ಹರಿಕಥಾಮೃತಸಾರ/ದೈತ್ಯ ತಾರತಮ್ಯ ಸಂಧಿ

ವಿಕಿಸೋರ್ಸ್ದಿಂದ

ಶ್ರೀಶ ಮುಕ್ತಾಮುಕ್ತ ಸುರವರ ವಾಸುದೇವಗೆ ಭಕ್ತಿಯಲಿ

ಕಮಲಾಸನನು ಪೇಳಿದನು ದೈತ್ಯ ಸ್ವಭಾವ ಗುಣಗಳನು//


ಎನಗೆ ನಿನ್ನಲಿ ಭಕ್ತಿ ಜ್ಞಾನಗಳು ಎನಿತಿಹವೊ ಪ್ರಾಣನಲಿ ತಿಳಿಯದೆ

ಹನುಮದಾದಿ ಅವತಾರಗಳ ಭೇದಗಳ ಪೇಳುವವ ದನುಜ

ಘೋರಾಂಧಂತಮಸಿಗೆ ಯೋಗ್ಯನು ನಸಂಶಯ

ನಿನ್ನ ಬೈವರ ಕೊನೆಯ ನಾಲಿಗೆ ಪಿಡಿದು ಛೇದಿಪೆನು ಎಂದನು ಅಬ್ಜ ಭವ//1//


ಜ್ಞಾನ ಬಲ ಸುಖ ಪೂರ್ಣ ವ್ಯಾಪ್ತಗೆ ಹೀನ ಗುಣನೆಂಬುವನು

ಈಶ್ವರ ತಾನೇ ಎಂಬುವ ಸಚ್ಚಿದಾನಂದಾತ್ಮಗೆ ಉತ್ಪತ್ತಿ

ಶ್ರೀನಿತಂಬಿನಿಗೆ ಈಶಗೆ ವಿಯೋಗಾನು ಚಿಂತನೆ

ಛೇದ ಭೇದ ವಿಹೀನ ದೇಹಗೆ ಶಸ್ತ್ರಗಳ ಭಯ ಪೇಳುವವ ದೈತ್ಯ//2//


ಲೇಶ ಭಯ ಶೋಕಾದಿ ಶೂನ್ಯಗೆ ಕ್ಲೇಶಗಳು ಪೇಳುವವ

ರಾಮ ವ್ಯಾಸ ರೂಪಂಗಳಿಗೆ ಋಷಿ ವಿಪ್ರತ್ವ ಪೇಳುವವ

ದಾಶರಥಿ ಕೃಷ್ಣಾದಿ ರೂಪಕೆ ಕೇಶಖಂಡನೆ ಪೇಳ್ವ

ಮಕ್ಕಳಿಗೋಸುವ ಶಿವಾರ್ಚನೆಯ ಮಾಡಿದನು ಎಂಬುವವ ದೈತ್ಯ//3//


ಪಾಪ ಪರಿಹಾರಾರ್ಥ ರಾಮ ಉಮಾಪತಿಯ ನಿರ್ಮಿಸಿದ

ಭಗವದ್ರೂಪ ರೂಪಕೆ ಭೇದ ಚಿಂತನೆ ಮಾಳ್ಪ ಮಾನವನು

ಆಪಗಳು ಸದೀರ್ಥ ಗುರು ಮಾತಾಪಿತರ ಪ್ರಭು ಪ್ರತಿಮ ಭೂತ ದಯಾಪರರು

ಕಂಡವರೆ ದೇವರು ಎಂಬುವನೆ ದೈತ್ಯ//4//


ಸುಂದರ ಸ್ವಯಂವ್ಯಕ್ತವು ಚಿದಾನಂದ ರೂಪಗಳು ಎಂಬುವನು

ನರರಿಂದ ನಿರ್ಮಿತ ಈಶ್ವರಗೆ ಅಭಿನಮಿಸುತಿಹ ನರನು

ಕಂದುಗೊರಳ ದಿವಾಕರನು ಹರಿಯೊಂದೆ ಸೂರ್ಯ ಸುರೋತ್ತಮ

ಜಗದ್ವಂದ್ಯನೆಂಬುವ ವಿಷ್ಣು ದೂಷಣೆ ಮಾಡಿದವ ದೈತ್ಯ//5//


ನೇಮದಿಂದ ಅಶ್ವತ್ಥ ತುಳಸೀ ಸೋಮಧರನಲಿ ವಿಮಲ ಸಾಲಿಗ್ರಾಮಗಳನಿಟ್ಟು

ಅಭಿನಮಿಪ ನರ ಮುಕ್ತಿಯೋಗ್ಯ ಸದಾ

ಭೂಮಿಯೊಳು ಧರ್ಮಾರ್ಥ ಮುಕ್ತಿ ಸುಕಾಮ ಅಪೇಕ್ಷೆಗಳಿಂದ

