ಹರಿಕಥಾಮೃತಸಾರ/ದತ್ತಸ್ವಾತಂತ್ರ್ಯ ಸಂಧಿ (ಸ್ವಾತಂತ್ರ್ಯ ದಾನ)

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ಕಾರುಣಿಕ ಹರಿ ತನ್ನೊಳಿಪ್ಪ ಅಪಾರ ಸ್ವಾತಂತ್ರ್ಯ ಗುಣವ ನಾನೂರು ತೆಗೆದು

ಸಪಾದ ಆರೊಂದಧಿಕ ಅರವತ್ತು ನಾರಿಗಿತ್ತ

ದ್ವಿ ಷೋಡಶ ಅಧಿಕ ನೂರು ಪಾದತ್ರಯವ ತನ್ನ ಶರೀರದೊಳಗೆ

ಈಪರಿ ವಿಭಾಗವ ಮಾಡಿ ತ್ರಿಪದಾಹ್ವ//1//


ಸತ್ಯ ಲೋಕಾಧಿಪನೊಳಗೆ ಐವತ್ತೆರೆಡು ಪವಮಾನನೊಳು ನಾಲ್ವತ್ತು ಮೇಲೆಂಟು

ಅಧಿಕ ಶಿವನೊಳಗಿಟ್ಟನಿಪ್ಪತ್ತು ಚಿತ್ತಜ ಇಂದ್ರರೊಳು ಐದಧಿಕ ದಶ

ತತ್ವಮಾನಿಗಳು ಎನಿಪ ಸುರರೊಳು ಹತ್ತು

ಈರೈದು ಅಖಿಳ ಜೀವರೊಳಿಟ್ಟ ನಿರವದ್ಯ//2//


ಕಲಿ ಮೊದಲುಗೊಂಡ ಅಖಿಳ ದಾನವರೊಳಗೆ ನಾಲ್ವತ್ತೈದು

ಈ ಪರಿ ತಿಳಿದು ಉಪಾಸನೆ ಮಾಡು ಮರೆಯದೆ ಪರಮ ಭಕುತಿಯಲಿ

ಇಳೆಯೊಳಗೆ ಸಂಚರಿಸು ಲಕ್ಷ್ಮೀ ನಿಲಯನ ಆಳಾನೆಂದು

ಸರ್ವ ಸ್ಥಳಗಳಲಿ ಸಂತೈಸುತಿಪ್ಪನು ಗೆಳೆಯನಂದದಲಿ//3//


ಅವನಿಪ ಸ್ವಾಮಿತ್ವ ಧರ್ಮವ ಸ್ವವಶ ಮಾತ್ಯರಿಗಿತ್ತು

ತಾ ಮತ್ತವರ ಮುಖದಲಿ ರಾಜ ಕಾರ್ಯಾವ ಮಾಡಿಸುವ ತೆರದಿ

ಕವಿಭಿರೀಡಿತ ತನ್ನ ಕಳೆಗಳ ದಿವಿಜ ದಾನವ ಮಾನವರೊಳಿಟ್ಟು

ಅವಿರತ ಗುಣತ್ರಯಜ ಕರ್ಮವ ಮಾಡಿ ಮಾಡಿಸುವ//4//


ಪುಣ್ಯ ಪಾಪಗಳು ಈ ತೆರದಿ ಕಾರುಣ್ಯ ಸಾಗರ ದೇವದಾನವ ಮಾನವರೊಳಿಟ್ಟು

ಅವರ ಫಲ ವ್ಯತ್ಯಾಸವನೆ ಮಾಡಿ

ಬನ್ನ ಬಡಿಸುವ ಭಕ್ತಿಹೀನರ ಸನ್ನುತ ಸುಕರ್ಮ ಫಲತೆಗೆದು

