ಹಳ್ಳಿಯ ಚಿತ್ರಗಳು/ನಮ್ಮ ಊರ ಬಸ್ಸು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ನಮ್ಮ ಊರ ಬಸ್ಸು


ನಮ್ಮ ಊರಿನ ಬಸ್ಸಿನ ವಿಚಾರ ಕೇಳಿದರೆ ನಿಮಗೆ ನಕ್ಕು ಹೊಟ್ಟೆ ಹುಣ್ಣಾಗಿ ಬಿಡುತ್ತೆ. ಕುಲಮೂಲವನ್ನೂ ಋಷಿಮೂಲವನ್ನೂ ಕೇಳಕೂಡದಂತೆ, ಹಾಗೆಯೇ ನಮ್ಮ ಊರಿನ ಬಸ್ಸಿನ ಮೂಲವನ್ನೂ ನೀವು ಕೇಳಕೂಡದು. ಅದಕ್ಕೆ ಸಂಬಂಧಪಟ್ಟ ಒಂದೆರಡು ವಿಷಯಗಳನ್ನು ಮಾತ್ರ ನಿಮಗೆ ಹೇಳಿಬಿಡುತ್ತೇನೆ; ಅಷ್ಟೆ,

ಆ ದಿವಸ ಮಧ್ಯಾಹ್ನ ಗಂಟೆ ಸುಮಾರು ಹನ್ನೆರಡು ಇದ್ದಿರಬಹುದು. ಸೂರ್ಯನನ್ನು ಮೋಡಗಳು ಮುತ್ತಿಗೆ ಹಾಕಿಬಿಟ್ಟಿದ್ದುವು. ಮಿತಿಯಿಲ್ಲದೆ ನನ್ನ ಗದ್ದೆಯಮೇಲೆ ಹರಿಯುತ್ತಿದ್ದ ನಾಲೆಯ ನೀರಿನ ಪ್ರವಾಹವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಾ, ಕೈಯಲ್ಲೊಂದು ಗುದ್ದಲಿಯನ್ನು ಹಿಡಿದುಕೊಂಡು ಗದ್ದೆಯ ಬದುವನ್ನು ಅಗೆಯುತ್ತಾ ನಿಂತಿದ್ದೆ. ಮಗ್ಗಲು ಗದ್ದೆಯಲ್ಲಿ ನಮ್ಮ ಆಳು ಬೋರನೂ ಅದೇ ಕೆಲಸವನ್ನು ಮಾಡುತ್ತಾ ನಿಂತಿದ್ದ. ಬೋರನಿಗೆ ವಯಸ್ಸು ೬೦. ನನಗೆ ೨೦. ಬೋರನು ಪದೇ ಪದೇ “ನೀವೆಲ್ಲಾ ಪುಳ್ಚಾರಿನ ಹಾರುವರು, ತುಪ್ಪ ಮೊಸರು ಕಾಫಿ ಕುಡಿಯೋದಕ್ಕೆ ಸರಿ. ನನ್ನ ಹಾಗೆ ಒಂದು ದಿವಸ ಈ ಗದ್ದೆಯ ಕೆಸರಿನಲ್ಲಿ ನಿಂತು ಕೆಲಸ ಮಾಡಿದರೆ ಆಮೇಲೆ ೧೫ ದಿವಸ ಬೇನೆಯಿಂದ ನರಳುತ್ತೀರಿ” ಎಂದ.

ನಾನು “ಆ ಕಾಲುವೆಯನ್ನು ನೀನು ತೆಗೆ; ನಾನು ಈ ಕಾಲುವೆಯನ್ನು ತೆಗೆಯುತ್ತೇನೆ. ಯಾರು ಮುಂಚೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೋ ನೋಡೋಣ” ಎಂದೆ.

ಬೋರನು ಒಪ್ಪಿಕೊಂಡ. ಅವನು ಒಪ್ಪಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿತ್ತು. ಹೆಮ್ಮೆ ಕೊಚ್ಚಿಕೊಂಡ ಮೇಲೆ ಕೆಲಸ ಮಾಡದಿದ್ದರೆ ವಿಧಿಯಿರಲಿಲ್ಲ. ಬೋರನು ಮುದಿ ಎತ್ತಿನಂತೆ ಒಂದೇ ಸಮನಾಗಿ ದುಡಿಯಲು ಪ್ರಾರಂಭಿಸಿಬಿಟ್ಟನು. ಅವನಿಗೆ ಬೇಸರಿಕೆಯಾಗಲಿ ಕಷ್ಟವಾಗಲಿ ಆದಂತೆ ತೋರಲಿಲ್ಲ. ಪುಳ್ಚಾರಿನವನಾದ ನನಗೆ ಗುದ್ದಲಿಯಿಂದ ನಾಲ್ಕು ಪೆಟ್ಟು ನೆಲಕ್ಕೆ ಬಿಡುವ ವೇಳೆಗೆ ಮೈಯೆಲ್ಲಾ ಬೆವತುಹೋಯಿತು. ಸೊಂಟ ನೋಯುವುದಕ್ಕೆ ಪ್ರಾರಂಭವಾಯಿತು. ಇವನ ಹತ್ತಿರ ಅನ್ಯಾಯವಾಗಿ ಹಟ ತೊಟ್ಟು ಕೆಟ್ಟೆನಲ್ಲಾ ಎನ್ನಿಸಿತು. ಸುಧಾರಿಸಿಕೊಳ್ಳಲು ಒಂದು ಗಳಿಗೆ ನಿಲ್ಲುವುದಕ್ಕೂ ನನಗೆ ಧೈರ್ಯವಿರಲಿಲ್ಲ. ನಿಂತರೆ ಕೆಲಸವು ಹಿಂದಾಗುವುದು. ಬೋರನು "ನಾನು ಹೇಳಲಿಲ್ಲವೆ? ತುಪ್ಪ ತಿಂದ ಮೈ ತುಪ್ಪದಂತೆ ಮೆದು” ಎಂದು ಬಿಡುತ್ತಿದ್ದನೆಂಬ ಭಯ. ಈ ಉಭಯ ಸಂಕಟಕ್ಕೆ ಸಿಲುಕಿ ಹಾಗೂ ಹೀಗೂ ಅಗೆಯುತ್ತಾ ಇದ್ದೆ.

ಒಮ್ಮಿಂದೊಮ್ಮೆ ಬೋರನು ಗುದ್ದಲಿಯನ್ನು ಕೆಳಗಿಟ್ಟು ಗಾಳಿಗೆ ಕಿವಿಗೊಟ್ಟು ಆಲಿಸತೊಡಗಿದನು. ಸದ್ಯ ಸಮಯ ದೊರೆತದ್ದೇ ಸಾಕೆಂದು ನಾನೂ ಗುದ್ದಲಿಯನ್ನು ಕೆಳಗಿಟ್ಟು-

"ಏನು ಬೋರ, ಆಕಾಶವಾಣಿ ಕೇಳುತ್ತಿರುವುದೊ? ಅಥವ ದೇವಸ್ತ್ರೀಯರೇನಾದರೂ ನಿನ್ನ ಕಿವಿಯಲ್ಲಿ ಗುಟ್ಟನ್ನು ಹೇಳುತ್ತಿರುವರೋ" ಎಂದೆ.

ಬೋರನು ನನ್ನ ಮಾತಿಗೆ ಲಕ್ಷ್ಯವನ್ನು ಕೊಡಲಿಲ್ಲ. ಜಿಗುಪ್ಪೆಯಿಂದ, “ತಡೀರಿ ಸ್ವಾಮಿ" ಎಂದುಬಿಟ್ಟು ಮೊದಲಿನಂತೆಯೇ ಆಲಿಸುವುದಕ್ಕೆ ಪ್ರಾರಂಭಿಸಿದ. ನೋಡೋಣವೆಂದು ನಾನೂ ಕಿವಿಗೊಟ್ಟು ಕೇಳಿದೆ. ದೂರದಲ್ಲಿ ಗುಡುಗಿನಂತೆ ಶಬ್ದವಾಗುತ್ತಲಿದ್ದಿತು. ಪ್ರತಿ ಕ್ಷಣದಲ್ಲೂ ಹೆಚ್ಚು ಹೆಚ್ಚಾಗಿ ಕೇಳಿಸುತ್ತಿದ್ದಿತು. ಆಕಾಶವಿಮಾನವೇನಾದರೂ ನಮ್ಮ ಮೇಲೆ ಹೋಗುತ್ತಿರುವುದೇನೋ ಎಂದು ಅಂತರಿಕ್ಷದಕಡೆ ನೋಡಿದೆ. ಒಂದೆರಡು ಹಕ್ಕಿಗಳು ಮಾತ್ರ ಕಂಡವು. ಸ್ವಲ್ಪ ಹೊತ್ತಿನೊಳಗಾಗಿ ಶಬ್ದವು ಬಹಳ ಜೋರಾಗಿಯೂ ಸ್ಪಷ್ಟವಾಗಿಯೂ ಕೇಳಿಸಿತು. ಬೋರನು “ಇದೆಂತಹ ಶಬ್ದ ಸ್ವಾಮಿ, ಭೂಮಿಯೇ ನಡುಗುವಂತೆ ತೋರುತ್ತದೆ" ಎಂದನು. ನಾನು ನಗುತ್ತಾ "ಭೂಮಿಯ ನಡುಗುವುದಿಲ್ಲ ಆಕಾಶವೂ ನಡುಗುವುದಿಲ್ಲ, ಈ ಕಡೆಗೆ ಯಾವುದೋ ಮೋಟಾರ್ ಬರುತ್ತಿರಬೇಕು” ಎಂದೆ. ಬೋರನು "ಮೋಟಾರ್ ಅಲ್ಲ ಸ್ವಾಮಿ, ನಾನೇನು ಮೋಟಾರ್ ಕಂಡಿಲ್ಲವೆ. ಮೋಟಾರ್ ಎಂದಿಗೂ ಇಷ್ಟು ಶಬ್ದ ಮಾಡುವುದಿಲ್ಲ” ಎಂದನು. ಬೋರನ ಮಾತು ಮುಗಿಯುವುದರೊಳಗಾಗಿ ದೂರದಲ್ಲಿ ರಸ್ತೆಯಲ್ಲಿ ನಮ್ಮ ಕಣ್ಣಿಗೆ ಬಸ್ ಕಂಡಿತು. ಬೋರನು “ಅದೇನು ಸ್ವಾಮಿ? ಪಿಶಾಚಿಯಂತೆ ಬರುತ್ತಿದೆ. ಹಾವಿನಂತೆ ರಸ್ತೆಯ ಈಚೆಗೂ ಆಚೆಗೂ ನಲಿದಾಡುತ್ತ ಬರುತ್ತಿದೆಯಲ್ಲ?" ಎಂದನು. ನಾನು “ಇದು ಬಸ್" ಎಂದೆ. ನನಗೆ ಬಹಳ ಆನಂದವಾಯಿತು. “ನಮ್ಮೂರಿಗೂ ಒಂದು ಬಸ್ ಬಂದಿತು. ನಾಗರೀಕತೆಯ ತುದಿಯನ್ನು ಏರಿಬಿಟ್ಟೆವು ನಾವು" ಎಂದು ನಾನು ಕುಣಿದಾಡತೊಡಗಿದೆನು.

