ವಿಷಯಕ್ಕೆ ಹೋಗು

ಹಳ್ಳಿಯ ಚಿತ್ರಗಳು/ನಗೆಯ ನೀತಿ

ವಿಕಿಸೋರ್ಸ್ದಿಂದ

ನಗೆಯ ನೀತಿ


೧. ಶೀನಪ್ಪನ ವಾಕಿಂಗ್

ನನ್ನ ಸ್ನೇಹಿತ ಶೀನಪ್ಪ ಆಗತಾನೆ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ. ಷೋಕಿ ಅಂತೂ ಕೇಳಬೇಕಾದುದೇ ಇಲ್ಲ. ೧೨ 'ಸೂಟ್' ಇಟ್ಟಿದ್ದ. ನಿತ್ಯ ಮುಖ ಕ್ಷೌರ. ನಾನು ಅವನನ್ನು ಒಂದು ದಿವಸ “ಬಾಯ್ಯ ನಮ್ಮ ಗದ್ದೆ ಹತ್ತಿರಕ್ಕೆ ಹೋಗಿಬರೋಣ, ಪಯಿರು ಹಸುರಾಗಿ ಕಣ್ಣಿಗೆ ಇಂಪಾಗಿದೆ, ಮನೆಯಲ್ಲಿ ಹೆಗ್ಗಣದಂತೆ ಕುಳಿತು ಏನುಮಾಡುತ್ತೀಯೆ?” ಎಂದು ಕರೆದೆ. ಶೀನಪ್ಪ ಹಾಗೇ ಆಗಲಿ, ಅದಕ್ಕೇನು 'Green fields are a sight worth seeing,' ನೀನು ಹೋಗು; ನಾನು ಅರ್ಧ ಗಂಟೆ ಬಿಟ್ಟು ಬರುತ್ತೇನೆ ಎಂದ. ನಾನು ಮೊದಲೇ ಹೊರಟುಹೋದೆ.

ನಾನು ಗುದ್ದಲಿಯನ್ನು ಹಿಡಿದುಕೊಂಡು, ಗದ್ದೆಯ ಕೆಸರನ್ನು ಎತ್ತಿ ಬೇರೆ ಕಡೆಗೆ ಹಾಕುತ್ತಲಿದ್ದೆ, ನನ್ನ ಜೊತೆಯಲ್ಲಿ ನಮ್ಮ ಆಳು ಬೋರನೂ ಕಳೆ ಕೀಳುತ್ತಿದ್ದ. ಮಧ್ಯೆ ಒಂದುಸಲ ಬೋರನು ನಾಲೆಯ ಏರಿಯ ಕಡೆ ತಿರುಗಿ "ಯಾರೋ ದೊರೆಗ್ಳು ಈ ಕಡೆ ಬರ್ತಾ ಇದಾರೆ ಬುದ್ದಿ” ಎಂದ. ನಮ್ಮ ಊರಿನಲ್ಲಿ ದೊರೆಗಳನ್ನು ಕಾಣೋದು ಅಪರೂಪವೆ. ನಾನು ಮೇಲಕ್ಕೆ ತಲೆಯೆತ್ತಿ ನಾಲೆಯ ಏರಿ ಕಡೆ ನೋಡಿದೆ. ಕೋಟು, ಬೂಟು, ಹ್ಯಾಟು, ಷರಾಯಿ ವ್ಯಕ್ತಿಯೊಬ್ಬನು ನನ್ನ ಕಣ್ಣಿಗೆ ಬಿದ್ದನು. ಒಂದು ಗಳಿಗೆ ದೃಷ್ಟಿಸಿ ನೋಡುವುದರಲ್ಲಿ ಅವನು ನಮ್ಮ ಸ್ನೇಹಿತ ಶೀನಪ್ಪನೆಂಬುದು ಗೊತ್ತಾಯಿತು. ಅವನ ಡ್ರೆಸ್ಸನ್ನು ನೋಡಿ, ಇವನೇನು ವರಪೂಜೆಗೆ ಹೊರಟಿದಾನೋ ಅಥವಾ 'ಕಾನ್ವೊಕೇಶನ್ ಡಿಗ್ರಿ' ತೆಗೆದುಕೋಳೋಕೆ ಹೊರಟಿದಾನೋ, ಎಂದು ಯೋಚಿಸಿದೆ. ಗದ್ದೆ ಬದುವಿನ ಕೆಸರಿಗೆ ಬರುವವನಿಗೆ, ಈ ಮದವಣಿಗನ ಉಡುಪು ಯಾಕೆ? ಕೈಯಲ್ಲಿ ಮಡಚಿ ಇಟ್ಟುಕೊಂಡ ನಿಲುವಂಗಿ ಯಾಕೆ? ಕೊಡೆ, ಬಣ್ಣದ ಉಪನೇತ್ರ, ವಾಕಿಂಗ್ ಸ್ಟಿಕ್ ಇವೆಲ್ಲಾ ಯಾಕೆ? ನನಗೆ ಸ್ವಲ್ಪ ನಗು ಬಂದಿತು. ಶೀನಪ್ಪನು ಎದುರಿಗೆ ಇರಲಿಲ್ಲವಾಗಿ ನಿರ್ಭಯದಿಂದ ನಕ್ಕೆ.

ಕಾಲುವೆಯ ಬದುವನ್ನು ಬಿಟ್ಟು ಶೀನಪ್ಪನು ಗದ್ದೆಯ ಬಯಲಿಗೆ ಇಳಿದನು. ನಮ್ಮೂರ ಗದ್ದೆಯ ಜಮೀನು ಬಹಳ ಫಲವತ್ತಾದುದರಿಂದ, ಅಲ್ಲಿ ಬದುವಿಗೆಂದು ಸ್ವಲ್ಪವೂ ಜಮೀನನ್ನು ವ್ಯರ್ಥವಾಗಿ ಬಿಡುವುದಿಲ್ಲ. ಒಂದು ಗದ್ದೆಯಿಂದ ಮತ್ತೊಂದು ಗದ್ದೆಯನ್ನು ವಿಭಾಗಿಸುವ ಬದುವು, ಕೇವಲ ಒಂದು ಗೇಣು ಮಾತ್ರ ಅಗಲವಾಗಿದೆ. ಅದರ ಮೇಲೆ ಯಾವಾಗಲೂ ನೀರು ಹರಿಯುತ್ತಿರುವುದರಿಂದ, ಅದರ ಮಣ್ಣು ಬಹಳ ಸಡಿಲವಾಗಿ ಕುಸಿದುಹೋಗುವಂತಿದೆ. ನಾವ್ಯಾರೂ ಬದುವಿನ ಮೇಲೆ ತಿರುಗುವುದಿಲ್ಲ. ಯಾತಕ್ಕೆಂದರೆ ತಿರುಗಲು ಪ್ರಯತ್ನ ಪಟ್ಟರೆ, ಗದ್ದೆಯ ಕೆಸರಿನೊಳಕ್ಕೆ ಬೀಳುವುದು ಖಂಡಿತ.

ಶೀನಪ್ಪನು ಬದುವಿನ ಮೇಲೆ ನಡೆಯಲು ಪ್ರಾರಂಭಿಸಿದನು. ಆ ಕಡೆ ಗದ್ದೆ, ಈ ಕಡೆ ಗದ್ದೆ, ೧೭ ರೂಪಾಯಿನ ಕಟ್ ಕಟ್ ಶಬ್ದದ ಇಂಗ್ಲಿಷ್ ಬೂಟ್ಸು ಕೆಸರಾಗಬಾರದೆಂದು ಅವನು ಉಪಾಯವಾಗಿ ಬದುವಿನಮೇಲೆ ಹೆಜ್ಜೆಯನ್ನಿಕ್ಕುತ್ತಾ ಬರುತ್ತಿರುವಾಗ ಒಂದೇ ರೈಲು ಕಂಬಿಯಮೇಲೆ ನಡೆಯುವವನಂತೆ ಓಲಾಡುತ್ತಿದ್ದನು. ಕೈಯಲ್ಲಿದ್ದ ಕೋಲನ್ನಾದರೂ ಊರಿಕೊಂಡು ನಡೆಯೋಣವೆಂದರೆ, ಅದು ಬೆತ್ತವಾಗಿದ್ದುದರಿಂದ ಊರಲವಕಾಶವಿಲ್ಲದೆ ಬಳುಕುತ್ತಿದ್ದಿತು. ಅವನು ಕೆಳಕ್ಕೆ ಬೀಳಬಹುದೆಂದು ನನಗೆ ಗೊತ್ತಾಯಿತು. ಬರಬೇಡವೆಂದು ಕೂಗಿ ಹೇಳಿದ್ದರೆ ಅವನು ಅಲ್ಲಿಯೇ ನಿಂತುಬಿಡುತ್ತಿದ್ದನು. ಆದರೆ ಸುಲಭವಾಗಿ ದೊರಕಬಹುದಾದ ವಿನೋದವನ್ನು ಕಳೆದುಕೊಳ್ಳಬಾರದೆಂದು ನನ್ನ ಮನದಲ್ಲಿ ಯಾವುದೋ ಒಂದು ಒಳಧ್ವನಿಯು ಹೇಳುತ್ತಿದ್ದುದರಿಂದ ಸುಮ್ಮನಾದೆನು.

ಆ ವೇಳೆಗೆ ಶೀನಪ್ಪ ಒಂದು ಕಡದಾದ ಬದುವಿನ ಮೇಲೆ ಓಲಾಡುತ್ತಿದ್ದ. ಎಡಗಡೆಯ ಗದ್ದೆಯು ಸ್ವಲ್ಪ ಹಳ್ಳದಲ್ಲಿದ್ದಿತು. ನನಗೂ ಅವನಿಗೂ ನಡುವೆ ೭ ಚಿಕ್ಕ ಬದುಗಳಿದ್ದುವು. ಈಗಾಗಲೇ ಅವನ ಕರಿಯ ಸರ್ಜಿನ ಷರಾಯಿಗೆಲ್ಲಾ ಕೆಸರು ಹಾರಿತ್ತು. ನೋಡುತ್ತಿದ್ದಂತೆಯೇ ಶೀನಪ್ಪನು ಒಂದು ಸಲ ಬಲಗಡೆಗೆ ಹೆಚ್ಚಾಗಿ ಓಲಾಡಿದನು. ಸಮತೂಕವನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಮತ್ತೆ ಸ್ವಲ್ಪ ಹೆಚ್ಚಾಗಿ ಎಡಗಡೆಗೆ ಬಾಗಿದನು. ಅದೇ ಗಳಿಗೆಯಲ್ಲಿಯೇ ಬದುವಿನ ಮೇಲೆ ಬರುತ್ತಿದ್ದ ಸಾಹೇಬನು ಮರೆಯಾದನು. ಎಡಗಡೆಯ ಗದ್ದೆಯಿಂದ ನೀರೂ ಕೆಸರೂ ಮೇಲಕ್ಕೆ ಹಾರಿತು. ಪೈರಿನ ಸಾಲು ಎರಡು ಕಡೆಗೂ ಬಾಗಿ ಶೀನಪ್ಪನನ್ನು ಬಾಚಿ ತಬ್ಬಿಕೊಂಡಿತು.

ಬಿದ್ದವನ ಸಹಾಯಕ್ಕೆ ನಾನೂ ಹೋಗಲಿಲ್ಲ; ಬೋರನೂ ಹೋಗಲಿಲ್ಲ. ನಗುವನ್ನು ಮಾತ್ರ ತಡೆಯಲು ಸಾಧ್ಯವಾಗಲಿಲ್ಲ. ಶೀನಪ್ಪನು ಮೇಲಕ್ಕೆ ಎದ್ದು ನಿಂತುಕೊಂಡನು. ಆಗ ಅವನ ರೂಪು ದೇವರೇ ಗತಿ. ಇಸ್ತ್ರಿಮಾಡಿ ಗರಿಗರಿಯಾಗಿದ್ದ ಷರಾಯಿ ಕೆಸರಿನಲ್ಲಿ ತೊಯ್ದು ಹೋಗಿತ್ತು. 'ಹ್ಯಾಟ್ ' ಗದ್ದೆಯಲ್ಲಿ ಅರ್ಧ ಮುಳುಗಿ ಹೋಗಿತ್ತು. ಅವನು ಎದ್ದು ನಿಂತು ಕೊಂಡು ಕಣ್ಣು ಕಿವಿ ಮೂಗು ಎಲ್ಲವನ್ನೂ ಒಂದಾಗಿ ಮಾಡಿದ್ದ ಜೇಡಿ ಮಣ್ಣನ್ನು ಕೈಯಿಂದ ತೆಗೆದು ಹಾಕಿ ಕಿವಿಯನ್ನೂ ಕಣ್ಣನ್ನೂ ಹುಡುಕುತ್ತಿದ್ದನು. ಬಗೆ ಬಗೆಯ ಸುಗಂಧಯುಕ್ತವಾದ ಎಣ್ಣೆಗಳನ್ನು ಹಾಕಿ ಬಾಚಿಕೊಂಡಿದ್ದ ಅವನ ಮು೦ಜುಟ್ಟೆಲ್ಲವೂ ದಿಕ್ಕಾಪಾಲಾಗಿತ್ತು. ಅವನ ಕಿವಿಯಲ್ಲಿ ಒಂದು ಗೆಜ್ಜಗದ ಗಾತ್ರ ಮಣ್ಣು ತುಂಬಿತ್ತು. ಗದ್ದೆಯಲ್ಲಿ ಅರ್ಧ ಮಣ್ಣಿನಲ್ಲಿ ಹೂಳಿಹೋಗಿದ್ದ ಅವನ 'ಹ್ಯಾಟು' ಮುರುಕು ಮಡಿಕೆಯ ಚೂರಿನಂತೆ ಕಾಣುತ್ತಿದ್ದಿತು. ಅವನಿಗೇನೂ ಅಪಾಯವಾಗಿರಲಿಲ್ಲ. ಅವನ ಕನ್ನಡಕ ಕೂಡ ಸರಿಯಾಗಿಯೇ ಇತ್ತು. ನಾವು ನಕ್ಕುದನ್ನು ಕಂಡು ಶೀನಪ್ಪ ಬೋರನನ್ನು ಚೆನ್ನಾಗಿ ಬಯ್ದ. ಅವನು ಬೈದಷ್ಟೂ ಬೋರನು ನಗುತ್ತಲೇ ಇದ್ದ. ನಗೆಯ ಹೆಣ್ಣು ಔಚಿತ್ಯವನ್ನೇ ಅರಿಯಳು.