ಸಾಲಿಗ್ರಾಮಗಳ ವ್ಯತಿರಿಕ್ತ ವಂದಿಸೆ ದುಃಖವೈದುವನು //6//


ವಿತ್ತ ಮಹಿಮನ ಬಿಟ್ಟು ಸುರರಿಗೆ ಪೃಥಕು ವಂದನೆ ಮಾಳ್ಪ ಮಾನವ

ದಿತಿಜನೆ ಸರಿ ಹರಿಯು ತಾ ಸಂಸ್ಥಿತನು ಎನಿಸನಲ್ಲಿ

ಚತುರ ಮುಖ ಮೊದಲಾದ ಅಖಿಳ ದೇವತೆಗಳೊಳಗಿಹನೆಂದು

ಲಕ್ಷ್ಮೀಪತಿಗೆ ವಂದಿಸೆ ಒಂದರೆಕ್ಷಣ ಬಿಟ್ಟಗಲನು ಅವರ//7//


ಶೈವ ಶೂದ್ರ ಕರಾರ್ಚಿತ ಮಹಾದೇವ ವಾಯು ಹರಿ ಪ್ರತಿಮೆ

ವೃಂದಾವನದಿ ಮಾಸದ್ವಯದೊಳಿಹ ತುಳಸಿ

ಅಪ್ರಸವ ಗೋ ವಿವಾಹವರ್ಜಿತ ಅಶ್ವತ್ಥಾ ವಿಟಪಿಗಳ

ಭಕ್ತಿಪೂರ್ವಕ ಸೇವಿಸುವ ನರ ನಿತ್ಯ ಶಾಶ್ವತ ದುಃಖವೈದುವನು//8//


ಕಮಲ ಸಂಭವ ಮುಖ್ಯ ಮನುಜೋತ್ತಮರ ಪರ್ಯಂತರದಿ ಮುಕ್ತರು

ಸಮ ಶತಾಯುಷ್ಯ ಉಳ್ಳವನು ಕಲಿ ಬ್ರಹ್ಮನುಪಾದಿ

ಕ್ರಮದಿ ನೀಚರು ದೈತ್ಯರು ನರಾಧಮರ ವಿಡಿದು

ಕುಲಕ್ಷ್ಮಿ ಕಲಿ ಅನುಪಮರು ಎನಿಸುವರು ಅಸುರರೊಳು ದ್ವೇಷಾದಿ ಗುಣದಿಂದ//9//


ವನಜ ಸಂಭವನ ಅಬ್ದ ಶತ ಒಬ್ಬನೇ ಮಹಾ ಕಲಿ ಶಬ್ದ ವಾಚ್ಯನು

ದಿನದಿನಗಳಲಿ ಬೀಳ್ವರು ಅಂಧಂತಮದಿ ಕಲಿ ಮಾರ್ಗ

ದನುಜರೆಲ್ಲರ ಪ್ರತೀಕ್ಷಿಸುತ ಬ್ರಹ್ಮನ ಶತಾಬ್ದಾಂತದಲಿ

ಲಿಂಗವು ಅನಿಲನ ಗದಾ ಪ್ರಹಾರದಿಂದಲಿ ಭಂಗವೈದುವದು//10//


ಮಾರುತನ ಗದೆಯಿಂದ ಲಿಂಗ ಶರೀರ ಪೋದ ಅನಂತರ

ತಮೋ ದ್ವಾರವೈದಿ ಸ್ವರೂಪ ದುಃಖಗಳ ಅನುಭವಿಸುತಿಹರು

ವೈರ ಹರಿ ಭಕ್ತರಲಿ ಹರಿಯಲಿ ತಾರತಮ್ಯದಲಿ ಇರುತಿಹುದು ಸಂಸಾರದಲ್ಲಿ

ತಮಸ್ಸಿನಲ್ಲಿ ಅತ್ಯಧಿಕ ಕಲಿಯಲ್ಲಿ//11//


ಜ್ನಾನವೆಂಬುದೇ ಮಿಥ್ಯ ಅಸಮೀಚೀನ ದುಃಖ ತರಂಗವೇ

ಸಮೀಚೀನ ಬುದ್ಧಿ ನಿರಂತರದಿ ಕಲಿಗಿಹುದು

ದೈತ್ಯರೊಳು ಹೀನಳೆನಿಪಳು ಶತ ಗುಣದಿ ಕಲಿ ಮಾನಿನಿಗೆ ಶತ ವಿಪ್ರಚಿತ್ತಿಗೆ

ಊನ ಶತ ಗುಣ ಕಾಲನೇಮಿಯೇ ಕಂಸನೆನಿಸಿದನು//12//