ನಮ್ಮೆದುರಿಗೆ ಬಂದಮೇಲೆ ಕೂಡ, ಅದು ಬಸ್ ಎಂದು ತಿಳಿಯುವುದೇ ನನಗೆ ಕಷ್ಟವಾಯಿತು. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕಾಗಿ ಎಂದು ಅದನ್ನು ಮಾಡಿದ್ದರೂ ಅದಕ್ಕೆ ಕಮಾನಾಗಲಿ ಮುಸುಕಾಗಲಿ ಇರಲಿಲ್ಲ. ಅದೊಂದು ದೊಡ್ಡ ಒಡ್ಡರ ಬಂಡಿಯಂತೆ ತೋರುತ್ತಿದ್ದಿತು. ಅದರ ಯಜಮಾನನು ಅದನ್ನು ಕೊಂಡುಕೊಂಡ ಕತೆಯೂ ಬಹಳ ವಿನೋದವಾಗಿದೆ. ಸಕಲೇಶಪುರಕ್ಕೆ ಹೋಗುವಾಗ ಆ ಬಸ್ಸು ದಾರಿಯಲ್ಲಿ ಎಲ್ಲೋ ಒಂದು ಹಳ್ಳಕ್ಕೆ ಬಿದ್ದು ಹೋಯಿತಂತೆ. ದೇವರದಯದಿಂದ ಯಾರಿಗೂ ಪೆಟ್ಟಾಗಲಿಲ್ಲ. ಮೇಲಕ್ಕೆ ಎತ್ತುವುದಕ್ಕಾಗದೆ ಅದು ೬ ತಿಂಗಳು ಆ ಹಳ್ಳದಲ್ಲಿಯೇ ಬಿದ್ದಿದ್ದಿತಂತೆ. ಕೊನೆಗೆ ಬಸ್ಸಿನ ಒಡೆಯನು "ಇದನ್ನು ಯಾರು ಬೇಕಾದರೂ ಎತ್ತಿಕೊಂಡು ಉಪಯೋಗಿಸಿಕೊಳ್ಳಿ, ನನ್ನದು ಅಭ್ಯಂತರವಿಲ್ಲ" ಎಂದನಂತೆ. ಕೂಡಲೆ ಈಗಿನ ಬಸ್ಸಿನ ಈ ಯಜಮಾನನು ಅದಕ್ಕೆ ಒಂದು ಹಗ್ಗವನ್ನು ಕಟ್ಟಿ, ೨ ಜೊತೆ ಎತ್ತುಗಳಿಂದ ಬಹಳ ಕಷ್ಟಪಟ್ಟು ಮೇಲಕ್ಕೆ ಎಳಸಿದನಂತೆ, ಅದರ 'ಸೀಟು, ಕಮಾನು' ಮುಂತಾದುವುಗಳನ್ನೆಲ್ಲ ಗೆದ್ದಲು ತಿಂದುಹಾಕಿಬಿಟ್ಟಿದ್ದಿತು. ಏನೋ ಸ್ವಲ್ಪ 'ರಿಪೇರಿ' ಮಾಡಿ ಹಳ್ಳಿಯವರಿಗೆ ಇರಲಿ ಎಂದು ನಮ್ಮೂರಿಗೆ ಇಟ್ಟುಬಿಟ್ಟ.

ಬಸ್ಸಿನ ಧ್ವನಿ ಸುಮಾರು ೪ ಮೈಲು 'ಕಿರೋ' ಎಂದು ಕೇಳುತ್ತದೆ. ನಮ್ಮ ಹಳ್ಳಿಯಲ್ಲಿ ಯಾರಾದರೂ ಗಟ್ಟಿಯಾಗಿ ಕಿರಚಿದರೆ “ಬಸ್ಸು ಕಿರಚಿದಂತೆ ಅವನು ಕಿರಚುತ್ತಾನೆ” ಎನ್ನುತ್ತಾರೆ. ಒಂದು ದಿವಸ ನಾನು ನಮ್ಮೂರ ಈ ಬಸ್ಸಿನಲ್ಲಿ ಹಾಸನಕ್ಕೆ ಹೋಗಬೇಕಾಯಿತು. ನಾನು ಕುಳಿತಿದ್ದ ಸ್ಥಳದಲ್ಲಿ, ಬಸ್ಸಿನ ನೆಲದಮೇಲೆ ಹಾಸಿದ್ದ ಹಲಗೆ ತೂತುಬಿದ್ದಿದ್ದಿತು. ಬಸ್ಸು ಹೊರಟ ಕೂಡಲೇ ಅದರಿಂದ ಹೊಗೆಯು ಹೊರಡಲು ಪ್ರಾರಂಭವಾಯಿತು. ಹೊಗೆಯು ಬಸ್ಸನ್ನೆಲ್ಲಾ ತುಂಬಿಕೊಂಡಿತು. ನಾನು ಧರಿಸಿಕೊಂಡು ಹೋಗಿದ್ದ ಬಿಳಿಯ ಬಟ್ಟೆಗಳು, ನನ್ನ ಮೈ, ಎಲ್ಲಾ ರೈಲ್ವೆ ಇಂಜಿನ್ ಡ್ರೈವರನ ಮೈಯಂತೆ, ಕಪ್ಪಾಗಿ ಹೋದುವು. ಹಾಸನದಲ್ಲಿ ಈ ಕಪ್ಪನ್ನು ತೊಳೆಯುವುದಕ್ಕೆ ಒಂದು ಹಂಡೆ ನೀರನ್ನು ಎಲ್ಲಿ ಒದಗಿಸುವುದೆಂಬುದೇ ನನಗೆ ಯೋಚನೆಯಾಯಿತು. ಆಗ ನನ್ನ ಮುಖವನ್ನು ಯಾರಾದರೂ ನೋಡಿದರೆ ಗಾಬರಿಯಿಂದ ಹೆದರಿ ಓಡುತ್ತಿದ್ದರು. ಸ್ವತಃ ನನಗೇ ನನ್ನ ಗುರುತು ಹತ್ತಲಿಲ್ಲ. ಬಸ್ಸಿನಲ್ಲಿ ನಾನು ಕುಳಿತುದು ಅದೇ ಮೊದಲನೆಯ ಸಲವಾದುದರಿಂದ, ಈ ನನ್ನ ವೇಷವೂ ಅದರ ಆನಂದಕ್ಕೆ ಸೇರಿದುದೇನೋ? ಎಂದುಕೊಂಡೆ.

೨.ವ್ಯಾಸ್ಕೊಡಗಾಮನು ಏಜೆಂಟ್ ಆದುದು

ನಮ್ಮ ಊರ ಬಸ್ಸಿಗೆ ಏಜೆಂಟುಗಳ ಕಾಟ ಹೇಳಿತೀರದು. “ದೇಹಕ್ಕಿಂತ ಬಾಲವೇ ಭಾರ"ವೆಂಬಂತೆ ನಮ್ಮೂರಿನ ಬಸ್ ಯಜಮಾನನಿಗೆ ದೊರೆಯುವ ಪ್ರಯಾಣಿಕರಿಗಿಂತ ಟಿಕೆಟ್ ಮಾರುವ ಏಜೆಂಟುಗಳ ಸಂಖ್ಯೆಯೇ ಹೆಚ್ಚು. ಒಂದು ಬಸ್ಸಿಗೆ ೪ ಏಜೆಂಟುಗಳು. ಒಂದುಸಲ ಈ ಏಜೆಂಟುಗಳ ಸಂಖ್ಯೆಯು ಎಂಟಕ್ಕೆ ಏರಿತ್ತು. ಅನೇಕ ದಿವಸ ಪ್ರಯಾಣಿಕರು ದೊರಕುವುದೇ ಕಷ್ಟವಾದರೂ, ಬಸ್ಸೇನೋ ಈ ಏಜೆಂಟುಗಳಿಂದ ತುಂಬಿಹೋಗುತ್ತದೆ. ಸಾಮಾನ್ಯವಾಗಿ ಯಾರು ಯಾರು ದುಡ್ಡು ಕೊಟ್ಟು ಪ್ರಯಾಣಮಾಡಬೇಕೊ, ಅಂತವರೆಲ್ಲಾ ಏಜೆಂಟುಗಳೇ ಆಗಿಬಿಟ್ಟರೆ ಪಾಪ, ಬಸ್ಸಿನ ಯಜಮಾನನ ಗತಿ ಏನು? ಮೊದಲು ನಮ್ಮೂರ 'ವ್ಯಾಸ್ಕೊಡಗಾಮ' ಇದಕ್ಕೆ ಏಜೆಂಟ್ ಆದ. ಓಹೊ ಮರೆತೆ, ವ್ಯಾಸ್ಕೊಡಗಾಮನೆಂದರೆ ಯಾರೆಂಬುದನ್ನೇ ನಿಮಗೆ ತಿಳಿಸಲಿಲ್ಲ. ಪೋರ್ಚುಗೀಸರು ಇಲ್ಲಿ ಎಲ್ಲಿ ಬಂದರೆಂಬುದಾಗಿ ಯೋಚಿಸಬೇಡಿ. ಇವನಿಗೆ 'ವ್ಯಾಸ್ಕೊಡಗಾಮ'ನೆಂದು ಹೆಸರು ಬರಲು ಕಾರಣವನ್ನು ಹೇಳುತ್ತೇನೆ. ನಮ್ಮ ಊರು ಮಲೆನಾಡ ಹಳ್ಳಿ. ಅಲ್ಲಿ ಹಿಂದಲಿಂದಲೂ ಅಂಗಡಿ ಯಾವುದೂ ಇರಲಿಲ್ಲ. ಗ್ರಾಮಸ್ಥರು ಯಾವ ಸಾಮಾನು ಬೇಕಾದರೂ, ಸುತ್ತಮುತ್ತಲ ಸಂತೆಗಳಿಗೆ ಹೋಗಿ ತರುತ್ತಿದ್ದರು. ಆಗ ನಮ್ಮ ಊರಿನಲ್ಲಿ ಮೊದಲು ನಿಂಗನು ವ್ಯಾಪಾರವನ್ನು ಪ್ರಾರಂಭಿಸಿದ. ವ್ಯಾಪಾರಕ್ಕಾಗಿ ಹಿಂದೂ ದೇಶಕ್ಕೆ ಮೊದಲು ಬಂದವನು ವ್ಯಾಸ್ಕೊಡಗಾಮ ತಾನೆ. ಆದುದರಿಂದ, ಅದಾವುದೋ ತರ್ಕದಿಂದ ಈ ಎರಡು ಹೆಸರುಗಳನ್ನೂ ಒಟ್ಟಾಗಿ ಸೇರಿಸಿ ಹುಡುಗರು ನಿಂಗನನ್ನು 'ವ್ಯಾಸ್ಕೊಡಗಾಮ'ನೆಂದು ಕರೆಯಲು ಪ್ರಾರಂಭಿಸಿಬಿಟ್ಟರು. ಈಚೆಗೆ ಅವನಿಗೆ ಆ ಹೆಸರೇ ನಿಂತುಹೋಯಿತು. ಇರಲಿ. ಈ ವ್ಯಾಸ್ಕೊಡಗಾಮನಿಗೆ ಸಾಮಾನು ತರುವುದಕ್ಕೆ ಪದೇ ಪದೇ ಗಾಡಿಯ ಆವಶ್ಯಕತೆಯಿದ್ದುದರಿಂದ, ಅವನು ಉಪಾಯವಾಗಿ ಮೊದಲು ಏಜೆಂಟ್ ಆದನು. ಇದರಿಂದ ಅವನಿಗೆ ಹಾಸನಕ್ಕೆ ಹೋಗುವ ಪ್ರಯಾಣದ ಖರ್ಚು ಪೂರ್ತಾ ಉಳಿದು ಹೋಗುತ್ತಿದ್ದಿತು. ಎಷ್ಟು ಸ್ವಲ್ಪ ಸಾಮಾನು ಬೇಕಾದರೂ ಬಸ್ಸಿನಲ್ಲಿ ಹೋಗಿ ತಂದುಬಿಡುತ್ತಿದ್ದನು. ಒಂದು ದಿವಸ ನಾನೂ ಅವನ ಜೊತೆಯಲ್ಲಿ ಹಾಸನಕ್ಕೆ ಹೋದೆ. ಅವನು ಅಲ್ಲಿ ಒಂದು ಒಳ್ಳೆಣ್ಣೆ ಡಬ್ಬಿ ಕೊಂಡು ಬಸ್ಸಿನಲ್ಲಿಟ್ಟನು. ಆ ಡಬ್ಬ ನಮ್ಮೂರಿನಂತಹ ಚಿಕ್ಕಹಳ್ಳಿಯಲ್ಲಿ ಖರ್ಚಾಗಬೇಕಾದರೆ ೪ ತಿಂಗಳು ಬೇಕು. ಹಾಗೆ ಖರ್ಚಾದನಂತರ ಉಳಿಯುವ ಲಾಭ ೪ ಆಣೆ ಮಾತ್ರ. ವ್ಯಾಸ್ಕೊಡಗಾಮನು ಬಸ್ಸಿನಲ್ಲಿ ಅದರ ಜೊತೆಯಲ್ಲಿಯೇ ಒಂದು ಚಿಕ್ಕ ಸಕ್ಕರೆಯ ಗಂಟನ್ನೂ ಇಟ್ಟನು. ಅಂತು ಬಸ್ಸು ನಮ್ಮೂರಿನ ಕಡೆ ಹೊರಟಿತು.

