ಹಳ್ಳಿಯ ಚಿತ್ರಗಳು/ಬಲವಂತದ ಮದುವೆ

ವಿಕಿಸೋರ್ಸ್ದಿಂದ

ಬಲವಂತದ ಮದುವೆ


ಈಗ ಒಂದು ತಿಂಗಳ ಹಿಂದೆ ನಾನು ನಮ್ಮೂರಿಗೆ ಹೋಗಬೇಕಾಗಿತ್ತು. ಹಾಸನದಿಂದ ನಮ್ಮೂರಿಗೆ ಮೋಟಾರ್ ಸಿಕ್ಕಲಿಲ್ಲ. ನಡೆದುಕೊಂಡೇ ಹೊರಟುಬಿಟ್ಟೆ. ರಸ್ತೆಯಲ್ಲಿ ೫ ಮೈಲು ಹೋದಕೂಡಲೆ ನಮ್ಮ ಊರ ಮೋಟಾರ್ 'ಪಂಕ್ಚರ್' ಆಗಿ 'ರಿಪೇರಿ'ಗಾಗಿ ನಿಂತಿತ್ತು. ಮೋಟಾರಿನಲ್ಲಿ ಕೂತು ಕೂತು ಬೇಸರಿಕೆಯಾಗಿ, ಅದರಲ್ಲಿದ್ದವರೆಲ್ಲಾ ಕೆಳಕ್ಕೆ ಇಳಿದು, ರಸ್ತೆಯ ಮರದ ಕೆಳಗೆ ನೆರಳಿನಲ್ಲಿ ಗರಿಕೆಯಮೇಲೆ ಕುಳಿತಿದ್ದರು. ಉಳಿದವರಿಂದ ೨-೩ ಮಾರು ದೂರವಾಗಿ ಬೇರೆ ಒಂದು ಮರದ ಕೆಳಗೆ ಒಬ್ಬ ಗಂಡಸು, ಒಬ್ಬ ಹೆಂಗಸು ಮತ್ತು ಮೂರು ಮಕ್ಕಳು, ಕುಳಿತಿದ್ದರು. ಗಂಡಸು ಒಂದು ಮಗುವನ್ನು ಎತ್ತಿಕೊಂಡಿದ್ದನು. ಉಳಿದ ಇಬ್ಬರು ಮಕ್ಕಳು ಗರುಕೆಯ ಮೇಲೆ ಆಟವಾಡುತ್ತಿದ್ದರು. ಹತ್ತಿರಕ್ಕೆ ಹೋದ ಕೂಡಲೇ, ಅವರು ನಮ್ಮ ಹಳೆಯ ಸ್ನೇಹಿತ ಶೀನಪ್ಪ ಮತ್ತು ಅವನ ಸಂಸಾರವೆಂದು ತಿಳಿಯಿತು. ಪರಸ್ಪರ ಯೋಗಕ್ಷೇಮವಾದ ನಂತರ “ನಿನಗೆ ಎಷ್ಟು ದಿವಸ ರಜ" ಅಂದೆ. ಶೀನಪ್ಪನು ಮೂರು ದಿವಸ. ಬುಧವಾರವೇ ಹೊರಡಬೇಕು” ಎಂದ. "ಮೂರು ದಿವಸಕ್ಕಾಗಿ ಹೆಂಡತಿ ಮಕ್ಕಳನ್ನೆಲ್ಲಾ ಕರೆದುಕೊಂಡು ಬಂದೆಯಾ?” ಎಂದೆ. ಅವನು ನಗುತ್ತಾ “ಏನು ಮಾಡೋದಪ್ಪ, ನಾನು ಹೊರಟೆ, ಅವಳು 'ನಾನೂ ಬರುತ್ತೇನೆ' ಎಂದಳು. ಮದುವೆಯಾದ ಮೇಲೆ ಗಂಡಸು ಪರರ ವಸ್ತು. ಅವರು ಹೇಳಿದಂತೆ ಕೇಳಬೇಕು. ಅವಳ ಮಾತನ್ನು ಮೀರೋದಕ್ಕೆ ಆಗುತ್ತದೆಯೇ?” ಎಂದ. ನಾನು "ಮದುವೆಯಾಗುವಾಗ ಯಾಕೆ ಅಷ್ಟು ಹಾರಾಡಿದೆ?” ಎಂದೆ. ನಮ್ಮ ಸ್ನೇಹಿತನು “ನೀನು ಮಾತ್ರ ಹಾರಾಡಲಿಲ್ಲವೋ” ಎಂದ. ನನಗೇ ಯಾಕೊ ಏಟು ಬಿತ್ತು ಅಂತ ಸುಮ್ಮನಾದೆ.

