ಹರಿಕಥಾಮೃತಸಾರ/ಬಿಂಬಾಪರೋಕ್ಷ ಸಂಧಿ (ಬಿಂಬೋಪಾಸನ; ಬಿಂಬಪ್ರಕರಣ; ಬಿಂಬಪ್ರತಿಬಿಂಬ)
ಮುಕ್ತ ಬಿಂಬನು ತುರಿಯ ಜೀವನ್ಮುಕ್ತ ಬಿಂಬನು ವಿಶ್ವ
ಶ್ರುತಿ ಸಂಸಕ್ತ ಬಿಂಬನು ತೈಜಸನು ಅಸೃಜ್ಯರಿಗೆ ಪ್ರಾಜ್ಞ
ಶಕ್ತನಾದರು ಸರಿಯೆ ಸರ್ವ ಉದ್ರಕ್ತ ಮಹಿಮನು
ದುಃಖ ಸುಖಗಳ ವಕ್ತೃ ಮಾಡುತಲಿಪ್ಪ ಕಲ್ಪಾಂತದಲಿ ಬಪ್ಪರಿಗೆ//1//
ಅಣ್ಣ ನಾಮಕ ಪ್ರಕೃತಿಯೊಳಗೆ ಅಚ್ಚಿನ್ನನು ಆಗಿಹ ಪ್ರಾಜ್ಞನಾಮದಿ
ಸೊನ್ನ ಒಡಲ ಮೊದಲಾದ ಅವರೊಳು ಅನ್ನಾದ ತೈಜಸನು
ಅನ್ನದ ಅಂಬುದ ನಾಭ ವಿಶ್ವನು ಭಿನ್ನ ನಾಮ ಕ್ರಿಯೆಗಳಿಂದಲಿ
ತನ್ನೊಳಗೆ ತಾ ರಮಿಪ ಪೂರ್ಣಾನಂದ ಜ್ಞಾನಮಯ//2//
ಬೂದಿಯೊಳಗೆ ಅಡಗಿಪ್ಪ ಅನಳನ ಉಪಾದಿ ಚೇತನ ಪ್ರಕೃತಿಯೊಳು
ಅನ್ನಾದ ಅನ್ನಾಹ್ವಯದಿ ಕರೆಸುವ ಬ್ರಹ್ಮ ಶಿವ ರೂಪಿ
ಓದನ ಪ್ರದ ವಿಷ್ಣು ಪರಮ ಆಹ್ಲಾದವ ಈವುತ
ತೃಪ್ತಿ ಬಡಿಸುವ ಅಗಾಧ ಮಹಿಮನ ಚಿತ್ರ ಕರ್ಮವನು ಆವ ಬಣ್ಣಿಸುವ//3//
ನಾದ ಭೋಜನ ಶಬ್ದದೊಳು ಬಿಂಬು ಓದನ ಉದಕದೊಳಗೆ
ಘೋಷ ಅನುವಾದದೊಳು ಶಾಂತಾಖ್ಯ ಜಠರಾಗ್ನಿಯೊಳಗೆ ಇರುತಿಪ್ಪ
ವೈದಿಕ ಸುಶಬ್ದದೊಳು ಪುತ್ರ ಸಹೋದರ ಅನುಗರೊಳು ಅತಿ ಶಾಂತನ ಪಾದ ಕಮಲ
ಅನವರತ ಚಿಂತಿಸು ಈ ಪರಿಯಲಿಂದ//4//
ವೇದ ಮಾನಿ ರಮಾ ಅನುಪಾಸ್ಯ ಗುಣ ಉದಧಿ ಗುಣ ತ್ರಯ ವಿವರ್ಜಿತ
ಸ್ವೋದರಸ್ಥಿತ ನಿಖಿಳ ಬ್ರಹ್ಮಾಂಡ ಆದಿ ವಿಲಕ್ಷಣನು
