ಹರಿಕಥಾಮೃತಸಾರ/ಅಣು ತಾರತಮ್ಯ ಸಂಧಿ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ

ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ

ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು

ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ//1//


ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ

ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು

ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು

ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ//2//


ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು

ದ್ಯುಮಣಿಗಿಂದಲಿ ವರುಣ ನೀಚನು ನಾದದ ಅಧಮನು

ಸುಮನಸಾಸ್ಯ ಪ್ರಸೂತಿ ಭೃಗು ಮುನಿ ಸಮರು ನಾರದಗೆ ಅಧಮರು

ಅತ್ರಿ ಪ್ರಮುಖ ವಿಶ್ವಾಮಿತ್ರ ವೈವಸ್ವತರು ಅನಳಗೆ ಅಧಮ//3//


ಮಿತ್ರ ತಾರಾ ನಿರ್ಋತಿ ಪ್ರವಹಾ ಪತ್ನಿ ಪ್ರಾವಹಿ ಸಮರು

ವಿಶ್ವಾಮಿತ್ರಗಿಂದಲಿ ಕೊರತೆ

ವಿಷ್ವಕ್ಸೇನ ಗಣನಾಥ ವಿತ್ತಪತಿ ಅಶ್ವಿನಿಗಳು ಅಧಮರು

ಮಿತ್ರ ಮೊದಲಾದ ಅವರಿಗಿಂದಲಿ ಬಿತ್ತರಿಪೆನು ಶತಸ್ಥ ಮನುಜರ ವ್ಯೂಹ ನಾಮಗಳ//4//


ಮರುತರು ಒಂಭತ್ತು ಅಧಿಕ ನಾಲ್ವತ್ತು ಎರಡು ಅಶ್ವಿನಿ

ವಿಶ್ವೇದೇವರು ಎರಡೈದು ಹನ್ನೊಂದು ರುದ್ರರು ದ್ವಾದಶಾದಿತ್ಯ

ಗುರು ಪಿತೃ ತ್ರಯ ಅಷ್ಟವಸುಗಳು ಭರತ ಭಾರತಿ ಪೃಥ್ವಿ ಋಭುವು

ಎಂದರಿದು ಇವರನು ಸೋಮರಸ ಪಾನಾರ್ಹರು ಅಹುದೆಂದು//5//


ಈ ದಿವೌಕಸರೊಳಗೆ ಉಕ್ತರು ಐದಧಿಕ ದಶ

ಉಳಿದ ಎಂಭತ್ತೈದು ಶೇಷರಿಗೆ ಎಣೆಯೆನಿಸುವರು ಧನಪ ವಿಘ್ನೇಶಾ

ಸಾಧು ವೈವಸ್ವತ ಸ್ವಯಂಭುವ ಶ್ರೀದ ತಾಪಸರುಳಿದು

ಮನು ಎಕಾದಶರು ವಿಘ್ನೇಶಗಿಂತಲಿ ಕೊರತೆಯೆನಿಸುವರು//6//


ಚವನ ನಂದನ ಕವಿ ಬೃಹಸ್ಪತಿ ಅವರಜ ಉಚಿಥ್ಯಮುನಿ ಪಾವಕ

ಧೃವ ನಹುಷ ಶಶಿಬಿಂದು ಪ್ರಿಯವ್ರತನು ಪ್ರಹ್ಲಾದ

ಕುವಲಯಪರು ಉಕ್ತೇತರಿಂದಲಿ ಅವರ ರೋಹಿಣಿ ಶಾಮಲಾ ಜಾಹ್ನವಿ

ವಿರಾಟ್ ಪರ್ಜನ್ಯ ಸಂಜ್ಞಾ ದೇವಿಯರು ಅಧಮ//7//


ದ್ಯುನದಿಗಿಂತಲಿ ನೀಚರೆನಿಪರು ಅನಭಿಮಾನಿ ದಿವೌಕಸರು

ಕೇಚನ ಮುನಿಗಳಿಗೆ ಕಡಿಮೆ ಸ್ವಾಹಾ ದೇವಿಗೆ ಅಧಮ ಬುಧ

ಎನಿಸುವಳು ಉಷಾದೇವಿ ನೀಚಳು ಶನಿ ಕಡಿಮೆ ಕರ್ಮಾಧಿಪತಿ

