾದಾಗ ಒಂದು ಸಲ ಬಂದು ಹೋಗು ನಾನು ಸಿದ್ಧ ಪ್ಪನನ್ನು ಕಂಡು ಮಾತನಾಡಿದ್ದೇನೆ. ಮುಂದೆ ನೀನು ಇಲ್ಲಿಗೆ ಬಂದಾಗ ನನ್ನ ಮನೆಯಲ್ಲಿ ಭೇಟಿ ಮಾಡಿಸುತ್ತೇನೆ. ಕೊನೆಯ ಮಾತು : ಬಲವದ್ವಿರೋಧ ಅಪಾಯಕರ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ ಎಚ್ಚರಿಕೆಯಿಂದ ನಡೆದುಕೊ.

ರಂಗಣ್ಣನಿಗೆ ತಿಮ್ಮರಾಯಪ್ಪನ ಕಾಗದದಿಂದ ಮನಸ್ಸಿಗೆ ಸ್ವಲ್ಪ ಸಮಾಧಾನವಾದರೂ ಆಷ್ಟೇನೂ ಸಂತೋಷವಾಗಲಿಲ್ಲ. ತಾನಾಗಿ ಯಾರೊಡನೆಯೂ ವಿರೋಧ ಕಟ್ಟಿ ಕೊಳ್ಳ ಬೇಕೆಂದಾಗಲಿ ಜಗಳ ಕಾಯಬೇಕೆಂದಾಗಲಿ ಹಾತೊರೆಯುತ್ತಿಲ್ಲ. ಆದರೆ ಅವು ಅಪ್ರಾರ್ಥಿತವಾಗಿ ಬಂದು ಗಂಟು ಬೀಳುತ್ತವೆ. ಏನು ಮಾಡಬೇಕು ? ಎಂದು ಆಲೋಚಿಸುತಿದ್ದನು. ಆಗ ಜನಾರ್ದನ ಪುರದ ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪನವರು ಬಂದಿದಾರೆಂದು ಆಳು ಬ೦ದು ತಿಳಿಸಿದನು, ಅವರನ್ನು ಬರಮಾಡಿ ಕೊಂಡದ್ದಾಯಿತು ಚನ್ನಪ್ಪ ತನ್ನ ಜೇಬಿನಿಂದ ಒಂದು ಕಾಗದವನ್ನು ತೆಗೆದು ರಂಗಣ್ಣನ ಕೈಗೆ ಕೊಡು ತ್ತಾ, 'ಕರಿಯಪ್ಪನವರು ಕಾಗದವನ್ನು ಕೊಟ್ಟಿದ್ದಾರೆ, ಅವರೇ ತಮ್ಮನ್ನು ಕಂಡು ಮಾತನಾಡ ಬೇಕೆಂದಿದ್ದರು. ಎಂದು ಹೇಳಿದನು ಸ್ಕಾಲರ್ ಷಿಪ್ ವಿಚಾರ ಒಕ್ಕಣೆಯಿರಬಹುದೆಂದು ರಂಗಣ್ಣ ಆಲೋಚಿಸುತ್ತ ಕಾಗದವನ್ನು ಒಡೆದು ನೋಡಿದನು. ಆದರೆ ಆ ಪ್ರಸ್ತಾಪ ಆದರಲ್ಲಿರಲಿಲ್ಲ. ' ಚೆನ್ನಪ್ಪನವರು ಒಂದು ಕೋರಿಕೆಯನ್ನು ಸಲ್ಲಿಸಲು ಬರುತ್ತಾರೆ. ಅದನ್ನು ದಯವಿಟ್ಟು ನೆರವೇರಿಸಿಕೊಡಿ. ನನಗೂ ಸಂತೋಷವಾಗುತ್ತದೆ' – ಎಂದು ಬರೆದಿತ್ತು.

'ಏನು ಸಮಾಚಾರ ? ಕರಿಯಪ್ಪನವರ ಶಿಫಾರಸು ನಿಮಗೆ ಬೇಕಾಗಿತ್ತೆ ? ನಾನು ನಿಮ್ಮ ಊರಿನವನೇ ಆಗಿದ್ದೇನಲ್ಲ ? ' ಎಂದು ರಂಗಣ್ಣ ಉಪಚಾರೋಕ್ತಿಯ ಮಾತನ್ನಾಡಿದನು.

'ಶಿಫಾರಸು ತರಬೇಕೆಂದು ನಾನು ಪ್ರಯತ್ನ ಪಡಲಿಲ್ಲ ಸಾರ್. ಮೊನ್ನೆ ಕರಿಯಪ್ಪನವರನ್ನು ಕಂಡಿದ್ದೆ. ಹೀಗೆಯೇ ಸ್ಕೂಲುಗಳ ವಿಚಾರ ಮಾತುಕತೆ ಆಡುತ್ತಿದ್ದೆವು ನಿಮ್ಮ ಮಾತು ಸಹ ಬಂತು. ಹಿಂದಿನವರು ಕೆಲವು ಅನ್ಯಾಯಗಳನ್ನು ಮಾಡಿ ಮೇಷ್ಟರುಗಳಿಗೆಲ್ಲ ತೊಂದರೆ ಕೊಟ್ಟರು. ಕೆಲವರನ್ನು ಎಲ್ಲೆಲ್ಲಿಗೋ ವರ್ಗ ಮಾಡಿಸಿಬಿಟ್ಟರು. ಈಗ ಆ ಅನ್ಯಾಯ ಗಳಲ್ಲಿ ಒಂದೆರಡನ್ನಾದರೂ ಸರಿ ಪಡಿಸಬೇಕೆಂದು ನಾನು ಕರಿಯಪ್ಪನವರಲ್ಲಿ ಹೇಳುತ್ತಿದ್ದೆ. ಆಗ ಅವರು-ನಾನು ಇನ್ಸ್ಪೆಕ್ಟರಿಗೆ ಕಾಗದ ಕೂಡುತ್ತೇನೆ ಕಂಡು ಮಾತನಾಡು- ಎಂದು ಹೇಳಿ ಇದನ್ನು ಬರೆದುಕೊಟ್ಟರು. '

'ನಾನಾ ಕಾರಣಗಳಿಗಾಗಿ ಮೇಷ್ಟರುಗಳಿಗೆ ವರ್ಗಗಳಾಗುತ್ತವೆ, ಏನಾದರೂ ನಿಜವಾದ ತೊಂದರೆಗಳಾಗಿದ್ದರೆ ಮುಂದಿನ ವರ್ಗಾವರ್ಗಿಗಳಲ್ಲಿ ಪರಿಹಾರ ಕೊಡಬಹುದು.'

ಗಂಡಸು ಮೇಷ್ಟ ರುಗಳು ಹೇಗಾದರೂ ಕಷ್ಟ ಅನುಭವಿಸುತ್ತಾರೆ ಸಾರ್ | ಪಾಪ ! ಆ ಹೆಣ್ಣು ಮೇಷ್ಟ ರುಗಳನ್ನು ಗೋಳು ಹೊಯ್ದುಕೊಂಡರೆ ಅವರೇನು ಮಾಡುತ್ತಾರೆ ! ನೋಡಿ ! ಈ ಊರಿನ ಗರ್ಲ್ಸ್ ಸ್ಕೂಲಿನಲ್ಲಿ ತಿಮ್ಮಮ್ಮ ಎಂಬಾಕೆ ಇದ್ದಳು. ನಾಲೈದು ಜನ ಮಕ್ಕಳು, ಸ್ಥಳದವಳು, ನಿಮ್ಮ ಇಲಾಖೆಯವರು ಕೊಡುವ ಸಂಬಳದಲ್ಲಿ ಹೇಗೋ ಕಾಲ ತಳ್ಳುತ್ತಿದ್ದಳು. ಆಕೆಯನ್ನು ತೆಗೆದುಕೊಂಡು ಹೋಗಿ ದೂರ ಪ್ರಾಂತಕ್ಕೆ- ಈ ರೇ೦ಜೇ ತಪ್ಪಿಸಿ- ವರ್ಗ ಮಾಡಿದ್ದಾರೆ ! ಬಹಳ ಅನ್ಯಾಯ ಸಾರ್‌, !

'ಆಕೆಯ ಗಂಡನೊ ಅಣ್ಣ ತಮ್ಮ೦ದಿರೊ ಯಾರಾದರೂ ದೊಡ್ಡ ಸಾಹೇಬರ ಹತ್ತಿರ ಹೋಗಿ ಹೇಳಿಕೊಳ್ಳಲಿ. ಸರಿಮಾಡುತ್ತಾರೆ.'

'ಆಕೆಗೆ ಗ೦ಡಗಿಂಡ ಯಾರೂ ಇಲ್ಲ ಸಾರ್ !'

'ಆಕೆ ನಿಮಗೇನಾಗಬೇಕು ? ನಿಮ್ಮ ನೆಂಟರೋ ?'

'ಅಲ್ಲ ಸಾರ್ !'

'ನಿಮ್ಮ ಜನವೋ ?'

'ಅಲ್ಲ ಸಾರ್

'ಮತ್ತೆ ? ನನಗೆ ಅರ್ಥವಾಗುವುದಿಲ್ಲ. ಆಕೆ ವಿಚಾರದಲ್ಲಿಇಷ್ಟೊಂದು ಮರುಕ ತೋರಿಸುತ್ತಿದ್ದಿರಲ್ಲ !?

'ಆಕೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲ ಸಾರ್ ? ಇಲ್ಲಿ ನನ್ನ ಪೋಷಣೆಯಲ್ಲಿ ಆಕೆ ಇದ್ದಳು. ನಾನು ಸಹ ಅಲ್ಪ ಸ್ವಲ್ಪ ಸಹಾಯ ಮಾಡುತ್ತಾ ಇದ್ದೆ, ಯಾರೋ ಪುಂಡರು ಮೇಲಕ್ಕೆ ಅರ್ಜಿ ಬರೆದು ಬಿಟ್ಟರು, ನಿಮ್ಮ ಇಲಾಖೆಯವರು ಕಣ್ಮುಚ್ಚಿ ಕೊಂಡು ಆಕೆಯನ್ನು ದೂರಕ್ಕೆ ವರ್ಗ ಮಾಡಿ ಬಿಟ್ಟರು. ತಾವು ಆಕೆಯನ್ನು ಪುನಃ ಇಲ್ಲಿಗೇನೆ ವರ್ಗಮಾಡಿಸಿಕೊಡಬೇಕು. ನನಗೂ ದೊಡ್ಡ ಉಪಕಾರವಾಗುತ್ತದೆ.?

'ಒಳ್ಳೆಯದು ಚೆನ್ನಪ್ಪನವರೇ ! ರಿಕಾರ್ಡುಗಳನ್ನು ನೋಡಿ ಆಲೋಚನೆ ಮಾಡುತ್ತೇನೆ.'

'ಕರಿಯಪ್ಪ ನವರು ತಮಗೆ ಖುದ್ದಾಗಿ ಹೇಳಬೇಕೆಂದು ತಿಳಿಸಿದ್ದಾರೆ ಸಾರ್ ?

'ಒಳ್ಳೆಯದು, ಇರಲಿ, ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. '

'ಪುನಃ ತಮ್ಮನ್ನು ಬಂದು ಕಾಣಲೇ ?'

'ಕಾಣುವುದೇನೂ ಬೇಡ. ಬೇಕಾಗಿದ್ದಲ್ಲಿ ನಾನೇ ಹೇಳಿಕಳಿಸುತ್ತೇನೆ'

'ಚೆನ್ನಪ್ಪ ನಮಸ್ಕಾರ ಮಾಡಿ ಹೊರಟುಹೋದನು. ರಂಗಣ್ಣನಿಗೆ ಆ ಪ್ರಕರಣ ಅರ್ಧಮರ್ಧವಾಗಿ ಅರ್ಥವಾಯಿತು. ಕೂಲಂಕಷವಾಗಿ ತಿಳಿದುಕೊಳ್ಳೋಣವೆಂದು ಶಂಕರಪ್ಪನನ್ನು ಕರೆದು ಆ ರಿಕಾರ್ಡನ್ನು ತರಿಸಿದನು. ಶಂಕರಪ್ಪ, ' ಅದು ದೊಡ್ಡ ರಿಕಾರ್ಡು ಸ್ವಾಮಿ ! ಬಹಳ ಗಲಾಟೆಗೆ ಬಂದದ್ದರಿಂದ ಆಕೆಗೆ ವರ್ಗವಾಗಿ ಹೋಯಿತು' ಎಂದು ಹೇಳಿದನು.

'ಚೆನ್ನಪ್ಪನವರಿಗೂ ಆಕೆಗೂ ಏನು ಸಂಬಂಧ ?'

'ಏನು ಸಂಬಂಧ ಎಂದು ಹೇಳಲಿ ಸ್ವಾಮಿ ! ಸ್ವಾಮಿಯವರಿಗೆ ತಿಳಿಯದೇ ! ಈತನೇ ಆಕೆಯನ್ನು ಇಟ್ಟು ಕೊಂಡಿದ್ದವನು, ಆ ಮಕ್ಕಳೆಲ್ಲ ಇವನದೇ, ಹಿಂದೆ ಒಂದು ಸಾರಿ ದೊಡ್ಡ ಸಾಹೇಬರು ಅಕಸ್ಮಾತ್ತಾಗಿ ಸ್ಕೂಲಿಗೆ ಭೇಟಿ ಕೊಟ್ಟರು. ಆಗ ಸ್ಕೂಲಿನಲ್ಲಿ ಆ ಮಕ್ಕಳೆಲ್ಲ ಇದ್ದು ವು. ಕೈ ಕೂಸನ್ನು ಕಟ್ಟಿಕೊಂಡು ಆಕೆ ಅಲ್ಲಿದ್ದಳು. ಸಾಹೇಬರಿಗೆ ಬಹಳ ಅಸಮಾಧಾನವಾಯಿತು. ಕಡೆಗೆ ಬಹಳ ಧೈರ್ಯಮಾಡಿ ಆಕೆಯನ್ನು ಇಲ್ಲಿಂದ ವರ್ಗ ಮಾಡಿ ಬಿಟ್ಟರು.' “ಪುನಃ ಇಲ್ಲಿಗೆ ವರ್ಗ ಮಾಡಿಸಿ ಕೊಡಬೇಕೆಂದು ಕೇಳುತ್ತಿದ್ದಾನಲ್ಲ ಆ ಮನುಷ್ಯ ! ಜೊತೆಗೆ ಕರಿಯಪ್ಪ ನವರ ಶಿಫಾರಸು ಪತ್ರ ಬೇರೆ ತಂದು ಕೊಟ್ಟದ್ದಾನೆ! ಒಳ್ಳೆಯ ಜನ !

ಈ ಮಾತುಗಳು ಮುಗಿಯುವ ಹೊತ್ತಿಗೆ ಸಾಹೇಬರ ಗುಮಾಸ್ತೆ ನಾರಾಯಣ ರಾವ್ ಬಂದನು. ಕಚೇರಿಯ ಲೆಕ್ಕ ಪತ್ರಗಳ ತನಿಖೆಗಾಗಿ ಆತ ಒಂದು ದಿನ ಮುಂಚಿತವಾಗಿ ಬಂದನು. ಆತನ ಹಾಸಿಗೆಯನ್ನು ಕಚೇರಿಯ ಒಂದು ಕೋಣೆಯಲ್ಲಿಡಿಸಿದ್ದಾಯಿತು. ಸಾಹೇಬರು ಮರುದಿನ ಹನ್ನೊಂದು ಗಂಟೆಯೊಳಗಾಗಿ ಬರುವರೆಂದೂ ಬಂಗಲೆಯಲ್ಲಿ ಅವರಿಗೆ ಸ್ಥಳವನ್ನು ಗೊತ್ತು ಮಾಡ ಬೇಕೆಂದೂ ಆತನು ತಿಳಿಸಿದನು. ಬಂದಗುಮಾಸ್ತೆಗೆ ಉಪಾಹಾರಕ್ಕೆ ರಂಗಣ್ಣ ಏರ್ಪಾಟು ಮಾಡಿ ಸ್ನಾನ ಮತ್ತು ಊಟಗಳಿಗೆ ತನ್ನ ಮನೆಗೆ ಬರ ಬಹುದೆಂದೂ, ಸಾಹೇಬರ ಬೀಡಾರ ದಲ್ಲಿಯೇ ಊಟವನ್ನು ಮಾಡುವುದಾದರೆ ಅದು ಸಹ ಆಗಬಹುದೆಂದೂ ಹೇಳಿದನು.

'ನಾನು ಹೊಟಲಿಗೆ ಊಟಕ್ಕೆ ಹೋಗುತ್ತೇನೆ ಸಾರ್ ! ಸಾಹೇಬರ ಬಿಡಾರದಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಿಲ್ಲ.'

'ನೀವು ಕಚೇರಿಯ ತನಿಖೆಗೆ ಬಂದಿರುತ್ತೀರಿ. ಆದ್ದರಿಂದ ನಾನು ಬಲಾತ್ಕಾರ ಮಾಡಿದರೆ ಚೆನ್ನಾಗಿರಲಾರದು. ಹೋಟಲಿಗೆ ಬೇಕಾಗಿದ್ದರೆ ಹೋಗಬಹುದು. ಆದರೆ ನಿಮಗೆ ಬರುವ ಭತ್ಯದಲ್ಲಿ ನಿಮ್ಮ ದಿನದ ಖಚು೯ ಏಳುತ್ತದೆಯೆ ?'

'ಸಾಕಾಗುವುದಿಲ್ಲ ಸಾಲ ! ಏನು ಮಾಡುವುದು ? ಕೈಯಿಂದ ಕತ್ತರಿಸುತ್ತದೆ ; ದಂಡ ತೆರಬೇಕು '

'ಆ ಕಷ್ಟವನ್ನು ನಾನು ಬಲ್ಲೆ ಆದ್ದರಿಂದಲೇ ನಾನು ನಿಮಗೆ ಹೇಳಿದ್ದು , ನಿಮ್ಮ ಮನಸ್ಸು ಬಂದ ಹಾಗೆ ತನಿಖೆ ಮಾಡ ಬಹುದು. ನಿಮ್ಮ ಮನಸ್ಸು ಬಂದ ಹಾಗೆ ವರದಿಯನ್ನು ಬರೆಯಬಹುದು, ನನ್ನ ಆಕ್ಷೇಪಣೆ ಇಲ್ಲ. ನನ್ನ ಮನೆಯಲ್ಲಿ ಊಟ ಮಾಡಿದ ಕಾರಣದಿಂದ ಯಾವುದೊಂದು ದಾಕ್ಷಿಣ್ಯ ಕ್ಕೂ ಒಳಗಾಗಬೇಕಾಗಿಲ್ಲ. ' 'ನೀವು ಹೇಳುವುದು ಸರಿ ಸಾರ್ ! ಆದರೆ ಈಗಿನ ಸಾಹೇಬರು ಸ್ವಲ್ಪ ಜೋರಿನವೆಲಿದ್ದಾರೆ. ನಮಗೆಲ್ಲ ತಾಕೀತು ಮಾಡಿದ್ದಾರೆ. ಆದ್ದರಿಂದ ಕ್ಷಮಿಸಬೇಕು.'

'ಒಳ್ಳೆಯದು.' ಜನಾರ್ದನಪುರಕ್ಕೆ ಎರಡು ಮೈಲಿ ದೂರದಲ್ಲಿ ಒಂದು ನಿರ್ಜನ ಪ್ರದೇಶದಲ್ಲಿ ಬಂಗಲೆ. ರಂಗಣ್ಣ ಒಳ್ಳೆಯ ಉಡುಪನ್ನು ಧರಿಸಿಕೊಂಡು ಬಂಗಲೆಗೆ ಹತ್ತೂವರೆ ಗಂಟೆಗೆ ಸರಿಯಾಗಿ ಹೋದನು. ಸಾಹೇಬರಿಗೆ ಅಡಿಗೆಯ ಏರ್ಪಾಟು ನಡೆದಿತ್ತು. ಗುಮಾಸ್ತೆ ನಾರಾಯಣರಾವ್ ಸಾಹೇಬರ ಕೊಟಡಿಯಲ್ಲಿ ಕಚೇರಿಯ ಕಾಗದಗಳನ್ನು ಸರಿಯಾಗಿ ಜೋಡಿಸಿಟ್ಟು ಹೊರಕ್ಕೆ ಬಂದನು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಮೋಟಾರು ಬಂಗಲೆಗೆ ಬಂತು ; ಸಾಹೇಬರು ಇಳಿದರು. ನಮಸ್ಕಾರಾದಿ ಪ್ರಕರಣಗಳು ಮುಗಿದುವು. ಸಾಹೇಬರು ಮೆಟ್ಟುಲುಗಳನ್ನು ಹತ್ತುತ್ತಿದ್ದ ಹಾಗೆಯೇ, ' ಏನು ? ನಿಮ್ಮ ರೇಂಜಿನಲ್ಲಿ ಮೇಷ್ಟ್ರುಗಳು ಸರ್ಕ್ಯುಲರುಗಳ ಪ್ರಕಾರ ನಡೆಯುತ್ತಾ ಇಲ್ಲ. ನೀವು ಸರಿಯಾಗಿ ರೂಲ್ಸುಗಳನ್ನು ಜಾರಿಗೆ ತರಬೇಕು' - ಎಂದು ಸ್ವಲ್ಪ ಕಠಿಣವಾಗಿ ಆಡಿದರು.

'ಒಳ್ಳೆಯದು ಸಾರ್ ! ನಾನು ರೂಲ್ಸುಗಳನ್ನು ಬಿಗಿಯಾಗಿಯೇ ಆಚರಣೆಗೆ ತರುತ್ತಿದ್ದೇನೆ. ಎಲ್ಲಿಯಾದರೂ ಒಂದೆರಡು ಕಡೆ ಉಲ್ಲಂಘನೆ ಆಗಿರಬಹುದು, ವಿಚಾರಿಸಿ ಸರಿಮಾಡುತ್ತೇನೆ.'

'ನೋಡಿ ! ದಾರಿಯಲ್ಲಿ - ಆ ಹಳ್ಳಿ, ಅದರ ಹೆಸರೇನು ?' ಎಂದು ತಮ್ಮ ಜೇಬಿನೊಳಗಿಂದ ಕೈ ಪುಸ್ತಕವನ್ನು ತೆಗೆದು, 'ಸರಿ, ತಿಪ್ಪೇನಹಳ್ಳಿ! ರಿಜಿಸ್ಟರಿನಲ್ಲಿ ದಾಖಲೆಯಿಲ್ಲದ ಮಕ್ಕಳನ್ನು ಆ ಮೇಷ್ಟ್ರು ಒಳಗೆ ಕೂಡಿಸಿಕೊಂಡಿದ್ದ. ಸಣ್ಣ ಮಕ್ಕಳು–ಐದು ವರ್ಷದ ಮೂರು ಮೂರು ವರ್ಷದ ಮಕ್ಕಳು ! ಅವನಿಗೆ ಬರೆ ಎಳೆದಿದ್ದೇನೆ ! ಇಲ್ಲಿಂದ ನಾಲ್ಕು ಮೈಲಿ ದೂರದಲ್ಲಿ ಸುಂಡೇನಹಳ್ಳಿ! ಮೇಷ್ಟ್ರು ಆ ಹಳ್ಳಿಯಲ್ಲಿ ವಾಸಮಾಡುತ್ತಾ ಇಲ್ಲ. ಜನಾರ್ದನಪುರದಿಂದ ಬಂದು ಹೋಗುತ್ತಿದ್ದಾನಂತೆ!ಅವನು ಸ್ಕೂಲ್ಬಾಗಿಲು ಮುಚ್ಚಿಕೊಂಡು ಬೈಸ್ಕಲ್ ಹತ್ತುವಹೊತ್ತಿಗೆ ನನ್ನ ಮೋಟಾರು ಅಲ್ಲಿಗೆ ಹೋಯಿತು. ಕಳ್ಳ ಸಿಕ್ಕಿಬಿದ್ದ. ಹಳ್ಳಿಯಲ್ಲಿ ಮನೆ ಕೊಟ್ಟಿಲ್ಲ ಎಂದು ಸುಳ್ಳನ್ನು ಹೇಳಿದ್ದಾನೆ ! ಗ್ರಾಮಸ್ಥರನ್ನು ವಿಚಾರಿಸಿದ್ದರಲ್ಲಿ - ಮನೆಗಳಿಗೇನು ಸ್ವಾಮಿ ! ಮೋಸ್ತಾಗಿವೆಎಂದು ಹೇಳಿದರು '

'ಗ್ರಾಮಸ್ಥರನ್ನು ತಾವು ವಿಚಾರಿಸಿದರೆ ಅವರು ಹಾಗೆಯೇ ಹೇಳುವುದು ! ಆ ಹಳ್ಳಿಯಲ್ಲಿ ಮೇಷ್ಟರ ವಾಸಕ್ಕೆ ಮನೆಯನ್ನು ಕೊಟ್ಟಿಲ್ಲ. ಆ ವಿಚಾರದಲ್ಲಿ ರಿಕಾರ್ಡು ನಡೆದಿದೆ.'


'ಮೇಷ್ಟು ವಿನಾಯಿತಿ ಪಡೆದಿದ್ದಾರೆಯೋ ! '

'ಶಿಫಾರಸು ಮಾಡಿದ್ದೇನೆ. ತಮ್ಮ ಕಚೇರಿಯಲ್ಲಿ ಕಾಗದ ಇದೆ. ಜವಾಬು ಬಂದಿಲ್ಲ.'

'ನಾರಾಯಣರಾವ್ ! ಇನ್ ಸ್ಪೆಕ್ಟರ್‌ ಹೇಳಿದುದನ್ನು ಕೇಳಿದೆಯಾ ? ಕಚೇರಿಗೆ ಈಗಲೇ ಬರೆದು ಹಾಕು, ಸಂಬಂಧಪಟ್ಟ ಗುಮಾಸ್ತೆಯರ ಸಮಜಾಯಿಷಿ ತೆಗೆದು ಕೂಡಲೇ ಕಳಿಸಲಿ. ಆ ಅಸಿಸ್ಟೆಂಟು ಶುದ್ಧನಾಲಾಯಖಿ” ! ಫೀಸನ್ನು ಸರಿಯಾಗಿ ನೋಡಿಕೊಳ್ಳೋದಿಲ್ಲ. ಆತನಿಗೆ ವರ್ಗವಾಗಬೇಕು.

ರಂಗಣ್ಣ ಸ್ವಲ್ಪ ಹೊತ್ತು ಅಲ್ಲಿದ್ದು ಸಾಹೇಬರ ಅಪ್ಪಣೆ ಪಡೆದು ಹಿಂದಿರುಗಿದನು, ಮಧ್ಯಾಹ್ನ ಮೂರು ಗಂಟೆಗೆ ಸಾಹೇಬರು ಕಚೇರಿಯ ತನಿಖೆಗೆ ಬರುವುದಾಗಿ ತಿಳಿಸಿದ್ದರು. ಅದರಂತೆ ಹೊತ್ತಿಗೆ ಸರಿಯಾಗಿ ಅವರು ಬಂದು ದಾಖಲೆಗಳನ್ನು ನೋಡಿದರು. ಸುಮಾರು ಐದು ಗಂಟೆಯ ಹೊತ್ತಿಗೆ ಕುರ್ಚಿಯಿಂದೆದ್ದು, ಉಳಿದದ್ದನ್ನು ನಾಳೆ ನೋಡೋಣ. ನಾಳೆ ಬೆಳಗ್ಗೆ ಒಳ ಭಾಗದ ಕೆಲವು ಸ್ಕೂಲುಗ ಳನ್ನು ನೋಡಬೇಕೆಂದಿದ್ದೇನೆ. ಎಂದು ರಂಗಣ್ಣನಿಗೆ ಹೇಳಿದರು. ಒಳಭಾಗದ ಸ್ಕೂಲುಗಳನ್ನು ನೋಡ ಬೇಕಾದರೆ ಬೈಸ್ಕಲ್ ಮೇಲೋ ಗಾಡಿಯಲ್ಲೊ ಹೋಗಬೇಕಾಗುತ್ತದೆಂದು ರಂಗಣ್ಣ ತಿಳಿಸಿದನು. " ಬೈಸ್ಕಲ್ ಆಭ್ಯಾಸ ಹಿಂದೆಯೇ ತಪ್ಪಿಹೋಯಿತು. ಅದನ್ನು ಹತ್ತಿದರೆ ಎದೆ ನೋವು ಬರುತ್ತದೆ ! ಗಾಡಿಯಲ್ಲಿ ಹೋಗಿ ಬರುವುದೆಂದರೆ ಬಹಳ ಹೊತ್ತು ಹಿಡಿಯುತ್ತದೆ, ಆದ್ದರಿ೦ದ ನಿಮ್ಮ ಸಲಹೆ ಸರಿಯಾಗಿಲ್ಲ ! ಮೋಟಾರಿನಲ್ಲೇ ಹೋಗಿಬರೋಣ, ಆದರೆ ರಸ್ತೆ ಚೆನ್ನಾಗಿರಬೇಕು ಎಂದು ಸಾಹೇಬರು ಹೇಳಿದರು. 'ಹಳ್ಳಿಗಳ ಕಡೆ ರಸ್ತೆಗಳು ಚೆನ್ನಾಗಿರುವುದಿಲ್ಲ ಸಾರ್ ! ಮೋಟಾರು ಹೋಗುವುದು ಕಷ್ಟ.'

'ದೊಡ್ಡ ರಸ್ತೆಗೆ ಈಚೆ ಆಚೆ ಎರಡು ಫರ್ಲಾಂಗು ದೂರದಲ್ಲಿ ಒಳಭಾಗದ ಸ್ಕೂಲುಗಳಿಲ್ಲವೆ ??

'ಇವೆ, ಆದರೆ ಅವೆಲ್ಲ ರಸ್ತೆ ಪಕ್ಕದ ಸ್ಕೂಲುಗಳು ! ಒಳಭಾಗದ ಸ್ಕೂಲುಗಳು ರಸ್ತೆಯಿಂದ ಐದು, ಆರು, ಎಂಟು ಮತ್ತು ಹತ್ತು ಮೈಲಿಗಳ ದೂರದಲ್ಲಿರುತ್ತವೆ ?'

'ಸರಿ. ನಾಳೆ ಬೆಳಗ್ಗೆ ಏಳೂವರೆ ಗಂಟೆಗೆಲ್ಲ ಬಂಗಲೆಯ ಹತ್ತಿರ ಬನ್ನಿ, ಹೋಗಿ ನೋಡಿಕೊಂಡು ಬರೋಣ.'

ಮೇಲಿನ ಏಪಾ೯ಟನಂತೆ ಮಾರನೆಯ ದಿನ ರಂಗಣ್ಣ ಬಂಗಲೆಯ ಹತ್ತಿರ ಏಳೂ ಕಾಲು ಗಂಟೆಗೆಲ್ಲ ಹಾಜರಾಗಿದ್ದನು. ಸಾಹೇಬರು ಏಳೂವರೆ ಗಂಟೆಗೆ ಸರಿಯಾಗಿ ಹೊರಕ್ಕೆ ಬಂದರು. ಅವರ ಮೋಟಾರಿನಲ್ಲಿ ಇಬ್ಬರೂ ಹೊರಟರು. ದಾರಿಯಲ್ಲಿ ಮಾತುಗಳಿಗೆ ಪ್ರಾರಂಭವಾಯಿತು. “ನಿಮ್ಮ ಮೇಲೆ ಬಹಳ ದೂರುಗಳು ಬರುತ್ತಾ ಇವೆ ರಂಗಣ್ಣ ! ಏತಕ್ಕೆ ಅವುಗಳಿಗೆಲ್ಲ ಅವಕಾಶ ಕೊಡುತ್ತಿದ್ದೀರಿ ? ನೀವು ಇನ್ನೂ ಸಣ್ಣ ವಯಸ್ಸಿನವರು ; ಮುಂದೆ ಇಲಾಖೆಯಲ್ಲಿ ದೊಡ್ಡ ಹುದ್ದೆಗೆ ಬರತಕ್ಕವರು ; ಠಾಕ್ ಠೀಕಾಗೇನೋ ಕಾಣುತ್ತೀರಿ ! ಆದರೆ ಟ್ಯಾಕ್ಟ್ ಇಲ್ಲ' ಎಂದು ಸಾಹೇಬರು ಹೇಳಿ ದರು.

'ಯಾರು ದೂರು ಕೊಟ್ಟಿದ್ದಾರೆ ಎಂಬುದು ನನಗೆ ತಿಳಿಯದು. ಬಹುಶಃ ಉಪಾಧ್ಯಾಯರು ಯಾರೂ ಅರ್ಜಿಗಳನ್ನು ಬರೆದಿಲ್ಲವೆಂದು ಹೇಳಬಲ್ಲೆ'

'ಪಬ್ಲಿಕ್ ! ಸಾರ್ವಜನಿಕರು-ಬಂದು ದೂರು ಹೇಳುತ್ತಾರೆ.'

'ಪಬ್ಲಿಕ್‌ ಎಂದರೆ ಯಾರು ಸಾರ್ ! ಏನು ದೂರು ಕೊಟ್ಟಿದ್ದಾರೆ ? ನಾನು ಲಂಚ ತಿನ್ನು ತ್ತೇನೆಂದು ಹೇಳುತ್ತಾರೆಯೇ ? ನಡತೆ ಕೆಟ್ಟವನೆಂದು ಹೇಳುತ್ತಾರೆಯೇ ??

'ಅಂಥವುಗಳು ಏನೂ ಇಲ್ಲ. ರಾಜಕೀಯದಲ್ಲಿ ಕೈ ಹಾಕುತ್ತಿದ್ದೀರಿ ಎಂದು ಮುಖಂಡರು ಹೇಳುತ್ತಾರೆ.' 'ನಾನು ಸರ್ಕಾರದ ನೌಕರ, ರಾಜಕೀಯದಲ್ಲಿ ಪ್ರವೇಶಿಸಬಾರದೆಂದೂ ಸರ್ಕಾರಕ್ಕೆ ವ್ಯತಿರಿಕ್ತವಾಗಿ ನಡೆಯಬಾರದೆಂದೂ ನನಗೆ ಗೊತ್ತಿದೆ. ನಾನು ರಾಜಕೀಯದಲ್ಲಿ ಕೈ ಹಾಕುತ್ತಿಲ್ಲ. ಹಾಗೆ ಹಾಕುತ್ತಾ ಇದ್ದಿದ್ದರೆ ಸಿ. ಐ. ಡಿ. (C. I. D.) ಕೈಗೆ ನಾನು ಸಿಕ್ಕುತ್ತಿದ್ದೆ. ಅಂತಹ ಪ್ರಸಂಗ ಇದುವರೆಗೂ ನಡೆದಿಲ್ಲ.”

'ಎದುರು ಪಾರ್ಟಿಗಳನ್ನು ಕಟ್ಟುತ್ತಿದ್ದೀರೆಂದು ನಿಮ್ಮ ಮೇಲೆ ದೂರು ಬಂದಿದೆ ! ಆ ದೂರು ಸರ್ಕಾರಕ್ಕೂ ಮುಟ್ಟದೆ !?

'ಅಂತಹ ಪ್ರಭಾವಶಾಲಿ ನಾನಲ್ಲ ! ಒಂದು ವೇಳೆ ಪಾರ್ಟಿಗಳನ್ನು ಕಟ್ಟುವ ಚೈತನ್ಯವಿದೆಯೆಂದು ನನಗೆ ಮನವರಿಕೆಯಾದರೆ ಈ ಗುಲಾಮಗಿರಿಗೆ ರಾಜೀನಾಮೆ ಕೊಟ್ಟು ಬಿಟ್ಟು ರಾಜಕೀಯ ಮುಖಂಡನಾಗುತ್ತೇನೆ! ತಮ್ಮನ್ನು ಸಹ ಆಗ ನಾನು ಬೆದರಿಸುತ್ತೇನೆ ! ಇವುಗಳೆಲ್ಲ ಏನು ಮಾತುಗಳು ಸಾರ್ ! ಯಾರೋ ಒಬ್ಬಿಬ್ಬರು ಸ್ವಾರ್ಥ ಸಾಧಕರು ಹೇಳುವ ಮಾತುಗಳಿಗೆ ಕಿವಿ ಜೋತುಹಾಕಿ ನನ್ನನ್ನು ಟೀಕಿಸುತ್ತಿದ್ದೀರಿ. ಮೇಲಿನ ದೊಡ್ಡ ದೊಡ್ಡ ಅಧಿಕಾರಿಗಳಿಗೆ ತಾನೆ ಏನು ಬೇಕಾಗಿದೆ ! ಸ್ವಾರ್ಥ ಸಾಧನೆಗೆ ನಾಲ್ಕು ಜನ ಮುಖಂಡರ ಬೆಂಬಲ ! ಅಷ್ಟೇ.?

ಮೇಲಿನ ಮಾತುಗಳು ನಡೆಯುತ್ತಿದ್ದಾಗ ರಸ್ತೆಯ ಪಕ್ಕದಲ್ಲಿ ಒಂದು ಹಳ್ಳಿ ಹತ್ತಿರವಾಯಿತು.

'ಇಲ್ಲಿ ಒಂದು ಸ್ಕೂಲಿದೆ, ತಾವು ನೋಡುತ್ತೀರಾ? ಎಂದು ರಂಗಣ್ಣ ಕೇಳಿದನು.

ಸಾಹೇಬರು ನೋಡುವುದಾಗಿ ಹೇಳಿದ ಮೇಲೆ ಮೋಟಾರು ನಿಂತಿತು. ಇಬ್ಬರೂ ಇಳಿದು ಹಳ್ಳಿಯನ್ನು ಪ್ರವೇಶಿಸಿದರು. ಆ ಇಕ್ಕಟ್ಟಿನ ಕೊಳಕು ಸಂದುಗಳನ್ನೂ ಬಗುಳುತ್ತಿದ್ದ ನಾಲ್ಕು ನಾಯಿಗಳನ್ನೂ ದಾಟಿ ಹೋದ ಮೇಲೆ ಸ್ಕೂಲು ಸಿಕ್ಕಿತು. ಆ ಕಟ್ಟಡವನ್ನು ಗ್ರಾಮಸ್ಥರು ಕೊಟ್ಟಿದ್ದರು. ನೆಲವೆಲ್ಲ ಕತ್ತಿ ಹೋಗಿ ಅಲ್ಲಲ್ಲಿ ಹಳ್ಳಗಳು ಬಿದ್ದಿದ್ದು ವು. ಗೋಡೆಗಳಿಗೆ ಜನಮೇಜಯರಾಯನ ಕಾಲದಲ್ಲಿ ಸುಣ್ಣ ಹೊಡೆದಿದ್ದಿರಬಹುದು! ಕೆಲವು ಕಡೆ ಗೋಡೆಗಳಲ್ಲಿ ಬಿರುಕುಗಳು ಬಂದು ಆಚೆಯ ಕಡೆಯ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಚಾವಣಿ ಮಣ್ಣಿನದು ; ಮರದ ಕೊಂಬೆಗಳನ್ನು ಹಾಸಿ ಮೇಲೆ ಮಣ್ಣನ್ನು ಮುಚ್ಚಿ ಮಾಡಿದ್ದ ಚಾವಣಿ, ಆಗಾಗ ಮಣ್ಣು ಕೆಳಕ್ಕೆ ಉದುರುತ್ತಿತ್ತು . ಕಟ್ಟಡಕ್ಕೆ ಒಂದು ಬಾಗಿಲು ಮತ್ತು ಎರಡು ಕಿಟಕಿಗಳಿದ್ದುವು.

'ಇದು ಸರಕಾರದ ಸ್ಕೂಲು ; ಕಟ್ಟಡ ಮಾತ್ರ ಹಳ್ಳಿಯವರು ಕೊಟ್ಟದ್ದು' ಎಂದು ರಂಗಣ್ಣ ಹೇಳಿದನು.

ಸಾಹೇಬರು ಒಳ ಹೊಕ್ಕಾಗ ಮಕ್ಕಳು ಎದ್ದು ನಿಂತು ಮೌನವಾಗಿ ಕೈ ಮುಗಿದರು. ಮೇಷ್ಟು ಗಾಬರಿಯಾಗಿ ನಿಂತಿದ್ದನು ನಾಲ್ಕನೆಯ ತರಗತಿಯಲ್ಲಿ ಒಬ್ಬ ಹುಡುಗ, ಮೂರನೆಯ ತರಗತಿಯಲ್ಲಿ ಇಬ್ಬರು, ಎರಡನೆಯ ತರಗತಿಯಲ್ಲಿ ಆರು ಜನ, ಮೊದಲನೆಯ ತರಗತಿಯಲ್ಲಿ ಹದಿನೈದು ಮಂದಿ-ಹೀಗೆ ತರಗತಿಗಳಲ್ಲಿ ಮಕ್ಕಳಿದ್ದರು. ಸಾಹೇಬರು ಹತ್ತು ನಿಮಿಷಗಳ ಕಾಲ ಅಲ್ಲಿದ್ದು ಮೇಷ್ಟರ ಡೈರಿ ಮತ್ತು ಟಿಪ್ಪಣಿ ಗಳನ್ನೂ ಕೆಲವು ದಾಖಲೆಗಳನ್ನೂ ಪರಿಶೀಲಿಸಿದರು. ಅಷ್ಟು ಹೊತ್ತಿಗೆ ಕೆಲವರು ಗೌಡರು ಮತ್ತು ಯುವಕರು, ಚಿಳ್ಳೆಪಿಳ್ಳ ಮಕ್ಕಳು ಕಟ್ಟಡದೊಳಕ್ಕೆ ಬಂದು ನಿಂತರು. ಸಾಹೇಬರು,

'ಇಲ್ಲಿ ಪಂಚಾಯತಿ ಮೆಂಬರುಗಳಿದ್ದಾರೋ ?” ಎಂದು ಕೇಳಿದರು. ಒಬ್ಬಾತ ಮುಂದೆ ಬಂದು ಕೈಮುಗಿದನು. “ನಾನು ಮೆಂಬರು ಸೋಮಿ !'

'ಈ ಕಟ್ಟಡ ಸ್ವಲ್ಪವೂ ಚೆನ್ನಾಗಿಲ್ಲ ! ಇದಕ್ಕೆ ಬೇಗ ರಿಪೇರಿ ಮಾಡಿಸಿ ಕೊಡಬೇಕು !'

'ಈ ಕಟ್ಟ ಡಾನ ಸರಕಾರಕ್ಕೊಪ್ಪಿಸಿ ಬಾಳ ವರ್ಸ ಆಗೋಯ್ತು ಸೋಮಿ ! ಮುಚ್ಚಳಿಕೆ ಸಹ ಬರೆದು ಕೊಟ್ಟಿದ್ದೇವೆ. ರಿಪೇರಿ ಗಿಪೇರಿ ಎಲ್ಲ ಸರಕಾರದೊರೆ ಮಾಡಿಸಬೇಕು ಸೋಮಿ !'

ಸಾಹೇಬರು ಒಂದು ನಿಮಿಷ ಸುಮ್ಮನಿದ್ದು , ಸರಕಾರ ಮಾಡಿಸಬೇಕು ಆ೦ತ ಕಾದರೆ ಬೇಗ ಆ ಗೋದಿಲ್ಲ ! ನಿಮ್ಮ ಹಳ್ಳಿಯಲ್ಲಿರುವ ಕಟ್ಟಡವನ್ನು ನೀವು ಚೆನ್ನಾಗಿಟ್ಟುಕೊಳ್ಳಬೇಕು !'- ಎಂದು ಹೇಳಿದರು.

'ಅದ್ಯಾಕ್ ಸೋಮಿ ಅಂಗೋಳ್ಳಿರಾ! ನಮ್ಮ ಅಳ್ಳಿಗೆ ಸರಕಾರದವರು ಕಟ್ಟಡಾನ ಕಟ್ಟಿಸಿಕೊಡಲಿಲ್ಲ. ನಾವೇನೋ ಕಷ್ಟಪಟ್ಟು ಕಟ್ಟಿ ಸರಕಾರಕ್ಕೆ ವಹಿಸಿಕೊಟ್ಟರೆ ಅದರ ರಿಪೇರಿ ಮಾಡಾಕಿಲ್ವಾ ? ಸರಕಾರಿ ಕಟ್ಟಡ ಕೈಲ್ಲ ಅಳ್ಯೋರೆ ರಿಪೇರಿ ಮಾಡ್ತಾರ ??

ಸಾಹೇಬರು ಪರಂಗಿ ಟೋಪಿಯನ್ನು ಕೈಗೆ ತೆಗೆದು ಕೊಂಡು ಹೊರಕ್ಕೆ ಬಂದರು. “ಮೇಷ್ಟೆ ! ಈ ಹಳ್ಳಿ ಜನಕ್ಕೆ ಏನೇನೂ ತಿಳಿವಳಿಕೆಯಿಲ್ಲ, ಸರಿಯಾದ ತಿಳಿವಳಿಕೆ ಕೊಟ್ಟು ಕಟ್ಟಡ ರಿಪೇರಿ ಮಾಡಿಸಿ ರಿಪೋರ್ಟು ಮಾಡಿ !' ಎಂದು ಹುಕುಂ ಮಾಡಿದರು

ಅಲ್ಲಿಂದ ಹೊರಟವರು ಮೋಟಾರಿನಲ್ಲಿ ಕುಳಿತರು. ಹೊರಟಿತು. ದಾರಿಯಲ್ಲಿ ಪುನಃ ರಂಗಣ್ಣನಿಗೂ ಸಾಹೇಬರಿಗೂ ಮಾತು ಬೆಳೆಯಿತು. 'ತಿಪ್ಪೂರಿನ ಪ್ರೈಮರಿ ಸ್ಕೂಲಿನ ಕಟ್ಟಡಕ್ಕೆ ರಿಪೇರಿ ಆಗಿಲ್ಲ. ಎರಡು ಮೂರು ರಿಜಿಸ್ಟರ್ ನೋಟೀಸುಗಳನ್ನು ಕೊಟ್ಟದ್ದಾಯಿತು. ಫಲವೇನೂ ಕಾಣಲಿಲ್ಲ. ಈಗ ಅಲ್ಲೆಲ್ಲ ಪ್ಲೇಗಿನ ಗಲಾಟೆ. ಸ್ಕೂಲು ಕಟ್ಟಡದಲ್ಲಿ ಇಲಿ ಸಹ ಬಿದ್ದು ಸ್ಕೂಲನ್ನು ಮುಚ್ಚಿದೆ ಡಿಸಿನ್ ಫೆಕ್ಷನ್ನು ಸಮರ್ಪಕವಾಗಿ ಮಾಡಲಾಗುವುದಿಲ್ಲ ; ಅಲ್ಲಿ ಏನಾದರೂ ಹುಡುಗರಿಗೆ ಹೆಚ್ಚು ಕಡಿಮೆಗಳಾದರೆ ತಾವು ಜವಾಬ್ದಾರರಲ್ಲವೆಂದು ವೈಸ್ ಪ್ರೆಸಿಡೆಂಟರು ತಿಳಿಸಿದ್ದಾರೆ. ಮುಂದೆ ಏನು ಮಾಡಬೇಕು ಸಾರ್?' ಎಂದು ರಂಗಣ್ಣ ಕೇಳಿದನು.

ಬೇರೆ ಕಟ್ಟಡ ಗೊತ್ತು ಮಾಡಿ.'

ಬೇರೆ ಕಟ್ಟಡ ಸುಲಭವಾಗಿ ಸಿಕ್ಕುವುದಿಲ್ಲ. ಈಗಿನ ಕಟ್ಟಡ ಕಲ್ಲೇಗೌಡರದು. ಅದಕ್ಕೆ ತಿಂಗಳಿಗೆ ಹತ್ತು ರೂಪಾಯಿ ಬಾಡಿಗೆ, ಅವರಿಗೆ ಪೈಪೋಟಿಯಾಗಿ ನಿಂತು ಊರಲ್ಲಿ ಯಾರೂ ಕಟ್ಟಡ ಕೊಡುವುದಿಲ್ಲ,

ನೀವೇ ಕಲ್ಲೇಗೌಡರನ್ನು ಕಂಡು ಪ್ರಾರ್ಥನೆ ಮಾಡಿಕೊಳ್ಳಿ' ಆದೂ ಆಯಿತು ಸಾರ್ ! ಫಲವೇನೂ ಇಲ್ಲ ತಿಂಗಳಿಂದ ಸ್ಕೂಲು ನಡೆದಿಲ್ಲ ; ಮತ್ತೆ ಸ್ಕೂಲು ಪ್ರಾರಂಭವಾಗಬೇಕಾಗಿದೆ.'

ಬೇರೆ ಕಟ್ಟಡ ಸಿಕ್ಕುವವರೆಗೂ ಮಿಡಲ್ ಸ್ಕೂಲು ಕಟ್ಟಡದಲ್ಲಿ ಬೆಳಗ್ಗೆ ಮಾಡಿ ಕೊಳ್ಳಿ ”

ಆ ಬಗ್ಗೆ ಹುಕುಂ ತಮ್ಮಿಂದ ಆಗಬೇಕು ಸಾರ್ ! ?

ಓಹೋ ! ಗುಮಾಸ್ತೆ ನಾರಾಯಣ ರಾವ್ ಕೈಗೆ ರಿಪೋರ್ಟನ್ನು ಕೊಡಿ. ಆರ್ಡರ್ ಮಾಡುತ್ತೇನೆ.” ಮುಂದೆ ಒಂದು ಹಳ್ಳಿ ಸಿಕ್ಕಿತು. ಅಲ್ಲಿ ಒಂದು ಗ್ರಾಂಟ್ ಸ್ಕೂಲಿತ್ತು. ಮೋಟಾರನ್ನು ನಿಲ್ಲಿಸಿದರು. ಸಾಹೇಬರೂ ರಂಗಣ್ಣನೂ ಇಳಿದು ಹಳ್ಳಿಯನ್ನು ಹೊಕ್ಕರು. ಎರಡು ಮೂರು ಸಂದುಗಳನ್ನು ತಿರುಗಿದಮೇಲೆ ರಂಗಣ್ಣ ಒಂದು ಮನೆಯ ಹಿಂಭಾಗವನ್ನು ಪ್ರವೇಶಿಸಿ, “ತಲೆ ತಗ್ಗಿಸಿಕೊಂಡು ಬರಬೇಕು ಸಾರ್ ! ಬಾಗಿಲು ಗಿಡ್ಡು' ಎಂದು ಎಚ್ಚರಿಕೆ ಕೊಟ್ಟ ನು. ಸಾಹೇಬರು ಪರಂಗಿ ಟೋಪಿಯನ್ನು ಕೈಯಲ್ಲಿ ಹಿಡಿದುಕೊಂಡು ತಲೆ ತಗ್ಗಿಸಿಕೊಂಡು ಒಳಕ್ಕೆ ಹೋದರು. ಅಲ್ಲಿ ತಗ್ಗಿನ ಓಪ್ಪಾರವೊಂದು ಕಾಣಿಸಿತು. ಸುಮಾರು ಆರಡಿ ಅಗಲ, ಹದಿನೈದಡಿ ಉದ್ದ ಇದ್ದಿರಬಹುದು. ಅದರ ಒಂದು ಕೊನೆಯಲ್ಲಿ ಆರೇಳು ಕುರಿಗಳನ್ನು ಕಟ್ಟಿ ಹಾಕಿದ್ದರು ! ಅವುಗಳ ಹಿಕ್ಕೆ ಗಂಜಳ- ಎಲ್ಲ ಕೆಳಗೆ ಹರಡಿಕೊಂಡು ದುರ್ವಾಸನೆಯನ್ನು ಬೀರುತ್ತಿದ್ದುವು. ಆ ಕುರಿಗಳು ಸಾಹೇಬರನ್ನು ನೋಡುತ್ತಲೂ, 'ಬ್ಯಾ, ಬ್ಯಾ' ಎಂದು ಅರಚತೊಡಗಿದುವು! ಆ ಕಟ್ಟಡದ ಚಾವಣಿಯ ತಳ ಭಾಗದಲ್ಲಿ ಬೊಂಬುಗಳ ಕಟ್ಟಡವಿತ್ತು. ಅದರಲ್ಲಿ ಹುಲ್ಲು, ಕಟ್ಟಿಗೆಯ ಚೂರುಗಳು ಮೊದಲಾದುವನ್ನು ಅಡಕಿದ್ದರು. ಒಪ್ಪಾರದ ಎದುರು ಅಂಗಳ ದಲ್ಲಿ ಎರಡು ಎಮ್ಮೆಗಳನ್ನೂ ಎರಡು ಎತ್ತುಗಳನ್ನೂ ಕಟ್ಟಿದ್ದರು. ಅವುಗಳ ಸಗಣಿ ಮತ್ತು ಗಂಜಳ ಅಲ್ಲೆಲ್ಲ ಹರಡಿಕೊಂಡಿ ದ್ದು ವು. ಆ ಅಂಗಳದಲ್ಲಿ ಗಡಿಗೆಗಡಿಗೆಗಳನ್ನು ತೊಳೆದ ನೀರು ಆ ಸಗಣಿಯನ್ನು ಕೊಚ್ಚಿ ಕೊಂಡು ಬಂದು ಒಪ್ಪಾರದ ಪಕ್ಕದಲ್ಲಿ ಹರಿದು ನಿಂತಿತ್ತು,

ಆ ಪಾಠ ಶಾಲೆಯಲ್ಲಿ ನಾಲ್ಕು ಸಣ್ಣ ಮಕ್ಕಳು ಮಾತ್ರ ಇದ್ದರು ! ಕುಳಿತುಕೊಳ್ಳುವುದಕ್ಕೆ ಹಲಗೆ ಇರಲಿಲ್ಲ. ಗಂಜಳದಲ್ಲಿ ನೆನೆದು, ಅರ್ಧ ಕೆತ್ತಿ ಹೋದ ನೆಲದ ಮೇಲೆ ಮಕ್ಕಳು ಕುಳಿತಿದ್ದರು ಬೋಡ್ ೯, ಕುರ್ಚಿ, ಮೇಜುಗಳಾಗಲಿ, ಮಣಿ ಚೌಕಟ್ಟು ಮೊದಲಾದ ಉಪಕರಣಗಳಾಗಲಿ ಇರಲಿಲ್ಲ. ಮೇ ಷ್ಟು- ಸುಮಾರು ಇಪ್ಪತ್ತು ವರ್ಷಗಳ ಯುವಕ, ಒ೦ದು ಲುಂಗಿಯನ್ನು ಸೊಂಟಕ್ಕೆ ಸುತ್ತಿಕೊಂಡು, ಷರ್ಟನ್ನು ಹಾಕಿಕೊಂಡಿದ್ದನು. ತಲೆಗೆ ಏನೂ ಇರಲಿಲ್ಲ. ಸಾಹೇಬರು ತನಿಖೆಗೆ ಪ್ರಾರಂಭಿಸಿ, 'ಹಾಜರಿ ರಿಜಿಸ್ಟರ್ ಕೊಡು' ಎಂದು ಕೇಳಿದರು. ಮೇಷ್ಟು ಅಲ್ಲೇ ಗೂಡಿನಲ್ಲಿಟ್ಟಿದ್ದ ನಲವತ್ತು ಪುಟಗಳ ಒಂದು ಸಣ್ಣ ನೋಟ್ ಪುಸ್ತಕವನ್ನು ಕೈಗೆ ಕೊಟ್ಟನು ! ದಾಖಲೆಯಲ್ಲಿ ಹದಿನೈದು ಮಕ್ಕಳು ಇದ್ದರು. ದಿನದ ಹಾಜರಿ ನಾಲ್ಕು ; ಸರಾಸರಿ ಹಾಜರಿ ಆ ರು.

ಸರಕಾರಿ ರಿಜಿಸ್ಟರನ್ನು ಇಡಬೇಕು ! ಇಂಥ ಪುಸ್ತಕಗಳಲ್ಲಿ ಹಾಜರಿ ಗುರ್ತಿಸ ಕೂಡದು !?

'ಸರಕಾರಿ ರಿಜಿಸ್ಟರ್ ಕೊಂಡುಕೊಳ್ಳೋದಕ್ಕೆ ಕಾಸಿಲ್ಲ ಸ್ವಾಮಿ. ನನಗೆ ಬರೋ ಆರು ರೂಪಾಯಿಗಳಲ್ಲಿ ಜೀವನ ನಡೆಯುವುದೇ ಕಷ್ಟ ಸ್ವಾಮಿ ??

ಗ್ರಾಮಸ್ಥರಿಗೆ ಹೇಳಿ ಹಣ ಒದಗಿಸಿಕೊಳ್ಳಬೇಕು !?

“ಗ್ರಾಮಸ್ಥರು ಏನೂ ಕೊಡೋದಿಲ್ಲ ಸ್ವಾಮಿ ! ಈ ನೋಟ್ಪು ಸ್ತಕ ಕ್ಕೂ ನಾನೇ ದುಡ್ಡು ಕೊಟ್ಟಿದ್ದೇನೆ !?

“ನಿನ್ನ ಟಿಪ್ಪಣಿ, ಡೈರಿ ಎಲ್ಲಿ ?

“ಮನೆಯಲ್ಲಿಟ್ಟಿದ್ದೇನೆ ಸ್ವಾಮಿ ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಸ್ಥಳ ಇಲ್ಲ

ಬರೋವಾಗ ಜೊತೆಯಲ್ಲೇ ತರಬೇಕು ? ಟಿಪ್ಪಣಿಯಿಲ್ಲದೆ ಪಾಠ ಹೇಗೆ ಮಾಡುತ್ತೀಯೆ ?”

“ಎಲ್ಲಾ ಓದಿಕೊಂಡು ಬಂದು ಪಾಠ ಮಾಡುತ್ತೇನೆ ಸ್ವಾಮಿ !? ಸಾಹೇಬರು ಮಕ್ಕಳನ್ನು ನೋಡಿದರು. ಇಬ್ಬರ ಹತ್ತಿರ ಎರಡು ಮುರುಕು ಪ್ಲೇಟುಗಳು, ಇಬ್ಬರ ಹತ್ತಿರ ಎರಡು ಹರುಕು ಬಾಲಬೋಧೆಗಳು ಇದ್ದುವು. ರಂಗಣ್ಣನ ಕಡೆಗೆ ಸಾಹೇಬರು ತಿರುಗಿ, ' ಈ ಪಾಠಶಾಲೆಯನ್ನು ರದ್ದು ಮಾಡಿ ಬೇರೆ ಕಡೆಗೆ ವರ್ಗಾಯಿಸಿ' ಎಂದು ಅಪ್ಪಣೆ ಮಾಡಿ ಅಲ್ಲಿಂದ ಹೊರಬಿದ್ದರು. ಅಷ್ಟು ಹೊತ್ತಿಗೆ ಹಳ್ಳಿಯ ಮುಖಂಡರು ಕೆಲವರೂ ಇತರರೂ ಯಾರೋ ಸಾಹೇಬರು ಬಂದಿದ್ದಾರೆಂದು ವರ್ತಮಾನ ಕೇಳಿ ಗುಂಪು ಸೇರಿದರು. ಸಾಹೇಬರಿಗೆ ಎರಡು ನಿಂಬೆಹಣ್ಣುಗಳನ್ನು ಕೊಟ್ಟು ಮುಖಂಡನೊಬ್ಬನು, 'ಸೋಮಿ ! ನಮ್ಮ ಸರ್ಕಾರಿ ಇಸ್ಕೂಲು ಮಾಡಿ ಕೊಡಿ ಸೋಮಿ' ಎಂದು ಬೇಡಿಕೆ ಸಲ್ಲಿಸಿದನು.

'ನಿಮ್ಮ ಹಳ್ಳಿಯಲ್ಲಿ ಸರಿಯಾದ ಕಟ್ಟಡವಿಲ್ಲ ; ಸ್ಕೂಲಿನಲ್ಲಿ ತಕ್ಕಷ್ಟು ಮಕ್ಕಳಿಲ್ಲ ; ಬೋರ್ಡು ವಗೈರೆ ಸಾಮಾನುಗಳಿಲ್ಲ. ನಿಮಗೆ ಸರ್ಕಾರಿ ಸ್ಕೂಲನ್ನು ಹೇಗೆ ಕೊಡೋದು? ಇರುವ ಸ್ಕೂಲನ್ನೆ ಬೇರೆ ಕಡೆಗೆ ವರ್ಗಾಯಿಸುತ್ತವೆ. '

'ಅ೦ಗೆಲ್ಲ ಮಾಡ್ಬೇಡಿ ಸೋಮಿ ! ಸರಕಾರಿ ಇಸ್ಕೂಲು ಕೊಟ್ರೆ ಶಾನೆ ಮಕ್ಳು ಸೇರ್ತಾರೆ, ಕಟ್ಟಡಕ್ಕೆಲ್ಲ ಸಿದ್ಧ ಮಾಡಿಕೊಂಡಿದ್ದೆವೆ. ಆಗೋ ! ಅಲ್ಲಿ ನೋಡಿ ಸೊಮಿ ! ಕಲ್ಲು ಜಮಾಯಿಸಿಕೊಂಡಿದ್ದೇವೆ ; ಆ ದೊಡ್ಡ ಮರ ಕೆಡವಿ ಮಡಗಿಕೊಂಡಿದ್ದೇವೆ ; ಅದನ್ನು ಕೊಯ್ಯೋದೊಂದೇ ಬಾಕಿ. ಈ ಬಾರಿ ಕೊಯ್ಲಾಲಾಗುತ್ತಲೂ ಹದಿನೈದು ದಿನದಾಗೆ ಕಟ್ಟಡ ಎತ್ತಿ ಬಿಡ್ತವೆ ! ಸರಕಾರ ಬಡ ರೈತರ ಕಾಪಾಡ್ಕೊಂಡು ಬರ್ಬೇಕು ಸೋಮಿ ! ಇರೋ ಇಸ್ಕೂಲ್ ತೆಗೆದು ಬಿಟ್ರೆ ಎಂಗೆ ?'

'ಒಳ್ಳೆಯದು ! ನಿಮಗೆ ಮೂರು ತಿಂಗಳು ವಾಯಿದೆ ಕೊಟ್ಟಿದೆ. ಅಷ್ಟರೊಳಗಾಗಿ ಕಟ್ಟಡ ಸಿದ್ಧವಾಗಬೇಕು, ಸಾಮಾನುಗಳಿಗಾಗಿ ನೂರು ರೂಪಾಯಿಗಳನ್ನು ಖಜಾನೆಗೆ ಕಟ್ಟಿ, ರಸೀತಿ ತಂದುಕೊಡ ಬೇಕು. ನಿಮ್ಮ ಇನ್ ಸ್ಪೆಕ್ಟರವರ ಕಚೇರಿಗೆ ಹೋಗಿ ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಬರೆದು ಕೊಡಬೇಕು. ಇದನ್ನೆಲ್ಲ ಮಾಡಿದರೆ ನಿಮ್ಮ ಹಳ್ಳಿಲಿ ಸ್ಕೂಲಿಟ್ಟರುತ್ತೇವೆ. ಇಲ್ಲವಾದರೆ ಬೇರೆ ಕಡೆಗೆ ವರ್ಗ ಮಾಡಿ ಬಿಡುತ್ತೇವೆ.'

ಸಾಹೇಬರೂ ರಂಗಣ್ಣನೂ ಮೋಟಾರನ್ನು ಹತ್ತಿದರು. ಮುಂದಕ್ಕೆ ಹೊರಟರು. ಅವರಿಂದ ಮುಚ್ಚಳಿಕೆ ಬರೆಸಿ ಕೊಂಡು, ಸರಿಯಾದ ಎಚ್ಚರಿಕೆ ಕೊಟ್ಟು ಕಟ್ಟಡ ಕಟ್ಟಿಸಿ ” ಎಂದು ಸಾಹೇಬರು ರಂಗಣ್ಣನಿಗೆ ಹೇಳಿದರು,

'ಅವರು ಈಗಾಗಲೇ ಮೂರಾವರ್ತಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ ಸಾರ್ ! ಬಂದಾಗಲೆಲ್ಲ ಆ ಕಲ್ಲುಗಳ ರಾಶಿ ತೋರಿಸುತ್ತಾರೆ ? ಆ ಬಿದ್ದ ಮರವನ್ನು ತೋರಿಸುತ್ತಾರೆ ! ಏನಾದರೊಂದು ನೆಪ ಹೇಳುತಾರೆ :

ಹಾಗೆಯೇ ? ಈಗ ಆಖ್ಯೆರ್‌ ನೋಟೀಸ್ ಕೊಟ್ಟಿದೆ! ಈಗಲೂ ಕಟ್ಟಡ ಕಟ್ಟದಿದ್ದರೆ ಸ್ಕೂಲನ್ನು ವರ್ಗಾಯಿಸಿಬಿಡಿ. ?

ಇವತ್ತು ವರ್ಗಾಯಿಸಿದರೆ, ನಾಳೆಯ ಅರ್ಜಿಗಳನ್ನು ಹಾಕುತ್ತಾರೆ ; ನಿಮ್ಮ ಕಚೇರಿಗೆ ಬರುತ್ತಾರೆ ; ಬೆಂಗಳೂರಿಗೆ ಹೋಗುತ್ತಾರೆ ; ಅವರ ಮುಖಂಡರುಗಳೆಲ್ಲ ದೊಡ್ಡ ಗಲಭೆ ಎಬ್ಬಿಸುತ್ತಾರೆ. ' 'ಆವರ ಗಲಭೆ ಗಲಭೆಗಳನ್ನೆಲ್ಲ ನಾವು ಸಡ್ಡೆ ಮಾಡುವುದಿಲ್ಲ ! ರೂಲ್ಸು ಪ್ರಕಾರ ನಾವು ನಡೆಸಿಬಿಡುತ್ತೇವೆ !

ಮುಂದೆ ಮೋಟಾರು ಹೋಗುತ್ತಿದ್ದಾಗ ಮತ್ತೊಂದು ಹಳ್ಳಿ ಸಿಕ್ಕಿತು. ಆ ಹಳ್ಳಿಯ ಮುಂಭಾಗದಲ್ಲಿ ಮೆಟ್ಟಲುಗಳ ಮೇಲೆ ಒಂದು ತಗ್ಗಿನ ಮಾರಿಗುಡಿಯಲ್ಲಿ ಪಾಠ ಶಾಲೆಯನ್ನು ಮೇಷ್ಟು ಮಾಡುತ್ತಿದ್ದನು. ಮೋಟಾರನ್ನು ನಿಲ್ಲಿಸಿ ಸಾಹೇಬರೂ ರಂಗಣ್ಣನೂ ಸ್ಕೂಲ ಬಳಿಗೆ ಹೋದರು. ಮಾರಿಗುಡಿಯ ಎದುರಿನಲ್ಲಿ ಬಲಿ ಕಂಬದ ಹತ್ತಿರ ಎರಡು ದಿನದ ಹಿಂದೆ ಕುರಿಯೊಂದನ್ನು ಬಲಿ ಕೊಟ್ಟಿದ್ದರು. ಅದರ ರಕ್ತ ಅಲ್ಲಿ ನೆಲದ ಮೇಲೆ ಒಣಗಿ ಕಪ್ಪು ತಿರುಗಿ ಕರೆ ಕಟ್ಟಿತ್ತು ! ಬಲಿಕಂಬಕ್ಕೂ ಆ ರಕ್ತಾಭಿಷೇಕ ನಡೆದಿತ್ತು ! ಮಾರಿಗುಡಿಗೆ ಹತ್ತು ಮೆಟ್ಟು ಲುಗಳಿದ್ದು ವು. ಆ ಮೆಟ್ಟಲುಗಳ ತರುವಾಯ ತಗ್ಗಿನ ಕಲ್ಲುಮಂಟಪ ; ಸುಮಾರು ಐದೂವರೆ ಅಡಿ ಎತ್ತರ ಮತ್ತು ನಾಲ್ಕಂಕಣ ವಿಸ್ತಾರವುಳ್ಳದಾಗಿತ್ತು.

'ಸ್ಕೂಲು ಕಟ್ಟಡದೊಳಗೆ ಹೋಗಬೇಕಾದರೆ ಬೂಟ್ಸು ಬಿಚ್ಚಿ ಹೋಗಬೇಕು ಸಾರ್ ಎಂದು ರಂಗಣ್ಣ ಸೂಚನೆ ಕೊಟ್ಟನು. ಸಾಹೇಬರು ಮೆಟ್ಟಿಲ ಮೇಲೆ ಕುಳಿತು ಕೊಳ್ಳಲು ಹೋದಾಗ ಮೇಷ್ಟ್ರು ಮೇಲಿಂದ ಕುರ್ಚಿಯನ್ನು ತಂದು ಕೆಳಗಿಟ್ಟನು. ಹುಡುಗನೊಬ್ಬನು ಇನ್ ಸ್ಪೆಕ್ಟರಿಗೆ ಸ್ಟೂಲೊಂದನ್ನು ತಂದು ಕೆಳಗಿಟ್ಟನು. ಬೂಟುಗಳನ್ನು ಬಿಚ್ಚಿ ಮೇಲಕ್ಕೆ ಹತ್ತಿ ಹೋದರು. ಅಲ್ಲಿ ತಲೆಯೆತ್ತಿಕೊಂಡು ನಿಲ್ಲಲಾಗುತ್ತಿರಲಿಲ್ಲ, ಕೆಳಗಿದ್ದ ಕುರ್ಚಿ ಮತ್ತು ಸ್ಟೂಲು ಮೇಲಕ್ಕೆ ಬಂದುವು. ಸಾಹೇಬರುಗಳು ಅವುಗಳ ಮೇಲೆ ಕುಳಿತದ್ದಾಯಿತು. ಹುಡುಗರಿಗೆ ಹಲಗೆಗಳಾಗಲಿ ಬೆಂಚುಗಳಾಗಲಿ ಇರಲಿಲ್ಲ. ರಿಜಿಸ್ಟರುಗಳನ್ನು ಇಟ್ಟು ಕೊಳ್ಳುವುದಕ್ಕೆ ಪೆಟ್ಟಗೆ ಇರಲಿಲ್ಲ. ಏನನ್ನಾದರೂ ಬರೆಯುವುದಕ್ಕೆ ಬೋರ್ಡು ಇರಲಿಲ್ಲ.

'ಇದೇನು ಗ್ರಾಂಟ್ ಸ್ಕೂಲೇ ? ಕಟ್ಟಡವಿಲ್ಲ, ಸಾಮಾನಿಲ್ಲ !! ಎಂದು ಸಾಹೇಬರು ಕೇಳಿದರು.

ಅಲ್ಲ ಸ್ವಾಮಿ ! ಸರಕಾರಿ ಸ್ಕೂಲು.'

ಮತ್ತೆ ಹಲಗೆ ಬೆಂಚು ಏನೂ ಇಲ್ಲವಲ್ಲ ! ಇನ್ನೂ ಸಪ್ಲೈ ಆಗಲಿಲ್ಲವೊ ?? ಎಲ್ಲವೂ ಆಗಿವೆ ಸ್ವಾಮಿ ! ಇಲ್ಲಿ ಇಟ್ಟು ಕೊಳ್ಳೋದಕ್ಕೆ ಅನುಕೂಲವಿಲ್ಲ. ಈ ಗುಡಿಗೆ ಬಾಗಿಲಿಲ್ಲ. ಗ್ರಾಮಸ್ಥರು ಬೇರೆ ಕಟ್ಟಡ ಕಟ್ಟಿಸಿ ಕೊಟ್ಟಿಲ್ಲ. ಸಾಮಾನುಗಳೆಲ್ಲ ಚೆರ್ಮನ್ನರ ಮನೆಯಲ್ಲಿ ದಾಸ್ತಾನಿದೆ.'

'ಪಾಠ ಮಾಡುವಾಗ ನೀನು ತಂದುಕೊಳ್ಳಬೇಕು !'

'ಅಪ್ಪಣೆ ಸ್ವಾಮಿ ! ಆದರೆ ಅವು ಬಹಳ ಭಾರ! ಬೋರ್ಡು ಬಹಳ ದೊಡ್ಡದು ; ಬೆಂಚು ಮೊದಲಾದುವನ್ನು ಮಕ್ಕಳು ಹೊರಲಾರರು. ಅವುಗಳನ್ನೆಲ್ಲ ಬೆಳಗ್ಗೆ ಮತ್ತು ಮಧ್ಯಾಹ್ನ ಎರಡೆರಡು ಹೊತ್ತೂ ಸಾಗಿಸೋದು ಕಷ್ಟ ಸ್ವಾಮಿ !”

'ಹಾಗಾದರೆ ಬೋರ್ಡಿಲ್ಲದೆ ಪಾಠ ಹೇಗೆ ಮಾಡುತ್ತೀಯೆ ?? ಹಾಗೇನೇ ಕಷ್ಟ ಪಟ್ಟು ಕೊಂಡು ಪಾಠ ಮಾಡುತ್ತಾ ಇದ್ದೇನೆ ಸ್ವಾಮಿ !”

'ಕಟ್ಟಡ ಏಕಾಗಲಿಲ್ಲ ? ಮುಚ್ಚಳಿಕೆ ಬರೆದು ಕೊಟ್ಟಿದ್ದಾರೋ ಇಲ್ಲವೋ ? :

'ಬರೆದು ಕೊಟ್ಟಿದ್ದಾರೆ ಸ್ವಾಮಿ ! ಪಾಯ ಹಾಕಿದ್ದಾರೆ ; ನೆಲೆ ಕಟ್ಟಡ ಎದ್ದಿಲ್ಲ ಎರಡು ವರ್ಷ ಆಗೋಯ್ತು.'

'ಏಕೆ ಕಟ್ಟಡ ಆಗಲಿಲ್ಲ ? ಏಕೆ ನಿಂತು ಹೋಯಿತು ?'

'ಆದು ರೈತನೊಬ್ಬನ ಜಮೀನು ಸ್ವಾಮಿ ! ಅವನಿಗೆ ಕಾಂಪನ್ ಸೇಷನ್ ಕೊಡಿಸ್ತೇವೆ ಎಂದು ಗ್ರಾಮಸ್ಥರು ಹೇಳಿದ್ದರು. ಆ ಮೇಲೆ ಆ ರೈತನಿಗೆ ಏನೂ ಕೊಡಲಿಲ್ಲ. ಈಗ ಹಾಗೇನೇ ಕೊಟ್ಟು ಬಿಡು ಎಂದು ಒತ್ತಾಯ ಮಾಡುತ್ತಿದ್ದಾರೆ! ಆ ರೈತ ಈ ಗ ತಕರಾರು ಎಬ್ಬಿಸಿ ಕೆಲಸ ಮುಂದುವರಿಯದಂತೆ ತಡೆದುಬಿಟ್ಟಿದ್ದಾನೆ ಸ್ವಾಮಿ !'

ಸಾಹೇಬರು ರಂಗಣ್ಣನ ಕಡೆಗೆ ತಿರುಗಿ ಕೊಂಡು, “ಆ ಜಮೀನನ್ನು ಅಕ್ವೈರು ಮಾಡಿ ಕೊಳ್ಳೋಣ. ಕೂಡಲೇ ಶಿಫಾರಸು ಮಾಡಿ ಕಾಗದವನ್ನು ಕಳಿಸಿಕೊಡಿ' ಎಂದು ಹೇಳಿದರು. ಸಾಹೇಬರು ಕೆಲವು ರಿಜಿಸ್ಟರುಗಳನ್ನು ನೋಡಿದ ಬಳಿಕ ಮೂರನೆಯ ತರಗತಿಯ ಹುಡುಗರಿಗೆ ಎರಡು ಬಾಯಿ ಲೆಕ್ಕಗಳನ್ನು ಕೇಳಿದರು. “ಹದಿನೈದನ್ನು ಏಳರಿಂದ ಗುಣಿಸಿ ನಲವತ್ತು ಕಳೆದು ಉಳಿದದ್ದಕ್ಕೆ ಹದಿನಾರು ಸೇರಿಸಿ ಒಂಬತ್ತು ಜನಕ್ಕೆ ಹಂಚಿದರೆ ಒಬ್ಬೊಬ್ಬನಿಗೆ ಎಷ್ಟೆಷ್ಟು ಬರುತ್ತದೆ ?'

ಹುಡುಗರು ಬೆಪ್ಪಾಗಿ ನಿಂತಿದ್ದರು. ಉತ್ತರವನ್ನು ಹೇಳಲಾಗಲಿಲ್ಲ.

'ಮುನ್ನೂರ ಎಪ್ಪತ್ತೈದರಲ್ಲಿ ನೂರೆಪ್ಪತ್ತೆಂಟು ಕಳೆದು ಬಂದದ್ದನ್ನು ಹನ್ನೆರಡರಿಂದ ಗುಣಿಸಿದರೆ ಏನು ಬರುತ್ತದೆ ??

ಈ ಪ್ರಶ್ನೆಗೂ ಉತ್ತರ ಬರಲಿಲ್ಲ. ಸಾಹೇಬರಿಗೆ ಕೋಪ ಬಂದು ಮೇಷ್ಟು ಶುದ್ಧ ನಾಲಾಯಖ್ ಎಂದು ತೀರ್ಮಾನಿಸಿ ಪರಂಗಿ ಟೋಪಿ ಹಿಡಿದುಕೊಂಡು ಮೆಟ್ಟಲಿಳಿದರು. ಮೋಟಾರನ್ನು ಹತ್ತಿ ಮುಂದಕ್ಕೆ ಹೊರಟದ್ದಾಯಿತು.

“ಏನು ಇನ್‌ಸ್ಪೆಕ್ಟರೆ ! ನಿಮ್ಮ ಮೇಷ್ಟುಗಳು ಸರಿಯಾಗಿ ಬಾಯಿ ಲೆಕ್ಕಗಳನ್ನು ಹೇಳಿ ಕೊಡುವುದೇ ಇಲ್ಲ.'

'ಸಾರ್ ! ತನುಗೆ ಕೋಪ ಬರಬಹುದು. ತಾವು ಕೇಳಿದ ಪ್ರಶ್ನೆಗಳೇ ಸರಿಯಲ್ಲ. ಅಷ್ಟು ಉದ್ದವಾದ ಮತ್ತು ಜಟಿಲವಾದ ಬಾಯಿ ಲೆಕ್ಕಗಳನ್ನು ಕೇಳಬಾರದು. ನಾವು ನಿಧಾನವಾಗಿ ಸ್ವಲ್ಪ ಸ್ವಲ್ಪವಾಗಿ ಹೇಳಿದ್ದರೆ ಬಹುಶಃ ಉತ್ತರ ಬರುತ್ತಿತ್ತೋ ಏನೋ ! ತಮ್ಮ ಪ್ರಶ್ನೆಗಳಿಗೆ ಆ ಹುಡುಗರು ಬೆಪ್ಪಾಗಿ ಹೋದದ್ದು ಏನಾಶ್ಚರ್ಯ! ನನಗೂ ಉತ್ತರ ಹೊಳೆಯದೆ ನಾನೂ ಸಹ ಬೆಪ್ಪಾಗಿ ಹೋದೆ !?

“ಏನು ? ನಿಮಗೂ ಉತ್ತರ ತಿಳಿಯಲಿಲ್ಲವೆ ! ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಹುಡುಗರು ಎಂಥೆಂಥ ದೊಡ್ಡ ಲೆಕ್ಕಗಳನ್ನು ಬಾಯಲ್ಲಿ ಮಾಡುತ್ತಾರೆ !?

ಇರಬಹುದು ಸಾರ್ ! ಆದರೆ ನನಗೆ ಆ ಅನುಭವಗಳಿಲ್ಲ. ಮೇಷ್ಟ್ರು ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದಾನೆ.' 'ನೀವು ಯಾವಾಗಲೂ ನಿಮ್ಮ ಮೇಷ್ಟ್ರುಗಳನ್ನು ವಹಿಸಿಕೊಂಡೇ ಮಾತನಾಡುತ್ತೀರಿ ! ಆ ಸುಂಡೇನಹಳ್ಳಿ ಮೇಷ್ಟರ ವಿಚಾರದಲ್ಲಿಯೂ ಹಾಗೆಯೇ ಮಾಡಿದಿರಿ!'

ರಂಗಣ್ಣ ಮಾತನಾಡಲಿಲ್ಲ, ಅಲ್ಲಿಂದ ಮುಂದೆ ಎರಡು ಮೈಲಿಗಳ ದೂರ ಹೋದ ಮೇಲೆ ಒಂದು ದೊಡ್ಡ ಹಳ್ಳಿ ಸಿಕ್ಕಿತು. ಅಲ್ಲಿ ಹುಡುಗರ ಸ್ಕೂಲೊಂದು, ಹುಡುಗಿಯರ ಸ್ಕೂಲೊಂದು ಇದ್ದು ವು. ಮೊದಲು ಹುಡುಗರ ಸ್ಕೂಲಿಗೆ ಇಬ್ಬರೂ ಹೋದರು. ಪಕ್ಕಾ ಸರಕಾರಿ ಕಟ್ಟಡ ಅದು, ವಿಶಾಲವಾಗಿಯೂ ಚೆನ್ನಾಗಿಯೇ ಇತ್ತು. ಆದರೆ ಚಾವಣೆಯಲ್ಲಿ ಹತ್ತು ಹನ್ನೆರಡು ಮಂಗಳೂರು ಹೆಂಚುಗಳು ಇರಲಿಲ್ಲ ಅವು ಇಲ್ಲದ್ದರಿಂದ ಹಿಂದೆ ಮಳೆ ಬಂದಾಗ ಆ ಭಾಗದಲ್ಲಿ ಗೋಡೆಯಮೇಲೆ ಕರೆಗಳೂ ಪಟ್ಟಿಗಳೂ ಬಿದ್ದಿದ್ದುವು. ಸಾಹೇಬರ ದೃಷ್ಟಿ ಆ ಚಾವಣಿಯ ಕಡೆಗೆ ಹೋಯಿತು.

“ಅಲ್ಲಿದ್ದ ಹೆಂಚುಗಳು ಏನಾದುವು ?' ಎಂದು ಹೆಡ್‌ಮೇಷ್ಟರನ್ನು ಕೇಳಿದರು.

ಎರಡು ವರ್ಷಗಳ ಹಿಂದೆ ಬಿರುಗಾಳಿ ಎದ್ದಾಗ ಕೆಲವು ಹೆಂಚುಗಳು ಹಾರಿ ಕೆಳಕ್ಕೆ ಬಿದ್ದು ಹೋದುವು ಸ್ವಾಮಿ | ಆ ಬಗ್ಗೆ ರಿಪೋರ್ಟ್ ಮಾಡಿದ್ದೇನೆ.'

“ ಅವುಗಳನ್ನು ಏಕೆ ಇದುವರೆಗೂ ಹಾಕಿಸಲಿಲ್ಲ ?

ಅದಕ್ಕೆ ರಂಗಣ್ಣನು, ಹಿಂದೆಯೇ ಆ ಬಗ್ಗೆ ರಿಪೋರ್ಟನ್ನು ಕಳಿಸಿದೆ. ಅದು ತಮ್ಮ ಕಚೇರಿಯಲ್ಲಿದೆಯೋ ಅಥವಾ ಡಿಸ್ಟಿಕ್ಟ್ ಬೋರ್ಡ್ ಕಚೇರಿಯಲ್ಲಿದೆಯೋ ತಿಳಿಯದು. ಸ್ಯಾನಿಟರಿ ಇನ್ ಸ್ಪೆಕ್ಟರೊ ಪಂಚಾಯತಿ ಇನ್ ಸ್ಪೆಕ್ಟರೋ ಬಂದು ಎಸ್ಟಿಮೆಟ್ ಮಾಡಿಕೊಂಡು ಹೋಗಿರಬೇಕು ಎಂದು ತಿಳಿಸಿದನು.

ಹೆಡ್ ಮೇಷ್ಟು 'ಹೌದು ಸ್ವಾಮಿ ! ಹೋದ ವರ್ಷ ಸ್ಯಾನಿಟರಿ ಇನ್ ಸ್ಪೆಕ್ಟರು ಬಂದಿದ್ದರು. ಆಗ ಆರೇ ಹೆಂಚುಗಳು ಹಾರಿ ಹೋಗಿದ್ದುವು. ರಿಪೇರಿ ಬಗ್ಗೆ ಎಸ್ಟಿಮೇಟು ಮಾಡಿಕೊಂಡು ಹೋದರು. ಅವರು, ಹೋದ ತರುವಾಯ ಪುನಃ ಗಾಳಿಯೆದ್ದು ಮತ್ತೆ ಕೆಲವು ಹೆಂಚುಗಳು ಹಾರಿಬಿ ದ್ದು ವು. ಪುನಃ ಇನ್ಸ್ಪೆಕ್ಟರು ಬಂದುನೋಡಿ-ನನ್ನ ಮೊದಲನೆಯ ಎಸ್ಟಿಮೇಟನ್ನು ಬದಲಾಯಿಸಬೇಕು ! ಈಗ ಹೆಚ್ಚು ಹೆಂಚುಗಳು ಹಾರಿ ಹೋಗಿವೆ!- ಎಂದು ಕೊಂಡು ಹೊರಟು ಹೋದರು. ಇನ್ನೂ ಏನೂ ಆಗಿಲ್ಲ.'

“ಈ ಸಣ್ಣ ಪುಟ್ಟ ರಿಪೇರಿಗಳನೆಲ್ಲ ಪಂಚಾಯತಿಯವರಿಂದ ಮಾಡಿಸಬೇಕು ಹೆಡ್ ಮೆಷ್ಟೇ' ಎಂದು ಸಾಹೇಬರು ಹೇಳಿದರು.

“ಇದು ಸರಕಾರಿ ಕಟ್ಟಡ ಸ್ವಾಮಿ ! ಪಂಚಾಯತಿಯವರು ರಿಪೇರಿ ಮಾಡೋದಿಲ್ಲ. ಪಂಚಾಯತಿ ರೂಲ್ಸಿನಲ್ಲಿಲ್ಲ, ಹೋಗಿ ಹೆಡ್ ಮೇಷ್ಟೆ! ಎಂದು ಗದರಿಸುತ್ತಾರೆ. ಪುನಃ ಸ್ಯಾನಿಟರಿ ಇನ್ ಸ್ಪೆಕ್ಟರ್ ಬರೋ ಹೊತ್ತಿಗೆ ಮತ್ತೆ ಕೆಲವು ಹೆಂಚುಗಳು ಎಲ್ಲಿ ಹಾರಿ ಬೀಳುತ್ತವೆಯೋ ! ಪುನಃ ಎಸ್ಟಿಮೇಟನ ಬದಲಾವಣೆ ಆಗಿ ಎಷ್ಟು ಕಾಲ ನಾವು ಕಾಯಬೇಕೋ ? ಎಂದು ಯೋಚನೆ ಸ್ವಾಮಿ ನನಗೆ.'

ಸಾಹೇಬರು ಅಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಮೇಷ್ಟ್ರುಗಳ ಟಿಪ್ಪಣಿ ಮತ್ತು ಡೈರಿಗಳನ್ನು ನೋಡಿಕೊಂಡು ಹುಡುಗಿಯರ ಪಾಠಶಾಲೆಗೆ ಬಂದರು. ಅಲ್ಲಿ ಸುಮಾರು ಹದಿನೇಳು ಹದಿನೆಂಟು ಹುಡುಗಿಯರಿದ್ದರು, ಉಪಾಧ್ಯಾಯಿನಿಯ ಹೆಸರು ಸೀತಮ್ಮ, ಆಕೆ ಹಳೆಯ ಕಾಲದ ವಿಧವೆ; ಆದ್ದರಿಂದ ತಲೆಗೆ ಮುಸುಕಿತ್ತು. ಚಿಕ್ಕಂದಿನಲ್ಲಿ ಯಾವಾಗಲೋ ಲೋವರ್ ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದು ತೇರ್ಗಡೆ ಹೊಂದದೆ ಇದ್ದವಳು, ಆಮೇಲೆ ಗಂಡ ಸತ್ತು ಹೊಟ್ಟಿಗೆ ಗತಿಯಿಲ್ಲದೆ, ನೋಡಿಕೊಳ್ಳುವವರಾರೂ ಇಲ್ಲದೆ, ಇದ್ದ ನೆಂಟರು ತಲೆ ಬೋಳಿಸಿದ ಒಂದು ದೊಡ್ಡ ಉಪಕಾರ ಮಾಡಿ ಬೀದೀಗೆ ನೂಕಿದ್ದ ಹೆಂಗಸು ! ಹಿಂದೆ ಲೋವರ್ ಸೆಕೆಂಡರಿವರೆಗೆ ಓದಿದ್ದುದು ಆಕೆಯ ಕಷ್ಟ ಕಾಲಕ್ಕೆ ಸಹಾಯವಾಗಿ ಜೀವನೋಪಾಯಕ್ಕೆ ನೆರವಾಯಿತು. ಆಕೆಗೆ ಸುಮಾರು ಐವತ್ತು ವರ್ಷ ವಯಸ್ಸು.

ಸಾಹೇಬರೂ ರಂಗಣ್ಣನೂ ಒಳಕ್ಕೆ ಹೋಗುತ್ತಲೂ ಆಕೆ ನಮಸ್ಕಾರಮಾಡಿ ಭಯದಿಂದ ನಿಂತು ಕೊಂಡಳು. ಹುಡುಗಿಯರು ಮೌನವಾಗಿ ಎದ್ದು ನಿಂತರು. ಸಾಹೇಬರು ಕುರ್ಚಿಯಮೇಲೆ ಕುಳಿತರು. ಮೇಜಿನ ಮೇಲೆ ಎರಡನೆಯ ಪುಸ್ತಕ ಇತ್ತು. ಅದನ್ನು ನೋಡಿ, 'ಮುಂದಕ್ಕೆ ಪಾಠ ಮಾಡಿ ಎಂದು ಆಕಗೆ ಸಾಹೇಬರು ಹೇಳಿದರು. ಆದರೆ ಆಕೆ ಭಯದಿಂದ ದೂರದಲ್ಲೇ ನಿಂತಿದ್ದಳು. ರಂಗಣ್ಣನು ಎದ್ದು ಆ ಪುಸ್ತಕವನ್ನು ತೆಗೆದು ಕೊಂಡು ಆಕೆಯ ಕೈಯಲ್ಲಿ ಕೊಟ್ಟನು. ಆಕೆ ಪುಸ್ತಕದಿಂದ ಒ೦ದು ವಾಕ್ಯ ವೃಂದವನ್ನು ತಾನು ಓದಿ, ಆಮೇಲೆ ಮಕ್ಕಳಿಂದ ಓದಿಸಿದಳು. ಮಕ್ಕಳು ಸುಮಾರಾಗಿ ಓದಿದರು. ಆಗ ಮಧ್ಯದಲ್ಲಿ ಕೆಲವು ಕಠಿನ ಪದಗಳು ಇದ್ದುವು. ಆಕೆ ಅವುಗಳ ಅರ್ಥವನ್ನು ಕೇಳಿದಳು. 'ಶತ್ರು ಎಂದರೇನು ?' ಎಂದು ಕೇಳಿದಾಗ ಉತ್ತರ ಸರಿಯಾಗಿ ಬರಲಿಲ್ಲ. ಆಗ ಆಕೆ ಸೀಮೆಸುಣ್ಣದಿಂದ ಬೋರ್ಡಿನ ಮೇಲೆ, ಶತೃ= ವೈರಿ ; ಎಂದು ಬರೆದು ಅರ್ಧ ವಿವರಣೆ ಮಾಡಿದಳು. ಸಾಹೇಬರು ಆ ಪಾಠ ಕ್ರಮವನ್ನು ಗಮನವಿಟ್ಟು ನೋಡುತ್ತಿದ್ದವರು ಕೋಪದಿಂದ ಕೆಂಡ ಕ೦ಡವಾಗಿ ರಂಗಣ್ಣನ ಮುಖವನ್ನು ನೋಡಿದರು ! ರಂಗಣ್ಣನು ಆಕೆಗೆ, ಭಯಪಟ್ಟು ಕೊಳ್ಳಬೇಡಿ ಸೀತಮ್ಮ ! ಪುಸ್ತಕ ನೋಡಿಕೊಂಡು ಸರಿಯಾಗಿ ಬರೆಯಿರಿ' ಎಂದು ಸಲಹೆ ಕೊಟ್ಟ ನು ಆ ಇಬ್ಬರು ಸಾಹೇಬರುಗಳ ಎದುರಿನಲ್ಲಿ ಆ ಹೆಣ್ಣು ಹೆಂಗಸಿನ ಇದ್ದ ಬದ್ದ ಧೈರ್ಯವೆಲ್ಲ ಕುಸಿದು ಬಿತ್ತು ! ಆಕೆ ಪುಸ್ತಕವನ್ನೂ ನೋಡಲಿಲ್ಲ ; ಮುಂದೆ ಪಾಠವನ್ನೂ ಮಾಡಲಿಲ್ಲ. ತನ್ನದು ಏನು ತಪ್ಪು ? ಎನ್ನುವುದು, ಆಕೆಗೆ ತಿಳಿಯಲಿಲ್ಲ. ಸಾಹೇಬರು ಕುರ್ಚಿಯಿಂದೆದ್ದು ಹೊರಕ್ಕೆ ಒ೦ದು ಬಿಟ್ಟರು ' ರಂಗಣ್ಣನು ಬೋರ್ಡಿನ ಹತ್ತಿರ ಹೋಗಿ “ ಶತ್ರು' ಎಂದು ಸರಿಯಾಗಿ ಬರೆದು, ಮಕ್ಕಳನ್ನು ಮನೆಗೆ ಬಿಟ್ಟು ಬಿಡಿ, ಹೊತ್ತಾಗಿ ಹೋಯಿತು ' ಎಂದು ಹೇಳಿ ಹೊರಟು ಬಂದನು.

ಮೋಟಾರನ್ನು ಹತ್ತಿ ಕುಳಿತಮೇಲೂ ಸಾಹೇಬರ ಉಗ್ರಕೋಪ ಇಳಿದಿರಲಿಲ್ಲ. ರಂಗಣ್ಣನೇ ಮಾತಿಗಾರ೦ಭಿಸಿ, ' ಏನೋ ಒಂದು ಸಣ್ಣ ತಪ್ಪು ಸಾರ್ ! ತಾವು ಆಷ್ಟೆಲ್ಲ ಕೋಪ ಮಾಡಿಕೊಂಡಿದ್ದೀರಿ ! ದೊಡ್ಡ ದೊಡ್ಡ ಪಂಡಿತರುಗಳೇ ಋಕಾರ ಎಲ್ಲಿ ಬರೆಯಬೇಕೋ' ರ್ ಎಲ್ಲಿ ಬರೆಯಬೇಕೋ ತಿಳಿಯದೆ ತಪ್ಪು ಮಾಡುತ್ತಾರೆ! ಆಕೆ ಹೆಂಗಸು, ವಿಧವೆ ; ಯಾವ ಕಾಲದಲ್ಲಿ ಓದಿದವಳೋ ಏನೋ ' ಎಂದು ಸಮಾಧಾನ ಹೇಳಿದನು.

'ಅವಳು ಪುಸ್ತಕವನ್ನೆ ನೋಡಲಿಲ್ಲ ! ಆ ಪುಸ್ತಕದಲ್ಲಿಯೇ ಆ ಮಾತು ಇದೆ, ಸರಿಯಾಗಿರುವ ಮಾತನ್ನು ತಪ್ಪು ತಪ್ಪಾಗಿ ಹೇಳಿಕೊಡು ತ್ತಾಳೆ. ಸರಿಯಾಗಿ ಸಿದ್ಧತೆ ಮಾಡಿಕೊಂಡು ಸ್ಕೂಲಿಗೆ ಬರುವುದಿಲ್ಲ ! ನೀವೇನು ಅವಳಿಗೆ ಶಿಫಾರಸು ಮಾಡುತ್ತೀರಿ !'

ಒಂದು ವೇಳೆ ತಪ್ಪಿದರೆ ನಾನು ತಿದ್ದುತ್ತೇನೆ. ಉಪಾಧ್ಯಾಯಯರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ನಾವು ತಿದ್ದಬೇಕು.'

ನೀವು ಯಾವಾಗಲೂ ಪಕ್ಕದಲ್ಲಿದ್ದು ಕೊಂಡು ತಿದ್ದುತ್ತೀರೋ? ಪುಸ್ತಕವನ್ನೇ ನೋಡದವರಿಗೆ ಪುಸ್ತಕವನ್ನು ತೆರೆದು ಕೈಗೆ ಕೊಡುತ್ತೀರೋ? ಇವರಿಗೆಲ್ಲ ಏನು ಕೆಲಸ ? ಸರಿಯಾಗಿ ಓದಿಕೊಂಡು ಬಂದು ಪಾಠ ಮಾಡ ಬೇಡವೇ ? ವಿದ್ಯಾಭಿವೃದ್ಧಿಯಿಲ್ಲದೆ ದೇಶ ಹಾಳಾಗಿರುವುದಕ್ಕೆ ಈ ಹಾಳು ಮೇಷ್ಟ್ರುಗಳೇ ಕಾರಣರು! ಸರಿಯಾಗಿ ಪಾಠ ಮಾಡುವುದಿಲ್ಲ ಏನೂ ಇಲ್ಲ! ಯಾವಾಗಲೂ ಕಳ್ಳಾಟ ಆಡುತ್ತಿರುತ್ತಾರೆ !'

ಹೆಚ್ಚು ಸಂಬಳ ತಿನ್ನುವ ದೊಡ್ಡ ದೊಡ್ಡ ಅಧಿಕಾರಿಗಳಿಗೇನೇ ಸರಿಯಾಗಿ ಕನ್ನಡ ಬರೆಯವುದಕ್ಕೆ ಬರದು ! ಆಡುವುದಕ್ಕೆ ಬರದು ! ಈ ದಿನ ನಾನು ಉಕ್ತಲೇಖನ ಹೇಳಿ ಬರೆಸಿದರೆ ತೇರ್ಗಡೆಯಾಗುವ ಅಧಿಕಾರಿಗಳು ಸೇಕಡ ಹತ್ತು ಕೂಡ ಇರುವುದಿಲ್ಲ! ಆ ಬಡವಿ, ವಿಧವೆ, ಹದಿನೇಳು ರೂಪಾಯಿ ಸಂಬಳದ ಹೆಣ್ಣು ಮೇಷ್ಟು ತಮ್ಮ ದೃಷ್ಟಿಯಲ್ಲಿ ದೊಡ್ಡ ಅಪರಾಧಿನಿಯೆ ಸಾರ್ ?'

ನೀವು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದೀರಿ ! ಇಲಾಖೆಯ ದೊಡ್ಡ ಅಧಿಕಾರಿಗಳನ್ನು ಟೀಕಿಸುತ್ತಿದ್ದೀರಿ ! ನಿಮಗೆ ಎಚ್ಚರಿಕೆ ಕೊಡಬೇಕಾಗಿದೆ!

ರಂಗಣ್ಣನಿಗೆ ಒಂದು ಕಡೆ ರೋಷ ಹುಟ್ಟಿತು ; ಇನ್ನೊ೦ದು ಕಡೆ ವ್ಯಸನವಾಯಿತು. ಮೋಟಾರು ನಿಲ್ಲಿಸುವಂತೆ ಹೇಳಿ ಇಳಿದು ಹೊರಟು ಹೋಗಬೇಕೆಂದು ಒಂದು ಕ್ಷಣ ಹೊಳೆಯಿತು, ಇಳಿದುಬಿಟ್ಟರೆ ಜನಾರ್ದನ ಪುರ ಹನ್ನೆರಡು ಮೈಲಿ ದೂರವಿದೆ! ಬೈಸ್ಕಲ್ ಕೂಡ ಹತ್ತಿರ ಇಲ್ಲ. ಹೇಗೆ ಹೋಗುವುದು ? ಜೊತೆಗೆ, ತಾನು ಹಾಗೆ ಇಳಿದು ಬಿಟ್ಟರೆ ಸಾಹೇಬರಿಗೂ ತನಗೂ ಬಹಿರಂಗವಾಗಿ ವ್ಯಾಜ್ಯವೇ ಆಗುತ್ತದೆಯಲ್ಲ ! ಅದರ ಪರಿಣಾಮ ಹೇಗಾಗುವುದೋ ?- ಎಂದು ಆಲೋಚನೆಗಳು ತಲೆದೋರಿ, ಮೌನವೇ ಪರಮೋಪಾಯ ಎಂದು ನಿರ್ಧಾರ ಮಾಡಿ ಕೊಂಡನು. ಮೋಟಾರು ಜನಾರ್ದನಪುರವನ್ನು ಸೇರುವುದಕ್ಕೆ ಅರ್ಧ ಗಂಟೆ ಹಿಡಿಯಿತು. ಆ ಅವಧಿಯಲ್ಲಿ ಹೆಚ್ಚು ಮಾತುಗಳೇನೂ ನಡೆಯಲಿಲ್ಲ. ಸಾಹೇಬರು ಕೇಳಿದ ಪ್ರಶ್ನೆಗಳಿಗೆ, “ ಹೌದು, ಅಲ್ಲ ; ಇದೆ, ಇಲ್ಲ. ಎಂದು ಎರಡಕ್ಷರದ ಉತ್ತರಗಳನ್ನೆ ರಂಗಣ್ಣ ಕೊಟ್ಟು ಕೊಂಡುಬಂದನು. ಬಂಗಲೆಯ ಹತ್ತಿರ ಮೋಟಾರು ನಿಂತಿತು. ಸಾಹೇಬರು, ಮಧ್ಯಾಹ್ನ ಮೂರು ಗಂಟೆಗೆ ಕಚೇರಿಗೆ ಬರುತ್ತೇನೆ. ತನಿಖೆ ಮುಗಿಸಿಕೊಂಡು ಸಾಯಂಕಾಲ ಐದು ಗಂಟೆಗೆ ನಾನು ಹಿಂದಿರುಗಬೇಕು' ಎಂದು ಹೇಳಿ ಇಳಿದರು. 'ಆಗಬಹುದು ಸಾರ್ !' ಎಂದು ಹೇಳಿ ರಂಗಣ್ಣನು ಹೊರಟುಬಂದನು.

ಆ ದಿನ ಬೆಳಗ್ಗೆ ತನಗಾದ ತೇಜೋಭಂಗವನ್ನು ಅವನು ಮನೆಯಲ್ಲಿ ಹೇಳಲಿಲ್ಲ. ತನ್ನ ಹೆಂಡತಿ ನೊಂದುಕೊಳ್ಳುತ್ತಾಳೆ ; ತಾನು ಅರೆ ಹೊಟ್ಟೆ ತಿನ್ನುವುದರ ಜೊತೆಗೆ ಆಕೆಯೂ ಅರೆಹೊಟ್ಟೆ ತಿನ್ನುವುದನ್ನು ನೋಡಬೇಕಾಗುತ್ತದೆ ; ಈ ಸಮಾಚಾರವನ್ನು ತಿಳಿಸುವುದು ಸರಿಯಲ್ಲ - ಎಂದು ತೀರ್ಮಾನಿಸಿ ಕೊಂಡು ಸುಮ್ಮನಾದನು. ಆದರೆ ಹೊಟ್ಟೆಯಲ್ಲಿ ತುಂಬಿದ್ದ ವ್ಯಥೆಯಿಂದ ಅವನು ಸರಿಯಾಗಿ ಊಟ ಮಾಡಲಾಗಲಿಲ್ಲ. ಆ ವ್ಯಧೆಯನ್ನು ಹೊರಕ್ಕೆ ಕಕ್ಕಿದ್ದರೆ ಅನ್ನ ಇಳಿಯುತ್ತಿತ್ತೋ ಏನೋ ! ಅವನ ಹೆಂಡತಿ, ಎಂದಿನಂತೆ ನೀವು ಊಟ ಮಾಡುತ್ತಿಲ್ಲ. ಏಕೆ ?” ಎಂದು ಕೇಳಿದಳು. " ಸಾಹೇಬರ ಜೊತೆಯಲ್ಲಿ ಸರ್ಕಿಟು ಹೋಗಿರಲಿಲ್ಲವೆ ? ನೀನೇಕೆ ಕೇಳುತ್ತೀಯೆ ? ' ಎಂದು ಅವನು ಉತ್ತರ ಕೊಟ್ಟನು, ಸರ್ಕಿಟಿನಲ್ಲಿ ಕಾಫಿ, ಉಪ್ಪಿಟ್ಟು ಬಾಳೆಯ ಹಣ್ಣುಗಳ ನೈವೇದ್ಯ ಆಗಿರಬಹುದೆಂದು ಆಕೆ ತಿಳಿದುಕೊಂಡು, ಸರಿ, ಗೊತ್ತಾಯಿತು. ಕೇಳಿದರೆ ಏನು ತಪ್ಪು? ಎಂದುಬಿಟ್ಟಳು.

ಮಧ್ಯಾಹ್ನ ಸಾಹೇಬರು ಮೂರು ಗಂಟೆಗೆ ಕಚೇರಿಗೆ ಬಂದು ಕುಳಿತರು. ಗುಮಾಸ್ತೆ ನಾರಾಯಣರಾವ್ ತಾನು ಸಿದ್ಧಪಡಿಸಿದ್ದ ಕರಡು ವರದಿಯನ್ನು ಮೇಜಿನಮೇಲೆ ತಂದಿಟ್ಟನು, 'ಸಾದಿಲ್ವಾರ್ ಮೊಬಲಿಗಿನಲ್ಲಿ ಒಂದು ಕಟ್ಟು ಕಾಗದ ಕೊಂಡುಕೊಂಡಿದ್ದಾರೆ. ಇದು ಅಕ್ರಮ. ಕಾಗದದ ಸಪ್ಪೈ ಇವರಿಗೆ ಸ್ಟೇಷನರಿ ಡಿಪೋದಿಂದ ಆಗುತ್ತೆ. ಹಾಗೆ ಒಂದುವೇಳೆ ಕೊಂಡುಕೊಳ್ಳಬೇಕಾಗಿದ್ದಿದ್ದರೆ ನಮ್ಮ ಆಫೀಸಿನ ಅಪ್ಪಣೆ ಪಡೆಯಬೇಕಾಗಿತ್ತು ? – ಎಂದು ಒಂದು ದೊಡ್ಡ ಆಕ್ಷೇಪಣೆ ಇತ್ತು, ಸಾಹೇಬರು, " ಏಕೆ ಹಾಗೆ ಮಾಡಿದಿರಿ ? ನೀವು ರೂಲ್ಸು ತಿಳಿದು ಕೊಳ್ಳಬೇಕು ' ಎಂದು ರಂಗಣ್ಣನಿಗೆ ಹೇಳಿದರು.

ಒಂದು ರೀಮು ಕಾಗದ ಕೊಂಡುಕೊಳ್ಳಬೇಕೆಂದು ತಮ್ಮ ಕಚೇರಿಗೆ ತಿಳಿಸಿ ಅಪ್ಪಣೆ ಕೇಳಿದ್ದೇನೆ. ಸಾರ್ ! ಕಾಗದ ಬರೆದು ಆರು ತಿಂಗಳಾದುವು ; ಎರಡು ರಿಮೈಂಡರುಗಳನ್ನು ಸಹ ಕೊಟ್ಟೆ. ಜವಾಬೇ ಬರಲಿಲ್ಲ, ನಾನೇನು ಮಾಡಲಿ ಸಾರ್ ? ಕಾಗದ ಬಹಳ ಜರೂರಾಗಿ ಬೇಕಾಗಿತ್ತು. ಆದ್ದರಿಂದ ಕೊಂಡು ಕೊಳ್ಳಬೇಕಾಯಿತು. ನನ್ನ ಆಫೀಸು ಕಾರ್ಡುಗಳನ್ನು ತೋರಿಸುತ್ತೇನೆ, ಪರಾಂಬರಿಸಬೇಕು' ಎಂದು ರಂಗಣ್ಣ ಹೇಳಿ, ಶಂಕರಪ್ಪನಿಂದ ದಾಖಲೆಗಳನ್ನು ತರಿಸಿ ತೋರಿಸಿದನು.

ನಿಮಗೆ ಹೆಚ್ಚಿಗೆ ಕಾಗದಕ್ಕೆ ಆವಶ್ಯಕತೆ ಏನು ? ಬೇರೆ ರೇಂಜುಗಳಲ್ಲಿ ಹೀಗೆ ಕೊಂಡುಕೊಂಡಿಲ್ಲ. ?

ಇಲ್ಲಿ ಮೇಷ್ಟು ಗಳಿಗೆ ರೂಲ್ಲುಗಳ ವಿಷಯದಲ್ಲಿ, ಬೋಧನಕ್ರಮ ಮತ್ತು ಸಂವಿಧಾನಗಳ ವಿಷಯದಲ್ಲಿ ತಿಳಿವಳಿಕೆ ಕೊಡುವುದಕ್ಕಾಗಿ ಹಲವು ಸರ್ಕ್ಯುಲರುಗಳನ್ನು ಕಳುಹಿಸಿದ್ದೇನೆ. ಆದ್ದರಿಂದ ಕಾಗದ ಹೆಚ್ಚು ಖರ್ಚಾಯಿತು '- ಎಂದು ಹೇಳಿ ರಂಗಣ್ಣ ಸರ್ಕ್ಯುಲರುಗಳ ಕಟ್ಟನ್ನು ತಂದು ಮುಂದಿಟ್ಟನು.

ಸಾಹೇಬರು ಅವುಗಳನ್ನೆಲ್ಲ ನೋಡಿ, 'ನೀವು ಒಳ್ಳೆಯ ಕೆಲಸ ಮಾಡಿದ್ದೀರಿ ! ನನಗೆ ಬಹಳ ಸಂತೋಷವಾಗುತ್ತದೆ ! ಇವುಗಳ ನಕಲುಗಳಿದ್ದರೆ ಒಂದು ಕಟ್ಟನ್ನು ನನ್ನ ಕಚೇರಿಗೆ ಕಳಿಸಿಕೊಡಿ. ಇತರ ರೇಂಜು ಗಳಲ್ಲಿಯೂ ಹೀಗೆಯೇ ಮಾಡಿಸುತ್ತೇನೆ' - ಎಂದು ಹೇಳಿದರು. ರಂಗಣ್ಣನಿಗೆ ಸಂತೋಷವಾಯಿತು. ಬೆಳಗಿನ ತೇಜೋಭಂಗ ಮುಕ್ಕಾಲು ಭಾಗ ಹೋದ೦ತಾಯಿತು. ತನಿಖೆಯಲ್ಲಿದ್ದ ಇತರ ಅಂಶಗಳು : ಮೇಷ್ಟ್ರುಗಳ ಸರ್ವಿಸ್ ರಿಜಿಸ್ಟರುಗಳಲ್ಲಿ ದಾಖಲೆಗಳನ್ನು ಪೂರ್ತಿಯಾಗಿ ಬರೆದಿಲ್ಲ ; ಕೆಲವು ಕಡೆ ಇನ್ ಸ್ಪೆಕ್ಟರ ರುಜುಗಳಿಲ್ಲ ; ಪಾಠಶಾಲೆಗಳ ಕಟ್ಟಡಗಳ ನಕ್ಷೆಗಳು ಕೆಲವು ಕಡೆ ಇಲ್ಲ ; ರಿಪೇರಿಗಳು ಯಾವಾಗ ಆದುವು ? ಖರ್ಚು ಎಷ್ಟಾಯಿತು ? ಮುಂತಾದ ವಿವರಗಳನ್ನು ಬರೆದಿಲ್ಲ - ಇತ್ಯಾದಿ. ರಂಗಣ್ಣನು ಹಲವಕ್ಕೆ ಸಮಾಧಾನಗಳನ್ನು ಹೇಳಿದಮೇಲೆ ಕರಡು ಪ್ರತಿಯಲ್ಲಿದ್ದ ಹಲವು ಅಂಶಗಳನ್ನು ಸಾಹೇಬರು ಹೊಡೆದು ಹಾಕಿಬಿಟ್ಟರು. ರಂಗಣ್ಣನಿಗೆ ಸಾಹೇಬರು ಕಟ್ಟುನಿಟ್ಟಿನವರೂ ಜಬರ್ದಸ್ತಿನವರೂ ಎಂದು ಕಂಡು ಬಂದರೂ ಅವರು ಸ್ವಲ್ಪ ಮಟ್ಟಿಗೆ ಗುಣಗ್ರಾಹಿಗಳೂ ಆಗಿದ್ದಾರೆಂದು ಸಮಾಧಾನವಾಯಿತು. ತನಿಖೆಯನ್ನೆಲ್ಲ ಮುಗಿಸಿಕೊಂಡು ಸಾಹೇಬರು ಮೋಟಾರನ್ನು ಹತ್ತಿದರು. ನಾನೀಗ ಹೆಡ್ ಕ್ವಾರ್ಟರಿಗೆ ಹಿಂದಿರುಗುತ್ತೇನೆ, ಪುನಃ ನಿಮ್ಮ ರೇಂಜಿಗೆ ಬರುತ್ತೇನೋ ಇಲ್ಲವೋ ತಿಳಿಯದು. ಬೇರೆ ಕಡೆಗೆ ವರ್ಗವಾಗುವ ನಿರೀಕ್ಷಣೆಯಿದೆ. ನೀವಿನ್ನೂ ಯುವಕರು ;ಸ್ವಲ್ಪ ಟ್ಯಾಕ್ಟ್ ಕಲಿತುಕೊಳ್ಳಿ; ಮುಂದೆ ದೊಡ್ಡ ಹುದ್ದೆಗೆ ಬರಬಹುದು. ಎಂದು ಹೇಳಿ ರಂಗಣ್ಣನ ಕೈ ಕುಲುಕಿ ಹೊರಟು ಹೋದರು.

ರಂಗಣ್ಣ ಮನೆಗೆ ಹಿಂದಿರುಗಿದಮೇಲೆ ಆ ದಿನ ಬೆಳಗ್ಗೆಯಿಂದ ಸಾಯಂಕಾಲದವರೆಗೂ ನಡೆದ ಎಲ್ಲ ಘಟನೆಗಳನ್ನೂ ಹೆಂಡತಿಗೆ ತಿಳಿಸಿದನು. ಆಕೆ, 'ಇಷ್ಟು ವರ್ಷಗಳಿಂದ ನಿಮ್ಮೊಡನೆ ಸಂಸಾರ ನಡೆಸುತಿದ್ದೇನೆ ! ನಿಮ್ಮ ಮರ್ವ ನಾನರಿಯೆನೇ ! ಬೆಳಗ್ಗೆ ನಿಮ್ಮ ಮುಖ ಸಪ್ಪಗಿತ್ತು ! ಅದಕ್ಕೋಸ್ಕರವೇ ನಾನು ಕೇಳಿದ್ದು, ಈಗ ನಿಮ್ಮ ಮುಖ ಎಂದಿನಂತೆ ಕಳಕಳಿಸುತ್ತಿದೆ' ಎಂದು ಹೇಳುತ್ತ, ಕಾಫಿ ತುಂಬಿದ ಬೆಳ್ಳಿಯ ಲೋಟವನ್ನು ಮುಂದಿಟ್ಟಳು.

ಪ್ರಕರಣ ೧೬

ತಿಪ್ಪೇನಹಳ್ಳಿಯ ಮೇಷ್ಟ್ರು

ಕೆಲವು ದಿನಗಳ ತರುವಾಯ ಕಿತ್ತೂರಿನ ಸೈಮರಿ ಸ್ಕೂಲಿನ ವಿಚಾರದಲ್ಲಿ ಬದಲಾವಣೆಗಳಾದುವು. ಕಟ್ಟಡವನ್ನು ರಿಪೇರಿ ಮಾಡಿ ಕೊಟ್ಟಿಲ್ಲದ ಕಾರಣದಿಂದಲೂ, ಅಲ್ಲಿ ಪ್ಲೇಗಿನ ಇಲಿ ಬಿದ್ದು ಸರಿಯಾಗಿ ಡಿಸಿನ್ಫೆಕ್ಷನ್ ಮಾಡಲಾಗುವುದಿಲ್ಲವೆಂದು ವೈಸ್ ಪ್ರಸಿಡೆಂಟರು ಬರೆದಿರುವ ಕಾರಣದಿಂದಲೂ ಆ ಕಟ್ಟಡವನ್ನು ಖಾಲಿ ಮಾಡಲಾಗಿದೆ ಎಂದು ಕಲ್ಲೇಗೌಡರಿಗೆ ನೊಟೀಸನ್ನು ರಂಗಣ್ಣ ಕೊಟ್ಟು ಬಿಟ್ಟನು. ಮರದ ಸಾಮಾನುಗಳು, ಮೊದಲಾದುವನ್ನೆಲ್ಲ ಡಾಕ್ಟರ ಅಭಿಪ್ರಾಯವನ್ನನುಸರಿಸಿ ಚೊಕ್ಕಟ ಮಾಡಬೇಕೆಂದೂ ಅನಂತರ ಅವುಗಳನ್ನು ಮಿಡಲ್ ಸ್ಕೂಲಿನ ಕಟ್ಟಡಕ್ಕೆ ಸಾಗಿಸಿ ಪಾಠಶಾಲೆಯನ್ನು ಒಪ್ರೊತ್ತು ಮಾತ್ರ ಆ ಕಟ್ಟಡದಲ್ಲಿ ಏಳೂವರೆ ಯಿಂದ ಹನ್ನೊಂದರವರೆಗೆ ಮಾಡಬೇಕೆಂದೂ ಆ ಪಾಠಶಾಲೆಯ ಹೆಡ್ಮಾಸ್ಟರಿಗೆ ಕಾಗದ ಬರೆದನು. ಅದರಂತೆ ಆ ಕಟ್ಟಡ ಖಾಲಿಯಾಗಿ ಪ್ರೈಮರಿ ಸ್ಕೂಲು ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಕೆಲಸಮಾಡಲು ಪ್ರಾರಂಭವಾಯಿತು. ಆ ಊರಿನ ಜನರೆಲ್ಲ ಆಶ್ಚರ್ಯಪಡುತ್ತ, 'ಗಂಡು ಇನ್ ಸ್ಪೆಕ್ಟರು ! ಕಲ್ಲೇಗೌಡನಿಗೆ ತಕ್ಕ ಶಾಸ್ತಿ ಮಾಡಿ ಬಿಟ್ಟರು ! ಅವನ ಮಾತಿಗೆ ಹೋಗದೆ ಹಿ೦ದಿನವರೆಲ್ಲ ಹೆದರಿಕೊಂಡು ಸಾಯುತ್ತಿದ್ದ ರು. ಈಗ ಇವರು ಧೈರ್ಯ ಮಾಡಿ ಕಟ್ಟಡವನ್ನು ಖಾಲಿ ಮಾಡಿಯೇ ಬಿಟ್ಟರಲ್ಲ ! ಎಂದು ಬೀದಿ ಬೀದಿಗಳಲ್ಲಿ ನಿಂತು ಆಡಿಕೊಳ್ಳತ್ತಿದ್ದರು. ತನ್ನ ಕಟ್ಟಡ ಖಾಲಿಯಾಯಿತೆಂದೂ ಮುಂದೆ ಬಾಡಿಗೆ ಬರುವುದಿಲ್ಲವೆಂದೂ ಕಲ್ಲೇಗೌಡನಿಗೆ ತಿಳಿದಾಗ ಆತನಿಗೆ ಉಗ್ರ ಕೋಪ ಬಂದು, 'ಈ ಇನ್ಸ್ಪೆಕ್ಟರ ಹುಟ್ಟಡಗಿಸಿಬಿಡುತ್ತೇನೆ ! ನನ್ನನ್ನು ಯಾರು ಎಂದು ತಿಳಿದು ಕೊಂಡಿದ್ದಾನೆ ಇವನು ! ಡೆಪ್ಯುಟಿ ಕಮಿಷನರ್‌ ಮತ್ತು ರೆವಿನ್ಯೂ ಕಮಿಷನರುಗಳೇ ನನಗೆ ಹೆದರುತ್ತಿರುವಾಗ ಈ ಚಿಲ್ಲರೆ ಇಸ್ಕೊಲ್ ಇನ್ಸ್ಪೆಕ್ಟರು ನನ್ನ ಮೇಲೆ ಕೈ ಮಾಡೋಕ್ಕೆ ಬಂದಿದ್ದಾನೆ! ಆಗಲಿ ! ಎಂದು ಗರ್ಜಿಸಿದನಂತೆ, ಹೀಗೆ ನಿಷ್ಕಾರಣವಾಗಿ ಪ್ರಬಲ ವಿರೋಧವೊಂದು ರಂಗಣ್ಣನಿಗೆ ಗಂಟು ಬಿತ್ತು.