೨. ನಮ್ಮ ಭಾವನವರು ತಂದ ತಿಂಡಿ

ನಮ್ಮ ಭಾವನವರು ವೈದಿಕಶಿಖಾಮಣಿಗಳು. ೧೨ ನಾಮ ಯಾವತ್ತೂ ಬಿಟ್ಟವರೇ ಅಲ್ಲ. ಸ್ತೋತ್ರ ಪಾಠಗಳಿಗಂತೂ ಮಿತಿಯೇ ಇಲ್ಲ. ದೇವರ ದಯದಿಂದ ಸಂಸ್ಕೃತ ಶ್ಲೋಕಗಳಿಗೂ ಕಡಮೆಯಿಲ್ಲ. ಸಾಸಿವೆ ಕಾಳು ಸಿಡಿದಂತೆ ಮಾತನಾಡಿದುದಕ್ಕೆಲ್ಲ ಒಂದು ಶ್ಲೋಕದ ಆಧಾರ ಬಾಯಿಂದ ಹೊರಕ್ಕೆ ಬರುತ್ತದೆ. ಸೌಟಿನಲ್ಲಿ ಬಡಿಸಬೇಕು; ಚಮಚಾದಲ್ಲಿ ಬಡಿಸಕೂಡದು; ಬಾಯಿನೀರನ್ನು ಎಡಗಡೆಗೆ ಮುಕ್ಕುಳಿಸಿ ಉಗಿಯ ಬೇಕು; ಬಲಗಡೆಗೆ ಉಗಿಯಕೂಡದು. ಈಚಲಮರದ ಮೇಲೆ ಬಟ್ಟೆಯನ್ನಿಟ್ಟರೆ ಅದು ಮಡಿಯೋ? ಅಲ್ಲವೋ? ಈ ವಿಷಯಗಳನ್ನೆಲ್ಲಾ ಅವರು ೫-೬ ವರ್ಷಗಳವರೆಗೆ ಸಂಪ್ರದಾಯ ಗ್ರಂಥಗಳನ್ನೆಲ್ಲಾ ವ್ಯಾಸಂಗಮಾಡಿ ತೀರ್ಮಾನ ಮಾಡಿದ್ದಾರೆ.

ಈಗ ಹನ್ನೆರಡು ವರ್ಷಗಳ ಹಿಂದು ಮಾತು. ಆಗ ಮೇಲುಕೋಟೆಯಿಂದ ನಮ್ಮೂರಿಗೆ ರೈಲು ಇರಲಿಲ್ಲ. ಎತ್ತಿನ ಗಾಡಿಯಲ್ಲಿಯೇ ಪ್ರಯಾಣ. ಬೆಳಿಗ್ಗೆ ಹೊತ್ತಿಗೆ ಮುಂಚೆ ಹೊರಡುವುದಕ್ಕೆ ಕಳ್ಳರ ಭಯ; ರಾತ್ರೆ-ಹೊತ್ತು ಮೀರಿ ಪ್ರಯಾಣವನ್ನು ಮುಂದೆ ಸಾಗಿಸಲು ಕಳ್ಳರ ಭಯ. ಹೀಗಾಗಿ ಮೇಲುಕೋಟೆಯಿಂದ ನಮ್ಮೂರಿಗೆ ಬರಲು ಐದು ದಿನಗಳು ಹಿಡಿಯುತ್ತಿದ್ದುವು. ಒಂದು ಸಲ ನಮ್ಮ ಭಾವನವರು ನಮ್ಮೂರಿಗೆ ಬರುತ್ತೇನೆಂದು ಕಾಗದ ಬರೆದುದರಿಂದ ನಮ್ಮ ರೈತನ ಗಾಡಿಯೊಂದನ್ನು ಕಳುಹಿಸಬೇಕಾಯಿತು. ಶ್ರೀಕೃಷ್ಣ ಜಯಂತಿಯಾದ ಮರುದಿವಸವೇ ನಮ್ಮ ಭಾವನವರು ಮೇಲುಕೋಟೆಯಿಂದ ಹೊರಟರು. ಅಯ್ಯಂಗಾರ ಕೃಷ್ಣಜಯಂತಿ ಅಂದರೆ ನಿಮಗೆ ತಿಳಿದೇ ಇದೆ. ಅದರಲ್ಲೂ ವೈದಿಕರಾದವರ ವಿಷಯ ಕೇಳಬೇಕಾದುದೇ ಇಲ್ಲ. ಅವರು ನೂರಾರು ಹೊಸ ತಿಂಡಿಗಳಿಂದ ಕೃಷ್ಣ ಪರಮಾತ್ಮನನ್ನು ತುಷ್ಟಿಪಡಿಸುತ್ತಾರೆ. ನಮ್ಮ ಅಕ್ಕ ನಮ್ಮೂರಲ್ಲೇ ಇದ್ದರು. ಆದುದರಿಂದ ನಮ್ಮೂರಿಗೆ ತಿಂಡಿಯನ್ನು ತರುವುದಕ್ಕೆ, ನಮ್ಮ ಭಾವನವರಿಗೆ ಒಂದು ವಿಶೇಷ ಕಾರಣವಿದ್ದಿತು. ಅವರು ದೊಡ್ಡದಾದ ಒಂದು ಬುಟ್ಟಿಯನ್ನು ತೆಗೆದು ಅದರಲ್ಲಿ ಲಾಡು, ಚಕ್ಕುಲಿ, ಮನವರಂ, ಪೂರಿ, ಮುಂತಾದ ತಿಂಡಿಗಳನ್ನೆಲ್ಲಾ ತುಂಬಿ, ಅದರಮೇಲೆ ಕಾಶಿಯ ಒಂದು ಬಿಳಿಯ ಮಡಿ ಶಾಲುವನ್ನು ಬಿಗಿದು ಕಟ್ಟಿ, ೨-೩ ಪೆಟ್ಟಿಗೆ ಹಾಸಿಗೆಗಳ ಕೂಡ ಗಾಡಿಯಲ್ಲಿ ಹಾಕಿಕೊಂಡು ಊರಿನ ಕಡೆಗೆ ಹೊರಟರು. ೫ ದಿವಸ ಕಳೆದ ಮೇಲೆ ಪದ್ಧತಿಯಂತೆ ಊರ ಹತ್ತಿರಕ್ಕೆ ಬಂದರು.

ನಾವು ಕಳುಹಿಸಿದ್ದ ಗಾಡಿಯವನು ನಮ್ಮೂರಿಗೆ ಎರಡು ಮೈಲು ದೂರದ ರಾಮೋಹಳ್ಳಿಯವನು. ಅಲ್ಲಿ ನಮ್ಮ ಜಮೀನನ್ನೆಲ್ಲ ಅವನೇ ಸಾಗುವಳಿ ಮಾಡಿದ್ದ. ಬಹಳ ನಂಬಿಕಸ್ಯ. ಆವನ ಹಳ್ಳಿಯು ರಸ್ತೆಯ ಮಗ್ಗುಲಲ್ಲಿಯೇ ಇದೆ. ಗಾಡಿಯು ತನ್ನ ಹಳ್ಳಿಯ ಬಳಿಗೆ ಬಂದ ಕೂಡಲೇ, ಅವನ ಎತ್ತುಗಳು ಅಭ್ಯಾಸದಿಂದ ಗಾಡಿಯನ್ನು ಹಳ್ಳಿಯ ಕಡೆಗೆ ಎಳೆದವು. ಗಾಡಿಯವನು ನಮ್ಮ ಭಾವನವರನ್ನು ಕುರಿತು "ಸ್ವಾಮಿ ತಾವು ಹೋಗಿ ಬಿಡಿ, ಎತ್ತುಗಳನ್ನು ಎರಡು ಗಂಟೆ ಮನೆಯ ಮುಂದೆ ಬಿಟ್ಟು ಸುದಾರಿಸ್ಕೊಂಡು, ಸ್ವಲ್ಪ ಹುಲ್ಲು ತಿನ್ನಿಸಿ ಗಾಡೀನ ಹೊಡ್ಕೊಂಡು ಬರ್‍ತೇನೆ" ಎಂದ. ಭಾವನವರಿಗೂ ಗಾಡಿಯಲ್ಲಿ ಕೂತು, ಕುಲಕಾಡಿ ಸೊಂಟವೆಲ್ಲಾ ನೋವು ಹತ್ತಿತ್ತು. ಅವರು ಹಾಗೆಯೇ ಮಾಡು” ಎಂಬುದಾಗಿ ಹೇಳಿ ಮಡಿಚೀಲವನ್ನು ಮಾತ್ರ ಹೆಗಲಿನ ಮೇಲೆ ಇಟ್ಟುಕೊಂಡು, ಗಾಡಿಯಿಂದ ಇಳಿದು ಮನೆಗೆ ಬಂದರು. ಬಂದವರೇ ನಮ್ಮನ್ನೆಲ್ಲಾ ಕುರಿತು ಒಂದುತಟ್ಟಿ ತುಂಬ ತಿಂಡಿ ತಂದಿದೀನಿ. ಸುಮ್ಮನೆ ಇರಿ. ಎಲ್ಲರಿಗೂ ಬೇಕಾದ ಹಾಗೆ ಕೊಡ್ತೀನಿ; ಒಂದು ಘಳಿಗೆ ತಡೀರಿ, ತಿಂದು ತೇಗುವಿರಂತೆ” ಎಂಬುದಾಗಿ ಹೇಳಿದರು.

ಮಧ್ಯಾಹ್ನ ಊಟವಾಯಿತು. ನಾವು ಜಗಲಿಯ ಒಂದು ಮೂಲೆಯಲ್ಲಿ ಕುಳಿತು, 'ಚೌಕಬಾರವನ್ನು' ಆಡುತ್ತಾ ಎಷ್ಟು ಹೊತ್ತಿಗೆ ತಿಂಡಿಯು ಬಂದೀತೋ ಎಂದು ನಿರೀಕ್ಷಿಸುತ್ತಿದ್ದೆವು. ನಮ್ಮ ತಂದೆಯವರೂ ಭಾವನವರೂ ಮತ್ತೊಂದು ಜಗಲಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಭಾವನವರು "ಗಾಡಿಯವನು ನಂಬಿಕಸ್ತ, ಯೋಗ್ಯ, ಸಹನಾವಂತ" ಎಂದೂ ಮುಂತಾಗಿ ಹೇಳುತ್ತಿದ್ದರು. ಅವರ ಮಾತು ಪೂರ್ಣವಾಗುವುದಕ್ಕೆ ಮುಂಚಿತವಾಗಿಯೇ, ಗಾಡಿಯವನು ಮಡಿ ಶಾಲುವಿನಿಂದ ಸುತ್ತಿದ್ದ ಅವರ ಬುಟ್ಟಿಯನ್ನು ತಲೆಯಮೇಲೆ ಹೊತ್ತುಕೊಂಡು ಬಾಗಿಲಿಗೆ ಬಂದನು. ಅವನನ್ನು ನೋಡಿದ ಕೂಡಲೆ ನಮ್ಮ ಭಾವನವರು "ಮುಠಾಳ ಅನ್ಯಾಯ ಮಾಡಿಬಿಟ್ಟೆಯೆಲ್ಲ!” ಎಂದರು. ಒಂದು ಘಳಿಗೆ ಮುಂಚೆ ಹೊಗಳುತ್ತಿದ್ದವರು, ಈಗ ಬೈಯುವುದಕ್ಕೆ ಕಾರಣವೇನೆಂದು ನಮ್ಮ ತಂದೆಯವರಿಗೆ ತಿಳಿಯಲಿಲ್ಲ. ಭಾವನವರು ಕೋಪದಿಂದ ಗಾಡಿಯವನನ್ನು ಕುರಿತು "ಇದನ್ಯಾಕೆ ತೆಗೆದುಕೊಂಡು ಬಂದೆ, ಗಾಡಿ ಎಲ್ಲಿ?” ಎಂದರು. ಗಾಡಿಯವನು ಗಾಡಿಯನ್ನು ನನ್ನ ಮಗ ರಾತ್ರಿಗೆ ಹೊಡೆದುಕೊಂಡು ಬರ್ತಾನೆ. ಬರಿಯ ಕೈಯಲ್ಲಿ ಯಾಕೆ ಹೋಗಬೇಕು ಅಂತ ಇರೋದರಲ್ಲೆಲ್ಲಾ ದಪ್ಪವಾದ ಗಂಟನ್ನೇ ಹೊತ್ತುಕೊಂಡು ಬಂದೆ” ಎಂದನು. ನಮ್ಮ ಭಾವನವರು “ನೀ ಹಾಳಾದೆ" ಎಂದರು. ಅನಂತರ ನಮ್ಮನ್ನು ಕುರಿತು ಆ ಶಾಲುವನ್ನು ಬಿಚ್ಚಿಕೊಂಡು ನೀರಿನಲ್ಲಿ ನೆನೆಸಿ ಹಾಕಿಬಿಡಿ. ತಿಂಡಿ ಅವನಿಗೇ ಆಯಿತು. ದಾರಿಯಲ್ಲಿ ಕೂಡ ಒಂದು ಚೂರನ್ನೂ ತಿನ್ನದೆ ತಂದೆ” ಎಂದರು.

ನಾನು ಶಾಲುವನ್ನೇನೋ ಬಿಚ್ಚಿ ನೆನಸಿದೆ. ಆದರೆ ತಿಂಡಿಯನ್ನೂ ಬಿಡಲಿಲ್ಲ. ಭಾವನವರಿಗೆ ಹೇಳದೆ ಹುಡುಗರೆಲ್ಲಾ ಗುಟ್ಟಾಗಿ ತಿಂದು ಹಾಕಿಬಿಟ್ಟೆವು. ಭಾವನವರು ಒಂದು ತಿಂಗಳಾದರೂ ಈ ವಿಷಯ ಮರೆಯಲಿಲ್ಲ. ಮಾತೆತ್ತಿದರೆ ಗಾಡಿಯವನಿಗೆ ಬೈಗಳದ ಸುರಿಮಳೆಯಾಗುತ್ತಿದ್ದಿತು. ಅವರ ಕೂಗಾಟವನ್ನು ನೋಡಿ ನಾವು ನಕ್ಕದ್ದೂ ನಕ್ಕದ್ದೆ.