ನಮ್ಮ ಶೀನಪ್ಪನು ಮದುವೆಯಲ್ಲಿ ಹಾರಾಡಿದ್ದು ಸಾಮಾನ್ಯವಾದ ಹಾರಾಟವಲ್ಲ. ಅದರ ವಿವರ ಸ್ವಲ್ಪ ಕೇಳಿ. ಆಗ ಅವನಿಗೆ ವಯಸ್ಸು ಸುಮಾರು ೧೭ ಇದ್ದಿರಬಹುದು. ಹೈಸ್ಕೂಲು ನಾಲ್ಕನೇ ಫಾರಂನಲ್ಲಿ ಓದುತ್ತಿದ್ದ. ಎಲ್ಲಿಯೋ ವಾರದ ಊಟಮಾಡಿಕೊಂಡು, ಯಾರ ಮನೆಯಲ್ಲಿಯೋ ಒಂದು ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು, ಅದರಲ್ಲಿ ಇರುತ್ತಿದ್ದ. ಆ ಮನೆಯ ಯಜಮಾನನಿಗೆ ೩-೪ ಹೆಣ್ಣು ಹುಡುಗಿಯರಿದ್ದರು. ಯಾರಿಗೂ ಇನ್ನೂ ಮದುವೆಯಾಗಿರಲಿಲ್ಲ. ಶೀನಪ್ಪ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡ ಮೊದಲ ತಿಂಗಳಲ್ಲಿಯೇ, ಮನೆಯ ಯಜಮಾನನ ಮೊದಲ ಮಗಳಿಗೆ ಮದುವೆಯು ನಿಶ್ಚಯವಾಯಿತು. ಪಾಪ, ಆ ತಂದೆಯು ಎಲ್ಲೆಲ್ಲೋ ತಿರುಗಿ ತಿರುಗಿ ಸಾಕಾಗಿ ಕೊನೆಗೆ ಗಂಡು ಹುಡುಗ ಎಂಬುದಾಗಿ ಒಬ್ಬನನ್ನು ಗೊತ್ತುಮಾಡಿಕೊಂಡು ಬಂದಿದ್ದರು. ಮದುವೆಯ ಲಗ್ನವು ನಿಶ್ಚಯಿಸಲ್ಪಟ್ಟಿತು. ಮದುವೆಯಾಗುವುದಕ್ಕೆ ಯಾವ ಪ್ರತಿಬಂಧಕವೂ ಇರುವಂತೆ ತೋರಲಿಲ್ಲ.

ಆದರೆ “ಆರು ಮನುಷ್ಯ ಪ್ರಯತ್ನ; ಏಳನೆಯದು ದೈವದ ಇಚ್ಛೆ" ಎಂಬ ವಾಕ್ಯವು ಈ ಮದುವೆಗೆ ಸರಿಯಾಗಿ ಅನ್ವಯಿಸಿಬಿಟ್ಟಿತು. ಮದುವೆಯ ದಿವಸ ಬೆಳಿಗ್ಗೆ ವರನ ತಾಯಿಯು ಸ್ವರ್ಗಸ್ಥಳಾದ ವರ್ತಮಾನ ಬಂದಿತು. ವರನು ಹೇಳದೆ ಕೇಳದೆ ಹೊರಟುಹೋದನು.