ಇನ್ನೊಂದು ಕಡೆ ಕರಿಯಪ್ಪನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪು ನಿಂತು ಹೋಗಿತ್ತಷ್ಟೆ. ಸಾಹೇಬರ ಅಪ್ಪಣೆಪ್ರಕಾರ ಹಾಗೆ ನಿಂತು ಹೋಗಿದ್ದ ಸ್ಕಾಲರ್ ಷಿಪ್ಪನ್ನು ಈಚೆಗೆ ಬೇರೆ ಹುಡುಗನಿಗೆ ಕೊಟ್ಟಿದ್ದಾಯಿತು. ಸ್ಕಾಲರ್ ಷಿಪ್ಪು ನಿಂತುಹೋಗಿದ್ದ ಲಾಗಾಯಿತು ಕರಿಯಪ್ಪನಿಗೆ ಇನ್ ಸ್ಪೆಕ್ಟರ ಮೇಲೆ ದ್ವೇಷವಿದ್ದೇ ಇತ್ತು. ಆದರೆ ನಿಲ್ಲಿಸಿದ್ದ ಸ್ಕಾಲರ್ ಷಿಪ್ಪನ್ನು ತನಗೆ ಹೆದರಿಕೊಂಡು ಪುನಃ ತನ್ನ ಅಣ್ಣನ ಮಗನಿಗೇನೇ ಕೊಟ್ಟು ಬಿಡಬಹುದು ಎಂಬ ಒಂದು ನಿರೀಕ್ಷಣೆ ಇತ್ತು. ಆದರೆ ಈಗ ಆ ಸ್ಕಾಲರ್ ಷಿಪ್ಪು ಅರ್ಜಿದಾರನ ಮಗನಿಗೆ ಸಂದಾಯವಾಯಿತು ; ತನ್ನ ಅಣ್ಣನ ಮಗನಿಗೆ ತಪ್ಪೇ ಹೋಯಿತು. ಈ ಕಾರಣದಿಂದ ಕರಿಯಪ್ಪನಿಗೂ ರಂಗಣ್ಣನ ಮೇಲೆ ಬಲವಾಗಿ ದ್ವೇಷ ಬೆಳೆಯಿತು. ಆದರೆ ಆತ ಏನೊಂದು ಗರ್ಜನೆಗಳನ್ನೂ ಮಾಡದೆ ದಿವಾನರಿಗೆ ಕಾಗದವನ್ನು ಬರೆದುಬಿಟ್ಟನಂತೆ!

ಕೆಲವು ದಿನಗಳಾದಮೇಲೆ ಸಾಹೇಬರ ತನಿಖೆಯ ಮತ್ತು ಭೇಟಿಗಳ ಟಿಪ್ಪಣಿಗಳು ಬಂದುವು. ಕಚೇರಿಯ ವಿಚಾರದಲ್ಲೂ ರಂಗಣ್ಣನ ಕೆಲಸದ ವಿಚಾರದಲ್ಲಿ ಹೆಚ್ಚು ಆಕ್ಷೇಪಣೆ ಇರಲಿಲ್ಲ; ಕೆಲವು ಮೆಚ್ಚಿಕೆಯ ಮಾತುಗಳೇ ಇದ್ದು ವು. ಆದರೆ ಪಾಠ ಶಾಲೆಗಳ ವಿಚಾರದಲ್ಲಿ ಸಾಹೇಬರು ಬಹಳ ಕಠಿನ ಚಿತ್ತರಾಗಿ ಯೂ ಬಹಳ ದುಡುಕಿಯೂ ಆಜ್ಞೆಗಳನ್ನು ಮಾಡಿದ್ದಾರೆಂದು ರಂಗಣ್ಣನು ಬಹಳ ವ್ಯಥೆಪಟ್ಟನು. ದಾಖಲೆಯಲ್ಲಿಲ್ಲದ ಮಕ್ಕಳನ್ನು ಪಾಠಶಾಲೆಯಲ್ಲಿ ಕೂಡಿಸಿಕೊಂಡಿದ್ದ ತಿಪ್ಪೇನಹಳ್ಳಿಯ ಮೇಷ್ಟರಿಗೆ ಮೂರು ರುಪಾಯಿ, ಮತ್ತು ಶತ್ರು' ಎಂಬ ಪದವನ್ನು 'ಶತೃ' ಎಂದು ಬರೆದಿದ್ದ ಸೀತಮ್ಮನಿಗೆ ಮೂರು ರುಪಾಯಿ ಜುಲ್ಮಾನೆಗಳನ್ನು ಹಾಕಿದ್ದರು ! ಸುಂಕೇನಹಳ್ಳಿಯ ಮೇಷ್ಟು ಹಳ್ಳಿಯಲ್ಲೇ ವಾಸಮಾಡಬೇಕೆಂದೂ ಹಳ್ಳಿಯಲ್ಲಿ ಮನೆಗಳಿರುವುದು ಸ್ಪಷ್ಟವಾಗಿರುವುದೆಂದೂ ತಿಳಿಸಿ, ಆ ಬಗ್ಗೆ ಇನ್ಸ್ಪೆಕ್ಟರು ಹಿಂದೆ ಕಳಿಸಿದ್ದ ದಾಖಲೆಗಳು ಕಚೇರಿಯಲ್ಲಿ ದೊರೆಯದ್ದರಿಂದ ದುಯ್ಯಂ ಪ್ರತಿಗಳನ್ನು ಮಾಡಿ ಕಳಿಸಬೇಕೆಂದೂ ಆಜ್ಞೆ ಮಾಡಿದ್ದರು. ಮೇಲಿನವರ ಅಪ್ಪಣೆಗಳನ್ನು ಪಾಲಿಸದಿದ್ದರೆ ಮಹಾಪ ರಾಧವಾಗುವುದರಿಂದ ಆಯಾ ಮೇಷ್ಟರುಗಳಿಗೆ ಸಾಹೇಬರ ಟಿಪ್ಪಣಿಗಳನ್ನು ಕಳಿಸಿದ್ದಾಯಿತು. ಸ್ವಲ್ಪ ತಪ್ಪಿಗೆಲ್ಲ ಹೀಗೆ ಬಡಮೇಷ್ಟರುಗಳ ಹೊಟ್ಟೆಯಮೇಲೆ ಹೊಡೆದರೆ ಹೇಗೆ ? ಎಂದು ಚಿಂತಾಕ್ರಾಂತನಾಗಿ ರಂಗಣ್ಣನು ಎರಡು ದಿನ ಪೇಚಾಡಿದನು.

ಕೆಲವು ದಿನಗಳ ತರುವಾಯ ರಂಗಣ್ಣ ಸ್ಕೂಲುಗಳ ಭೇಟಿಗೆಂದು ಹೊರಟನು. ತಿಪ್ಪೇನಹಳ್ಳಿಯ ಮೇಷ್ಟು ನಿಜವಾಗಿಯೂ ರೂಲ್ಸಿಗೆ ವಿರುದ್ಧವಾಗಿ ನಡೆಯುತ್ತಿದಾನೆಯೆ ? ಇನ್ನೂ ಇತರರು ಯಾರು ಹಾಗೆ ದಾಖಲೆಯಿಲ್ಲದ ಮಕ್ಕಳನ್ನು ಸೇರಿಸಿಕೊಂಡಿದ್ದಾರೆ ? ನೋಡೋಣ ಎಂದು ಆಲೋಚಿಸುತ್ತ ತಿಪ್ಪೇನಹಳ್ಳಿಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಹೋದನು. ರಂಗಣ್ಣ ಬೈ ಸ್ಕೂಲ್ಲಿಂದ ಇಳಿದು, ಅದನ್ನು ಗೋಡೆಗೆ ಒರಗಿಸಿದನು. ಮೇಷ್ಟು ವೆಂಕಣ್ಣ ಭಯದಿಂದ ನಡುಗುತ್ತ ಹೊರಕ್ಕೆ ಬಂದು ನಮಸ್ಕಾರ ಮಾಡಿದನು. ಪಾಠ ಶಾಲೆಯ ಗೋಡೆಗೆ ನೋಟೀಸ್ ಬೋರ್ಡ್ ಒಂದನ್ನು ತಗುಲು ಹಾಕಿತ್ತು. ನೋಟೀಸು ಬೋರ್ಡಿನ ಮೇಲೆ, (೧) ಮಕ್ಕಳು ಸರಿಯಾದ ಹೊತ್ತಿಗೆ ಬರಬೇಕು. (೨) ಪಾಠ ಕಾಲದಲ್ಲಿ ಗ್ರಾಮಸ್ಥರು ಒಳಕ್ಕೆ ಬರಕೂಡದು. (೩) ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುವುದಿಲ್ಲ. (೪) ಸ್ಕೂಲಿನ ಒಪ್ಪಾರದಲ್ಲಿ ಗ್ರಾಮಸ್ಥರು ಯಾರೂ ಕುಳಿತು ಗಲಾಟೆ ಮಾಡಕೂಡದು- ಎಂದು ದಪ್ಪಕ್ಷರಗಳಲ್ಲಿ ಬರೆದಿತ್ತು. ರಂಗಣ್ಣ ಅವುಗಳನ್ನೆಲ್ಲ ನೋಡಿ ತೃಪ್ತಿಪಟ್ಟುಕೊಂಡನು. 'ಮೇಷ್ಟೆ ! ಹಿಂದೆ ಸಾಹೇಬರು ಬಂದಾಗ ಈ ನೋಟೀಸ್ ಬೋರ್ಡನ್ನು ಇಲ್ಲಿ ಹಾಕಿರಲಿಲ್ಲವೇ ?” ಎಂದು ಕೇಳಿದನು.

ಹಾಕಿದ್ದೆ ಸ್ವಾಮೀ ! ಎಲ್ಲವನ್ನೂ ಹಾಕಿದ್ದೆ ! ಏನು ಹಾಕಿದ್ದರೆ ಏನು ? ನನ್ನ ಗ್ರಹಚಾರ ! ತಮ್ಮ ಜುಲ್ಮಾನೆ ಆರ್ಡರು ನಿನ್ನೆ ನನ್ನ ಕೈಗೆ ತಲುಪಿತು ಸ್ವಾಮಿ ! ಅದನ್ನು ನೋಡಿ ಎದೆಯೊಡೆದು ಹೋಯಿತು. ಅನ್ನ ನೀರು ಮುಟ್ಟಿದ್ದರೆ ಕೇಳಿ ! ಆ ಸೂರ್ಯ ನಾರಾಯಣನ ಆಣೆ !

“ಹೌದು ಮೇಷ್ಟೇ ! ತಪ್ಪು ಮಾಡುತ್ತೀರಿ, ಜುಲ್ಮಾನೆ ಬೀಳುತ್ತದೆ. ನೋಟೀಸು ಹಾಕಿದ್ದೀರಿ, ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುತ್ತೀರಿ! ಸಾಹೇಬರು ತಾನೆ ಏನು ಮಾಡುತ್ತಾರೆ ? ನಾನು ತಾನೇ ಏನು ಮಾಡಬಲ್ಲೆ?'

'ಹಾಗೆಲ್ಲ ನಾನು ಮಕ್ಕಳನ್ನು ಸೇರಿಸುತ್ತಿಲ್ಲ ಸ್ವಾಮಿ ! ಪರಾಂಬರಿಸಬೇಕು. ಹಳ್ಳಿಯವರನ್ನು ಕೇಳಿ ನೋಡಿ ಸ್ವಾಮಿ ! ಆ ಜನರ ನಿಷ್ಟುರವನ್ನೆಲ್ಲ ತಲೆಗೆ ಕಟ್ಟಿಕೊಂಡು ರೂಲ್ಕು ಪ್ರಕಾರ ಕೆಲಸ ಮಾಡುತ್ತಿದೇನೆ. ಮುಖ್ಯ, ನನಗೆ ಗ್ರಹಚಾರ ಕಾಲ ! ಮೇಲಿಂದ ಮೇಲೆ ಕಷ್ಟ ಗಳೂ ದುಃಖಗಳೂ ತಲೆಗೆ ಕಟ್ಟುತ್ತಿವೆ' ಎಂದು ಅಳುತ್ತಾ ಮೇಷ್ಟು ಪಂಚೆಯ ಸೆರಗಿನಿಂದ ಕಣ್ಣೀರನೊರಸಿಕೊಳ್ಳುತ್ತಿದ್ದನು. ಮೇಷ್ಟು ಬೂಟಾಟಿಕೆ ಮಾಡುತಿದ್ದಾನೋ ಏನೋ ! ಎಂದು ರಂಗಣ್ಣನಿಗೆ ಸಂಶಯವುಂಟಾಯಿತು. ಒಳಕ್ಕೆ ಹೋಗಿ ಕುರ್ಚಿಯ ಮೇಲೆ ಕುಳಿತು ಕೊಂಡನು. ಹಾಜರಿ ರಿಜಿಸ್ಟರನ್ನು ಕೈಗೆ ತೆಗೆದುಕೊಂಡು ಹಾಜರಿಗಳನ್ನು ಎಣಿಸಿದನು ; ಹಾಜರಿದ್ದ ಮಕ್ಕಳ ಸಂಖ್ಯೆ ಯನ್ನೂ ಎಣಿಸಿದನು ; ತಾಳೆಯಾಗಲಿಲ್ಲ ! ಇಬ್ಬರು ಮಕ್ಕಳು ಹೆಚ್ಚಾಗಿದ್ದಂತೆ ಕಂಡಿತು. ಪುನಃ ಹಾಜರಿ ಎಣಿಸಿ, ಮಕ್ಕಳನ್ನು ನಿಧಾನವಾಗಿ ನೋಡುತ್ತ ಎಣಿಸತೊಡಗಿದನು. ಇಬ್ಬರು ಹೆಚ್ಚಾಗಿಯೇ ಇದ್ದರು ! ಬಳಿಕ ಒಬ್ಬೊಬ್ಬರ ಹೆಸರನ್ನೂ ಕರೆದು ಅವರು ಹಾಜರಿ ಹೇಳುತ್ತಲೂ ಆ ಮಕ್ಕಳನ್ನು ಹೊರಕ್ಕೆ ಆಟಕ್ಕೆ ಬಿಡುತ್ತಾ ಬಂದನು. ಕಡೆಗೆ ಹಾಜರಿ ಮುಗಿಯಿತು. ಒಂದು ಹುಡುಗಿ ಮತ್ತು ಒಬ್ಬ ಹುಡುಗ ಉಳಿದು ಕೊಂಡರು ! ರಂಗಣ್ಣನಿಗೆ ಸ್ವಲ್ಪ ಕೋಪ ಬಂತು.

ಮೇಷ್ಟೇ ! ಇದೇಕೆ ಸುಳ್ಳು ಹೇಳುತ್ತೀರಿ? ಈ ಇಬ್ಬರು ಮಕ್ಕಳು ದಾಖಲೆಯಲ್ಲಿಲ್ಲವಲ್ಲ ! ಅಲ್ಲದೆ ವಯಸ್ಸು ಕೂಡ ಚಿಕ್ಕದು. ಇವರನ್ನೇಕೆ ಕೂಡಿಸಿಕೊಂಡಿದ್ದೀರಿ ? '

ಸ್ವಾಮಿ ! ಅವು ನನ್ನ ಮಕ್ಕಳು ! ” ಎಂದು ಹೇಳುತ್ತಾ ಮೇಷ್ಟ್ರು ಗಟ್ಟಿಯಾಗಿ ಅಳುವುದಕ್ಕೆ ತೊಡಗಿದನು,

ನಿಮ್ಮ ಮಕ್ಕಳಿರಬಹುದು. ಮನೆಯಲ್ಲಿ ಬಿಡದೆ ಇಲ್ಲೇಕೆ ತಂದು ಕೂಡಿಸಿಕೊಂಡಿದ್ದೀರಿ ? ರೂಲ್ಸಿಗೆ ವಿರುದ್ಧವಲ್ಲವೇ ??

ಇನ್ನೇನು ಮಾಡಲಿ ಸ್ವಾಮಿ ! ಆ ಮಕ್ಕಳು ತಬ್ಬಲಿಯಾಗಿ ಹೋದುವಲ್ಲ ! ತಾಯಿಯಿಲ್ಲವೇ ! ಆವನ್ನು ಎಲ್ಲಿ ಬಿಟ್ಟು ಬರಲಿ ? ಎರಡು ತಿಂಗಳ ಹಿಂದೆ ಈ ಹಳ್ಳಿಯಲ್ಲೇ ನನ್ನ ಹೆಂಡತಿ ಸತ್ತು ಹೋದಳು. ಈ ಪಾಪಿಷ್ಠ ಕೈಯಿಂದಲೇ ಚಿತೆ ಹಚ್ಚಿ ಭಸ್ಮಮಾಡಿ ಬಂದೆನಲ್ಲ ! ಮನೆಯಲ್ಲಿ ನೋಡಿ ಕೊಳ್ಳುವವರು ಯಾರೂ ಗತಿಯಿಲ್ಲ ! ಎಳೆಯ ಮಕ್ಕಳು ! ಎಲ್ಲಿ ಬಿಟ್ಟು ಬರಲಿ ಸ್ವಾಮಿ ??

ರಂಗಣ್ಣನ ಮುಖ ಜೋತುಬಿತ್ತು. ಕಣ್ಣುಗಳಲ್ಲಿ ನೀರು ತುಂಬಿಕೊಂಡುವು. ಮಾತು ಹೊರಡಲಿಲ್ಲ. ಒಂದು ಕ್ಷಣದಲ್ಲಿ ತನ್ನ ಸಂಸಾರದ - ಹೆಂಡತಿ ಮತ್ತು ಮಕ್ಕಳ – ದೃಶ್ಯ ಕಣ್ಣಿಗೆ ಕಟ್ಟಿತು. ತಾಯಿಯೆಂಬುವ ವಸ್ತು ವಿಲ್ಲದಿದ್ದರೆ ಸಣ್ಣ ಮಕ್ಕಳ ಗತಿಯೇನು ! ತನ್ನ ಗೃಹಲಕ್ಷ್ಮಿ ಇಲ್ಲದಿದ್ದರೆ ತನ್ನ ಮಕ್ಕಳ ಗತಿಯೇನು ! ದೇವರೇ ! ಸಾಹೇಬರು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವೇ ಇಲ್ಲ ! ಈ ಜುಲ್ಮಾನೆಯ ಪಾಪ ಅವರನ್ನು ಹೊಡೆಯದೇ ಬಿಡದು !' ಎಂದುಕೊಂಡನು.

ಮೇಷ್ಟೇ ! ಆ ದಿನ ನೀವು~ ಇವರು ನನ್ನ ಮಕ್ಕಳು, ತಬ್ಬಲಿಗಳು ಎಂದು ಸಾಹೇಬರಿಗೆ ಏಕೆ ತಿಳಿಸಲಿಲ್ಲ ?

ಸ್ವಾಮಿ! ಇದ್ದಕ್ಕಿದ್ದ ಹಾಗೆ ರಸ್ತೆಯಲ್ಲಿ ಮೋಟಾರು ಬಂದು ನಿಂತಿತು. ಸರಸರನೆ ಪರಂಗಿ ಟೋಪಿಯವರೊಬ್ಬರು ಒಳಕ್ಕೆ ಬಂದುಬಿಟ್ಟರು ! ಕುರ್ಚಿಯಮೇಲೆ ಕೂಡ ಕುಳಿತುಕೊಳ್ಳಲಿಲ್ಲ. ಅವರು ಸಾಹೇಬರೆಂಬುದೇ ನನಗೆ ತಿಳಿಯಲಿಲ್ಲ! ಹಾಜರಿ ಎಷ್ಟು ? ಎಂದು ಕೇಳಿದರು. ಮುವ್ವತ್ತು ನಾಲ್ಕು ಸ್ವಾಮಿ-ಎಂದು ಹೇಳಿದೆ. ಹಾಗೆಯೇ ಹುಡುಗರನ್ನು ಎಣಿಸಿ ಮುವ್ವತ್ತಾರು ಮಕ್ಕಳಿದ್ದಾರೆ ; ಹೆಚ್ಚಿಗೆ ಇರುವವರನ್ನು ಹೊರಕ್ಕೆ ಕಳಿಸಿ ಎಂದು ಕೋಪದಿಂದ ಹೇಳಿದರು. ನಾನು ನನ್ನ ಮಕ್ಕಳಿಗೆ- ಹೊರಕ್ಕೆ ಹೋಗಿ ಎಂದು ಹೇಳಿದೆ ಸ್ವಾಮಿ ! ಸಾಹೇಬರನ್ನು ನೋಡಿ ಮೊದಲೇ ಭಯಪಟ್ಟಿದ್ದು ವು ಮಕ್ಕಳು ! ಹೊರಕ್ಕೆ ಹೋಗುವ ಬದಲು ನನ್ನ ಹತ್ತಿರ ಬಂದು ನಿಂತುಕೊಂಡುವು ! ತಾಯಿ ಕೈ ಬಿಟ್ಟು ಹೋದ ಮಕ್ಕಳು ಸ್ವಾಮಿ ! ತಂದೆಯನ್ನು ಅಂಟಿಕೊಂಡಿರದೆ ಹೇಗೆ ಹೋಗುತ್ತವೆ ? ಹೇಳಿ, ಮಕ್ಕಳನ್ನೆಲ್ಲ ಆಟಕ್ಕೆ ಬಿಟ್ಟಿದ್ದರೆ ಅವರೂ ಬುಡಬುಡನೆ ಓಡಿಹೋಗುತ್ತಿದ್ದರು ! ಅಷ್ಟರಲ್ಲಿ ಸಾಹೇಬರು ಗಿರಕ್ಕನೆ ತಿರುಗಿಕೊಂಡು ಹೊರಟುಬಿಟ್ಟರು. ನಾನು-ಸ್ವಾಮಿ ! ಇವು ನನ್ನ ಮಕ್ಕಳು !!ತಬ್ಬಲಿಗಳು !~ ಎಂದು ಹೇಳುತ್ತಾ ಹಿಂದೆ ಹೋದೆ. ಅವರು ಏನನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ - ಸ್ಕೂಲು ಬಿಟ್ಟು ಬರಬೇಡಿ, ಹೋಗಿ, ಪಾಠ ಮಾಡಿ~ ಎಂದು ಗದರಿಸಿ ಮೋಟಾರಿನಲ್ಲಿ ಹೊರಟೇ ಹೋದರು ಸ್ವಾಮಿ ! ನಾನೇನು ಮಾಡಲಿ ? ನನ್ನ ಹಣೆಯ ಬರೆಹ ! ಹೆಂಡತಿ ಸತ್ತದ್ದಕ್ಕೆ ಅಳಲೇ ? ಮಕ್ಕಳು ತಬ್ಬಲಿಗಳಾಗಿ ಅನ್ನ ನೀರು ಕಾಣದೆ ಒದ್ದಾಡುವುದಕ್ಕೆ ಅಳಲೇ ? ಸಾಹೇಬರು ಕೋಪ ಮಾಡಿಕೊಂಡು ಜುಲ್ಮಾನೆ ಹಾಕಿದ್ದಕ್ಕೆ ಅಳಲೇ ? ನಾನು ಯಾವ ದೇವರ ಹತ್ತಿರ ಹೋಗಿ ನನ್ನ ಮೊರೆಯನ್ನು ಹೇಳಿಕೊಳ್ಳಲಿ ?'

“ಮೇಷ್ಟೇ ! ಆಳಬೇಡಿ. ಸಮಾಧಾನ ಮಾಡಿಕೊಳ್ಳಿ ; ಧೈರ್ಯ ತಂದುಕೊಳ್ಳಿ. ನನ್ನ ಕೈಗೊಂದು ಅರ್ಜಿಯನ್ನು ಕೊಡಿ. ವಿವರಗಳನ್ನೆಲ್ಲ ತಿಳಿಸಿ ದಯವಿಟ್ಟು ಜುಲ್ಮಾನೆಯನ್ನು ವಜಾ ಮಾಡಿಸಬೇಕು-ಎಂದು ಬರೆಯಿರಿ. ನಾನು ಶಿಫಾರಸು ಮಾಡುತ್ತೇನೆ. ನಿಮ್ಮ ಅದೃಷ್ಟ ಒಳ್ಳೆಯದಾಗಿದ್ದರೆ ಜುಲ್ಮಾನೆ ವಜಾ ಆಗುತ್ತದೆ.'

ನನ್ನ ಅದೃಷ್ಟ ಕಾಣುತ್ತಿದೆಯಲ್ಲ ಸ್ವಾಮಿ | ಏಳರಾಟ ಶನಿ ಹೊಡೆದು ಅಪ್ಪಳಿಸುತ್ತಿದೆ! ಇಲ್ಲದಿದ್ದರೆ ಹೀಗೆ ನಾನಾ ಭಂಗಪಡುತ್ತಿದ್ದೆನೇ ನಾನು? ನನ್ನ ಹೆಂಡತಿ ಸತ್ತ ದಿನ ನನ್ನ ಗೋಳು ಕೇಳಬೇಕೆ? ಆ ಹೆಣ ಸಾಗಿಸುವುದಕ್ಕೆ ಬ್ರಾಹ್ಮಣ ಜನ ಈ ಹಳ್ಳಿಯಲ್ಲಿಲ್ಲ. ಹೆಡ್ ಮೇಷ್ಟ್ರು ವೆಂಕಟಸುಬ್ಬಯ್ಯನವರಿಗೆ ವರ್ತಮಾನ ಕಳಿಸಿಕೊಟ್ಟೆ, ಪುಣ್ಯಾತ್ಮರು ಐವತ್ತು ರುಪಾಯಿ ಗಂಟು ಕಟ್ಟಿಕೊಂಡು ಜನರನ್ನೂ ಪುರೋಹಿತನನ್ನೂ ಕರೆದುಕೊಂಡು ಇಲ್ಲಿಗೆ ಬಂದು ದಹನ ಕ್ರಿಯೆಗಳನ್ನು ನಡೆಸಿಕೊಟ್ಟ ರು ; ಕರ್ಮಾ೦ತರಗಳಿಗೆ ಹಣ ಕೊಟ್ಟು ಧೈರ್ಯ ಹೇಳಿ ಹೋದರು,

“ಯಾವ ವೆಂಕಟಸುಬ್ಬಯ್ಯ ? ಎಲ್ಲಿಯ ಹೆಡ್‌ಮೇಷ್ಟು?

“ಇಲ್ಲೇ ಸ್ವಾಮಿ ! ಮೂರು ಮೈಲಿ ದೂರದ ಬೊಮ್ಮನಹಳ್ಳಿ ಸ್ಕೂಲಿನ ಹೆಡ್‌ಮೇಷ್ಟು, ವೆಂಕಟಸುಬ್ಬಯ್ಯ ! ದೇವರು ಅವರ ಹೊಟ್ಟೆ ತಣ್ಣಗಿಟ್ಟಿರಲಿ ಸ್ವಾಮಿ !?

'ಏನಾಗಿತ್ತು ನಿಮ್ಮ ಹೆಂಡತಿಗೆ ?'

'ಏನೆಂದು ಹೇಳಲಿ ಸ್ವಾಮಿ? ಏನೂ ಜ್ವರ ಬಂತು. ನಾಲ್ಕು ದಿನ ಜೋರಾಗಿ ಹೊಡೆಯಿತು. ಇದ್ದಕ್ಕಿದ್ದ ಹಾಗೆ ಕಣ್ಮುಚ್ಚಿ ಕೊಂಡುಬಿಟ್ಟಳು ! ಊರವರೆಲ್ಲ-ಪ್ಲೇಗು ಮಾರಿ ಇರಬಹುದು, ಊರು ಬಿಟ್ಟು ಹೊರಟು ಹೋಗಿ ಎಂದು ಗಲಾಟೆ ಮಾಡಿದರು. ನನ್ನ ಹೆಂಡತಿಯ ಹೆಣ ಸುಟ್ಟು ಹಿಂದಿರುಗಿದರೆ - ಊರೊಳಕ್ಕೆ ಬರಬೇಡಿ ಎಂದು ತಡೆದುಬಿಟ್ಟರು. ವೆಂಕಟಸುಬ್ಬಯ್ಯ ಹೇಳಿನೋಡಿದರು, ಯಾರು ಹೇಳಿದರೂ ಹಳ್ಳಿಯವರು ಕೇಳಲೇ ಇಲ್ಲ! ನನ್ನನ್ನು ಹದಿನೈದು ದಿನ ಊರೊಳಕ್ಕೆ ಸೇರಿಸಲೇ ಇಲ್ಲ ! ನನ್ನ ಕಷ್ಟವನ್ನು ಆಲೋಚಿಸಿ ಸ್ವಾಮಿ ! ಆ ಮಂಟಪದಲ್ಲಿ ಅಡಿಗೆ ಮಾಡಿಕೊಂಡು, ಈ ಕಟ್ಟಡದೊಳಗೆ ಮಕ್ಕಳನ್ನಿಟ್ಟುಕೊಂಡು ಮಲಗುತಿದ್ದೆ. ಹದಿನೈದು ದಿನ ಕಳೆದಮೇಲೆ ಊರಲ್ಲಿ ಎಲ್ಲಿಯೂ ಇಲಿ ಬೀಳದೆ ಜನ ಕಾಯಿಲೆಯಾಗದೆ ಇದ್ದು ದನ್ನು ನೋಡಿ ಜನ ನನ್ನನ್ನು ಊರೊಳಕ್ಕೆ ಬಿಟ್ಟರು ?

“ಆದದ್ದು ಆಗಿ ಹೋಯಿತು ಮೇಷ್ಟೇ ! ಇನ್ನೂ ನಿಮಗೆ ಪೂರ್ವ ವಯಸ್ಸು. ಎರಡನೆಯ ಮದುವೆ ಮಾಡಿಕೊಳ್ಳಿ. ಈ ದುಃಖ ಮರೆಯುತ್ತೆ, ಮಕ್ಕಳಿಗೂ ದಿಕ್ಕಾಗುತ್ತೆ.'

ರಾಮ ರಾಮ ! ಇನ್ನು ಆ ಯೋಚನೆಯೇ ಇಲ್ಲ ಸ್ವಾಮಿ ! ಆಕೆಗೆ ನಾನು ವಂಚನೆ ಮಾಡೋದಿಲ್ಲ ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ !?

ಇದೇನು ಹೀಗೆ ಹೇಳುತ್ತೀರಿ ಮೇಷ್ಟೇ ? ಎರಡನೆಯ ಮದುವೆ ಮಾಡಿಕೊಂಡರೆ ಮೊದಲನೆಯ ಹೆಂಡತಿಗೆ ವಂಚನೆ ಮಾಡಿದ ಹಾಗಾಗುತ್ತದೆಯೆ? ಮಕ್ಕಳಿಗೆ ಏನು ಮೋಸವಾಗುತ್ತದೆ ದಿಕ್ಕಾಗುವುದಿಲ್ಲವೇ?'

“ಸ್ವಾಮಿ | ಇತರರ ಮಾತನ್ನು ನಾನೇತಕ್ಕೆ ಆಡಲಿ ? ನನ್ನ ಮಾತು ಹೇಳುತ್ತೇನೆ. ನಾನು ಸಂಸಾರದ ಸುಖ ನೋಡಿದ್ದಾಯಿತು ಸ್ವಾಮಿ ! ವಯಿನವಾದ ಹೆಂಡತಿಯಿದ್ದರೆ ಬಡತನದ ದುಃಖ ಕಾಣಿಸೋದಿಲ್ಲ! ನನಗೆ ಹದಿನೈದು ರುಪಾಯಿ ಸಂಬಳ, ನಾನು ಬಡವ-ಎಂಬ ಚಿಂತೆಯೇ ನನಗಿರಲಿಲ್ಲ ಸ್ವಾಮಿ ದೇವರಾಣೆಗೂ ಹೇಳುತ್ತೇನೆ. ಹೇಗೆ ತಾನೆ ಸಂಸಾರವನ್ನು ನಡೆಸುತ್ತಿದ್ದಳೋ ಆಕೆ! ಸೀರೆ ಬೇಕು ಎಂದು ಕೇಳಿದವಳಲ್ಲ, ಒಡವೆ ಬೇಕು ಎಂದು ಕೇಳಿದವಳಲ್ಲ; ಮನೆಯಲ್ಲಿ ಉಪ್ಪಿಲ್ಲ, ಅಕ್ಕಿ ಯಿಲ್ಲ~ ಎಂದು ಒಂದು ದಿನವಾದರೂ ಹೇಳಿದವಳಲ್ಲ ; ಎಂದೂ ಮುಖವನ್ನು ಸಿಡುಕುಮಾಡಿ ಕೊಂಚವಳೇ ಅಲ್ಲ ! ಅ೦ಥ ಹೆಂಡತಿಯೊಡನೆ ಸಂಸಾರಮಾಡಿ, ಆದನ್ನು ಮರೆಯುವುದುಂಟೆ ? ಆಕೆಯನ್ನು ಮರೆಯುವುದುಂಟೇ ? ಆಕೆಯನ್ನು ಮರೆಸಿ ಬೇರೊಬ್ಬಳನ್ನು ಮದುವೆಯಾಗುವುದುಂಟಿ ! ದೃಢಸಂಕಲ್ಪ ಮಾಡಿದ್ದೇನೆ ಸ್ವಾಮಿ ? ಒಂದುವೇಳೆ ಮದುವೆಯಾದೆ ಎಂದಿಟ್ಟು ಕೊಳ್ಳಿ. ಈ ಮಕ್ಕಳನ್ನು ಆ ಹೊಸಬಳು ಆದರಿಸು ತ್ತಾಳೆಯೇ ? ತನ್ನ ಮಕ್ಕಳಿಗೂ ಕಡೆಗೆ ತನ್ನ ಅಕ್ಕ ತಂಗಿಯರ ಮಕ್ಕಳಿಗೂ ಭೇದಮಾಡುವುದು ಸ್ತ್ರೀಯರ ಸ್ವಭಾವ. ತನ್ನ ಮಗನಿಗೆ ಎರಡು ಮಿಳ್ಳೆ ತುಪ್ಪ, ತನ್ನ ತಂಗಿಯ ಮಗನಿಗೆ ಒಂದು ಮಿಳ್ಳ ತುಪ್ಪ ! ತನ್ನ ಮಗನಿಗೆ ಮೊಸರು, ಅಕ್ಕನ ಮಗನಿಗೆ ಮಜ್ಜಿಗೆ ! ತನ್ನ ಮಗನಿಗೆ ವಾರಕ್ಕೊಂದು ಬಾರಿ ಎರೆಯುವುದು ತಂಗಿಯ ಮಗನಿಗೆ ತಿಂಗಳಿಗೊಮ್ಮೆ ಎರೆಯುವುದು- ಹೀಗೆಲ್ಲ ಲೋಕದಲ್ಲಿ ಮಾಡುತ್ತಾರೆ. ಹೊಸದಾಗಿ ಬರುವವಳಿಗೆ ಇವರು ತಂಗಿಯ ಮಕ್ಕಳೇ? ಅಕ್ಕನ ಮಕ್ಕಳೇ ? ಇವರ ಆರೈಕೆ ಹೇಗೆ ? ದೃಢ ಸಂಕಲ್ಪ ಮಾಡಿದ್ದೇನೆ ಸ್ವಾಮಿ ! ಮುತ್ತಿನಂತಹ ಮಕ್ಕಳು : ಒಂದು ಗಂಡು ! ಒಂದು ಹೆಣ್ಣು ! ಇವರ ಆರೈಕೆ ನಾನೇ ಮನವಾರೆ ಮಾಡುತ್ತೇನೆ. ಮತ್ತೊಬ್ಬರ ಕೈಗೆ ಈ ಮಕ್ಕಳನ್ನು ಒಪ್ಪಿ ಸುವುದಿಲ್ಲ.”

“ನನ್ನಿಂದ ಏನಾದರೂ ಸಹಾಯ ಬೇಕೇ ಮೇಷ್ಟೇ ??

“ಏನು ಸಹಾಯ ಕೇಳಲಿ ಸ್ವಾಮಿ ? ಸಾಧ್ಯವಾದರೆ ಜುಲ್ಮಾನೆ ವಜಾ ಮಾಡಿಸಿ ನನ್ನ ಮಾನ ಉಳಿಸಿ, ಹೆಂಡತಿ ಸತ್ತಾಗ ಇಷ್ಟು ಸಂಕಟ ಆಗಲಿಲ್ಲ, ಜುಲ್ಮಾನೆಯಿಂದ ಮಾನ ಹೋದ್ದಕ್ಕೆ ಹೆಚ್ಚು ಸಂಕಟವಾಗಿದೆ. ಅಷ್ಟೇ ಸ್ವಾಮಿ ! ಎರಡು ದಿನ ಈ ಕಷ್ಟ ಅನುಭವಿಸುತ್ತೇನೆ. ನನ್ನ ಅಕ್ಕ ಒಬ್ಬಳು ವಿಧವೆ ಇದ್ದಾಳೆ. ಕಾಗದ ಬರೆದಿದ್ದೇನೆ. ಆಕೆ ಬಂದರೆ ನನಗೆ ಸಹಾಯವಾಗುತ್ತೆ. ಇನ್ನು ಹದಿನೈದು ದಿನಗಳಲ್ಲಿ ಬರುತ್ತೇನೆಂದು ಜವಾಬು ಬರೆಸಿದ್ದಾಳಿ ಸ್ವಾಮಿ !!

ರಂಗಣ್ಣ ಆ ಮೇಷ್ಟರಿಂದ ಅರ್ಜಿ ಬರೆಯಿಸಿಕೊಂಡು ಹೊರಕ್ಕೆ ಬಂದನು. ಮೇಷ್ಟ್ರು ಜೊತೆಯಲ್ಲಿ ಸ್ಪಲ್ಪ ದೂರ ಬಂದು, 'ಸ್ವಾಮಿ | ಈ ಹಳ್ಳಿಯಿಂದ ವರ್ಗಮಾಡಿಸಿಕೊಡಲು ಸಾಧ್ಯವೆ ? ಆ ಮನೆಯಲ್ಲಿ ಮತ್ತೆ ನಾನು ಇರಲಾರೆನಲ್ಲ ' ಎಂದು ಹೇಳಿದನು

“ಆಗಲಿ ಮೇಷ್ಟೆ ! ವರ್ಗ ಮಾಡುತ್ತೇನೆ. ಆದರೆ ಆಲೋಚನೆ ಮಾಡಿ, ಇನ್ನೆರಡು ತಿಂಗಳು ಬಿಟ್ಟು ಕೊಂಡು ಈ ದುಃಖ ಮರೆತಮೇಲೆ ಬೇರೆ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಮೊದಲಿನಂತಿಯ ಒಳ್ಳೆಯ ಹೆಂಡತಿ ದೊರೆತಾಳು.'

'ಇಲ್ಲ ಸ್ವಾಮಿ ! ದೃಢ ಸಂಕಲ್ಪ ಮಾಡಿದ್ದೇನೆ ! ಹಿರಿಯರ ಹೆಸರು ಉಳಿಸುವುದಕ್ಕೆ ಒಬ್ಬ ಮಗನಾಯಿತು ; ಕನ್ಯಾದಾನದ ಪುಣ್ಯಕ್ಕೆ ಒಬ್ಬಳು ಮಗಳಾದಳು. ಮೇಷ್ಟರುಗಳನ್ನು ಬಡತನ ಹಿಡಿದು ಕಿತ್ತು ತಿನ್ನುತ್ತಿರುವಾಗ ಸಾಲ ಮಾಡಿ ಮತ್ತೆ ಮದುವೆ ಮಾಡಿಕೊಂಡು, ಮತ್ತೆ ನಾಲ್ಕಾರು ಮಕ್ಕಳಾಗಿ, ಅಯ್ಯೋ ! ಆ ಜಂಜಾಟ ಬೇಡ ! ಬೇಡ ! ಸಂಸಾರ ಸುಖ ತೃಪ್ತಿ ಆಗಿಹೋಯಿತು ! ಸಾಕು ! ಈಗ ಏನಿದ್ದರೂ ನನ್ನ ತಬ್ಬಲಿ ಮಕ್ಕಳ ಯೋಗಕ್ಷೇಮ ! ಅದನ್ನು ನೋಡಿಕೊಳ್ಳುತ್ತೇನೆ.”

'ಒಳ್ಳೆಯದು ಮೇಷ್ಟೆ ! ನೀವು ನಿಲ್ಲಿರಿ' ಎಂದು ಹೇಳಿ ರಂಗಣ್ಣ ಬೈಸ್ಕಲ್ ಹತ್ತಿ ಹೊರಟನು.

ಪ್ರಕರಣ ೧೭

ಪರಾಶಕ್ತಿ ದರ್ಶನ

ರಂಗಣ್ಣ ಮನೆಯನ್ನು ಸೇರಿದಾಗ ಬೆಳಗ್ಗೆ ಹನ್ನೊಂದೂವರೆ ಗಂಟೆಯಾಗಿತ್ತು. ಆ ಬೈಸ್ಕಲ್ ಪ್ರಯಾಣದಿಂದ ಮೈಯೆಲ್ಲ ಬೆವರುತ್ತಿತ್ತು, ಬೆಳಗ್ಗೆ ತಾನು ಸ್ನಾನ ಮಾಡಿದವನಾಗಿದ್ದರೂ ಮತ್ತೊಮ್ಮೆ ಸ್ನಾನ ಮಾಡಬೇಕೆಂಬ ಅಪೇಕ್ಷೆ ಅವನಿಗುಂಟಾಯಿತು. ತನ್ನ ಉಡುಪುಗಳನ್ನು ಬಿಚ್ಚಿ ಪಂಚೆಯನ್ನುಟ್ಟು, ಟವಲುಗಳನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾಗ ಅವನ ಹೆಂಡತಿ ಕೊಟಡಿಯೊಳಕ್ಕೆ ಬಂದಳು. ಆಕೆ ಬೆಳ್ಳಗೂ ತೆಳ್ಳಗೂ ಇದ್ದ ಚೆಲುವೆ. ಅಡಿಗೆಯ ಮನೆಯಿಂದ ಬಂದವಳಾದ್ದರಿಂದ ಒಲೆಯ ಕಾವಿನಿಂದ ಮುಖ ಕೆಂಪುವರ್ಣಕ್ಕೆ ಸಹಜವಾಗಿ ತಿರುಗಿತ್ತು. ಆದರೆ ಆ ಕೆಂಪು ಬಣ್ಣ ಎಂದಿಗಿಂತಲೂ ಆಗ ಹೆಚ್ಚಾಗಿದ್ದು ದು ರಂಗಣ್ಣನ ದೃಷ್ಟಿಗೆ ಬಿತ್ತು,

“ಆ ಟವಲ್ ಕೆಳಗಿಟ್ಟು ನನ್ನ ಮಾತಿಗೆ ಮೊದಲು ಉತ್ತರ ಕೊಡಿ ! ನಿಮ್ಮ ಇನ್ ಸ್ಪೆಕ್ಟರ್ ಗಿರಿ ಹಾಳಾಗ ! ಎಂದು ಆಕೆ ಕೋಪದಿಂದ ಹೇಳಿದಳು.

ರಂಗಣ್ಣನಿಗೆ ತನ್ನ ಹೆಂಡತಿಯ ನಡೆವಳಿಕೆ ಅರ್ಧ ವಾಗಲಿಲ್ಲ. ಆಕೆ ಸಾಮಾನ್ಯವಾಗಿ ಕೋಪ ಮಾಡಿಕೊಂಡಿದ್ದೆ ಇಲ್ಲ ; ಒರಟಾಗಿ ಮಾತನಾಡಿದವಳೂ ಅಲ್ಲ. ಈ ದಿನ ತಾನು ಶ್ರಮಪಟ್ಟು ಕೊಂಡು ಮನೆಗೆ ಬಂದರೆ ತನ್ನನ್ನು ಆದರಿಸುವುದಕ್ಕೆ ಬದಲು ಹೀಗೇಕೆ ಜಗಳಕ್ಕೆ ನಿಂತಿದ್ದಾಳೆ ? ಎಂದು ಆಲೋಚಿಸಿದನು. ಆದರೆ ಸಮಸ್ಯೆ ಪರಿಹಾರವಾಗಲಿಲ್ಲ. ರಂಗಣ್ಣ ಟವಲನ್ನು ಕುರ್ಚಿಯಮೇಲಿಟ್ಟು, 'ಇದೇತಕ್ಕೆ ಹೀಗೆ ಗದರಿಸುತ್ತೀಯೆ ? ನಾನೇನು ತಪ್ಪು ಮಾಡಿದೆ ?' ಎಂದು ಕೇಳಿದನು.

ಏನು ಮಾಡಿದಿರಾ ? ಕೈಯಲ್ಲಿ ಅಧಿಕಾರ ಇದೆಯೆಂದು ಹೆಣ್ಣು ಮೇಷ್ಟ್ರುಗಳಿಗೆಲ್ಲ ಹುಚ್ಚು ಹುಚ್ಚಾಗಿ ಜುಲ್ಮಾನೆ ಹಾಕುವುದೇ ನೀವು ?

ರಂಗಣ್ಣನಿಗೆ ಪ್ರಕರಣವೆಲ್ಲ ಅರ್ಥವಾಯಿತು. ' ಸೀತಮ್ಮನವರು ಬಂದು ನಿನ್ನ ಹತ್ತಿರ ಹೇಳಿಕೊಂಡರೆ ?

“ಏಕೆ ಹೇಳಿಕೊಳ್ಳಬಾರದು ? ನೀವು ಅವಿವೇಕ ಮಾಡಬಹುದು, ಆಕೆ ಬಂದು ಹೇಳಿಕೊಳ್ಳಕೂಡದೇ ? ಆಕೆ ಮಾಡಿದ ಅಂತಹ ಅಪರಾಧವೇನು ? ಹೆಂಗಸು, ಅನಾಥೆ, ವಿಧವೆ, ದಿಕ್ಕಿಲ್ಲದವಳು ! ಹೊಟ್ಟೆ ಪಾಡಿಗೆ ನಿಮ್ಮ ಇಲಾಖೆಗೆ ಸೇರಿಕೊಂಡು ಮಕ್ಕಳಿಗೆ ಯಥಾಶಕ್ತಿ ಪಾಠ ಹೇಳಿಕೊಡುತ್ತಿದ್ದರೆ ನೀವು ಹೋಗಿ ಜುಲ್ಮಾನೆ ಹಾಕುವುದೇ ? ಆಕೆ ಹೇಳಿಕೊಂಡು ಅತ್ತಾಗ ನಾನು ನಂಬಲಿಲ್ಲ. ನೀವು ಅಂಥಾವರು ಅಲ್ಲವಲ್ಲ; ಯಾರಿಗೂ ಸಾಮಾನ್ಯವಾಗಿ ಜುಲ್ಮಾನೆ ಹಾಕುವುದಿಲ್ಲವಲ್ಲ ; ರೇ೦ಜಿನಲ್ಲಿ ಮೇಷ್ಟರುಗಳೆಲ್ಲ ನಿಮ್ಮನ್ನು ಕೊಂಡಾಡುತ್ತಿದ್ದಾರಲ್ಲ ; ಹೀಗಿರುವಲ್ಲಿ ಹೆಂಗಸಿಗೆ, ಅದರಲ್ಲೂ ವಿಧವೆಗೆ ನೀವು ದಂಡನೆ ಮಾಡಿರಲಾರಿರಿ. ಎಂದು ನಾನು ಹೇಳಿದೆ. ಆಕೆ ನಿಮ್ಮ ಆರ್ಡರನ್ನು, ನೀವೇ ರುಜು ಮಾಡಿರುವ ಆರ್ಡರನ್ನು ನನಗೆ ತೋರಿಸಿದಳು. ಇನ್ನು ನಂಬದೆ ಹೇಗಿರಲಿ ? ಮೊದಲು ಆ ಜುಲ್ಮಾನೆ ವಜಾಮಾಡಿ ಆಮೇಲೆ ಸ್ನಾನಕ್ಕೆ ಟವಲುಗಳನ್ನು ತೆಗೆದು ಕೊಳ್ಳಿ !?

ಕಚೇರಿಯ ವಿಷಯಗಳಲ್ಲಿ ಮನೆಯ ಹೆಂಗಸರು ಕೈ ಹಾಕಬಾರದು !?

“ಅದಕೊಸ್ಕರವೇ ನೀವು ಅವಿವೇಕ ಮಾಡಿದ್ದು ! ನಿಮ್ಮ ಅವಿವೇಕ ತಿದ್ದುವುದಕ್ಕೆ ನಾನು ಬಾರದೆ ಬೀದಿಯ ಹೆಂಗಸು ಬರಬೇಕೇ ? ಹೆಂಗಸರು ! ಎಂದು ಏಕೆ ಹಳಿಯುತ್ತಿದ್ದೀರಿ? ಹೆಂಗಸಿಗಿರುವ ಸೈರಣೆ, ಏವೇಕ, ಬುದ್ಧಿಶಕ್ತಿ ಗಂಡಸಿಗೆಲ್ಲಿದೆ ? ನೀವು ನಿಮ್ಮ ಈ ಕಚೇರಿಯ ವಿಷಯಕ್ಕೆ ನನ್ನನ್ನು ಆಲೋಚನೆ ಕೇಳಿದ್ದಿದ್ದರೆ ನಾನು ಸರಿಯಾಗಿ ಸಲಹೆ ಕೊಡುತ್ತಿದ್ದೆ. ಹೆಂಗಸರು ಕೈಹಾಕಬಾರದಂತೆ ! ನಿಮ್ಮ ಮಕ್ಕಳನ್ನು ನೀವು ಎರಡು ದಿನ ಸುಧಾರಿಸಬಲ್ಲಿರಾ? ನಾನು ಕಣ್ಮುಚ್ಚಿ ಕೊಂಡರೆ ಆಗ ಗೊತ್ತಾಗುತ್ತೆ ಗಂಡಸಿನ ಬಾಳು !”

ತಿಪ್ಪನಹಳ್ಳಿಯ ದೃಶ್ಯ ಸ್ಮರಣೆಗೆ ಬಂದು ರಂಗಣ್ಣನಿಗೆ ಎದೆ ಝುಲ್ಲೆಂದಿತು | 'ಕೆಟ್ಟ ಮಾತನಾಡಬೇಡ! ಬೇಡ! ದಾರಿಯಲ್ಲಿ ಹೋಗುವ ಮಾರಿ ಮನೆ ಹೊಕ್ಕಂತೆ ಆಯಿತು. ನನಗೂ ನಿನಗೂ ಸಂಬಂಧವಿಲ್ಲದ ವ್ಯವಹಾರದಿಂದ ಈ ಮಾತು ಬೆಳೆಯುತ್ತಿದೆ' ಎಂದನು, ವಿಷಗಳಿಗೆಯಲ್ಲಿ ಕೆಟ್ಟ ಮಾತು ಹೊರಟುಬಿಟ್ಟತಲ್ಲ?-ಎಂದು ರಂಗಣ್ಣ ಒಂದು ನಿಮಿಷ ಪೇಚಾಡಿದನು. “ ಕೇಳು. ನಾನು ಜುಲ್ಮಾನೆ ಹಾಕಿದವನಲ್ಲ. ಸಾಹೇಬರು ಹಾಕಿದ್ದು, ಆರ್ಡರನ್ನು ಆಕೆಗೆ ಕಳಿಸಿದೆ ; ಅಷ್ಟೇ. ಆ ದಿನ- ಸಾಹೇಬ ರೊಡನೆ ಸರ್ಕಿಟು ಹೋಗಿದ್ದು ಹಿಂದಿರುಗಿದ ದಿನ-ನಾನು ಸರಿಯಾಗಿ ಏಕೆ ಊಟ ಮಾಡಲಿಲ್ಲ ಎಂದು ನೀನು ಕೇಳಿದ್ದು ಜ್ಞಾಪಕ ವುಂಟೋ ಇಲ್ಲವೋ ? ಆಗ ನಡೆದದ್ದನ್ನೆಲ್ಲ ಆ ಸಾಯಂಕಾಲ ನಿನಗೆ ತಿಳಿಸಲಿಲ್ಲವೇ? ಸಾಹೇಬರು ಜುಲ್ಮಾನೆ ಹಾಕಲಾರರೆಂದು ನಾನು ನಂಬಿದ್ದೆ, ಏನು ಮಾಡುವುದು ? ಒಬ್ಬೊಬ್ಬರು ವಕ್ರಗಳು ಹೀಗೆ ಅಧಿಕಾರಕ್ಕೆ ಬಂದು ಬಿಡುತ್ತಾರೆ, ಆಗ ಕೈ ಕೆಳಗಿನವರಿಗೆ ಕಷ್ಟ. ಹಿಂದೆ ಇದ್ದ ಸಾಹೇಬರು ಒಳ್ಳೆಯವರಾಗಿದ್ದರು ; ಮುಂದೆ ಒಳ್ಳೆಯವರು ಬರಬಹುದು. ಸದ್ಯಕ್ಕೆ ಕಷ್ಟ ಅನುಭವಿಸಬೇಕು. ಈಗಿನ ಸಾಹೇಬರು ದುಡುಕು ; ಅವರದು ಕಠಿನ ಮನಸ್ಸು ; ಎತ್ತು ಈಯಿತು ಎಂದರೆ ಕೊಟ್ಟಿಗೆಯಲ್ಲಿ ಕಟ್ಟು - ಎಂದು ಮಾಡುವ ಮಹಾನುಭಾವರು ! ಏನು ಮಾಡಬೇಕು ? ಹೇಳು?

ನೀವು ಜುಲ್ಮಾನೆ ಹಾಕಿದ್ದೇನೂ ಅಲ್ಲವಲ್ಲ ? ನೀವು ಅವಿವೇಕ ಮಾಡಿದ್ದೆನೂ ಅಲ್ಲವಲ್ಲ ? ನನ್ನ ಮನಸ್ಸಿಗೀಗ ನೆಮ್ಮದಿಯಾಯಿತು ! ನೀವು ಅಂಥವರಲ್ಲ ಎಂದು ದೇವರ ಮುಂದೆ ಪ್ರಮಾಣ ಮಾಡಬಲ್ಲೆ ! ಹೀಗಿರುವಲ್ಲಿ, ಆ ಹೆಂಗಸು ಬಂದು ಆರ್ಡರ್ ತೋರಿಸಿದಾಗ- ಮನಸ್ಸು ಮುರಿದು ಹೋಯಿತು. ನಿಮ್ಮನ್ನು ನಂಬುವುದು ಹೇಗೆ ? ಹೊರಕ್ಕೆ ನುಣ್ಣನೆ ಇದ್ದು ಒಳಗೆ ಮಿಣ್ಣನೆ ಕತ್ತು ಕುಯ್ಯುವ ಗಂಡನೊಡನೆ ಮನಸ್ಸು ಕೊಟ್ಟು ಮನಸ್ಸು ಪಡೆಯುವುದು ಹೇಗಮ್ಮ ? ಹೇಗೆ ? ಅದು ಹೇಗೆ ಸಂಸಾರ ಮಾಡುವುದು ?-ಎಂದೆಲ್ಲ ಬಹಳ ಆಲೋಚನೆ ಮಾಡಿದೆ. ಈಗ ನನಗೆ ಸಮಾಧಾನವಾಯಿತು ! ಹಾಗೆ ಅವಿವೇಕ ಮುಚ್ಚಿ ಕೊಂಡಿರುವ ನಿಮ್ಮ ಸಾಹೇಬರು ಯಾರು ? ನಾನು ಡೈರೆಕ್ಟರ್ ಆದರೆ ಮೊದಲು ಅವರನ್ನು ಕೆಲಸದಿಂದ ಡಿಸ್ಮಿಸ್ ಮಾಡಿಬಿಡುತ್ತೇನೆ !”

ಆ ಸಾಹೇಬರ ಚರಿತ್ರೆಯನ್ನೆಲ್ಲ ಕಟ್ಟಿಕೊಂಡು ನಮಗೇನು ? ಅಲ್ಪನಿಗೆ ಐಶ್ವರ್ಯ ಬಂದರೆ ಮರೆಯುವ ಹಾಗೆ, ಎರಡು ದಿನ ಅಧಿಕಾರದಲ್ಲಿ ಮೆರೆಯುತ್ತಾರೆ. ಕೈ ಕೆಳಗಿನವರ ಕಷ್ಟಗಳನ್ನೂ ಬಡತನವನ್ನೂ ನೋಡುವುದಿಲ್ಲ.'

ಅ೦ಥ ಅವಿವೇಕಿಗಳಿಗೆ ಜವಾಬ್ದಾರಿಯ ಕೆಲಸ ಏತಕ್ಕೆ ಕೊಡಬೇಕು? ಸರಕಾರದವರು ಆಲೋಚನೆ ಮಾಡಬೇಡವೇ? ಅವಿವೇಕಿಯಿಂದ ಎಷ್ಟು ಜನರಿಗೆ ಈ ಕಷ್ಟ !?

ಹಾಗೆಲ್ಲ ಸರಕಾರದವರನ್ನು ಟೀಕಿಸಬೇಡ. ಈ ನಮ್ಮ ಮಾತು ಹೊರಗಿನವರ ಕಿವಿಗೆ ಬಿದ್ದರೆ ನಮಗೆ ತೊಂದರೆಯಾಗುತ್ತೆ ? ನಿನಗೆ ಈ ದಿನ ಬಹಳ ಕೋಪ ಬಂದಿದೆ. ಇಷ್ಟು ಕೋಪ ನಿನ್ನಲ್ಲಿದೆ ಎಂದು ನಾನು ತಿಳಿದಿರಲಿಲ್ಲ.

“ನಿಮಗೇನು ತೊಂದರೆಯಾದೀತು ? ಹೇಳಿ, ಕೆಲಸದಿಂದ ತೆಗೆದು ಬಿಡುತ್ತಾರೆಯೆ? ತೆಗೆದುಬಿಡಲಿ ! ಬುದ್ಧಿಯಿದ್ದವರು ಹೇಗಾದರೂ ಜೀವನ ನಡೆಸುತ್ತಾರೆ. ನಿಮಗಿರುವ ಬುದ್ಧಿಯಲ್ಲಿ ಇದಕ್ಕೆ ನಾಲ್ಕರಷ್ಟು ಸಂಪಾದಿಸಬಹುದು! ಅವರು ಅವಿವೇಕ ಮಾಡಬಹುದು; ಯಾರೂ ಟೀಕಿಸಕೂಡದು- ಎಂದು ಹೇಳುತ್ತೀರಲ್ಲ ! ಸರಿಯೇ ? ಬರಿಯ ಗ೦ಡಸರ ಆಡಳಿತ ! ಕಡೆಗೆ ಒಬ್ಬಳೇ ಒಬ್ಬಳು ಹೆಂಗಸು ಸರಕಾರದಲ್ಲಿದ್ದಿದ್ದರೆ ಎಷ್ಟೋ ವಿವೇಕ ಇರುತ್ತಿತ್ತು ! ?

* ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಕೇಳಿಲ್ಲವೇ ನೀನು ? ಹೆಂಗಸರು ಆಡಳಿತ, ಸರಕಾರ ನಡೆಸುವುದಕ್ಕಾಗುತ್ತದೆಯೇ ? )

ಏನು ? ಸ್ತ್ರೀ ಬುದ್ಧಿ, ಪ್ರಳಯ ಗಿಳಯ ಎಂದು ಆಡುತ್ತಿದ್ದೀರಿ ? ಕೈ ಹಿಡಿದ ಹೆಂಡತಿಯನ್ನು ಜೂಜಿನಲ್ಲಿ ಸೋತುಬಿಡುವ ಗಂಡಸು, ಕೈ ಹಿಡಿದ ಹೆ೦ಡತಿಯನ್ನು - ಏಳು ತಿಂಗಳ ಗರ್ಭಿಣಿಯನ್ನು - ಕಾಡುಪಾಲು ಮಾಡುವ ಗಂಡಸು, ದೊಡ್ಡ ವಿವೇಕಿಗಳು ! ರಾಜರ್ಷಿಗಳು ! ಅಲ್ಲವೇ ? ಇದಕ್ಕಿಂತ ಅವಿವೇಕ ಲೋಕದಲ್ಲುಂಟೇ ? ಗಂಡಸು ಮಾಡುವ ಅವಿವೇಕ ಅನ್ಯಾಯಗಳನ್ನೆಲ್ಲ ಹೊಟ್ಟೆಯಲ್ಲಿಟ್ಟುಕೊಂಡು ಸೈರಣೆಯಿಂದ ಸಂಸಾರ ನಡೆಸುವ ನಮ್ಮಂಥ ಪತಿವ್ರತೆಯರ ಪ್ರಭಾವದಿಂದ ಒಂದಿಷ್ಟು ಮಳೆ ಬೆಳೆ ಗಳನ್ನಾದರೂ ಕಾಣುತ್ತಿದ್ದೀರಿ ! ಸ್ತ್ರೀ ಬುದ್ಧಿ ! ಎಂದು ಹಳಿಯುತ್ತೀರಾ ನೀವು ? ಗಂಡಸರದೇ ಯಾವಾಗಲೂ ವಕ್ರಬುದ್ಧಿ! ಅವರನ್ನು ತಿದ್ದುವುದಕ್ಕೆ ಎಳತನದಲ್ಲಿ ತಾಯಿಯರಬೇಕು, ಯೌವನದಲ್ಲಿ ಹೆಂಡತಿ ಇರಬೇಕು. ಮುಪ್ಪಿನಲ್ಲಿ ಸೊಸೆಯಿರಬೇಕು ! ನಿಮ್ಮನ್ನೊಂದು ಪ್ರಶ್ನೆ ಕೇಳುತ್ತೇನೆ. ಉತ್ತರ ಕೊಡಿ. ನಿಮ್ಮ ಸಾಹೇಬರುಗಳೆಲ್ಲ ಬರಿಯ ಗಂಡಸರೇ ಏಕಿರಬೇಕು ? ಹೇಳಿ ನನಗೆ.?

ಸ್ವಲ್ಪ ಸಮಾಧಾನಮಾಡಿಕೊ, ಗದರಿಸಿ ಕೇಳಬೇಡ, ನಿನಗೆ ಉತ್ತರ ನಾನು ಹೇಳಲಾರೆ. ಹೆಂಗಸರೂ ತಕ್ಕಷ್ಟು ವಿದ್ಯಾ ವತಿಯರಾಗಿ ಹೆಚ್ಚು ಸಂಖ್ಯೆಯಲ್ಲಿ ದೊರೆತರೆ ಅವರೂ ಸಾಹೇಬರುಗಳಾಗಿ ಬರಬಹುದು. ಆ ಕಾಲವೂ ಬರಬಹುದು ಎಂದು ಕಾಣುತ್ತೆ.?

“ಮುಖ್ಯ ಕಾರಣ ನಾನು ಹೇಳುತ್ತೇನೆ ಕೇಳಿ : ಗಂಡಸರಿಗೆ ಹೆಂಗಸನ್ನು ಮರ್ಯಾದೆಯಿಂದ ಕಾಣುವ ಸಭ್ಯತೆ ಹುಟ್ಟೊಡನೆ ಬರಲಿಲ್ಲ ; ಓದೊಡನೆ ಬರಲಿಲ್ಲ. ನಿಮ್ಮ ಬಿ.ಎ., ಎಂ. ಎ. ಡಿಗ್ರಿಗಳೇಕೆ ? ಸುಡೋದಕ್ಕೆ !”

ಈ ದಿನ ನಾನು ಎಡಮಗ್ಗುಲಲ್ಲಿ ಎದ್ದೆನೋ ಏನೋ ? ನನ್ನ ಗ್ರಹಚಾರ ಬಿಡಿಸುತ್ತಾ ಇದ್ದೀಯೆ ? ಈಗ ನಾನು ಸ್ನಾನಕ್ಕೆ ಹೊರಡಲೋ ಬೇಡವೋ ? ಹೊಟ್ಟೆಯಲ್ಲಿ ಹಸಿವು. ಹೊತ್ತು ಮಧ್ಯಾಹ್ನವಾಗಿ ಹೋಯಿತು.”

“ಆ ಬಡ ಹೆಂಗಸು ನಿನ್ನೆಯಿಂದ ಅನ್ನವಿಲ್ಲದೆ ಸಾಯುತ್ತಿದಾಳಲ್ಲ ! ಆ ಹೆಣ್ಣು ಹೆಂಗಸು ಹನ್ನೆರಡು ಮೈಲಿ ನಡೆದು ಕೊಂಡು ಬಂದಿದ್ದಾಳಲ್ಲ! ಅವಳ ಕಷ್ಟಕ್ಕೆ ಮೊದಲು ಪರಿಹಾರ ಹೇಳಿ, ಆಮೇಲೆ ನಿಮ್ಮ ಸ್ನಾನ, ಆಟ !

ಈಗ ಆಕೆ ಎಲ್ಲಿದ್ದಾಳೆ ?”

ಅಡಿಗೆಯ ಮನೆಯಲ್ಲಿದ್ದಾಳೆ.'

ಏನು ಕೆಲಸ ಮಾಡಿದೆ ! ಈ ನಮ್ಮ ಮಾತುಗಳನ್ನೆಲ್ಲ ಆಕೆ ಕಿವಿಯಲ್ಲಿ ಕೇಳಿದಳೋ ಏನೋ ? ನಮ್ಮ ಮಾನ ಹೋಯಿತಲ್ಲ ! ಮೊದಲೇ ನೀನು ಹೇಳ ಬಾರದಾಗಿತ್ತೇ ?

“ಆಕೆ ಒಳಗಡೆ ಇದ್ದಾಳೆ, ಕೇಳಿದರೆ ಏನು ದೋಷ ? ಇದರಲ್ಲಿ ಗುಟ್ಟೇನಿದೆ ? 'ಈಗ ಆಕೆಗೆ ಹಾಕಿರುವ ಜುಲ್ಮಾನೆಯನ್ನು ನಾನು ವಜಾ ಮಾಡುವ ಹಾಗಿಲ್ಲ. ಸಾಹೇಬರು ಹಾಕಿದ್ದು ; ಅವರೇ ವಜಾಮಾಡಬೇಕು. ಅವರಿಗೆ ಶಿಫಾರಸು ಮಾಡುತ್ತೇನೆ. ಶಿಫಾರಸು ಮಾಡಬೇಕಾದ್ದುಇನ್ನೂ ಒಂದು ಇದೆ. ಸಾಹೇಬರಿಗೆ ಕರುಣೆ ಹುಟ್ಟಿ ಜುಲ್ಮಾನೆ ವಜಾ ಮಾಡಿದರೆ ಆಗಬಹುದು, ಆದರೆ ನಾನು ಏನೆಂದು ಭರವಸೆಯನ್ನೂ ಕೂಡುವಹಾಗಿಲ್ಲ. ಆಕೆ ಅರ್ಜಿ ಕೊಡಲಿ ; ನೋಡೋಣ. ಆಕೆಯ ಪರವಾಗಿ ನಾನು ಮಾತನಾಡಿದ್ದಕ್ಕೆ ಸಾಹೇಬರು ನನ್ನನ್ನು ಗದರಿಸಿಬಿಟ್ಟರು. ಅದೆಲ್ಲ ನಿನಗೆ ತಿಳಿದಿದೆಯಲ್ಲ.”

“ ನೀವೇ ಆಕೆಗೆ ಸ್ವಲ್ಪ ಧೈರ್ಯ ಹೇಳಿ, ಹೆಂಗಸು, ಭಯಸ್ಥಳು ; ಜೀವನದಲ್ಲಿ ಬಹಳ ಕಷ್ಟಗಳನ್ನನುಭವಿಸಿದ್ದಾಳೆ. ತನ್ನ ಕಥೆಯನ್ನೆಲ್ಲ ಆಕೆ ಹೇಳಿ ಕೊಂಡಳು. ನನಗೆ ಬಹಳ ದುಃಖವಾಯಿತು. ಲೋಕದಲ್ಲಿ ಹೀಗೂ ಅನ್ಯಾಯ ಉಂಟೇ ! ಸಮೀಪ ಬಂಧುಗಳೇ ಹೀಗೆ ಮೋಸ ಮಾಡುವುದುಂಟೆ ! ಆಕೆಯಿ೦ದ ರುಜು ಹಾಕಿಸಿಕೊಂಡು ಗಂಡನ ಪಾಲನ್ನೆಲ್ಲ ಕ್ರಯ ಮಾಡಿಸಿ ಕೊಂಡು, ಕೈಗೆ ಏನೊಂದು ಹಣವನ್ನೂ ಕೊಡದೆ ಬೀದಿಗೆ ಅಟ್ಟುವುದುಂಟೇ . ಲೋಕದಲ್ಲಿ ಕೆಟ್ಟರೆ ಕೆಳೆಯಿಲ್ಲ ; ಹೆಂಗಸಿಗೆ ಬಂಧುವಿಲ್ಲ. ನಿಮ್ಮ ದೃಷ್ಟಿಯಲ್ಲಿ ಅವಳು ಒಂದೋ ದಾಸಿ, ಇಲ್ಲ, ವೇಶ್ಯೆ !?

“ಯಾರೋ ಕೆಲವರು ಮಾಡುವ ಪಾಪಕ್ಕೆ ಗಂಡಸರನ್ನೆಲ್ಲ ಹಳಿಯುತ್ತಿದ್ದೀಯ ? ಈಗ ನಿನ್ನೊಡನೆ ವಾದಿಸಿ ಪ್ರಯೋಜನವಿಲ್ಲ. ಹೋಗು, ಆಕೆಯನ್ನು ಕರೆ. ಆಕೆಯನ್ನು ಊಟಕ್ಕೆ ಇಲ್ಲಿಯೇ ನಿಲ್ಲುವಂತೆ ಹೇಳಿ ದಿಯೋ ? ಇಲ್ಲವೇ ಆಕೆ ತನ್ನ ನೆಂಟರ ಮನೆಗೆ ಹೋಗುತ್ತಾಳೆಯೇ??

“ಮತ್ತೆ ಮತ್ತೆ ನೀವು ಆ ನೆಂಟರ ಮಾತನ್ನಾಡುತ್ತಿದ್ದೀರಲ್ಲ ! ಇದಲ್ಲವೇ ಚೋದ್ಯ! ಆ ಹಾಳು ನೆಂಟರ ಮನೆಗೆ ಆಕೆ ಹೋಗುವುದುಂಟೇ ? ತನಗೆ ಜುಲ್ಮಾನೆ ಬಿದ್ದಿದೆಯೆಂದು ಅಲ್ಲಿ ಅಳುವುದುಂಟೇ ? ನಿಮಗೇತಕ್ಕೆ ಈ ದಿನ ಹೀಗೆ ಮತಿ ಮುಚ್ಚಿ ಹೋಯಿತು ! ನಾನೇ ತಕ್ಕ ರೀತಿಯಲ್ಲಿ ಸಮಾಧಾನ ಮಾಡಿ, ಸ್ನಾನಕ್ಕೆ ನೀರು ಕೊಟ್ಟೆ ; ಉಟ್ಟುಕೊಳ್ಳಲು ನನ್ನ ನಾರು ಮಗುಟ ಕೊಟ್ಟೆ. ನಿನ್ನೆ ಊಟ ಮಾಡಿಲ್ಲವಲ್ಲ ಆ ಹೆಂಗಸು ಎಂದು ವ್ಯಥೆಪಟ್ಟು- ಹಾಲೂ ಹಣ್ಣ ತೆಗೆದುಕೊಳ್ಳಿರಮ್ಮ- ಎಂದು ಹೇಳಿದೆ. ಆಕೆ-ಅಯ್ಯೋ ! ನನಗೇನೂ ಬೇಡಮ್ಮ, ಬೇಡ ತಾಯಿ ! ನನ್ನ ಹೊಟ್ಟೆ ಯಲ್ಲ ತುಂಬಿದೆ-ಎಂದು ಬಿಗುಮಾನ ಮಾಡಿದಳು, ಹೀಗೆಲ್ಲ ಮೊಂಡಾಟ ಮಾಡಿದರೆ ಜುಲ್ಮಾನೆ ವಜಾ ಮಾಡಿಸುವುದಿಲ್ಲ-ಎಂದು ನಾನು ಸ್ವಲ್ಪ ಗದರಿಸುತ್ತಲೂ ಆಕೆ, ದಮ್ಮಯ್ಯ! ನಿಮ್ಮ ಕಾಲಿಗೆ ಬೀಳುತ್ತೇನೆ! ಹಾಗೆಲ್ಲ ಹೇಳಬೇಡಿ ಅಮ್ಮ! ನಿಮ್ಮನ್ನೇ ನಂಬಿಕೊಂಡು ಹನ್ನೆರಡು ಮೈಲಿ ನಡೆದುಕೊಂಡು ಬಂದಿದ್ದೇನೆ! ಕಾಲು ನೋಯುತ್ತಿದೆ, ಪಾದಗಳು ಉರಿಯುತ್ತಿವೆ. ನೀವು ಹೇಳಿದ ಹಾಗೆ ಕೇಳುತ್ತೇನಮ್ಮ ! ಜುಲ್ಮಾನೆ ವಜಾಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಹೇಳಿ ಹಾಲೂ ಹಣ್ಣನ್ನು ತೆಗೆದುಕೊಂಡಳು. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ನೀವೂ ಬೈಸ್ಕಲ್ ಬೆಲ್ ಹೊಡೆದು ಒಳಕ್ಕೆ ಬಂದಿರಿ.'

ರಂಗಣ್ಣನ ಹೆಂಡತಿ ಅಡಿಗೆಯ ಮನೆಗೆ ಹೋಗಿ ಸೀತಮ್ಮನನ್ನು ಕರೆದು, ' ನಿಮ್ಮ ಇನ್ಸ್ಪೆಕ್ಟರ್ ಸಾಹೇಬರ ಮುಂದೆ ಹೋಗಿ ಹೇಳಿಕೊಳ್ಳಿ. ಆದರೆ ಅವರ ಮುಂದೆ ಅಳುವುದು ಗಿಳುವುದು ಅಮಂಗಳ ಮಾಡಬೇಡಿ! ಅರ್ಜಿ ಬರೆದು ಕೊಡಬೇಕೆಂದು ಹೇಳುತ್ತಾರೆ. ಆಗಲಿ, ಬರೆದುಕೊಡುತ್ತೇನೆ, ಜುಲ್ಮಾನೆ ವಜಾ ಮಾಡಿಸಿ ಕಾಪಾಡಬೇಕು-ಎಂದು ಮಾತ್ರ ಹೇಳಿ?

ಆಗಲಮ್ಮ!” ಎಂದು ಹೇಳಿ ಸೀತಮ್ಮ ರಂಗಣ್ಣನ ಕೊಟಡಿಯ ಬಾಗಿಲ ಬಳಿ ಬಂದು ನಮಸ್ಕಾರ ಮಾಡಿದಳು,

ಜುಲ್ಮಾನೆ ನಾನು ಹಾಕಿದ್ದಲ್ಲ. ಸಾಹೇಬರು ಹಾಕಿದ್ದು, ನೀವು ಸರಿಯಾಗಿ ಪುಸ್ತಕಗಳನ್ನು ಓದಿಕೊಂಡು ಪಾಠ ಶಾಲೆಗೆ ಹೋಗುವುದಿಲ್ಲ. ಆದ್ದರಿಂದ ಜುಲ್ಮಾನೆ ಬಿದ್ದಿದೆ.?

ಇನ್ನು ಮುಂದೆ ಚೆನ್ನಾಗಿ ಓದಿಕೊಂಡು ಪಾಠಮಾಡುತ್ತೇನೆ. ಈ ಬಾರಿಗೆ ಕ್ಷಮಿಸಿ ಜುಲ್ಮಾನೆ ವಜಾ ಮಾಡಿಸಬೇಕು.”

“ಆಗಲಿ, ಮಧ್ಯಾಹ್ನ ಒಂದು ಅರ್ಜಿಯನ್ನು ಬರೆದು ಕೊಡಿ. ಶಿಫಾರಸು ಮಾಡಿ ಮೇಲಕ್ಕೆ ಕಳಿಸುತ್ತೇನೆ. ಒಂದು ವೇಳೆ ಸಾಹೇಬರು ಜುಲ್ಮಾನೆಯನ್ನು ವಜಾ ಮಾಡದಿದ್ದರೆ ನನ್ನ ತಪ್ಪಿಲ್ಲ.”

'ತಾವು ಶಿಫಾರಸು ಮಾಡಿದರೆ ಖಂಡಿತ ವಜಾ ಆಗುತ್ತೆ. ತಮ್ಮನ್ನೆ ನಂಬಿಕೊಂಡು ಬಂದಿದ್ದೇನೆ.'

'ಅರ್ಜಿಯ ಒಕ್ಕಣೆ ಯನ್ನು ಆಕೆ ಹೇಳುತ್ತಾಳೆ. ಅದರಂತೆ ಬರೆ ಯಿರಿ, ಈಗ ಮನಸ್ಸಿಗೆ ಸಮಾಧಾನ ಮಾಡಿಕೊಂಡು ಊಟಮಾಡಿ. ಅಷ್ಟು ದೂರದಿಂದ ನಡೆದುಕೊಂಡು ಬಂದಿದ್ದೀರಿ. ಬಹಳ ಶ್ರಮ ಆಗಿರಬೇಕು.'

'ಶ್ರಮ ಆಗಿದೆ. ಏನು ಮಾಡಲಿ ? ನಾನು ಇದುವರೆಗೂ ಒಂದು ಹವ್ಯಾಸಕ್ಕೆ ಹೋಗದೆ ಮಾನದಿಂದ ಇದ್ದ ಹೆಂಗಸು ; ಹಿಂದಿನ ಕಾಲದವಳು. ಈಗ ನನ್ನ ಹೆಸರು ಹತ್ತು ಜನರ ಬಾಯಲ್ಲಿ ಬೀಳುವ ಪ್ರಸಂಗ ಬಂತಲ್ಲ! ಮಾನ ಹೋಯಿತಲ್ಲ ಎಂದು ಬಹಳವಾಗಿ ದುಃಖವಾಯಿತು. ನನ್ನ ಕಷ್ಟ ದುಃಖ ಎಲ್ಲವನ್ನೂ ಎದುರಿಗೇನೆ ಹೇಳಿಕೊಳ್ಳೋಣ-ಎಂದು ಬಂದೆ.'

'ಒಳ್ಳೆಯದು. ಒಳಕ್ಕೆ ಹೋಗಿ.'

ಪ್ರಕರಣ ೧೮

ಅಪಪ್ರಚಾರ

ಆ ದಿನವೇ ರಂಗಣ್ಣ ತಿಪ್ಪೇನಹಳ್ಳಿಯ ಮೇಷ್ಟರ ಮತ್ತು ಸೀತಮ್ಮನ ಅರ್ಜಿಗಳನ್ನು ತಕ್ಕ ಶಿಫಾರಸುಗಳೊಂದಿಗೆ ಸಾಹೇಬರಿಗೆ ಕಳಿಸಿಬಿಟ್ಟನು. ಜೊತೆಗೆ ಒಂದು ಖಾಸಗಿ ಕಾಗದವನ್ನು ಅವರಿಗೆ ಬರೆದು ಈಗ ಹಾಕಿರುವ ಜುಲ್ಮಾನೆಗಳಿಂದ ತನ್ನ ಮನಸ್ಸು ಬಹಳವಾಗಿ ನೊಂದಿರುವುದೆಂದೂ, ದಯವಿಟ್ಟು ಅವುಗಳನ್ನು ವಜಾ ಮಾಡಬೇಕೆಂದೂ ಕೇಳಿಕೊಂಡಿದ್ದನು. ಯಾವ ದಿನ ಆ ಕಾಗದಗಳು ಸಾಹೇಬರ ಕಚೇರಿಗೆ ಹೋದುವೋ ಆ ದಿನವೇ ಸಾಹೇಬರು ಹೊಸಬರಿಗೆ ಅಧಿಕಾರ ವಹಿಸಿಕೊಡುವ ದಿನವಾಗಿತ್ತು. ಆ ದಿನ ಕಚೇರಿಯಲ್ಲಿ ಎಂದೂ ಇಲ್ಲದಿದ್ದ ತರಾತುರಿಗಳು ; ಹೊಸಬರಿಗೆ ಬಿಡದೆ ತಾವೇ ಆರ್ಡರುಗಳನ್ನು ಮಾಡುವ ಮತ್ತು ಆರ್ಡರ್ ಆದ ಕಾಗದಗಳನ್ನು ಬೇಗ ಬೇಗ ರುಜು ಮಾಡುವ ಸಂಭ್ರಮ ; ಅಹವಾಲುಗಳನ್ನು ಹೇಳಿಕೊಳ್ಳುವ ಮೇಷ್ಟರುಗಳ ಮತ್ತು ಗುಮಾಸ್ತೆಯರ ಪರದಾಟ ; ಹಳಬರನ್ನು ಬೀಳ್ಕೊಡುವುದು, ಹೊಸಬರನ್ನು ಸ್ವಾಗತಿಸುವುದು - ಇವಕ್ಕೆ ಬೇಕಾದ ಒಂದು ಸಮಾರಂಭದ ಏರ್ಪಾಟು. ಈ ಗಲಭೆಗಳಲ್ಲಿ ಸಾಮಾನ್ಯ ಕಾಗದಗಳು ಅಸಿಸ್ಟೆಂಟರ ಮೇಜಿನ ಮೇಲೆಯೇ ಕೊಳೆಯುತ್ತಿರುವುದು ವಾಡಿಕೆ. ರಂಗಣ್ಣ ಕಳಿಸಿದ ಶಿಫಾರಸಿನ ಕಾಗದಗಳೂ ಹೀಗೆಯೇ ಕೊಳೆಯ ಬೇಕಾಗಿದ್ದು ವು. ಆದರೆ ರಂಗಣ್ಣ ಸಾಹೇಬರಿಗೆ ಬರೆದಿದ್ದ ಖಾಸಗಿ ಕಾಗದ ಆವರ ಕೈಗೆ ನೇರವಾಗಿ ಹೋಯಿತು. ಅವರು ಅದನ್ನು ಓದಿಕೊಂಡು ಕೂಡಲೇ ಆ ಶಿಫಾರಸು ಕಾಗದಗಳನ್ನು ತರುವಂತೆ ಅಸಿಸ್ಟೆಂಟರಿಗೆ ಹೇಳಿದರು. ಅಸಿಸ್ಟೆಂಟರು ಕಷ್ಟಪಟ್ಟು ಹುಡುಕಿ ತೆಗೆದುಕೊಂಡು ಹೋಗಿ ಸಾಹೇಬರ ಕೈಗೆ ಕೊಟ್ಟರು. ಆಗ ಸಾಹೇಬರು, ಹಾಕಿದ ಜುಲ್ಮಾನೆಯನ್ನು ನಾನು ವಜಾ ಮಾಡಿದ್ದು ಇದುವರೆಗೂ ಇಲ್ಲ. ಆದರೆ ರಂಗಣ್ಣನವರು ಶಿಫಾರಸು ಮಾಡಿದ್ದಾರೆ. ಈ ಬಾರಿಗೆ ವಜಾ ಮಾಡುತ್ತೇನೆ. ಆತ ರೇಂಜನ್ನು ಚೆನ್ನಾಗಿಟ್ಟು ಕೊಂಡಿದ್ದಾನೆ ! ಜೊತೆಗೆ ಆತನಲ್ಲಿ ಒಳ್ಳೆಯ ಸಭ್ಯ ಗುಣಗಳಿವೆ !? ಎಂದು ಹೇಳುತ್ತಾ, ' ಜುಲ್ಮಾನೆಗಳನ್ನು ಈ ಬಾರಿಗೆ ವಜಾ ಮಾಡಿದೆ. ಎಂದು ಆರ್ಡರು ಮಾಡಿದರು. 'ಕೂಡಲೇ ಇದನ್ನು ಟೈಪು ಮಾಡಿಸಿ ತನ್ನಿ, ಈಗಲೇ ಇದನ್ನು ಕಳಿಸಿಬಿಡಬೇಕು ' ಎಂದು ಅಸಿಸ್ಟೆಂಟರಿಗೆ ಹುಕುಂ ಮಾಡಿದರು, ಅದರಂತೆ ಸಾಹೇಬರು ತಮ್ಮ ಅಧಿಕಾರದಲ್ಲಿದ್ದಾಗಲೇ ಜುಲ್ಮಾನೆಗಳನ್ನು ವಜಾ ಮಾಡಿ, ಆ ಆರ್ಡರುಗಳನ್ನು ರಂಗಣ್ಣನಿಗೆ ಕಳಿಸಿಬಿಟ್ಟರು.

ತನ್ನ ಶಿಫಾರಸುಗಳು ಸಫಲವಾಗಿ ಜುಲ್ಮಾನೆಗಳು ವಜಾ ಆದುದನ್ನು ಕಂಡು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮೇಷ್ಟರುಗಳಿಗೆ ಆಗಿದ್ದ ಅನ್ಯಾಯಗಳು ಈಗ ಪರಿಹಾರವಾದುವಲ್ಲ ಎಂಬುದೊಂದು ಕಾರಣ, ತನ್ನ ಮಾತಿಗೆ ಸಾಹೇಬರು ಬೆಲೆ ಕೊಟ್ಟರಲ್ಲ ಎಂಬುದು ಮತ್ತೊಂದು ಕಾರಣ. ಸಾಹೇಬರು ತಾನು ಮೊದಲು ಭಾವಿಸಿದ್ದಷ್ಟು ನಿರ್ದಯರೂ ಅವಿವೇಕಿಗಳೂ ಅಲ್ಲ; ದರ್ಪದಮೇಲೆ ಆಡಳಿತ ನಡೆಸಬೇಕೆಂಬ ಮನೋಭಾವದವರು ಇರಬಹುದು ಎಂದು ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು. ಈ ಆರ್ಡರುಗಳ ವಿಚಾರವನ್ನು ತನ್ನ ಹೆಂಡತಿಗೆ ತಿಳಿಸಿದಾಗ ಆಕೆ, 'ನಿಮ್ಮ ಸಾಹೇಬರಿಗೆ ಅವರ ಹೆಂಡತಿ ವಿವೇಕ ಹೇಳಿರಬೇಕೆಂದು ತೋರುತ್ತದೆ ! ಹೇಗಾದರೂ ಆಗಲಿ, ಜುಲ್ಮಾನೆಗಳು ವಜಾ ಆದುವಲ್ಲ. ನನಗೂ ಬಹಳ ಸಂತೋಷ' ಎಂದು ಹೇಳಿದಳು.

ಆ ಹೊತ್ತಿಗೆ ಆವಲಹಳ್ಳಿಯ ದೊಡ್ಡ ಬೋರೇಗೌಡರು ರಂಗಣ್ಣನನ್ನು ನೋಡಲು ಮನೆಗೆ ಬಂದರು, ರಂಗಣ್ಣ ತನ್ನ ಹೆಂಡತಿಗೆ, 'ಗೌಡರು ಆಪರೂಪವಾಗಿ ನಮ್ಮ ಮನೆಗೆ ಬಂದಿದ್ದಾರೆ. ಕಾಫಿ ತಿಂಡಿ ಏನಾದರೂ ಸರಬರಾಜು ಮಾಡು, ನೋಡೋಣ' ಎಂದು ಹೇಳಿ, ಕೊಟಡಿಯಿಂದ ಎದ್ದು ಬಂದು ಗೌಡರನ್ನು ಸ್ವಾಗತಿಸಿದನು. ಕೊಟಡಿಯಲ್ಲಿ ಇಬ್ಬರೂ ಕುಳಿತುಕೊಂಡರು.

ಏನು ಸ್ವಾಮಿ ತಮ್ಮ ಹೆಸರು ಎಲ್ಲ ಕಡೆಗಳಲ್ಲಿ ಬಹಳ ಪ್ರಖ್ಯಾತವಾಗಿದೆಯಲ್ಲ !' ಎಂದು ನಗುತ್ತಾ ಗೌಡರು ಹೇಳಿದರು. ತಮ್ಮಂಥ ಹಿತಚಿಂತಕ ಕೂ ಆಪ್ತ ರೂ ನನ್ನ ಬೆಂಬಲಕ್ಕಿರುವಾಗ ಹೆಸರು ಪ್ರಖ್ಯಾತಿಗೆ ಬಾರದೆ ಏನಾಗುತ್ತದೆ ? ' ಎಂದು ರಂಗಣ್ಣನೂ ನಗುತ್ತಾ ಉತ್ತರಕೊಟ್ಟನು,

ನನ್ನಿಂದ ತಮಗೇನೂ ಸಹಾಯವಾಗಿಲ್ಲ ಸ್ವಾಮಿ ! ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಅಠಾರಾ ಕಚೇರಿಯಲ್ಲಿ ಕೆಲಸವಿತ್ತು. ದಿವಾನರು ನಮ್ಮ ತಾಲ್ಲೂಕಿನ ವರ್ತಮಾನಗಳನ್ನು ಪ್ರಸ್ತಾಪಮಾಡುತ್ತ ತಮ್ಮ ಹೆಸರನ್ನು ಹೇಳಿ, " ಏನು ಬಹಳ ಪುಕಾರುಗಳು ಬರುತ್ತಿವೆಯಲ್ಲ ಆ ಇನ್ ಸ್ಪೆಕ್ಟರ ಮೇಲೆ! ನಿಮಗೇನಾದರೂ ಅವರ ವಿಚಾರ ಗೊತ್ತೇ ? ಎಂದು ಕೇಳಿದರು ?

ರಂಗಣ್ಣ ಏನು ಮಾತನ್ನೂ ಆಡಲಿಲ್ಲ ; ಕುತೂಹಲವನ್ನೂ ತೋರಿಸಲಿಲ್ಲ. ಸರ್ಕಾರದವರೆಗೂ ತನ್ನ ಹೆಸರು ಹೋಯಿತಲ್ಲ ! ಏನೇನು ಚಾಡಿಗಳನ್ನು ಕಂಡವರೆಲ್ಲ ಹೇಳಿದ್ದಾರೆ, ಮೇಲಿನವರು ಸತ್ಯಾಂಶಗಳನ್ನು ತಿಳಿದುಕೊಳ್ಳದೆ ಏನು ದುರಭಿಪ್ರಾಯಗಳನ್ನಿಟ್ಟುಕೊಳ್ಳುತ್ತಾರೋ ಎಂಬುದಾಗಿ ಚಿಂತಿಸುತ್ತಿದ್ದನು, ದೊಡ್ಡ ಬೋರೇಗೌಡರು ತಮ್ಮ ಮಾತನ್ನು ಮುಂದುವರಿಸಿ, " ನಾನೇನನ್ನು ಹೇಳಲಿ ಸ್ವಾಮಿ ! ಆ ಕಲ್ಲೇಗೌಡ ಮತ್ತು ಕರಿಯಪ್ಪ ಮೇಲೆಲ್ಲ ತುಂಬಾ ಚಾಡಿಗಳನ್ನು ಹೇಳಿ ತನ್ನ ಹೆಸರು ಕೆಡಿಸಿ ಬಿಟ್ಟಿದ್ದಾರೆ! ' ಎಂದರು.

ನಾನು ಮಾಡಿರುವುದನ್ನು ಹೇಳಿದರೆ ನನ್ನ ಹೆಸರೇಕೆ ಕೆಡುತ್ತದೆ ಗೌಡರೇ ?

ಮಾಡಿದ್ದನ್ನು ಹೇಳುತ್ತಾರೆಯೇ ಸ್ವಾಮಿ ? ಮಾಡದೇ ಇರುವುದಕ್ಕೆ ಅವರು ಹೇಳುವುದು. ಜೊತೆಗೆ, ಮಾಡಿದ್ದಕ್ಕೆ ಬಣ್ಣ ಕಟ್ಟಿ ಇಲ್ಲದ ಆರೋಪಣೆಗಳನ್ನು ಮಾಡಿ ಹೇಳುವುದು ! ಚಾಡಿಕೋರರು ಮಾಡುವುದೇ ಅದು !

ಹೇಳಿದರೆ ಹೇಳಲಿ,! ಸರಕಾರಕ್ಕೆ ಕಣ್ಣು ಕಿವಿಗಳಿವೆ. ಸರಿಯಾಗಿ ನೋಡಿ ತಿಳಿದು ಕೊಳ್ಳುತ್ತಾರೆ, ಸರಿಯಾದವರಿಂದ ತಿಳಿದುಕೊಳ್ಳುತ್ತಾರೆ. ? 'ಅವರೂ ಹಾಗೇ ವಿಚಾರಿಸಿಕೊಳ್ಳುತ್ತಾರೆ ಅನ್ನಿ ! ಚಾಡಿಕೋರರು ಹೇಳಿದ್ದನ್ನೇ ನಂಬಿ ಕೆಲಸ ಮಾಡುತ್ತಾರೆಯೆ ? ಅಂತೂ ತಮಗೆ ವಿಚಾರ ತಿಳಿಸೋಣ ಎಂದು ಬಂದೆ. ತಾವು ಸಂಘದ ಸಭೆಗಳನ್ನು ಹಳ್ಳಿಗಳಲ್ಲಿ ಸೇರಿಸುತ್ತಿದ್ದೀರಷ್ಟೆ. ಗ್ರಾಮಸ್ಥರಿಂದ ದವಸ ಧಾನ್ಯ ವಸೂಲ್ಮಾಡಿ ಮನೆಗೆ ತೆಗೆದುಕೊಂಡು ಹೋಗುತ್ತೀರಂತೆ! ಊಟದ ಖರ್ಚು ಏಳುವ ಬಗ್ಗೆ ಉಪಾಧ್ಯಾಯರಿಂದ ಮಾಟಿಂಗೊ೦ದಕ್ಕೆ ಎಂಟಾಣೆ ವಸೂಲ್ಮಾಡುತ್ತೀರಂತೆ ! ನಿಮ್ಮಿಂದ ಹಳ್ಳಿಯವರಿಗೂ ಮೇಷ್ಟುಗಳಿಗೂ ಬಹಳ ಹಿಂಸೆಯಂತೆ ! ಚಿರೋಟಿ ಲಾಡುಗಳ ಸಮಾರಾಧನೆ ಮಾಡಿಸಿಕೊಂಡು ಹಳ್ಳಿಗಳನ್ನು ಕೊಳ್ಳೆ ಹೊಡೆಯುತ್ತಿದ್ದೀರಂತೆ !- ಇವೆಲ್ಲ ನಿಮ್ಮ ಮೇಲೆ ಪುಕಾರು ?

ವಿಚಾರವೆಲ್ಲ ನಿಮಗೆ ತಿಳಿದಿದೆ ಗೌಡರೇ ! ನಾನು ಪುನಃ ಏಕೆ ಹೇಳಲಿ ? ನಿಮ್ಮ ಆಹ್ವಾನದ ಮೇಲೆ ಆವಲಹಳ್ಳಿಯಲ್ಲಿ ಸಭೆ ಅಲ್ಲಿ ಏನಾಯಿತು ಎಂಬುದು ನಿಮಗೆ ತಿಳಿದಿದೆ. ಹಳ್ಳಿಗಳಲ್ಲಿ ಸಭೆ ಸೇರಬೇಕಾದರೆ ಗ್ರಾಮ ಪಂಚಾಯತಿಗಳು ರೆಜಲ್ಯೂಷನ್ ಮಾಡಿ ಆಹ್ವಾನ ಕೊಡುತ್ತಾರೆ. ಪಂಚಾಯತಿ ಸದಸ್ಯರೇ ಬಂದು ಕರೆಯುತ್ತಾರೆ. ಕೆಲವು ಸಂದರ್ಭಗಳಲ್ಲಿ ತಮ್ಮಂಥ ಉದಾರಿಗಳಾದ ರೈತರು ತಾವೇ ಖರ್ಚನ್ನೆಲ್ಲ ವಹಿಸಿಕೊಂಡು : ಒಪ್ರೊತ್ತು ಊಟವನ್ನು ಬಡ ಮೇಷ್ಟರುಗಳಿಗೆ ಹಾಕುತ್ತಾರೆ. ಅಲ್ಲಿ ಏನು ಸಮಾರಾಧನೆ ನಡೆಯುತ್ತೆ ? ಯಾರೋ ಗ್ರಾಮಸ್ಥರು ಕೆಲವರು ಉತ್ಸಾಹದಿಂದ ಒಂದಿಷ್ಟು ಚಿತ್ರಾನ್ನ, ಎರಡು ಆಂಬೊಡೆ ಮಾಡಿಸಿ ಹಾಕುತ್ತಾರೆ. ಅವುಗಳಿಲ್ಲದೆ ಸಾಮಾನ್ಯ ಅಡಿಗೆಯೂ ಎಷ್ಟೋ ದಿನಗಳಲ್ಲಿ ನಡೆದಿಲ್ಲವೆ ? ಗ್ರಾಮಸ್ಥರು ಕರೆಯದೇ ನಾವು ಅಲ್ಲಿ ಸಭೆ ಸೇರಿಸುವುದಿಲ್ಲ. ನನ್ನ ಮೇಲೆ ಪುಕಾರು ಬರುವುದಕ್ಕೆ, ಅರ್ಜಿ ಹೋಗುವುದಕ್ಕೆ ಕಾರಣವಿಲ್ಲ !'

ಅರ್ಜಿಗಳು ಹೊಗಿವೆ ಸ್ವಾಮಿ ! ಯಾರು ಬರೆದು ಕಳಿಸಿದ್ದೂ ಏನೋ ಹೋಗಿವೆ, ಅಷ್ಟು ನನಗೆ ಗೊತ್ತಿದೆ. ನಾನು ದಿವಾನರಿಗೆ ಸತ್ಯಾಂಶಗಳನ್ನು ತಿಳಿಸಿದೆ. ಆವಲಹಳ್ಳಿಯಲ್ಲಿ ನಡೆದದ್ದನ್ನೆಲ್ಲ ವಿವರಿಸಿದೆ. ಅವರು ಸಂತೋಷಪಟ್ಟು ಕೊಂಡು, ಗ್ರಾಮಸ್ಥರನ್ನೂ ಉಪಾಧ್ಯಾಯರನ್ನೂ ಸೇರಿಸಿ, ಎಲ್ಲರಿಗೂ ತಿಳಿವಳಿಕೆ ಕೊಟ್ಟು ಚೆನ್ನಾಗಿ ಕೆಲಸ ಮಾಡುತ್ತಿದ್ದಾರಲ್ಲ ನಿಮ್ಮ ಇನ್ಸ್ಪೆಕ್ಟರು ! ಆಕ್ಷೇಪಣೆಗೆ ಏನೂ ಕಾರಣವಿಲ್ಲವಲ್ಲ !- ಎಂದು ಅಪ್ಪಣೆ ಕೊಡಿಸಿದರು.'

ಸರಿ, ಒಂದು ಆರೋಪಣೆಯಂತೂ ಆಯಿತು. ಇನ್ನೇನಿದೆ ನನ್ನ ಮೇಲೆ ??

ಇನ್ನೇನಿದೆ ಸ್ವಾಮಿ ! ಪುಂಡ ಪೋಕರಿಗಳ ಮಾತು ! ಅವಕೈಲ್ಲ ಬೆಲೆ ಕೊಡುವುದಕ್ಕಾಗುತ್ತದೆಯೆ ??

“ನೀವು ಏತಕ್ಕೆ ಮುಚ್ಚಿಟ್ಟು ಕೊಳ್ಳುತ್ತೀರಿ? ನನಗೆ ಆಗದವರು ಅರ್ಜಿಗಳನ್ನು ಹಾಕಿದ್ದಾರೆ. ಅವು ವಿಚಾರಣೆಗೆ ಬಂದೇ ಬರುತ್ತವೆ. ದೊಡ್ಡ ಸಾಹೇಬರು ಒಂದೋ ಇಲ್ಲಿಗೆ ಬರುತ್ತಾರೆ, ಇಲ್ಲವೋ ನನ್ನನ್ನೇ ಕರೆಸಿಕೊಳ್ಳುತ್ತಾರೆ. ನನ್ನ ಸಮಜಾಯಿಷಿಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ.

ಅದು ಯಾರು ಸ್ವಾಮಿ ಆ ತಿಮ್ಮಮ್ಮ ಎಂಬೊ ಹೆಂಗಸು ? ಹಿಂದೆ ಆಕೆಯನ್ನು ಈ ರೇಂಜು ಬಿಟ್ಟು ವರ್ಗ ಮಾಡಿಸಿದ್ದರೆ, ಪುನಃ ನೀವು ಆಕೆಯನ್ನು ಇಲ್ಲಿಗೆ ಕರೆಸಿಕೊಳ್ಳಬೇಕು ಎಂದು ಪ್ರಯತ್ನ ನಡೆಸುತ್ತಿದ್ದೀರಂತೆ! ಆಕೆಗೂ ನಿಮಗೂ ಕಾಗದಗಳು ಓಡಾಡುತ್ತಿವೆಯಂತೆ !?

ಈ ಅಪವಾದವೊಂದನ್ನು ನನ್ನ ತಲೆಗೆ ಕಟ್ಟಿದ್ದಾರೋ !?

ಅದೇನು ಸ್ವಾಮಿ ಆ ವಿಚಾರ ? ತಾವು ದೊಡ್ಡ ಮನುಷ್ಯರು. ಅಂಥ ಕೆಟ್ಟ ಚಾಳಿ ತಮ್ಮಲ್ಲಿ ಏನೂ ಇಲ್ಲ ಎಂಬುದನ್ನು ನಾನು ಬಲ್ಲೆ, ಆದರೂ ಸ್ವಲ್ಪ ಗಲಾಟೆ ಎದ್ದಿದೆ.

ಗೌಡರೇ ! ಆಕೆ ಯಾರೋ ನನಗೆ ಗೊತ್ತಿಲ್ಲ, ಆಕೆಯ ಮುಖವನ್ನೇ ನಾನು ನೋಡಿದವನಲ್ಲ. ರಿಕಾರ್ಡು ಮೂಲಕ ಮಾತ್ರ ಆಕೆಯನ್ನು ನಾನು ಬಲ್ಲೆ. ಆ ಚರಿತ್ರೆ ನಿಮಗೆ ಪೂರ್ತಿಯಾಗಿ ಹೇಳುತ್ತೇನೆ ಕೇಳಿ : ಹಿಂದೆ ಇದೇ ಊರಿನಲ್ಲಿ ಗರ್ಲ್ಸ್ ಸ್ಕೂಲಿನಲ್ಲಿ ಆಕೆ ಇದ್ದಳಂತೆ. ಊರಿನ ಮುನಿಸಿಪಲ್ ಕೌನ್ಸಿಲರು- ಒಬ್ಬರು ದೊಡ್ಡ ಮನುಷ್ಯರು ಆಕೆಯ ರಕ್ಷಕರು, ಆಕೆಗೆ ಮೂರು ನಾಲ್ಕು ಮಕ್ಕಳು; ಎಲ್ಲವೂ ಆ ದೊಡ್ಡ ಮನುಷ್ಯರದಂತೆ | ಮೇಲಕ್ಕೆ ಅರ್ಜಿಗಳು ಹೋಗಿ, ಸಾಹೇಬರು ಬಂದು ಖುದ್ದಾಗಿ ನೋಡಿ ಆಮೇಲೆ ಆಕೆಯನ್ನು ಇಲ್ಲಿಂದ ವರ್ಗಮಾಡಿಬಿಟ್ಟರು. ಈಚೆಗೆ ಆ ಕೌನ್ಸಿಲರ್ ದೊಡ್ಡ ಮನುಷ್ಯರು ನನ್ನ ಹತ್ತಿರ ಬಂದಿದ್ದರು. ಕರಿಯಪ್ಪನವರಿಂದ ಶಿಫಾರಸು ಪತ್ರ ತಂದಿದ್ದರು ; ಪುನಃ ಇಲ್ಲಿಗೇನೆ ಆಕೆಯನ್ನು ವರ್ಗಮಾಡಿಸಿಕೊಡಬೇಕು, ಆಕೆಯನ್ನು ನೋಡಿಕೊಳ್ಳುವವರು ಪರಸ್ಥಳದಲ್ಲಿ ಯಾರೂ ಇಲ್ಲ, ಬಹಳ ಕಷ್ಟ ಪಡುತ್ತಿದಾಳೆ-ಎಂದೆಲ್ಲ ಹೇಳಿದರು. ರಿಕಾರ್ಡುಗಳನ್ನು ನೋಡುತ್ತೇನೆ, ಆಲೋಚನೆ ಮಾಡುತ್ತೇನೆ- ಎಂದು ನಾನು ಅವರಿಗೆ ತಿಳಿಸಿದೆ. ಇದು ನಡೆದಿರುವ ವಿಚಾರ. ಆಕೆ ನನಗೆ ಕೆಲವು ಹುಚ್ಚು ಹುಚ್ಚು ಖಾಸಗಿ ಕಾಗದಗಳನ್ನು ಬರೆದಿದ್ದಳು. ನೇರವಾಗಿ ಕಾಗದ ಬರೆಯಕೂಡದು ; ರೇಂಜಿನ ಇನ್ಸ್ಪೆಕ್ಟರ್ ಮೂಲಕ ಅರ್ಜಿಗಳನ್ನು ಕಳಿಸಬೇಕು – ಎಂದು ಕಚೇರಿಯ ಮೂಲಕ ಒಂದೆರಡಕ್ಕೆ ಜವಾಬು ಹೋಯಿತು. ನನ್ನ ಹೆಂಡತಿಗೂ ಈ ವಿಷಯಗಳೆಲ್ಲ ಗೊತ್ತು. ಆಕೆ- ಈ ಹಾಳು ನೀತಿಗೆಟ್ಟ ಹೆಂಗಸರಿಗೆಲ್ಲ ಮೇಷ್ಟ್ರ ಕೆಲಸ ಏಕೆ ಕೊಡು ತಾರೆ ? ಹೆಣ್ಣು ಮಕ್ಕಳನ್ನು ಕೆಟ್ಟ ದಾರಿಗೆ ಎಳೆಯುವುದಿಲ್ಲವೇ ? ಶೀಲ ಚೆನ್ನಾಗಿರುವ ಹೆಂಗಸರಿಗೆ ಮಾತ್ರ ಕೆಲಸ ಕೊಡಬೇಕು ಎಂದು ಟೀಕಿಸಿದಳು. ಅಷ್ಟರಲ್ಲಿ ಅದು ಮುಗಿಯಿತು.

ಸ್ವಾಮಿ! ನನಗೇಕೋ ಬಹಳ ಆಶ್ಚರ್ಯವಾಗುತ್ತದೆ. ನಿಮ್ಮ ಮೇಲೆ ಹೀಗೆ ಪುಕಾರು ಹುಟ್ಟಿಸಿದ್ದಾರಲ್ಲ! ಎಂಥಾ ಜನ ! ಕೆಲವು ದಿನಗಳ ಹಿಂದೆ ಡೈರೆಕ್ಟರ್ ಸಾಹೇಬರು ಆಕೆಯನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ಮಾಡಿದರಂತೆ ! ಆಕೆ ಏನೇನು ಹೇಳಿಕೆಗಳನ್ನು ಕೊಟ್ಟಿದ್ದಾಳೋ ನಿಮ್ಮ ಮೇಲೆ !!

ರಂಗಣ್ಣನ ಮುಖದ ಕಳೆ ಇಳಿದುಹೋಯಿತು. ಆ ಹೊತ್ತಿಗೆ ಗೋಪಾಲ ಎರಡು ತಟ್ಟೆಗಳಲ್ಲಿ ಉಪಾಹಾರವನ್ನೂ ಎರಡು ಲೋಟಗಳಲ್ಲಿ ನೀರನ್ನೂ ತಂದು ಮೇಜಿನ ಮೇಲಿಟ್ಟನು. ಕಾರದವಲಕ್ಕಿ ಮತ್ತು ಮೈಸೂರುಪಾಕು ತಟ್ಟೆಯಲ್ಲಿದ್ದ ತಿಂಡಿಗಳು, ಗೌಡರು ಅದನ್ನು ನೋಡಿ, 'ಸ್ವಾಮಿ ! ಹೋಟೆಲಿಂದ ಇವುಗಳನ್ನೆಲ್ಲ ಏಕೆ ತರಿಸಿದಿರಿ ? ಇವುಗಳಿಗೆಲ್ಲ ದುಡ್ಡನ್ನು ಏಕೆ ಖರ್ಚು ಮಾಡಿದಿರಿ ?” ಎಂದು ಕೇಳಿದರು. ತನ್ನ ಮನಸ್ಸನ್ನು ಸಮಾಧಾನ ಮಾಡಿಕೊಂಡು,

'ಗೌಡರೇ ! ನಮ್ಮ ಮನೆಗೆ ಹೊಟಿಲಿಂದ ತಿಂಡಿಪ೦ಡಿ ತರಿಸುವುದಿಲ್ಲ. ಇದನ್ನೆಲ್ಲ ಮನೆಯಲ್ಲೇ ಮಾಡುತ್ತಾರೆ ' ಎಂದನು.

ಗೌಡರು ಮೈಸೂರು ಪಾಕನ್ನು ಬಾಯಿಗೆ ಹಾಕಿಕೊಂಡರು. 'ಏನು ಸ್ವಾಮಿ ? ಹೋಟೆಲಿನಲ್ಲಿ ಕೂಡ ಇಷ್ಟು ಚೆನ್ನಾಗಿ ಮಾಡುವುದಿಲ್ಲವಲ್ಲ ! ಆದರ ತಲೆಯ ಮೇಲೆ ಹೊಡೆದಂತೆ ಇದೆಯೇ !

“ಹೌದು. ಆದ್ದರಿಂದಲೇ ಹೋಟೆಲ್ ತಿಂಡಿಯ ಆಶೆ ನಮಗಾರಿಗೂ ಇಲ್ಲ. ಮನೆಯಲ್ಲಿ ಬೇಕಾದ ತಿಂಡಿಪಂಡಿಗಳನ್ನು ಆಕೆ ಮಾಡುತ್ತಿರು ತಾಳೆ. ನಾನು ಸರ್ಕಿಟಿಗೆ ಹೊರಟಾಗಲಂತೂ ನನ್ನ ಕೈ ಪೆಟ್ಟಿಗೆಯಲ್ಲಿ ತುಂಬಿಡುತ್ತಾಳೆ!

“ ಹೌದು ಸ್ವಾಮಿ ! ನನಗೆ ಜ್ಞಾಪಕವಿದೆ. ಹರಪುರದ ಕ್ಯಾಂಪಿನಲ್ಲಿ ತಾವು ಕೊಟ್ಟ ತೇಂಗೊಳಲು ಬೇಸಿನ್ ಲಾಡು, ಇನ್ನೂ ನನ್ನ ನಾಲಿಗೆ ಯಲ್ಲಿ ನೀರೂರಿಸುತ್ತಿವೆ !

'ನಾನು ಯಾವುದಕ್ಕೂ ತಾಪತ್ರಯ ಪಟ್ಟು ಕೊಳ್ಳಬೇಕಾದ್ದಿಲ್ಲ ಗೌಡರೇ ! ದೇವರು ಯಾವ ವಿಚಾರಕ್ಕೂ ಕಡಮೆ ಮಾಡಿಲ್ಲ. ನಾನು ಸಂತೋಷವಾಗಿ ಮತ್ತು ಸೌಖ್ಯವಾಗಿ ಸಂಸಾರ ನಡೆಸಿ ಕೊಂಡು ಹೋಗುತ್ತಿದೇನೆ. ಎಲ್ಲವು ವಯಿನವಾಗಿವೆ. ಈ ಇನ್ ಸ್ಪೆಕ್ಟರ್ ಗಿರಿಯಲ್ಲಿ ನನ್ನ ಕೆಲವು ಭಾವನೆಗಳನ್ನೂ ತತ್ತ್ವಗಳನ್ನೂ ಕಾರ್ಯರೂಪಕ್ಕೆ ತಂದು ವಿದ್ಯಾಭಿವೃದ್ಧಿಯನ್ನುಂಟುಮಾಡೋಣ, ಒಂದು ಮಾರ್ಗದರ್ಶನ ಮಾಡೋಣ, ಉಪಾಧ್ಯಾಯರನ್ನೂ ನಗಿಸುತ್ತ ನಾನೂ ನಗುನಗುತ್ತ ಕೆಲಸ ಮಾಡಿಕೊಂಡು ಹೋಗೋಣ – ಎಂಬ ಧೈಯಗಳನ್ನಿಟ್ಟು ಕೊಂಡಿದ್ದೇನೆ. ಆದರೆ ನನ್ನ ಮೇಲೆ ನಿಮ್ಮ ಮುಖಂಡರು ಛಲ ಸಾಧಿಸುತ್ತಿದಾರೆ, ನನ್ನ ಮೇಲೆ ಇಲ್ಲದ ನಿಂದೆಗಳನ್ನು ಹೊರಿಸುತ್ತಿದಾರೆ. ಅವರಿಗೆ ನಾನೇನು ಅಪಕಾರ ಮಾಡಿದ್ದೆ ನೆಂಬುದು ತಿಳಿಯದು. ನನ್ನೊಡನೆ ನೀವುಗಳೆಲ್ಲ ಸಹಕರಿಸುವಂತೆ ಅವರೂ ಸಹಕರಿಸಿದರೆ ಎಷ್ಟು ಚೆನ್ನಾಗಿರುತ್ತದೆ ! ನನ್ನ ಮನಸ್ಸಿಗೂ ಎಷ್ಟೊಂದು ನೆಮ್ಮದಿಯುಂಟಾಗುತ್ತದೆ ! ಒಳ್ಳೆಯ ಕೆಲಸಕ್ಕೂ ಹೀಗೆ ಅಡಚಣೆಗಳು ಬಂದರೆ ಹೇಗೆ ? ಎಂದು ನಾನು ನೊಂದು ಕೊಂಡಿದ್ದೇನೆ.'

'ಸ್ವಾಮಿ ! ತಾವು ನೊಂದುಕೊಳ್ಳಬೇಡಿ. ಆ ಮುಖಂಡರ ವಿಚಾರವೆಲ್ಲ ನನಗೆ ಗೊತ್ತಿದೆ. ಅವರಿಗೆ ಸರಕಾರದ ಅಧಿಕಾರಿಗಳನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳಬೇಕು, ತಾವು ಹೇಳಿದಂತೆ ವರ್ಗಾವರ್ಗಿಗಳನ್ನೂ ಪ್ರಮೋಷನ್ನುಗಳನ್ನೂ ಅಧಿಕಾರಿಗಳು ಮಾಡುತ್ತಿರಬೇಕು, ರಸ್ತೆ ಕಾಮಗಾರಿಯ ಕಂಟ್ರಾಕ್ಟೋ, ಕಟ್ಟಡಗಳನ್ನು ಕಟ್ಟುವುದರ ಕಂಟ್ರಾಕ್ಟೋ ಇದ್ದರೆ ಅವು ತಮಗೋ ತಮ್ಮ ಕಡೆಯವರಿಗೋ ದೊರೆಯಬೇಕು- ಮುಂತಾದ ದುರಾಕಾಂಕ್ಷೆಗಳಿವೆ. ತಾವು ಈ ರೇಂಜಿಗೆ ಬಂದಮೇಲೆ ತಾವೇ ನೇರವಾಗಿ ಉಪಾಧ್ಯಾಯರೊಡನೆ ವ್ಯವಹರಿಸಿ ಎಲ್ಲವನ್ನೂ ಮಾಡಿಕೊಂಡು ಹೋಗುತ್ತಿದ್ದಿರಿ ; ಮುಖಂಡರ ಕೈಗೊಂಬೆಯಾಗಿ ತಾವು ಏನನ್ನೂ ನಡೆಸುತ್ತಿಲ್ಲ. ಅವರನ್ನು ತಾವು ಅನುಸರಣೆ ಮಾಡಿಕೊಂಡು ಹೋಗುತ್ತಿಲ್ಲ. ಅವರ ಪ್ರತಿಷ್ಠೆಗೆ ಈಗ ಸ್ವಲ್ಪ ಕುಂದುಕ ಬಂದಿದೆ. ತಮಗೆ ಕಿರುಕುಳಗಳನ್ನು ಕೊಡುತ್ತಾರೆ. ಅಲ್ಪ ಜನ ! ಸ್ವಾರ್ಥಿಗಳು ! ತಾವು ಮನಸ್ಸಿಗೆ ಹಚ್ಚಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನಾವುಗಳೆಲ್ಲ ನೋಡುತ್ತಿದ್ದೇವೆ. ಜನರೆಲ್ಲ ನೋಡಿ ಸಂತೋಷ ಪಡುತ್ತಿದಾರೆ ; ಉಪಾಧ್ಯಾಯರಂತೂ ತಮ್ಮಲ್ಲಿ ಭಕ್ತಿ ವಿಶ್ವಾಸಗಳನ್ನು ಬಹಳವಾಗಿ ಇಟ್ಟಿದ್ದಾರೆ. ಈ ರೇ೦ಜಿನಲ್ಲಿ ದಂಡನೆಯೇ ಇಲ್ಲದೆ ಎಲ್ಲರನ್ನೂ ತಾವು ಕಾಪಾಡಿಕೊಂಡು ಹೋಗುತ್ತಿದ್ದೀರಿ ; ಮೇಷ್ಟ್ರುಗಳಿಂದ ಚೆನ್ನಾಗಿ ಕೆಲಸ ತೆಗೆಯುತ್ತಿದ್ದೀರಿ ; ಮಕ್ಕಳಲ್ಲಿ ವಿದ್ಯಾಭಿವೃದ್ಧಿಯನ್ನುಂಟುಮಾಡುತ್ತಿದ್ದೀರಿ.'