ಸಾಧು ಸಮ್ಮತವೆನಿಸುತಿಹ ನಿಷುಸೀದ ಗಣಪತಿಯೆಂಬ ಶ್ರುತಿ ಪ್ರತಿಪಾದಿಸುವುದು
ಅನವರತ ಅವನ ಗುಣ ಪ್ರಾಂತ ಗಾಣದಲೆ//5//
ಕರೆಸುವನು ಮಾಯಾ ರಮಣ ತಾ ಪುರುಷ ರೂಪದಿ ತ್ರಿಸ್ಥಳಗಳೊಳು
ಪರಮ ಸತ್ಪುರುಷಾರ್ಥದ ಮಹತ್ತತ್ವದೊಳಗಿದ್ದು
ಸರಸಿಜ ಭವಾಂಡ ಸ್ಥಿತ ಸ್ತ್ರೀ ಪುರುಷ ತನ್ಮಾತ್ರಗಳ
ಏಕೋತ್ತರ ದಶ ಇಂದ್ರಿಯಗಳ ಮಹಾ ಭೂತಗಳ ನಿರ್ಮಿಸಿದ//6//
ಈ ಶರೀರಗ ಪುರುಷ ತ್ರಿ ಗುಣದಿ ಸ್ತ್ರೀ ಸಹಿತ ತಾನಿದ್ದು
ಜೀವರಿಗೆ ಆಶೆ ಲೋಭ ಅಜ್ಞಾನ ಮದ ಮತ್ಸರ ಕುಮೋಹ ಕ್ಷುಧ
ಹಾಸ ಹರ್ಷ ಸುಷುಪ್ತಿ ಸ್ವಪ್ನ ಪಿಪಾಸ ಜಾಗ್ರತಿ ಜನ್ಮ ಸ್ಥಿತಿ ಮೃತಿ
ದೋಷ ಪುಣ್ಯ ಜಯಾಪಜಯ ದ್ವಂದ್ವಗಳ ಕಲ್ಪಿಸಿದ//7//
ತ್ರಿವಿಧ ಗುಣಮಯ ದೇಹ ಜೀವಕೆ ಕವಚದಂದದಿ ತೊಡಿಸಿ
ಕರ್ಮ ಪ್ರವಹದೊಳು ಸಂಚಾರ ಮಾಡಿಸುತಿಪ್ಪ ಜೇವರನಾ
ಕವಿಸಿ ಮಾಯಾರಮಣ ಮೋಹವ ಭವಕೆ ಕಾರಣನಾಗುವನು
ಸಂಶ್ರವಣ ಮನನವ ಮಾಳ್ಪರಿಗೆ ಮೋಚಕನು ಎನಿಸುತಿಪ್ಪ//8//
ಸಾಶನಾಹ್ವಯ ಸ್ತ್ರೀ ಪುರುಷರೊಳು ವಾಸವಾಗಿಹನು ಎಂದರಿದು
ವಿಶ್ವಾಸಪೂರ್ವಕ ಭಜಿಸಿ ತೋಷಿಸು ಸ್ವಾವರೋತ್ತಮರ
ಕ್ಲೇಶ ನಾಶನ ಅಚಲಗಳೊಳು ಪ್ರಕಾಶಿಸುತಲಿಹ
ಅನಶನ ರೂಪ ಉಪಾಸನವ ಮಾಳ್ಪರಿಗೆ ತೋರ್ಪನು ತನ್ನ ನಿಜರೂಪ//9//
ಪ್ರಕಾರಾಂತರ ಚಿಂತಿಸುವುದು ಈ ಪ್ರಕೃತಿಯೊಳು ವಿಶ್ವಾದಿ ರೂಪವ
ಪ್ರಕಟ ಮಾಳ್ಪೆನು ಯಥಾ ಮತಿಯೊಳು ಗುರುಕೃಪಾಬಲದಿ
ಮುಕುರ ನಿರ್ಮಿತ ಸದನದೊಳು ಪೊಗೆ ಸ್ವಕೀಯ ರೂಪವ ಕಾಂಬ ತೆರದಂತೆ