೩. ಭಾವನವರ ನುಡಿ

ನಮ್ಮ ಭಾವನವರು ತಮ್ಮ ತಂದೆಯ ಶ್ರಾದ್ಧವನ್ನು ಮಾಡಬೇಕಾಯಿತು. ಆವತ್ತಂತೂ ಅವರ ಮುಡಿಗೆ ಮಿತಿಯೇ ಇರಲಿಲ್ಲ. ಮಾತನಾಡಿದರೆ ಎಲ್ಲಿ ಮೈಲಿಗೆಯಾಗಿಬಿಡುತ್ತದೆಯೋ ಎಂಬುದಾಗಿ ಆ ದಿವಸವೆಲ್ಲಾ ನಮ್ಮೊಂದಿಗೆ ಬರಿಯ ಸಂಜ್ಞೆಯಿಂದಲೇ ಸಂಭಾಷಣೆ, ಅವರು ಶ್ರಾದ್ಧ ಮಾಡಿ ಮುಗಿಸುವ ಹೊತ್ತಿಗೆ ಭಾರಿ ಅಶ್ವಮೇಧ ಯಾಗವನ್ನು ಮಾಡಿದಂತೆ ಆಗುತ್ತಿತ್ತು. ಹೋಮವೆಲ್ಲಾ ಆಗಿ 'ಬ್ರಾಹ್ಮಣ'ರಿಗೆ ಎಲೆ ಹಾಕುವುದೇ ಮೂರು ಗಂಟೆ. “ಬ್ರಾಹ್ಮಣ"ರಿಗೆ ಆದನಂತರ ನಮ್ಮ ಭಾವನವರಿಗೂ, ನಮಗೂ, ಉಳಿದವರಿಗೂ ಊಟವಾಗುವ ಪದ್ದತಿ. ಇರಲಿ, ಆ ದಿವಸ ಬ್ರಾಹ್ಮಣರು ಊಟಕ್ಕೆ ಕುಳಿತಿದ್ದರು. ಆಗತಾನೆ ಪರಿಶೇಚನವನ್ನು ಮುಗಿಯಿಸಿ ಒಂದೆರಡು ತುತ್ತು ಊಟಮಾಡಿದ್ದರು. ಶೂದ್ರರ ಧ್ವನಿ ಕೇಳಬಾರದೆಂದು, ಬೀದಿಯ ಬಾಗಿಲಿಗೆ ಅಗಣಿ ಹಾಕಿಬಿಟ್ಟಿದ್ದೆವು. ನಮ್ಮ ರೈತ ಬೀದಿಯ ಬಾಗಿಲಿಗೆ ಬಂದು ೨-೩ ಸಲ ಕೂಗಿದ ಅಂತ ಕಾಣುತ್ತೆ. ಅದು ನಮಗ್ಯಾರಿಗೂ ಕೇಳಿಸಲಿಲ್ಲ. ಅನಂತರ ಅವನು ಬೀದಿಯ ಕಡೆಯಿಂದ ನಡುಮನೆಯ ಕಿಟಕಿಯಲ್ಲಿ ತಲೆಯಿಟ್ಟು ಇಣಿಕಿನೋಡಿದ. ನೋಡಿದಕೂಡಲೆ ನಮ್ಮ ಭಾವನವರ ಮುಖವು ಅವನ ಕಣ್ಣಿಗೆ ಬಿದ್ದಿತು. ಭಾವನವರೂ ಅವನನ್ನು ನೋಡಿದರು. ಆಗ ಅವರ ಮುಖದಲ್ಲಿ ತೋರಿದ ಗಾಬರಿಯನ್ನು ಹೇಳಬೇಕಾದುದೇ ಇಲ್ಲ. ಅವರು ಈ "ವಿಧವಾಪತಿ, ಪಿಶಾಚಿ" (ಕನ್ನಡದಲ್ಲಿ ಬಯ್ಯಲಿಲ್ಲ. ದೇವಭಾಷೆಯಲ್ಲಿ ಬಯ್ದರು) ಎಂದರು. ತಾನು ನೋಡಿದುದರಿಂದ ಅವರಿಗೆ ಅಸಮಾಧಾನವಾಯಿತೆಂದು ತಿಳಿದು ರೈತನು-

"ಉಣ್ತೀರಾ ಬುದ್ದಿ, ಉಣ್ಣಿ ಉಣ್ಣಿ” ಎಂದು ಹೇಳಿ ಹೊರಟು ಹೋದನು.

ಹತ್ತು ನಿಮಿಷ ನಮ್ಮ ಭಾವನವರು ಹುಚ್ಚನಂತೆ ಮಂಕಾಗಿ ಕುಳಿತು ಬಿಟ್ಟರು. ಶ್ರಾದ್ಧದ ದಿವಸ ಶೂದ್ರನು ಬ್ರಾಹ್ಮಣರ ಎಲೆಯನ್ನು ನೋಡಿಬಿಟ್ಟ. ಶ್ರಾದ್ಧವೆಲ್ಲ ಕೆಟ್ಟು ಹೋಯಿತು. ಪಿತೃಗಳೆಲ್ಲ ನಿರಾಶರಾಗಿ ಹೊರಟುಹೋಗುತ್ತಾರೆ, ಅಯ್ಯೋ ಎಂದು ಅವರು ದುಃಖಿಸಿದರು. ಶಾಸ್ತ್ರ ವಿದ್ವತ್ತಿನಲ್ಲಿ ನಮ್ಮ ತಂದೆಯವರು ನಮ್ಮ ಭಾವನವರಿಗಿಂತ ಒಂದು ಕೈ ಮೇಲು ಎಂದೇ ಹೇಳಬೇಕು. ಆದರೆ ಈಗ ತಾವೇ “ಬ್ರಾಹ್ಮಣ"ರಾಗಿ ಕುಳಿತುಬಿಟ್ಟಿದ್ದುದರಿಂದ ಅವರು ಯಾವ ಮಾತನ್ನೂ ಆಡಲು ಇಷ್ಟಪಡಲಿಲ್ಲ. ಭಾವನವರಿಗೆ ಶ್ರಾದ್ಧವು ಕೆಟ್ಟು ಹೋಯಿತಲ್ಲಾ ಏನು ಮಾಡಬೇಕೆಂಬ ಯೋಚನೆ ಹತ್ತಿಬಿಟ್ಟಿತು. ಸರಿ ಪುಸ್ತಕಗಳನ್ನು ಹುಡುಕುವುದಕ್ಕೆ ಪ್ರಾರಂಭ. ನಮ್ಮ ತಂದೆಯವರ ಪೆಟ್ಟಿಗೆಯಲ್ಲಿದ್ದ ಪುಸ್ತಕಗಳೆಲ್ಲಾ ಹೊರಕ್ಕೆ ಬಂದವು. ಓಲೆಯ ಪುಸ್ತಕಗಳೆಲ್ಲ ರಾಶಿರಾಶಿಯಾಗಿ ಹೊರಗೆ ಬಿದ್ದವು. "ಬ್ರಾಹ್ಮಣ"ರಿಗೆ ಹಸಿವು ಪ್ರಾಣಹೋಗುತ್ತಿದ್ದಿತು. ಆದರೆ ಈ ಶಾಸ್ತ್ರಾರ್ಥ ನಿರ್ಣಯವಾಗುವವರೆಗೆ, ಅವರು ಬಾಯಿಗೆ ಅನ್ನವನ್ನಿಡುವಂತಿರಲಿಲ್ಲ. ನಮ್ಮ ಮನೆಯಲ್ಲಿದ್ದ ಒಂದು ಪುಸ್ತಕದಲ್ಲಿಯೂ ನಮ್ಮ ಭಾವನವರಿಗೆ ಬೇಕಾದ ವಿಷಯ ದೊರಕಲಿಲ್ಲ. ಅವರು “ಬ್ರಾಹ್ಮಣ” ರನ್ನು ಎಲೆಯ ಮುಂದೆಯೇ ಕೂರಿಸಿ, ನಮ್ಮ ಚಿಕ್ಕಪ್ಪನವರ ಮನೆಗೆ ಓಡಿದರು. ಅಲ್ಲಿ ನೂರಾರು ಪುಸ್ತಕಗಳನ್ನು ತಿರಿವಿಹಾಕಿದುದಾಯಿತು. ಅನಂತರ ಆಚೆ ಬೀದಿ ಪುರೋಹಿತರ ಮನೆಗೆ ಓಡಿದರು. ಅಲ್ಲಿಂದ ೨೦೦ ಪುಸ್ತಕಗಳು ಬಂದವು. ಯಾವುದರಲ್ಲೂ ಶೂದ್ರನು "ಉಣ್ಣೆ ಉಣ್ಣಿ” ಎಂದರೆ ಏನು ಮಾಡಬೇಕೆಂಬ ವಿಷಯ ಬರೆದಿರಲಿಲ್ಲ. ಇಷ್ಟು ಹೊತ್ತಿಗೆ ಸಾಯಂಕಾಲ ೬ ಗಂಟೆ ಆಯಿತು. ನಾವು ೩-೪ ಸಲ ಕಾಫಿ ತಿಂಡಿ ಹೊಡೆದುಬಿಟ್ಟಿದ್ದುದರಿಂದ, ನಮಗೆ ಹಸಿವು ತೋರಲಿಲ್ಲ. ವಿನೋದ ಮಾತ್ರ ಉಂಟಾಯಿತು. ನಮ್ಮ ತಂದೆಯವರು-

“ಕಾಲು ಜೋಗು ಹಿಡಿದು ಹೋಯಿತು. ಇನ್ನು ಕೂತಿರೋದಕ್ಕೆ ಆಗೋದಿಲ್ಲ” ಎಂದರು.

ಇನ್ನೊಬ್ಬ ಬ್ರಾಹ್ಮಣರು (ಅವರಿಗೆ ವಯಸ್ಸು ೬೫ ಆಗಿದ್ದಿತು) "ಜಲಸ್ಪರ್ಶಕ್ಕೆ ಹೋಗಬೇಕಯ್ಯ; ಇನ್ನು ಕೂತಿರೋಕೆ ಆಗೋದಿಲ್ಲ" ಅಂದರು.

ನಮ್ಮ ಭಾವನವರು ಯಾವುದಕ್ಕೂ ಅವಕಾಶ ಕೊಡಲಿಲ್ಲ.

"ಇಂತಹ ಸಮಯದಲ್ಲಿ ನೀವು ಮಾತನಾಡುವುದೂ ಕೂಡ ತಪ್ಪು, ಅದಕ್ಕೂ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗುತ್ತದೆ" ಎಂದರು.

ಕೊನೆಗೆ ಹುಡುಕಿ ಹುಡುಕಿ ಬೇಸರಿಕೆಯಾಗುವ ಸಮಯಕ್ಕೆ ಯಾವುದೋ ಪ್ರಯೋಗ ಪಾರಿಜಾತದಲ್ಲಿ ಈ ರೀತಿ ಒಂದು ವಾಕ್ಯವು ದೊರೆಯಿತು.

“ಶ್ರಾದ್ಧದ ದಿವಸ ಶೂದ್ರನು ನಮ್ಮೊಂದಿಗೆ ಮಾತನಾಡಿದರೆ ಪರವಾಯಿಲ್ಲ. ಆದರೆ ನಾವು ಅವನೊಂದಿಗೆ ಮಾತನಾಡಕೂಡದು."

ಆದರೆ ನಮ್ಮ ಭಾವನವರು ಅದಕ್ಕೂ ಕೂಡ ಒಪ್ಪಲಿಲ್ಲ. “ನಾನು ಅವನನ್ನು 'ವಿಧವಾಪತಿ ಪಿಶಾಚಿ' ಎಂದೆನೆಲ್ಲ? ಅದರಿಂದ ಅವನೊಂದಿಗೆ ಮಾತನಾಡಿದಂತೆ ಆಯಿತೆಲ್ಲ” ಎಂದು ಪ್ರಾರಂಭಿಸಿದರು. ಕೊನೆಗೆ ತಾವು ಅವನೊಂದಿಗೆ ಮಾತನಾಡಲಿಲ್ಲವೆಂದೂ, ತಮ್ಮ ಪಾಡಿಗೆ ತಾವು ಮಾತನಾಡಿ ಕೊಂಡೆವೆಂದೂ ತೀರ್ಮಾನಿಸಿಕೊಂಡರು. ಅಂತೂ ರಾತ್ರಿ ೮ ಗಂಟೆಗೆ "ಬ್ರಾಹ್ಮಣರು” ಎದ್ದರು. ೧೦ ಗಂಟೆಗೆ ನಮಗೆಲ್ಲ ಊಟವಾಯಿತು.

ಮಾರನೆ ವರುಷ ನಮ್ಮ ಭಾವನರು ಮತ್ತೆ “ಬ್ರಾಹ್ಮಣಾರ್ಥಕ್ಕೆ" ಆಹ್ವಾನಿಸಬೇಕೆಂದು ಆ ಮುದುಕರ ಮನೆಗೆ ಹೋದರು. ಇವರನ್ನು ಕಂಡ ಕೂಡಲೆ ಮುದುಕರು"ಪುಣ್ಯಾತ್ಮ ನಮಸ್ಕಾರತಕೊ. ಹೋದ ವರುಷ ಜಲಸ್ಪರ್ಶ ಕಟ್ಟಿಕೊಂಡದ್ದು ಸುಧಾರಿಸಿಕೊಳ್ಳಬೇಕಾದರೆ ನನಗೆ ಒಂದು ತಿಂಗಳು ಬೇಕಾಯಿತು. ಆ ಅನುಭವ ಮತ್ತಾರಿಗಾದರೂ ಈ ವರುಷ ಉಂಟಾಗಲಿ” ಎಂದು ಬಿಟ್ಟರು.

ನಮ್ಮ ಭಾವನರು ಮತ್ತೆ “ಎಲ್ಲಾ ಆ ವಿಧವಾಪತಿಯಿಂದ ಆದ ಅನಾಹುತ” ಎಂದುಕೊಂಡು ಮನೆಗೆ ಬಂದರು.

ಭಾವನವರನ್ನು ಕಂಡಾಗಲೆಲ್ಲಾ ಈ ವಿಷಯ ಜ್ಞಾಪಕ ಬಂದು ನಗು ಬರುತ್ತೆ, ನಗಬಾರದೆಂದು ಯೋಚಿಸಿಕೊಳ್ಳುತ್ತೇನೆ. ಆದರೆ ನಗೆಗೆ ನೀತಿಯೇ ಇಲ್ಲ.