ಪ್ರಪನ್ನರಿಗೆ ಕೊಟ್ಟು ಅವರ ಸುಖಪಡಿಸುವನು ಸುಭುಜಾಹ್ವ//5//


ಮಾಣಿಕವ ಕೊಂಡು ಅಂಗಡಿಯೊಳು ಅಜಿವಾನ ಕೊಟ್ಟು ಆ ಪುರುಷನ

ಸಮಾಧಾನ ಮಾಡುವ ತೆರದಿ ದೈತ್ಯರು ನಿತ್ಯದಲಿ ಮಾಳ್ಪ

ದಾನ ಯಜ್ಞಾದಿಗಳ ಫಲ ಪವಮಾನ ಪಿತನು ಅಪಹರಿಸಿ

ಅಸಮೀಚೀನ ಸುಖಗಳ ಕೊಟ್ಟು ಅಸುರರ ಮತ್ತರನು ಮಾಳ್ಪ//6//


ಏಣ ಲಾಂಛನನ ಅಮಲ ಕಿರಣ ಕ್ರಮೇಣ ವೃದ್ಧಿಯನು ಐದಿ

ಲೋಗರ ಕಾಣಗೊಡದಿಹ ಕತ್ತಲೆಯ ಭಂಗಿಸುವ ತೆರದಂತೆ

ವೈನತೇಯಾಂಗಸನ ಮೂರ್ತಿ ಧ್ಯಾನವುಳ್ಳ ಮಹಾತ್ಮರಿಗೆ

ಸುಜ್ಞಾನ ಭಕ್ತ್ಯಾದಿಗಳು ವರ್ಧಿಸಿ ಸುಖವೇ ಕೊಡುತಿಹರು//7//


ಜನಪನ ಅರಿಕೆಯ ಚೋರ ಪೊಳಲೊಳು ಧನವ ಕದ್ದೊಯ್ದ ಈಯಲು

ಅವನ ಅವಗುಣಗಳು ಎಣಿಸದೆ ಪೊರೆವ ಕೊಡದಿರೆ ಶಿಕ್ಷಿಸುವ ತೆರದಿ

ಅನುಚಿತೋಚಿತ ಕರ್ಮ ಕೃಷ್ಣಾರ್ಪಣವೆನಲು

ಕೈಕೊಂಡು ತನ್ನರಮನೆಯೊಳಿಟ್ಟು ಆನಂದ ಬಡಿಸುವ ಮಾಧವಾನತರ//8//


ಅನ್ನದ ಅನ್ನಾದ ಅನ್ನ ನಾಮಕ ಮುನ್ನ ಪೇಳ್ದ ಪ್ರಕಾರ

ಜೀವರೊಳು ಅನ್ನ ರೂಪ ಪ್ರವೇಶಗೈದು ಅವರವರ ವ್ಯಾಪಾರ

ಬನ್ನಬಡದಲೆ ಮಾಡಿ ಮಾಡಿಸಿ ಧನ್ಯರಿವರು ಅಹುದು ಎಂದೆನಿಸಿ

ತ್ರೈಗುಣ್ಯ ವರ್ಜಿತ ತತ್ತದಾಹ್ವಯನು ಆಗಿ ಕರೆಸುವನು//9//


ಸಲಿಲಬಿಂದು ಪಯಾಬ್ಧಿಯೊಳು ಬೀಳಲು ವಿಕಾರವನು ಐದ ಬಲ್ಲದೆ

ಜಲವು ತದ್ರೂಪವನೆ ಐದುವುದು ಎಲ್ಲ ಕಾಲದಲಿ

ಕಲಿಲಮಲಾಪಹನ ಅರ್ಚಿಸುವ ಸತ್ಕುಲಜರ ಕುಕರ್ಮಗಳು

ತಾನಿಷ್ಕಲುಷ ಕರ್ಮಗಳಾಗಿ ಪುರುಷಾರ್ಥಗಳ ಕೊಡುತಿಹರು//10//