ಅದರ ಕಿರೋ ಎಂಬ ಶಬ್ದದಿಂದ ನಮ್ಮ ಕಿವಿ ಮರವಾಗಿ ಹೋಯಿತು. ಬಸ್ಸಿನಲ್ಲಿ ಆ ದಿವಸ ದುರದೃಷ್ಟವಶಾತ್ ನಾನು, ವ್ಯಾಸ್ಕೊಡಗಾಮ ಇಬ್ಬರೇ ಇದ್ದೆವು. ನೀವು ಬಸ್ಸಿನಲ್ಲಿ ಕುಳಿತಿದ್ದರೆ ನಿಮಗೆ ಗೊತ್ತಾಗುತ್ತೆ. ಬಸ್ಸು ತುಂಬಿ ಅದರಲ್ಲಿ ಹೆಚ್ಚು ಜನರಿದ್ದರೆ ಅದು ಕುಲುಕಾಡುವುದಿಲ್ಲ-ದೋಣಿಯಂತೆ-ಇಲ್ಲದಿದ್ದರೆ ಒಳಗೆ ಕುಳಿತಿರುವವರ ಕರುಳೆಲ್ಲಾ ಅಲ್ಲಾಡಿ ಹೋಗುತ್ತೆ. ಮಲೆನಾಡಿನ ರಸ್ತೆಯಂತೂ ದೇವರೇ ಗತಿ. ನಾವು ಬೀಳದಂತೆ ಹಿಡಿದುಕೊಂಡು ಕುಳಿತುಕೊಳ್ಳುವುದೇ ನಮಗೆ ಸಾಕಾಗಿ ಹೋಯಿತು. ವ್ಯಾಸ್ಕೊಡಗಾಮನ ಮೂಗು ಮುಂದಲ 'ಸೀಟಿಗೆ' ತಗಲಿ ಸ್ವಲ್ಪ ಪೆಟ್ಟೇ ಆಯಿತು. ಆದರೆ ಅವನು 'ಟಿಕೆಟ್ 'ಗೆ ದುಡ್ಡು ಕೊಟ್ಟಿರಲಿಲ್ಲ. ಕಷ್ಟ ವಿಲ್ಲದೆ ಸುಖ ಬರುತ್ತದೆಯೆ? ನೋವಿಲ್ಲದೆ ದುಡ್ಡು ಉಳಿಯುತ್ತದೆಯೆ? ಒಂದುಕಡೆ ರಸ್ತೆ ಸ್ವಲ್ಪ ಹಳ್ಳವಾಗಿದ್ದಿತು. ಬಸ್ಸು ಬೆದರಿದ ಕುದುರೆಯಂತೆ ನೆಗೆದು ಕೆಳಕ್ಕೆ ಕುಕ್ಕರಿಸಿತು. ಆದರೆ ನಿಲ್ಲಲಿಲ್ಲ. ಮುಂದಕ್ಕೆ ಹೊರಟಿತು. ಆ ಕುಕ್ಕರಿಸಿದ ವೇಗಕ್ಕೆ ವ್ಯಾಸ್ಕೊಡಗಾಮನು ಕುಳಿತಿದ್ದ 'ಸೀಟಿನ' ಮೆತ್ತೆಯು ಕೆಳಕ್ಕೆ ಬಿದ್ದುಹೋಯಿತು. ಎದುರು ಬದರಾಗಿ ಕುಳಿತಿದ್ದ ನಾವಿಬ್ಬರೂ ಒಬ್ಬರ ಮೇಲೊಬ್ಬರು ಬಿದ್ದೆವು. ಊರನ್ನು ತಲುಪಿದ ಕೂಡಲೆ ವ್ಯಾಸ್ಕೊಡಗಾಮನು ತನ್ನ ಮನೆಯ ಮುಂದೆ ಬಸ್ಸನ್ನು ನಿಲ್ಲಿಸಿ, ಎಣ್ಣೆಯ ಡಬ್ಬದ ಕೆಳಗೆ ಒಂದು ಕೈ, ಮೇಲಕ್ಕೆ ಒಂದು ಕೈ ಹಾಕಿ ಮೆಲ್ಲನೆ ಎತ್ತಿದನು. ಆದರೆ ಡಬ್ಬ ಬಹಳ ಹಗುರವಾಗಿ ಕೈಗೆ ಬಂದಿತು. ಅವನು, ತುಂಬಿದ ಡಬ್ಬವನ್ನು ಅಷ್ಟು ಸುಲಭವಾಗಿ ಎತ್ತಿದುದನ್ನು ಕಂಡು, ನನಗೂ ಆಶ್ಚರವಾಯಿತು. ವ್ಯಾಸ್ಕೊಡಗಾಮನು ಹುಚ್ಚನಂತೆ ನನ್ನ ಕಡೆಯೇ ನೋಡುತ್ತ ನಿಂತುಬಿಟ್ಟನು. ಆಮೇಲೆ ಡಬ್ಬವನ್ನು ಕೆಳಗಿಟ್ಟು ಸಕ್ಕರೆಯ ಗಂಟನ್ನು ಎತ್ತಿಕೊಂಡನು. ಅದರಿಂದ ಎಣ್ಣೆಯು ಧಾರಾಕಾರವಾಗಿ ತೊಟ್ಟಿಕ್ಕುತ್ತಿದ್ದಿತು. ಎಣ್ಣೆಯ ಡಬ್ಬವು ಕುಲುಕಾಟದಲ್ಲಿ ಒಡೆದುಹೋಗಿ, ಆ ಎಣ್ಣೆಯು ಸಕ್ಕರೆಯೊಂದಿಗೆ ಬೆರೆತು ಕರಗಿ ಬಸ್ಸಿನ ತಳಭಾಗವೆಲ್ಲಾ ಅಂಟಾಗಿದ್ದಿತು. ವ್ಯಾಸ್ಕೊಡಗಾಮನಿಗೆ ಬಹಳ ಸಂಕಟವಾಗಿರಬೇಕು. ನಾಲ್ಕಾಣೆಯ ಲಾಭಕ್ಕೆ ಆಸೆಪಟ್ಟು ಅವನು ಹತ್ತು ರೂಪಾಯಿನ ಸಾಮಾನು ಕಳೆದುಕೊಂಡನು. ನನ್ನ ಕಡೆ ನೋಡಿ “ಮುಳುಗಿದೆ ಸ್ವಾಮಿ, ಮುಳುಗಿದೆ” ಎಂದನು. ವ್ಯಾಸ್ಕೊಡಗಾಮನು ಮತ್ತೆ ಏಜೆಂಟ್ ಆಗಲಿಲ್ಲ. ಈಗ ಗಾಡಿ ಮಾಡಿಕೊಂಡೇ ಸಾಮಾನುಗಳನ್ನು ತರುತ್ತಿದ್ದಾನೆ. ಆಮೇಲೆ ೧೫-೨೦ ದಿವಸಗಳವರೆಗೆ ಎಣ್ಣೆ ಮತ್ತು ಸಕ್ಕರೆಯು ಸೇಚನವಾಗಿದ್ದ ಬಸ್ಸಿಗೆ ನೊಣಗಳು ಮುತ್ತಿ 'ಝ್ಯೆಯ್' ಎಂದು ಸಂಗೀತವನ್ನು ಹಾಡುತ್ತಿದ್ದವು. ಅವುಗಳನ್ನು ಓಡಿಸುವುದೇ ಪ್ರಯಾಣಿಕರಿಗೆ ಕೆಲಸವಾಗಿ ಹೋಯಿತು.

೩. ಭಟ್ಟನ ಸಂಪಾದನೆಯ ಮಾರ್ಗ

ವ್ಯಾಸ್ಕೊಡಗಾಮನ ಅನಂತರ ನನ್ನ ಸ್ನೇಹಿತ ನಾರಾಯಣಭಟ್ಟ ಬಸ್ಸಿನ ಏಜೆಂಟಾದ. ಅವನು ಏಜೆಂಟಾಗುವುದಕ್ಕೆ ಅವನು ಒಂದು ವಿಧದಲ್ಲಿ ತೋರಿಸಿದ ಸ್ವಾರ್ಥತ್ಯಾಗವೇ ಮುಖ್ಯ ಕಾರಣ. ಅದು ಈ ರೀತಿ. ಒಂದು ದಿವಸ ಬಸ್ಸಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಅದಕ್ಕೆ ನೀರು ಬೇಕಾಯಿತು. ರಸ್ತೆಯ ಮಗ್ಗುಲಲ್ಲಿ ಒಂದು ಹಳ್ಳವಿದ್ದಿತು. ಅದರ ನೀರು ಕೆಂಪಾಗಿ ಕೊಚ್ಚೆಯಾಗಿತ್ತು. 'ಕ್ಲೀನರ್' ಮಹಾಶಯನು ಆ ನೀರನ್ನು ತಂದನು. ಆದರೆ ಡ್ರೈವರನು “ಬೇಡ, ಆ ನೀರು ಹಾಕಬೇಡ, ಸೋದಿಸಬೇಕು. ಅದರಲ್ಲಿರುವ ಕೆಸರೆಲ್ಲಾ ಒಳಕ್ಕೆ ಹೋದರೆ ಆಮೇಲೆ ದೇವರೇ ಗತಿ" ಎಂದನು. ಆದರೆ ಸೋದಿಸುವುದಕ್ಕೆ ಬಟ್ಟೆ ಎಲ್ಲಿದೆ? ಬಸ್ಸಿನಲ್ಲಿ ಕುಳಿತಿದ್ದ ಉಳಿದವರೆಲ್ಲಾ ಉದಾಸೀನದಿಂದಿದ್ದರು. ನನ್ನ ಸ್ನೇಹಿತ ಭಟ್ಟ ಮಾತ್ರ ಗಾಡಿಯಿಂದ ಇಳಿದು, ಬೆಳ್ಳಗೆ ಶುಭ್ರವಾಗಿ ಇಸ್ತ್ರಿ ಮಾಡಿ ಗರಿ ಗರಿಯಾಗಿದ್ದ ತನ್ನ ರುಮಾಲಿನ ಒಂದು ಸೆರಗನ್ನು ಬಸ್ಸಿನ ನೀರು ಕೊಳವೆಯ ಬಾಯಿಗೆ ಇಟ್ಟು “ಬಿಡಯ್ಯ ನೀರನ್ನು, ಸೋದಿಸಿಬಿಡೋಣ" ಎಂದ. ಸೋದಿಸಿದನಂತರ ಆ ರುಮಾಲಿನ ತುದಿಯನ್ನು ಅದೇ ನೀರಿನಲ್ಲಿ ಹಿಂಡಿ ತೊಳೆದ. ಆದರೆ ತೆಳುವಾದ ರುಮಾಲಾದುದರಿಂದ ಅದನ್ನು ಬಿಗಿಯಾಗಿ ಹಿಂಡಲು ಇಷ್ಟವಿಲ್ಲದೆ, ಏನೋ ಸುಮಾರಾಗಿ ಹಿಂಡಿ ಹೆಗಲಿನ ಮೇಲೆ ಹಾಕಿಕೊಂಡ. ಬಸ್ಸು ಹೊರಟಿತು. ಹಾಸನಕ್ಕೆ ತಲುಪಿದೆವು. ಆದರೆ ಬಸ್ಸಿನಿಂದ ಇಳಿದ ಕೂಡಲೆ ನಮ್ಮ ಭಟ್ಟನ ರೂಪು ವಿಚಿತ್ರವಾಗಿತ್ತು. ಚೆನ್ನಾಗಿ ಹಿಂಡದ ರುಮಾಲಿನಿಂದ ಕೆಂಪು ನೀರು ನಿಧಾನವಾಗಿ ಅವನ ಬಿಳಿಯ ಕೋಟಿನ ಮೇಲೂ ಪಂಚೆಯ ಮೇಲೂ ಸೋರಿದ್ದಿತು. ದೇವಸ್ಥಾನಗಳಿಗೂ ಮನೆಯ ಜಗುಲಿಗಳಿಗೂ ಸುಣ್ಣವನ್ನು ಹಚ್ಚಿ ಅದರ ಮೇಲೆ ಕೆಮ್ಮಣ್ಣಿನ ಪಟ್ಟಿಗಳನ್ನು ಬಳಿಯುವುದನ್ನು ನೀವು ನೋಡಿರಬಹುದು. ಎತ್ತುಗಳಿಗೆ ಕೆಂಪು ಬಿಳುಪಿನ ಗೌಸನ್ನು ಹಾಕುವುದನ್ನು ನೀವು ಕಂಡಿರಬಹುದು. ಭಟ್ಟನನ್ನು ನೋಡಿ ನನಗೆ ಅವುಗಳ ಜ್ಞಾಪಕಬಂದಿತು.

ಬಸ್ಸು ನಿಲ್ದಾಣದ ಹಿಂದುಗಡೆ ಒಂದು ದೊಡ್ಡ ತೋಟವಿದೆ. ಅದರಲ್ಲಿ ಒಂದು ತಿಳಿ ನೀರಿನ ಕೊಳವಿದೆ. ಭಟ್ಟನು ನನ್ನನ್ನು ನಿಲ್ದಾಣದ ಬಳಿ ಇರ ಹೇಳಿ, ತಾನು ಕೊಳದಲ್ಲಿ ಬಟ್ಟೆಯನ್ನು ಹಿಂಡಿ ಬಿಸಲಿನಲ್ಲಿ ಒಂದೇ ಘಳಿಗೆಯಲ್ಲಿ ಒಣಗಿಸಿಕೊಂಡು ಬರುವುದಾಗಿ ಹೇಳಿ ಹೊರಟುಹೋದನು. ನಾನು ಒಂದು ಪತ್ರಿಕೆಯನ್ನು ಓದುತ್ತಾ ಕುಳಿತುಕೊಂಡೆ. ಭಟ್ಟನ ರುಮಾಲಿನ ಜ್ಞಾಪಕ ಬಂದಿತು. ಎಂಟು ರೂಪಾಯಿನ ರುಮಾಲನ್ನು ಅನ್ಯಾಯವಾಗಿ ಕೆಸರಿನಲ್ಲಿ ನೆನಸಿಬಿಟ್ಟನಲ್ಲಾ ಎಂದು ನನಗೆ ಯೋಚನೆ ಹತ್ತಿತ್ತು. ಆ ವೇಳೆಗೆ ತೋಟದ ಕಡೆಯಿಂದ “ರಾಮ” ಎಂಬುದಾಗಿ ಒಂದು ಕೂಗು ಬಂದಿತು. ಅದು ಭಟ್ಟನ ಧ್ವನಿಯೆಂಬುದನ್ನು ತಿಳಿಯಲು ಕಷ್ಟವಾಗಲಿಲ್ಲ. ಆದರೆ ಅದರಲ್ಲಿ ಭಯವೂ ಗಾಬರಿಯ ತುಂಬಿಕೊಂಡಿದ್ದವು. ನನಗಂತೂ ಆ ಧ್ವನಿಯನ್ನು ಕೇಳಿ, ರಾಮಬಾಣದಿಂದ ಹತನಾದ ಮಾರೀಚನು "ಹಾ ಲಕ್ಷಣ" ಎಂದು ಕಿರಚಿದುದು ಜ್ಞಾಪಕಕ್ಕೆ ಬಂದಿತು. ಧ್ವನಿಯು ಬಂದಕಡೆ ಓಡಿದೆ. ಅಲ್ಲೇ ಕೊಳವು ಕಣ್ಣಿಗೆ ಬಿದ್ದಿತು. ಆದರೆ ಭಟ್ಟನು ಅಲ್ಲಿರಲಿಲ್ಲ. ಕೊಳದಲ್ಲಿ ಮುಳುಗಿರಬಹುದೆಂದು ನನಗೆ ಭಯವಾಗಲಿಲ್ಲ. ಏಕೆಂದರೆ ಈಜುವುದರಲ್ಲಿ ಅವನು ಪ್ರಚಂಡ. ನಾನು ಏನುಮಾಡುವುದಕ್ಕೂ ತಿಳಿಯದೆ ಭಟ್ಟನ ಹೆಸರನ್ನು ಹಿಡಿದು ಕೂಗಬೇಕೆಂದು ಯೋಚಿಸುತ್ತಿರುವಾಗ, ಮತ್ತೆ ಸಮೀಪದಲ್ಲಿಯೇ ಭಟ್ಟನ ಧ್ವನಿಯು ಕೇಳಿಸಿತು. ಅದೊಂದು ಕೆಸರಿನಿಂದ ಕೂಡಿದ ಪಾಚಿ ಬೆಳೆದ ಕೊಳ. ಜೊಂಡು ಸುತ್ತಲೂ ಒಂದು ಆಳುದ್ದ ಎತ್ತರವಾಗಿ ಬೆಳೆದುಬಿಟ್ಟಿತು. ಜೊಂಡಿನ ಆಚೆ ಕೊಳವಿರುವದೇ ಯಾರಿಗೂ ಗೊತ್ತಾಗುವಂತಿರಲಿಲ್ಲ. ಭಟ್ಟನ ಧ್ವನಿಯು ಅದರ ಒಳಗಿನಿಂದ ಬಂದಿತು. ಜೊಂಡನ್ನು ಮರೆಮಾಡಿ ನೋಡಿದೆ. ಭಟ್ಟನು ಪಾಚಿ ತುಂಬಿದ ನೀರಿನೊಳಗೆ ನಿಂತಿದ್ದರು. ನೀರು ಸೊಂಟದಿಂದ ಮೇಲಕ್ಕೆ ಇದ್ದಿತು. ಅವನ ಮುಖದಲ್ಲಿ ನಾಚಿಕೆಯೂ ಗಾಬರಿಯೂ ತೋರುತ್ತಿದ್ದುವು. ಅವನ ರುಮಾಲು ಹೆಗಲಿನ ಮೇಲೆ ಬಿದ್ದಿತ್ತು. ಒಂದು ಕೈಯನ್ನು ಕೋಟಿನ ಒಳ ಜೇಬಿಗೆ ಹಾಕಿಕೊಂಡು, ಅದರಲ್ಲಿದ್ದ ಕಾಗದಗಳೂ ನೋಟುಗಳೂ ನೆನೆಯದಂತೆ ಹಿಡಿದಿದ್ದನು. ನಾನು "ಇದೇನೋ ಈ ಅವಸ್ಥೆ?” ಎಂದೆ. ಭಟ್ಟನು ಮೊದಲು "ಇದನ್ನು ಆಚೆಗೆ ಇಡು" ಎಂಬುದಾಗಿ ಹೇಳಿ ಜೇಬಿನಲ್ಲಿದ್ದ ಕಾಗದಪತ್ರಗಳನ್ನೂ ೧೦ ರೂಪಾಯಿನ ನಾಲ್ಕು ನೋಟುಗಳನ್ನೂ ನನ್ನ ಕೈಗೆ ಕೊಟ್ಟನು. ನಾನು ನೀರಿನೊಳಗೆ ಇಳಿಯದೆ ದಡದಲ್ಲಿಯೇ ನಿಂತುಕೊಂಡು ಅವುಗಳನ್ನು ತೆಗೆದು ನನ್ನ ಜೇಬಿಗೆ ಹಾಕಿಕೊಂಡೆ. ಅನಂತರ ಭಟ್ಟನು ಕೈಯಲ್ಲಿದ್ದ ಗಡಿಯಾರವನ್ನು ಬಿಚ್ಚಿಕೊಟ್ಟನು. ಗಡಿಯಾರವು ನಿಂತುಹೋಗಿದ್ದಿತು. "ಇದ್ಯಾಕೊ?” ಎಂದು ಕೇಳಿದೆ. ಅವನು "ಕೈಯನ್ನು ನೀರಿಗೆ ಅದ್ದಿದಾಗ ಗಡಿಯಾರದ ಒಳಕ್ಕೆ ಎಲ್ಲೊ ನೀರು ಸೇರಿರಬೇಕು. ಅದರಿಂದಲೇ ನಿಂತುಹೋಗಿದೆ” ಎಂದನು.

ಇಷ್ಟೆಲ್ಲಾ ಆದಮೇಲೆ,

“ಸರಿ ಮೇಲಕ್ಕೆ ಬಾ” ಎಂದೆ.

ಭಟ್ಟನು ನಿರುತ್ಸಾಹದಿಂದ “ಬರುವ ಹಾಗಿಲ್ಲ" ಎಂದನು.

ನನಗೆ ಅರ್ಥವಾಗಲಿಲ್ಲ. ನೀರಿನಲ್ಲಿರುವವನು ನೀರುಬಿಟ್ಟು ಬರುವುದಕ್ಕಾಗುವುದಿಲ್ಲವೆಂದರೆ ಏನು ಅರ್ಥ?

"ಹಾಗಾದರೇನು ನಿನಗೆ ಜಲಸಮಾಧಿಯೇನೊ?” ಎಂದೆ.

ಭಟ್ಟನು "ಹಾಗೆಯೇ ಸರಿ" ಎಂದನು.

"ಮಂಡಿಯವರಿಗೆ ಕೆಸರಿನಲ್ಲಿ ಹೂತುಹೋಗಿದೆ. ನಾನಾಗಿಯೇ ಮೇಲಕ್ಕೆ ಬರುವಂತಿದ್ದರೆ ನೀನು ಮಹಾಗೃಹಸ್ಥ ಎಂದು ನಿನ್ನನ್ನು ಯಾಕೆ ಇಲ್ಲಿಗೆ ಕರೆಯಬೇಕಾಗಿತ್ತು? ನಿನ್ನ ಎರಡು ಕೈಗಳಿಂದಲೂ ನನ್ನ ಎರಡು ಕೈಗಳನ್ನೂ ಹಿಡಿದು ಬಲವಾಗಿ ಎಳಿ?” ಎಂದನು.

ಭಟ್ಟನನ್ನು ನೀವು ನೋಡಿಲ್ಲ. ಒಳ್ಳೆ ಆನೆ ಇದ್ದ ಹಾಗೆ ಇದ್ದಾನೆ. ಅವನನ್ನು ಎಳೆಯಬೇಕಾದರೆ ಆರು ಜೊತೆ ಬಲವಾದ ಎತ್ತುಗಳನ್ನು ಒಂದೇ ಕಾಲದಲ್ಲಿ ಕಟ್ಟಬೇಕು. ನಾನು ದಡದಲ್ಲಿ ನಿಂತುಕೊಂಡು ಕೈಗಳನ್ನು ಮುಂದಕ್ಕೆ ಚಾಚಿ “ಹು ಹು” ಎಂದೆ.

ಭಟ್ಟನು “ಆ ನಾಜೋಕೆಲ್ಲಾ ನಡಿಯೋ ಹಾಗಿಲ್ಲ. ಕೋಟು ರುಮಾಲು ಬಿಚ್ಚಿಡು. ಜೋಡು ಆಕಡೆ ಬಿಡು. ಸೊಂಟಕ್ಕೆ ಒಂದು ಚೌಕ ಸುತ್ತಿಕೊ, ಪಂಚೆಯನ್ನು ದೂರಕ್ಕೆ ಎಸೆ” ಎಂದನು.

