ಹರಿಕಥಾಮೃತಸಾರ/ವಿಭೂತಿ ಸಂಧಿ
ಶ್ರೀ ತರುಣಿವಲ್ಲಭನ ಪರಮವಿ ಭೂತಿರೂಪವ ಕಂಡ ಕಂಡ ಲ್ಲೀ ತೆರದಿ ಚಿಂತಿಸುತ ಮನದಲಿ ನೋಡು ಸಂಭ್ರಮದಿ |
ನೀತ ಸಾಧಾರಣ ವಿಶೇಷ ಸ ಜಾತಿ ನೈಜಾಹಿತವು ಸಹಜ ವಿ ಜಾತಿ ಖಂಡಾಖಂಡ ಬಗೆಗಳನರಿತು ಬುಧರಿಂದ || ೧ ||
ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನದ ರೊಳು ಸಜಾತಿ ವಿಜಾತಿ ಸಾಧಾರಣವಿಶೇಷಗಳು |
ತಿಳಿದು ತತ್ತತ್ ಸ್ಥಾನದಲಿ ವೆ ಗ್ಗಳಿಸಿ ಹಬ್ಬಿದ ಮನದಿ ಪೂಜಿಸು ತಲವವ್ಯಾಪ್ತನ ರೂಪಗಳ ನೋಡುತಲೆ ಹಿಗ್ಗುತಿರು || ೨ ||
ಪ್ರತಿಮೆ ಶಾಲಗ್ರಾಮ ಗೋಭ್ಯಾ ಗತ ಅತಿಥಿ ಶ್ರೀತುಳಸಿ ಪಿಪ್ಪಲ ಯತಿ ವನಸ್ಥ ಗೃಹಸ್ಥ ವಟು ಯಜಮಾನ ಸ್ವಪರಜನ |
ಪೃಥಿವಿ ಜಲ ಶಿಖಿ ಪವನ ತಾರಾ ಪಥ ನವಗ್ರಹ ಯೋಗಕರಣ ಭ ತಿಥಿ ಸಿತಾಸಿತ ಪಕ್ಷ ಸಂಕ್ರಮಣವನಧಿಷ್ಠಾನ || ೩ ||
ಕಾದ ಕಾಂಚನದೊಳಗೆ ಶೋಭಿಪ ಆದಿತೇಯಾಸ್ಯನ ತೆರದಿ ಲ ಕ್ಷ್ಮೀಧವನು ಪ್ರತಿದಿನದಿ ಶಾಲಗ್ರಾಮದೊಳಗಿಪ್ಪ |
ಐದುಸಾವಿರ ಮೇಲೆ ಮೂವ ತ್ತೈದಧಿಕ ಐನೂರು ರೂಪದಿ ಭೂಧರಗಳಭಿಮಾನಿ ದಿವಿಜರೊಳಿಪ್ಪನನವರತ || ೪ ||
ಶ್ರೀರಮಣ ಪ್ರತಿಮೆಗಳೊಳಗೆ ಹದಿ ಮೂರಧಿಕವಾಗಿಪ್ಪ ಮೇಲೈ ನೂರು ರೂಪವ ಧರಿಸಿ ಇಪ್ಪನಾಹಿತಾಚಲದಿ |
ದಾರು ಮಥನವ ಗೈಯೆ ಪಾವಕ ತೋರುವಂತೆ ಪ್ರತೀಕ ಸುರರೊಳು ತೋರುತಿಪ್ಪನು ತತ್ತದಾಕಾರದಲಿ ನೋಳ್ಪರಿಗೆ || ೫ ||
ಕರಣ ನೀಯಾಮಕನು ತಾನುಪ ಕರಣದೊಳಗೈವತ್ತೆರಡು ಸಾ ವಿರದ ಹದಿನಾಲ್ಕಧಿಕಶತರೂಪಂಗಳನೆ ಧರಿಸಿ |