ಅಕುಟಿಲಾತ್ಮ ಚರಾಚರದಿ ಸರ್ವತ್ರ ತೋರುವನು//10//
ಪರಿಚ್ಛೇದ ತ್ರಯ ಪ್ರಕೃತಿಯೊಳಗೆ ಇರುತಿಹನು ವಿಶ್ವಾದಿ ರೂಪಕ
ಧರಿಸಿ ಆತ್ಮಾದಿ ತ್ರಿ ರೂಪವ ಈಷಣತ್ರಯದಿ
ಸುರುಚಿ ಜ್ಞಾನಾತ್ಮ ಸ್ವರೂಪದಿ ತುರಿಯ ನಾಮಕ ವಾಸುದೇವನ ಸ್ಮರಿಸು
ಮುಕ್ತಿ ಸುಖ ಪ್ರದಾಯಕನು ಈತನಹುದೆಂದು//11//
ಕಮಲಸಂಭವ ಜನಕ ಜಡ ಜಂಗಮರ ಒಳಗೆ ನೆಲೆಸಿದ್ದು
ಕ್ರಮ ವ್ಯುತ್ಕ್ರಮದಿ ಕರ್ಮವ ಮಾಡಿ ಮಾಡಿಸುತಿಪ್ಪ ಬೇಸರದೆ
ಕ್ಷಮ ಕ್ಷಾಮ ಕ್ಷಮೀಹನಾಹ್ವಯ ಸುಮನಸ ಅಸುರರೊಳಗೆ
ಅಹಂ ಮಮನಮಮ ಎಂದು ಈ ಉಪಾಸನೆ ಏವ ಪ್ರಾಂತದಲಿ//12//
ಈ ಸಮಸ್ತ ಜಗತ್ತು ಈಶಾವ್ಯಾಸವು ಎನಿಪುದು
ಕಾರ್ಯ ರೂಪವು ನಾಶವಾದರು ನಿತ್ಯವೇ ಸರಿ ಕಾರಣ ಪ್ರಕೃತಿ
ಶ್ರೀಶಗೆ ಜಡ ಪ್ರತಿಮೆಯೆನಿಪುದು ಮಾಸದು ಒಮ್ಮಿಗು ಸನ್ನಿಧಾನವು
ವಾಸವಾಗಿಹ ನಿತ್ಯ ಶಾಲಗ್ರಾಮದ ಉಪಾದಿ//13//
ಏಕಮೇವಾದ್ವಿತೀಯ ರೂಪ ಅನೇಕ ಜೀವರೊಳಿದ್ದು
ತಾ ಪ್ರತ್ಯೇಕ ಕರ್ಮವ ಮಾಡಿ ಮೋಹಿಸುತಿಪ್ಪ ತಿಳಿಸದಲೆ
ಮೂಕ ಬಧಿರ ಅಂಧಾದಿ ನಾಮಕ ಈ ಕಳೇವರದೊಳಗೆ ಕರೆಸುವ
ಮಾಕಳತ್ರನ ಲೌಕಿಕ ಮಹಾ ಮಹಿಮೆಗೆ ಏನೆಂಬೆ//14//
ಲೋಕ ಬಂಧು ಲೋಕನಾಥ ವಿಶೋಕ ಭಕ್ತರ ಶೋಕ ನಾಶನ
ಶ್ರೀ ಕರಾರ್ಚಿತ ಸೋಕದಂದದಲಿಪ್ಪ ಸರ್ವರೊಳು
ಸಾಕುವನು ಸಜ್ಜನರ ಪರಮ ಕೃಪಾಕರ ಈಶ ಪಿನಾಕಿ ಸನ್ನುತ
ಸ್ವೀಕರಿಸುವ ಅನತರು ಕೊಟ್ಟ ಸಮಸ್ತ ಕರ್ಮಗಳ//15//
