ಹಳ್ಳಿಯ ಚಿತ್ರಗಳು/ನಾನು ರತ್ನಳ ಮದುವೆಗೆ ಹೋದುದು

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು

ನಾನು ರತ್ನಳ ಮದುವೆಗೆ ಹೋದುದು

____ ____


ರತ್ನಳು ನನ್ನ ಅಕ್ಕನ ಹಿರಿಯ ಮಗಳು. ಅವಳ ಮದುವೆಯನ್ನು ಅತ್ಯಂತ ವೈಭವದಿಂದ ಹೊನ್ನಹಳ್ಳಿಯಲ್ಲಿಯೇ ಮಾಡಬೇಕೆಂದು ನಮ್ಮ ಭಾವನವರಿಗೆ ಬಹಳ ದಿವಸಗಳಿಂದಲೂ ಇಷ್ಟವಿದ್ದಿತು. ಸಾಲದುದಕ್ಕೆ ಅವರು ಸ್ವಲ್ಪ ವೈದಿಕರು. ಹೊನ್ನಹಳ್ಳಿಯು ಕಾವೇರಿ ನದಿಯ ದಡದಲ್ಲಿದೆ. ವೈದಿಕರಿಂದ ಕೂಡಿದ ಊರು, ಪೂರ್ವದಲ್ಲಿ ಕೆಲವು ಗುರುಗಳು ಅಲ್ಲಿಗೆ ಬಂದು, ಊರನ್ನು ತಮ್ಮ ಪಾದಧೂಳಿಯಿಂದ ಪವಿತ್ರವಾಗಿ ಮಾಡಿದ್ದರು. ರತ್ನಳ ಮದುವೆಯನ್ನು ಅಲ್ಲಿಯೇ ಮಾಡಬೇಕೆಂದು ನಿಶ್ಚಯವಾಯಿತು.

ಆದರೆ ನಮ್ಮ ಭಾವನವರು ಮದುವೆಯ ಸಿದ್ಧತೆಯ ವೈಭವದಲ್ಲಿ, ಇದು ಪ್ರವಾಹದ ಕಾಲವೆಂಬುದನ್ನೇ ಮರೆತುಬಿಟ್ಟರು. ಜುಲೈ ತಿಂಗಳ ಕೊನೆ; ಕಾವೇರಿ ನದಿಯ ಆರ್ಭಟ ಹೊನ್ನಹಳ್ಳಿಯವರಿಗೆ ಚೆನ್ನಾಗಿ ಗೊತ್ತು. ೧೯೨೪ ನೇ ಇಸವಿಯಲ್ಲಿ ಮಹಾಪ್ರವಾಹ ಬಂದಿತಲ್ಲಾ, ಆಗಿನ ಅನುಭವವನ್ನು ಹೊನ್ನಹಳ್ಳಿಯವರು ಎಂದೆಂದಿಗೂ ಮರೆಯುವಂತೆ ಇಲ್ಲ. ಪ್ರವಾಹವು ಪ್ರತಿವರ್ಷವೂ ಊರಿನೊಳಕ್ಕೆ ನುಗ್ಗುತ್ತಿದ್ದಿತು. ನದಿಯ ಸಮೀಪದಲ್ಲಿದ್ದವರ ಮನೆಯ ಬಾಗಲಿನ ಮೆಟ್ಟಿಲನ್ನು ಮುಟ್ಟುತ್ತಿದ್ದಿತು. ಆಗ ಸ್ತ್ರೀಯರೆಲ್ಲಾ ಆ ಮೆಟ್ಟಿಲುಗಳ ಮೇಲೆಯೇ ಸೀರೆಗಳನ್ನು ಒಗೆಯು ತಿದ್ದರು. “ಈ ವರ್ಷ ಆ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆದರು; ಆ ವರ್ಷ ಈ ಮನೆಯ ಬಾಗಿಲಿನಲ್ಲಿ ಸೀರೆಯನ್ನು ಒಗೆದರು"-ಇದೇ ಪ್ರವಾಹದ ಪ್ರಮಾಣವನ್ನು ನಿಶ್ಚಯಿಸುವ ಪಡಿಯಚ್ಚಾಗಿದ್ದಿತು. ಆದರೆ ೧೯೨೪ ನೇ ಇಸವಿಯಲ್ಲಿ ಮನೆಯ ಬಾಗಲಿನಲ್ಲಿ ಸೀರೆಯನ್ನು ಒಗೆಯುವುದು ಮಾತ್ರವೇ ಅಲ್ಲ, ಎಲ್ಲರೂ ಈಜುವಂತಾಯಿತು. ಗುರುಗಳ ಪಾದಧೂಳಿಯಿಂದ ಪವಿತ್ರವಾಗಿದ್ದ ಊರು, ಕಾವೇರಿ ನದಿಯ ಸ್ಪರ್ಶದಿಂದ ಮತ್ತಷ್ಟು ಪುನೀತವಾಯಿತು. ಆದರೆ ಊರು ಕಾವೇರಿಯ ಪೂರ್ಣ ಕೃಪೆಗೆ ಪಾತ್ರ ವಾಗಲಿಲ್ಲ. ಅರ್ಧ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋದುವು; ಉಳಿದವುಗಳೆಲ್ಲಾ ಈಗಲೋ ಇನ್ನೊಂದು ಗಳಿಗೆಗೊ ಬೀಳುವಂತಿವೆ. ಇದು ೧೯೨೪ರ ವಿಷಯವಾಯಿತು.

ನಮ್ಮ ಭಾವನವರಿಗೆ ಇದಾವುದೂ ಗೊತ್ತಿಲ್ಲದೆ ಇರಲಿಲ್ಲ. ಅವರಿರುವುದು ಹೊನ್ನಹಳ್ಳಿಯಿಂದ ಮೂರು ಮೈಲು ದೂರ ನದಿಯ ಈಚೆ ದಡದಲ್ಲಿ. ಮಹಾಪ್ರವಾಹದಲ್ಲಿ ಅವರೂ ಕಾವೇರಿಯ ಕೃಪೆಗೆ ಪೂರ್ಣವಾಗಿ ಪಾತ್ರರಾಗಿದ್ದರು. ಅವರ ಮನೆಯಲ್ಲಿ ಯಾವೆಡೆ ನೋಡಿದರೂ ಕತ್ತುದ್ದ ನೀರು ನಿಂತಿದ್ದಿತು. ಕಣಜದ ಭತ್ತವೆಲ್ಲಾ ಈಜಾಡುತ್ತಿದ್ದಿತು. ಕಬ್ಬಿನ ಗದ್ದೆಗಳೆಲ್ಲಾ ಭಾವಿಗಳಾಗಿದ್ದುವು. ಅವರು ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಮದುವೆಗೆ ಎಂಟು ದಿವಸ ಮುಂಚೆ, ಸಂಸಾರ ಸಮೇತರಾಗಿ ತಾವೇನೋ ಹೊನ್ನ ಹಳ್ಳಿಯನ್ನು ಸೇರಿಬಿಟ್ಟರು. ಉಳಿದ ನೆಂಟರಿಷ್ಟರೆಲ್ಲಾ ಎರಡು ಮೂರು ದಿವಸ ಮುಂಚಿತವಾಗಿಯೇ "ವಧೂವರರನ್ನಾಶೀರ್ವದಿಸಿ ಮನಸ್ಸಂತೋಷಪಡಿಸಲು" ಹೋಗಿ ಸೇರಿದರು.