ಇರುತಿಹನು ತದ್ರೂಪನಾಮಗ ಳರಿತು ಪೂಜಿಸುತಿಹರ ಪೂಜೆಯ ನಿರುತ ಕೈಗೊಂಬನು ತೃಷಾರ್ತನು ಜಲವ ಕೊಂಬಂತೆ || ೬ ||
ಬಿಂಬರೂಪನು ಈ ತೆರದಿ ಜಡ ಪೊಂಬಸಿರ ಮೊದಲಾದ ಸುರರೊಳ ಗಿಂಬುಗೊಂಡಿಹನೆಂದರಿದು ಧರ್ಮಾರ್ಥ ಕಾಮಗಳ |
ಹಂಬಲಿಸದನುದಿನದಿ ವಿಶ್ವಕು ಟುಂಬಿ ಕೊಟ್ಟ ಕಣಾನ್ನ ಕುತ್ಸಿತ ಕಂಬಳಿಯೆ ಸೌಭಾಗ್ಯವೆಂದವನಂಘ್ರಿಗಳ ಭಜಿಸು || ೭ ||
ವಾರಿಯೊಳಗಿಪ್ಪತ್ತನಾಲಕು ಮೂರೆರಡು ಸಾವಿರದ ಮೇಲ್ಮು ನ್ನೂರ ಹದಿನೇಳೆನಿಪ ರೂಪವು ಶ್ರೀತುಳಸಿದಳದಿ |
ನೂರ ಅರವತ್ತೊಂದು ಪುಷ್ಪದಿ ಮೂರಧಿಕ ದಶದೀಪದೊಳು ನಾ ನೂರಮೂರು ಸುಮೂರ್ತಿಗಳು ಗಂಧದೊಳಗಿರುತಿಹವು || ೮ ||
ಅಷ್ಟದಳಸದ್ ಹೃದಯ ಕಮಲಾ ಧಿಷ್ಠಿತನು ತಾನಾಗಿ ಸರ್ವೋ ತ್ಕೃಷ್ಟಮಹಿಮನು ದಳಗಳಲಿ ಸಂಛರಿಸುತೊಳಗಿದ್ದು |
ದುಷ್ಟರಿಗೆ ದುರ್ಬುದ್ಧಿ ಕರ್ಮವ ಶಿಷ್ಟರಿಗೆ ಸುಜ್ಞಾನ ಧರ್ಮ ಸು ಪುಷ್ಟಿಗೈಸುತ ಸಂತಯಿಪ ನಿರ್ದುಷ್ಟ ಸುಖಪೂರ್ಣ || ೯ ||
ವಿತ್ತದೇಹಾಗಾರ ದಾರಾ ಪತ್ಯ ಮಿತ್ರಾದಿಗಳೊಳಗೆ ಗುಣ ಚಿತ್ತ ಬುದ್ಧ್ಯಾದಿಂದ್ರಿಯಗಳೊಳು ಜ್ಞಾನ ಕರ್ಮದೊಳು |
ತತ್ತದಾಹ್ವಯನಾಗಿ ಕರೆಸುತ ಸತ್ಯ ಸಂಕಲ್ಪಾನುಸಾರದಿ ನಿತ್ಯದಲಿ ತಾ ಮಾಡಿ ಮಾಡಿಪನೆಂದು ಸ್ಮರಿಸುತಿರು || ೧೦ ||
ಭಾವದ್ರವ್ಯಕ್ರಿಯೆಗಳೆನಿಸುವ
ಈ ವಿಧಾದ್ವೈತತ್ರಯಂಗಳ
ಭಾವಿಸುತ ಸದ್ಭಕ್ತಿಯಲಿ ಸರ್ವತ್ರ ಮರೆಯದಲೆ |
ತಾವಕನು ತಾನೆಂದು ಪ್ರತಿದಿನ
ಸೇವಿಸುವ ಭಕ್ತರಿಗೆ ತನ್ನನು
ಈವ ಕಾವ ಕೃಪಾಳು ಕರಿವರಗೊಲಿದ ತೆರನಂತೆ || ೧೧ ||
ಬಾಂದಳವೆ ಮೊದಲಾದುದರೊಳೊಂ
ದೊಂದರಲಿ ಪೂಜಾಸುಸಾಧನ