'ತಮ್ಮಂಥ ದೊಡ್ಡ ಮನುಷ್ಯರ, ರೈತಮುಖಂಡರ ಪ್ರೋತ್ಸಾಹವೇ ನನಗೆ ಸ್ಫೂರ್ತಿಯನ್ನೂ ಶಕ್ತಿಯನ್ನೂ ಕೊಡುತ್ತಿವೆ. ನನ್ನ ಕೆಲಸವನ್ನು ನಿರ್ವಂಚನೆಯಿಂದ ಮಾಡಿಬಿಡುತ್ತೇನೆ. ಕೀರ್ತಿ ಅಪಕೀರ್ತಿಗಳು ದೈವಕೃಪೆ !! ಗೋಪಾಲನು ಎರಡು ಲೋಟಗಳಲ್ಲಿ ಕಾಫಿ ತಂದು ಕೊಟ್ಟನು. ಕಾಫಿ ಸೇವನೆಯ ತರುವಾಯ ಗೌಡರು, ' ನಾನು ಹೊರಡುತ್ತೇನೆ ಸ್ವಾಮಿ ! ಆವಲಹಳ್ಳಿಯಲ್ಲಿ ಒಂದು ಮೊಕ್ಕಾಂ ಇಟ್ಟು ಕೊಳ್ಳಿರಿ' ಎಂದು

ಹೇಳಿ ಹೊರಟರು.

ಪ್ರಕರಣ ೧೯

ಉತ್ಸಾಹಭಂಗ

ರಂಗಣ್ಣ ತಿಮ್ಮರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು ; ತನಗೆ ಹಾಳು ಇನ್ ಸ್ಪೆಕ್ಟರ್‌ಗಿರಿ ಸಾಕಾಯಿತೆಂದು ತಿಳಿಸಿದನು. ಆ ಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ಮುಂದಿನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕೆಂದೂ ನಿಶ್ಚಿಸಿದನು. ಹೊಸದಾಗಿ ಬಂದವರು ತನಗೆ ಚೆನ್ನಾಗಿ ತಿಳಿದವರು ; ತನ್ನಲ್ಲಿ ವಿಶ್ವಾಸ ಮತ್ತು ಗೌರವಗಳನ್ನು ಇಟ್ಟಿರತಕ್ಕವರು ಆದ್ದರಿಂದ ಅವರಿಗೆ ಎಲ್ಲವನ್ನೂ ತಿಳಿಸುವುದು ಒಳ್ಳೆಯದೆಂದು ಆಲೋಚನೆ ಮಾಡಿ ಪ್ರಯಾಣಕ್ಕೆ ಸಿದ್ಧನಾಗುತ್ತಿದ್ದಾಗ ಜನಾರ್ದನಪುರದ ಫೈಮರಿ ಸ್ಕೂಲು ಹೆಡ್ ಮಾಸ್ಟರು ಬಂದು ಕೈ ಮುಗಿದನು. ಆ ಮನುಷ್ಯನ ಮುಖ ದುಗುಡದಿಂದ ತುಂಬಿತ್ತು. ಆತನ ಕೈಯಲ್ಲಿ ಒಂದು ಉದ್ದವಾದ ಲಕೊಟೆ ಇತ್ತು.

“ ಏನು ಹೆಡ್‌ಮೇಷ್ಟೆ ? ಏನು ಸಮಾಚಾರ ? ಈಗ ನಾನು ಪ್ರಯಾಣದ ತರಾತುರಿಯಲ್ಲಿದ್ದೆನಲ್ಲ ! ಹೆಚ್ಚು ಕಾಲ ಮಾತುಕತೆಗಳಲ್ಲಿ ಕೂಡಲಾರೆ' ಎಂದು ರಂಗಣ್ಣ ಹೇಳಿದನು.

ಸ್ವಾಮಿಯವರಿಗೆ ಯಾವಾಗಲೂ ಪ್ರಯಾಣ, ಯಾವಾಗಲೂ ಸರ್ಕೀಟು, ಯಾವಾಗಲೂ ಕೆಲಸದ ತರಾತುರಿ ಇದ್ದೇ ಇರುತ್ತೆ ! ಬಡ ತಾಪೇದಾರರ ಅಹವಾಲನ್ನು ಸಹ ಸ್ವಲ್ಪ ಕೇಳಿ ಸ್ವಾಮಿ !'

ನಿಮಗೇನು ತೊಂದರೆ ಬಂದಿದೆ ? ನಿಮ್ಮ ಅಹವಾಲು ಎಂಥದು ಹೆಡ್ ಮೇಷ್ಟೆ ?

ಈ ಹೆಡ್‌ಮೇಷ್ಟ ಪಟ್ಟ ಸಾಕು ಸ್ವಾಮಿ ! ನನ್ನನ್ನು ಇಲ್ಲಿಂದ ವರ್ಗ ಮಾಡಿಬಿಟ್ಟರೆ ಬದುಕಿಕೊಳ್ಳುತ್ತೇನೆ. ಇಲ್ಲದಿದ್ದರೆ ಇನ್ನು ಕೆಲವು ದಿನ ಗಳೊಳಗಾಗಿ ನನ್ನ ಸಾವು ಖಂಡಿತ ! ಖಂಡಿತ ಸ್ವಾಮಿ !” “ಅದೇನು ? ನೀವು ಸಾಯುವುದಕ್ಕೆ ಕಾರಣ ??

“ಆ ಉಗ್ರಪ್ಪನ ಕಾಟವನ್ನು ನಾನು ಸಹಿಸಲಾರೆ ಸ್ವಾಮಿ ! ಈಚೆಗಂತೂ ಮಾನ ಮರ್ಯಾದೆ ಬಿಟ್ಟು ಎಲ್ಲರೆದುರಿಗೂ ಹುಚ್ಚು ಹುಚ್ಚಾಗಿ ಬಯ್ಯುತ್ತಾನೆ. ಪಾಠಶಾಲೆಯಲ್ಲಿ ಪಾಠಗಳನ್ನು ಮಾಡುವುದೇ ಇಲ್ಲ. ಹಾಯಾಗಿ ಮೇಜಿನ ಮೇಲೆ ಕಾಲು ಸೀಟಿಕೊಂಡು ಕುರ್ಚಿಗೆ ಓರಗಿಕೊಂಡು ನಿದ್ದೆ ಮಾಡುತ್ತಾನೆ. ಸ್ವಾಮಿಯವರಿಗೆ ಹಿಂದೆಯೇ ಅರಿಕೆ ಮಾಡಿಕೊಂಡಿದ್ದೆ. ಚಿತ್ರಕ್ಕೆ ಬರಲಿಲ್ಲ.'

ರಂಗಣ್ಣನಿಗೆ ಮೇಷ್ಟು ಉಗ್ರಪ್ಪ ನ ವಿಚಾರ ಚೆನ್ನಾಗಿ ತಿಳಿದಿತ್ತು. ಕರಿಯಪ್ಪ ಮತ್ತು ಕಲ್ಲೇಗೌಡರ ಏಜೆಂಟು ಅವನು. ಹಿಂದೆ ಎರಡು ಬಾರಿ ಜನಾರ್ದನಪುರದ ರೇಂಜಿನಿಂದ ವರ್ಗವಾಗಿ ಪುನಃ ಆ ವರ್ಗದ ಆರ್ಡರು ರದ್ದಾಗಿ ಜನಾರ್ದನಪುರದಲ್ಲಿ ಪಾಳೆಯಗಾರನಾಗಿ ಮೆರೆಯುತ್ತಿರುವ ಸಿಪಾಯಿ ಮೇಷ್ಟು ? ಈಗ ಆವನು ಪುಂಡಾಟಕ್ಕೆ ಪ್ರಾರಂಭಮಾಡಿದ್ದಾನೆಂದು ತಿಳಿಯುತ್ತಲೂ- ತನಗೆ ಎಲ್ಲ ಕಡೆಗಳಿಂದಲೂ ತೊಂದರೆಕೊಡುವುದೂ ಅಪಮಾನಪಡಿಸುವುದೂ ಆ ಮುಖಂಡರ ಹಂಚಿಕೆಯೆಂದು ರಂಗಣ್ಣನಿಗೆ ಬೋಧೆಯಾಯಿತು. ರಂಗಣ್ಣ ಮೌನವಾಗಿದ್ದುದನ್ನು ನೋಡಿ, ಹೆಡ್ ಮೇಷ್ಟ್ಟ್ರು ತಾನೇ ಮಾತನ್ನು ಮುಂದುವರಿಸಿದನು.

“ಮೊನ್ನೆ ರಗತಿಯಿಂದ ಕೆಲವರು ಹುಡುಗರನ್ನೆಲ್ಲ ಹೊರಕ್ಕೆ ಕಳಿಸಿಬಿಟ್ಟು ನಿಮಗೆ ನಾನು ಪಾಠ ಮಾಡುವುದಿಲ್ಲ ! ಹೋಗಿ ನಿಮ್ಮ ಹೆಡ್ ಮಾಸ್ಟರ ಕೊಟಡಿಗೆ ! ಅಲ್ಲೇ ಕುಳಿತುಕೊಂಡು ಪಾಠ ಹೇಳಿಸಿಕೊಳ್ಳಿ!-ಎಂದು ಗಟ್ಟಿಯಾಗಿ ಕೂಗಾಡಿದ ಸ್ವಾಮಿ ಆತ. ನಾನು ಅಲ್ಲಿಗೆ ಹೋಗಿ ಉಗ್ರಪ್ಪನವರೇ ! ಹಾಗೆಲ್ಲ ಹುಡುಗರನ್ನು ಗದರಿಸಿ ಹೊರಕ್ಕೆ ಕಳಿಸಬೇಡಿ- ಎಂದು ವಿನಯದಿಂದ ಹೇಳಿದೆ. ನಾನು ಮುವ್ವತ್ತು ಜನಕ್ಕಿಂತ ಹೆಚ್ಚಿಗೆ ಹುಡುಗರಿಗೆ ಪಾಠ ಹೇಳೋದಿಲ್ಲ - ಎಂದು ಆತ ಹಟ ಮಾಡಿದ. ನಾನೇನು ಮಾಡಲಿ ಸ್ವಾಮಿ ? ಇತರ ಮೇಷ್ಟು ಗಳನ್ನು ಎತ್ತಿ ಕಟ್ಟ ಪಾಠಶಾಲೆಯಲ್ಲಿ ಕೆಲಸ ನಡೆಯದಂತೆ ಮಾಡಿದ್ದಾನೆ.'

“ನೀವು ಆತನಿಂದ ಸಮಜಾಯಿಷಿ ಕೇಳಿ. ಬರವಣಿಗೆಯಲ್ಲಿ ಏನೇನು ಹೇಳುತ್ತಾನೋ ನೋಡೋಣ. 'ಮೆಮೋ ಮಾಡಿ, ಜವಾನನ ಕೈಯಲ್ಲಿ ಕಳಿಸಿಕೊಟ್ಟೆ. ಆ ಮೆಮೋವಿಗೆ ರುಜು ಮಾಡಲಿಲ್ಲ. ಜವಾನನಿಗೆ ಎರಡು ಏಟು ಬಿಗಿದು ಕಳಿಸಿಬಿಟ್ಟ ಸ್ವಾಮಿ ! ಆ ಜವಾನ ಅಳುತ್ತಾ ಬಂದು ಮೆಮೋ ಪುಸ್ತಕವನ್ನು ಮೇಜಿನ ಮೇಲಿಟ್ಟು-ಸ್ವಾಮಿ ! ನನಗೆ ನಾಲ್ಕು ದಿನ ರಜಾ ಕೊಡಿ, ನಾನು ಸ್ಕೂಲಿಗೆ ಬರೋಕಾಗೋದಿಲ್ಲ ಎಂದು ಹೇಳಿದನು. ಹೋಗಿ~ ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳಬಾರದು ಉಗ್ರಪ್ಪನವರೇ ! ಜವಾನನಿಗೆ ಹೊಡೆದದ್ದು ತಪ್ಪು ಎಂದು ಹೇಳಿದೆ. ನನ್ನನ್ನು ದುರುಗುಟ್ಟಿಕೊಂಡು ಆತ ನೋಡುತ್ತ-ನನಗೆ ಮೆಮೋ ಕಳಿಸೋ ಹಡ್ ಮೇಷ್ಟ್ರು ಇದುವರೆಗೂ ಹುಟ್ಟಿಕೊಂಡಿರಲಿಲ್ಲ. ಇನ್ಸ್ಪೆಕ್ಟರ ಬೆಂಬಲ ಇದೆ ಎಂದು ನನಗೆ ಮೆಮೋ ಮಾಡಿದ್ದೀರಿ. ಮಕ್ಕಳೊಂದಿಗರು ನೀವು ! ಹುಷಾರಾಗಿರಿ !~ ಎಂದು ಎಲ್ಲರೆದುರಿಗೂ ಹೇಳಿದ ಸ್ವಾಮಿ ! ನನಗೆ ಕೈ ಕಾಲು ಅದುರಿಹೋಯಿತು. ಆ ಮನುಷ್ಯನನ್ನು ನೋಡಿದರೇನೇ ಸಾಕು, ಎಂಥವರಿಗಾದರೂ ಭಯವಾಗುತ್ತೆ ! ಅಂಥ ಭಾರಿ ಆಳು ! ಆತನ ಕೈಯಲ್ಲಿ ದೊಣ್ಣೆ ! ಅದೇನು ಒನಕೆಯೋ ಏನೋ ಎನ್ನುವ ಹಾಗಿದೆ ! ಮಹಾ ಪು೦ಡ ಮನುಷ್ಯ ! ರೇಗಿ ಒಂದು ಬಾರಿ ಅಪ್ಪಳಿಸಿಬಿಟ್ಟರೆ ನನ್ನ ಆಯುಸ್ಸು ಮುಗಿದು ಹೋಗುತ್ತೆ !

'ಈಗ ನಡೆದಿರುವ ವಿಚಾರವನ್ನೆಲ್ಲ ರಿಪೋರ್ಟು ಮಾಡಿ ; ಇತರ ಅಸಿಸ್ಟೆಂಟರ ಹೇಳಿಕೆಗಳನ್ನು ತೆಗೆದು ಕಳಿಸಿಕೊಡಿ ; ಜವಾನನ ಹೇಳಿಕೆ ಯನ್ನು ತೆಗೆದು ಕಳಿಸಿ, ಆಲೋಚನೆ ಮಾಡುತ್ತೇನೆ. ಈಗ ನಾನು ಸಾಹೇಬರನ್ನು ನೋಡಿಕೊಂಡು ಬರಬೇಕು.”

“ಅಪ್ಪಣೆ ಸ್ವಾಮಿ ! ನನ್ನ ರಿಪೋರ್ಟನ್ನೂ, ಕೆಲವರು ಅಸಿಸ್ಟೆಂಟರ ಹೇಳಿಕೆಯನ್ನೂ, ಜವಾನನ ಹೇಳಿಕೆಯನ್ನೂ ಎಲ್ಲವನ್ನೂ ಈ ಲಕೋಟೆಯಲ್ಲಿಟ್ಟಿದ್ದೇನೆ ಸ್ವಾಮಿ ! ಪರಾಂಬರಿಸಬೇಕು. ಜಾಗ್ರತೆ ತಾವು ಇದನ್ನು ಫೈಸಲ್ ಮಾಡಬೇಕು. ಒಂದು ಕ್ಷಣ ಎನ್ನುವುದು ನನಗೆ ಒಂದು ಯುಗದಂತೆ ಆಗಿದೆ

“ನಾನು ಹೆಡ್ ಕ್ವಾರ್ಟರಿಗೆ ಹಿಂದಿರುಗಿ ಬಂದಮೇಲೆ ಈ ವಿಚಾರಕ್ಕೆ ಗಮನ ಕೊಡುತ್ತೇನೆ. ನೀವು ಈ ಮಧ್ಯೆ ಏನೇನು ನಡೆಯುತ್ತದೆಯೋ ಎಲ್ಲಕ್ಕೂ ಸರಿಯಾಗಿ ರಿಕಾರ್ಡಿಡಿ. ಆತನಿಗೆ ಒಳ್ಳೆಯ ಮಾತಿನಲ್ಲಿ ಬುದ್ಧಿಯನ್ನೂ ಹೇಳಿ, ಬೇಕಾಗಿದ್ದರೆ ನನ್ನ ಹತ್ತಿರ ಕಳಿಸಿಕೊಡಿ. ನಾನೂ ಬುದ್ಧಿ ಹೇಳುತ್ತೇನೆ. ನಮ್ಮ ಮಾತುಗಳನ್ನು ಕೇಳದೆ ಪುಂಡಾಟ ಮಾಡಿದರೆ ಗೊತ್ತೇ ಇದೆ : ದಂಡಂ ದಶಗುಣಂ ಭವೇತ್ ; ದಂಡೇನ ಗೌರ್ಗಾರ್ದಭ… ?

ಅಪ್ಪಣೆ ಸ್ವಾಮಿ ! ನಾನು ಮಕ್ಕಳೊಂದಿಗೆ, ನನಗೆ ಜಮೀನು ಮನೆ ಮೊದಲಾದ ಆಸ್ತಿಯೇನೂ ಇಲ್ಲ. ನಾನು ಸತ್ತರೆ ನನ್ನ ಹೆಂಡತಿ ಮಕ್ಕಳ ಪಾಡು ನಾಯಿನಾಡಾಗುತ್ತದೆ. ಬುರುವ ಅಲ್ಪ ಇನ್ಷುರೆನ್ಸ್ ಹಣದಲ್ಲಿ ಏನನ್ನು ತಾನೇ ಮಾಡಲಾಗುತ್ತದೆ ? ಮನೆ ಬಿಟ್ಟು ಒಂಟಿಯಾಗಿ ಓಡಾಡುವುದಕ್ಕೆ ಹೆದರಿಕೆಯಾಗುತ್ತೆ ಸ್ವಾಮಿ ! ಸಾಯಲಿ ಕಾಲವಂತೂ ಕತ್ತಲಾಗುವುದರೊಳಗಾಗಿ ಮನೆ ಸೇರಿಕೊಳ್ಳುತ್ತೇನೆ. ರಾತ್ರಿ ಹೊತ್ತು ನಿದ್ರೆ ಬರುವುದಿಲ್ಲ ! ಕನಸಿನಲ್ಲಿಯೂ ನೆನಸಿನಲ್ಲಿಯೂ ಆ ಉಗ್ರಪ್ಪನ ಆಕಾರವೇ ! ಅವನ ಕೈಯ ದೊಣ್ಣೆಯೆ ! ?

ಒಳ್ಳೆಯದು ಹೆಡ್ ಮೇಷ್ಟ್ರೇ  ! ಏನು ಮಾಡುವುದು ? ದುಷ್ಟರ ಸಹವಾಸ ! ಆತ ಧರಿಸುವ ಖಾದಿ ನೋಡಿದರೆ ಗಾಂಧಿಯವರ ಶಿಷ್ಯ ! ಆತನ ದುರ್ವಿದ್ಯೆ ನೋಡಿದರೆ ಸೈತಾನಿನ ಶಿಷ್ಯ ! ?

ಹೆಡ್ ಮೇಷ್ಟು ಕೈ ಮುಗಿದು ಹೊರಟು ಹೋದನು. ಶಂಕರಪ್ಪ ಬಂದು, ಬಹಳ ಜರೂರು ಕಾಗದಗಳು ! ಸ್ವಾಮಿಯವರ ರುಜುವಾಗಬೇಕು. ಎಂದು ಹೇಳಿ ಕೆಲವು ಕಾಗದಗಳನ್ನು ಮೇಜಿನ ಮೇಲಿಟ್ಟನು. ರಂಗಣ್ಣ ನಿಂತಹಾಗೆಯೇ ಅವುಗಳಿಗೆ ರುಜುಗಳನ್ನು ಕಿರಕಿ ಕೊಟಡಿಯಿಂದ ಹೊರಟನು. ಆ ಹೊತ್ತಿಗೆ ರಂಗನಾಧ ಪುರ ಕೇಂದ್ರದ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ತಿಮ್ಮಣ್ಣ ಭಟ್ಟ ಬಂದು ಕೈ ಮುಗಿದು ಎರಡು ನಿಂಬೇಹಣ್ಣುಗಳನ್ನು ರಂಗಣ್ಣನಿಗೆ ಕಾಣಿಕೆ ಕೊಟ್ಟನು.

'ಸ್ವಾಮಿಯವರ ಸವಾರಿ ನಾಳಿದ್ದು ರಂಗನಾಥಪುರಕ್ಕೆ ಪ್ರೋಗ್ರಾಂ ಇದೆ. ಸಂಘದ ಸಭೆ ಏರ್ಪಾಟಾಗಿದೆ. ಸ್ವಾಮಿಯವರಿಗೆ ಜ್ಞಾಪಿಸಿ ಹೋಗೋಣವೆಂದು ಬಂದಿದ್ದೇನೆ.' ಆಗಲಿ ಭಟ್ಟರೇ ! ಬರುತ್ತೇವೆ. ಆದರೆ ಈ ಬಾರಿ ಊಟದ ಏರ್ಪಾಟು ಇಟ್ಟು ಕೊಳ್ಳಬೇಡಿ. ಸಭೆಯನ್ನು ಮಧ್ಯಾಹ್ನ ಹನ್ನೆರಡು ಗಂಟೆಗೆ ಸೇರಿಸೋಣ. ಉಪಾಧ್ಯಾಯರೆಲ್ಲ ಊಟಗಳನ್ನು ಮಾಡಿಕೊಂಡೇ ಬರಲಿ, ಸಾಯಂಕಾಲ ಐದು ಗಂಟೆಗೆ ಮುಕ್ತಾಯ ಮಾಡಿದರೆ ಅವರವರ ಊರುಗಳನ್ನು ಕತ್ತಲೆಯಾಗುವುದರೊಳಗೆ ಸೇರಿಕೊಳ್ಳುತ್ತಾರೆ.

ಗಂಗೇಗೌಡರು ಎಲ್ಲ ಏರ್ಪಾಟುಗಳನ್ನೂ ಮಾಡಿಬಿಟ್ಟಿದ್ದಾರೆ ಸ್ವಾಮಿ.

ಮಾಡಿದ್ದ ರೇನು ? ಇವರಿಗೆ ಈ ಕೂಡಲೆ ತಿಳಿಸಿಬಿಡಿ, ಊಟದ ವ್ಯವಸ್ಥೆಗಳು ಬರಬರುತಾ ರಗಳೆಗೆ ಹಿಡಿದುಕೊಂಡಿವೆ. ತುಂಟರು ಅರ್ಜಿಗಳನ್ನು ಬರೆಯುವುದಕ್ಕೆ ಅವಕಾಶವಾಗಿದೆ. ಇನ್ನು ಮುಂದೆ ಊಟದ ಏರ್ಪಾಡು ರದ್ದು !

ಸ್ವಾಮಿಯವರಿಗೆ ಬಹಳ ಬೇಸರಿಕೆ ಆದ ಈ ಗೆ ಕಾಣುತ್ತೆ. ನಮ್ಮ ಮೇಷ್ಟರುಗಳಲ್ಲಿ ತಮ್ಮ ಮೇಲೆ ಅರ್ಜಿ ಬರೆಯುವವರು ಯಾರೂ ಇಲ್ಲ ಸ್ವಾಮಿ ! ನಾನು ಬಲ್ಲೆ. ಗ್ರಾಮಸ್ಥರು ಎಷ್ಟೋ ಸಂತೋಷದಿಂದ ಚಪ್ಪರ ಹಾಕಿ, ವರ್ಷಕ್ಕೊಂದು ಉತ್ಸವ ಎಂದು ಭಾವಿಸಿಕೊಂಡು ಒಪ್ಪೊತ್ತು ಆದರಾತಿಥ್ಯ ಮಾಡುತ್ತಾರೆ. ಅವರು ಯಾರೂ ಅರ್ಜಿ ಬರೆಯೋವರಲ್ಲ, ಈ ದಿನ ಗಂಗೇಗೌಡರೇ ಇಲ್ಲಿಗೆ ಬರುತ್ತಿದ್ದರು. ಸ್ವಾಮಿಯವರು ಸರ್ಕಿಟು ಹೊರಟಿರುತ್ತೀರೋ ಏನೋ, ನಾನೇ ಹೋಗಿ ನೋಡಿಕೊಂಡು ಬರುತ್ತೇನೆ ; ಇದ್ದರೆ ಜ್ಞಾಪಿಸಿ ಬರುತ್ತೇನೆ ಎಂದು ಸಮಾಧಾನ ಹೇಳಿ ನಾನು ಹೊರಟು ಬಂದೆ ?

ಭಟ್ಟರೇ ! ನೀವು ಹೇಳುವುದನ್ನೆಲ್ಲ ನಾನು ಆಲೋಚನೆ ಮಾಡಿದೇನೆ. ಹೊಸದಾಗಿ ನೀವೇನೂ ಹೇಳುತ್ತಿಲ್ಲ. ಊಟದ ವ್ಯವಸ್ಥೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದ್ದೇನೆ. ಈಗ ನೀವು ನಿಮ್ಮ ಕೇಂದ್ರದ ಉಪಾಧ್ಯಾಯರಿಗೆಲ್ಲ ವರ್ತಮಾನ ಕೊಟ್ಟು ಬಿಡಿ. ಅಪ್ಪಿ ತಪ್ಪಿ ಯಾರಾದರೂ ಊಟವಿಲ್ಲದೆ ಬಂದರೆ ನಮ್ಮ ಬಿಡಾರದಲ್ಲಿ ಊಟ ಮಾಡುತ್ತಾರೆ.'

ಗ್ರಾಮಸ್ಥರಿಗೆ ನಾನು ಹೇಗೆ ಈ ವರ್ತಮಾನ ಕೊಡುವುದೊ ತಿಳಿಯದು ಸ್ವಾಮಿ ! ಗಂಗೇ ಗೌಡರಿಗೆ ಹೇಗೆ ಮುಖ ತೋರಿಸಲಿ ! ಈ ಬಾರಿಗೆ ದಯವಿಟ್ಟು ನಡೆಸಿಕೊಡಬೇಕು. ಮುಂದಿನ ಸಭೆಗೆ ತಮ್ಮ ಇಷ್ಟದಂತೆಯೇ ಊಟದ ಏರ್ಪಾಟನ್ನು ಕೈ ಬಿಡಬಹುದು.

'ಅದೆಲ್ಲಾ ಆಗುವುದಿಲ್ಲ! ಪಂಚಾಯತಿ ಚೇರ್ಮನ್ನರಿಗೆ ನಾನೇ ಕಾಗದ ಕೊಡುತ್ತೇನೆ. ತೆಗೆದುಕೊಂಡು ಹೋಗಿ ಅವರಿಗೆ ತಲುಪಿಸಿ. ಬಹಳ ಒತ್ತಾಯಕ್ಕೆ ಬಂದರೆ ಮಧ್ಯಾಹ್ನ ಉಪ್ಪಿಟ್ಟು ಮತ್ತು ಕಾಫಿಯ ಏರ್ಪಾಟನ್ನು ಮಾತ್ರ ಇಟ್ಟು ಕೊಳ್ಳಲಿ. ಊಟದ ಏವಾ೯ಟು ಖಂಡಿತ ಬೇಡ !!

ಹೀಗೆಂದು ಹೇಳಿ ರಂಗಣ್ಣ ಶಂಕರಪ್ಪನನ್ನು ಕರೆದು ಒಂದು ಕಾಗದವನ್ನು ಚೇರ್ಮನ್ ಗಂಗೇಗೌಡರಿಗೆ ಬರೆರು ತರುವಂತೆ ತಿಳಿಸಿದನು. ಅದರಂತೆ ಕಾಗದವನ್ನು ಬರೆದು ಆತ ತಂದು ಕೊಟ್ಟನು. ರಂಗಣ್ಣ ರುಜು ಮಾಡಿ, “ಭಟ್ಟರೇ ! ಈ ಕಾಗದವನ್ನು ತೆಗೆದು ಕೊಂಡು ಹೋಗಿ ಕೊಡಿ, ನಾನು ನಾಳೆ ಸಾಯಂ ಕಾಲಕ್ಕೆ ರಂಗನಾಥಪುರಕ್ಕೆ ಬರುತ್ತೇನೆ ನಮ್ಮ ಬಿಡಾರ ನಾಳೆ ಮಧ್ಯಾಹ್ನಕ್ಕೋ ಸಂಜೆಗೋ ಅಲ್ಲಿಗೆ ಬರುತ್ತದೆ. ಮುಸಾಫರಖಾನೆಯನ್ನು ಚೊಕ್ಕಟಮಾಡಿಸಿ ಇಟ್ಟರಿ' - ಎಂದು ಹೇಳಿ ಹೊರಟು ಬಿಟ್ಟನು. ತಿಮ್ಮಣ್ಣ ಭಟ್ಟನಿಗೆ ಕೈಗೆ ಬರುವ ಪ್ರಮೋಷನ್ ತಪ್ಪಿ ಹೋದರೆ ಎಷ್ಟು ವ್ಯಸನವಾಗಬಹುದೋ ಅಷ್ಟೊಂದು ವ್ಯಸನವಾಯಿತು. ತಾನು ಗಂಗೇಗೌಡರಿಗೆ ಹೇಳಿ ಗ್ರಾಮಸ್ಥರಿಗೆಲ್ಲ ತಕ್ಕ ತಿಳಿವಳಿಕೆ ಕೊಟ್ಟು, ಅವರಲ್ಲಿ ಉತ್ಸಾಹವನ್ನು ತುಂಬಿ ರಂಗನಾಥಪುರದ ಸಭೆ ಇತರ ಕೇಂದ್ರಗಳ ಸಭೆಗಳನ್ನು ತಲೆಮೆಟ್ಟುವಂತೆ ಏರ್ಪಾಟುಗಳನ್ನು ಮಾಡಿ ಕೊಂಡಿದ್ದೆಲ್ಲ ವ್ಯರ್ಥವಾಯಿತಲ್ಲ! ಈಗ ಗಂಗೇಗೌಡರಿಗೆ ಮತ್ತು ಗ್ರಾಮಸ್ಥರಿಗೆ ಏನು ಸಮಾಧಾನ ಹೇಳಬೇಕು?-ಎಂದು ಬಹಳವಾಗಿ ಚಿಂತಿಸಿದನು. ಒಂದು ಕಡೆ ಇನ್ಸ್ಪೆಕ್ಟರು ಖಂಡಿತವಾಗಿ ಹೇಳಿಬಿಟ್ಟಿದ್ದಾರೆ; ಅವರ ಮಾತಿಗೆ ವಿರೋಧವಾಗಿ ನಡೆಯುವುದಕ್ಕಾಗುವುದಿಲ್ಲ, ಇನ್ನೊಂದು ಕಡೆ ತಾನು ಕೈ ಕೊಂಡಿರುವ ಏರ್ಪಾಟುಗಳನ್ನು ಬಿಟ್ಟು ಬಿಡಲು ಮನಸ್ಸಿಲ್ಲ. ಗ್ರಾಮಸ್ಥರೆಲ್ಲ ಬಹಳ ಉತ್ಸಾಹಭರಿತರಾಗಿದ್ದಾರೆ. ಈ ಉಭಯಸಂಕಟದಲ್ಲಿ ಸಿಕ್ಕಿ ಪೇಚಾಡುತ್ತಾ ಮೆಲ್ಲಮೆಲ್ಲನೆ ಕಚೇರಿಯನ್ನು ಬಿಟ್ಟು ತಿಮ್ಮಣ್ಣ ಭಟ್ಟನೂ ಹೊರಟನು. ಮಾರನೆಯ ದಿನ ರಂಗಣ್ಣ ಬೆಳಗ್ಗೆ ಊಟ ಮಾಡಿಕೊಂಡು ಮಧ್ಯಾಹ್ನ ಸಾಹೇಬರ ಕಚೇರಿಗೆ ಹೋದನು. ಸಾಹೇಬರು ಹಸ್ತಲಾಘವವನ್ನು ಕೊಟ್ಟು, ಕುಶಲ ಪ್ರಶ್ನೆ ಮಾಡಿ, ಥಟ್ಟನೆ, ' ರಂಗಣ್ಣನವರೇ ! ನಾಳೆ ನಾನು ರಂಗನಾಥಪುರದ ಸಭೆಗೆ ಬರಲು ಒಪ್ಪಿಕೊಂಡಿದ್ದೇನೆ ! ನೀವೂ ನನ್ನನ್ನು ಆಹ್ವಾನಿಸುವುದಕ್ಕಾಗಿಯೇ ಬಂದಿರಬಹುದು ! ನೀವು ಆಹ್ವಾನ ಕೊಟ್ಟು ಒತ್ತಾಯ ಮಾಡುವುದಕ್ಕೆ ಮೊದಲೇ ನಾನಾಗಿ ಒಪ್ಪಿಕೊಂಡಿರುವುದು ನಿಮಗೆ ಸಂತೋಷವಲ್ಲವೆ?' ಎಂದು ನಗುತ್ತಾ ಹೇಳಿದರು. ರಂಗಣ್ಣ ತನ್ನ ಮನಸ್ಸಿನ ಸ್ಥಿತಿಯನ್ನು ಪ್ರಯತ್ನ ಪೂರ್ವಕವಾಗಿ ಮರೆ ಮಾಚುತ್ತ, ಬಹಳ ಸಂತೋಷ ಸಾರ್ ! ತಮ್ಮ ಭೇಟಿ ಮೊದಲು ನನ್ನ ರೇಂಜಿಗೆ ಕೊಡೋಣವಾಗುತ್ತದೆ. ಅದರಲ್ಲಿಯೂ ಉಪಾಧ್ಯಾಯರ ಸಂಘದ ಸಭೆಗೆ ತಾವು ದಯಮಾಡಿಸುತ್ತೀರಿ. ಅಲ್ಲಿ ಏನು ಕೆಲಸ ನಡೆಯುತ್ತದೆ ? ಎಂಬುದನ್ನು ತಾವು ಸಾಕ್ಷಾತ್ತಾಗಿ ನೋಡಿದಂತಾಗುತ್ತದೆ, ನಾನು ವರದಿಯ ಮೂಲಕ ತಿಳಿಸುವುದಕ್ಕಿಂತ ತಾವು ಕಣ್ಣಾರೆ ನೋಡಿದರೆ ಹೆಚ್ಚು ಸಂಗತಿಗಳು ತಿಳಿದಂತಾಗುತ್ತದೆ. ತಾವು ರಂಗನಾಥ ಪುರಕ್ಕೆ ಎಷ್ಟು ಗಂಟೆಗೆ ದಯಮಾಡಿಸುತ್ತೀರಿ? ಮಧ್ಯಾಹ್ನ ಹನ್ನೆರಡು ಗಂಟೆಗೆ ಸಭೆ ಸೇರುತ್ತದೆ.”

ಹನ್ನೆರಡು ಗಂಟೆಗೆ ಸಭೆ ಸೇರುವುದಾಗಿ ಆ ಹೆಡ್ ಮೇಷ್ಟು ಸಹ ತಿಳಿಸಿದನು. ಆದರೆ ನಾನು ಬೆಳಗ್ಗೆ ಒ೦ಬತ್ತು ಅಥವಾ ಹತ್ತು ಗಂಟೆಗೆಲ್ಲ ರಂಗನಾಥಪುರಕ್ಕೆ ಬರಬೇಕೆಂದು ಪಂಚಾಯತಿ ಮೆಂಬರುಗಳು ಒತ್ತಾಯ ಮಾಡಿದರು. ಬೆಳಗಿನ ಬಸ್ಸಿನಲ್ಲಿ ಅಲ್ಲಿಗೆ ಬರುತ್ತೇನೆ ; ಸಾಯಂಕಾಲಕ್ಕೆ ಹಿಂದಿರುಗುತ್ತೇನೆ. ಅವರೂ ಈಗ ತಾನೆ-ಒಂದು ಗಂಟೆಯ ಹಿಂದೆ- ವಾಪಸು ಹೋದರು. ಅವರನ್ನು ಮುಂದಾಗಿ ಕಳಿಸಿ ನೀವು ಸ್ವಲ್ಪ ಹಿಂದಾಗಿ ಬಂದಿರಿ.'

ರಂಗಣ್ಣ ಆ ಮಾತುಗಳನ್ನು ಕೇಳಿ ಏನು ಮಾಡಬೇಕು ? ಒಳ್ಳೆಯ ಧರ್ಮ ಸೂಕ್ಷ ದ ಸಮಸ್ಯೆ ಎದುರು ನಿಂತಿತು. ತಾನು ಅವರನ್ನು ಕಳಿಸಲಿಲ್ಲ, ಆ ಹೆಡ್‌ಮೇಷ್ಟು ಗ್ರಾಮಸ್ಥರನ್ನು ಕಟ್ಟಿಕೊಂಡು ತಾನಾಗಿ ಬಂದು ಆಹ್ವಾನ ಕೊಟ್ಟಿದ್ದಾನೆಂದೂ ಊಟದ ಏರ್ಪಾಟಿನ ವಿಚಾರದಲ್ಲಿ ತನಗೂ ಮೇಷ್ಟರಿಗೂ ಚರ್ಚೆ ನಡೆಯಿತೆಂದೂ, ಊಟದ ಏರ್ಪಾಟನ್ನು ತಾನು ರದ್ದು ಮಾಡಲು ಹೇಳಿದೆನೆಂ ದೂ ಸಾಹೇಬರಿಗೆ ತಿಳಿಸಬೇಕೇ ? ಇಲ್ಲದಿದ್ದರೆ, ತನ್ನ ಪ್ರೇರಣೆಯಿಂದ ಆ ಹೆಡ್‌ಮೇಷ್ಟು ಗ್ರಾಮಸ್ಥರೊ೦ದಿಗೆ ಬಂದು ಆಹ್ವಾನ ಕೊಟ್ಟನೆಂದು ಒಪ್ಪಿಕೊಳ್ಳ ಬೇಕೆ ? ತಿಮ್ಮಣ್ಣ ಭಟ್ಟ ತಂದಿಟ್ಟ ಪೇಚಾಟ ! ಕೊನೆಗೂ ಇನ್ಸ್ಪೆಕ್ಟರಿಗೆ ಸೋಲು, ಮೇಷ್ಟರಿಗೆ ಗೆಲವು ! ಆ ಸಮಯದಲ್ಲಿ ತಾನು ಏನನ್ನೂ ಆಡಬಾರದೆಂದು ರಂಗಣ್ಣ ನಿಷ್ಕರ್ಷೆ ಮಾಡಿಕೊಂಡನು. ಸಾಹೇಬರು ರಂಗನಾಥಪುರಕ್ಕೆ ಬರುತ್ತಾರೆ; ಅಲ್ಲಿ ಮಾತನಾಡುವುದಕ್ಕೆ ಬೇಕಾದಷ್ಟು ಅವಕಾಶವಿರುತ್ತದೆ ; ಸಂದರ್ಭ ನೋಡಿಕೊಂಡು ತಿಳಿಸಬೇಕಾದ ವಿಚಾರಗಳನ್ನು ಆಗ ತಿಳಿಸಿದರಾಯಿತು – ಎಂದು ತೀರ್ಮಾನಿಸಿಕೊಂಡು, 'ಅಪ್ಪಣೆಯಾದರೆ ನಾನು ಹೋಗಿ ಬರುತೇನೆ. ನಾಳೆ ರಂಗನಾಥಪುರದಲ್ಲಿ ತಮ್ಮ ಭೇಟಿಯಾಗುತ್ತದೆಯಲ್ಲ ! ಅಲ್ಲಿ ಏನೇನು ಏರ್ಪಾಟುಗಳನ್ನು ಮಾಡಿದ್ದಾರೆ ಯೋ ಏನೇನು ಬಿಟ್ಟಿದ್ದಾರೆಯೋ ಹೋಗಿ ನೋಡುತ್ತೇನೆ' ಎಂದು ಹೇಳಿದನು.

ಹೆಚ್ಚು ಏರ್ಪಾಟುಗಳೇನೂ ಬೇಡ ಎಂದು ಗ್ರಾಮಸ್ಥರಿಗೆ ತಿಳಿಸಿ.”

ನಮ್ಮ ಮಾತುಗಳನ್ನು ಅವರು ಯಾರೂ ಕೇಳುವುದಿಲ್ಲ ಸಾರ್ ? ಹಿಡಿದ ಹಟವನ್ನು ಸಾಧಿಸುವುದೇ ಅವರ ಚಾಳಿ !' ಎಂದು ಉತ್ತರ ಹೇಳಿ ರಂಗಣ್ಣ ಹೊರಟು ಬ೦ದನು.

ಸಾಹೇಬರು ತನ್ನ ರೇಂಜಿಗೆ ಬ೦ದ ಉಪಾಧ್ಯಾಯರ ಸಂಘದ ಕಾರ್ಯ ಕಲಾಪಗಳನ್ನು ನೋಡುವ ವಿಚಾರದಲ್ಲಿ ರಂಗಣ್ಣನಿಗೆ ಸಂತೋಷವಿದ್ದರೂ, ಆ ಹೆಡ್ ಮೆಷ್ಟು ತಿಮ್ಮಣ್ಣ ಭಟ್ಟ ತನ್ನ ಅಕ್ಷಣೆಗೆ ವಿರುದ್ಧವಾಗಿ ನಡೆದು, ಪಂಚಾಯತಿಯವರನ್ನು ಎತ್ತಿಕಟ್ಟಿ, ಕಡೆಗೂ ಊಟದ ಏರ್ಪಾಡನ್ನು ಇಟ್ಟುಕೊಂಡನಲ್ಲ ! ತನ್ನನ್ನು ಅಲಕ್ಷಿಸಿ ಸಾಹೇಬರ ಹತ್ತಿರ ಹೋದನಲ್ಲ !-- ಎಂಬುದಾಗಿ ಅಸಮಾಧಾನ ಮತ್ತು ಕೋಪಗಳು ಆ ಸಂತೋಷವನ್ನು ಮುಳುಗಿಸಿಬಿಟ್ಟು ವು. ಆದ್ದರಿ೦ದ ರಂಗನಾಥಪುರಕ್ಕೆ ಬರುತ್ತ ಆ ತಿಮ್ಮಣ್ಣ ಭಟ್ಟನಿಗೆ ತಕ್ಕ ಶಾಸ್ತಿಯನ್ನು ಯಾವ ಸಂದರ್ಭದಲ್ಲಾದರೂ ಮಾಡಬೇಕೆಂಬ ಕೀಳು ಯೋಚನೆಗೆ ಎಡೆಗೊಟ್ಟು ಚಿತ್ತಶಾಂತಿಯನ್ನು ಕೆಡಿಸಿಕೊಂಡನು.

ಪ್ರಕರಣ ೨೦

ರಂಗನಾಥಪುರದ ಗಂಗೇಗೌಡರು

ರಂಗನಾಥಪುರದ ಹತ್ತಿರ ಬಸ್ಸು ನಿಂತಿತು. ರಂಗಣ್ಣ ಕೆಳಕ್ಕೆ ಇಳಿದನು. ಗುಮಾಸ್ತೆ ಶಂಕರಪ್ಪನೂ, ಹೆಡ್‌ಮೇಷ್ಟು ತಿಮ್ಮಣ್ಣ ಭಟ್ಟನೂ, ಇತರ ಮೇ ಷ್ಟುಗಳೂ ಕೈ ಮುಗಿದರು. ಬೀಡಾರವನ್ನು ಮುಸಾಫರಖಾನೆ ಯಲ್ಲಿ ಏರ್ಪಾಟು ಮಾಡಿದ್ದು ದರಿ೦ದ ರಂಗಣ್ಣ ನೆಟ್ಟಗೆ ಅಲ್ಲಿಗೆ ಹೋದನು. ಒಂದು ಭಾಗದಲ್ಲಿ ತನ್ನ ಬಿಡಾರ ಏರ್ಪಾಟಾಗಿತ್ತು. ಎದುರು ಭಾಗದಲ್ಲಿ ಸಾಹೇಬರಿಗೆ ಸ್ಥಳ ಮಾಸಲಾಗಿತ್ತು. ರಂಗಣ್ಣನ ಮುಖಮುದ್ರೆ ಗಂಭೀರವಾಗಿದ್ದುದರಿಂದ ಯಾರೂ ಮಾತನಾಡಿಸಲಿಲ್ಲ. ಕೊಟಡಿಯಲ್ಲಿ ರಂಗಣ್ಣ ಕುಳಿತ ಬಳಿಕ ಗೋಪಾಲ ಉಪ್ಪಿಟ್ಟು, ಬೋಂಡ ಮತ್ತು ಕಾಫಿಗಳನ್ನು ತಂದು ಮೇಜಿನ ಮೇಲಿಟ್ಟನು, ಅವುಗಳನ್ನು ಮುಗಿಸಿದ್ದಾಯಿತು. ತಿಮ್ಮಣ್ಣ ಭಟ್ಟ ಹೊರಗಡೆಯೇ ಇದ್ದವನು ಎಳನೀರನ್ನು ಕೆತ್ತಿ ಬೆಳ್ಳಿಯ ಲೋಟಕ್ಕೆ ಸುರಿದು, ಅದನ್ನೂ ಕೆಲವು ರಸಬಾಳೆಯ ಹಣ್ಣುಗಳನ್ನ ಗೋಪಾಲನ ಕೈಯಲ್ಲಿ ಕಳಿಸಿಕೊಟ್ಟನು. ಗೋಪಾಲನು ಅವುಗಳನ್ನು ತರುತ್ತಲೂ, “ಇವನ್ನು ಯಾರು ಕೊಟ್ಟರು ? ಏತಕ್ಕೆ ತೆಗೆದುಕೊಂಡು ಬಂದೆ ?' ಎಂದು ರಂಗಣ್ಣ ಸ್ವಲ್ಪ ಗದರಿಸಿದನು.

'ಹೆಡ್ ಮೇ ಷ್ಟು ತಿಮ್ಮಣ್ಣ ಭಟ್ಟರು ಕೊಟ್ಟು ಕಳಿಸಿದರು ?

“ಆ ಭಟ್ಟರಿಗೂ ಬುದ್ಧಿಯಿಲ್ಲ ! ನಿನಗೂ ಬುದ್ಧಿಯಿಲ್ಲ ! ತೆಗೆದು ಕೊಂಡು ಹೋಗು.

ಗೋಪಾಲನು ಹೆದರಿ ಕೊಂಡು ಅವನ್ನು ಹೊರಕ್ಕೆ ತಂದು ಹೆಡ್ ಮೇಷ್ಟರ ವಶಕ್ಕೆ ಒಪ್ಪಿಸಿ ಬಿಟ್ಟನು.

ತನ್ನ ವಿಚಾರದಲ್ಲಿ ಇನ್ಸ್ಪೆಕ್ಟರಿಗೆ ಬಹಳ ಕೊಪವಿದೆಯೆಂಬುದು ತಿಮ್ಮಣ್ಣ ಭಟ್ಟನಿಗೆ ದೃಢಪಟ್ಟಿತು. ಇಷ್ಟೆಲ್ಲ ಏಪಾ೯ಟುಗಳನ್ನು ಮಾಡಿ ಸುಖ ಸಂತೋಷಗಳು ತಾಂಡವವಾಡದೆ ಕೋಪ ವ್ಯಸನಗಳಲ್ಲಿ ಕೊನೆಗೊಂಡಿತಲ್ಲ- ಎಂದು ಆತನಿಗೂ ಚಿತ್ತ ಕಲಕಿ ಹೋಯಿತು. ಎರಡು ನಿಮಿಷಗಳ ಕಾಲ ಹಾಗೆಯೇ ನಿಂತಿದ್ದವನು ಎಳನೀರನ್ನೂ ಬಾಳೆಯ ಹಣ್ಣುಗಳನ್ನೂ ತಾನೇ ಹಿಡಿದುಕೊಂಡು ರಂಗಣ್ಣನ ಕೊಟಡಿಗೆ ಹೋದನು. ಅವನ್ನು ಕೆಳಗಿಟ್ಟು, ದೀರ್ಘದಂಡ ನಮಸ್ಕಾರವನ್ನು ಮಾಡಿ, ಎದ್ದು ಕೈ ಮುಗಿದುಕೊಂಡು, ' ತಾವು ಧಣಿಗಳು, ನಾನು ಬಡವ. ನನ್ನ ಸರ್ವಾಪರಾಧಗಳನ್ನೂ ಕ್ಷಮಿಸಬೇಕು. ಸೇವಕರ ತಪ್ಪನ್ನು ಧಣಿಗಳು ನೋಡಬಾರದು. ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಕೈ ಮೀರಿ ಏರ್ಪಾಟುಗಳು ನಡೆದಿವೆ. ತಾವು ಪ್ರಸನ್ನರಾಗಬೇಕು ' - ಎಂದನು.

ಓ ಹೋ ! ನಿಮ್ಮ ಕೈ ಮೀರಿ ಏರ್ಪಾಟುಗಳು ನಡೆದಿವೆಯೋ ? ಈ ಆಟಗಳನ್ನು ಯಾರ ಮುಂದೆ ಕಟ್ಟು ತೀರಿ! ಊಟದ ಏರ್ಪಾಟು ಬೇಡ. ಎಂದು ನಾನು ಹೇಳಿದೆ. ಈ ಇನ್ಸ್ಪೆಕ್ಟರಿಗೆ ಚಳ್ಳೆಹಣ್ಣು ತಿನ್ನಿಸುತ್ತೇನೆ ಎಂದು ಹಂಚಿಕೆ ಮಾಡಿ ಗ್ರಾಮಸ್ಥರನ್ನು ಎತ್ತಿ ಕಟ್ಟಿ, ಗುಂಪು ಕಟ್ಟಿಕೊಂಡು ಸಾಹೇಬರ ಹತ್ತಿರ ಹೋದಿರಿ, ಸೂತ್ರಧಾರಕರಾಗಿ ಎಲ್ಲವನ್ನೂ ನಡೆಸಿದಿರಿ. ಈಗ ನಿರಪರಾಧಿಗಳಂತೆ ಬಂದು ಅರಿಕೆ ಮಾಡಿ ಕೊಳ್ಳುತಿದ್ದೀರಿ !

ಕ್ಷಮಿಸಬೇಕು. ಅರಿಕೆಮಾಡಿಕೊಳ್ಳುತ್ತೇನೆ.”

ಏನಿದೆ ಅರಿಕೆ ಮಾಡಿಕೊಳ್ಳುವುದು ? ಆಷಾಢಭೂತಿ ಮೇಷ್ಟ್ರುಗಳಲ್ಲಿ ಅಗ್ರಗಣ್ಯರಾಗಿದ್ದೀರಿ !'

ಸ್ವಾಮಿಯವರು ಹಾಗೆ ತಿಳಿದುಕೊಳ್ಳಬಾರದು. ನನ್ನ ಮೇಲೆ ಕೋಪ ಮಾಡಿಕೊಳ್ಳುವುದು ಸಹಜವಾಗಿದೆ. ಆದರೂ ನನ್ನ ಅರಿಕೆಯನ್ನು ಲಾಲಿಸಬೇಕು. ತಮ್ಮ ಅಪ್ಪಣೆಯನ್ನು ಶಿರಸಾವಹಿಸಿ ಪಂಚಾಯತಿ ಚೇರ್ಮನ್ನರಿಗೆ ತಮ್ಮ ಪತ್ರವನ್ನು ಕೊಟ್ಟೆ, ಚೇರ್ಮನ್ ಗಂಗೇಗೌಡರು ನೋಡಿಕೊಂಡರು. ನೋ ಡಿ ಕೊಂಡು, - ಹೆಡ್ ಮೇಷ್ಟೆ ! ಇನ್ ಸ್ಪೆಕ್ಷ ರನ್ನು ಕಾಣುವುದಕ್ಕೆ ನಾನೇ ಹೋಗಬೇಕಾಗಿತ್ತು. ಅವರ ಮನಸ್ಸಿಗೆ ಬಹಳ ಬೇಜಾರು ಆಗಿದೆ. ನಾನೇ ಹೋಗಿದ್ದರೆ ತಕ್ಕ ರೀತಿ ಸಮಾಧಾನ ಹೇಳುತ್ತಿದ್ದೆ. ನನಗೆ ಬದಲು ನೀವೇ ಹೋದಿರಿ, ಹೀಗಾಯಿತು ! ಈಗೇನು ಮಾಡೋಣ ? ಎಂದು ಕೇಳಿದರು. ನಾನು, ಇನ್ ಸ್ಪೆಕ್ಟರ್ ಸಾಹೇಬರು ಹೇಳಿರುವಂತೆ ಊಟದ ಏರ್ನಾಟನ್ನು ಕೈ ಬಿಡೋಣ-ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಲಿಲ್ಲ. ಹತ್ತು ಜನ ಮೇಷ್ಟರಿಗೆ ಅನ್ನ ಹಾಕುವ ಯೋಗ್ಯತೆ ಗಂಗೇಗೌಡನಿಗಿಲ್ಲ - ಎಂದು ಜನ ಆಡಿಕೊಳ್ಳುತ್ತಾರೆ ! ಮೇಷ್ಟ್ರುಗಳೂ ತಿಳಿದು ಕೊಳ್ಳುತ್ತಾರೆ ! ಊಟದ ಏರ್ಪಾಟನ್ನು ಇಟ್ಟುಕೊಳ್ಳೋಣ. ದೊಡ್ಡ ಸಾಹೇಬರನ್ನು ಇಲ್ಲಿಗೆ ಬರಮಾಡಿಕೊಳ್ಳಬೇಕು, ಮಿಡಲ್ ಸ್ಕೂಲನ್ನು ಕೊಡುವಂತೆ ಕೇಳಿಕೊಳ್ಳಬೇಕು ಎಂದು ಮನಸ್ಸಿನಲ್ಲಿತ್ತು. ಈ ಸಂದರ್ಭದಲ್ಲಿಯೇ ಅವರನ್ನೂ ಬರಮಾಡಿಕೊಳ್ಳೋಣ. ಎರಡು ಕೆಲಸಗಳೂ ನೆರವೇರಲಿ ; ಬನ್ನಿ , ಹೋಗಿ ಬರೋಣ ಎಂದು ಹೇಳಿದರು. ಅವರು ಈ ಊರಿನ ಮುಖಂಡರು ಸ್ವಾಮಿ ! ತಮಗೂ ಗೊತ್ತಿದೆ. ಬಹಳ ದೊಡ್ಡ ಮನುಷ್ಯರು, ಉದಾರಿಗಳು; ದೇವರಲ್ಲಿಯೂ ಬ್ರಾಹ್ಮಣರಲ್ಲಿಯೂ ಭಕ್ತಿಯುಳ್ಳವರು. ಹಲವಾರು ಉಪಾಧ್ಯಾಯರು ಉಪಕಾರ ಪಡೆದಿದ್ದಾರೆ. ನಾನಂತೂ ಅವರಿಗೆ ಚಿರ ಋಣಿಯಾಗಿದ್ದೇನೆ. ಅವರ ಮಾತನ್ನು ಮೀರುವುದಕ್ಕಾಗದೆ ಅವರ ಜೊತೆಯಲ್ಲಿ ಹೋಗಿದ್ದೆ ಕ್ಷಮಿಸಬೇಕು ! ಗಂಗೇಗೌಡರೇ ತಮ್ಮನ್ನು ಕಂಡು: ಎಲ್ಲವನ್ನೂ ವಿವರಿಸುತ್ತಾರೆ. ತಮ್ಮ ವಿಷಯದಲ್ಲಿ ಅವರು ಬಹಳ ಗೌರವವನ್ನಿಟ್ಟಿದ್ದಾರೆ. !'

ಮೇಲಿನ ಸಮಾಧಾನವನ್ನು ಕೇಳಿದಮೇಲೆ ರಂಗಣ್ಣನಿಗೆ ಕೋಪ ಬಹುಮಟ್ಟಿಗೆ ಇಳಿಯಿತು. ತಿಮ್ಮಣ್ಣ ಭಟ್ಟನ ಕೈವಾಡ ಏನೂ ಇಲ್ಲ ಎನ್ನಿಸಿತು. ಆದರೂ ತನ್ನ ಬಿಗುಮಾನವನ್ನು ಬಿಟ್ಟು ಕೊಡಲಿಲ್ಲ ; ಮೌನವಾಗಿ ಕುಳಿತೇ ಇದ್ದನು. ತಿಮ್ಮಣ್ಣ ಭಟ್ಟನು ಎಳನೀರಿನ ಲೋಟವನ್ನು ಮುಂದಿಟ್ಟು, 'ಸ್ವಾಮಿಯವರು ಸ್ವೀಕರಿಸಬೇಕು !' ಎಂದು ಕೈ ಮುಗಿದನು. ರಂಗಣ್ಣನು ಲೋಟವನ್ನು ಕೈಗೆ ತೆಗೆದುಕೊಂಡನು, ಇನ್ಸ್ಪೆಕ್ಟರು ತನ್ನ ವಿಚಾರದಲ್ಲಿ ಪ್ರಸನ್ನರಾದರೆಂದು ಹೆಡ್‌ಮೇಷ್ಟರಿಗೆ ಧೈರ್ಯ ಬಂತು. ಸ್ವಾಮಿ ! ಗಂಗೇಗೌಡರು ನನಗೆ ಬಹಳ ಉಪಕಾರಮಾಡಿದ್ದಾರೆ. ಈ ಕಾಲದಲ್ಲಿ ಬಡಮೇಷ್ಟರುಗಳ ಕಷ್ಟ ದುಖಗಳನ್ನು ವಿಚಾರಿಸುವವರಾರು ? ಎಂದನು. ರಂಗಣ್ಣನು ಎಳನೀರ ರುಚಿಯನ್ನು ನೋಡುತ್ತ, ನೋಡುತ್ತ, ಆದರ ಸಿಹಿ ನಾಲಗೆಗೇರುತ್ತ ಹೋದಹಾಗೆಲ್ಲ ಹೆಚ್ಚು ಹೆಚ್ಚು ಪ್ರಸನ್ನ ನಾಗುತ್ತ, “ ನಿಮಗೇನು ಉಪಕಾರ ಮಾಡಿದ್ದಾರೆ ಅವರು !' ಎಂದು ಕೇಳಿದನು.

ನೋಡಿ ಸ್ವಾಮಿ ! ಈಗ್ಗೆ ಎಂಟು ವರ್ಷಗಳ ಹಿಂದೆ ನನ್ನ ಎರಡನೆಯ ಹುಡುಗನ ಉಪನಯನ ನಡೆಯಬೇಕಾಗಿತ್ತು. ಕೈಯಲ್ಲಿ ಕಾಸಿರಲಿಲ್ಲ ; ಬಾಹ್ಮಣ್ಯ ಬಿಡುವ ಹಾಗಿರಲಿಲ್ಲ. ಗೌಡರ ಹತ್ತಿರ ಒಂದು ನೂರು ರೂಪಾಯಿ ಸಾಲ ಪಡೆದುಕೊಂಡು ಉಪನಯನ ಮಾಡಿ ಬಿಡೋಣ. ಬರುವ ಸ೦ಬಳದಲ್ಲಿ ಹೇಗೋ ಉಳಿಸಿ ಸಾಲ ತೀರಿಸಿದರಾಯಿತು. ಎಂದು ನಿಶ್ಚಯ ಮಾಡಿಕೊಂಡು ಅವರನ್ನು ಕೇಳೋಣವೆಂದು ಹೋದೆ. ನನ್ನ ಕಷ್ಟವನ್ನು ಹೇಳಿಕೊಂಡೆ. ಆಗ ಅವರು,- ಮೇಷ್ಟೆ ನಿಮಗೆಷ್ಟು ಸಂಬಳ? ಎಂದು ಕೇಳಿದರು. ಹದಿನೈದು ರೂಪಾಯಿ-ಎಂದು ಉತ್ತರ ಹೇಳಿದೆ. ನಿಮಗೆ ಮಕ್ಕಳೆಷ್ಟು ? ಎಂದು ಕೇಳಿದರು. ಎರಡು ಹೆಣ್ಣು ಮೂರು ಗಂಡು ಎಂದು ಹೇಳಿದೆ. ಅವರು, ರಾಮ ರಾಮ ! ದೇವರೇ ! ಎ೦ದು ಉದ್ಗಾರ ತೆಗೆದು ನಿಮ್ಮ ಸಂಸಾರ ನಡೆಯುವುದೇ ಕಷ್ಟವಾಗಿದೆಯಲ್ಲ ! ನೀವು ತಿಳಿಸುವುದೇನು ! ಸಾಲ ತೀರಿಸುವುದೇನು !-ಎಂದು ಹೇಳಿದರು. ನನಗೆ ಮುಖ ಭಂಗವಾಗಿ ಹೋಯಿತು. ಅದನ್ನು ಅವರು ನೋಡಿ- ಮೇಷ್ಟ್ರೇ ! ನನ್ನ ಹತ್ತಿರ ಹಣವೇನೋ ಇದೆ ; ಕೊಡ ಬಲ್ಲೆ. ನಿಮ್ಮ ಬಡತನ ಮತ್ತು ನಿಮ್ಮ ಕಷ್ಟ ನೋಡಿ ದಾನವಾಗಿಯೇ ಕೊಡ ಬಲ್ಲೆ. ಆದರೆ ಅದರಿಂದ ನೀವು ಉದ್ಧಾರವಾಗುವುದಿಲ್ಲ ; ನಿಮ್ಮ ಆತ್ಮಗೌರವಕ್ಕೆ ಹಾನಿಯಾಗುತ್ತದೆ. ನಾನು ಹೇಳಿದಂತೆ ಮಾಡಿ. ಇಗೋ ! ನೂರು ರುಪಾಯಿ ತೆಗೆದುಕೊಳ್ಳಿ. ನನ್ನ ಲೇವಾದೇವಿಯ ಮತ್ತು ಜಮೀನು ಆದಾಯ ವೆಚ್ಚಗಳ ಲೆಕ್ಕ ಪತ್ರಗಳನ್ನು ನೋಡಿಕೊಳ್ಳಿ. ನಿಮಗೆ ತಿಂಗಳಿಗೆ ಹತ್ತು ರುಪಾಯಿ ನಾನು ಕೊಡುತ್ತೇನೆ, ನಿಮ್ಮ ಸಾಲಕ್ಕೆ ವಜಾಮಾಡಿಕೊಳ್ಳುತ್ತೇನೆ' ಎಂದು ಹೇಳಿದರು ಸ್ವಾಮಿ ! ಹಣವನ್ನು ಎಣಿಸಿ ಕೊಟ್ಟು ಬಿಟ್ಟರು. !

'ಬಡ್ಡಿಯ ದರವನ್ನು ಏನು ಹಾಕಿದರು ? ಪತ್ರ ಏನು ಬರೆದುಕೊಟ್ಟರಿ ?

ಬಡ್ಡಿ ಯಿಲ್ಲ, ಏನೂ ಇಲ್ಲ ಸ್ವಾಮಿ! ನಾನು ಪತ್ರವನ್ನು ಸಹ ಬರೆದು ಕೊಡಲಿಲ್ಲ ! ಕೊನೆಗೆ ಅವರು ಹಣ ಕೊಟ್ಟಿದ್ದಕ್ಕೆ ಸಾಕ್ಷಿಗಳು ಸಹ ಇರಲಿಲ್ಲ !'

'ಆಮೇಲೆ ಹತ್ತು ತಿಂಗಳಲ್ಲಿ ಸಾಲ ತೀರಿಹೋಯಿತೋ ??

'ತೀರಿ ಹೋಯಿತು ಸ್ವಾಮಿ ! ಆದರೆ ಗೌಡರು ನನ್ನನ್ನು ಕೆಲಸದಿಂದ ಬಿಡಿಸಲಿಲ್ಲ. ಮುಂದೆಯೂ ಹಾಗೆಯೇ ನಡೆಸಿಕೊಂಡು ಬಂದರು !

'ಆಮೇಲೆ ತಿಂಗಳು ತಿಂಗಳಿಗೆ ಹತ್ತು ರುಪಾಯಿಗಳನ್ನು ಕೈಗೆ ಕೊಡುತ್ತಾ ಬಂದರೋ ?”

'ಇಲ್ಲ ಸ್ವಾಮಿ ! ನಾನು ಕೇಳಲಿಲ್ಲ. ಅವರೇ ಒಂದು ದಿನ ಮೇಷ್ಟೆ ! ನಿಮಗೆ ಬರುವ ಸಂಬಳದಲ್ಲಿ ಈಗಿನಂತೆಯೇ ಹೇಗೋ ಸಂಸಾರವನ್ನು ಸುಧಾರಿಸಿಕೊಳ್ಳಿ. ನಿಮ್ಮ ಕೈಗೆ ಈ ಹಣವನ್ನು ಕೊಟ್ಟರೆ, ಹಬ್ಬ ಹುಣ್ಣಿಮೆ ಎಂದು ಹೇಳಿಕೊಳ್ಳುತ್ತ ಹೋಳಿಗೆ ಪಾಯಸಗಳಿಗೆ ಖರ್ಚು ಮಾಡಿಬಿಡುತ್ತೀರಿ. ಈ ಸಂಬಳದ ಹಣ ನನ್ನಲ್ಲಿರಲಿ~ ಎಂದು ಹೇಳಿದರು. ನಾನೂ ಸುಮ್ಮನಾದೆ. ಈಗ್ಗೆ ನಾಲ್ಕು ವರ್ಷಗಳ ಹಿಂದೆ, ಒಳ್ಳೆಯ ಜಾಗದಲ್ಲಿ ನಾಲ್ಕು ಎಕರೆ ಹೊಲವನ್ನು ನನಗೆ ಮಾಡಿಸಿ ಕೊಟ್ಟರು ! ಹೋದ ವರ್ಷ ಒಂದು ಏಕರೆ ಗದ್ದೆಯನ್ನು ಸುಲಭ ಬೆಲೆಗೆ ಒಬ್ಬ ರೈತನಿಂದ ಕೊಡಿಸಿಕೊಟ್ಟ ರು ! ಈಗ ಮನೆಗೆ ಪ್ರತಿವರ್ಷ ಬತ್ತ, ರಾಗಿ, ಅವರೆ, ನವಣೆ, ಮೊದಲಾದ ಬೆಳೆಯೆಲ್ಲ ಬರುತ್ತಾ ಇದೆ ಸ್ವಾಮಿ ! ಮುಂದಿನ ವರ್ಷ ಇನ್ನು ಸ್ವಲ್ಪ ಜಮೀನು ಕೊಂಡು ಕೊಳ್ಳೋಣ ಎಂದು ಹೇಳಿದ್ದಾರೆ, ಈ ದಿನವೇ ನನಗೆ ಪಿಂಚಿನ್ ಆದರೂ ನಾನು ಉಪವಾಸ ಇರುವುದಿಲ್ಲ ; ಸುಖವಾಗಿ ಜೀವನ ನಡೆಸಬಲ್ಲೆ ಸ್ವಾಮಿ! ಗಂಗೇಗೌಡರು ಹೀಗೆ ಉಪಕಾರ ಮಾಡಿದ್ದಾರೆ !'

ರಂಗಣ್ಣನಿಗೆ ಮನಸ್ಸು ಕೃತಜ್ಞತಾಭಾವದಿಂದ ತುಂಬಿ ಹೋಯಿತು. ಮೇಷ್ಟರ ವಿಚಾರದಲ್ಲಿ ಇಂಥ ಉಪಕಾರ ಮಾಡತಕ್ಕ ಮಹನೀಯರು ನಮ್ಮ ದೇಶದಲ್ಲಿದ್ದಾರಲ್ಲ ! ನಮ್ಮ ದೇಶದ ಸೌಭಾಗ್ಯಕ್ಕೆ ಎಣೆಯುಂಟೇ ? ಎಂದು ಹೇಳಿಕೊಂಡನು. ಗಂಗೇಗೌಡರ ವಿಚಾರದಲ್ಲಿ ಬಹಳ ಗೌರವವೂ ವಿಶ್ವಾಸವೂ ಉಂಟಾದುವು. ತಿಮ್ಮಣ್ಣ ಭಟ್ಟನು ತನ್ನ ಕಥೆಯನ್ನು ಮುಂದಕ್ಕೂ ಹೇಳತೊಡಗಿದನು. “ಸ್ವಾಮಿ ಪ್ರತಿವರ್ಷವೂ ನವರಾತ್ರಿಯ ಕಾಲದಲ್ಲಿ ರಾಮಾಯಣವನ್ನು ನನ್ನ ಕೈಯಲ್ಲಿ ಪಾರಾಯಣ ಮಾಡಿಸುತ್ತಾರೆ. ಸಂಭಾವನೆಯಾಗಿ ಇಪ್ಪತ್ತೈದು ರೂಪಾಯಿಗಳನ್ನೂ ಒಂದು ಜೊತೆ ಪಂಚೆಯನ್ನೂ ನನಗೆ ಕೊಡುತ್ತಾರೆ ! ಆ ಹಣ ನನ್ನ ಇತರ ಖರ್ಚಿಗೆ ಆಗುತ್ತೆ. ಹೀಗೆ ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಮಾತನ್ನು ಮೀರಿ ಹೋಗುವುದಕ್ಕೆ ನನಗೆ ಮನಸ್ಸು ಬರುವುದಿಲ್ಲ ಸ್ವಾಮಿ ! ಆದ್ದರಿಂದ ತಾವು ಈಗ ನಡೆದುದನ್ನೆಲ್ಲ ಕೃಮಿಸಿಬಿಡಬೇಕು, ಮರೆತು ಬಿಡಬೇಕು'

“ಎಲ್ಲವನ್ನೂ ಕ್ಷಮಿಸಿದ್ದೆನೆ ಭಟ್ಟರೇ! ಏನೊಂದೂ ಆಲೋಚನೆ ನಿಮಗೆ ಬೇಡ. ಅದಕ್ಕೆ ಸಾಕ್ಷಿಯಾಗಿ ಈ ಬಾಳೆಯ ಹಣ್ಣುಗಳನ್ನು ತೆಗೆದುಕೊಳ್ಳುತ್ತೇನೆ ನೋಡಿ ! ನೀವು ಸಹ ಎರಡನ್ನು ಹೊಟ್ಟೆಗೆ ಸೇರಿಸಿ !' ಎಂದು ರಂಗಣ್ಣ ನಗು ತ್ತಾ ಹೇಳಿದನು. ಈ ಪ್ರಕರಣ ಹೀಗೆ ಸಂತೋಷ ದಲ್ಲಿ ಮುಕ್ತಾಯವಾಗುತ್ತಿದ್ದಾಗ ಗಂಗೇಗೌಡರು ಅಲ್ಲಿಗೆ ಬಂದರು. ತಿಮ್ಮಣ್ಣ ಭಟ್ಟ ಇನ್ನು ತಾನಲ್ಲಿರಬಾರದೆಂದು ಮೆಲ್ಲಗೆ ಜಾರಿಕೊಂಡು ಅಡಿಗೆಯ ಏರ್ಪಾಟನ್ನು ವಿಚಾರಿಸಲು ಗೋಪಾಲನ ಹತ್ತಿರಕ್ಕೆ ಹೊರಟನು.

ಗಂಗೇಗೌಡರನ್ನು ಬಹಳ ಆದರದಿಂದ ರಂಗಣ್ಣನು ಬರಮಾಡಿಕೂಂಡನು. ಗೌಡರು ಸುಮಾರಾಗಿ ಕುಳ್ಳಗಿದ್ದರು ; ಸ್ವಲ್ಪ ಸ್ಕೂಲಕಾಯವೆಂದೇ ಹೇಳಬೇಕು. ದೊಡ್ಡ ಸರಿಗೆಯ ರುಮಾಲು, ಸರ್ಜುಕೋಟು ಮತ್ತು ಉತ್ತರೀಯಗಳನ್ನು ಧರಿಸಿದ್ದರು ; ಹಣೆ ಯಲ್ಲಿ ವಿಭೂತಿಯ ಪಟ್ಟಿಗಳಿದ್ದುವು. “ಸ್ವಾಮಿಯವರ ಇಷ್ಟಕ್ಕೆ ವಿರೋಧವಾಗಿ ನಡೆದುಕೊಂಡಿದ್ದೇನೆ. ಕ್ಷಮಿಸಬೇಕು' ಎಂದು ಗೌಡರು ಹೇಳಿದರು.

'ನನ್ನ ಇಷ್ಟಕ್ಕೆ ವಿರೋಧವಾಗಿ ಏನೂ ಅಲ್ಲ. ಆದರೆ ನನ್ನ ಕೋರಿಕೆಗೆ ವಿರೋಧವಾಗಿ ಏರ್ಪಾಟು ಮಾಡಿದ್ದಿರಿ ! ಚಿಂತೆಯಿಲ್ಲ, ತಿಮ್ಮಣ್ಣ ಭಟ್ಟರು ಎಲ್ಲ ಸಮಾಚಾರಗಳನ್ನೂ ತಿಳಿಸಿದ್ದಾರೆ.'

“ ಏನು ಸ್ವಾಮಿ ! ಹತ್ತು ಜನ ಬಡಮೇಷ್ಟರಿಗೆ ಒಪ್ಪೊತ್ತು ಅನ್ನ ಹಾಕಲಾರೆನೇ ನಾನು? ಅವರು ಸಂತೋಷವಾಗಿದ್ದರೆ ನಮಗೂ ಸಂತೋಷ. ಬಡವರು ಗೋಳಾಡುತ್ತಿದ್ದರೆ ನಮಗೇನು ಸುಖ ಸ್ವಾಮಿ ? ತಾವು ಹೇಳಿ.?

'ನಿಮ್ಮ ಮುಖಂಡರುಗಳಿಗೆ ಅದನ್ನು ಹೇಳಿ ಗೌಡರೇ !?

'ಅಯ್ಯೋ ಸ್ವಾಮಿ ! ಆ ಮುಖಂಡರ ಮಾತನ್ನು ನನಗೆ ಹೇಳಬೇಡಿ, ನಮ್ಮ ದೇಶ ಉದ್ಧಾರವಾಗಬೇಕಾದರೆ ಮೇಷ್ಟರಿಗೆ ಕೈತುಂಬ ಸಂಬಳ, ಹೊಟ್ಟೆ ತುಂಬ ಅನ್ನ ಕೊಡಬೇಕು. ಅವರೇ ಅಲ್ಲವೇ ಜನರಿಗೆ ವಿದ್ಯಾಬುದ್ಧಿಗಳನ್ನು ಕಲಿಸುವ ಗುರುಗಳು ! ವಿದ್ಯೆಯಿಲ್ಲದ ಜನ ಏನು ರಾಜಕೀಯ ತಿಳಿದುಕೊಂಡಾರು ? ಮುಖ್ಯ ವಾಗಿ ನೋಡಿ : ಒಂದು ಕಡೆ ಉಪಾಧ್ಯಾಯರ ಹಿತಚಿಂತನೆ, ಇನ್ನೊಂದು ಕಡೆ ರೈತರ ಹಿತಚಿಂತನೆ ಇವೆರಡನ್ನೂ ಸಾಧಿಸಿದರೆ ದೇಶ ಉದ್ದಾರವಾಗುತ್ತದೆ. ಹೊಟ್ಟೆಗೆ ಹಿಟ್ಟು ಕಾಣಿಸುವ ಜನರು ದುಡಿಯೋ ರೈತರು. ಇವರಿಗೆ ತಿಳಿವಳಿಕೆ ಕೂಡಬೇಕು ; ಹೆಚ್ಚಾಗಿ ಬೆಳೆಯುವ ಹಾಗೆ ಮಾಡಬೇಕು ; ಅವರಿಗೆ ಸಾಲ ಸೋಲಗಳಿಲ್ಲದಂತೆ ನೋಡಿಕೊಳ್ಳ ಬೇಕು. ಈಗ ನೋಡಿ ? ನಮ್ಮ ಒಕ್ಕಲಿಗ ಜನಾಂಗ ಸರಕಾರಿ ಕೆಲಸಕ್ಕೆ ಆಶೆ ಪಟ್ಟು, ಇದ್ದ ಬದ್ದ ಹಣವನೆಲ್ಲ ಓದಿಗೆ ಹಾಕಿ, ಪೇಟೆಗಳಿಗೆ ಹೋಗಿ ಷೋಕಿ ಕಲಿತುಕೊಂಡು, ಸರಕಾರದಲ್ಲಿ ಗುಮಾಸ್ತೆಯರಾಗಿಯೋ ಮೇರ್ಷ್ಟುಗಳಾಗಿ ನರಳುತ್ತಿದ್ದಾರೆ ! ಜಮೀನುಗಳೆಲ್ಲ ಬಂಜರು ಬಿದ್ದು ವು ; ದುಡಿಯೋ ಜನ ಕಡಿಮೆ ಆದರು. ಇನ್ನು ಬೆಳೆ ಕಡಮೆಯಾಗದೆ ಏನಾದೀತು ? ಹೇಳಿ ಸ್ವಾಮಿ ! ಅಧಿಕಾರಿಗಳ ತಿರುಗಾಟ ಹೇಳ ತೀರದು ; ಗಾಮಾಭಿವೃದ್ಧಿಯ ಉಪನ್ಯಾಸಗಳನ್ನು ಕೇಳತೀರದು ; ರಸ್ತೆಯ ಪಕ್ಕದಲ್ಲಿ ನಾಲ್ಕು ಸಣಕಲು ಒಣಕಲು ಗಿಡಗಳನ್ನು ನೆಟ್ಟು ಗ್ರಾಮ ಪಂಚಾಯತಿ ಫೋರೆಸ್ಟ್ ಎಂದು ಹಾಕಿರುವ ಬೋರ್ಡನ್ನು ನೋಡತೀರದು. ನಮ್ಮ ಮುಖಂಡರು ಮಾಡುತ್ತಿರುವುದೇನು ! ಕೋಮುವಾರು ದ್ವೇಷ ಬೆಳಸೋದು, ತಮ್ಮ ಕಡೆಯ ನಾಲ್ಕು ಜನಕ್ಕೆ ಪ್ರೊಬೆಷನರಿ ಕೆಲಸ ಕೊಡಿ ಸ್ವಾಮಿ ! ಎಂದು ಹಲ್ಲುಗಿರಿಯುತ್ತ ದಿವಾನರಿಗೆ ಔತಣ ಕೊಡಿಸೊದು, ಅವರ ಮನೆಯ ಬಾಗಿಲು ಕಾಯೋದು !'

'ಗೌಡರೇ ! ನಾನು ಸರಕಾರಿ ನೌಕರ ; ನಿಮಗೆ ತಿಳಿದಿದೆಯಲ್ಲ, ನನಗೇಕೆ ಈ ರಾಜಕೀಯದ ವಿಚಾರ ?' 'ಮುಖಂಡರ ಮಾತು ಬಂತಲ್ಲ ಸ್ವಾಮಿ | ಅದಕ್ಕೋಸ್ಕರ ಹೇಳಿದೆ ಮನಸ್ಸಿಗೆ ಬೇಜಾರು ಪಟ್ಟು ಕೊಳ್ಳಬೇಡಿ. ಹಳ್ಳಿಗಳಲ್ಲೇ ಇದ್ದುಕೊಂಡು ನಾವು ಮಾಡೋ ಕೆಲಸಗಳು ಬಹಳ ಇವೆ. ನಾನು ಸನಿಕೆ ಗುದ್ದಲಿ ತೆಕ್ಕೊಂಡು ರಸ್ತೆಯ ರಿಪೇರಿಗೆ ಹೊರಟರೆ, ನನ್ನ ರೈತರು ನೂರಾರು ಜನ ನಾನು ತಾನು ಎಂದು ಕೆಲಸಕ್ಕೆ ಬರುವುದಿಲ್ಲವೆ ? ದಿವಾನರ ಪಕ್ಕದಲ್ಲಿ ನಿಂತುಕೊಂಡು, ಕೈ ಕುಲುಕಿಸಿಕೊಂಡು, ರಸ್ತೆಯ ರಿಪೇರಿಯನ್ನು ಹಳ್ಳಿಯವರೇ ಮಾಡಿಕೊಳ್ಳಿ! ನಿಮ್ಮ ಕಾಲಮೆಲೇ ನೀವು ನಿಂತುಕೊಳ್ಳಬೇಕು :-ಎಂದು ಬರಿಯ ಬೋಧೆಮಾಡಿದರೆ ದೇಶಕ್ಕೆ ಪ್ರಯೋಜನ ಏನು? ಕಾಲಮೇಲೆ ನಿಂತುಕೊಂಡಿಲ್ಲದೆ ಜನ ಕೈ ಮೇಲೆ ನಿಂತಿದ್ದಾರೆಯೇ ?

'ಮುಂದೆ ಒಳ್ಳೆಯ ಕಾಲ ಬರುತ್ತದೆ ಗೌಡರೆ! ಪ್ರಜೆಗಳಿಗೆ ಅಧಿಕಾರ ಬಂದಾಗ ಎಲ್ಲವೂ ಚೆನ್ನಾಗಿ ನೆರವೇರುತ್ತವೆ. ಈಗ ನಿಮಗೆ ನಾನು ತಿಳಿಸಬೇಕಾದ ಒಂದು ಸಂಗತಿ ಇದೆ : ನಿ?ವು ನಮ್ಮ ಉಪಾಧ್ಯಾಯರ ವಿಚಾರದಲ್ಲಿ ಬಹಳ ಸಹಾನುಭೂತಿಯಿಂದ ನಡೆದುಕೊಳ್ಳುತ್ತಾ ಇದ್ದೀರಿ; ಅನೇಕರಿಗೆ ಸಹಾಯ ಮಾಡಿದ್ದಿರಿ ; ತಿಮ್ಮಣ್ಣ ಭಟ್ಟರನ್ನು ಉದ್ಧಾರ ಮಾಡಿದ್ದೀರಿ ; ನಮ್ಮ ದೇಶಕ್ಕೆ ಆದರ್ಶಪ್ರಾಯ ರೂ ಭೂಷಣಪ್ರಾಯರೂ ಆಗಿದ್ದೀರಿ. ನಿಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.'

'ಸ್ವಾಮಿ ! ನನ್ನನ್ನು ಹೀಗೆಲ್ಲ ತಾವು ಸ್ತೋತ್ರ ಮಾಡಬಾರದು. ಸ್ತೋತ್ರ ಕೇಳಿದರೆ ಬುದ್ಧಿ ಕೆಟ್ಟು ಹೋಗುತ್ತದೆ ! ನಾನು ಮಾಡಿರುವ ಉಪಕಾರ ಏನು ? ಉದ್ಧಾರ ಏನು ? ಏನೂ ಇಲ್ಲ. ಅವರವರು ದುಡಿದು ಸಂಪಾದನೆ ಮಾಡುತ್ತಾರೆ. ಬಿಟ್ಟಿಯಾಗಿ ನಾನೇನೂ ಕೊಟ್ಟಿಲ್ಲ.'

'ನೀವು ಹೀಗೆಯೇ ಹೇಳಬೇಕು. ದುಡಿಯುವುದಕ್ಕೆ ಎಷ್ಟೋ ಮಂದಿ ಸಿದ್ಧರಾಗಿದ್ದಾರೆ. ದುಡಿಸಿಕೊಂಡು ಕೈಗೆ ಹಣ ಕೊಡುವ ಮಹಾನುಭಾವರು ವಿರಳ! ಈಗ ತಿಮ್ಮಣ್ಣ ಭಟ್ಟರ ವಿಚಾರದಲ್ಲಿ ಒಂದು ಮಾತು : ಅವರು ನಿಮ್ಮ ಹತ್ತಿರ ಹಾಗೆ ಗುಮಾಸ್ತ ಕೆಲಸ ಮಾಡುವುದು ನಮ್ಮ ಸರಕಾರದ ರೂಲ್ಸಿಗೆ ವಿರುದ್ಧವಾದುದು. ಮೇಲಿನವರ ಅಪ್ಪಣೆ ಇಲ್ಲದೆ ಹಾಗೆಲ್ಲ ಬೇರೆ ಕಡೆ ಸರಕಾರಿ ನೌಕರನು ದುಡಿಯಕೂಡದು, ಸಂಪಾದಿಸಕೂಡದು, 'ಸ್ವಾಮಿ | ಒಳ್ಳೆಯ ರೂಲ್ಕು ಮಾತು ಆಡುತ್ತಿದ್ದೀರಲ್ಲ ! ನನ್ನ ಕೈಕೆಳಗೆ ಕೂಲಿ ಆಳುಗಳು ಕೆಲಸ ಮಾಡುತ್ತಿದಾರೆ ಸ್ವಾಮಿ ! ಎರಡು ಹೊತ್ತು ಹಿಟ್ಟು, ಹೊದೆಯುವುದಕ್ಕೆ ಕಂಬಳಿ. ಕೈಗೆ ದುಡ್ಡು-ಆ ಆಳುಗಳಿಗೆ ನಾನು ಕೊಡುತ್ತಿದ್ದೇನೆ. ಸರಕಾರಾನೂ ಮೇಷ್ಟ ಸಂಸಾರಕ್ಕೆ ದಿನವೂ ಊಟ ಹಾಕಿ, ವರ್ಷಕ್ಕೆ ಬೇಕಾಗುವ ಬಟ್ಟೆ ತೆಗೆದು ಕೊಟ್ಟು, ತಿಂಗಳಿಗೆ ಹದಿನೈದು ಇಪ್ಪತ್ತು ರುಪಾಯಿ ಕೈಗೆ ಕೊಡಲಿ ಸ್ವಾಮಿ ! ಹೊಟ್ಟೆಗೆ ಹಿಟ್ಟು ಹಾಕದೆ, ಮೈಗೆ ಬಟ್ಟೆ ಕೊಡದೆ, ಕೂಲಿ ಆಳುಗಳಿಗಿಂತ ಕೀಳಾಗಿ ಕಾಣುತ್ತೀರಿ ರೂಲ್ಸು ಮಾತು ಆಡುತ್ತೀರಿ !!

'ಸಂಬಳ ಸಾರಿಗೆಗಳನ್ನೆಲ್ಲ ಸರಕಾರದವರು ಆಯಾ ಕೆಲಸಕ್ಕನುಗುಣವಾಗಿ ನಿಗದಿ ಮಾಡಿದ್ದಾರೆ. ಅವರನ್ನು ಟೀಕಿಸಬಾರದು ಗೌಡರೇ ??

'ಅದೇನು ಸ್ವಾಮಿ ಸರಕಾರದವರು ! ಎಂದು ದೊಡ್ಡದಾಗಿ ಹೇಳುತ್ತೀರಿ, ಸರಕಾರ ಎಂದರೆ ಯಾರು ಸ್ವಾಮಿ? ಸಾವಿರಾರು ರುಪಾಯಿಗಳನ್ನು ತಮತಮಗೆ ಸಂಬಳವಾಗಿ ನಿಗದಿ ಮಾಡಿಕೊಂಡು ಮೋಟಾರುಗಳಲ್ಲಿ ಓಡಾಡುತ್ತ, ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸಮಾಡುತ್ತ, ಹಗಲೆಲ್ಲ ಜಬರ್ದಸ್ತಿ ಮಾಡಿ ರಾತ್ರಿಯೆಲ್ಲ ಮೈ ಮರೆತು ಬಿದ್ದು ಕೊಂಡಿರುವ, ಹ್ಯಾಟು ಬೂಟುಗಳ ಸರಿಗೆ ರುಮಾಲು ಸೂಟುಗಳ ದೊಡ್ಡ ಮನುಷ್ಯರ ಕ್ಲಬ್ಬು ತಾನೇ ಸ್ವಾಮಿ ! ಬಡ ಮೇಷ್ಟರುಗಳ ಕಷ್ಟ ಅವರಿಗೆ ಗೊತ್ತೇ? ಜೀವನಕ್ಕೆ ಆಗುವಷ್ಟು, ಸಂಸಾರಕ್ಕೆ ಸಾಕಾಗುವಷ್ಟು, ನಿಗದಿಮಾಡಿ ಎಲ್ಲರಿಗೂ ಒಂದು ಮಟ್ಟಕ್ಕೆ ಕಡಮೆಯಿಲ್ಲದೆ ಸಂಬಳ ಕೊಡಿ ಸ್ವಾಮಿ ! ಆಮೇಲೆ ರೂಲ್ಸು ಮಾತನಾಡಿ !'

'ನಾಳೆ ನಮಗೆ ಸ್ವರಾಜ್ಯ ಬಂದಾಗ ನೀವು ಪ್ರಧಾನಿಗಳಾಗಿ ಬರಬೇಕು ಗೌಡರೇ !'

'ಅಯ್ಯೋ ಸ್ವಾಮಿ ! ಅದೆಲ್ಲ ನಮಗೇಕೆ ? ನಾನು ಒಕ್ಕಲ ಮಗ ! ದುಡಿಯೋ ರೈತ! ಮುಂದೆ ಪ್ರಜಾಧಿಕಾರ ಬಂದರೂ ಕಚ್ಚಾಟ ತಪ್ಪೋದಿಲ್ಲ ಸ್ವಾಮಿ! ದ್ರೌಪದಿಗೆ ಐದು ಜನ ಗಂಡಂದರಿದ್ದು ಒಬ್ಬೊಬ್ಬರು ಒಂದೊಂದು ವರ್ಷ ಸರದಿಯಮೇಲೆ ಗಂಡನಾಗಿರಬೇಕು ಎಂದು ನಿಗದಿ ಮಾಡಿದ್ದರಲ್ಲಾ! ಅದು ಜ್ಞಾಪಕಕ್ಕೆ ಬರುತ್ತೆ ಸ್ವಾಮಿ ! ಮುಂದೆ ಸರದಿಯಮೇಲೆ ದಿನಕ್ಕೊಬ್ಲೊಬ್ಬ ಗಂಡ ನಾನು ತಾನು ಎಂದು ನೂರಾರು ಜನ ಕಚ್ಚಾಡ್ತಾರೆ ! ?

ಗಂಗೇಗೌಡರು ವಿಶ್ವವಿದ್ಯಾನಿಲಯದಲ್ಲಿ ಓದಿದವರಲ್ಲದಿದ್ದರೂ ಪದವೀಧರರಲ್ಲದಿದ್ದರೂ ಎಷ್ಟು ಚೆನ್ನಾಗಿ ತಿಳಿವಳಿಕೆ ಪಡೆದಿದ್ದಾರೆ ! ಎಂಬುದನ್ನು ನೋಡಿ ರಂಗಣ್ಣನಿಗೆ ಆಶ್ಚರ್ಯವಾಯಿತು. ದೇಶದಲ್ಲಿ ಸತ್ಯ ಬೇಕಾದಷ್ಟಿದೆ, ದೇಶದ ಆರೋಗ್ಯವೂ ಚೆನ್ನಾಗಿದೆ ; ಆದ್ದರಿಂದ ಭವಿಷ್ಯ ಆಶಾದಾಯಕವಾಗಿದೆ ಎಂದು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮಾರನೆಯ ದಿನದ ಏರ್ಪಾಡುಗಳನ್ನು ಮಾತನಾಡುತ್ತಿದ್ದಾಗ ತಿಮ್ಮಣ್ಣ ಭಟ್ಟ ಲೋಟಗಳಲ್ಲಿ ಕಾಫಿ ತಂದು ಮುಂದಿಟ್ಟನು. 'ಹೆಡ್‌ಮೇಷ್ಟೆ! ಇನ್ ಸ್ಪೆಕ್ಟರವರ ಊಟಕ್ಕೆ ಏನು ಏರ್ನಾಟು ಮಾಡಿದ್ದೀರಿ ? ' ಎಂದು ಗಂಗೇಗೌಡರು ಕೇಳಿದರು.

'ಎಲ್ಲ ಏರ್ಪಾಟುಗಳನ್ನು ಅವರು ಮಾಡಿಕೊಂಡು ಬಂದಿದ್ದಾರೆ ನಮ್ಮ ಸಹಾಯದ ನಿರೀಕ್ಷಣೆಯನ್ನು ಅವರು ಇಟ್ಟು ಕೊಂಡಿಲ್ಲ.'

'ಹಾಗುಂಟೆ ! ತರಕಾರಿ, ಹಾಲು ಮೊಸರು- ಇವುಗಳನ್ನಾದರೂ ತಂದು ಕೊಟ್ಟಿದ್ದೀರೋ ಇಲ್ಲವೋ ? '

ಅವುಗಳನ್ನೆಲ್ಲ ಒದಗಿಸಿದ್ದೇನೆ. '

ರಂಗಣ್ಣನು ಆ ರಾತ್ರಿ ಊಟಕ್ಕೆ ತನ್ನ ಬಿಡಾರಕ್ಕೇನೆ ಬರಬೇಕೆಂದು ಗಂಗೇಗೌಡರಿಗೆ ಆ ಆ ಹ್ವಾನ ಕೊಟ್ಟನು.

'ಏನು ಸ್ವಾಮಿ ! ನೀವು ಬ್ರಾಹ್ಮಣರೇ ! '

'ಈ ದಿವಸ ನಿಮ್ಮನ್ನೂ ಬ್ರಾಹ್ಮಣನನ್ನಾಗಿ ಮಾಡುತ್ತೇನೆ ಬನ್ನಿ ! ಎಲ್ಲರೂ ಬ್ರಾಹ್ಮಣರಾಗಿ ಹೋದರೆ ಬಹಳ ಒಳ್ಳೆಯದು ' ಎಂದು ರಂಗಣ್ಣನು ನಗುತ್ತಾ ಹೇಳಿದನು.

ಪ್ರಕರಣ ೨೧

ರಂಗನಾಥಪುರದಲ್ಲಿ ಸಭೆ

ಮಾರನೆಯ ದಿನ ಬೆಳಗ್ಗೆ ಸಾಹೇಬರು ಒಂಬತ್ತು ಗಂಟೆಗೆ ಬಸ್ಸಿನಲ್ಲಿ ಬಂದಿಳಿದರು. ಅವರಿಗೆ ಗಂಗೇಗೌಡರ ನಾಯಕತ್ವದಲ್ಲಿ ಸಂಭ್ರಮದ ಸ್ವಾಗತ ದೊರೆಯಿತು. ಹೂವಿನ ಹಾರಗಳು, ತಟ್ಟೆಗಳಲ್ಲಿ ಹಣ್ಣು ಹಂಪಲು, ಕೈಗೆ ಕೊಡುವ ನಿಂಬೆಯಹಣ್ಣುಗಳು, ಸ೦ಚಾಯತಿ ಮೆಂಬರುಗಳ ಪರಿಚಯ, ಗುಂಪು ಸೇರಿದ್ದ ಉಪಾಧ್ಯಾಯರ ವಂದನಾರ್ಪಣೆ ಮತ್ತು ಹಳ್ಳಿಯವರ ಜಯಕಾರಗಳೊಡನೆ ಸ್ವಾಗತ ಸಮಾರಂಭ ಕೋಲಾಹಲಕರವಾಗಿತ್ತು. ಸಾಹೇಬರು ಮುಸಾಘರವಾನೆಗೆ ದಯ ಮಾಡಿಸಿ ಕೊಟಡಿಯಲ್ಲಿ ಕುರ್ಚಿಯಮೇಲೆ ಕುಳಿತು ಕೊಂಡರು. ತಿಮ್ಮಣ್ಣ ಭಟ್ಟನ ಓಡಾಟ ಕಾಫಿ ತಿಂಡಿಗಳ ಭರಾಟ ಚೆನ್ನಾಗಿ ಸಾಗಿದುವು. ಗಂಗೇಗೌಡರು ಊಟದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದರು. ಒಕ್ಕಲಿಗ ಮೇಷ್ಟ್ರುಗಳಿಗೂ ಇತರರಿಗೂ ತಮ್ಮ ಮನೆಯಲ್ಲೇ ಏರ್ಪಾಟುಮಾಡಿದ್ದರು.' ಲಿಂಗಾಯತರು ಮೊದಲಾದವರಿಗೆಲ್ಲ ಆಯಾಯಾ ಜಾತಿಯವರ ಮನೆಗಳಲ್ಲಿ ಆಹ್ವಾನಗಳಿದ್ದು ವು. ಉಳಿದ ಬ್ರಾಹ್ಮಣಾದಿಗಳಿಗೆ ಮುಸಾಫರ ಖಾನೆಯಲ್ಲೇ ಅಡಿಗೆಯಾಗಿತ್ತು. ಹನ್ನೊಂದು ಗಂಟೆಗೆ ಸರಿಯಾಗಿ ಮುಸಾಫರಖಾನೆಯಲ್ಲಿ ಎಲೆಗಳನ್ನು ಹಾಕಿ ಬಡಿಸತೊಡಗಿದರು. ಸಾಹೇಬರು ಬಂದಿದ್ದ ಕಾರಣದಿಂದ ಜಿಲೇಬಿ ಹೆಚ್ಚು ಕಟ್ಟಳೆಯ ಭಕ್ಷ್ಯವಾಗಿತ್ತು. ಆ ದಿನದ ಏರ್ಪಾಟುಗಳನ್ನೆಲ್ಲ ನೋಡಿ ಉಂಡು, ಸಂತೋಷ ಪಟ್ಟ ಸಾಹೇಬರು ಬಹಳ ಪ್ರಸನ್ನರಾಗಿದ್ದರು ! ಬೇಕಾದ ವರವನ್ನು ಕೊಡವವರಾಗಿದ್ದರು !

ಪಾಠಶಾಲೆಯಲ್ಲಿ ಹನ್ನೆರಡು ಗಂಟೆಗೆ ಸರಿಯಾಗಿ ಸಂಘದ ಸಭೆ ಸೇರಿತು. ವೇದಿಕೆಯ ಮೇಲೆ ರಂಗಣ್ಣನೊಂದು ಪಕ್ಕದಲ್ಲಿ ಗಂಗೇಗೌಡರೊಂದು ಪಕ್ಕದಲ್ಲಿ, ಸಾಹೇಬರು ಮಧ್ಯದಲ್ಲಿ ಕುರ್ಚಿಗಳಲ್ಲಿ ಕುಳಿತಿದ್ದರು. ರಂಗಣ್ಣನು ಎದ್ದು ನಿಂತುಕೊಂಡು, " ಈ ದಿನ ಸಾಹೇಬರು ಇಲ್ಲಿಗೆ ದಯಮಾಡಿಸಿರುವುದು ನಮ್ಮ ಭಾಗ್ಯ. ಅವರು ಬಹಳ ದಕ್ಷರೂ ಆನುಭವಿಗಳೂ ಆದ ಅಧಿಕಾರಿಗಳು, ವಿದ್ಯಾಭಿವೃದ್ಧಿಯ ವಿಚಾರದಲ್ಲಿ ಬಹಳ ಆಸಕ್ತರಾದವರು. ಉಪಾಧ್ಯಾಯರ ವಿಚಾರದಲ್ಲಿ ಬಹಳ ಕರುಣಾ ಪೂರ್ಣರು. ಅವರ ಅಮೋಘವಾದ ಸಲಹೆಗಳನ್ನು ನಾವುಗಳೆಲ್ಲ ನಿರೀಕ್ಷಿಸುತ್ತಿರುವುದು ಸಹಜವೇ ಆಗಿದೆ ಈ ದಿನ ಸಾಹೇಬರು ಅಧ್ಯಕ್ಷಪೀಠವನ್ನಲಂಕರಿಸಿ ಕಾರ್ಯ ಕ್ರಮಗಳನ್ನೆಲ್ಲ ನೆರವೇರಿಸಿ ಕೊಡ ಬೇಕೆಂದೂ ಗ್ರಾಮಸ್ಥರ ಕೋರಿಕೆಗಳನ್ನು ಈಡೇರಿಸಿಕೊಡಬೇಕೆಂದೂ ಪ್ರಾರ್ಥಿಸುತ್ತೇನೆ' ಎಂದು ಹೇಳಿದನು, ಪದ್ಧತಿಯಂತೆ ದೇವತಾ ಪ್ರಾರ್ಥನೆಯಾಯಿತು ; ಹುಡುಗಿಯರಿಂದ ಸ್ವಾಗತ ಗೀತೆಗಳ ಹಾಡುಗಾರಿಕೆಯೂ ಆಯಿತು ಅನಂತರ ಸಾಹೇಬರು ಎದ್ದು ನಿಂತುಕೊಂಡು, ತಾವು ರಂಗನಾಥಪುರಕ್ಕೆ ಭೇಟಿ ಕೊಡುವ ಅವಕಾಶವನ್ನು ಗ್ರಾಮಸ್ಥರು ಕಲ್ಪಿಸಿ ಕೊಟ್ಟು ದ ಕಾಗಿ ಅವರಿಗೆ ಕೃತಜ್ಞರಾಗಿರುವುದಾಗಿಯೂ, ಅಲ್ಲಿಯ ಏರ್ಪಾಟುಗಳನ್ನು ನೋಡಿ ಸಂತೋಷ ವಾಯಿತೆಂದೂ, ತಮ್ಮ ಸಲಹೆಗಳನ್ನು ಸಭೆಯ ಮುಕ್ತಾಯದಲ್ಲಿ ತಿಳಿಸುವುದಾಗಿಯೂ ಹೇಳಿ ಕಾರ್ಯಕ್ರಮದ ಪಟ್ಟಿ ಯನ್ನು ಕೈಗೆ ತೆಗೆದುಕೊಂಡರು. ಅದರಲ್ಲಿದ್ದಂತೆ ವ್ಯಾಕರಣ ಪಾಠ, ಗದ್ಯ ಪಾಠ, ಭೂಗೋಳ ಮತ್ತು ಗಣಿತ ಪಾಠಗಳ ಬೋಧನಕ್ರಮಗಳನ್ನು ಆಯಾ ಉಪಾಧ್ಯಾಯರು ವಿವರಿಸಿದರು ; ಒ೦ದೆರಡು ಭಾಷಣಗಳಾದುವು. ಕಡೆಯಲ್ಲಿ ಬೋಧನೆಯಲ್ಲಿ ಬರುವ ತೊಡಕುಗಳ ಚರ್ಚೆ ನಡೆಯಿತು. ಸಾಹೇಬರು ಅದನ್ನು ಬಹಳ ಕುತೂಹಲದಿಂದ ಗಮನಿಸುತ್ತಿದ್ದ ರು. ಆ ತೊಡಕುಗಳಿಗೆಲ್ಲ ಪರಿಹಾರವನ್ನು ರಂಗಣ್ಣನೇ ಹೇಳುತ್ತಿದ್ದನು. ಸಮಯಾನುಸಾರ ಕಪ್ಪು ಹಲಗೆಯ ಹತ್ತಿರ ಹೋಗಿ, ಅದರ ಮೇಲೆ ಬರೆದು ವಿವರಿಸುತ್ತಲೂ ಇದ್ದನು. ಸಾಹೇಬರು ಹಿಂದೆ ಹಲವು ಕಡೆಗಳಲ್ಲಿ ಉಪಾಧ್ಯಾಯರ ಸಭೆಗಳನ್ನು ನೋಡಿದವರು. ಒಂದು ಮಾದರಿಪಾಠ, ಒ೦ದು ಭಾಷಣ ಮತ್ತು ಸಂಗೀತದಲ್ಲಿ ಅವು ಮುಕ್ತಾಯವಾಗುತ್ತಿದ್ದು ವು ; ಇನ್ ಸ್ಪೆಕ್ಟರವರು ಅಲಂಕಾರಕ್ಕಾಗಿ ಕುಳಿತುಕೊಂಡಿದ್ದು ಅಲಂಕಾರ ಭಾಷಣ ಮಾಡುವವರಾಗಿರುತ್ತಿದ್ದರು. ಆದರೆ ಇಲ್ಲಿಯ ಸಭೆಯಲ್ಲಿ ಚರ್ಚೆಗಳು ಸಲಿಗೆಯಿಂದ ನಡೆಯುತ್ತ, ಇನ್ ಸ್ಪೆಕ್ಟರವರ ಪಾಂಡಿತ್ಯದ ಮತ್ತು ಅನುಭವಗಳ ಪರೀಕ್ಷೆ ಮೇಷ್ಟ್ರುಗಳಿಂದ ನಡೆಯುತ್ತಿತ್ತು !

ಒಬ್ಬ ಉಪಾಧ್ಯಾಯನು, ಸ್ವಾಮಿ | ರೀಡರುಗಳಲ್ಲಿ ಮಧ್ಯೆ ಮಧ್ಯೆ ಚಿತ್ರಗಳನ್ನು ಮುದ್ರಿಸಿದ್ದಾರೆ. ಅವುಗಳಿಂದ ಪಾಠಗಳಿಗೆ ತೊಂದರೆಯೇ ವಿನಾ ಸಹಾಯವಿಲ್ಲ. ಪಾಠಮಾಡುವ ಕಾಲದಲ್ಲಿ ಮಕ್ಕಳ ಗಮನವೆಲ್ಲ ಚಿತ್ರದ ಕಡೆಗೆ ಇರುತ್ತದೆ ; ವಾಕ್ಯಗಳ ಮೇಲೆ ಇರುವುದಿಲ್ಲ. ಚಿತ್ರಗಳನ್ನು ಮುದ್ರಿಸದಿದ್ದರೆ ಒಳ್ಳೆಯದಲ್ಲವೇ ? ' ಎಂದು ಕೇಳಿದನು.

'ಮೇಷ್ಟೇ ! ನೀವು ಬಹಳ ಶ್ರದ್ಧೆಯಿಂದ ವಾಠಗಳನ್ನು ಮಾಡುತಿದ್ದೀರಿ ಎನ್ನುವುದು ಸ್ಪಷ್ಟಪಟ್ಟಿತು. ನನಗೆ ಆ ವಿಚಾರದಲ್ಲಿ ಬಹಳ ಸಂತೋಷ. ಎಲ್ಲ ಉಪಾಧ್ಯಾಯರೂ ನಿಮ್ಮಂತೆಯೇ ಶ್ರದ್ಧೆ ವಹಿಸಿದರೆ ವಿದ್ಯಾ ಭಿವೃದ್ಧಿ ಚೆನ್ನಾಗಿ ಆಗುತ್ತದೆ. ಆದರೆ, ನೀವು ಕೇಳಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ನೋಡಿ ಮೇಷ್ಟೆ ! ಮೂಗಿದೆ, ಸಿಂಬಳ ಸುರಿಯುತ್ತದೆ; ; ಆದ್ದರಿಂದ ಮೂಗನ್ನು ಕೊಯ್ದು ಹಾಕಿಬಿಡೋಣ ! ಎನ್ನು ವುದಕ್ಕಾಗುತ್ತದೆಯೇ ? ಮೂಗಿದ್ದರೆ ಮುಖಕ್ಕೆ ಶೃಂಗಾರ ! ಚಿತ್ರವಿದ್ದರೆ ಪಾಠಕ್ಕೆ ಅಲಂಕಾರ ! ” ಎಂದು ರಂಗಣ್ಣನು ಹೇಳಿದನು. ಸಾಹೇಬರಿಗೆ ಪರಮಾನಂದವಾಗಿ ಅವರು ಚಪ್ಪಾಳೆ ತಟ್ಟಿದರು. ಸಭೆಯಲ್ಲೆಲ್ಲ ಕರತಾಡನಗಳೂ ನಗುವಿನ ಹೊನಲುಗಳೂ ತುಂಬಿ ಹೊದುವು.

'ಮೇಷ್ಟೇ ! ಇತರ ಕಡೆಗಳಿಗೆ ಮಕ್ಕಳ ಗಮನ ಹರಿಯದೆ ಪುಸ್ತಕದಲ್ಲಿರುವ ಚಿತ್ರದ ಕಡೆಗೆ ಹರಿಯುವುದು ಒಂದು ವಿಚಾರಕ್ಕೆ ಒಳ್ಳೆಯದಲ್ಲವೇ ?

'ಹೌದು ಸ್ವಾಮಿ.

'ಮಕ್ಕಳಿಗೆ ಚಿತ್ರದಲ್ಲಿ ಆಸಕ್ತಿಯಿರುವುದರಿಂದ ಉಪಾಧ್ಯಾಯರು ಅದನ್ನು ಉಪಯೋಗಿಸಿಕೊಂಡು, ಆ ಚಿತ್ರವನ್ನೆ ಪಾಠಕ್ಕೆ ಪೀಠಿಕೆಯಾಗಿ ಮಾಡಿಕೊಳ್ಳಬೇಕು. ಮೊದಮೊದಲಿನಲ್ಲಿ ಮಕ್ಕಳಿಗೆ ಹಾಗೆ ಚಿತ್ರದಲ್ಲಿ ತೀವ್ರವಾದ ಆಸಕ್ತಿ ಇರುತ್ತದೆ. ಆದರೆ ಅದು ಬಹುಕಾಲ ಇರುವುದಿಲ್ಲ. ಸ್ವಲ್ಪ ಕಾಲದಮೇಲೆ ಆ ಚಿತ್ರವನ್ನು ವಿರೂಪ ಮಾಡಿ ಬಿಡುತ್ತಾರೆ ; ಕಡೆಗೆ ಅದನ್ನು ಹರಿದು ಹಾಕುವುದೂ ಉಂಟು. ಹಾಗೆ ಮಾಡುವುದನ್ನು ನೀವು ನೋಡಿದ್ದೀರಾ ಮೇಷ್ಟೆ !'

'ನೋಡಿದ್ದೇನೆ ಸ್ವಾಮಿ !'

'ಒಳ್ಳೆಯದು ಮೇಷ್ಟೆ ! ಚಿತ್ರದಲ್ಲಿ ನೆಟ್ಟಿರುವ ಗಮನವನ್ನು ಕ್ರಮವಾಗಿ ಪಾಠಕ್ಕೆ ತಿರುಗಿಸಿಕೊಳ್ಳಬೇಕು. ಮೊದಲಿನಲ್ಲೇ ಚಿತ್ರದ ವಿಷಯವನ್ನು ಪ್ರಸ್ತಾಪಮಾಡಿ, ಕೆಲವು ಪ್ರಶ್ನೆಗಳನ್ನು ಕೇಳಬೇಕು. ಮಕ್ಕಳು ಚಿತ್ರವನ್ನು ಚೆನ್ನಾಗಿ ನೋಡಿಯೇ ಉತ್ತರ ಕೊಡಲಿ. ಅಲ್ಲಿಗೆ ಅವರ ಆಸಕ್ತಿ ಕೇವಲ ಚಿತ್ರದಲ್ಲಿ ಕಡಮೆಯಾಗುತ್ತದೆ. ಆಮೇಲೆ- ಚಿತ್ರದ ವಿಚಾರವನ್ನು ಹೆಚ್ಚಾಗಿ ಪಾಠದಲ್ಲಿ ಹೇಳಿದೆ. ಓದಿ ತಿಳಿದುಕೊಳ್ಳೋಣ ಎಂದು ಉಪಾಯದಿಂದ ಓದುವುದರ ಕಡೆಗೆ ಮಕ್ಕಳ ಆಸಕ್ತಿಯನ್ನು ತಿರುಗಿಸಬೇಕು. ಚಿತ್ರವಿದ್ದರೆ ಉಪಾಧ್ಯಾಯರಿಗೆ ಶ್ರಮ ಅರ್ಧಕಡಮೆಯಾಗುತ್ತದೆ ; ವಿಷಯಗಳನ್ನು ತಿಳಿಸುವುದು ಸುಲಭವಾಗುತ್ತದೆ; ಮಕ್ಕಳ ಕಲ್ಪನಾಶಕ್ತಿ ವಿಕಾಸವಾಗುತ್ತದೆ' ಕಿವಿಯಲ್ಲಿ ಎಷ್ಟು ಕೇಳಿದರೇನು ? ಕಣ್ಣಿಂದ ನೋಡಿದ್ದು ಸ್ಪಷ್ಟವಾಗಿ ಮನಸ್ಸಿನಲ್ಲಿ ನಿಲ್ಲುತ್ತದೆಯಲ್ಲವೆ ? ಉಪಾಧ್ಯಾಯರು ಕಪ್ಪು ಹಲಗೆಯ ಮೇಲೆ ದೊಡ್ಡದಾಗಿ ಆ ಚಿತ್ರವನ್ನು ಬರೆದು ವಿವರಿಸಿದರೆ ಪಾಠಕ್ಕೆ ಕಳೆ ಕಟ್ಟುತ್ತದೆ. ಈಗ ಹೇಳಿ ಮೇಷ್ಟೇ ! ರೀಡರುಗಳಲ್ಲಿ ಚಿತ್ರಗಳಿರಬೇಕೇ ಬೇಡವೇ ??

'ಇರಬೇಕು ಸ್ವಾಮಿ !?

'ಮಧ್ಯೆ ಮಧ್ಯೆ ಮಕ್ಕಳ ಗಮನ ವಾಕ್ಯಗಳ ಮೇಲೆ ಇಲ್ಲದಿದ್ದರೆ ಉಪಾಧ್ಯಾಯರು ಅಂಥ ಹುಡುಗರನ್ನು ಗಮನಿಸುತ್ತ, ಥಟ್ಟನೆ ಮುಂದಕ್ಕೆ ನೀನು ಓದು- ಎಂದು ಆ ಹುಡುಗರನ್ನು ಎಚ್ಚರಿಸಿ ಓದಿಸಬೇಕು?

'ತಿಳಿಯಿತು ಸ್ವಾಮಿ !' ಎಂದು ಹೇಳುತ್ತ ಆ ಮೇಷ್ಟು ಕುಳಿತುಕೊಂಡನು.

ಮತ್ತೊಬ್ಬ ಉಪಾಧ್ಯಾಯನದ್ದು, 'ಸ್ವಾಮಿ ! ನಾವು ನರಿಯ ಚಿತ್ರವನ್ನು ಬರೆಯಹೋದರೆ ಅದು ನಾಯಿಯ ಚಿತ್ರವೇ ಆಗಿ ಹೋಗುತ್ತದೆ ಯಲ್ಲ ! ಅದಕ್ಕೇನು ಮಾಡಬೇಕು ಸ್ವಾಮಿ ? ಈ ನರಿ ನಾಯಿಗಳಿಗೆ ಭೇದ ತೋರಿಸುವುದು ಹೇಗೆ ?” ಎಂದು ಕೇಳಿದನು. ರಂಗಣ್ಣನು, 'ಮೇಷ್ಟೇ! ನರಿಯ ಮೂತಿ ಯಾವಾಗಲೂ ಸ್ವಲ್ಪ ಚೂಪಾಗಿರುತ್ತದೆ ; ನಾಯಿಯದು ಅಷ್ಟು ಚೂಪಾಗಿರುವುದಿಲ್ಲ. ಎರಡನೆಯದಾಗಿ, ನಾಯಿಯ ಬಾಲ ಡೊಂಕು, ಸಾಮಾನ್ಯವಾಗಿ ತೆಳುವು ; ನರಿಯ ಬಾಲ ಪೊದರು, ಪೊರಕೆ ಇದ್ದ ಹಾಗೆ ; ಮತ್ತು ಯಾವಾಗಲೂ ಕೆಳಮುಖವಾಗಿಯೇ ಇರುತ್ತದೆ. ವ್ಯತ್ಯಾಸವನ್ನು ನೋಡಿ' ಎಂದು ಹೇಳಿ ಕಪ್ಪು ಹಲಗೆಯ ಮೇಲೆ ಬರೆದು ತೋರಿಸಿದನು. ಆಮೇಲೆ 'ಕುರಿಯ ಬಾಲ ಹೇಗಿರುತ್ತದೆ ? ಮೇಕೆಯ ಬಾಲ ಹೇಗಿರುತ್ತದೆ ? ಹೇಳಿ ಮೇಷ್ಟೇ ನೋಡೋಣ ? ಎಂದು ಕೇಳಿದನು.

'ನಾನು ಗಮನಿಸಿ ನೋಡಿಲ್ಲ ಸ್ವಾಮಿ |' ಎಂದು ಉಪಾಧ್ಯಾಯನು ಹೇಳಿದನು.

ಸಾಹೇಬರು ಮುಗುಳುನಗೆ ನಗುತ್ತ, “ಏನು ವ್ಯತ್ಯಾಸವಿದೆ ರಂಗಣ್ಣನವರೇ ?' ಎಂದು ಕೇಳಿದರು.

'ವ್ಯತ್ಯಾಸವಿದೆ ಸಾರ್ ! ಅವುಗಳನ್ನೆಲ್ಲ ನಾವು ಗಮನಿಸಬೇಕು' ಎಂದು ರಂಗಣ್ಣ ಹೇಳಿ, ಕಪ್ಪು ಹಲಗೆಯ ಮೇಲೆ ಆ ಬಾಲಗಳ ಚಿತ್ರಗಳನ್ನು ಬರೆದು, 'ಎರಡರ ಬಾಲಗಳೂ ಮೊಟಕು ; ಆದರೆ ಕುರಿಯ ದುಕೆಳಕ್ಕೆ ಬಗ್ಗಿ ರುತ್ತವೆ, ಮೇಕೆಯದು ಮೇಲಕ್ಕೆ ಬಗ್ಗಿರುತ್ತದೆ ! ಎಂದು ವಿವರಿಸಿದನು.

ಹಿಗೆ ಚರ್ಚೆಗಳಲ್ಲಿ ವಿನೋದವೂ ಶಿಕ್ಷಣವೂ ಬೆರೆತುಕೊಂಡು ಸಭೆಯ ವಾತಾವರಣ ಬಹಳ ಮನೋರಂಜಕವಾಗಿತ್ತು. ಹಲವು ವಿಷಯಗಳನ್ನು ಪ್ರಸ್ತಾಪಮಾಡಿದಮೇಲೆ ಮಧ್ಯಾಹ್ನ ಮೂರು ಗಂಟೆಯಾಯಿತೆಂದೂ, ಮುಂದೆ ಅರ್ಧ ಗಂಟೆ ವಿರಾಮವಿರುವುದೆಂದೂ, ಆ ವಿರಾಮಕಾಲದಲ್ಲಿ ಉಪಾಧ್ಯಾಯರು ಪ್ರದರ್ಶನವನ್ನು ನೋಡಿಕೊಂಡು ಉಪಾಹಾರ ಸ್ವೀಕಾರಕ್ಕೆ ಸಿದ್ಧರಾಗಬೇಕೆಂದೂ, ಅನಂತರ ನಾಲ್ಕು ಗಂಟೆಗೆ ಮತ್ತೆ ಸಭೆ ಸೇರುವುದೆಂದೂ ರಂಗಣ್ಣನು ಹೇಳಿದನು. ಅದರಂತೆ ಆಗ ಸಭೆ ಮುಗಿಯಿತು. ಪಾಠಶಾಲೆಯ ಕೊಟಡಿಯೊಂದರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪ್ರದರ್ಶನವೊಂದು ಏರ್ಪಾಟಾಗಿತ್ತು. ರಂಗಣ್ಣನು ಸಾಹೇಬರನ್ನು ಅಲ್ಲಿಗೆ ಕರೆದುಕೊಂಡು ಹೋದನು. ರಂಗನಾಧಪುರದ ಪ್ರೈಮರಿ ಸ್ಕೂಲಿನ ಉಪಾಧ್ಯಾಯರು ಶ್ರೀರಂಗಪಟ್ಟಣದ ಕೋಟೆ, ನಾಲ್ಕನೆಯ ಮೈಸೂರು ಯುದ್ಧ, ಟಿಪುವಿನ ಮರಣ ಮೊದಲಾದುವನ್ನು ತೋರಿಸುವ ರಟ್ಟಿನ ಮಾದರಿಯೊಂದನ್ನು ತಯಾರುಮಾಡಿ ಇಟ್ಟಿದ್ದರು, ಅದು ಬಹಳ ಚೆನ್ನಾಗಿತ್ತು. ಬೆಂಡಿನಲ್ಲಿ ಸಿಪಾಯಿಗಳನ್ನೂ ಫಿರಂಗಿಗಳನ್ನೂ ರಚಿಸಿದ್ದರು. ಕಾವೇರಿ ನದಿಯನ್ನೂ ಅದನ್ನು ದಾಟುತ್ತಿದ್ದ ಸೈನ್ಯವನ್ನೂ ತೋರಿಸಿದ್ದರು. ಸಾಹೇಬರು ಅದನ್ನು ನೋಡಿ ಬಹಳ ಮೆಚ್ಚಿದರು. ಹಲವು ಪಾಠಗಳಿಗೆ ಬಣ್ಣದ ಚಿತ್ರಗಳನ್ನು ಉಪಾಧ್ಯಾಯ ಯರು ಬರೆದು ಪ್ರದರ್ಶನದಲ್ಲಿಟ್ಟಿದ್ದರು ; ಪ್ರಕೃತಿ ಸಾರಕ್ಕೆ ಸಂಬಂಧ ಪಟ್ಟ ಚಿತ್ರಗಳೂ ಇದ್ದು ವು. ತಂ ತಮ್ಮ ಪ್ರಾಂತಗಳಲ್ಲಿ ದೊರೆಯುವ ಶಿಲೆಗಳನ್ನೂ , ಕಾಗೆ ಬಂಗಾರ ಮೊದಲಾದುವನ್ನೂ ಉಪಾಧ್ಯಾಯರು ಅಲ್ಲಿ ಇಟ್ಟಿದ್ದರು ಕೆಲವು ಹಳೆಯ ನಾಣ್ಯಗಳು, ಕೈಕೆಲಸದ ಮಾದರಿಗಳು, ಪಾರಗಳ ಟಿಪ್ಪಣಿಗಳು ಸಹ ಅಲ್ಲಿದ್ದುವು. ಅವುಗಳನ್ನೆಲ್ಲ ಸಾಹೇಬರು ನೋಡಿ, ' ರಂಗಣ್ಣನವರೇ ! ನಿಮ್ಮ ಉಪಾಧ್ಯಾಯರ ಸಂಘದ ಸಭೆ ಸಂಸ್ಥಾನಕ್ಕೆ ಮಾದರಿಯಾಗಿದೆ. ನನ್ನ ಸರ್ವಿಸ್ಸಿನಲ್ಲಿ ಇಂತಹ ಸಭೆಯನ್ನು ನಾನು ನೋಡಿಯೇ ಇಲ್ಲ ' - ಎಂದು ಪ್ರಶಂಸೆ ಮಾಡಿದರು. ಅದಕ್ಕೆ ರಂಗಣ್ಣ, ' ಸಾರ್ ! ಇದರ ಕೀರ್ತಿಯೆಲ್ಲ ಉಪಾಧ್ಯಾಯರದು. ನನ್ನದೇನಿದೆ ? ನಾನೇ ಉಪಾಧ್ಯಾಯರಿಂದ ಹಲವು ವಿಷಯಗಳನ್ನು ಗ್ರಹಿಸಿದ್ದೇನೆ. ಉತ್ಸಾಹದಿಂದ ಅವರು ಕೆಲಸ ಮಾಡಿ ಕೊಂಡು ಹೋಗುತ್ತಿದಾರೆ, ಇವುಗಳೆಲ್ಲ ಅವರ ಶ್ರಮದ ಫಲ ! ಇಲಾಖೆಯವರು ದಯಾ ಕಟಾಕ್ಷದಿಂದ ನೋಡಿ ಉಪಾಧ್ಯಾಯರ ಸ್ಥಿತಿಗತಿಗಳನ್ನು ಉತ್ತಮ ಪಡಿಸಬೇಕು' ಎಂದು ಹೇಳಿದನು, ಬಳಿಕ ತನ್ನ ಗಡಿಯಾರ ವನ್ನು ನೋಡಿಕೊಂಡನು. ಗಂಟೆ ಮೂರೂವರೆ ಆಗುತ್ತ ಬಂದಿದ್ದರೂ ಉಪಾಹಾರದ ಸುಳಿವು ಕಾಣಿಸಲಿಲ್ಲ, ಏರ್ಪಾಟು ಏನು ನಡೆದಿದೆಯೋ ನೋಡೋಣವೆಂದು ತಿಮ್ಮಣ್ಣ ಭಟ್ಟನನ್ನು ಕರೆದು, ಸಾಹೇಬರಿಗೆ ಪ್ರದರ್ಶನದ ವಿಷಯಗಳನ್ನೆಲ್ಲ ವಿವರಿಸುವಂತೆ ಹೇಳಿ ತಾನು ಮುಸಾಫರ ಖಾನೆಯ ಕಡೆಗೆ ಹೊರಟನು.

ಮುಸಾಫರಖಾನೆಯ ಅಡಿಗೆಯ ಮನೆಯಲ್ಲಿಯೂ, ಪಕ್ಕದ ಊಟದ ಕೋಣೆಯಲ್ಲಿಯೂ ಉಪಾಧ್ಯಾಯರು ತುಂಬಿ ಹೋಗಿದ್ದರು. ಹೊಗೆ ಬಾಗಿಲುಗಳಲ್ಲಿಯೂ ಕಿಟಕಿಗಳಲ್ಲಿಯೂ ತೂರಿಬರುತ್ತಿತ್ತು. ರಂಗಣ್ಣ ಒಳಗೆ ಕಾಲಿಡುತ್ತಲೂ ಉಪಾಧ್ಯಾಯರುಗಳು ಗಲಾಟೆ ನಿಲ್ಲಿಸಿ, ದಾರಿಬಿಟ್ಟು ಕೊಟ್ಟರು. ಅಡಿಗೆಯ ಮನೆಯಲ್ಲಿ ನಾಲ್ಕಾರು ಮೇಷ್ಟ್ರುಗಳು ಸೇರಿಬಿಟ್ಟಿದ್ದಾರೆ ! ತಂತಮ್ಮ ಷರ್ಟುಗಳನ್ನೆಲ್ಲ ಬಿಚ್ಚಿ ಬಿಟ್ಟು, ಪಂಚೆಗಳನ್ನು ಮೊಣಕಾಲ ಮೇಲಕ್ಕೆ ಸೆಳೆದು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ ! ಕೂದಲ ಗಂಟುಗಳು ಬಿಚ್ಚಿ ಹೋಗಿವೆ ! ಒಲೆಯಲ್ಲಿ ಕಟ್ಟಿಗೆಗಳನ್ನು ಹೇರಿ ಧಗಧಗ ಎಂದು ಉರಿಯುವಂತೆ ಮಾಡಿದ್ದಾರೆ, ಉರಿ ರಭಸವಾಗಿ ಎರಡಡಿಮೇಲಕ್ಕೆ ಹಾರುತ್ತಿದೆ ! ಹತ್ತಿರ ನಿಲ್ಲಲಾಗದು. ಒಲೆಯ ಮೇಲೆ ದೊಡ್ಡ ದೊಂದು ಕೊಳಗದಪ್ಪಲೆ ! ಇಬ್ಬರು ಮೇಷ್ಟ್ರುಗಳು ಗೋಣಿ ಚೀಲಗಳನ್ನು ಒದ್ದೆ ಮಾಡಿಕೊಂಡು ಕೊಳಗ ಪಾತ್ರೆಯನ್ನು ಅದುಮಿ ಹಿಡಿದುಕೊಂಡಿದ್ದಾರೆ. ಇನ್ನಿಬ್ಬರು ಮೇಷ್ಟ್ರುಗಳು ಉದ್ದ ನಾದ ಸರ್ವೆ ಕಟ್ಟಿಗೆಗಳಿಂದ ಪಾತ್ರೆಯೋಳಗಿರುವ ಪದಾರ್ಥವನ್ನು ಕಲಿಸಲು ಪ್ರಯತ್ನಿಸುತ್ತಿದ್ದಾರೆ ! ಮೇ ಷ್ಟುಗಳ ಮೈಯಿಂದ ಬೆವರು ಸುರಿದು ಹೋಗುತ್ತಿದೆ ! ಇನ್ನಿಬ್ಬರು ಮೇಷ್ಟು ಗಳು ಬೀಸಣಿಗೆಗಳಿಂದ ಅವರಿಗೆಲ್ಲ ಗಾಳಿ ಬೀಸುತ್ತಿದಾರೆ ! ಹೊರಗಿದ್ದ ಈ ಉಪಾಧ್ಯಾಯರು, " ಹೊತ್ತಾಗಿ ಹೋಯಿತು ! ಮೂರುವರೆ ಗಂಟೆ ! ಇನ್ ಸ್ಪೆಕ್ಟರು ಬಂದರು. ಎಂದು ಕೂಗಿ ಹೇಳುತ್ತಿದಾರೆ. ಒಳಗಿ೦ದ, “ ಆಯಿತು ತಾಳಿರಯ್ಯ ! ಇನ್ನೆನು ಹದಕ್ಕೆ ಬರುತ್ತಿದೆ ! ತೆಂಗಿನಕಾಯಿ ತುರಿ ತನ್ನಿ ! ಯಾರಾದರೂ ಆ ಗೋಣೀ ತಟ್ಟು ಹಿಡಿದು ಕಾಫಿ ಶೋಧಿಸಿ ! ಎಂದು ಉತ್ತರ ಕೊಡುತ್ತಿದಾರೆ. ರಂಗಣ್ಣ ಎಲ್ಲವನ್ನೂ ನೋಡಿ, ' ಇದೇನು ದೊಡ್ಡ ಅವಾಂತರ! ಒಂದು ಉಪ್ಪಿಟ್ಟು ಮಾಡುವುದಕ್ಕೆ ಇಷ್ಟು ಜನವೇ ? ಸರ್ವೆ ಕಟ್ಟಿಗೆಯಿಂದ ತಿರುವೋದು ಏತಕ್ಕೆ ? ಅಷ್ಟೊಂದು ಉರಿ ಏತಕ್ಕೆ ? ಚೆನ್ನಾಯಿತು ! ತೆಗೆಯಿರಿ ಉರಿಯನ್ನೆಲ್ಲ ! ಎಲ್ಲವೂ ಸೀದಿ ಇದ್ದ ಲಾಯಿತೋ ಏನೋ !' ಎಂದು ಛೀಮಾರಿ ಮಾಡುತ್ತ ಒಳಹೊಕ್ಕು ನೋಡಿದನು. ಉಪ್ಪಿಟ್ಟಿಲ್ಲ ಒಂದು ದೊಡ್ಡ ಅಂಟು ಮುದ್ದೆ ಯಾಗಿ ಕುಳಿತುಬಿಟ್ಟಿದೆ ! ಬಂಕಬಂಕೆಯಾಗಿ ಕಟ್ಟಿಗೆಗಳಿಗೂ ಬದಿಗಳಿಗೂ ಮೆತ್ತಿಕೊಂಡಿದೆ! ರಂಗಣ್ಣನಿಗೆ ನಗು ಒಂದು ಕಡೆ ; ಹೀಗೆ ಏರ್ಪಾ ಡೆಲ್ಲ ಭಂಗವಾಯಿತಲ್ಲ ಎಂದು ವ್ಯಸನವೊಂದು ಕಡೆ, 'ಗೋಪಾಲ ! ಏನು ಮುಟ್ಟಾಳ ಕೆಲಸ ಇದು ? ನಿನಗೆ ಉಪ್ಪಿಟ್ಟು ಮಾಡುವುದು ಗೊತ್ತಿಲ್ಲವೆ? ಎಷ್ಟು ಸಲ ನೀನು ಮಾಡಿಲ್ಲ ? ಸಾಹೇಬರು ಬಂದ ಹೊತ್ತಿನಲ್ಲಿ ಹಿಗೆ ಆ ಭಾಸ ಮಾಡಬಹುದೇ ?' ಎಂದು ಗದರಿಸಿದನು.

'ನನ್ನದು ತಪ್ಪಿಲ್ಲ ಸ್ವಾಮಿ ! ನಾನು ಹೇಳಿದರೆ ಮೇಷ್ಟುಗಳು ಕೇಳಲಿಲ್ಲ. ನೀನೆಲ್ಲೋ ಒಂದು ಪಾವು ರವೆ ಹಾಕಿ ಇನ್ ಸ್ಪೆಕ್ಟರಿಗೆ ಉಪ್ಪಿಟ್ಟು ಮಾಡೊವನು ! ಹತ್ತು ಹನ್ನೆರಡು ಸೇರು ರವೆ ಹಾಕಿ ಮಾಡೋದು ನಿನಗೇನು ಗೊತ್ತು ? ಎಂದು ನನ್ನನ್ನು ದಬಾಯಿಸಿಬಿಟ್ಟು ಅವರವರೇ ಪಾರುಪತ್ಯ ವಹಿಸಿಕೊಂಡರು. ರವೆಯನ್ನು ಹುರಿದಿಟ್ಟುಕೊಳ್ಳಿ ; ನೀರು ಚೆನ್ನಾಗಿ ಮರಳಲಿ ಎಂದು ನಾನು ಹೇಳಿದರೆ ಕೇಳಲಿಲ್ಲ.'

'ಮೇಷ್ಟೇ ! ಇದೇನು, ಎಲ್ಲವನ್ನೂ ಹಾಳುಮಾಡಿದಿರಲ್ಲ? ಏನನ್ನು ಮಾಡಿಟ್ಟಿರಿ ?' ಎಂದು ರಂಗಣ್ಣ ಉಪ್ಪಿಟ್ಟು ಮಾಡುತ್ತಿದ್ದವರನ್ನು ಕೇಳಿದನು. ಆವರು, “ಸಾರ್ ! ಕೊಳಗದಪ್ಪಲೆಯಲ್ಲಿ ಒಗ್ಗರಣೆ ಹಾಕಿದೆವು. ಅದು ಚಟಪಟಗುಟ್ಟ ಘಮ ಘಮಾಯಿ ಸುತ್ತಿರುವಾಗ ರವೆ ಯನ್ನು ಸುರಿದೆವು. ಸೌಟಿನಿಂದ ಎರಡು ಬಾರಿ ತಿರುವಿ ಎರಡು ಕೊಡ ನೀರನ್ನು ಹೋಯ್ತು, ಕೆಳಗೆ ಉರಿ ಏರಿಸಿದೆವು ! ರವೆಯೇಕೆ ನೀರನ್ನು ಹೀರಿಕೊಂಡು ಅ೦ಟುಮುದ್ದೆ ಯಾಗಿ ಹೋಯಿತು ! ಈಗೆಲ್ಲ ಸರಿ ಮಾಡುತ್ತಿದ್ದೇವೆ. ಇನ್ನೆಲ್ಲ ಐದು ನಿಮಿಷ ! ಐದೇ ನಿಮಿಷ ಸಾ !” ಅ೦ಟುಮುದ್ದೆ ಯಾದರೂ ರುಚಿಯಾಗಿದೆ ನೋಡಿ ಸಾರ್ !' ಎಂದು ಹೇಳುತ್ತ ಸರ್ವೆಕಟ್ಟಿಗೆಗೆ ಮೆತ್ತಿ ಕೊಂಡಿದ್ದ ಬಂಕೆಯನ್ನು ನಿಂಬೇ ಹಣ್ಣು ಗಾತ್ರ ಉಂಡೆ ಮಾಡಿ ಕೈಗೆ ಹಾಕಿದರು. ಅದು ಉಪ್ಪು ಪ್ಪಾಗಿ ಕಾರ ಕಾರವಾಗಿ, ಒಂದು ಕಡೆ ಬೆಂದು, ಇನ್ನೊಂದು ಕಡೆ ಬೇಯದೆ ಕೆಟ್ಟು ಹೋಗಿತ್ತು ; ಜತೆಗೆ ಸೀಕಲು ವಾಸನೆ ಇತ್ತು. ರಂಗಣ್ಣನು, 'ಸರಿ ಮೇಷ್ಟೆ ! ಮೊದಲು ತಪ್ಪಲೆ ಕೆಳಗಿಳಿಸಿ ! ಎಲ್ಲ ಬಹಳ ರುಚಿಯಾಗಿದೆ ! ಸಾಹೇಬರಿಗೆ ಈ ತರತೀಪು ಬೇಡ ! ನೀವುಗಳೆಲ್ಲ ಇದನ್ನು ಧ್ವಂಸಮಾಡಿ !' ಎಂದು ಹೇಳಿದನು. ಬಳಿಕ ಕಾಫಿ ಕಷಾಯವನ್ನು ಒಂದು ಲೋಟದಷ್ಟು ಬಗ್ಗಿಸಿಕೊಂಡು, ಹಾಲನ್ನು ಸೇರಿಸಿ, ಸಕ್ಕರೆ ಹಾಕಿ ಕಾಫಿ ಮಾಡಿದನು. ಅಷ್ಟು ಹೊತ್ತಿಗೆ ತಿಮ್ಮಣ್ಣ ಭಟ್ಟ ನು ಸಾಹೇಬರನ್ನು ಕರೆದುಕೊ೦ಡು ಮುಸಾಫರ ಖಾನೆಯ ಬಳಿಗೆ ಬಂದನು , ಗಂಗೇ ಗೌಡರ ಮನೆಯಿಂದ ಬೆಳ್ಳಿಯ ತಟ್ಟೆಗಳನ್ನೂ ಲೋಟಗಳನ್ನೂ ರಂಗಣ್ಣ ತರಿಸಿದನು. ತನ್ನ ತಿಂಡಿ ಯ ಕೈನೆಟ್ಟಗೆಯಿ೦ದ ಮೈಸೂರ ಪಾಕನ್ನೂ ಓಮ ಪುಡಿಯನ್ನೂ ಕೋಡ ಬಳೆಗಳನ್ನೂ ತೆಗೆದು ತಟ್ಟೆಗಳಲ್ಲಿಟ್ಟು, ಬೆಳ್ಳಿಯ ಲೋಟಗಳಲ್ಲಿ ಕಾಫಿಯನ್ನು ಸುರಿದು, ತಿಮ್ಮಣ್ಣ ಭಟ್ಟರ ಕೈಯಲ್ಲಿಯೂ ಗೋಪಾಲನ ಕೈಯಲ್ಲಿ ತೆಗೆಯಿಸಿಕೊಂಡು ಸಾಹೇಬರ ಕೋಣೆಗೆ ಹೋದನು. ಈ ತಿಂಡಿಗಳ ಜೊತೆಗೆ ಬಾಳೆಯಹಣ್ಣು, ಎಳನೀರು ಸಿದ್ಧವಾಗಿದ್ದು ವು.

ಇನ್‌ಸ್ಪೆಕ್ಟರ ಮತ್ತು ಸಾಹೇಬರ ಉಪಾಹಾರ ಮುಗಿಯಿತು. ಅತ್ತ ಮೇಷ್ಟ್ರುಗಳ ಉಪಾಹಾರವೂ ಮುಗಿದು, ಖಾಲಿಯಾಗಿದ್ದ ಕೊಳಗದಪ್ಪಲೆಹೊರಕ್ಕೆ ಬಂದು ಬಿದ್ದಿತ್ತು. ಎಲೆಯಡಕೆಗಳನ್ನು ಹಾಕಿಕೊಂಡು ಎಲ್ಲರೂ ಪಾಠಶಾಲೆಯ ಕಡೆಗೆ ಹೊರಟರು, ಮೇಷ್ಟ್ರರೊಬ್ಬನು ರಂಗಣ್ಣನ ಸಮಾಪಕ್ಕೆ ಬಂದು, ಸಾರ್ !' ಎಂದನು. ರಂಗಣ್ಣನು ಸ್ವಲ್ಪ ಹಿಂದೆ. ಸರಿದು, “ಏನು ಸಮಾಚಾರ ?” ಎಂದು ಕೇಳಿದನು. 'ಕಷ್ಟ ಪಟ್ಟು ಉಪ್ಪಿಟ್ಟು ಮಾಡಿದ್ದೆವು ಸಾರ್ ! ಕೊನೆಕೊನೆಯಲ್ಲಿ ಚೆನ್ನಾಗಿಯೇ ಆಯಿತು ! ಬಹಳ ರುಚಿಯಾಗಿತ್ತು ! ತಾವು ತಿನ್ನಲಿಲ್ಲವಲ್ಲ ಎಂದು ನಮ್ಮಗೆಲ್ಲ ಬಹಳ ವ್ಯಧೆ ! ನಮ್ಮ ಸಂತೋಷದಲ್ಲಿ ಅದೊಂದು ಕೊರತೆಯಾ ಯಿತು. ಸಣ್ಣ ಪಾತ್ರೆಯೊಂದರಲ್ಲಿ ಸ್ವಲ್ಪ ತೆಗೆದಿಟ್ಟು ಗೋಪಾಲನ ಕೈಯಲ್ಲಿ ಕೊಟ್ಟಿದ್ದೇವೆ. ತಾವು ಖಂಡಿತ ರುಚಿ ನೋಡಿ ಸಾರ್ ! ಚೆನ್ನಾಗಿದೆ ! ನೀವೇ ಮೆಚ್ಚಿ ಕೋತೀರಿ' ಎಂದು ಹೇಳಿದನು. ರಂಗಣ್ಣನು ನಗುತ್ತ,ಆಗಲಿ ಮೇಷ್ಟೆ ! ಸಭೆಯಲ್ಲಿ ಮುಗಿದು ಸಾಹೇಬರು ಹೊರಟು ಹೋದೆ ಮೇಲೆ ರುಚಿ ನೋಡುತ್ತೇನೆ' ಎಂದು ಭರವಸೆ ಹೇಳಿದನು. ಪುನಃ ಪಾಠ ಶಾಲೆಯಲ್ಲಿ ಸಂಘದ ಸಭೆ ನಾಲ್ಕು ಗಂಟೆಗೆ ಸೇರಿತು! ಇಪ್ಪತ್ತು ನಿಮಿಷಗಳವರೆಗೆ ಭಾರತ ವಾಚನವಾಯಿತು. ಅನಂತರ ಒಬ್ಬ ಮೇಷ್ಟ್ರು, ಬುಡಬುಡಿಕೆಯವನ ವೇಷ ಹಾಕಿಕೊಂಡು ಬಂದು ಕಣಿ ಹೇಳಿದನು. ತರುವಾಯ ರಂಗಣ್ಣನ ಭಾಷಣವಾಯಿತು. ರಂಗಣ್ಣನು ಸಂಘಗಳ ಉದ್ದೇಶವನ್ನು ವಿವರಿಸುತ್ತಾ ಹೀಗೆ ಹೇಳಿದನು : 'ವಿದ್ಯಾ ಪ್ರಚಾರದಲ್ಲಿ ನಾವುಗಳು ಮೇಲಿನ ಅಧಿಕಾರಿಗಳೊಡನೆಯೂ, ಕೈಕೆಳಗಿನ ಉಪಾಧ್ಯಯರೊಡನೆಯ, ಸುತ್ತಲ ಗ್ರಾಮಸ್ಥರೊಡನೆಯೂ ಏಗುತ್ತ, ಪರಸ್ಪರ ಸಾಮರಸ್ಯವನ್ನು ತರಬೇಕಾಗಿದೆ. ಈ ಮೂವರೊಡನೆ ವ್ಯವಹರಿಸುವುದು ಸುಲಭವಾದ ಕಾರ್ಯವಲ್ಲ. ಸಾಹೇಬರೇ ಈ ದಿನ ಅಧ್ಯಕ್ಷರಾಗಿರುವುದರಿಂದ ಅಧಿಕಾರಿಗಳ ವಿಚಾರವನ್ನು ನಾನು ಹೆಚ್ಚಾಗಿ ಹೇಳುವುದಿಲ್ಲ. ಅವರಿಂದ ನಮಗೆ ಪ್ರೋತ್ಸಾಹವೂ ಸಹಾಯವೂ ದೊರೆಯುತ್ತಿದ್ದರೆ ನಮ್ಮ ಕೆಲಸ ಚೆನ್ನಾಗಿ ನಡೆಯುತ್ತದೆ ; ಅಡಿಗಡಿಗೆ ನಮ್ಮ ಮುಖಭಂಗವಾಗುತಿದ್ದರೆ ನಮಗೆ ಉತ್ಸಾಹಭಂಗವಾಗುತ್ತದೆ. ಇಷ್ಟನ್ನು ಮಾತ್ರ ಹೇಳಿ ಉಪಾಧ್ಯಾಯರ ಮತ್ತು ಗ್ರಾಮಸ್ಥರ ವಿಷಯವನ್ನು ಪ್ರಸ್ತಾಪಮಾಡುತೇನೆ. ಈ ಇಬ್ಬರನ್ನು ತಿದ್ದುವುದು ಮಹಾ ಪ್ರಯಾಸದ ಕೆಲಸ. ಹರಿಹರರಿಗೂ ಅಸಾಧ್ಯವೆಂದು ಹೇಳಿದಮೇಲೆ ಮನುಷ್ಯ ಮಾತ್ರದವನು ಏನನ್ನು ತಾನೆ ಮಾಡ ಬಹುದು ! ನಿನಗೆ ಒಂದು ಪುರಾಣದ ಕಥೆ ಹೇಳುತ್ತೇನೆ, ಕೇಳಿ : ದೇವಲೋಕದಲ್ಲಿ ಒಂದು ದಿನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರಿಗೆ ನಾನು ಲೋಕನಾಯಕ ತಾನು ಲೋಕನಾಯಕ ಎಂದು ದೊಡ್ಡ ಜಗಳ ಹತ್ತಿತಂತೆ ! ಆ ತ್ರಿಮೂರ್ತಿಗಳ ಜಗಳದಿಂದ ಪ್ರಳಯ ವಾತಾವರಣ ಉಂಟಾಯಿತು ಆಗ ದೇವತೆಗಳೆಲ್ಲ ಬಹಳ ವ್ಯಥೆಪಟ್ಟ ರು. ಆ ಸಮಯಕ್ಕೆ ಸರಿಯಾಗಿ ನಾರದ ಮಹರ್ಷಿಗಳು ಆ ಸಭೆಗೆ ಬಂದರು, ತ್ರಿಮೂರ್ತಿಗಳ ವೀರಾವತಾರಗಳನ್ನು ನೋಡಿ ವೀಣಾವಾದನ ಮಾಡುತ್ತ, ನಿಮ್ಮ ನಿಮ್ಮಲ್ಲಿ ಕಲಹವೇಕೆ ? ಲೋಕ ವ್ಯಾಪಾರವನ್ನು ನಡೆಸುವ ತ್ರಿಮೂರ್ತಿಗಳೇ ಜಗಳವಾಡಿದರೆ ಜನ ಬದುಕುವುದು ಹೇಗೆ ? ನಿಮ್ಮ ಜಗಳಕ್ಕೆ ಕಾರಣವೇನು ? ಎಂದು ವಿಚಾರಿಸಿದರು. ಆಗ ಅವರು ನಾನು ಲೋಕನಾಯಕ, ತಾನು ಲೋಕನಾಯಕ, ಉಳಿದವರು ನನ್ನ ಭೃತ್ಯರು ಎಂದು ಹೇಳತೊಡಗಿದರು. ನಾರದರು ನಗುತ್ತಾ, ಒಂದು ಕೆಲಸ ಮಾಡಿ ; ನಿಮ್ಮ ಆಯುಧಗಳನ್ನು ಕೆಳಗಿಡಿ ; ನಾನು ನಿಮ್ಮ ಶಕ್ತಿಯನ್ನು ಪರೀಕ್ಷೆ ಮಾಡುತ್ತೇನೆ ; ತೇರ್ಗಡೆಯಾದವರನ್ನು ಈ ದೇವಸಭೆ ಲೋಕನಾಯಕನೆಂದು ಒಪ್ಪುತ್ತದೆ-ಎಂದು ಹೇಳಿದರು. ಆದರಂತೆ ಅವರೆಲ್ಲ ಆಯುಧಗಳನ್ನು ಕೆಳಗಿಟ್ಟರು. ನಾರದರು, ನೋಡಿ ! ನಾಯಿಯ ಬಾಲದ ಡೊಂಕನ್ನು ಸರಿಪಡಿಸಬೇಕು ! ಇಲ್ಲವಾದರೆ, ಮೇಷ್ಟ್ರ ಬುದ್ಧಿಯ ಡೊಂಕನ್ನು ಸರಿ ಪಡಿಸಬೇಕು ! ಇಲ್ಲವಾದರೆ, ಹಳ್ಳಿಯವರ ಹಟದ ಡೊಂಕನ್ನು ಸರಿಪಡಿಸಬೇಕು ! ಇವುಗಳಲ್ಲಿ ಯಾವುದೊಂದನ್ನು ಮಾಡಿದರೂ ಸರಿಯೇ, ಅವನನ್ನು ನಾವು ದೇವತಾ ಸಾರ್ವಭೌಮನೆಂದು ಒಪ್ಪಿಕೊಳ್ಳುತ್ತೇವೆ ಎಂದರು. ಆಗ ಬ್ರಹ್ಮನು ನಾಯಿಯ ಬಾಲದ ಡೊಂಕನ್ನು ಸರಿಪಡಿಸಲು ಹೊರಟನು ; ವಿಷ್ಣುವು ಮೇಷ್ಟರ ಡೊಂಕನ್ನು ಸರಿಪಡಿಸುತ್ತೇನೆಂದು ಹೊರಟನು ; ಮಹೇಶ್ವರನು ಹಳ್ಳಿಯವರ ಡೊಂಕನ್ನು ತಿದ್ದುತ್ತೇನೆಂದು ಹೊರಟನು. ಬ್ರಹ್ಮನು ದಾರಿಯಲ್ಲಿ ಸಿಕ್ಕನಾಯಿಗಳನ್ನೆಲ್ಲ ಹಿಡಿದು, ಅವುಗಳ ಬಾಲವನ್ನು ನೇವರಿಸಿ, ಬಗ್ಗಿಸಿ, ಡೊಂಕನ್ನು ಸರಿಪಡಿಸಲು ಬಹಳವಾಗಿ ಪ್ರಯತ್ನ ಪಟ್ಟನು. ಅದು ಆಗಲಿಲ್ಲ. ಆಗ ಅವನು ಒಂದು ಕುಯುಕ್ತಿಯನ್ನು ಮಾಡಿದನು. ಒಂದು ನಾಯಿಮರಿಯ ಬಾಲಕ್ಕೆ ಕೆಳಗಡೆ ಒಂದು ಕಂಬಿಯನ್ನು ಕಣ್ಣಿಗೆ ಕಾಣದಂತೆ ಸೇರಿಸಿ ಕಟ್ಟಿದನು. ಆಗ ಬಾಲ ನೆಟ್ಟಗಾಯಿತು ! ತನ್ನಲ್ಲೇ ಸಂತೋಷಪಡುತ್ತ, ನೋವಿನಿಂದ ಕುಂಯಿಗುಟ್ಟುತ್ತಿದ್ದ ನಾಯಿಯನ್ನು ಕಂಕುಳಲ್ಲಿ ಇರುಕಿಕೊಂಡು ಬ್ರಹ್ಮನು ದೇವಸಭೆಗೆ ಬಂದನು.'

'ಅತ್ತ ವಿಷ್ಣುವು ಮೇಷ್ಟರ ಸಹವಾಸಮಾಡಿ ಡೊಂಕನ್ನು ತಿದ್ದಲು ಪ್ರಯತ್ನ ಪಟ್ಟನು. ತಾನು ಎದುರಿಗೆ ಕುಳಿತಿದ್ದು ಒತ್ತಿ ಹಿಡಿದಿರುವ ಪರ್ಯ೦ತರವೂ ಡೊಂಕು ಕಾಣುತ್ತಿರಲಿಲ್ಲ. ಮೇಷ್ಟು ಸರಿಯಾಗಿಯೇ ಇರುತ್ತಿದ್ದನು. ತಾನು ಹಿಡಿತ ಬಿಟ್ಟು ಸ್ವಲ್ಪ ಮರೆಯಾಗುತ್ತಲೂ ಆ ಡೊಂಕು ಪುನಃ ಕಾಣಿಸಿಕೊಳ್ಳುತ್ತಲೇ ಇತ್ತು. ವಿಷ್ಣುವು ಹತಾಶನಾಗಿ ಆ ಕಾರ್ಯ ತನ್ನಿಂದ ಸಾಧ್ಯವಿಲ್ಲವೆಂದು ಖಿನ್ನತೆಯಿಂದ ದೇವಲೋಕಕ್ಕೆ ಹಿಂದಿರುಗಿದನು. ಮಗುದೊಂದು ಕಡೆ ಮಹೇಶ್ವರನು ಹಳ್ಳಿಯವರಲ್ಲಿ ನೆಲಸಿ ಅವರ ಡೊಂಕನ್ನು ಸರಿಪಡಿಸಲು ವಿಶ್ವಪ್ರಯತ್ನ ಪಟ್ಟನು. ಏನು ಪ್ರಯತ್ನ ಪಟ್ಟರೂ ಸಾರ್ಥಕವಾಗಲಿಲ್ಲ ! ಅವನೂ ನಿರಾಶನಾಗಿ ದೇವಲೋಕಕ್ಕೆ ಹಿಂದಿರುಗಿದನು.'

“ದೇವತೆಗಳೆಲ್ಲ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಬ್ರಹ್ಮಾವಿಷ್ಣು ಮಹೇಶ್ವರರು ಸಭೆಗೆ ಬಂದರು, ನಾರದರು ಅವರ ಮುಖಭಾವಗಳನ್ನು ನೋಡಿದರು. ಬ್ರಹ್ಮನ ಮುಖ ಮಾತ್ರ ಗೆಲುವಾಗಿತ್ತು ; ಸ್ವಲ್ಪ ಜಂಬದಿಂದಲೂ ಕೂಡಿತ್ತು. ಉಳಿದಿಬ್ಬರು ಖಿನ್ನರಾಗಿದ್ದರು. ವಿಷ್ಣುವು,-ಮೇಷ್ಟರ ಡೊಂಕನ್ನು ಎದುರಿಗಿದ್ದಷ್ಟು ಕಾಲ ತಿದ್ದಬಹುದು ; ಆಮೇಲೆ ಎಂದಿನಂತೆಯೆ ಡೊ೦ಕು ತಲೆಯೆತ್ತುತ್ತದೆ! ಏನು ಮಾಡಲಿ ? ತಿದ್ದಲು ನನ್ನಿಂದ ಸಾಧ್ಯವಾಗಲಿಲ್ಲ! ಎಂದು ನಿಜವನ್ನು ಹೇಳಿಬಿಟ್ಟನು, ಮಹೇಶ್ವರನು- ಹಳ್ಳಿಯವರದು ಹಲವಾರು ಡೊಂಕುಗಳು ! ಒಂದು ಕಡೆ ಒಂದನ್ನು ಸರಿ ಮಾಡಿದರೆ ಮತ್ತೊಂದು ಕಡೆ ಬೇರೊಂದು ಎದ್ದು ಕೊಳ್ಳುತ್ತದೆ ! ನನ್ನ ಕೈಯಲ್ಲಿ ಸರಿ ಪಡಿಸುವುದಕ್ಕೆ ಆಗಲಿಲ್ಲ !-ಎಂದು ನಿಜಾಂಶವನ್ನು ತಿಳಿಸಿ ದನು. ದೇವತೆಗಳು ಬ್ರಹ್ಮನ ಮುಖವನ್ನು ನೋಡಿದರು. ಅನನು ಜಂಬದಿಂದ ತನ್ನ ಕಂಕುಳಲ್ಲಿದ್ದ ನಾಯಿಯ ಮರಿಯನ್ನು ಅವರ ಮುಂದಿಟ್ಯನು ! ಎಲ್ಲರೂ ನೋಡುತ್ತಾರೆ ! ನಾಯಿಯ ಬಾಲ ನೆಟ್ಟ ಗಿದೆ ! ಪರಮಾಶ್ಚರ್ಯವಾಯಿತು ! ಆಗ ನಾರದರು, ವೀಣೆಯ ಅಪಸ್ವರದಂತೆ ಕು೦ಯ್ ಗುಟ್ಟುತ್ತಿದ್ದ ನಾಯಿಯನ್ನು ನೋಡಿ, ಇದೇಕೆ ಕುಂಯ್‌ಗುಟ್ಟುತ್ತಿದೆ ? ನೋಡೋಣ ಎಂದು ನಾಯಿಯ ಬಾಲವನ್ನು ಮುಟ್ಟಿ ಸವರಲು ಕೆಳಗಡೆ ಇದ್ದ ಕಂಬಿ ಕೈಗೆ ಸಿಕ್ಕಿತು ! ಕಟ್ಟಿದ್ದ ಕಂಬಿಯನ್ನು ನಾರದರು ಮೆಲ್ಲಗೆ ತೆಗೆದುಬಿಟ್ಟರು ನಾಯಿ ಕುಂಯ್‌ಗುಟ್ಟುವುದು ನಿಂತು ಹೋಯಿತು ! ಯಥಾ ಪ್ರಕಾರ ನಾಯಿಯ ಬಾಲ ಡೊಂಕಾಗಿ ನಿಂತಿತು ! ದೇವತೆಗಳೆಲ್ಲ ಬ್ರಹ್ಮನನ್ನು ನೋಡಿ ಛೀಮಾರಿ ಮಾಡಿದರು : ನೀನು ಮೋಸಗಾರ ! ಸುಳ್ಳುಗಾರ. ನಿನಗೆ ಲೋಕದಲ್ಲಿ ಪೂಜೆಯಿಲ್ಲದೆ ಹೋಗಲಿ ! ' ಎಂದು ಶಪಿಸಿಬಿಟ್ಟರು. ವಿಷ್ಣುವನ್ನೂ ಮಹೇಶ್ವರನನ್ನೂ ನೋಡಿ, ' ನೀವು ನಿಜ ಹೇಳಿದವರು ! ಲೋಕದಲ್ಲಿ ನಿಮಗೆ ಪೂಜೆ ಸಲ್ಲಲಿ ! ಆಯಾ ಭಕ್ತರ ಭಾವದಂತೆ ಅವರವರಿಗೆ ನೀವು ಲೋಕನಾಯಕರಾಗಿ, ದೇವತಾಸಾರ್ವ ಭೌಮರಾಗಿ ಕಾಣಿಸಿಕೊಳ್ಳಿರಿ! – ಎಂದು ಹೇಳಿದರು. ಹೀಗೆ ಪುರಾಣದ ಕಥೆ.

ಸಭೆ ನಗುವಿನಲ್ಲಿ ಮುಳುಗಿ ಹೋಯಿತು ಸಾಹೇಬರೂ ನಗುತ್ತಾ, ರಂಗಣ್ಣನವರೇ ! ಇದು ಯಾವ ಪುರಾಣದಲ್ಲಿದೆ ? ಕಥೆ ಚೆನ್ನಾಗಿದೆಯಲ್ಲ !' ಎಂದು ಕೇಳಿದರು, ರಂಗಣ್ಣ, ಇಂಥವೆಲ್ಲ ನಮ್ಮ ಬ್ರಹ್ಮಾಂಡ ಪುರಾಣದಲ್ಲಿ ಬಹಳ ಇವೆ ಸಾರ್ !' ಎಂದು ನಗುತ್ತಾ ಉತ್ತರ ಕೊಟ್ಟನು. ಬಳಿಕ ಭಾಷಣವನ್ನು ಮುಂದುವರಿಸಿ ' ಆದ್ದರಿಂದ ನಮ್ಮದು ಎಷ್ಟು ಪ್ರಯಾಸದ ಕೆಲಸ ನೋಡಿ ! ಒಂದು ಕಡೆ ಮೇಷ್ಟರುಗಳನ್ನು ತಿದ್ದಿಕೊಳ್ಳುವುದಕ್ಕಾಗಿಯೂ ಇನ್ನೊಂದು ಕಡೆ ಹಳ್ಳಿಯವರಿಗೆ ತಿಳಿವಳಿಕೆ ಕೊಟ್ಟು ಅವರನ್ನು ತಿದ್ದಿಕೊಳ್ಳುವುದಕ್ಕಾಗಿಯೂ, ಎಲ್ಲರಲ್ಲಿಯೂ ಪರಸ್ಪರ ಸೌಹಾರ್ದ ಮತ್ತು ಸಾಮರಸ್ಯಗಳನ್ನುಂಟು ಮಾಡುವುದಕ್ಕಾಗಿಯೂ, ಈ ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಾಡು ಮಾಡುತ್ತಿದೇವೆ – ಎಂದು ರಂಗಣ್ಣ ಹೇಳಿ ಗಂಗೇಗೌಡರ ಔದಾರವನ್ನು ಪ್ರಶಂಸೆಮಾಡಿ ತನ್ನ ಭಾಷಣವನ್ನು ಮುಕ್ತಾಯ ಮಾಡಿ ದನು.

ತರುವಾಯ ಗಂಗೇಗೌಡರು ಗ್ರಾಮಸ್ಥರ ಅಹವಾಲನ್ನು ಹೇಳಿಕೊಳ್ಳುವುದಕ್ಕಾಗಿ ಎದ್ದು ನಿಂತರು. ' ಸ್ವಾಮಿ ! ನನಗೆ ಈ ಸಭೆಯಲ್ಲಿ ಎದ್ದು ಮಾತನಾಡುವುದಕ್ಕೆ ಹೆದರಿಕೆಯಾಗುತ್ತದೆ. ನಮ್ಮ ಇನ್ ಸ್ಪೆಕ್ಟರ್‌ ಸಾಹೇಬರು ದೊಡ್ಡ ವಿದ್ವಾಂಸರು ! ಈಗ ತಾನೆ ಪುರಾಣದ ಕಥೆ ಹೇಳಿ ಹಳ್ಳಿಯವರಲ್ಲಿ ಹಲವು ಡೊಂಕುಗಳಿವೆ ! ಒಂದನ್ನು ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಬೇರೊಂದು ಕಡೆ ಎದ್ದು ಕೊಳ್ಳುತ್ತದೆ ! ಎಂದು ತಿಳಿಸಿದರು ' ಎಂದು ನಗುತ್ತ ಹೇಳಿದರು. ಸಭೆಯಲ್ಲಿ ಚಪ್ಪಾಳೆ ಧ್ವನಿ ತುಂಬಿ ಹೋಯಿತು. ' ನಾನೊಬ್ಬ ಹಳ್ಳಿಗ ! ನಮ್ಮ ಡೊಂಕುಗಳಿಗೆಲ್ಲ ಮದ್ದು ವಿದ್ಯೆ ! ವಿದ್ಯೆ ನಮ್ಮಲ್ಲಿ ಚೆನ್ನಾಗಿ ಹರಡುತ್ತ ಬಂದು, ಜನರಲ್ಲಿ ಉತ್ಪಾದನ ಶಕ್ತಿ ಬೆಳೆದು, ಹೊಟ್ಟೆ ತುಂಬ ಹಿಟ್ಟು ದೊರೆತರೆ ಡೊಂಕುಗಳು ಮಾಯ ವಾಗುತ್ತವೆ ಸ್ವಾಮಿ ! ಒಳ್ಳೆಯ ವಿದ್ಯೆ, ಒಳ್ಳೆಯ ಊಟ, ಒಳ್ಳೆಯ ನಡತೆ- ಇವುಗಳಿಂದ ನಾವು ಮಾದರಿ ಪ್ರಜೆಗಳಾಗಬಹುದು ; ನಮ್ಮ ದೇಶ ಮಾದರಿ ದೇಶವಾಗಬಹುದು. ಈ ಗ್ರಾಮ ಬಹಳ ದೊಡ್ಡದು. ಪ್ರೈಮರಿ ಪಾಠ ಶಾಲೆಯಲ್ಲಿ ನೂರೈವತ್ತು ಮಂದಿ ಮಕ್ಕಳಿದ್ದಾರೆ. ಸುತ್ತಲೂ ಹತ್ತಾರು ಪಾಠಶಾಲೆಗಳಿವೆ. ಈ ಊರಿಗೊಂದು ಮಿಡಲ್ ಸ್ಕೂಲನ್ನು ಕೊಟ್ಟರೆ ಬಹಳ ಚೆನ್ನಾಗಿರುತ್ತದೆ. ಗ್ರಾಮಸ್ಥರು ಉದಾರವಾಗಿ ಸಹಾಯಮಾಡಲು ಸಿದ್ಧನಾಗಿದ್ದಾರೆ. ಮಿಡಲ್ ಸ್ಕೂಲಿಗೆ ಕಟ್ಟಡವನ್ನು ಮುಫ್ತಾಗಿ ಕಟ್ಟಿಕೊಡುತ್ತಾರೆ ! ಆದ್ದರಿಂದ ದಯವಿಟ್ಟು ಒಂದು ಮಿಡಲ್ ಸ್ಕೂಲ್ ಅಪ್ಪಣೆಯಾಗಬೇಕು !ಎಂದು ಬೇಡಿಕೆಯನ್ನು ಸಲ್ಲಿಸಿದರು. ಬಳಿಕ ಇನ್ ಸ್ಪೆಕ್ಟರು ಮಾಡುತ್ತಿರುವ ಕೆಲಸವನ್ನು ಪ್ರಶಂಸೆಮಾಡಿ, ಡಿ, ಇ, ಓ, ಸಾಹೇಬರಿಗೆ ವಂದನೆಗಳನ್ನು ಅರ್ಪಿಸಿದರು.

ಸಾಹೇಬರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಉಪಾಧ್ಯಾಯರ ಸಂಘಗಳ ಪ್ರಯೋಜನವನ್ನು ತಿಳಿಸಿ, ರ೦ಗಣ್ಣನ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗಳು ಬಹಳ ಉಪಕಾರಕವಾಗಿರುವುವೆಂದೂ, ಸಂಸ್ಥಾನಕ್ಕೆ ಮಾದರಿಯಾಗಿದೆಯೆಂದೂ ಹೇಳಿದರು. ಗಂಗೇಗೌಡರಂಥ ಮುಂದಾಳುಗಳು ದೇಶದಲ್ಲಿರುವುದು ದೇಶದ ಸೌಭಾಗ್ಯವೆಂದು ಹೊಗಳಿದರು. ಬಳಿಕ ಮಿಡಲ್ ಸ್ಕೂಲಿನ ವಿಚಾರ ಎತ್ತಿ, ಈ ಊರು ಬಹಳ ಮುಂದುವರಿದಿದೆ ಎನ್ನುವುದು ನನಗೆ ಈ ಸಾಯಂಕಾಲ ಮನದಟ್ಟಾಯಿತು. ಊರು ನಿಜವಾಗಿಯೂ ಮಿಡಲ್ ಸ್ಕೂಲನ್ನು ಪಡೆಯಲು ಅರ್ಹವಾಗಿದೆ ! ಆದಷ್ಟು ಬೇಗ ಕೊಡಲು ತೀರ್ಮಾನಿಸಿದ್ದೇನೆ - ಎಂದು ಹೇಳಿದರು. ಎಲ್ಲರೂ ಚಪ್ಪಾಳೆ ತಟ್ಟಿದರು. 'ಕಾಯೌ ಶ್ರೀ ಗೌರಿ' ಯನ್ನು ಹಾಡಿದ ನಂತರ ಸಭೆ ಮುಕ್ತಾಯವಾಯಿತು.

ಸಾಯಂಕಾಲ ಐದೂವರೆ ಗಂಟೆಯಾಯಿತು. ಬಸ್ಸು ಸ್ಕೂಲ ಬಳಿಗೆ ಬಂತು, ಸಾಹೇಬರನ್ನು ಬಹಳ ವೈಭವದಿಂದ ಬಸ್ಸಿನ ಬಳಿಗೆ ಊರಿನ ಜನ ಕರೆದು ಕೊಂಡುಹೋದರು, ಸಾಹೇಬರು, ರಂಗಣ್ಣನ ಕೈ ಕುಲುಕಿ, ರಂಗಣ್ಣನವರೇ ! ನನಗೆ ಬಹಳ ಸಂತೋಷವಾಗಿದೆ. ನೀವು ಮಾಡುತ್ತಿರುವ ಕೆಲಸವನ್ನು ದೊಡ್ಡ ಸಾಹೇಬರುಗಳಿಗೆ ತಿಳಿಸುತ್ತೇನೆ. ಈಗ ನಿಮ್ಮಿಂದ ಎರಡು ಕಾರ್ಯಗಳು ನಡೆಯಬೇಕು. ಮೊದಲನೆಯದು, ಗರುಡನಹಳ್ಳಿ ಹನುಮನಹಳ್ಳಿ ವ್ಯಾಜ್ಯ ವನ್ನು ಪಂಚಾಯತಿ ಮಾಡಿ ನೀವು ಪರಿಹರಿಸಬೇಕು. ಎರಡನೆಯದು, ಈಚೆಗೆ ಮುಂಜೂರಾಗಿರುವ ಕೆಲವು ಸರಕಾರಿ ಪ್ರೈಮರಿ ಪಾಠಶಾಲೆಗಳನ್ನು 'ಬೇಗ ಸರಿಯಾದ ಕಡೆಗಳಿಗೆ ಹಂಚಿ, ವರದಿಯನ್ನು ಕಳಿಸಿಕೊಡಬೇಕು' ಎಂದು ಹೇಳಿದರು. ರಂಗಣ್ಣನು, “ಆಗಲಿ ಸಾರ್ !' ಎಂದು ಹೇಳಿದನು. ಸಾಹೇಬರು ಗಂಗೇ ಗೌಡರ ಕೈ ಕುಲುಕಿ, ಎಲ್ಲರಿಗೂ ವಂದನೆಮಾಡಿ ಬಸ್ ಹತ್ತಿದರು. ಬಸ್

ಹೊರಟಿತು. ಜಯಕಾರಗಳು ನಭೋಮಂಡಲವನ್ನು ಭೇದಿಸಿದುವು !

ಪ್ರಕರಣ ೨೨

ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿ

ಮಾರನೆಯ ದಿನ ಜನಾರ್ದನ ಪುರಕ್ಕೆ ಹಿಂದಿರುಗುವ ಮೊದಲು ಗರುಡನ ಹಳ್ಳಿ ಮತ್ತು ಹನುಮನ ಹಳ್ಳಿಗಳನ್ನು ಹೊಕ್ಕು ಹೊಗೋಣವೆಂದು ರಂಗಣ್ಣನಿಗೆ ಅನ್ನಿಸಿತು. ಅದನ್ನು ಶಂಕರಪ್ಪನಿಗೆ ತಿಳಿಸಿ, ಜನಾರ್ದನಪುರಕ್ಕೆ ಗೋಪಾಲ ಹಿಂದಿರುಗಲಿ ನಾವು ಆ ಹಳ್ಳಿಗಳ ವ್ಯಾಜ್ಯಗಳನ್ನು ಪರಿಹರಿಸಿ ಅನಂತರ ಊರು ಸೇರೋಣ' ಎಂದು ಹೇಳಿದನು,

'ಸ್ವಾಮಿ ! ಆ ಹಳ್ಳಿಗಳ ವ್ಯಾಜ್ಯ ಬಹಳ ತೊಡಕು. ಬಹಳ ಒರಟು. ಹಿಂದಿನ ಇನ್ ಸ್ಪೆಕ್ಟರು ಬಹಳ ಭಂಗಪಟ್ಟು ಹೋದರು ! ಎಂದು ಶಂಕರಪ್ಪ ಹೇಳಿದನು.

'ಎಲ್ಲವೂ ಸರಿಯೆ. ಆದರೆ ಸಾಹೇಬರು ಹೇಳಿದ್ದಾರಲ್ಲ ! ನಾವು ಸಹ ಆ ವ್ಯಾಜ್ಯಕ್ಕೆ ಏನಾದರೊಂದು ಪರಿಹಾರವನ್ನು ಹುಡುಕಬೇಕಾಗಿದೆಯಲ್ಲ. ಹಾಗೆಯೇ ಬೆಳಸು ವುದು ಚೆನ್ನಾಗಿಲ್ಲ,'

'ತಮ್ಮ ಚಿತ್ತ ಸ್ವಾಮಿ! ಹೋಗೋಣ '

ಹಳ್ಳಿಗಳ ಜಗಳ ಹನುಮಂತನಿಗೂ ಗರುಡನಿಗೂ ಆದ ಯುದ್ಧದ ಮತ್ತು ಗರುಡಗರ್ವಭಂಗದ ಪೌರಾಣಿಕ ಕಥೆಯನ್ನು ನಮ್ಮ ಸ್ಮರಣೆಗೆ ತರಬಹುದು. ಯಾವ ಮಹಾರಾಯರು ಆ ಹಳ್ಳಿಗಳಿಗೆ ಆ ಹೆಸರುಗಳನ್ನು ಇಟ್ಟರೋ ! ಒಂದು ಗ್ರಾಂಟು ಸ್ಕೂಲಿನ ವಿಚಾರದಲ್ಲಿ ಆ ಹಳ್ಳಿಗಳಿಗೆ ಪ್ರಬಲವಾದ ಜಗಳಗಳು ನಡೆಯುತ್ತಿದ್ದುವು. ಗರುಡನ ಹಳ್ಳಿಗೂ ಹನುಮನ ಹಳ್ಳಿಗೂ ಮೂರೇ ಮೂರು ಫರ್ಲಾಂಗು ಅಂತರ. ಒಂದೊಂದರಲ್ಲಿ ಸುಮಾರು ಇನ್ನೂರೈವತ್ತು ಪ್ರಜಾಸ೦ಖ್ಯೆಯಿದ್ದು ಒಟ್ಟಿನಲ್ಲಿ ಐನೂರು ಜನಸಂಖ್ಯೆ ಆ ಪಂಚಾಯತಿಗೆ ದಾಖಲಾಗಿತ್ತು, ಆ ಎರಡು ಹಳ್ಳಿಗಳಿಂದಲೂ ಒಂದೇ ಗ್ರಾಮಪಂಚಾಯತಿ ; ಅರ್ಧ ಸದಸ್ಯರು ಗರುಡನಹಳ್ಳಿಯವರು, ಉಳಿದರ್ಧ ಹನುಮನ ಹಳ್ಳಿಯವರು. ಚೇರಮನ್ನು ಗರುಡನ ಹಳ್ಳಿಯ ಪಟೇಲ್, ಕಾರ್ಯದರ್ಶಿ ಹನುಮನ ಹಳ್ಳಿಯ ಶ್ಯಾನುಭೋಗ್, ಒಂದೇ ಪಂಚಾಯತಿ ಆದರೂ, ಗರುಡನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಹನುಮನ ಹಳ್ಳಿಯಲ್ಲೊಂದು ಪಂಚಾಯತಿ ಹಾಲ್ ! ಒಂದು ತಿಂಗಳು ಪಂಚಾಯತಿಯ ಮೀಟಿಂಗು ಗರುಡನ ಹಳ್ಳಿಯಲ್ಲಿ ಸೇರಿದರೆ, ಮುಂದಿನ ತಿಂಗಳು ಹನುಮನ ಹಳ್ಳಿಯಲ್ಲಿ ಸೇರುತ್ತಿತ್ತು. ಹೀಗೆ ಪರ್ಯಾಯ ಕ್ರಮದಲ್ಲಿ ಪಂಚಾಯತಿ ಸಭೆ ಎರಡು ಹಳ್ಳಿಗಳಲ್ಲಿಯೂ ನಡೆಯುವಂತೆ ಏರ್ಪಾಡಾಗಿತ್ತು.

ಪಂಚಾಯತಿಯವರು ಗರುಡನ ಹಳ್ಳಿಯಲ್ಲಿ ಸಭೆ ಸೇರಿದ ಒಂದು ತಿಂಗಳಲ್ಲಿ ಒಂದು ಪಾಠಶಾಲೆಯನ್ನು ಸರಕಾರದವರು ಕೊಡಬೇಕೆಂದೂ ಸಾಮಾನು ಗಳಿಗಾಗಿ ಒಂದು ನೂರು ರುಪಾಯಿಗಳನ್ನು ಖಜಾನೆಗೆ ಕಟ್ಟಿರುವುದಾಗಿಯೂ ತಿಳಿಸಿ ನಿರ್ಣಯಮಾಡಿ ಇಲಾಖೆಗೆ ಕಳಿಸಿಕೊಟ್ಟರು. ಇಲಾಖೆಯವರು ಅಲ್ಲಿಗೆ ಒಂದು ಗ್ರಾಂಟ್ ಸ್ಕೂಲನ್ನು ಮಂಜೂರಿ ಮಾಡಿದರು, ಹಿಂದಿನ ಇನ್ ಸ್ಪೆಕ್ಟರು ಒಬ್ಬ ಮೇಷ್ಟ್ರನ್ನು ಗೊತ್ತು ಮಾಡಿ ಪಾಠಶಾಲೆಯನ್ನು ತೆರೆಯುವಂತೆಯೂ ಗ್ರಾಮಸ್ಥರಿಗೆ ಹೇಳಿ ಬೆಂಚು, ಬೋರ್ಡು ಮೊದಲಾದುವನ್ನು ಕಚೇರಿಯಿಂದ ತೆಗೆಸಿಕೊಂಡು ಹೋಗ ಬೇಕೆಂದೂ ಅಪ್ಪಣೆ ಮಾಡಿದರು. ಅವರು ಕೊಟ್ಟ ಅಪ್ಪಣೆಯಲ್ಲಿ ಹನುಮನಹಳ್ಳಿಯ ಪಂಚಾಯತಿ ಹಾಲಿನಲ್ಲಿ ವಾಠಶಾಲೆಯನ್ನು ತೆರೆಯಬೇಕೆಂದು ಹೇಳಿತ್ತು. ಆ ಮೇಷ್ಟು ಗರುಡನ ಹಳ್ಳಿ ಯಾವುದು ? ಹನುಮನ ಹಳ್ಳಿ ಯಾವುದು ? ಎಂಬುದು ತಿಳಿಯದೆ ಆರ್ಡರ್ ತೆಗೆದು ಕೊಂಡು ಬರುತ್ತ ದಾರಿಯಲ್ಲಿ ಮೊದಲು ಸಿಕ್ಕ ಗರುಡನ ಹಳ್ಳಿಯಲ್ಲಿ ಅದನ್ನು ತೋರಿಸಿದನು. ಚೇರ್ಮನ್ ಆಗಿದ್ದ ಪಟೇಲನು ಮೇಷ್ಟನ್ನು ಅಲ್ಲಿಯೇ ನಿಲ್ಲಿಸಿಕೊಂಡು ಹುಡುಗರನ್ನು ಜಮಾಯಿಸಿ ಕೊಟ್ಟು ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರವೇರಿಸಿದನು ; ಮತ್ತು ಮಾರನೆಯ ದಿನ ಗಾಡಿಯನ್ನು ಜನಾರ್ದನಪುರಕ್ಕೆ ಕಳಿಸಿ ಬೋರ್ಡು ಬೆಂಚು ಮೊದಲಾದುವನ್ನು ತರಿಸಿ ಕೊಂಡನು. ಪಾಠ ಶಾಲೆಯನ್ನು ಪಂಚಾಯತಿಯ ಚೇರ್ಮನ್ ನ ಆಜ್ಞಾನುಸಾರವಾಗಿ ಪ್ರಾರಂಭ ಮಾಡಿರುವುದಾಗಿಯೂ ಸಾಮಾನು ಗಳನ್ನೆಲ್ಲ ದಾಖಲೆಗೆ ತೆಗೆದು ಕೊಂಡಿರುವುದಾಗಿಯೂ ಮೇಷ್ಟು ಇನ್ ಸ್ಪೆಕ್ಟರಿಗೆ ರಿಪೋರ್ಟು ಮಾಡಿದ್ದಾಯಿತು.

ಹೀಗೆ ಗರುಡನ ಹಳ್ಳಿಯಲ್ಲಿ ಸ್ಕೂಲ್ ಸ್ಥಾಪಿತವಾಯಿತೆಂದು ತಿಳಿಯುತ್ತಲೂ ಪಂಚಾಯತಿಯ ಕಾರ್ಯದರ್ಶಿಯಾದ ಶ್ಯಾನುಭೋಗನು ಜನರನ್ನು ಕಟ್ಟಿಕೊಂಡು ಹೋಗಿ ಚೇರ್ಮನ್ನನನ್ನು ಕಂಡು ಪಂಚಾಯತಿಯ ರೆಜಲ್ಯೂಷನ್ನಿನಂತೆ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ಸ್ಥಾಪಿಸಬೇಕಲ್ಲದೆ ಗರುಡನ ಹಳ್ಳಿ ಯಲ್ಲಿ ಸ್ಥಾಪಿಸಕೂಡದೆಂದು ಜಗಳ ತೆಗೆದನು. ಆದರೆ ಗರುಡನ ಹಳ್ಳಿಯಲ್ಲಿ ಜನ ಗುಂಪು ಕಟ್ಟಿ, 'ಸ್ಕೂಲು ನಮ್ಮದು ನಿಮ್ಮ ಹುಡುಗರನ್ನು ಇಲ್ಲಿಗೇನೆ ಕಳಿಸಿಕೊಡಿ. ನಮ್ಮ ಆಕ್ಷೇಪಣೆಯಿಲ್ಲ ? ಎಂದು ಹೇಳಿದರು. ಅದರಮೇಲೆ ಶ್ಯಾನುಭೋಗನು ತನ್ನ ಹಳ್ಳಿಯ ಪಂಚಾಯತಿಯ ಮೆಂಬರುಗಳನ್ನು ಜೊತೆಗೆ ಕಟ್ಟಿ ಕೊಂಡು ಜನಾರ್ದನಪುರಕ್ಕೆ ಹೋಗಿ ಇನಸ್ಪೆಕ್ಟರ್ ಸಾಹೇಬರನ್ನು ಕಂಡು ನಿಂಬೆಯ ಹಣ್ಣುಗಳನ್ನು ಕೈಗೆ ಕೊಟ್ಟು, ತೆಂಗಿನ ಕಾಯಿ ಖರ್ಜೂರ ಬಾದಾಮಿ ಕಲ್ಸಕ್ಕರೆ ಬಾಳೆಹಣ್ಣು ಗಳ ತಟ್ಟೆಗಳನ್ನು ಮೇಜಿನ ಮೇಲಿಟ್ಟು, ಅಹವಾಲನ್ನು ಹೇಳಿಕೊಂಡನು. ಪಂಚಾಯತಿ ಮೆಂಬರುಗಳು, 'ಸ್ವಾಮಿ ! ಹನುಮನಹಳ್ಳಿಯಲ್ಲಿಯೇ ಸ್ಕೂಲ್ ಸ್ಥಾಪಿತವಾಗಬೇಕೆಂದು ಪಂಚಾಯತಿಯ ರೆಜಲ್ಯೂಷನ್ ಆಗಿದೆ. ತಾವು ಸಹ ಹನುಮನ ಹಳ್ಳಿ ಯಲ್ಲಿಯೇ 'ಇಸ್ಕೂಲ್ ಮಾಡು ಎಂದು ಮೇಷ್ಟರಿಗೆ ತಾಕೀತು ಮಾಡಿದ್ದೀರಿ. ಆದರೂ ಚೇರ್ಮನ್ನು ಜುಲುಮಿನಿಂದ ಗರುಡನ ಹಳ್ಳಿಯಲ್ಲೇ ಮೇಷ್ಟರನ್ನು ನಿಲ್ಲಿಸಿಕೊಂಡು ಇಸ್ಕೂಲನ್ನು ಅಲ್ಲೇ ಮಾಡಿಸುತ್ತಿದ್ದಾನೆ. ಈ ಅನ್ಯಾಯವನ್ನು ಪರಿಹರಿಸಬೇಕು' ಎಂದು ಕೈಮುಗಿದು ಕೇಳಿಕೊಂಡರು. ಇನ್ಸ್ಪೆಕ್ಟರು ತಮ್ಮ ಆಜ್ಞೆಯಂತೆ ಮೇಷ್ಟು ನಡೆಯಲಿಲ್ಲವಲ್ಲ ಎಂದು ಕೋಪಗೊಂಡರು; ರೆಜಲ್ಯೂಷನ್ನಿಗೆ ವ್ಯತಿರಿಕ್ತವಾಗಿ ಇನ್ಸ್ಪೆಕ್ಟರು ನಡೆದರೆಂದು ಪಂಚಾಯತಿ ಮೆಂಬರುಗಳು ಎಲ್ಲಿ ಅರ್ಜಿ ಹಾಕುವರೊ ಎಂದು ಹೆದರಿಕೊಂಡರು; ಮತ್ತು ಮೇಜಿನಮೇಲಿದ್ದ ಕಾಣಿಕೆಗಳನ್ನು ನೋಡಿ ಸುಪ್ರೀತರಾದರು, ಅವುಗಳ ಪರಿಣಾಮವಾಗಿ ಮೇಷ್ಟರಿಗೆ, " ಹನುಮನ ಹಳ್ಳಿಗೇನೆ ಸಾಮಾನು ಸಾಗಿಸಿಕೊಂಡು ಹೋಗಿ ಅಲ್ಲಿಯೇ ಪಾಠ ಮಾಡಬೇಕು, ಇಲ್ಲ ವಾದರೆ ಸಂಬಳ ಕೊಡುವುದಿಲ್ಲ,' ಎಂದು ಹುಕುಂ ಮಾಡಿ ಅದರ ನಕಲನ್ನು ಶ್ಯಾನುಭೋಗನ ಕೈಯಲ್ಲಿ ಕೊಟ್ಟು ಕಳುಹಿಸಿದರು.

ಮಾರನೆಯ ದಿನ ಮೇಷ್ಟರಿಗೆ ಹುಕುಂ ತಲುಪಿತು. ಸಾಮಾನನ್ನು ತರಲು ಹನುಮನ ಹಳ್ಳಿಯಿಂದ ಗಾಡಿಯೂ ಹೋಯಿತು, ಗರುಡನಹಳ್ಳಿಯವರು ಸಾಮಾನು ಕೊಡಲಿಲ್ಲ ; ಮೇಷ್ಟರು ಹೋಗುವುದಕ್ಕೂ ಅವಕಾಶಕೊಡದೆ ತಡೆದು ಬಿಟ್ಟರು. ಹನುಮನ ಹಳ್ಳಿಯವರಿಗೆ ರೇಗಿಹೋಯಿತು. ದೊಣ್ಣೆಗಳನ್ನೆತ್ತಿಕೊಂಡು ಹೊರಟು ಗರುಡನ ಹಳ್ಳಿಗೆ ಮುತ್ತಿಗೆ ಹಾಕಿದರು ! ಗರುಡನ ಹಳ್ಳಿ ಯವರು ತಮ್ಮಲ್ಲ ದೊಣ್ಣೆಗಳುಂಟೆಂದು ತೋರಿಸುತ್ತ ಕದನಕ್ಕೆ ಸಿದ್ಧರಾದರು ! ಸ್ವಲ್ಪ ಮಾರಾಮಾರಿ ಆಯಿತು! ಅಷ್ಟರಲ್ಲಿ ಶ್ಯಾನುಭೋಗನಿಂದ ಪೊಲೀಸಿಗೆ ಯಾದಿಹೋಯಿತು. ಇದನ್ನು ತಿಳಿದು ಕೊಂಡು ಜನ ಸ್ವಲ್ಪ ಚದರಿದರು. ಸ್ವಲ್ಪ ಹೊತ್ತಿನ ಮೇಲೆ ಸಮಾಧಾನ ಸ್ಥಿತಿ ಏರ್ಪಟ್ಟಿತು.

ಮಾರನೆಯ ದಿನ ಮೇಷ್ಟ್ರು ಹನುಮನ ಹಳ್ಳಿಗೆ ಹೋಗಿ ಶ್ಯಾನುಭೋಗನನ್ನು ಕಂಡನು. ಆತನು ಪಂಚಾಯತಿ ಹಾಲಿನಲ್ಲಿ ಹುಡುಗರನ್ನು ಜಮಾಯಿಸಿ ಕೊಟ್ಟು ಪಾಠಶಾಲೆಯನ್ನು ಅಲ್ಲಿ ನಡೆಸುವಂತೆ ಹೇಳಿದನು. ಇದರ ಫಲವಾಗಿ ದಾಖಲೆಗಳೂ ಸಾಮಾನುಗಳೂ ಗರುಡನ ಹಳ್ಳಿಯಲ್ಲಿ ಉಳಿದು ಕೊಂಡುವು ; ಮೇಷ್ಟು ಮಾತ್ರ ಹನುಮನ ಹಳ್ಳಿಯಲ್ಲಿ ಹುಡುಗರಿಗೆ ಪಾಠ ಹೇಳುತ್ತ ಕಾಲ ಕಳೆದನು. ಇನ್ಸ್ಪೆಕ್ಟರವರ ಹುಕುಮಿನಂತೆ ಅವನು ನಡೆದುಕೊಂಡದ್ದರಿಂದ ಸಂಬಳವೇನೋ ತಿಂಗಳು ತಿಂಗಳಿಗೆ ತಪ್ಪದೆ ಬರುತ್ತಿತ್ತು. ಶ್ಯಾನುಭೋಗನ ಬೆಂಚು, ಬೋರ್ಡು ಮೊದಲಾದ ಸಾಮಾನುಗಳ ನ್ಯೂ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನೂ ಗರುಡನ ಹಳ್ಳಿಯಿಂದ ತರಿಸಿಕೊಡಬೇಕೆಂದು ಅಮಲ್ದಾರರಿಗೂ, ಸ್ಕೂಲ್ ಇನ್ಸ್ಪೆಕ್ಟರಿಗೂ ಅರ್ಜಿಗಳನ್ನು ಗುಜರಾಯಿಸಿದನು. ಸ್ಕೂಲ್ ಇನ್ ಸ್ಪೆಕ್ಟರವರು ಪೊಲೀಸ್ ಇನ್ಸ್ಪೆಕ್ಟರಿಗೂ ಅಮಲ್ದಾರರಿಗೂ ಕಾಗದಗಳನ್ನು ಬರೆದು ಅವರ ಕುಮ್ಮಕ್ಕಿನಿಂದ ದಾಖಲೆಗಳನ್ನೂ ಸಾಮಾನುಗಳನ್ನೂ ಹನುಮನ ಹಳ್ಳಿಗೆ ವರ್ಗಾಯಿಸಿದರು. ಈ ಬಲಾತ್ಕಾರ ಪ್ರಯೋಗದಿಂದ ಹನುಮನ ಹಳ್ಳಿ ಯವರಿಗೂ ಗರುಡನ ಹಳ್ಳಿಯವರಿಗೂ ಬಲವಾದ ದ್ವೇಷ ಬೆಳೆದು ಪರಸ್ಪರವಾಗಿ ಜನರು ಹೋಗಿ ಬರುವುದು ನಿಂತುಹೋಯಿತು. ಜೊತೆಗೆ ಗರುಡನ ಹಳ್ಳಿಯವರಿಗೆ ಛಲಹುಟ್ಟಿ, ಅವರು ಪಂಚಾಯತಿ ಚೇರ್ಮನ್ ಮತ್ತು ತಮ್ಮ ಹಳ್ಳಿಯಲ್ಲಿದ್ದ ಪಂಚಾಯತಿ ಮೆಂಬರುಗಳನ್ನು ಮುಂದುಮಾಡಿಕೊಂಡು ಮೇಲ್ಪಟ್ಟ ಸಾಹೇಬರಲ್ಲಿಗೆ ಹೋದರು. ನಿಂಬೆಯ ಹಣ್ಣುಗಳು, ಒಂದು ಗೊನೆ ರಸಬಾಳೆಹಣ್ಣು, ಎರಡು ಹಲಸಿನಹಣ್ಣುಗಳು, ಎಳನೀರು ಮೊದಲಾದ ಕಾಣಿಕೆಗಳನ್ನು ತೆಗೆದುಕೊಂಡು ಹೋಗಿ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡು ಅಹವಾಲನ್ನು ಹೇಳಿಕೊಂಡರು ಸಾಹೇಬರು ಸಾವಧಾನವಾಗಿ ಎಲ್ಲವನ್ನೂ ಕೇಳಿ ಇನ್ಸ್ಪೆಕ್ಟರ್ ಮಾಡಿದ್ದು ತಪ್ಪೆಂದು ತೀರ್ಮಾನಿಸಿಕೊಂಡು, ಪಾಠಶಾಲೆಯನ್ನು ಗರುಡನ ಹಳ್ಳಿಗೆ ವರ್ಗಾಯಿಸಿ ಹುಕುಂ ಮಾಡಿದರು. ಮಧ್ಯಾಹ್ನ ಗರುಡನ ಹಳ್ಳಿಯವರು ಆ ಹುಕುಮಿನ ನಕಲನ್ನು ತೆಗೆದುಕೊಂಡು ಜಯಘೋಷ ಮಾಡುತ್ತ ಕಚೇರಿಯಿಂದ ಹೊರಟು ತಮ್ಮ ಹಳ್ಳಿಯನ್ನು ಸೇರಿದರು, ಇನ್ ಸ್ಪೆಕ್ಟರಿಗೂ ಹುಕುಮಿನ ನಕಲುಹೋಯಿತು. ಅವರು ಆ ಹುಕುಮಿನಂತೆ ಹನುಮನ ಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ ಮೇಷ್ಟರಿಗೆ ತಾಕೀತು ಮಾಡಿದರು. ಪುನಃ ಅವನು ಗರುಡನ ಹಳ್ಳಿಗೆ ಹೋಗಿ ಕೆಲಸಮಾಡತೊಡಗಿದನು !

ಹನುಮನ ಹಳ್ಳಿಯವರು ಶ್ಯಾನುಭೋಗನ ಮುಖಂಡತನದಲ್ಲಿ ಪಂಚಾಯತಿ ಹಾಲಿನಲ್ಲಿ ಸಭೆ ಸೇರಿದರು. ತಮಗೆ ಅಪಜಯವಾದುದಕ್ಕೆ ಖಿನ್ನರಾದರು. ಯುದ್ಧದಲ್ಲಿ ಜಯಾಪಜಯಗಳು ದೈವ ಯೋಗದಿಂದ ಉಂಟಾಗತಕ್ಕುವು. ಆದರೂ ಮನುಷ್ಯನು ಕಾರ್ಯ ಸಾಧನೆಯ ಪ್ರಯತ್ನ ವನ್ನು ಬಿಡಬಾರದು ” ಎಂದು ಶ್ಯಾನುಭೋಗನು ಅವರಿಗೆಲ್ಲ ಸಮಾಧಾನ ಹೇಳಿ ಊರ ಜನರನ್ನು ಕಟ್ಟಿಕೊಂಡು, ಎರಡು ಗೊನೆ ರಸಬಾಳೆಹಣ್ಣು, ಒಂದು ಮಣ ಒಳ್ಳೆಯ ತುಪ್ಪ, ಹಲಸಿನಹಣ್ಣುಗಳು, ದ್ರಾಕ್ಷಿ, ಖರ್ಜೂರ ಬಾದಾಮಿ- ಇತ್ಯಾದಿಗಳನ್ನು ತೆಗೆದುಕೊಂಡು ಹೋಗಿ ಒಬ್ಬರು ಮುಖಂಡರನ್ನು ಮುಂದುಮಾಡಿಕೊಂಡು ಡೆಪ್ಯುಟಿ ಡೈರೆಕ್ಟರ್ ಸಾಹೇಬರನ್ನು ಅವರ ಬಂಗಲೆಯಲ್ಲಿ ಕಂಡನು ; ಕಾಣಿಕೆಗಳನ್ನು ಒಪ್ಪಿಸಿದನು. ಆ ದೊಡ್ಡ ಗುಂಪನ್ನು ಆ ಸಾಹೇಬರು ನೋಡಿ ನ್ಯಾಯ ಅವರ ಕಡೆಯೇ ಇರುವುದೆಂದು ತೀರ್ಮಾನಿಸಿಕೊಂಡು, ಆ ಸ್ಕೂಲು ಸಂಬಂಧವಾದ ಕಡತವನ್ನು ತರಿಸಿಕೊಂಡು ಹುಕುಂ ಮಾಡಿದರು ; “ ಇನ್ಸ್ಪೆಕ್ಟರು ಪಂಚಾಯತಿಯ ರೆಜಲ್ಯೂಷನ್ನಿನಂತೆ ಸರಿಯಾಗಿ ಏರ್ಪಾಟು ಮಾಡಿದ್ದರು. ಡಿ. ಇ. ಓ. ಸಾಹೇಬರು ಅದನ್ನು ಬದಲಾಯಿಸಿ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದು ಶುದ್ಧ ತಪ್ಪು. ಈಗ ಮೊದಲಿನಂತೆಯೇ ಸ್ಕೂಲನ್ನು ಹನುಮನ ಹಳ್ಳಿಯಲ್ಲಿ ನಡೆಸಬೇಕು. ಆ ಬಗ್ಗೆ ರಿಪೋರ್ಟು ಮಾಡಬೇಕು ” ಎಂದು ಹುಕುಮಿನಲ್ಲಿತ್ತು. ಅದರ ನಕಲನ್ನು ನೇರವಾಗಿ ಇನ್ ಸ್ಪೆಕ್ಟರ್ ಅವರಿಗೂ ಕಳಿಸಿಬಿಟ್ಟು, ಕೂಡಲೇ ರಿಪೋರ್ಟು ಮಾಡಬೇಕೆಂದು ತಿಳಿಸಿದರು. ತಾನು ಮಾಡಿದ್ದ ಏರ್ಪಾಟನ್ನೆ ಡೆಪ್ಯುಟ ಡೈರೆಕ್ಟರ್ ಸಾಹೇಬರು ಮಂಜೂರ್ ಮಾಡಿದ್ದನ್ನು ನೋಡಿ ಡಿ,ಇ, ಓ ಸಾಹೇಬರ ಹುಕುಮನ್ನು ರದ್ದು ಪಡಿಸಿದ್ದನ್ನೂ ನೋಡಿ ಇನ್ ಸ್ಪೆಕ್ಟರಿಗೆ ಬಹಳ ಸಂತೋಷವಾಯಿತು. ಆ ಹುಕುಮಿನಂತೆ ತಾವು ಮೇಷ್ಟರಿಗೆ ತಾಕೀತು ಮಾಡಿ, ಆ 'ವಿಚಾರವನ್ನು ಮೇಲ್ಪಟ್ಟ ಇಬ್ಬರು ಅಧಿಕಾರಿಗಳಿಗೂ ತಿಳಿಸಿದರು. ಪಾಪ ! ಆ ಮೇಷ್ಟು ಹುಕುಮನ್ನು ನೋಡಿಕೊಂಡು ಪುನಃ ಹನುಮನಹಳ್ಳಿಗೆ ಹೊರಟುಹೋದನು !

ಮೇಲೆ ಹೇಳಿದ ವರ್ಗಾವರ್ಗಿಗಳ ಗಲಾಟೆಯಿಂದ ಸ್ಕೂಲ್ ಕೆಲಸ ಎಲ್ಲಿಯೂ ಚೆನ್ನಾಗಿ ನಡೆಯಲಿಲ್ಲ. ಆದರೆ ವರ್ಷಕ್ಕೊಂದು ಬಾರಿ ಪದ್ಧತಿ ಯಂತೆ ಮಾಡಬೇಕಾದ ತನಿಖೆಗಾಗಿ ಇನ್ ಸ್ಪೆಕ್ಟರು ಹನುಮನ ಹಳ್ಳಿಗೆ ಹೋದರು. ಹೀಗೆ ಅವರು ತನಿಖೆಗಾಗಿ ಬಂದಿರುವ ಸಮಾಚಾರ ಗರುಡನ ಹಳ್ಳಿಗೆ ಮುಟ್ಟಿತು. ಪಂಚಾಯತಿ ಚೇರ್ಮನ್ನು, ಇತರ ಮೆಂಬರುಗಳು, ಮತ್ತು ಜನ ಗರುಡನ ಹಳ್ಳಿಯಿಂದ ಹನುಮನ ಹಳ್ಳಿಗೆ ಹೋದರು, ತಮ್ಮ ಹಟವೇ ಗೆದ್ದ ಉತ್ಸಾಹದಲ್ಲಿ ಇನ್ಸ್ಪೆಕ್ಟರು ಆ ಜನರನ್ನು ಎದುರು ಹಾಕಿಕೊಂಡರು. ಆ ಒರಟು ಜನ ಒರಟು ಮಾತುಗಳಲ್ಲಿ ಇನ್ಸ್ಪೆಕ್ಟರನ್ನು ಬೈದರು ; ಅವರನ್ನು ಹೊಡೆಯುವುದಕ್ಕೂ ಹೋದರು. ಹನುಮನ ಹಳ್ಳಿ ಯವರು ಅಡ್ಡ ಬಂದು ಆ ಇನ್ ಸ್ಪೆಕ್ಟರನ್ನು ರಕ್ಷಿಸಿ ಕಡೆಗೆ ಅವರನ್ನು ಜನಾರ್ದನಪುರಕ್ಕೆ ಕ್ಷೇಮವಾಗಿ ಸೇರಿಸಿದರು.

ಮೇಲಿನ ವ್ಯಾಜ್ಯ ಅಷ್ಟರಲ್ಲಿ ಮುಗಿಯಲಿಲ್ಲ. ಗರುಡನ ಹಳ್ಳಿ, ಯವರು ಡೈರೆಕ್ಟರ್ ಸಾಹೇಬರಲ್ಲಿ ಅಪೀಲುಹೋಗಿ ಮನವಿ ಮಾಡಿಕೊಂಡರು ; ಬೆಂಗಳೂರಿನಲ್ಲಿ ತಮಗೆ ಬೇಕಾದ ಕೆಲವರು ಮುಖಂಡರ ಸಹಾಯವನ್ನು ಪಡೆದುಕೊಂಡರು. ಒಂದು ವಾರದವರೆಗೂ ಡೈರೆಕ್ಟರ್ ಸಾಹೇಬರ ಕಚೇರಿಗೆ ಮುತ್ತಿಗೆ ಹಾಕಿ ಕಡೆಯಲ್ಲಿ ತಮ್ಮ ಪರವಾಗಿ ಹುಕುಮನ್ನು ಮಾಡಿಸಿದರು ; ' ಗರುಡನ ಹಳ್ಳಿಯಲ್ಲಿ ನಡೆಯುತ್ತಿದ್ದ ಪಾಠಶಾಲೆಯನ್ನು ಅಲ್ಲಿಂದ ಬದಲಾಯಿಸಿದ್ದು ಶುದ್ಧ ತಪ್ಪ, ಇನ್ ಸ್ಪೆಕ್ಟರೂ ಡೆಪ್ಯುಟಿ ಡೈರೆಕ್ಟರೂ ವಿವೇಚನೆಯನ್ನು ಉಪಯೋಗಿಸಲಿಲ್ಲ. ಇಷ್ಟೆಲ್ಲ ಗಲಭೆಗೆ ಅವರೇ ಕಾರಣರು. ಈಗ ಪ್ರಾರಂಭದಲ್ಲಿದ್ದಂತೆಯೇ ಗರುಡನ ಹಳ್ಳಿಯಲ್ಲಿ ಪಾಠ ಶಾಲೆ ನಡೆಯಬೇಕು ” ಎಂದು ಕೆಳಗಿನವರಿಗೆ ತಾಕೀತು ಆಯಿತು. ಆದರ ನಕಲನ್ನು ನೇರವಾಗಿ ಇನ್ ಸ್ಪೆಕ್ಟರಿಗೆ ಕಳಿಸಿಕೊಟ್ಟರು !

ಹೀಗೆ ಒಂದು ಬಾರಿ ಗರುಡನ ಹಳ್ಳಿ ಯವರಿಗೆ ಜಯ, ಒ೦ದು ಬಾರಿ ಹನುಮನ ಹಳ್ಳಿಯವರಿಗೆ ಜಯ ಕೈಗೂಡಿ, ಆ ಯುದ್ಧ ಸಮುದ್ರ ತರಂಗದಂತೆ ಹಿಂದಕ್ಕೂ ಮುಂದಕ್ಕೂ ಆಂದೋಲನವಾಗುತ್ತಿತ್ತು. ಹನುಮನ ಹಳ್ಳಿಯವರು ತಮಗಾದ ಅಪಜಯವನ್ನು ನೋಡಿ, 'ಹೊಳೆಯ ತನಕ ಓಟ, ದೊರೆಯ ತನಕ ದೂರು ” ಎನ್ನುವ ಗಾದೆಯನ್ನು ಜ್ಞಾಪಕಕ್ಕೆ ತಂದುಕೊಂಡು, ಧೈರ್ಯಗುಂದದೆ, ಈ ಯುದ್ಧದಲ್ಲಿ ಗರುಡ ಗರ್ವಭಂಗವೇ ಆಗಿ ಪರಮ ಭಕ್ತ ನಾದ ಹನುಮನ ಹಳ್ಳಿಗೇನೆ ಜಯ ಸಿದ್ಧಿಸುವುದೆಂದು ಹುರುಪುಗೊಂಡು ಸರ್ಕಾರಕ್ಕೆ ಅರ್ಜಿಯನ್ನು ಗುಜರಾಯಿಸಿ, ಕೌನ್ಸಿಲರ್ ಸಾಹೇಬರನ್ನು ಅಠಾರಾ ಕಚೇರಿಯಲ್ಲಿ ಕಂಡು ಅಹವಾಲು ಗಳನ್ನು ಹೇಳಿಕೊಂಡರು. ಸರ್ಕಾರದವರು ಆ ಅರ್ಜಿಯನ್ನು ರಿಪೋರ್ಟು ಬಗ್ಗೆ ಡೈರೆಕ್ಟರ್ ಸಾಹೇಬರಿಗೆ ಕೊಟ್ಟು ಕಳಿಸಿದರು. ಅದು ಆ ಕಚೇರಿಯಿಂದ ಪದ್ಧತಿಯಂತೆ ಡೆಪ್ಯುಟಿ ಡೈರೆಕ್ಟರವರ ಕಚೇರಿಗೂ ಅಲ್ಲಿಂದ ಡಿ' ಇ. ಓ. ಸಾಹೇಬರ ಕಚೇರಿಗೂ ಇಳಿದು ಬಂದು, ಕಟ್ಟ ಕಡೆಯಲ್ಲಿ ವಿವರವಾದ ವರದಿಯನ್ನು ಕಳಿಸುವ ಬಗ್ಗೆ ಇನ್ ಸ್ಪೆಕ್ಟರ್ ರಂಗಣ್ಣನ ಕಚೇರಿಗೆ ಬಂದು ಸೇರಿತು ! ಈ ಮಧ್ಯದಲ್ಲಿ ಡೈರೆಕ್ಟರ್ ಸಾಹೇಬರಿಂದ ಡಿ. ಇ, ಓ, ಸಾಹೇಬರಿಗೆ ಬೇಗ ವರದಿ ಕಳಿಸಬೇಕೆಂದೂ ಸರ್ಕಾರಕ್ಕೆ ರಿಪೋರ್ಟು ಮಾಡುವುದು ತಡವಾಗುತ್ತಿರುವುದೆಂದೂ ಖಾಸಗಿ ಪತ್ರ ಬಂತು. ಆದ್ದರಿಂದಲೇ ರಂಗನಾಥಪುರದಲ್ಲಿ ಸಂಘದ ಸಭೆ ಮುಗಿದ ಮೇಲೆ, ಸಾಹೇಬರು ಬಸ್ಸು ಹತ್ತುವ ಹೊತ್ತಿನಲ್ಲಿ ರಂಗಣ್ಣನಿಗೆ ಆ ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ಹೇಗಾದರೂ ಪರಿಹಾರಮಾಡಿ ವರದಿ ಕಳಿಸಬೇಕೆಂದು ಹೇಳಿದ್ದು. ರಂಗಣ್ಣನು ಏನೋ ಒಂದು ಆತ್ಮ ವಿಶ್ವಾಸದಿಂದ, “ ಆಗಲಿ ಸಾರ್ !' ಎಂದು ಹೇಳಿದ್ದನು.

ರಂಗಣ್ಣನೂ ಶಂಕರಪ್ಪ ನೂ ಮೊದಲು ಹನುಮನ ಹಳ್ಳಿಗೆ ಹೋಗಿ ಪಂಚಾಯತಿ ಹಾಲಿನಲ್ಲಿ ಕುಳಿತರು. ಇನ್ಸ್ಪೆಕ್ಟರ ಸವಾರಿ ಬಂದಿದೆ ಎಂದು ತಿಳಿದು ಶ್ಯಾನುಭೋಗನೂ ಕೆಲವರು ಪಂಚಾಯತಿ ಮೆಂಬರುಗಳೂ ಬಂದರು. ಈಚೆಗೆ ಸ್ಕೂಲನ್ನು ಕಳೆದುಕೊಂಡು ಅಪಜಯದ ನೋವನ್ನು ಅನುಭವಿಸುತ್ತಿದ್ದವರು ಅವರು. ಏನು ಸ್ವಾಮಿ ! ನಿಮ್ಮ ಇಲಾಖೆಯವರ ದರ್ಬಾರು ಅತಿ ವಿಚಿತ್ರವಾಗಿದೆ ! ರಿಕಾರ್ಡನ್ನು ನೋಡಿ ನ್ಯಾಯವನ್ನು ದೊರಕಿಸುವುದಕ್ಕೆ ಬದಲು ಬಾಳೇಹಣ್ಣಿನ ಗೊನೆಗಳನ್ನು ನೋಡುತ್ತ ಸಾಹೇಬರುಗಳು ತಿರ್ಮಾನಮಾಡುತ್ತಾರೆ ! ' ಎಂದು ಅವರು ಕಟುವಾಗಿ ಆಡಿದರು.

'ನಿಮ್ಮ ನಿಮ್ಮಲ್ಲಿ ಈ ವ್ಯಾಜ್ಯವನ್ನು ಪರಿಹಾರ ಮಾಡಿಕೊಳ್ಳದೆ ಬಾಳೆಹಣ್ಣಿನ ಗೊನೆಗಳನ್ನು ಎರಡು ಕಕ್ಷಿಯವರೂ ಏಕೆ ಹೊತ್ತು ಕೊಂಡು ಹೋದಿರಿ ? ' ಎಂದು ನಗುತ್ತಾ ರಂಗಣ್ಣ ಕೇಳಿದನು.

'ಈ ವ್ಯಾಜ್ಯ ನಮ್ಮ ನಮ್ಮಲ್ಲೇ ಫೈಸಲ್ ಆಗುವುದಿಲ್ಲ ಸ್ವಾಮಿ ! '

'ಗರುಡನ ಹಳ್ಳಿಯವರನ್ನು ಇಲ್ಲಿಗೆ ಕರೆಸಿ, ಅವರ ವಾದವನ್ನು ಕೇಳೋಣ '

'ಅವರು ಈ ಹಳ್ಳಿ ಯ ಎಲ್ಲೆ ಯೊಳಕ್ಕೆ ಬರುವುದಿಲ್ಲ ಸ್ವಾಮಿ !'

'ಒಳ್ಳೆಯದು, ನಡೆಯಿರಿ. ಆವರ ಹಳ್ಳಿಗೇನೆ ನಾವೆಲ್ಲ ಹೊಗೋಣ, ಅಲ್ಲಿಯೂ ಪಂಚಾಯತಿ ಹಾಲ್ ಇದೆಯಲ್ಲ !'

'ನಾವು ಆ ಹಳ್ಳಿಯ ಎಲೆಯನ್ನು ಮೆಟ್ಟುವುದಿಲ್ಲ ಸ್ವಾಮಿ !'

'ಹಾಗಾದರೆ ಈ ವ್ಯಾಜ್ಯ ಹೇಗೆ ಫೈಸಲಾಗಬೇಕು ? '

'ಸರಕಾರಕ್ಕೆ ಅರ್ಜಿ ಗುಜರಾಯಿಸಿಕೊಂಡಿದ್ದೇವೆ, ನ್ಯಾಯವನ್ನು ನೋಡಿ ನಮ್ಮ ಹಳ್ಳಿಯಲ್ಲಿ ಸ್ಕೂಲು ಮಾಡುವಂತೆ ಹುಕುಂ ಮಾಡಲಿ !' 'ಇಬ್ಬರೂ ತಮ್ಮದೇ ನ್ಯಾಯವೆಂದು ಹೊಡೆದಾಡುತ್ತಿದ್ದೀರಲ್ಲ!'

'ಅದು ಹೇಗೆ ಸ್ವಾಮಿ ? ಕಣ್ಣು ಬಿಟ್ಟು ನ್ಯಾಯ ನೋಡಬೇಕು ; ನಮ್ಮ ಪಂಚಾಯತಿ ರೆಜಲ್ಯೂಷನ್ ನೋಡಬೇಕು. ತಾವೇ ಈ ರಿಕಾರ್ಡನ್ನು ನೋಡಿ ಸ್ವಾಮಿ !' ಎಂದು ಹೇಳುತ್ತ ಶ್ಯಾನುಭೋಗನು ಪಂಚಾಯತಿ ಮೀಟಿಂಗ್ ಪುಸ್ತಕವನ್ನು ಕೈಗೆ ಕೊಟ್ಟು, ಹಿಂದೆ ಆದ ಮೀಟಿಂಗಿನ ವರದಿಯಿದ್ದ ಹಾಳೆಯನ್ನು ತೋರಿಸಿದನು. ಅದರಲ್ಲಿ ಹನುಮನ ಹಳ್ಳಿಯಲ್ಲಿ ಸ್ಕೂಲನ್ನು ಮಾಡಬೇಕೆಂದು ತೀರ್ಮಾನವಿತ್ತು.

'ನೋಡಿ ಸ್ವಾಮಿ | ಪಟೇಲನೇ ಚೇರ್ಮನ್ನು, ಸ್ವಹಸ್ತದಿಂದ ರುಜು ಮಾಡಿದ್ದಾನೆ ! ಅಕ್ಷರ ತಿಳಿದ ಇತರರು ರುಜು ಮಾಡಿದ್ದಾರೆ ! ಅಕ್ಷರ ತಿಳಿಯದ ಮೆಂಬರುಗಳು ಹೆಬ್ಬೆಟ್ಟು ಗುರುತು ಹಾಕಿದ್ದಾರೆ. ಅದಕ್ಕೆ ಚೇರ್ಮನ್ನೆ ಬರಹ ಬರೆದಿದ್ದಾನೆ. ಹೀಗಿದ್ದರೂ ಕೂಡ ಈಗ ಗಂಡಾಗುಂಡಿ ವ್ಯಾಜ್ಯ ತೆಗೆಯೋ ಜನಕ್ಕೆ ಛೀಮಾರಿಮಾಡದೆ ಸ್ಕೂಲನ್ನು ಗರುಡನ ಹಳ್ಳಿಗೆ ವರ್ಗಾಯಿಸಿದ್ದೀರಿ?

'ಈ ರಿಕಾರ್ಡುಗಳನ್ನೆಲ್ಲ ತೆಗೆದುಕೊಳ್ಳಿ ಶ್ಯಾನುಭೋಗರೆ ! ಅಲ್ಲಿಗೆ ಹೋಗೋಣ. ನಮ್ಮ ಮರ್ಯಾದೆಗೇನೂ ಕಡಮೆಯಾಗುವುದಿಲ್ಲ'

'ಕ್ಷಮಿಸಬೇಕು ಸ್ವಾಮಿ ! ನಾವು ಈಚೆಗೆ ಆ ಹಳ್ಳಿಗೆ ಹೋಗುತ್ತಾ ಇಲ್ಲ ! ಆ ಹಳ್ಳಿಯವರೂ ಇಲ್ಲಿಗೆ ಬರುತ್ತಾ ಇಲ್ಲ ! ಈಚೆಗೆ ಪಂಚಾಯತಿ ಮೀಟಿಂಗುಗಳನ್ನು ಸಹ ನಾವು ನಡೆಸುತ್ತಾ ಇಲ್ಲ !'

'ಹಾಗಾದರೆ, ಒಂದು ಕೆಲಸ ಮಾಡಿ. ನಿಮ್ಮ ಹಳ್ಳಿ ಯ ಎಲ್ಲೆಯ ಹತ್ತಿರ ಹೋಗೋಣ. ಅವರನ್ನು ಅಲ್ಲಿಗೆ ಬರಮಾಡಿಕೊಳ್ಳೋಣ.'

'ಏನೋ ಸ್ವಾಮಿ ? ತಾವು ಹೇಳುತ್ತೀರಿ. ಮನಸ್ಸಿಲ್ಲದ ಮನಸ್ಸಿನಿಂದ ನಾವು ಒಪ್ಪಿ ಕೊಳ್ಳಬೇಕು. ಗರುಡನ ಹಳ್ಳಿಯ ವರಂತೆ ಒರಟಾಟ ಮಾಡುವುದಕ್ಕೆ ನಮಗೆ ಇಷ್ಟವಿಲ್ಲ.'

ಕಡೆಗೆ ಹನುಮನ ಹಳ್ಳಿಯವರು ಇನ್‌ಸ್ಪೆಕ್ಟರವರ ಜೊತೆಯಲ್ಲಿ ಹೊರಟರು. ಎಲ್ಲೆಯ ಬಳಿ ಬಂದು ಅಲ್ಲಿದ್ದ ಒಂದು ಆಲದ ಮರದ ಕೆಳಗೆ ಎಲ್ಲರೂ ಕುಳಿತರು. ರಂಗಣ್ಣನೂ ಶಂಕರಪ್ಪನೂ ಗರುಡನ ಹಳ್ಳಿಯ ಕಡೆಗೆ ಹೊರಟರು. ಆಗ ಶ್ಯಾನುಭೋಗನು,

'ಸ್ವಾಮಿ ! ಗರುಡನ ಹಳ್ಳಿಯವರು ಬಹಳ ಪುಂಡರು. ಹಿಂದಿನ ಇನ್ ಸ್ಪೆಕ್ಟರನ್ನು ಹೀನಾಮಾನ ಬೈದರು ; ಹೊಡೆಯುವುದಕ್ಕೂ ಕೈಯೆತ್ತಿದರು, ಆದರೆ ಆ ಪ್ರಸಂಗ ನಮ್ಮ ಹಳ್ಳಿಯಲ್ಲಿ ನಡೆಯಿತು. ನಾವು ಇನ್ ಸ್ಪೆಕ್ಟರನ್ನು ರಕ್ಷಿಸಿದೆವು. ಈಗ ನೀವು ಬೆಂಬಲವಿಲ್ಲದೆ ಗರುಡನಹಳ್ಳಿಗೆ ಹೋಗುತ್ತೀರಿ, ಆಲೋಚನೆಮಾಡಿ ಸ್ವಾಮಿ ! ಬೇಕಾದರೆ ತಳವಾರನ ಕೈಯಲ್ಲಿ ಹೇಳಿ ಕಳಿಸೋಣ'-ಎಂದನು.

'ಶ್ಯಾನುಭೋಗರೆ ! ಅವರು ಹೊಡೆದರೆ ಹೊಡೆಸಿಕೊಂಡು ಬರುತ್ತೇನೆ! ನಾನೀಗ ಏನು ಮಾಡಬೇಕು? ನೀವುಗಳಾರೂ ನನ್ನ ಬೆಂಬಲಕ್ಕೆ ಬರುವುದಿಲ್ಲ. ತಮಾಷೆ ನೋಡೋಣವೆಂದು ಅಲ್ಲೇ ಕುಳಿತಿದ್ದೀರಿ. ತಳವಾರನನ್ನು ಕಳಿಸಿದರೆ ಅವರು ಬರುತ್ತಾರೆಯೆ ? ನಾನು ಹೋದರೂ ಏನು ಮಾಡುತ್ತಾರೋ ಗೊತ್ತಿಲ್ಲ. ಪ್ರಯತ್ನ ಪಟ್ಟು ನೋಡುತ್ತೇನೆ'- ಎಂದು ಹೇಳುತ್ತಾ ರಂಗಣ್ಣ ಹೊರಟನು. ಪಂಚಾಯತಿ ಮೆಂಬರುಗಳು ಒಂದೆರಡು ನಿಮಿಷ ತಂತಮ್ಮ ಆಲೋಚನೆ ಮಾಡಿಕೊಂಡು, ಕಡೆಗೆ ಇನ್ ಸ್ಪೆಕ್ಟರ ಬೆಂಬಲಕ್ಕೆ ನಾಲ್ಕು ಜನ ಆಳುಗಳನ್ನು ಕಳಿಸಿಕೊಟ್ಟರು.

ರಂಗಣ್ಣ ಗರುಡನ ಹಳ್ಳಿಯ ಪಂಚಾಯತಿ ಹಾಲನ್ನು ಪ್ರವೇಶಿಸಿದಾಗ ಸ್ಕೂಲು ನಡೆಯುತ್ತಿತ್ತು. ಮಕ್ಕಳು ಎದ್ದು ನಿಂತುಕೊಂಡು ನಮಸ್ಕಾರ ಮಾಡಿದರು. ಮೇಷ್ಟು ಕೈ ಮುಗಿದು ದೂರದಲ್ಲಿ ನಿಂತುಕೊಂಡನು.

'ಮೇಷ್ಟೆ ! ಚೇರ್ಮನ್ನರನ್ನೂ ಪಂಚಾಯತಿಯ ಮೆಂಬರುಗಳನ್ನೂ ಇಲ್ಲಿಗೆ ಕರೆಸಿ ಎಂದು ರಂಗಣ್ಣ ಹೇಳಿದನು. ಮೇಷ್ಟ್ರು ತಾನೇ ಹೋಗಿ ಅವರನ್ನು ಕರೆದುಕೊಂಡು ಬಂದನು. ಚೇರ್ಮನ್ನು ಒಳ್ಳೆಯ ಭಾರಿ ಆಳು ; ಮುರಿಬಾಸೆ, ಆಗಲವಾದ ಹಣೆ. ಮೆಂಬರುಗಳು ಸಾಮಾನ್ಯವಾಗಿದ್ದರು, ಮಕ್ಕಳನ್ನೆಲ್ಲ ಆಟಕ್ಕೆ ಬಿಟ್ಟು ರಂಗಣ್ಣ ಅವರೊಡನೆ ಮಾತಿಗಾರಂಭಿಸಿದನು.

'ನೀವೆಲ್ಲ ಒಂದೇ ಪಂಚಾಯತಿ ತಾಯಿಗೆ ಸೇರಿದ ಮಕ್ಕಳು. ಅಣ್ಣ ತಮ್ಮಂದಿರಂತೆ ಇದ್ದವರು. ಹಾಳು ಈ ಒಂದು ಗ್ರಾಂಟು ಸ್ಕೂಲಿಗೋಸ್ಕರ ವ್ಯಾಜ್ಯ ಕಾದು ಒಬ್ಬರ ಮನೆಗೆ ಮತ್ತೊಬ್ಬರು ಕಾಲಿಕ್ಕದಷ್ಟು ವೈರ ಬೆಳಸಿಕೊಂಡಿದ್ದಿರಿ. ಏಕೋ ಚೆನ್ನಾಗಿ ಕಾಣುತ್ತಾ ಇಲ್ಲ !'

'ಸ್ವಾಮಿ ನಾವು ನ್ಯಾಯ ಬಿಟ್ಟು ಹೋಗೋದಿಲ್ಲ. ಇಸ್ಕೂಲು ಇಲ್ಲದಿದ್ದರೆ ಕತ್ತೆಯ ಬಾಲ ಹೋಯಿತು ! ನಮ್ಮದು ಅನ್ಯಾಯ ತೋರಿಸಿ ಕೊಡಿ ಸ್ವಾಮಿ !” ಎಂದು ಚೇರ್ಮನ್ನು ಗಟ್ಟಿ ಧ್ವನಿಯಲ್ಲಿ ಹೇಳಿದನು.

'ಹನುಮನ ಹಳ್ಳಿಯಲ್ಲಿ ಸ್ಕೂಲು ಮಾಡಬೇಕೆಂದು ಪಂಚಾಯತಿ ರೆಜಲ್ಯೂಷನ್ ಆಗಲಿಲ್ಲವೋ ? ಅದಕ್ಕೆ ವ್ಯತಿರಿಕ್ತವಾಗಿ ನೀವುಗಳೇಕೆ ನಡೆಯುತ್ತೀರಿ ? ರಿಕಾರ್ಡು ನೋಡಿ.'

'ಸ್ವಾಮಿ ! ಆ ಶ್ಯಾನುಭೋಗರು ಸಾಮಾನ್ಯರಲ್ಲ ! ಲೋಕವನ್ನೇ ನುಂಗೋವರು ! ಈ ಗರುಡನ ಹಳ್ಳಿಯಲ್ಲೇ ನಾವು ಸಭೆಮಾಡಿ ಆ ದಿನ ಗರುಡನ ಹಳ್ಳಿಯಲ್ಲೇ ಇಸ್ಕೂಲು ಸ್ಥಾಪಿಸಬೇಕು ಎಂದು ತೀರ್ಮಾನ ಮಾಡಿದೆವು. ಮೊದಲು ಹನುಮನ ಹಳ್ಳಿಯವರದು ಆಕ್ಷೇಪಣೆ ಇತ್ತು. ಈ ಕಟ್ಟಡದ ಪಕ್ಕದಲ್ಲಿ ನೀರಿನ ಸಣ್ಣ ಕುಂಟೆ ಇದೆ. ತಮ್ಮ ಮಕ್ಕಳು ಪಕ್ಕದಲ್ಲಿ ನಡೆದು ಬರುತ್ತಾ ಬಿದ್ದು ಹೋಗುತ್ತಾರೆ, ಸತ್ತು ಹೋಗುತ್ತಾರೆ ; ಆದ್ದರಿ೦ದ ಹನುಮನ ಹಳ್ಳಿಯಲ್ಲೇ ಇಸ್ಕೂಲು ಮಾಡಬೇಕು ಎಂದರು. ನಾನು ಅದಕ್ಕೆ- ಹನುಮನ ಹಳ್ಳಿಯ ಪಂಚಾಯತಿ ಕಟ್ಟಡದ ಪಕ್ಕದಲ್ಲೂ ಕುಂಟೆ ಇದೆಯಲ್ಲ! ನಮ್ಮ ಮಕ್ಕಳು ಅಲ್ಲಿ ಬಿದ್ದು ಸಾಯೋದಿಲ್ಲವೇ ? ಇದೇನು ಮಾತು ! ಕುಂಟೆಯಿದ್ದ ಕಡೆ ಎರಡು ಹಳ್ಳಿಯ ಮಕ್ಕಳಿಗೂ ಅಪಾಯವೇ. ಸದ್ಯಕ್ಕೆ ಈ ಪಂಚಾಯತಿ ಕಟ್ಟಡದಲ್ಲಿ ಇಸ್ಕೂಲ್ ನಡೀತಾ ಇರಲಿ ಮೂರು ತಿಂಗಳೊಳಗೆ ಈ ಹಳ್ಳಿಯ ಆಚೆ ಇರುವ ಕಲ್ಲು ಮಂಟಪಕ್ಕೆ ಗೋಡೆ ಎತ್ತಿ ಕಿಟಕಿ ಬಾಗಿಲು ಇಟ್ಟು ಪಕ್ಕಾ ಕಟ್ಟಡ ಮಾಡಿಕೊಡುತ್ತೇವೆ. ಎರಡು ಹಳ್ಳಿಯ ಮಕ್ಕಳಿಗೂ ಅನುಕೂಲ ಆಗುತ್ತದೆ- ಎಂದು ಹೇಳಿದೆ. ಗರುಡನ ಹಳ್ಳಿಯಲ್ಲೇ ಇಸ್ಕೂಲ್ ನಡೆಯಬೇಕು ಎಂದು ರೆಜಲ್ಯೂಷನ್ ಮಾಡಿದೆವು. ಶ್ಯಾನುಭೋಗರು ರೆಜಲ್ಯೂಷನ್ ಬರೆಯೋ ಕಾಲಕ್ಕೆ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಅಂತ ಬರೆದು ರಿಕಾರ್ಡು ಮಾಡಿಬಿಟ್ಟರು ! ಸರಿಯಾಗಿ ಬರೆದಿರಬಹುದು ಎಂದು ನಾನು ನಂಬಿ ಬೇಹುಷಾರಾಗಿ ರುಜು ಮಾಡಿಬಿಟ್ಟೆ ಸ್ವಾಮಿ ! ನಮ್ಮವರೂ ಹೆಬ್ಬೆಟ್ಟು ಗುರುತು ಒತ್ತಿಬಿಟ್ಟರು. ಆಮೇಲೆ ನಮಗೆ ಶ್ಯಾನುಭೋಗರು ಮಾಡಿದ ಮೋಸ ತಿಳಿಯಿತು ಸ್ವಾಮಿ! ತಾವು ನ್ಯಾಯ ಫೈಸಲ್ ಮಾಡಿ. ನಮ್ಮದು ಅನ್ಯಾಯ ಎಂದು ತೋರಿಸಿಕೊಡಿ ; ತಮ್ಮ ಗುಲಾಮನಾಗ್ತೇನೆ.'

ಗರುಡನ ಹಳ್ಳಿ ಯವರದೇ ತಪ್ಪು ಎಂದ ಖಂಡಿತ ಮಾಡಿಕೊಂಡು “ಬಂದಿದ್ದ ರಂಗಣ್ಣನಿಗೆ ನ್ಯಾಯ ಎತ್ತ ಕಡೆಗಿದೆ ಎನ್ನುವುದು ತಿಳಿಯದೇ ಹೋಯಿತು ಶ್ಯಾನುಭೋಗನು ಕೈ ಕೊಟ್ಟಿದ್ದರೂ ಕೊಟ್ಟಿರಬಹುದು ಎಂದು ಸಂದೇಹಪಟ್ಟನು. ಹೇಗಾದರೂ ಆಗಲಿ, ಈಗ ಒಂದು ಸಮಾಧಾನದ ಮಾರ್ಗವನ್ನು ಹುಡುಕುವುದು ಒಳ್ಳೆಯದು ಎಂದು ನಿರ್ಧರಿಸಿಕೊಂಡು, “ಚೇರ್ಮನ್ನರೇ ! ಈ ಊರಾಚೆಯ ಕಲ್ಲು ಮಂಟಪ ಎಲ್ಲಿದೆ ? ತೋರಿಸಿ, ಅದು ಅನುಕೂಲವಾಗಿದ್ದರೆ ಹನುಮನ ಹಳ್ಳಿಯವರಿಗೆ ಬುದ್ಧಿ ಹೇಳೋಣ' ಎಂದನು. “ಆಗಲಿ ಸ್ವಾಮಿ ! ತೋರಿಸುತ್ತೇನೆ; ನಡೆಯಿರಿ. ನಮ್ಮ ನ್ಯಾಯ ತಾವಾದರೂ ಗ್ರಹಿಸಿಕೊಳ್ಳಿ. ಅಲ್ಲಿ ಇಸ್ಕೂಲ್ ಮಾಡಿದರೆ ಹನುಮನ ಹಳ್ಳಿಯ ಮಕ್ಕಳು ಬರುವುದಕ್ಕೆ ಏನು ಅಡ್ಡಿ ? ತಾವೇ ಎಲ್ಲವನ್ನೂ ನೋಡಿ'- ಎಂದು ಚೇರ್ಮನ್ನು ಹೇಳಿ ಇನ್ ಸ್ಪೆಕ್ಟರನ್ನು ಕರೆದುಕೊಂಡು ಹೊರಟನು. ಹಳ್ಳಿಯ ಆಚೆ ಹನುಮನ ಹಳ್ಳಿಗೆ ಹೋಗುವ ದಾರಿಯಲ್ಲಿ ಕಲ್ಲುಮಂಟಪವಿತ್ತು. ಅದು ಸುಮಾರಾಗಿ ಚೆನ್ನಾಗಿಯೇ ಇತ್ತು. ಮುಂಭಾಗದಲ್ಲಿ ಗೋಡೆ ಹಾಕಿ, ಕಿಟಕಿಗಳನ್ನು ಇಟ್ಟರೆ ಪಾಠ ಶಾಲೆಯನ್ನು ನಡೆಸುವುದಕ್ಕೆ ಅನುಕೂಲವಾಗುವಂತಿತ್ತು. ಅದನ್ನು ನೋಡಿ ರಂಗಣ್ಣನು, 'ನೀವು ಹೇಳಿದ ಮಾತು ನ್ಯಾಯವಾಗಿದೆ, ಆ ಆಲದ ಮರದ ಕೆಳಗೆ ಹನುಮನ ಹಳ್ಳಿಯವರು ಕುಳಿತಿದ್ದಾರೆ. ಆಲ್ಲಿಗೆ ಹೋಗೋಣ, ಈ ದಿನ ಏನಾದರೊಂದನ್ನು ಇತ್ಯರ್ಥ ಮಾಡಿ ಬಿಡೋಣ. ಎಲ್ಲವನ್ನೂ ಮಹಾತ್ಮ ಗಾಂಧಿಯವರ ತತ್ತ್ವದಂತೆ ಅಹಿಂಸೆ ಮತ್ತು ಸತ್ಯಗಳಿಂದಲೇ ಪರಿಹಾರ ಮಾಡಿಬಿಡೋಣ. ನಿಮ್ಮ ಎರಡು ಹಳ್ಳಿಗಳಲ್ಲಿಯೂ ರಾಮರಾಜ್ಯ ಪ್ರತ್ಯಕ್ಷವಾಗಲಿ' ಎಂದು ಹೇಳಿದನು. ಗರುಡನ ಹಳ್ಳಿಯವರು, ' ಏನೋ ಸ್ವಾಮಿ ನಡೆಯಿರಿ, ಬರುತ್ತೇವೆ. ಆದರೆ ಹನುಮನ ಹಳ್ಳಿಯವರು ಬಹಳ ಪುಂಡುಜನ ! ಆ ದಿವಸ ದೊಣ್ಣೆ ಯೆತ್ತಿಕೊಂಡು ನಮ್ಮನ್ನೆಲ್ಲ ಹೊಡೆಯುವುದಕ್ಕೆ ಬಂದರು ! ಈ ಪಂಚಾಯತಿಗೆ ನೀವು ಬಂದು ಎಲ್ಲಿ ಏಟು ತಿನ್ನುತ್ತೀರೋ ಎಂಬುದೇ ನಮ್ಮ ಹೆದರಿಕೆ. ಎಂದು ಹೇಳುತ್ತಾ ಜೊತೆಯಲ್ಲಿ ಹೊರಟರು.

ಹೀಗೆ ಆ ಎರಡು ಹಳ್ಳಿಯ ಮುಖಂಡರೂ ಕೆಲವರು ರೈತರೂ ಗಡಿಯ ಪ್ರದೇಶದಲ್ಲಿದ್ದ ಆಲದಮರದ ಕೆಳಗೆ ಸೇರಿದರು. ರಂಗಣ್ಣನು ದಾರಿಯುದ್ದಕ್ಕೂ ಆಲೋಚನೆ ಮಾಡುತ್ತಾ ಬರುತ್ತಿದ್ದವನು ತೊಡಕಿಗೆ ಸುಲಭವಾದ ಪರಿಹಾರ ಹೊಳೆಯದೆ, ಆ ಜನರನ್ನೆಲ್ಲ ಉದ್ದೇಶಿಸಿ, ಹಿಂದೆ ಆದದ್ದನ್ನೆಲ್ಲ ಈಗ ಎತ್ತಿ ಆಡುವುದು ಬೇಡ. ಮಾತಿಗೆ ಮಾತು ಬೆಳೆದು ಮನಸ್ತಾಪ ಬೆಳೆಯುತ್ತದೆ. ಈಗ ಬೆಳದಿರುವ ವೈರವೇ ಸಾಕು. ನೀವಿಬ್ಬರೂ ಅನ್ಯೋನ್ಯವಾಗಿರುವುದಕ್ಕೆ ಒಂದು ಸಲಹೆಯನ್ನು ಕೂಡಿ. ಎಂದು ಕೇಳಿದನು.