ವಧುವಿನ ಸೋದರಮಾವನಾದ ನಾನೂ ಮದುವೆಗೆ ಹೋಗಬೇಕಷ್ಟೆ. ನಾನೂ ಎರಡು ದಿವಸ ಮುಂಚಿತವಾಗಿ ಬೆಂಗಳೂರಿನಿಂದ ಹೊರಟೆ. ಮಂಡ್ಯದಲ್ಲಿ ರೈಲನ್ನು ಇಳಿದೆ. ಅಲ್ಲಿ ತಲಕಾಡು ಕಡೆಗೆ ಹೋಗುತ್ತಿದ್ದ ಒಂದು ಬಸ್ಸು ನಿಂತಿದ್ದಿತು. ಬಸ್ಸು ಎಂದರೆ ನನಗೆ ಯಾವಾಗಲೂ ಹೆದರಿಕೆ. ಅದರಲ್ಲಿ ಕುಳಿತರೆ ಮತ್ತೆ ಜೀವದೊಂದಿಗೆ ಇಳಿಯುತ್ತೇನೆಯೋ ಇಲ್ಲವೋ ಎಂಬ ಭಯ. ಇದನ್ನು ಕೇಳಿ ಈಗೇನೋ ನೀವು ನಗುತ್ತೀರಿ. ಆದರೆ ನನಗೆ ಉಂಟಾಗಿರುವ ಭಯಂಕರಗಳಾದ ಅನುಭವಗಳು ನಿಮಗೆ ಉಂಟಾಗಿದ್ದರೆ, ನನ್ನ ಮಾತಿನ ಸತ್ಯತೆಯು ನಿಮಗೆ ತಿಳಿಯುತ್ತಿದ್ದಿತು. ಡ್ರೈವರನು ಬಿರುಗಾಳಿಯಂತೆ ೫೦ ಮೈಲಿಯ ವೇಗದಲ್ಲಿ ನಿರ್ಜನ ರಸ್ತೆಯಲ್ಲಿ ಗಾಡಿಯನ್ನು ಓಡಿಸುವುದು ; ಪದೇ ಪದೇ ಹಿಂದುಗಡೆ ತಿರುಗಿ ಪ್ರಯಾಣಿಕರೊಂದಿಗೆ ಹರಟೆ ಹೊಡೆಯುವುದು ; ಮೂಲೆಗಳಲ್ಲಿ ಜೋರಾಗಿ ತಿರುಗಿಸುವುದು ; ಎದುರಿಗೆ ಹುಲ್ಲು ಹೇರಿದ ಎತ್ತಿನ ಗಾಡಿಯೊಂದು ಬರುತ್ತಿದ್ದರೆ, ಗಾಡಿಯವನನ್ನು ಹೆದರಿಸಲು ಮೋಟಾರನ್ನು ಅವನ ಕಡೆಗೆ ಅವನ ಮೇಲೆಯೇ ಬಿಡುವಂತೆ ತಿರುಗಿಸುವುದು; ಕರಿಯ ಪಿಶಾಚಿಯಂತೆ ತಮ್ಮನ್ನು ನುಂಗಲು ಬರುತ್ತಿರುವ ಬಸ್ಸನ್ನು ನೋಡಿ, ಎತ್ತುಗಳು ಹೆದರಿ ಗಾಡಿಯವನ ಸ್ವಾಧೀನಕ್ಕೆ ಸಿಕ್ಕದೆ, ರಸ್ತೆಯನ್ನು ಬಿಟ್ಟು ಹಳ್ಳದ ಕಡೆಗೆ ಓಡುವುದು; ಹುಲ್ಲಿನ ಭಾರದಿಂದ ಓಸರವನ್ನು ಹೊಂದಿದ ಗಾಡಿಯು ಮಗುಚಿಕೊಳ್ಳುವುದು; ಗಾಡಿಯವನು ನಿರ್ದಾಕ್ಷಿಣ್ಯವಾಗಿ ಡೈವರನನ್ನು ಬಯ್ಯಲು, ಅವನು ನಗುತ್ತಾ ಭೂತದಿಂದ ಹಿಡಿಯಲ್ಪಟ್ಟವನಂತೆ ಬಸ್ಸನ್ನು ೬೦ ಮೈಲು ವೇಗದಲ್ಲಿ ಓಡಿಸುವುದು; ಪ್ರಯಾಣಿಕರು ಇಳಿಯಬೇಕಾದ ಕಡೆ ನಿಲ್ಲಿಸದೆ, ಅರ್ಧ ಮೈಲು ಮುಂದೆ ನಿಲ್ಲಿಸುವುದು; ಇಳಿಯುತ್ತಿರುವಾಗ ಕಂಡಕ್ಟರ್ ಎಂಬ ಬ್ರಹ್ಮನು ಪ್ರಯಾಣಿಕನು ಇನ್ನೇನು ಇಳಿದನೆಂದು ತಿಳಿದುಕೊಂಡು, ರೈಟ್ ಎಂಬುದಾಗಿ ಶಿಳ್ಳು ಹಾಕುವುದು; ಡೈವರನು ಹಿಂದು ಮುಂದು ನೋಡದೆ, ಒಮ್ಮಿಂದೊಮ್ಮೆ ಬಸ್ಸನ್ನು ಮುಂದಕ್ಕೆ ಬಿಡಲು, ಇಳಿಯುತ್ತಿದ್ದ ಪ್ರಯಾಣಿಕನು ಕೆಳಕ್ಕೆ ಬಿದ್ದು, ಭೂಚುಂಬನ ಮಾಡಿ ಹಲ್ಲು ಮುರಿದುಕೊಳ್ಳುವುದು; ಮಳೆಯು ಒಳಕ್ಕೆ ಬರದಂತೆ ತಡೆಯಲು ಗಾಡಿಯ ಅಂಚಿಗೆ ಕಟ್ಟಿರುವ ಮೇಣಗಬಟದ ತುದಿಯ ಗುಂಡಿಯು ಕಿತ್ತುಹೋಗಿ, ಗಾಳಿಯಿಂದ ಅದು ಪಟಪಟನೆ ಒಳಕ್ಕೆ ಹೊಡೆಯುವಾಗ, ತುದಿಯಲ್ಲಿ ಕುಳಿತಿರುವ ಪ್ರಯಾಣಿಕನು ಅದರ ಹೊಡೆತದ ಸವಿಯನ್ನು ನೋಡುವುದು; ಪೋಲೀಸ್ ಸ್ಟೇಷನ್ ಬಳಿ ಪ್ರಯಾಣಿಕರು ಹತ್ತು ಮಂದಿ ಇದ್ದರೆ, ಊರ ಹೊರಗಡೆ ೧೪ ಮಂದಿ ನಿಂತಿದ್ದು, ಗಾಡಿಯು ಅಲ್ಲಿಗೆ ಬಂದ ಕೂಡಲೆ ಕಂಡಕ್ಟರ್ ಮಹಾಶಯನು ಚೀಲಕ್ಕೆ ಧಾನ್ಯವನ್ನು ತುಂಬುವಂತೆ ಅವರನ್ನೆಲ್ಲಾ ಗಾಡಿಯೊಳಕ್ಕೆ ತುಂಬುವುದು - ಜನರು ಹೆಚ್ಚಿದಂತೆಲ್ಲಾ ಗಾಡಿಯು ಪುಷ್ಪಕದಂತೆ ಹೆಚ್ಚು ಹೆಚ್ಚು ವಿಸ್ತಾರವಾಗದಿರುವುದು. ಈ ಪಟ್ಟಿಯನ್ನು ಮುಂದರಿಸಿ ಪ್ರಯೋಜವಿಲ್ಲ. ಇವುಗಳೆಲ್ಲವನ್ನೂ ಅನುಭವಿಸಿದ್ದ ನಾನು, ಮಂಡ್ಯದ ಬಸ್ಸಿನಲ್ಲಿ ಕುಳಿತೊಡನೆಯೇ ಒಂದು ವಿಧವಾದ ಭಯದ ಶಂಕೆಯಿಂದ ನಡುಗತೊಡಗಿದೆ. ಬಸ್ಸು ಸಕಾಲದಲ್ಲಿ ಹೊರಟಿತು.