ವೆಂದೆನಿಸುವ ಪದಾರ್ಥಗಳು ಬಗೆಬಗೆಯ ನೂತನದಿ |
ಸಂದಣಿಸಿಕೊಂಡಿಹವು ಧ್ಯಾನಕೆ
ತಂದಿನಿತು ಚಿಂತಿಸಿ ಸದಾ ಗೋ
ವಿಂದನರ್ಚಿಸಿ ನೋಡು ನಲಿನಲಿದಾಡು ಕೊಂಡಾಡು || ೧೨ ||
ಜಲಜನಾಭನ ಮೂರ್ತಿ ಮನದಲಿ
ನೆಲೆಗೊಳಿಸಿ ನಿಶ್ಚಲ ಭಕುತಿಯಲಿ
ಛಳಿಬಿಸಿಲು ಮಳೆಗಾಳಿಗಳ ನಿಂದಿಸದೆ ನಿತ್ಯದಲಿ |
ನೆಲದಲಿಹ ಗಂಧವೆ ಸುಗಂಧವು
ಜಲವೆ ರಸ ರೂಪವೆ ಸುದೀಪವು
ಎಲರು ಚಾಮರ ಶಬ್ದವಾದ್ಯಗಳರ್ಪಿಸಲು ಒಲಿವ || ೧೩ ||
ಗೋಳಕಗಳು ರಮಾರಮಣನ ನಿ
ಜಾಲಯಗಳನುದಿನದಿ ಸಂಪ್ರ
ಕ್ಷಾಳನೆಯೆ ಸಮ್ಮಾರ್ಜನವು ಕರಣಗಳೆ ದೀಪಗಳು |
ಸಾಲು ತತ್ತದ್ವಿಷಯಗಳ ಸ
ಮ್ಮೇಳನವೆ ಪರಿಯುಂಕ ತತ್ಸುಖ
ದೇಳಿಗೆಯೆ ಸುಪ್ಪತ್ತಿ ಗಾತ್ಮನಿವೇದನವೆ ವಸನ || ೧೪ ||
ಪಾಪಕರ್ಮವು ಪಾದುಕೆಗಳನು
ಲೇಪನವು ಸತ್ಪುಣ್ಯಶಾಸ್ತ್ರಾ
ಲಾಪನವೆ ಶ್ರೀತುಲಸಿ ಸುಮನೋವೃತ್ತಿಗಳು ಸುಮನ |
ಕೋಪ ಧೂಪವು ಭಕ್ತಿ ಭೂಷಣ
ವ್ಯಾಪಿಸಿದ ಸದ್ಭುದ್ಧಿ ಛತ್ರವು
ದೀಪವೇ ಸುಜ್ಞಾನ ವಾರರ್ತಿಗಳೆ ಗುಣಕಥನ || ೧೫ ||
ಮನವಛನಕಾಯಕ ಪ್ರದಕ್ಷಿಣೆ
ಯನುದಿನದಿ ಸರ್ವತ್ರ ವ್ಯಾಪಕ
ವನರುಹೇಕ್ಷಣಗರ್ಪಿಸುತ ಮೋದಿಸುತಲಿರು ಸತತ |
ಅನುಭವಕೆ ತಂದುಕೊ ಸಕಲ ಸಾ
ಧನಗಳೊಳಗಿದೆ ಮುಖ್ಯ ಪಾಮರ
ಮನುಜರಿಗೆ ಪೇಳಿದರೆ ತಿಳಿಯದು ಬುಧರಿಗಲ್ಲದಲೆ || ೧೬ ||
ಚತುರವಿಧ ಪುರುಷಾರ್ಥ ಪಡೆವರೆ
ಚತುರದಶಲೋಕಗಳ ಮಧ್ಯದೊ
ಳಿತರುಪಾಯಗಳಿಲ್ಲ ನೋಡಲು ಸಕಲ ಶಾಸ್ತ್ರದಲಿ |
ಸತತ ವಿಷಯೇಂದ್ರಿಯಗಳಲಿ ಪ್ರವಿ
ತತನೆನಿಸಿ ರಾಜಿಸುವ ಲಕುಮೀ
ಪತಿಗೆ ಸರ್ವ ಸಮರ್ಪಣೆಯು ಮಹಾಪೂಜೆ ಸದುಪಾಯ || ೧೭ ||