ಅಹಿತ ಪ್ರತಿಮೆಗಳು ಎನಿಸುವವು ದೇಹ ಗೇಹ ಅಪತ್ಯ ಸತಿ ಧನ
ಲೋಹ ಕಾಷ್ಠ ಶಿಲಾಮೃದ್ ಆತ್ಮಕವು ಆದ ದ್ರವ್ಯಗಳು
ನೇಹ್ಯದಲಿ ಪರಮಾತ್ಮ ಎನಗೆ ಇತ್ತೀಹನು ಎಂದರಿದು ಅನುದಿನದಿ
ಸಮ್ಮೋಹಕೆ ಒಳಗಾಗದಲೆ ಪೂಜಿಸು ಸರ್ವ ನಾಮಕನ//16//
ಶ್ರೀ ತರುಣಿ ವಲ್ಲಭಗೆ ಜೀವರು ಚೇತನ ಪ್ರತಿಮೆಗಳು
ಓತಪ್ರೋತನಾಗಿದ್ದು ಎಲ್ಲರೊಳು ವ್ಯಾಪಾರ ಮಾಡುತಿಹ
ಹೋತ ಸರ್ವ ಇಂದ್ರಿಯಗಳೊಳು ಸಂಪ್ರೀತಿಯಿಂದ ಉಂಡುಣಿಸಿ ವಿಷಯ
ನಿರ್ವಾತ ದೇಶಗ ದೀಪದಿಂದಲಿಪ್ಪ ನಿರ್ಭಯದಿ//17//
ಭೂತ ಸೋಕಿದ ಮಾನವನು ಬಹು ಮಾತನಾಡುವ ತೆರದಿ
ಮಹಾ ಭೂತ ವಿಷ್ಣ್ವಾವೇಷದಿಂದಲಿ ವರ್ತಿಪುದು ಜಗವು
ಕೈತವೋಕ್ತಿಗಳಲ್ಲ ಶೇಷ ಫಣಾತ ಪತ್ರಗೆ
ಜೀವ ಪಂಚಕ ವ್ರಾತವೆಂದಿಗು ಭಿನ್ನ ಪಾದಾಹ್ವಯದಿ ಕರೆಸುವುದು//18//
ದಿವಿಯೊಳಿಪ್ಪವು ಮೂರು ಪಾದಗಳು ಅವನಿಯೊಳಗಿಹುದೊಂದು
ಈ ವಿಧ ಕವಿಭಿರೀಡಿತ ಕರೆಸುವ ಚತುಷ್ಪಾತು ತಾನೆಂದು
ಇವನ ಪಾದ ಚತುಷ್ಟಯಗಳ ಅನುಭವಕೆ ತಂದು ನಿರಂತರದಿ
ಉದ್ಧವನ ಸಖ ಸರ್ವಾಂತರಾತ್ಮಕನು ಎಂದು ಸ್ಮರಿಸುತಿರು//19//
ವಂಶ ಬಾಗಿಲು ಬೆಳೆಯೆ ಕಂಡು ನರಾಂಶದಲಿ ಶೋಭಿಪುದು
ಬಾಗದ ವಂಶ ಪಾಶದಿ ಕಟ್ಟಿ ಏರುಪ ಡೊಂಬ ಮಸ್ತಕಕೆ
ಕಂಸ ಮರ್ದನ ದಾಸರಿಗೆ ನಿಸ್ಸಂಶಯದಿ ಎರಗದಲೆ
ನಾ ವಿದ್ವಾಂಸನು ಎಂದು ಅಹಂಕರಿಸೆ ಭವಗುಣದಿ ಬಂಧಿಸುವ//20//
ಜ್ಯೋತಿ ರೂಪಗೆ ಪ್ರತಿಮೆಗಳು ಸಾಂಕೇತಿಕ ಆರೋಪಿತ