ಕಾಲನೇಮಿಗೆ ಪಂಚ ಗುಣದಿಂ ಕೀಳು ಮಧು ಕೈಟಭರು

ಜನ್ಮವ ತಾಳಿ ಇಳೆಯೊಳು ಹಂಸಡಿಭಿಕ ಆಹ್ವಯದಿ ಕರೆಸಿದರು

ಐಳ ನಾಮಕ ವಿಪ್ರಚಿತ್ತ ಸಮಾಳುಯೆನಿಪ

ಹಿರಣ್ಯ ಕಶ್ಯಪು ಶೂಲ ಪಾಣೀ ಭಕ್ತ ನರಕಗೆ ಶತ ಗುಣ ಅಧಮನು//13//


ಗುಣಗಳ ತ್ರಯ ನೀಚರೆನಿಸುವ ಕನಕ ಕಸಿಪುಗೆ ಹಾಟಕಾಂಬಗೆ

ಎಣೆಯೆನಿಪ ಮಣಿಮಂತಗಿಂತಲಿ ಕಿಂಚಿದೂನ ಬಕ

ದನುಜವರ ತಾರಕನು ವಿಂಶತಿ ಗುಣದಿ ನೀಚನು

ಲೋಕ ಕಂಟಕನು ಎನಿಪ ಶಂಬರ ತಾರಕಾಸುರಗೆ ಅಧಮ ಷಡ್ಗುಣದಿ//14//


ಸರಿಯೆನಿಸುವರು ಸಾಲ್ವನಿಗೆ ಸಂಕರನಿಗೆ ಅಧಮನು ಶತಗುಣದಿ ಶಂಬರಗೆ

ಷಡ್ಗುಣ ನೀಚನೆನಿಪ ಹಿಡಿಂಬಕಾ ಬಾಣಾಸುರನು ದ್ವಾಪರ ಕೀಚಕನು

ನಾಲ್ವರು ಸಮರು ದ್ವಾಪರನೆ ಶಕುನೀ ಕರೆಸಿದನು ಕೌರವಗೆ

ಸಹೋದರ ಮಾವನು ಅಹುದೆಂದು//15//


ನಮುಚಿಲ್ವರ ಪಾಕನಾಮಕ ಸಮರು ಬಾಣಾದ್ಯರಿಗೆ ದಶಗುಣ ನಮುಚಿ ನೀಚನು

ನೂರು ಗುಣದಿಂ ಅಧಮ ವಾತಾಪಿ

ಕುಮತಿ ಧೇನುಕ ನೂರು ಗುಣದಿಂದ ಅಮರರಿಪು ವಾತಾಪಿಗಧಮನು

ವಮನ ಧೇನುಕಗಿಂದಲಿ ಅರ್ಧ ಗುಣ ಅಧಮನು ಕೇಶಿ//16//


ಮತ್ತೆ ಕೇಶಿ ನಾಮಕ ತ್ರುಣಾವರ್ತ ಸಮ ಲವಣಾಸುರನು ಒಂಭತ್ತು ನೀಚ

ಅರಿಷ್ಟ ನಾಮಕ ಪಂಚ ಗುಣದಿಂದ

ದೈತ್ಯ ಸತ್ತಮ ಹಂಸ ಡಿಭಿಕ ಪ್ರಮತ್ತವೇನನು ಪೌಂಡ್ರಕನು

ಒಂಭತ್ತು ಗುಣದಿಂದ ಅಧಮ ಮೂವರು ಲವಣ ನಾಮಕರಿಗೆ//17//


ಈಶನೆ ನಾನೆಂಬ ಖಳ ದುಶ್ಯಾಶನ ವೃಷಸೇನ ದೈತ್ಯಾಗ್ರೇಸರ ಜರಾಸಂಧ ಸಮ

ಪಾಪಿಗಳೊಳು ಅತ್ಯಧಿಕ

ಕಂಸ ಕೂಪ ವಿಕರ್ಣ ಸರಿ ರುಗ್ಮೀ ಶತಾಧಮ

ರುಗ್ಮಿಗಿಂತ ಮಹಾಸುರನು ಶತಧನ್ವಿ ಕಿರ್ಮೀರರು ಶತಾಧಮರು//18//


ಮದಿರಪಾನೀ ದೈತ್ಯ ಗಣದೊಳಗೆ ಅಧಮರೆನಿಪರು ಕಾಲಿಕೇಯರು

ಅಧಿಕರಿಗೆ ಸಮರು ಅಹರು ದೇವ ಆವೇಶಬಲದಿಂದ

ವಾದನ ಪಾಣೀ ಪಾದ ಶ್ರೋತ್ರೀಯ ಗುದ ಉಪಸ್ಥ ಘ್ರಾಣ ತ್ವಕ್ಮನಕೆ