ಗೋಳಕವೆ ಕುಂಡಾಗ್ನಿ ಕರಣವು
ಮೇಲೊದಗಿಬಹ ವಿಷಯ ಸಮಿಧೆಯು
ಗಾಳಿ ಯತ್ನವು ಕಾಮ ಧೂಮವು ಸನ್ನಿಧಾನರ್ಚಿ |
ಮೇಳನವೆ ಪ್ರಜ್ವಾಲೆ ಕಿಡಿಗಳು
ತೂಳಿದಾನಂದಗಳೆ ತತ್ತ
ತ್ಕಾಲ ಮಾತುಗಳೆಲ್ಲ ಮಂತ್ರಾಧ್ಯಾತ್ಮಯಜ್ಞವಿದು || ೧೮ ||
ಮಧುವಿರೋಧಿಯ ಪಟ್ಟಣಕೆ ಪೂ
ರ್ವದ ಕವಾಟಗಳಕ್ಷಿ ನಾಸಿಕ
ವದನಶ್ರೋತ್ರಗಳೆರಡು ದಕ್ಷಿಣ ಉತ್ತರ ದ್ವಾರ |
ಗುದ ಉಪಸ್ಥಗಳೆರಡು ಪಶ್ಚಿಮ
ಕದಗಳೆನಿಪವು ಷಟ್ಸರೋಜವೆ
ಸದನ ಹೃದಯವೆ ಮಂಟಪಂಗಳು ತ್ರಿಗುಣಗಳೆ ಕಲಶ || ೧೯ ||
ಧಾತುಗಳು ಸಪ್ತಾವರಣ ಉಪ
ವೀಥಿಗಳೆ ನಾಡಿಗಳು ಮದಗಳು
ಯೂಥಪಗಳು ಸುಷುಮ್ನಾ ನಾಡಿಯೆ ರಾಜಪಂಥಾನ |
ಈ ತನೂರುಹಗಳೆ ವನಂಗಳು
ಮಾತರಿಶ್ವನು ಪಂಚರೂಪದಿ
ಪಾತಕಗಳೆಂಬರಿಗಳನು ಸಂಹರಿಪ ತಳವಾರ || ೨೦ ||
ಇನಶಶಾಂಕಾದಿಗಳೆ ಲಕ್ಷ್ಮೀ
ವನಿತೆಯರಸನ ದ್ವಾರಪಾಲಕ
ರೆನಿಸುತಿಪ್ಪರು ಮನದ ವೃತ್ತಿಗಳೇ ಪದಾತಿಗಳು |
ಅನುಭವಿಪ ವಿಷಯಂಗಲೇ ಪ
ಟ್ಟಣಕೆ ಬಪ್ಪ ಪಸಾರಗಳು ಜೀ
ವನೆ ಸುವರ್ತಕ ಕಪ್ಪಗಳ ಕೈಗೊಂಬ ಹರಿ ತಾನು || ೨೧ ||
ಉರುಪರಾಕ್ರಮನರಮನೆಗೆ ದಶ
ಕರಣಗಳು ಕನ್ನಡಿಯ ಸಾಲುಗ
ಳರವಿದೂರನ ಸದ್ವಿಹಾರಕೆ ಚಿತ್ತ ಮಂಟಪವು |
ಮರಳಿ ಬೀಸುವ ಶ್ವಾಸಗಳು ಚಾ
ಮರ ವಿಲಾಸಿನಿ ಬುದ್ಧಿ ದಾಮೋ
ದರಗೆ ಸಾಷ್ಟಾಂಗ ಪ್ರಣಾಮಗಳೇ ಸುಶಯನಗಳು || ೨೨ ||
ಮಾರಮಣನರಮನೆಗೆ ಸುಮಹಾ
ದ್ವಾರವೆನಿಸುವ ವದನಕೊಪ್ಪುವ
ತೋರಣ ಸ್ಮಶ್ರುಗಳು ಕೇಶಗಳೇ ಪತಾಕೆಗಳು |
ಊರಿ ನಡೆವಂಘ್ರಿಗಳು ಜಂಘಗ
ಳೂರು ಮಧ್ಯೋದರ ಶಿರಗಳಾ