ನಾನು "ಇಷ್ಟೆಲ್ಲಾ ಕಷ್ಟ ಯಾಕೆ? ಬಸ್ ನಿಲ್ದಾಣದಲ್ಲಿ ನಿಂತಿರುವ ಯಾರಾದರೂ ಮತ್ತೊಬ್ಬರನ್ನು ಕರೆಯುತ್ತೇನೆ" ಎಂದೆ.

ಭಟ್ಟನು ಕಾತರ ಧ್ವನಿಯಿಂದ

"ಹಾ, ಬೇಡ ಬೇಡ! ನೀನು ಹಾಗೆ ಮಾಡಿದರೆ ನಾನು ಇದುವರೆಗೆ ಮಾಡಿದುದೆಲ್ಲಾ ವ್ಯರ್ಥವಾಗುತ್ತದೆ” ಎಂದನು. ನಾನು “ನಿನ್ನ ಮನೆ ಹಾಳಾಯ್ತು" ಎಂದುಕೊಂಡು, ನನ್ನ ಉಡುಪನ್ನೆಲ್ಲಾ ಬಿಚ್ಚಿ ಒಂದು ಚೌಕವನ್ನು ಸುತ್ತಿಕೊಂಡು, ಅವನನ್ನು ಎಳೆಯಲು ಪ್ರಾರಂಭಿಸಿದೆ. ಆದರೆ ಆ ಪುಣ್ಯಾತ್ಮ ಅಲುಗಾಡಲೇ ಇಲ್ಲ. "ಯಮನಿಗೆ ಯಾಕೆ ಈ ರೀತಿ ದೇಹ ಬೆಳಸಿಟ್ಟಿದ್ದೀಯೆ?” ಎಂದೆ. ಅಂತೂ ಇಂತೂ ಬಹಳ ಕಷ್ಟ ಪಟ್ಟು ಅವನನ್ನು ಮೇಲಕ್ಕೆ ಎತ್ತಿದುದಾಯಿತು. ನಮ್ಮ ಊರಿನವರೆಲ್ಲರೂ ಮಂಗಳೂರಿನಿಂದ ಐದೈದು ರೂಪಾಯಿಗಳನ್ನು ಕೊಟ್ಟು ಹೊಸ ಜೋಡುಗಳನ್ನು ತರಿಸುತ್ತಿದ್ದರು. ಪಾಪ ಭಟ್ಟನು ಜೋಡನ್ನು ಕೊಂಡು ಇನ್ನೂ ೩ ದಿನಗಳಾಗಿದ್ದುವು. ಅದು ಕೆಸರಿನಲ್ಲಿ ಮುಳುಗಿಹೋಯಿತು. ನಾನು “ಅನ್ಯಾಯವಾಗಿ ಒಳ್ಳೆ ಜೋಡು ಹೋಯಿತಲ್ಲಾ?” ಎಂದೆ. ಭಟ್ಟನು ಹೆದರದೆ "ಹೋಗಲಿ ಇದಕ್ಕೆಲ್ಲಾ ಲಕ್ಷ್ಯ ಮಾಡಿದರೆ ದೊಡ್ಡ ಕೆಲಸಗಳನ್ನು ಮಾಡುವುದಕ್ಕೆ ಆಗುತ್ತದೆಯೇ" ಎಂದನು. ನನಗೆ ಆ ದೊಡ್ಡ ಕೆಲಸ ಯಾವುದೆಂಬುದರ ವಾಸನೆ ಕೂಡ ತಿಳಿದಿರಲಿಲ್ಲ.

ಕೆಸರು ತುಂಬಿದ್ದ ಬಟ್ಟೆಗಳನ್ನೆಲ್ಲಾ ಒಗೆಯಲು ಆ ಇನ್ನೊಂದು ಕೊಳಕ್ಕೆ ಹೋದೆವು.

ದಾರಿಯಲ್ಲಿ ನಾನು "ಇದೆಲ್ಲಾ ನೀನು ಹುಚ್ಚನಂತೆ ಮೋಟಾರಿಗೆ ನೀರನ್ನು ತುಂಬಲು ನಿನ್ನ ಹೊಸ ರುಮಾಲನ್ನು ಎಸೆದುದರ ಫಲ” ಎಂದೆನು.

ಭಟ್ಟನು “ನಾನು ಯಾಕೆ ಹಾಗೆ ಮಾಡಿದೆ. ನಿನಗೆ ಗೊತ್ತೆ" ಎಂದನು.

ನಾನು ಇಲ್ಲವೆಂದು ಒಪ್ಪಿಕೊಂಡೆ.

ಅವನು “ಅಯ್ಯೋ ಮಂಕೆ! ಆದರೆ ಅದೆಲ್ಲ ತಿಳಿಯಬೇಕಾದರೆ ತಲೆ ಸ್ವಲ್ಪ ಚುರುಕಾಗಿರಬೇಕು; ದೂರದೃಷ್ಟಿ ಬೇಕು; ಲೋಕವ್ಯವಹಾರಬೇಕು. ನನ್ನ ಮೆದುಳು ಹೇಗೆ ಕೆಲಸಮಾಡುತ್ತೆ ನಿನಗೆ ಗೊತ್ತೆ? ಬೈಸಿಕಲ್ ೫೦ ಮೈಲಿ ವೇಗದಲ್ಲಿ ಹೋಗುತ್ತಿರುವಾಗ ಅದರ ಚಕ್ರ ಯಾವ ರೀತಿ ತಿರುಗುತ್ತದೆಯೋ ಆ ರೀತಿ ನನ್ನ ಮೆದುಳು ತಿರುಗುತ್ತಿದೆ. ಅದರ“ಅದೆಲ್ಲಾ ಸರಿಯೆ; ತಿರುಗುವುದು ಬರಿಯ ಮೆದುಳೊ ಅಥವ ತಲೆಯೂ ತಿರುಗುತ್ತದೆಯೊ? ಇಲ್ಲದಿದ್ದರೆ ಈ ಕೊಳವನ್ನು ಬಿಟ್ಟು ಕೆಸರು ಕೊಳದಲ್ಲಿ ಯಾಕೆ ಹಂದಿಯಂತೆ ಮುಳುಗಿಕೊಳ್ಳುತ್ತಿದ್ದೆ?”

ವೇಗವಾಗಿ ಹೋಗುತ್ತಿದ್ದ ಅವನ ನಾಲಗೆಯನ್ನು ಈ ರೀತಿಯಾಗಿ ತಡೆದುದರಿಂದ ಭಟ್ಟನಿಗೆ ಅಷ್ಟೇನೂ ಸಂತೋಷವಾಗಲಿಲ್ಲ. ಆದರ ಹೇಳಿದ,

"ಆ ಕೊಳದ ಕಡೆಗೆ ಹೋಗುತ್ತಿರುವಾಗ ಏನೋ ಯೋಚಿಸುತ್ತಿದ್ದೆ. ದಾರಿಯಲ್ಲಿ ಕಣ್ಣಿಗೆ ಕಂಡರೂ ಕಾಣದಂತೆ ಆ ಕೊಳವಿತ್ತು. ಹಾಳಾದ್ದರ ಪಾಚಿ ಬೆಳೆದು ನೆಲಕ್ಕೂ ಕೊಳಕ್ಕೂ ವ್ಯತ್ಯಾಸವೇ ತಿಳಿಯಲಿಲ್ಲ. ಈ ಮೀರಿಹೋದದ್ದೇನು?

"ಏನೂ ಇಲ್ಲ. ಅದರಲ್ಲಿ ಇನ್ನೂ ಸ್ವಲ್ಪ ಹೆಚ್ಚಾಗಿ ಕೆಸರಿದ್ದಿದ್ದರೆ ಅಲ್ಲೆ ನಿನ್ನ ಗೋರಿ ಆಗೋದು."

ಭಟ್ಟನು ಈ ಮಾತನ್ನು ತಿರಸ್ಕಾರದಿಂದ ಅಲಕ್ಷ್ಯಮಾಡಿಬಿಟ್ಟನು. ಅನಂತರ ನನ್ನ ಬುದ್ದಿ ಹೀನತೆಗೋ ಎಂಬಂತೆ ಕನಿಕರದಿಂದ,

"ಎಲೋ ನಾನು ನಿನ್ನ ಹಾಗೆ ಅಂತ ತಿಳಿದುಬಿಟ್ಟಿಯೇನೊ? ಯಾವ ಕೆಲಸ ಮಾಡಬೇಕಾದರೂ ಎಂಟು ದಿವಸ ಅನ್ನ ಆಹಾರ ನಿದ್ರೆ ಇಲ್ಲದೆ-'

"ಬಟ್ಟೆಯೂ ಇಲ್ಲದೆ.”

"ಅನ್ನ ಆಹಾರ ನಿದ್ರೆ ಇಲ್ಲದೆ ಯೋಚಿಸಿ ಯೋಚಿಸಿ ಹೀಗೆಯೇ? ಎಂದು ನಿಶ್ಚಯಿಸಿ ಮಾಡುತ್ತೇನೆ. ಈಗ ನೋಡು, ಎಂಟು ರೂಪಾಯಿ ರುಮಾಲು ಹೋಯ್ತು ಅಂದುಬಿಟ್ಟೆ. ನೀನು ಮೂರು ದಿವಸ ಮೂಗು ಹಿಡಿದುಕೊಂಡು ಕೂತಿದ್ದರೂ ಅದರ ಕಾರಣ ನಿನಗೆ ಗೊತ್ತಾಗುತ್ಯೆ?"

"ಇಲ್ಲ"

“ಆಗಲಿ ಹೇಳುತ್ತೇನೆ ಕೇಳು. ವ್ಯಾಸ್ಕೊಡಗಾಮ ಬಸ್ಸಿನ ಏಜೆನ್ಸಿ ಬಿಟ್ಟ.”

"ಹೊ!"

"ಸುಮ್ಮನೆ ಹೊ ಅಂದರೆ ಪ್ರಯೋಜನವಾಗಲಿಲ್ಲ. ಮುಂದಿನ ವಿಚಾರ ಗೊತ್ತಾಯಿತು ತಾನೆ?" ನಾನು ಇಲ್ಲವೆಂದು ತಲೆಯಲ್ಲಾಡಿಸಿದೆ.

“ಹಾಗಾದರೆ ಕೇಳು. ಈಗ ನಾನು ಬಸ್ ಏಜೆಂಟು ಆಗುತ್ತೇನೆ.”

“ಅದಕ್ಕೆ ನಿನ್ನ ರುಮಾಲನ್ನು ಯಾಕೆ ಕೆಸರಲ್ಲಿ ಅದ್ದಬೇಕು?”

“ನಿನಗೆ ಎಷ್ಟು ಹೇಳಿದರೂ ತಿಳಿಯುವುದೇ ಇಲ್ಲ. ಈ ಏಜೆಂಟ್ ಕೆಲಸಕ್ಕೆ ನಮ್ಮೂರಿನಿಂದ ಇನ್ನೂ ಮೂರು ಜನ ಅರ್ಜಿ ಹಾಕಿದ್ದಾರೆ."

“ನಿನಗೆ ಹೇಗೆ ತಿಳಿಯಿತು?”

"ಉಪಾಯವಿದ್ದರೆ ಎಲ್ಲಾ ತಿಳಿಯುತ್ತೆ. ಡೈವರ್ ಹೇಳಿದ."

"ಹೂ."

"ಆ ಮೂರು ಜನರನ್ನೂ ಬಿಟ್ಟು ಮೋಟಾರಿನ ಯಜಮಾನ ನನಗೇ ಯಾಕೆ ಏಜೆನ್ಸಿಕೊಡಬೇಕು? ಅದಕ್ಕಾಗಿ ಸ್ವಲ್ಪ ಕೊಳೆಯಾದರೆ ಆಗಲಿ ಎಂದು ಈ ಎಂಟು ರೂಪಾಯಿನ ರುಮಾಲನ್ನೇ ನೀರನ್ನು ಸೋದಿಸಲು ಹಾಕಿದೆ. ಬಸ್ಸಿನ ಯಜಮಾನನೂ ಅದನ್ನು ನೋಡಿದ್ದಾನೆ. ಇನ್ನೇನು ನಾನೇ ಬಸ್ಸಿಗೆ ಏಜೆಂಟು.”