ಸದ್ವಿನುತ ಪುಷ್ಕರ ನೀಚನು ಎನಿಸುವ ಸೂರ್ಯನಂದನಗೆ//8//


ಕೊರತೆಯೆನಿಪರು ಅಶೀತಿ ಋಷಿ ಪುಷ್ಕರಗೆ

ಊರ್ವಶಿ ಮುಖ್ಯ ಶತ ಅಪ್ಸರರು ತುಂಬುರ ಮುಖರು ಅಜಾನಜರು ಎನಿಸುತಿಹರು

ಕರೆಸುವುದು ಅನಳಗಣ ನಾಲ್ವತ್ತು ಅರೆ ಚತುರ್ದಶ ದ್ವಿ ಅಷ್ಟ ಸಾವಿರ

ಹರಿ ಮಡದಿಯರು ಸಮರೆನಿಸುವರು ಪಿಂತೆ ಪೇಳ್ವರಿಗೆ//9//


ತದವರರು ಅನಾಖ್ಯಾತ ಅಪ್ಸರ ಸುದತಿಯರು ಕೃಷ್ಣಾoಗ ಸಂಗಿಗಳು

ಅದರ ತರುವಾಯದಲಿ ಚಿರಪಿತರುಗಳು

ಇವರಿಂದ ತ್ರಿದಶ ಗಂಧರ್ವ ಗಣ ಇವರಿಂದ ಅಧಮ ನರ ಗಂಧರ್ವರು

ಇವರಿಂದ ಉದಧಿ ಮೇಲೆ ಅಖಿಳ ಪತಿಗಳು ಅಧಮರು ನೂರು ಗುಣದಿಂದ//10//


ಪೃಥ್ವಿ ಪತಿಗಳಿಗಿಂದ ಶತ ಮನುಜೋತ್ತಮರು ಕಡಿಮೆ ಎನಿಪರು

ಇವರಿಂದ ಉತ್ತರೋತ್ತರ ನೂರು ಗುಣದಿಂದ ಅಧಿಕರಾದವರ

ನಿತ್ಯದಲಿ ಚಿಂತಿಸುತ ನಮಿಸುತ ಭೃತ್ಯನು ಆನುಹದೆಂಬ

ಭಕ್ತರ ಚಿತ್ತದಲಿ ನೆಲೆಗೊಂಡು ಕರುಣಿಪರು ಅಖಿಳ ಸೌಖ್ಯಗಳ//11//


ದ್ರುಮಲತಾ ತೃಣ ಗುಲ್ಮ ಜೀವರು ಕ್ರಮದಿ ನೀಚರು

ಇವರಿಗಿಂತಧಮರು ನಿತ್ಯ ಬದ್ಧರಿಗಿಂತಲು ಅಜ್ಞಾನಿ

ತಮಸಿಗೆ ಯೋಗ್ಯರ ಭೃತ್ಯರು ಅಧಮರು ಅಮರುಷಾದಿ ಅಭಿಮಾನಿ ದೈತ್ಯರು

ನಮುಚಿ ಮೊದಲಾದ ಅವರಿಗಿಂತಲಿ ವಿಪ್ರಚಿತ ನೀಚ//12//


ಅಲಕುಮಿಯು ತಾ ನೀಚಳೆನಿಪಲು ಕಲಿ ಪರಮ ನೀಚತಮ

ಅವನಿಂದುಳಿದ ಪಾಪಿಗಳಿಲ್ಲ ನೋಡಲು ಈ ಜಗತ್ರಯದಿ

ಮಲವಿಸರ್ಜನ ಕಾಲದಲಿ ಕತ್ತಲೆಯೊಳಗೆ ಕಲ್ಮಶ ಕುಮಾರ್ಗ

ಸ್ಥಳಗಳಲಿ ಚಿಂತನೆಯ ಮಾಳ್ಪುದು ಬಲ್ಲವರು ನಿತ್ಯ//13//


ಸತ್ವ ಜೀವರ ಮಾನಿ ಬ್ರಹ್ಮನು ನಿತ್ಯ ಬದ್ಧರೊಳಗೆ ಪುರಂಜನ

ದೈತ್ಯ ಸಮುದಾಯಧಿಪತಿ ಕಲಿಯೆನಿಪ

ಪವಮಾನ ನಿತ್ಯದಲಿ ಅವರೊಳಗೆ ಕರ್ಮ ಪ್ರವರ್ತಕನು ತಾನಾಗಿ

ಶ್ರೀ ಪುರುಷೋತ್ತಮನ ಸಂಪ್ರೀತಿಗೋಸುಗ ಮಾಡಿ ಮಾಡಿಸುವ//14//


ಪ್ರಾಣದೇವನು ತ್ರಿವಿಧರೊಳಗೆ ಪ್ರವೀಣ ತಾನೆಂದೆನಿಸಿ

ಅಧಿಕಾರ ಅನುಸಾರದಿ ಕರ್ಮಗಳ ತಾ ಮಾಡಿ ಮಾಡಿಸುವ

ಜ್ಞಾನ ಭಕ್ತಿ ಸುರರ್ಗೆ ಮಿಶ್ರ ಜ್ಞಾನ ಮಧ್ಯಮ ಜೀವರಿಗೆ

ಅಜ್ಞಾನ ಮೋಹ ದ್ವೇಷಗಳ ದೈತ್ಯರಿಗೆ ಕೊಡುತಿಪ್ಪ//15//


ದೇವ ದೈತ್ಯರ ತಾರತಮ್ಯವ ಈ ವಿಧದಿ ತಿಲಿದೆಲ್ಲರೊಳು

ಲಕ್ಷ್ಮೀವರನು ಸರ್ವೋತ್ತಮನೆಂದರಿದು ನಿತ್ಯದಲಿ

ಸೇವಿಸುವ ಭಕ್ತರಿಗೊಲಿದು ಸುಖವೀವ ಸರ್ವತ್ರದಲಿ ಸುಖಮಯ

ಶ್ರೀ ವಿರಿಂಚಾದಿ ಅಮರ ವಂದಿತ ಜಗನ್ನಾಥ ವಿಠಲನು//16//