ಗಾರದುಪ್ಪರಿಗೆಗಳು ಕೋಶಗಳೈದು ಕೋಣೆಗಳು || ೨೩ ||
ಈ ಶರೀರವೆ ರಥ ಪತಾಕ ಸು
ವಾಸಗಳೆ ಪುಂಡ್ರಗಳು ಧ್ವಜ ಸಿಂ
ಹಾಸನವೆ ಚಿತ್ತವು ಸುಬುದ್ಧಿಯೆ ಕಲಶ ಸನ್ಮನವೆ
ಪಾಶ ಗುಣ ದಂಡತ್ರಯಗಳು ಶು
ಭಾಶುಭದ್ವಯ ಕರ್ಮ ಚಕ್ರ ಮ
ಹಾಸಮರ್ಥಾಶ್ವಗಳು ದಶಕರಣಂಗಳೆನಿಸುವುವು || ೨೪ ||
ಮಾತರಿಶ್ವನು ದೇಹರಥದೊಳು
ಸೂತನಾಗಿಹ ಸರ್ವಕಾಲದಿ
ಶ್ರೀತರುಣಿವಲ್ಲಭ ರಥಿಕನೆಂದರಿದು ನಿತ್ಯದಲಿ |
ಪ್ರೀತಿಯಿಂದಲಿ ಪೋಷಿಸುತ ವಾ
ತಾತಪಾದಿಗಳಿಂದಲವಿರತ
ಈ ತನುವಿನೊಳು ಮಮತೆ ಬಿಟ್ಟವನವನೆ ಮಹಯೋಗೀ || ೨೫ ||
ಭವವೆನಿಪ ವನಧಿಯೊಳು ಕರ್ಮ
ಪ್ರವಹದೊಳು ಸಂಚರಿಸುತಿಹ ದೇ
ಹವ ಸುನಾವೆಯ ಮಾಡಿ ತನ್ನವರಿಂದಲೊಡಗೂಡಿ |
ದಿವಸದಿವಸಗಳಲ್ಲಿ ಲಕುಮೀ
ಧವನು ಕ್ರೀಡಿಪನೆಂದು ಚಿಂತಿಸೆ
ಪವನನಯ್ಯ ಭವಾಬ್ಧಿ ದಾಟಿಸಿ ಪರಮಸುಖವೀವ || ೨೬ ||
ಆಪಣಾಲಯಗತ ಪದಾರ್ಥವು
ಸ್ತ್ರೀ ಪುರುಷರುಗಳಿಂದ್ರಿಯಗಳಲಿ
ದೀಪ ಪಾವಕರೊಳಿಡುತಿಹ ತೈಲಾದಿ ದ್ರವ್ಯಗಳ |
ಆ ಪರಮಗವದಾನವೆಂದು ಪ
ದೇಪದೇ ಮರೆಯದಲೆ ಸ್ಮರಿಸುತ
ಭೂಪನಂದದಿ ಸಂಚರಿಸು ನಿರ್ಭಯದಿ ಸರ್ವತ್ರ || ೨೭ ||
ವಾರಿಜಭವಂಡವೆ ಸುಮಂಟಪ
ಮೇರುಗಿರಿ ಸಿಂಹಾಸನವು ಭಾ
ಗೀರಥಿಯೆ ಮಜ್ಜನವು ದಿಗ್ವ ಸ್ತ್ರಗಳು ನುಡಿ ಮಂತ್ರ |
ಭೂರುಹಜ ಪಹಲಪುಷ್ಪ ಗಂಧ ಸ
ಮೀರ ಶಶಿರವಿ ದೀಪ ಭೂಷಣ
ತಾರಕೆಗಳೆಂದರ್ಪಿಸಲು ಕೈಗೊಂಡು ಮನ್ನಿಸುವ || ೨೮ ||
ಭೂಸುರರೊಳಿಪ್ಪಬ್ಜ ಭನನೊಳು
ವಾಸುದೇವನು ವಾಯುಖಗಪ ಸ
ದಾಶಿವಹಿಪೇಂದ್ರನು ವಿವಸ್ವಾನ್ನಾಮಕ ಸೂರ್ಯ |
ಭೇಶ ಕಾಮಮರಾಸ್ಯ ವರುಣಾ