'ಸ್ವಾಮಿ! ಪಂಚಾಯತಿ ರೆಜಲ್ಯೂಷನ್ನಿನಂತೆ ನಡೆದರೆ ಎಲ್ಲವೂ ಸರಿ ಹೋಗುತ್ತದೆ' ಎಂದು ಹನುಮನ ಹಳ್ಳಿಯವರು ಹೇಳಿದರು,

'ರೆಜಲ್ಯೂಷನ್ನಿನ ಮಾತು ಆಡಬೇಡಿ, ಅದು ಆಗಿ ಹೋಯಿತೆಂದು ತಿಳಿಯಿರಿ' ಎಂದು ರಂಗಣ್ಣ ಹೇಳಿದನು.

'ಸ್ವಾಮಿ ! ಈಗ ನಮ್ಮ ಗರುಡನ ಹಳ್ಳಿಯಲ್ಲಿ ಇಸ್ಕೂಲ್ ನಡೀತಾ ಇದೆ. ಅದು ಅಲ್ಲೇ ಇದ್ದು ಕೊಂಡು ಹೋಗಲಿ, ಹನುಮನ ಹಳ್ಳಿಯವರಿಗೊಂದು ಇಸ್ಕೂಲ್ ಕೊಟ್ಟು ಬಿಡಿ ಸ್ವಾಮಿ ! ಅಲ್ಲಿಗೆ ನಮ್ಮ ನಮ್ಮ ಪಾಡಿಗೆ ನಾವಿರುತ್ತೆವೆ. ವ್ಯಾಜ್ಯ ಇರುವುದಿಲ್ಲ' ಎಂದು ಗರುಡನಹಳ್ಳಿಯವರು ಹೇಳಿದರು.

'ಅದೇನೋ ಒಳ್ಳೆಯ ಸಲಹೆಯೇ ! ಆದರೆ ಅದರಲ್ಲೂ ತೊಡಕಿದೆ. ಮೂರು ಫರ್ಲಾಂಗ್ ದೂರಕ್ಕೆ ಮತ್ತೊಂದು ಸ್ಕೂಲನ್ನು ಸರಕಾರದವರು ಕೊಡುವುದಿಲ್ಲ. ಅದೂ ಅಲ್ಲದೆ ನಿಮ್ಮ ಎರಡು ಹಳ್ಳಿಗಳೂ ಸೇರಿ ಜನ ಸಂಖ್ಯೆ ಐನೂರು ಆಗಿರುವುದರಿಂದ ಈ ಪಂಚಾಯತಿಗೆ ಒಂದು ಸ್ಕೂಲ್ ಕೊಟ್ಟಿದ್ದೇವೆ. ಈಗ ಇನ್ನೂರೈವತ್ತು ಪ್ರಜಾ ಸಂಖ್ಯೆಯ ಹಳ್ಳಿಗಳಿಗೆಲ್ಲ ಸ್ಕೂಲುಗಳನ್ನು ಕೊಡುತ್ತ ಹೋದರೆ ಇನ್ನೂ ಹೆಚ್ಚಿನ ಪ್ರಜಾ ಸಂಖ್ಯೆ ಇರುವ ಗ್ರಾಮಗಳವರು- ತಮಗೆ ಸ್ಕೂಲ್ ಕೊಡಲಿಲ್ಲ, ಹನುಮನ ಹಳ್ಳಿಯವರೂ ಗರುಡನ ಹಳ್ಳಿಯವರೂ ಬಾಳೆಹಣ್ಣಿನ ಗೊನೆಗಳನ್ನು ಕೊಟ್ಟಿದ್ದರಿಂದ ಇನ್ಸ್ಪೆಕ್ಟರು ಆ ಸಣ್ಣ ಹಳ್ಳಿಗಳಿಗೆಲ್ಲ ಇಸ್ಕೂಲು ಕೊಟ್ಟು ಬಿಟ್ಟರು ಎಂದು ನನ್ನನ್ನು ವೃಥಾ ದೂರುತ್ತಾರೆ. ಅಷ್ಟೇ ಅಲ್ಲ, ಕೇಳಿ, ಹನುಮನ ಹಳ್ಳಿಗೆ ಕೊಟ್ಟರೆ ಒಂದು ಗ್ರಾಂಟು ಸ್ಕೂಲನ್ನು ಕೊಡಬೇಕು. ಗ್ರಾಂಟು ಸ್ಕೂಲುಗಳು ಚೆನ್ನಾಗಿ ಕೆಲಸ ಮಾಡುವುದಿಲ್ಲ. ಗರುಡನ ಹಳ್ಳಿಯಲ್ಲೊಂದು, ಹನುಮನ ಹಳ್ಳಿಯಲ್ಲೊಂದು ಎರಡು ಕೆಲಸಕ್ಕೆ ಬಾರದ ಗ್ರಾಂಟ್ ಸ್ಕೂಲುಗಳನ್ನು ಕೊಟ್ಟರೆ ಪ್ರಯೋಜನವೇನು ? ಒಂದುವೇಳೆ ಹನುಮನ ಹಳ್ಳಿಗೆ ಸರಕಾರಿ ಸ್ಕೂಲನ್ನು ನಾನು ಕೊಟ್ಟರೆ ಪುನಃ ನಿಮನಿಮಗೆ ವ್ಯಾಜ್ಯ ಬೆಳೆಯುತ್ತದೆ. ಹನುಮನ ಹಳ್ಳಿಯವರಿಗೆ ಸರಕಾರಿ ಸ್ಕೂಲ್ ನಮಗೆ ಮಾತ್ರ ಗ್ರಾಂಟ್ ಸ್ಕೂಲ್ ! ಇದೇನು ಸ್ವಾಮಿ ನಿಮ್ಮ ನ್ಯಾಯ ? ಎಂದು ನನ್ನನ್ನು ಕೇಳುತ್ತೀರಿ. ಆದ್ದರಿಂದ ನಾನು ನನ್ನ ಸಲಹೆಯನ್ನು ಹೇಳುತ್ತೇನೆ. ಅದನ್ನು ಸ್ವಲ್ಪ ಆಲೋಚಿಸಿ. ಈಗ ಇಲ್ಲಿ ಮೂವರು ಕಕ್ಷಿಗಾರರಿದ್ದೇವೆ: ಗರುಡನ ಹಳ್ಳಿಯವರು, ಹನುಮನಹಳ್ಳಿಯವರು, ಮತ್ತು ನಾನು. ಮೂವರೂ ಹೊಂದಿಕೊ೦ಡು ಹೋಗೋಣ, ಈಗ ನಿಮ್ಮಿಬ್ಬರಿಗೂ ವೈಮನಸ್ಯ ಇದೆ. ಒಬ್ಬರು ಹೇಳಿದ್ದಕ್ಕೆ ಇನ್ನೊಬ್ಬರು ಪ್ರತಿ ಹೇಳುತ್ತೀರಿ. ಆದ್ದರಿಂದ ನಾನು ಹೇಳಿದಂತೆ ನೀವಿಬ್ಬರೂ ಕೇಳಿದರೆ ಚೆನ್ನಾಗಿರುತ್ತದೆ.'

'ಅದೇನು ಸ್ವಾಮಿ ? ಹೇಳಿ ನೋಡೋಣ' ಎಂದು ಚೇರ್ಮನ್ನು ಕೇಳಿದನು.

'ಆ ಎದುರಿಗಿರುವ ಹೊಲ ಯಾರಿಗೆ ಸೇರಿದ್ದು ? ಪೈರು ಚೆನ್ನಾಗಿ ಬಂದಿದೆ !' ಎಂದು ರಂಗಣ್ಣ ಕೇಳಿದನು

'ಅದು ಹನುಮನ ಹಳ್ಳಿಯ ರೈತನದು ಸ್ವಾಮಿ ! ಇಗೋ ಇಲ್ಲಿಯೇ ಇದ್ದಾನೆ ರೈತ' ಎಂದು ಶ್ಯಾನುಭೋಗನು ಹೇಳಿ ಒಬ್ಬ ರೈತನನ್ನು ಮುಂದಕ್ಕೆ ತಳ್ಳಿ ಹರಿಚಯಮಾಡಿಕೊಟ್ಟನು.

'ಈಗ ಆ ಜಮೀನಿನಲ್ಲಿ ಸ್ಕೂಲಿಗೆ ಬೇಕಾದಷ್ಟು ಜಾಗವನ್ನು ಹನುಮನ ಹಳ್ಳಿಯವರು ಮುಫತ್ತಾಗಿ ಕೊಡಲಿ. ಆ ರೈತನಿಗೆ ಹೇಳಿ ಅದನ್ನು ಕೊಡಿಸುವ ಜವಾಬ್ದಾರಿ ಶ್ಯಾನುಭೋಗರದು. ಆ ಜಾಗದಲ್ಲಿ ಗರುಡನ ಹಳ್ಳಿಯವರು ಕಟ್ಟಡ ಮುಫತ್ತಾಗಿ ಕಟ್ಟಿ ಕೊಡಲಿ, ಎಂತಿದ್ದರೂ ಕಲ್ಲುಗಳನ್ನೂ ಮರವನ್ನೂ ಶೇಖರಿಸಿಟ್ಟು ಕೊಂಡಿದ್ದಾರೆ. ಆ ಮಂಟಪವನ್ನು ಸರಿಪಡಿಸುವುದಕ್ಕೆ ಬದಲು ಅದೇ ಸಾಮಾನುಗಳಿಂದ ಇಲ್ಲಿ ಕಟ್ಟಡ ಎಬ್ಬಿಸಬಹುದು. ಇದರ ಜವಾಬ್ದಾರಿ ಚೇರ್ಮನ್ನರದು. ನನ್ನ ಜವಾಬ್ದಾರಿ: ಆ ಕಟ್ಟಡದಲ್ಲಿ ಇಬ್ಬರು ಮೇಷ್ಟರಿರುವ ಪಕ್ಕ ಸರಕಾರಿ ಸ್ಕೂಲನ್ನು ಸ್ಥಾಪಿಸುವದು. ಹೀಗೆ ನಾವು ಮೂವರೂ ನಮ್ಮ ನಮ್ಮ ಭಾಗದ ಕೆಲಸಗಳನ್ನು ಮಾಡಿ ಕೊಟ್ಟರೆ ಎರಡು ಹಳ್ಳಿಯ ಮಕ್ಕಳೂ ಉದ್ಧಾರವಾಗುತ್ತಾರೆ! ಏನು ಹೇಳುತ್ತಿರಿ ? ನೀವು ಒಪ್ಪಿದರೆ ಒಂದು ವಾರದೊಳಗಾಗಿ ಸರಕಾರಿ ಸ್ಕೂಲನ್ನು ಮಂಜೂರ್‌ ಮಾಡಿ ಕೊಡುತ್ತೇನೆ. ಅಷ್ಟರೊಳಗಾಗಿ ನೀವು ಮುಚ್ಚಳಿಕೆಗಳನ್ನು ಬರೆದು ಕೊಡಬೇಕು. ಜಮೀನಿನ ವಿಚಾರದಲ್ಲಿ ಛಾಫಾ ಕಾಗದದಲ್ಲಿ ಬರೆದು ರಿಜಿಸ್ಟರ್ ಮಾಡಿಸಿ ಇಲಾಖೆಗೆ ವಹಿಸಿಬಿಡಬೇಕು, ನನಗೆ ಜವಾಬು ಕೊಡಿ”-ಎಂದು ರಂಗಣ್ಣನು ಹೇಳಿದನು,

ಎರಡು ನಿಮಿಷಗಳ ಕಾಲ ಯಾರೂ ಮಾತನಾಡಲಿಲ್ಲ. ಶ್ಯಾನುಭೋಗನು ಜಮಾನಿನ ರೈತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ಏನನ್ನೊ ಬೋಧಿಸಿದನು. ಸ್ವಲ್ಪ ಹೊತ್ತಿನಮೇಲೆ ಅವರಿಬ್ಬರೂ ಹಿಂದಿರು ಗಿದರು. 'ಸ್ವಾಮಿ | ರೈತನು ಹತ್ತು ಗುಂಟೆ ಜಮಾನನ್ನು ಮುಫತ್ತಾಗಿ ಕೊಡಲು ಒಪ್ಪಿದ್ದಾನೆ. ಈಗಲೇ ಬರಿ ಕಾಗದದಲ್ಲಿ ಮುಚ್ಚಳಿಕೆ ಬರೆದು ಕೊಡುತ್ತಾನೆ. ನಾಳಿ ಜನಾರ್ದನಪುರಕ್ಕೆ ಬಂದು ಛಾಪಾ ಕಾಗದದಲ್ಲಿ ಬರೆಯಿಸಿ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ರಿಜಿಸ್ಟರ್ ಮಾಡಿಸಿಕೊಡುತ್ತಾನೆ, ಆದರೆ ಈಗಿರುವ ಬೆಳೆಯನ್ನು ರೈತ ತೆಗೆದುಕೊಳ್ಳುವುದಕ್ಕೆ ಮಾತ್ರ ಆವಕಾಶ ಕೊಡಿ.. ಇನ್ನು ಒಂದು ತಿಂಗಳಿಗೆ ಕೊಯ್ಲು ಆಗುತ್ತದೆ ಎಂದು ಶ್ಯಾನುಭೋಗರು ಹೇಳಿದನು. ರೈತನು ಅನುಮೋದಿಸಿದನು, ರಂಗಣ್ಣನೂ ಒಪ್ಪಿಕೊಂಡನು. ಚೇರ್ಮನ್ನು, 'ಸ್ವಾಮಿ ! ತಮ್ಮ ಇರಾದೆ ಯಂತೆ ಇಲ್ಲಿ ಕಟ್ಟಡ ಕಟ್ಟುತ್ತೇವೆ. ಆದರೆ ಮಂಟಪವನ್ನು ಸರಿಮಾಡುವುದಕ್ಕೆ ಲಾಗೋಡು ಹೆಚ್ಚು ಹಿಡಿಯುತ್ತಿರಲಿಲ್ಲ. ಪಾಯ ಹಿಂದೆ ಹಾಕಿದ್ದು ಭದ್ರವಾಗಿದೆ ; ಮೂರು ಕಡೆ ಗೋಡೆಗಳೂ ಈಗಿವೆ, ಇಲ್ಲಿ ಹೊಸದಾಗಿ ಕಟ್ಟಡ ಕಟ್ಟ ಬೇಕು. ಸರಕಾರದಿಂದ ಏನಾದರೂ ಗ್ರಾಂಟು ಸಹಾಯ ಮಾಡಿ ಸ್ವಾಮಿ ! ಎಂದು ಹೇಳಿದನು. ರಂಗಣ್ಣ, ಆಗಲಿ! ನೀವು ಹೇಳುವುದು ನ್ಯಾಯವಾಗಿದೆ. ಸರಕಾರದಿಂದ ಐನೂರು ರೂಪಾಯಿ ಗ್ರಾಂಟನ್ನು ಕೊಡಿಸಲು ಶಿಫಾರಸು ಮಾಡುತ್ತೇನೆ ; ಪ್ರಯತ್ನ ಪಟ್ಟು ಕೊಡಿಸುತ್ತೇನೆ ; ಉಳಿದ ಖರ್ಚೆಲ್ಲ ನಿಮ್ಮದು ' ಎಂದು ಹೇಳಿದನು, ಬಳಿಕ, ' ಶಂಕರಪ್ಪ ! ನೋಟುಮಾಡಿಕೊಳ್ಳಿ, ಈಗ ಹೊಸದಾಗಿ ಮಂಜೂರಾಗಿರುವ ಸರಕಾರಿ ಸ್ಕೂಲುಗಳಲ್ಲಿ ಒಂದು ಇಲ್ಲಿಗೆ ; ಇನ್ನೊಂದು ನಾಗೇನಹಳ್ಳಿಗೆ. ಉಳಿದುವನ್ನು ಆಮೇಲೆ ತಿಳಿಸುತ್ತೇನೆ. ಜನಾರ್ದನಪುರಕ್ಕೆ ಹೋದಮೇಲೆ ಆರ್ಡರುಗಳನ್ನು ಬರೆಯರಿ. ರುಜು ಮಾಡುತ್ತೇನೆ' ಎಂದು ರಂಗಣ್ಣ ಗುಮಾಸ್ತೆಗೆ ಹೇಳಿದನು. ಎಲ್ಲರಿಗೂ ಸಂತೋಷವಾಯಿತು. ಆ ಆಲದಮರದ ಕೆಳಗೆ ಕುಳಿತವರು ಅಲ್ಲಿಯೇ ಮುಚ್ಚಳಿಕೆಗಳನ್ನು ಬರೆದು ಕೊಟ್ಟರು. 'ಸ್ವಾಮಿ ! ಕೊಯ್ಲಾದ ಒಂದು ತಿಂಗಳೊಳಗಾಗಿ ಕಟ್ಟಡವನ್ನು ಕಟ್ಟಿ ಬಿಡುತ್ತೇವೆ. ಸರಕಾರಿ ಸ್ಕೂಲಿನ ಪ್ರಾರಂಭೋತ್ಸವಕ್ಕೆ ತಾವೇ ದಯಮಾಡಿಸಬೇಕು' ಎಂದು ಚೇರ್ಮನ್ನು ಹೇಳಿದನು. “ ಆಗಲಿ! ಬಹಳ ಸಂತೋಷದಿಂದ ಬರುತ್ತೇನೆ, ನೋಡಿ! ಹಾಳು ಒಂದು ಗ್ರಾಂಟ್ ಸ್ಕೂಲಿನ ಜಗಳದಲ್ಲಿ ರಸಬಾಳೆಹಣ್ಣಿನ ಗೊನೆಗಳನ್ನು ಬಹಳವಾಗಿ ಖರ್ಚು ಮಾಡಿದಿರಿ ! ಸರಕಾರಿ ಸ್ಕೂಲನ್ನು ಕೊಟ್ಟಿರುವ ನನಗೆ ಏನು ಇನಾಮು ಕೊಡುತ್ತೀರಿ' ಎಂದು ರಂಗಣ್ಣನು ನಗುತ್ತಾ ಹೇಳಿದನು.

“ತಾವು ಮಾಡಿರುವ ಉಪಕಾರಕ್ಕೆ ಬೆಲೆಯೇ ಇಲ್ಲ ಸ್ವಾಮಿ! ನಾವು ಹಳ್ಳಿಯ ಜನ, ಒರಟು ; ಏನೋ ಹುಚ್ಚು ಹಟ ಹಿಡಿದು ಕೋರ್ಟು ಕಚೇರಿಗಳನ್ನು ಹತ್ತಿ ನಷ್ಟ ಮಾಡಿಕೋತೇವೆ. ಬುದ್ಧಿ ಹೇಳಿ ಪಂಚಾಯತಿ ನಡೆಸೋ ಧಣಿಗಳು ಬರಬೇಕು, ಆಗ ನಾವೂ ಸುಧಾರಿಸುತ್ತವೆ ? ಎಂದು ಚೇರ್ಮನ್ನು ಹೇಳಿದನು.

“ಸ್ವಾಮಿ ! ಮನೆಗೆ ದಯಮಾಡಿಸಿ ಬಡವನ ಆತಿಥ್ಯ ಸ್ವೀಕಾರ ಮಾಡಬೇಕು' ಎಂದು ಶ್ಯಾನುಭೋಗನು ಆಹ್ವಾನವನ್ನು ಕೊಟ್ಟನು.

ಒಳ್ಳೆಯದು ನಡೆಯಿರಿ. ಬೆನ್ನು ಹತ್ತಿರುವ ಸುಖಪ್ರಾರಬ್ಧವನ್ನು ಅನುಭವಿಸಿರಬೇಕಲ್ಲ' ಎಂದು ರಂಗಣ್ಣನು ನಗುತ್ತ ಮುಚ್ಚಳಿಕೆಗಳನ್ನು ಶಂಕರಪ್ಪನಿಗೆ ಕೊಟ್ಟು ಹನುಮನ ಹಳ್ಳಿಯ ಕಡೆಗೆ ಹೊರಟನು. ಗರುಡನ ಹಳ್ಳಿಯವರು ಜೊತೆಯಲ್ಲಿಯೇ ಬಂದು ಹನುಮನ ಹಳ್ಳಿಯ ಪಂಚಾಯತಿಯ ಹಾಲಿನಲ್ಲಿ ಕುಳಿತರು. ರಂಗಣ್ಣನು ಶ್ಯಾನುಭೋಗರ ಮನೆಗೆ ಶಂಕರಪ್ಪನೊಡನೆ ಹೋದನು. ಅಲ್ಲಿ ಉಪಾಹಾರ ಸ್ವೀಕಾರ ಮಾಡುತ್ತ 'ಏನು ಶ್ಯಾನುಭೋಗರೇ! ಪಂಚಾಯತಿಯ ರೆಜಲ್ಯೂಷನ್ನಿನಲ್ಲಿ ಗರುಡನ ಹಳ್ಳಿಗೆ ಬದಲು ಹನುಮನ ಹಳ್ಳಿ ಎಂದು ಕೈ ತಪ್ಪಿನಿಂದ ಬಿದ್ದು ಹೋಯಿತೇ ?' ಎಂದು ಕೇಳಿದನು.

'ಕೈತಪ್ಪೂ ಇಲ್ಲ, ಏನೂ ಇಲ್ಲ ಸ್ವಾಮಿ ! ಆ ಚೇರ್ಮನ್ನು ಈಚೆಗೆ ನನ್ನ ಮೇಲೆ ಇಲ್ಲದ ಕಥೆ ಹರಡಿದ್ದಾನೆ. ಪಂಚಾಯತಿಯ ರೆಜಲ್ಲೂಷನ್ನುಗಳನ್ನು ಬರೆದಮೇಲೆ ಚೇರ್ಮನ್ನಿನ ರುಜು ಆಗುವ ಮೊದಲು ಗಟ್ಟಿಯಾಗಿ ಓದುವ ಪದ್ಧತಿ ಇದೆ. ಜೊತೆಗೆ ಚೇರ್ಮನ್ನು ಓದು ಬರಹ ತಿಳಿದವನು. ನಮ್ಮನ್ನು ನಂಬುವುದಿಲ್ಲ. ಎಲ್ಲವನ್ನೂ ತಾನೇ ಓದಿ ನೋಡಿಕೊಳ್ಳುತ್ತಾನೆ. ಆ ದಿನ ಚರ್ಚೆಯೇನೋ ಆಯಿತು. ಕಡೆಗೆ ಹನುಮನ ಹಳ್ಳಿಯಲ್ಲಿಯೇ ಸ್ಕೂಲನ್ನು ಸ್ಥಾಪಿಸಬೇಕೆಂದು ಬಹುಮತದಿಂದ ನಿರ್ಣಯವಾಯಿತು. ಹಾಗೆ ಚರ್ಚೆಯಾದ ವಿಚಾರವನ್ನು ಆತ ನೋಡದೆ ರುಜು ಮಾಡುವುದೆಂದರೇನು? ಮೇಷ್ಟು ಮೊದಲು ಆ ಹಳ್ಳಿಗೆ ಹೋಗಿ ಆರ್ಡರನ್ನು ತೋರಿಸಿದ. ಅಲ್ಲೇ ಅವನನ್ನು ನಿಲ್ಲಿಸಿಕೊಂಡು ಅಲ್ಲೇ ಸ್ಕೂಲ್ ನಡೆಸೋಣ ಎಂದು ಉಪಾಯ ಮಾಡಿದರು. ಸ್ವಾಮಿ ಪ್ರಮಾಣವಾಗಿ ಹೇಳುತ್ತೇನೆ.”

'ಹೋಗಲಿ ಬಿಡಿ, ಈಗ ನಾನು ಮಾಡಿದ ಏರ್ಪಾಟು ನಿಮಗೆ ಮೆಚ್ಚಿಕೆಯಾಯಿತೇ ?

'ಭೇಷ್ ಏರ್ಪಾಟು ಸ್ವಾಮಿ ! ಎಲ್ಲರಿಗೂ ತೃಪ್ತಿಯಾಯಿತು. ಒಂದುವೇಳೆ ಗರುಡನ ಹಳ್ಳಿಯವರು ಕಟ್ಟಡ ಕಟ್ಟಲಿಲ್ಲ ಅನ್ನಿ, ನಾವೇ ಕಟ್ಟಡ ಎಬ್ಬಿಸಲಿಕ್ಕೂ ಸಿದ್ಧರಿದ್ದೇವೆ. ಸರ್ಕಾರಿ ಸ್ಕೂಲು ನಮಗೆ ದೊರೆಯಿತಲ್ಲ ! ಅದೇ ನಮಗೆ ಪರಮಾನಂದ !'

ಉಪಾಹಾರ ಮುಗಿಯಿತು. ರಂಗಣ್ಣ ಶ್ಯಾನುಭೋಗನೊಡನೆ ಹೊರಟು ಪಂಚಾಯತಿ ಹಾಲಿಗೆ ಬಂದನು. ಅಲ್ಲಿ ಗರುಡನ ಹಳ್ಳಿಯವರು ರಸಬಾಳೆಯ ಹಣ್ಣುಗಳನ್ನೂ ಹಾಲನ್ನೂ ಇಟ್ಟು ಕೊಂಡಿದ್ದರು. 'ಸ್ವಾಮಿಯವರು ತೆಗೋಬೇಕು !' ಎಂದು ಚೇರ್ಮನ್ನು ಹೇಳಿ ತಟ್ಟೆಯನ್ನು ಮುಂದಿಟ್ಟನು. ಯಥಾಶಕ್ತಿ ಅವುಗಳನ್ನು ತೆಗೆದುಕೊಂಡು, ಎಲ್ಲರಿಂದಲೂ ನಮಸ್ಕಾರ ಮಾಡಿಸಿಕೊಂಡು, ಎಲ್ಲರಿಗೂ ತಾನೂ ನಮಸ್ಕಾರ ಮಾಡಿ ಜೋಡೆತ್ತಿನ ಗಾಡಿಯನ್ನು ರಂಗಣ್ಣ ಹತ್ತಿದನು. ಶಂಕರಪ್ಪ ಹಿಂದುಗಡೆ ಹತ್ತಿಕೊಂಡನು.

'ಶ್ಯಾನುಭೋಗರೇ ! ನಾಳೆಯೆ ಪತ್ರ ರಿಜಿಸ್ಟರ್ ಆಗಿ ಹೋಗಬೇಕು. ಪಾರ್ಟಿ ತನ್ನ ಮನಸ್ಸು ಬದಲಾಯಿಸಿಬಿಟ್ಟಾನು !' ಎಂದು ರಂಗಣ್ಣ ಹೇಳಿದನು.

'ನಾಳೆಯೇ ಬರುತ್ತೇನೆ ಸ್ವಾಮಿ ! ಇನ್ನು ಇದರಲ್ಲಿ ಯಾರೂ ಬದಲಾಯಿಸುವುದಿಲ್ಲ.' ಎಂದು ಶ್ಯಾನುಭೋಗನು ಉತ್ತರ ಕೊಟ್ಟನು.

ಗಾಡಿ ಹೊರಟಿತು. “ಬಹಳ ಸೊಗಸಾದ ಏರ್ಪಾಟನ್ನು ಮಾಡಿಬಿಟ್ಟರಿ, ಸ್ವಾಮಿ ! ಈ ತೊಡಕು ವ್ಯಾಜ್ಯ ಹೇಗೆ ತಾನೆ ಪರಿಹಾರವಾಗುತ್ತ ದೆಯೋ ? ಏನೇನು ಭಂಗಪಡಬೇಕೊ ? ಎಂದು ನಾನು ಹೆದರಿ ಕೊಂಡಿದ್ದೆ' ಎಂದು ಶಂಕರಪ್ಪ ಹೇಳಿದನು.

'ದೇವರು ಪ್ರೇರೇಪಣೆ ಮಾಡಿ ಹೇಗೋ ಪರಿಹಾರ ಮಾಡಿದನು ಶಂಕರಪ್ಪ ! ನನ್ನ ಕೈಯಲ್ಲಿ ಏನಿದೆ !'

ಪ್ರಕರಣ ೨೩

ಬೆಂಗಳೂರಿನಲ್ಲಿ

ಜನಾರ್ದನಪುರದ ಸಬ್ ರಿಜಿಸ್ಟ್ರಾರವರ ಕಚೇರಿಯಲ್ಲಿ ಪತ್ರ ರಿಜಿಸ್ಟರ್ ಆಗಿ ಹನುಮನ ಹಳ್ಳಿಯ ಜಮೀನಿನ ಭಾಗ ಇಲಾಖೆಯವರ ವಶಕ್ಕೆ ಬಂದಿತು. ರಂಗಣ್ಣ ಎಲ್ಲ ಸಮಾಚಾರಗಳನ್ನೂ ತಿಳಿಸಿ ಮೇಲಿನ ಅಧಿಕಾರಿಗಳಿಗೆ ವರದಿಯನ್ನು ಕಳಿಸಿ, ತಾನು ಮಾಡಿದ ಏರ್ಪಾಟಿಗೆ ಮಂಜೂರಾತಿಯನ್ನು ಕೊಡಬೇಕೆಂದು ಕೇಳಿಕೊಂಡನು. ಸಾಹೇಬರಿಂದ ಮಂಜೂರಾತಿಯ ಹುಕುಂ ಬಂದುದೊಂದೇ ಅಲ್ಲ ; ಏರ್ಪಾಟಿನ ಬಗ್ಗೆ ಪ್ರಶಂಸೆಯೂ ಬಂದಿತು, ರಂಗಣ್ಣನಿಗೆ ಪರಮ ಸಂತೋಷವಾಯಿತು. ನಾಗೇನಹಳ್ಳಿಗೊಂದು ಸರಕಾರದ ಸ್ಕೂಲು ಸಹ ಮಂಜೂರಾಯಿತು. ಅಲ್ಲಿಯ ಪಂಚಾಯತಿ ಮೆಂಬರುಗಳು ಜನಾರ್ದನಪುರಕ್ಕೆ ಬಂದು ಇನ್ಸ್ಪೆ ಕ್ಟರ್ ಸಾಹೇಬರಿಗೆ ತಮ್ಮ ಕೃತಜ್ಞತೆಯನ್ನು ಸೂಚಿಸಿದರು. ಅವರ ಜೊತೆಯಲ್ಲಿ ಕರಿಹೈದನೂ ಬಂದಿದ್ದನು. ' ಸೋಮಿ ? ಗಾಡಿಗೆ ಕಮಾನು ಕಟ್ಟಿವ್ನಿ, ತಾವು ಬರೋ ದಿವಸ ಮುಂದಾಗಿ ತಿಳ್ಸಿದ್ರೆ ಗಾಡಿ ತಂದು ಕರಕೊಂಡು ಹೋಗಿ, ಆರಾಮಾಗಿ ಕುಳಿತುಕೊಂಡು ಬರಬೋದು. ಈಗ ನೀರ ಹರವುಗಳ ಕಾಟಾನು ಇಲ್ಲ ಸೋ ಮಿ ! ” ಎಂದು ಹೇಳಿದನು. ರಂಗಣ್ಣನಿಗೆ ತಾನು ಮೊತ್ತ ಮೊದಲು ಕಂಬದಹಳ್ಳಿಗೆ ಭೇಟಿ ಕೊಟ್ಟಿದ್ದರ ಕಥೆಯೆಲ್ಲ ಸ್ಮರಣೆಗೆ ಬಂತು. ಕರಿಹೈದನಿಗೆ ತಾನು ಕೊಟ್ಟಿದ್ದ ಮಾತಿನಂತೆ ನಾಗೇನಹಳ್ಳಿಗೆ ಒಂದು ಸ್ಕೂಲನ್ನು ಕೊಡುವ ಸುಯೋಗ ಉ೦ಟಾಯಿತಲ್ಲ ಎಂದು ರಂಗಣ್ಣನು ಸಂತೋಷ ಪಟ್ಟನು. ಮುಂದಿನ ವಾರ ಪ್ರಾರಂಭೋತ್ಸವ ಇಟ್ಟುಕೊಳ್ಳಿ ; ಕರಿಹೈದ ಗಾಡಿ ತರಲಿ ; ಬರುತ್ತೇನೆ' ಎಂದು ಹೇಳಿ ಅವರನ್ನು ಬೀಳ್ಕೊಟ್ಟನು.

ಮೇಲೆ ಹೇಳಿದ ಸಂತೋಷದ ವಾತಾವರಣ, ಆ ದಿನ ಟಪ್ಪಾಲಿನಲ್ಲಿ ಬಂದ ಒಂದು ಕಾಗದದಿಂದ ಸ್ವಲ್ಪ ಕಲುಷಿತವಾಯಿತು, ಬೆಂಗಳೂರಿನ ದೊಡ್ಡ ಸಾಹೇಬರು - ಡೈರೆಕ್ಟರ್ ಸಾಹೇಬರು – ರಂಗಣ್ಣನನ್ನು ಕೆಲವು ರಿಕಾರ್ಡುಗಳೊಂದಿಗೆ ಕೂಡಲೇ ಬಂದು ತಮ್ಮನ್ನು ಕಾಣಬೇಕೆಂದೂ ಕೆಲವು ವಿಚಾರಗಳಿಗೆ ನೇರಾಗಿ ಸಮಜಾಯಿಷಿಗಳನ್ನು ಕೊಡಬೇಕೆಂದೂ ಕಾಗದ ಬರೆದಿದ್ದರು. ದೊಡ್ಡ ಬೋರೇಗೌಡರು ತನಗೆ ಹೇಳಿದ ವಿಷಯಗಳೆಲ್ಲ ರಂಗಣ್ಣನಿಗೆ ಜ್ಞಾಪಕಕ್ಕೆ ಬಂದುವು. ಅವನು ಚಿಂತಾಭರಿತನಾಗಿ ಆಲೋಚಿಸುತ್ತಿ ದ್ದಾ ಗ ಜನಾರ್ದನ ಪುರದ ಫೈಮರಿ ಸ್ಕೂಲಿನ ಹೆಡ್ಮೇಷ್ಟು ಬಂದು ಕೈ ಮುಗಿದನು

'ಏನು ಹೆಡ್ ಮೇಷ್ಟೆ ! ಈಗ ಸ್ಥಿತಿ ಹೇಗಿದೆ ? ಆ ಮನುಷ್ಯ ದಾರಿಗೆ ಬಂದಿದಾನೆಯೋ ? ' ಎಂದು ರಂಗಣ್ಣ ಕೇಳಿದನು.

'ಸ್ವಾಮಿ ! ಆ ಮನುಷ್ಯ ಬಾರಿಗೆ ಬರುವುದೆಂದರೇನು ? ಆತನಿಗೆ ಯಾರೂ ಲಕ್ಷ ವಿಲ್ಲ. ತಮ್ಮನ್ನೂ ಇಲಾಖೆಯ ಎಲ್ಲ ಅಧಿಕಾರಿಗಳನ್ನೂ ಬಾಯಿಗೆ ಬಂದ ಹಾಗೆ ಬಯ್ಯುತ್ತ - ಇವರಿಗೆಲ್ಲ ಕೆಲವು ದಿನಗಳಲ್ಲೇ ಮಾಡ್ತೇನೆ ; ಬಿಸಿ ಮುಟ್ಟಿಸ್ತೇನೆ - ಎಂದು ಹೇಳಿಕೊಳ್ಳುತ್ತಿದಾನೆ. ಪಾಠ ಶಾಲೆಯಲ್ಲಿ ಮನಸ್ಸು ಬಂದಾಗ ಒಂದಿಷ್ಟು ಪಾಠಮಾಡುತ್ತಾನೆ ; ಮನಸ್ಸಿಲ್ಲದಾಗ ಹುಡುಗರನ್ನು ಹೊರಕ್ಕೆ ಬಿಟ್ಟು ತಾನು ಬೆಂಚುಗಳನ್ನು ಜೋಡಿಸಿಕೊಂಡು ಮಲಗಿಬಿಡುತ್ತಾನೆ !'

'ಆತನಿಂದ ಏನಾದರೂ ಸಮಜಾಯಿಷಿ ಕೇಳಿದ್ದೀರಾ ? ಬರೆವಣಿಗೆಯಲ್ಲಿ ಏನಾದರೂ ಕೊಟ್ಟಿದ್ದಾನೆಯೇ ? '

'ಮೆಮೋ ಮಾಡಿ ಕಳಿಸಿದೆ ಸ್ವಾಮಿ ! ಸಮಜಾಯಿಷಿ ಕೊಡಲಿಲ್ಲ, ಮೆಮೋ ಪುಸ್ತಕವನ್ನೇ ಕಿತ್ತಿಟ್ಟು ಕೊಂಡು ಜವಾನನನ್ನು ವಾಪಸು ಕಳಿಸಿ ಬಿಟ್ಟಿದ್ದಾನೆ! ಈಗ ಮೆಮೊ ಮಾಡುವುದಕ್ಕೆ ಪುಸ್ತಕವೇ ನನಗಿಲ್ಲ ! '

'ನನ್ನನ್ನು ಕಾಣಬೇಕೆಂದು ನೀವು ಆತನಿಗೆ ಹೇಳಲಿಲ್ಲವೇ ? '

'ಹೇಳಿದೆ ಸ್ವಾಮಿ !- ನಾನೇಕೆ ಹೋಗಲಿ ಅವರನ್ನು ಕಾಣುವುದಕ್ಕೆ ! ಕಾಲಿಗೆ ಬೀಳೋದಕ್ಕೆ ಬೇಕಾಗಿದ್ದರೆ ಅವರೇ ನನ್ನನ್ನು ಬಂದು ಕಾಣಲಿ ! ಭೇಟಿ ಕೊಡುತ್ತೇನೆ !~ ಎಂದು ಜವಾಬು ಹೇಳಿದನು.'

'ಒಳ್ಳೆಯದು ಹೆಡ ಮೇಷ್ಟೆ ! ನಿಮ್ಮ ರಿಪೋರ್ಟಿನ ಮೇಲೆಯೇ ನಾನೇನನ್ನೂ ಮಾಡುವುದಕ್ಕಾಗುವುದಿಲ್ಲ. ನಾನು ಆತನ ಸಮಜಾಯಿಷಿ ಅದರ ನಕಲನ್ನು ತೆಗೆದು ಕಳಿಸಬೇಕೆಂದು ಆರ್ಡರ್ ಮಾಡುತ್ತೇನೆ. ಆತನಿಗೆ ಕೊಡಿ. ಅದನ್ನು ತೆಗೆದುಕೊಳ್ಳಲು ನಿರಾಕರಿಸಿದರೆ, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳಿಸಿ ದಾಖಲೆಯಿಟ್ಟುಕೊಳ್ಳಿ. ಆಮೇಲೆ ಮುಂದಿನ ಕಾರ್ಯಕ್ರಮವನ್ನು ಆಲೋಚಿಸುತ್ತೇನೆ. ಈಗ ನಾನು ಬೆಂಗಳೂರಿಗೆ ಹೋಗಿ ಬರಬೇಕು.

ರಂಗಣ್ಣ ಹೆಡ್‌ಮೇಷ್ಟರನ್ನು ಕಳಿಸಿಬಿಟ್ಟು ಉಗ್ರಪ್ಪನ ವಿಚಾರದಲ್ಲಿ ಆರ್ಡರ್ ಮಾಡಿ, ಆವಶ್ಯಕವಾದ ರಿಕಾರ್ಡುಗಳನ್ನು ಪೆಟ್ಟಿಗೆಯಲ್ಲಿ ಹಾಕಿಕೊಂಡು ಬೆಂಗಳೂರಿಗೆ ಪ್ರಯಾಣ ಮಾಡಿದನು, ತಾನು ನಿಸ್ಪೃಹನಾಗಿ ನಿರ್ವಂಚನೆಯಿಂದ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದರೂ ದೊಡ್ಡ ಸಾಹೇಬರುಗಳನ್ನು ಕಾಣುವುದು ಉತ್ಸಾಹಕರ ವಾದ ವಿಚಾರವಲ್ಲ- ಎನ್ನುವುದು ಅವನಿಗೆ ತಿಳಿದಿತ್ತು. ಅವರಿಂದ ಸಹಾಯ ಸಲಹೆ ಮತ್ತು ಪ್ರೋತ್ಸಾಹಗಳಿಗೆ ಬದಲು ಬೈಗಳು, ಟೀಕೆಗಳು ಮತ್ತು ತೇಜೋವಧೆಗಳೇ ದೊರೆಯುವ ಫಲಗಳೆಂದು ಮನಸ್ಸು ಗಟ್ಟಿ ಮಾಡಿ ಕೊಂಡಿದ್ದನು. ತಾವೇದಾರನ ಕರ್ತವ್ಯ ಪಾಲನೆ ನಡೆಯಲೆಂದು ಡೈರೆಕ್ಟರನ್ನು ನೋಡಿದ್ದಾಯಿತು ; ವಿಷಯಗಳನ್ನು ವಿವರಿಸಿದ್ದಾಯಿತು ; ದಾಖಲೆಗಳನ್ನು ತೋರಿಸಿದ್ದಾಯಿತು ; ಪಾಟಿ ಸವಾಲಿನ ಅಗ್ನಿ ಪರೀಕ್ಷೆಗೆ ಸಿಕ್ಕಿ ಕೊಂಡದ್ದೂ ಆಯಿತು. ಎಲ್ಲವೂ ಸರಿಯೆ, ಟ್ಯಾಕ್ಟ್ ಇಲ್ಲ' ಎಂದು ಅನ್ನಿಸಿಕೊಂಡು ಹಿಂದಿರುಗಿದ್ದಾಯಿತು. ಇನ್ನು ತಿಮ್ಮರಾಯಪ್ಪನನ್ನು ಕಂಡು ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಹೊರಟುಹೋಗೋಣವೆಂದು ಜುಗುಪ್ಸೆಯಿಂದ ರಂಗಣ್ಣನು ತಿಮ್ಮರಾಯಪ್ಪನ ಮನೆಗೆ ಹೋದನು, ಅವನು ಮನೆಯಲ್ಲೇ ನಿರೀಕ್ಷಣೆ ಮಾಡುತ್ತಾ ಕುಳಿತಿದ್ದನು. ಸ್ನೇಹಿತನು ಬರುವನೆಂದು ಸಂತೋಷಭರಿತನಾಗಿ, ಆ ದಿನ ಕಚೇರಿಯಿಂದ ಬರುತ್ತಾ ಆನಂದಭವನಕ್ಕೆ ಹೋಗಿ ತಿಂಡಿಗಳ ಪೊಟ್ಟಣಗಳನ್ನು ಕಟ್ಟಿಸಿಕೊಂಡು ಚೀಲದಲ್ಲಿ ಹಾಕಿಕೊಂಡು ಮನೆಗೆ ಬಂದಿದ್ದನು !

'ಏನು ರಂಗಣ್ಣ ! ಚೆನ್ನಾಗಿದ್ದೀಯಾ ? ಮನೆಯಲ್ಲಿ ಆಕೆ ಸೌಖ್ಯವಾಗಿದ್ದಾಳೆಯೆ ? ಮಕ್ಕಳು ಹೇಗಿದ್ದಾರೆ ? ಈ ದಿನದ ಭೇಟಿಯ ಪರಿಣಾಮ ಏನು ?' ಎಂದು ತಿಮ್ಮರಾಯಪ್ಪ ಕೇಳಿದನು.

'ಎಲ್ಲಾರೂ ಚೆನ್ನಾಗಿದ್ದಾರೆ! ಸೌಖ್ಯವಾಗಿದ್ದಾರೆ! ಭೇಟಿಯ ಪರಿಣಾಮ ಏನು ? ಎಂದು ಕೇಳುತ್ತೀಯೆ. ಎಲ್ಲವನ್ನೂ ಕಕ್ಕಿಬಿಡೋಣ ಎಂದು ಇಲ್ಲಿಗೆ ಬಂದಿದ್ದೆನೆ ??

'ಹಾಗೆಯೇ ಮಾಡು ರ೦ ಗ ಣ್ಣ ! ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕಿಬಿಟ್ಟು ಖಾಲಿ ಮಾಡಿಕೋ ! ಆಮೇಲೆ ಈ ಪೊಟ್ಟೆಗಳನ್ನೆಲ್ಲ ಹೊಟ್ಟೆಗೆ ಭರ್ತಿ ಮಾಡಬಹುದು !' ಎಂದು ತಿಮ್ಮರಾಯಪ್ಪನು ನಗುತ್ತಾ ಚೀಲದಲ್ಲಿದ್ದ ಪೊಟ್ಟಣಗಳನ್ನೆಲ್ಲ ತೆಗೆದು ತಟ್ಟೆಗಳಲ್ಲಿಟ್ಟನು. ಜಿಲೇಬಿ, ಮೈಸೂರು ಪಾಕು, ಸೋನಾಹಲ್ವ, ಉದ್ದಿನ ವಡೆ, ಕಾರದವಲಕ್ಕಿ, ಕಾರದ ಗೋಡಂಬಿ ಬೀಜ- ಅವನು ತಂದಿದ್ದ ತಿಂಡಿಗಳು ! ಅವು ಸಾಲದೆಂದು ಒಳಗೆ ಹೋಗಿ ರಸಬಾಳೆಹಣ್ಣು, ಬಿಸ್ಕತ್ತುಗಳು ಮತ್ತು ಕಾಫಿಯನ್ನು ತಂದು ಮೇಜಿನ ಮೇಲಿಟ್ಟನು.

'ಇದೇನಿದು ತಿಮ್ಮರಾಯಪ್ಪ ! ಈ ಭಾರಿ ಸಮಾರಾಧನೆ ?'

'ಅಹುದಪ್ಪ ! ಡೈರೆಕ್ಟ ರು ತಮ್ಮನ್ನು ಕಾಣುವುದಕ್ಕೆ ಬರಹೇಳಿದ್ದಾರೆ ಎಂದು ನೀವು ಕಾಗದ ಬರೆದಿರಲಿಲ್ಲವೇ ? ನೀನು ನಿನ್ನ ಹೊಟ್ಟೆಯಲ್ಲಿರುವುದನ್ನೆಲ್ಲ ಕಕ್ಕುವುದಕ್ಕೆ ಇಲ್ಲಿಗೆ ಬರುತ್ತೀಯೆಂದು ನನಗೆ ತಿಳಿದಿಲ್ಲವೇ ? ಖಾಲಿ ಹೊಟ್ಟೆಗೆ ಸಮಾರಾಧನೆಯ ಏರ್ಪಾಟನ್ನು ಮಾಡಬೇಡವೆ ?'

'ಕೈಗೆ ನೀರು ಕೊಡು ತಿಮ್ಮರಾಯಪ್ಪ ಕೈ ತೊಳೆದುಕೊಂಡುನನ್ನ ಆಗ್ರಹವನ್ನೆಲ್ಲ ತೀರಿಸಿಕೊಳ್ಳುತ್ತೇನೆ ! ತಿಮ್ಮರಾಯಪ್ಪನು ನೀರನ್ನು ತಂದು ಕೊಟ್ಟನು. ಸ್ನೇಹಿತರಿಬ್ಬರೂ ಕೈ ತೊಳೆದುಕೊಂಡು ಧ್ವಂಸನ ಕಾರ್ಯದಲ್ಲಿ ನಿರತರಾದರು.

'ನೋಡು ತಿಮ್ಮರಾಯಪ್ಪ ! ಇವರಿಗೆಲ್ಲ ಆ ರಾಜಕೀಯ ಮುಖಂಡರ ಪಿಶಾಚಿಗಳು ಬಲವಾಗಿ ಹಿಡಿದುಬಿಟ್ಟಿವೆ! ಹೆದರಿಕೊಂಡು ಸಾಯುತ್ತಾರೆ!- ನನ್ನನ್ನೇ ಅವರು ಲಕ್ಷ್ಯಮಾಡುವುದಿಲ್ಲ; ಇನ್ನು ಜುಜುಬಿ ಇನ್‌ಸ್ಪೆಕ್ಟರನ್ನು ಲೆಕ್ಕದಲ್ಲಿಡುತ್ತಾರೆಯೆ? ನೀವೇಕೆ ಅವರನ್ನೆಲ್ಲ ವಿರೋಧ ಮಾಡಿಕೊಂಡಿರಿ ? ನಿಮ್ಮ ರೆಕಾರ್ಡು ಕಟ್ಟಿಕೊಂಡು ಏನು ? ನಿಮ್ಮ ಕೆಲಸ ಮತ್ತು ದಕ್ಷತೆ ಕಟ್ಟಿಕೊಂಡು ಏನು ? ಆ ಮುಖಂಡರೆಲ್ಲ ದಿವಾನರಿಗೆ ಬೇಕಾದವರು, ದಿನಾಗಲೂ ಮೇಲಿಂದ ನಿಮ್ಮ ವಿಚಾರದಲ್ಲಿ ಕಾಗದಗಳು ಬರುತ್ತವೆ ! ನಾನೇನು ಸಮಾಧಾನ ಬರೆಯುತ್ತಿರಬೇಕು !~ ಎಂದು ಮುಂತಾಗಿ ನನ್ನನ್ನು ಝಂಕಿಸಿದರು, ನನಗೆ ಕೋಪ ಬಂತು, ಏನು ಸಾರ್ ! ಬದ್ಮಾತುಗಳೆಲ್ಲ ಮುಖಂಡರು ! ಅವರ ಮಾತು ನಿಮಗೆ ಮುಖ್ಯ. ಮನಸ್ಸಾಕ್ಷಿಗನುಸಾರವಾಗಿ ಕಷ್ಟ ಪಟ್ಟು ಕೆಲಸ ಮಾಡುವುದನ್ನು ನೋಡುವುದಿಲ್ಲ. ತಮಗೆ ತೃಪ್ತಿಯಿಲ್ಲದಿದ್ದರೆ ಈ ಕ್ಷಣ ಕೆಲಸಕ್ಕೆ ರಾಜೀನಾಮ ಕೊಟ್ಟು ತೊಲಗಿ ಹೋಗುತ್ತೇನೆ ಎಂದು ಜವಾಬು ಕೊಟ್ಟು ಬಿಟ್ಟೆ. ಅವರು ತಾಳ್ಮೆಗೆಡದೆ- ಉದ್ರೇಕಗೊಳ್ಳ ಬೇಡಿ ರಂಗಣ್ಣ ! ಕಾಲಸ್ಥಿತಿ ತಿಳಿದುಕೊಂಡು ನಾವು ನಡೆದುಕೊಳ್ಳಬೇಕು. ನಮ್ಮಲ್ಲಿ ಮುಖಂಡರ ನೈತಿಕ ಮಟ್ಟ ಬಹಳ ಕಳಕ್ಕಿದೆ ! ಮೇಲಿನವರಿಗೆ ಆ ಮುಖಂಡರ ಬೆಂಬಲ ಮತ್ತು ಓಟುಗಳು ಬೇಕಾಗಿವೆ ! ಸರಿಯಾದ ನೈತಿಕ ವಾತಾವರಣವಿಲ್ಲ, ಗುಣಗ್ರಾಹಿಗಳು ಯಾರೂ ಇಲ್ಲ. ಸ್ವಾರ್ಥ ಪರರ ಕೈವಾಡ ಪ್ರಬಲವಾಗಿದೆ. ನಮ್ಮಂಥವರಿಗೇನೆ ಕಿರುಕುಳಗಳಿವೆ ; ಮರ್ಯಾದೆ ಕೊಡುವುದಿಲ್ಲ, ಆದ್ದರಿಂದ ಟ್ಯಾಕ್ಟ್ ಉಪಯೋಗಿಸಬೇಕು ಎಂದು ನಿಮಗೆ ಬುದ್ಧಿ ಹೇಳಿದೆ- ಎಂದರು. ತಿಮ್ಮರಾಯಪ್ಪ ! ಅದೇನು ಹಾಳು ಟ್ಯಾಕ್ಟೊ ! ಒಬ್ಬರಾದರೂ ಹೀಗೆ ಮಾಡಿದರೆ ಟ್ಯಾಕ್ಟ್ ಎಂದು ತಿಳಿಸಿದವರಿಲ್ಲ, ಆ ಪದವನ್ನು ಕಂಡರೆ ನನಗೆ ಮೈ ಯಲ್ಲಿ ಉರಿದುಹೋಗುತ್ತದೆ ! ನಿಘಂಟಿನಲ್ಲಿ ಆ ಪದವೇ ಇಲ್ಲದಂತೆ ಅದನ್ನು ಹರಿದುಬಿಡೋಣ ಎನ್ನಿಸಿದೆ !'

'ಅಯ್ಯೋ ಶಿವನೇ ! ಇದೇನು ನಿನಗೆ ಹುಚ್ಚು ರಂಗಣ್ಣ ! ನಿನ್ನ ನಿಘಂಟನ್ನು ಹರಿದು ಹಾಕಿಕೊಂಡರೆ ಇಂಗ್ಲಿಷು ಭಾಷೆಯಿಂದ ಅದು ಹಾರಿಹೋಗುತ್ತದೆಯೆ ? ಆಕ್ಸಫರ್ಡ್ ಡಿಕ್ಷನರಿಯಿಂದ ವೆಬ್ ಸ್ಟೆರ್ ಡಿಕ್ಷನರಿಯಿಂದ ವಜಾ ಆಗಿಬಿಡುತ್ತದೆಯೆ ? ನೀನೂ ಟ್ಯಾಕ್ಟ್ ಇರೋ ಮನುಷ್ಯನೇ ! ಗರುಡನ ಹಳ್ಳಿ ಹನುಮನ ಹಳ್ಳಿಗಳ ವ್ಯಾಜ್ಯವನ್ನು ನೀನು ಪರಿಹಾರ ಮಾಡಿದೆಯಲ್ಲ ! ಅದು ಟ್ಯಾಕ್ಟ್ ಅಲ್ಲದೆ ಮತ್ತೆ ಏನು !'

'ಹಾಗಾದರೆ ನನ್ನನ್ನು ಇವರೆಲ್ಲ ಏಕೆ ಟೀಕಿಸುತ್ತಾರೆ ? ಟ್ಯಾಕ್ಸ್ ಉಪಯೋಗಿಸಬೇಕು ಎಂದು ಏಕೆ ಹೇಳುತ್ತಾರೆ.' 'ಹಾಗೆ ಹೇಳುವುದು ಸಾಹೇಬರುಗಳ ರೂಢಿ, ನಾವು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಟ್ಟು ಬಿಡಬೇಕು. ಅವರು ಏನಾದರೂ ಝಂಕಿಸಿದರೆ ಮನಸ್ಸಿಗೆ ಹಚ್ಚಿಸಿಕೊಳ್ಳಬಾರದು.

'ನನ್ನ ಅನುಭವ ಹೇಳುತ್ತೇನೆ ಕೇಳು ತಿಮ್ಮರಾಯಪ್ಪ ! ಒಬ್ಬ ಸಾಹೇಬರಾದರೂ ಕೆಳಗಿನವರಿಗೆ ಈ ರೀತಿ ಪಾಠಮಾಡಿ ; ತೋರಿಸುತ್ತೇನೆ, ತಿಳಿದು ಕೊಳ್ಳಿ ಎಂದು ಕಾರ್ಯತಃ ತೋರಿಸಿಕೊಟ್ಟವರಿಲ್ಲ! ಹೀಗೆ ತಿದ್ದಿಕೊಳ್ಳಿ - ಎಂದು ಸಲಹೆಗಳನ್ನು ಕೊಟ್ಟವರಿಲ್ಲ ! ಮರದ ತುಂಡಿನಂತೆ ಮರದ ಕುರ್ಚಿಯ ಮೇಲೆ ಕುಕ್ಕರಿಸಿದ್ದು, ತಮ್ಮ ಕೈ ಪುಸ್ತಕದಲ್ಲಿ ಏನನ್ನೋ ಕಿರಿಕಿಕೊಂಡು ಹೋಗುವುದು ; ದೊಡ್ಡ ದೊಡ್ಡದಾಗಿ ಇನ್‌ಸ್ಪೆಕ್ಷನ್ ರಿಪೋರ್ಟುಗಳನ್ನು ಬರೆದು ಮೊದಲಿಂದ ಕಡೆಯವರೆಗೂ ದೋಷೋದ್ಘಾಟನಮಾಡಿ ಹಳಿದುಬಿಡುವುದು | ನಮ್ಮ ಕಚೇರಿಗಳಿಗೆ ಬರುವುದು | ಒಂದು ಇಪ್ಪತ್ತು ರುಪಾಯಿ ಸಂಬಳದ ಗುಮಾಸ್ತೆ ಬರೆದಿಟ್ಟ ತನಿಖೆಯ ವರದಿಗಳನ್ನು ನಂಬಿಕೊಂಡು ಟೀಕೆಸುವುದು ! ತಾವು ಏತಕ್ಕೆ ನೋಡಬಾರದು? ನಮ್ಮನ್ನು ಕೂಡಿಸಿ ಕೊಂಡೋ ನಿಲ್ಲಿಸಿ ಕೊಂಡೋ ಏತಕ್ಕೆ ಕೇಳಬಾರದು ? ನಾವು ಅನನುಭವಿಗಳಾಗಿದ್ದು ತಪ್ಪು ಮಾಡಿದ್ದರೆ, ಈ ರೀತಿ ತಪ್ಪು ಮಾಡಬೇಡಿ ಎಂದು ಸಮಾಧಾನಚಿತ್ತದಿಂದ ಏತಕ್ಕೆ ಬುದ್ದಿ ಹೇಳ ಬಾರದು ” ಹಿಂದೆ ಒಬ್ಬರು ಸಾಹೇಬರು ಒಂದು ಕಡೆ ಹೈಸ್ಕೂಲ್ ಇನ್ ಸ್ಪೆಕ್ಷನ್ನಿಗೆ ಹೋದರು. ಅಲ್ಲಿ ಒಬ್ಬ ಸೈನ್ಸ್ ಮೇಷ್ಟರಿಗೆ ವರ್ಗವಾಗಿ ಬೇರೊಬ್ಬನು ಬಂದಿದ್ದನು. ಹೊಸಬನು ಬಂದು ಒಂದು ತಿಂಗಳು ಮಾತ್ರ ಆಗಿತ್ತು. ತನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಕೊಂಡು ಹೋಗುತ ಹೆಡ್ ಮಾಸ್ಟರವರ ಮೆಚ್ಚಿಕೆಯನ್ನು ಪಡೆದಿದ್ದನು. ಸಾಹೇಬರು ಪ್ರಾಕ್ಟಿಕಲ್ ವರ್ಕಿನ ಪುಸ್ತಕಗಳನ್ನು ತನಿಖೆ ಮಾಡಿದಾಗ ಹಿಂದಿನ ಅಭ್ಯಾಸಗಳನ್ನು ತಿದ್ದದೇ ಬಿಟ್ಟಿದ್ದ ದು ಅವರ ಗಮನಕ್ಕೆ ಬಂತು. ಮೇಷ್ಟರನ್ನು ಕರೆದು ಕೇಳಿದರು. ಆತ,- ಸಾರ್ ! ನಾನು ಬಂದು ಒಂದು ತಿಂಗಳು ಮಾತ್ರ ಆಯಿತು. ನಾನು ದೀರ್ಘ. ಖಾಯಿಲೆ ಬಿದ್ದಿದ್ದು ಈಚೆಗೆ ಸ್ವಲ್ಪ ಗುಣ ಹೊಂದಿ ಕೆಲಸಕ್ಕೆ ಬಂದವನು, ಹೆಡ್ ಮಾಸ್ಟರಿಗೂ ತಿಳಿದಿದೆ. ತಿದ್ದದೇ ಬಿಟ್ಟಿರುವ ಅಭ್ಯಾಸಗಳೆಲ್ಲ ಹಿಂದಿನ ಸೈನ್ಸ್ ಮೇಷ್ಟರ ಕಾಲದ್ದು, ನನ್ನ ಕಾಲದವನ್ನೆಲ್ಲ ನಾನು ತಿದ್ದಿದ್ದೇನೆ. ಹಿಂದಿನದನ್ನು ಕ್ರಮವಾಗಿ ಅವಕಾಶವಾದಾಗ ತಿದ್ದುತ್ತೇನೆ ಎಂದು ಸಮಜಾಯಿಷಿ ಹೇಳಿದನು. ಸಾಹೇಬರು ಸುಮ್ಮನೇ ಇದ್ದು ಎರಡು ತಿಂಗಳ ನಂತರ ರಿಪೋರ್ಟು ಕಳಿಸಿದಾಗ ಅದರಲ್ಲಿ ಆ ಹೊಸ ಮೇಷ್ಟರಿಗೆ ಗೂಟಗಳನ್ನು ಹಾಕಿ ರೋದೇ ! ಹಿಂದಿನ ಅಭ್ಯಾಸಗಳನ್ನು ಏಕೆ ತಿದ್ದಲಿಲ್ಲ? ಆ ಹೊಸ ಮೇಷ್ಟರಿಗೆ ದಂಡನೆ ಏಕೆ ಮಾಡಬಾರದು? ಎಂಬ ಬಗ್ಗೆ ಸಮಜಾಯಿಷಿ ತೆಗೆದು ಕಳಿಸಬೇಕೆಂದು ಹೆಡ್'ಮೇಷ್ಟರಿಗೆ ತಾಕೀತು ಕೊಡೋದೇ ! ಯಾರು ಮಾಡಿದ ತಪ್ಪಿಗೆ ಯಾರಿಂದ ಸಮಜಾಯಿಷಿ ? ಯಾರಿಗೆ ದಂಡನೆ ? ಆತ ನನ್ನ ಸ್ನೇಹಿತ. ನನ್ನ ಹತ್ತಿರ ಬಂದು ಹೇಳಿಕೊಂಡನು. ಇದೆಂತಹ ಹುಚ್ಚು ಆಡಳಿತ !?

'ಚೆನ್ನಾಗಿದೆ | ನಮ್ಮ ಇಲಾಖೆ ಬಹಳ ಸುಧಾರಿಸಬೇಕು ರಂಗಣ್ಣ!?

'ಈಗ ನಿನ್ನನ್ನೊ೦ದು ಸಲಹೆ ಕೇಳಬೇಕು ನೋಡು !

'ಕೇಳಪ್ಪ ಕೇಳು ! ಮತ್ತೆ ಯಾವನಾದರೂ ತಿರುಗಿ ಬಿದ್ದಿದ್ದಾನೋ? ಅಲ್ಲಿ ಇರುವವರು ಇಬ್ಬರು. ಮೂರನೆಯವನು ಯಾವನೂ ಇಲ್ಲವಲ್ಲ !?

'ಮೂರನೆಯವನು ಆ ಇಬ್ಬರ ಏಜೆಂಟು ? ಒಬ್ಬ ಮೇಷ್ಟು! ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರನ್ನೆ ಲಕ್ಷ್ಯಮಾಡದೆ ಒರಟು ಜವಾಬು ಕೊಟ್ಟ ಸಿಪಾಯಿ !!

'ಏನು ಅವನ ವಿಚಾರ ??

'ಅವನನ್ನು ಸಸ್ಪೆಂಡ್ ಮಾಡಿ ಬಿಡೋಣವೆಂದಿದ್ದೇನೆ.'

'ಅಯ್ಯೋ ಶಿವನೇ! ಏಕ್ ದಂ ಸಸ್ಪೆಂಡ್ ಮಾಡುತ್ತೀಯಾ? ಒಳ್ಳೆಯದಲ್ಲವಲ್ಲ ! ಜುಲ್ಮಾನೆ ಗಿಲ್ಮಾನೆ ಹಾಕಿ ನೋಡು.”

'ಅಷ್ಟಕ್ಕೆಲ್ಲ ಸಗ್ಗುವ ಮನುಷ್ಯನಲ್ಲ. ನೀನು ಎಂದರೆ ನಿಮ್ಮಪ್ಪ ಎನ್ನುವ ಗಟ್ಟಿ ಪಿಂಡ !?

'ಉಪಾಯದಲ್ಲಿ ವರ್ಗಮಾಡಿಸಿಬಿಡು.”

'ಹಿಂದೆ ಎರಡು ಬಾರಿ ವರ್ಗ ಆಗಿದ್ದು, ಸಾಹೇಬರುಗಳ ಹತ್ತಿರ ನಿಮ್ಮ ಮುಖಂಡರು ಹೋಗಿ ಅದನ್ನು ರದ್ದು ಮಾಡಿಸಿದರು. ಅವನು ತಲೆಯೆತ್ತಿಕೊಂಡು ಮೆರೆಯುತ್ತಿದ್ದಾನೆ. ಒಂದು ವೇಳೆ ಈಗ ಮೇಲಿನವರಿಗೆ ಹೇಳಿ ವರ್ಗ ಮಾಡಿಸಿದೆ ಅನ್ನು, ಅವನು ರಜಾ ತೆಗೆದುಕೊಂಡು ಜನಾರ್ದನಪುರದಲ್ಲೇ ನಿಲ್ಲುತ್ತಾನೆ. ಅವನ ಮೇಲೆ ನನ್ನ ಅಧಿಕಾರ ಏನೂ ಇರುವುದಿಲ್ಲ. ಆವನು ಕಿರುಕುಳ ಹೆಚ್ಚಾಗಿ ಕೊಡುತ್ತಾನೆ. ಜೊತೆಗೆ ಅವನು ಬಹಳ ಪುಂಡ ; ಅವನದು ಹೊಲಸು ಬಾಯಿ ; ಮೇಲೆ ಬೀಳುವುದಕ್ಕೂ ಹಿಂಜರಿಯೋ ಮನುಷ್ಯನಲ್ಲ !?

'ಹಾಗಾದರೆ ಅವನ ತಂಟೆಗೆ ಹೋಗಬೇಡ! ಬೇಕಾಗಿದ್ದರೆ ನೀನು ಎರಡು ತಿಂಗಳು ಕಾಲ ರಜಾ ತೆಗೆದುಕೊಂಡು ಬೆಂಗಳೂರಿಗೆ ಬಂದು ಬಿಡು. ಇಲ್ಲದಿದ್ದರೆ ಪುನಃ ಸಾಹೇಬರನ್ನು ಕಂಡು ಜನಾರ್ದನಪುರದಿಂದ ವರ್ಗ ಮಾಡಿಸಿಕೂ. ಬೇರೆ ರೇಂಜಿನಲ್ಲಿ ಕೆಲಸ ಮಾಡು.'

'ಈ ಹೇಡಿ ಸಲಹೆಯನ್ನು ನನಗೆ ಕೊಡುತ್ತೀಯಾ! ನಿನಗೆ ನಾಚಿಕೆಯಿಲ್ಲ!'

'ಅಯ್ಯೋ ಶಿವನೇ ? ಶಿವನೇ ! ಕುಳಿತುಕೋ ರಂಗಣ್ಣ ! ಇದೇನು ಉಗ್ರಾವತಾರ ! ಕುಳಿತುಕೊಂಡೇ ನನ್ನನ್ನು ಬಯ್ಯಿ ; ಬಯ್ಸಿಕೊಳ್ಳುತ್ತೇನೆ! ಹೊಡಿ, ಹೊಡಿಸಿಕೊಳ್ಳುತ್ತೇನೆ !'

'ಅವನಿಗೆ ಹೆದರಿಕೊಂಡು ರಜಾ ತೆಗೆದುಕೊ ಎಂದು ನನಗೆ ಹೇಳುತ್ತೀಯಲ್ಲ! ಹೆಡ್ ಮೇಷ್ಟ್ರ ಮಾತನ್ನು ಆ ಪುಂಡ ಕೇಳುವುದಿಲ್ಲ; ಪಾಠಶಾಲೆಯಲ್ಲಿ ಪಾಠ ಮಾಡುವುದಿಲ್ಲ ; ಹುಡುಗರನ್ನ ತರಗತಿಯಿಂದ ಅಟ್ಟಿ, ಬಿಡುತ್ತಾನೆ ; ಮೆಮೊ ಮಾಡಿದರೆ ಅಂಗೀಕರಿಸುವುದಿಲ್ಲ, ಜವಾನನಿಗೆ ಕೆನ್ನೆಗೆ ಹೊಡೆದು ದೂಡಿಬಿಡುತ್ತಾನೆ ; ಆ ಮೆಮೋ ಪುಸ್ತಕವನ್ನೇ ಕಿತ್ತಿಟ್ಟುಕೊಂಡು ಹೆಡ್‌ಮೇಷ್ಟನ್ನು ಸತಾಯಿಸುತ್ತಾನೆ ; ತನ್ನ ಮಾತಿಗೆ ಬಂದರೆ ಹೊಡೆದು ಅಪ್ಪಳಿಸುತ್ತೇನೆ ಎಂದು ಹೆಡ್‌ಮೇಷ್ಟರಿಗೆ ಹೆದರಿಸುತ್ತಾನೆ. ಈಗ ನೀನು ಕೊಡೋ ಸಲಹೆ ನೋಡು ! ಆ ದುಷ್ಟ ಮೇಷ್ಟರನ್ನು ಬಲಿ ಹಾಕಿ ಶಿಸ್ತು ಕಾಪಾಡುವುದಕ್ಕೆ ಬದಲು ಹೇಡಿಯಂತೆ ರೇಂಜು ಬಿಟ್ಟು ನಾನು ಓಡಿ ಹೋಗಬೇಕೇ ?

'ಸಮಾಧಾನ ಮಾಡಿಕೋ ರಂಗಣ್ಣ ! ನಿನ್ನ ಕ್ಷೇಮಕ್ಕಾಗಿ ನಾನು ಹೇಳಿದೆ ಹಾಳು ಗುಲಾಮಗಿರಿಗೋಸ್ಕರ ಯಾರೂ ಮೆಚ್ಚದ ಈ ಶಾಪೇ ದಾರಿ ಕೆಲಸಕ್ಕೋಸ್ಕರ ನೀನು ಅಪಾಯಕ್ಕೊಳಗಾಗಬಾರದು ಎನ್ನುವ ಅಭಿಪ್ರಾಯ ದಿಂದ ಹೇಳಿದೆ. ಈಗಾಗಲೇ ನೀನು ಆ ಮುಖಂಡರ ಬಲವದ್ವಿರೋಧ ಕಟ್ಟಿ ಕೊಂಡಿದ್ದೀಯೆ. ಯಾವ ಕಾಲಕ್ಕೆ ಏನು ಕೆಡುಕಾಗುವುದೋ ಎಂದು ನಾನು ಹೆದರುತ್ತಿದ್ದೇನೆ. ನೀನು ಒಂಟಿಯಾಗಿ ಕಾಡುದಾರಿಗಳಲ್ಲಿ ಸುತ್ತಾಡುತ್ತಾ ಇರುತ್ತೀಯೆ, ಅವರೂ ಮಹಾದುಷ್ಟರು ! ಪ್ರಬಲರು ! ನಿನ್ನದು ಇನ್ನೂ ಎಳೆಯ ಸಂಸಾರ ಆಲೋಚನೆ ಮಾಡು.'

'ನಾನು ಸಾಯುವುದಾದರೆ ಜನಾರ್ದನಪುರದಲ್ಲೇ ಸಾಯುತ್ತೇನೆ ! ಅಲ್ಲೇ ಭಸ್ಮವಾಗಿ ಹೋಗುತ್ತೇನೆ ! ನನ್ನ ಹಣೆಯಲ್ಲಿ ದುರ್ಮರಣ ಬರೆದಿದ್ದರೆ ಅದನ್ನು ತಪ್ಪಿಸುವುದಕ್ಕಾಗುತ್ತದೆಯೇ? ಹೇಡಿಯಾಗೆಂದು ಮಾತ್ರ ನನಗೆ ಹೇಳಬೇಡ, ಆ ದುಷ್ಟನನ್ನು ಬಲಿಹಾಕದ ಹೊರತು ನನಗೆ ಸಮಾಧಾನವಿಲ್ಲ. ಪಾಪ ! ಬಡ ಮೇಷ್ಟರುಗಳು ಎಷ್ಟೋ ಜನ ಇದ್ದಾರೆ! ಭಯ ಭಕ್ತಿಗಳಿಂದ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ! ಅವರ ವಿಷಯದಲ್ಲಿ ಕರುಣೆ ತೋರಿಸು ಎಂದು ಹೇಳು ; ಶಿರಸಾವಹಿಸಿ ನಡೆಯುತ್ತೇನೆ. ನೀನು ಹೇಳದೆಯೇ ನಾನು ಅವರ ತಪ್ಪುಗಳನ್ನೆಲ್ಲ ಮನ್ನಿಸಿ ರಕ್ಷಣೆ ಮಾಡಿಕೊಂಡು ಬರುತ್ತಿದೇನೆ. ಆ ಉಗ್ರಪ್ಪ ! ದೊಡ್ಡ ಪುಂಡ ! ಆ ಮುಖಂಡರ ಏಜೆಂಟು ! ಶುದ್ಧ ಅವಿಧೇಯ ! ಅವನ ಏಚಾರದಲ್ಲಿ ಕರುಣೆ ತೋರಿಸುವುದಿಲ್ಲ. ಅವನಿಗೆ ದಂಡನೆಯೇ ಔಷಧ ! ಅವನಿಗೆ, ಅವನ ಮುಖಂಡರಿಗೆ ನಾನು ಹೆದರುವುದಿಲ್ಲ ! '

'ಹಾಗಾದರೆ ಸಸ್ಪೆಂಡ್ ಮಾಡಲೇಬೇಕೆಂದು ತೀರ್ಮಾನಿಸಿದ್ದಿಯಾ ?'

'ಅವನು ತನ್ನ ನಡತೆ ತಿದ್ದಿಕೊಳ್ಳದಿದ್ದರೆ !”

'ಅವನು ತನ್ನ ನಡತೆಗಿಡತೆ ತಿದ್ದಿ ಕೊಳ್ಳೋದಿಲ್ಲ ರಂಗಣ್ಣ! ಅವನು ಬೇಕುಬೇಕೆಂತಲೇ ನಿನ್ನೊಡನೆ ಜಗಳಕ್ಕೆ ನಿಂತಿದ್ದಾನೆ. ಆದೆಲ್ಲ ಒಳ ಸಂಚು ನಿನಗೆ ಅರ್ಥವಾಗುವುದಿಲ್ಲ. ನಿನ್ನನ್ನು ಅವಮಾನಗೊಳಿಸಿ ಕಡೆಗೆ ಅಪಾಯಕ್ಕೂ ಈಡುಮಾಡಬೇಕು ಎಂಬುದು ಅವರ ಸಂಕಲ್ಪ. ಹಾಗಿಲ್ಲದಿದ್ದರೆ ಈಚೆಗೆ ಅವನೇಕೆ ತುಂಟಾಟವನ್ನು ಪ್ರಾರಂಭಿಸಿದ ! ಮೊದಲು ಸುಮ್ಮನೇ ಇದ್ದನಲ್ಲ !'

'ನನಗೂ ಆರ್ಥವಾಗಿದೆ ತಿಮ್ಮರಾಯಪ್ಪ ! ಆದ್ದರಿಂದಲೇ ಅವರಿಗೆ ಹೆದರಿಕೊಳ್ಳದೆ ಬಲಿಹಾಕಿಬಿಡೋಣವೆಂದು ತೀರ್ಮಾನಿಸಿದ್ದೇನೆ.'

'ಹಾಗಾದರೆ ಕೇಳು ರಂಗಣ್ಣ! ನಿನಗೆ ಆಪ್ತರಾದವರು, ನಿನ್ನಲ್ಲಿ ವಿಶ್ವಾಸ ಗೌರವವುಳ್ಳವರು ರೇ೦ಜಿನಲ್ಲಿ ಯಾರು ಯಾರು ಇದ್ದಾರೆ ? ಹೇಳು?

'ನಾನು ಅವರ ಮನಸ್ಸುಗಳನ್ನೆಲ್ಲ ಒಳಹೊಕ್ಕು ಪರೀಕ್ಷಿಸಿಲ್ಲ. ತಿಮ್ಮರಾಯಪ್ಪ ! ಬಹಳ ಜನ ಗ್ರಾಮಾಂತರಗಳಲ್ಲಿ ನನ್ನ ಬಗ್ಗೆ ವಿಶ್ವಾಸ ಮತ್ತು ಗೌವಗಳನ್ನಿಟ್ಟಿದ್ದಾರೆ ; ಹೋದಾಗೆಲ್ಲ ಆದರಿಸುತ್ತಾರೆ. ಮುಖ್ಯವಾಗಿ ರಂಗನಾಥಪುರದ ಗಂಗೇಗೌಡರು, ಆವಲಹಳ್ಳಿಯ ದೊಡ್ಡಬೋರೇಗೌಡರು ನನಗೆ ಆಪ್ತರೆಂದು ತಿಳಿದುಕೊಂಡಿದ್ದೇನೆ.'

'ಅವರು ನಮ್ಮ ಜನರಲ್ಲಿ ಭಾರೀ ಕುಳಗಳು ರಂಗಣ್ಣ ! ನನಗೆ ಬಹಳ ಸಂತೋಷ. ಇವರಿಗೆ ವರ್ತಮಾನ ಕೊಡು. ಆಮೇಲೆ ಪೊಲೀಸ್ ಇನ್ ಸ್ಪೆಕ್ಟರನ್ನು ಗುಟ್ಟಾಗಿ ಕಂಡು ಮಾತನಾಡು. ನಿನ್ನ ಕಚೇರಿಯ ಹತ್ತಿರ, ಮನೆಯ ಹತ್ತಿರ ಕಾನ್ಸ್ಟೇಬಲ್ಲುಗಳನ್ನು ಅವರು ಕಾವಲು ಹಾಕುತ್ತಾರೆ. ಉಗ್ರಪ್ಪನ ಓಡಾಟಗಳನ್ನು ಗಮನದಲ್ಲಿಡಲು ಗುಪ್ತಚಾರರನ್ನು ಬೆನ್ನ ಹಿಂದೆ ಹಾಕುತ್ತಾರೆ. ನೀನು ಆರ್ಡರನ್ನು ಹೊರಡಿಸಿದ ಕೂಡಲೆ ನನಗೆ ವರ್ತಮಾನಕೊಡು. ಒಂದು ತಿಂಗಳ ಕಾಲ ಸರ್ಕಿಟು ರದ್ದು ಮಾಡು, ಆಮೇಲೆ ಆಲೋಚನೆ ಮಾಡೋಣ.?

'ನೀನು ಹೇಳಿದ್ದೆಲ್ಲ ಸರಿ ತಿಮ್ಮರಾಯಪ್ಪ ! ಆದರೆ, ಹೆದರಿಕೊಂಡು ಸರ್ಕೀಟನ್ನು ಮಾತ್ರ ನಾನು ರದ್ದು ಮಾಡುವುದಿಲ್ಲ. ಉಳಿದ ಎಲ್ಲ ಸಲಹೆಗಳ೦ತೆ ನಡೆಯುತ್ತೇನೆ. ಸಿದ್ದಪ್ಪನವರನ್ನು ಭೇಟಿ ಮಾಡಿಸುತ್ತೇನೆಂದು ಹಿಂದೆ ಬರೆದಿದ್ದೆಯಲ್ಲ, ಅವರೇಕೆ ಇಲ್ಲಿಗೆ ಬರಲಿಲ್ಲ ?'

'ಆತನಿಗೆ ಊರು ಬಿಟ್ಟು ಹೋಗುವ ಜರೂರು ಕೆಲಸ ಗಂಟುಬಿತ್ತು. ಹೋಗಿದ್ದಾನೆ ; ನಾಳೆ ನಾಳಿದ್ದರಲ್ಲಿ ಬರುತ್ತಾನೆ. ಆತ ಮೇಲಿನವರನ್ನೆಲ್ಲ ಕಂಡು ಮಾತಾಡಿದ್ದಾನೆ. ಧೈರ್ಯವಾಗಿರು ; ಮೇಲಿನವರು ದಡ್ಡರೇನಲ್ಲ ; ಅವರಿಗೂ ನಿಜಾಂಶಗಳು ತಿಳಿದಿದೆ. ಅವರೆಲ್ಲ ಉಪಾಯದಿಂದ ವರ್ತಿಸುತ್ತಾರೆ.' 'ನಿನ್ನ ಸಿದ್ದಪ್ಪ ಎಂತಹ ಮನುಷ್ಯ ? ನನಗಂತೂ ಆತನ ಪರಿಚಯವೇ ಇಲ್ಲ. ನನ್ನ ವಿಚಾರದಲ್ಲಿ ಆತನು ಆಸಕ್ತಿ ವಹಿಸುತ್ತಾನೆಯೇ ? ಎಂದು ನನಗೆ ಸಂದೇಹವಿದೆ !

'ಆತ ಒಳ್ಳೆಯ ಮನುಷ್ಯ ! ಆಲೋಚನೆಮಾಡ ಬೇಡ. ಸ್ವಜನಾಭಿಮಾನ ಸ್ವಲ್ಪ ಇದೆ. ಆದರೆ ನೀಚತನ ಇಲ್ಲ. ಕಲ್ಲೇಗೌಡ, ಕರಿಯಪ್ಪ ಮುಂತಾದವರ ದುರ್ವಿದ್ಯೆಗಳು ಆತನಿಗೆ ಸರಿಬೀಳುವುದಿಲ್ಲ.'

ತಿಂಡಿ ಮುಗಿಯಿತು, ಮಾತೂ ಮುಗಿಯಿತು.

'ನಾನು ನನ್ನ ತಂಗಿಯ ಮನೆಗೆ ಹೋಗಬೇಕು. ಊಟ ಬೇಕಾಗಿಲ್ಲ ; ಹೊಟ್ಟೆ ಭರ್ತಿ ಯಾಗಿದೆ. ಆದರೆ ನನಗಾಗಿ ಆಕೆ ಏನಾದರೂ ಬಿಸಿ ಅಡುಗೆ ಮಾಡಿಟ್ಟುಕೊಂಡಿದ್ದರೆ ಆಗ ಹೊಟ್ಟೆಗೆ ಸ್ವಲ್ಪ ತ್ರಾಸ ಕೊಡ ಬೇಕಾದೀತು !' ಎಂದು ಹೇಳುತ್ತ ರಂಗಣ್ಣ ಎದ್ದು ನಿಂತುಕೊಂಡನು.

'ಒಳ್ಳೆಯದು ! ಹೊರಡು ರಂಗಣ್ಣ ! ಪೊಲೀಸ್ ಇನ್ಸ್ಪೆಕ್ಟರನ್ನು ಕ೦ಡು ಮುಂದಾಗಿ ಏರ್ಪಾಟು ಮಾಡಿಕೋ. ನನಗೆ ಆದಷ್ಟು ಬೇಗ ವರ್ತಮಾನ ಕೊಡು. ಬಹಳ ಎಚ್ಚರಿಕೆಯಿಂದ ಇರು ' ಎಂದು ಹೇಳಿ

ಬೆನ್ನು ತಟ್ಟಿ ತಿಮ್ಮರಾಯಪ್ಪ ಗೇಟಿನವರೆಗೂ ಜೊತೆಯಲ್ಲಿ ಬಂದು ರಂಗಣ್ಣನನ್ನು ಬೀಳ್ಕೊಟ್ಟನು.

ಪ್ರಕರಣ ೨೪

ಉಗ್ರಪ್ಪನ ಸನ್ ಪೆನ್ ಶನ್

ಜನಾರ್ದನಪುರಕ್ಕೆ ಹಿಂದಿರುಗಿದ ಮೇಲೆ ರಂಗಣ್ಣ ಪೊಲೀಸ್ ಇನ್ ಸ್ಪೆಕ್ಟರ ಮನೆಗೆ ಹೋಗಿ ಪಾಠಶಾಲೆಯಲ್ಲಿ ನಡೆದುದನ್ನೆಲ್ಲ ತಿಳಿಸಿದನು. ಆ ಉಗ್ರಪ್ಪನ ವಿಚಾರದಲ್ಲಿ ಸಸ್ಪೆಂಡ್ ಮಾಡುವ ತೀವ್ರವಾದ ಕಾರ್ಯಕ್ರಮವನ್ನು ತೆಗೆದುಕೊಳ್ಳ ಬೇಕಾಗಿರುವುದೆಂದೂ, ಅದಕ್ಕೆ ಪ್ರತಿಕ್ರಿಯೆಯಾಗಿ ಅವನು ಪುಂಡಾಟ ನಡೆಸದಂತೆ ಕ್ರಮ ಕೈಗೊಳ್ಳಬೇಕೆಂದೂ ತಿಳಿಸಿದನು. ಪೊಲೀಸ್ ಇನ್ಸ್ಪೆಕ್ಟರು, " ನೋಡಿ ರಂಗಣ್ಣನವರೇ ! ಆ ಮನುಷ್ಯನ ಮೇಲೆ ಬಹಳ ಪುಕಾರುಗಳಿವೆ. ನಾವು ಕೆಟ್ಟ ದಾರಿಗೆ ಹೋಗಬಾರದು, ನಿಮ್ಮ ಇಲಾಖೆಯವರಿಗೆ ತಿಳಿಸಿ ಬಂದೋ ಬಸ್ತು ಮಾಡೋಣ ಎಂದು ಎರಡು ಮೂರು ಸಲ ಪ್ರಯತ್ನ ಪಟ್ಟೆವು, ಪ್ರಯೋಜನವಾಗಲಿಲ್ಲ. ನಿಮ್ಮ ಇಲಾಖೆಯವರೇ ಅವನನ್ನು ವಹಿಸಿಕೊಂಡು ಬಂದರು ; ಜನಾರ್ದನ ಪುರದಲ್ಲಿಯೇ ಇಟ್ಟರು. ಈಗ ನೀವೇನೋ ಸಸ್ಪೆಂಡ್ ಮಾಡುತ್ತೇನೆ, ಮುಂದೆ ಈ ರೇಂಜ್ ಮಾತ್ರವಲ್ಲ, ಈ ಡಿಸ್ಪಿ ಕೈ ತಪ್ಪಿಸಿ ವರ್ಗ ಮಾಡಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಆಗಲಿ ನೋಡೋಣ. ನನ್ನ ಕೈಯಲ್ಲಾದ ಸಹಾಯ ಮಾಡುತ್ತೇನೆ. ಆದರೆ ನೀವು ನನಗೆ ಒಂದು ರಹಸ್ಯ ದ ಕಾಗದ ಬರೆದು ಸಹಾಯಬೇಕೆಂದು ಕೇಳಬೇಕು, ಯಾವುದೊಂದು ದಾಖಲೆಯೂ ಇಲ್ಲದೆ ನಾನು ಜವಾಬ್ದಾರಿ ತೆಗೆದುಕೊಳ್ಳಲಾರೆ' ಎಂದು ತಿಳಿಸಿದರು. ಆಗಲಿ, ಬರೆದು ಕಳಿಸುತ್ತೇನೆ' ಎಂದು ಹೇಳಿ ರಂಗಣ್ಣ ಹೊರಟು ಬಂದನು.

ಒಂದು ವಾರವಾಯಿತು. ಉಗ್ರಪ್ಪನಿಂದ ಇನ್ಸ್ಪೆಕ್ಟರಿಗೆ ನೇರವಾಗಿ ಒಂದು ಕಾಗದ ಬಂತು. ಅದರಲ್ಲಿ, 'ನೀವು ಹೆಡ್‌ಮೇಷ್ಟರ ಚಾಡಿ ಮಾತುಗಳನ್ನು ಕೇಳಿಕೊಂಡು ನನ್ನ ಮೇಲೆ ಇಲ್ಲದ ಆರೋಪಣೆಗಳನ್ನು ಹೊರಿಸಿ ಸಮಜಾಯಿಷಿ ಕೇಳಿದ್ದೀರಿ, ನಾನು ನಿರಪರಾಧಿ' ಎಂದು ಬರೆದಿತ್ತು. ರಂಗಣ್ಣ ಅದನ್ನು ಕಡತಕ್ಕೆ ಸೇರಿಸಿ ಕಚೇರಿಯನ್ನು ಬಿಟ್ಟು ಪ್ರೈಮರಿ ಸ್ಕೂಲಿಗೆ ಹೊರಟನು. ಹೆಡ್ ಮಾಸ್ಟರ ಕೊಟಡಿಯಲ್ಲಿ ಕುಳಿತುಕೊಂಡು ಉಪಾಧ್ಯಾಯಯರ ಹಾಜರಿ ರಿಜಿಸ್ಟರ್ ಮೊದಲಾದ ದಾಖಲೆಗಳನ್ನು ನೋಡುತ್ತಿದ್ದಾಗ ಉಗ್ರಪ್ಪ ಅಲ್ಲಿಗೆ ಬಂದು ನಿಂತುಕೊಂಡನು. ಇನ್ ಸ್ಪೆಕ್ಟರಿಗೆ ನಮಸ್ಕಾರವನ್ನೆನೂ ಮಾಡಲಿಲ್ಲ. ಕಣ್ಣುಗಳನ್ನು ಅಗಲವಾಗಿ ಅರಳಿಸಿಕೊಂಡು ಇನ್ಸ್ಪೆಕ್ಟರನ್ನು ನೋಡಿದನು.

'ಏನು ಉಗ್ರಪ್ಪನವರೇ ! ಹಾಗೇಕೆ ಕಣ್ಣರಳಿಸಿ ನನ್ನನ್ನು ನುಂಗುವ ಹಾಗೆ ನೋಡುತ್ತೀರಿ? '

'ನನ್ನನ್ನು ಅವಿಧೇಯನೆಂದು ಹೇಳೋಣಾಯಿತು. ನನ್ನ ಸಮಜಾಯಿಷಿ ಕೇಳೋಣಾಯಿತು ! ಆ೦ಥ ಮಹಾಪುರುಷರನ್ನು ನೋಡುವುದಕ್ಕೆ ಎರಡು ಕಣ್ಣುಗಳು ಸಾಲದು ! ಇರುವ ಕಣ್ಣುಗಳನ್ನೇ ದೊಡ್ಡದು ಮಾಡಿಕೊಂಡು ನೋಡುತ್ತಿದೇನೆ !'

'ಹಾಗೆಲ್ಲ ಒರಟೊರಟಾಗಿ ಮಾತನಾಡಬಾರದು, '

'ಮಾತನಾಡುವ ರೀತಿಯನ್ನು ತಮ್ಮಿಂದ ಕಲಿಯಬೇಕಾಗಿಲ್ಲ. '

'ಇದು ಅವಿಧೇಯ ವರ್ತನೆ ! ಸಭ್ಯತೆಯಿಂದ ನಡೆದುಕೊಳ್ಳಿ ! '

'ರೂಲ್ಸು ರೆಗ್ಯುಲೇಷನು ತಿಳಿಯದೆ ಕಾರುಬಾರು ಮತ್ತು ದಬ್ಬಾಳಿಕೆ ನಡೆಸುವ ದರ್ಪದವರಿಗೆಲ್ಲ ನಾನು ಅವಿಧೇಯನೇ ! ನೀವು ಬೇಕಾದ್ದು ಮಾಡಿಕೊಳ್ಳಿ. ನಾನೂ ನಿಮಗೆ ತಕ್ಕದ್ದನ್ನು ಮಾಡುವ ಶಕ್ತಿ ಪಡೆದಿದ್ದೇನೆ. ಶೀಘ್ರದಲ್ಲಿಯೇ ಅದು ನಿಮ್ಮ ಅನುಭವಕ್ಕೆ ಬರುತ್ತದೆ.'

ರಂಗಣ್ಣ ಮುಂದೆ ಮಾತಾಡದೆ ಕಚೇರಿಗೆ ಹೊರಟುಬಂದನು. ಸಸ್ಪೆಂಡ್ ಮಾಡಿರುವ ಆರ್ಡರನ್ನು ಹೊರಡಿಸಿ, ಪೊಲೀಸ್ ಇನ್ಸ್ಪೆಕ್ಟರಿಗೂ ಕಾಗದವನ್ನು ಬರೆದು ಆಳುಗಳ ಮೂಲಕ ಮುದ್ದಾಂ ಕಳಿಸಿಕೊಟ್ಟನು. ಸುಮಾರು ಒಂದು ಗಂಟೆಯೊಳಗಾಗಿ ಜನಾರ್ದನ ಪುರದಲ್ಲೆಲ್ಲ ದೊಡ್ಡ ಕೋಲಾಹಲವುಂಟಾಯಿತು! ಬೆಳಗ್ಗೆ ಹತ್ತೂವರೆ ಗಂಟೆಯಾಗಿದ್ದುದರಿಂದ ಪಾಠಶಾಲೆಯನ್ನು ಬಿಟ್ಟು ಬಿಟ್ಟಿದ್ದರು. ಆದರೆ, ಅದರ ಹತ್ತಿರ ಜನ ಗುಂಪು ಕಟ್ಟಿತ್ತು ಪೊಲೀಸ್ ಕಾನ್ ಸ್ಟೇಬಲ್ಲುಗಳು ಜನರನ್ನು ಬೆದರಿಸುತ್ತ ಇದ್ದರು. ಉಗ್ರಪ್ಪ ನು ತನಗೆ ಇನ್ಸ್ಪೆಕ್ಟರು ಹಿಂದಿನವರಂತೆ ಹೆದರಿ ಕೊಳ್ಳುವರೆಂದೂ ದಂಡನೆ ಇತ್ಯಾದಿಗಳ ಗೋಜಿಗೆ ಹೋಗದೆ ವರ್ಗಕ್ಕೆ ಮಾತ್ರ ಶಿಫಾರಸು ಮಾಡಬಹುದೆಂದೂ ತಿಳಿದುಕೊಂಡು ಧೈರ್ಯವಾಗಿದ್ದನು. ಆದರೆ ಹಠಾತ್ತಾಗಿ ಸಸ್ಪೆಂಡ್ ಮಾಡಿದ ಆರ್ಡರು ಬಂದು ಹೆಡ್ಮಾಸ್ಟರು ಅದನ್ನು ಓದಿ ಹೇಳಿ ಅದರ ನಕಲನ್ನು ಕೈಗೆ ಕೊಟ್ಟಾಗ ಕ್ಷಣಕಾಲ ಸ್ತಬ್ದನಾಗಿ ನಿಂತುಬಿಟ್ಟನು ! ಬಳಿಕ ಮಹಾ ಕೋಪದಿಂದ ಹೆಡ್ ಮೇಷ್ಟರ ಮೇಲೆ ಬಿದ್ದು ಹೊಡೆಯುವುದಕ್ಕೆ ಹೋದನು. ಆ ಹೆಡ್ ಮೇಷ್ಟ್ರು ಬೀದಿಗೆ ಓಡಿ ಬಂದು ಕಿರಿಚಿಕೊಂಡನು ! ಜನ ಸೇರಿಬಿಟ್ಟರು. ಅಷ್ಟರಲ್ಲಿ ದಫೇದಾರನೊಬ್ಬನು ನಾಲ್ಕು ಜನ ಕಾನಿಸ್ಟೇಬಲ್ಲುಗಳೊಡನೆ ಅಲ್ಲಿಗೆ ಬಂದನು. ಉಗ್ರಪ್ಪನಿಗೆ ಸಸ್ಪೆಂಡ್ ಆಗಿರುವ ವಿಚಾರ, ಅವನು ಹೆಡ್‌ಮೇಷ್ಟರನ್ನು ಹೊಡೆಯಹೋದುದು, ಪೊಲೀಸಿನವರು ಬಂದುದು - ಎಲ್ಲವೂ ಊರಿನಲ್ಲಿ ಹರಡಿ ಹೋಯಿತು ! ದಫೇದಾರನು ಉಗ್ರಪ್ಪನನ್ನು ಸಮಾಧಾನಗೊಳಿಸಿ, ಪಾಠಶಾಲೆಯ ಹತ್ತಿರ ಗಲಾಟೆ ಮಾಡದೆ ಹೊರಟುಹೋಗ ಬೇಕೆಂದು ತಿಳಿಸಿದನು ; ಏನಾದರೂ ಹೇಳಿಕೊಳ್ಳುವ ಅಹವಾಲಿದ್ದರೆ ಇನ್ಸ್ಪೆಕ್ಟರ್ ಸಾಹೇಬರ ಹತ್ತಿರ ಹೋಗಬಹುದೆಂದು ಬುದ್ಧಿ ಹೇಳಿದನು ; ಬೀದಿಯಲ್ಲಿ ಏನಾದರೂ ಮಾರಾಮಾರಿ ನಡೆಸಿ ಶಾಂತಿಭಂಗ ಮಾಡುವುದಾದರೆ ದಸ್ತಗಿರಿ ಮಾಡಿ ಪೊಲೀಸ್ ಸ್ಟೇಷನ್ನಿಗೆ ಕರೆದುಕೊಂಡು ಹೋಗುವುದಾಗಿ ಬೆದರಿಸಿದನು. ಮುನಿಸಿಪಲ್ ಕೌನ್ಸಿಲರಾದ ಚೆನ್ನಪ್ಪ ಮತ್ತು ಇತರರು ಉಗ್ರಪ್ಪನನ್ನು ಸಮಾಧಾನಗೊಳಿಸಿ ಕಚೇರಿಯ ಬಳಿಗೆ ಹೋಗೋಣ ಎಂದು ಕರೆದುಕೊಂಡು ಹೊರಟರು. ಹಿಂದೆ ಜನರ ಗುಂಪೂ ಹೊರಟಿತು. ಆದರೆ ಕಚೇರಿಯ ಹತ್ತಿರ ಇಬ್ಬರ ಕಾನ್ ಸ್ಟೇಬಲ್ಲುಗಳು ಮಾತ್ರ ಇದ್ದರು. ಇನ್ಸ್ಪೆಕ್ಟರು ಮನೆಗೆ ಹೊರಟು ಹೋಗಿದ್ದರು. ಆದ್ದರಿಂದ ಚೆನ್ನಪ್ಪನೂ ಉಗ್ರಪ್ಪನೂ ರಂಗಣ್ಣನ ಮನೆಯ ಕಡೆಗೆ ಹೊರಟರು. ಪೇಟೆಯ ಬೀದಿಗಳಲ್ಲಿ ಜನರ ಗುಂಪು ಹಿಂದೆ ಹಿಂದೆ ಹೋಗುತ್ತಿದ್ದುದರಿಂದ ಸಸ್ಪೆಂಡ್ ಆಗಿರುವ ವಿಚಾರವನ್ನು ಬೇರೆ ರೀತಿಗಳಲ್ಲಿ ಪ್ರಕಟ ಮಾಡಬೇಕಾಗಿಯೇ ಇರಲಿಲ್ಲ ! ಕಡೆಗೆ ಕೆರೆಯ ಹತ್ತಿರ ಪಾತ್ರೆಗಳನ್ನು ಬೆಳಗುತ್ತಿದ್ದ ಮತ್ತು ಬಟ್ಟೆಗಳನ್ನು ಒಗೆಯುತ್ತಿದ್ದ ಹೆಂಗಸರಿಗೂ ಆ ವರ್ತಮಾನ ಮುಟ್ಟಿತು ; ದೇವಸ್ಥಾನಗಳಲ್ಲಿ ಪೂಜೆ ಮಾಡುತ್ತಿದ್ದ ಭಕ್ತಾದಿಗಳಿಗೂ ಪೂಜಾರಿಗಳಿಗೂ ಆ ಸಮಾಚಾರ ಮುಟ್ಟಿತು; ಅಮಲ್ದಾರರ ಕಚೇರಿ ಮತ್ತು ಕೋರ್ಟುಗಳ ಹತ್ತಿರ ಸೇರಿದ್ದ ಜನರಿಗೆಲ್ಲ ಆ ಸಮಾಚಾರ ಮುಟ್ಟಿತು. ಜನರು ವಿಧವಿಧವಾಗಿ ಆಡಿಕೊಳ್ಳುತ್ತಿದ್ದರು. ದಿಣ್ಣೆಗಳ ಮೇಲೆ, ಕಟ್ಟೆಗಳ ಮೇಲೆ ಹೆಂಗಸರೂ ಗಂಡಸರೂ ನಿಂತುಕೊಂಡು ಆ ಮೆರವಣಿಗೆಯನ್ನು ನೋಡುತ್ತಿದ್ದರು. ಇನ್ ಸ್ಪೆಕ್ಟರ ಮನೆಯ ಹತ್ತಿರಕ್ಕೆ ಚೆನ್ನಪ್ಪನೂ ಉಗ್ರಪ್ಪನೂ ಬಂದರು. ರಂಗಣ್ಣ ಆ ಜನವನ್ನೂ, ಆ ಇಬ್ಬರನ್ನೂ ಕಿಟಕಿಯ ಮೂಲಕ ನೋಡಿದನು. ಹೊರಕ್ಕೆ ಬಂದು, ಮನೆಯ ಹತ್ತಿರ ನಾನು ಯಾರಿಗೂ ಭೇಟಿ ಕೊಡುವುದಿಲ್ಲ; ಕಚೇರಿಗೆ ಬಂದು ಅಹವಾಲನ್ನು ಹೇಳಿಕೊಳ್ಳಬಹುದು ; ಈಗ ಇಲ್ಲಿ ನಿಲ್ಲದೆ ಹೊರಟು ಹೊಗಿ ” ಎಂದು ಹೇಳಿದನು.

'ಸ್ವಾಮಿ ? ಒಂದು ನಿಮಿಷ, ಒಂದೇ ನಿಮಿಷ ನಾನು ಹೇಳುವುದನ್ನು ಕೇಳಿ ' ಎಂದು ಚೆನ್ನಪ್ಪನು ಹೇಳಿದನು,

'ಇಲ್ಲಿ ಆಗುವುದಿಲ್ಲ ಚೆನ್ನಪ್ಪ ನವರೇ ? ಕಚೇರಿಯ ಹತ್ತಿರ ದಯವಿಟ್ಟು ಬನ್ನಿ, ನೀವು ಹೇಳುವುದನ್ನೆಲ್ಲ ನಾನು ಸಾವಧಾನವಾಗಿ ಕೇಳುತ್ತೇನೆ' ಎಂದು ಉತ್ತರ ಕೊಟ್ಟು ರಂಗಣ್ಣನು ಹಿಂದಿರುಗಿದನು. ಎತ್ತ ಕಡೆಯಿಂದಲೋ ಇಬ್ಬರು ಕಾನ್‌ಸ್ಟೆಬಲ್ಲುಗಳು ಮುಂದೆ ಬಂದು, ಇನ್ ಸ್ಪೆಕ್ಟರ್ ಸಾಹೇಬರು ಹೇಳಿದಂತೆ ಮಾಡಿ, ಇಲ್ಲಿ ನಿಂತು ಕೊಳ್ಳಬೇಡಿ, ಹೋಗಿ ” ಎಂದು ಹೇಳಿ ಎದುರಿಗೆ ನಿಂತುಕೊಂಡರು, ಚೆನ್ನಪ್ಪನೂ ಉಗ್ರಪ್ಪನೂ ಬಹಳ ಅಪಮಾನ ಪಟ್ಟು ಕೊಂಡು ಹಿಂದಿರುಗಬೇಕಾಯಿತು. ಜನ ಸಂದಣಿ ಕ್ರಮಕ್ರಮವಾಗಿ ಕರಗಿ ಹೋಯಿತು

ಚೆನ್ನಪ್ಪನೂ ಉಗ್ರಪ್ಪನೂ ಹಿಂದಿರುಗಿ ಬರುತ್ತ ತಂತಮ್ಮಲ್ಲಿ ಆಲೋಚನೆ ಮಾಡತೊಡಗಿದರು. ಉಗ್ರಪ್ಪನು, ' ಈ ಇನ್ಸ್ಪೆಕ್ಟರಿಗೆ ಸಸ್ಪೆಂಡ್ ಮಾಡುವ ಅಧಿಕಾರವೇ ಇಲ್ಲ, ಅದು ಹೇಗೆ ಮಾಡಿದರು ? ಸಾಹೇಬರನ್ನು ಕಂಡು ಬರೋಣ, ನಡೆ. ಈ ಇನ್ ಸ್ಪೆಕ್ಟರ ಆರ್ಡರ್ ರದ್ದು ಮಾಡಿಸಿ ಆಮೇಲೆ ಮುಯ್ಯಿ ತೀರಿಸಿಕೊಳ್ಳೋಣ ” ಎಂದು ಹೇಳಿದನು. ಚೆನ್ನಪ್ಪನಿಗೆ ಆದು ಯುಕ್ತವಾಗಿ ತೋರಿತು. ಸಾಹೇಬರ ಬಳಿ ಇನ್ಸ್ಪೆಕ್ಟರ ಮೇಲೆ ಚಾಡಿ ಹೇಳಿ ಅವರ ಮನಸ್ಸನ್ನು ಕೆಡಿಸುವುದಕ್ಕೂ ಅವಕಾಶ ದೊರೆಯುವುದೆಂದು ನಿಷ್ಕರ್ಷೆ ಮಾಡಿಕೊಂಡು ಮಾರನೆಯ ದಿನ ಇಬ್ಬರೂ ಸಾಹೇಬರ ಕಚೇರಿಗೆ ಹೋಗಿ ಆಹವಾಲನ್ನು ಹೇಳಿಕೊಂಡರು. ಸಾಹೇಬರು ರಂಗಣ್ಣನನ್ನು ಚೆನ್ನಾಗಿ ಬಲ್ಲವರು. ಹಿಂದೆ ರಂಗನಾಥಪುರದ ಸಂಘದ ಸಭೆಯಲ್ಲಿ ಸಾಕ್ಷಾತ್ತಾಗಿ ರಂಗಣ್ಣನ ಕೆಲಸವನ್ನೂ ದಕ್ಷತೆಯನ್ನೂ ಪಾಂಡಿತ್ಯವನ್ನೂ ಆತ ಸಂಪಾದಿಸಿದ್ದ ಜನಾನುರಾಗವನ್ನೂ ನೋಡಿ ಮೆಚ್ಚಿ ಕೊಂಡಿದ್ದವರು. ಎರಡನೆಯದಾಗಿ, ಚೆನ್ನಪ್ಪನ ಮತ್ತು ಉಗ್ರಪ್ಪನ ಪೂರ್ವ ಚರಿತ್ರೆಗಳನ್ನೆಲ್ಲ ತಿಳಿದುಕೊಂಡಿದ್ದವರು. ಆದ್ದರಿಂದ ಅವರು ಮಾಡಿದ ಅಹವಾಲುಗಳಿಂದ ಅಷ್ಟೇನೂ ಪ್ರಯೋಜನವಾಗಲಿಲ್ಲ. ಸಾಹೇಬರು,

'ಸಸ್ಪೆಂಡ್ ಮಾಡುವ ಅಧಿಕಾರ ಇನ್ಸ್ಪೆಕ್ಟರಿಗೆ ಇದೆ. ಒಂದು ತಿಂಗಳು ಕಾಲ ಸಸ್ಪೆಂಡ್ ಮಾಡಬಹುದು. ಈಚೆಗೆ ಆ ವಿಚಾರಗಳಲ್ಲೆಲ್ಲ ಸರ್ಕಾರದ ಆರ್ಡರ್ ಆಗಿದೆ. ಆದ್ದರಿಂದ ನಾನು ಮಧ್ಯೆ ಪ್ರವೇಶಿಸುವ ಹಾಗಿಲ್ಲ. ಅವರಿಂದ ರಿಪೋರ್ಟು ಬಂದಮೇಲೆ ಕೇಸಿನ ವಿಮರ್ಶೆಮಾಡಿ ಯುಕ್ತವಾದುದನ್ನು ನಾನು ಮಾಡಬಹುದು. ನೀವುಗಳು ಅರ್ಜಿ ಕೊಟ್ಟರೆ ಅದನ್ನು ಇನ್ಸ್ಪೆಕ್ಟರಿಗೆ ಕಳಿಸಿ ವರದಿಯನ್ನು ತರಿಸಿಕೊಳ್ಳುತ್ತೇನೆ' ಎಂದು ಹೇಳಿದರು.

'ಇದು ಬಹಳ ಅನ್ಯಾಯ ಸ್ವಾಮಿ ! ವಿಚಾರಣೆಯಿಲ್ಲದೆ ಏಕದಂ ಸಸ್ಪೆಂಡ್ ಮಾಡಿಬಿಟ್ಟಿದ್ದಾರೆ! ತಾವು ಖುದ್ದು ಬಂದು ವಿಚಾರಣೆ ಮಾಡುವುದಾಗಿಯೂ ಅಲ್ಲಿಯವರೆಗೆ ಸಸ್ಪೆನ್ಷನ್ ಆರ್ಡರನ್ನು ತಡೆದಿಟ್ಟರಬೇಕೆಂದೂ ಒಂದು ಕಾಗದವನ್ನಾದರೂ ಬರೆದು ನಮ್ಮ ಕೈಗೆ ಕೊಡಿ. ನಾನು ಜವಾಬ್ದಾರಿಯ ಮನುಷ್ಯ ; ಜನಾರ್ದನಪುರದ ಮುನಿಸಿಪಲ್ ಕೌನ್ಸಿಲರು ! ಕಲ್ಲೇಗೌಡರು, ಕರಿಯಪ್ಪನವರು ನಮ್ಮ ಮುಖಂಡರು ! ಅವರಿಗೂ ಈ ವರ್ತಮಾನ ಕೊಟ್ಟಿದ್ದೇವೆ. ಇಂದೋ ನಾಳೆಯೋ ಇನ್ ಸ್ಪೆಕ್ಟರ ಆರ್ಡರ್ ರದ್ದಾಗಿ ಅವರಿಗೆ ತಕ್ಕ ಶಾಸ್ತಿಯಾಗುತ್ತದೆ !'

'ಮಧ್ಯೆ ನಾನು ಪ್ರವೇಶಿಸುವಹಾಗಿಲ್ಲ ಚೆನ್ನಪ್ಪನವರೇ ! ಇನ್ ಸ್ಪೆಕ್ಟರಿಗೆ ಅಧಿಕಾರವಿರುವಾಗ ನಾನು ಕೈ ಹಾಕಬಾರದು. ' 'ನಾವು ಅಪೀಲು ಮಾಡಿಕೊಳ್ಳಬಾರದೇ ಸ್ವಾಮಿ ?' ಎಂದು ಉಗ್ರಪ್ಪ ಕೇಳಿದನು.

'ಅಗತ್ಯವಾಗಿ ಅಪೀಲು ಮಾಡಿಕೊಳ್ಳಿ. ಅರ್ಜಿಯನ್ನು ಕೊಡಿ ಎಂದು ಹೇಳಿದೆನಲ್ಲ! ಅದನ್ನು ಇನ್ ಸ್ಪೆಕ್ಟರಿಗೆ ಕಳಿಸಿ ವಿವರಗಳನ್ನು ಕೇಳುತ್ತೇನೆ. ಅವರು ಮಾಡಿರುವುದು ನ್ಯಾಯವಾಗಿದ್ದರೆ ದಂಡನೆ ಸ್ಥಿರಪಡುತ್ತದೆ.”

'ಇನ್ ಸ್ಪೆಕ್ಟರಿಗೆ ನಮ್ಮ ಅರ್ಜಿಯನ್ನು ಕಳಿಸದೆ ನೀವೇ ವರದಿಯನ್ನು ತರಿಸಿಕೊಳ್ಳಲಾಗುವುದಿಲ್ಲವೇ ಸ್ವಾಮಿ ?”

'ಕೈಯಲ್ಲಿ ಕಾಗದವಿಲ್ಲದೆ ನಾನೇನನ್ನೂ ಮಾಡುವುದಿಲ್ಲ,

'ಒಳ್ಳೆಯದು ಸ್ವಾಮಿ | ಅರ್ಜಿಯನ್ನು ಕೊಟ್ಟು ಹೋಗುತ್ತೇನೆ' ಎಂದು ಹೇಳಿ ಉಗ್ರಪ್ಪ ನು ಒಂದನ್ನು ಬರೆದು ಸಾಹೇಬರ ಕೈಗೆ ಕೊಟ್ಟನು. ತರುವಾಯ ಚೆನ್ನಪ್ಪನೂ ಉಗ್ರಪ್ಪ ನೂ ಸಾಹೇಬರ ಕೊಟಡಿಯಿಂದ ಹೊರಬಿದ್ದ ರು.

ಎರಡು ಮೂರು ದಿನಗಳೊಳಗಾಗಿ ರೇ೦ಜಿನ ಮೂಲೆಮೂಲೆಗಳಲ್ಲಿ ಉಗ್ರಪ್ಪನ ಸಸ್ಪೆಂಡು ವರ್ತಮಾನ ಡಂಗುರವಾಗಿ ಹೋಯಿತು. ಕರಿಯಪ್ಪ ಮತ್ತು ಕಲ್ಲೇಗೌಡರ ಕಡೆಯವರಾಗಿ ಸ್ವಲ್ಪ ತುಂಟಾಟ ಮಾಡುತಿದ್ದ ಮೂರು ನಾಲ್ಕು ಜನ ಉಪಾಧ್ಯಾಯರು ಪಾತಾಳಕ್ಕೆ ಇಳಿದು ಹೋದರು. ಉಳಿದ ಸಾಮಾನ್ಯ ಉಪಾಧ್ಯಾಯರಲ್ಲಿ ಹಲವರು ಆ ದಂಡನೆಯನ್ನು ಮೆಚ್ಚಿಕೊಂಡು, “ಭಾರಿ ಹುಲಿಯ ಷಿಕಾರಿ ಮಾಡಿ ಬಿಟ್ಟರು ಇನ್ ಸ್ಪೆಕ್ಟರು!' ಎಂದು ಹೊಗಳುತ್ತಿದ್ದರು. ಆದರೆ ಅವರೂ ಸ್ವಲ್ಪ ಭಯಗ್ರಸ್ತ ರಾದರು. ಭೀರುಗಳಾಗಿದ್ದ ಉಪಾಧ್ಯಾಯರಂತೂ ತಲ್ಲಣಿಸಿಹೋದರು. ಒಟ್ಟಿನಲ್ಲಿ ಇನ್ಸ್ಪೆಕ್ಟರನ್ನು ಕಂಡರೆ ಹಿಂದೆ ಇದ್ದ ವಿಶ್ವಾಸ ಮತ್ತು ಸಲಿಗೆಗಳು ಗೌರವ ಮತ್ತು ಭಯಗಳಿಗೆ ಪರಿವರ್ತನವಾದುವು. ವಿವರಗಳನ್ನು ತಿಳಿದು ಕೊಳ್ಳುವುದಕ್ಕಾಗಿ ಜನಾರ್ದನ ಪುರಕ್ಕೆ ಕೆಲವರು ಉಪಾಧ್ಯಾಯರು ಬಂದು ಹೋದರು; ಆದರೆ ಇನ್ ಸ್ಪೆಕ್ಟರಿಗೆ ಕಾಣಿಸಿ ಕೊಳ್ಳಲಿಲ್ಲ.