ಭಟ್ಟನು ಏಜೆಂಟಾದರೂ ಅದರಿಂದ ಅವನಿಗೆ ಏನು ಲಾಭಬರಬಹುದೆಂಬುದು ನನಗೆ ತಿಳಿಯಲಿಲ್ಲ. ಆಗಲೇ ಅವನಿಗೆ ಐದು ರೂಪಾಯಿನ ಜೋಡು ಹೋಯ್ತು. ೩೦ ರೂಪಾಯಿನ ಗಡಿಯಾರ ಕೆಟ್ಟು ಹೋಯ್ತು. ರುಮಾಲಿನಲ್ಲಿ ಏನು ಮಾಡಿದರೂ ಹೋಗದ ಕೆಮ್ಮಣ್ಣಿನ ಕರೆ ನಿಂತಿತು. ಹಂದಿಯಂತೆ ಸೊಂಟದವರೆಗೆ ಕೆಸರಿನಲ್ಲಿ ನೆನೆದುದಾಯಿತು. ಒಂದು ಕಾಸೂ ಉತ್ಪತ್ತಿ ಇಲ್ಲದ ನಮ್ಮೂರ ಏಜೆನ್ಸಿಯಿಂದ ಈ ನಷ್ಟವನ್ನೆಲ್ಲಾ ಅವನು ಹೇಗೆ ಕೂಡಿಸಬಹುದೆಂಬುದೇ ನನಗೆ ಬಗೆ ಹರಿಯಲಿಲ್ಲ. ಆದರೆ ಆ ರೀತಿ ಹೇಳಿ ಪ್ರಾರಂಭದಲ್ಲಿಯೆ ಅವನಿಗೆ ನಿರುತ್ಸಾಹವುಂಟುಮಾಡಬಾರದೆಂದು ಬಾಯಿಗೆ ಬೀಗ ಹಾಕಿಕೊಂಡು ಸುಮ್ಮನಿದ್ದೆ,

ಆ ದಿವಸ ನ್ಯಾಯಸ್ಥಾನದಲ್ಲಿ ಭಟ್ಟನದು ಒಂದು ವ್ಯವಹಾರ. ಅದಕ್ಕೆ ನಾನೇ ಸಾಕ್ಷಿ; ಅದಕ್ಕಾಗಿಯೇ ನಾವು ಹಾಸನಕ್ಕೆ ಹೋಗಿದ್ದುದು. ಆದರೆ ಕೊಳದ ಬಳಿ ಬಟ್ಟೆಗಳೆಲ್ಲಾ ಒಣಗುವ ವೇಳೆಗೆ ಮಧ್ಯಾಹ್ನ ಮೂರು ಗಂಟೆ ಆಯಿತು. ಬಟ್ಟೆ ಇಲ್ಲದೆ ನ್ಯಾಯಸ್ಥಾನಕ್ಕೆ ಹೋಗುವುದಕ್ಕೆ ಆಗುತ್ತದೆಯೆ? ನಾವಿಬ್ಬರೂ ಮೂರು ಗಂಟೆಗೆ ನ್ಯಾಯಸ್ಥಾನದ ಬಳಿಗೆ ಹೋಗಿ ಲಾಯರನ್ನು ನೋಡಿದೆವು. ಅವರು ನಮ್ಮನ್ನು ಕಂಡೊಡನೆಯೇ ಕೋಪದಿಂದ,

“ನಿಮ್ಮ 'ಕೇಸನ್ನು' ತೆಗೆದುಕೊಂಡುದು ನನ್ನ ತಪ್ಪು. ನಿಮ್ಮದು ಹುಡುಗಬುದ್ದಿ; ಜವಾಬ್ದಾರಿಯಿಲ್ಲ. ೧೧ ಗಂಟೆಯಿಂದ ೨ ಗಂಟೆಯವರೆಗೆ ನಿಮ್ಮ ಹೆಸರನ್ನು ಕೂಗಿ ಕೂಗಿ ಸಾಕಾಯಿತು. ನ್ಯಾಯಾಧಿಪತಿಗಳು ಹೊರಟುಹೋದರು. 'ಕೇಸು' ವಜಾ ಆಯಿತು” ಎಂದರು.

ಭಟ್ಟನು ವಿಧಿಯಿಲ್ಲದೆ,

"ನಿಮ್ಮದು ತಪ್ಪಲ್ಲ. ಹೋದರೆ ಹೋಯಿತು. ಏನು ಮಾಡೋದು. ಒಂದರಲ್ಲಿ ಹೋದರೆ ಇನ್ನೊಂದರಲ್ಲಿ ಬರುತ್ತೆ, ನೂರು ರೂಪಾಯಿ ತಾನೇ ಹೋದದ್ದು” ಎಂದನು.

"ಅಷ್ಟೇ ಅಲ್ಲ; ಎದುರು ಪಕ್ಷದವರ ವೆಚ್ಚ ಸುಮಾರು ೮೦ ರೂಪಾಯಿ ಆಗುತ್ತೆ. ಅದನ್ನೂ ನೀವೇ ಕೊಡಬೇಕು."

ನಾವು ಹಿಂದಿರುಗಿದ್ದೆವು. ಆ ದಿವಸದ ಘಟನೆಗಳನ್ನೂ ನಷ್ಟಗಳನ್ನೂ ನೋಡಿ ಯಾರಿಗಾದರೂ ನಿರುತ್ಸಾಹವೂ ಪೆಚ್ಚು ಮುಖವೂ ಉಂಟಾಗಬೇಕಾಗಿದ್ದಿತು. ನಾನೇನೋ ಬೆಪ್ಪಾಗಿ ಬರುತ್ತಿದ್ದೆ. ಆದರೆ ಭಟ್ಟನಿಗೆ ಸ್ವಲ್ಪವೂ ಬೇಸರಿಕೆಯಾದಂತೆಯೇ ತೋರಲಿಲ್ಲ. ಅವನು ಶಿಳ್ಳು ಊದುತ್ತಾ ಸಂತೋಷದಿಂದಲೇ ಬರುತ್ತಿದ್ದನು. ಅವನನ್ನು ಚೆನ್ನಾಗಿ ಬಯ್ದುಬಿಡಬೇಕೆಂದು ನಾನು ಯೋಚಿಸುತ್ತಿರುವಷ್ಟರಲ್ಲಿಯೇ ಭಟ್ಟನು,

“ಮುಂದಲ ಸಲ ಈ ಲಾಯರನ್ನು ನೋಡುವುದಕ್ಕೆ ಬಂದಾಗ ಮೋಟಾರ್ ಕಾರಿನಲ್ಲಿಯೇ ಬರುತ್ತೇನೆ" ಎಂದನು.

ನಾನು ಜಿಗುಪ್ಪೆಯಿಂದ "ಏಜೆಂಟ್ ಆಗುವೆಯಲ್ಲ. ಅದರಿಂದ ಮೋಟಾರ್‌ ನಿನ್ನದೆ ಆಯಿತಲ್ಲವೆ?” ಎಂದೆ.

ಭಟ್ಟನು ಗಂಭೀರವಾಗಿ,

“ಹಾಗಲ್ಲ ನೋಡು. ನಾಳೆಯಿಂದ ಏಜೆಂಟ್ ಆದ ಕೂಡಲೆ ನಾನೆ ಮೋಟಾರ್‌ ನಡೆಸಲು ಅಭ್ಯಾಸಮಾಡುತ್ತೇನೆ. ಅನಂತರ ಯಾವು ದಾದರೂ ಒಂದು ಹಳೆಯ ಗಾಡಿ ಯಾರಿಗೂ ಬೇಕಾಗದ್ದನ್ನು ತಂದು ಸರಿಮಾಡಿಬಿಡುತ್ತೇನೆ. ನಮ್ಮೂರಿಗೂ ಹಾಸನಕ್ಕೂ ನಾನೇ “ಸರ್‍ವೀಸ್ ಇಟ್ಟುಬಿಡುತ್ತೇನೆ. ಪ್ರಾರಂಭದಲ್ಲಿ ಈ ಒಂದು 'ಲೈನ್' ಮಾತ್ರ. ಇದರಲ್ಲಿ ಗಡಿಗೆಗಟ್ಲೆ ರೂಪಾಯಿ ಹೊಡೆಯುತ್ತೇನೆ. ಆಮೇಲೆ ಸಕಲೇಶಪುರ, ಚೆನ್ನರಾಯಪಟ್ಟಣ, ಮಡಿಕೇರಿ, ಸೇಲಂ, ಅಲ್ಲಿಯವರೆಗೆ ಬಸ್ ಸರ್ವಿಸ್ ಇಡಬೇಕು. ೬-೮ ಡ್ರೈವರುಗಳೂ ಗುಮಾಸ್ತರೂ ಬೇಕು. ಆದರೂ ಚಿಂತೆಯಿಲ್ಲ. ಸುಮ್ಮನೆ ಕುಳಿತುಕೊಂಡು ನಿತ್ಯ ಬರುವ ದುಡ್ಡನ್ನು ಎಣಿಸಿ ಜೇಬಿಗೆ ಇಳಿಬಿಡುವುದೊಂದೇ ನನಗೆ ಕೆಲಸ. ಪ್ರಾರಂಭದಲ್ಲಿ ತಿಂಗಳಿಗೆ ಒಂದುಸಾವಿರಕ್ಕೆ ಕಡಮೆ ಇಲ್ಲದೆ ಲಾಭ ಬರುತ್ತದೆ. ಅನಂತರ ಎಷ್ಟು ಕಡಮೆ ಎಂದರೂ, ಬೇಡವೆಂದರೂ, ನಾಲ್ಕು ಸಾವಿರ ರೂಪಾಯಿಗಳಿಗೆ ಮೋಸವಿಲ್ಲದಂತೆ ಜೇಬಿಗೆ ಬೀಳುತ್ತದೆ. ಎರಡು ವರುಷಗಳು ಕಳೆಯುವುದರೊಳಗಾಗಿ ಮೈಸೂರು ಸೀಮೆಯಲ್ಲೆಲ್ಲಾ “ಭಟ್ಟನ ಬಸ್ ಸರ್ವಿಸ್” ಹೊರತು ಮತ್ತಾವುದೂ ಇಲ್ಲದಂತೆ ಮಾಡಿಬಿಡುತ್ತೇನೆ.”

“ಸ್ವಲ್ಪ ತಡಿ, ಈಗಿರುವ ಬಸ್ ಸರ್‍ವಿಸ್‍ಗಳೊ?"

“ಬಂದ ಲಾಭದಿಂದ ಅವುಗಳನ್ನೆಲ್ಲಾ ನಾನೇ ಕೊಂಡುಕೊಳ್ಳುತ್ತೇನೆ."

ಆ ದಿವಸ ಸಂಧ್ಯಾಕಾಲ ಬಸ್ ಯಜಮಾನನು ಭಟ್ಟನನ್ನೇ ನಮ್ಮೂರಿಗೆ ಏಜೆಂಟಾಗಿ ನಿಯಮಿಸಿದನು.