ಅಧಿಪ ದೈತ್ಯರು ನೀಚರೆನಿಪರು ಕಾಲಿಕೇಯರಿಗೆ//19//


ಜ್ಞಾನ ಕರ್ಮ ಇಂದ್ರಿಯಗಳಿಗೆ ಅಭಿಮಾನಿ ಕಲ್ಯಾದಿ ಅಖಿಳ ದೈತ್ಯರು

ಹೀನ ಕರ್ಮವ ಮಾಡಿ ಮಾಡಿಸುತಿಹರು ಸರ್ವರೊಳು

ವಾಣಿ ಭಾರತಿ ಕಮಲಭವ ಪವಮಾನರಿವರು ಅಚ್ಚಿನ್ನ ಭಕ್ತರು

ಪ್ರಾಣಾಸುರ ಆವೇಶ ರಹಿತರು ಆಖನಾಶ್ಮ ಸಮ//20//


ಹುತವಹಾಕ್ಷಾದಿ ಅಮರರೆಲ್ಲರು ಯುತರು ಕಲ್ಯಾವೇಶ

ವಿಧಿ ಮಾರುತಿ ಸರಸ್ವತಿ ಭಾರತಿಯ ಅವತಾರದೊಳಗಿಲ್ಲ

ಕೃತ ಪುಟ ಅಂಜಲಿಯಿಂದ ತನ್ನಯ ಪಿತನ ಸಮ್ಮುಖದಲ್ಲಿ ನಿಂದು ಆನತಿಸಿ

ಬಿನ್ನೈಸಿದನು ಎನ್ನೊಳು ಕೃಪೆಯ ಮಾಡೆಂದು//21//


ದ್ವೇಷಿ ದೈತ್ಯರ ತಾರತಮ್ಯವು ದೂಷಣೆಯು ಭೂಷಣಗಳೆನ್ನದೆ

ದೋಷವೆಂಬುವ ದ್ವೇಷಿ ನಿಶ್ಚಯ

ಇವರ ನೋಡಲ್ಕೆ ಕ್ಲೇಶಗಳನು ಐದುವನು ಬಹು ವಿಧ

ಸಂಶಯವು ಪಡ ಸಲ್ಲ ವೇದವ್ಯಾಸ ಗರುಡ ಪುರಾಣದಲ್ಲಿ ಪೇಳಿದನು ಋಷಿಗಳಿಗೆ//22//


ಜಾಲಿ ನೆಗ್ಗಿಲು ಕ್ಷುದ್ರ ಶಿಲೆ ಬರಿಗಾಲ ಪುರುಷನ ಭಾದಿಪವು

ಚಮ್ಮೊಳಿಗೆಯ ಮೆಟ್ಟಿದವಗೆ ಉಂಟೆ ಕಂಟಕಗಳ ಭಯ

ಚೇಳು ಸರ್ಪವ ಕೊಂದ ವಾರ್ತೆಯ ಕೇಳಿ ಮೋದಿಪರಿಗೆ ಇಲ್ಲವು ಅಘ

ಯಮನ ಆಳುಗಳ ಭಯವಿಲ್ಲ ದೈತ್ಯರ ನಿಂದಿಸುವ ನರಗೆ//23//


ಪುಣ್ಯ ಕರ್ಮವ ಪುಷ್ಕರಾದಿ ಹಿರಣ್ಯ ಗರ್ಭಾಂತರ್ಗತ

ಬ್ರಹ್ಮಣ್ಯ ದೇವನಿಗೆ ಅರ್ಪಿಸುತಲಿರು

ಕರ್ಮಗಳ ದುಃಖವ ಕಲಿ ಮುಖಾದ್ಯರಿಗೆ ಉಣ್ಣಲೀವನು

ಸಕಲ ಲೋಕ ಶರಣ್ಯ ಶಾಶ್ವತ ಮಿಶ್ರ ಜನರಿಗೆ ಮಿಶ್ರ ಫಲವೀವ//24//


ತ್ರಿವಿಧ ಗುಣಗಳ ಮಾಣಿ ಶ್ರೀ ಭಾರ್ಗವಿ ರಮಣ ಗುಣ ಗುಣಿಗಳೊಳಗೆ

ಅವರವರ ಯೋಗ್ಯತೆ ಕರ್ಮಗಳನು ಅನುಸರಿಸಿ ಕರ್ಮ ಫಲ

ಸ್ವವಶರು ಆದ ಅಮರಾಸುರರ ಗಣಕೆ ಅವಧಿಯಿಲ್ಲದೆ ಕೊಡುವ

ದೇವ ಪ್ರವರವರ ಜಗನ್ನಾಥ ವಿಠಲ ವಿಶ್ವ ವ್ಯಾಪಕನು//25//