೪. ಶೀನಪ್ಪ ನುಂಗಿದ ಇಡ್ಲಿ

ನಮ್ಮ ಸ್ನೇಹಿತ ಶೀನಪ್ಪನ ಮೇಲೆ ವೆಂಕ್ಟಾಚಾರಿಗೆ ಬಹಳ ದಿವಸಗಳಿಂದ ಕಣ್ಣಿತ್ತು. ಅದಕ್ಕೆ ಕಾರಣವಿಲ್ಲದೆ ಇರಲಿಲ್ಲ. ಹೋದ ವರುಷದ ಯುಗಾದಿ ಹಬ್ಬದ ದಿನ ವೆಂಕ್ಟಾಚಾರಿಯ ಮನೆಗೆ ಶೀನಪ್ಪ ಹೋಗಿದ್ದ. ವೆಂಕ್ಟಾಚಾರಿಯ ತಾಯಿಯು ಅವನಿಗೂ ಶೀನಪ್ಪನಿಗೂ ಒಂದೊಂದು ಇಡ್ಲಿ ತಂದು ಕೊಟ್ಟರು. ಶೀನಪ್ಪ ಇಡ್ಲಿ ಬೇಡ ಅಂದ. ಆದರೆ ಅದರ ಮೇಲೆ ಹಾಕಿದ್ದ ನಿಂಬೆಕಾಯಿ ಗಾತ್ರದ ಬೆಣ್ಣೆಯನ್ನು ನೋಡಿ, ಬೆಣ್ಣೆಯನ್ನು ತಿಂದು ಬಿಡೋಣವೆಂದು ಇಡ್ಲಿ ಕೈಗೆ ತೆಗೆದುಕೊಂಡ. ಬಾಯಿಗೆ ಒಂದು ಚೂರನ್ನು ಹಾಕಿಕೊಂಡಕೂಡಲೆ, ಇಡ್ಲಿಯು ಬಹಳ ರುಚಿಯಾಗಿದ್ದುದು ಗೊತ್ತಾದುದರಿಂದ, ಮತ್ತೆ ಮಾತನಾಡದೆ ಪೂರ್ತಾ ಇಡ್ಲಿಯನ್ನೂ ನುಂಗಿಯೇ ಬಿಟ್ಟ.

ವೆಂಕ್ಟಾಚಾರಿ ಮಾತ್ರ ಇಡ್ಲಿಯನ್ನು ಸುತ್ತಾ ಮುರಿದು ತಿನ್ನುತ್ತಾ, ಮಧ್ಯದ ಬೆಣ್ಣೆಯನ್ನು ಕೊನೆಯಲ್ಲಿ ತಿನ್ನೋಣವೆಂದು ಮುಟ್ಟಿದೆ ಹಾಗೆಯೇ ಕೈಯಲ್ಲಿ ಹಿಡಿದುಕೊಂಡಿದ್ದ. ಕೊನೆಯ ಚೂರಿನೊಂದಿಗೆ ಅಷ್ಟು ಬೆಣ್ಣೆಯನ್ನೂ ಬಾಯಿಗೆ ಹಾಕಿಕೊಂಡು ಬಿಡಬೇಕೆಂದು ಅವನಿಗೆ ಇಷ್ಟವಿದ್ದಿತು. ಅವನು ಯಾವ ತಿಂಡಿಯನ್ನಾದರೂ, ಬಾಲ್ಯದಿಂದಲೂ ಹೀಗೆಯೇ ತಿನ್ನುವ ಪದ್ದತಿ. ಶೀನಪ್ಪ ವೆಂಕ್ಟಾಚಾರಿಯ ಕೈಯನ್ನು ನೋಡಿದ. ಆರು ಕಾಸಿನ ಅಗಲ ಇಡ್ಲಿ, ಅದರ ಮೇಲೊಂದು ನಿಂಬೆಕಾಯಿ ಗಾತ್ರದ ಬೆಣ್ಣೆ, ಅದನ್ನು ಕಂಡು ಶೀನಪ್ಪನಿಗೆ ಬಾಯಿನೀರು ಕರೆಯಿತು. “ಅಯ್ಯೋ ಇನ್ನೊಂದು ಗಳಿಗೆಗೆ ಅದು ವೆಂಕ್ಟಾಚಾರಿಯ ಬಾಯಿಗೆ ಮಾಯವಾಗಿ ಬಿಡುವುದಲ್ಲಾ” ಎಂದು ಅವನಿಗೆ ಕಳವಳ ಹತ್ತಿತು. ಅಷ್ಟರಲ್ಲಿ ಒಂದು ಆಲೋಚನೆ ತೋರಿತು. ಶೀನಪ್ಪ ಬೆಕ್ಕಿನಂತೆ, ಒಂದೇ ಏಟಿಗೆ, ವೆಂಕ್ಕಾಚಾರಿಯ ಕೈಲಿದ್ದ ಬೆಣ್ಣೆಯನ್ನೂ ಇಡ್ಲಿಯನ್ನೂ ಕಿತ್ತುಕೊಂಡು ಬಾಯಿಗೆ ಹಾಕಿಕೊಂಡು ಬಿಟ್ಟ, ವೆಂಕ್ಟಾಚಾರಿ ಏನಾಯಿತೆಂದು ತಿಳಿಯುವಷ್ಟರಲ್ಲಿಯೇ ಅವನ ಕೈಯಲ್ಲಿದ್ದ ಇಡ್ಲಿಯ ಬೆಣ್ಣೆಯೂ ಮಾಯವಾಗಿದ್ದಿತು.

ವೆಂಕ್ಟಾಚಾರಿಗೆ ಬಹಳ ಸಿಟ್ಟು ಹತ್ತಿತು. ಆಮೇಲೆ ಅವನು ೮-೧೦ ದಿವಸ ಶೀನಪ್ಪನ ಮನೆಗೆ, ಅವನು ಕಾಫಿ ಕುಡಿಯುವ ವೇಳೆಯಲ್ಲಿ ಹೋದ. ಸಾಧ್ಯವಾದರೆ ಶೀನಪ್ಪನು ತಿನ್ನುವುದಕ್ಕೆ ಕುಳಿತಿದ್ದಾಗ, ಅವನ ಕೈಯಿನ ತಿಂಡಿಯನ್ನೋ ಕಾಫಿಯನ್ನೊ ಹಾರಿಸಿಬಿಟ್ಟು, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಬೇಕೆಂದು ಅವನಿಗೆ ಆಸೆ, ಶೀನಪ್ಪನಿಗೆ ವೆಂಕ್ಟಾಚಾರಿಯ ಈ ಸುಳಿವು ಗೊತ್ತಾಯಿತು. ಅವನು ಬಹಳ ಎಚ್ಚರಿಕೆಯಿಂದಿದ್ದ. ವೆಂಕ್ಟಾಚಾರಿ ನಿರಾಶನಾಗಿ ಸುಮ್ಮನಿರಬೇಕಾಯಿತು. ಆದರೆ ಶೀನಪ್ಪ ಮಹಾ ವರಟ. ಅವನಿಗೆ ಉಪಾಯದಿಂದ ಪ್ರತೀಕಾರಮಾಡಬೇಕೇ ಹೊರತು, ಶಕ್ತಿಯಿಂದ ಸಾಧ್ಯವಿಲ್ಲವೆಂದು ವೆಂಕ್ಟಾಚಾರಿಗೂ, ನಮ್ಮ ಊರಿನ ಉಳಿದವರಿಗೂ ಚೆನ್ನಾಗಿ ಗೊತ್ತು.

ಹೋದ ವರುಷ ಶೀನಪ್ಪನ ತಾಯಿ ಸ್ವರ್ಗಸ್ಥರಾದರು. ಅವರ ಮನೆಯಲ್ಲಿ ಯಾವ ಹಬ್ಬಗಳೂ ಇಲ್ಲ. ಹಬ್ಬದ ದಿವಸಗಳಲ್ಲಿ ಊರಿನವರೆಲ್ಲಾ ಅವರ ಮನೆಗೆ ತಮ್ಮ ತಮ್ಮ ಮನೆಗಳಲ್ಲಿ ಮಾಡಿದ್ದ ಭಕ್ಷ್ಯಭೋಜ್ಯಗಳನ್ನು ತೆಗೆದುಕೊಂಡು ಹೋಗಿ ಕೊಡುವುದು ಪದ್ಧತಿ. ಶ್ರೀಕೃಷ್ಣ ಜಯಂತಿ ಉತ್ಸವ ಬಂತು. ಅಯ್ಯಂಗಾರ ಗೋಕುಲಾಷ್ಟಮಿ ಅಂದ್ರೆ ನಿಮಗೆ ಗೊತ್ತೇ ಇದೆ. ಶೀನಪ್ಪನ ಮನೆಗೆ, ತಮ್ಮ ಮನೆಯಲ್ಲಿ ಮಾಡಿದ್ದರೆ ಎಷ್ಟು ತಿಂಡಿ ಇರುತ್ತಿತ್ತೋ, ಅದಕ್ಕಿಂದ ಹೆಚ್ಚು ತಿಂಡಿ ಬಂದುಬಿಟ್ಟಿತು. ವೆಂಕ್ಟಾಚಾರಿ ಶೀನಪ್ಪನ ಪ್ರಾಣಸ್ನೇಹಿತ. ಬಲವಾದ ಒಂದು ಕುಕ್ಕೆ ತಿಂಡಿ ತೆಗೆದುಕೊಂಡು ಹೋಗಿ, ಶೀನಪ್ಪನ ಮನೆಗೆ ಕೊಟ್ಟ. ಅದೇ ಸಂಧ್ಯಾಕಾಲ, ಶೀನಪ್ಪನ ಮನೆಯ ಜಗುಲಿಯ ಮೇಲೆ, ವೆಂಕ್ಟಾಚಾರಿ ಶೀನಪ್ಪನೊಂದಿಗೆ ಏನೋ ಮಾತನಾಡುತ್ತಾ ಕುಳಿತಿದ್ದ. ಗೋಕುಲಾಷ್ಟಮಿಯ ದಿವಸ ನಮ್ಮಗಳ ಮನೆಗೆ ನಮ್ಮ ರೈತರೆಲ್ಲಾ ದೇವರ ಪ್ರಸಾದಕ್ಕಾಗಿ ಸಾಯಂಕಾಲ ಬರುವ ಪದ್ದತಿ. ಅವರು ಒಂದು ಮನೆಯನ್ನೂ ಬಿಡದೆ ಪ್ರಸಾದವನ್ನು ವಸೂಲಿಮಾಡಿಕೊಂಡೇ ಹೋಗುತ್ತಾರೆ. ತಾವಾಗಿಯೇ ಬರದ ಗೌಡರುಗಳನ್ನು, ನಾವೇ ಗೌರವದಿಂದ ಮನೆಗೆ ಕರೆಸಿ ಅವರಿಗೆ ದೇವರ ಪ್ರಸಾದವನ್ನು ಕೊಟ್ಟು ಕಳುಹಿಸುತ್ತೇವೆ. ಪ್ರಸಾದವೆಂಬುದು: ಅರಳು, ಚಕ್ಕುಲಿ, ಕೋಡಬಳೆ. ಗೋಕುಲಾಷ್ಟಮಿಯ ಸಂಧ್ಯಾಕಾಲ,-ನಮ್ಮೂರ ಪೇಟೆಯ ರೈತರೆಲ್ಲಾ ಈ ಪ್ರಸಾದಕ್ಕಾಗಿ ಊರ ಬೀದಿಗಳಲ್ಲಿ 'ಗಸ್ತು' ಹೊಡೆಯುತ್ತಿರುತ್ತಾರೆ. ಅವರ ಗುಂಪೊಂದು ಪದ್ದತಿಯ೦ತೆ ಶೀನಪ್ಪನ ಮನೆಯ ಮುಂದಕ್ಕೂ ಬಂದಿತು. ಶೀನಪ್ಪನು

“ಈ ವರುಷ ನನಗೆ ಹಬ್ಬವಿಲ್ಲ. ತಿಳಿಯದೆ ” ಎಂದ.

ಅವರು “ಹೌದು ಹೌದು” ಎಂದುಕೊಂಡು ಹೊರಟು ಹೋದರು.

ಒಮ್ಮಿಂದೊಮ್ಮೆ ವೆಂಕ್ಟಾಚಾರಿಗೆ ಶೀನಪ್ಪ ಹಾರಿಸಿದ್ದ ಇಡ್ಲಿ, ಬೆಣ್ಣೆಯ ಜ್ಞಾಪಕ ಬಂದಿತು. ಈಚೆಗೆ ಶೀನಪ್ಪನನ್ನು ಕಂಡಾಗಲೆಲ್ಲಾ ಅವನಿಗೆ ಅದರ ಜ್ಞಾಪಕ ಬರುತ್ತಿದ್ದಿತೆಂದು ಹೇಳಬಹುದು. ಅವನು ಏನನ್ನೋ ಯೋಚಿಸಿಕೊಂಡು "ಈಗಲೇ ಬಂದೆ" ಎಂದು ಹೇಳುತ್ತಾ ತನ್ನ ಮನೆಗೆ ಹೊರಟುಹೋದನು.

ವೆಂಕ್ಟಾಚಾರಿ ಮನೆಗೆ ಹೋಗಿ ಬರುವುದಕ್ಕೆ ೧೦ ನಿಮಿಷ ಹಿಡಿದಿರಬಹುದು. ಅವನು ಹಿಂದಿರುಗುವ ವೇಳೆಗೆ ಶೀನಪ್ಪ ಬಾಗಿಲಿನಿಂದ ಎದ್ದು ಹೋಗಿ ಒಳಗೆ ಕುಳಿತಿದ್ದ. ವೆಂಕ್ಟಾಚಾರಿಯು ಕೈಯಲ್ಲಿ ತಂದಿದ್ದ ಅರಳನ್ನು ಬಾಗಿಲಿನಲ್ಲಿಯೂ, ಜಗಲಿಯ ಮೇಲೆಯೂ ಚೆಲ್ಲಿ ಬಿಟ್ಟು, ಮೊದಲು ತಾನು ಕುಳಿತಿದ್ದ ಸ್ಥಳದಲ್ಲಿಯೇ ಕುಳಿತುಕೊಂಡ. ಸ್ನೇಹಿತನು ಬಂದದ್ದನ್ನು ನೋಡಿ, ಶೀನಪ್ಪನು ಬಾಗಿಲಿಗೆ ಬಂದ. ಆದರೆ ಚೆಲ್ಲಿದ್ದ ಅರಳನ್ನು ಮಾತ್ರ ನೋಡಲಿಲ್ಲ. ಆ ವೇಳೆಗೆ ಪೇಟೆಯ ರೈತರ ಮತ್ತೊಂದು ಗುಂಪು, ಶೀನಪ್ಪನ ಬಾಗಿಲಿಗೆ ಪ್ರಸಾದಕ್ಕಾಗಿ ಬಂದಿತು. ಆ ಗುಂಪಿನಲ್ಲಿ ಮಾದ ಇದ್ದ. ಮಾದನಿಗೆ ಕೋಪ ಹೆಚ್ಚು. ಅವನು ಮೆಲ್ಲಗೆ ಮಾತನಾಡಿದರೂ ಒಂದು ಮೈಲಿ ಕೇಳುತ್ತದೆ. ಅವನ ಧ್ವನಿಗೆ ಹೆದರಿಯೇ ಅನೇಕರು ಅವನಿಗೆ ಕುಕ್ಕೆಯ ತುಂಬ ಚಕ್ಲಿ ಅರಳನ್ನು ಸುರಿದು ಬಿಡುತ್ತಿದ್ದರು. ಶೀನಪ್ಪನಿಗೂ ಕೂಡ ಮಾದನನ್ನು ಕಂಡರೆ ಸ್ವಲ್ಪ ಭಯವೇ ಇದ್ದಿತು. “ಅವನನ್ನು ಸಮಾಧಾನಪಡಿಸುವುದು ಹೇಗೆ" ಎಂದು ಅವನು ಯೋಚಿಸುತ್ತಿದ್ದನು. "ವೆಂಕ್ಟಾಚಾರಿ ಇದಾನಲ್ಲ. ನನ್ನ ಪರ ಹಿಡಿದು ಮಾತನಾಡುತ್ತಾನೆ, ಪರವಾಯಿಲ್ಲ" ಎಂದುಕೊಂಡನು. ಮಾದನು ಬಾಗಿಲಿಗೆ ಬಂದವನೆ ದಪ್ಪ ಧ್ವನಿಯಲ್ಲಿ

“ಶೀನಪ್ಪನವೆ, ಎಲ್ಲಿ ಅರಳು ಚಕ್ಲಿ ಪ್ರಸಾದ ಎಲ್ಲಾ? ಅಪ್ಪಣೆಮಾಡಿ” ಎಂದನು.