ಭಟ್ಟನು ತನ್ನ ಲಕ್ಷ್ಯವನ್ನೂ ತೀಕ್ಷ್ಮವಾದ ಮೆದುಳಿನ ಎಲ್ಲಾ ಶಕ್ತಿಯನ್ನೂ, ಬಸ್ಸಿನ ಕಡೆಗೆ ತಿರುಗಿಸಿದನು. ಅವನ ಮನೆಯಲ್ಲಿ ಅವರ ಅಜ್ಜಿಯೊಬ್ಬರಿದ್ದರು. ಅವರಿಗೆ ೮೦ಕ್ಕೆ ಮೀರಿದ ವಯಸ್ಸಾಗಿ ಕಣ್ಣು ಕಾಣುತ್ತಿರಲಿಲ್ಲ. ಅವರು ಭಟ್ಟನಿಗೆ ಪ್ರತಿನಿತ್ಯವೂ ದೇವರ ಪೂಜೆಮಾಡೆಂದು ಹೇಳುತ್ತಿದ್ದರು. ದೇವರ ಪೂಜೆಮಾಡಲು ಭಟ್ಟನಿಗೆ ಇಷ್ಟವಿಲ್ಲದೆ ಇಲ್ಲ. ಆದರೆ ಹಾಳಾದ್ದು ಬಸ್ಸು, ಅವನ ದೇವರ ಪೂಜೆಯ ವೇಳೆಗೆ ಸರಿಯಾಗಿ ನಮ್ಮೂರಿಗೆ ಬಂದುಬಿಡುತ್ತಿದ್ದಿತು. ಭಟ್ಟನು ಕೂಡಲೆ ಹೋಗಿ ಪ್ರಯಾಣಿಕರಿಗೆ ಟಿಕೆಟನ್ನು ಕೊಟ್ಟು ಅವರನ್ನು ಗಾಡಿಯಲ್ಲಿ ಕೂರಿಸಿ ತಾನು ಬಸ್ಸಿನಲ್ಲಿ ಕುಳಿತು ಸ್ವಲ್ಪಹೊತ್ತು ನಡೆಸುವುದನ್ನು ಅಭ್ಯಾಸಮಾಡಬೇಕಾಗಿದ್ದಿತು. ಆದರೆ ದೇವರ ಪೂಜೆಮಾಡದಿದ್ದರೆ ಅಜ್ಜಿಯವರು ಬಿಡುವಂತಿಲ್ಲ. ಆದುದರಿಂದ ಸ್ನಾನಕ್ಕೆ ಬಚ್ಚಲಿಗೆ ಇಳಿಯುವಾಗಲೇ ದೇವರ ಪೂಜೆಯ ಮಂತ್ರವನ್ನು ಪ್ರಾರಂಭಿಸಿಬಿಡುತ್ತಿದ್ದನು. ಸ್ನಾನಮಾಡಿ ಮೈ ಒರಸಿಕೊಂಡು ಪಂಚೆ ಯುಟ್ಟುಕೊಂಡು ವಿಭೂತಿಯನ್ನು ಧರಿಸಿ ಸಂಧ್ಯಾವಂದನೆ ಶಾಸ್ತ್ರ ಮಾಡಿ ದೇವರ ಪೂಜೆಗೆ ಕೂರುವ ವೇಳೆಗೆ ಎಲ್ಲಾ ಮಂತ್ರಗಳನ್ನೂ ಘಟ್ಟಿಯಾಗಿ ಹೇಳಿ ಮುಗಿಸಿಬಿಡುತ್ತಿದ್ದನು. ಕುರುಡು ಮುದುಕಿಯು ಘಂಟೆಯ ಸದ್ದನ್ನು ಕೇಳಿ ಮೊಮ್ಮಗನು ದೇವರಪೂಜೆ ಮಾಡಿಯಾಯಿತೆಂದು ಸಂತೋಷದಿಂದ ತೀರ್ಥವನ್ನು ತೆಗೆದುಕೊಳ್ಳುತ್ತಿದ್ದಳು. ತೀರ್ಥವನ್ನು ಮುದುಕಿಗೆ ಕೊಡುವ ವೇಳೆಯಲ್ಲಿ ಬಸ್ ಸದ್ದಾದರೂ ಸಾಕು, ಹಾವಾಡಿಗನ ತಮಟೆಯನ್ನು ಕೇಳಿ ಹುಡುಗರು ಓಡಿಬಿಡುವಂತೆ, ಭಟ್ಟನು ಬಟ್ಟಲನ್ನು ಅಲ್ಲಿಯೇ ಇಟ್ಟು ಓಡಿಬಿಡುತ್ತಿದ್ದನು. ಅವನ ಉತ್ಸಾಹವನ್ನು ನೋಡಿ ನಾನು ಭಟ್ಟನ ಬಸ್ ಸರ್ವಿಸ್ ಪ್ರಾರಂಭವಾದರೂ ಆಗಬಹುದೆಂದು ಯೋಚಿಸಿದೆ.

ಒಂದು ದಿವಸ ನಾನು ಗದ್ದೆಯ ಹಸುರು ಬಯಲ ಬದುವಿನಲ್ಲಿ ಕುಳಿತು "ಸಣ್ಣ ಕತೆಗಳನ್ನು” ಓದುತಲಿದ್ದೆ. ಆ ಸಮಯಕ್ಕೆ ಭಟ್ಟನು ಅಲ್ಲಿಗೆ ಬಂದನು. ಅವನ ಮುಖವನ್ನು ನೋಡಿದ ಕೂಡಲೇ ಏನೋ ವಿಷಯ ವಿರಬೇಕೆಂದು ನನಗೆ ಗೊತ್ತಾಯಿತು. ಅವನು ನನ್ನನ್ನು ಕುರಿತು,

“ನೀವೆಲ್ಲಾ ಶುದ್ಧ ಮೈಗಳ್ಳರು ಕಣೋ, ಅಪ್ಪ ಕೂಡಿಹಾಕಿದ ಗಂಟಿದೆ ಅಂತ ತಿಂದು ತಿಂದು ಕರಗಿಸ್ತೀರಿ. ದುಡ್ಡು ಸಂಪಾದನೆಯಾಗೋ ಒಂದು ಕೆಲಸಾನೂ ಪ್ರಾರಂಭಿಸೋಲ್ಲ, ನಿಮ್ಮ ಮೆದುಳೊ-”

ನಾನು “ಮಹಾ ನೀನು ಮಾಡಿದ್ದೇನು" ಎಂದೆ.

ಭಟ್ಟನ ಮುಖದ ಮೇಲೆ ನನ್ನ ಮಾತಿನಿಂದ ಜಿಗುಪ್ಪೆಯ ಚಿಹ್ನೆಯು ತೋರಿತು. ಆದರೂ ಅವನು ಸಂತೋಷದಿಂದ ಪ್ರಾರಂಭಿಸಿದನು.

“ಈಗ ಇನ್ನೊಂದು ದೊಡ್ಡ ಯೋಚನೆ ಮಾಡಿದ್ದೇನೆ. ಶ್ರೀನಿವಾಸ. ಕೋ-ಆಪರೇಟಿವ್ ಸೊಸೈಟಿ 'ಸೆಕ್ರೆಟರಿಷಿಪ್' ನನಗೆ ಕೊಡುವಂತೆ ಮಾಡಿದೆ."

“ಅವನು ಯಾಕೆ ಬಿಟ್ಟ.”

"ಬಿಡಲಿಲ್ಲ. ನಾನೇ ಬಲಾತ್ಕಾರವಾಗಿ ಕಸಿದುಕೊಂಡೆ.”

“ಅವನಿಗೆ ಏನು ಕೊಟ್ಟೆ.”

"ಹೂ! ಕೊಟ್ಟೆ, ೧೦೦ ರೂಪಾಯಿ.” “ನೀನು ಮಾಡುವ ಸಂಪಾದನೆಯ ವಿಚಾರ ಹೀಗೆಯೋ?” ಎಂದೆ.

ಭಟ್ಟನು “ನೋಡಿದೆಯಾ? ನಿನ್ನ ದೃಷ್ಟಿ ಬಹಳ ಸಂಕುಚಿತ. ನಿನಗೆ ವಿಶಾಲವಾದ ದೃಷ್ಟಿಯುಳ್ಳವನಾಗೆಂದು ಎಷ್ಟೋಸಲ ಹೇಳಿದರೂ ಪ್ರಯೋಜನವಾಗಲಿಲ್ಲ. ನಾನು ಹಾಗೆಲ್ಲಾ ಗುಂಡಿಗೆ ಬೀಳುತ್ತೇನೆಯೆ? ಈಗ ನೋಡು, ಸೊಸೈಟಿ ಅಂಗಡಿಗೆ ಅಕ್ಕಿ ಬೇಳೆ ಮುಂತಾದ ಸಾಮಾನುಗಳೆಲ್ಲಾ ಬೇಕು. ಅದನ್ನೆಲ್ಲಾ ತರುವುದಕ್ಕೆ 'ಭಟ್ಟನ ಬಸ್ ಸರ್ವಿಸ್' ಪ್ರಾರಂಭವಾಗುವುದರಿಂದ ಎಷ್ಟು ಸುಲಭ! ಒಂದು ಕಾಸೂ ಬಾಡಿಗೆ ಕೊಡಬೇಕಾದುದಿಲ್ಲ. ಆ ದುಡ್ಡೆಲ್ಲಾ ನನಗೇ ಉಳಿಯುತ್ತೆ, ಬಸ್ಸನ್ನು ದುದ್ದಕ್ಕೆ ಹೊಡೆದುಕೊಂಡು ಹೋಗಿ ಅಲ್ಲಿಯ ಸಂತೆಯಿಂದ ತೆಂಗಿನಕಾಯಿ ಮೆಣಸಿನಕಾಯಿ ಹೇರಿಕೊಂಡು ಬಂದು, ಎಲ್ಲಾ ಕಡೆಗೂ ಕಳುಹಿಸಬಹುದು. ದುದ್ದದಲ್ಲಿ ಮಾರುವುದಕ್ಕಿಂತ ಇಲ್ಲಿ ಕಡಿಮೆ ಬೆಲೆಗೆ ಮಾರಬಹುದು. ನಮ್ಮ ಸೊಸೈಟಿಯೇ ಒಂದು ದೊಡ್ಡ ಮಂಡಿಯಾಗುತ್ತದೆ. ಇದರಲ್ಲಿ ತಿಂಗಳಿಗೆ ಸಾವಿರಾರು ರೂಪಾಯಿ ಲಾಭ ಬರುವುದರಲ್ಲಿ ಸಂದೇಹವಿಲ್ಲ-”

“ಸ್ವಲ್ಪ ತಡಿ, ಆ ಲಾಭ ಸೊಸೈಟಿಗೆ ಬರುತ್ತದೆ. ನಿನಗೆ ಬಂದದ್ದೇನು?”

"ನನಗೆ ಬಂದದ್ದೇನೆ. ತೋರಿಸುತ್ತೇನೆ ಕೇಳು. ಯಾವಾಗ ಹೀಗೆ ನನ್ನ ಬುದ್ಧಿಶಕ್ತಿಯಿಂದಲೂ, ಏಕಾಗ್ರತೆಯಿಂದಲೂ, ನಾನು ವಿಧವಿಧವಾದ ವ್ಯಾಪಾರಗಳನ್ನು ಮಾಡಿ ಲಾಭವನ್ನು ಸಂಪಾದಿಸಿ ಸೊಸೈಟಿಗೆ ಕೊಡುತ್ತೇನೊ, ಆಗ ಅವರು ನನಗೆ ತಿಂಗಳಿಗೆ ನೂರಾರು ರೂಪಾಯಿಗಳನ್ನು 'ಬೋನಸ್ಸು' ಕೊಡಲೇ ಬೇಕು.”

ಆ ಮೇಧಾವಿಯ ಬುದ್ಧಿಶಕ್ತಿಯನ್ನು ನೋಡಿ ನನಗೆ ಆಶ್ಚಯ್ಯ ವಾಯಿತು. 'ಬಸ್ ಸರ್ವೀಸನ್ನೂ, ಇದನ್ನೂ ನೀನೊಬ್ಬನೇ ಹೇಗೆ ನಿರ್ವಹಿಸುತ್ತೀಯೆ?” ಎಂದೆ.