ನಡೆದ ಸಂಗತಿಯನ್ನು ತಿಳಿದು ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನ ಪುರಕ್ಕೆ ಆಗಮಿಸಿ ಚೆನ್ನಪ್ಪನ ಮನೆಯಲ್ಲಿ ಸಭೆ ಸೇರಿದ್ದರು. ಅತ್ತ ಕಡೆ ಗಂಗೇಗೌಡರು, ದೊಡ್ಡ ಬೋರೇಗೌಡರು, ಮತ್ತು ಬೊಮ್ಮನಹಳ್ಳಿ, ಗರುಡನ ಹಳ್ಳಿ, ಭ ರಮಂಗಲ, ಕೆಂಪಾಪುರ, ಗುಂಡೇನಹಳ್ಳಿ ಮೊದಲಾದ ಕಡೆಗಳಿಂದ ಚೇರ್ಮನ್ನರುಗಳು ಜನಾರ್ದನಪುರಕ್ಕೆ ಬಂದರು. ಹೀಗೆ ಎಂದೂ ಕಾಣದ ಮುಖಂಡರುಗಳ ಆಗಮನ ಸಮಾರಂಭಗಳು ಜನಾರ್ದನಪುರದ ಜನರನ್ನು ಆಕರ್ಷಿಸಿದುವು. ಬೆಂಗಳೂರಿ೦ದ ತಿಮ್ಮರಾಯಪ್ಪ ನು ಸಿದ್ದಪ್ಪನನ್ನು ಜೊತೆಗೆ ಕರೆದುಕೊಂಡು ರೈಲಿನಲ್ಲಿ ಬಂದಿಳಿದನು ! ಒಬ್ಬ ಮೇಷ್ಟ್ರ ಸಸ್ಪೆನ್ಷನ್ನಿನ ಪ್ರಕರಣದಲ್ಲಿ. ಮದುವೆಗೆ ಬರುವ ಬಂಧು ಬಳಗದಂತೆ ಇಷ್ಟಮಿತ್ರರು ಬಂದಿಳಿಯುತ್ತಿದ್ದರು ! ಯಾವ ಬೀದಿಯಲ್ಲಿ ನೋಡಲಿ, ಹೊರಗಿಂದ ಬಂದ ಮುಖಂಡರಲ್ಲಿ ಇಬ್ಬರು ಮೂವರು ಜನರ ಕಣ್ಣಿಗೆ ಬೀಳುತ್ತಲೇ ಇದ್ದರು ! ಈ ಸಂಭ್ರಮಗಳ ಜೊತೆಗೆ ಪ್ರೈಮರಿ ಸ್ಕೂಲಿನ ಮುಂದುಗಡೆಯ ಚೌಕದಲ್ಲಿ, ಸ್ಕೂಲ್ ಇನ್ಸ್ಪೆಕ್ಟರವರ ಕಚೇರಿಯ ಮುಂಭಾಗದಲ್ಲಿ, ರಂಗಣ್ಣನ ಮನೆಯ ಎದುರು ಜಗಲಿಯ ಮೇಲೆ ಹಿಂದೆ ಎಂದೂ ಕಾಣದಿದ್ದ ಕಾನ್ ಸ್ಟೇಬಲ್ಲುಗಳು ! ಗಳಿಗೆ ಗಳಿಗೆಗೂ ಕಬ್ಬೇಗೌಡನಿಗೂ ಕರಿಯಪ್ಪನಿಗೂ ವರ್ತಮಾನವನ್ನು ತಂದು ಹೇಳುತ್ತಿದ್ದ ಅವರ ಗುಪ್ತಚಾರರ ಓಡಾಟ ! ಹಲವು ಹಳ್ಳಿಗಳಿಂದ ಪಂಚಾಯತಿ ಚೇರ್ಮನ್ನರು ಮೊದಲಾದವರು ಇಸ್ ಸ್ಪೆಕ್ಟರ ಮನೆಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಹೊರಟುಬಂದರೆಂಬ ವರ್ತಮಾನ ಕೊಟ್ಟವನೊಬ್ಬ ! ಬೆಂಗಳೂರಿಂದ ಯಾರೋ ಇಬ್ಬರು ರೈಲಿಳಿದು ಇನ್ಸ್ಪೆಕ್ಟರ ಮನೆಗೆ ಹೋದರೆಂದು ವರ್ತಮಾನ ತಂದವನು ಮತ್ತೊಬ್ಬ ! ಆವಲಹಳ್ಳಿಯ ದೊಡ್ಡ ಬೋರೇಗೌಡರು ಇನ್ ಸ್ಪೆಕ್ಟರ ಮನೆಯಲ್ಲಿದ್ದಾರೆಂದು ವರ್ತಮಾನ ತಂದವನು ಮಗದೊಬ್ಬ! ರಂಗನಾಥಪುರದ ಗಂಗೇಗೌಡರೂ ಸಹ ಅಲ್ಲಿಗೆ ಹೋದರೆಂದು ಹೇಳುತ್ತಿದ್ದವನು ಒಬ್ಬ ! ಕಲ್ಲೇಗೌಡನೂ ಕರಿಯಪ್ಪನೂ ರುಜು ಮಾಡಿದ ಟೆಲಿಗ್ರಾಮುಗಳನ್ನು ದಿವಾನರಿಗೂ ಮಹಾರಾಜರಿಗೂ ರವಾನಿಸಿ ಹಿಂದಿರುಗಿದ ಬಂಟನೊಬ್ಬ ! ಚೆನ್ನಪ್ಪನ ಮನೆಯಲ್ಲಿ ಸಭೆ ವಿದ್ಯುದಾವೇಗಭರಿತವಾಗಿತ್ತು ! ಮಧ್ಯೆ ಮಧ್ಯೆ ಸ್ಫೋಟಗಳಾಗುತ್ತಿದ್ದುವು ! ಇತ್ತ ರಂಗಣ್ಣನ ಮನೆಗೆ ಸ೦ಚಾಯತಿ ಚೇರ್ಮನ್ನರುಗಳು ಹಲವರು ಬಂದು, ' ತಾವು ಮಾಡಿದ್ದು ಭೇಷಾಯಿತು ಸ್ವಾಮಿ ! ತುಂಟರನ್ನ ಮಟ್ಟಾ, ಹಾಕಬೇಕು. ನಾವೆಲ್ಲ ತಮ್ಮ ಬೆಂಬಲಕ್ಕಿದ್ದೇವೆ. ಈ ಊರಲ್ಲೇ ಇನ್ನೂ ಒಂದು ವಾರ ನಾವುಗಳು ಇದ್ದು ತಮಗೆ ಧೈರ್ಯ ಕೊಡುತ್ತೇವೆ? ಎಂದು ಮುಂತಾಗಿ ಭರವಸೆಗಳನ್ನು ನೀಡಿದರು. ಅವರ ಭರವಸೆಗಳಿಗೆ ಕೃತಜ್ಞತೆಯನ್ನು ಯಥಾಶಕ್ತಿ ಅವರಿಗೆ ಕಾಫಿ ತಿಂಡಿಗಳ ಉಪಚಾರಮಾಡಿ ರಂಗಣ್ಣ ಕಳಿಸಿಕೊಟ್ಟನು. ಬಳಿಕ ತಿಮ್ಮರಾಯಪ್ಪ ಸಂಗಡಿಗನೊಬ್ಬನೊಡನೆ ಮತ್ತು ಹಾಸಿಗೆಗಳನ್ನು ಹೊತ್ತುಕೊಂಡು ಬಂದ ಕೂಲಿಯವನೊಡನೆ, ಗೇಟು ತೆಗೆದು ಒಳಕ್ಕೆ ಬರುತ್ತಿದ್ದುದು ರಂಗಣ್ಣನ ದೃಷ್ಟಿಗೆ ಬಿತ್ತು. ಒಡನೆಯೆ ಸರಸರನೆ ಹೋಗಿ, ' ಇದೇನು ತಿಮ್ಮರಾಯಪ್ಪ ! ಹೇಳದೇ ಕೇಳದೇ ಏಕದಂ ಬಂದಿಳಿದು ಬಿಟ್ಟಿದ್ದೀಯೆ ? ಇವರು ಯಾರು ? ಕಾಗದ ಬರೆದಿದ್ದರೆ ನಾನೇ ಸ್ಟೇಷನ್ನಿಗೆ ಬರುತಿದ್ದೆನಲ್ಲ ! ನನ್ನ ಮನೆ ಹೇಗೆ ಗೊತ್ತಾಯಿತು ? ಎಂದು ಬಹಳ ಸಂಭ್ರಮದಿಂದ ಕೇಳಿದನು.

'ಈತನೇ ಸಿದ್ದಪ್ಪ ! ಇವರೇ ನನ್ನ ಸ್ನೇಹಿತರು ರಂಗಣ್ಣ !” ಎಂದು ತಿಮ್ಮರಾಯಪ್ಪ ಪರಸ್ಪರ ಪರಿಚಯ ಮಾಡಿಕೊಟ್ಟನು ರಂಗಣ್ಣನು ಸಿದ್ದಪ್ಪನವರ ಕೈ ಕುಲುಕಿ, ' ಬಹಳ ಸಂತೋಷ ನೀವು ಬಂದದ್ದು ' ಎಂದು ಉಪಚಾರೋಕ್ತಿಯನ್ನಾಡಿ ಇಬ್ಬರನ್ನೂ ಒಳಕ್ಕೆ ಕರೆದುಕೊಂಡು ಹೋದನು. ತನ್ನ ಕೊಟಡಿಯಲ್ಲಿ ಅವರಿಗೆಲ್ಲ ಸ್ಥಳ ಮಾಡಿಕೊಟ್ಟನು, ಕೂಲಿಯವನಿಗೆ ದುಡ್ಡು ಕೊಟ್ಟು ಕಳಿಸಿದನಂತರ, ' ತಿಮ್ಮರಾಯಪ್ಪ ! ಈ ದಿನ ನನಗೆ ಆಗಿರುವ ಸಂತೋಷವನ್ನು ಮಾತಿನಲ್ಲಿ ವರ್ಣಿಸಲಾರೆ' ಎಂದನು.

'ನೋಡು ರಂಗಣ್ಣ! ನೀನು ಆ ದಿನ ಸಾಯಂಕಾಲ ನನ್ನನ್ನು ಬಿಟ್ಟು ಹೋದಮೇಲೆ ರಾತ್ರಿಯಲ್ಲಿ ನಿನ್ನ ಯೋಚನೆಯೇ ಯೋಚನೆ! ಕಣ್ಣು ಮುಚ್ಚಿದ್ದರೆ ಶಿವನಾಣೆ ! ಈ ಎರಡು ಮೂರು ದಿನ ನನ್ನ ಪೇಚಾಟ ವನ್ನು ವರ್ಣಿಸಲಾರೆ ! ನಿನ್ನ ಕಾಗದ ಕೈಸೇರಿತು. ಒಡನೆಯೇ ಸಿದ್ದಪ್ಪನಲ್ಲಿಗೆ ಹೋಗಿ,- ಹೊರಡು, ಈ ಕ್ಷಣ ಇದ್ದಂತೆಯೇ ಹೂರಡು, ಮಾತುಗೀತು ಆಮೇಲೆ- ಎಂದು ಒತ್ತಾಯಮಾಡಿ ಹೊರಡಿಸಿಕೊಂಡು ಬಂದು ಬಿಟ್ಟೆ. ನಿನಗೆ ಹೇಗೆ ಕಾಗದ ಬರೆಯಲಿ ? ಬರೆದಿದ್ದರೆ ತಾನೆ ಏನು ? ಇನ್ನು ಎರಡು ಗಂಟೆಯಮೇಲೆ ನಿನ್ನ ಕೈ ಸೇರುತ್ತಿತ್ತು. ಕಾಗದಕ್ಕಿಂತ ಮೊದಲೇ ನಿನ್ನ ಮನೆಯಲ್ಲಿ ನಾವಿದ್ದೇವೆ ನೋಡು ! ಈ ಜನಾರ್ದನಪುರ ದಲ್ಲಿ ನಿನ್ನ ಮನೆ ಪತ್ತೆ ಮಾಡುವುದು ಏನು ಕಷ್ಟ ? ಯಾರ ಮನೆ ಮುಂದೆ ಕಾನ್ ಸ್ಟೇಬಲ್ಲುಗಳಿದ್ದಾರೆ ? ಹೇಳು ' ಎಂದು ನಗುತ್ತಾ ತಿಮ್ಮರಾಯಪ್ಪ ಕೇಳಿದನು.

'ಕಲ್ಲೇಗೌಡ ಮತ್ತು ಕರಿಯಪ್ಪ ಬಂದಿದ್ದಾರೆಯೇ ? ನಿಮ್ಮನ್ನೇನಾದರೂ ಬಂದು ಕಂಡರೇ ? ' ಎಂದು ಸಿದ್ದಪ್ಪ ಕೇಳಿದನು.

'ಅವರು ಈ ಊರಿಗೆ ಬಂದಿದ್ದಾರೆ. ಇಲ್ಲಿಯ ಮುನಿಸಿಪಲ್ ಕೌನ್ಸಿಲರ್ ಚೆನ್ನಪ್ಪ ನವರ ಮನೆಯಲ್ಲಿ ಇಳಿದುಕೊಂಡಿದ್ದಾರೆ. ನನ್ನನ್ನು ಕಾಣಲು ಅವರು ಬರಲಿಲ್ಲ. ?

'ಏನೇನು ನಡೆಯಿತು ? ವಿವರವಾಗಿ ತಿಳಿಸು ' ಎಂದು ತಿಮ್ಮರಾಯಪ್ಪ ಕೇಳಿದನು.

'ಎಲ್ಲ ಸಮಾಚಾರಗಳನ್ನೂ ನಿಧಾನವಾಗಿ ತಿಳಿಸುತ್ತೇನೆ. ಮೊದಲು ಕೈ ಕಾಲು ಮುಖಗಳನ್ನಾದರೂ ತೊಳೆದು ಕೊಂಡು ಕಾಫಿ ತೆಗೆದುಕೊಳ್ಳಿ, ನೀನು ಮಾಡುತ್ತಿದ್ದಂತೆ ಭಾರಿ ಸಮಾರಾಧನೆ ಮಾಡಲು ಶಕ್ತಿಯಿಲ್ಲ ! ಏನೋ ಕೈಲಾದಷ್ಟು ಆತಿಥ್ಯ ಮಾಡುತ್ತೇನೆ ! ” ಎಂದು ಹೇಳಿ ಅವರ ಕೈಗೆ ಟವಲ್ಲುಗಳನ್ನು ಕೊಟ್ಟು ನೀರ ಮನೆಗೆ ಕರೆದುಕೊಂಡು ಹೋದನು. ಅಲ್ಲಿಂದ ಹಿಂದಿರುಗುವ ವೇಳೆಗೆ ಕೊಟಡಿಯಲ್ಲಿ ಉಪಾಹಾರ ಸಿದ್ಧವಾಗಿತ್ತು : ಬೆಳ್ಳಿಯ ತಟ್ಟೆಗಳಲ್ಲಿ ಉಪ್ಪಿಟ್ಟು, ಬೋಂಡ, ಮೈಸೂರು ಪಾಕು ಮತ್ತು ಓಮ ಪುಡಿ ; ಬೆಳ್ಳಿಯ ಲೋಟಗಳಲ್ಲಿ ನೀರು ಮತ್ತು ಕಾಫಿ. ಆ ಹೊತ್ತಿಗೆ ದೊಡ್ಡ ಬೋರೇಗೌಡರೂ ಗಂಗೇಗೌಡರೂ ಗೇಟು ತೆಗೆದು ಒಳಕ್ಕೆ ಬರುತ್ತಿದ್ದರು. ರಂಗಣ್ಣ ಅವರನ್ನು ಎದುರುಗೊಂಡು ಸ್ವಾಗತವನ್ನು ನೀಡಿ ಕೊಟಡಿಗೆ ಕರೆದುಕೊಂಡು ಬಂದನು. ಇನ್ನೆರಡು ತಟ್ಟೆಗಳಲ್ಲಿ ಉಪಾಹಾರ ಬಂದು ಕುಳಿತುಕೊಂಡಿತು.

'ಏನು ಸ್ವಾಮಿ ! ಇಲ್ಲಿಯ ಸಂಘದ ಸಭೆ ಸೇರಿಸಿರುವಂತೆ ಕಾಣು ಇದೆಯಲ್ಲ!' ಎಂದು ದೊಡ್ಡ ಬೋರೇಗೌಡರು ನಗುತ್ತ ಕೇಳಿದರು. 'ನಮ್ಮ ಇನ್ ಸ್ಪೆಕ್ಟರು ಇದ್ದ ಕಡೆ ತಿಂಡಿ ಸಭೆ ಇದ್ದೆ ಇರುತ್ತೆ !? ಎಂದು ಗಂಗೇಗೌಡರು ಹೇಳಿದರು.

ಆ ಮುಖಂಡರು ಸಿದ್ದಪ್ಪನವರಿಗೆ ಅಪರಿಚಿತರೇನೂ ಅಲ್ಲ. ರಂಗಣ್ಣನೇನೋ ಎಲ್ಲರ ಪರಿಚಯಗಳನ್ನೂ ಪರಸ್ಪರವಾಗಿ ಮಾಡಿಕೊಟ್ಟನು. ಆಮೇಲೆ, 'ಇಂಥ ಮಿತ್ರಗೋಷ್ಠಿ ನನ್ನ ಮನೆಯಲ್ಲಿ ಸೇರುವುದು ಅಪರೂಪ. ಈ ದಿನ ಬೆಂಗಳೂರಿಂದ ಸ್ನೇಹಿತರು ಬಂದಿದ್ದಾರೆ. ಬೋರೇಗೌಡರೂ ಗಂಗೇಗೌಡರೂ ಇಲ್ಲಿಯೇ ಊಟಕ್ಕೆ ನಿಲ್ಲಬೇಕು? ಎಂದು ಹೇಳಿದನು, ಅವರು 'ಆಗಲಿ ಸ್ವಾಮಿ !' ಎಂದು ಒಪ್ಪಿಕೊಂಡರು. ಉಪಾಹಾರ ಮಾಡುತ್ತ ರಂಗಣ್ಣ ಎಲ್ಲ ವಿಷಯಗಳನ್ನೂ ವಿವರವಾಗಿ ತಿಳಿಸಿದನು. ಆ ಮಾತುಗಳು ಮುಗಿದಮೇಲೆ ಸಿದ್ದಪ್ಪ ಎದ್ದು , “ತಿಮ್ಮರಾಯಪ್ಪ ! ನೀನು ಇಲ್ಲೇ ಇರು. ನಾನು ಆ ಕಲ್ಲೇಗೌಡನನ್ನೂ ಕರಿಯಪ್ಪನನ್ನೂ ಕಂಡು ಬರುತ್ತೇನೆ. ನಮ್ಮ ಒಕ್ಕಲಿಗ ಜನಾಂಗಕ್ಕೇನೆ ಕೆಟ್ಟ ಹೆಸರು ತಂದುಬಿಟ್ಟರು ಆ ನೀಚರು!' ಎಂದು ಹೇಳಿ ಹೊರಬಿದ್ದನು.

ದಾರಿಯಲ್ಲಿ ಹೋಗುತ್ತಿದ್ದಾಗ ಚೆನ್ನಪ್ಪನ ಮನೆಯಲ್ಲಿ ಸಭೆ ಮುಗಿಸಿಕೊಂಡು ಆ ಮುಖಂಡರು ಪೇಟೆಯ ಕಡೆಗೆ ಹೊರಟಿದ್ದರು. ಅವರ ಜೊತೆಯಲ್ಲಿ ಚೆನ್ನಪ್ಪನೂ ಉಗ್ರಪ್ಪನೂ ಇದ್ದರು. ದೂರದಿಂದಲೇ ಕರಿಯಪ್ಪ ಸಿದ್ದಪ್ಪನನ್ನು ನೋಡಿ ಗುರುತಿಸಿ, ಕಲ್ಲೇಗೌಡನ ಕಡೆಗೆ ತಿರುಗಿಕೊಂಡು, “ನೋಡಿದೆಯಾ ? ಸಿದ್ದಪ್ಪ ಬಂದಿದ್ದಾನೆ! ಬೆಂಗಳೂರಿಂದ ಬಂದ ಇಬ್ಬರಲ್ಲಿ ಇವನೊಬ್ಬನೆಂದು ಕಾಣುತ್ತದೆ ! ಇನ್ನೊಬ್ಬನು ಯಾವನೋ ? ಇಸ್ಕೂಲ್ ಇನ್ ಸ್ಪೆಕ್ಟರ್ ಆದರೂ ಕೂಡ ಬಹಳ ಪ್ರಚಂಡರಾಗಿದ್ದಾರಲ್ಲ! ಭಾರಿ ಭಾರಿ ಮುಖಂಡರು ಅವರ ಮನೆ ಬಾಗಿಲಿಗೆ ಹೋಗಿ ಸಲಾಮು ಹಾಕುತ್ತಾರಲ್ಲ !' ಎಂದು ಬೆರಗಾಗಿ ಹೇಳಿದನು.

'ಅವರ ಮನೆಗೆ ಯಾರು ಬಂದರೋ ! ಇವನು ಯಾರಲ್ಲಿಗೆ ಬಂದನೋ ! ಇಬ್ಬರಿಗೂ ನೀನೇಕೆ ಗಂಟು ಹಾಕುತ್ತೀಯ? ಅಂತೂ ಈ ಸಂದರ್ಭದಲ್ಲಿ ಇವನು ಜನಾರ್ದನ ಪುರದಲ್ಲಿರುವುದು ಆಶ್ಚರ್ಯವೇ ಸರಿ.'

ಸಿದ್ದಪ್ಪನೂ ಆ ಮುಖಂಡರನ್ನು ದೂರದಿಂದ ನೋಡಿ, 'ಇಲ್ಲಿಯೇ ಸಿಕ್ಕಿದರು, ಒಳ್ಳೆಯದಾಯಿತು' ಎಂದುಕೊಂಡನು. ಒಬ್ಬರನ್ನೊಬ್ಬರು ಸಮೀಪಿಸಿದ ಮೇಲೆ, 'ಏನು ಸಿದ್ದಪ್ಪ ! ಆರೋಗ್ಯವಾಗಿದ್ದೀಯಾ ? ಏನಿದು ಅಪರೂಪವಾಗಿ ಜನಾರ್ದನಪುರಕ್ಕೆ ಭೇಟಿ?” ಎಂದು ಕಲ್ಲೇಗೌಡ ಕೇಳಿದನು.

'ಕೆಲಸವಿತ್ತಪ್ಪ ! ಬಂದಿದ್ದೇನೆ. ಬಂದ ಮೇಲೆ ನೀವೂ ಈ ಊರಿಗೆ ಬಂದಿದ್ದೀರಿ ಎಂದು ಗೊತ್ತಾಯಿತು. ಭೇಟಿ ಮಾಡೋಣ ಎಂದು ಹೊರಟುಬರುತ್ತಿದ್ದೆ.'

'ಇಲ್ಲಿ ಎಲ್ಲಿ ಇಳಿದುಕೊಂಡಿದ್ದೀಯೆ ?'

'ಇನ್‌ಸ್ಪೆಕ್ಟರ್ ರಂಗಣ್ಣನವರ ಮನೆಯಲ್ಲಿ. ಅವರು ನನಗೆ ತಿಳಿದವರು ! ಬೇಕಾದವರು !'

ಕಲ್ಲೇಗೌಡನೂ ಕರಿಯಪ್ಪನೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ತಮಗೆ ಎದುರು ಕಕ್ಷಿಯಾಗಿ ಸಿದ್ದಪ್ಪ ! ದಿವಾನರ ಹತ್ತಿರ ಸಲಿಗೆಯಿಂದ ಓಡಾಡುವ, ಮುಖಂಡರಲ್ಲಿ ಹೆಸರು ವಾಸಿಯಾದ, ನ್ಯಾಯ ವಿಧಾಯಕ ಸಭೆಯ ಸದಸ್ಯನಾದ ಸಿದ್ಧಪ್ಪ ! ಇಬ್ಬರ ಮುಖಗಳೂ .ಸ್ವಲ್ಪ ಕಳೆಗುಂದಿದುವು. 'ನೀನು ಬಂದದ್ದು ಒಳ್ಳೆಯದೇ ಆಯಿತು. ಬಾ ! ಚೆನ್ನಪ್ಪನ ಮನೆಗೆ ಹೋಗೋಣ. ಬೀದಿಯಲ್ಲೇನು ಮಾತು ! ಚೆನ್ನಪ್ಪನ ಮನೆಯಲ್ಲಿ ಊಟ ಮಾಡುವಿಯಂತೆ.

'ಊಟಕ್ಕೆ ನಾನು ಇನ್‌ಸ್ಪೆಕ್ಟರ ಮನೆಗೇನೆ ಹೋಗಬೇಕು. ಅಲ್ಲಿ ಅವಲಹಳ್ಳಿ ಯ ಗೌಡರು, ರಂಗನಾಥಪುರದ ಗೌಡರು ಇದ್ದಾರೆ !'

'ಎಲ್ಲರೂ ಸೇರಿ ಮೀಟಿಂಗ್ ನಡೆಸುತ್ತಿದ್ದೀರೇನೋ ! ಒಕ್ಕಲಿಗ ಮೇಷ್ಟರುಗಳನ್ನು ಸಸ್ಪೆಂಡ್ ಮಾಡಿಸಿ, ನೀವುಗಳು- ಒಕ್ಕಲಿಗ ಮುಖಂಡರು-ಆ ಇನ್ ಸ್ಪೆಕ್ಟರ ಮನೆಯಲ್ಲಿ ಔತಣದ ಭೋಜನ ಮಾಡುತ್ತೀರೋ ಸಂತೋಷದಿಂದ ನಲಿಯುತ್ತಿರೋ !'

'ಕಲ್ಲೇಗೌಡ ! ನಿನಗೆ ಈ ಕೋಮುವಾರು ಭಾವನೆ ಬಿಟ್ಟು ಬೇರೆ ಸದ್ಭಾವನೆ ಏನೂ ಇಲ್ಲವೇ ? ಈಗ ರೇಂಜಿನಲ್ಲಿ ನೂರಾರು ಜನ ಒಕ್ಕಲಿಗ ಮೇಷ್ಟರುಗಳಿದ್ದಾರಲ್ಲ. ಎಷ್ಟು ಜನಕ್ಕೆ ಸಸ್ಪೆಂಡ್ ಆಗಿದೆ ? ನೂರಾರು ಜನ ಒಕ್ಕಲಿಗರು ಗ್ರಾಮ ಪಂಚಾಯತಿ ಚೇರ್ಮನ್ನರುಗಳಾಗಿದ್ದಾರಲ್ಲ ! ಯಾರು ನಿನ್ನ ಹಾಗೆ ಇನ್‌ಸ್ಪೆಕ್ಟರನ್ನು ದೂರುತ್ತಾರೆ? ಎಲ್ಲರೂ ಅವರನ್ನು ಪ್ರಶಂಸೆ ಮಾಡುತ್ತಾರಲ್ಲ ! ನೀವಿಬ್ಬರು ಮಾತ್ರ ನಮ್ಮ ಜನಾಂಗಕ್ಕೆ ಕಳಂಕ ತಂದಿದ್ದೀರಿ. ಯಾರ ಬಾಯಲ್ಲಿ ನೋಡಲಿ ನಿಮ್ಮ ನೀಚತನದ ಮಾತೇ ಆಗಿದೆ !'

'ಏನು ಹೆಚ್ಚು ಮಾತನಾಡುತ್ತೀ ಸಿದ್ದಪ್ಪ ನೀನೇನು ನಮ್ಮ ನೀಚತನ ಕಂಡದ್ದು ?

'ಲೇ ಕರಿಯಪ್ಪ ! ಹುಷಾರಾಗಿರು ! ಕಂಡಿದ್ದೀನಿ ನಿಮ್ಮ ಬಂಡವಾಳವನ್ನೆಲ್ಲ ! ಹಿಂದೆ ನೀವಿಬ್ಬರೂ ಸೇರಿಕೊಂಡು ದಿವಾನರಿಗೆ ಔತಣ ಏರ್ಪಾಟುಮಾಡಿ ಹಳ್ಳಿಯವರ ಹತ್ತಿರವೆಲ್ಲ ಚಂದಾ ವಸೂಲುಮಾಡಿ ಅರ್ಧ ಹಣ ಜೇಬಿಗಿಳಿಸಿ, ನಿಮ್ಮ ಕೈಯಿಂದ ಔತಣ ಮಾಡಿಸಿದ ಹಾಗೆ ದಿವಾನರಿಗೆ ಭ್ರಾಂತಿ ಹುಟ್ಟಿಸಿದಿರಲ್ಲ ! ಅದೇನು ನೀಚತನ ಅಲ್ಲವೇ ? ನಿನ್ನ ಅಣ್ಣ ಬಡವ, ಗ್ಯಾಂಗ್ ಕೂಲಿ ಎಂದು ಸುಳ್ಳು ಸರ್ಟಿಫಿಕೇಟು ಬರೆದು, ಆ ಅಣ್ಣನ ಮಗನಿಗೆ ಫೇಲಾದ ಹುಡುಗನಿಗೆ- ಸ್ಟಾಲರ್ ಷಿಪ್ಪು ಕೊಡಿಸಿದೆಯಲ್ಲ ! ಬಡವನಾದ ಒಕ್ಕಲಮಗನಿಗೆ - ಪಾಸಾದವನಿಗೆ - ಸ್ಕಾಲರ್ ಷಿಪ್ ತಪ್ಪಿಸಿದೆಯಲ್ಲ ! ನಾಚಿಕೆಯಿಲ್ಲ ನಿನಗೆ? ಆ ಸೂಳೆ ಮುಂಡೆ ಯಾವಳೋ ಒಬ್ಬಳಿಗೆ ಜನಾರ್ದನಪುರಕ್ಕೆ ಪುನಃ ವರ್ಗ ಮಾಡಿಸಿಕೊಡ ಬೇಕು ಅಂತ ಶಿಫಾರಸ್ ಪತ್ರ ಕೊಟ್ಟಿದ್ದಲ್ಲದೆ ಅವಳನ್ನ ಇನ್ ಸ್ಪೆಕ್ಟರ ಮೇಲೆ ಎತ್ತಿ ಕಟ್ಟಿ ಡೈರೆಕ್ಟರ ಹತ್ತಿರ ಕರೆದು ಕೊಂಡು ಹೋಗಿ ಹಾಡಿ ಹೇಳಿಸಿದೆಯಲ್ಲ ! ಯಾವ ಚಂಡಾಲ ಮಾಡೋ ಕೆಲಸ ಅದು ? ಕಟ್ಟಡವನ್ನು ಸ್ಕೂಲಿಗೆ ಬಾಡಿಗೆಗೆ ತೆಗೆದುಕೊಂಡರೆ ಆ ಶಿಕಸ್ತು ಕಟ್ಟಡವನ್ನು ದುರಸ್ತು ಮಾಡದೆ ಬಾಡಿಗೆ ಮಾತ್ರ ತೆಗೆದುಕೊಳ್ಳುತ್ತಾ ಜಬರ್ದಸ್ತಿ ಮಾಡಿ ದಿವಾನರಿಗೆ ಕಾಗದ ಬರೆದನಲ್ಲ ಈ ಕಲ್ಲೇಗೌಡ ! ಪುಂಡ ಮೇಷ್ಟರು ಪೋಕರಿ ಮೇಷ್ಟರುಗಳನ್ನೆಲ್ಲ ಏಜೆಂಟರನ್ನಾಗಿ ಮಾಡಿಕೊಂಡು, ಅವರನ್ನೆಲ್ಲ ಇನ್ ಸ್ಪೆಕ್ಟರಮೇಲೆ ಎತ್ತಿಕಟ್ಟಿ, ಸ್ಕೂಲು ಕೆಲಸಗಳೇ ನಡೆಯದಂತೆ ಬದ್ಮಾಷ್ ಕೆಲಸ ಮಾಡಿದ್ದೀರಲ್ಲ ! ನಮ್ಮ ಜನಾಂಗದ ಮುಖಂಡರು, ದೇಶೋದ್ಧಾರಕರು ಎಂದು ಓಟಿನ ಬೇಟೆಗೆ ಹೊರಡುತ್ತೀರಿ! ಸುಳ್ಳು ಸುಳ್ಳು, ಅರ್ಜಿಗಳನ್ನು ದಿವಾನರಿಗೆ ಬರೆಯುತ್ತೀರಿ ! ದಿನ ಬೆಳಗಾದರೆ ಅವರ ಮನೆ ಬಾಗಿಲು ಕಾಯುತ್ತ ಚಾಡಿಗಳನ್ನು ಹೇಳುತ್ತೀರಿ! ಏನು ನಿಮ್ಮ ಬಾಳು ! ನೀಚತನ ಅಲ್ಲವೇನು ? ಕಷ್ಟ ಪಟ್ಟು ಕೆಲಸ ಮಾಡುತ್ತಿರುವ ಆ ಇನ್ಸ್ಪೆಕ್ಟರಿಗೆ ಬೆಂಬಲಿಗರಾಗಿ ನಿಂತು, ಮಕ್ಕಳಲ್ಲಿ ವಿದ್ಯಾಭಿವೃದ್ಧಿಯುಂಟಾಗುವಂತೆ ಸಹಾಯ ಮತ್ತು ಪ್ರೋತ್ಸಾಹಗಳನ್ನು ಮಾಡುವ ಬದಲು, ಒಂಟಿಯಾಗಿ ಸಿಕ್ಕಾಗ ಅವರನ್ನು ಕಡಿದು ಹಾಕಿಬಿಡೋಣವೆಂದು ಹಂಚಿಕೆ ಮಾಡುತ್ತಿರುವ ಪಾಪಿಗಳು ನೀವು ! ನಿಮ್ಮಲ್ಲಿ ಒಂದು ದೊಡ್ಡ ಗುಣ ಹೇಳಿ.'

ಕಲ್ಲೇಗೌಡನೂ ಕರಿಯಪ್ಪನೂ ಮಾತೇ ಆಡಲಿಲ್ಲ. ಸ್ವಲ್ಪ ಹೊತ್ತಾದ ಸಿದ್ಧಪ್ಪನು,

“ನಾನು ಎಲ್ಲ ವಿಚಾರಗಳನ್ನೂ ಕೌನ್ಸಿಲರಿಗೆ, ದಿವಾನರಿಗೆ ತಿಳಿಸಿದ್ದೇನೆ! ನಾಳೆ ಬೆಂಗಳೂರಿಗೆ ಹೋಗಿ ಅವರನ್ನು ನೀವು ಕಂಡರೆ, ನಿಮಗೆ ತಕ್ಕ ಮರ್ಯಾದೆ ಮಾಡುತ್ತಾರೆ! ನಾಳೆ, ನ್ಯಾಯಯವಿಧಾಯಕ ಸಭೆ ಸೇರಿದಾಗ ನಾನೇ ಸರಕಾರಕ್ಕೆ ನಿಮ್ಮ ವಿಚಾರಗಳಲ್ಲಿ ಪ್ರಶ್ನೆಗಳನ್ನು ಹಾಕಬೇಕೆಂದಿದ್ದೇನೆ.'

'ಸಿದ್ದಪ್ಪ ! ಆ ಕೆಲಸ ಮಾತ್ರ ಮಾಡಬೇಡ !'

ತನ್ನ ಮುಖಂಡರ ದೈನ್ಯಾವಸ್ಥೆಯನ್ನು ಉಗ್ರಪ್ಪ ನೋಡಿದನು. ಅವರ ಬೆಂಬಲ ತನಗಿದೆಯೆಂದು, ಅವರ ಪ್ರೇರಣೆಯಿಂದ ತಾನು ಧೂರ್ತನಾಗಿ ನಡೆದುಕೊಂಡೆನಲ್ಲ ! ಊರಲ್ಲೆಲ್ಲ ಅಪಮಾನ ಪಟ್ಟೆನಲ್ಲ ! ಎಂದು ವ್ಯಸನಪಟ್ಟನು.

'ಸಿದ್ದಪ್ಪ ! ಈಗ ನೀನು ಬಂದಿದ್ದೀಯೆ. ನಿನಗೆ ಇನ್ಸ್ಪೆಕ್ಟರು ಬೇಕಾದವರು, ಅವರಿಗೆ ಹೇಳಿ ಈ ಉಗ್ರಪ್ಪನ ಸಪ್ಪೆ ನ್ಷನ್ ವಜಾ ಮಾಡಿಸು.

'ಈ ಮೇಷ್ಟು ಕ್ಷಮಾಪಣೆ ಕಾಗದವನ್ನು ಬರೆದು ನನ್ನ ಕೈಗೆ ಕೊಡಲಿ ! ನನ್ನೊಡನೆ ಬಂದು ಇನ್ ಸ್ಪೆಕ್ಟರ ಕಾಲಿಗೆ ಬೀಳಲಿ ! ವಜಾ ಮಾಡಿಸುತ್ತೇನೆ. ನೀವೂ ಬನ್ನಿರಿ; ದ್ವೇಷ ಬಿಟ್ಟು ಅವರ ಸ್ನೇಹ ಸಂಪಾದನೆ ಮಾಡಿಕೊಳ್ಳಿ.' 'ನಾನು ಕ್ಷಮಾಪಣೆ ಪತ್ರ ಬರೆದು ಕೊಡುವುದಿಲ್ಲ' ಎಂದು ಉಗ್ರಪ್ಪ ಹೇಳಿಬಿಟ್ಟನು. 'ನಮಗೆ " ಆ ಇನ್ ಸ್ಪೆಕ್ಟರ ಸ್ನೇಹ ಗೀಹ ಬೇಕಾಗಿಲ್ಲ. ಅವರಲ್ಲಿಗೆ ಬರುವುದಿಲ್ಲ' ಎಂದು ಮುಖಂಡರು ಹೇಳಿಬಿಟ್ಟರು.

'ಹಾಗಾದರೆ ಮುಂದಕ್ಕೂ ದ್ವೇಷವನ್ನೇ ಸಾಧಿಸುತ್ತೀರೋ ?'

'ಮುಂದೆ ಏನು ಮಾಡುತ್ತೇವೆಯೋ ಹೇಳಲಾರೆವು ! ಅಂತೂ ಈಗ ನೀನು ನನಗೆ ಎದುರು ಕಕ್ಷಿ ಎಂಬುದನ್ನು ತಿಳಿದುಕೊಂಡಿದ್ದೇವೆ ! ಇನ್‌ಸ್ಪೆಕ್ಟರಿಗೂ ಜನಕಟ್ಟು ಇದೆ ; ಆದ್ದರಿಂದಲೇ ಅವರು ಹೀಗೆ ನಮಗೆ ಸವಾಲ್ ಹಾಕುತ್ತಿದಾರೆ ! ಎಂಬುದನ್ನು ತಿಳಿದು ಕೊಂಡಿದ್ದೇವೆ' ಎಂದು ಕಲ್ಲೇಗೌಡ ಹೇಳಿದನು.

'ತಿಳಿದುಕೊಂಡಿದ್ದರೆ ವಿವೇಕದಿಂದ ನಡೆದುಕೊಳ್ಳಿ' ಎಂದು ಹೇಳಿ

ಸಿದ್ದಪ್ಪ ರಂಗಣ್ಣನ ಮನೆಗೆ ಹಿಂದಿರುಗಿದನು.

ಪ್ರಕರಣ ೨೫

ನಾಗೇನಹಳ್ಳಿಯಲ್ಲಿ ಪ್ರಾರಂಭೋತ್ಸವ

ಕಲ್ಲೇಗೌಡನೂ ಕರಿಯಪ್ಪನೂ ಜನಾರ್ದನಪುರದಲ್ಲಿ ಎರಡು ದಿನಗಳಿದ್ದು ತಂತಮ್ಮ ಊರುಗಳಿಗೆ ಹಿಂದಿರುಗಿದರು. ಸಿದ್ಧಪ್ಪ ತಮಗೆ ಪ್ರತಿಕಕ್ಷಿಯಾಗಿದ್ದಾನೆಂದೂ, ದಿವಾನರಿಗೆ ತಮ್ಮ ವಿಚಾರಗಳನ್ನೆಲ್ಲ ಅವನು ತಿಳಿಸಿದ್ದಾನೆಂದೂ ಅರಿವಾದ ಮೇಲೆ ಆ ಮುಖಂಡರಿಬ್ಬರ ಹುರುಪು ಬಹುಮಟ್ಟಿಗೆ ಇಳಿದು ಹೋಯಿತು. ಆದರೆ ಇನ್ ಸ್ಪೆಕ್ಟರ ವಿಚಾರದಲ್ಲಿ ಛಲವೇನೂ ಕಡಮೆಯಾಗಲಿಲ್ಲ. ಬಹಿರಂಗವಾಗಿ ಪ್ರತಾಪಗಳನ್ನು ಕೊಚ್ಚಿಕೊಳ್ಳುವ ಬದಲು ಅಂತರಂಗವಾಗಿ ಕೆಡುಕನ್ನು ಬಗೆಯುತ್ತ, ಉಗ್ರಪ್ಪನಿಗೆ ಸ್ವಲ್ಪ ಸಮಾಧಾನ ಹೇಳಿ ಅವರು ಹೊರಟುಹೋದರು. ಅವರು ತೊಲಗಿಹೋದ ಮಾರನೆಯ ದಿನ ಸಿದ್ದಪ್ಪನೂ ತಿಮ್ಮರಾಯಪ್ಪನೂ ಬೆಂಗಳೂರಿಗೆ ಹೊರಡಲು ಸಿದ್ಧರಾದರು. ಆ ಅವಧಿಯಲ್ಲಿ ಸಿದ್ದಪ್ಪ ಅಮಲ್ದಾರರನ್ನೂ ಪೊಲೀಸ್ ಇನ್ಸ್ಪೆಕ್ಟರನ್ನೂ ಭೇಟಿ ಮಾಡಿದ್ದನು. ರಂಗಣ್ಣನಿಗೆ ಮೂರು ದಿನಗಳಿಂದ ಮನೆ ತುಂಬಿದಂತೆ ಇತ್ತು ; ಸ್ನೇಹಿತರೊಡನೆ ಸರಸ ಸಲ್ಲಾಪಗಳು, ತಿಂಡಿಗಳು, ಔತಣಗಳು – ಈ ಸಮಾರಂಭದಲ್ಲಿ ಬಹಳ ಸಂತೋಷವಾಗಿತ್ತು. ಅವರು ಹೊರಟುಹೋದಮೇಲೆ ಮನೆಯಲ್ಲಿ ಕಳೆಯೇ ಇರುವುದಿಲ್ಲವಲ್ಲ ಎಂದು ಚಿಂತಾಕ್ರಾಂತನಾದನು. ಕಡೆಗೆ ರೈಲ್ ಸ್ಟೇಷನ್ನಿಗೆ ಹೊರಟಿದ್ದಾಯಿತು. ರೈಲು ಬರುವ ಹೊತ್ತೂ ಆಯಿತು. ತಿಮ್ಮರಾಯಪ್ಪನು, ' ರಂಗಣ್ಣ ! ನೀನು ಬಹಳ ಎಚ್ಚರಿಕೆಯಿಂದಿರಬೇಕು. ಈಗ ನೀನು ನಿನ್ನ ಹಟವನ್ನೇನೋ ಸಾಧಿಸಿಕೊಂಡೆ ! ಆದರೆ ಅವರು ಬಹಳ ದುಷ್ಟರು, ಪ್ರಬಲರು. ನೀನು ಎರಡು ತಿಂಗಳ ಕಾಲ ರಜ ತೆಗೆದುಕೊಂಡು ಬೆಂಗಳೂರಿಗೆ ಬರುವುದು ಒಳ್ಳೆಯದು. ಒಂದು ವೇಳೆ ನಿನಗೆ ವರ್ಗವಾದರೆ ಮೇಲೆ ಹೋಗಿ ಜಗಳ ಕಾಯಬೇಡ ; ರಾಜೀನಾಮೆ ಕೊಡುತ್ತೇನೆ ಎಂದೆಲ್ಲ ಹೇಳಬೇಡ ; ದುಡುಕಿ ಏನನ್ನೂ ಮಾಡಬೇಡ ' ಎಂದು ಬುದ್ಧಿವಾದ ಹೇಳಿದನು. ಸಿದ್ಧಪ್ಪನು ಸಹ ಆದೇ ಅಭಿಪ್ರಾಯಪಟ್ಟು, 'ಜನಾರ್ದನಪುರದಲ್ಲಿ ಇರುವುದು ಯಾವ ದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಹೇಳಿದನು. ರೈಲು ಬಂತು. ರಂಗಣ್ಣನು, ' ತಿಮ್ಮರಾಯಪ್ಪ ! ನಿನ್ನ ಮತ್ತು ಸಿದ್ದಪ್ಪನವರ ಉಪಕಾರವನ್ನು ನಾನು ಮರೆಯುವ ಹಾಗಿಲ್ಲ' ಎಂದನು. ' ಅಯ್ಯೋ ಶಿವನೇ ! ಏನು ಉಪಕಾರ! ಆ ದಿನ ನಿನಗೆ ಆನಂದಭವನದಲ್ಲಿ ತಿಂಡಿ ಕೊಡಿಸಿ ಇನ್ ಸ್ಪೆಕ್ಟರ್‌ಗಿರಿಯ ಹುಚ್ಚು ಹಿಡಿಸಿ ನಾನು ಮಾಡಿದ ಅಪಕಾರವನ್ನು ನಾನು ಮರೆಯುವ ಹಾಗಿಲ್ಲ !' ಎಂದು ನಗುತ್ತ ತಿಮ್ಮರಾಯಪ್ಪನು ಹೇಳಿದನು. ರಂಗಣ್ಣ ಅವರನ್ನು ಬೀಳ್ಕೊಟ್ಟು ಹಿಂದಿರುಗಿದನು. ದೊಡ್ಡ ಬೋರೆಗೌಡರು ಮತ್ತು ಗಂಗೇ ಗೌಡರು ಹೆಚ್ಚಿಗೆ ಎರಡು ದಿನವಿದ್ದು ಅವರೂ ತಂತಮ್ಮ ಹಳ್ಳಿಗಳಿಗೆ ಹಿಂದಿರುಗಿದರು.

ಜನಾರ್ದನಪುರದ ವಾತಾವರಣ ಎಂದಿನಂತೆ ಶಾಂತ ವಾಯಿತು, ಕಾನ್ ಸ್ಟೇಬಲ್ಲುಗಳ ಕಾವಲು ನಿಂತುಹೋಯಿತು, ಉಗ್ರಪ್ಪನಿಗೆ ಸಸ್ಪೆಂಡ್ ಆದ ವಿಚಾರದಲ್ಲಿ ಜನರ ಆಸಕ್ತಿ ಕಡಮೆಯಾಯಿತು. ಆದರೆ ಖಾಸಗಿ ಉಡುಪಿನ ಕಾನ್ ಸ್ಟೇಬಲ್ಲು ಉಗ್ರಪ್ಪನ ಓಡಾಟವನ್ನು ಗಮನಿಸುವುದು ಮಾತ್ರ ತಪ್ಪಲಿಲ್ಲ ಕ್ರಮಕ್ರಮವಾಗಿ ಉಗ್ರಪ್ಪನ ಓಡಾಟಗಳೂ ಕಡಮೆ ಯಾಗಿ ಜನಾರ್ದನ ಪುರದಲ್ಲಿ ಅವನು ಮುಖ ಹಾಕುವುದು ನಿಲ್ಲುತ್ತ ಬಂತು. ಎರಡು ಮೈಲಿ ದೂರದ ಅವನ ಹಳ್ಳಿಯಾಯಿತು, ಅವನಾಯಿತು, ಮೇಲ್ಪಟ್ಟ ಅಧಿಕಾರಿಗಳ ಬಳಿಗೆ ಅಪೀಲು ಹೋಗಬೇಕೆಂಬ ರೋಷವೂ ಅವನಿಗೆ ಇಳಿದುಹೋಯಿತು. ಯಾರಾದರೂ ಮಾತನಾಡಿಸಿದರೆ ಸರಿಯಾಗಿ ಉತ್ತರ ಕೊಡುತ್ತಿರಲಿಲ್ಲ ! ಜೀವನದಲ್ಲಿಯೆ ಜುಗುಪ್ಪೆಯುಂಟಾದಂತೆ ಕಾಣಿಸುತ್ತಿದ್ದನು ; ಒಂದೆರಡು ಮಾತನ್ನು ಹೇಳಿ ಕಳಿಸಿಬಿಡುತ್ತಿದ್ದನು,

ಮೇಲಿನ ಗಲಾಟೆಗಳ ಪ್ರಕರಣದಲ್ಲಿ ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತ್ಸವ ಮುಂದಕ್ಕೆ ಹಾಕಲ್ಪಟ್ಟಿತ್ತು. ಅದಕ್ಕೆ ಸರಿ ಯಾದ ದಿನ ಗೊತ್ತಾದ ಮೇಲೆ ಆ ಹಳ್ಳಿಯಿಂದ ಕರಿಹೈದ ಕಮಾನು ಕಟ್ಟಿದ ತನ್ನ ಗಾಡಿಯನ್ನು ತಂದನು. ನಾಲ್ಕು ತೆಳುಕೋಲುಗಳನ್ನು ಬಗ್ಗಿಸಿ ಮುಕ್ಕಾಲು ಭಾಗಕ್ಕೆ ಮಾತ್ರ ಎರಡು ಹರಕು ಈಚಲು ಚಾಪೆಗಳನ್ನು ಮೇಲೆ ಕಟ್ಟಿ ಬಿಸಿಲು ತಾಕದಂತೆ ಮರೆಮಾಡಿದ್ದ ಕಮಾನಿನ ಆಭಾಸ! ಆದರೆ ರಂಗಣ್ಣನಿಗೆ ಕರಿಹೈದನ ಭಕ್ತಿ ವಿಶ್ವಾಸಗಳಿಂದ ಅದು ನಕ್ಷತ್ರ ಖಚಿತವಾದ ನೀಲಿ ಪಟ ರಂಜಿತವಾದ ಗಗನದ ಕಮಾನಿನಂತೆ ಸುಂದರ ವಾಗಿಯೂ ಹೃದಯಾಕರ್ಷಕವಾಗಿ ಯ ಕಂಡಿತು. ಕುಳಿತುಕೊಳ್ಳುವು ದಕ್ಕೆ ಮೆತ್ತಗಿರಲೆಂದು ಕರಿಹೈದ ಒಣಹುಲ್ಲನ್ನು ಗಾಡಿಯಲ್ಲಿ ಹಾಕಿಕೊಂಡು ಬಂದಿದ್ದನು. ಗಾಡಿಯ ಜೊತೆಯಲ್ಲಿ ಹಳ್ಳಿಯಿಂದ ಆರು ಜನ ರೈತರು ಕೈ ದೊಣ್ಣೆಗಳನ್ನು ಹಿಡಿದುಕೊಂಡು ಬಂದಿದ್ದರು! ಆ ಗಾಡಿಯನ್ನು ನೋಡಿ ರಂಗಣ್ಣನ ಮಕ್ಕಳು ತಾವು ಕೂಡ ಸರ್ಕೀಟು ಬರುವುದಾಗಿ ಹಟ ಮಾಡಿ ದರು. ರಂಗಣ್ಣನು ತನ್ನ ಹೆಂಡತಿಯನ್ನು ಕರೆದು, ' ನೋಡು ! ಮಕ್ಕಳು ಹಟ ಮಾಡುತ್ತಿದ್ದಾರೆ. ಅವರನ್ನು ಕರೆದುಕೊಂಡು ಹೋಗಬೇಕೆಂದಿದ್ದೇನೆ, ನೀನೊಬ್ಬಳೇ ಇಲ್ಲಿ ಏಕಿರಬೇಕು ? ನೀನೂ ಬಂದರೆ ಒಂದು ದಿನ ಸಂತೋಷವಾಗಿ ಕಾಲ ಕಳೆದು ಕೊಂಡು ಬರಬಹುದು. ಎಂತಿದ್ದರೂ ಗೋಪಾಲ ಮತ್ತು ಶಂಕರಪ್ಪ ಮುಂದಾಗಿ ಹೋಗಿದ್ದಾರೆ. ಅಡಿಗೆ ಮಾಡಿರುತ್ತಾರೆ ? ಎಂದು ಹೇಳಿದನು. ಅವನ ಹೆಂಡತಿ ಒಪ್ಪಿ ಕೊಂಡಳು. ತರುವಾಯ.ಅಲಂಕಾರ ಪ್ರಕರಣಗಳೆಲ್ಲ ಮುಗಿದುವು. ಮಕ್ಕಳು ಹಸಿವು ಎಂದು ಕೇಳಿದರೆ, ಕೈಗಾವಲಿಗಿರಲಿ ಎಂದು ಆಕೆ ತಿಂಡಿ ಪೆಟ್ಟಿಗೆಯನ್ನು ಮಾತ್ರ ತೆಗೆದುಕೊಂಡಳು ; ಕಂಚಿನ ಕೂಜದಲ್ಲಿ ನೀರನ್ನು.ತೆಗೆದುಕೊಂಡಳು. ಗಾಡಿಯಲ್ಲಿ ಮತ್ತೆಯನ್ನೂ, ಮೇಲೆ ಜಮಖಾನವನ್ನೂ, ಬೆನ್ನೊತ್ತಿಗೆಗೆ ದಿಂಬುಗಳನ್ನೂ ಅಣಿ ಮಾಡಿ, ಮನೆಯ ಕಾವಲಿಗೆ ತಕ್ಕ ಏರ್ಪಾಟು ಮಾಡಿ, ಕರಿಹೈದನ ಗಾಡಿಯಲ್ಲಿ ಎಲ್ಲರೂ ಹೊರಟರು.

ನಾಗೇನಹಳ್ಳಿ ಜನಾರ್ದನಪುರಕ್ಕೆ ಆರು ಮೈಲಿ ದೂರದಲ್ಲಿತ್ತು. ಒಂದೆರಡು ಮೈಲಿಗಳ ದೂರ ಹೋಗುವುದರೊಳಗಾಗಿ ಆ ಎತ್ತಿನ ಗಾಡಿಯ ಪ್ರಯಾಣದ ನಾವೀನ್ಯ ಮತ್ತು ಸಂತೋಷ ಕಡಮೆಯಾದುವು. ರಂಗಣ್ಣನ ಹೆಂಡತಿಗೆ ಹಳ್ಳಿಗಾಡಿನ ಒರಟು ರಸ್ತೆಗಳಲ್ಲಿ, ಆ ಒರಟು ಪ್ರಯಾಣ ಮಾಡಿ ಅಭ್ಯಾಸವಿರಲಿಲ್ಲ, ಧಡಕ್ ಭಡಕ್ ಎಂದು ಇತ್ತ ಅತ್ತ ಆಡುತ್ತ, ಒಬ್ಬರ ಮುಖಕ್ಕೆ ಮತ್ತೊಬ್ಬರ ಮುಖ ತಾಕಿಸುತ್ತ, ಮಧ್ಯೆ ಮಧ್ಯೆ ಎತ್ತಿ ಹಾಕುತ್ತ, ಹೊಟ್ಟೆಯಲ್ಲಿನ ಕರುಳುಗಳನ್ನೆಲ್ಲ ಸ್ಥಳಪಲ್ಲಟ ಮಾಡಿಸುತ್ತ ಗಾಡಿ ಮುಂದುವರಿಯುತ್ತಿತ್ತು. 'ನಿಮ್ಮ ಸರ್ಕಿಟು ಏನೇನೂ ಸುಖವಿಲ್ಲ, ಮೈ ಕೈ ನೋವು ಮಾಡಿಕೊಂಡು ಇದೇನು ಸರ್ಕಿಟು” ಎಂದು ರಂಗಣ್ಣನ ಹೆಂಡತಿ ಹೇಳಿದಳು. “ಹೆಂಡತಿ ಮತ್ತು ಮಕ್ಕಳು ಜೊತೆಗೆ ಇದ್ದರೂ ಈ ಸರ್ಕಿಟು ಹೀಗಿದೆಯಲ್ಲ ! ನಾನೊಬ್ಬನೇ ಗಾಡಿಯಲ್ಲಿ ಹೋಗುವಾಗ ನನಗೆಷ್ಟು ಕಷ್ಟವಾಗಬೇಕು. ಹೇಳು. ಶಂಕರಪ್ಪನಿಂದ ಆ ಕಷ್ಟ ಪರಿಹಾರವಾಗುತ್ತಿತ್ತು. ಅವನು ಹಲವರು ಇನ್ಸ್ಪೆಕ್ಟರುಗಭಳೊಡನೆ ತಿರುಗಿದವನು. ಅವರ ಕಥೆಗಳನ್ನೆಲ್ಲ ಹೇಳುತ್ತ-ಅವರ ಸರ್ಕೀಟಿನ ರೀತಿಯೇ ಬೇರೆ ತಮ್ಮ ಸರ್ಕಿಟನ ಸೊಗಸೇ ಬೇರೆ ಸ್ವಾಮಿ -- ಎಂದು ನನ್ನನ್ನು ಪ್ರಶಂಸೆಮಾಡುತ್ತ ಬೇಜಾರು ಕಳೆಯುತ್ತಿದ್ದನು. ಹೀಗೆ ಮಾತನಾಡುತ್ತ ಆಡುತ್ತ ರಂಗಣ್ಣ ತಿಂಡಿಯ ಪೆಟ್ಟಿಗೆಗೆ ಕೈ ಹಾಕಿ, ಮುಚ್ಚಳ ತೆಗೆದನು. ಮಕ್ಕಳು,-ನನಗೆ ಕೋಡಬಳೆ ! ನನಗೆ ಚಕ್ಕುಲಿ! ನನಗೆ ಬೇಸಿನ್ ಲಾಡು !-- ಎಂದು ಕೋಲಾಹಲವೆಬ್ಬಿಸಿದರು.

'ಪೆಟ್ಟಿಗೆಯನ್ನೆಲ್ಲ ಇಲ್ಲೇ ಖಾಲಿ ಮಾಡಿ ಬಿಡುತ್ತೀರಾ ?' ಎಂದು ರಂಗಣ್ಣನ ಹೆಂಡತಿ ಆಕ್ಷೇಪಿಸಿದಳು.

'ತಿಂಡಿ ತಿನ್ನು ತಾ, ಮಾತನಾಡುತ್ತಾ ಪ್ರಯಾಣ ಮಾಡಿದರೆ ಬೇಜಾರು ತೋರುವುದಿಲ್ಲ' ಎಂದು ರಂಗಣ್ಣ ಉತ್ತರ ಕೊಟ್ಟು ಮಕ್ಕಳಿಗೂ ಹೆಂಡತಿಗೂ ತಿಂಡಿ ಹಂಚಿದನು, ಆಮೇಲೆ ಕರಿಹೈದನ ಕಡೆ ನೋಡಿ, ಆ ಭಕ್ತನನ್ನು ಅನುಗ್ರಹಿಸಬೇಕೆಂದು, “ಆ ದಿನ ನೀನು ಎಂಟಾಣೆ ಕೊಟ್ಟರೆ ತೆಗೆದು ಕೊಳ್ಳಲಿಲ್ಲ. ದೇವರು ಮೆಚೊ ದಿಲ್ಲ ಸ್ವಾಮಿ ! ಎಂದು ಹೇಳಿಬಿಟ್ಟೆ. ಇವನ್ನಾದರೂ ತೆಗೆದುಕೋ. ತಿನ್ನು' ಎಂದು ಹೇಳಿ ಅವನ ಕೈಯಲ್ಲಿ ಕೋಡಬಳೆ ಚಕ್ಕುಲಿ ಮತ್ತು ಬೇಸನ್ ಲಾಡುಗಳನ್ನು ಹಾಕಿದನು. ಆದರೆ ಕರಿಹೈದ ಅವುಗಳನ್ನು ತಿನ್ನಲಿಲ್ಲ. ಬಟ್ಟೆಯಲ್ಲಿ ಗಂಟು ಕಟ್ಟಿ ಇಟ್ಟುಕೊಂಡನು! ರಂಗಣ್ಣ ಅದನ್ನು ನೋಡಿ,

'ಅದೇಕೆ ಗಂಟು ಕಟ್ಟಿದೆ ಕರಿಹೈದ ? ನೀನು ತಿನ್ನಬೇಕೆಂದು ನಾನು ಕೊಟ್ಟದ್ದು' ಎಂದನು.

'ಹೌದು ಸೋಮಿ! ತಾವೇನೋ ನಾನು ತಿನ್ನಬೇಕೆಂದು ಕೊಟ್ರಿ. ಮನೇಲಿ ಇಬ್ಬರು ಮಕ್ಕಳಿ! ಇದೇನೋ ನಾಜೋಕ್ ರುಚಿ ಪದಾರ್ತ! ಮಕ್ಕಳು ತಿನ್ನಲಿ ಅಂತ ಗಂಟು ಕಟ್ಟಿ ಮಡಕೊಂಡಿತ್ನಿ !”

'ಚಕ್ರವರ್ತಿಗಿರುವಂತೆಯೇ ಕರಿಹೈದನಿಗೂ ಕರುಳುಂಟಲ್ಲಾ ! ಮಕ್ಕಳ ಮೇಲೆ ಪ್ರೇಮವುಂಟಲ್ಲಾ! ರಂಗಣ್ಣನಿಗೂ ಅವನ ಹೆಂಡತಿಗೂ ಮನಸ್ಸು ಕರಗಿ ಹೋಯಿತು: ಪೆಟ್ಟಿಗೆಯಿಂದ ಮತ್ತಷ್ಟು ತಿಂಡಿಯನ್ನು ತೆಗೆದು ಕೈಗೆ ಕೊಟ್ಟು, 'ಗಂಟು ಕಟ್ಟಿರುವುದು ಮಕ್ಕಳಿಗಿರಲಿ. ಇದನ್ನು ನೀನು ತಿನ್ನು' ಎಂದು ಹೇಳಿದರು. ಕರಿಹೈದ, ಆಗಲಿ ಸೋಮಿ !” ಎಂದು ಬಾಯಲ್ಲಿ ಹೇಳಿ ಒಂದು ಕ್ಷಣ ಹಾಗೆಯೇ ಹಿಡಿದುಕೊಂಡಿದ್ದನು; ತಿನ್ನಲಿಲ್ಲ. ಮತ್ತೆ ಅದನ್ನು ಗಂಟಿನೊಳಗೆ ಸೇರಿಸಿಬಿಟ್ಟನು !

'ಎಲಾ ಕರಿಹೈ ದ ! ಅದೇಕೋ ಇದನ್ನೂ ಕಟ್ಟಿ ಬಿಟ್ಟೆ ? ನೀನು ತಿನ್ನಲಿಲ್ಲ ! ತಿನ್ನು' ಎಂದು ರಂಗಣ್ಣ ಹೇಳಿದನು.

'ಸೋಮಿ ! ಅ೦ಗೇ ಯೋಚ್ನಾ ಮಾಡಿದೆ ! ಮನೇಲಿ ನನ್ನೆಂಡ್ರವಳೆ ! ಅವಳನ್ನ ಬಿಟ್ಟು ತಿನ್ನೊಕೆ ಮನಸ್ಸು ಬರಾಕಿಲ್ಲ ಸೋಮಿ !” ರಂಗಣ್ಣನ ಕಣ್ಣುಗಳು ಹನಿಗೂಡಿ ಮಂಜಾದುವು ! ರಂಗಣ್ಣನ ಹೆಂಡತಿ ಗಂಡನ ಕೈ ಹಿಡಿದೆಳೆದು, 'ನೋಡಿದಿರಾ ! ನಿಮಗೆ ನನ್ನ ಮೇಲೆ ಬಹಳ ಪ್ರೀತಿ ಎಂದು ಹೇಳುತ್ತಾ ಇರುತ್ತೀರಿ! ಕರಿಹೈದ ತನ್ನ ಹೆಂಡತಿಯನ್ನು ಪ್ರೀತಿಸುವಂತೆ ನೀವು ಪ್ರೀತಿಸುವುದುಂಟೇ ?' ಎಂದು ನಗುತ್ತಾ ಕೇಳಿದಳು. ರಂಗಣ್ಣನು,

'ಕರಿಹೈದ ! ಮತ್ತೆ ಯಾರು ಇದ್ದಾರೆ ನಿನ್ನ ಮನೆಯಲ್ಲಿ ?” ಎಂದು ಕೇಳಿದನು.

'ಮತ್ತೆ ಯಾರೂ ಇಲ್ಲ ಸೋಮಿ !'

'ಹಾಗಾದರೆ, ನಿನ್ನ ಬಟ್ಟೆ ಹಿಡಿ' ಎಂದು ಹೇಳಿ ರಂಗಣ್ಣ ಇನ್ನು ನಾಲ್ಕು ಚಕ್ಕುಲಿ, ಕೋಡಬಳಿ ಮತ್ತು ಲಾಡುಗಳನ್ನು ಕೊಟ್ಟು, “ನಿನ್ನ ಹೆಂಡತಿ ಮಕ್ಕಳಿಗೆ ಅವನ್ನೆಲ್ಲ ಕೊಡು. ಈಗ ನೀನು ತಿನ್ನುವುದಕ್ಕೆ ನಿನಗೆ ಬೇರೆ ಕೊಡುತ್ತೇನೆ ; ತಿನ್ನು,'

'ನಾನೀಗ ತಿನ್ನೋಕಿಲ್ಲ ಸೋಮಿ! ನನ್ನ ಜೊತೆಗೆ ನನ್ನ ಹಳ್ಳಿ ರೈತರು ಬಂದವರೆ ನೋಡಿ ! ಅವರು ಕಸ್ಟಾಪಟ್ಟು ಕೊಂಡು ತಮ್ಮ ಕಾವಲಿಗೆ ಆರು ಮೈಲಿಯಿಂದ ಬಂದವರೆ ! ?

ಯಾವ ವಿಶ್ವವಿದ್ಯಾನಿಲಯದಲ್ಲಿ ಕರಿಹೈದನಂತೆ ಪಾಠ ಹೇಳಿಕೊಡುತ್ತಾರೋ ತಿಳಿಯದು-ಎಂದು ರಂಗಣ್ಣ ಹೇಳಿಕೊಂಡನು.

ರಂಗಣ್ಣನ ಹೆಂಡತಿ, ಕರಿಹೈದ ! ನೀನು ಅವರ ಯೋಚನೆ ಮಾಡಬೇಡಪ್ಪ ! ಸ್ವಲ್ಪ ಗಾಡಿ ನಿಲ್ಲಿಸು ! ' ಎಂದು ಹೇಳಿದಳು. ನಿಂತಿತು. ಗಾಡಿಯ ಹಿಂದೆ ಮುಂದೆ ಕೈದೊಣ್ಣೆಗಳನ್ನು ಹಿಡಿದು ನಡೆಯು ತಿದ್ದ ರೈತರನ್ನು ಆಕೆ ಕರೆದಳು. ಪೆಟ್ಟಿಗೆಯಲ್ಲಿರುವುದನ್ನೆಲ್ಲ ತೆಗೆದು ಅವರಿಗೆ ಹಂಚಿ ಖಾಲಿ ಮಾಡಿ ಬಿಟ್ಟಳು. ಕರಿಹೈದ ಅದನ್ನು ನೋಡಿ, ನಮ್ಗೇ ಎಲ್ಲಾ ಕೊಟ್ಬಿಟ್ಟರಲ್ಲಾ ! ನಿಮಗೆಲ್ಲೈತೆ ಸೋಮಿ ತಿಂಡಿ ?? ಎಂದು ಕೇಳಿದನು, ಆಕೆ, ' ನಮಗೂ ಇದೆಯಪ್ಪ, ಇಲ್ಲಿ ನೋಡು ! ? ಎಂದು ಹೇಳಿ ಚಕ್ಕುಲಿ ಕೋಡಬಳೆಗಳನ್ನು ತೋರಿಸಿದಳು. ಕರಿಹೈದ ಸ್ವಲ್ಪ ಬಾಯಿಗೆ ಹಾಕಿಕೊಂಡು,

'ಇದೇನು ಸೋಮಿ, ನಿಮ್ಮ ತಿಂಡಿ ಹಲ್ಗೆ ಸಿಗೋಕಿಲ್ಲ ! ಬಾಯೊಳಗೇ ನಿಲ್ಲೋಕಿಲ್ಲ ! ಜಗ್ಸಿ ಆಗಿಯೋ ತಿಂಡಿ ಇರಬೇಕು ಸೋಮಿ ಹಳ್ಳಿಯವರಿಗೆಲ್ಲ !' ಎಂದು ಹೇಳಿದನು.

ನಾಗೇನಹಳ್ಳಿ ಸಮಿಾಪಿಸಿತು. ಹಳ್ಳಿಯ ಮುಂದುಗಡೆ ತೋರಣ ಕಟ್ಟಿತ್ತು. ಅಲ್ಲಿ ಮರದ ಕೆಳಗೆ ಹಳ್ಳಿಯ ಜನರು ನಿರೀಕ್ಷಿಸುತ್ತ ನಿಂತಿದ್ದರು. ಗಾಡಿ ಬೆಳಗ್ಗೆ ಹತ್ತು ವರೆ ಗಂಟೆಯ ಹೊತ್ತಿಗೆ ಅಲ್ಲಿಗೆ ಹೋಯಿತು. ರಂಗಣ್ಣ ಮೊದಲಾದವರು ಗಾಡಿಯಿಂದಿಳಿದರು. ಹಳ್ಳಿಯ ಓಲಗ ಪ್ರಾರಂಭವಾಯಿತು. ಜೊತೆಗೆ ತಮಟೆ ಬಾರಿಸುವವರು ಬಾರಿಸುತ್ತಿದ್ದರು ; ಕೊಂಬುಗಳನ್ನು ಕೆಲವರು ಊದಿದರು. ಊರಿನ ಮುಖಂಡರು ಮೂರು ನಾಲ್ಕು ಹೂವಿನ ದೊಡ್ಡ ದೊಡ್ಡ ಹಾರಗಳನ್ನು ರಂಗಣ್ಣನ ಕೊರಳಿಗೆ ಹಾಕಿ ನಮಸ್ಕಾರ ಮಾಡಿದರು. ತಟ್ಟೆಗಳಲ್ಲಿ ತೆಂಗಿನಕಾಯಿ, ಹಣ್ಣು ಮೊದಲಾದುವನ್ನಿಟ್ಟು ಕಾಣಿಕೆ ಸಮರ್ಪಿಸಿದರು. ರಂಗಣ್ಣ ಮುಖಂಡರ ಕುಶಲ ಪ್ರಶ್ನೆಯನ್ನು ಮಾಡಿ ಅವರಿಗೆಲ್ಲ ಹಸ್ತಲಾಘವ ಕೊಟ್ಟು ಮುಗುಳುನಗೆ ಸೂಸುತ್ತ, 'ಅಂತೂ ನಿಮ್ಮ ಹಳ್ಳಿಗೊಂದು ಸರಕಾರಿ ಸ್ಕೂಲಾಯಿತು. ನೀವೆಲ್ಲ ಕರಿಹೈದನಿಗೆ ಕೃತಜ್ಞರಾಗಿರಬೇಕು ? ಎಂದು ಹೇಳಿದನು. ಮುಖಂಡರು,

'ಸೋಮಿ ! ತಮಗೂ ನಾವು ಕೃತಜ್ಞರಾಗಿದ್ದೇವೆ. ಎಷ್ಟೋ ಜನ ಅಧಿಕಾರಿಗಳು ನಮ್ಮ ಬಂಡಿಗಳನ್ನೆಲ್ಲ ಬಿಟ್ಟಿಹಿಡಿದು ಉಪಯೋಗಿಸ್ತಾರೆ. ತಮ್ಮಂಗೆ ಏನೂ ಉಪಕಾರ ಮಾಡೋದಿಲ್ಲ ; ಮತ್ತೆ ನಮ್ಮ ಮೇಗೇನೆ ಜೋರ್ ಮಾಡೋಕ್ಕೆ ಬರ್ತಾರೆ' ಎಂದು ಉತ್ತರ ಕೊಟ್ಟರು.

ಮೆರವಣಿಗೆ ನಿಧಾನವಾಗಿ ಹೊರಟಿತು. ದಾರಿಯುದ್ದಕ್ಕೂ ಆ ಓಲಗ, ಆ ತಮ್ಮಟೆಗಳ ಬಜಾವಣೆ, ಕೊಂಬುಗಳ ಕೂಗು, ಬಹಳ ತಮಾಷೆಯಾಗಿದ್ದುವು. ಈ ತಮಾಷೆಗಳನ್ನೆಲ್ಲ ರಂಗಣ್ಣನ ಹೆಂಡತಿ ಮತ್ತು ಮಕ್ಕಳು ಹಿಂದೆ ನೋಡಿರಲಿಲ್ಲವಾದ್ದರಿಂದ ಅವರಿಗೆ ತಾವೆಲ್ಲೋ ಇಂದ್ರಲೋಕದಲ್ಲಿದ್ದಂತೆ ಕಾಣುತ್ತಿತ್ತು. ಕೊಂಬುಗಳನ್ನು ಕೂಗಿದಾಗಲೆಲ್ಲ ರಂಗಣ್ಣನ ಹುಡುಗರು ಅದನ್ನು ಅನುಕರಣ ಮಾಡುತ್ತ, ನಗುತ್ತ, ತಮ್ಮ ತಾಯಿಗೆ ಆ ವಿಚಿತ್ರ ವಾದ್ಯೋಪಕರಣವನ್ನು ತೋರಿಸುತ್ತ ಹೋಗುತ್ತಿದ್ದರು. ಆ ತಮ್ಮಟೆ ಬಡಿಯುವವರ ಕುಣಿತ ವಿನೋದಕರವಾಗಿತ್ತು. ಮೆರೆವಣಿಗೆ ಹಳ್ಳಿಯೊಳಕ್ಕೆ ಪ್ರವೇಶಿಸಿತು. ಹಳ್ಳಿಯ ಹೆಂಗಸರೆಲ್ಲ ಅಲ್ಲಲ್ಲಿ ಗುಂಪುಗುಂಪುಗಳಾಗಿ ಸೇರಿದ್ದರು. ಕೆಲವರು ತಂತಮ್ಮ ಮನೆಗಳ ಮುಂಭಾಗದಲ್ಲಿ ನಿಂತಿದ್ದರು. 'ಅವರೇ 'ಇನ್‌ಚ್ ಪೆಟ್ರು! ಹೆಂಡ್ತಿನ ಜೊತೆಗೆ ಕರಕೊಂಡ್ ಬಂದವ್ರೇ ! ಚೆನ್ನಾಗವ್ರೇ ಕಾಣಮ್ಮ ! ಮಕ್ಕಳೂ ಮುದ್ದಾಗವ್ರೇ !' ಎಂದು ಆ ಹೆಂಗಸರು ಒಬ್ಬರಿಗೊಬ್ಬರು , ತೋರಿಸುತ್ತ ಮಾತನಾಡಿಕೊಳ್ಳುತ್ತಿದ್ದರು. ಇನ್ಸ್ಪೆಕ್ಟರ ಬಿಡಾರಕ್ಕೆ ಒಂದು ಮನೆಯನ್ನು ಖಾಲಿ ಮಾಡಿಸಿದ್ದರು. ಅಲ್ಲಿಗೆ ಹೋದಮೇಲೆ ಪಂಚಾಯತಿ ಚೇರ್ಮನ್ನು 'ಸ್ವಾಮಿ ! ಗಾಡೀಲಿ ಬಂದು ಸುಸ್ತಾಗಿದ್ದೀರಿ. ರವಷ್ಟು ಆರಾಮಾಗಿ ಇಲ್ಲಿ ಕುಂತಕೊಳ್ಳಿ! ಅಮ್ಮಾವೂ, ಮಕ್ಕಳೂ ದಣಿದವೆ! ಕಾಫಿ ತಿಂಡಿ ತೆಕ್ಕೊಂಡು ಮುಂದಿನ ಕೆಲಸ ಮಾಡೋಣ. ನಾನು ಮತ್ತೆ ಬಂದು ಕರೆಯುತ್ತೇನೆ' ಎಂದು ಹೇಳಿ ಹೊರಟು ಹೋದನು. ಗುಂಪೆಲ್ಲ ಪಂಚಾಯತಿ ಹಾಲಿನ ಬಳಿ ಸೇರಿತು. ಸುಮಾರು ಅರ್ಧ ಗಂಟೆಯ ತರುವಾಯ ಚೇರ್ಮನ್ನು ಮತ್ತು ಮೇಷ್ಟ್ರು ಬಂದರು. ಆ ಹೊತ್ತಿಗೆ ಉಪಾಹಾರವೆಲ್ಲ ಮುಗಿದಿತ್ತು. ರಂಗಣ್ಣ ಸಂಸಾರ ಸಮೇತನಾಗಿ ಪಂಚಾಯತಿ ಪಾಲಿನ ಕಡೆಗೆ ಹೊರಡಲು ಸಿದ್ಧವಾದನು. ಪುನಃ ಓಲಗ, ತಮಟೆ ಮತ್ತು ಕೊಂಬಿನ ಕೂಗುಗಳ ಸಂಭ್ರಮಗಳೊಡನೆ ಮೆರೆವಣಿಗೆಯಾಯಿತು! ಪಂಚಾಯತಿ ಹಾಲಿನ ಮುಂದುಗಡೆ ಚಪ್ಪರವನ್ನು ಹಾಕಿದ್ದರು. ಹಳ್ಳಿಯ ಮಕ್ಕಳೆಲ್ಲ ಚೆನ್ನಾಗಿ ಬಟ್ಟೆಗಳನ್ನು ಹಾಕಿಕೊಂಡು ಶೃಂಗಾರ ಮಾಡಿಕೊಂಡು ಬಂದಿದ್ದರು. ಹಳ್ಳಿಯ ಮುಖಂಡ ರೂ ರೈತರೂ ಹೆಂಗಸರೂ ಕಿಕ್ಕಿರಿದು ಕುಳಿತಿದ್ದರು. ಕೆಲವರು ಕಟ್ಟಡಕ್ಕೆ ದೂರದಲ್ಲೇ ಇದ್ದು ನೋಡುತ್ತಿದ್ದರು. ಆ ದಿನ ಪಂಚಾಯತಿ ಹಾಲನ್ನು ಅಲಂಕಾರ ಮಾಡಿದ್ದರು.

ದೇವತಾ ಪ್ರಾರ್ಥನೆ, ಸ್ವಾಗತ ಪದ್ಯಗಳು, ಸಂಗೀತ- ಇವು ಆದ ಮೇಲೆ ಶ್ಯಾನುಭೋಗನು ಒಂದು ಸಣ್ಣ ಭಾಷಣ ಮಾಡಿದನು. ಚೇರ್ಮನ್ನು ಆಗ ಮಾತನಾಡಲಿಲ್ಲ. ಶ್ಯಾನುಭೋಗನು ತನ್ನ ಭಾಷಣದಲ್ಲಿ ವಿದ್ಯೆಯ ಮಹತ್ವವನ್ನೂ, ಪೂರ್ವ ಕಾಲದಲ್ಲಿ ಭರತಖಂಡದಲ್ಲೆಲ್ಲ ವಿದ್ಯಾ ಪ್ರಚಾರವಿದ್ದುದನ್ನೂ , ಅಲ್ಲಲ್ಲಿ ಗುರುಕುಲಗಳು ಇದ್ದು ಇನ್ನೂ ಪ್ರಸ್ತಾಪ ಮಾಡಿದನು. ಈಗ ಸರಕಾರದವರು ತಮ್ಮ ಹಳ್ಳಿಗೆ ಸರಕಾರಿ ಸ್ಕೂಲನ್ನೇ ಕೊಟ್ಟದ್ದು ತಮಗೆಲ್ಲ ಬಹಳ ಸಂತೋಷವನ್ನುಂಟುಮಾಡಿದೆಯೆಂದೂ ಮುಖ್ಯವಾಗಿ ಇನ್ ಸ್ಪೆಕ್ಟರ್ ಸಾಹೇಬರಿಗೆ ತಾವುಗಳೆಲ್ಲ ಕೃತಜ್ಞರಾಗಿರುವುದಾಗಿಯೂ ಹೇಳಿದನು. ಬಳಿಕ ಪಾಠಶಾಲೆಯ ಪ್ರಾರಂಭೋತ್ಸವವನ್ನು ನೆರವೇರಿಸಬೇಕೆಂದು ಇನ್ ಸ್ಪೆಕ್ಟರ ಕಡೆಗೆ ತಿರುಗಿಕೊಂಡು ಕೈ ಮುಗಿದು ಪ್ರಾರ್ಥಿಸಿದನು.

ಪಂಚಾಯತಿ ಹಾಲೇ ಪಾಠಶಾಲೆಯನ್ನು ಮಾಡತಕ್ಕ ಸ್ಥಳವಾಗಿತ್ತು. ಅಲ್ಲಿ ಆ ಗ್ರಾಮದಲ್ಲಿದ್ದ ಪುರೋಹಿತನೊಬ್ಬನು ಗಣಪತಿ ಮತ್ತು ಸರಸ್ವತೀ ಪಠಗಳಿಗೆ ಪೂಜೆ ಮಾಡಿ, ತೆಂಗಿನ ಕಾಯಿ ಒಡೆದು ನೈವೇದ್ಯ ಮಾಡಿ, ಮಂಗಳಾರತಿಯನ್ನು ಸಾಂಗವಾಗಿ ನೆರವೇರಿಸಿದನು.

ರಂಗಣ್ಣ ದೊಡ್ಡ ಭಾಷಣವನ್ನು ಮಾಡಲಿಲ್ಲ. ಆ ದಿನ ಶುಭ ಮುಹೂರ್ತದಲ್ಲಿ ಪಾಠಶಾಲೆಯ ಪ್ರಾರಂಭವನ್ನು ತಾನು ಮಾಡಿದುದಾಗಿ ಹೇಳಿದನು. ಮೇಷ್ಟರನ್ನು ಸ್ವಲ್ಪ ಪ್ರಶಂಸೆ ಮಾಡಿ ಅವರು ದಕ್ಷರೆಂದೂ ಶ್ರದ್ಧೆಯಿಂದ ಕೆಲಸ ಮಾಡುವವರೆಂದೂ, ಅವರ ಯೋಗಕ್ಷೇಮದ ಜವಾಬ್ದಾರಿ ಹಳ್ಳಿ ಯವರಿಗೆ ಸೇರಿದ್ದೆಂದೂ ತಿಳಿಸಿದನು. ಪಾಠಶಾಲೆಯಲ್ಲಿ ತಿಂಗಳಿಗೊಂದಾವೃತ್ತಿ ಕಮಿಟಿ ಮೆಂಬರುಗಳು ಸಭೆ ಸೇರಿ ಮಕ್ಕಳ ವಿದ್ಯಾಭಿವೃದ್ಧಿಯನ್ನು ಪರಿಶೀಲಿಸಿ ಅವರಿಂದ ಆಟಪಾಟಗಳನ್ನು ಆಡಿಸಿ ಏನಾದರೂ ಬಹುಮಾನಗಳನ್ನೂ ತಿಂಡಿಗಳನ್ನೂ ಹಂಚಬೇಕೆಂದು ಹೇಳಿದನು. ಗ್ರಾಮಸ್ಥರು ತನ್ನ ಕೋರಿಕೆಯಂತೆ ಸ್ಲೇಟು ಪುಸ್ತಕಗಳನ್ನು ಉಚಿತವಾಗಿ ಕೊಟ್ಟಿರುವುದರಿಂದ ಅವರಿಗೆ ತಾನು ಕೃತಜ್ಞನಾಗಿರುವುದಾಗಿ ತಿಳಿಸಿದನು. ಮುಖ್ಯವಾಗಿ ಗ್ರಾಮಗಳು ಏಳಿಗೆಗೆ ಬರಬೇಕಾದರೆ ಪಾರ್ಟಿಗೀರ್ಟಿಗಳಿಲ್ಲದೆ ಐಕಮತ್ಯದಿಂದ ಕೆಲಸ ಮಾಡಬೇಕೆಂದೂ ನಾಗೇನ ಹಳ್ಳಿಯಲ್ಲಿ ಪಾರ್ಟಿಗಳಿಲ್ಲವೆಂಬುದನ್ನು ನೋಡಿ ತನಗೆ ಬಹಳ ಸಂತೋಷವಾಗಿರುವುದೆಂದೂ ಹೇಳಿದನು. ಕಡೆಯಲ್ಲಿ ತನಗೆ ತೋರಿಸಿದ ಆದರಾತಿಥ್ಯಗಳಿಗಾಗಿ ಕೃತಜ್ಞತೆಯನ್ನು ಸೂಚಿಸಿ ಆ ಪಾಠಶಾಲೆ ಉತ್ತರೋತ್ತರ ಅಭಿವೃದ್ಧಿಯನ್ನು ಪಡೆಯಲೆಂದೂ ಅಲ್ಲಿ ಒಂದು ಮಿಡಲ್ ಸ್ಕೂಲ್ ಸ್ಥಾಪಿತವಾಗಲೆಂದೂ ಹಾರೈಸಿದನು.

ಜನರಿಗೆಲ್ಲ ಬಹಳ ಸಂತೋಷವಾಯಿತು. ಚೇರ್ಮನ್ನು ವಂದ ನಾರ್ಪಣೆಯ ಭಾಷಣವನ್ನು ಮಾಡಿದನು : 'ಸ್ವಾಮಿ ! ನಾವು ಹಳ್ಳಿಯ ಜನ; ತಿಳಿವಳಿಕೆ ಕಡಮೆ. ಈಗ ಇಸ್ಕೂಲ್ ದಯಪಾಲಿಸಿದ್ದೀರಿ. ಮುಂದೆ ನಮ್ಮ ಮಕ್ಕಳು ವಿದ್ಯೆ ಚೆನ್ನಾಗಿ ಕಲಿತು ನಮಗಿ೦ತ ತಿಳಿವಳಿಕಸ್ತರಾಗಿ ಬಾಳುವುದಕ್ಕೆ ಅನುಕೂಲ ಕಲ್ಪಿಸಿದ್ದಿರಿ. ನಾವು - ನಮಗೆ ಇಸ್ಕೂಲ್ಬೇಕು, ಎಂದು ಕೇಳೊದಕ್ಕೆ ಕೂಡ ಗೊತ್ತಿಲ್ಲದೆ ಅಜ್ಞಾನದಲ್ಲಿದ್ದಾಗ, ತಾವೇ ನಮಗೆ ಹೇಳಿಕಳಿಸಿ ಅರ್ಜಿ ಈ ಸಿಕೊಂಡು ಇಸ್ಕೂಲ್ ಮುಂಜೂರ್ ಮಾಡಿದ ಉಪಕಾರಾನ ನಾವೆಂದಿಗೂ ಮರೆಯೋದಿಲ್ಲ! ತಮ್ಮ ಕಾಲದಾಗೆ ಮೇಷ್ಟ್ರುಗಳಿಗೆಲ್ಲ ತಿಳಿವಳಿಕೆಯನ್ನು ಕೊಟ್ಟರಿ, ಗ್ರಾಮಸ್ಥರಿಗೆಲ್ಲ ತಿಳಿವಳಿಕೆಯನ್ನು ಕೊಟ್ಟರಿ; ವಿದ್ಯೆ ಚೆನ್ನಾಗಿ ಹರಡುವಂತೆ ಸಂಘಗಳನ್ನು ಎಲ್ಲ ಕಡೆಯ ನಡೆಸಿದಿರಿ, ತಮ್ಮ ಹೆಸರು ಶಾಸನ ಆಗೋಯ್ತು!' 'ಈಗ ತಾವು ನನಗೆ ಹೇಳಿದ ಬುದ್ಧಿವಾದದಂತೆ ನಡೆದುಕೊಳ್ಳಲು ಪ್ರಯತ್ನಪಡುತ್ತೇವೆ. ಮೇಷ್ಟರು ಬಡವರು, ಅವರನ್ನು ಆದರಿಸಬೇಕು ಎಂದು ನಮಗೆ ತಮ್ಮ ಕಚೇರಿಯಲ್ಲಿ ತಿಳಿಸಿದಿರಿ. ಇಗೋ ಸ್ವಾಮಿ! ಮನೆಗೆ ಐದು ಸೇರು ರಾಗಿಯಂತೆ ಶೇಖರಣ ಮಾಡಿ ಈ ಮೂರು ಮೂಟೆಗಳನ್ನು ಇಟ್ಟಿದ್ದೇವೆ. ತಾವೇ ಅದನ್ನು ನಮ್ಮ ಪರವಾಗಿ ಮೇಷ್ಟರಿಗೆ ದಾನ ಮಾಡಬೇಕೆಂದು ಪ್ರಾರ್ಥಿಸುತ್ತೇವೆ ! ವರ್ಷವಷವೂ ಹೀಗೇನೇ ಮೇಷ್ಟರಿಗೆ ಸಹಾಯ ನಡೆಸಿಕೊಂಡು ಹೋಗಬೇಕು ಎಂದು ಸಂಕಲ್ಪ ಮಾಡಿದ್ದೇವೆ. ಇಸ್ಕೂಲಿಗೆ ಸ್ಲೇಟು ಪುಸ್ತಕ ವಗೈರೆ ದಾನ ಮಾಡಬೇಕು ಎಂದು ಅಪ್ಪಣೆ ಕೊಡಿಸಿದ್ದಿರಿ. ಎಲ್ಲವನ್ನೂ ಮೇಜಿನಮೇಲೆ ಇಟ್ಟಿದ್ದೇವೆ; ಪರಾಂಬರಿಸಬೇಕು. ಈ ದಿನ ತಾವು ಕುಟುಂಬ ಸಮೇತ ನಮ್ಮ ಹಳ್ಳಿಗೆ ಬಂದು ಬಡರೈತರ ಆತಿಥ್ಯ ಸ್ವೀಕಾರ ಮಾಡಿದ್ದಕ್ಕಾಗಿ ಈ ಗ್ರಾಮದ ಪರವಾಗಿ ತಮಗೆ ಕೃತಜ್ಞತೆ ಸೂಚಿಸುತ್ತೇನೆ. ತಮಗೆ ದೇವರು ಒಳ್ಳೆದು ಮಾಡಲಿ ಸ್ವಾಮಿ !'

ತರುವಾಯ ಜಯಕಾರಗಳಾದುವು. ರಂಗಣ್ಣ ರಾಗಿಯ ಮೂಟೆಗಳನ್ನು ನೋಡಿ ಬಹಳ ಸಂತೋಷಪಟ್ಟು, ಅವನ್ನು ಮೇಷ್ಟರಿಗೆ ವಹಿಸಿಕೊಟ್ಟನು. ಮೇಷ್ಟು ಆನಂದಿತನಾಗಿ, 'ಸ್ವಾಮಿ ! ಹಿಂದೆ ಯಾರೂ ಇನ್ಸ್ಪೆಕ್ಟರು ಮೇಷ್ಟರುಗಳಿಗೆ ಇಂಥಾ ಉಪಕಾರ ಮಾಡಿ ಸಲಿಲ್ಲ! ಹಳ್ಳಿಯವರೂ ಮಾಡಿರಲಿಲ್ಲ ! ನಾನು ತಮಗೂ ಗ್ರಾಮಸ್ಥರಿಗೂ ಚಿರಋಣಿಯಾಗಿದ್ದೇನೆ. ಈಗ ನನ್ನ ಮೇಲೆ ಹೆಚ್ಚಿನ ಜವಾಬ್ದಾರಿ ಬಿದ್ದಿದೆ. ನಾನು ನಿರ್ವಂಚನೆಯಿಂದ ಈ ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುತ್ತೇನೆ. ಗ್ರಾಮಸ್ಥರ ಹಿತವನ್ನೇ ಬಯಸಿ ನಡೆದುಕೊಳ್ಳುತ್ತೇನೆ !' ಎಂದು ಹೇಳಿದನು. ಮಕ್ಕಳಿಗೂ ಇತರರಿಗೂ ಬುರುಗಲು ಬತ್ತಾಸುಗಳ ವಿತರಣೆಯಾಯಿತು. ದೊಡ್ಡವರಿಗೆ ಹೂವು ಗಂಧಗಳ ಸಮರ್ಪಣೆಯಾಯಿತು. 'ಕಾಯೌ ಶ್ರೀಗೌರಿ'ಯೊಡನೆ ಸಭೆ ಮುಕ್ತಾಯವಾಯಿತು.

ರಂಗಣ್ಣನ ಬಿಡಾರದಲ್ಲಿ ಚೇರ್ಮನ್ನು, 'ಸ್ವಾಮಿ ! ಪಾರ್ಟಿಗೀರ್ಟಿ ಇಲ್ಲದೆ ಐಕಮತ್ಯದಿಂದ ಇರ್ರಿ ಎಂದು ತಾವೇನೊ ಈ ದಿನ ನಮಗೆಲ್ಲ ಬುದ್ಧಿವಾದ ಹೇಳಿದ್ರಿ. ನಾವು ಹಳ್ಳಿ ಜನ; ವಿದ್ಯೆ ಇಲ್ಲದ ಒಕ್ಕಲ ಮಕ್ಕಳು. ಬೆಂಗಳೂರು ಮೈಸೂರು ದೊಡ್ಡ ದೊಡ್ಡ ಪಟ್ಟಣದಾಗೆಲ್ಲ ಓದಿದವರು ಪಾರ್ಟಿ ಕಟ್ಟಿಕೊಂಡು ವಾಜ್ಯ ಆಡ್ತಾರಲ್ಲ! ಒಬ್ಬರನ್ನೊಬ್ಬರು ಬೈದಾಡ್ತಾರಲ್ಲ? ಅದೇನೂ ಕಾಂಗ್ರೆಸ್ ಪಾರ್ಟಿ ಅಂತೆ, ಸೊತಂತ್ರ ಪಾರ್ಟಿ ಅಂತೆ, ಇನ್ನೂ ಏನೇನೋ ಹೇಳ್ತಾರೆ ಸ್ವಾಮಿ! ಚುನಾವಣೆಗಳ ಕಾಲ ಬಂತೋ ಅವರ ಕಾಟ ಹೇಳೋ ಹಾಗಿಲ್ಲ! ಗಾಂಧಿ ಪಟ ತರೋವರು! ಮಹಾರಾಜರ ಪಟ ತರೋವರು! ಬೀದೀಲೆ ಮಾರಾಮಾರಿ! ಹಳ್ಳಿ ಜನಕ್ಕೆಲ್ಲ ಏನೇನೋ ಬೋಧನೆ ಮಾಡಿ ಹಳ್ಳಿಗೆಲ್ಲ ಪಾರ್ಟಿ ತಂದು ಬಿಟ್ಟಿದ್ದಾರಲ್ಲ! ನೋಡಿ ಸ್ವಾಮಿ ನಮ್ಮ ಹಳ್ಳಿಲಿ ಈಚೆಗೆ ನಾಲ್ಕು ಜನ ಖಾದಿ ಬಟ್ಟೆ ಹಾಕ್ಕೊಂಡು ಗಾಂಧಿ ಪಟ ಇಟ್ಗೊಂಡು ಮೆರವಣಿಗೆ ಆಗಾಗ್ಗೆ ಹೊರಡ್ತಾರೆ! ಅವರಿಗೆ ಪ್ರತಿಕಕ್ಷಿಯಾಗಿ ಮತ್ತೆ ಯಾರೋ ನಾಲ್ಕು ಜನ ಮಹಾರಾಜರ ಪಟ ಎತ್ತಿಕೊಂಡು ಮೆರವಣಿಗೆ ಹೊರಡ್ತಾರೆ! ರೆಪ್ರಜೆಂಟಿ ಸಭೆ ನೋಡಿ! ಅಲ್ಲಿ ಪಾರ್ಟಿ ಪಾರ್ಟಿ ವ್ಯಾಜ್ಯ ! ಡಿಸ್ಟಿಕ್ಸ್ ಬೋರ್ಡ್ ನೋಡಿ, ಅಲ್ಲೇನೂ ಪಾರ್ಟಿ ! ಜನಾರ್ದನಪುರದ ಮುನಿಸಿಪಾಲಿಟಿ ನೋಡಿ, ಅಲ್ಲಿನ ವ್ಯಾಜ್ಯ ! ಈಗ ನಮ್ಮ ಪಂಚಾಯತಿಗೂ ಈ ಪಾರ್ಟಿ ವ್ಯಾಜ್ಯ ಬಂದುಬಿಟ್ಟಿದೆ! ಖಾದಿ ಬಟ್ಟೆ ಹಾಕಿದವರಿಗೇನೆ ಓಟು ಕೊಡಿ ಅಂತ ಹೊರಟಿದ್ದಾರೆ! ಹಳ್ಳಿ ಜನ ನಾವು. ನಾವು ಪಾರ್ಟಿ ಮಾಡಿ ವ್ಯಾಜ್ಯ ಆಡ್ತೇವೆ ಅಂತ ಸುಮ್ಮಸುಮ್ಮನೆ ನಮ್ಮನ್ನು ದೂರ್ತಾರಲ್ಲ! ಏನು ಮಾಡೋಣ ಹೇಳಿ ಸ್ವಾಮಿ!' ಎಂದು ಕೇಳಿದನು.

ರಂಗಣ್ಣ, 'ಅದೆಲ್ಲ ರಾಜಕೀಯ ವಿಚಾರ. ನಾನು ಸರಕಾರದ ನೌಕರ. ಅದನ್ನೆಲ್ಲ ಚರ್ಚಿಸಬಾರದು. ನಿಮ್ಮ ನಿಮ್ಮಲ್ಲಿ ವಾಜ್ಯ ಆಡಿಕೊಂಡು ಕೋರ್ಟು ಕಚೇರಿಗಳನ್ನು ಹತ್ತಬೇಡಿ; ಪರಸ್ಪರ ಛಲ ವೈರ ಇಟ್ಟು ಕೊಂಡು ಕೆಟ್ಟು ಹೋಗಬೇಡಿ. ಅಷ್ಟೇ ನಾನು ಹೇಳುವುದು? ಎಂದನು.

ಮಧ್ಯಾಹ್ನ ಭರ್ಜರಿ ಭೋಜನವಾದಮೇಲೆ ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡು ರಂಗಣ್ಣ ಸಂ ಸಾರದೊಂದಿಗೆ ಸಾಯಂಕಾಲ ಜನಾರ್ದನಪುರಕ್ಕೆ ಹಿಂದಿರುಗಿದನು. ಚೇರ್ಮನ್ನು ಒಳ್ಳೆಯ ಕಮಾನು ಕಟ್ಟಿದ ಬೇರೆ ಗಾಡಿಯನ್ನೂ ಜೊತೆಗೆ ಆಳುಗಳನ್ನೂ ಕಳಿಸಿದನು.

ಪ್ರಕರಣ ೨೬

ಉಗ್ರಪ್ಪನ ವಾದ

ಉಗ್ರಪ್ಪನ ಸಸ್ಪೆಂಡ್ ಆರ್ಡರ್ ಹೊರಡಿಸಿ ಹತ್ತಿರ ಹತ್ತಿರ ಒಂದು ತಿಂಗಳಾಗುತ್ತ ಬಂತು. ನಾಗೇನಹಳ್ಳಿಯ ಪಾಠ ಶಾಲೆಯ ಪ್ರಾರಂಭೋತೃವದಿಂದ ಮನಸ್ಸು ಹರ್ಷಯುಕ್ತವಾಗಿದ್ದರೂ ರಂಗಣ್ಣನಿಗೆ ಆಲೋಚನೆ ತಪ್ಪಲಿಲ್ಲ. ತನಗಿರುವುದು ಒಂದು ತಿಂಗಳು ಸಸ್ಪೆಂಡ್ ಮಾಡುವ ಅಧಿಕಾರ ಮಾತ್ರ. ತಾನು ಎಲ್ಲ ಕಾರ್ಡುಗಳನ್ನೂ ಸಾಹೇಬರಿಗೆ ಹೊತ್ತು ಹಾಕಿ ರಹಸ್ಯದ ವರದಿಯನ್ನು ಬರೆದು ಉಗ್ರಪ್ಪನನ್ನು ಡಿಸ್ಟ್ರಿಕ್ಟ್ ನಿಂದಲೇ ವರ್ಗಾಯಿಸಬೇಕೆಂದೂ, ಅವನನ್ನು ಮನ್ನಿಸಿ ಇದ್ದ ಸ್ಥಳದಲ್ಲಿಯೇ ಇಟ್ಟರೆ ತನ್ನಿಂದ ಮುಂದೆ ಕೆಲಸ ಮಾಡುವುದು ಸಾಧ್ಯವಿಲ್ಲ ವಂದೂ ಕಡಾಖಂಡಿತವಾಗಿ ತಿಳಿಸಿದ್ದಾಯಿತು. ಸಾಹೇಬರಿಂದ ಏನೊಂದು ಆರ್ಡರೂ ಬರಲಿಲ್ಲ. ಬೇರೆ ಡಿಸ್ಟ್ರಿಕ್ಟ್ ಗೆ ವರ್ಗಮಾಡಿಸುವುದಕ್ಕೆ ಹೆಚ್ಚು ಕಾಲ ಹಿಡಿಯುವುದೆಂದು ರಂಗಣ್ಣನಿಗೆ ತಿಳಿದಿತ್ತು. ಆ ಬೇರೆ ಜಿಲ್ಲೆಯ ಅಧಿಕಾರಿಯೊಡನೆ ಪತ್ರ ವ್ಯವಹಾರ ನಡೆಸಿ ಅಲ್ಲಿರುವ ಖಾಲಿ ಜಾಗಕ್ಕೆ ಕಳಿಸಿಯೋ, ಪರಸ್ಪರ ವಿನಿಮಯದಿಂದಲೋ ಉಗ್ರಪ್ಪನನ್ನು ತೊಲಗಿಸಬೇಕಾಗಿತ್ತು. ಈ ಮಧ್ಯೆ ಒಂದು ತಿಂಗಳ ಅವಧಿ ಮುಗಿದು ಹೋದರೆ ಅವನು ಪುನಃ ಕೆಲಸಕ್ಕೆ ಬಂದು ಸೇರಿಕೊಳ್ಳಬಹುದು. ಆಗ ಏನು ಮಾಡಬೇಕು ? ಅವನನ್ನು ಕೆಲಸಕ್ಕೆ ತೆಗೆದು ಕೊಳ್ಳುವುದಿಲ್ಲವೆಂದು ಹೇಳುವುದಕ್ಕಾಗುವುದಿಲ್ಲ. ಬಲಾತ್ಕಾರದಿಂದ ರಜ ಕೊಟ್ಟು ಕಳಿಸಿದರೆ ಮೇಲಿನವರು ಒಪ್ಪದೆ ಆಕ್ಷೇಪಿಸಬಹುದು. ಹೀಗೆ ಆಲೋಚನಾ ತರಂಗಗಳಲ್ಲಿ ಮಗ್ನನಾಗಿ ರಂಗಣ್ಣ ಕಚೇರಿಯಲ್ಲಿ ಕುಳಿತಿದ್ದಾಗ ಬಾಗಿಲ ಮುಂದೆ ಒಂದು ಅಗಲವಾದ ನೆರಳು ಬಿದ್ದಂತೆ ಕಂಡಿತು. ಆ ನೆರಳು ಅದೃಶ್ಯವಾಗಿ ಉಗ್ರಪ್ಪ ನೇ ಸಾಕ್ಷಾತ್ತಾಗಿ ನಿಂತಿದ್ದನು ! ದೊಡ್ಡ ಬೂದುಗುಂಬಳ ಕಾಯಿನಂತೆ ದಪ್ಪ ಬೋಳು ತಲೆ ! ಸ್ವಲ್ಪ ಕುಳಿ ಬಿದ್ದಿದ್ದರೂ ತೇಜಸ್ವಿಯಾಗಿದ್ದ ಕಣ್ಣುಗಳು | ಮುಖಕ್ಕೆಲ್ಲ ಕಿಟ್ಟೆ ರಟ್ಟಿ ಗಾತ್ರದ ಮೀಸೆಗಳು ! ಕ್ಷೌರಮಾಡಿಸಿಕೊಳ್ಳದೇ ಇದ್ದುದರಿಂದ ಬ್ರಷ್ಟಿನಂತೆ ಬೆಳೆದಿದ್ದ ಒರಟು ಗಡ್ಡ ! ಖಾದಿಯ ಒಂದು ಜುಬ್ಬವನ್ನು ತೊಟ್ಟು ಕೊಂಡು ಖಾದಿಯ ಪಂಚೆಯನ್ನು ಲುಂಗಿ ಸುತ್ತಿ ಕಂಡು, ಮಡಸಿದ್ಧ ಖಾದಿ ಅಂಗವಸ್ತ್ರವನ್ನು ಭುಜದಮೇಲೆ ಹಾಕಿಕೊಂಡು, ಕೈಯಲ್ಲಿ ದಪ್ಪವಾದ ದೊಣ್ಣೆಯೊಂದನ್ನು ಹಿಡಿದುಕೊಂಡು ಎದುರಿಗೆ ರಾಕ್ಷಸಾಕಾರದಲ್ಲಿ ನಿಂತಿದ್ದನು ! ರಂಗಣ್ಣ ಧೈರ್ಯಶಾಲಿಯೇ ಆಗಿದ್ದರೂ ಅವನ ಎದೆ ಝಲ್ಲೆಂದಿತು ; ರಕ್ತ ವೇಗವಾಗಿ ಹರಿಯತೊಡಗಿತು; ಮುಖದಲ್ಲಿ ಕಳೆ ಇಳಿಯಿತು. ಉಗ್ರಪ್ಪನು ಕೈ ದೊಣ್ಣೆಯನ್ನು ಬಾಗಿಲ ಹೊರಗೆ ಒರಗಿಸಿ ಹೊಸ್ತಿಲ ಬಳಿ ನಿಂತುಕೊಂಡನು. ನಮಸ್ಕಾರವನ್ನು ಮಾಡಲಿಲ್ಲ. ರಂಗಣ್ಣ ಒಂದು ಕ್ಷಣದಲ್ಲಿ ಧೈರ್ಯ ತಂದುಕೊಂಡು,

'ಒಳಕ್ಕೆ ಬನ್ನಿ ಮೆಷ್ಟೇ ! ಕುಳಿತುಕೊಳ್ಳಿ' ಎಂದು ಹೇಳಿದನು.

ಉಗ್ರಪ್ಪ ಒಳಕ್ಕೆ ಹೋಗಿ ಮೇಜಿನ ಎದುರಂಚಿನಲ್ಲಿ ರಂಗಣ್ಣನಿಗೆ ಎದುರಾಗಿ ನಿಂತುಕೊಂಡನು.

'ಕುಳಿತುಕೊಳ್ಳಿ. ಕುಳಿತುಕೊಂಡೇ ಮಾತನಾಡಿ ಉಗ್ರಪ್ಪ ನವರೇ !

'ಇಲ್ಲ ಸ್ವಾಮಿ! ನಾನು ಕುಳಿತು ಕೊಳ್ಳುವುದಿಲ್ಲ. ನಿಂತುಕೊಂಡೇ ನಾಲ್ಕು ಮಾತನ್ನು ಹೇಳಿ ಹೊರಟು ಹೋಗುತ್ತೇನೆ.'

'ಏನನ್ನು ಹೇಳಬೇಕೆಂದಿರುವಿರೋ ಅದನ್ನು ಸಮಾಧಾನದಿಂದಲೇ ಹೇಳಿ, ಕುಳಿತುಕೊಂಡು ಹೇಳಿದರೆ ಸಮಾಧಾನಚಿತ್ತವಿರುತ್ತದೆ.'

'ಈಗ ಸಮಾಧಾನಚಿತ್ತದಿಂದಲೇ ಬಂದಿದ್ದೇನೆ ಸ್ವಾಮಿ ! ಕೋಪ ತಾಪಗಳೇನೂ ಇಲ್ಲ !'

'ಒಳ್ಳೆಯದು ಮೇಷ್ಟೆ !'

'ಸ್ವಾಮಿ ! ತಮ್ಮನ್ನು ಮೆಚ್ಚಿ ಕೊಂಡೆ ! ತಮ್ಮ ಧೈರ್ಯವನ್ನು ಮೆಚ್ಚಿಕೊಂಡೆ ! ದೇಹಶಕ್ತಿ ಹಲವರಿಗೆ ಇರಬಹುದು. ಹೇಡಿಗಳಾಗಿದ್ದರೆ ಆ ದೇಹಶಕ್ತಿ ಕಾರ್ಯಗತವಾಗುವುದಿಲ್ಲ ಧೈರ್ಯದಿಂದಲೇ ಕಾರ್ಯಸಾಧನೆ ! ತಮ್ಮ ಧೈರವನ್ನು ಮೆಚ್ಚಿ ಕೊಂಡೆ ! ಭೇಷ್!'

'ನಿಮ್ಮನ್ನು ದಂಡಿಸಿದ್ದು ಧೈರ್ಯದ ವಿಚಾರವೆ ? ಬಡಮೇಷ್ಟುಗಳನ್ನು ದಂಡಿಸುವುದು ಹೇಡಿತನವೆಂದೇ ನಾನು ತಿಳಿದುಕೊಂಡಿದ್ದೇನೆ.' 'ಹಾಗಲ್ಲ ಸ್ವಾಮಿ? ನಾನು ಪುಂಡ ! ಯಾರನ್ನೂ ಲಕ್ಷ್ಯ ಮಾಡತಕ್ಕವನಲ್ಲ. ಜೀವದ ಹಂಗು ಇಲ್ಲದವನು ! ಆದ್ದರಿಂದ ನನ್ನ ಮಾತಿಗೆ ಯಾರೂ ಬರುತ್ತಿರಲಿಲ್ಲ ; ಬರುವ ಧೈರವೇ ಅವರಿಗಿರುತ್ತಿರಲಿಲ್ಲ. ನನ್ನ ಆಕಾರವನ್ನು ನೋಡಿದರೇನೆ ಸಾಕು,- ಏನು ಉಗ್ರಪ್ಪನವರೇ ? ಎಂದು ಕುಶಲ ಪ್ರಶ್ನೆ ಮಾಡಿ ಅವರಾಗಿ ಮೊದಲೇ ನಮಸ್ಕಾರ ಮಾಡುತ್ತಿದ್ದರು ! ನಾನು ಅದೇ ಜೋರಿನಿಂದ ಧೂರ್ತನಾಗಿ ವರ್ತಿಸುತ್ತಿದ್ದೆ. ನನಗೆ ತಾವು ಪಾಠ ಕಲಿಸಿಬಿಟ್ಟಿರರಿ ! ನೀವೂ ಜೀವದ ಹಂಗಿಲ್ಲದವರು ಎಂದು ನನಗೆ ಮನವರಿಕೆಯಾಗಿ ಹೋಯಿತು. ಭೇಷ್ ! ಇದ್ದರೆ ಇಂಥ ಗಂಡು ಇನ್ ಸ್ಪೆಕ್ಟರು ಇರಬೇಕು ಎಂದು ಮೆಚ್ಚಿಕೊಂಡಿದ್ದೇನೆ ಸ್ವಾಮಿ ! ಆದರೆ ತಾವು ದುಡುಕಿ ನನಗೆ ಅನ್ಯಾಯ ಮಾಡಿದ್ದೀರಿ ! ಅದನ್ನು ತಿಳಿಸಬೇಕೆಂದು ನಾನು ಬಂದಿದ್ದೇನೆ.'

'ಮೇಷ್ಟೇ ! ನಾನು ಅನ್ಯಾಯ ಮಾಡಿದ್ದೇನೆಯೆ ? ಅನ್ಯಾಯವೆಂದು ತೋರಿಸಿಕೊಟ್ಟರೆ ಸಸ್ಪೆನ್ಷನ್ ಆರ್ಡರನ್ನು ಈ ಕ್ಷಣ ವಜಾ ಮಾಡಿ, ಈ ಅವಧಿಯನ್ನು ಪ್ರಿ ವಿಲೆಜ್ ರಜವನ್ನಾಗಿ ಬದಲಾಯಿಸಿ, ಈ ದಿನವೇ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತೇನೆ.'

'ಪುನಃ ಕೆಲಸಕ್ಕೆ ಬರಬೇಕೆಂಬ ಆಶೆಯಿಂದ ಆ ಮಾತನ್ನು ನಾನು ಹೇಳಲಿಲ್ಲ ಸ್ವಾಮಿ ! ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಈ ಗುಲಾಮ ಗಿರಿಯನ್ನು ತಪ್ಪಿಸಿ ಬಿಟ್ಟರೆ ! ತಮಗೆ ನಾನು ಬಹಳ ಕೃತಜ್ಞನಾಗಿದ್ದೇನೆ.'

'ಸಸ್ಪೆನ್ಷನ್ ಆರ್ಡರನ್ನು ವಜಾ ಮಾಡಿದರೆ ?'

'ವಜಾ ಮಾಡಿದರೂ ನಾನು ಬರುವುದಿಲ್ಲ. ತಮ್ಮ ಕಾಲಿಗೆ ಬಿದ್ದು, ಕ್ಷಮಾಪಣೆ ಕೇಳಿಕೊಂಡು, ವಜಾಮಾಡಿಸಿಕೊಂಡೆನೆಂದು ಜನ ಆಡುತ್ತಾರೆ ಸ್ವಾಮಿ ! ಈಗ ಆಗಿರುವ ಅಪಮಾನದ ಜೊತೆಗೆ ಅದೊಂದು ಅಪಮಾನ ಹೆಚ್ಚಾಗಿ ಬರುತ್ತದೆ. ನರಮನುಷ್ಯರಿಗಾರಿಗೂ ಈ ತಲೆಯನ್ನು ಬಗ್ಗಿಸುವುದಿಲ್ಲವೆಂಬ ನನ್ನ ಶಪಥಕ್ಕೆ ಭಂಗ ಬಂದಂತಾಗುತ್ತದೆ. ಈ ಸಸ್ಪೆನ್ಷನ್ನಿನಿಂದ ತಮ್ಮ ಕೀರ್ತಿ ಜಗತ್ನಸಿದ್ಧವಾಯಿತು ! ನನ್ನ ಅಪಮಾನ ಲೋಕಪ್ರಚಾರವಾಯಿತು ! ತಾವೀಗ ಏನು ದುರಸ್ತು ಮಾಡಿದರೂ ಮೊದಲಿನ ಉಗ್ರಪ್ಪನಾಗುವುದಿಲ್ಲ, ತಲೆಯೆತ್ತಿಕೊಂಡು ಪಾಳೆಯಗಾರನಾಗಿ ಮೆರೆಯುತ್ತಿದ್ದವನು ಅಪಮಾನವನ್ನು ಅನುಭವಿಸಿಬಿಟ್ಟಿ ! ಈ ಜನಾರ್ದನಪುರದಲ್ಲಿ ಮುಖ ತೋರಿಸದಂತೆ ಭಂಗಪಟ್ಟಿ ! ನಾನು ಮತ್ತೆ ಕೆಲಸಕ್ಕೆ ಸೇರಿ ಉಪಾಧ್ಯಾಯರ ಸಂಘದ ಸಭೆಗಳಲ್ಲಿ ಹೇಗೆ ಮುಖವೆತ್ತಿಕೊಂಡು ಕುಳಿತುಕೊಳ್ಳಲಿ ! ಅಪ್ಪಣೆಯಾಗಲಿ ಸ್ವಾಮಿ ! '

'ನಾನೇನು ಮಾಡಲಿ ಮೇಷ್ಟೆ ! ನನಗೂ ಬಹಳ ವ್ಯಸನವಾಗುತ್ತಿದೆ, ನೀವು ಹಾಗೆಲ್ಲ ಅವಿಧೇಯತೆಯಿಂದ ನಡೆದುಕೊಳ್ಳದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಸರಕಾರದ ನೌಕರಿಯಲ್ಲಿದ್ದ ಮೇಲೆ ನಾವೆಲ್ಲ ಶಿಸ್ತಿಗೊಳಪಟ್ಟಿರಬೇಕು ; ತಗ್ಗಿ ನಡೆಯಬೇಕು. '

'ಅದೇ ಸ್ವಾಮಿ ನನಗೂ ತಮಗೂ ವ್ಯತ್ಯಾಸ! ತಾವು ನನಗೆ ಅನ್ಯಾಯ ಮಾಡಿದ್ದೀರೆಂದು ನಾನು ಕಾರಣವಿಲ್ಲದೆ ಹೇಳಲಿಲ್ಲ. ಸರಕಾರದ ಮಾತು ಆಡುತ್ತೀರಿ; ನೌಕರಿಯ ಮಾತು ಆಡುತ್ತೀರಿ ; ತಗ್ಗಿ ನಡೆಯಬೇಕು ಎಂದು ಹೇಳುತ್ತೀರಿ. ತಮ್ಮನ್ನು ಕೇಳುತ್ತೇನೆ. ಹೇಳಿ ಸ್ವಾಮಿ ! ತಾವು ಓದಿದವರು, ನಮ್ಮ ಇಲಾಖೆಯಲ್ಲಿ ತಮ್ಮಷ್ಟು ಬುದ್ಧಿವಂತರು ನಾಲೈದು ಜನಇರುವರೋ ಇಲ್ಲವೋ ಹೇಳಲಾರೆ. ನಿಧಾನವಾಗಿ ಆಲೋಚನೆ ಮಾಡಿ ಸ್ವಾಮಿ ! ಸರಕಾರ ಎಂದರೆ, ಅದನ್ನು ನಡೆಸುವ ನಾಲ್ಕು ಜನ ಮನುಷ್ಯರು ತಾನೇ ! ಸರಕಾರಕ್ಕೆ ರೂಪ ಇದೆಯೇ ? ಗುಣ ಇದೆಯೇ ? ಎಲ್ಲ ಆ ನಾಲ್ವರ ಕಾರುಬಾರು ! ಸರಕಾರದ ಗೌರವ ಎಂದರೆ ಆ ನಾಲ್ವರ ಗೌರವ ! ಅವರೇ ಮಾಡುವ ಹುಕುಮುಗಳು ಜಾರಿಗೆ ಬರದಿದ್ದರೆ ಅವರ ಗೌರವ ಉಳಿಯುತ್ತದೆಯೇ ? ಸರಕಾರದ ಗೌರವಕ್ಕೆ ಕುಂದುಕವಲ್ಲವೇ ? ಜಾರಿಗೆ ಬಾರದ ಹುಕುಮುಗಳನ್ನು ಏತಕ್ಕೆ ಮಾಡ ಬೇಕು ? ಹೇಳಿ ಸ್ವಾಮಿ !- ಇಲ್ಲಿ ಹೇಸಿಗೆ ಮಾಡಬಾರದು ! ಹೇಸಿಗೆ ಮಾಡಿದವರು ದಂಡನೆಗೊಳಗಾಗುತ್ತಾರೆ !-ಎಂದು ಬೋರ್ಡುಗಳನ್ನು ಊರಿನಲ್ಲೆಲ್ಲ ನೆಡುತ್ತಾರೆ. ಬೋರ್ಡಿನ ಕಂಬದ ಸುತ್ತಲೂ ಹೇಸಿಗೆಯನ್ನು ಎಲ್ಲರೂ ಮಾಡುತ್ತಾರೆ ! ಆ ಕಂಬಕ್ಕನೆ ಮೂತ್ರಾಭಿಷೇಕ ಮಾಡುತ್ತಾರೆ! ಸರಕಾರಿ ನೌಕರರು, ಕಡೆಗೆ ತಪ್ಪಿತಸ್ಥರನ್ನು ಹಿಡಿಯಬೇಕಾದ ಪೊಲೀಸಿನವರೇ ಮೂತ್ರಾಭಿಷೇಕ ಮಾಡುವುದನ್ನು ನಾನು ನೋಡಿದ್ದೇನೆ. ಅಪಮಾನವನ್ನು ತಪ್ಪಿಸಲು ಪ್ರತಿಭಟಿಸಿದರೆ ನಾನು ಅಪರಾಧಿಯೇ? ನನಗೆ ದಂಡನೆ ಮಾಡಬಹುದೇ ? ಸರಕಾರಕ್ಕೆ ನಿತ್ಯ ಅಪಮಾನವಾಗುತ್ತಿರುವುದನ್ನು ನಾನು ತಪ್ಪಿಸಿದರೆ ನನಗೆ ಸಸ್ಪೆಂಡ್ ಮಾಡಬಹುದೇ ? ಬಸ್ಸುಗಳಲ್ಲಿ ನೋಡಿ ಸ್ವಾಮಿ ! ಬೀಡಿ ಸಿಗರೇಟುಗಳನ್ನು ಖಂಡಿತ ಸೇದಬಾರದು- ಎಂದು ಬೋರ್ಡು ! ಒಂದು ಕೈಯಲ್ಲಿ ಚಕ್ರ ಹಿಡಿದುಕೊಂಡು ಮತ್ತೊಂದು ಕೈಯಲ್ಲಿ ಸಿಗರೇಟ್ ಹಚ್ಚಿಕೊಳ್ಳುತ್ತ, ರಾಜಾರೋಷಾಗಿ ಹೊಗೆಯನ್ನೆಲ್ಲ ಆ ಬೋರ್ಡಿಗೇ ಬಿಡುವ ಡ್ರೈವರನ್ನು ನೋಡಿಲ್ಲವೇ ನೀವು ? ಮುಂದುಗಡೆ ಸೀಟುಗಳಲ್ಲಿ ಕುಳಿತುಕೊಳ್ಳುವ ಸರಕಾರದ ಅಧಿಕಾರಿಗಳೇ ಆ ಬೋರ್ಡಿಗೆ ಧೂಪಾರತಿ ಎತ್ತುವುದನ್ನು ನೋಡಿಲ್ಲವೇ ನೀವು ? ಬಸ್ಸಿನ ಒಳಗಡೆಯಲ್ಲಿ ಸಿಗರೇಟುಗಳನ್ನು ಹಚ್ಚಿ ಕೊಂಡು ಎದುರಿಗೆ ಕುಳಿತಿರುವ ಸಭ್ಯರ ಮತ್ತು ಸ್ತ್ರೀಯರ ಮುಖಗಳಿಗೇನೆ ಹೊಗೆ ಬಿಡುವ ಮನುಷ್ಯರನ್ನು ನೋಡಿಲ್ಲವೇ ನೀವು ? ಏಕೆ ಸ್ವಾಮಿ ನಿಮಗೆ ಆ ಬೋರ್ಡು ? ಸರಕಾರ ತನ್ನ ಆಜ್ಞಾಭಂಗವನ್ನು ಸಹಿಸುತ್ತಿದ್ದರೆ ಅದು ಸರಕಾರವೇ ? ರೈಲುಗಳಲ್ಲಿ ನೋಡಿ ! ಇಪ್ಪತ್ತು ಜನ ಕುಳಿತು ಕೊಳ್ಳುವ ಗಾಡಿಯಲ್ಲಿ ಅರುವತ್ತು ಜನ ! ಒಳಗೆ ಬೋರ್ಡು ನೋಡಿದರೆ- ಇಪ್ಪತ್ತು ಜನ ಕುಳಿತುಕೊಳ್ಳುವುದು - ಎಂದು ಲಿಖಿತ! ಆ ಬೋರ್ಡು ಹಾಕಿ ಅಪಮಾನ ಪಟ್ಟು ಕೊಳ್ಳಬೇಡಿ. ಎಂತಿದ್ದರೂ ನಮ್ಮ ಜನ ಕುರಿಗಳು ! ಸರಕಾರಕ್ಕೆ ತನ್ನ ಮಾತು ನಡೆಯಬೇಕೆಂಬ ಸ್ವಾಭಿಮಾನವಿಲ್ಲ. ದೊಡ್ಡ ದೊಡ್ಡ ಅಧಿಕಾರಿಗಳಲ್ಲೇ ಲಂಚರುಷುವತ್ತುಗಳು ! ಎಲ್ಲ ಕಡೆಯೂ ಸರಕಾರದ ಆಪ್ಟೆಲ್ಲಂಘನೆಗಳು ! ಗತಿಯಿಲ್ಲದ ನಾಲ್ಕು ಜನರನ್ನು ದಂಡಿಸಿ ಶಿಸ್ತು ಕಾಪಾಡುವುದು ಎಂದರೇನು ? ?