ಮೊಗದೊಳಗೆ ಮೊಗವಿಟ್ಟು ಮುದ್ದಿಸಿ ಮಗುವಿನಂ ಬಿಗಿದಪ್ಪಿ ರಂಬಿಸಿ

ನೇಹದಿ ತೆಗೆದು ತನ್ನಯ ಸ್ತನಗಳು ಉಣಿಸುವ ಜನನಿಯಂದದಲಿ

ಅಗಣಿತಾತ್ಮನು ತನ್ನ ಪಾದಾಬ್ಜಗಳ ಧೇನಿಪ ಭಕ್ತ ಜನರಿಗೆ

ಪ್ರಘಟಕನು ತಾನಾಗಿ ಸೌಖ್ಯಗಳು ಏವ ಸರ್ವತ್ರ//11//


ತೋಟಿಗನು ಭೂಮಿಯೊಳು ಬೀಜವ ನಾಟಬೇಕೆಂದೆನುತ

ಹಿತದಲಿ ಮೋಟೆಯಿಂ ನೀರೆತ್ತಿ ಸಸಿಗಳ ಸಂತೈಸುವಂತೆ

ಪಾಟುಬಡದಲೆ ಜಗದಿ ಜೀವರ ಘೋಟಕಾಸ್ಯನು ಸೃಜಿಸಿ

ಯೋಗ್ಯತೆ ದಾಟಗೊಡದಲೆ ಸಲಹುತಿಪ್ಪನು ಸರ್ವ ಕಾಲದಲಿ//12//


ಭೂಮಿಯೊಳು ಜಲವಿರೆ ತೃಷಾರ್ತನು ತಾ ಮರೆದು

ಮೊಗವೆತ್ತಿ ಎಣ್ದೆಸೆವ್ಯೋಮ ಮಂಡಲದೊಳಗೆ ಕಾಣದೆ ಮಿಡುಕುವಂದದಲಿ

ಶ್ರೀ ಮನೋರಮ ಸರ್ವರ ಅಂತರ್ಯಾಮಿಯು ಆಗಿರೆ ತಿಳಿಯಲರಿಯದೆ

ಭ್ರಾಮಕರು ಭಜಿಸುವರು ಭಕುತಿಯಲಿ ಅನ್ಯ ದೇವತೆಯ//13//


ಮುಖ್ಯ ಫಲ ವೈಕುಂಠ ಮುಖ್ಯಾಮುಖ್ಯ ಫಲ ಮಹದಾದಿ ಲೋಕಾ

ಅಮುಖ್ಯ ಫಲ ವೈಷಯಿಕವು ಎಂದರಿದು ಅತಿ ಭಕುತಿಯಿಂದ

ರಕ್ಕಸ ಅರಿಯ ಭಜಿಸುತಲಿ ನಿರ್ದುಃಖನಾಗು

ನಿರಂತರದಿ ಮೊರೆ ಪೊಕ್ಕವರ ಬಿಡ ಭೃತ್ಯವತ್ಸಲ ಭಾರತೀಶ ಪಿತ//14//


ವ್ಯಾಧಿಯಿಂ ಪೀಡಿತ ಶಿಶುವಿಗೆ ಗುಡೋದಕವ ನೆರೆದು ಅದಕೆ ಔಷಧ ತೇದು

ಕುಡಿಸುವ ತಾಯಿಯ ಉಪಾದಿಯಲಿ

ಸರ್ವಜ್ಞ ಬಾದರಾಯಣ ಭಕ್ತ ಜನಕೆ ಪ್ರಸಾದ ರೂಪಕನಾಗಿ

ಭಾಗವತಾದಿಯಲಿ ಪೇಳಿದನು ಧರ್ಮಾದಿಗಳೇ ಫಲವೆಂದು//15//


ದೂರದಲ್ಲಿಹ ಪರ್ವತ ಘನಾಕಾರ ತೋರ್ಪುದು ನೋಳ್ಪ ಜನರಿಗೆ