ಪಾಪ, ಹುಡುಗಿಯ ತಂದೆಗೆ "ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ”ವೆಂಬಂತೆ ಆಯಿತು. ಇಷ್ಟು ಕಷ್ಟದಿಂದ ಸಂಪಾದಿಸಿದ ವರ ಹೋಯಿತಲ್ಲಾ, ಅಯ್ಯೋ ದೇವರೆ? ಹೊಂದಿಸಿದ ಸಾಮಾನು, ಹಪ್ಪಳ, ಸಂಡಿಗೆ, ಮಾಡಿಟ್ಟ ಒಬ್ಬಟ್ಟು ಎಲ್ಲಾ ಹಾಳಾಗಿ ಹೋಯಿತಲ್ಲ" ಎಂದು ಅವರು ಕೊರಗಿದರು. ಅವರ ಮನೆಯ ಕೊಠಡಿಯ ಮೇಲೆ ಶೀನಪ್ಪನು “ಶ್ರೀನಿವಾಸಯ್ಯಂಗಾರ್” ಎಂಬುದಾಗಿ ಸೀಮೆಸುಣ್ಣದಲ್ಲಿ ಹೆಸರನ್ನು ಬರೆದಿದ್ದ. ಸ್ನೇಹಿತರು ಬಂದರೆ ತನ್ನ ಕೊಠಡಿಯನ್ನು ನೋಡಿ ತಿಳಿದುಕೊಳ್ಳಲಿ ಅಂತಲೋ ಅಥವ ಟಪಾಲ್ ಜವಾನನಿಗೆ ತನ್ನ ಕೊಠಡಿಯು ತಿಳಿಯಲಿ ಎಂದೋ, ಅಥವ ಸೀಮೆಸುಣ್ಣ ಕೈಗೆ ಸಿಕ್ಕಿದಾಗ ಕೈ ನಿಲ್ಲದೆ ಚಪಲತೆಯಿಂದ ಚೇಷ್ಟೆಗಾಗಿಯೋ ಬರೆದಿದ್ದ. ಮದುವೆಗಾಗಿ ನೆರೆದಿದ್ದ ನೆಂಟರೊಬ್ಬರು, “ಈ ಶ್ರೀನಿವಾಸಯ್ಯಂಗಾರಿ ಅನ್ನುವರು ಯಾರು?" ಎಂದರು. ಅವನ ವಯಸ್ಸು ಊರು ಎಲ್ಲಾ ತಿಳಿದ ಮೇಲೆ "ಅವನಿಗೆ ಯಾಕೆ ನಿಮ್ಮ ಹೆಣ್ಣನ್ನು ಕೊಟ್ಟು ಮದುವೆ ಮಾಡಿಬಿಡಬಾರದು?” ಎಂದರು. ಹೆಣ್ಣಿನ ತಂದೆಯು ನಿರುತ್ಸಾಹದಿಂದ “ಮಾಡಬಹುದು, ಆದರೆ ಅವನು ಒಪ್ಪಬೇಕಲ್ಲ" ಎಂದರು. ಸ್ವಲ್ಪ ಹೊತ್ತು ಅವರಲ್ಲಿಯೇ ಮಾತುಕತೆಯಾದನಂತರ, ಹೆಣ್ಣಿನ ತಂದೆಯೂ ಅವನ ೨-೩ ಜನ ಬಂಧುಗಳೂ ಶೀನಪ್ಪನನ್ನು ಕರೆತರಲು ಸ್ಕೂಲಿಗೆ ಹೋದರು. ಆ ವೇಳೆಗೆ ಮೊದಲನೆಯ 'ಪೀರಿಯಡ್' ಪ್ರಾರಂಭವಾಗಿತ್ತು. ಭೂಗೋಳ ಪಾಠ ನಡೆಯುತ್ತಿತ್ತು. ಉಪಾಧ್ಯಾಯರು 'ಜಿ. ಐ. ಪಿ. ರೈಲ್ವೆಯ ವಿಚಾರವಾಗಿ ಉಪನ್ಯಾಸ ಮಾಡುತ್ತಿದ್ದರು. ಅದು ಏನಾದರೂ ಶೀನಪ್ಪನ ತಲೆಗೆ ಹತ್ತಲೇ ಇಲ್ಲ. "ಹಾಳಾದ್ದು ಪಾಠ ಮುಗಿದುಹೋದರೆ ಸಾಕಲ್ಲ" ಎಂದುಕೊಂಡು ಅವನು ತೂಗಡಿಸುತ್ತಿದ್ದನು. ಅಲ್ಲದೆ "ಮನೆಯವರು ತನಗೆ ಊಟಕ್ಕೆ ಹೇಳಲಿಲ್ಲ. ಮರೆತುಬಿಟ್ಟರೇನೋ? ಮದುವೆಯ ಒಳ್ಳೆಯ ಊಟ ತಪ್ಪಿಹೋಯ್ತು. ಆದರೂ ೧೨ ಗಂಟೆಗೆ ಹೋದಾಗ ಮನೆಯ ಮುಂದೆ ಸ್ವಲ್ಪ ಸುಳಿದಾಡಿ ನೋಡುತ್ತೇನೆ. ಮದುವೆಯ ಊಟ ಸಿಕ್ಕಿದರೆ ಅದೇ ಲಾಭ" ಎಂದು ಅವನು ಯೋಚಿಸುತ್ತಿದ್ದನು. ಅಷ್ಟು ಹೊತ್ತಿಗೆ ಸ್ಕೂಲು ಜವಾನನು ಕೈಯ್ಯಲ್ಲಿ ಒಂದು ಚೀಟಿಯನ್ನು ಹಿಡಿದುಕೊಂಡು ಒಳಗೆ ಬಂದನು. “ನಾಳೆ ದಿವಸ ರಜ ಸಿಕ್ಕಬಹುದು” ಎಂದುಕೊಂಡು ಹುಡುಗರೆಲ್ಲ ಉಪಾಧ್ಯಾಯರ ಕಡೆಗೆ ನೋಡಿದರು. ಉಪಾಧ್ಯಾಯರು ಚೀಟಿಯನ್ನು ನೋಡಿ ಗಂಭೀರಧ್ವನಿಯಿಂದ "ಶ್ರೀನಿವಾಸಯ್ಯಂಗಾರ್‍ಯರನ್ನು ಯಾರೋ ಕರೆಯುತ್ತಾರೆ” ಎಂದು ಹೇಳಿ ಶೀನಪ್ಪನ ಕಡೆಗೆ ತಿರುಗಿ “ನೀನು ಹೋಗಬಹುದು" ಎಂದರು. ಶೀನಪ್ಪನಿಗೆ ಸದ್ಯ ಪಾಠ ತಪ್ಪಿತಲ್ಲಾ ಎಂದು ಆನಂದ. ಎರಡನೆಯದಾಗಿ “ಓಹೋ ನನ್ನನ್ನು ಊಟಕ್ಕೆ ಕರೆಯಲು ಅವರ ಮನೆಯವರು ಯಾರೋ ಬಂದಿರಬೇಕು. ಅನ್ಯಾಯವಾಗಿ ಅವರ ವಿಷಯದಲ್ಲಿ ಕೆಟ್ಟ ಆಲೋಚನೆಯನ್ನು ಮಾಡಿದೆ. ನನ್ನನ್ನು ಮರೆಯುತ್ತಾರೆಯೇ ಅವರು” ಎಂದುಕೊಂಡು ಹೊರಕ್ಕೆ ಬಂದನು. ಮನೆಯ ಯಜಮಾನನಲ್ಲದೆ ಇನ್ನೂ ಮೂರು ಜನರಿದ್ದರು. ಒಬ್ಬನನ್ನು ನೋಡಿಯಂತೂ ಇವನಿಗೆ ಭಯವೇ ಆಯಿತು. ಅವನು ಹೊಡೆದಾಡುವುದಕ್ಕೆ ಸಿದ್ದವಾಗಿದ್ದ ಪೈಲ್ವಾನನಂತೆ ಧಾಂಡಿಗನಾಗಿ ತೋರುತ್ತಿದ್ದನು. ಇವನು ಹೊರಗೆ ಬಂದುದನ್ನು ಕಂಡು ಆ ಪೈಲ್ವಾನನಂತಿದ್ದವನು “ಬಾಯ್ಯ, ಶ್ರೀನಿವಾಸಯ್ಯಂಗಾರ್‍ಯ. ಮದುವೆಯ ದಿವಸವೂ ನಿನಗೆ ಸ್ಕೂಲಿನ ಗಲಾಟೆಯೇ. ಮನೆಯಲ್ಲಿ ಓಡಾಡಿಕೊಂಡು ನಮಗೂ ಸ್ವಲ್ಪ ಸಹಾಯ ಮಾಡುವಿಯಂತೆ" ಎಂದನು. ಶೀನಪ್ಪನಿಗೆ ಬಹಳ ಸಂತೋಷವಾಯಿತು. ತಾನೇನೋ ದೊಡ್ಡ ಮನುಷ್ಯ ಎಂದು ನಾಲ್ಕು ಜನವೂ ಇಲ್ಲಿಗೆ ಬಂದು ಕರೆಯುತ್ತಾರೆ. ಯಾತಕ್ಕೆ ಹೋಗಿ ಸಹಾಯ ಮಾಡಬಾರದು. ಹೇಗಾದರೂ ಸ್ಕೂಲಿನಿಂದ ರಜ ತೆಗೆದುಕೊಳ್ಳಲು ಅವಕಾಶ ಸಿಕ್ಕಿತೆಂದರೆ ಸಾಕೆಂದು ಅವನ ಅಭಿಪ್ರಾಯ. "ಆಗಲಿ" ಎಂದ. ವರನ ತಾಯಿ ಸತ್ತು ಹೋದದ್ದೂ, ಮದುವೆಯು ನಿಂತುಹೋದದ್ದೂ, ವರನು ಹೇಳದೆ ಕೇಳದೆ ಓಡಿಹೋದದ್ದೂ, ಒಂದೂ ಇವನಿಗೆ ಗೊತ್ತಿರಲಿಲ್ಲ. ಬೆಳಿಗ್ಗೆ ಕೊಠಡಿಯನ್ನು ಬಿಟ್ಟವನು ಸ್ನೇಹಿತನ ರೂಮಿಗೆ ಹೋಗಿ 'ಹೋಮ್ ವರ್ಕ್' ಮಾಡಿಕೊಂಡು ವಾರದ ಮನೆಯಲ್ಲಿ ಊಟಮಾಡಿ, ನೆಟ್ಟಗೆ ಸ್ಕೂಲಿಗೆ ಬಂದಿದ್ದ. ಉತ್ಸಾಹದಿಂದ, “ಮೇಷ್ಟರಿಗೆ ಹೇಳಿ ರಜಾ ತೆಗೆದುಕೊಂಡು ಬರುತ್ತೇನೆ” ಎಂದು ಹೊರಟ. ಬಂದಿದ್ದ ನಾಲ್ಕು ಜನರೂ ಒಬ್ಬರ ಮುಖವನ್ನೊಬ್ಬರು ನೋಡಿದರು. ಎಲ್ಲರ ಮುಖದಲ್ಲಿಯೂ ಅನಿಶ್ಚಯವು ಒಡೆದು ತೋರುತ್ತಿದ್ದಿತು. ಕೊನೆಗೆ ಪೈಲ್ವಾನನಂತಿದ್ದವನು “ಏನೂ ಬೇಡ, ನೀನು ಇಲ್ಲಿಯೇ ಇರು. ನಾನೇ ಹೋಗಿ ರಜ ಹೇಳಿ ಬರುತ್ತೇನೆ” ಎಂದು ಹೊರಟನು. ಶೀನಪ್ಪನು "ಪುಸ್ತಕಗಳನ್ನೆಲ್ಲಾ ತರಬೇಕು, ನಾನೇ ಹೋಗಿ ಬರುತ್ತೇನೆ. ಒಂದೇ ನಿಮಿಷ" ಎಂದನು. ಪೈಲ್ವಾನನು ಪುಸ್ತಕಗಳನ್ನೂ ನಾನೇ ತರುತ್ತೇನೆ, ಎಂಬುದಾಗಿ ಹೇಳಿ ಹೊರಟುಹೋದನು. ಮತ್ತೊಬ್ಬ ಅಯ್ಯಂಗಾರಿಯು “ಪುಸ್ತಕ ಹೋದರೆ ಹೋಗಲಿ, ಎರಡು 'ನೋಟ್ ಬುಕ್ಕು' ತಾನೆ?” ಎಂದನು.

ಶೀನಪ್ಪನಿಗೆ ಆ ಮಾತು ವಿಚಿತ್ರವಾಗಿ ತೋರಿತು. “ಇವರಿಗೆ ಮದುವೆ ಸಂಭ್ರಮವಾದರೆ ನನ್ನ ಪುಸ್ತಕ ಯಾತಕ್ಕೆ ಹೋಗಬೇಕು?" ಎಂದು ಅವನು ಯೋಚಿಸಿದನು. “ತನ್ನನ್ನು ಕರೆಯುವುದಕ್ಕೆ ನಾಲ್ಕು ಜನ ಯಾತಕ್ಕೆ ಬರಬೇಕು? ಮನೆಯ ಯಜಮಾನ ಮಗಳ ಮದುವೆಯಲ್ಲಿ ತೊಡಗಿರುವುದನ್ನು ಬಿಟ್ಟು, ಏನೂ ಕೆಲಸವಿಲ್ಲದವನಂತೆ ಇಷ್ಟು ವಿರಾಮ ವಾಗಿ ಯಾಕೆ ತಿರುಗುತ್ತಿದಾನೆ" ಎಂದೂ ಮುಂತಾಗಿ ಅವನು ಯೋಚಿಸಲಾರಂಭಿಸಿದನು. ಆದರೆ ಅಷ್ಟು ಹೊತ್ತಿಗೆ ಪೈಲ್ವಾನನು ಪುಸ್ತಕಗಳೊಂದಿಗೆ ಹಿಂದಿರುಗಿದುದರಿಂದ, ಮುಂದಕ್ಕೆ ಯೋಚನೆಮಾಡದೆ ಅವರ ಕೂಡ ನಡೆದನು. ನೋಡುವವರಿಗೆ ಅವನು ನಾಲ್ಕು ಪೋಲಿಸ್ ಜವಾನರ ಮಧ್ಯದಲ್ಲಿ ಹೋಗುತ್ತಿದ್ದ ಖೈದಿಯಂತೆ ತೋರುತ್ತಿದ್ದನು. ಶೀನಪ್ಪನಿಗೇನೊ ಆ ರೀತಿ ತೋರದೆ ಇದ್ದಿರಬಹುದು. ಆದರೆ ಅವನಿಗೂ ಕೂಡ ಈ ದೃಶ್ಯವು ವಿಚಿತ್ರವಾಗಿಯೇ ಕಂಡಿತು.