'ನನ್ನ ಮೇಲೆ ದೋಷಾರೋಪಣೆಗಳನ್ನು ಹೊರಿಸಿ ಸಸ್ಪೆಂಡ್ ಮಾಡಿದಿರಿ! ಅದು ಅನ್ಯಾಯವೆಂದೇ ಹೇಳುತ್ತೇನೆ. ನಮ್ಮ ಇಲಾಖೆಯ ರೂಲ್ಸು ರೆಗ್ಯುಲೇಷನ್ನು ಗಳನ್ನು ತಾವು ನೋಡಿದ್ದೀರಿ, ಪ್ರೈಮರಿ ತರಗತಿ ಗಳಲ್ಲಿ ಇಪ್ಪತೈದು-ಮುವ್ವತ್ತು ಮಕ್ಕಳು ; ಮಿಡಲ್ ಸ್ಕೂಲಿನ ತರಗತಿಗಳಲ್ಲಿ ನಲವತ್ತು ಮಕ್ಕಳು, ಎಂದು ನಿಗದಿ ಮಾಡಿದ್ದಾರೆ. ಏತಕ್ಕೋಸ್ಕರ ನಿಗದಿಮಾಡಿದ್ದಾರೆ ಸ್ವಾಮಿ ? ಸಾವಧಾನವಾಗಿ ಆಲೋಚನೆ ಮಾಡಿ, ತಾವು ವಿದಾಭ್ಯಾಸ ಪದ್ಧತಿಗಳನ್ನು ಚೆನ್ನಾಗಿ ಓದಿಕೊಂಡಿದ್ದೀರಿ ; ಮನಶ್ಯಾಸ್ತ್ರದ ತತ್ತ್ವಗಳನ್ನು ತಿಳಿದುಕೊಡಿದ್ದೀರಿ. ಒಬ್ಬ ಉಪಾಧ್ಯಾಯನು ಎಷ್ಟು ಜನ ಮಕ್ಕಳಿಗೆ ನ್ಯಾಯವಾಗಿ ಪಾಠ ಹೇಳಬಹುದು ? ತರಗತಿಯಲ್ಲಿ ಎಷ್ಟು ಜನ ಮಕ್ಕಳಿದ್ದರೆ ವಿದ್ಯಾಭಿವೃದ್ಧಿಗೆ ಮತ್ತು ಸಂವಿಧಾನಕ್ಕೆ ಅನುಕೂಲ ? ಎಂಬ ಅಂಶಗಳನ್ನು ಗಮನಿಸಿ ಅಲ್ಲವೇ ನಿಗದಿ ಮಾಡಿರುವುದು ? ನನ್ನ ತರಗತಿಯಲ್ಲಿ ನಲವತ್ತೈದು ಜನ ಮಕ್ಕಳು ! ಕುಳಿತುಕೊಳ್ಳುವುದಕ್ಕೆ ಎಲ್ಲರಿಗೂ ಬೆಂಚುಗಳಿಲ್ಲ, ಹಲಗೆಗಳಿಲ್ಲ. ಕೊಟಡಿ ಚಿಕ್ಕದು ; ಕಿಟಕಿಗಳಲ್ಲಿ, ನೆಲದ ಮೇಲೆ, ನನ್ನ ಮೇಜಿನ ಪಕ್ಕಗಳಲ್ಲಿ, ಎಲ್ಲ ಕಡೆಯೂ ಮಕ್ಕಳು ಕುಳಿತಿರುತ್ತಾರೆ. ಬರೆಯಲು ಬೋರ್ಡಿನ ಹತ್ತಿರ ಹೋಗಬೇಕಾದರೆ ಹೆಜ್ಜೆಯಿಡುವುದಕ್ಕೆ ಜಾಗವಿಲ್ಲ ; ಬೋರ್ಡಿನ ಮೇಲೆ ಬರೆದರೆ ಅರ್ಧ ಜನ ಮಕ್ಕಳಿಗೆ ಕಾಣಿಸುವುದಿಲ್ಲ. ಹೌದು ಸ್ವಾಮಿ! ನಾನು ಹೇಳಿದೆ : ಮುವ್ವತ್ತು ಹುಡುಗರಿಗಿಂತ ಹೆಚ್ಚಾಗಿದ್ದರೆ ನಾನು ಪಾಠ ಮಾಡುವುದಿಲ್ಲ ಎಂದು ಹೇಳಿದೆ ; ಹೆಚ್ಚು ಹುಡುಗರನ್ನು ಕಳಿಸಿಬಿಟ್ಟೆ. ಸರಕಾರ ಕೊಡುವ ಅಲ್ಪ ಸಂಬಳಕ್ಕೆ ಹೆಚ್ಚು ಜನ ಹುಡುಗರನ್ನೆಲ್ಲ ಸೇರಿಸಿಕೊಂಡು ಉಸಿರು ಕಳೆದುಕೊಂಡು ನಾನೇಕೆ ಪಾಠಮಾಡಬೇಕು ? ನಾನೇಕೆ ಸಾಯಬೇಕು ? ನಾನು ಸತ್ತರೆ ನನ್ನ ಸಂಸಾರ ಪೋಷಣೆಗೆ ಸರಕಾರ ನೆರವಾಗುತ್ತದೆಯೆ ? ತಾವು ಆ ಹೆಡ್‌ಮೇಷ್ಟರ ಮಾತು ಕೇಳಿ ಕೊಂಡು ನನ್ನನ್ನು ಸಸ್ಪೆಂಡ್ ಮಾಡಿದಿರಿ. ರೋಗಕ್ಕೆ ಮದ್ದು ಹುಡುಕದೆ ರೋಗಿಯನ್ನೇ ಕೊಂದುಬಿಟ್ಟರೆ, ಮಾಡಬಹುದೇ ಸ್ವಾಮಿ ?'

'ಇಲಾಖೆಗೂ ರೂಲ್ಕು ರೆಗ್ಯುಲೇಷನ್ ಗೊತ್ತಿದೆ ಮೇಷ್ಟೆ ! ಊರ ಜನರ ಒತ್ತಾಯದಿಂದ, ಸಾಹೇಬರ ನಿರ್ದೆಶದಿಂದ ನಿಗದಿಯ ಸಂಖ್ಯೆಗಿ೦ತ ಹೆಚ್ಚಾಗಿ ಸೇರಿಸಬೇಕಾಗುತ್ತದೆ. ಏನು ಮಾಡಬೇಕು ??

'ಬಡಮೇಷ್ಟರುಗಳ ಬಲಿಯಾಗ ಬೇಕು ಎಂದು ಹೇಳುತ್ತೀರಾ ಸ್ವಾಮಿ ! ಊರ ಜನ ಒತ್ತಾಯ ಮಾಡಿದರೆ ಸರ್ಕಾರಕ್ಕೆ ತಗಾದೆ ಕೊಟ್ಟು ನೀವು ಬೇರೊಂದು ಸ್ಕೂಲನ್ನು ಸ್ಥಾಪಿಸಿರಿ! ಹೆಚ್ಚಿಗೆ ಉಪಾಧ್ಯಾಯರನ್ನು ಸರ್ಕಾರದಿಂದ ಕೊಡಿಸಿಕೊಡಿ ! ಈ ದೊಡ್ಡ ಊರಿಗೆಲ್ಲ ಒಂದೇ ಪ್ರೈಮರಿ ಸ್ಕೂಲು! ನಾನೂರು ಐವತ್ತು ಜನ ಮಕ್ಕಳು! ಒಂದೊಂದು ತರಗತಿಯಲ್ಲಿ ನಲವತ್ತು ಐವತ್ತು ಮಕ್ಕಳು ! ಸ್ಥಳ ಕಿಷ್ಕಿಂಧ, ಕುರಿಗಳನ್ನು ರೊಪ್ಪದಲ್ಲಿ ಕೂಡಿದಂತೆ ಮಕ್ಕಳನ್ನು ಕೂಡುತ್ತಾರೆ, ಊರ ಜನ,-ನಮ್ಮ ಮಕ್ಕಳನ್ನು ಸ್ಕೂಲಿಗೆ ಹಾಕಿದರೂ ವಿದ್ಯೆಯೆ ಬರುವುದಿಲ್ಲ, ಮೇಷ್ಟರು ಪಾಠವೇ ಮಾಡುವುದಿಲ್ಲ ಎಂದು ನಮ್ಮನ್ನು ದೂರಬೇಕು ! ಸಾಹೇಬರುಗಳು ವಿದ್ಯಾಭಿವೃದ್ಧಿ ಏನೂ ಆಗಿಲ್ಲ, ಮೇಷ್ಟು ಗಳು ಕಳ್ಳಾಟ ಆಡುತ್ತಾರೆ ಎಂದು ನಮ್ಮನ್ನು ದಂಡಿಸಬೇಕು ! ಇದು ನ್ಯಾಯವೇ ಸ್ವಾಮಿ? ಹಿಂದಿನ ಡಿ. ಇ. ಓ ಸಾಹೇಬರು ಆ ದಿನ ಮಿಡಲ್ ಸ್ಕೂಲಿಗೆ ಹೋಗಿ ತನಿಖೆಯ ಶಾಸ್ತ್ರ ಮಾಡಿ, ಪರೀಕ್ಷೆಯ ಫಲಿತಾಂಶಗಳು ತೃಪ್ತಿಕರವಾಗಿಲ್ಲ ಎಂದು ಆಕ್ಷೇಪಿಸಿ, ಎಲ್ಲ ಮೇಷ್ಟರುಗಳಿಗೂ ಐದು ಐದು ರುಪಾಯಿ ಜುಲ್ಮಾನೆ ಹಾಕಿದರಲ್ಲ ! ಒಂದೊಂದು ತರಗತಿಯಲ್ಲಿ ಅರುವತ್ತೈದು ಮಕ್ಕಳಿದ್ದಾರೆ; ಹೆಚ್ಚಾಗಿ ಮೇಷ್ಟರುಗಳನ್ನು ಕೊಟ್ಟಿಲ್ಲ. ಸತ್ಯವಾಗಿ ಹೇಳುತ್ತೇನೆ ಸ್ವಾಮಿ! ನಾನು ಆ ದಿನ ಮಿಡಲ್ ಸ್ಕೂಲಿನಲ್ಲಿದ್ದಿದ್ದರೆ ಜೀವದ ಹಂಗು ತೊರೆದು ಆ ಸಾಹೇಬರನ್ನು ನನ್ನ ದೊಣ್ಣೆಯಿಂದ ಚಚ್ಚಿ ಬಿಡುತ್ತಿದ್ದೆ ! ಯಾವಾಗ ನೀವು ಸಂವಿಧಾನದ ನಿಯಮಗಳನ್ನು ಪಾಲಿಸುವುದಿಲ್ಲವೋ, ಯಾವಾಗ ನೀವು ರೂಲ್ಸು ರೆಗ್ಯುಲೇಷನ್ನುಗಳನ್ನು ಉಲ್ಲಂಘಿಸುತ್ತೀರೋ ಆವಾಗ ವಿದ್ಯಾ ಭಿವೃದ್ಧಿಯ ಮಾತು ಆಡಬೇಡಿ, ಶಿಸ್ತಿನ ಮಾತು ಎತ್ತಬೇಡಿ, ನಮಗೆ ದಂಡನೆ ಗಿ೦ಡನೆ ಮಾಡಬೇಡಿ, ನಮಗಿಷ್ಟವಿದ್ದರೆ ನಾವು ಪಾಠ ಮಾಡುತ್ತೆವೆ ; ಇಷ್ಟವಿಲ್ಲದಿದ್ದರೆ ಮಲಗಿ ನಿದ್ರೆ ಮಾಡುತ್ತೇವೆ. ರೂಲ್ಸು ಗಳನ್ನು ಪಾಲಿಸುವುದಕ್ಕೂ ಉಲ್ಲಂಘಿಸುವುದಕ್ಕೂ ನಿಮಗೆ ಸ್ವಾತಂತ್ರ್ಯ ! ಪಾಠ ಹೇಳುವುದಕ್ಕೂ ಬಿಡುವುದಕ್ಕೂ ನಮಗೆ ಸ್ವಾತಂತ್ರ್ಯ !

'ಸರಕಾರದ ನೌಕರರಿಗೆ ಸ್ವಾತಂತ್ರ್ಯವಿಲ್ಲ ಮೇಷ್ಟೇ

'ನಾವು ಗುಲಾಮರೇನು ಸ್ವಾಮಿ ? ಸರಕಾರದ ಅಂಗಗಳಲ್ಲಿ ನಾವೂ ಒಂದಲ್ಲವೇ ? ನಮ್ಮ ಸ್ಕೂಲಿನ ಕಾಗದಪತ್ರಗಳು ಸರಕಾರಿ ಪತ್ರಗಳಲ್ಲವೇ ? ತಮ್ಮ ಕಚೇರಿಯ ಕಾಗದಪತ್ರಗಳು ಸರಕಾರದ ರಿಕಾರ್ಡುಗಳಲ್ಲವೇ ? ತಮ್ಮ ಕಚೇರಿಯ ವ್ಯವಹಾರವೆಲ್ಲ ಮೈಸೂರು ಸರ್ಕಾರಿಯ ಮೇಲೆ ನಡೆಯುವುದಿಲ್ಲವೇ ? ನಾವು ಗುಲಾಮರೇ ಸ್ವಾಮಿ ? ಮನುಷ್ಯರಲ್ಲವೇ ನಾವು ? ಆತ್ಮ ಗೌರವವಿಲ್ಲವೇ ನಮಗೆ ? ಮನುಷ್ಯ ಸಹಜವಾದ ಹಕ್ಕುಗಳಿಲ್ಲವೇ ನಮಗೆ ? ಮದಾಂಧರಾದ ಅಧಿಕಾರಿಗಳು ನಮ್ಮನ್ನು ಗುಲಾಮರಂತೆ ಕಂಡರೆ ನಾವು ಪ್ರತಿಭಟಿಸಬೇಕು, ಅವರಿಗೆ ಬುದ್ಧಿ ಕಲಿಸಬೇಕು. ನಾನು ಹಿಂದೆ ಡೆಪ್ಯುಟಿ ಕಮಿಷನರ್ ಸಾಹೇಬರಿಗೆ ಹಾಗೆ ಬುದ್ಧಿ ಕಲಿಸಿದೆ ಸ್ವಾಮಿ ! ತಮಗೆಲ್ಲ ತಿಳಿದಿರಬೇಕು. ತಾವೇ ನ್ಯಾಯ ನೋಡಿ! ಸರಕಾರ ಬಡ ಮೇಷ್ಟರುಗಳಿಗೆ ಕೊಡುವುದು ಅಲ್ಪ ಸಂಬಳ. ಹೊಟ್ಟೆಗೆ ಸಾಲದು, ಬಟ್ಟೆಗೆ ಸಾಲದು ;-ನಮಗೆ ಹೊಟ್ಟೆಗೆ ಸಾಕಾದಷ್ಟು ಕೊಡಿ, ಇಲ್ಲದಿದ್ದರೆ ನಾವು ಕೆಲಸ ಮಾಡುವುದಿಲ್ಲ ಎಂದು ಹೇಳಿದರೆ, ಸರಕಾರವನ್ನು ಪ್ರತಿಭಟಿಸಕೂಡದು ಎನ್ನುತ್ತೀರಿ! ಅರೆಗಂಜಿ ಕಾಲಗಂಜಿಗಳಲ್ಲೇ ತೃಪ್ತಿ ಪಟ್ಟು ಕೊಳ್ಳಬೇಕು ಎನ್ನುತ್ತೀರಿ ! ಕೆಲಸ ತೆಗೆಯುವುದನ್ನು ನೋಡಿದರೆ, ಇಪ್ಪತ್ತೈದು ಮಕ್ಕಳಿಗೆ ಪಾಠ ಹೇಳಿಕೊಡುವುದಕ್ಕೆ ಬದಲಾಗಿ ನಲವತ್ತೈದು ಮಕ್ಕಳಿಗೆ ಪಾಠ ಹೇಳು ಎನ್ನುತ್ತೀರಿ! ನಾನು ಹೇಳುವುದಿಲ್ಲ ಎಂದು ಪ್ರತಿಭಟಿಸಿದರೆ,-ನಿನಗೆ ಸ್ವಾತಂತ್ರ್ಯವಿಲ್ಲ ! ನೀನು ಗುಲಾಮ ಎನ್ನುತ್ತೀರಿ! ಅಧಿಕಾರವಿದೆ ಎಂದು ಸಸ್ಪೆಂಡ್ ಮಾಡುತ್ತೀರಿ !'

'ಹೌದು ಮೇಷ್ಟೆ ! ನಿಮ್ಮ ಅಸಮಾಧಾನಗಳನ್ನೂ ಅಹವಾಲುಗಳನ್ನೂ ವಿನಯದಿಂದ ಹೇಳಿಕೊಳ್ಳಬೇಕು. ಒರಟಾಟ ಮಾಡಬಾರದು.'

'ಸ್ವಾಮಿ ! ನಾನೇನು ಒರಟಾಟ ಮಾಡಿದ್ದೇನೆ ? ಹೆಚ್ಚು ಮಕ್ಕಳಿಗೆ ಪಾಠ ಮಾಡುವುದಿಲ್ಲ ಎಂದು ಹೇಳಿದ್ದುಂಟು ; ಪಾಠ ಮಾಡದೆ ನಿಲ್ಲಿಸಿದ್ದುಂಟು. ಆ ವಿಚಾರದಲ್ಲಿ ಹಿಂದೆಯೇ ಹೆಡ್‌ಮೇಷ್ಟರಿಗೆ ಹಲವು ಬಾರಿ ಅರಿಕೆ ಮಾಡಿಕೊಂಡಿದ್ದೇನೆ. ಹೆಚ್ಚಾಗಿ ಮೇಷ್ಟುಗಳನ್ನು ಕಳಿಸಿಕೊಡಲಿಲ್ಲ, ಪರಿಹಾರ ದೊರೆಯಲಿಲ್ಲ, ಸಂಘದ ಸಭೆಗಳಲ್ಲಿ, ತಮ್ಮ ಅಧ್ಯಕ್ಷತೆಯಲ್ಲಿಯೇ ರೆಜಲ್ಯೂಷನ್ನುಗಳನ್ನು ಮಾಡಿದ್ದೇವೆ ; ಮೇಲಕ್ಕೆ ಕಳಿಸಿದ್ದೇವೆ. ಪರಿಹಾರ ದೊರೆಯಲಿಲ್ಲ. ಇನ್ನು ಮುಷ್ಕರ ಹೂಡದೆ ಏನು ಮಾಡಬೇಕು ? ಇತರ ಮೇಷ್ಟ್ರುಗಳು ಭಯಸ್ಥರು ; ಆತ್ಮಗೌರವ ಎಂಬುದನ್ನು ತಿಳಿಯದವರು. ನಾನು ಪುಂಡ ! ಮುಷ್ಕರ ಹೂಡಿದೆ! ರೇಂಜಿನಲ್ಲಿ ನೂರಾರು ಜನ ನನ್ನಂತೆಯೇ ಮುಷ್ಕರ ಹೂಡಿದ್ದಿದ್ದರೆ ಸರ್ಕಾರ ಕಣ್ಣು ಬಿಟ್ಟು ನೋಡಿ ಪರಿಹಾರ ಕೊಡುತ್ತಿತ್ತು !' 'ಎಲ್ಲವೂ ಸರಿಯೇ ಉಗ್ರಪ್ಪನವರೇ ! ನೀವು ಮೊದಲೇ ನನ್ನ ಹತ್ತಿರ ಬಂದು ಈ ವಾದವನ್ನೆಲ್ಲ ಮಾಡಬಹುದಾಗಿತ್ತಲ್ಲ. ಅದಕ್ಕೆ ಬದಲು ಹೆಡ್‌ಮೇಷ್ಟರನ್ನು ಬೆದರಿಸಿದಿರಿ ; ಮೆಮೋ ಪುಸ್ತಕವನ್ನು ಕಿತ್ತಿಟ್ಟುಕೊಂಡಿರಿ. ಇವುಗಳನ್ನು ನೀವು ಮಾಡಬಹುದೇ ?

'ಸ್ವಾಮಿ | ನಾನು ಅಹಂಕಾರ ಸ್ವಭಾವದವನು, ಸ್ವಪ್ರತಿಷ್ಟೆಯುಳ್ಳವನು. ಜೊತೆಗೆ ನಮ್ಮ ಮುಖಂಡರ ಏಜೆಂಟಾಗಿ ಇದ್ದು ಕೊಂಡು ಅವರ ಬೆಂಬಲದಿಂದ ಗರ್ವಿತನಾಗಿ ಕೆಟ್ಟು ಹೋದವನು ! ಮೇಲ್ಪಟ್ಟ ಅಧಿಕಾರಿಗಳನ್ನು ಕಂಡು ಸಮಾಧಾನ ಮತ್ತು ಸಮಜಾಯಿಷಿಗಳನ್ನು ಹೇಳುವುದು ಈ ಚೇತನಕ್ಕೆ ವಿರುದ್ಧವಾದ್ದು ! ತಾವೇ ಪಾಠಶಾಲೆಗೆ ಬಂದು ವಿಚಾರಿಸುತ್ತೀರಿ ಎಂದು ನನ್ನ ನಂಬಿಕೆಯಿತ್ತು. ಆದ್ದರಿಂದ ನಾನು ಬರಲಿಲ್ಲ. ಆ ಹೆಡ್‌ಮೇಷ್ಟು ! ಮುಚ್ಚು ಮರೆಯಿಲ್ಲದೆ ಹೇಳುತ್ತೇನೆ. ಆತನಿಗೆ ಹೆಡ್ ಮೇಷ್ಟ ಕೆಲಸವೇ ಗೊತ್ತಿಲ್ಲ ; ನಾಲಾ ಯಕ್ ಮನುಷ್ಯ ; ತಾಕತ್ ಇಲ್ಲದವನು. ಹುಡುಗರನ್ನು ಸುಮ್ಮನೇ ತರಗತಿಗಳಲ್ಲಿ ತುಂಬುವ ಬದಲು ತಂದೆ ತಾಯಿಗಳಿಗೆ ಖಂಡಿತವಾಗಿ ಹೇಳಬೇಕಾಗಿತ್ತು ; ಸ್ಥಳವಿಲ್ಲ, ಸೇರಿಸುವುದಿಲ್ಲ ಎಂದು ಹೇಳಬೇಕಾಗಿತ್ತು. ತಮಗೆ ಕಾಗದ ಬರೆದು ಹೆಚ್ಚು ಮಕ್ಕಳು ಬರುತ್ತಿದಾರೆ, ಹೆಚ್ಚು ಮೇಷ್ಟ್ರುಗಳನ್ನು ಕೊಡಿ ಎಂದು ಕೇಳಬೇಕಾಗಿತ್ತು, ಹಾಗೆ ರಿಪೋರ್ಟು ಮಾಡಿದ್ದಾರೆಯೇ? ಸ್ವಾಮಿ ? ?

'ಮಾಡಿದ ಹಾಗೆ ಜ್ಞಾಪಕವಿಲ್ಲ ಮೇಷ್ಟೆ !”

'ನನ್ನ ಪ್ರತಿಭಟನೆ ಹೊಸದಲ್ಲ ; ವರ್ಷವರ್ಷವೂ ಇದೆ. ತಮ್ಮ ನೋಟಿಸಿಗೂ ಆಗಾಗ ಬಂದಿರುತ್ತದೆ. ಆದ್ದರಿಂದ ತಮ್ಮ ಬಳಿಗೆ ಬಂದು ಹೊಸದಾಗಿ ಹೇಳಬೇಕಾದ್ದು ಏನೂ ಇರಲಿಲ್ಲ ಒಂದುವೇಳೆ ನನ್ನ ನಡತೆ ತಪ್ಪಾಗಿಯೇ ಇದ್ದಿರಲಿ ಸ್ವಾಮಿ! ಆ ಹೆಡ್ ಮೇಷ್ಟು ಬೇರೆ ಒಂದು ಕಾಗದದಲ್ಲಿ ರಹಸ್ಯವಾಗಿ ಬರೆದು ಕವರಿನಲ್ಲಿಟ್ಟು ಗೋ೦ದು ಹಚ್ಚಿ ನನ್ನ ಹತ್ತಿರ ಕಳಿಸಿ ಸಮಜಾಯಿಷಿ ಕೇಳಿದ್ದಿದ್ದರೆ, ನಾನು ವಿವರವಾಗಿ ಸಮಜಾಯಿಷಿ ಕೊಡುತ್ತಿದ್ದೆ, ಸಮಜಾಯಿಷಿ ಕೇಳುವವರು ಹತ್ತು ಜನ ನೋಡುವ ಮೆಮೋ ಪುಸ್ತಕದಲ್ಲಿ ಬರೆಯುತ್ತಾರೆಯೇ ಸ್ವಾಮಿ ? ಹಾಗೆ ಬರೆಯಬಹುದೇ ? ಅವರು ಮೆಮೋ ಪುಸ್ತಕದಲ್ಲಿ ಬರೆದು ಆಳಿನ ಹತ್ತಿರ ಕೊಟ್ಟು ಕಳಿಸಿದರು. ನಾನು ಪಾಠ ಮಾಡುತ್ತಿದ್ದರೆ ಆಳು ತಂದು ನನ್ನ ಮುಖಕ್ಕೆ ಹಿಡಿದ ! ಸ್ವಾಮಿ ! ನನ್ನ ಸ್ವಭಾವಕ್ಕೂ ಆ ಆಳು ಮಾಡಿದ್ದಕ್ಕೂ ಹೊಂದುತ್ತದೆಯೇ ? ಅವನಿಗೆ ಕಪಾಳಕ್ಕೆ ಎರಡು ಬಿಗಿದೆ! ಇದು ತಪ್ಪೇ ಸ್ವಾಮಿ ? ಹೆಡ್‌ಮೇಷ್ಟ್ರು ಬಂದು ಕೇಳಿದಾಗ ಹಾಗೆಲ್ಲ ಮೆಮೋ ಮಾಡಬೇಡಿ ಎಂದು ಗದರಿಸಿದೆ, ಪುನಃ ಆ ಹೆಡ್‌ಮೇಷ್ಟ್ರು ಅದೇ ಮೆಮೋ ಪುಸ್ತಕದಲ್ಲಿ ನನ್ನ ಸಮಜಾಯಿಷಿ ಕೇಳಿ ಮತ್ತೆ ಬರೆದು ಕಳಿಸಿದರು. ನಾನು ಆ ಪುಸ್ತಕವನ್ನೇ ಕಿತ್ತುಕೊಂಡು ಹತ್ತಿರ ಇಟ್ಟುಕೊಂಡೆ. ತಾವು ನ್ಯಾಯ ಹೇಳಿ ಸ್ವಾಮಿ ! ನಾನು ಪುಂಡ ! ಒಪ್ಪಿ ಕೊಳ್ಳುತ್ತೇನೆ. ನನ್ನ ಮಾತಿಗೆ ಬರಬಾರದೆಂದು ತಿಳಿದಿದ್ದರೂ ಸಹ ನನಗೆ ಅಸಮಾನ ಮಾಡಬೇಕೆಂದು ಅವರು ಎಲ್ಲವನ್ನೂ ಮಾಡಿದರು. ಜೊತೆಗೆ ತಮ್ಮ ಹತ್ತಿರ ಬಂದು ಚಾಡಿಗಳನ್ನೂ ಹೇಳಿದರು. ನಾನು ಎಲ್ಲವನ್ನೂ ಸೈರಿಸಿಕೊಂಡು, - ಮಕ್ಕಳೊಂದಿಗರು ನೀವು! ಹುಷಾರಾಗಿರಿ!- ಎಂದು ಹೇಳಿದೆ.'

ರಂಗಣ್ಣನು ಹಾಗೆಯೇ ಆಲೋಚನೆ ಮಾಡುತ್ತ ಎರಡು ನಿಮಿಷ ಸುಮ್ಮನಿದ್ದನು. ಉಗ್ರಪ್ಪನೂ ಎರಡು ನಿಮಿಷಗಳ ಕಾಲ ಸುಮ್ಮನಿದ್ದನು. ಏನಾದರೊಂದನ್ನು ಹೇಳಿ ಆ ಸಂಕಷ್ಟ ಸನ್ನಿವೇಶದಿಂದ ಪಾರಾಗಬೇಕೆಂದು ರಂಗಣ್ಣನು.

'ಮೇಷ್ಟ್ರೆ ! ನಾನು ಸ್ಕೂಲಿಗೆ ಬಂದ ದಿನ ನೀವು ವಿನಯದಿಂದ, ವಿಧೇಯತೆಯಿಂದ, ನಡೆದುಕೊಂಡಿದ್ದಿದ್ದರೆ ಈ ವಿಷಾದ ಪ್ರಕರಣವೇ ಆಗುತ್ತಿರಲಿಲ್ಲ. ನನ್ನ ವಿಚಾರದಲ್ಲಿಯೂ ಒರಟೊರಟಾಗಿ ನಡೆದುಕೊ೦ಡಿರಿ ” ಎಂದು ಹೇಳಿದನು.

'ಸ್ವಾಮಿ ! ತಾವು ನನ್ನನ್ನು ಸಸ್ಪೆಂಡ್ ಮಾಡುವ ಸಂಕಲ್ಪದಿಂದಲೇ ಆ ದಿನ ಪಾಠಶಾಲೆಗೆ ಬಂದಿರಿ! ನಾನು ವಿನಯದಿಂದ ಹೇಳಿದ್ದರೂ ನನ್ನನ್ನು ರೇಗಿಸಿ ನನ್ನ ಬಾಯಿಯಲ್ಲಿ ಏನಾದರೂ ಮಾತನ್ನು ಹೊರಡಿಸಿ ಸಸ್ಪೆಂಡ್ ಮಾಡುತ್ತಿದ್ದಿರಿ. ತಮಗೆ ನನ್ನ ಮೇಲಿನ ದ್ವೇಷಕ್ಕಿಂತ ಹೆಚ್ಚಾಗಿ ಕಲ್ಲೇಗೌಡ ಮತ್ತು ಕರಿಯಪ್ಪನವರ ಮೇಲೆ ಛಲ ! ಅವರ ಏಜೆಂಟ್ ನಾನು ಎಂಬುದು ತಮಗೆ ತಿಳಿದಿತ್ತು. ನಾವು ಬೆಂಗಳೂರಿಗೆ ಸಹ ಹೋಗಿ, ದೊಡ್ಡ ಸಾಹೇಬರನ್ನು ಕಂಡು ಗಟ್ಟಿ ಮಾಡಿಕೊಂಡು ಬಂದಿದ್ದಿರಿ. ಸಿದ್ದಪ್ಪನವರು ನಿಮ್ಬ ಬಲಕ್ಕಿರುವರೆಂದು ತೋರಿಸುವ ಏರ್ಪಾಟು ಮಾಡಿಕೊಂಡು ಬಂದಿದ್ದೀರಿ. ಆದ್ದರಿಂದ ಹೇಗೂ ನನಗೆ ಒಳ್ಳೆಯದಾಗುತ್ತಿರಲಿಲ್ಲ ಇಷ್ಟಾಗಿ ನಾನು ಹೇಳಿದ್ದೇನು ! ರೂಲ್ಸು ರೆಗ್ಯುಲೇಷನ್ನು ತಿಳಿಯದವರಿಗೆ ನಾನು ಅವಿಧೇಯನೇ !-- ಎಂದು ಹೇಳಿದೆ, ತಮಗೆ ಜ್ಞಾಪಕವಿರಬಹುದು.

'ಮೇಷ್ಟೆ ! ಒಂದು ವಿಷಾದ ಪ್ರಕರಣ ಆಗಿ ಹೋಯಿತು ! ನೀವು ಆ ದಿನ ವಿನಯದಿಂದ ವರ್ತಿಸಿ, ಹೇಳಬೇಕಾದ್ದನ್ನೆಲ್ಲ ಹೇಳಿ ಕಡೆಯ ತನಕ ಕಾದಿದ್ದರೆ, ನಾನೇನು ಮಾಡುತ್ತಿದ್ದೆನೋ ತಿಳಿಯುತ್ತಿತ್ತು. ಈಗ ನನಗೆ ನಿಮ್ಮ ಮೇಲೆ ದ್ವೇಷವಿಲ್ಲ, ಛಲವಿಲ್ಲ. ಕೆಲಸಕ್ಕೆ ನೀವು ಬನ್ನಿ. ಈಗ ಆಗಿರುವ ಸಸ್ಪೆನ್ಷನ್ ಆರ್ಡರನ್ನು ರದ್ದುಗೊಳಿಸಿ, ರಜವನ್ನಾಗಿ ಪರಿವರ್ತಿಸಿ, ನಿಮಗೆ ಕಳಂಕ ಹತ್ತದಂತೆ ಮಾಡುತ್ತೇನೆ. ಕಡೆಗೆ ಸರ್ವಿಸ್ ರಿಜಿಸ್ಟರಿನಲ್ಲಿ ಸಹ ಆದು ದಾಖಲಾಗದಂತೆ ಏನಾದರೂ ಉಪಾಯ ಮಾಡುತ್ತೇನೆ.'

'ಸ್ವಾಮಿ ! ನನಗೂ ತಮ್ಮ ಮೇಲೆ ಛಲವಿಲ್ಲ, ದ್ವೇಷವಿಲ್ಲ ! ಸತ್ಯವಾಗಿ ಹೇಳುತ್ತೇನೆ. ಆದರೆ ನಾನು ಪುನಃ ಕೆಲಸಕ್ಕೆ ಬರುವುದಿಲ್ಲ. ಕಾರಣವನ್ನು ಆಗಲೇ ತಿಳಿಸಿದ್ದೇನೆ. ಈಗ ನಾನು ಹೊಸ ಮನುಷ್ಯ ; ಪುನರ್ಜನ್ಮ ತಾಳಿದ್ದೇನೆ. ಈಗ ಇಪ್ಪತ್ತು ಇಪ್ಪತ್ತೈದು ದಿನಗಳಿಂದ ನನ್ನ ಮನಸ್ಸಿನೊಡನೆ ಬಲವಾಗಿ ಹೋರಾಡಿದೆ. ದ್ವೇಷವನ್ನು ಸಾಧಿಸಲೇ ? ಶಾಂತಿಯನ್ನು ಸಾಧಿಸಲೇ ? ಎಂದು ಹಗಲಿರುಳೂ ಗುದ್ದಾಡಿದೆ. ತಾವೇನೋ ಪೊಲೀಸ್ ಸಿಬ್ಬಂದಿಯ ಸಹಾಯ ತೆಗೆದುಕೊಂಡಿರಿ. ಮನೆಯ ಹತ್ತಿರ, ಕಚೇರಿಯ ಹತ್ತಿರ ಕಾನ್ ಸ್ಟೇ ಬಲ್ಲುಗಳನ್ನು ನಿಲ್ಲಿಸಿಕೊಂಡಿರಿ. ಊರೂರುಗಳಿಂದ ನಿಮ್ಮ ಇಷ್ಟ ಮಿತ್ರರನ್ನು ಕರೆಸಿಕೊಂಡಿರಿ. ನಿಮ್ಮ ಬಲವನ್ನೂ ನಿಮಗಿದ್ದ ಬೆಂಬಲನ್ನೂ ಪ್ರಕಟಿಸಿದಿರಿ. ಆದರೆ, ನಾನು ತಮ್ಮನ್ನು ಘಾತಿಸಬೇಕೆಂದು ಸಂಕಲ್ಪ ಮಾಡಿದ್ದಿದ್ದರೆ ನಿಮ್ಮನ್ನು ಯಾರೂ ರಕ್ಷಿಸಲಾಗುತ್ತಿರಲಿಲ್ಲ! ಅದು ಖಂಡಿತ ! ನಿಮಗೆ ಯಾರು ತಾನೆ ಎಷ್ಟು ದಿನ ಕಾವಲಿದ್ದಾರು ? ನಾನೇ ಬಹಳವಾಗಿ ಪೂರ್ವಾಪರಗಳನ್ನು ಚರ್ಚಿಸಿಕೊ೦ಡೆ ಚರ್ಚಿಸಿ ಕೊಳ್ಳುತ್ತಿದ್ದಾಗ ನನ್ನ ಉಡುಪಿನ ಮೇಲೆ ನನ್ನ ದೃಷ್ಟಿ ಹೋಯಿತು! ನಾನು ಧರಿಸುತ್ತಿರುವುದು ಖಾದಿ! ಪೂಜ್ಯ ಗಾಂಧಿಯವರ ಪ್ರೇಮ ವಸ್ತ್ರವಾದ ಖಾದಿ! ನಾನು ಮಾಡಿದ ಪಾಪಕಾರ್ಯಗಳೆಲ್ಲ ಚಲನಚಿತ್ರದಂತೆ ಪರಂಪರೆಯಾಗಿ ಚಿತ್ರಪಟದಲ್ಲಿ ಕಾಣಿಸಿಕೊಂಡುವು ! ಗಾಂಧಿಯವರ ಸತ್ಯ, ಅಹಿಂಸೆ, ಮತ್ತು ಪ್ರೇಮಗಳನ್ನು ನಾನು ಆಚರಣೆಯಲ್ಲಿಟ್ಟುಕೊಳ್ಳದೇ ಹೋದೆನಲ್ಲಾ! ಎಂದು ಬಲವಾದ ಪಶ್ಚಾತ್ತಾಪ ಉಂಟಾಯಿತು. ಸ್ವಾಮಿ | ಅದನ್ನು ಏನೆಂದು ಹೇಳಲಿ ! ದ್ವೇಷವನ್ನೂ ಸ್ವಾರ್ಥವನ್ನೂ ಗೆಲ್ಲುವುದೆಂದರೆ ಮರಣ ಸಂಕಟ ಪಟ್ಟ ಹಾಗೆ ; ಗೆದ್ದ ಮೇಲೆ ಪುನರ್ಜನ್ಮ; ಶಾಂತಿ, ಆತ್ಮಕಲ್ಯಾಣ. ದ್ವೇಷದಿಂದ ಪ್ರಯೋಜನ ಏಲ್ಲ ಎಂದು ತೀರ್ಮಾನಿಸಿದೆ ಆಗ ತಮ್ಮ ಮೇಲಿನ ಕ್ರೋಧವನ್ನು ವಿಸರ್ಜಿಸಿಬಿಟ್ಟೆ ! ಶಾಂತಿಯಿಂದಲೇ ಸೌಖ್ಯ, ಪ್ರೇಮದಿಂದಲೇ ಆತ್ಮಕಲ್ಯಾಣ ಎಂದು ಗ್ರಹಣ ಮಾಡಿದೆ! ನಾನು ಇದುವರೆಗೂ ಮಾಡಿರುವ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ, ಸಂನ್ಯಾಸವನ್ನು ಸ್ವೀಕಾರ ಮಾಡಬೇಕೆಂದು ಸಂಕಲ್ಪಿಸಿದ್ದೇನೆ ! ಇಲ್ಲಿಗೆ ಹತ್ತು ಮೈಲಿಗಳ ದೂರದಲ್ಲಿ ನಮ್ಮವರ ಗವಿಮಠವಿದೆ. ಅಲ್ಲಿ ಹಿಂದೆ ಮಹಾತ್ಮರಾದ ಯೋಗಿಶ್ವರರೊಬ್ಬರು ಸಮಾಧಿಯಾಗಿದ್ದಾರೆ. ಮಠದಲ್ಲಿ ಈಗ ಅಧ್ಯಕ್ಷಪೀಠ ಖಾಲಿಯಾಗಿದೆ. ನಮ್ಮ ಜನ ಒಪ್ಪಿ ಕೊಂಡಿದ್ದಾರೆ. ಎರಡು ಮೂರು ದಿನಗಳಲ್ಲಿ ಅಲ್ಲಿಗೆ ಹೋಗಿ ನೆಲೆಸುತ್ತೇನೆ. ನಾನು ಇಲ್ಲಿಗೆ ತಮ್ಮನ್ನು ಕಾಣಲು ಬಂದದ್ದು : ಮೊದಲನೆಯದಾಗಿ, ತಾವು ನನ್ನ ವಿಚಾರದಲ್ಲಿ ಅನ್ಯಾಯ ಮಾಡಿದಿರಿ ಎಂದು ತಿಳಿಸುವುದಕ್ಕೆ ; ಎರಡನೆಯದಾಗಿ, ಹಾಗೆ ಅನ್ಯಾಯ ಮಾಡಿದ್ದರೂ ನನಗೆ ತಮ್ಮ ವಿಚಾರದಲ್ಲಿ ದ್ವೇಷವೇನೂ ಇಲ್ಲ ; ಗೌರವ ಮತ್ತು ಪ್ರೇಮ ಇವೆ ಎಂದು ತಿಳಿಸುವುದಕ್ಕೆ, ತಾವು ಒಳ್ಳೆಯ ಕೆಲಸ ಮಾಡಿದ್ದೀರಿ. ಯಾರೂ ಇದುವರೆಗೂ ತಾವು ತೋರಿಸಿ ಕೊಟ್ಟಿರುವ ಮಾರ್ಗಗಳನ್ನು ತೋರಿಸಲಿಲ್ಲ, ಹೀಗೆ ವಿದ್ಯಾಭಿವೃದ್ಧಿಯನ್ನುಂಟುಮಾಡಲಿಲ್ಲ. ತಮ್ಮ ಶೀಲವೂ ಸ್ತೋತ್ರಾರ್ಹವಾದುದು. ಆದ್ದರಿಂದ ತಮ್ಮಲ್ಲಿ ನನಗೆ ಗೌರವವಿದೆ. ತಮಗೆ ಇನ್ನು ಕೆಲವು ದಿನಗಳೊಳಗಾಗಿ ಇಲ್ಲಿಂದ ವರ್ಗವಾಗುತ್ತದೆ. ಅದು ಖಂಡಿತ, ಏನೆಂದರೆ : ನನ್ನ ಅರಿಕೆ ಏನೆಂದರೆ, ತಾವು ಜನಾರ್ದನಪುರವನ್ನು ಬಿಟ್ಟು ಹೋಗುವುದರೊಳಗಾಗಿ ಗವಿಮಠಕ್ಕೆ ಬರಬೇಕು, ಒಪ್ಪೊತ್ತು ಇದ್ದು ನನ್ನ ಪ್ರೇಮ ಗೌರವಗಳ -ಆತಿಥ್ಯವನ್ನು ಸ್ವೀಕರಿಸಬೇಕು !?

'ಮೇಷ್ಟೆ ! ಇದೇನಿದು ! ನಿಜವಾಗಿಯೂ ನೀವು ಸಂಸಾರತ್ಯಾಗ ಮಾಡಿ ಸಂನ್ಯಾಸಿಗಳಾಗುತ್ತೀರಾ ? ಹೆಂಡತಿ ಮತ್ತು ಮಕ್ಕಳ ಕೈಬಿಡುತ್ತೀರಾ ? ಇವಕ್ಕೆಲ್ಲ ನಾನು ಕಾರಣನಾದ ಹಾಗಾಯಿತಲ್ಲ ಅವರ ಶಾಪ ನನಗೆ ತಟ್ಟದೇ ಹೋಗುವುದೇ !

'ಸ್ವಾಮಿ ! ತಾವು ಖಿನ್ನರಾಗಬೇಡಿ, ನಾನು ಸಂನ್ಯಾಸಿಯಾಗುವುದು ನಿಶ್ಚಯ. ಹೆಂಡತಿ ಮಕ್ಕಳ ರಕ್ಷಣೆಯನ್ನು ಎಲ್ಲರನ್ನೂ ರಕ್ಷಿಸುವ ಭಗವಂತನೇ ಮಾಡುತ್ತಾನೆ ! ಲೌಕಿಕ ರೀತಿಯಲ್ಲಿ ಅವರನ್ನು ನಾನು ನಿರ್ಗತಿಕರನ್ನಾಗಿ ಬಿಟ್ಟಿಲ್ಲ. ಈಗ ಇಪ್ಪತ್ತೈದು ವರ್ಷ ನಾನೂ ಸರ್ವಿಸ್ ಮಾಡಿದೆ. ತಿ೦ಗಳಿಗೆ ಹದಿನೇಳು ರುಪಾಯಿ ಬರುತ್ತಿತ್ತು ! ಸಂಸಾರನ್ನು ಅಷ್ಟರಿಂದಲೇ ನಡೆಸುವುದಕ್ಕೆ ಸಾಧ್ಯವೇ ? ನನಗೆ ಜಮೀನಿದೆ. ಹೆಂಡತಿ ಮತ್ತು ಮಕ್ಕಳು ಹಿಂದಿನಂತೆಯೇ ಮುಂದೆಯೂ ಆ ಜಮೀನಿನಿಂದ ಜೀವನ ನಡೆಸಿಕೊಳ್ಳಬಹುದು. ಗವಿಮಠಕ್ಕೂ ತಕ್ಕಷ್ಟು ಆದಾಯವಿದೆ. ನನ್ನ ಸಂಸಾರ ಪೋಷಣೆಗೆ ಅಗತ್ಯ ಬಿದ್ದರೆ ಸ್ವಲ್ಪ ಸಹಾಯ ಮಾಡಬಹುದು. ನಾನು ಸಂನ್ಯಾಸ ತೆಗೆದುಕೊಳ್ಳುವುದಕ್ಕೆ ತಾವೇನೂ ಕಾರಣರಲ್ಲ, ಆ ಪ್ರೇರಣೆಯೇ ಕಾರಣ. ನಾನು ಪ್ರಪಂಚವನ್ನು ಚೆನ್ನಾಗಿ ನೋಡಿದ್ದೇನೆ. ದೊಡ್ಡ ದೊಡ್ಡ ಅಧಿಕಾರಿಗಳ ಹೊಲಸು ಚರಿತ್ರೆಗಳನ್ನೆಲ್ಲ ತಿಳಿದುಕೊಂಡಿದ್ದೇನೆ ; ಮುಖಂಡರುಗಳನ್ನೂ ನೋಡಿದ್ದೇನೆ. ಅವರು ಒಬ್ಬರಿಗೊಬ್ಬರು ಬೆಂಬಲ. ಆ ದೊಡ್ಡ ಅಧಿಕಾರಿಗಳು ತಮ್ಮ ಹೊಲಸನ್ನೆಲ್ಲ ತಿಳಿದುಕೊಂಡಿದ್ದೇನೆ. ಪ್ರಜಾಪ್ರತಿನಿಧಿ ಸಭೆ ಮತ್ತು ನ್ಯಾಯ ವಿಧಾಯಕ ಸಭೆಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಮುಖಂಡರು ಎಲ್ಲಿ ಹೊರಗೆಡಹುತ್ತಾರೋ ಎಂದು ಹೆದರಿಕೊಂಡು ಆ ನೀತಿಗೆಟ್ಟ ಮುಖಂಡರ ಬೆನ್ನು ತಟ್ಟುತ್ತ, ಕೈ ಕುಲುಕುತ್ತ, ಲಂಚು ಮಿಂಚುಗಳಿಗೆ ಪಕ್ಕದಲ್ಲಿ ಕುಳ್ಳಿರಿಸಿಕೊಳ್ಳುತ್ತ, ಅವರ ಬೆಂಬಲವನ್ನೂ ಅವರ ಕಡೆಯ ಓಟುಗಳನ್ನೂ ಪಡೆದುಕೊಂಡು ಬಹಳ ನಿಸ್ಸಹ ರಂತೆಯೂ ಪ್ರಜಾನುರಾಗಿಗಳಂತೆಯೂ ತೋರ್ಪಡಿಸಿಕೊಳ್ಳುವುದು ! ಆ ಮುಖಂಡರಾದರೋ ಅಲ್ಪ ಸ್ವಲ್ಪ ಆದಾಯದ ರೊಟ್ಟಿ ಚೂರುಗಳಿಗೆ ಅವರನ್ನು ಆಶ್ರಯಿಸುತ್ತ, ತಾವು ದೊಡ್ಡ ಮುಖಂಡರೆಂದೂ ತಮ್ಮ ಮಾತು ಸರಕಾರದಲ್ಲಿ ನಡೆಯುತ್ತದೆಂದೂ ಆಜ್ಞಾನಿಗಳಾದ ಹಳ್ಳಿಯವರಿಗೆ ತೋರಿಸುತ್ತ ಸ್ವಾರ್ಥವನ್ನು ಸಾಧಿಸಿಕೊಳ್ಳುವುದು ! ಎಲ್ಲರ ಹೇಯಕೃತ್ಯಗಳನ್ನೂ ತಿಳಿದಿದ್ದೇನೆ. ನಾನು ಸಹ ಮುಖಂಡರುಗಳ ಮಾತಿನಂತೆ ಅವರು ಕೊಡುತ್ತಿದ್ದ ಹಣದಾಸೆಗಾಗಿ ಅವರ ಏಜೆಂಟಾಗಿ ಮಾಡಬಾರದ ಕೆಲಸಗಳನ್ನು ಮಾಡಿದ್ದೇನೆ ! ಹೆಚ್ಚಾಗಿ ಏಕೆ ಹೇಳಲಿ ! ತಮ್ಮ ವಿಚಾರದಲ್ಲಿಯೂ ನಾನು ಅಪರಾಧ ಮಾಡಿದ್ದೇನೆ ! ಆ ತಿಮ್ಮಮ್ಮನನ್ನು ಡೈರೆಕ್ಟರ್ ಸಾಹೇಬರ ಬಳಿಗೆ ಕರೆದುಕೊಂಡು ಹೋದವನೇ ನಾನು !: ಪ್ರಪಂಚವನ್ನು ನೋಡಿ ಜುಗುಪ್ಸೆಯುಂಟಾಗಿದೆ. ತಾವು ಸರಳ ಸ್ವಭಾವದವರು ; ತಮಗೆ ಲೋಕ ತಿಳಿಯದು. ಈಗ ನಾನು ಗವಿಮಠಕ್ಕೆ ಹೋಗುವುದರಿಂದ ಆ ರಾಜಕೀಯ ಮುಖಂಡರ ಏಜೆಂಟ್ ಕೆಲಸ ತಪ್ಪುತ್ತದೆ ಸ್ವಾಮಿ! ಮುಂದೆ ದೇವರ ಏಜೆಂಟ್ ಆಗಿ ಕೆಲಸ ಮಾಡುತ್ತೇನೆ ! ಶಾಂತವೀರ ಸ್ವಾಮಿಯಾಗಿ ದೇವರ ಹೆಸರಿನಲ್ಲಿ ದುಡಿಯುತ್ತೇನೆ !

ರಂಗಣ್ಣನಿಗೆ ಉಗ್ರಪ್ಪನ ಚರಿತ್ರೆಯೆಲ್ಲ ಒಂದು ಅದ್ಭುತ ಪವಾಡವಾಗಿ ಕಂಡು ಬಂತು. ಯಾವ ಕಾಲಕ್ಕೆ ಏನು ಪರಿವರ್ತನೆ ಮನುಷ್ಯನಲ್ಲಾಗಬಹುದೋ ! ತಿಳಿದವರಾರು ? ನಾರದ ಮಹರ್ಷಿಗಳು ಒಬ್ಬ ಕಿರಾತನನ್ನು ವಾಲ್ಮೀಕಿಯನ್ನಾಗಿ ಮಾಡಿದರು. ಮಹಾತ್ಮ ಗಾಂಧಿಯವರು ಪರೋಕ್ಷದಲ್ಲಿದ್ದು ಕೊಂಡೆ ಉಗ್ರಪ್ಪನನ್ನು ಶಾಂತವೀರಸ್ವಾಮಿಯಾಗಿ ಮಾಡಿದರು ! ಎಂತಹ ಅದ್ಭುತ ! ಎಂತಹ ಪವಾಡ !

'ಸ್ವಾಮಿ ! ನಾನು ಹೋಗಿ ಬರುತ್ತೇನೆ. ತಮ್ಮನ್ನು ಪುನಃ ಕಾಣುವುದಕ್ಕೆ ಅವಕಾಶವಾಗುವುದಿಲ್ಲ. ಗವಿಮಠಕ್ಕೆ ಬರಬೇಕು ! ಆತಿಥ್ಯ ಸ್ವೀಕಾರ ಮಾಡಬೇಕು !'

'ಆಗಲಿ ಮೇಷ್ಟೇ ! ಖಂಡಿತವಾಗಿ ಬರುತ್ತೇನೆ.'


'ಶ್ರೇಯೋಸ್ತು !' ಎಂದು ಉಗ್ರಪ್ಪನು ಹೇಳಿ ಹೊರಕ್ಕೆ ಬಂದುದೊಣ್ಣೆಯನ್ನು ಕೈಗೆ ತೆಗೆದುಕೊಂಡು ಹೊರಟುಹೋದನು.

ರಂಗಣ್ಣನು ದೀರ್ಘಾಲೋಚನೆಯಲ್ಲಿ ಮಗ್ನನಾದನು.

ಪ್ರಕರಣ ೨೭

ಸಮಯೋಪಾಯ ಸರಸ್ವತಿ

ಕೆಲವು ದಿನಗಳ ತರುವಾಯ ಸಾಹೇಬರಿಂದ ಉಗ್ರಪ್ಪನ ವಿಚಾರದಲ್ಲಿ ಹುಕುಮುಗಳು ಬಂದುವು. ಆವನಿಗಾದ ಶಿಕ್ಷೆಯನ್ನು ಖಾಯಂ ಪಡಿಸಿ, ಅವನನ್ನು ಅದೇ ಜಿಲ್ಲೆಯಲ್ಲಿಯೇ ಬೇರೆ ರೇಂಜಿಗೆ ವರ್ಗ ಮಾಡಿದ್ದರು. ರಂಗಣ್ಣನಿಗೆ ಆ ಹುಕುಮುಗಳನ್ನು ನೋಡಿ ಸಂತೋಷವೇನೂ ಆಗಲಿಲ್ಲ. ಉಗ್ರಪ್ಪ ಈಗ ಶಾಂತವೀರ ಸ್ವಾಮಿಯಾಗಿ ಪರಿವರ್ತನೆ ಹೊಂದಿ ಶಿಷ್ಯ ಸಮೂಹಕ್ಕೆ ಗುರುವಾಗಿ ಉಪದೇಶಮಾಡುತ್ತ ಆಧ್ಯಾತ್ಮಿಕ ವಿಚಾರಗಳಲ್ಲಿ ಮಗ್ನನಾಗಿರುವುದು ಒಂದು ದೊಡ್ಡ ಪವಾಡವಾಗಿ ಅವನಿಗೆ ಬೋಧೆಯಾಗುತ್ತಿತ್ತು. ಈ ಪರಿವರ್ತನೆಗೆ ತಾನು ಕಾರಣನಾದುದು ಎಂತಹ ದೈವ ಘಟನೆ ಎಂದು ವಿಷಾದವೂ ವಿಸ್ಮಯವೂ ಅವನ ಮನಸ್ಸಿನಲ್ಲಿ ತುಂಬಿದ್ದುವು. ಉಗ್ರಪ್ಪನು ತಾನು ಹಿಂದೆ ತಿಳಿಸಿದ್ದಂತೆ ಕೆಲಸಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರಟು ಹೋಗಿದ್ದನು. ಅವನು ಮಠಾಧ್ಯಕ್ಷಸ್ಥಾನ ಸ್ವೀಕಾರ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ರಂಗಣ್ಣನಿಗೆ ಕಳಿಸಿದ್ದನು. ಆದರೆ ರಂಗಣ್ಣನು ಆ ಮಹೋತ್ಸವಕ್ಕೆ ಹೋಗಲಿಲ್ಲ.

ಕಾಲಕ್ರಮದಲ್ಲಿ ರಂಗಣ್ಣನಿಗೆ ವರ್ಗದ ಆರ್ಡ ರೂ ಬಂತು. ಅದನ್ನು ಅವನು ನಿತ್ಯವೂ ನಿರೀಕ್ಷಿಸುತ್ತಲೇ ಇದ್ದುದರಿಂದ ಅವನಿಗೆ ಹರ್ಷವಾಗಲಿ ವಿಷಾದವಾಗಲಿ ಉಂಟಾಗಲಿಲ್ಲ. ಆ ವರ್ಗದ ಆರ್ಡರಿನಿಂದ ತನ್ನ ಹೆಂಡತಿಗೆ ಸ್ವಲ್ಪ ಖೇದವಾಗಬಹುದೆಂದು ಮಾತ್ರ ಆಲೋಚಿಸಿದನು. ಆದ್ದರಿಂದ ಆರ್ಡರು ಬಂದ ದಿನ ಒಡನೆಯೇ ಮನೆಯಲ್ಲಿ ವರ್ತಮಾನ ಕೊಡದೆ ಸುಮುಹೂರ್ತದಲ್ಲಿ ಅದನ್ನು ತಿಳಿಸೋಣವೆಂದು ಸುಮ್ಮನಾದನು, ಆದರೆ ವರ್ಗವಾಗಿರುವ ಸಂಗತಿ ಒಂದೆರಡು ದಿನಗಳಲ್ಲಿಯ ಜನಾರ್ದನಪುರದಲ್ಲಿ ಹರಡಿತು.

ಭಾನುವಾರ ಸುಖಭೋಜನ ಮಾಡಿ ತಾಂಬೂಲಚರ್ವಣಮಾಡುತ್ತ ಕುಳಿತಿದ್ದಾಗ, ತನ್ನ ಮಕ್ಕಳು ನಾಗೇನಹಳ್ಳಿಯಲ್ಲಿ ಆದ ಮೆರವಣಿಗೆಯನ್ನು ಅನುಕರಣಮಾಡುತ್ತ ಊದುವ ಕೊಳವಿಯನ್ನು ಕೊಂಬನ್ನಾಗಿಯೂ, ಜಾಗಟೆಯನ್ನೇ ತಮಟೆಯನ್ನಾಗಿಯೂ ಮಾಡಿಕೊಂಡು ಹಾಲಿನಲ್ಲಿ ಗಲಾಟೆಮಾಡುತ್ತಿದ್ದಾಗ, ಆ ನೋಟವನ್ನು ತನ್ನ ಹೆಂಡತಿ ನೋಡಿ,

'ನಿಮ್ಮ ದೊಡ್ಡ ಮಗ ನಿಮ್ಮಂತೆಯೇ ಇನ್ ಸ್ಪೆಕ್ಟರ್‌ಗಿರಿ ಮಾಡುತ್ತಾನೆಂದು ಕಾಣುತ್ತೆ ! ನಿಮ್ಮ ರುಮಾಲು ಹಾಕಿಕೊಂಡು ನಿಮ್ಮಂತೆಯೇನಡೆಯುತ್ತಿದಾನೆ !' ಎಂದು ಗಮನವನ್ನು ಸೆಳೆದಾಗ,

'ನನ್ನ ಇನ್‌ಸ್ಪೆಕ್ಟರ್ ಗಿರಿ ನನ್ನ ಮಗನಿಗೆ ಏನೂ ಬೇಡ, ಸದ್ಯ: ನನಗೆ ತಪ್ಪಿದ್ದಕ್ಕೆ ನಾನು ಸಂತೋಷಪಡುತ್ತಿದ್ದೇನೆ' ಎಂದು ರಂಗಣ್ಣ ಹೇಳಿದನು.

'ನಿಮಗೆ ವರ್ಗದ ಆರ್ಡರು ಬಂತೇ ? ನನಗೇತಕ್ಕೆ ಮೊದಲೇ ಹೇಳಲಿಲ್ಲ ?'

'ವರ್ಗದ ಆರ್ಡರು ಬಂದು ಹೆಚ್ಚು ಕಾಲ ಏನೂ ಆಗಲಿಲ್ಲ. ದೊಡ್ಡ ಸಾಹೇಬರಿಗೆ ಕಾಗದ ಬರೆದಿದ್ದೆ. ಅವರಿಂದ ಈ ದಿನ ಜವಾಬು ಬಂತು. ವರ್ಗದ ಆರ್ಡರನ್ನು ರದ್ದು ಮಾಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಈಗ ನಿನಗೂ ತಿಳಿಸಿದ್ದೇನೆ.'

'ನಿಮ್ಮನ್ನು ಎಲ್ಲಿಗೆ ವಗ೯ ಮಾಡಿದ್ದಾರೆ ? ಏನಾಗಿ ವರ್ಗ ಮಾಡಿದ್ದಾರೆ ?'

'ಏನೋ ಸ್ಪೆಷಲ್ ಆಫೀಸರ್ ಅಂತೆ ! ಸದ್ಯಕ್ಕೆ ಬೆಂಗಳೂರಿಗೆ ಹೋಗಬೇಕು. ದೊಡ್ಡ ಸಾಹೇಬರನ್ನು ಕಂಡು ವಿವರಗಳನ್ನು ತಿಳಿದುಕೊಳ್ಳಬೇಕು,'

'ನನಗೆ ಆ ದಿನವೇ ಮನಸ್ಸಿಗೆ ಹೊಳೆಯಿತು ! ನೀವು ಜನರನ್ನೆಲ್ಲ ಎದುರು ಹಾಕಿಕೊಂಡು ಹೋಗುತ್ತಿದ್ದೀರಿ; ಆದ್ದರಿಂದ ಇಲ್ಲಿ ಹೆಚ್ಚು ಕಾಲ ನಿಮ್ಮನ್ನು ಇಟ್ಟಿರುವುದಿಲ್ಲ~ ಎಂದು ಮನಸ್ಸಿಗೆ ಹೊಳೆಯಿತು. ಹಾಗೆಯೇ ಆಯಿತು.” 'ನನ್ನನ್ನು ಆಕ್ಷೇಪಿಸುವುದಕ್ಕೆ ನೀನೂ ಒಬ್ಬಳು ಸೇರಿಕೊಂಡೆಯೋ? ನಾನೇನು ಜನರನ್ನು ಎದುರು ಹಾಕಿಕೊಂಡದ್ದು ? ನೀನೇ ನೋಡಿದೀಯೇ: ಆವಲಹಳ್ಳಿಯ ಗೌಡರು, ರಂಗನಾಥಪುರದ ಗೌಡರು, ಹಲವು ಗ್ರಾಮ ಪಂಚಾಯತಿ ಚೇರ್ಮನ್ನರುಗಳು - ಎಲ್ಲರೂ ಹೇಗೆ ವಿಶ್ವಾಸವಾಗಿದ್ದಾರೆ, ಎಲ್ಲರ ಸ್ನೇಹ ಮತ್ತು ಗೌರವಗಳನ್ನು ನಾನು ಹೇಗೆ ಸಂಪಾದಿಸಿ ಕೊಂಡಿದ್ದೇನೆ. ಆದರೂ ನನ್ನನ್ನು ಟೀಕಿಸುತ್ತೀಯೆ !

'ನೀವು ಸಾವಿರ ಹೇಳಿ ! ಏನು ಪ್ರಯೋಜನ ? ನಿಮಗೆ ಸ್ವಲ್ಪ ಕೋಪ ಹೆಚ್ಚು ; ನಿಮ್ಮ ಇಷ್ಟಕ್ಕೆ ವಿರೋಧವಾಯಿತೋ ತಾಳ್ಮೆ ಇರುವುದಿಲ್ಲ, ಸುರ್ರೆಂದು ಸಿಟ್ಟು ಬರುತ್ತದೆ ! ಬುಸ್ಸೆಂದು ಹೆಡೆ ಬಿಚ್ಚುತ್ತೀರಿ! ಉಪಾಯ ಮಾಡ ಬೇಕಾದ ಕಡೆ ಅಧಿಕಾರ ಮತ್ತು ದರ್ಪ ತೋರಿಸು

'ಎಲ್ಲಿ, ಯಾವಾಗ ಹಾಗೆ ತೋರಿಸಿದ್ದೆನೆ ? ಹೇಳು. ನನಗೆ ವಿರೋಧಿಗಳಾದವರು ಎಲ್ಲಿಯೋ ಮೂರು ಜನ, ಅವರು ನೀಚರು. ಆ ಕರಿಯಪ್ಪ ತನ್ನ ಅಣ್ಣನ ಮಗನಿಗೆ ಸ್ಕಾಲರ್ ಷಿಪ್ಪನ್ನು ಕೊಡಿಸಿದ್ದ. ಯಾರೋ ಅರ್ಜಿ ಹಾಕಿದರು. ವಿಚಾರಣೆ ಮಾಡಬೇಕಾಯಿತು ; ಮೇಲಿನ ಸಾಹೇಬರಿಗೆ ಕಾಗದಗಳನ್ನು ಹೊತ್ತು ಹಾಕಿದೆ. ಅವರ ಆರ್ಡರ್ ನಂತೆ ನಡೆದುಕೊಂಡೆ. ನನ್ನದೇನು ತಪ್ಪು ??

'ನೀವೇಕೆ ಅದನ್ನೆಲ್ಲ ಮೈ ಮೇಲೆ ಹಾಕಿಕೊಂಡು ಹೋಗಬೇಕಾಗಿತ್ತು ? ಸಾಲದ್ದಕ್ಕೆ ಮುಖಂಡ ಅನ್ನಿಸಿಕೊಂಡ ಆ ಮನುಷ್ಯನಿಗೆ ಆಪಮಾನ ಮಾಡಿ ಬಯಲಿಗೆಳೆದಿರಿ. ಹಾಗೆ ಅಪಮಾನ ಮಾಡಿದರೆ ಅವನಿಗೆ ನಿಮ್ಮ ಮೇಲೆ ದ್ವೇಷ ಹುಟ್ಟುವುದಿಲ್ಲವೇ ? ಅರ್ಜಿ ಬಂದಾಗ ನೀವು ಆತನನ್ನು ಕಂಡು- ಹೀಗೆ ಅರ್ಜಿ ಬಂದಿದೆ. ಇದರ ವಿಚಾರ ಏನು ? ಆ ಹುಡುಗ ನಿಮ್ಮ ಅಣ್ಣನ ಮಗನೇ ಏನು ? ಫೈಲಾದ ಹುಡುಗನಿಗೆ ಹೀಗೆ ಸ್ಕಾಲರ್ ಷಿಪ್ಪು ಕೊಡುವುದು ಸರಿಯಲ್ಲವಲ್ಲ. ಗಲಭೆಗೆ ಕಾರಣವಾಗುತ್ತದೆ ; ನಿಮ್ಮ ಹೆಸರು ಕೆಡುತ್ತದೆ-ಎಂದು ಉಪಾಯದಿಂದ ತಿಳಿಸಿದ್ದಿದ್ದರೆ, ಆತನ ಸ್ನೇಹವನ್ನು ಸಂಪಾದಿಸುತ್ತಿದ್ದಿರಿ, ಮತ್ತು ಆತನೇ ಸ್ಕಾಲರ್ ಷಿಪ್ಪನ್ನು ಬಡಹುಡುಗನಿಗೆ ಕೊಟ್ಟು ಬಿಡೋಣ, ನಾವೇ ಸರಿಪಡಿಸಿಬಿಡೋಣ ಎಂದು ಹೇಳುತ್ತಿದ್ದ ; ನ್ಯಾಯವೂ ದೊರೆಯುತ್ತಿತ್ತು. ಅದಕ್ಕೆ ಬದಲು ಅಮಲ್ದಾರರಿಗೆ ಬರೆದಿರಿ, ಸ್ಟೇಷನ್ ಮಾಸ್ಟರಿಗೆ ಬರೆದಿರಿ, ಮೇಲಿನ ಸಾಹೇಬರಿಗೆ ಬರೆದಿರಿ, ಎಲ್ಲ ಕಡೆಯೂ ಪ್ರಕಟಮಾಡಿದಿರಿ ! ನಿಮಗೇನು ಬೇಕಾಗಿತ್ತು ? ಸ್ಕಾಲರ್ ಷಿಪ್ಪು ಕೊಡುವುದಕ್ಕೆ ಬಿಡುವುದಕ್ಕೆ ಕಮಿಟಿ ಇಲ್ಲವೇ ? ಆ ಅರ್ಜಿಯನ್ನು ಆ ಕಮಿಟಿಯ ಮುಂದಾದರೂ ಇಡಬಹುದಾಗಿತ್ತಲ್ಲ. ಅಲ್ಲಿ ಆ ಕರಿಯಪ್ಪನು ಏನು ಸಮಜಾಯಿಷಿ ಹೇಳುತ್ತಿದ್ದನೋ ನೋಡಬಹುದಾಗಿತ್ತು. ಒಂದು ವೇಳೆ ಬದಲಾಯಿಸಬೇಕಾಗಿದ್ದಿದ್ದರೆ ಕಮಿಟಿಯವರೇ ನಿರ್ಣಯ ಮಾಡುತ್ತಿದ್ದರು. ಆ ನಿರ್ಣಯವನ್ನು ಸಾಹೇಬರಿಗೆ ಕಳಿಸಿ. ನಿಮ್ಮ ಜವಾಬ್ದಾರಿಯಿಲ್ಲದಂತೆ ಉಪಾಯ ಮಾಡಬಹುದಾಗಿತ್ತಲ್ಲ. ನೀವೇಕೆ ಹಾಗೆ ಮಾಡಲಿಲ್ಲ ?”

'ಹೌದು, ನನ್ನ ಬುದ್ಧಿಗೆ ಆಗ ಹೊಳೆಯಲಿಲ್ಲ! ನೀನು ಹೇಳಿದಂತೆ ಮಾಡಬಹುದಾಗಿತ್ತು. ಆದರೆ ನೋಡು ! ಮುಖಂಡ ಅನ್ನಿಸಿಕೊಂಡವನು ಸುಳ್ಳು ಸರ್ಟಿಫಿಕೇಟನ್ನು ಕೊಡಬಹುದೋ ?'

'ಅದೇನು ಮಹಾ ಪ್ರಮಾದ ! ಕೊಡಬಾರದು ಎಂದು ಇಟ್ಟುಕೊಳ್ಳೋಣ. ಆದರೆ ಇವರಿಗೆಲ್ಲ ನಿಮ್ಮ ದೊಡ್ಡ ದೊಡ್ಡ ಅಧಿಕಾರಿಗಳೇ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ಬೆಂಗಳೂರಲ್ಲಿ ಎಷ್ಟೊಂದು ಜನ ದೊಡ್ಡ ಮನುಷ್ಯರು, ದೊಡ್ಡ ಅಧಿಕಾರಿಗಳು, ತಮ್ಮ ಕಣಿವೇ ಕೆಳಗಿನ ಬಂಧುಗಳಿಗೆ- ಇವರು ಮೈಸೂರಿನವರು ಎಂದು ಸುಳ್ಳು, ಸರ್ಟಿಫಿಕೇಟುಗಳನ್ನು ಕೊಟ್ಟು ಇ೦ಜನಿಯರಿಂಗ್ ಸ್ಕೂಲು ಮುಂತಾದ ಸ್ಕೂಲುಗಳಿಗೆ ಸೇರಿಸಿಲ್ಲ ; ಫೀಜಿನ ರಿಯಾಯಿತಿ ಕೊಡಿಸಿಲ್ಲ; ಕಡೆಗೆ ಬಹಳ ಬಡವರು ಎಂದು ಸುಳ್ಳು ಹೇಳಿ ಸ್ಕಾಲರ್ ಷಿಪ್ಪನ್ನೂ ಕೊಡಿಸಿಲ್ಲ. ಆ ಕಣಿವೆ ಕೆಳಗಿನ ಹುಡುಗರಿಗೆ ಆಟ, ಊಟ, ಎಂದು ಎರಡು ಕನ್ನಡದ ಮಾತು ಕೂಡ ಬರುವುದಿಲ್ಲ ! ವಿಶ್ವೇಶ್ವರಪುರದಲ್ಲಿ ನಮ್ಮ ಮನೆಯ ಪಕ್ಕದಲ್ಲಿಯೇ ಇರುವ ಒಬ್ಬರು ಅಯ್ಯಂಗಾರ್ ದೊಡ್ಡ ಮನುಷ್ಯರು ತಮ್ಮ ನೆಂಟನಿಗೆ ಹೀಗೆ ಸುಳ್ಳು ಸರ್ಟಿಫಿಕೇಟನ್ನು ಕೊಟ್ಟಿಲ್ಲವೇ ? ಅವರನ್ನೇನು ಸರಕಾರದವರು ಡಿಸ್ ಮಿಸ್ ಮಾಡಿದ್ದಾರೆಯೇ ? ಎಲ್ಲ ಕಡೆಯೂ ಇಂಥ ಮೋಸಗಳು ನಡೆಯುತ್ತವೆ. ಆ ಕರಿಯಪ್ಪನೊಬ್ಬನೇ ದೋಷಿಯೇ? ಹಳ್ಳಿಯಲ್ಲಿ ಹುಟ್ಟಿ ಬೆಳೆದವನು ! ದೊಡ್ಡವರ ಹತ್ತಿರ ಓಡಾಡಿಕೊಂಡು ಮುಖಂಡ ಎಂದು ಅನ್ನಿಸಿಕೊಂಡವನು !

'ನನಗೆ ತಿಳಿಯದೇ ಹೋಯಿತು ! ನೀನೇಕೆ ನನಗೆ ಆ ವಿಚಾರದಲ್ಲಿ ಸಲಹೆ ಕೊಡಲಿಲ್ಲ ? ಈಗ ನನಗೆ ಬುದ್ಧಿ ಹೇಳುವುದಕ್ಕೆ ಮಾತ್ರ ನೀನು ಬರುತ್ತೀಯಲ್ಲ !!

'ನನಗೆ ಆ ವಿಚಾರಗಳನ್ನು ನೀವು ಮೊದಲೇ ತಿಳಿಸಿದಿರಾ ? ಕಚೇರಿಯ ವಿಷಯ ಎಂದು ಗುಟ್ಟಾಗಿಟ್ಟು ಕೊಂಡಿದ್ದಿರಿ. ಎಲ್ಲ ಆದಮೇಲೆ – ಹೀಗೆ ಮಾಡಿದೆ, ಹಾಗೆ ಮಾಡಿದೆ ಎಂದು ನನ್ನ ಹತ್ತಿರ ಜ೦ಬ ಕೊಚ್ಚಿಕೊಳ್ಳುತ್ತಿದ್ದಿರಿ. ನಾನಾಗಿ ನಿಮ್ಮನ್ನು ಏತಕ್ಕೆ ಕೆದಕಿ ಕೇಳಬೇಕು? ಮಾತಿಗೆ ಮೊದಲು ಸ್ತ್ರೀ ಬುದ್ಧಿಃ ಪ್ರಳಯಾಂತಿಕಾ ಎಂದು ಜರೆಯುತ್ತೀರಿ !

ರಂಗಣ್ಣನಿಗೆ ಸಮಯೋಪಾಯ ಎಂದರೆ ಏನು ? ಟ್ಯಾಕ್ಟ್ ಎಂದು ಮೇಲಿನವರು ಹೇಳುತ್ತಿದ್ದುದರ ಅರ್ಥವೇನು? ಎಂಬುದು ಆಗ ಸ್ಸುರಿಸಿತು. ಅನುಭವ ಹೆಚ್ಚಿದಂತೆಲ್ಲ ಸಮಯೋಪಾಯಗಳು ಹೊಳೆಯುತ್ತವೆ ಎಂಬ ತಿಳಿವಳಿಕೆಯೂ ಬಂತು. ಆಗ ಕರಿಯಪ್ಪನ ಮೇಲೆ ಅವನಿಗಿದ್ದ ದುರಭಿಪ್ರಾಯ ಕಡಿಮೆಯಾಯಿತು. ಜನರೊಡನೆ ವ್ಯವಹರಿಸುವುದು, ಅವರನ್ನು ಒಲಿಸಿಕೊಳ್ಳುವುದು, ಒಂದು ದೊಡ್ಡ ಕಲೆ. ಅದು ಕೇವಲ ಅಭ್ಯಾಸದಿಂದ ಬರತಕ್ಕದ್ದೂ ಅಲ್ಲ. ಅದು ನೈಸರ್ಗಿಕವಾಗಿ, ಕಲಿಸದೆ ಬರುವ ವಿದ್ಯೆ, ರಂಗಣ್ಣ ತಾನು ಬಹಳ ಬುದ್ಧಿವಂತನೆಂದೂ ಸಮಯೋಪಾಯಜ್ಞನೆಂದೂ ಹೆಮ್ಮೆ ಪಟ್ಟು ಕೊಳ್ಳುತ್ತಿದ್ದವನು ಈಗ ಅವನಿಗೆ ತನ್ನಹೆಂಡತಿ ತನಗಿ೦ತ ಮೇಲೆಂದೂ ಸ್ತ್ರೀ ಜಾತಿಯನ್ನು ನಿಕೃಷ್ಟವಾಗಿ ಕಾಣಬಾರದೆಂದೂ ಬೋಧೆಯಾಯಿತು. ರಂಗಣ್ಣ ಮುಗುಳುನಗೆ ನಗುತ್ತಾ,

'ಹೆಂಗಸರೂ ಸಾಹೇಬರುಗಳಾಗಬಹುದೆಂದು ನಾನು ಒಪ್ಪುತ್ತೇನೆ !' ಎಂದು ಹೇಳಿದನು. “ಆ ಕಲ್ಲೇಗೌಡನ ವಿಚಾರದಲ್ಲಿ ಏನು ಮಾಡಬೇಕಾಗಿತ್ತು ? ಅವನು ಮಹಾ ದುರಹಂಕಾರಿ, ಸ್ವಾರ್ಥಪರ, ನೀಚ ! ಹೇಳು, ನೋಡೋಣ ?'

'ನನ್ನನ್ನು ಪರೀಕ್ಷೆ ಮಾಡುತ್ತೀರಾ ?'

'ಪರೀಕ್ಷೆ ಏನೂ ಅಲ್ಲ. ನಿನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳೋಣವೆಂದು ಕೇಳುತ್ತೇನೆ. ನಾನು ಮಾಡಿದ್ದು ಸರಿ, ನನ್ನದು ತಪ್ಪಿಲ್ಲ-ಎಂದು ನಾನು ತಿಳಿದು ಕೊಂಡಿದ್ದೇನೆ.'

'ನಿಮ್ಮದು ತಪ್ಪಿಲ್ಲ ಎಂದು ಹೇಗೆ ಹೇಳುತ್ತೀರಿ? ನಿಮ್ಮ ಆವಲಹಳ್ಳಿಯ ಗೌಡರಿಗೂ ರಂಗನಾಧಪುರದ ಗೌಡರಿಗೂ ತಿಂಡಿಗಿಂಡಿ ಕೊಟ್ಟು ನಯವಾಗಿ ಮಾತನಾಡಿ ಸಿ ಅವರ ಸ್ನೇಹವನ್ನು ಸಂಪಾದಿಸಿದಿರಿ. ಕಲ್ಲೇಗೌಡ ಮಾಡಿದ ಪಾಪವೇನು ? ದಿವಾನರಾದಿಯಾಗಿ ಆತನನ್ನು ಮುಖಂಡನೆಂದು ಎಲ್ಲರೂ ಗೌರವಿಸುತ್ತಾರೆ ; ಆತನ ಮನೆಗೆ ಸಹ ಹೋಗುತ್ತಾರೆ. ನೀವು ಜಂಬದಿಂದ ಆತನನ್ನು ಒತ್ತರಿಸಿ ಬಿಟ್ಟರೆ, ಒಂದೆರಡು ದಿನ ಆತನ ಮನೆಗೂ ಹೋಗಿ, ಯೋಗಕ್ಷೇಮ ವಿಚಾರಿಸಿ, ನಿಮ್ಮ ಬಿಡಾರಕ್ಕೂ ಕರೆದುಕೊಂಡು ಬಂದಿದ್ದು ಆ ತೇಂಗೊಳಲು ಮತ್ತು ಬೇಸಿನ್ ಲಾಡುಗಳ ರುಚಿಯನ್ನು ತೋರಿಸಿದ್ದಿದ್ದರೆ ನಿಮಗೇನು ತಾನೆ ನಷ್ಟವಾಗುತ್ತಿತ್ತು ? ನೀವೇನೂ ಅವನ ಮನೆಯ ಬಾಗಿಲು ಕಾಯಬೇಕಾಗಿರಲಿಲ್ಲ ; ಅವನ ಮುಂದೆ ಹಲ್ಲುಗಿರಿಯ ಬೇಕಾಗಿರಲಿಲ್ಲ. ಸ್ನೇಹದ ಮಾಡಿಗೇನು ಕೊರತೆ ? ನಿಮಗೆ ಆತನನ್ನು ಕಂಡರೇನೇ ಎಲ್ಲೂ ಇಲ್ಲದ ದ್ವೇಷ ! ಈ ಇನ್ಸ್ಪೆಕ್ಟರು ನನ್ನನ್ನು ಸಡ್ಡೆಯೇ ಮಾಡುವುದಿಲ್ಲವಲ್ಲ ! ಎಂದು ಆತನಿಗೆ ನಿಮ್ಮ ಮೇಲೆ ಕೋಪ ! ಅದಕ್ಕೇಕೆ ಅವಕಾಶ ಕೊಟ್ಟಿರಿ ??

'ಆವನು ಹೇಳಿದ ಹಾಗೆಲ್ಲ ಮೇಷ್ಟರುಗಳ ವರ್ಗಾವರ್ಗಿ, ಬಡ್ತಿ ನಾನು ಮಾಡಬೇಕಾಗಿತ್ತೋ ??

'ನೋಡಿದಿರಾ ! ನಿಮಗೆ ಹೇಗೆ ಸಿಟ್ಟು ಏರುತ್ತದೆ ! ಆತ ಯಾವಾಗಲೋ ಶಿಫಾರಸುಮಾಡುವುದರಲ್ಲಿ ಸಮಯ ಸಂದರ್ಭ ನೋಡಿಕೊಂಡು ಹತ್ತಕ್ಕೆ ಎರಡೋ ಮೂರೋ ಮಾಡಿ ಕೊಟ್ಟರೆ ತಪ್ಪೇನು ? ಆವಲಹಳ್ಳಿಯ ಗೌಡರು ಶಿಫಾರಸು ಮಾಡಿಯೇ ಇಲ್ಲವೇ? ಮೇಷ್ಟರುಗಳಿಗೆ ಕಷ್ಟ ನಿಷ್ಟುರ ಕಾಯ ಗಳಾದಾಗ ಯಾರಾದರೂ ದೊಡ್ಡ ಮನುಷ್ಯರನ್ನು ಆಶ್ರಯಿಸಿ ಸಾಹೇಬರಿಗೆ ಶಿಫಾರಸು ಹೇಳಿಸುವುದಿಲ್ಲವೇ ? ಕಲ್ಲೇಗೌಡ ದೊಡ್ಡ ಮನುಷ್ಯನಲ್ಲವೇ ?ಮುಖಂಡನಲ್ಲವೇ ? ಆತನೂ ಶಿಫಾರಸು ಮಾಡಲಿ ನಿಮ್ಮ ಬುದ್ಧಿಯನ್ನು ನೀವು ಉಪಯೋಗಿಸಿ, ಹಾವು ಸಾಯಬಾರದು ಕೋಲು ಮುರಿಯಬಾರದು ಎಂಬಂತೆ, ನೆಂಟೂ ಉಳಿಯಬೇಕು ಗಂಟೂ ಉಳಿಯಬೇಕು ಎಂಬಂತೆ ಉಪಾಯಮಾಡಬೇಕಾಗಿತ್ತು. ನೋಡಿ ! ಜನರನ್ನು ಕಳೆದು ಕೊಳ್ಳಬಾರದು, ಎದುರು ಹಾಕಿಕೊಳ್ಳಬಾರದು. ಅಷ್ಟು ನಿಮಗೆ ಗೊತ್ತಾಗಲಿಲ್ಲ.'

'ಅವನು ತನ್ನ ಕಟ್ಟಡಕ್ಕೆ ಬಾಡಿಗೆ ತೆಗೆದುಕೊಳ್ಳುತ್ತಾ ಇದ್ದ ; ರಿಪೇರಿ ಮಾತ್ರ ಮಾಡಿಕೊಡಲಿಲ್ಲ. ಯಾರು ಹೇಳಿದರೂ ಲಕ್ಷವೇ ಇಲ್ಲ. ಏನಾಗಿದೆ ಆ ಕಟ್ಟಡಕ್ಕೆ ? ದಿವಾನರಿಗೆ ಅಲ್ಲಿ ಅಟ್ ಹೊ೦ ಕೊಟ್ಟರೆ ಕುಣೀತಾ ಬಂದು ಕುಳಿತುಕೊಳ್ಳುತ್ತಾರೆ- ಎಂದು ಲಾಘವದಿಂದ ಮಾತನಾಡಿದ. ಅವನನ್ನು ದೊಡ್ಡ ಮನುಷ್ಯನೆಂದು ಹೇಳಬಹುದೇ ? ನಾನು ಮಾಡಿದ್ದಾದರೂ ಏನು ? ಮರ್ಯಾದೆಯಾಗಿ ಕಾಗದವನ್ನು ಬರೆದೆ ;ಜ್ಞಾಪಕ ಕೊಟ್ಟೆ. ಅಲ್ಲಿ ಪ್ಲೇಗ್ ಇಲಿ ಬಿತ್ತು ; ಡಿಸಿಸ್‌ಫೆಕ್ಷನ್ ಮಾಡಿಸುವುದಕ್ಕೆ ಆಗುವುದಿಲ್ಲ ಎಂದು ವೈಸ್ ಪ್ರೆಸಿಡೆಂಟ್ ಹೇಳಿದರು ; ಪಾಠಶಾಲೆಯನ್ನು ಮಿಡಲ್ ಸ್ಕೂಲು ಕಟ್ಟಡದಲ್ಲಿ ಮಾಡಿ ಎಂದು ಸಾಹೇಬರು ಆರ್ಡರ್ ಮಾಡಿದರು. ನನ್ನ ಮೇಲೆ ವೃಥಾ ದ್ವೇಷ ಆ ಕಲ್ಲೇಗೌಡನಿಗೆ ಬೆಳೆಯಿತು. '

'ನೀವು ಆ ಕಟ್ಟಡವನ್ನು ಖಾಲಿ ಮಾಡಬೇಕು ಎಂಬುವ ಹಟದಿಂದಲ್ಲವೇ ಕಾಗದ ಗೀಗದ ಬರೆದು ರಿಕಾರ್ಡು ಇಟ್ಟು ಕೊಂಡದ್ದು ! ಪ್ಲೇಗ್ ಇಲಿ ಬೀಳದೇ ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ನಾನು ಮೊದಲೇ ಹೇಳಿದಂತೆ ಆತನನ್ನು ಸ್ನೇಹಭಾವದಿಂದ ಕಂಡು, ನಿಮ್ಮ ಯೋಗ್ಯತೆ, ವಿದ್ಯೆ, ಸಭ್ಯತೆ ಮೊದಲಾದುವು ಆತನಿಗೆ ತಿಳಿಯುವಂತೆ ವರ್ತಿಸಿದ್ದಿದ್ದರೆ ಆತನಿಗೂ ನಿಮ್ಮಲ್ಲಿ ಗೌರವ ಹುಟ್ಟುತ್ತಿತ್ತು ; ನೀವು ಆಗ ಒಂದು ಮಾತನ್ನುಹೇಳಿದ್ದರೆ ರೀಪೇರಿ ಮಾಡಿಕೊಡುತ್ತಿದ್ದ. ಒಂದು ವೇಳೆ ಮಾಡಿ ಕೊಡಲಿಲ್ಲ ಅನ್ನಿ. ನಿಮ್ಮ ಉಪಾಧ್ಯಾಯರ ಸಂಘದ ಸಭೆಗಳನ್ನು ಎಲ್ಲೆಲ್ಲೋ ಸೇರಿಸುತ್ತಿದ್ದಿರಲ್ಲ, ತಿಪ್ಪೂರಿನಲ್ಲಿ ಸೇರಿಸಿ ವಾರ್ಷಿಕೋತ್ಸವ ಮಾಡಿ ದೊಡ್ಡ ಸಾಹೇಬರನ್ನು ಅಧ್ಯಕ್ಷರನ್ನಾಗಿ ಬರಮಾಡಿಕೊಳ್ಳಬೇಕಾಗಿತ್ತು, ಕಲ್ಲೇಗೌಡರನ್ನೂ ಕರೆಸಿಕೊಂಡು, ಊರಿನ ವೈಸ್ ಪ್ರೆಸಿಡೆಂಟ್ ಮೊದಲಾದವರನ್ನೂ ಕರೆಸಿಕೊಂಡು ಸ್ಕೂಲು ಮುಂದಿನ ಚಪ್ಪರದಲ್ಲಿ ಕೂಡಿಸಬೇಕಾಗಿತ್ತು. ದೊಡ್ಡ ಸಾಹೇಬರೇ ನೇರಾಗಿ ಕಲ್ಲೇಗೌಡನೊಡನೆ ಮಾತನಾಡುತ್ತಿದ್ದರು. ವೈಸ್ ಪ್ರೆಸಿಡೆಂಟ್ ಮೊದಲಾದವರು ದೊಡ್ಡ ಸಾಹೇಬರಿಗೆ ತಾವೇ ಹೇಳುತ್ತಿದ್ದರು. ಆಗ ನೀವು ನಿಷ್ಟುರಕ್ಕೆ ಗುರಿಯಾಗುತ್ತಿರಲಿಲ್ಲ! ಕಲ್ಲೇಗೌಡನು ಕೂಡ ಆ ಸಂದರ್ಭದಲ್ಲಿ ಮಾನ ಉಳಿಸಿಕೊಳ್ಳುವುದಕ್ಕಾಗಿ ಕಟ್ಟಡದ ರಿಪೇರಿ ಮಾಡಿಸುತ್ತಿದ್ದನೋ ಏನೋ! ಅದೂ ಬೇಡ. ಮೇಲಕ್ಕೆ ಬರೆದು ಸರ್ಕಾರದ ಕಟ್ಟಡವನ್ನು ಯಾವಾಗಲೋ ಕಟ್ಟಿಸಬಹುದಾಗಿತ್ತಲ್ಲ! ಮುಖ್ಯವಾಗಿ ನೋಡಿ ! ನಿಮಗೆ ಜ೦ಬ ಹೆಚ್ಚು ! ಎಲ್ಲರೂ ನಿಮ್ಮನ್ನು ಆಶ್ರಯಿಸಬೇಕು, ಹೊಗಳಬೇಕು ಎಂಬ ಚಾಪಲ್ಯ ಇಟ್ಟು ಕೊಂಡಿದ್ದೀರಿ ! ನಿಮ್ಮ ಉಡುಪು ನೋಡಿದರೇನೇ ಸಾಕು, ಮಹಾ ಜಂಬಗಾರರು ಎಂದು ಎಲ್ಲರ ಕಣ್ಣೂ ಬೀಳುತ್ತದೆ !'

ರಂಗಣ್ಣನಿಗೆ ನಗು ಬಂತು, ತನ್ನ ಉಡುಪಿನ ಮೇಲೆ ಊರ ಜನರ ಕಣ್ಣು ಬೀಳುವುದಿರಲಿ ; ತನ್ನ ಹೆಂಡತಿಯ ಕಣ್ಣ ಬಿದ್ದಿದೆ ಎಂದು ಅವನಿಗೆ ತಿಳಿಯಿತು.

'ನೀನು ಜಂಬವನ್ನು ಮಾಡುವುದಿಲ್ಲವೋ? ಅಮಲ್ದಾರರ ಹೆಂಡತಿ, ಪೊಲೀಸ್ ಇನ್ಸ್ಪೆಕ್ಟರ ಹೆಂಡತಿ ಮೊದಲಾದವರಿಗಿಂತ ಠೀಕಾಗಿರಬೇಕು ಎಂದು ನೀನು ಹೊಸ ಹೊಸ ಸೀರೆಗಳನ್ನು ಕೊಂಡುಕೊಳ್ಳುತ್ತಾ ಇಲ್ಲವೋ? ನನ್ನ ಸರ್ಕೀಟಿನ ದಿಂಬುಗಳಿಗೆಲ್ಲ ಕಸೂತಿ ಹಾಕಿದ ಗವಸುಗಳನ್ನು ಮಾಡೆಂದು ನಾನು ಹೇಳಿದೆನೆ ? ಅವುಗಳಲ್ಲಿ ನೀಲಿ ದಾರದಿಂದ ನನ್ನ ಹೆಸರನ್ನು ರಚಿಸೆಂದು ಕೇಳಿದೆನೇ ? ನಿನಗೂ ನಿನ್ನ ಗಂಡ ಜಂಬವಾಡಬೇಕೆಂದು ಬಯಕೆ ಇದೆ ! ಹೋಗಲಿ ಬಿಡು, ಆ ಉಗ್ರಪ್ಪನ ವಿಚಾರದಲ್ಲಿನೀನು ಏನು ಮಾಡುತ್ತಿದ್ದೆ ? ಹೇಳು ನೋಡೋಣ.'

'ನಾನು ಮಾಡುತ್ತಿದ್ದುದೇನು ? ಅವನ ಮುಖಂಡರು ನಿಮ್ಮ ಸ್ನೇಹಿತರೆಂದು ಅವನಿಗೆ ತಿಳಿದಿದ್ದರೆ ಅವನೇಕೆ ತುಂಟಾಟ ಮಾಡುತ್ತಿದ್ದ! ಅವನೇನೋ ದುಷ್ಟ ಎಂದು ಇಟ್ಟು ಕೊಳ್ಳಿ. ಎರಡು ದಿನ ಅವನಿಗೆ ಹೆಡ್‌ಮೇಷ್ಟರ ಕೆಲಸ ಕೊಡಬೇಕಾಗಿತ್ತು ! ತಮ್ಮ ಮಕ್ಕಳನ್ನು ಪಾಠ ಶಾಲೆಗೆ ಸೇರಿಸದೇ ಹೋದಾಗ ಊರಿನ ಜನ ಗಲಾಟೆ ಎಬ್ಬಿಸುತ್ತಿದ್ದರು ; ಅವನ ಮೇಲೆ ಊರಿನ ಜನರೇ ದೂರು ಹೇಳುತ್ತಿದ್ದರು ; ಅವನನ್ನುಬೇಕಾದ ಹಾಗೆ ಅವರೇ ಬಯ್ಯುತ್ತಿದ್ದರು, ಆ ಕಷ್ಟಗಳನ್ನೂ , ನಿಮ್ಮ ಆರ್ಡರುಗಳ ಜೋರನ್ನೂ ಎರಡು ದಿನ ಅವನು ಅನುಭವಿಸಿದ್ದರೆ ಚೆನ್ನಾಗಿರುತ್ತಿತ್ತು ! ದಂಡನೆ ಮಾಡುವುದಕ್ಕೆ ಏನು ! ಸಾಹೇಬರುಗಳಿಗೆ ನೆಪಗಳು ಬೇಕಾದಷ್ಟು ಇದ್ದೇ ಇರುತ್ತವೆ. ಯಾವಾಗಲಾದರೂ ಮಾಡಬಹುದು. ಒಲ್ಲದ ಗಂಡನಿಗೆ ಮೊಸರಿನಲ್ಲಿ ಕಲ್ಲು ಎಂದು ಕೇಳಿಲ್ಲವೇ? ಆದರೂ ನಿಮ್ಮ ಇಲಾಖೆಯಂಥ ಕೆಟ್ಟ ಇಲಾಖೆ ಬೇರೆ ಇರಲಾರದು ! ನೀವೇ ಆಗಾಗ ಹೇಳುತ್ತಿದ್ದಿರಿ : ಕಟ್ಟಡಗಳಿಲ್ಲ, ಸರಿಯಾದ ಮೇಷ್ಟ್ರುಗಳಿಲ್ಲ, ಪಾಠೋಪಕರಣಗಳಿಲ್ಲ; ಮಕ್ಕಳನ್ನು ಕುರಿಗಳಂತೆ ತುಂಬುತ್ತಾರೆ ಯೋಗ್ಯತೆ ಇಲ್ಲದಿದ್ದರೂ ಪಾಸು ಮಾಡಿಸುತ್ತಾರೆ; ಮೇಲಿನ ಅಧಿಕಾರಿಗಳು ಬರಿ ಜಬರ್ದಸ್ತಿನವರು. ತಮಗೆ ಕನ್ನಡ ಏನೂ ಬರೆದಿದ್ದರೂ ವಿಧವೆಗೆ ಕೂಡ ಜುಲ್ಮಾನೆ ಹಾಕುತ್ತಾರೆ ; ಮೇಷ್ಟ್ರುಗಳನ್ನೆಲ್ಲ ಹುಚ್ಚು ಹುಚ್ಚಾಗಿ ದಂಡಿಸುತ್ತಾರೆ. ಉಪಾಧ್ಯಾಯರ ಸಭೆಗಳಲ್ಲಿ ಭಾಷಣ ಮಾಡುವಾಗ ನೀವೆಲ್ಲ ಗುರುಗಳು, ದೇಶೋದ್ಧಾರಕರು ; ಹೊಟ್ಟೆಗಿಲ್ಲದಿದ್ದರೇನು ? ಸಂಬಳವೇ ಮುಖ್ಯವಲ್ಲ ; ಸೇವೆಯೆ ಮುಖ್ಯ. ನಿಮಗೆ ಗೌರವದ ಕಾಣಿಕೆಯನ್ನು ದೇಶವೇ ಸಲ್ಲಿಸುತ್ತದೆ ಎಂದು ಮುಂತಾಗಿ ಹರಟುತ್ತಾರೆ- ಎಂದು ನೀವು ಹೇಳುತ್ತಿರಲ್ಲಿಲ್ಲವೆ ?'

'ಇತರ ಇಲಾಖೆಗಳು ಇರುವಹಾಗೆಯೇ ನಮ್ಮ ಇಲಾಖೆಯ ಇದೆ. ಮುಂದೆ ಪ್ರಜಾ ಸರ್ಕಾರ ಬಂದಾಗ ಹೆಚ್ಚಾಗಿ ಹಣ ಒದಗಿ ದಕ್ಷರಾದ ಸಿಬ್ಬಂದಿ ಒದಗಿ ಎಲ್ಲವೂ ಸರಿಹೋಗುತ್ತದೆ. ನಾನಂತೂ ಮೇಷ್ಟರುಗಳನ್ನು ಗೌರವದಿಂದಲೂ ವಿಶ್ವಾಸದಿಂದಲೂ ನಡೆಸಿಕೊಂಡು ಬಂದೆ. ಅವರ ಗೌರವವನ್ನೂ ವಿಶ್ವಾಸವನ್ನೂ ಸಂಪಾದಿಸಿ ಕೊಂಡೆ. ಆದನ್ನಾದರೂ ನೀನು ಮೆಚ್ಚುತ್ತೀಯೋ ಇಲ್ಲವೋ ?' 'ನೀವು ನಿಮ್ಮ ಸರ್ಜ್ ಸೂಟನ್ನೋ ಸಿಲ್ಕ್ ಸೂಟನ್ನೋ ಹಾಕಿಕೊಂಡು ನನ್ನ ಮುಂದೆ ಸ್ವಲ್ಪ ಇನ್ ಸ್ಪೆಕ್ಟರ್‌ ಠೀವಿ ಮಾಡಿ ! ಆಗ ನನ್ನಉತ್ತರ ದೊರೆಯುತ್ತೆ !' ಎಂದು ನಗುತ್ತಾ ಆಕೆ ಎದ್ದು ಹೋದಳು. ಹಾಲಿನಲ್ಲಿ ಗಲಾಟೆ ಮಾಡುತ್ತಿದ್ದ ಮಕ್ಕಳ ಕೈಯಿಂದ ಊದುಗೊಳವೆ ಮತ್ತು ಜಾಗಟೆಗಳನ್ನು ಕಿತ್ತು ಕೊಂಡಳು, ಗಂಡನ ರುಮಾಲನ್ನು ತಂದು ನಿಲುಕಟ್ಟಿನ ಕೊಕ್ಕೆಗೆ ಹಾಕಿದಳು. ರಂಗಣ್ಣನಿಗೆ ವರ್ಗವಾಗಿರುವ ಸಂಗತಿ ರೇಂಜಿನಲ್ಲಿ ಪ್ರಚಾರವಾಯಿತು. ಆವಲಹಳ್ಳಿಯ ದೊಡ್ಡಬೋರೇಗೌಡರೂ ರಂಗನಾಥಪುರದ ಗಂಗೇಗೌಡರೂ ಬಂದು ಮಾತನಾಡಿಸಿದರು. ' ವರ್ಗದ ಆರ್ಡರನ್ನು ರದ್ದು ಪಡಿಸಲು ಪ್ರಯತ್ನ ಪಡೋಣವೇ'–ಎಂದು ಕೇಳಿದರು.

'ಬೇಡ. ನೀವುಗಳು ಪ್ರಯತ್ನಪಟ್ಟರೆ ನಿಮ್ಮನ್ನೆಲ್ಲ ನಾನು ಎತ್ತಿಕಟ್ಟಿದೆನೆಂದು ಮೇಲಿನ ಸಾಹೇಬರು ತಿಳಿದುಕೊಂಡು ಅಸಮಾಧಾನ ಪಟ್ಟುಕೊಳ್ಳುತ್ತಾರೆ. ಅದೂ ಅಲ್ಲದೆ ಈ ವರ್ಗದ ಆರ್ಡರನ್ನು ಉದ್ದೇಶಪೂರ್ವಕವಾಗಿ ಮಾಡಿದ್ದಾರೆ. ಆದ್ದರಿಂದ ಬದಲಾಯಿಸುವುದಿಲ್ಲ' ಎಂದು ರಂಗಣ್ಣ ಹೇಳಿದನು. ಕಡೆಗೆ ಆ ಇಬ್ಬರು ಗೌಡರು ತಮ್ಮ ಹಳ್ಳಿಗಳಿಗೆ ಒಂದು ದಿನವಾದರೂ ಬಂದು ಆತಿಥ್ಯ ಸ್ವೀಕಾರ ಮಾಡಬೇಕೆಂದು ಕೇಳಿಕೊಂಡರು. ಅವರ ಇಷ್ಟಾನುಸಾರ ರಂಗಣ್ಣ ಅವರ ಹಳ್ಳಿಗಳಿಗೆ ಹೋಗಿಬಂದನು.

ಹೀಗೆ ವಾಪಸು ಬಂದನಂತರ ಗವಿಮಠದ ಪಾರು ಪತ್ಯಗಾರನು ಕುದುರೆಗಾಡಿಯನ್ನು ತೆಗೆದುಕೊಂಡು ಬಂದು ರಂಗಣ್ಣನನ್ನು ಮನೆಯಲ್ಲಿ ಕಂಡನು.

'ಸ್ವಾಮಿಯವರಿಗೆ ನನ್ನ ಕಾಗದ ಸೇರಿತೋ ?' ಎಂದು ರಂಗಣ್ಣ ಕೇಳಿದನು.

'ಸೇರಿತು ಸ್ವಾಮಿ ! ಗಾಡಿಯನ್ನು ಕಳಿಸಿದ್ದಾರೆ. ಖುದ್ದಾಗಿ ನನ್ನನ್ನೇ ಕಳಿಸಿದ್ದಾರೆ. ತಾವು ದಯಮಾಡಿಸಬೇಕು.'

ರಂಗಣ್ಣ ಒಳಕ್ಕೆ ಹೋಗಿ ಹೆಂಡತಿಗೆ ವರ್ತಮಾನ ಕೊಟ್ಟನು. ಆಕೆ, 'ಹೋಗಿ ಬನ್ನಿ. ಆದರೆ ಶಂಕರಪ್ಪನನ್ನು ಜೊತೆಗೆ ಕರೆದುಕೊಂಡು ಹೋಗಿ' ಎಂದು ಹೇಳಿದಳು.ಶಂಕರಪ್ಪನಿಗೆ ಉಗ್ರಪ್ಪನ ಪೆನ್ಷನ್ ಕಾಗದಗಳನ್ನೂ ಜೊತೆಗೆ ತರುವಂತೆ ರಂಗಣ್ಣ ಹೇಳಿಕಳಿಸಿ ತಾನು ಹೊರಡಲು ಉಡುಪಿನ ಸಜ್ಜು ಮಾಡಿಕೊಂಡನು. ಸರಿಗೆಯ ಪಂಚೆಯನ್ನುಟ್ಟು ಕೊಂಡು, ಸರ್ಜುಕೊಟ್ಟು, ಶಲ್ಯ ಮತ್ತು ರುಮಾಲುಗಳನ್ನು ಧರಿಸಿಕೊಂಡನು. ಶಂಕರಪ್ಪನ ಕೈಗೆ ಒಂದು ಶುಭವಾದ ಟವಲ್ಲನ್ನು ಕೊಟ್ಟು ತನ್ನ ಕೈ ಬೆತ್ತ ಹಿಡಿದುಕೊಂಡು ಹೊರಟನು. ಕುದುರೆಯ ಗಾಡಿಯಾದ್ದರಿಂದ ಪ್ರಯಾಣ ಬೇಜಾರು ಹಿಡಿಸಲಿಲ್ಲ. ಬೆಳಗ್ಗೆ ಒಂಬತ್ತು ಗಂಟೆಗೆ ಹೊರಟವರು ಹತ್ತೂ ಕಾಲು ಗಂಟೆಗೆ ಗವಿಮಠವನ್ನು ಸೇರಿದರು.

ಮಠದ ಸನ್ನಿವೇಶ ಬಹಳ ರಮಣೀಯವಾಗಿತ್ತು. ಮೂರು ಕಡೆ ಬೆಟ್ಟ ಗಳು ಒಂದು ಕಡೆ ಬಯಲು ; ಬೆಟ್ಟಗಳ ಮೇಲೆ ಕುರುಚಲು ಕಾಡು; ಅಲ್ಲಲ್ಲಿ ಝರಿಗಳು ; ಬಯಲಲ್ಲಿ ಸೀಳು ಹೊಳೆಗಳು ; ಪೈರು ಪಚ್ಚೆ . ಬೆಟ್ಟದ ಬುಡದಲ್ಲಿ ಕೆಲವು ಸತ್ರಗಳು, ಎರಡು ಮೂರು ದೇವಾಲಯಗಳು; ಬೆಟ್ಟದ ಮೇಲೊಂದು ದೇವಾಲಯ, ಮಠದ ಕಟ್ಟಡ ಬೆಟ್ಟದ ಬುಡದಲ್ಲಿಯೇ ಇತ್ತು. ಸಾಮಾನ್ಯವಾಗಿ ಅಲ್ಲಿ ಪ್ರಶಾಂತ ವಾತಾವರಣವಿರುತಿತ್ತು, ಆದರೆ ಈಚೆಗೆ ನೂತನ ಸ್ವಾಮಿಗಳ ಪಟ್ಟಬಂಧ ಮಹೋತ್ಸವ ನಡೆದಿದ್ದುದರಿಂದ, ಅದರ ಅವಶಿಷ್ಟಗಳು ಇನ್ನೂ ಇದ್ದು ವು ; ಆ ಮಹೋತೃವಕ್ಕೆ ಬಂದಿದ್ದವರಲ್ಲಿ ಕೆಲವರು ಇನ್ನೂ ಸ್ಥಳದಲ್ಲಿಯೇ ಇದ್ದರು. ಮಠವನ್ನು ಸಮೀಪಿಸುತ್ತಿದ್ದಾಗ ಅಮಲ್ದಾರರು, ಪೊಲೀಸ್ ಇನ್ಸ್ಪೆಕ್ಟರು, ಶಿರಸ್ತೆದಾರರು, ಮುನಸೀಫರು, ಮ್ಯಾಜಿಸ್ಟ್ರೇಟರು ಆದಿಯಾಗಿ ಹಲವರು ಸರಕಾರಿ ಅಧಿಕಾರಿಗಳು ಸಹ ಅತಿಥಿಗಳಾಗಿ ಬಂದಿರುವುದು ರಂಗಣ್ಣನಿಗೆ ತಿಳಿಯಿತು. ಜನಾರ್ದನಪುರದಿಂದ ಅಡಿಗೆಯವರನ್ನು ಕರೆಸಿ ಒಂದು ಪತ್ರದಲ್ಲಿ ಅಡಿಗೆಯ ಏರ್ಪಾಟನ್ನು ಇಟ್ಟಿದ್ದರು. ರಂಗಣ್ಣನಿಗೆ ಬೇರೆ ಒಂದು ಸತ್ರದಲ್ಲಿ ಮಹಡಿಯ ಮೇಲೆ ದೊಡ್ಡದೊಂದು ಕೊಟಡಿ ಬೀಡಾರವಾಗಿ ಏರ್ಪಟ್ಟಿತ್ತು. ಮೊದಲು ಆ ಬೀಡಾರವನ್ನು ನೋಡೋಣವೆಂದು ಹೊಗುತ್ತಿದ್ದಾಗ ಅಮಲ್ದಾರರೂ ಮುನಸೀಫರೂ ಎದುರು ಬಿದ್ದರು. ಒಬ್ಬರಿಗೊಬ್ಬರು ಕುಶಲ ಪ್ರಶ್ನೆಗಳನ್ನು ಮಾಡಿ ಕೈಗಳನ್ನು ಕುಲುಕಿ ಆದಮೇಲೆ, 'ರಂಗಣ್ಣನವರೇ! ನಿಮ್ಮ ನೆಪದಲ್ಲಿ ನಮಗೂ ಈ ದಿನ ಔತಣ. ಮುಖ್ಯ ಅತಿಥಿಗಳಾಗಿ ನೀವು ಬಂದಿದ್ದೀರಿ! ನಿಮ್ಮ ಪರಿವಾರವಾಗಿ ನಾವು ಬಂದಿದ್ದೆವೆ !' ಎಂದು ನಗುತ್ತಾ ಅಮಲ್ದಾರರು ಹೇಳಿದರು.

'ತಾಲ್ಲೂಕಿನ ಧಣಿಗಳು ತಾವು ! ತಾವು ಮುಂದಿರಬೇಕು, ತಮ್ಮ ಹಿಂದೆ ನಾವಿರಬೇಕು !' ಎಂದು ರಂಗಣ್ಣನು ನಗುತ್ತಾ ಹೇಳಿದನು.

ಹೀಗೆ ಮಾತುಕತೆಗಳನ್ನಾಡಿ ರಂಗಣ್ಣ ತನ್ನ ಕೊಟಡಿಗೆ ಹೋದನು. ನೆಲಕ್ಕೆ ಜಮಖಾನವನ್ನು ಹಾಸಿ ದಿಂಬುಗಳನ್ನು ಗೋಡೆಗೆ ಒರಗಿಸಿದ್ದರು. ಒಂದು ಕಡೆ ಒಂದು ಮೇಜು ಮತ್ತು ಎರಡು ಕುರ್ಚಿಗಳಿದ್ದುವು. ಹಿಂದೆಯೇ ಬಂದ ಪಾರು ಪತ್ಯಗಾರನು 'ಸ್ವಾಮಿಯವರು ಇಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕು. ಶ್ರೀಗಳವರಿಗೆ ತಾವು ಬಂದಿರುವ ಸಮಾಚಾರವನ್ನು ತಿಳಿಸಿ ಮತ್ತೆ ಬರುತ್ತೇನೆ' ಎಂದು ಹೇಳಿ ಹೊರಟುಹೋದನು.

ರಂಗಣ್ಣ ದಿಂಬಿಗೆ ಒರಗಿಕೊಂಡು, 'ನೋಡಿದಿರಾ ಶಂಕರಪ್ಪ ! ಹೀಗೆ ಆಗುವುದೆಂದು ಕನಸಿನಲ್ಲಾದರೂ ಕಂಡಿದ್ದೀರಾ ? ಹಿಂದಿನ ಆ ಉಗ್ರಪ್ಪನೆಲ್ಲಿ! ಇಂದಿನ ಶಾಂತವೀರಸ್ವಾಮಿಗಳೆಲ್ಲಿ! ನಾನು ಮುಖ್ಯ ಅತಿಥಿಯಾಗಿ ಇಲ್ಲಿಗೆ ಬಂದಿರುವುದು ಒಂದು ಸೋಜಿಗವಲ್ಲವೆ!' ಎಂದು ಹೇಳಿದನು.

'ಹೌದು ಸ್ವಾಮಿ! ಕಣ್ಣಿಂದ ಸಾಕ್ಷಾತ್ತಾಗಿ ನೋಡಿದರೂ ನಂಬಲಾಗದ ಘಟನೆ!'

ಶಂಕರಪ್ಪನೂ ಆಶ್ಚರ್ಯಭರಿತನಾಗಿ ಉಗ್ರಪ್ಪನ ಪೂರ್ವಾಶ್ರಮದ ಕಥೆಗಳನ್ನು ಹೇಳುತ್ತಿದ್ದನು. ರಂಗಣ್ಣ, 'ಶಂಕರಪ್ಪ ! ನೀವು ತಂದಿರುವ ಪೆನ್ಷನ್ ಕಾಗದಗಳಿಗೆ ಸ್ವಾಮಿಗಳ ರುಜು ಮಾಡಿಸೋಣ, ಎಂತಿದ್ದರೂ ಇಪ್ಪತೈದು ವರ್ಷ ಸರ್ವಿಸ್ ಆಗಿದೆ. ಆ ಸಂಸಾರ ಪೋಷಣೆಗೆ ಒಂದಿಷ್ಟು ಪೆನ್ಷನ್ ಒದಗಲಿ, ನಾನು ಖುದ್ದಾಗಿ ಶಿಫಾರಸು ಮಾಡಿ ಕಳಿಸಿಕೊಡುತ್ತೇನೆ' ಎಂದನು. ಪಾರುಪತ್ಯಗಾರನು ಮತ್ತೆ ಬಂದನು. ಅವನ ಜೊತೆಯಲ್ಲಿ ಮಾಣಿಯೊಬ್ಬನು ಬೆಳ್ಳಿಯ ತಟ್ಟೆಗಳಲ್ಲಿ ಸಜ್ಜಿಗೆ ಮತ್ತು ಬೋಂಡಗಳನ್ನೂ, ಲೋಟಗಳಲ್ಲಿ ಕಾಫಿಯನ್ನೂ ತೆಗೆದುಕೊಂಡು ಬಂದು ಮೇಜಿನ ಮೇಲಿಟ್ಟನು.

'ಸ್ವಲ್ಪ ಉಪಾಹಾರ ಸ್ವೀಕರಿಸಬೇಕು ! ಶ್ರೀಗಳವರು ಪೂಜಾಗೃಹದಲ್ಲಿದ್ದಾರೆ. ಅರ್ಧಗಂಟೆಯ ತರುವಾಯ ತಮ್ಮನ್ನು ಅವರಲ್ಲಿಗೆ ಕರೆದುಕೊಂಡು ಹೋಗುತ್ತೇನೆ. ತಾವು ಒಬ್ಬರೇ ಅಲ್ಲಿಗೆ ದಯಮಾಡಿಸಬೇಕೆಂದು ಶ್ರೀಗಳವರು ತಿಳಿಸಿದ್ದಾರೆ' ಎಂದು ಪಾರುಪತ್ಯಗಾರನು ಹೇಳಿದನು.

ಉಪಾಹಾರ ಮುಗಿಯತು. ಆರ್ಧ ಗಂಟೆಯೂ ಮುಗಿಯಿತು, ಇದೇ ಉಡುಪಿನಲ್ಲಿ ಸ್ವಾಮಿಗಳ ದರ್ಶನಕ್ಕೆ ಬರಬಹುದೇ ? ಇಲ್ಲ.ಕೋಟು ರುಮಾಲುಗಳನ್ನು ತೆಗೆದಿಟ್ಟು ಬರಲೇ ? ' ಎಂದು ರಂಗಣ್ಣ ಕೇಳಿದನು,

'ಹೇಗೆ ಬಂದರೂ ಆಕ್ಷೇಪಣೆಯಿಲ್ಲ ಸ್ವಾಮಿ !”