ಸಾರಗೈಯಲು ಸರ್ವ ವ್ಯಾಘ್ರಗಳಿಂದ ಭಯವಿಹುದು

ಘೋರತರ ಸಂಸಾರ ಸೌಖ್ಯ ಅಸಾರತರವೆಂದು ಅರಿತು

ನಿತ್ಯ ರಮಾರಮಣನ ಆರಾಧಿಸುವರು ಅದರಿಂದ ಬಲ್ಲವರು//16//


ಕೆಸರ ಘಟಗಳ ಮಾಡಿ ಬೇಸಿಗೆ ಬಿಸಿಲೊಳಗೆ ಇಟ್ಟು ಒಣಗಿಸಿದರು ಅದು

ಘನ ರಸವು ತುಂಬಲು ಬಹುದೇ? ಸರ್ವ ಸ್ವಾತಂತ್ರ ನಾನೆಂಬ

ಪಶುಪ ನರನು ಏನೇನು ಮಾಳ್ಪ ಅನಶನ ದಾನ ಸ್ನಾನ ಕರ್ಮಗಳು

ಒಸರಿ ಪೋಪವು ಬರಿದೆ ದೇಹ ಆಯಾಸವನೆ ಕೊಟ್ಟು//17//


ಎರಡು ದೀಕ್ಷೆಗಳಿಹವು ಬಾಹ್ಯಾಂತರವು ಎನಿಪ ನಾಮದಲಿ

ಬುಧರಿಂದರಿತು ದೀಕ್ಷಿತನು ಆಗು ದೀರ್ಘ ದ್ವೇಷಗಳ ಬಿಟ್ಟು

ಹರಿಯೇ ಸರ್ವೋತ್ತಮ ಕ್ಷರಾಕ್ಷರ ಪುರುಷ ಪೂಜಿತ ಪಾದ

ಜನ್ಮಾದಿ ಅರವಿ ದೂರ ಸುಖಾತ್ಮ ಸರ್ವಗನು ಎಂದು ಸ್ಮರಿಸುತಿರು//18//


ಹೇಯವಸ್ತುಗಳಿಲ್ಲವು ಉಪಾದೇಯ ವಸ್ತುಗಳಿಲ್ಲ

ನ್ಯಾಯಾನ್ಯಾಯ ಧರ್ಮಗಳಿಲ್ಲ ದ್ವೇಷ ಅಸೂಯೆ ಮೊದಲಿಲ್ಲ

ತಾಯಿ ತಂದೆಗಳಿಲ್ಲ ಕಮಲದಳಾಯತ ಅಕ್ಷಗೆಯೆನಲು

ಈಸುವ ಕಾಯಿಯಂದದಿ ಮುಳಗಗೊಡದೆ ಭವಾಬ್ಧಿ ದಾಟಿಸುವ//19//


ಮಂದನಾದರು ಸರಿಯೆ ಗೋಪೀಚಂದನ ಶ್ರೀ ಮುದ್ರೆಗಳ ನಲಿವಿಂದ ಧರಿಸುತ

ಶ್ರೀ ತುಳಸಿ ಪದುಮಾಕ್ಷಿ ಸರಗಳನು ಕಂಧರದ ಮಧ್ಯದಲಿ ಧರಿಸಿ

ಮುಕುಂದ ಶ್ರೀ ಭೂರಮಣ ತ್ರಿಜಗದ್ವಂದ್ಯ

ಸರ್ವ ಸ್ವಾಮಿ ಮಮ ಕುಲದೈವವು ಎನೆ ಪೊರೆವ//20//


ಪ್ರಾಯ ಧನ ಮದದಿಂದ ಜನರಿಗೆ ನಾಯಕ ಪ್ರಭುವೆಂಬಿ

ಪೂರ್ವದಿ ತಾಯಿ ಪೊಟ್ಟೆಯೊಳಿರಲು ಪ್ರಭುವೆಂದೇಕೆ ಕರೆಯರಲೈ?