ಶೀನಪ್ಪನು "ಮಾದಯ್ಯ, ಈಸಲ ನಮಗೆ ಹಬ್ಬವಿಲ್ಲ, ನಮ್ಮ ಅಮ್ಮ ಸ್ವರ್ಗಸ್ಥರಾದದ್ದು ತಿಳಿಯದೆ?” ಎಂದು ಹೇಳಿ ವೆಂಕ್ಟಾಚಾರಿಯ ಕಡೆ ನೋಡಿದನು.

ಮಾದನು ಜತೆಯವರೊಂದಿಗೆ ಹೊರಡುವುದರಲ್ಲಿದ್ದುದನ್ನು ಕಂಡು ವೆಂಕ್ಟಾಚಾರಿಯು ಶೀನಪ್ಪನ ಮುಖವನ್ನು ನೋಡಿ

“ಯಾಕ್ರಿ ಸುಳ್ಳು ಹೇಳೀರಿ?” ಎಂದನು.

ಮಾದನು ತಕ್ಷಣ ಶೀನಪ್ಪನ ಕಡೆಗೆ ಮುಖವನ್ನು ತಿರುಗಿಸಿದನು. ಶೀನಪ್ಪನು ಆಶ್ಚರ್‍ಯದಿಂದ ವೆಂಕ್ಟಾಚಾರಿಯನ್ನು ನೋಡುತ್ತಿದ್ದನು. ವೆಂಕ್ಟಾಚಾರಿಯು ಮಾದನ ಕಡೆ ತಿರುಗಿ

"ಮಾದಯ್ಯ ನಿನಗೆ ಮಾತ್ರ ಇಲ್ಲ. ಇದುವರೆಗೆ ಬಂದವರಿಗೆಲ್ಲಾ ಇವರು ಪ್ರಸಾದವನ್ನು ಕೊಟ್ಟರು. ಇಲ್ಲಿ ಚೆಲ್ಲಿರುವ ಅರಳು ಮತ್ತು ಪುರಿಯನ್ನು ನೋಡು” ಎಂದನು. ಮಾದನು ನೋಡಿದನು. ಮಾದನು ಕೋಪದಿಂದ ಹುಚ್ಚಾದನು. ಶೀನಪ್ಪನು ಆಶ್ಚರ್‍ಯದಿಂದ ಮೂಕನಾದನು. ಮಾದನು ದೊಡ್ಡ ಧ್ವನಿಯಿಂದ

"ಶೀನಪ್ಪ, ವರ್ಷಕ್ಕೊಂದು ಹಬ್ಬ. ತಾತ ಮುತ್ತಾತಂದಿರ ಕಾಲದಿಂದ ಬಂದಿದ್ದ ಪರ್ದಿಷ್ಟ (ಪದ್ದತಿ); ಸಾಲದ್ದ್ಕೆ ಸುಳ್ಬೇರೆ ಹೇಳ್ತೀರಿ, ನಾವೇನು ನಿತ್ಯ ಬಂದೇವಾ?” ಎಂದು ಘರ್ಜಿಸಿದನು. ಮಾದನ ಕೂಗನ್ನು ಕೇಳಿ, ಬೀದಿಯ ಜನವೆಲ್ಲಾ ಶೀನಪ್ಪನ ಬಾಗಿಲಿನಲ್ಲಿ ನೆರೆದು ಬಿಟ್ಟಿತು. ವೆಂಕ್ಟಾಚಾರಿ ಮಾತ್ರ ನಗುತ್ತಾ ಕುಳಿತಿದ್ದನು. ನಾನು ಶೀನಪ್ಪನನ್ನು ಕುರಿತು, "ಏನಯ್ಯ ಇದು ಅವಾಂತರ" ಎಂದೆ. ಅವನು ವೆಂಕ್ಟಾಚಾರಿಯ ಕಡೆ ನೋಡುತ್ತಾ "ಇವನ ಮನೆ ಹಾಳಾಯ್ತು, ಎಲ್ಲಾ ಈ ಪಿಶಾಚಿಯ ಚೇಷ್ಟೆ” ಎಂದನು. ವೆಂಕ್ಟಾಚಾರಿಯ ಕಡೆ ನೋಡಿದೆ. ಭೀಮನು ದುರ್ಯೋಧನನ್ನು

“ಹರಿಸಂಧಾನಕ್ಕೆ ವಂದಂದವಘಡಿಸಿದಹಂಕಾರ ಮೆಲ್ಲಿತ್ತೊ" ಎಂದು ಮೂದಲಿಸಿದಂತೆ "ಆ ದಿವಸ ಇಡ್ಲಿ ಬೆಣ್ಣೆ ನುಂಗಿದ ಜಂಭ ಎಲ್ಲಿ ಹೋಯ್ತ? ಈಗ ಕಕ್ಕು” ಎಂದನು.

ಎಲ್ಲರೂ ಘೊಳ್ಳೆಂದು ನಕ್ಕೆವು. ಶೀನಪ್ಪನೂ ನಕ್ಕನು. ಮಾದನಿಗೆ ವಿಷಯವನ್ನೆಲ್ಲಾ ತಿಳಿಸಿ, ವೆಂಕ್ಟಾಚಾರಿಯು ತನ್ನ ಮನೆಗೆ ಕರೆದುಕೊಂಡು ಹೋಗಿ, ಅವನಿಗೆ ತಿಂಡಿಯನ್ನೂ ಪ್ರಸಾದವನ್ನೂ ಕೊಟ್ಟು ಕಳುಹಿಸಿದನು. ಶೀನಪ್ಪ ಮಾತ್ರ "-ಮಗ ವೆಂಕ್ಟಾಚಾರಿ ಇಷ್ಟು ಉಪಾಯಗಾರನೆಂದು ನಾನು ತಿಳಿದಿರಲಿಲ್ಲಾ" ಎಂದನು.

೫. ಮುಯ್ಯಿಗೆ ಮುಯ್ಯಿ

ಕಿಟ್ಟುವಿನ ಹೊಟ್ಟೆಯ ಆಳ ಅವನ ತಾಯಿಗೆ ಮಾತ್ರ ಗೊತ್ತಿದ್ದಿತೇನೋ? ಅವನಿಗೆ ತಿಂಡಿಕೊಟ್ಟು ತೃಪ್ತಿಪಡಿಸಿದವರನ್ನು ನಾನು ಇದುವರೆಗೆ ಎಲ್ಲೂ ನೋಡಲಿಲ್ಲ. ಅವರ ಅಜ್ಜಿ ಒಬ್ಬರು ಮಾತ್ರ ಕಿಟ್ಟುವಿಗೆ ಬೇಕಾದಷ್ಟು ದೋಸೆಯನ್ನು ಕೊಟ್ಟು, ಅವನ ಬಾಯಿಂದ "ಹೊಟ್ಟೆ ತುಂಬಿತು" ಅನ್ನಿಸಿದ್ದರಂತೆ. ಅವರ ಅಜ್ಜಿಯು ಸತ್ತು ಹೋಗುವಾಗ ಕಿಟ್ಟುವಿನ ತಾಯಿಯೊಂದಿಗೆ "ಯಾವುದು ಎಲ್ಲಾದರೂ ಹೋಗಲಿ. ಕಿಟ್ಟುವಿಗೆ ಮಾತ್ರ ೬ ದೋಸೆ ನಿತ್ಯ ಕೊಡುವುದನ್ನು ಮರೆಯಬೇಡ” ಎಂಬುದಾಗಿ ಹೇಳಿದ್ದರಂತೆ. ಆರು ದೋಸೆ ಎಂದರೆ, ಈಗ ಹೋಟಲಿನಲ್ಲಿ ಎರಡುಕಾಸಿಗೆ ಒಂದರಂತೆ ಕೊಡುತ್ತಾರಲ್ಲ, ಅರಳಿ ಎಲೆಯಷ್ಟು ಅಗಲವಾಗಿ ತೆಳ್ಳಗಿರುವುದು; ಈ ತರದ ದೋಸೆಯಲ್ಲ. ಹೋಟಲಿನ ದೋಸೆ ಒಂದು 'ಗ್ರೋಸ್' ಕೊಟ್ಟಿದ್ದರೂ, ಕಿಟ್ಟುವಿಗೆ ಹೊಟ್ಟೆ ತುಂಬುತ್ತಿರಲಿಲ್ಲ. ಅವರ ಮನೆಯಲ್ಲಿ ಮಾಡುತ್ತಿದ್ದ ದೋಸೆ ಒಂದು ಅಂಗೈ ಮಂದವಾಗಿ, ೬ ದೋಸೆಗೆ ಅರ್ಧ ಸೇರು ಹಿಟ್ಟು ಬೇಕಾಗುತ್ತಿದ್ದಿತು. ಅವರ ತಾಯಿಯವರು, ಕಿಟ್ಟುವು ತಿನ್ನುತ್ತಿರುವಾಗ, ಇತರರನ್ನು, ಅವನಿಗೆ ದೃಷ್ಟಿಯಾಗಬಹುದೆಂದು ಒಳಗೆ ಬರಗೊಡುತ್ತಿರಲಿಲ್ಲ. ನಮ್ಮ ಸ್ನೇಹಿತರಂತೂ 'ಪ್ರಾಣಾಹುತಿಗೇ ಕಿಟ್ಟುವಿಗೆ ಅರ್ಧ ನಾವು ಅಕ್ಕಿ ಅನ್ನ-ಬೇಕು' ಎಂದು ಹಾಸ್ಯ ಮಾಡುತ್ತಿದ್ದರು.

ಕಿಟ್ಟುವು ನಮ್ಮೂರ ಸ್ಕೂಲಿನಲ್ಲೇ 'ಲೋವರ್ ಸೆಕಂಡರಿ ಪರೀಕ್ಷೆ ಪ್ಯಾಸ್' ಮಾಡಿಬಿಟ್ಟ. ಆಮೇಲೆ ಅವನನ್ನು ಹಾಸನಕ್ಕೆ ಇಂಗ್ಲಿಷ್ ಓದುವುದಕ್ಕೆ ಕಳುಹಿಸಬೇಕಾಯಿತು. ಅವರ ತಾಯಿಯವರಿಗೆ, “ಇವನಿಗೆ ಹೋಟಲಿನಲ್ಲಿ ಹೊಟ್ಟೆ ತುಂಬ ಅನ್ನ ಹಾಕ್ತಾರೋ ಇಲ್ಲವೋ” ಎಂಬ ಯೋಚನೆ. ಅವರ ತಂದೆಯವರಿಗೆ "ಅನ್ಯಾಯವಾಗಿ ಹೋಟಲಿನಲ್ಲಿ ತಿಂದು ಜಾತಿ ಕೆಟ್ಟು ಹೋಗ್ತಾನಲ್ಲ” ಎಂಬ ಚಿಂತೆ. ಅವರು ಬಹಳ ವೈದಿಕರಾದುದರಿಂದ ಹೋಟೆಲಿನ ಹೆಸರು ಕೇಳಿದರೆ ಅವರಿಗೆ ಮೈಯೆಲ್ಲಾ ಉರಿಯುತ್ತಿದ್ದಿತು. ಆದರೆ ನಮ್ಮೂರ ರಾಮಣ್ಣನವರ ಮಗ ನರಹರಿಯು “ಏನೂ ಪರವಾಗಿಲ್ಲ, ಹೋಟಲಿನಲ್ಲಿ ಬಹಳ ಮಡಿಯಾಗಿದ್ದಾರೆ. ನಾನು ಊಟ ಮಾಡುತ್ತಿರುವ ಹೋಟಲಿನಲ್ಲಿ ಬ್ರಾಹ್ಮಣರನ್ನು ಹೊರತು ಇತರರನ್ನು ಸೇರಿಸುವುದೇ ಇಲ್ಲ" ಎಂದು ಹೇಳಿದ. ನರಹರಿಗೆ ಹಾಸನದ ಒಂದು ವರ್ಷದ ಅನುಭವವಾಗಿತ್ತು. ಕಿಟ್ಟುವಿನ ತಂದೆ ಅವನ ಮಾತನ್ನು ನಂಬಿ, ಕಿಟ್ಟುವು ಹಾಸನಕ್ಕೆ ಹೋಗಿ ಹೋಟೆಲಿನಲ್ಲಿ ಊಟಮಾಡಿಕೊಂಡು, ಇಂಗ್ಲಿಷ್ ವಿದ್ಯಾಭ್ಯಾಸವನ್ನು ಮುಂದರಿಸಬಹುದೆಂದು ಒಪ್ಪಿದರು. ಹುಡುಗರು ಮಾತ್ರ "ನಿನಗೆ ಊಟಹಾಕಿ ಹೋಟಲಿನವನು ಮಟ್ಟವಾಗಿ ಬಿಡುತ್ತಾನೆ" ಎಂದು ಹಾಸ್ಯ ಮಾಡಿದರು.