ದೀ ಸುರರು ಕ್ಷತ್ರಿಯರೊಳಿಪ್ಪರು
ವಾಸವಾಗಿಹ ಸಂಕರುಷಣನ ನೋಡಿ ಮೋದಿಪರು || ೨೯ ||
ಮೀನಕೇತನತನಯ ಪ್ರಾಣ
ಪಾನವ್ಯಾನೋದಾನ ಮುಖ್ಯೈ
ಕೋನಪಂಚಾಶನ್ಮರುದ್ಗಣ ರುದ್ರ ವಸುಗಣರು |
ಮೇನಕಾತ್ಮಜ ಕುವರ ವಿಷ್ವ
ಕ್ಸೇನಧನಪಾದ್ಯ ನಿಮಿಷರನು ಸ
ದಾನುರಾಗದಿ ಧೇನಿಪುದು ವೈಶ್ಯರೊಳು ಪ್ರದ್ಯ್ಯುಮ್ನ || ೩೦ ||
ಇರುತಿಹರು ನಾಸತ್ಯದಸ್ರರು
ನಿಋಋತಿಯು ಯಮಧರ್ಮ ಯಮಕಿಂ
ಕರರು ಮೇದಿನಿ ಕಾಲಮೃತ್ಯು ಶನೈಶ್ಚರಾದಿಗಳು |
ಕರೆಸಿಕೊಂಬರು ಶೂದ್ರರೆಂದನ
ವರತ ಶೂದ್ರರೊಳಿಪ್ಪರಿವರೊಳ
ಗರವಿದೂರನಿರುದ್ಧನಿಹನೆಂದರಿತು ಮನ್ನಿಪುದು || ೩೧ ||
ವೀತಭಯ ನಾರಾಯಣ ಚತು
ಷ್ಪಾತು ತಾನೆಂದೆನಿಸಿ ತತ್ತ
ಜ್ಜಾತಿಧರ್ಮಸುಕರ್ಮಗಳ ತಾ ಮಾಡಿ ಮಾಡಿಸುವ |
ಚೇತನರ ಒಳಹೊರಗೆ ಓತ
ಪ್ರೋತನಾಗಿದ್ದೆಲ್ಲರಿಗೆ ಸಂ
ಪ್ರೀತಿಯಲಿ ಧರ್ಮಾರ್ಥಕಾಮಾದಿಗಳ ಕೊಡುತಿಹನು || ೩೨ ||
ನಿಧನಧನದ ವಿಧಾನ ವಿಗತಾ
ಭ್ಯಧಿಕ ಸಮಸಮವರ್ತಿ ಸಾಮಗ
ತ್ರಿದಶಗಣಸಂಪೂಜ್ಯ ತ್ರಿಕಕುದ್ಧಾಮ ಶುಭನಾಮ |
ಮಧುಮಥನ ಭೃಗುರಾಮ ಘೋಟಕ
ವದನ ಸ್ರ್ವಪದಾರ್ಥದೊಳು ತುದಿ
ಮೊದಲು ತುಂಬಿಹನೆಂದು ಚಿಂತಿಸು ಬಿಂಬರೂಪದಲಿ || ೩೩ ||
ಕನ್ನಡಿಯ ಕೈವಿಡಿದು ನೋಡಲು
ತನ್ನಿರವು ಸವ್ಯಾಪಸವ್ಯದಿ
ಕಣ್ಣಿಗೊಪ್ಪುವ ತೆರದಿ ಅನಿರುದ್ಧನಿಗೆ ಈ ಜಗವು |
ಭಿನ್ನಭಿನ್ನವೆ ತೋರುತ್ತಿಪ್ಪುದು
ಜನ್ಯವಾದುದರಿಂದ ಪ್ರತಿಬಿಂ
ಬನ್ನಮಯಗಾನೆಂದರಿದು ಪೂಜಿಸಲು ಕೈಗೊಂಬ || ೩೪ ||
ಬಿಂಬರೆನಿಪರು ಸ್ವೋತ್ತಮರು ಪ್ರತಿ
ಬಿಂಬರೆನಿಪರು ಸ್ವಾವರರು ಪ್ರತಿ