ಕಾಯ ನಿನ್ನನು ಬಿಟ್ಟು ಪೋಗಲು ರಾಯಾ ನೀನೆಂಬುವ ಪ್ರಭುತ್ವ

ಪಲಾಯನವನೈದಿತು ಸಮೀಪದಲಿದ್ದರೆ ಅದು ತೋರು//21//


ವಾಸುದೇವ ಏಕ ಪ್ರಕಾರದಿ ಈಶನೆನಿಸುವ

ಬ್ರಹ್ಮ ರುದ್ರ ಶಚಿ ಈಶ ಮೊದಲಾದ ಅಮರರೆಲ್ಲರು ದಾಸರೆನಿಸುವರು

ಈ ಸುಮಾರ್ಗವ ಬಿಟ್ಟು ಸೋಹಮುಪಾಸನೆಯಗೈವ ನರ

ದೇಹಜ ದೈಶಿಕ ಕ್ಲೇಶಗಳು ಬರಲು ಅವನು ಏಕೆ ಬಿಡಿಸಿಕೊಳ//22//


ಆ ಪರ ಬ್ರಹ್ಮನಲಿ ತ್ರಿಜಗದ್ವ್ಯಾಪಕಾತ್ವ ನಿಯಾಮಕಾತ್ವ

ಸ್ಥಾಪಕಾತ್ವ ವಶಾತ್ವ ಈಶಾತ್ವಾದಿ ಗುಣಗಳಿಗೆ ಲೋಪವಿಲ್ಲ

ಏಕ ಪ್ರಕಾರ ಸ್ವರೂಪವು ಎನಿಪವು ಸರ್ವ ಕಾಲದಿ ಪೋಪವಲ್ಲವು

ಜೀವರಿಗೆ ದಾಸಾತ್ವದುಪಾದಿ//23//


ನಿತ್ಯನೂತನ ನಿರ್ವಿಕಾರ ಸುಹೃತ್ತಮ ಪ್ರಣವಸ್ಥ

ವರ್ಣೋತ್ಪತ್ತಿ ಕಾರಣ ವಾಗ್ಮನಃಮಯ ಸಾಮಗಾನರತ

ದತ್ತ ಕಪಿಲ ಹಯಾಸ್ಯ ರೂಪದಿ ಪೃಥ್ ಪ್ರುತಗ್ ಜೀವರೊಳಗಿದ್ದು ಪ್ರವರ್ತಿಸುವನು

ಅವರವರ ಯೋಗ್ಯತೆ ಕರ್ಮವ ಅನುಸರಿಸಿ//24//


ಶೃತಿಗಳು ಆತನ ಮಾತು ವಿಮಲಾ ಸ್ಮೃತಿಗಳು ಆತನ ಶಿಕ್ಷೆ

ಜೀವ ಪ್ರತತಿ ಪ್ರಕೃತಿಗಳು ಎರಡು ಪ್ರತಿಮೆಗಳು ಎನಿಸಿಕೊಳುತಿಹವು

ಇತರ ಕರ್ಮಗಳು ಎಲ್ಲ ಲಕ್ಷ್ಮೀ ಪತಿಗೆ ಪೂಜೆಗಳೆಂದು ಸ್ಮರಿಸುತ

ಚತುರ ವಿಧ ಪುರುಷಾರ್ಥಗಳ ಬೇಡದಿರು ಸ್ವಪ್ನದಲಿ//25//


ಭೂತಳಾಧಿಪನು ಆಜ್ಞ ಧಾರಕ ದೂತರಿಗೆ

ಸೇವಾನುಸಾರದಿ ವೇತನವ ಕೊಟ್ಟು ಅವರ ಸಂತೋಷಿಸುವ ತೆರದಂತೆ

ಮಾತರಿಶ್ವ ಪ್ರಿಯನು ಪರಮ ಪ್ರೀತಿ ಪೂರ್ವಕ

ಸದ್ಗುಣಂಗಳ ಗಾಧಕರ ಸಂತೋಷ ಪಡಿಸುವ ಇಹ ಪರಂಗಳಲಿ//26//


ದೀಪ ದಿವದಲಿ ಕಂಡರಾದಡೆ ಲೋಪಗೈಸುವರು ಆ ಕ್ಷಣ

ಹರಿ ಸಮೀಪದಲ್ಲಿರೆ ನಂದ ನಾಮ ಸುನಂದವು ಎನಿಸುವವು

ಔಪಚಾರಿಕವಲ್ಲ ಸುಜನರ ಪಾಪ ಕರ್ಮವು ಪುಣ್ಯವು ಎನಿಪವು

ಪಾಪಿಗಳ ಸತ್ಪುಣ್ಯ ಕರ್ಮವು ಪಾಪವು ಎನಿಸುವವು//27//


ಧನವ ಸಂಪಾದಿಸುವ ಪ್ರದ್ರಾವಣಿಕರಂದದದಿ

ಕೋವಿದರ ಮನೆಮನೆಗಳಲಿ ಸಂಚರಿಸು ಶಾಸ್ತ್ರ ಶ್ರವಣ ಗೋಸುಗದಿ

ಮನನಗೈದು ಉಪದೇಶಿಸುತ ದುರ್ಜನರ ಕೂಡಿ ಆಡದಿರು ಸ್ವಪ್ನದಿ

ಪ್ರಣತ ಕಾಮದ ಕೊಡುವ ಸೌಖ್ಯಗಳ ಇಹ ಪರಂಗಳಲಿ//28//


ಕಾರಕ ಕ್ರಿಯ ದ್ರವ್ಯ ವಿಭ್ರಮ ಮೂರು ವಿಧ ಜೀವರಿಗೆ

ಬಹು ಸಂಸಾರಕೆ ಇವು ಕಾರಣವು ಎನಿಸುವವು ಎಲ್ಲ ಕಾಲದಲಿ ದೂರ ಓಡಿಸಿ

ಭ್ರಾಮಕತ್ರಯ ಮಾರಿಗೆ ಒಳಗಾಗದಲೆ

ಸರ್ವಾರಾಧಕನ ಚಿಂತಿಸುತಲಿರು ಸರ್ವತ್ರ ಮರೆಯದಲೆ//29//


ಕರಣ ಕರ್ಮವ ಮಾಡಿದರೆ ವಿಸ್ಮರಣೆ ಕಾಲದಿ ಮಾತುಗಳಿಗೆ

ಉತ್ತರವ ಕೊಡದಲೆ ಸುಮ್ಮನಿಪ್ಪನು

ಜಾಗರಾವಸ್ಥೆ ಕರುಣಿಸಲು ವ್ಯಾಪಾರ ಮಾಡುವ

ಬರಲು ನಾಲ್ಕವಸ್ಥೆಗಳು ಪರಿಹರಿಸಿ ಕೊಳನು ಏತಕೆ? ಸ್ವತಂತ್ರನು ತಾನೆಯೆಂಬುವನು//30//


ಯುಕ್ತಿ ಮಾತುಗಳಲ್ಲ ಶ್ರುತಿ ಸ್ಮೃತಿ ಉಕ್ತ ಮಾತುಗಳಿವು

ವಿಚಾರಿಸಿ ಮುಕ್ತಿಗಿವು ಸೋಪಾನವು ಎನಿಪವು ಪ್ರತಿಪ್ರತಿ ಪದವು

ಭಕ್ತಿಪೂರ್ವಕ ಪಠಿಸುವವರಿಗೆ ವ್ಯಕ್ತಿ ಕೊಡುವ ಸ್ವರೂಪ ಸುಖ

ಪ್ರವಿವಿರಕ್ತನ ಮಾಡುವನು ಭವಭಯದಿಂದ ಬಹು ರೂಪ//31//


ಶ್ರೀನಿವಾಸನ ಸುಗುಣ ಮಣಿಗಳ ಪ್ರಾಣಮಾತ ವಯುನಾಖ್ಯ ಸೂತ್ರದಿ ಪೋಣಿಸಿದ ಮಾಲಿಕೆಯ

ವಾಗ್ಮಯಗೆ ಸಮರ್ಪಿಸಿದ