ಬಸ್ಸು ಬನ್ನೂರಿಗೆ ಬರುವವರೆಗೆ ಹೆಚ್ಚು ಸಂಗತಿಗಳೇನೂ ನಡೆಯಲಿಲ್ಲ. ಅಷ್ಟು ಮುಖ್ಯವಾದುದಲ್ಲದಿದ್ದರೂ ಬನ್ನೂರಿಗೆ ೪ ಮೈಲು ಹಿಂದೆ ನಡೆದ ವಿಷಯವೊಂದನ್ನು ಹೇಳಿಬಿಡುತ್ತೇನೆ. ಮಂಡ್ಯವನ್ನು ಬಿಟ್ಟಕೂಡಲೆ ಕ್ಲೀನರ್ ಮಹಾಶಯನು, ಬಸ್ಸನ್ನು ತಾನೇ ನಡಿಸಲು ಅಸಾಧಾರಣವಾದ ಆತುರತೆಯನ್ನು ತೋರಿಸಿದನು. ಡೈವರನು ಬೇಡ ಬೇಡವೆಂದು ಹೇಳುತ್ತಾ ಬನ್ನೂರಿಗೆ ಸುಮಾರು ೪ ಮೈಲು ಇರುವವರೆಗೆ ತಾನೇ ನಡಿಸಿದನು. ಆದರೆ ಮನುಷ್ಯ ಪ್ರಾಣಿಯಲ್ಲವೆ? ಕ್ಲೀನರು ಪದೇ ಪದೇ ಪ್ರಾರ್ಥಿಸುತ್ತಿರುವಾಗ, ಹೇಗೆ ತಾನೆ ಇಲ್ಲವೆಂದಾನು? ಮೋಟಾರು ಬಸ್ಸನ್ನು ನಡೆಸಲು ಅವನನ್ನು ಕೂರಿಸಿ, ತಾನು ಮಗ್ಗುಲಲ್ಲಿ ಸಿಗರೇಟನ್ನು ಸೇದುತ್ತಾ ಕಣ್ಣನ್ನು ಅರ್ಧ ಮುಚ್ಚಿಕೊಂಡು, ಅದರ ಹೊಗೆಯು ಸುರುಳಿ ಸುರುಳಿಯಾಗಿ ಮೇಲಕ್ಕೆ ಹೋಗುವುದನ್ನು ನೋಡುತ್ತಾ ವಿರಾಮವಾಗಿ ಕುಳಿತುಬಿಟ್ಟನು. ನಾನು ಊಹಿಸುತ್ತಿದ್ದ ಅಪಾಯವು ಬಂದೇಬಂದಿತು. ಮೊದಲೇ ಇದ್ದ ನನ್ನ ನಡುಕವು ಮತ್ತಷ್ಟು ಹೆಚ್ಚಾಯಿತು. ಹಿಂದೊಂದು ಸಲ ಡೈವರನ ಕೃಪೆಗೆ ಪಾತ್ರನಾದ ಕ್ಲೀನರ್ ಮಹಾಶಯನ ಕೈಯಲ್ಲಿ ಪ್ರಾಣವನ್ನು ಒಪ್ಪಿಸಿ, ನರಕಯಾತನೆಯನ್ನು ಅನುಭವಿಸಿದ್ದೆ. ಡೈವರುಗಳು ತಮ್ಮ ಪ್ರಯಾಣಿಕರ ಜವಾಬ್ದಾರಿಯನ್ನು ಕ್ಲೀನರು ಮೋಟಾರ್‌ ನಡೆಸುವುದನ್ನು ಕಲಿಯುವ ಆಶೆಗೆ ಬಲಿಕೊಡುತ್ತಿದ್ದುದನ್ನು ನಾನು ನೋಡಿದುದು ಅದೇ ಮೊದಲನೆಯ ಸಲವಾಗಿರಲಿಲ್ಲ. ಡೈವರನನ್ನು ಕುರಿತು "ಸ್ವಲ್ಪ ಗಾಡಿ ನಿಲ್ಲಿಸು" ಎಂದೆ. ಅವನು "ನೀವು ಇಳಿಯುವುದು ತಲಕಾಡಿನಲ್ಲಿ ಅಲ್ಲವೇ? ಇನ್ನೂ ೧೫ ಮೈಲು ಇದೆಯೆಲ್ಲಾ” ಎಂದ. ನಾನು ಮತ್ತೆ “ನಿಲ್ಲಿಸು” ಎಂದೆ. 'ಜರ್‍ರ ಖಡೆ ಕರೊ' ಎಂಬುದಾಗಿ ಕ್ಲೀನರಿಗೆ "ಆರ್ಡರ್" ಮಾಡಿಬಿಟ್ಟ. ತಾನು ಕಲಿಯುವುದಕ್ಕೆ ಪ್ರಾರಂಭಿಸಿದ ಕೂಡಲೇ ನಿಲ್ಲಿಸು ಅಂದುಬಿಟ್ಟನಲ್ಲಾ ಎಂದು ಕ್ಲೀನರನು ಸ್ವಲ್ಪ ಕೋಪದಿಂದಲೇ ನನ್ನ ಮೇಲೆ ಕಣ್ಣು ಬಿಟ್ಟ. ಪ್ರಾಣ ಭಯವು ನನ್ನನ್ನು ಪೂರ್ಣವಾಗಿ ಆಳುತ್ತಿದ್ದುದರಿಂದ, ನಾನು ಅವನ ಕಣ್ಣಿನ ಕೆಂಡಕ್ಕೆ ಲಕ್ಷ್ಯಮಾಡಲಿಲ್ಲ. ಎರಡು ಫರ್ಲಾಂಗ್ ಮುಂದೆ ಗಾಡಿಯನ್ನು ನಿಲ್ಲಿಸಿದ. ನಾನು ಇಳಿದು ಗಾಡಿಯ ಮುಂದೆ ನಿಂತುಕೊಂಡೆ. ಎಲ್ಲರೂ ಆಶ್ಚರ್‍ಯದಿಂದ ನನ್ನ ಕಡೆಯೇ ನೋಡಿದರು. ಡೈವರನನ್ನು ಕುರಿತು “ಗಾಡಿಯನ್ನು ನೀನು ನಡೆಸು. ಇಲ್ಲದಿದ್ದರೆ ನಾನು ಹತ್ತುವುದಿಲ್ಲ. ನಿನಗೆ ಮುಂದಕ್ಕೆ ಹೋಗಲು ಅವಕಾಶ ವನ್ನೂ ಕೊಡುವುದಿಲ್ಲ” ಎಂದೆ. ಡೈವರನು ವಿಧಿಯಿಲ್ಲದೆ ತಾನೇ ಗಾಡಿಯನ್ನು ನಡೆಸಲು ಪ್ರಾರಂಭಿಸಿದ. ಉಳಿದ ಪ್ರಯಾಣಿಕರು ನಾನು ಮೂರ್ಖನೋ ಹುಚ್ಚನೋ ಆಗಿರಬೇಕೆಂದು ನನ್ನ ಮೇಲೆ ಇಟ್ಟ ಕಣ್ಣನ್ನು ತೆಗೆಯದೆ ನನ್ನನ್ನೇ ದೃಷ್ಟಿಸುತ್ತಿದ್ದರು. ಅಂತೂ ಬನ್ನೂರಿಗೆ ಬಂದೆವು.

ಬನ್ನೂರು ಬಹಳ ಚೆಲುವಾಗಿದೆ. ಊರಿನ ಸುತ್ತಲೂ ರಸ್ತೆಯ ಎರಡು ಪಾರ್ಶ್ವಗಳಲ್ಲಿಯೂ ಕಬ್ಬಿನ ಮತ್ತು ಭತ್ತದ ಪೈರಿನ ಗದ್ದೆಗಳು; ತುಂಬಿದ ನೀರಿನ ಕಾಲುವೆ; ಹಸಿರು ಬಟ್ಟೆಯನ್ನು ಹಾಸಿದಂತೆ ಗರಿಕೆ ಬೆಳೆದ ನೆಲ; ಮತ್ತೊಂದು ಕಡೆ ರಾಗಿಯ ಹೊಲಗಳು. ಪ್ರಕೃತಿಯ ಕೈಯಿಂದ ಚಿತ್ರಿತವಾದ ಆ ಸುಂದರ ದೃಶ್ಯವನ್ನು ಕಂಡು ನನ್ನ ಬೇಸರಿಕೆಯೆಲ್ಲಾ ಮಾಯವಾಯಿತು. ಸೌಂದರ್‍ಯವನ್ನು ಕಂಡು ಮಗ್ನನಾಗಿ ಅದರಿಂದ ಉನ್ನತಿಗೆ ಏರದವನಾರು ?

ಬನ್ನೂರಿನಿಂದ ೫-೬ ಮೈಲು ಬಂದ ಕೂಡಲೆ ಮತ್ತೊಂದು ವಿನೋದವನ್ನು ನಾನು ನೋಡಿದೆನು. ರಸ್ತೆಯಲ್ಲಿ ಒಂದು ಮೋಟಾರ್ ಕಾರ್ ನಿಂತಿದ್ದಿತು. ಅದರಲ್ಲಿ ಒಬ್ಬ ಯೂರೋಪಿಯನ್ ಲೇಡಿ ಕುಳಿತಿದ್ದಳು. ಡೈವರನು ಕೆಳಗೆ ಇಳಿದು ನಿಂತಿದ್ದನು. ಕಾರಿನ ಸುತ್ತ ಹಳ್ಳಿಯವರೂ ಹೆಂಗಸರೂ ೧೦-೧೨ ಜನ ನಿಂತಿದ್ದರು. ೧೦-೧೨ ವರುಷದ ಹುಡುಗನ ತಲೆಗೆ ಏಟು ತಗಲಿ, ಸ್ವಲ್ಪ ರಕ್ತವು ಸೋರಿದ್ದಿತು. ಲೇಡಿಯು ಇಂಗ್ಲಿಷಿ ನಲ್ಲಿ, ಡೈವರನು ಕನ್ನಡದಲ್ಲಿಯೂ, ಹಳ್ಳಿಯವರೆಲ್ಲಾ ಕನ್ನಡದಲ್ಲಿಯೂ ಏಕಕಾಲದಲ್ಲಿ ಮಾತನಾಡುತ್ತಿದ್ದರು. ವಿಷಯವನ್ನು ತಿಳಿಯಲು ಹೆಚ್ಚು ಕಾಲ ಬೇಕಾಗಲಿಲ್ಲ. ಕಾರು ಹುಡುಗನಿಗೆ ತಗುಲಿ ಸ್ವಲ್ಪ ಏಟು ಬಿದ್ದಿದ್ದಿತು. ಇದರಲ್ಲಿ ವಿನೋದವೇನು ಬಂತು ಎಂಬುದಾಗಿ ನೀವು ಕೇಳಬಹುದು. ಲೇಡಿಯು ಇಂಗ್ಲೀಷಿನಲ್ಲಿ ರೈತರನ್ನು ಕುರಿತು,

“ಡೈವರನು ಗಾಡಿ ನಡೆಸುತ್ತಿದ್ದ. ಆದರೆ ತಪ್ಪು ಅವನದಲ್ಲ. ಗಾಡಿಯ ಕೊಂಬನ್ನು ಎಷ್ಟು ಸಲ ಕೂಗಿಸಿದರೂ ನಿಮ್ಮ ಹುಡುಗ ಮಗ್ಗಲಾಗಲೇ ಇಲ್ಲ. ಆದರೂ ತಕ್ಷಣ ನಿಲ್ಲಿಸಿದ. ನಿಮ್ಮ ಹುಡುಗನಿಗೆ ಏನೂ ಪೆಟ್ಟಾಗಿಲ್ಲ. ಈ ಕಷ್ಟಕ್ಕೋಸ್ಕರ ನಿಮಗೆ ನಾನು ಪ್ರತಿಫಲವನ್ನು ಕೊಡುತ್ತೇನೆ” ಎನ್ನುತ್ತಿದ್ದಳು. ಇಂಗ್ಲೀಷ್ ತಿಳಿಯದ ಹಳ್ಳಿಯವರು, “ಹುಡುಗನ ತಲೆ ಒಡೆದುದಲ್ಲದೆ ಉಪನ್ಯಾಸಕ್ಕೆ ಬೇರೆ ಪ್ರಾರಂಭಿಸಿದ್ದಾಳೆ” ಎಂದರು. ಡೈವರನು ಹಳ್ಳಿಯವರನ್ನು ಕುರಿತು,