ಪಾರುಪತ್ಯಗಾರ ಮುಂದೆ ರಂಗಣ್ಣ ಹಿಂದೆ ಹೊರಟರು. ತಾನು ಹೇಗೆ ನಡೆದುಕೊಳ್ಳಬೇಕು? ಏನೆಂದು ಆತನನ್ನು ಸಂಬೋಧಿಸಬೇಕು ? ಆತನೊಡನೆ ಏನನ್ನು ಮಾತನಾಡಬೇಕು ? ರಂಗಣ್ಣ ಆಲೋಚಿಸತೊಡಗಿದನು. ಅಂತಹ ಸಂದಿಗ್ಧ ಸನ್ನಿವೇಶದಲ್ಲಿ ಅವನು ಅದುವರೆಗೂ ಸಿಕ್ಕಿಕೊಂಡದ್ದೇ ಇಲ್ಲ. ಆ ಕಾಲಕ್ಕೆ ಏನು ಹೊಳೆಯುವುದೋ ಹಾಗೆ ಮಾಡೋಣವೆಂದು ತೀರ್ಮಾನಿಸಿ ಕೊಂಡು ರಂಗಣ್ಣ ಮೌನದಿಂದ ಹೊಗುತ್ತಿದ್ದನು. ಮಠದ ಮುಂಭಾಗದಲ್ಲಿ ಜನರ ಓಡಾಟ ಸುಮಾರಾಗಿತ್ತು. ಮುಂದಿನ ಕೈ ಸಾಲೆಯಲ್ಲಿ ಒಂದು ಎತ್ತರವಾದ ಗದ್ದುಗೆ ಇತ್ತು. ಅದರ ಮೇಲೆ ರತ್ನಗಂಬಳಿ ಹಾಕಿ ವ್ಯಾ ಘ್ರಾಜಿನವನ್ನು ಹರಡಿತ್ತು. ಕಾವಿಬಟ್ಟೆಯ ಮೇಲ್ಕಟ್ಟು ಮತ್ತು ಕಾವಿ ಬಟ್ಟೆಯ ಗವಸುಗಳಿದ್ದ ದಿಂಬುಗಳು ಇದ್ದು ವು. ಹಲವರು ಭಕ್ತರು ಆ ಗದ್ದುಗೆಯ ಬಳಿಗೆ ಹೋಗಿ ಅಲ್ಲಿದ್ದ ಪಾದುಕೆಗಳನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ಪಕ್ಕದಲ್ಲಿದ್ದ ಹುಂಡಿಯ ಪೆಟ್ಟಿಗೆಯಲ್ಲಿ ಕಾಣಿಕೆಗಳನ್ನು ಹಾಕಿ ಬರುತ್ತಿದ್ದರು. ಹುಂಡಿ ಪೆಟ್ಟಿಗೆಯ ಪಕ್ಕದಲ್ಲಿ ದವಾಲಿಯ ಜವಾನ ಕೋಲು ಹಿಡಿದುಕೊಂಡು ನಿಂತಿದ್ದನು. ಕೈಸಾಲೆಯನ್ನು ದಾಟಿದಮೇಲೆ ದೊಡ್ಡ ದೊಡ್ಡ ಮರದ ಕಂಬಗಳ ವಿಶಾಲವಾದ ತೊಟ್ಟಿ, ಅಲ್ಲಿ ಹೆಚ್ಚು ಜನವಿರಲಿಲ್ಲ. ಆ ತೊಟ್ಟಿಯನ್ನು ದಾಟಿ ಮುಂದಕ್ಕೆ ಹೋದರೆ ಅಲ್ಲಿ ಇನ್ನೊಂದು ತೊಟ್ಟಿ, ಅದು ಮೊದಲಿನದರಷ್ಟು ವಿಶಾಲವಾಗಿರಲಿಲ್ಲ. ಮತ್ತು ಅಲ್ಲಿ ಬೆಳಕು ಸಹ ಹೆಚ್ಚಾಗಿರಲಿಲ್ಲ ; ಜನರು ಯಾರೂ ಇರಲಿಲ್ಲ ; ಗಭೀರ ನೀರವ ಸ್ಥಾನವಾಗಿತ್ತು. ಆ ತೊಟ್ಟಿ ಯನ್ನು ದಾಟಿದ ನಂತರ ಪಾರುಪತ್ಯಗಾರನು ಕೈ ಮುಗಿದು, 'ಸ್ವಾಮಿಯವರು ಒಳಕ್ಕೆ ದಯಮಾಡಿಸಬೇಕು, ಈ ನಡು ಮನೆಯನ್ನು ದಾಟಿ ಮುಂದೆ ಹೋದರೆ ಇನ್ನೊಂದು ಸಣ್ಣ ತೊಟ್ಟಿ ಇದೆ. ಅದರ ಬಲಗಡೆಯ ಕೋಣೆಯಲ್ಲಿ ಶ್ರೀಗಳವರು ಇದ್ದಾರೆ. ಇಲ್ಲಿಂದ ಮುಂದಕ್ಕೆ ನಾನು ಬರಲು ನನಗೆ ಆಪ್ಪಣೆಯಿಲ್ಲ' ಎಂದು ಹೇಳಿ ಹಿಂದೆ ನಿಂತುಬಿಟ್ಟನು. ಮುಂದೆ ಸ್ವಲ್ಪ ಕತ್ತಲಾಗಿತ್ತು. ನಡುಮನೆಯನ್ನು ಕಷ್ಟ ಪಟ್ಟುಕೊಂಡು ದಾಟಿದ ನಂತರ ಮುಂದೆ ತೊಟ್ಟಿಯಲ್ಲಿ ಸ್ವಲ್ಪ ಬೆಳಕು ಕಂಡು ಬಂತು. ರಂಗಣ್ಣ ಆ ತೊಟ್ಟಿಯನ್ನು ಪ್ರವೇಶಿಸಿ ಬಲಗಡೆಯ ಕೊಟಡಿಯ ಬಳಿಗೆ ಬಂದಾಗ ಒಳಗಿದ್ದ ಸ್ವಾಮಿಗಳು ಗೋಚರವಾದರು. ಅವನಿಗೆ ಗುರುತೇ ಸಿಕ್ಕಲಿಲ್ಲ ! ತಲೆ ಗಡ್ಡ ಮೀಸೆಗಳನ್ನೆಲ್ಲ ಬೋಳಿಸಿಕೊಂಡು ಕಾವಿಯ ಬಟ್ಟೆಯನ್ನು ಉಟ್ಟು, ದಟ್ಟವಾಗಿ ವಿಭೂತಿಯನ್ನು ಧರಿಸಿದ್ದ ಆ ವ್ಯಕ್ತಿ ಹಿಂದೆ ಉಗ್ರಪ್ಪನಾಗಿದ್ದನೆಂದು ಹೇಳುವಂತೆಯೇ ಇರಲಿಲ್ಲ ! ಆದರೆ ಆ ಸ್ಫೂಲ ಕಾಯ, ದಪ್ಪ ತಲೆ, ಭಾರಿ ತೋಳುಗಳು- ಅವುಗಳನ್ನು ನೋಡಿದ ಮೇಲೆ ಬೇರೆ ವ್ಯಕ್ತಿಯಲ್ಲವೆಂದು ತೀರ್ಮಾನಿಸಿಕೊಂಡನು. ಸ್ವಾಮಿಗಳು ನೆಲದ ಮೇಲೆ ಹಾಸಿದ್ದ ವ್ಯಾಘ್ರಾಸನದ ಮೇಲೆ ಕುಳಿತಿದ್ದರು! ಸ್ವಲ್ಪ ದೂರದಲ್ಲಿ ಕಲ್ಲೇಗೌಡ ಮತ್ತು ಕರಿಯಪ್ಪ ಚಾಪೆಯ ಮೇಲೆ ಕುಳಿತಿದ್ದರು ! ರಂಗಣ್ಣನ ಎದೆ ಝಲ್ಲೆಂದಿತು ! ಮುಖ ವಿವರ್ಣವಾಯಿತು ! ಆದರೆ ಅಲ್ಲಿ ಹೆಚ್ಚಾಗಿ ಬೆಳಕಿರಲಿಲ್ಲವಾದುದರಿಂದ ಅವನಲ್ಲಾದ ಮಾರ್ಪಾಟು ಇತರರಿಗೆ ಕಾಣಿಸಲಿಲ್ಲ, ರಂಗಣ್ಣ ಸ್ತಬ್ಧನಾಗಿ ನಿಂತು, ಸ್ವಲ್ಪ ತೊದಲುನುಡಿಯಿಂದ, " ಪೂಜ್ಯ ಸ್ವಾಮಿಗಳಿಗೆ ನಮಸ್ಕಾರ ! ' ಎಂದು ಹೇಳಿದನು, ಆ ಮುಖಂಡರ ಕಡೆಗೆ ತಿರುಗಿಕೊಂಡು 'ನಮಸ್ಕಾರ ! ' ಎಂದನು. ಅವರು ಸಹ ನಮಸ್ಕಾರ ಮಾಡಿದರು. ಸ್ವಾಮಿಗಳು ತಮಗೆ ಸಮೀಪದಲ್ಲಿದ್ದ ಮಣೆ ಯನ್ನು ತೋರಿಸಿ, ಇಲ್ಲಿ ಕುಳಿತುಕೊಳ್ಳಿ. ನಮ್ಮ ಆಹ್ವಾನವನ್ನು ಮನ್ನಿಸಿ ನೀವು ಈ ದಿನ ಇಲ್ಲಿಗೆ ಬಂದದ್ದು ನಮಗೆ ಬಹಳ ಸಂತೋಷ. ಆ ಶಾಂತವೀರೇಶ್ವರನ ಅನುಗ್ರಹಕ್ಕೆ ನೀವು ಪಾತ್ರರಾದಿರಿ' ಎಂದು ಹೇಳಿದರು. ಸ್ವಾಮಿಗಳೆದುರಿಗೆ ಗರ್ಭಗುಡಿಯಲ್ಲಿ ಲಿಂಗವೊಂದಿತ್ತು. ಆಗತಾನೆ ಪೂಜೆ ಮಾಡಿದ್ದ ಹೂವು ಪತ್ರೆಗಳು ತುಂಬಿದ್ದು ವು ; ಅಲ್ಲಿ ತೂಗುದೀಪವೊಂದು ಉರಿಯುತ್ತಿತ್ತು. ರಂಗಣ್ಣ ಮಣೆಯಮೇಲೆ ಕುಳಿತುಕೊಂಡನು. ಪ್ರಯಾಣದ ವಿಷಯ ಮತ್ತು ಉಪಾಹಾರದ ವಿಷಯ ಮಾತನಾಡಿದ ಮೇಲೆ ಸ್ವಾಮಿಗಳು,

'ನಾವು ಕಲ್ಲೇಗೌಡರಿಗೂ ಕರಿಯಪ್ಪನವರಿಗೂ ಆಹ್ವಾನ ಕೊಟ್ಟಿದ್ದೆವು. ಅವರೂ ದೊಡ್ಡ ಮನಸ್ಸು ಮಾಡಿ ಇಲ್ಲಿಗೆ ಬಂದಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ ' ಎಂದು ಹೇಳಿದರು.

ರಂಗಣ್ಣನಿಗೆ ಮಾತು ಬೆಳೆಸುವುದಕ್ಕೆ ಬುದ್ದಿ ಓಡಲಿಲ್ಲ. ಅವನು ಮೌನವಾಗಿದ್ದನು.

'ಶಾಂತವೀರೇಶ್ವರನ ಸನ್ನಿಧಿಯಲ್ಲಿ ನಾವುಗಳೆಲ್ಲ ಕಲೆತಿದ್ದೇವೆ. ನಾವು ನಿಮಗೆಲ್ಲ ಒಂದು ಮಾತನ್ನು ಹೇಳುತ್ತವೆ ; ನಡೆಸಿಕೊಡ ಬೇಕು ಕೋಪ ದ್ವೇಷ ಮೊದಲಾದುವು ಮನುಷ್ಯನಿಗೆ ಶ್ರೇಯಸ್ಕರಗಳಲ್ಲ, ವಿಶ್ವ ಕಲ್ಯಾಣವಾಗಬೇಕಾದರೆ ಪ್ರೇಮದಿಂದಲೇ ಸಾಧ್ಯ. ಒಂದುವೇಳೆ ಇತರರು ನಮ್ಮ ಮೇಲೆ ಕೋಪ ಮಾಡಿಕೊಂಡರೂ ನಾವು ಶಾಂತರಾಗಿಯೇ ಇರಬೇಕು-ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ? ಅವರಿಗಾದಡೇನು ? ತನಗಾದಡೇನು ? ತನುವಿನ ಕೋಪ ತನ್ನ ಹಿರಿಯತನದ ಕೇಡು ; ಮನದ ಕೋಪ ತನ್ನ ಅರಿವಿನ ಕೇಡು ಮನೆಯೊಳಗಣ ಕಿಚ್ಚು ತನ್ನ ಮನೆ ಸುಟ್ಟಲ್ಲದೆ ನೆರೆಮನೆ ಬೇವುದೇ ಕೂಡಲ ಸಂಗಮದೇವಾ - ಎಂದು ಹಿರಿಯ ಅನುಭವಿಗಳೊಬ್ಬರು ಹೇಳಿದ್ದಾರೆ. ಹಿಂದೆ ನಿಮ್ಮ ನಿಮ್ಮ ವ್ಯವಹಾರಗಳಲ್ಲಿ ಕೆಲವು ವಿಷಾದ ಘಟನೆಗಳು ನಡೆದು ಹೋದುವು; ಪರಸ್ಪರವಾಗಿ ಮನಸ್ತಾಪಗಳೂ ವೈರವೂ ಬೆಳೆದುಹೋದುವು. ಈಗ ಅವು ಗಳನ್ನೆಲ್ಲ ಮರೆತುಬಿಟ್ಟು ನೀವು ನೀವು ಸ್ನೇಹದಿಂದಿರಬೇಕು. ನಮ್ಮ ಮುಖಂಡರಿಗೆ ನಾವು ಹೇಳುತ್ತೇವೆ: ಇನ್ ಸ್ಪೆಕ್ಟರು ದೊಡ್ಡ ಮನುಷ್ಯರು. ದೇಶಾಭಿಮಾನದಿಂದ ಕೆಲಸ ಮಾಡುವ ದಕ್ಷರಾದ ಅಧಿಕಾರಿಗಳು ಅವರು ಜಂಬದಿಂದ ಇದ್ದುದು ಉಂಟು. ಆದರೆ ಇಲಾಖೆಯ ಗೌರವವನ್ನು ಎತ್ತಿ ಹಿಡಿಯಬೇಕೆಂದೂ ಇತರ ಇಲಾಖೆಯವರನ್ನು ಮೀರಿಸಿರಬೇಕೆಂದೂ ಹಾಗೆ ವರ್ತಿಸುತ್ತಿದ್ದರು. ಅದನ್ನೆಲ್ಲ ನೋಡಿ ಪೂರ್ವಾಶ್ರಮದಲ್ಲಿ ನಮಗೂ ಬಹಳ ಸಂತೋಷವಾಗುತ್ತಿತ್ತು ; ಉಪಾಧ್ಯಾಯರೆಲ್ಲ ಸಂತೋಷ ಪಡುಆದ್ದರು. ಅವರ ಅಧಿಕಾರ ಕಾಲದಲ್ಲಿ ವಿದ್ಯಾಭಿವೃದ್ಧಿ ಬಹಳ ಚೆನ್ನಾಗಿ ಆಯಿತು. ಉಪಾಧ್ಯಾಯರ ವಿಷಯದಲ್ಲಿ ಬಹಳ ಸಹಾನುಭೂತಿಯಿಂದ ಅವರು ನಡೆದುಕೊಳ್ಳುತ್ತಿದ್ದರು. ಅವರಲ್ಲಿ ಯಾವುದೊಂದು ಕೆಟ್ಟ ನಡತೆಯೂ ಇರಲಿಲ್ಲ. ಅವುಗಳನ್ನೆಲ್ಲ ನೀವು ಸಹ ಮೆಚ್ಚಿಕೊಂಡಿದ್ದೀರಿ. ಆದ್ದರಿಂದ ಈಗ ನೀವಿಬ್ಬರೂ ಅವರಲ್ಲಿ ದ್ವೇಷ ಮಾಡದೆ ಸ್ನೇಹವನ್ನಿಡ ಬೇಕು. ಅವರು ಜನಾರ್ದನಪುರವನ್ನು ಬಿಟ್ಟು ಹೊರಡುವಾಗ ಅವರನ್ನು ಗೌರವಿಸಿ ಕಳಿಸಿಕೊಡಬೇಕು. ಏನು ಹೇಳುತ್ತೀರಿ ? '

'ಸ್ವಾಮಿಯವರ ಅಪ್ಪಣೆಯಂತೆ ನಾವು ನಡೆದು ಕೊಳ್ಳುತ್ತೇವೆ ! ಶಾಂತವೀರೇಶ್ವರನ ಸಾಕ್ಷಿಯಾಗಿ ನಾವು ಅವರ ಮೇಲಿನ ದ್ವೇಷವನ್ನು ತ್ಯಜಿಸಿ ಸ್ನೇಹ ಹಸ್ತವನ್ನು ನೀಡುತ್ತೇವೆ ! ? ಎಂದು ಮುಖಂಡರು ಹೇಳಿದರು.

ರಂಗಣ್ಣನು ಅಪ್ರತಿಭನಾದನು. ತನಗೆ ಶತ್ರುಗಳಾಗಿದ್ದ ಆ ಮೂವರು ಆ ಏಕಾಂತ ಗೃಹದಲ್ಲಿ ತನ್ನನ್ನು ಬರಮಾಡಿಕೊಂಡು ಏನು ಅಪಮಾನ ಮಾಡುವರೋ? ಏನು ಕೆಡುಕು ಮಾಡುವರೋ ? ಎಂದು ಶಂಕಿಸುತ್ತಿದ್ದಾಗ ಅಲ್ಲಿ ಶಾಂತಿ ಸಂಧಾನಗಳು | ಕಲ್ಲೇಗೌಡ ಮತ್ತು ಕರಿಯಪ್ಪನವರ ಶಪಥ ಪೂರ್ವಕವಾದ ಸ್ನೇಹ ಹಸ್ತ ! ಸ್ವಾಮಿಗಳು ಪ್ರಸನ್ನವದನರಾಗಿ ಶ್ರೇಯೋಸ್ತು !' ಎಂದು ಹರಸಿದರು ಬಳಿಕ ರಂಗಣ್ಣನ ಕಡೆಗೆ ತಿರುಗಿಕೊಂಡು,

'ನೀವು ಸಹ ವೈರವನ್ನು ಬಿಟ್ಟಿದ್ದೀರಿ ಎಂದು ಭಾವಿಸುತ್ತೇವೆ, ನಮ್ಮ ಮುಖಂಡರು ಬಹಳ ನೀಚರೆಂದು ದುರಭಿಪ್ರಾಯವಿಟ್ಟುಕೊಳ್ಳಬೇಡಿ, ಅವರೂ ನಾಡಿನ ಪುರೋಭಿವೃದ್ಧಿಗಾಗಿ ದುಡಿಯುವ ಮುಖಂಡರನ್ನೆಲ್ಲ ತಪ್ಪು ದಾರಿಗೆ ಎಳೆದವರು ಸರಕಾರದ ಉನ್ನತಾಧಿಕಾರಿಗಳಲ್ಲಿ ಕೆಲವರು ಮತ್ತು ಹೊರಗಿನವರು. ಮದರಾಸಿನಲ್ಲಿ ಇಂಗ್ಲಿಷರು ಭೇದೋಪಾಯವನ್ನು ಹೂಡಿ ಕೋಮುವಾರು ವಿಷವನ್ನು ಜನಜೀವನದಲ್ಲಿ ಹರಿಸಿದರು. ನಮ್ಮ ಸೀಮೆಯಲ್ಲಿಯೂ ಅದು ತಲೆದೋರಿತು. ಡಾಕ್ಟರ್ ಲಾಯರ್ ಗೀಯರ್ ಎಂದು ಹೇಳಿಕೊಳ್ಳುವ ಮುಖಂಡರ ಅಪರಾವತಾರಗಳು ಇಲ್ಲಿ ತಲೆಯೆತ್ತಿದರು. ಸಾಲದುದಕ್ಕೆ ನಮ್ಮ ದೊಡ್ಡ ಅಧಿಕಾರಿಗಳೂ ತಮ್ಮ ಕೈವಾಡ ತೋರಿಸಿದರು. ನಮ್ಮ ಮುಖಂಡರನ್ನು ಆಶ್ರಯಿಸಿ, ಸಲಹೆಗಳನ್ನು ಕೊಟ್ಟು, ಸರಕಾರದ ರಹಸ್ಯ ವರ್ತಮಾನಗಳನ್ನೆಲ್ಲ ತಿಳಿಸಿ, ಅಂಕಿ ಅಂಶಗಳನ್ನು ಒದಗಿಸಿ, ಸಭೆಗಳಲ್ಲಿ ದೊಡ್ಡ ಗೊಂದಲವೆಬ್ಬಿಸುವಂತೆ ಚಿತಾವಣೆ ಮಾಡಿದರು. ಹೀಗೆ ಸರಕಾರದ ಅಧಿಕಾರಿಗಳು ತಮ್ಮ ಕೈವಶವಾದುದನ್ನು ನೋಡಿ ಮುಖಂಡರೂ ಸ್ವಾರ್ಥ ಸಾಧಕರಾದರು ; ಸರಕಾರವೆಂದರೆ ಗೌರವವೇ ಇಲ್ಲದಂತಾಯಿತು. ಆದ್ದರಿಂದ ನಮ್ಮ ನಾಡಿನ ಜನಜೀವನ ಕೆಳಮಟ್ಟಕ್ಕಿಳಿಯಿತು. ಮುಂದೆ ಕೋಮುವಾರು ವಿಷ ಕ್ರಮಕ್ರಮವಾಗಿ ಮಾಯವಾಗುತ್ತದೆ. ಎಲ್ಲರೂ ಅಣ್ಣತಮ್ಮಂದಿರಂತೆ ನಡೆದುಕೊಳ್ಳುವ ಕಾಲ ಬರುತ್ತದೆ. ಮಹಾತ್ಮಾ ಗಾಂಧಿಯವರ ತಪಸ್ಸಿನ ಫಲವಾಗಿ ಇಂಗ್ಲಿಷರು ಈ ದೇಶವನ್ನು ಬಿಟ್ಟು ಹೊರಟು ಹೋಗುವುದು ಖಂಡಿತ ! ಇನ್ನೆಲ್ಲ ಹತ್ತು ಹದಿನೈದು ವರ್ಷ ಗಳು ಮಾತ್ರ ಕಾಯಬೇಕು. ಸ್ವಾತಂತ್ರಯುಗ ಕಾಲಿಟ್ಟಾಗ ದೇಶಾಭ್ಯುದಯ ಕಾರ್ಯಗಳಿಗೆ ಎಲ್ಲರೂ ಭುಜಕ್ಕೆ ಭುಜ ಕೊಟ್ಟು ನಿಲ್ಲಬೇಕಾಗುತದೆ. ಆದ್ದರಿಂದ ನೀವು ಮನಸ್ಸಿನಲ್ಲಿ ವಿಷಾದಪಡದೆ ಈ ಮುಖಂಡರ ಸ್ನೇಹ ಹಸ್ತವನ್ನು ಹಿಡಿಯಬೇಕು ಎಂಬುದು ನಮ್ಮ ಕೋರಿಕೆ. ಏನು ಹೇಳುತ್ತೀರಿ ?

'ಸ್ವಾಮಿಯವರ ಆಪ್ಪಣೆ ! ” ಎನ್ನುತ್ತಾ ರಂಗಣ್ಣನು ಮುಖಂಡರ ಸಮೀಪಕ್ಕೆ ಹೋಗಿ ಅವರ ಕೈ ಕುಲುಕಿ, ' ಕರಿಯಪ್ಪನವರೇ ! ಕಲ್ಲೇಗೌಡರೇ ! ನಾನು ನಿಮ್ಮಗಳ ವಿಚಾರದಲ್ಲಿ ಏನು ಆಪರಾಧ ನಡೆಸಿದ್ದರೂ ನೀವು ಕ್ಷಮಿಸಬೇಕು' ಎಂದು ಹೇಳಿದನು. ರಂಗಣ್ಣನ ಕಣ್ಣುಗಳು ಹನಿಗೂಡಿದವು. 'ತಾವೇನೂ ಅಂತಹ ಅಪರಾಧಗಳನ್ನು ನಡೆಸಿಲ್ಲ. ಸ್ವಾರ್ಥಕ್ಕಾಗಿ ತಾವೇನೂ ಮಾಡಲಿಲ್ಲ. ಏನಿದ್ದರೂ ತಪ್ಪುಗಳು ನಮ್ಮ ಕಡೆಯವು. ಎಂದು ಕಲ್ಲೇಗೌಡರು ಹೇಳಿದರು.

'ಸಾರ್ವಜನಿಕ ಜೀವನದಲ್ಲಿ ನಾವು ನಿಸ್ಪೃಹರಾಗಿರಬೇಕು, ಪ್ರಾಮಾಣಿಕರಾಗಿರಬೇಕು ಎಂಬುದನ್ನು ನಮಗೆ ಕಲಿಸಿಕೊಟ್ಟಿರಿ, ನಾವು ನಿಮಗೆ ಕೃತಜ್ಞರಾಗಿದ್ದೇವೆ !' ಎಂದು ಕರಿಯಪ್ಪನವರು ಹೇಳಿದರು.

ಸ್ವಾಮಿಗಳು, ' ಶ್ರೇಯೋಸ್ತು ! ಶ್ರೇಯೋಸ್ತು' ಎಂದು ಹರಸಿ ಪಾರುಪತ್ಯಗಾರನನ್ನು ಕರೆದರು, ಆತ ಬಂದಮೇಲೆ, ಹಾಲೂ ಹಣ್ಣ ತೆಗೆದುಕೊಂಡು ಬಾ ' ಎಂದು ಅಪ್ಪಣೆ ಮಾಡಿದರು. ಆತ ಹೊರಟು ಹೋದಮೇಲೆ ' ಈ ಶಾಂತಿ ಸಂಧಾನಕ್ಕಾಗಿಯೇ ನಿಮ್ಮನ್ನು ಈ ಏಕಾಂತ ಸ್ಥಳಕ್ಕೆ ನಾವು ಕರೆಸಿಕೊಂಡೆವು. ನಾವು ಈ ಆಶ್ರಮ ಸ್ವೀಕಾರ ಮಾಡಿದ ಪ್ರಾರಂಭದಲ್ಲಿ ಹೀಗೆ ಶಾಂತಿ ಸಂತೋಷಗಳು ನೆಲಸಿದ್ದು ದೈವಾನುಗ್ರಹ. ಈಗ ನಮ್ಮ ದೇಶ ಒಂದು ಪರ್ವಕಾಲದಲ್ಲಿದೆ. ನಾವು ಸುಸಂಘಟಿತರಾಗಿ ದ್ವೇಷಾಸೂಯೆಗಳಿಲ್ಲದೆ ಇರಬೇಕು. ಮುಂದೆ ಪ್ರಜಾಧಿಕಾರ ಆಚರಣೆಗೆ ಬಂದಾಗ ದೇಶಾಭ್ಯುದಯವನ್ನು ಸಾಧಿವುದು ಮುಖಂಡರನ್ನು ಆಶ್ರಯಿಸಿ ಕೊಂಡಿರುತ್ತದೆ. ಆದ್ದರಿಂದ ಮುಖಂಡರು ವಿದ್ಯಾವಂತರಾಗಿ ಲೌಕಿಕ ವಿದ್ಯೆಯಲ್ಲಿ ಸಮರ್ಥರಾಗಿ ನೀತಿಯಲ್ಲಿ ಸನ್ಮಾರ್ಗಿಗಳಾಗಿ ಆಡಳಿತದಲ್ಲಿ ದಕ್ಷರಾಗಿ, ಪ್ರಜೆಗಳಿಗೆ ಆದರ್ಶ ಪ್ರಾಯರಾಗಿರಬೇಕು, ಅಧಿಕಾರಿಗಳನ್ನು ಗೌರವದಿಂದ ಕಂಡು, ಯೋಗ್ಯತೆಗೆ ಮನ್ನಣೆ ಕೊಡುತ್ತ, ಸ್ನೇಹದಿಂದ ಒಲಿಸಿಕೊಂಡು ಸುಸೂತ್ರವಾಗಿ ಕೆಲಸಗಳನ್ನು ನಡೆಸಬೇಕು' ಎಂದು ಉಪದೇಶ ಮಾಡಿದರು. ಪಾರುಪತ್ಯಗಾರನು ಹಾಲೂ ಹಣ್ಣು ಸಕ್ಕರೆಗಳನ್ನು ತಂದಿಟ್ಟು ಹೊರಟು ಹೋದನು. ಸ್ವಾಮಿಗಳ ಅಪ್ಪಣೆಯಂತೆ ಮೂರು ಲೋಟಗಳಲ್ಲಿ ಹಾಲನ್ನು ಕರಿಯಪ್ಪ ನವರು ಸುರಿದರು ; ಬಾಳೆಯ ಹಣ್ಣುಗಳ ಸಿಪ್ಪೆಗಳನ್ನು ಕಲ್ಲೇಗೌಡರು ಸುಲಿದರು.

'ನೀವು ಮೂವರೂ ಈ ಫಲಾಹಾರ ಸ್ವೀಕಾರ ಮಾಡಿರಿ' ಎಂದು ಸ್ವಾಮಿಗಳು ಅಪ್ಪಣೆ ಮಾಡಿದರು. ಅದರಂತೆ ಆ ಮೂವರೂ ತೆಗೆದುಕೊಂಡರು. ತರುವಾಯ ಸ್ವಾಮಿಗಳಿದ್ದು, ಈ ಕರಿಯಪ್ಪನವರೇ ! ನೀವೂ ಸರಕಾರ ಕಲ್ಲೇಗೌಡರೂ ಇನ್ ಸ್ಪೆಕ್ಟರಿಗೆ ಈ ಕ್ಷೇತ್ರವನ್ನೆಲ್ಲ ತೋರಿಸಿಕೊಂಡು ಬನ್ನಿ, ಯೋಗೀಶ್ವರರ ಗುಹೆಯನ್ನೂ ತೋರಿಸಿ ಸ್ಥಳ ಪುರಾಣವನ್ನು ಪರಿಚಯ ಮಾಡಿಕೊಡಿ. ಸಾಯಂಕಾಲ ನಾಲ್ಕು ಗಂಟೆಗೆ ಸಭೆಯನ್ನು ಸೇರಿಸಿ, ನಾವು ಆಗ ಬರುತ್ತೇವೆ. ಬಂದಿರುವ ಅತಿಥಿಗಳಿಗೆಲ್ಲ ಊಟ ಉಪಚಾರಗಳು ತೃಪ್ತಿಕರವಾಗಿ ನಡೆದ ಸಮಾಚಾರವನ್ನು ನಮಗೆ ತಿಳಿಸಬೇಕು ” ಎಂದು ಹೇಳಿದರು.

ರಂಗಣ್ಣನು ಉಪಾಯವಾಗಿ ಪೆನ್ಷನ್ ಕಾಗದಗಳ ಪ್ರಸ್ತಾಪ ಮಾಡಿ ಅವುಗಳನ್ನು ಮುಂದಿಟ್ಟು, ' ಗುಮಾಸ್ತ ಶಂಕರಪ್ಪ ಬಂದು ಕಾಣುತ್ತಾನೆ. ತಾವು ದೊಡ್ಡ ಮನಸ್ಸು ಮಾಡಿ ಈ ಕಾಗದಗಳಿಗೆ ರುಜು ಮೊದಲಾದುವನ್ನು ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ಇವೆಲ್ಲಾ ತಮಗಾಗಿ ಅಲ್ಲ. ತಮ್ಮ ಸಂಸಾರ ಪೋಷಣೆಗೆ ಒದಗಿದಷ್ಟು ಹಣ ಒದಗಲಿ ?ಎಂದು ಹೇಳಿದನು. ಸ್ವಾಮಿಗಳು, ' ನೀವು ಬಹಳ ಉಪಾಯಗಾರರು ! ನಾನು ನಿಮಗೆ ಸೋತೆ' ಎಂದು ನಕ್ಕರು ಬಳಿಕ ರಂಗಣ್ಣ ಸ್ವಾಮಿಗಳಿಗೆ ನಮಸ್ಕಾರ ಮಾಡಿ ಹೊರಕ್ಕೆ ಬಂದನು. ಕಲ್ಲೇಗೌಡ ಮತ್ತು ಕರಿಯಪ್ಪ ಸ್ವಾಮಿಗಳಿಗೆ ಅಡ್ಡ ಬಿದ್ದು, ಎದ್ದು, ಕೈ ಮುಗಿದು ಹೊರಕ್ಕೆ ಬಂದರು. ಆ ಕ್ಷೇತ್ರ ಪರಿಚಯವನ್ನು ಮಾಡಿ ಕೊಡುತ್ತ ಯೋಗೀಶ್ವರರ ಗುಹೆ ಮೊದ ಲಾದುವನ್ನು ರಂಗಣ್ಣನಿಗೆ ತೋರಿಸುತ್ತ ಆ ಮುಖಂಡರು ಜೊತೆಯಲ್ಲಿ ಹೋಗುತ್ತಿದ್ದುದನ್ನು ಶಂಕರಪ್ಪನೂ, ಪೊಲೀಸ್ ಇನ್ ಸ್ಪೆಕ್ಟರೂ, ಅಮಲ್ದಾ ರರೂ ನೋಡಿ ಬೆರಗಾಗಿ ಹೋದರು ! ಅವರಿಗೆ ಆ ಮುಖಂಡರು ಅಲ್ಲಿಗೆ ಬಂದಿರುವರೆಂಬುದೇ ತಿಳಿದಿರಲಿಲ್ಲ ! ಆ ಮುಖಂಡರು ರಂಗಣ್ಣನಿಗೆ ಪರಮವೈರಿಗಳೆಂಬುದನ್ನು ಅವರೆಲ್ಲ ತಿಳಿದವರಾಗಿದ್ದರು. ಇದೇನು ! ಆ ಕ್ಷೇತ್ರ ಮಾಹಾತ್ಮೆಯೋ ! ನೂತನ ಸ್ವಾಮಿಗಳ ತಪಃ ಫಲವೋ ! ಹಿಂದೆ ಋಷ್ಯಾಶ್ರಮಗಳಲ್ಲಿ ಕಾಡುಮೃಗಗಳು ಪರಸ್ಪರ ವೈರವನ್ನು ಬಿಟ್ಟಿರುತ್ತಿದ್ದುವೆಂದು ಕೇಳಿದ್ದೆವು. ಈಗ ಪ್ರತ್ಯಕ್ಷವಾಗಿ ಇಲ್ಲಿ ದುರ್ಭರವೈರ ಶಾಂತವಾಗಿ ನಿಕಟಸ್ನೇಹ ಕಾಣುತ್ತಿದೆಯಲ್ಲ ! ಎಂದು ಆಶ್ಚರ್ಯಚಕಿತರಾದರು.

ಆ ದಿನದ ಔತಣದ ಏರ್ಪಾಟು ಚೆನ್ನಾಗಿತ್ತು. ಚಿರೋಟಿ, ಕೀರು, ಬೋಂಡ, ವಾಂಗೀಭಾತು, ಕೇಸರಿಭಾತು, ಆಂಬೊಡೆ, ಹಪ್ಪಳ, ಬೂದುಗುಂಬಳಕಾಯಿ ಮಜ್ಜಿಗೆಹುಳಿ, ತೊವ್ವೆೆ, ಕೂಟು, ಪಲ್ಯಗಳು, ಕೋಸುಂಬರಿಗಳು ಇತ್ಯಾದಿ. ದೊಡ್ಡ ದೊಡ್ಡ ಮಣೆಗಳ ಮುಂದೆ ದೊಡ್ಡ ದೊಡ್ಡ ಬಾಳೆಯ ಆಗ್ರನೆಲೆಗಳನ್ನು ಹಾಕಿ ಅಲಂಕಾರ ಪಂಕ್ತಿಗೆ ಬಡಿಸಿದಂತೆ ಬಡಿಸಿದ್ದುದನ್ನು ನೋಡಿ ರಂಗಣ್ಣನು ವಿಸ್ಮಿತನಾದನು. ಊಟ ಮಾಡುತ್ತಿದ್ದಾಗ ರಂಗಣ್ಣನ ಪಕ್ಕದಲ್ಲಿ ಕುಳಿತಿದ್ದ ಅಮಲ್ದಾರರು.

'ಏನು ರಂಗಣ್ಣನವರೇ ! ರಾಜಿ ಆದ ಹಾಗೆ ಕಾಣುತ್ತಿದೆಯಲ್ಲ ! ಏನು ಸಮಾಚಾರ ? ಎಂದು ಕೇಳಿದರು,

ರಂಗಣ್ಣನು ಆ ಬೆಳಗ್ಗೆ ನಡೆದ ಪ್ರಸಂಗವನ್ನು ಚಿಂತನೆ ಮಾಡುತ್ತ ಮಾಡುತ್ತ ಗಂಭೀರಮುದ್ರೆಯನ್ನು ತಾಳಿದ್ದನು. ಹಿಂದೆ ಅವನಲ್ಲಿ ನೆಲೆಸಿದ್ದ ಅಧಿಕಾರ ರಭಸ ಮನೋವೃತ್ತಿ ಮತ್ತು ಜಂಬ ಕಡಮೆಯಾಗಿದ್ದುವು. ಅವುಗಳ ಪರಿಣಾಮವಾಗಿ,

'ನಾವೆಲ್ಲ ಅತಿಥಿಗಳಾಗಿ ಬಂದಿಲ್ಲವೇ ! ಅತಿಥಿಗಳಿಗೆ ಉಪಚಾರ ಹಿಂದೂ ಧರ್ಮದಲ್ಲಿ ಮುಖ್ಯ. ಇದು ಧರ್ಮ ಪೀಠ ! ಆದ್ದರಿಂದ ರಾಜಿಯಾಗುವುದು ಸಹಜವಾಗಿದೆಯಲ್ಲವೇ ? ' ಎಂದು ಗಂಭೀರವಾಗಿ ಉತ್ತರ ಕೊಟ್ಟನು

'ನಿಮ್ಮನ್ನೂ ಅವರನ್ನೂ ಒಟ್ಟಿಗೆ ಕ೦ಡಾಗ ನಮಗೆಲ್ಲ ಆಶ್ಚರ್ಯವಾಯಿತು !

'ಹೀಗೆಯೇ ! ನಮ್ಮ ಜೀವನಲ್ಲಿ ಅನೇಕ ಆಶ್ಚರ್ಯಗಳು ಕಾಣುತ್ತಿರುತ್ತವೆ. ಹೊಸ ಹೊಸ ಅನುಭವಗಳು ಬಂದಹಾಗೆಲ್ಲ ಹೊಸ ಹೊಸ ಸನ್ನಿವೇಶಗಳೊಡನೆ ರಾಜಿಮಾಡಿಕೊಳ್ಳುತ್ತಲೇ ಲೋಕ ಮುಂದುವರಿಯಬೇಕು !

ಅಮಲ್ದಾರರಿಗೆ ಆ ಮಾತುಗಳಿಂದ ಏನೊಂದೂ ಅಭಿಪ್ರಾಯವಾಗಲಿಲ್ಲ, ಇನ್ನು ಹೆಚ್ಚಾಗಿ ಪ್ರಶ್ನಿಸುತ್ತ ಹೋದರೆ ತಮ್ಮ ಮೌಢವಲ್ಲಿ ಹೊರಬೀಳುವುದೋ ಎಂದು ಸುಮ್ಮನಾದರು. ಭೋಜನ ಸಮಾರಂಭ ಮುಗಿಯಿತು, ತಾಂಬೂಲ ಚರ್ವಣಾದಿ ಪ್ರಕರಣಗಳು ಮುಗಿದುವು.ವಿಶ್ರಾಂತಿಗಾಗಿ ತಂತಮ್ಮ ಬೇಡಾರಗಳಿಗೆ ಎಲ್ಲರೂ ಹೊರಟರು.

ಸಾಯಂಕಾಲ ನಾಲ್ಕು ಗಂಟೆಗೆ ಮೊದಲನೆಯ ತೊಟ್ಟಿಯಲ್ಲಿ ಸಭೆ ಸೇರಿತು. ತಾಲ್ಲೂಕಿನ ಮುಖ್ಯಾಧಿಕಾರಿಗಳೂ ಆ ಕ್ಷೇತ್ರವಾಸಿಗಳೂ, ಇತರರೂ ಆ ಸಭೆಯಲ್ಲಿ ನೆರೆದಿದ್ದರು. ಸ್ವಾಮಿಗಳ ಬಲಗಡೆ ರಂಗಣ್ಣ ಕುಳಿತಿದ್ದನು ; ಎಡಗಡೆ ಅಮಲ್ದಾರರು ಕುಳಿತಿದ್ದರು, ಮ್ಯಾಜಿಸ್ಟ್ರೇಟರು ರಂಗಣ್ಣನ ಪಕ್ಕದಲ್ಲಿದ್ದರು ; ಮುನಸೀಫರು ಅಮಲ್ದಾರರ ಪಕ್ಕದಲ್ಲಿದ್ದರು. ಭಗವದ್ಗೀತೆಯಿಂದ ಕೆಲವು ಶ್ಲೋಕಗಳನ್ನು ಮಠದ ಶಿಷ್ಯರು ಹೇಳಿದ ನಂತರ, ಕರಿಯಪ್ಪನವರು ಎದ್ದು ನಿಂತು ಅತಿಥಿಗಳಿಗೆ ಸ್ವಾಗತವನ್ನು ನೀಡಿ, ಇನ್‌ಸ್ಪೆಕ್ಟರವರಿಗೆ ವರ್ಗವಾಗಿರುವುದರಿಂದ ಅವರನ್ನು ಗೌರವಿಸುವುದಕ್ಕಾಗಿ ಆ ದಿನ ಸಭೆಯನ್ನು ಸೇರಿಸಿರುವುದಾಗಿಯೂ ಮುಖ್ಯ ಅತಿಥಿಗಳಾದ ಇನ್ಸ್ಪೆಕ್ಟರು ಸಲ್ಲಿಸಿರುವ ಸೇವೆಯನ್ನು ಪ್ರಶಂಸೆ ಮಾಡುವುದು ತಮ್ಮ ಕರ್ತವ್ಯವಾಗಿರುವುದೆಂದೂ ಹೇಳಿದರು. ಬಳಿಕ ರಂಗಣ್ಣನ ಗುಣಕಥನವಾಯಿತು. ಕರಿಯಪ್ಪ ನವರು ಮಾತನಾಡಿದ ನಂತರ ಅಮಲ್ದಾರರು ಮೊದಲಾದವರು ಮಾತನಾಡಬೇಕೆಂದು ಸ್ವಾಮಿಗಳು ತಿಳಿಸಿದ್ದರಿಂದ ಆಯಾ ಅಧಿಕಾರಿಗಳೂ ಯಥೋಚಿತವಾಗಿ ರಂಗಣ್ಣನನ್ನು ಪ್ರಶಂಸೆಮಾಡಿ ಮಾತನಾಡಿದರು. ಆಮೇಲೆ ಮುಖ್ಯ ಅತಿಥಿಯು ಉತ್ತರರೂಪವಾಗಿ ಭಾಷಣ ಮಾಡಬೇಕಾಯಿತು. ರಂಗಣ್ಣನ ಮನಸ್ಸು ಅಲ್ಲಕಲ್ಲೋಲವಾಗಿದ್ದುದರಿಂದ ಅವನಿಗೆ ಹರ್ಷವೇನೂ ಇರಲಿಲ್ಲ. ಅವನು ಎದ್ದು ನಿಂತು ಕೊಂಡು, ' ಪೂಜ್ಯ ಸ್ವಾಮಿಯವರೇ ! ಮಹನೀಯರೇ ! ಈ ದಿನ ತಾವುಗಳಲ್ಲ ಇಲ್ಲಿ ಸೇರಿ ನನಗೆ ಗೌರವವನ್ನು ತೋರಿಸಿದ್ದೀರಿ; ನನ್ನ ಗುಣಕಥನ ಮಾಡಿದ್ದೀರಿ. ಆದರೆ ಅವುಗಳಿಗೆ ನಾನು ಅರ್ಹನಲ್ಲ ಎಂದು ಹೇಳಬೇಕಾಗಿದೆ. ಈ ರೇಂಜಿನಲ್ಲಿ ಸ್ವಲ್ಪ ಸೇವೆ ಸಲ್ಲಿಸಿದ್ದೇನೆ. ಏನಾದರೂ ಒಳ್ಳೆಯ ಫಲಗಳು ದೊರೆತಿದ್ದರೆ, ಉಪಾಧ್ಯಾಯರ ಶ್ರದ್ಧಾಸಕ್ತಿಗಳೂ, ಜನರ ಬೆಂಬಲ ಪ್ರೊತ್ಸಾಹಗಳೂ ಅದಕ್ಕೆ ಕಾರಣಗಳು. ನನ್ನ ಆಧಿಕಾರಾವಧಿಯಲ್ಲಿ ನಾನು ಕೆಲವು ತಪ್ಪುಗಳನ್ನು ಮಾಡಿದ್ದನೆಂದು ಬಹಿರಂಗವಾಗಿ ಇಲ್ಲಿ ಒಪ್ಪಿ ಕೊಳ್ಳುತ್ತೇನೆ. ಆದರೆ ಉಪಾಧ್ಯಾಯರೂ, ಮಹಾಜನಗಳೂ ವಿಶ್ವಾಸದಿಂದಲೇ ನನ್ನನ್ನು ಕಾಣುತ್ತ ಬಂದರು. ಅವರಿಗೆಲ್ಲ ನಾನು ಬಹಳ ಕೃತಜ್ಞನಾಗಿದ್ದೇನೆ. ಮುಖ್ಯವಾಗಿ ಹೇಳಬೇಕಾದ ಮಾತು ಒಂದಿದೆ. ನಮ್ಮ ದೇಶದಲ್ಲಿ ವಿದ್ಯಾಭ್ಯಾಸ ತಕ್ಕಷ್ಟು ಮುಂದುವರಿದಿಲ್ಲ ; ಸೇಕಡ ಹತ್ತರಷ್ಟು ಕೂಡ ಓದು ಬರಹ ಬಲ್ಲವರಿಲ್ಲ. ದುಃಸ್ಥಿತಿ ಆದಷ್ಟು ಬೇಗ ತೊಲಗಬೇಕು, ಸರಕಾರದವರು ಧಾರಾಳವಾಗಿ ಹಣವನ್ನು ಖರ್ಚು ಮಾಡಬೇಕು ; ಮತ್ತು ಆ ಹಣ ಪೋಲಾಗದಂತೆ ದಕ್ಷರಾದ ಉಪಾಧ್ಯಾಯರನ್ನೂ ದಕ್ಷರಾದ ಅಧಿಕಾರಿಗಳನ್ನೂ ನೇಮಿಸಿ ಎಚ್ಚರಿಕೆಯ ಕ್ರಮಗಳನ್ನು ಕೈಕೊಳ್ಳಬೇಕು. ಜನಗಳೂ ಮುಖಂಡರೂ ಈ ಮಹತ್ಪ್ರಯತ್ನದಲ್ಲಿ ಸಹಾಯವನ್ನೂ ಸಹಕಾರವನ್ನೂ ನೀಡಬೇಕು' ಎಂದು ಮುಂತಾಗಿ ಹೇಳಿ, ಸ್ವಾಮಿಯವರು ಮಾಡಿದ ಆತಿಥ್ಯವನ್ನು ಹೊಗಳಿ, ಎಲ್ಲರಿಗೂ ಕೃತಜ್ಞತಾಪೂರ್ವಕವಾದ ವಂದನೆಗಳನ್ನು ಸಮರ್ಪಣೆ ಮಾಡಿದನು.

ಸ್ವಾಮಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಮ್ಮ ಪೂರ್ವಾಶ್ರಮದ ವಿಚಾರವನ್ನೇನೂ ಪ್ರಸ್ತಾಪ ಮಾಡಲಿಲ್ಲ, ಚತುರ್ವಿಧ ಪುರುಷಾರ್ಥಗಳನ್ನು ವಿವರಿಸಿ, ಆ ಪುರುಷಾರ್ಥಗಳಲ್ಲಿ ಧರ್ಮವನ್ನು ಮೊದಲಿನಲ್ಲಿ ಹೇಳಿರುವುದರ ಕಾರಣವನ್ನು ತಿಳಿಸಿದರು. “ಧರ್ಮದ ತಳಹದಿಯ ಮೇಲೆ ಲೋಕ ನಿಂತಿದೆ. ಧರ್ಮದ ಸ್ವರೂಪವನ್ನು ಎಲ್ಲರೂ ತಿಳಿದುಕೊಂಡು ಸದ್ಧರ್ಮಿಗಳಾಗ ಬೇಕು ; ಧರ್ಮಾರ್ಜನೆಗಾಗಿ ಆರ್ಥಾರ್ಜನೆ ; ಅರ್ಥದ ಮುಂದೆ ಕಾಮವನ್ನು ಹೇಳಿರುವುದಾದರೂ ಮುಂದೆ ಮೋಕ್ಷವನ್ನು ಹೇಳಿರುವುದರಿಂದ ಆ ಕಾಮ ಮೋಕ್ಷಪರವಾಗಿರಬೇಕೆಂದು ಎಲ್ಲರೂ ಗ್ರಹಿಸಬೇಕು' ಎಂದು ಮುಂತಾಗಿ ಆಧ್ಯಾತ್ಮ ವಿಚಾರಗಳನ್ನು ಕುರಿತು ಭಾಷಣ ಮಾಡಿದರು. ಬಳಿಕ ರಂಗಣ್ಣನ ವಿದ್ವತ್ತನ್ನೂ ಅವನ ಸೇವಾ ಬುದ್ಧಿಯನ್ನೂ ಪ್ರಶಂಸೆಮಾಡಿ ಈಗ ವರ್ಗವಾಗಿ ಬೆಂಗಳೂರಿಗೆ ಹೋಗುವುದಾದರೂ ಆಗಾಗ ಜನಾರ್ದನಪುರದ ಪ್ರಾಂತಕ್ಕೆ ಬರುತ್ತಿರಬೇಕೆಂದೂ, ಮಠಕ್ಕೆ ಭೇಟಿ ಕೊಡುತ್ತಿರಬೇಕೆಂದೂ ಹೇಳಿದರು. ಕಲ್ಲೇಗೌಡರು ರಂಗಣ್ಣನಿಗೆ ಹೂವಿನ ಹಾರವನ್ನು ಹಾಕಿ ಹಣ್ಣುಗಳನ್ನು ಒಪ್ಪಿಸಿ ಮುಕ್ತಾಯ ಭಾಷಣ ಮಾಡಿದರು, 'ರಂಗಣ್ಣನವರು ಶೀಘ್ರದಲ್ಲಿಯೇ ದೊಡ್ಡ ಹುದ್ದೆಗೇರಿ ನಮ್ಮ ಪ್ರಾಂತಕ್ಕೆ ಜಿಲ್ಲಾಧಿಕಾರಿಗಳಾಗಿ ಬರಬೇಕೆಂ ಬುದೇ ನಮ್ಮೆಲ್ಲರ ಹಾರೈಕೆ' ಎಂದು ಹೇಳಿದಾಗ ಸಭೆಯಲ್ಲಿ ಕರತಾಡನಗಳಾದುವು. ಹೀಗೆ ಸಭೆ ಮುಕ್ತಾಯವಾಯಿತು. ಅಮಲ್ದಾರರು ಮೊದಲಾದವರು ತಂತಮ್ಮ ಗಾಡಿಗಳಲ್ಲಿ ಹಿಂದಿರುಗಿದರು. ರಂಗಣ್ಣನು ಮಠದ ಗಾಡಿಯಲ್ಲಿ ಜನಾರ್ದನಪುರಕ್ಕೆ ಬಂದು ಸೇರಿದನು. ಮಾರನೆಯ ದಿನ ಬೆಳಗ್ಗೆ ಏಳು ಗಂಟೆಗೆ ರಂಗಣ್ಣ ಕಾಫಿ ಸೇವನೆ ಮಾಡಿ ತನ್ನ ಕೊಠಡಿಗೆ ಹಿಂದಿರುಗುತ್ತಿದ್ದಾಗ ಮುಂದಿನ ಒಪ್ಪಾರದಲ್ಲಿ ಯಾರೋ ಮೇಷ್ಟ್ರು ನಿಂತಿದ್ದುದು ಅವನ ಕಣ್ಣಿಗೆ ಬಿತ್ತು. ತನಗೆ ವರ್ಗವಾಗಿರುವುದನ್ನು ತಿಳಿದು ಹಲವರು ಉಪಾಧ್ಯಾಯರು ಮನೆಯ ಹತ್ತಿರ ಬರುತ್ತಾರೆ, ಅವರಿಗೆಲ್ಲ ಸಮಾಧಾನ ಹೇಳಿ ಕಳುಹಿಸಬೇಕಾಗು ಇದೆ, ಅದಕ್ಕೆ ಕೊನೆಮೊದಲೇ ಕಾಣುವುದಿಲ್ಲ–ಎಂದು ಸ್ವಲ್ಪ ಬೇಜಾರು ಪಟ್ಟುಕೊಂಡು ಹೊರಕ್ಕೆ ಬಂದನು. ಅಲ್ಲಿ ನಿಂತಿದ್ದ ಮೇಷ್ಟ್ರು ಮುನಿಸಾಮಿ ಕೈ ಮುಗಿದನು !

'ಏನು ಮೇಷ್ಟ್ರೇ ! ಬೆಳಗ್ಗೆ ಇಷ್ಟು ಹೊತ್ತಿಗೆಲ್ಲ ಬಂದಿದ್ದೀರಿ. ನನಗೆ ವರ್ಗವಾಗಿರುವ ಸಂಗತಿ ತಿಳಿದು ಬಂದಿದ್ದೀರಾ ?' ಎಂದು ರಂಗಣ್ಣ ಕೇಳಿದನು.

'ಹೌದು ಸಾರ್ ! ಎರಡು ಬಾರಿ ನಾನು ತಮ್ಮನ್ನು ಕಾಣಬೇಕೆಂದು ಬಂದಿದ್ದೆ. ತಮ್ಮ ಸವಾರಿ ಎಲ್ಲಿಗೋ ಹೋಗಿತ್ತು. ಈ ದಿನ ಹೇಗಾದರೂ ಮಾಡಿ ತಮ್ಮನ್ನು ನೋಡಿಯೇ ಹೋಗಬೇಕೆಂದು ಬೆಳಗ್ಗೆ ಬೇಗನೇ ಬಂದಿದ್ದೇನೆ. ತಮಗೆ ವರ್ಗವಾಗಿರುವುದನ್ನು ತಿಳಿದು ನಮಗೆಲ್ಲ ಬಹಳ ವ್ಯಸನ ಆಗಿದೆ ಸಾರ್ !'

'ವರ್ಗವಾದರೆ ವ್ಯಸನ ಏತಕ್ಕೆ ಮೇಷ್ಟ್ರೇ ? ಸರಕಾರಿ ನೌಕರಿಯಲ್ಲಿ ವರ್ಗಾವರ್ಗಿಗಳು ಆಗುತ್ತಲೇ ಇರುತ್ತವೆ.'

'ತಮ್ಮಂಥ ಧಣಿಗಳು ಮುಂದೆ ಬರೋದಿಲ್ಲ ಸಾರ್ !'

‛ಇನ್ನೂ ಒಳ್ಳೆಯವರು ಬರುತ್ತಾರೆ ಮೇಷ್ಟೇ ! ಆಲೋಚನೆ ಮಾಡಬೇಡಿ.'

'ಈಚೆಗೆ ತಾವು ನಮ್ಮ ಹಳ್ಳಿ ಕಡೆ ಬರಲೇ ಇಲ್ಲ ಸಾರ್ ! ಆಪ್ಪಣೆಯಾದರೆ ಇಲ್ಲೇ ಶಿಷ್ಯನ ಸೇವೆ ಸಲ್ಲಿಸೋಣ ಅಂತ ಬಂದಿದ್ದೇನೆ!”

ರಂಗಣ್ಣನು ನಗುತ್ತಾ, 'ನೀವೇನೂ ಹತಾರಗಳನ್ನು ತಂದುಕೊಂಡಿಲ್ಲವಲ್ಲ ಮೇಷ್ಟೆ !' ಎಂದು ಹೇಳಿದನು.

'ಎಲ್ಲಾ ಮಡಕೊಂಡಿದ್ದೆ ಆನೆ ಸಾರ್ ! ಹೊರಕ್ಕೆ ಕಾಣೋದಿಲ್ಲ !? ಎಂದು ಹೇಳಿ ಮುನಿಸಾಮಿ ಒಳಗೆ ಗೋಪ್ಯವಾಗಿದ್ದ ಕ್ರಾಪ್ ಮೆಷಿನ್ ಮತ್ತು ರೇಜರುಗಳನ್ನು ತೋರಿಸಿದನು.

ರಂಗಣ್ಣನು ನಗುತ್ತ, “ಆಗಲಿ ಮೇಷ್ಟೆ ! ಕೊಟಡಿಯೊಳಕ್ಕೆ ಬನ್ನಿ, ನಿಮ್ಮ ಪರಮಾಯಿಷಿ ಸೇವೆ ನನಗೆ ಪುನಃ ಲಭ್ಯವಿಲ್ಲವಲ್ಲ ಎಂದು ನನಗೂ ಬಹಳ ವ್ಯಸನವಾಗುತ್ತದೆ' ಎಂದು ಹೇಳಿ ಒಳ ಕೊಟಡಿಗೆ ಹೋದನು. ನೀರಮನೆಯಿಂದ ಬಿಸಿನೀರು, ಸೋಪು, ಬ್ರಷ್ ತಂದಿಟ್ಟುಕೊಂಡು, ಟವಲನ್ನು ಮೇಲೆ ಹಾಕಿಕೊಂಡು ಕುರ್ಚಿಯ ಮೇಲೆ ಕುಳಿತನು. ಮುನಿಸಾಮಿಗೆ ಆ ದಿನ ಉತ್ಸಾಹವಿರಲಿಲ್ಲ. ಪಾಪ ಮೇಷ್ಟು ಮಧ್ಯೆ ಮಧ್ಯೆ ಕಣ್ಣೀರನ್ನೊರಸಿಕೊಳ್ಳುತ್ತ, ಕ್ರಾಪು ಕತ್ತರಿ ಸುತ್ತ, 'ಸಾರ್ ! ತಾವು ಆ ದಿನ ಕೊಟ್ಟ ಸಲಹೆ ನನ್ನನ್ನು ಉದ್ಧಾರ ಮಾಡಿತು. ಈಗ ಸೆಲೂನ್ ಪಸಂದಾಗಿ ನಡೀತಿದೆ. ದಿನಕ್ಕೆ ಐದೂ ಆರೂ ರುಪಾಯಿ ಸಂಪಾದನೆ ಆಗುತ್ತಿದೆ ! ಈಗ ನಮ್ಮ ಹಳ್ಳಿಲಿ ಹುಡುಗರಿಗೆ ಉದ್ದ ಜುಟ್ಟೆ ಇಲ್ಲ ಸಾರ್ ! ನಮ್ಮ ಸ್ಕೂಲಿನಲ್ಲಂತೂ ಹುಡುಗರಿಗೆಲ್ಲ ಕ್ರಾಪೇ ! ಜೇನುಗೀನು ತುಂಬಿದ ಕೊಳಕು ಕೂದಲ ತಲೆಗಳೇ ಇಲ್ಲ ! ಮಕ್ಕಳೆಲ್ಲ ಕ್ರಾಪು ಬಾಚಿಕೊಂಡು ಠೀಕಾಗಿ ಬೆಳಗ್ಗೆ ಬರುತ್ತಾರೆ. ತಾವು ಬಂದು ನೋಡಬೇಕು ಸಾರ್ !' ಎಂದು ಹೇಳಿದನು.

'ನಾನೇನು ನೋಡುವುದು ಮೇಷ್ಟೆ ! ನಿಮ್ಮ ಕೆಲಸವನ್ನು ದೇವರೇ ಮೆಚ್ಚಿಕೊಳ್ಳುತ್ತಾನೆ.'

'ತಾವು ನನ್ನ ಗುರುಗಳು ಸಾರ್ ! ಗುರುಗಳು ದೇವರಿಗೆ ಸಮಾನ ! ಈಗ ದೊಡ್ಡವರೆಲ್ಲ ಕ್ರಾಪಿನ ಷೋಕಿ ಕಲಿತುಬಿಟ್ಟಿದ್ದಾರೆ. ಒಂದು ವಾರದ ಹಿಂದೆ ಶ್ಯಾನುಭೋಗರು ಏನೋ ಕೆಲಸಕ್ಕೆ ಸ್ಕೂಲ ಹತ್ತಿರ ಬಂದಿದ್ದರು. ನಾನು- ಸ್ವಾಮಿ! ಶ್ಯಾನುಭೋಗರೇ ! ಹಾಗೆಯೇ ಸೆಲೂನ್ ಬಳಿ ನಡೀರಿ, ಒಂದು ಕ್ರಾಪ್ ಹೊಡೀತೇನೆ ನಿಮಗೆ~ ಎಂದು ಹೇಳಿದೆ.'

'ಶ್ಯಾನುಭೋಗರಿಗೂ ಕ್ರಾಪ್ ಹೊಡೆದುಬಿಟ್ಟಿರಾ ಮೇಷ್ಟೆ ? ಎಂದು ರಂಗಣ್ಣ ನಗುತ್ತಾ ಕೇಳಿದನು.

'ಇಲ್ಲ ಸಾರ್! ಶ್ಯಾನುಭೋಗರು ನಕ್ಕು ಬಿಟ್ಟ ರು : ನಾನು ಮುದುಕ ; ಬ್ರಾಹ್ಮಣ್ಯಕ್ಕೆ ಸ್ವಲ್ಪ ಜುಟ್ಟಿರಲಿ ಮುನಿಸಾಮಿ ! ಮುಂದಿನ ತಲೆ ಮೊರೆ ಗಳೆಲ್ಲ ಬರಿ ಕ್ರಾಪಿನ ತಲೆಗಳೇ ಆಗುತ್ತವೆ. ನಾನು ಈ ವಯಸ್ಸಿನಲ್ಲಿ ಸುಧಾರಿಸಲಾ-ಎಂದು ಹೇಳಿದರು ಸಾರ್ !?

ಹೀಗೆ ಮಾತುಗಳನ್ನಾಡುತ್ತ ಮುನಿಸಾಮಿ ರಂಗಣ್ಣನಿಗೆ ಕ್ರಾಪು ಕತ್ತರಿಸಿ, ಕ್ಷೌರವನ್ನು ಮಾಡಿದನು. ಸ್ನಾನವಾಯಿತು. ರಂಗಣ್ಣ ಮುನಿಸಾಮಿಗೆ ಕಾಫಿಯನ್ನು ತಂದು ಕೊಟ್ಟು, 'ತೆಗೆದುಕೊಳ್ಳಿ ಮೇಷ್ಟೆ !? ಎಂದು ಉಪಚಾರ ಮಾಡಿ, ಅವನನ್ನು ಸಮಾಧಾನ ತಿಳಿಸಿ ಕೊಟ್ಟು, ಕಳಿಸಿದನು.

ಸ್ವಲ್ಪ ಹೊತ್ತಾದಮೇಲೆ ಗುಂಡೇನಹಳ್ಳಿ ಯ ರಂಗಪ್ಪ ಮೇಷ್ಟು ತಲೆಹಾಕಿದನು. ಏನು ಮೇಷ್ಟೆ ! ನನಗೆ ವರ್ಗವಾಗಿದೆ. ನಾನು ನಾಳೆಯೇ ಇಲ್ಲಿಂದ ಹೊರಡಬೇಕು. ನನ್ನ ಬಟ್ಟೆ ಬರೆ ಬರಲಿಲ್ಲ ! ಏನು ಮಾಡುತ್ತೀರಿ ?' ಎಂದು ರಂಗಣ್ಣ ಕೇಳಿದನು.

'ಎಲ್ಲಾ ಬಟ್ಟೇನೂ ತೊಳೆದು ಇಸ್ತ್ರಿ ಮಾಡಿ ತಂದಿದೇನೆ ಸ್ವಾಮಿ ! ತಮಗೆ ವರ್ಗ ಎಂದು ಸಮಾಚಾರ ತಿಳಿಯಿತು. ನನಗೆ ಬಹಳ ವ್ಯಸನ ಆಯಿತು. ಆ ವ್ಯಸನದಲ್ಲಿ ಸ್ವಾಮಿಯವರ ಸೇವೆ ಮಾಡಿ ಬಟ್ಟೆ ತಂದಿದ್ದೇನೆ

'ಒಳ್ಳೆಯದು ಮೇಷ್ಟೆ ! ಬಹಳ ಸಂತೋಷ, ನಿಮ್ಮ ಇಷ್ಟು ದಿನಗಳ ಸೇವೆಗೆ ಏನಾದರೂ ಪ್ರತಿಫಲ ನಾನು ಕೊಡ ಬೇಕು.?

'ನನಗೇಕೆ ಸ್ವಾಮಿ ಪ್ರತಿಫಲ ! ನಾನೇನೂ ತೆಗೆದುಕೊಳ್ಳೋದಿಲ್ಲ! ನಮಗೆಲ್ಲ ತಿಳಿವಳಿಕೆ ಕೊಟ್ಟು ಕಾಪಾಡಿಕೊಂಡು ಬಂದಿರಿ. ತಾವು ಇನ್ಸ್ಪೆಕ್ಟರು, ನಾವು ತಾಪೇದಾರರು ಎಂಬುವ ವ್ಯತ್ಯಾಸವೇ ಕಾಣಲಿಲ್ಲ. ಅಷ್ಟೊಂದು ಸಲಿಗೆಯಿಂದ ಅಣ್ಣ ತಮ್ಮಂದಿರಂತೆ ತಾವು ನಡೆಸಿಕೊಂಡು ಬಂದಿರಿ ಸ್ವಾಮಿ!?

ರಂಗಣ್ಣನು ಆ ಮೇಷ್ಟರಿಗೂ ಕಾಫಿ ತಂದು ಕೊಟ್ಟು ಉಪಚಾರ ಮಾಡಿ ಕಳಿಸಿದನು. ಆಮೇಲೆ ಬೊಮ್ಮನಹಳ್ಳಿಯಿಂದ ಹೆಡ್ ಮೇಷ್ಟು ವೆಂಕಟಸುಬ್ಬಯ್ಯ ಮತ್ತು ಮೇ ಷ್ಟು ವೆಂಕಣ್ಣ ಬ೦ದರು. ಮೇಷ್ಟು ವೆಂಕಣ್ಣ ನಿಗೆ ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ವರ್ಗವಾಗಿತ್ತು,

'ವೆಂಕಟಸುಬ್ಬಯ್ಯ ! ನಿಮ್ಮ ಕಾಗದ ಬಂದು ಸೇರಿತು. ಸದ್ಯ ; ನಿಮ್ಮ ಹಿರಿಯ ಅಳಿಯ ವಾಪಸು ಬಂದು ನಿಮ್ಮನ್ನು ಸೇರಿದನಲ್ಲ ! ನನಗೆ ಬಹಳ ಸಂತೋಷ ' ಎಂದು ರಂಗಣ್ಣ ಹೇಳಿದನು.

'ದೇವರ ದಯೆಯಿಂದ, ತಮ್ಮ ಆಶೀರ್ವಾದಫಲದಿಂದ ಬಂದು ಸೇರಿದ್ದಾನೆ ಸ್ವಾಮಿ ! ತಮಗೆ ಖುದ್ದಾಗಿ ವರ್ತಮಾನ ತಿಳಿಸೋಣವೆಂದು ಹಿಂದೆ ಬಂದಿದ್ದೆ. ಸ್ವಾಮಿ ಯವರ ಸವಾರಿ ಆಗ ಬೆಂಗಳೂರಿಗೆ ಹೋಗಿತ್ತು, ಅದರಮೇಲೆ ತಮಗೆ ಕಾಗದ ಬರೆದೆ.'

'ವಾಪಸು ಬರುವುದಕ್ಕೆ ಕಾರಣ ? ಅಳಿಯನಿಗೆ ಬುದ್ಧಿ ಬಂದಿರಬೇಕಲ್ಲವೆ ?'

'ಸ್ವಾಮಿ ! ಆ ನಾಟಕದ ಕಂಪೆನಿ ಪಾಪರ್ ಎದ್ದೊಯ್ತು ! ಅಲ್ಲಿ ಸೇರಿಕೊಂಡಿದ್ದವರು ಚೆದರಿಹೋದರು. ನಮ್ಮವನಿಗೆ ಕೂಳಿಗೆ ಮಾರ್ಗ ಕಾಣಲಿಲ್ಲ ! ಆ ಕಾಲಕ್ಕೆ ದೇವರೂ ಅವನಿಗೆ ಒಳ್ಳೆಯ ಬುದ್ದಿ ಕೊಟ್ಟ ಸ್ವಾಮಿ ! ಒಂದು ದಿನ ಸಾಯಂಕಾಲ ಇದ್ದಕ್ಕಿದ್ದ ಹಾಗೆ ನಮ್ಮ ಮನೆಗೆ ಬಂದ ! ನಮಗೆಲ್ಲ ಬಹಳ ಹೆದರಿಕೆಯಾಯಿತು. ಏನು ಅವಾಂತರ ಮಾಡುತ್ತಾನೋ ಎಂದು ಇದ್ದೆವು. ದೇವರ ದಯೆ ಸ್ವಾಮಿ ! ಅಳಿಯ ವಿಹಿತವಾಗಿ ನಡೆದು ಕೊಳ್ಳುತ್ತಿದ್ದಾನೆ. ಬೆಳಗ್ಗೆ ಹೊಲ ಗದ್ದೆಗಳ ಕಡೆಗೆ ಹೋಗಿ ನೋಡಿಕೊಂಡು ಬರುತ್ತಿದ್ದಾನೆ.'

'ಜಮೀನು ವಿಚಾರ, ಹಣದ ವಿಚಾರ ಪ್ರಸ್ತಾಪ ಮಾಡಿದನೋ ?'

'ಇಲ್ಲ ಸ್ವಾಮಿ ? ತನ್ನ ಪಾಡಿಗೆ ತಾನಿದ್ದಾನೆ. ತನ್ನ ಹೆಂಡತಿ ಹತ್ತಿರ ತನ್ನ ಕಥೆಯನ್ನೆಲ್ಲ ತಿಳಿಸಿ-~ ಈಗ ನನಗೆ ಬುದ್ಧಿ ಬಂತು, ಇನ್ನು ಮೇಲೆ ಒಂದು ಕಡೆ ನೆಲೆಯಾಗಿ ನಿಲ್ಲುತ್ತೇನೆ, ನಿನ್ನ ತಂದೆಗೆ ಸಹಾಯ ಮಾಡಿಕೊಂಡು ಇರುತ್ತೇನೆ ಎಂದು ಮುಂತಾಗಿ ಹೇಳಿದನಂತೆ. ಆ ಹುಡುಗಿ ಎಲ್ಲವನ್ನೂ ತಿಳಿಸಿದಳು. ಅಳಿಯನ ಮೇಲೆ ನಮಗೇನು ವೈರವೇ ಸ್ವಾಮಿ ? ಕರುಳು ಕೊಯ್ದು ಅವನಿಗೆ ಒಪ್ಪಿಸಿದ ಮೇಲೆ ಅವನ ಹಿತವನ್ನು ನಾವು ಬಯಸುವುದಿಲ್ಲವೇ ?

'ಬಹಳ ಸಂತೋಷ ವೆಂಕಟಸುಬ್ಬಯ್ಯ ! ?

'ಸ್ವಾಮಿಯವರು ಬೊಮ್ಮನ ಹಳ್ಳಿಗೆ ಒಪ್ಪೊತ್ತು ಬಂದಿದ್ದರೆ ಆಗಿತ್ತು.

'ಈಗ ವಿರಾಮವೇ ಇಲ್ಲ. ನಾಳೆಯೇ ಇಲ್ಲಿಂದ ಪ್ರಯಾಣ. ಮಿಡಲ್ ಸ್ಕೂಲ್ ಹೆಡ್ಮಾಸ್ಟ ರಿಗೆ ಚಾರ್ಜು ಕೊಟ್ಟು ಹೊರಟುಬಿಡುತ್ತೇನೆ. ಮುಖ್ಯವಾಗಿ ನಿಮ್ಮ ವಿಶ್ವಾಸ ದೊಡ್ಡದು ವೆಂಕಟಸುಬ್ಬಯ್ಯ ! :

ಬಳಿಕ ರಂಗಣ್ಣ ಎದುರಿಗಿದ್ದ ವೆಂಕಣ್ಣ ಮೇಷ್ಟರ ಕಡೆಗೆ ತಿರುಗಿಕೊಂಡು,

'ಏನು ಮೇಷ್ಟೆ ! ತಿಪ್ಪೇನಹಳ್ಳಿಯಿಂದ ಬೊಮ್ಮನಹಳ್ಳಿಗೆ ಬಂದದ್ದು ಅನುಕೂಲವಾಗಿದೆಯೇ ?' ಎಂದು ಕೇಳಿದನು.

'ಬಹಳ ಅನುಕೂಲವಾಗಿದೆ ಸ್ವಾಮಿ ! ಹೆಡ್ ಮೇಷ್ಟು ವೆಂಕಟಸುಬ್ಬಯ್ಯನವರ ಆಶ್ರಯದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇನೆ. ಮನೆಯಲ್ಲಿ ನನ್ನ ಅಕ್ಕ ಇದ್ದಾಳೆ. ಮಕ್ಕಳ ಆರೈಕೆಯನ್ನು ಬಹಳ ಪ್ರೀತಿಯಿಂದ ಮಾಡುತ್ತಿದ್ದಾಳೆ. ಈಗ ನಿಶ್ಚಿಂತೆಯಾಗಿ ಸಂತೋಷದಿಂದ ಇದ್ದೇನೆ ಸ್ವಾಮಿ !

'ಈಗ ಎಲ್ಲವೂ ತಹಬಂದಿಗೆ ಬಂತಲ್ಲ ! ಮದುವೆ ಮಾಡಿ ಕೊಳ್ಳುವ ಏರ್ಪಾಡು ಏನು ? ?

'ಅಯ್ಯೋ ! ರಾಮ ರಾಮ ! ಆ ಮಾತನ್ನು ಆಡಬೇಡಿ ಸ್ವಾಮಿ ! ನಾನು ದೃಢ ಸಂಕಲ್ಪ ಮಾಡಿಬಿಟ್ಟಿದ್ದೇನೆ ! ಆಕೆಗೆ ನಾನು ವಂಚನೆ ಮಾಡೋದಿಲ್ಲ ! ನನ್ನ ಮಕ್ಕಳಿಗೆ ನಾನು ಮೋಸ ಮಾಡೋದಿಲ್ಲ !

'ಮತ್ತೆ ಸುಖಪಡಬೇಕು ಎಂಬುವ ಆಸೆ ಇಲ್ಲವೇ ಮೇಷ್ಟೆ ? : 'ಸಂಸಾರ ಸುಖ ತೃಪ್ತಿ ಆಗೋಯ್ತು ಸ್ವಾಮಿ ಮತ್ತೆ ಅಲ್ಲಿ ಏನಿದೆ ಹೊಸದಾಗಿ ಸುಖಪಡೋದು ? ಬರೀ ಸ್ವಾರ್ಥಕ್ಕಾಗಿ ಮದುವೆ ಮಾಡಿಕೊಳ್ಳಬೇಕೇ ? ನನಗೆ ಬೇಡ ಸ್ವಾಮಿ ! ಇನ್ನೊಂದು ಹೆಂಡತಿ ಎಂದರೆ ಮೊದಲ ಹೆಂಡತಿಯ ಮಕ್ಕಳಿಗೆ ವನವಾಸ ತಲೆಗೆ ಕಟ್ಟಿದ್ದು ! ಸುರುಚಿ ಯಿಂದ ಐದು ವರ್ಷದ ಮಗು ಧ್ರುವನಿಗೆ ವನವಾಸವಾಯಿತು ! ಕೈಕೇಯಿಯಿಂದ ರಾಮ ಲಕ್ಷ್ಮಣರು ಕಾಡು ಪಾಲಾದರಲ್ಲ ! ಮಕ್ಕಳ ಹಿತಕ್ಕಾಗಿ ಸ್ವಾರ್ಥ, ಕಾಮ ಬಿಡಬೇಕು. ನಾನು ಬಿಟ್ಟು ಬಿಟ್ಟಿ ಸ್ವಾಮಿ ! ಈಗ ನನ್ನ ಮಕ್ಕಳನ್ನು ನೋಡುತ್ತಿದ್ದರೆ ನನಗೆ ಎಷ್ಟೋ ಸುಖ ! ಎಷ್ಟೋ ಸಂತೋಷ ! ಬಡತನದ ದುಃಖ ಕಾಣುವುದಿಲ್ಲ. ದೃಢಸಂಕಲ್ಪ ಮಾಡಿದ್ದೆ ನೆ ಸ್ವಾಮಿ !”

'ಮೇಷ್ಟೇ ! ನಿಮ್ಮ ವೀರವ್ರತವನ್ನು ಮೆಚ್ಚಿದೆ ! ಲೋಕದಲ್ಲಿ ನಿಮ್ಮಂಥವರು ಅತಿ ವಿರಳ ' ಎಂದು ಹೇಳುತ್ತಾ ರಂಗಣ್ಣನು ಎದ್ದು ಹೋಗಿ ಆ ಇಬ್ಬರು ಮೇಷ್ಟರಿಗೂ ಕಾಫಿ ತಂದುಕೊಟ್ಟನು. ಆದರೆ ಅವರು ಕಾಫಿ ತೆಗೆದುಕೊಳ್ಳಲಿಲ್ಲ, ' ನಾನು ದೇವತಾರ್ಚನೆ ಮಾಡದೆ ಏನನ್ನೂ ತೆಗೆದು ಕೊಳ್ಳುವುದಿಲ್ಲ ಸ್ವಾಮಿ ! ತಮಗೆ ತಿಳಿದಿದೆಯಲ್ಲ ' ಎಂದು ವೆಂಕಟ ಸುಬ್ಬಯ್ಯ ಹೇಳಿದನು. ' ನಾನು ಬಡವ ಸ್ವಾಮಿ ? ಕಾಫಿ ಅಭ್ಯಾಸ ಇಟ್ಟು ಕೊಂಡಿಲ್ಲ. ಈ ಕಾಫಿಯಿಂದ ಎಷ್ಟೋ ಸಂಸಾರಗಳು ಕಷ್ಟಕ್ಕೆ ಈಡಾಗಿವೆ. ಬರುವ ಸಂಪಾದನೆಯಲ್ಲಿ ಅರ್ಧವೆಲ್ಲ ಅದಕ್ಕೇನೆ ಖರ್ಚಾಗಿ ಹೋಗುತ್ತದೆ. ಕೆಲವರ ಮನೆಗಳಲ್ಲಿ ಹಾಲೂ ಮೊಸರಿಗೆ ಅಭಾವ ; ಕಾಫಿ ನೀರಿನ ಕುಡಿತ ಮಾತ್ರ ತಪ್ಪಿದ್ದಲ್ಲ ' ಎಂದು ಮೇಷ್ಟು ವೆಂಕಣ್ಣ ಹೇಳಿದನು,

'ಹಾಗಾದರೆ, ವೆಂಕಟಸುಬ್ಬಯ್ಯ ! ಇಲ್ಲೇ ಸ್ನಾನ ಮಾಡಿ, ಮಡಿ ಉಟ್ಟುಕೊಂಡು ನಮ್ಮ ಮನೆಯಲ್ಲೇ ದೇವತಾರ್ಚನೆ ಮಾಡಿ ; ಇಲ್ಲೇ ಊಟಮಾಡಿ. ವೆಂಕಣ್ಣ ! ನೀವೂ ಇಲ್ಲಿಯೇ ಊಟಕ್ಕೆ ನಿಲ್ಲಿ' ಎಂದು ರಂಗಣ್ಣ ಹೇಳಿದನು.

'ಆಗಬಹುದು ಸ್ವಾಮಿ ಎಂದು ಅವರು ಹೇಳಿದರು.

ಹೀಗೆ ಇಬ್ಬರು ಮೇಷ್ಟರುಗಳು ಊಟಕ್ಕೆ ಬರುತ್ತಾರೆಂಬ ಸಮಾಚಾರವನ್ನು ತಿಳಿಸುವುದಕ್ಕಾಗಿ ರಂಗಣ್ಣ ಆಡಿಗೆಯ ಮನೆಗೆ ಹೋದನು. ಅಲ್ಲಿ ನೋಡಿದರೆ ಸೀತಮ್ಮನವರು ಒಂದು ಸಣ್ಣ ಬುಟ್ಟಿಯನ್ನು ಪಕ್ಕದಲ್ಲಿಟ್ಟುಕೊಂಡು ತನ್ನ ಹೆಂಡತಿಯೊಡನೆ ಮಾತನಾಡುತ್ತ ಕುಳಿತಿದ್ದುದು ಕಂಡುಬಂತು. ತನ್ನ ಹೆಂಡತಿ ಯ ಮುಂದುಗಡೆ ಒಂದು ಬೆಳ್ಳಿಯ ತಟ್ಟೆಯಲ್ಲಿ ನಾಲ್ಕು ಕೋಡ ಬಳೆಗಳು ಇದ್ದು ವು. ಇನ್ಸ್ಪೆಕ್ಟರ್ ಸಾಹೇಬರನ್ನು ಕಂಡು ಸೀತಮ್ಮ ಸಂಭ್ರಮದಿಂದ ಎದ್ದು ನಮಸ್ಕಾರ ಮಾಡಿದಳು. ರಂಗಣ್ಣನ ಹೆಂಡತಿ ಗಂಡನಿಗೆ ಒಂದು ಮಣೆ ಹಾಕಿ, ಸ್ವಲ್ಪ ಕುಳಿತುಕೊಳ್ಳಿ. ಸೀತಮ್ಮನವರು ನಿಮಗಾಗಿ ಕೋಡಬಳೆ ಮಾಡಿಕೊಂಡು ಬುಟ್ಟಿ ಯಲ್ಲಿ ತಂದಿದ್ದಾರೆ. ಎರಡನ್ನು ಬಾಯಿಗೆ ಹಾಕಿಕೊಳ್ಳಿ. ಆಕೆಗೆ ಸಂತೋಷವಾಗುತ್ತದೆ' ಎಂದು ಹೇಳಿದಳು.

ರಂಗಣ್ಣ ಕುಳಿತುಕೊಂಡು, ಒಂದು ಕೋಡಬಳೆಯನ್ನು ಮೂಸಿ ನೋಡಿ ಸ್ವಲ್ಪ ಮುರಿಯಲು ಪ್ರಯತ್ನ ಪಟ್ಟನು. ಸೀತಮ್ಮ, 'ಸ್ವಲ್ಪವೂ ಎಣ್ಣೆ ಸೋಕಿಸಿಲ್ಲ ! ಅಪ್ಪಟ ತುಪ್ಪದಲ್ಲೇ ಕರದಿದ್ದೆನೆ ? ಕೊಬ್ಬರಿಯ ತುರಿ ಹೆಚ್ಚಾಗಿ ಬಿದ್ದಿದೆ ; ಅದರ ವಾಸನೆ ಸ್ವಲ್ಪ ಬರಬಹುದು ' ಎಂದು ಹೇಳಿದಳು.

“ಇದನ್ನೆಲ್ಲ ಮಾಡಿಕೊಂಡು ಹನ್ನೆರಡು ಮೈಲಿಯಿಂದ ಏಕೆ ಬಂದಿರಿ ಸೀತಮ್ಮನವರೇ ? ಬಹಳ ಶ್ರಮ ತೆಗೆದುಕೊಂಡಿರಲ್ಲ!'

'ಶ್ರಮ ಏನೂ ಇಲ್ಲ. ತಾವು ನಮ್ಮನ್ನೆಲ್ಲ ಕಾಪಾಡಿಕೊಂಡು ಬಂದಿರಿ. ನನಗೆ ಸಾಹೇಬರು ಹಾಕಿದ್ದ ಜುಲ್ಮಾನೆ ವಜಾ ಮಾಡಿಸಿದಿರಿ. ಹಾಗೆ ವಿಶ್ವಾಸವಿಟ್ಟು ನೋಡಿ ಕೊಳ್ಳೋ ಜನ ಯಾರಿದ್ದಾರೆ ? ನನಗೆ ಪ್ರೀತಿಸೋ ಮಕ್ಕಳು ಮರಿಗಳು ಇಲ್ಲ ; ಆದರಿಸೋ ಬಂಧು ಬಳಗ ಇಲ್ಲ. ಯಾರಾದರೂ ಒಂದು ಒಳ್ಳೆಯ ಮಾತನಾಡಿದರೆ ಅವರೇ ನನಗೆ ಬಂಧುಗಳು ! ಒಂದು ಉಪಕಾರ ಮಾಡಿದರೆ ಅವರೇ ನನಗೆ ಮಕ್ಕಳು ! ತಮ್ಮ ಸಂಸಾರ ನೋಡಿ ನನಗೆ ಎಷ್ಟೋ ಸಂತೋಷ ! ದೇವರು ನಿಮ್ಮನ್ನೆಲ್ಲ ಚೆನ್ನಾಗಿರಲಿ !!

ರಂಗಣ್ಣ ಎರಡು ಕೋಡಬಳೆಗಳನ್ನು ತಿಂದು, ಊಟಕ್ಕೆ ಇಬ್ಬರು ಮೇಷ್ಟರುಗಳು ಬರುತ್ತಾರೆಂದು ಹೆಂಡತಿಗೆ ತಿಳಿಸಿದನು. ಸೀತಮ್ಮನವರನ್ನೂ ಊಟಕ್ಕೆ ನಿಲ್ಲಬೇಕೆಂದೂ ಹೇಳಿದನು. ತನ್ನ ಕೊಟಡಿಗೆ ಹಿಂದಿರು ಗಿದಾಗ ಅಲ್ಲಿ ಉಪಾಧ್ಯಾಯರ ಸಂಘದ ಕಾರ್ಯದರ್ಶಿ ಕಾದಿದ್ದನು. ಅವನು ಕೈ ಮುಗಿದು, 'ಸಾಯಂಕಾಲ ಸಂಘದ ಸಭೆ ಇಟ್ಟು ಕೊಂಡಿದ್ದೆವೆ. ತಾವು ನಾಲ್ಕು ಗಂಟೆಗೆ ದಯಮಾಡಿಸಬೇಕು ಸ್ವಾಮಿ |' ಎಂದು ಅರಿಕೆ ಮಾಡಿದನು. ರಂಗಣ್ಣನಿಗೆ ತಾನು ಜನಾರ್ದನ ಪುರಕ್ಕೆ ಇನ್ ಸ್ಪೆಕ್ಟರಾಗಿ ಬಂದ ದಿವಸ ನಡೆದ ಸಭೆ ಜ್ಞಾಪಕಕ್ಕೆ ಬಂತು. ಆ ಆಗಮನದ ಸಮಾರಂಭವನ್ನೂ ಈ ನಿರ್ಗಮನದ ಸಮಾರಂಭವನ್ನೂ ಹೊಲಿಸಿಕೊಳ್ಳುತ್ತ ನನ್ನ ಇನ್‌ಸ್ಪೆಕ್ಟರ್‌ಗಿರಿಯ ದಿನಗಳೆಲ್ಲ ಕನಸಿನ ದಿನಗಳಾದುವು ! ಎಷ್ಟು ಬೇಗ ಕಾಲಚಕ್ರ ಉರುಳಿಹೋಯಿತು ! ಎಂದು ಮನಸ್ಸಿನಲ್ಲಿ ಹೇಳಿ ಕೊಂಡು, 'ಆಗಲಿ ಮೇಷ್ಟೇ ! ಬರುತ್ತೇನೆ, ಸ್ವಲ್ಪ ಕಾಫಿ ತೆಗೆದುಕೊಂಡು ಹೊರಡಿ ” ಎಂದು ಹೇಳಿ ಉಪಚಾರಮಾಡಿ ಕಳಿಸಿದನು.

ಅನಂತರ ವೆಂಕಟಸುಬ್ಬಯ್ಯ ಸ್ನಾನಮಾಡಿ ಮಡಿಯುಟ್ಟು ಕೊಂಡು ದೇವತಾರ್ಚನೆ ಮಾಡಿದನು. ವೆಂಕಣ್ಣ ಸ್ನಾನಮಾಡಿ ಮಡಿಯುಟ್ಟುಕೊಂಡು ಸಂಧ್ಯಾವಂದನೆಯನ್ನು ಮಾಡಿದನು. ಊಟವಾಯಿತು. ಮಧ್ಯಾಹ್ನ ಸ್ವಲ್ಪ ವಿಶ್ರಾಂತಿಯೂ ಆಯಿತು, ರಂಗಣ್ಣ ಮೂರು ಗಂಟೆಗೆ ಎದ್ದು ಸಂಘದ ಸಭೆಗೆ ಹೊರಡಲು ಸಿದ್ಧ ಮಾಡಿ ಕೊಳ್ಳುತ್ತಿದ್ದನು. ತಾನು ಜನಾರ್ದನಪುರಕ್ಕೆ ಬಂದ ದಿನ ಜಂಬದ ಕೋಳಿಯಾಗಿ ಹಾಕಿಕೊಂಡಿದ್ದ ಸರ್ಜು ಸೂಟು, ದೊಡ್ಡ ಸರಿಗೆಯ ರುಮಾಲು ಮತ್ತು ಕೈ ಬೆತ್ತಗಳ ಸಜ್ಜು ಮಾಡಿಕೊಂಡು ಅತಿಥಿಗಳಾಗಿ ಬಂದಿದ್ದ ಆ ಇಬ್ಬರು ಮೇಷ್ಟರುಗಳನ್ನು ಜೊತೆಗೆ ಕರೆದುಕೊಂಡು ಸಭೆಗೆ ಹೊರಟನು.

ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಸಭೆಯನ್ನು ಏರ್ಪಾಟು ಮಾಡಿದ್ದರು. ಅದನ್ನು ಸಮೀಪಿಸುತ್ತಿದ್ದಾಗ ಮೇಷ್ಟ್ರು ಕೆಂಚಪ್ಪ ಎದುರಿಗೆ ಬಂದು ನಮಸ್ಕಾರ ಮಾಡಿದನು. 'ಏನು ಮೇಷ್ಟೆ! ಆರೋಗ್ಯವಾಗಿದ್ದೀರಾ ?' ಎಂದು ರಂಗಣ್ಣ ಕೇಳಿದನು.

'ಇದ್ದೇನೆ ಸ್ವಾಮಿ !”

ರ೦ಗಣ್ಣನ ದೃಷ್ಟಿ ಆ ಮೇಷ್ಟರ ರುಮಾಲಿನ ಕಡೆಗೆ ಹೋಯಿತು. ಹಿಂದೆ ನಡೆದಿದ್ದ ಪ್ರಕರಣವೆಲ್ಲ ಜ್ಞಾಪಕಕ್ಕೆ ಬಂದು ನಗು ಬಂತು. 'ಏನು ಕೆಂಚಪ್ಪನವರೇ ! ಇದು ಬೋರ್ಡ್ ಒರಸುವ ಬಟ್ಟೆಯೇ ಏನು ?' ಎಂದು ನಗು ತ್ತಾ ಕೇಳಿದನು,

'ಅಲ್ಲ ಸ್ವಾಮಿ | ನಾನು ಬಡವ, ಆದರೆ ಸುಳ್ಳುಗಳು ಹೇಳೋ ಮನುಷ್ಯನಲ್ಲ ! ಇದು ಬೋರ್ಡ್ ಒರಸೋ ಬಟ್ಟೆ ಅಲ್ಲ ಸ್ವಾಮಿ! ಇದು ತಾವು ಕೃಪೆಮಾಡಿ ತೆಗೆದು ಕೊಟ್ಟ ರುಮಾಲು: ಒಂದನ್ನು ಅಗಸರವನಿಗೆ ಹಾಕಿದ್ದೇನೆ ; ಇನ್ನೊಂದನ್ನು ಇಗೋ ! ತಲೆಗೆ ಮಡಿಗಿಕೊಂಡಿದ್ದೇನೆ ಸ್ವಾಮಿ !!

'ಆ ರುಮಾಲನ್ನು ಏನು ಮಾಡಿದಿರಿ ??

'ಅದು ಬೋರ್ಡ್ ಒರಸೋ ಬಟ್ಟೆ ಸ್ವಾಮಿ ! ಬೋರ್ಡ್ ಒರಸೋದಕ್ಕೇನೆ ಮಡಗಿದ್ದೇನೆ ! ತಮ್ಮ ಆಪ್ಪಣೆಯಂತೆ ಸಣ್ಣ ಸಣ್ಣ ಚೌಕಗಳಾಗಿ ಕತ್ತರಿಸಿ ಉಪಯೋಗಿಸುತ್ತಾ ಇದ್ದೇನೆ. ನಾನು ಸುಳ್ಳು ಸಳ್ಳು ಹೇಳೋ ಮನುಷ್ಯ ಅಲ್ಲ ಸ್ವಾಮಿ !?

'ಒಳ್ಳೆಯದು ಮೇಷ್ಟ್ರೆ ! ನಿಮ್ಮನ್ನು ಕಂಡರೆ, ನಿಮ್ಮನ್ನು ನೆನೆಸಿಕೊಂಡರೆ, ನನಗೆ ತುಂಬಾ ಸಂತೋಷವಾಗುತ್ತದೆ. ಈ ಕಲಿ ಕಾಲದಲ್ಲಿ ನಿಮ್ಮಂಥ ಸತ್ಯವಂತರು ಅತಿವಿರಳ !

ಆ ದಿನದ ಸಂಘದ ಸಭೆಯಲ್ಲಿ ಸಂತೋಷ ಸಂಭ್ರಮಗಳು ಕಾಣುತ್ತಿರಲಿಲ್ಲ. ಉಪಾಧ್ಯಾಯರು ಕಿಕ್ಕಿರಿದು ತುಂಬಿದ್ದರು. ಹಾಸ್ಯ ನಲಿವು ನಗು ಏನೂ ಇಲ್ಲದೆ ಬಹಳ ಗಂಭೀರವಾಗಿಯೂ, ಸ್ವಲ್ಪ ಮಟ್ಟಿಗೆ ಶೋಕಯುಕ್ತರಾಗಿಯೂ ಆ ಉಪಾಧ್ಯಾಯರು ಕುಳಿತಿದ್ದರು. ಸಂಪ್ರದಾಯದಂತೆ ದೇವತಾ ಪ್ರಾರ್ಥನೆ ಮತ್ತು ಸಂಗೀತ ಆದ ಮೇಲೆ ಕಾರ್ಯದರ್ಶಿಯೂ ಇನ್ನು ಕೆಲವರು ಉಪಾಧ್ಯಾಯರೂ ರಂಗಣ್ಣನ ಗುಣಕಥನ ಮಾಡಿ ಭಾಷಣ ಮಾಡಿದರು. ಅವರ ಮಾತುಗಳಲ್ಲಿ ಕಾಪಟ್ಯವೇನೂ ಇರಲಿಲ್ಲ. ರಂಗಣ್ಣ ಮಾತನಾಡಬೇಕಾಗಿ ಬಂತು. ಆ ಉಪಾಧ್ಯಾಯರಿಗೆ ಏನನ್ನು ಹೇಳುವುದು ! ಅವನಿಗೂ ಹೃದಯ ಭಾರವಾಗಿತ್ತು. ಸರಕಾರದ ನೌಕರನಾಗಿ ತಾನು ಕೆಲಸಮಾಡಿದ್ದರೂ ಅನೇಕ ಉಪಾಧ್ಯಾಯರ ಸ್ನೇಹವನ್ನು ಅವನು ಸಂಪಾದಿಸಿಕೊಂಡಿದ್ದನು. ಅವರ ಗೃಹಕೃತ್ಯಗಳ ಆಂತರ್ಯಗಳನ್ನೆಲ್ಲ ತಿಳಿದುಕೊಂಡಿದ್ದನು. ಹಲವರು ತಮ್ಮ ಸಂಸಾರ ವಿಚಾರ ಗಳನ್ನು ಅವನಲ್ಲಿ ಹೇಳಿಕೊಂಡು ಅವನ ಸಲಹೆಗಳನ್ನು ಪಡೆಯುತ್ತಿದ್ದರು. ಉಪಾಧ್ಯಾಯರಿಗೆ ಅವನು ಒಬ್ಬ ಇನ್ ಸ್ಪೆಕ್ಟರೆಂಬ ಭಾವನೆಯೇ ಇರಲಿಲ್ಲ. ಆದ್ದರಿಂದ ಆತ್ಮೀಯರನ್ನು ಬಿಟ್ಟು ಹೊರಡುವಾಗ ಅನುಭವಿಸುವ ಮೂಕ ವಿರಹವನ್ನು ಉಭಯ ಪಕ್ಷದವರೂ ಅನುಭವಿಸುತ್ತಿದ್ದರು. 'ನಾನು ಈ ರೇಂಜಿನಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಇನ್ ಸ್ಪೆಕ್ಟರ್ ಗಿರಿಯ ಅನುಭವವೂ ನನಗೆ ಹೊಸದು. ನನ್ನಿಂದ ಏನು ಪ್ರಯೋಜನವಾಗಿದೆ ಎಂಬುದನ್ನು ಈಗ ಅಳತೆಮಾಡಿ ಹೇಳುವ ಕಾಲ ಬಂದಿಲ್ಲ. ಮುಂದೆ ಬರಬಹುದು. ನಾನು ಬಹಳ ಕಟ್ಟುನಿಟ್ಟಾಗಿ ರೂಲ್ಸುಗಳನ್ನು ಆಚರಣೆಗೆ ತರುತ್ತಿದ್ದವನೆಂದು ಉಪಾಧ್ಯಾಯರಲ್ಲಿ ಭಾವನೆ, ಆದರೆ ನಾನು ಬಹಳ ಮೆತು, ಉಪಾಧ್ಯಾಯರನ್ನು ಅವರ ಇಷ್ಟಾನುಸಾರ ಬಿಟ್ಟು ಆಡಳಿತವನ್ನು ಸಡಿಲವಾಗಿ ನಡೆಸುತ್ತ ಜುಲ್ಮಾನೆಗಳನ್ನು ಹಾಕದೆ ಶಿಸ್ತನ್ನು ಕೆಡಿಸಿದೆನೆಂಬ ಭಾವನೆ ಮೇಲ್ಪಟ್ಟ ಅಧಿಕಾರಿಗಳಿಗೆ ! ಇವುಗಳಲ್ಲಿ ಯಾವುದು ನಿಜ? ಯಾವುದು ಅಬದ್ಧ? ಎಂದು ಹೇಳುವುದು ಕಷ್ಟ. ವಿದ್ಯಾಭ್ಯಾಸ ಕ್ರಮದಲ್ಲಿ ಸುಧಾರಣೆಗಳಾಗಬೇಕು, ಅಧಿಕಾರಿಗಳ ಮತ್ತು ಉಪಾಧ್ಯಾಯರ ಸಂಬಂಧಗಳಲ್ಲಿ ಸುಧಾರಣೆಗಳಾಗಬೇಕು-ಎಂದು ನಾನು ತಿಳಿದುಕೊಂಡಿದ್ದೇನೆ. ಆದ್ದರಿಂದ ಕೆಲವು ಪ್ರಯೋಗ ಪರೀಕ್ಷೆಗಳನ್ನು ಇಲ್ಲಿ ನಾನು ಮಾಡಿದೆ. ಸೋಲಾಯಿತೊ ಗೆಲುವಾಯಿತೋ ನಾನು ಹೇಳಲಾರೆ. ಹೇಗಾದರೂ ಇರಲಿ, ಉಪಾಧ್ಯಾಯರ ವಿಚಾರದಲ್ಲಿ ನಾನು ಪ್ರೀತಿಯಿಂದಲೂ ಗೌರವದಿಂದಲೂ ನಡೆದು ಕೊಂಡಿದ್ದೇನೆ ಎಂಬುದೊ೦ದು ತೃಪ್ತಿ ನನಗಿದೆ. ಯಾರಿಗಾದರೂ ಅವರ ಮನಸ್ಸು ನೋಯುವಂತೆ ನಾನು ಕೆಟ್ಟ ಮಾತು ಆಡಿದ್ದರೆ, ಕೆಡುಕು ಮಾಡಿದ್ದರೆ, ಮನ್ನಿಸಬೇಕೆಂದು ಕೇಳಿಕೊಳ್ಳುತ್ತೇನೆ” ಎಂದು ಹೇಳಿ ಪಾಠ ಶಾಲೆಗಳನ್ನು ನಡೆಸಿಕೊಂಡು ಹೋಗುವ ಬಗ್ಗೆ ಕೆಲವು ಹಿತೋಪದೇಶಗಳನ್ನು ಮಾಡಿ, 'ಹೋಗಿ ಬರಲು ಅಪ್ಪಣೆ ಕೊಡಿ ಎಂದು ಮುಕ್ತಾಯ ಮಾಡಿದನು. ಹೂವು ಗಂಧಗಳ ವಿನಿಯೋಗವಾಗಿ ಸಭೆಯ ಮುಕ್ತಾಯವಾಯಿತು.

ಶಂಕರಪ್ಪನೂ ಗೋಪಾಲನೂ ಆ ದಿನ ಬೆಳಗ್ಗೆ ಯೇ ಒಂದು ಲಾರಿಯಲ್ಲಿ ಸಾಮಾನುಗಳನ್ನೆಲ್ಲ ಹಾಕಿಕೊಂಡು ಬೆಂಗಳೂರಿಗೆ ಹೊರಟು ಹೋಗಿದ್ದರು. ಆದ್ದರಿಂದ ಮಾರನೆಯ ದಿನ ರೈಲಿಗೆ ಹೊರಡುವಾಗ ಒಂದೆರಡು ಟ್ರಂಕುಗಳು ಮತ್ತು ಎರಡು ಮೂರು ಹಾಸಿಗೆಗಳು, ಒಂದು ಬುಟ್ಟಿ, ಕೈ ಕೂಜ- ಇಷ್ಟು ಮಾತ್ರ ಸಾಮಾನುಗಳಿದ್ದುವು. ರೈಲ್ ಸ್ಟೇಷನ್ನಿನಲ್ಲಿ ನೂರಾರು ಜನ ಉಪಾಧ್ಯಾಯರೂ ಹುಡುಗರೂ ಸೇರಿದ್ದರು. ಹಳ್ಳಿಗಳಿಂದ ಕೆಲವರು ಪ್ರಮುಖರೂ ಬಂದಿದ್ದರು. ರೈಲು ಬಂತು. ಎರಡನೆಯ ತರಗತಿಯ ಗಾಡಿಯಲ್ಲಿ ರಂಗಣ್ಣನ ಹೆಂಡತಿಯೂ ಮಕ್ಕಳೂ ಕುಳಿತರು. ರಂಗಣ್ಣ ಉಪಾಧ್ಯಾಯರಿಗೆ ವಂದನೆ ಹೇಳುತ್ತ ಮುಖಂಡರಿಗೆ ಹಸ್ತಲಾಘವ ಕೊಡುತ್ತ ಗಾಡಿಯ ಬಳಿ ನಿಂತಿದ್ದನು. ಹತ್ತಾರು ಹೂವಿನ ಹಾರಗಳ ಭಾರದಿಂದ ಅವನ ಕತ್ತು ಜಗ್ಗುತಿತ್ತು. ಅವುಗಳನ್ನು ತೆಗೆದು ತೆಗೆದು ಗಾಡಿಯೊಳಕ್ಕೆ ಕೊಡುತ್ತಿದ್ದನು. ಆ ವೇಳೆಗೆ ಕಲ್ಲೇಗೌಡ ಮತ್ತು ಕರಿಯಪ್ಪ ಆತುರಾತುರವಾಗಿ ಬಂದರು. ರಂಗಣ್ಣ ಅವರ ಕೈ ಕುಲುಕಿ ಮಾತನಾಡಿಸಿದನು. ಅವರೂ ಸೊಗಸಾದ ಹಾರಗಳನ್ನು ಹಾಕಿದ. ಹಣ್ಣುಗಳು, ಬಾದಾಮಿ, ದ್ರಾಕ್ಷಿ, ಖರ್ಜೂರಾದಿಗಳನ್ನು ತುಂಬಿದ್ದ ಎರಡು ಬುಟ್ಟಿಗಳನ್ನು ಗಾಡಿಯೊಳಗಿಟ್ಟರು. 'ಕಲ್ಲೇಗೌಡರೇ ! ಕರಿಯಪ್ಪನವರೇ ! ನೀವು ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ತಪ್ಪದೆ ಬರಬೇಕು. ವಿಶ್ವೇಶ್ವರಪುರದಲ್ಲಿ ನನ್ನ ಮನೆ ಇದೆ' ಎಂದು ಆಹ್ವಾನವನ್ನು ರಂಗಣ್ಣ ಕೊಟ್ಟನು. ' ಆಗಲಿ ಸಾರ್ ! ಖಂಡಿತ ಬರುತ್ತೇವೆ' ಎಂದು ಅವರು ಹೇಳಿದರು. ಜನರಲ್ಲಿ ದಾರಿ ಬಿಡಿಸಿಕೊಂಡು ಗರುಡನಹಳ್ಳಿಯ ಪಟೇಲ್ ಮತ್ತು ಹನುಮನಹಳ್ಳಿಯ ಶ್ಯಾನುಭೋಗರು ಬಂದು ಕೈ ಮುಗಿ ದರು. ಅವರೂ ಹೂವಿನ ಹಾರಗಳನ್ನು ಹಾಕಿ, ಒಂದೊಂದು ರಸಬಾಳೆ ಹಣ್ಣಿನ ಗೊನೆಯನ್ನೂ ಒಂದೊಂದು ಹಲಸಿನ ಹಣ್ಣನ್ನೂ ಗಾಡಿಯೊಳಗಿಟ್ಟರು. ರಂಗಣ್ಣನು ನಗುತ್ತಾ ' ಇದಕ್ಕೆಲ್ಲ ನಾನು ಡಬ್ಬಲ್ ಚಾರ್ಜು ಕೊಡಬೇಕಾಗುತ್ತದೆಯೋ ಏನೋ ? ರೈಲಿಳಿದ ಮೇಲೆ ಪತ್ತೆಯಿಲ್ಲದೆ

ಹೊರಕ್ಕೆ ಸಾಗಿಸಿ ಲಾರಿ ಗೊತ್ತು ಮಾಡಬೇಕಾಗುತ್ತೆ ! ' ಎಂದು ಹೇಳಿದನು. ರೈಲ್ವೆ ಗಾರ್ಡು ಶೀಟಿ ಊದಿದನು. ಗಾಡಿ ಹೊರಡಲನುವಾಯಿತು. ಮತ್ತೊಮ್ಮೆ ಎಲ್ಲರಿಗೂ ರಂಗಣ್ಣ ವಂದನೆಗಳನ್ನರ್ಪಿಸಿ ಗಾಡಿ ಹತ್ತಿದನು. ಊರೆಲ್ಲ ಪ್ರತಿಧ್ವನಿಸುವಂತೆ ಜಯಕಾರಗಳಾದುವು. ಗಾಡಿ ಹೊರಟಿತು. ರಂಗಣ್ಣ ಸ್ವಲ್ಪ ದೂರದವರೆಗೂ ಕಿಟಕಿಯಲ್ಲಿ ತಲೆ ಹಾಕಿಕೊಂಡಿದ್ದು ವಂದನೆ ಮಾಡುತ್ತಿದ್ದನು. ಸ್ಟೇಷನ್ ಹಿಂದೆ ಬಿಟ್ಟು ಹೋಯಿತು. ರಂಗಣ್ಣ ಹಿಂದಕ್ಕೆ ಸರಿದು ಹೆಂಡತಿಯ ಪಕ್ಕದಲ್ಲಿ ಕುಳಿತುಕೊಂಡನು! ಆಷ್ಟರಲ್ಲಿ ಹುಡುಗರು ರಸಬಾಳೆ ಹಣ್ಣುಗಳಿಗೆ ಕೈ ಹಾಕಿ ಬಾಯಿಗೂ ಜೇಬಿಗೂ ತುರುಕಿಕೊಳ್ಳುತ್ತಿದ್ದರು !

ಪ್ರಕರಣ ೩೦

ತಿಮ್ಮರಾಯಪ್ಪನ ಮೆಚ್ಚಿಕೆ

ರಂಗಣ್ಣ ಬೆಂಗಳೂರನ್ನು ತಲುಪಿದ್ದಾಯಿತು ; ಮನೆಯನ್ನು ಸೇರಿದ್ದಾಯಿತು. ರೈಲ್ ಸ್ಟೇಷನ್ನಿಗೆ ಗೋಪಾಲನೂ ಶಂಕರಪ್ ನೂ ಬಂದಿದ್ದುದರಿಂದ ಹೆಚ್ಚು ತೊಂದರೆಯನ್ನು ಪಡದೆ, ಹೆಚ್ಚು ಗಾಡಿಗಳನ್ನು ಮಾತ್ರ ಮಾಡಿಕೊಂಡು ಮನೆಯನ್ನು ಸೇರಿದನು. ಮಾರನೆಯ ದಿನ ಶಂಕರಪ್ಪನಿಗೆ ಬಹಳವಾಗಿ ಸಮಾಧಾನ ಮಾಡಬೇಕಾಯಿತು. ಅವನು, 'ಸ್ವಾಮಿ ! ನನ್ನ ಜೀವಮಾನದಲ್ಲಿ ಅಂಥ ಸುಖ ಸಂತೋಷದ ದಿನಗಳನ್ನು ಮತ್ತೆ ನಾನು ಕಾಣುವುದಿಲ್ಲ, ನಾನೂ ಹಲವು ಅಪರಾಧಗಳನ್ನು ಮಾಡಿದೆ. ತಾವು ಒಳ್ಳೆಯ ಮಾತಿನಲ್ಲಿಯೇ ಬುದ್ಧಿ ಹೇಳಿ ತಿದ್ದಿ ನಡೆಸಿಕೊಂಡು ಬಂದಿರಿ. ಊಟದ ಹೊತ್ತಿನಲ್ಲಿ ಪಕ್ಕದಲ್ಲಿಯೇ ಮಣೆ ಹಾಕಿಸಿ ಕೂಡಿಸಿಕೊಂಡು ಸ್ನೇಹಿತನಂತೆ ಉಪಚಾರ ಮಾಡುತ್ತ ಆದರಿಸಿದಿರಿ. ನಾನು ಸಲಿಗೆಯಿಂದ ಏನಾದರೂ ಹೆಚ್ಚು ಕಡಮೆ ನಡೆದುಕೊಂಡಿದ್ದರೆ ಮನ್ನಿಸಬೇಕು' ಎಂದು ಹೇಳಿದನು. ರಂಗಣ್ಣ ಯಥೋಚಿತವಾಗಿ ಅವನಿಗೆ ಉತ್ತರ ಹೇಳಿ ಗೋಪಾಲನ ಕೈಗೆ ಐದು ರುಪಾಯಿಗಳನ್ನು ಇನಾಮಾಗಿ ಕೊಟ್ಟನು. ಅವರಿಬ್ಬರ ರೈಲು ಖರ್ಚಿಗೆ ಬೇರೆ ಹಣವನ್ನೂ ಕೊಟ್ಟು ಕಳಿಸಿದನು.

ಭಾನುವಾರ ಬೆಳಗ್ಗೆ ಹತ್ತು ಗಂಟೆಗೆ ತಿಮ್ಮರಾಯಪ್ಪ ತನ್ನ ಹೆಂಡತಿ ಮತ್ತು ಮಕ್ಕಳೊಡನೆ ರಂಗಣ್ಣನ ಮನೆಗೆ ಬಂದನು. ಆ ದಿನ ಅವರಿಗೆ ಭೋಜನ ರಂಗಣ್ಣನ ಮನೆಯಲ್ಲಿ ಏರ್ಪಾಟಾಗಿತ್ತು. ರಂಗಣ್ಣನು ಬಹಳ ಸಂತೋಷದಿಂದಲೂ ಸಂಭ್ರಮದಿಂದಲೂ ಅವರನ್ನೆಲ್ಲ ಸ್ವಾಗತಿಸಿದನು. ರಂಗಣ್ಣನ ಹೆಂಡತಿ ತಿಮ್ಮರಾಯಪ್ಪನ ಹೆಂಡತಿಯನ್ನು ಕರೆದುಕೊಂಡು ಒಳಕೊಟಡಿಗೆ ಹೋದಳು. ಸ್ವಲ್ಪ ಕಾಫಿ ಸಮಾರಾಧನೆ ಆಗಿ ಆ ಬಳಿಕ ಊಟಗಳಾಗಿ ಹಾಲಿನಲ್ಲಿ ಎರಡು ಸಂಸಾರದವರೂ ಸೇರಿ ತಾಂಬೂಲವನ್ನು ಹಾಕಿಕೊಳ್ಳುತ್ತಾ ಮಾತನಾಡತೊಡಗಿದರು. ಎಲ್ಲವೂ ಜನಾರ್ದನ ಪುರದಲ್ಲಿ ರಂಗಣ್ಣ ನಡೆಸಿದ ಇನ್‌ಸ್ಪೆಕ್ಟರ್‌ಗಿರಿಯ ಮಾತುಗಳೇ ಆಗಿದ್ದುವು. ಮಧ್ಯೆ ಮಧ್ಯೆ ತಿಮ್ಮರಾಯಪ್ಪ ತಾನು ನಡೆಸಿದ ಇನ್ಸ್ಪೆಕ್ಟರ್ ಗಿರಿಯ ಕೆಲವು ಕಥೆಗಳನ್ನೂ ಹೇಳುತ್ತಿದ್ದನು. ರಂಗಣ್ಣನು ಉಗ್ರಪ್ಪನ ವಿಚಾರವನ್ನೂ, ಅವನ ವಾದವನ್ನೂ, ಅವನಲ್ಲಾದ ಪರಿವರ್ತನೆಯನ್ನೂ, ಶಾಂತವೀರಸ್ವಾಮಿಯಾಗಿ ತನಗೆ ಮಾಡಿದ ಆತಿಥ್ಯವನ್ನೂ , ಕಲ್ಲೇಗೌಡ ಮತ್ತು ಕರಿಯಪ್ಪನವರೊಡನೆ ಆದ ಶಾಂತಿ ಸಂಧಾನವನ್ನೂ-ಎಲ್ಲವನ್ನೂ ಹೇಳಿದಾಗ ತಿಮ್ಮರಾಯಪ್ಪನು,

'ಅಯ್ಯೋ ಶಿವನೇ! ಎಂತಹ ಮಾರ್ಪಾಟು !' ಎಂದು ಉದ್ಗಾರ ತೆಗೆದನು.

'ನೋಡಿದೆಯಾ ತಿಮ್ಮರಾಯಪ್ಪ ! ನನ್ನ ಇನ್ ಸ್ಪೆಕ್ಟ‌ಗಿರಿ ಮಧ್ಯೆ ಮಧ್ಯೆ ಮನಸ್ಸಿಗೆ ಬೇಜಾರಾಗಿ ಹಾಳು ಇನ್ ಸ್ಪೆಕ್ಟರ್ ಗಿರಿ ನನಗೆ ಸಾಕಪ್ಪ! ಎಂದು ನಿನಗೆ ನಾನು ಬರೆಯುತ್ತಿದ್ದೆ. ಆದರೂ ಕೊನೆಯಲ್ಲಿ ನನಗೆ ಜನಾರ್ದನ ಪುರವನ್ನು ಬಿಟ್ಟು ಬರುವುದಕ್ಕೆ ಬಹಳ ವ್ಯಥೆಯಾಯಿತು. ಒಟ್ಟಿನಲ್ಲಿ ನನ್ನ ದರ್ಬಾರು ನಿನಗೆ ಮೆಚ್ಚಿಕೆಯಾಯಿತೆ ?” ರಂಗಣ್ಣ ಕೇಳಿದನು.

'ಶಿವನಾಣೆ ರಂಗಣ್ಣ! ಶಿವನಾಣೆ ! ನಿನಗೆ ಪ್ರಮಾಣ ವಾಗಿ ಹೇಳುತೇನೆ. ನಾವುಗಳೂ ಹಲವರು ಇನ್ಸ್ಪೆಕ್ಟರ್ ಗಿರಿ ಮಾಡಿದೆವು. ಹತ್ತರಲ್ಲಿ ಹನ್ನೊಂದು ! ಲೆಕ್ಕವೇ ಪಕ್ಕವೇ ! ನಿನ್ನ ಇನ್ ಸ್ಪೆಕ್ಟರ್ ಗಿರಿ ಒಂದು ಮಹಾ ಕಾವ್ಯ ! ಆ ಚಂದ್ರಾರ್ಕವಾಗಿ ನಿಂತು ಹೋಯಿತು ! ನನಗೆ ಬಹಳ ಸಂತೋಷ ರಂಗಣ್ಣ !' ಎಂದು ಹೇಳುತ್ತಾ ತಿಮ್ಮರಾಯಪ್ಪ ರಂಗಣ್ಣನನ್ನು ಆಲಿಂಗನ ಮಾಡಿಕೊಂಡನು.

'ದೇವರೇ ! ನಾನು ನೂರತೊಂಬತ್ತು ಪೌ೦ಡು ತೂಕ ಇಲ್ಲ ! ನಾನು ಅಪ್ಪಚ್ಚಿಯಾಗಿ ಹೋಗ್ತನೆ ! ಬಿಡು, ತಿಮ್ಮರಾಯಪ್ಪ ! ಅವರಿಬ್ಬರೂ ನೋಡಿ ನಗುತ್ತಿದಾರೆ ! ನನ್ನ ಇನ್ ಸ್ಪೆಕ್ಟರ್‌ಗಿರಿ ಇರಲಿ. ನಿನ್ನ ಸ್ನೇಹ ನಿಜವಾಗಿಯೂ ಒಂದು ಮಹಾ ಕಾವ್ಯ ! ಅದು ಆಚಂದ್ರಾರ್ಕವಾಗಿ ನಿಂತಿರುತ್ತದೆ !' ಎಂದು ರಂಗಣ್ಣ ನಗುತ್ತಾ ಹೇಳಿದನು.