ಜ್ಞಾನಿಗಳ ದೃಕ್ ವಿಷಯವುಹುದ ಅಜ್ಞಾನಿಗಳಿಗೆ ಅಸಹ್ಯ ತೋರ್ಪುದು

ಮಾಣಿಕವ ಮರ್ಕಟನ ಕೈಯಲಿ ಕೊಟ್ಟ ತೆರದಂತೆ//32//


ಶ್ರೀವಿಧಿ ಈರ ವಿಪಾಹಿಪ ಈಶ ಶಚೀ ವರಾತ್ಮಭವ ಅರ್ಕ ಶಶಿ

ದಿಗ್ದೇವ ಋಷಿ ಗಂಧರ್ವ ಕಿನ್ನರ ಸಿದ್ಧ ಸಾಧ್ಯ ಗಣ ಸೇವಿತ ಪದಾಂಬುಜ

ತ್ವತ್ಪಾದಾಲವಂಬಿಗಳು ಆದ ಭಕ್ತರ ಕಾವ

ಕರುಣಾ ಸಾಂದ್ರ ಲಕ್ಷ್ಮೀ ಹೃತ್ಕುಮುದ ಚಂದ್ರ//33//


ಆದರಿಶ ಅಗತಾಕ್ಷ ಭಾಷಾ ಭೇದದಿಂದಲಿ ಕರೆಯಲು ಅದನು

ನಿಷೇಧಗೈದು ಅವಲೋಕಿಸದೆ ಬಿಡುವರೆ ವಿವೇಕಿಗಳು

ಮಾಧವನ ಗುಣ ಪೇಳ್ವ ಪ್ರಾಕೃತವು ಆದರೆಯು ಸರಿ

ಕೇಳಿ ಪರಮ ಆಹ್ಲಾದಬಡದಿಪ್ಪರೆ? ನಿರಂತರ ಬಲ್ಲ ಕೋವಿದರು//34//


ಭಾಸ್ಕರನ ಮಂಡಲವ ಕಂಡು ನಮಸ್ಕರಿಸಿ ಮೋದಿಸದೆ

ದ್ವೇಷದಿ ತಸ್ಕರನು ನಿಂದಿಸಲು ಕುಂದಹುದೇ ದಿವಾಕರಗೆ

ಸಂಸ್ಕೃತವು ಇದಲ್ಲ ಎಂದು ಕುಹಕ ತಿರಸ್ಕರಿಸಲು ಏನಹುದು?

ಭಕ್ತಿ ಪುರಸ್ಕರದಿ ಕೇಳ್ವರಿಗೊಲಿವನು ಪುಷ್ಕರಾಕ್ಷ ಸದಾ//35//


ಪತಿತನ ಕಪಾಲದೊಳು ಭಾಗೀರಥಿಯ ಜಲವಿರೆ ಪೇಯವು ಎನಿಪುದೆ?

ಇತರ ಕವಿ ನಿರ್ಮಿತ ಕುಕಾವ್ಯ ಅಶ್ರಾವ್ಯ ಬುಧರಿಂದ

ಕೃತಿ ಪತಿಕಥಾನ್ವಿತವು ಎನಿಪ ಪ್ರಾಕೃತವೆ ತಾ ಸಂಸ್ಕೃತವು ಎನಿಸಿ

ಸದ್ಗತಿಯನೀವುದು ಭಕ್ತಿ ಪೂರ್ವಕ ಕೇಳಿ ಪೇಳ್ವರಿಗೆ//36//


ವೇದ ಶಾಸ್ತ್ರ ಸಯುಕ್ತಿ ಗ್ರಂಥಗಳು ಓದಿ ಕೇಳ್ದವನಲ್ಲ

ಸಂತತ ಸಾಧುಗಳ ಸಹವಾಸ ಸಲ್ಲಾಪಗಳು ಮೊದಲಿಲ್ಲ

ಮೋದ ತೀರ್ಥ ಆರ್ಯರ ಮತಾನುಗರು ಆದವರ ಕರುಣದಲಿ ಪೇಳ್ದೆ

ರಮಾಧವ ಜಗನ್ನಾಥ ವಿಠಲ ತಿಳಿಸಿದದರೊಳಗೆ//37//