“ ದೊರೆಸಾನಿಯು ಹೇಳಿದುದು ಗೊತ್ತಾಯಿತೆ? ಗಾಡಿಯನ್ನು ಅವರೇ ನಡೆಸುತ್ತಿದ್ದರು. ಆದರೆ ತಪ್ಪು ಅವರದಲ್ಲ. ನಿಮ್ಮ ಹುಡುಗನದೇ, ಆದರೆ ಏನೂ ಪೆಟ್ಟಾಗಿಲ್ಲ. ದೊರೆಸಾನಿಯು ಬಹಳ ಒಳ್ಳೆಯವಳು. ನಿಮಗೆ ಸಹಾಯ ಮಾಡಿಸುತ್ತೇನೆ” ಎನ್ನುತ್ತಿದ್ದನು. ಲೇಡಿಗೆ ಕನ್ನಡ ಬಾರದು. ಅವಳು ಡೈವರನನ್ನು ಇಂಗ್ಲೀಷಿನಲ್ಲಿ ಏನು ಹೇಳಿದೆ ಅವರಿಗೆ” ಎಂದಳು. ಡ್ರೈವರನು “ಒಡತಿಯೇ ನಾನು ಗಾಡಿಯನ್ನು ನಡೆಸುತ್ತಲಿದ್ದೆ. ಆದರೆ ತಪ್ಪು ನನ್ನದಲ್ಲ. ನಿಮ್ಮ ಹುಡುಗನದು. ದೊರೆಸಾನಿಯು ಬಹಳ ಒಳ್ಳೆ ಯವಳು. ಬಹುಮಾನ ಮಾಡುತ್ತಾಳೆ. ಹೆದರಬೇಡಿ ಎಂದೆ” ಎಂದನು. ಲೇಡಿಯು ಸಮಾಧಾನದಿಂದ “ರೈಟೊ, ಯು ಆರ್ ಎ ಗುಡ್ ಚಾಪ್" (ನೀನು ಬಹಳ ಒಳ್ಳೆಯ ಹುಡುಗ) ಎಂದಳು. ನಾನು ಡೈವರನನ್ನು ಕುರಿತು “ಏನಯ್ಯ ಈ ನಾಟಕ” ಎಂದೆ. ಅವನು “ಹೊಟ್ಟೆಯ ಪಾಡಾಗಬೇಕಲ್ಲ ಸ್ವಾಮಿ, ಏನಾದರೂ ಮಾಡಲೇ ಬೇಕು” ಎಂದ. ಹುಡುಗನ ತಂದೆಯು ಸ್ವಲ್ಪ ಹಣದಿಂದ ಸಮಾಧಾನವನ್ನು ಹೊಂದಿ, ಲೇಡಿಗೆ ಉದ್ದವಾದ ಒಂದು ಸಲಾಮನ್ನು ಹಾಕಿ ಹೊರಟುಹೋದ. ನಾವೂ ನಮ್ಮ ದಾರಿ ಹಿಡಿದೆವು. ಆದರೆ ನಮ್ಮ ದುರದೃಷ್ಟವು ಇನ್ನೂ ಪೂರ್ಣವಾಗಿರಲಿಲ್ಲ.

ಮೋಟಾರಿಗೆ ನೀರು ಬೇಕಿತ್ತು, ಪೆಟ್ರೋಲಿನ ಖಾಲಿ ಡಬ್ಬದಲ್ಲಿ ನೀರನ್ನು ತುಂಬುವುದನ್ನು ಕ್ಲೀನರನು ಮರೆತುಬಿಟ್ಟಿದ್ದನು. ಇದ್ದಕ್ಕಿದ್ದಂತೆ ಗಾಡಿಯನ್ನು ನಿಲ್ಲಿಸಿದುದಾಯಿತು. ಎರಡು ಮೈಲು ಸುತ್ತ ಎಲ್ಲೂ ನೀರಿರಲಿಲ್ಲ. ಕ್ಲೀನರನು ಟಿನ್ನನ್ನು ತೆಗೆದುಕೊಂಡು ಆಮೆಯ ನಡಿಗೆಯಲ್ಲಿ ನೀರಿಗೆ ಹೋದನು. ಅವನು ಹೋಗಿ ಬರುವುದಕ್ಕೆ ೧ ಗಂಟೆ ಹಿಡಿಯಿತು. ದೇವರ ದಯದಿಂದ ಆ ವೇಳೆಗೆ ಬಸ್ಸಿನ ಮತ್ತಾವ ಭಾಗವೂ ಕೆಡಲಿಲ್ಲ.

ಮಧ್ಯಾಹ್ನ ೩ ಘಂಟೆಗೆ ನಮ್ಮ ಭಾವನವರ ಊರನ್ನು ತಲಪಿದೆ. ಆದರೆ ೮ ದಿವಸ ಮುಂಚೆಯೇ ಅವರು ಹೊನ್ನಹಳ್ಳಿಗೆ ಹೊರಟುಹೋಗಿದ್ದರೆಂದು ಹೇಳಿದೆನಷ್ಟೆ. ಅಲ್ಲಿ ನಮ್ಮ ಮತ್ತೊಬ್ಬ ಗೆಳೆಯರಿದ್ದರು. ಆ ರಾತ್ರೆಯನ್ನು ಅವರ ಮನೆಯಲ್ಲಿ ಕಳೆಯುವುದು ಅನಿವಾರ್ಯವಾಯಿತು. ಹೊನ್ನ ಹಳ್ಳಿಯು ಅಲ್ಲಿಂದ ೩ ಮೈಲು ಎಂದು ಹೇಳಿದೆನಲ್ಲಾ, ಆ ಮೂರು ಮೈಲಿಯನ್ನು ಬೆಳಿಗ್ಗೆ ನಡೆದು, ಅಲ್ಲಿ ನದಿಯನ್ನು ದಾಟಬೇಕೆಂದು ಯೋಚಿಸಿಕೊಂಡೆ. ಬಹಳ ದಿವಸಗಳ ಮೇಲೆ ಹೋದ ಸ್ನೇಹಿತನಾದುದರಿಂದ ನನ್ನ ಗೆಳೆಯನು ನನ್ನನ್ನು ಬಹಳ ಚೆನ್ನಾಗಿ ಆದರಿಸಿದನು. ಪ್ರಾತಃಕಾಲ ತಾನೂ ಹೊನ್ನ ಹಳ್ಳಿಗೆ ಮದುವೆಗೆ ಬರುವುದಾಗಿ ಹೇಳಿದನು. ಆದರೆ ಆ ಆನಂದದಲ್ಲಿಯೂ ಸ್ವಲ್ಪ ಕಹಿಯು ಇದ್ದೇ ಇದ್ದಿತು. '

ನಮ್ಮ ಗೆಳೆಯನ ಅತ್ತೆಯವರು ಬಹಳ ಮಡಿ. ಮೈಲಿಗೆ ವಸ್ತುಗಳ ಮೇಲೆ ಬೀಸಿದ ಗಾಳಿ ಅವರಿಗೆ ಬೀಸಿದರೂ ಸಾಕು; ಕೂಡಲೆ ಸ್ನಾನಮಾಡಬೇಕು. ಮಾತನಾಡಿದುದಕ್ಕೆಲ್ಲ ಸ್ನಾನ. ಮುದುಕರಾದರೂ ದಿವಸಕ್ಕೆ ೮-೧೦ ಸಲ ತಣ್ಣೀರಿನಲ್ಲಿ ಮುಳುಗುತ್ತಾರೆ. ನನ್ನನ್ನು ಕಂಡ ಕೂಡಲೆ ಅವರು ನಡುಗಿದರು. ನಾನು ಇಂಗ್ಲೀಷ್ ಕಲಿತು, ಬೆಂಗಳೂರಿನಲ್ಲಿ ಜೀವಿಸುತ್ತಾ, ನಲ್ಲಿಯ ನೀರನ್ನು ಕುಡಿಯುತ್ತಿರುವೆನಾದುದರಿಂದ, ನನಗೆ ನರಕದಲ್ಲಿ ಶಾಶ್ವತವಾದ ಸ್ಥಳವಿರುವುದೆಂದು ಅವರು ತೀರ್ಮಾನಿಸಿದ್ದರು. ನಾನು ಹೋದಕೂಡಲೇ, ಎಲ್ಲಿ ಸ್ನಾನ ಮಾಡುವ ಪಾತ್ರೆಗಳನ್ನು ಮುಟ್ಟಿಬಿಡುತ್ತಾನೋ ಎಂಬ ಗಾಬರಿಯಿಂದ, ನಾನು ಕೇಳುವುದಕ್ಕೆ ಮುಂಚೆಯೇ ಬೆಳ್ಳಿಯ ಚೊಂಬಿನಲ್ಲಿ ಕಾಲು ತೊಳೆಯಲು ನೀರನ್ನು ತಂದಿಟ್ಟರು. ಒಳಕ್ಕೆ ಹೋದಾಗ ಎಲ್ಲಿ ಕೊಟ್ಟಿಗೆಗೆ ಹೋಗಿಬಿಡುತ್ತಾನೆಯೋ ಎಂದು ನನ್ನ ಹಿಂದೆಯೇ ಬಂದರು. ಇದನ್ನೆಲ್ಲಾ ನೋಡಿ ನನಗೆ ಬಹಳ ನಗು ಬಂದಿತು. ನನ್ನ ಸ್ನೇಹಿತನೂ ಅವನ ಹೆಂಡತಿಯೂ ಉಪಚಾರ ಹೇಳಿದರು.