ಸುಪೌರುಷ ಧಾತು ಸಪ್ತಕ ಧೈರ್ಯ ಶೌರ್ಯ ಔದಾರ್ಯ ಚಾತುರ್ಯ
ಮಾತು ಮಾನ ಮಹತ್ವ ಸಹನ ಸುನೀತಿ ನಿರ್ಮಲ ದೇಶ ಬ್ರಾಹ್ಮಣ
ಭೂತ ಪಂಚಕ ಬುದ್ಧಿ ಮೊದಲಾದ ಇಂದ್ರಿಯ ಸ್ಥಾನ//21//
ಜೀವ ರಾಶಿಯೊಳು ಅಮೃತ ಶಾಶ್ವತ ಸ್ಥಾವರಗಳೊಳು ಸ್ಥಾಣು ನಾಮಕ
ಆವಕಾಲದಲಿಪ್ಪ ಅಜಿತಾನಂತನು ಎಂದೆನಿಸಿ
ಗೋವಿದಾಂಪತಿ ಗಾಯನಪ್ರಿಯ ಸಾವಯವ ಸಹಸ್ರ ನಾಮ
ಪರಾವರೇಶ ಪವಿತ್ರಕರ್ಮ ವಿಪಶ್ಚಿತ ಸುಸಾಮ//22//
ಮಾಧವನ ಪೂಜಾರ್ಥವಾಗಿ ನಿಷೇಧ ಕರ್ಮವ ಮಾಡಿ
ಧನ ಸಂಪಾದಿಸಲು ಸತ್ಪುಣ್ಯ ಕರ್ಮಗಳು ಎನಿಸಿಕೊಳುತಿಹವು
ಸ್ವೋದರಂಭರಣಾರ್ಥ ನಿತ್ಯಡಿ ಸಾಧು ಕರ್ಮವ ಮಾಡಿದರು ಸರಿ
ಯೈದುವನು ದೇಹಾಂತರವ ಸಂದೇಹವು ಇನಿತಿಲ್ಲ//23//
ಅಪಗತಾಶ್ರಯ ಎಲ್ಲರೊಳಗಿದ್ದು ಉಪಮನು ಎನಿಪ ಅನುಪಮ ರೂಪನು
ಶಫರ ಕೇತನ ಜನಕ ಮೋಹಿಪ ಮೋಹಕನ ತೆರದಿ
ತಪನ ಕೋಟಿ ಸಮಪ್ರಭಾ ಸಿತವಪುವು ಎನಿಪ ಕೃಷ್ಣಾದಿ ರೂಪಕ
ವಿಪಗಳಂತೆ ಉಂಡುಣಿಪ ಸರ್ವತ್ರದಲಿ ನೆಲೆಸಿದ್ದು//24//
ಅಡವಿಯೊಳು ಬಿತ್ತದಲೆ ಬೆಳೆದಿಹ ಗಿಡದ ಮೂಲಿಕೆ
ಸಕಲ ಜೀವರ ಒಡಲೊಳಿಪ್ಪ ಆಮಯವ ಪರಿಹರಗೈಸುವಂದದಲಿ
ಜಡಜ ಸಂಭವ ಜನಕ ತ್ರಿಜಗದ್ವಡೆಯ ಸಂತೈಸೆನಲು
ಅವರು ಇದ್ದೆಡೆಗೆ ಬಂದೊದಗುವನು ಭಕ್ತರ ಭಿಡೆಯ ಮೀರದಲೆ//25//
ಶ್ರೀ ನಿಕೇತನ ತನ್ನವರ ದೇಹ ಅನುಬಂಧಿಗಳಂತೆ ಅವ್ಯವಧಾನದಲಿ ನೆಲೆಸಿಪ್ಪ
ಸರ್ವದ ಸಕಲ ಕಾಮದನು
ಕೊಟ್ಟರು ಭುಂಜಿಸುತ ಮದ್ದಾನೆಯಂದದಿ ಸಂಚರಿಸು