ಬಿಂಬಬಿಂಬಗಳೊಳಗೆ ಕೇವಲ ಬಿಂಬ ಹರಿಯೆಂದು |
ಸಂಭ್ರಮದಿ ಪಾಡುತಲಿ ನೋಡುತ
ಲುಂಬುಡವುದಿಡುವುದು ಕೊಡುವುದೆ
ಲ್ಲಂಬುಜಾಂಬಕನಂಘ್ರಿ ಪೂಜೆಗಳೆಂದು ನಲಿದಾಡು || ೩೫ ||
ನದಿಯ ಜಲ ನದಿಗೆರೆವ ತೆರದಂ
ದದಲಿ ಭಗವದ್ದತ್ತ ಧರ್ಮಗ
ಳುದಧಿಶಯನನಿಗರ್ಪಿಸುತ ವ್ಯಾವರ್ತ ನೀನಾಗಿ |
ವಿಧಿನಿಷೇಧಾದಿಗಳಿಗೊಳಗಾ
ಗದಲೆ ಮಾಡುತ ದರ್ವಿಯಂದದಿ
ಪದುಮನಾಭನ ಸಕಲ ಕರ್ಮಗಳಲ್ಲಿ ನೆನೆವುತಿರು || ೩೬ ||
ಅರಿಯದಿರ್ದರು ಎಮ್ಮೊಳಿದ್ದನ
ವರತ ವಿಷಯಗಳುಂಬ ಜ್ಞಾನೋ
ತ್ತರದಿ ತನಗರ್ಪಿಸಲು ಚಿತ್ಸುಖವಿತ್ತು ಸಂತೈಪ |
ಸರಿತು ಕಾಲಪ್ರವಹಗಳು ಕಂ
ಡರೆಯು ಸರಿ ಕಾಣದಿರೆ ಪರಿವುವು
ಮರಳಿ ಮಜ್ಜನ ಪಾನಕರ್ಮಗಳಿಂದೆ ಸುಖವಿಹವು || ೩೭ ||
ಏನು ಮಾಡುವ ಕರ್ಮಗಳು ಲಕು
ಮೀನಿವಾಸನಿಗರ್ಪಿಸನು ಸಂ
ಧಾನಪೂರ್ವಕದಿಂದ ಸಂದೇಹಿಸದೆ ದಿನದಿನದಿ |
ಮಾನನಿಧಿ ಕೈಗೊಂಡು ಸುಖ ವಿ
ತ್ತಾನತರ ಸಂತಯಿಪ ತೃಣಜಲ
ಧೇನು ತಾನುಂಡನವರತ ಪಾಲ್ಗರೆವ ತೆರನಂತೆ || ೩೮ ||
ಪೂರ್ವ ದಕ್ಷಿಣ ಪಶ್ಚಿಮೋತ್ತರ
ಪಾರ್ವತೀಪತಿ ಯಗ್ನಿವಾಯುಸು
ಶಾರ್ವರೀಚರ ದಿಗ್ವಲಯದೊಳು ಹಂಸನಾಮಕನು |
ಸರ್ವ ಕಾಲದಿ ಸರ್ವರೊಳು ಸುರ
ಸಾರ್ವಭೌಮನು ಸ್ವೇಚ್ಛೆಯಲಿ ಮ
ತ್ತೋರ್ವರಿಗೆ ಗೋಚರಿಸದವ್ಯಕ್ತಾತ್ಮನೆಂದೆನಿಸಿ || ೩೯ ||
ಪರಿಯಿಡಾವತ್ಸರನು ಸಂವ
ತ್ಸರದೊಳನಿರುದ್ಧಾದಿ ರೂಪವ
ಧರಿಸಿ ಬಾರ್ಹಸ್ಪತ್ಯ ಸೌರಭ ಚಾಂದ್ರಮನು ಎನಿಸಿ |
ಇರುತಿಹ ಜಗನ್ನಾಥ ವಿಟ್ಠಲ
ಸ್ವರಿಸುವವರನು ಸಂತಯಿಪನೆಂ
ದುರು ಪರಾಕ್ರಮನುಚಿತ ಸಾಧನ ಯೋಗ್ಯತೆಯನರಿತು || ೪೦ ||