ಆ ದಿವಸ ಸಾಯಂಕಾಲ ನಡೆದ ಮತ್ತೊಂದು ವಿಷಯವನ್ನು ಇಲ್ಲಿ ಹೇಳಬೇಕಾಗಿದೆ. ನಾನೂ ನನ್ನ ಸ್ನೇಹಿತನ ಮನೆಯೊಳಗೆ ಕುಳಿತಿದ್ದೆವು. ಹೊರಗೆ ಬಿರುಗಾಳಿ ಬೀಸುತ್ತಿದ್ದಿತು. ಗಾಡಾಂಧಕಾರ, ಅವರ ಮನೆಯಿಂದ ೪ ಮಾರು ದೂರದಲ್ಲಿ ಒಂದು ತೋಪಿದೆ. ಆ ತೋಪಿನ ಆಚೆ ರಸ್ತೆ, ರಸ್ತೆಯ ಮಗ್ಗುಲಲ್ಲಿ ನಮ್ಮ ಸ್ನೇಹಿತನ ಜೀತಗಾರನ ಮನೆ. ಆ ಜೀತಗಾರನು ಪ್ರತಿದಿನವೂ ಕತ್ತಲೆಯಾಗುವುದಕ್ಕೆ ಮುಂಚೆಯೇ ತನ್ನ ಮನೆ ಯನ್ನು ಸೇರಿಕೊಳ್ಳುವ ಪದ್ದತಿಯಿತು. ಯಾತಕ್ಕೆಂದರೆ ಆ ತೋಪಿನಲ್ಲಿ ಭೂತ ಪಿಶಾಚಿಗಳಿವೆಯೆಂದು ಹತ್ತಾರು ತಲೆಗಳಿಂದ ಪ್ರಸಿದ್ಧವಾಗಿದೆ. ಈ ಜೀತಗಾರನಂತೂ ಒಂದು ದಿವಸ ಆ ತೋಪಿನಲ್ಲಿ ಜಡೆಮುನಿಯನ್ನು ಪ್ರತ್ಯಕ್ಷವಾಗಿ ನೋಡಿಯೇಬಿಟ್ಟನಂತೆ. ಅದು ಬೆಳದಿಂಗಳಿನಂತೆ ಬಿಳುಪಾದ ಬಟ್ಟೆಯನ್ನು ಧರಿಸಿ, ಉದ್ದವಾದ ಜಡೆಯನ್ನು ಹೊತ್ತು, ಹಿಂದು ಮುಂದಾದ ಕಾಲಿನ ಹೆಜ್ಜೆಯುಳ್ಳದುದಾಗಿ, ಬಹಳ ಎತ್ತರವಾಗಿದ್ದಿತಂತೆ. ಜಡೆಮುನಿಯನ್ನು ಇಷ್ಟು ಸ್ಪಷ್ಟವಾಗಿ ಕಂಡವನು, ಆ ದಾರಿಯಲ್ಲಿ ಕತ್ತಲೆಯಲ್ಲಿ ಮತ್ತೆ ಹೋದಾನೆ? ನಾವು ಅವನಿಗೆ ಒಂದು ಲಾಂದ್ರವನ್ನು ಹತ್ತಿಸಿ ಕೊಟ್ಟೆವು. ಆದರೂ ಅವನು ಹೋಗಲೋ ಬೇಡವೋ ಎಂಬುದಾಗಿ ಅನುಮಾನಿಸುತ್ತ ನಿಂತಿದ್ದನು. ಆ ವೇಳೆಗೆ ಸರಿಯಾಗಿ ರಸ್ತೆಯಲ್ಲಿ ಒಂದು ಮೋಟಾರ್ ಬಸ್ಸು ಒಂದು ನಿಂತಿತು. ನಿತ್ಯ ೪ ಘಂಟೆಗೆ ಬರುತ್ತಿದ್ದ ಬಸ್ಸು ಅದು. ಈ ದಿವಸ ೬ ಘಂಟೆಗೆ ಬಂದಿತು. ಅದರ ಮುಂದಲ ಎರಡು ಬೆಳಕುಗಳೂ ಸೂರ್‍ಯನ ಮರಿಗಳಂತೆ ಪ್ರಕಾಶಿಸುತ್ತಾ ರಸ್ತೆಯನ್ನು ಒಂದು ಫರ್ಲಾಂಗ್ ದೂರ ಬೆಳಗುತ್ತಿದ್ದು, ಅದನ್ನು ನೋಡಿದ ಕೂಡಲೆ ಜೀತಗಾರನು “ಸ್ವಾಮಿ ಬಸ್ಸು ನಿಂತದೆ, ಅದರ್‍ಬೆಳಕ್ಕಲ್ಲಿ ಮನೆ ಸೇರ್ಕೊಂಡ್ಬಿಡ್ತೇನೆ" ಎಂದು ಹೊರಟುಹೋದ. ನಾವು ಅವನ ವಿಷಯವನ್ನೇ ಕುರಿತು ಮಾತನಾಡುತ್ತ ನಗುತ್ತಲಿದ್ದೆವು. ಸುಮಾರು ೧೦ ನಿಮಿಷ ಕಳೆದಿರಬಹುದು. ಆವೇಳೆಗೆ ಮತ್ತೆ ಅವನೇ ಬಾಗಲಿನಲ್ಲಿ "ಬುದ್ದಿ” ಎಂದ. ನಾವು "ಏನೋ ಜಡೆಮುನಿ ಓಡಿಸಿಕೊಂಡೇ ಬಂದುಬಿಡ್ತೀನೋ?"' ಎಂದೆವು. ಅವನು “ಯಾರೋ 'ಬುದ್ಯೋರ್ಮನೆ ದಾರಿ ತೋರಿಸು' ಅಂದ್ರು; ಕರ್‍ಕೊಂಡ್ಬಂದೆ" ಎಂದ. ನಾವು "ಯಾರವರು?" ಎಂದು ಕೇಳುವುದಕ್ಕೆ ಮುಂಚಿತವಾಗಿಯೇ ಬಾಗಿಲಿನಲ್ಲಿ ಅಪರಿಚಿತ ಧ್ವನಿಯೊಂದು "ಸ್ವಾಮಿ, ಈ ರಾತ್ರಿ ಊಟಕ್ಕೆ ಅನುಕೂಲವಾಗುತ್ತದೆಯೆ?" ಎಂದಿತು. ನನ್ನ ಸ್ನೇಹಿತನು "ನೀವು ಯಾವ ಊರು?" ಎಂದನು. ಹೊರಗೆ ನಿಂತಿದ್ದವನು "ನಾವು ಪರಸ್ಥಳ" ಎಂದನು. ನಮ್ಮ ಸ್ನೇಹಿತನು "ಒಳಕ್ಕೆ ಬನ್ನಿ” ಎಂದನು. ಹೊರಗಿನಿಂದ ಇಬ್ಬರು ಒಳಕ್ಕೆ ಬಂದರು. ನೋಡಿದರೆ ಅವರು ನನ್ನ ಸ್ನೇಹಿತನ ಬಂಧುಗಳು. ಅವರೂ ವಿವಾಹಕ್ಕಾಗಿ ಹೊನ್ನ ಹಳ್ಳಿಗೆ ಹೋಗಲು ಬಂದಿದ್ದರು. ಅವರು ಮಾಡಿದ ವಿನೋದದಿಂದ, ನಮಗೆಲ್ಲಾ ಬಹಳ ನಗು ಬಂದಿತು. ನನ್ನ ಸ್ನೇಹಿತನು ಮಾತ್ರ “ನನಗೆ ಮೊದಲೇ ಗೊತ್ತಾಯಿತು” ಎಂದ. ನಾನು “ಇದ್ದರೂ ಇರಬಹುದು” ಎಂದೆ.