ಮನೆಯನ್ನು ಮುಟ್ಟಿದ ಕೂಡಲೇ ಶೀನಪ್ಪನ ಅನುಮಾನವು ಮತ್ತಷ್ಟು ಹೆಚ್ಚಾಯಿತು. ಮನೆಯ ಬಾಗಿಲಲ್ಲಿ ಓಲಗದ ಧ್ವನಿಯು ಕೇಳಲೇ ಇಲ್ಲ. ಅಲ್ಲಿ ವಾದ್ಯಗಾರರು ಇರಲೇ ಇಲ್ಲ. ಅವನು ಮನೆಯ ಯಜಮಾನರನ್ನು ಕುರಿತು, “ಯಾಕೆ ಓಲಗವೆಲ್ಲಿ?” ಎಂದನು. ತಕ್ಷಣವೇ ಪೈಲ್ವಾನನು “ಓಲಗವು ಗಂಡಿನ ಬಿಡಾರಕ್ಕೆ ಹೋಗಿದೆ" ಎಂದನು. ಮದುವೆಯ ಸಂಭ್ರಮವೂ ಗದ್ದಲವೂ ಮನೆಯಲ್ಲಿ ತೋರಲೇ ಇಲ್ಲ. ಮೊದಲನೇ ದಿವಸ ಆ ಮನೆಗೆ ಕಟ್ಟಿದ್ದ ತೋರಣಗಳು ಈಗ ಮನೆಯ ಮೌನವನ್ನು ಹಾಸ್ಯ ಮಾಡುವಂತೆ ಇದ್ದುವು.

ಮನೆಯೊಳಕ್ಕೆ ಹೋದ ಕೂಡಲೆ ಶೀನಪ್ಪನ ತಲೆಗೆ ಎಣ್ಣೆಯನ್ನು ತಂದು ಇಟ್ಟರು. ಅವನು ತಪ್ಪು ಮಾಡಿದ ಹುಡುಗನಂತೆ ಕಣ್ಣುಬಿಟ್ಟನು. "ನನ್ನ ತಲೆಗೆ ಯಾಕೆ ಎಣ್ಣೆ?” ಎಂದನು. ಪೈಲ್ವಾನನು “ನಿನಗೆ ಅಭ್ಯಂಜನ ಸ್ನಾನ” ಎಂದನು. ಶೀನಪ್ಪನು “ನಿನ್ನ ಅಭ್ಯಂಜನ ಸ್ನಾನ ಯಾರಿಗೆ ಬೇಕಾಗಿತ್ತು, ನೆನ್ನೆ ತಾನೆ ಅಗಸನಿಂದ ಬಂದ 'ಕೋಟು' ಎಣ್ಣೆಯಾಗಿ ಹಾಳಾಯಿತು" ಎಂದು ಹುಬ್ಬನ್ನು ಗಂಟುಹಾಕಿದನು. ಪೈಲ್ವಾನನು "ಆ ಕೋಟು ಹೋದರೆ ಹೊಸ ಕೋಟು ಕೊಡುತ್ತೇನೆ” ಎಂದು ಒಂದು ಸಾರಿ ಕಣ್ಣುಬಿಟ್ಟನು. ಸದ್ಯಕ್ಕೆ ಪೈಲ್ವಾನನೇ ಮನೆಯ ಆಡಳಿತವನ್ನೆಲ್ಲಾ ವಹಿಸಿಕೊಂಡಿರುವಂತೆ ತೋರಿತು. ಶೀನಪ್ಪನಿಗೆ ಅವನ ಕಣ್ಣನ್ನು ನೋಡಿ ಗಾಬರಿಯಾಯಿತು. “ಇವನ ಮನೆ ಹಾಳಾಗ, ಏನು ಬೇಕಾದರೂ ಆಗಲಿ, ಸದ್ಯ ಏಟು ತಪ್ಪಿದರೆ ಸಾಕು" ಎಂದು ಅವನು ಅಭ್ಯಂಜನ ಮಾಡಿಕೊಂಡನು. ಮುಂದೆ ಏನು ಬರುತ್ತೊ ಎಂದು ಅವನು ಕೌತುಕದಿಂದ ನೋಡುತ್ತಿರುವಾಗ, ಪೈಲ್ವಾನನು ಅವನನ್ನು “ಹಸೆ ಮಣೆಗೆ ಬಾ” ಎಂದು ಗರ್ಜಿಸಿದನು. ಶೀನಪ್ಪನು "ನೀನೆ ಹೋಗು ಹಸೆ ಮಣೆಗೆ, ನಾನೇನು ಮದವಣಿಗನೆ ಹಸೆ ಮಣೆಗೆ ಬರುವುದಕ್ಕೆ?" ಎಂದನು. ಪೈಲ್ವಾನನು ಕಣ್ಣನ್ನು ಕೆಂಪಗೆ ಮಾಡಿಕೊಂಡು “ನೀನು ಮದವಣಿಗ ಹೌದು. ನಿನಗೇ ಈವತ್ತು ಮದುವೆ" ಎಂದನು. ಕೇಳಿ ಶೀನಪ್ಪನಿಗೆ ಸಿಡಿಲು ಬಡಿದಂತಾಯಿತು.