ಭಟ್ಟನು, “ಓ ಅದೇನು ಮಹಾ ಕಷ್ಟ, ೭-೮ ಗುಮಾಸ್ತರುಗಳನ್ನಿಟ್ಟುಬಿಡುತ್ತೇನೆ. ಇಂತಹ ಸಾವಿರ ಕೆಲಸಗಳನ್ನಾದರೂ ನಿರ್ವಹಿಸಬಲ್ಲ ಶಕ್ತಿಯು ನನ್ನ ಮೆದುಳಿನಲ್ಲಿದೆ" ಎಂದನು.

ಒಂದೆರಡು ತಿಂಗಳಾಗಿರಬಹುದು. ಒಂದು ದಿವಸ ಭಟ್ಟನು ಕೋ-ಆಪರೇಟಿವ್ ಸೊಸೈಟಿಯ ಕಾರ್‍ಯದರ್ಶಿಯಾಗಿ ಕೆಲಸಮಾಡುತ್ತಾ ಪೆಟ್ಟಿಗೆಯ ಮುಂದೆ ಕುಳಿತುಕೊಂಡು ಲೆಕ್ಕಗಳನ್ನು ಬರೆಯುತ್ತಿದ್ದನು. ಪಾಲುಗಾರನೊಬ್ಬನು ೭೫ ರೂಪಾಯಿಗಳನ್ನು ಸೊಸೈಟಿಯಿಂದ ಸಾಲವಾಗಿ ಪಡೆದು ತೀರಿಸದೆ ಮೃತನಾಗಿದ್ದನು. ಅವನ ಪತ್ರವು ವಾಯಿದೆ ಮೀರುವ ಅವಸ್ಥೆಗೆ ಬಂದಿತ್ತು. ಅದನ್ನು ಕೋರ್ಟಿಗೆ ಕಳುಹಿಸಬೇಕೆಂದು ತೀರ್ಮಾನವಾಗಿದ್ದುದರಿಂದ, ಭಟ್ಟನು ಪತ್ರಕ್ಕೆ ೨೦ ರೂಪಾಯಿಗಳ ನೋಟನ್ನು ಗುಂಡುಸೂಜಿಯಿಂದ ಚುಚ್ಚಿ ಬಸ್ಸಿನಲ್ಲಿ ಹಾಸನಕ್ಕೆ ಲಾಯರಲ್ಲಿಗೆ ಕಳುಹಿಸಲು ಪೆಟ್ಟಿಗೆಯ ಮಗ್ಗುಲಲ್ಲಿ ಇಟ್ಟುಕೊಂಡಿದ್ದನು. ಆ ವೇಳೆಗೆ ಬಸ್ ಸದ್ದಾಯಿತು. ಭಟ್ಟನು ಕೂಡಲೆ ಗಡಿಬಿಡಿಯಿಂದ ಪೆಟ್ಟಿಗೆಯ ಬಾಗಿಲನ್ನು ಮುಚ್ಚಿ ಬಸ್ಸನ್ನು ವಿಚಾರಿಸಲು ಹೊರಟುಹೋದನು. ಹೋಗುವಾಗ ಅವಸರದಲ್ಲಿ ಪತ್ರವನ್ನೂ ಅದಕ್ಕೆ ಸೇರಿಸಿದ್ದ ನೋಟನ್ನೂ ಪೆಟ್ಟಿಗೆಯ ಮಗ್ಗುಲಲ್ಲಿಯೇ ಮರೆತುಬಿಟ್ಟನು.

ಬಸ್ಸನ್ನು ಕಳುಹಿಸಿದನಂತರ, ತಾನು ಪತ್ರವನ್ನೂ ದುಡ್ಡನ್ನೂ ಪೆಟ್ಟಿಗೆಗೆ ಹಾಕಿದುದೇ ಜ್ಞಾಪಕಬರಲಿಲ್ಲವಲ್ಲಾ ಎಂದುಕೊಂಡು ಭಟ್ಟನು ಅವಸರದಿಂದ ಮನೆಗೆ ಓಡಿಬಂದನು, ಪೆಟ್ಟಿಗೆಯ ಕಾಗದ ಪತ್ರಗಳನ್ನೆಲ್ಲಾ ನೆಲದ ಮೇಲೆ ಹರಡಿ ೧೦-೨೦ ಸಲ ಚೆನ್ನಾಗಿ ಹುಡುಕಿದನು. ಏನೂ ಪ್ರಯೋಜನವಾಗಲಿಲ್ಲ. ಅಲ್ಲಿಯೇ ನಿಂತಿದ್ದ ಅವನ ಮನೆಯ ಎಮ್ಮೆಯ ಎಳೆಗರುವು ಪತ್ರವನ್ನೂ ನೋಟನ್ನೂ ತಿಂದುಹಾಕಿಬಿಟ್ಟಿದ್ದಿತು. ಪತ್ರವನ್ನು ಬರೆದುಕೊಟ್ಟು ಹಣವನ್ನು ತೆಗೆದುಕೊಂಡವನನ್ನು ಕಾಣಬೇಕಾದರೆ ಯಮ ಲೋಕಕ್ಕೆ ಹೋಗಬೇಕಾಗಿತ್ತು. ಸೊಸೈಟಿಯ ಚಾಲಕರು ಭಟ್ಟನನ್ನು ಅವನ ಕೆಲಸಗಳಿಗಾಗಿ ವಂದಿಸಿ, ಕಳೆದುಹೋದ ಪತ್ರದ ಹಣವನ್ನು ಅವನಿಂದ ವಸೂಲ್ಮಾಡಿಕೊಂಡು ರಾಜೀನಾಮೆಯನ್ನು ಬರೆಸಿಕೊಂಡರು.

ಆ ಪ್ರಚಂಡನು ಇದಾವುದರಿಂದಲೂ ಹೆದರಲಿಲ್ಲ. “ಶ್ರೇಯಾಂಸಿ ಬಹು ವಿಘ್ನಾನಿ” ಎಂದು ಹೇಳುತ್ತಾ ಬಸ್ಸು ನಡೆಸುವುದನ್ನು ಕಲಿಯಲು ಪ್ರಾರಂಭಿಸಿದನು. ಪ್ರತಿದಿನವೂ ಅರ್ಧಗಂಟೆ ಪ್ರಯತ್ನಪಡುತ್ತಿದ್ದುದರಿಂದ ೬ ತಿಂಗಳಲ್ಲಿ ಸ್ವಲ್ಪಮಟ್ಟಿಗೆ ಬಸ್ಸನ್ನು ನಡೆಸುವುದು ಅಭ್ಯಾಸವಾಯಿತು. ಭಟ್ಟನ ಯೋಚನೆಯೆಲ್ಲವೂ ಹಳೆಯ ಬಸ್ಸನ್ನು ಕೊಂಡುಕೊಂಡು ಅದನ್ನು ಸರಿಮಾಡಿ ಲಾಭಹೊಡೆಯುವುದರ ಕಡೆಗೆ ಇದ್ದಿತು. ಒಂದು ದಿವಸ ನಾನೂ ಭಟ್ಟನೂ ಹಾಸನಕ್ಕೆ ಹೋಗಿ ಹಿಂದಿರುಗುವಾಗ ಹೊಸೂರಿನ ಬಳಿಗೆ ಬರುವ ವೇಳೆಗೆ ಸ್ವಲ್ಪ ಕತ್ತಲೆಯಾಯಿತು. ಭಟ್ಟನು ತಾನೇ ಬಸ್ಸನ್ನು ನಡೆಸುವುದಾಗಿ ಡ್ರೈವರಿಗೆ ಹೇಳಿ ಮುಂದುಗಡೆ ಬಂದು ಕುಳಿತನು. ನನಗಂತೂ ಜೀವದಲ್ಲಿ ಜೀವವಿಲ್ಲದಂತಾಯಿತು. ಬದುಕಿ ಬಸ್ಸಿನಿಂದ ಕೆಳಕ್ಕೆ ಇಳಿದ ಕಾಲಕ್ಕೆ ನೋಡೋಣ ಎಂದುಕೊಂಡೆ. ಭಟ್ಟನು ಪದೇ ಪದೇ ನನ್ನ ಕಡೆಗೆ ತಿರುಗಿ ಬಸ್ಸನ್ನು ಹೀಗೆ ನಡೆಸಬೇಕು ಹಾಗೆ ನಡೆಸಬೇಕು ಎಂದು ಹೇಳುತ್ತಿದ್ದನು. ಅವನ ಮಾತಿನ ಕಡೆಗೆ ನನ್ನ ಮನಸ್ಸಿರಲಿಲ್ಲ. ಹೇಗಾದರೂ ಮಾಡಿ ಬಸ್ಸಿನಿಂದ ಇಳಿದರೆ ಸಾಕು ಎಂದು ನಾನು ಯೋಚಿಸುತ್ತಲಿದ್ದೆ. ಎದುರಿಗೆ ಮುನಿಸಿಪಾಲಿಟಿಯ ದೀಪದ ಕಂಬವು ಮಂಕಾಗಿ ಉರಿಯುತ್ತಿತ್ತು. ಭಟ್ಟನಿಗೆ ಬಸ್ಸು ನಡೆಸುವಾಗ ಉಂಟಾದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಅವನು ಮನಸ್ಸಿಗೆ ಬಂದ ಹಾಡುಗಳನ್ನು ಹಾಡುತ್ತಾ ಬಸ್ಸನ್ನು ದೀಪದ ಕಂಬಕ್ಕೆ ಹೊಡಿಸಿಬಿಟ್ಟನು. ಅದು ಕೆಳಕ್ಕೆ ಉರುಳಿಹೋಯಿತು. ಅದರ ತುದಿಯ ಗಾಜೂ ದೀಪವೂ ಚಿಮಣಿಯ ಪುಡಿಪುಡಿಯಾದುವು. ಪೋಲೀಸಿನವನು ಬಂದು ಭಟ್ಟನ ಲೈಸನ್ಸನ್ನು ಕೇಳಿದನು. ಭಟ್ಟನಿಗೆ ಲೈಸನ್ಸ್ ಇರಲಿಲ್ಲ. ಬಸ್ಸನ್ನು ಮುಂದಕ್ಕೆ ನಡೆಸಕೂಡದೆಂದು ಕಟ್ಟಾಜ್ಞೆಯಾಯಿತು. ನನಗೇನೋ ಅಷ್ಟೇ ಬೇಕಾಗಿತ್ತು. ಆದರೆ ಭಟ್ಟನಿಗೆ ಮಾತ್ರ ತನ್ನ ಪ್ರಥಮ ಪ್ರಯತ್ನಕ್ಕೆ ಉಂಟಾದ ಈ ವಿಘ್ನದಿಂದ ಸಂತೋಷವಾಗಲಿಲ್ಲ.

ಮರುದಿವಸ ಲೈಸನ್ಸ್ ಇಲ್ಲದೆ ಬಸ್ ನಡೆಸಿದನೆಂಬ ಆಪಾದನೆಯ ಮೇಲೆ ನ್ಯಾಯಸ್ಥಾನದಲ್ಲಿ ವಿಚಾರಣೆಯಾಗಿ ಭಟ್ಟನಿಗೆ ೫೦ ರೂಪಾಯಿಗಳು ದಂಡ ಬಿದ್ದಿತು. ಹೊಸೂರಿನ ಮುನಿಸಿಪಾಲಿಟಿಯವರು ಕಂಬದ ವೆಚ್ಚಕ್ಕಾಗಿ ಅವನಿಂದ ೩೫ ರೂಪಾಯಿಗಳನ್ನು ವಸೂಲ್ಮಾಡಿಕೊಂಡರು.

ನಮ್ಮೂರ ಬಸ್ಸಿಗೆ ಈಗಲೂ ಭಟ್ಟನೇ ಏಜೆಂಟು. ಆದರೆ ಇನ್ನೂ ಭಟ್ಟನ ಬಸ್ ಸರ್ವಿಸ್ ಮೈಸೂರು ಸೀಮೆಯಲ್ಲಿ ಹರಡಲಿಲ್ಲ. ಯಾವತ್ತು ಹರಡುತ್ತೋ ಎಂದು ಗಾಬರಿಯಾಗಿದೆ.