ನರಹರಿಯ ಕಿಟ್ಟುವೂ ಒಂದು ಮನೆಯ ಮಹಡಿಯ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಹೋಟಲಿನಲ್ಲಿ ಊಟಮಾಡುತ್ತಿದ್ದರು. ಕೊಠಡಿಯಿಂದ ಹೋಟಲು ಸುಮಾರು ಎರಡು ಫರ್ಲಾಂಗು ದೂರವಿತ್ತು. ಒಂದು ಭಾನುವಾರ ಅವರಿಬ್ಬರೂ ನಮ್ಮೂರಿಗೆ ಬಂದರು. ಕಿಟ್ಟುವಿನ ತಾಯಿಯೂ, ನರಹರಿಯ ತಾಯಿಯೂ ಅವರಿಬ್ಬರಿಗೂ ಹಾಸನಕ್ಕೆ ತೆಗೆದುಕೊಂಡು ಹೋಗಲು, ತಿಂಡಿಗಳನ್ನು ಮಾಡಿಕೊಟ್ಟರು. ಹೊರಡುವಾಗ ಕಿಟ್ಟುವಿನ ತಾಯಿಯು "೩-೪ ದಿವಸ ಇಟ್ಟುಕೊಂಡು ತಿನ್ನು, ಯಾರಿಗೂ ಕೊಡಬೇಡ" ಎಂಬುದಾಗಿ ಹೇಳಿದರು. ಯಾರಿಗಾದರೂ ಕೊಡುವುದಿರಲಿ, ತಾನು ಇತರರನ್ನು ಕೇಳದಿದ್ದರೆ ಕಿಟ್ಟುವಿಗೆ ಸಾಕಾಗಿತ್ತು. ಹಾಸನಕ್ಕೆ ಬರುವಾಗ ದಾರಿಯಲ್ಲಿಯೇ ಮುಕ್ಕಾಲುಪಾಲು ತಿಂಡಿಯನ್ನು ಕಿಟ್ಟುವು ನರಹರಿಗೂ ಕೊಟ್ಟು ತಾನೂ ಮುಗಿಸಿದನು. ಹಾಸನಕ್ಕೆ ೧೧ ಗಂಟೆಗೆ ಹೋಗಿ, ಸ್ಕೂಲಿನಿಂದ ಒಂದೂವರೆ ಗಂಟೆಯ ವಿರಾಮದಲ್ಲಿ ಕೊಠಡಿಗೆ ಹಿಂದಿರುಗಿ, ಉಳಿದ ತಿಂಡಿಯನ್ನು ಬಲಿಹಾಕಿಬಿಟ್ಟನು. ಗಂಟಿನಲ್ಲಿ ತಿಂಡಿ ಇರುವವರೆಗೆ ಅವನಿಗೆ ಸಮಾಧಾನವಿರಲಿಲ್ಲ. ಅನಂತರ ನಿರ್‍ಯೋಚನೆಯಾಯಿತು.

ಒಂದು ಗಂಟೆಯ ವಿರಾಮದಲ್ಲಿ ನರಹರಿ ಬಂದು ನೋಡಿದ. ಕಿಟ್ಟು ಕೊಠಡಿಯಲ್ಲಿಯೇ ಕುಳಿತಿದ್ದ. ನರಹರಿಯು ಬಂದುದನ್ನು ಕಂಡು ಕಿಟ್ಟುವು

"ಬಹಳ ಹಸಿವಾಗುತ್ತೆ ಕಣೋ, ಮಧ್ಯಾಹ್ನ ಹಾಳಾದ್ದು ಅಡಿಗೆ ಚೆನ್ನಾಗಿರಲಿಲ್ಲ, ಹೊಟ್ಟೆ ತುಂಬ ಊಟಮಾಡಲಿಲ್ಲ” ಎಂದ.

ನರಹರಿಗೆ ಗಾಬರಿಯಾಯಿತು. "ಇದೇನು ಇವನು ನನ್ನ ತಿಂಡಿಗೆ ಏಟುಹಾಕ್ತಾನೆ” ಎಂದುಕೊಂಡು, “ಊರಿಂದ ತಂದ ತಿಂಡಿ ಏನಾಯ್ತು" ಎಂದ.

ಕಿಟ್ಟುವು ಜಿಗುಪ್ಪೆಯಿಂದ "ಏನ್ಮಹಾತಿಂಡಿ. ಎಲ್ಲೋ ಒಂದ್ಚೂರು ತಂದಿದ್ದೆ, ದಾರೀಲೇ ತಿಂದ್ಹಾಕಿಬಿಟ್ಟೆ” ಎನ್ನುತ್ತಾ, ತಿಂಡಿ ಕಟ್ಟಿದ್ದ ಬರಿದಾದ ಚೌಕವನ್ನು ಅವನ ಕಡೆಗೆ ಎಸೆದನು. ನರಹರಿಯು ಮಾತನಾಡಲಿಲ್ಲ. ಅವನು ಮಹಾ ಜಿಪುಣ, ತಿಂಡಿಯ ಗಂಟನ್ನೇ ಬಿಚ್ಚಲಿಲ್ಲ. ಬಿಚ್ಚಿದರೆ ಎಲ್ಲಿ ಕಿಟ್ಟುವಿಗೆ ಕೊಡಬೇಕಾಗುವುದೋ? ಎಂಬ ಭಯ. ಕಿಟ್ಟುವೂ ಕೂತ ಜಾಗಾಬಿಟ್ಟು ಏಳಲೇ ಇಲ್ಲ. ನರಹರಿಯು ೨-೩ ಸಲ ಅವನ ಕಡೆಗೆ ಕೋಪದಿಂದ ನೋಡಿದ. ಕಿಟ್ಟುವು ಅದೊಂದನ್ನೂ ಲಕ್ಷ್ಯಮಾಡಲಿಲ್ಲ. ೨ ಗಂಟೆ ಆಗಿಹೋಯಿತು. ಇಬ್ಬರೂ ಸ್ಕೂಲಿಗೆ ಹೊರಟುಹೋದರು.

೫ ಗಂಟೆಗೆ ಸ್ಕೂಲನ್ನು ಬಿಟ್ಟ ಕೂಡಲೆ ನರಹರಿಯು ಬೇಗ ಬೇಗ ಕೊಠಡಿಗೆ ಬಂದನು. ಅವನ ಜ್ಞಾನವೆಲ್ಲಾ ತಿಂಡಿಯ ಮೇಲೆಯೇ ಇದ್ದಿತು. ಅವನು ಬರುವ ವೇಳೆಗೆ ಕಿಟ್ಟುವು ಆಗಲೇ ಬಂದು ಕೊಠಡಿಯಲ್ಲಿ ಕುಳಿತುಬಿಟ್ಟಿದ್ದನು. ನರಹರಿಯು ಕಿಟ್ಟುವನ್ನು ಕುರಿತು “ಎಲ್ಲೂ ಗಾಳಿಸಂಚಾರ ಹೋಗುವುದಿಲ್ಲವೇ ಕಿಟ್ಟು” ಎಂದನು. ಕಿಟ್ಟುವು "ಬಹಳ ಹಸಿವಾಗಿದೆ. ನಡೆಯೋದಕ್ಕೆ ತ್ರಾಣವಿಲ್ಲ. ತಿನ್ನೊದಕ್ಕೇನಾದರೂ ತಿಂಡಿ ಸಿಕ್ಕಿದರೆ ಹೋಗಬಹುದು" ಎಂದನು. ನರಹರಿಯು ಮಾತನಾಡದೆ ಸುಮ್ಮನಾದನು.

ಅನಂತರ ಇಬ್ಬರೂ ಹೋಟಲಿಗೆ ಹೋಗಿ ಊಟಮಾಡಿಕೊಂಡು ಬಂದರು. ನರಹರಿಯು ಆ ದಿವಸವೆಲ್ಲಾ ತಿಂಡಿಯನ್ನೇ ತಿಂದಿರಲಿಲ್ಲ. ರಾತ್ರಿ ಪಾಠವನ್ನೂ ಓದಲಿಲ್ಲ. ೯ ಗಂಟೆಗೆ ಮಲಗಿಕೊಂಡುಬಿಟ್ಟ. ಅವನು ಮಲಗಿದ ಕಾಲು ಗಂಟೆಯಮೇಲೆ ದೀಪವನ್ನು ಆರಿಸಿ, ಕಿಟ್ಟುವೂ ಮಲಗಿಕೊಂಡ. ಕಿಟ್ಟುವು ನರಹರಿಗೆ ನಿದ್ರೆ ಬಂದಿರಬಹುದೆಂದು ತಿಳಿದು ತಾನೂ ನಿದ್ರಿಸಲು ಪ್ರಯತ್ನ ಪಡುತ್ತಿದ್ದ. ಇವನು ಎಚ್ಚರವಾಗಿರುವುದು ನರಹರಿಗೆ ಗೊತ್ತಾಗಲಿಲ್ಲ. ಅವನು ಮೆಲ್ಲಗೆ ಹಾಸಿಗೆಯಿಂದ ಎದ್ದ. ಎದ್ದವನೇ ಸದ್ದಾಗದಂತೆ ಒಂದು ಗಂಟನ್ನು ಬಿಚ್ಚಿದ. ಗಂಟಿನಿಂದ ತಿಂಡಿ ತೆಗೆದು ಕತ್ತಲೆಯಲ್ಲಿಯೇ ತಿನ್ನುವುದಕ್ಕೆ ಪ್ರಾರಂಭಿಸಿದ. ನರಹರಿಯು ತಿಂಡಿ ಅಗಿಯುವ ಸದ್ದು ಕಿಟ್ಟುವಿಗೆ ಕೇಳಿಸಿತು. ಅವನು ಮನಸ್ಸಿನಲ್ಲಿಯೇ ನಕ್ಕು, "ಇರಲಿ ನಿನಗೆ ಮಾಡ್ತೀನಿ ಅಂದುಕೊಂಡು” ಸುಮ್ಮನಾದ.

ಮಾರನೆ ದಿವಸವೂ ಕಿಟ್ಟುವು ನರಹರಿಯ ಜೊತೆಯನ್ನು ಬಿಟ್ಟು ಅಲ್ಲಾಡಲಿಲ್ಲ. ಆವತ್ತೂ ನರಹರಿಗೆ ಹಗಲೆಲ್ಲಾ ತಿಂಡಿಯನ್ನು ತಿನ್ನಲು, ಅವಕಾಶವೇ ದೊರೆಯಲಿಲ್ಲ. ಮೊದಲ ದಿವಸದಂತೆಯೇ, ರಾತ್ರಿ ಕಿಟ್ಟುವು ಮಲಗಿದ ಮೇಲೆ ಅವನಿಗೆ ನಿದ್ರೆ ಬಂದಿರಬಹುದೆಂದು ನಂಬಿಕೆಯಾದಾಗ ತಿಂಡಿಯ ಗಂಟನ್ನು ಬಿಚ್ಚಿದ. ಕಿಟ್ಟು ಎಚ್ಚರವಾಗಿದ್ದರೂ ಮಾತನಾಡದೆ ಸುಮ್ಮನೆ ಮಲಗಿದ್ದ. ಅರ್ಧರಾತ್ರಿಗೆ ಕಿಟ್ಟುವಿಗೆ ಮತ್ತೆ ಎಚ್ಚರವಾಯಿತು. ಎದ್ದು ಸದ್ದು ಮಾಡದೆ ದೀಪವನ್ನು ಹಚ್ಚಿದ. ನರಹರಿಯ ಗಂಟನ್ನು ಬಿಚ್ಚಿ ನೋಡಿದ. 'ಸಜ್ಜಪ್ಪ' ಮತ್ತು ಅರಳುಹಿಟ್ಟು ಇತ್ತು. ಕಿಟ್ಟುವಿಗೆ ಒಂದು ಯೋಚನೆ ಹೊಳೆಯಿತು. ಲಾಂದ್ರವನ್ನು ಹಿಡಿದುಕೊಂಡು ಹೊರಕ್ಕೆ ಬಂದ. ಮನೆಯವರು ಬಾಗಿಲಿನಲ್ಲಿ ಬೆರಣಿಯನ್ನು ಕೊಂಡು ಹಾಕಿದ್ದರು. ಅದರಿಂದ ಚೆನ್ನಾಗಿ ತೆಳುವಾಗಿ ಅಗಲವಿಲ್ಲದಿದ್ದ ೭-೮ ಬೆರಣಿಗಳನ್ನು ಜೋಡಿಸಿಕೊಂಡು, ಬೀದಿಗೆ ಹೋಗಿ, ಸಣ್ಣ ಮರಳನ್ನು ಒಂದು ಸೇರಿನಷ್ಟು ಚೌಕದಲ್ಲಿ ಕಟ್ಟಿಕೊಂಡು ಒಳಕ್ಕೆ ಬಂದ. ನರಹರಿಯು ಭಯಂಕರ ಧ್ವನಿಯಲ್ಲಿ ಗೊರಕೆ ಹೊಡೆಯುತ್ತಿದ್ದ.

ಕಿಟ್ಟುವು ತಿಂಡಿಯ ಗಂಟಿನ ಸಜ್ಜಪ್ಪವನ್ನೆಲ್ಲಾ ತೆಗೆದುಕೊಂಡ. ಅದರ ಜಾಗದಲ್ಲಿ ಬೆರಣಿಯನ್ನು ಇಟ್ಟ. ಅರಳುಹಿಟ್ಟನ್ನೆಲ್ಲಾ ತನ್ನ ಚೌಕಕ್ಕೆ ಸುರಿದುಕೊಂಡು ಅಲ್ಲಿ ಸಣ್ಣ ಮರಳನ್ನಿಟ್ಟ. ಗಂಟನ್ನು ಮೊದಲಿನಂತೆಯೇ ಕಟ್ಟಿ, ಅದು ಇದ್ದ ಕಡೆಯೇ ಇಟ್ಟು ಮಲಗಿಬಿಟ್ಟ. ಅವನಿಗೂ ಬೇಗ ನಿದ್ರೆ, ಬಂದುಬಿಟ್ಟಿತು. ಬೆಳಗಾಯಿತು.

ಕಿಟ್ಟುವು ಆ ದಿವಸವಂತೂ ನರಹರಿಗೆ ತಿಂಡಿಯ ಗಂಟನ್ನು ಬಿಚ್ಚಲು ಅವಕಾಶವನ್ನೇ ಕೊಡಲಿಲ್ಲ. ರಾತ್ರಿ ಕಿಟ್ಟುವೇ ಮೊದಲು ಮಲಗಿಬಿಟ್ಟ. ಅವನು ಮಲಗಿದ ೨೦ ನಿಮಿಷಗಳನಂತರ ನರಹರಿಯು ದೀಪವನ್ನು ಆರಿಸಿ ಮಲಗಿಕೊಂಡ. ೫ ನಿಮಿಷ ಬಿಟ್ಟು ಮೆಲ್ಲನೆ ಗಂಟನ್ನು ಬಿಚ್ಚಿ, 'ಸಜ್ಜಪ್ಪ'ದ ಗಂಟಿನಿಂದ ಒಂದು ಚೂರನ್ನು ಬಾಯಿಗೆ ಹಾಕಿಕೊಂಡ. ಕೂಡಲೆ ಥೂ, ಥೂ ಎಂಬುದಾಗಿ ಉಗಳಿದ. ಅನಂತರ ಅರಳು ಹಿಟ್ಟಿನ ಗಂಟಿನಿಂದ ಒಂದು ಹಿಡಿ ಬಾಯಿಗೆ ಹಾಕಿಕೊಂಡ. ಹಲ್ಲೆಲ್ಲಾ ಮುರಿಯುವಂತಾಯ್ತು. ಅದನ್ನೂ ಉಗಳಿ "ಪಿಶಾಚಿ-ಗಂಡನ ಮನೆ ಹಾಳಾಯ್ತು" ಎಂದು ಗೊಣಗುಟ್ಟಿದ. ಆದರೂ ಹೇಗೋ ಸಹಿಸಿಕೊಂಡು ಸುಮ್ಮನಿದ್ದ. ಬೆಳಗಾಯಿತು.