ಪೈಲ್ವಾನನ ಮುಖವನ್ನು ನೋಡಿದ ಕೂಡಲೆ, ಅವನು ವಿನೋದಕ್ಕಾಗಿ ಹೇಳಲಿಲ್ಲವೆಂಬುದು ಗೊತ್ತಾಯಿತು. ಅವನ ಮಾತಿನ ಜೊತೆಯಲ್ಲಿಯೇ ಹಸೆಯ ಮಣೆಯು ಸಿದ್ಧವಾಯಿತು. ಶೀನಪ್ಪನಿಗೆ ಮಂಕು ಕವಿದುಕೊಂಡಿತು. ತಾನು ಎಲ್ಲಿರುವೆನೆಂಬುದೇ ಅವನಿಗೆ ಗೊತ್ತಾಗಲಿಲ್ಲ. ಇದೇನು ಸ್ವಪ್ನವೋ ಎಚ್ಚರವೋ ಎಂದು ಅವನು ತನ್ನನ್ನು ತಾನೇ ಕೇಳಿಕೊಳ್ಳಹತ್ತಿದನು. ಪೈಲ್ವಾನನು ಅವನ ಕೈಯನ್ನು ಹಿಡಿದುಕೊಂಡು "ಹಸೆಯ ಮಣೆಗೆ ಬರುತ್ತೀಯೋ ಇಲ್ಲವೊ” ಎಂದನು. ಅವನ ಹಿಡಿತವು ಕಬ್ಬಿಣದ ಮುಷ್ಟಿಯಂತಿದ್ದಿತು. ಶೀನಪ್ಪನ ಕೈ ಬಹಳ ನೋಯುವುದಕ್ಕೆ ಪ್ರಾರಂಭವಾಯಿತು. ಮರಣ ದಂಡನೆಗೆ ಗುರಿಮಾಡಲ್ಪಟ್ಟವನಂತೆ ಅವನು ಅತ್ತನು. ಮುಂದೆ ತನ್ನ ಮಾವನಾಗುವನನ್ನು ಗೋಗರೆದನು. ಪೈಲ್ವಾನನನ್ನು ಬೈದು ಗದರಿಸಿದನು. “ನಿಮ್ಮ ಹುಡುಗಾಟ ಇಷ್ಟು ಸಾಕು. ನಿಮ್ಮ ಪುಣ್ಯಕ್ಕೆ ಇನ್ನು ಬಿಟ್ಟುಬಿಡಿ" ಎಂದು ಬೇಡಿದನು. ಇವನ ಮಾತಿಗೆ ಯಾರೂ ಗಮನವನ್ನು ಕೊಡಲಿಲ್ಲ. ಇವನ ಮೇಲೆ ಇಟ್ಟ ಕೆಂಗಣ್ಣನ್ನು ಪೈಲ್ವಾನನು ಆಚೆಗೆ ತಿರುಗಿಸಲಿಲ್ಲ. ಇವನ ಕೈ ಅವನ ಕೈಯಲ್ಲಿಯೇ ಸೆರೆ ಸಿಲುಕಿಬಿಟ್ಟಿತು. ಚಿಕ್ಕ ಹುಡುಗಿಯರು ಸುತ್ತಲೂ ನಗುತ್ತಾ ಇದ್ದರು. ಒಬ್ಬಿಬ್ಬರು ಹೆಂಗಸರು ಅವನಿಗೆ ಕೇಳುವಂತೆಯೇ “ಇವನಿಗೇನು ರೋಗ, 'ಕರೆದು ಹೆಣ್ಣು ಕೊಟ್ಟರೆ ಮೊಲ್ಲೊಗರ ಬಂತು' ಅ೦ತ ಗೊಳೋ ಅಂತ ಅಳ್ತಾನೆ!” ಎಂದರು. ಇದನ್ನೆಲ್ಲಾ ಕೇಳಿ ಶೀನಪ್ಪನಿಗೆ ದು:ಖವೂ ಕೋಪವೂ ಉಂಟಾಯಿತು. ಆ ಮನೆಯನ್ನು ಬಿಟ್ಟು ಬಿಡಬೇಕೆಂದು ಅವನು ಪ್ರಯತ್ನ ಪಟ್ಟನು. ಧಾಂಡಿಗನು ಕೈಯನ್ನು ಹಿಡಿದುಕೊಂಡಿದ್ದುದರಿಂದ ಅದು ಸಾಧ್ಯವಾಗಲಿಲ್ಲ. ಗಟ್ಟಿಯಾಗಿ ಕಿರಿಚಿ ಪೋಲಿಸಿನವರು ಅಲ್ಲಿಗೆ ಬರುವಂತೆ ಮಾಡಬೇಕೆಂದು ಯೋಚಿಸಿದನು. ಆದರೆ, ಬಾಯಿಯಿಂದ ಧ್ವನಿಯೇ ಹೊರಡಲಿಲ್ಲ. ಅವರಿಗೆಲ್ಲಾ ಒಂದು ಉಪನ್ಯಾಸ ಮಾಡಿ ಬಲಾತ್ಕಾರ ವಿವಾಹದ ಅನರ್ಥಗಳನ್ನು ಅವರಿಗೆ ವಿವರಿಸಬೇಕೆಂದು ಯೋಚಿಸಿದನು. ಅವನ ಮೆದುಳು ವಿಕಾರವನ್ನು ಹೊಂದಿಬಿಟ್ಟಿದ್ದಿತು. ನಾಲಗೆಯು ತೊದಲಿ ಹೋಯಿತು. ಬಾಯಿಯಿಂದ ಮಾತೇ ಹೊರಡಲಿಲ್ಲ. ಸುತ್ತ ನಿಂತಿದ್ದವರಿಗೆ ಇವನು ಸುಮ್ಮನೆ ತುಟಿಗಳನ್ನು ಅಲ್ಲಾಡಿಸುತ್ತಿರುವುದು ಮಾತ್ರ ಕಾಣುತ್ತಿದ್ದಿತು.

ಪೈಲ್ವಾನನು ಅವನನ್ನು ಹಸೆಯ ಮಣೆಗೆ ಎಳೆದುಕೊಂಡು ಬಂದನು. ಪುರೋಹಿತನು ಭಯಂಕರವಾದ ಧ್ವನಿಯಲ್ಲಿ “ಓಂ ನಮಃಸ್ಸದಸೇ" ಎಂದು ಪ್ರಾರಂಭಿಸಿದನು. ಬಾಗಿಲಿನಲ್ಲಿ ವಾದ್ಯದವರು ಓಲಗವನ್ನು ಊದಿದರು. ಹೆಣ್ಣನ್ನು ಹಸೆಯ ಮಣೆಯ ಮೇಲೆ ತಂದು ಕೂರಿಸಿದರು. ಸುಮಂಗಲೆಯರು ಹಾಡುಗಳನ್ನು ಹಾಡಿದರು. ಉತ್ತರ ಕ್ಷಣದಲ್ಲಿಯೇ ಸುಮುಹೂರ್ತಾ ಸಾವಧಾನ; ಸುಲಗ್ನಾ ಸಾವಧಾನ" ಆಗಿಹೋಯಿತು. ಇದೆಲ್ಲಾ ನಡೆಯುತ್ತಿರುವಾಗ ಶೀನಪ್ಪನು ಸ್ವಪ್ನ ರಾಜ್ಯದಲ್ಲಿದ್ದಂತೆ ಇದ್ದನು.

ಮದುವೆಯಾದ ಮೇಲೆ ಶೀನಪ್ಪನು "ನಾನು ಇನ್ನು ೧೨ ವರ್ಷ ನಿಷೇಕ ಪ್ರಸ್ತಮಾಡಿಕೊಳ್ಳುವುದಿಲ್ಲ" ಎನ್ನುತ್ತಿದ್ದನು. ಈಗ ಅವನ ಹೆಂಡತಿ ದೊಡ್ಡವಳಾಗಿ ಇನ್ನೂ ೬ ವರ್ಷ ಪೂರ್ತಿಯಾಗಿಲ್ಲ. ಮೂರು ಮಕ್ಕಳಿವೆ. ಮದುವೆಯಲ್ಲಿ ಪೈಲ್ವಾನನಾಗಿದ್ದವನು ಈಗ ಆವನ ಪರಮ ಮಿತ್ರನಾಗಿದ್ದಾನೆ.