ಸರಿ; ಆ ರಾತ್ರೆ ಊಟವಾಯಿತು. ನನ್ನ ಸ್ನೇಹಿತನಿಗೆ ಕನ್ನಡ ಸಾಹಿತ್ಯದ ಜ್ಞಾನವಿಲ್ಲದಿದ್ದರೂ, ಪಂಡಿತನಂತೆ ನಟಿಸುತ್ತಾನೆ. ಜೈಮಿನಿ ಭಾರತ, ಕನ್ನಡ ಭಾರತ, ಇವುಗಳಲ್ಲಿ ೮-೧೦ ಕಷ್ಟ ಕಷ್ಟವಾದ ಪದ್ಯಗಳನ್ನು ಹುಡುಕಿಟ್ಟುಕೊಂಡು, ಯಾರಾದರೂ ಹೋದಕೂಡಲೇ ಅರ್ಥ ಹೇಳಿ ಅಂತ ಪ್ರಾಣ ಹಿಂಡುತ್ತಾನೆ. ಅವರಿಗೆ, ಬರುವುದಿಲ್ಲ ಅಂತ ಹೇಳುವುದಕ್ಕೆ ಅವಮಾನ. “ಹಳ್ಳಿಯಲ್ಲಿ ಕುಳಿತುಕೊಂಡು ಸಾಹಿತ್ಯದ ಗಂಧವನ್ನೇ ಅರಿಯದ ಇವನಿಗೆ ಮಾತ್ರ ಆ ಪದದ ಅರ್ಥ ಗೊತ್ತಿರಬೇಕು; ನಮಗೆ ಗೊತ್ತಿರಬಾರದೆ?” ಎಂದು ಅವರು ಯೋಚಿಸುತ್ತಿದ್ದರು. ಕೆಲವರಂತೂ ನಮ್ಮ ಸ್ನೇಹಿತನ ಮನೆಯ ಬಳಿಗೇ ಸುಳಿಯುತ್ತಿರಲಿಲ್ಲ. ಒಂದುಸಲ ನಾನು ಕಂಡ ವಿಷಯವನ್ನು ಎಂದಿಗೂ ಮರೆಯಲಾರೆ. ಸುಮಾರು ೫ ವರ್ಷಗಳ ಕೆಳಗೆ ನಡೆದುದು. ರಾತ್ರಿ ೮ ಘಂಟೆ ಇದ್ದಿರಬಹುದು. ಊರ ಹೊರಗಿನ ಕೆರೆಗೆ ನಾನೂ ನನ್ನ ಸ್ನೇಹಿತನೂ, ಆಗತಾನೇ ಬಂದಿದ್ದ ಮತ್ತಾರೋ ೨-೩ ಜನರೂ ಬಟ್ಟೆ ಒಗೆಯಲು ಹೋಗಿದ್ದೆವು. ನನ್ನ ಸ್ನೇಹಿತನ ಬಂಧುಗಳಾದ ಹಿರಿಯರೋರ್ವರು ಬೆಂಗಳೂರಿನಿಂದ ಅಲ್ಲಿಗೆ ಬಂದರು. ಅವರು ಬೆಂಗಳೂರಿನಲ್ಲಿ ಸಂಸ್ಕೃತ ವಿದ್ವಾಂಸರು; ಪಾಠಶಾಲೆಯಲ್ಲಿ ಅಧ್ಯಾಪಕರು, ನಾವೆಲ್ಲಾ ಅವರ ಯೋಗಕ್ಷೇಮವನ್ನು ವಿಚಾರಿಸುತ್ತಿರುವಾಗ, ನಮ್ಮ ಸ್ನೇಹಿತನು “ಅದೆಲ್ಲಾ ಇರಲಿ ಪಂಡಿತರೆ, ಎಲ್ಲಿ ನೋಡೋಣ. ಇದಕ್ಕೆ ಅರ್ಥವನ್ನು ಹೇಳಿ” ಎಂದನು. ಸರಿ ಅವನು ಏನು ಹೇಳುತ್ತಾನೆಂಬುದು ನಮಗೆ ತಿಳಿದಿದ್ದಿತು. ಪಾಪ! ಪಂಡಿತರು ೧ ಮೈಲು ನಡೆದುಕೊಂಡು ಬಂದಿದ್ದರು; ಬಹಳ ಆಯಾಸದಿಂದ ಏದುತಿದ್ದರು. ಅವರ ತಲೆಯ ಮೇಲೆ ಒಂದು ಪುಸ್ತಕದ ಗಂಟೂ ಶಾಲುವಿನ ಮೂಟೆಯೂ ಇದ್ದವು. ನಮ್ಮ ಸ್ನೇಹಿತನಿಗೆ ಇದಾವುದರಿಂದಲೂ ಕನಿಕರವುಂಟಾಗಲಿಲ್ಲ. ಅವನು ಗಂಟಲನ್ನು ಸರಿಮಾಡಿಕೊಂಡು, ದಪ್ಪ ದನಿಯಲ್ಲಿ ಹೇಳಿ ಹೇಳಿ ಉರುವಾಗಿದ್ದ. ಈ ಪದ್ಯವನ್ನು ಹೇಳಿದನು.

ಸುನಿಮೇಷ ಮೀನ ಚಾಪಲ ನೇತ್ರ ಚಕ್ರೋನ್ಮಿ
ಥುನ ಕುಂಭ ಕುಚೆ ಮಕರ ಕೇತು ಮಾತುಲ ಸಮಾ
ನನೆ ಸಿಂಹ ಮಧ್ಯೆ ವೃಷಭಧ್ವಜಾರಿಯ ಪಟ್ಟದಾನೆ ಕನ್ಯಾ ಕುಲಮಣಿ |
ಮನಸಿಜ ಶಶಾಂಕ ಕರ್ಕಟ ಚೇಲಂ ಗುಡುವ
ತನಿ ಸೊಬಗುವಡೆದ ಸಮ್ಮೋಹನದ ಕಣಿಯೆ ಬಾ
ರೆನುತೋರ್ವ ನೀರೆ ಸಖಿಯಂ ಕರೆದಳೀರಾರು ರಾಶಿಯಂ ಹೆಸರಿಪವೊಲು |
|

ಸರಿ, ವಿಧಿಯಿಲ್ಲ. ಪಂಡಿತರು ಅದಕ್ಕೆ ಅರ್ಥವನ್ನು ಹೇಳಿದರು. ನನ್ನ ಸ್ನೇಹಿತ ಅಷ್ಟಕ್ಕೇ ಬಿಡಲಿಲ್ಲ. ಒಂದಾದಮೇಲೊಂದು, ತಾನು ಉರು ಹೊಡೆದಿದ್ದ ಪದ್ಯಗಳನ್ನೆಲ್ಲಾ ಹೇಳಿ, ಅವರಿಂದ ಅರ್ಥವನ್ನು ಹೇಳಿಸಿದ. ಕೊನೆಗೆ ಮನೆಗೆ ಬಂದೆವು.