ನರಹರಿ ಕಿಟ್ಟುವನ್ನು ತಿಂಡಿಯ ವಿಷಯ ಕೇಳಲೇ ಇಲ್ಲ. ತನ್ನ ಜಿಪುಣತನ ಕಿಟ್ಟುವಿಗೆ ತಿಳಿದುಹೋಯಿತಲ್ಲಾ ಎಂದು ಅವನಿಗೆ ನಾಚಿಕೆಯಾಯಿತು. ಕಿಟ್ಟು ಕೂಡ ಆ ವಿಚಾರ ಮಾತಾಡಲೇ ಇಲ್ಲ. ಬೆಳಗಾದ ಕೂಡಲೆ, ಆಗ ತಾನೆ ಹಾಸನಕ್ಕೆ ಬಂದಿದ್ದ ಕಿಟ್ಟುವಿನ ತಂದೆ, ಗಂಟನ್ನಿಡಲು ಕೊಠಡಿಗೆ ಬಂದರು. ಕಿಟ್ಟುವು ತನ್ನ ಕೊಠಡಿಯಲ್ಲಿ ನೀರು ಕುಡಿಯಲು, ೩ ದಿವಸ ಮುಂಚೆ ಒಂದು ಮಣ್ಣಿನ ಹೂಜೆಯನ್ನು ತಂದಿಟ್ಟಿದ್ದನು. ಅದು ಅವರ ತಂದೆಯ ಕಣ್ಣಿಗೆ ಬಿತ್ತು. ಅವರು ಕೂಡಲೆ "ಇದೇನು ಸಾಬರಂತೆ ನೀವೂ ಹೂಜಿಯಿಂದ ನೀರು ಕುಡೀತೀರಾ? ವೈದೀಕನ ಹೊಟ್ಟೇಲಿ ಹುಟ್ಟಿದ್ದಕ್ಕೆ ಸಾರ್ಥಕವಾಯಿತು. ಈ ಹೂಜೆಯನ್ನು ಬಿಸಾಡು. ಊರಿಂದ ಇನ್ನೊಂದು ಸಾರಿ ಬರುವಾಗ ಒಂದು ತಾಮ್ರದ ತಂಬಿಗೆ ತಂದೊಡ್ತೀನಿ. ಹೂ ಈಗಲೇ ಬೀದಿಗೆ ಎಸೆ" ಎಂದರು. ಕಿಟ್ಟುವು ಹೂಜಿಯನ್ನು ತಗೆದುಕೊಂಡು ಹೊರಕ್ಕೆ ಬಂದನು. ಅದು ಬಹಳ ಚೆನ್ನಾಗಿತ್ತು. ೩ ದಿವಸ ಮುಂಚೆ ಅದಕ್ಕೆ ೫ ಆಣೆ ಕೊಟ್ಟಿದ್ದನು. ಅದನ್ನು ಬಿಸಾಡಲು ಅವನಿಗೆ ಮನಸ್ಸು ಬರಲಿಲ್ಲ. ಬಾಗಿಲಿನಲ್ಲಿ ನಿಂತಿದ್ದ ಮನೆಯ ಯಜಮಾನನ ಮಗನನ್ನು ಕಂಡು "ಇದನ್ನು ಒಳಗೆ ಇಟ್ಟಿರು. ಸಾಯಂಕಾಲ ತೆಗೆದುಕೊಳ್ಳುತ್ತೇನೆ” ಎಂದು ಹೇಳಿ ಕೊಟ್ಟು, ಒಳಕ್ಕೆ ಬಂದನು. ಅವನನ್ನು ನೋಡಿ ಅವರ ತಂದೆಯವರು “ನಾನು ಇನ್ನೊಂದು ಸಲ ಬಂದಾಗ, ಅಂತಾದ್ದು ಏನಾದರೂ ನೀನು ಇಲ್ಲಿ ಇಟ್ಟಿದ್ದರೆ, ಅದನ್ನೂ ನಿನ್ನ ತಲೆಯನ್ನೂ ಒಂದೇ ಏಟಿಗೆ ಒಡೆದುಬಿಡುತ್ತೇನೆ ಎಂದರು.

ಆ ದಿವಸ ಕಿಟ್ಟುವು ನರಹರಿಯ ಬೆನ್ನು ಹತ್ತಲಿಲ್ಲ. ತಂದೆಯವರ ಊಟಕ್ಕೆ ಬಾಳೆಯ ಹಣ್ಣು ಮತ್ತು ಬೆಲ್ಲವನ್ನು ತರಲು ಅವನು ಅಂಗಡಿಗೆ ಹೋಗಿದ್ದ. ನರಹರಿಯು ಆಗತಾನೆ ಊಟಮಾಡಿಕೊಂಡು ಒಂದು ಕೊಠಡಿಯಲ್ಲಿ ಕುಳಿತಿದ್ದ. ಗಂಟೆ ೧೦ ಆಗಿತ್ತು. ಕಿಟ್ಟುವಿನ ತಂದೆಯೂ ಕೊಠಡಿಯಲ್ಲಿಯೇ ಕುಳಿತಿದ್ದರು. ಕಿಟ್ಟುವು ಹಣ್ಣು ತಂದನಂತರ ಅವರು ಅವನನ್ನು ಕುರಿತು “ನೀನು ಹೋಗಿ ಊಟಮಾಡಿಕೊಂಡು ಬಾ, ಸ್ಕೂಲಿಗೆ ಹೊತ್ತಾಗುತ್ತೆ" ಎಂದರು. ಕಿಟ್ಟುವು 'ಷರ್ಟನ್ನು' ಬಿಚ್ಚದೆ ಊಟಕ್ಕೆ ಹೊರಟುದನ್ನು ನೋಡಿ, "ಏನು ಹಾಳು ಹೋಟಲೋ, ಜಾತಿ ಕುಲ ಏನೂ ಇಲ್ಲ. ಇಂಗ್ಲಿಷ್ ವಿದ್ಯೆ ಬಂದು ನಮ್ಮ ಧರ್ಮ ಹಾಳಾಯ್ತು,” ಎಂದರು. ಕಿಟ್ಟುವು ಪದ್ಧತಿಯಂತೆ,

"ನಮ್ಮ ಹೋಟೆಲಿನಲ್ಲಿ ಹಾಗೆಲ್ಲಾ ಇಲ್ಲ. ಬಹಳ ಮಡಿ, ಎಂತಹ ವೈದಿಕರು ಬೇಕಾದರೂ ಊಟಮಾಡಬಹುದು” ಎಂದು ಹೇಳಿ ಹೊರಟು ಹೋದ.

ಅವನು ಹೋದ ಒಂದು ಘಳಿಗೆಯ ಮೇಲೆ ಕಿಟ್ಟುವಿನ ತಂದೆ, ನರಹರಿಯನ್ನು ಕುರಿತು.

ಹೋಟಲು ಬಹಳ ಮಡಿಯಾಗಿದೆ ಅನ್ತಾನಲ್ಲ? ಎಲ್ಲಿ, ಹೋಗಿ ನೋಡಿ ಬರೋಣ ಬಾ” ಎಂದರು. ನರಹರಿಗೆ ಇಷ್ಟವಿಲ್ಲದಿದ್ದರೆ ಅವರು ಹೋಗುವುದನ್ನು ಅವನು ತಪ್ಪಿಸಿಬಿಡಬಹುದಾಗಿದ್ದಿತು. ಸ್ಕೂಲಿಗೆ ಹೊತ್ತಾಗುತ್ತೆ ಎಂದು ಹೇಳಿದ್ದರೆ ಅವರು ಸುಮ್ಮನಾಗಿಬಿಡುತ್ತಿದ್ದರು. ಆದರೆ ನರಹರಿಗೆ ಬೆರಣಿಯನ್ನು ಅಗಿದುದೂ, ಮರಳನ್ನು ಕಡಿದುದೂ, ಇನ್ನೂ ಮರೆತಿರಲಿಲ್ಲ. ರಾತ್ರಿಯಿಂದ ಅವನಿಗೆ ಮೈಯೆಲ್ಲಾ ಉರಿಯುತಿತ್ತು. ಈ ಸಮಯವನ್ನು ಬಿಟ್ಟರೆ ಕಿಟ್ಟುವಿಗೆ ಕೈ ತೋರಿಸಲು ಅವಕಾಶದೊರೆಯುವುದಿಲ್ಲವೆಂದು ತಿಳಿದು ಅವನು “ಬನ್ನಿ ಹೋಗಿ ಬರೋಣ" ಎಂದನು. ಕಿಟ್ಟುವಿನ ತಂದೆಯು "ಹೋಟಲು ದೂರವಾಗಿದೆಯೆ?” ಎಂದರು.

ನರಹರಿಯು “ಏನೂ ಇಲ್ಲ. ಇದೇ ಬೀದಿಯಲ್ಲಿ ಈ ಮನೆಯಿಂದ ಎಡಗಡೆಗೆ ನಾಲ್ಕನೇ ಮನೆ" ಎಂದನು.

ಇಬ್ಬರೂ ಹೊರಟರು. ದಾರಿಯುದ್ದಕ್ಕೂ ಕಿಟ್ಟುವಿನ ತಂದೆಯು “ಹೋಟಲಿನಲ್ಲಿ ಪಾತ್ರೆ ಬೆಳಗುವರಾರು? ಎಲೆ ಎತ್ತುವರಾರು? ಅಡಿಗೆ ಮಾಡೋನು ನಿತ್ಯ ಸ್ನಾನ ಸಂಧ್ಯಾವನೆ ಮಾಡ್ತಾನ್ಯೆ?” ಎಂದೂ ಮುಂತಾಗಿ ಕೇಳಿದರು. ನರಹರಿಯು ಅವರು ಕೇಳಿದ್ದಕ್ಕೆಲ್ಲ “ಹೂ" ಎಂದು ಹೇಳುತ್ತಾ ಅವರನ್ನು ಹೋಟಲಿಗೆ ಕರೆದುಕೊಂಡು ಹೋದನು.

ಹೋಟಲಿನ ಹೊರ ಅಂಗಳದಲ್ಲಿ ೩-೪ ಮೇಜುಗಳೂ ಅದರ ಸುತ್ತ ಕುರ್ಚಿಗಳೂ ಇದ್ದುವು. ಒಂದು ಕುರ್ಚಿಯ ಮೇಲೆ ಒಬ್ಬ ಸಾಹೇಬನು ಕಾಫಿಯನ್ನು ಕುಡಿಯುತ್ತಾ ಮಧ್ಯೆ ಮಧ್ಯೆ ಎಡಗೈಯಲ್ಲಿ ಒಂದೊಂದು ಸಲ ಬೀಡಿಯನ್ನು ಸೇದುತ್ತಾ ಕುಳಿತಿದ್ದನು. ಇನ್ನೊಂದು ಮೇಜಿನ ಮುಂದೆ, ಷರಾಯಿ, 'ಬೂಟ್ಸ್, ಹ್ಯಾಟ್' ಹಾಕಿಕೊಂಡ ಒಬ್ಬ ಅಯ್ಯಂಗಾರು ಸೋಡವನ್ನು ಸೀಸೆಯೊಂದಿಗೆ ಕುಡಿಯುತ್ತಿದ್ದರು. ಕಿಟ್ಟುವಿನ ತಂದೆಗೆ ಇದನ್ನು ನೋಡಿ ಮೈ ಜುಮ್ಮೆಂದಿತು. ಅಷ್ಟಕ್ಕೆ ಹಿಂದಿರುಗಬೇಕೆಂದು ಯೋಚಿಸಿದರು. ಆದರೆ ಒಂದುಸಲ ಊಟಮಾಡುವ ಸ್ಥಳವನ್ನು ಹೋಗಿ ನೋಡಿಬಿಡೋಣ ಎಂಬುದಾಗಿ ಒಳಕ್ಕೆ ಹೋದರು. ಎಲ್ಲರೂ ಊಟ ಮಾಡುತ್ತಿದ್ದ ಕೋಣೆಯ ಬಾಗಿಲಿನಲ್ಲಿ ಒಂದುಸಲ ಇಣಿಕಿ ನೋಡಿದರು. ಕೆಲವರು ಅಂಗಿಯನ್ನೂ, ಕೆಲವರು ಕೊಟುಗಳನ್ನೂ ಹಾಕಿಕೊಂಡು ಊಟ ಮಾಡುತ್ತಿದ್ದರು. ಎಲೆಗಳನ್ನೆಲ್ಲಾ ಒಂದಕ್ಕೊಂದು ತಗಲುವಷ್ಟು ಹತ್ತಿರಕ್ಕೆ ಹಾಕಿದ್ದರು. ಬೇಕಾದವರು ಬೇಕಾದಾಗ ಏಳುತ್ತಿದ್ದರು. ಬೇಕಾದವರು ಬೇಕಾದಾಗ ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಕೆಲವರು ಪರಿಶೇಚನವನ್ನೇ ಮಾಡುತ್ತಿರಲಿಲ್ಲ. ಕೆಲವರು ಆಪೋಶನವನ್ನೇ ತೆಗೆದುಕೊಳ್ಳುತ್ತಿರಲ್ಲಿಲ್ಲ. ಕಿಟ್ಟುವು ಅವರ ಮಧ್ಯದಲ್ಲಿ ಅಂಗಿಹಾಕಿಕೊಂಡೇ ಊಟಕ್ಕೆ ಕುಳಿತಿದ್ದನು. ಅವರ ತಂದೆಯವರು ನೋಡಿ "ಸಾರ್ಥಕವಾಯಿತು; ಉದ್ಧಾರವಾಯಿತು” ಎಂದುಕೊಂಡು ಕೊಠಡಿಗೆ ಹಿಂದಿರುಗಿದರು.