ಮತ್ತೇನು ಬೇಡದೆ ಭಜಿಸುತಿರು ಅವನ ಅಂಘ್ರಿ ಕಮಲಗಳ//26//
ಬೇಡದಲೆ ಕೊಡುತಿಪ್ಪ ಸುರರಿಗೆ ಬೇಡಿದರೆ ಕೊಡುತಿಹನು ನರರಿಗೆ
ಬೇಡಿ ಬಳಲುವ ದೈತ್ಯರಿಗೆ ಕೊಡನು ಒಮ್ಮೆ ಪುರುಷಾರ್ಥ
ಮೂಢರು ಅನುದಿನ ಧರ್ಮ ಕರ್ಮವ ಮಾಡಿದರು ಸರಿ
ಅಹಿಕ ಫಲಗಳ ನೀಡಿ ಉನ್ಮತ್ತರನು ಮಾಡಿ ಮಹಾ ನಿರಯವೀವ//27//
ತರಣಿ ಸರ್ವತ್ರದಲಿ ಕಿರಣವ ಹರಹಿ ತತ್ತದ್ ವಸ್ತುಗಳನು ಸರಿಸಿ
ಅದರ ಅದರಂತೆ ಛಾಯವ ಕಂಗೊಳಿಪ ತೆರದಿ
ಅರಿಧರ ಏಜಾನೇಜ ಜಗದೊಳಗಿರುವ ಛಾಯಾ ತಪವೆನಿಸಿ
ಸಂಕರುಷಣಾಹ್ವಯ ಅವರವರ ಯೋಗ್ಯತೆಗಳಂತೆ ಇಪ್ಪ//28//
ಈ ವಿಧದಿ ಸರ್ವತ್ರ ಲಕ್ಷ್ಮೀ ಭೂ ವನಿತೆಯರ ಕೂಡಿ
ತನ್ನ ಕಳಾ ವಿಶೇಷಗಳ ಎಲ್ಲ ಕಡೆಯಲಿ ತುಂಬಿ ಸೇವ್ಯತಮ
ಸೇವಕನು ತಾನೆನಿಸಿ ಮಾಯಾದೇವಿ ರಮಣ
ಪ್ರವಿಷ್ಟ ರೂಪವ ಸೇವೆ ಮಾಳ್ಪ ಶರಣ್ಯ ಶಾಶ್ವತ ಕರುಣಿ ಕಮಲಾಕ್ಷ//29//
ಪ್ರಣವ ಕಾರಣ ಕಾರ್ಯ ಪ್ರತಿಪಾದ್ಯನು ಪರಾತ್ಪರ
ಚೇತನಾಚೇತನ ವಿಲಕ್ಷಣ ಅನಂತ ಸತ್ಕಲ್ಯಾಣ ಗುಣಪೂರ್ಣ
ಅನುಪಮನು ಉಪಾಸಿತ ಗುಣ ಉದಧಿ ಅನಘ ಅಜಿತ ಅನಂತ
ನಿಷ್ಕಿಂಚನ ಜನಪ್ರಿಯ ನಿರ್ವಿಕಾರ ನಿರಾಶ್ರಯ ಅವ್ಯಕ್ತಾ//30//
ಗೋಪ ಭೀಯ ಭವಾಂಧಕಾರಕೆ ದೀಪವಟ್ಟಿಗೆ
ಸಕಲ ಸುಖ ಸದನ ಉಪರಿಗ್ರಹವು ಎನಿಸುತಿಪ್ಪುದು ಹರಿಕಥಾಮೃತವು
ಗೋಪತಿ ಜಗನ್ನಾಥ ವಿಠಲ ಸಮೀಪದಲಿ ನೆಲೆಸಿದ್ದು
ಭಕ್ತರನು ಆಪವರ್ಗರ ಮಾಡುವನು ಮಹ ದುಃಖ ಭಯದಿಂದ//31//