ಇದು ನನಗೆ ಗೊತ್ತಿದ್ದುದರಿಂದ, ನಾನು ಬೆಂಗಳೂರಿನಿಂದ ಬರುವಾಗಲೇ, ನನ್ನ ಸ್ನೇಹಿತನ ಪ್ರೀತಿಯ ಪದ್ಯಗಳಿಗೆ ಅರ್ಥವನ್ನು ತಿಳಿದುಕೊಂಡು ಹೋಗಿದ್ದೆ. ಆದರೆ ಆ ಪುಣ್ಯಾತ್ಮನಿಗೆ ಇದೂ ಗೊತ್ತಿದ್ದಿತೋ ಏನೊ? ಅವನು ತನ್ನ ಪ್ರೀತಿಯ, ಜೈಮಿನಿಯ ಭಾರತದ “ಸುನಿಮೇಷ ಮಿಾನ ಚಾಪಲ ನೇತ್ರೆ"ಯನ್ನಾಗಲಿ, “ಕಳಹಂಸಮಾಕೀರ್ಣವಾಗಿರ್ದೊಡಂ ಕಾಳಗದ ಕಳನಲ್ಲ"ವನ್ನಾಗಲಿ ಓದಲಿಲ್ಲ. ಕುಮಾರವ್ಯಾಸ ಭಾರತವನ್ನು ತಂದ. ನನಗೆ ನಡುಕ ಹತ್ತಿತು. ಆ ದಪ್ಪ ಪುಸ್ತಕವನ್ನು ನೋಡಿ ಗಾಬರಿಯಾಯಿತು. ಜೊತೆಗೆ ಹಾರ್ಮೋನಿಯಂ ಬೇರೆ ಕಿರೋ ಅನ್ನಿಸಿದ. ಸರಿ; ದೇವರೇ ನನ್ನನ್ನು ಕಾಪಾಡಬೇಕೆಂದುಕೊಂಡೆ. ಹಾರ್ಮೋನಿಯಂ ಸದ್ದು ಕೇಳಿದೊಡನೆಯೇ ಹಳ್ಳಿಯವರೆಲ್ಲಾ ಬಂದು ಸೇರಿಬಿಟ್ಟರು. ನನ್ನ ಯೋಗ್ಯತೆಯ ಒರೆಗಲ್ಲು ಸಿದ್ಧವಾಯಿತೆಂದುಕೊಂಡೆ. ಸ್ನೇಹಿತನೊಂದಿಗೆ “ನನಗೆ ನಿದ್ರೆ ಬರುತ್ತದಯ್ಯ; ನೀನು ಬೇಕಾದರೆ ಓದು. ನಾನು ಮಲಗಿಕೊಳ್ಳುತ್ತೇನೆ" ಎಂದೆ. ಅವನು ಸುಮ್ಮನಿರಬೇಕಲ್ಲ. “ನಾಳೆ ಬೆಳಿಗ್ಗೆ ೧೧ ಗಂಟೆಯವರಿಗೆ ರಾಮಾಯಣದ ಕರ್ಣನಂತೆ ಬಿದ್ದುಕೊ. ನೋಡು, ಇವರೆಲ್ಲಾ ಸೇರಿಬಿಟ್ಟಿದ್ದಾರೆ. ನನಗೆ ತಿಳಿದಂತೆ ಓದುತ್ತೇನೆ. ನೀನು ಅರ್ಥವನ್ನು ಹೇಳಿತೀರಬೇಕು” ಎಂದ. “ನನಗೆ ಬರುವುದಿಲ್ಲ” ಎಂದೆ. "ಎಲ್ಲಾ ಬರುತ್ತೆ” ಎಂದ. ಇನ್ನೇನು ಮಾಡುವುದು. “ಆಗಲಿ” ಎಂದೆ. ತಪ್ಪುಮಾಡಿದ ವಿದ್ಯಾರ್ಥಿಗೆ ಶಿಕ್ಷೆಯನ್ನು ಕೊಟ್ಟಿದ್ದರೆ ಅವನ ಮುಖವು ನನ್ನ ಮುಖವು ಆಗ ಇದ್ದುದಕ್ಕಿಂತ ಹೆಚ್ಚು ಪೆಚ್ಚಾಗಿರುತ್ತಿರಲಿಲ್ಲ. ಸಾಲದುದಕ್ಕೆ ನನ್ನ ಸ್ನೇಹಿತನು ಬಂದವರನ್ನೆಲ್ಲಾ ಕುರಿತು, “ಇವರು ಬಹಳ ವಿದ್ವಾಂಸರು, ಸಂಸ್ಕೃತ ಮತ್ತು ಕನ್ನಡದಲ್ಲಿ ದಿಗ್ದಂತಿಗಳು” ಎಂದು ಬಿಟ್ಟ. ನಾನು ರೋದನ ಧ್ವನಿಯಿಂದ "ಯಾವ ಭಾಗ ಓದುತ್ತೀಯೆ" ಎಂದೆ. ನನ್ನ ಸ್ನೇಹಿತನು ನನಗೇನೋ ಬಹಳ ದೊಡ್ಡ ಸಹಾಯಮಾಡುವವನಂತೆ “ನಿನಗೆ ಬೇಕಾದ ಸ್ಥಳದಲ್ಲಿ ಓದುತ್ತೇನೆ. ದೌಪದಿ ಸ್ವಯಂವರ, ವಸ್ತ್ರಾಪಹರಣ, ಕೀಚಕ ವಧೆ, ಅಭಿಮನ್ಯುವಿನ ಕಾಳಗ-". ಪ್ರತಿಯೊಂದು ಹೆಸರಿನೊಂದಿಗೂ ನನ್ನ ಮಿದುಳು ಗರಗರನೆ ತಿರುಗತೊಡಗಿತು. ನನಗೆ ಯಾವ ವಿಷಯವೂ ಚೆನ್ನಾಗಿ ಗೊತ್ತಿರಲಿಲ್ಲ. ಕಥೆಯನ್ನೇನೊ ಕೇಳಿದ್ದೆ. ಆದರೆ ಸದ್ಯಕ್ಕೆ ಅರ್ಥ ಹೇಳುವುದೆಂದರೆ ಸಾಮಾನ್ಯವೇ. ಹೋಮರನ ಒಡಿಸಿಯನ್ನು ಬೇಕಾದರೆ ಚಾಚೂ ತಪ್ಪದಂತೆ ಒಪ್ಪಿಸಿಬಿಡುತ್ತಿದ್ದೆ. ಆದರೆ ಕನ್ನಡ ಭಾರತದಲ್ಲಿ ಒಂದು ಪದ್ಯಕ್ಕೂ ಅರ್ಥವನ್ನು ಹೇಳುವ ಯೋಗ್ಯತೆ ನನ್ನಲ್ಲಿ ಇರಲಿಲ್ಲ. ಕೊನೆಗೆ "ದ್ರೌಪದೀ ಸ್ವಯಂವರ ಓದು" ಎಂದೆ. ನಮ್ಮ ತಂದೆಯವರು ಸಂಸ್ಕೃತ ಭಾರತದಲ್ಲಿ ದೌಪದೀ ಸ್ವಯಂವರವನ್ನು ಓದಿ, ಅರ್ಥವನ್ನು ಹೇಳಿದುದನ್ನು ನನ್ನ ಹನ್ನೊಂದನೆಯ ವಯಸ್ಸಿನಲ್ಲಿ ಕೇಳಿದ್ದೆ. ಅಲ್ಲದೆ ಮಾತಾಡುವ ಪೆಟ್ಟಿಗೆಯಲ್ಲಿ (ಗ್ರಾಮಾಫೋನು) “ನೀವೆದ್ದದ್ದೇನು ಗಡ್ಡದುಪಾದ್ಯರೆ" ಎಂಬ ಹಾಡನ್ನೂ ಕೇಳಿದ್ದೆ. ಅಲ್ಲದೆ, ಅಲ್ಲಿ ಕುಳಿತಿದ್ದವರಾರಿಗೂ ಕನ್ನಡದಲ್ಲಿ ಜ್ಞಾನವಿರಲಿಲ್ಲ. 'ಕುಂತೀ ಪುತ್ರೋವಿನಾಯಕಃ' ಎಂಬಂತೆ ಯದ್ವಾತದ್ವಾ ಹೇಳಿ ಮುಗಿಸಿಬಿಡಬಹುದೆಂದು ಯೋಚಿಸಿಕೊಂಡೆ. ಆದರೆ “ಪುರಾಣ ವ್ಯುತ್ಪತ್ತಿಯ" ಫಲವು ನನಗೆ ಗೊತ್ತಿಲ್ಲದೆ ಇರಲಿಲ್ಲ. ಕಾವ್ಯದ ವರ್ಣನೆಗಳನ್ನು ವಿವರಿಸಲರಿಯದೆ, ಬರಿಯ ಕಥೆಯನ್ನು ಎತ್ತು ಉಚ್ಚೆ ಹುಯ್ದಂತೆ ಹೇಳುವುದರಲ್ಲಿರುವ ಅಪಾಯದ ಒಂದು ದೃಷ್ಟಾಂತವನ್ನು ಕೇಳಿ. ನನ್ನ ಮತ್ತೊಬ್ಬ ಸ್ನೇಹಿತನು, ಒಬ್ಬ ದೊಡ್ಡ ಅಧಿಕಾರಿಗಳ ಮನೆಯಲ್ಲಿ ನವರಾತ್ರೆಯ ಕಾಲದಲ್ಲಿ, ವಾಲ್ಮೀಕಿ ರಾಮಾಯಣವನ್ನು ಪಾರಾಯಣ ಮಾಡುತ್ತಿದ್ದ. ಪಾರಾಯಣವನ್ನು ಪ್ರಾರಂಭಿಸಿದ ಮೂರನೆಯ ದಿವಸ, ಆ ಅಧಿಕಾರಿಗಳ ಹೆಂಡತಿಯು ಇವನೇನೋ ವಿದ್ಯಾ ಎಂದುಕೊಂಡು, “ಅರ್ಥವನ್ನು ಹೇಳಿ” ಎಂದರು. ಇವನಿಗೆ ರಾಮಾಯಣವನ್ನು ಓದುವುದಕ್ಕೆ ತಿಳಿದಿದ್ದಿತೇ ಹೊರತು ವಾಲ್ಮೀಕಿಯ ಸಂಸ್ಕೃತ ಮಾತಿಗೆ ಅರ್ಥಮಾಡಿಕೊಳ್ಳುವ ಪಾಪಕ್ಕೆ ಇವನೆಂದೂ ಪ್ರವೃತ್ತಿಸಿದವನೇ ಅಲ್ಲ. ಆದರೆ ರಾಮಾಯಣದ ಕಥೆಯು ಯಾರಿಗೆ ಗೊತ್ತಿಲ್ಲ. ಅವನಿಗೆ ಲೋವರ್ ಸೆಕಂಡರಿಗೆ ಬೇರೆ ಸಂಕ್ಷೇಪ ರಾಮಾಯಣವು ಪಠ್ಯಪುಸ್ತಕವಾಗಿದ್ದಿತು. ಇರಲಿ, ಅವನು ಅರಣ್ಯಕಾಂಡವನ್ನು ಓದುತ್ತಿದ್ದನು. ಅಧಿಕಾರಿಯ ಹೆಂಡತಿಗೆ ಪ್ರತಿಯೊಂದು ಶ್ಲೋಕವನ್ನು ಹೇಳಿದೆ ಮೇಲೂ ಒಂದುಸಲ ಅರ್ಥವನ್ನು ಹೇಳಬೇಕಾಗಿದ್ದಿತು. ಆದರೆ ವಾಲ್ಮೀಕಿಯ ವರ್ಣನೆಗಳು, ಶೃಂಗಾರ, ಶೋಕ, ವೈರಾಗ್ಯ, ಇದನ್ನೆಲ್ಲಾ ಬರಿಯ ಊಹೆಯಿಂದ ಮಾತ್ರ ಹೇಳುವುದಕ್ಕೆ ಆಗುತ್ತದೆಯೆ? ಆ ಒಂದೊಂದು ಶ್ಲೋಕಕ್ಕೂ ನನ್ನ ಸ್ನೇಹಿತ ಕಥೆಯನ್ನೇ ಮುಂದರಿಸುತ್ತಾ ನಡೆದುಬಿಟ್ಟ. ಕವಿಯು ವರ್ಣನೆಗಾಗಿ ತೆಗೆದುಕೊಂಡ ಕಾಲವನ್ನು, ಇವನು ಕಥೆಯ ವಿವರಕ್ಕೆ ತೆಗೆದುಕೊಳ್ಳಲು ಆಗಲಿಲ್ಲ. ಸರಿ ಕಥೆಯು ಮುಂದರಿಯಿತು. ಅರಣ್ಯಕಾಂಡದ ಅರ್ಥವನ್ನು ಮುಗಿಸಿ, ಕಿಷ್ಕ್ರಿಂಧಾಕಾಂಡಕ್ಕೆ ಬಂದು, ಅದನ್ನೂ ಮುಗಿಸಿ, ಸುಂದರಕಾಂಡದಲ್ಲಿ ಹನುಮಂತನನ್ನು ಲಂಕೆಗೆ ಹಾರಿಸಿಬಿಟ್ಟ. ಆದರೆ ಓದುವಾಗ ಮಾತ್ರ.