ಕಿಟ್ಟುವು ಊಟ ಮುಗಿಸಿಕೊಂಡು ಬಂದಕೂಡಲೆ, ಅವರ ತಂದೆಯವರು ಕೋಪದಿಂದ “ನಡಿ ಊರಿಗೆ- ಮಗನೆ ನಿನ್ನ ವಿದ್ಯೆ ಹಾಳಾಯ್ತು. ಓದಿದ್ದು ಸಾಕು” ಎಂದು ಗದರಿಸಿದರು. ಕಿಟ್ಟುವಿಗೆ ಗಾಬರಿಯಾಯಿತು. ಅವನಿಗೇನೂ ಪರೀಕ್ಷೆಯಲ್ಲಿ 'ಫೇಲ್' ಆಗಿರಲಿಲ್ಲ. ತಾನು ತಿಂಡಿ ಕದ್ದುದನ್ನು ನರಹರಿಯು ತಂದೆಗೆ ಹೇಳಿರಬಹುದೆಂದು ಅವನು ಹೆದರಿದನು. ಅವರ ತಂದೆಯವರು ಮತ್ತೆ ಸ್ವಲ್ಪ ಸಮಾಧಾನದಿಂದ “ಈ ಜಾತಿಕೆಟ್ಟ ವಿದ್ಯದಿಂದ ನಮಗೆ ಆಗಬೇಕಾದುದೇನು? ನಮ್ಮ ಅಪ್ಪ ಅಜ್ಜ ಈ ವಿದ್ಯಾನೆ ಕಲಿತರೆ? ನಾನು ಕಲಿತಿದ್ದೇನೆಯೆ? ನಡಿ ಊರಿಗೆ ಪೌರೋಹಿತ್ಯ ಕಲಿಯುವಿಯಂತೆ. ಅದರಿಂದ ಇಹವೂ ಉಂಟು ಪರವೂ ಉಂಟು” ಎಂದರು. ಆಮೇಲೆ ಕಿಟ್ಟುವಿಗೆ ತನ್ನ ತಂದೆಯವರು ಹೋಟಲಿಗೆ ಬಂದಿದುದು ಗೊತ್ತಾಯಿತು. ಸ್ವಲ್ಪ ಚರ್ಚೆ ನಡೆದಮೇಲೆ, ಕಿಟ್ಟುವು ಆ ಹೋಟಲನ್ನು ಬಿಟ್ಟು ಬೇರೆ ಒಂದು ಹೋಟಲಿನಲ್ಲಿ ಊಟಮಾಡಿಕೊಂಡು ವ್ಯಾಸಂಗಮಾಡಬಹುದೆಂದು ಅವರ ತಂದೆಯವರು ಒಪ್ಪಿದರು. ನರಹರಿಗೆ ಸ್ವಲ್ಪ ಅಸಮಾಧಾನವಾಯಿತು. ಕಿಟ್ಟುವು ಓದುವುದನ್ನು ಬಿಡಬೇಕೆಂದು ಅವನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಕಿಟ್ಟುವಿನ ತಂದೆಯ ಕೋಪದ ಆವೇಶದ ಮೊದಲ ಮಾತುಗಳನ್ನು ಕೇಳಿಯಂತೂ, ಅವನಿಗೆ ಗಾಬರಿಯೂ, ತಾನು ಮಾಡಿದ ಕೆಲಸಕ್ಕಾಗಿ ಪಶ್ಚಾತ್ತಾಪವೂ, ಉಂಟಾಗಿದ್ದಿತು. ಆದರೂ ಕಿಟ್ಟುವಿಗೆ ಇನ್ನೂ ಸ್ವಲ್ಪ ಹೆಚ್ಚಾಗಿ ಬೈಗುಳವಾಗಿದ್ದರೆ, ಮುಯ್ಯಿ ತೀರಿಸಿಕೊಂಡಂತಾಗಿ ಅವನ ಮನಸ್ಸಿಗೆ ಹೆಚ್ಚು ಸಮಾಧಾನವಾಗುತ್ತಿದ್ದಿತು.

ಕಿಟ್ಟುವಿನ ತಂದೆಯವರು ೧೧ ಗಂಟೆಗೆ ಹೊರಟುಹೋದರು. ಹೊರಡುವಾಗ “ಕೋರ್ಟು ಕೆಲಸ ಮುಗಿಸಿಕೊಂಡು ಹಾಗೇ ಮೋಟಾರ್ ನಲ್ಲಿ ಊರಿಗೆ ಹೋಗುತ್ತೇನೆ. ಇಲ್ಲಿಗೆ ಮತ್ತೆ ಬರಲು ಅವಕಾಶವಿಲ್ಲ. ಜೋಪಾನ. ಚೆನ್ನಾಗಿ ಓದಿಕೊಳ್ಳಿ, ನಿತ್ಯ ಸಂಧ್ಯಾವಂದನೆ ಮರೆಯಬೇಡಿ" ಎಂದು ಹೇಳಿದರು. ಕಿಟ್ಟುವೂ ನರಹರಿಯ "ಹಾಗೆಯೇ ಮಾಡುತ್ತೇವೆ" ಎಂದರು.

೫ ಗಂಟೆಗೆ ಸ್ಕೂಲಿನಿಂದ ಬಂದ ಕೂಡಲೇ ಕಿಟ್ಟುವಿಗೆ ಬಾಯಾರಿಕೆಯಾಯಿತು. ತಾನು ನಿತ್ಯ ನೀರು ಕುಡಿಯುತ್ತಿದ್ದ ಹೂಜಿ ಕೂಡಲೆ ಜ್ಞಾಪಕಕ್ಕೆ ಬಂದಿತು. ತಮ್ಮ ತಂದೆಯವರು ಬೆಳಿಗ್ಗೆ ಹೇಳಿದ್ದ ಮಾತನ್ನು ನೆನೆದು ನಗುತ್ತಾ, ಮಹಡಿಯಿಂದ ಕೆಳಗೆ ಇಳಿದು, ಮನೆಗೆ ಹೋಗಿ ಅಲ್ಲಿ ಇಟ್ಟಿದ್ದ ಹೂಜಿಯನ್ನು ಕೊಠಡಿಗೆ ತಂದನು. ನರಹರಿಯು ಮೊದಲು ನೀರನ್ನು ಕುಡಿದನು. ಆ ವೇಳೆಗೆ ಸರಿಯಾಗಿ ಹೊರಗೆ ಕಿಟ್ಟು ಎಂದು ಯಾರೋ ಕೂಗಿದರು. ಅದು ಅವನ ತಂದೆಯವರ ಧ್ವನಿ, ಧ್ವನಿಯನ್ನು ಕೇಳಿ ಕಿಟ್ಟುವಿಗೆ ಗಾಬರಿಯಾಯಿತು. ಹೂಜಿ ಕೊಠಡಿಯಲ್ಲಿ ಇಲ್ಲದೆ ಇದ್ದಿದ್ದರೆ ಹೆದರುತ್ತಿರಲಿಲ್ಲ. ಆದರೆ ಹಾಳಾದ್ದು ಆಗತಾನೆ ಹೂಜಿಯನ್ನು ಮನೆಯಿಂದ, ನೀರು ತುಂಬಿ ತಂದಿದ್ದ. ಬೆಳಿಗ್ಗೆ ತಂದೆಯವರೊಂದಿಗೆ ಬಿಸಾಡಿಬಿಟ್ಟೆ ಎಂದು ಹೇಳಿದ್ದ. ಅವರ ತಂದೆಯವರ ಕೋಪ ಹೋಟಲಿನ ಊಟ ನೋಡಿ ಮೊದಲೇ ಹೆಚ್ಚಾಗಿತ್ತು. ಅವನು ಮತ್ತೇನೂ ಉಪಾಯ ತೋರದೆ, ಮಂಡಿಯ ಮಧ್ಯೆ ಹೂಜೆಯನ್ನು ಇಟ್ಟುಕೊಂಡು, ಅದರ ಮೇಲೆ ಒಂದು ಪಂಚೆ ಮುಚ್ಚಿ ಏನೋ ಬರೆಯುವವನಂತೆ ನಟಿಸುತ್ತಾ ಕುಳಿತು ಬಿಟ್ಟ. ಕಿಟ್ಟುವಿನ ತಂದೆ ಮಹಡಿಯ ಮೆಟ್ಟಿಲೇರಿ ಒಳಕ್ಕೆ ಬಂದು,

“ಹಾಳಾದ ಮೋಟಾರ್ ತಪ್ಪಿಹೋಯಿತು. ಸಂತೆಮಾಳದಲ್ಲಿ ಒಂದು ಗಾಡಿ ಇದೆ. ಅದ್ರಲ್ಲೇ ಹೋಗ್ತಿದ್ದೀನಿ. ರಾತ್ರಿ ಎಲ್ಲಾ ನಿದ್ರೆ ಕೆಡಬೇಕು. ಏನ್ಮಾಡೋದು? ದಾರಿಯಲ್ಲಿ ನಿಮ್ಮ ಒಂದು ಸಲ ಮಾತನಾಡಿಸಿ ಬಿಟ್ಟು ಹೋಗೋಣ ಅಂತ ಬಂದೆ” ಎಂದರು. ಕಿಟ್ಟುವಿಗೆ ಸ್ವಲ್ಪ ಧೈರ್‍ಯವಾಯಿತು. "ಒಂದು ಘಳಿಗೆ ಹೀಗೆಯೇ ಕೂತಿದ್ರೆ ಹೊರಟುಹೋಗ್ತಾರೆ. ಆಮೇಲೆ ಹೂಜಿ ಹೊರಕ್ಕೆ ತೆಗೆದರೆ ಆಯ್ತು" ಅಂದುಕೊಂಡ ಅವನು. ನರಹರಿ ಇದನ್ನೆಲ್ಲಾ ನೋಡಿದ. ಅವನಿಗೆ ಒಂದು ಉಪಾಯ ಹೊಳೆಯಿತು. ಮಹಡಿ ಇಳಿದು ಕೆಳಗಿನ ಮೆಟ್ಟಿಲಿನ ಬಳಿಗೆ ಬಂದು “ಕಿಟ್ಟು ಕಿಟ್ಟು” ಎಂದು ಕೂಗಿದ. ಕಿಟ್ಟುವು ದೈನ್ಯದಿಂದ ಕುಳಿತ ಜಾಗ ಬಿಟ್ಟು ಏಳದೆ “ಓ ಓ” ಎಂದ, ನರಹರಿಯು “ಮೇಷ್ಟ್ರು ಕರೀತಾರೆ ಬಾರೊ" ಅಂದ. ಕಿಟ್ಟುವು ಆದರೂ ಅಲುಗಾಡಲೇ ಇಲ್ಲ. ಅವರ ತಂದೆಯವರು "ಹೋಗು ಮೇಷ್ಟು ಬಂದಿದ್ದಾರಂತೆ. ಅದೇನು ಕೇಳಿಬಿಟ್ಟು ಬಾ" ಎಂದರು. ಕಿಟ್ಟುವು ತಂದೆಯವರಿಗೆ ಹೂಜಿ ಕಾಣದಂತೆ ಏಳಬೇಕೆಂದು ಸವರಿಸುವುದರಲ್ಲಿ, ನೇರವಾಗಿ ಇಟ್ಟುಕೊಂಡಿದ್ದ ಹೂಜಿ ಸೊಟ್ಟಾಯಿತು. ಅದರಲ್ಲಿದ್ದ ನೀರು ಅವನ ತೊಡೆಯ ಮೇಲೆ ಬಿದ್ದು, ಅವನ ತಂದೆಯವರ ಬಳಿಗೆ ಹಾವಿನಂತೆ ಹರಿದುಕೊಂಡು ಹೋಯಿತು. ಅವರ ತಂದೆಯವರು ನೀರೆಲ್ಲಿಂದ ಬಂದಿತೆಂದುಕೊಂಡು ಆಶ್ಚರ್ಯದಿಂದ ಕಿಟ್ಟುವಿನ ಕಡೆ ನೋಡಿದರು. ಕಿಟ್ಟುವು ಪೆಚ್ಚಾಗಿ ಮೇಲಕ್ಕೆ ಎದ್ದನು. ಅವರ ತಂದೆಯವರು ಹೂಜಿಯನ್ನೂ, ಅದರಿಂದ ಹರಿದುಬರುತ್ತಿದ್ದ ನೀರನ್ನೂ, ನೋಡಿದರು. "ಪುನರಾಯಾನ್ ಮಹಾಕಪಿಃ, ಇದು ಇನ್ನೂ ಇಲ್ಲಿಯೇ ಇದೆಯೋ” ಎಂದು ಹೇಳಿ, ಕೈಯಲ್ಲಿದ್ದ ದೊಣ್ಣೆಯಿಂದ ಅದಕ್ಕೆ ಎತ್ತಿ ಒಂದು ಪಟ್ಟು ಹಾಕಿ ಚೂರು ಚೂರು ಮಾಡಿದರು. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ.” ಸದ್ಯ ಅವರು ಕಿಟ್ಟುವಿನ ತಲೆಯನ್ನು, ಮೊದಲೇ ಹೇಳಿದ್ದಂತೆ ಒಡೆಯಲಿಲ್ಲ.

ಅವರು ಹೊರಟುಹೋದ ಮೇಲೆ ನರಹರಿಯ ಕೋಪ ಪೂರ್ಣವಾಗಿ ಶಮನವಾಯಿತು. ಕಿಟ್ಟುವು ಮಾಡಿದ ವಿನೋದದ ಸೇಡನ್ನು ತಾನು ಪೂರ್ತಾ ತೀರಿಸಿದಂತೆ ಆಯಿತು. ಆ ವಿಷಯ ಅಲ್ಲಿಗೆ ತೀರಿಹೋಯಿತು. ನರಹರಿಯು ಕಿಟ್ಟುವನ್ನು ಕುರಿತು ಒಂದು ಹೂಜಿ ತಂದುಕೊಡಲೇನೊ?” ಎಂದು ಕೇಳಿದ.

ಕಿಟ್ಟುವು "ಇಲ್ಲಿ ಸ್ವಲ್ಪ ತಿಂಡಿ ಇದೆ. ಮೊದಲು ತಿನ್ನೋಣ. ಆಮೇಲೆ ಹೋಗೋಣ" ಎಂಬುದಾಗಿ ಹೇಳಿ ಒಂದು ಗಂಟನ್ನು ಬಿಚ್ಚಿದ. ತಿಂಡಿ ಎಲ್ಲಿಂದ ಬಂದಿತೆಂದು ನರಹರಿಗೆ ಆಶ್ಚರವಾಯಿತು. ಗಂಟನ್ನು ಬಿಚ್ಚಿದ ಕೂಡಲೆ ತನ್ನ 'ಸಜ್ಜಪ್ಪ' ಮತ್ತು ಅರಳುಹಿಟ್ಟು ಅಚ್ಚಳಿಯದಂತೆ ಇದ್ದುದನ್ನು ಕಂಡು, ನರಹರಿಯು ನಗುವುದಕ್ಕೆ ಪ್ರಾರಂಭಿಸಿದ. ಕಿಟ್ಟುವೂ ಅವನ ಜೊತೆಯಲ್ಲಿ, ಕೊಠಡಿಯ ಸೂರು ಹಾರಿಹೋಗುವಹಾಗೆ ನಕ್ಕ.