ಇತಿ ಶ್ರೀಮದ್ರಾಮಾಯಣೆ ಅರಣ್ಯಕಾಂಡೆ ಏಕಾದಶಸ್ಸರ್ಗಃ"
ಎಂದು ಓದಿದ, ಅಧಿಕಾರಿಯ ಹೆಂಡತಿಯು “ಏನು ಸ್ವಾಮಿ, ಇನ್ನೂ ಅರಣ್ಯಕಾಂಡ ಓದುತ್ತಿದ್ದೀರಿ. ಹನುಮಂತನು ಆಗಲೇ ಸಮುದ್ರವನ್ನು ಹಾರಿದನೆಂದಿರಿ. ಅದು ಸುಂದರಕಾಂಡವಲ್ಲವೆ? ದಿವಸಕ್ಕೆ ಮೂರು ಕಾಂಡ ಓದುತ್ತೀರಾ" ಎಂದರು. ನನ್ನ ಸ್ನೇಹಿತನ ಮುಖವು ಮೃತನ ಮುಖದಂತೆ ಬಾಡಿತು. ಬರಿಯ ಕಥೆಯನ್ನು ಅನುಸರಿಸುವುದರಲ್ಲಿ ಈ ಭಯವಿದೆ. ಹೋಗಲಿ, ಸಾಲದುದಕ್ಕೆ ನನ್ನ ಸ್ನೇಹಿತನು, ಹಾರ್ಮೋನಿಯಮ್ಮಿನ ದಪ್ಪ ಧ್ವನಿಗೆ, ಅದಕ್ಕಿಂತಲೂ ಹೆಚ್ಚು ದಪ್ಪವಾದ ತನ್ನ ಧ್ವನಿಯನ್ನು ಸೇರಿಸಿ ಓದುವಾಗ ಎಷ್ಟೋ ಪದಗಳನ್ನು ನುಂಗಿಯೇ ಬಿಡುತ್ತಿದ್ದ. ದ್ರೌಪದೀ ಸ್ವಯಂವರದ ಪ್ರಾರಂಭದಲ್ಲಿ, ದ್ರೌಪದಿಯ ವರ್ಣನೆಯು ಬಂದುಬಿಟ್ಟಿತು. ಈಜು ಬಾರದವನನ್ನು ಮಡುವಿನಲ್ಲಿ ಕೆಡವಿದಂತಾಯಿತು. ದ್ರೌಪದಿಯ ಅಂಗಾಂಗಗಳ ವರ್ಣನೆಯೆಲ್ಲ ಬಂದಿತು. ಹಾಗೂ ಹೀಗೂ ಏನೇನೋ ಹೇಳುತ್ತಾ 'ಹಾಳು ಸ್ತ್ರೀ ವರ್ಣನೆ ಬೇಡ. ಮುಂದಕ್ಕೆ ಓದು' ಎಂದೆ. ನನ್ನ ಸ್ನೇಹಿತನು ೧೦-೧೨ ಪದ್ಯವನ್ನು ಬಿಟ್ಟು ಈ ಪದ್ಯವನ್ನು ಓದಿದ.

ರಾಜಸೂಯದ ಕರ್ತುವೋಲ್ಜಿತ
ರಾಜಮಂಡಲವಾಯ್ತು ಮುಖವಿದು
ರಾಜರಾಜನ ಪೋಲ್ದು ದಳಕಾವೇಷ್ಟಿ ತತ್ವದಲಿ |
ರಾಜನುದ್ಯಾನದವೊಲಾಸ್ಯ ಸ
ರೋಜವಾಯ್ತು ತಮಾಲಪತ್ರ ವಿ
ರಾಜಿತವು ಜನಮೇಜಯ ಕ್ಷಿತಿಪಾಲ ಕೇಳೆಂದ ||

ಪದ್ಯವನ್ನು ಕೇಳಿ ನನಗೆ ಸಿಡಿಲು ಬಡಿದಂತೆ ಆಯಿತು. ಮೈಯೆಲ್ಲಾ ಬೆವತಿತು, ಬಾಯೊಣಗಿತು; ತೊದಲಿತು. ವೀರರನ್ನು ನೋಡಿ ಉತ್ತರನು. “ನಾನು ಜೀವಗಳ್ಳರಿಗೆ ಗುರು; ದಮ್ಮಯ್ಯ, ಕಾಪಾಡು ; ನಾನು ನಿನ್ನ ಮಗ” ಎಂದು ಬೃಹನ್ನಳೆಯ ಕಾಲನ್ನು ಹಿಡಿದು ರೋದಿಸಿದಂತೆ ನಾನು ಕಾತರನಾದೆ. ಜೊತೆಗೆ ಹೆಮ್ಮೆ ಬೇರೆ ಬಾಧಿಸುತ್ತಿದ್ದಿತು.. ನನ್ನ ಸ್ನೇಹಿತನು. “ಹೂ, ಅಪ್ಪಣೆಯಾಗಲಿ” ಎಂದ. "ಬೀಸುವ ದೊಣ್ಣೆ ತಪ್ಪಿದರೆ ಸಾವಿರ ವರುಷ ಆಯುಸ್ಸು" ಎಂಬಂತೆ "ಮುಂದಲ ಪದ್ಯಕ್ಕೂ ಇದಕ್ಕೂ ಸಂಬಂಧವಿದೆ. ಅದನ್ನೂ ಓದು” ಎಂದೆ. ಅವನು ನಿರ್ದಯದಿಂದ ಈ ಪದ್ಯವನ್ನು ಕಿರಚಿದ.

ಜನಪ ಕೇಳುಪಲಾಲಿತಾಂ
ಜನವೆನೆ ಜಿತಾಕ್ಷ ನಿಪಕ್ಷವಾದುವು
ವಿನುತ ಕರ್ಣ ಪ್ರಣಯಿಗಳು ವೃಷಸೇನ ವೈರದಲಿ |
ಜನ ವಿಡಂಬನ ತಾರಕಾಮಂ
ಡನ ಕದರ್ಥಿಕ ಕುಮುದಮೆನೆ ಲೋ
ಚನ ಯುಗಳನೊಪ್ಪಿದುವು ಪಾಂಚಾಲನಂದನೆಯಾ ||

ಕುರುವಿನ ಮೇಲೆ ಬರೆ ಎಳೆದಂತಾಯಿತು; ನನ್ನ ಕುರುಕ್ಷೇತ್ರವನ್ನು ಕಂಡಂತಾಯಿತು. ಗಂಜಿ ಹೋಗದ ಬಾಯಿಯಲ್ಲಿ ಕಡುಬು ತುರುಕಿದಂತಾಯಿತು. ನನಗೆ ಒಂದು ಪದವೂ ಅರ್ಥವಾಗಲಿಲ್ಲ. ಸೂರ್ಯನನ್ನು ನುಂಗಲು ಮೇಲಕ್ಕೆ ಹಾರಿದ ಆಂಜನೇಯನ ದವಡೆಗೆ ಕಮಲಮಿತ್ರನು ಹೊಡೆದಂತಾಯಿತು. ನನ್ನ ಹೆಮ್ಮೆ ಇಳಿಯಿತು. "ಹೇಗಾದರೂ ಮುಗಿದರೆ ಸಾಕು" ಎಂದು ಯೋಚಿಸಿ, "ಅರ್ಜುನನು ಬಿಲ್ಲೇರಿಸಿದ ಸ್ಥಳವನ್ನು ಓದು" ಎಂದೆ. ಅಂತೂ ಆಯಿತು. ಇನ್ನು ಬದುಕಿರುವವರೆಗೆ ಪ್ರಾಣ ಹೋದರೂ ಸರಿಯೆ. ಪುರಾಣವನ್ನು ಮಾತ್ರ ಹೇಳುವುದಿಲ್ಲವೆಂದು ಶಪಥ ಮಾಡಿಕೊಂಡೆ. ಮಲಗುವ ವೇಳೆಗೆ ರಾತ್ರಿ ೧ ಗಂಟೆ ಆಯಿತು.

ಬೆಳಗಾಯಿತು. ನನ್ನ ಸ್ನೇಹಿತ, ಗೃಹಸ್ಥ, ನಾಳೆ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿದ್ದವನು ಮುಂಜಾನೆ ಎದ್ದು ಕಬ್ಬಿನ ಗದ್ದೆಗೆ ಹೋಗಿ “ಸಾಯಂಕಾಲ ಬರುತ್ತೇನೆ. ಈಗ ಕೆಲಸವಿದೆ” ಎಂಬುದಾಗಿ ಹೇಳಿ ಕಳುಹಿಸಿಬಿಟ್ಟ. ನಾವು ಮೂರು ಮೈಲು ನಡೆದುಕೊಂಡು ಹೋಗಿ ನದಿಯನ್ನು ದಾಟಬೇಕಾಗಿದ್ದಿತೆಂದು ಮೊದಲೇ ಹೇಳಿದೆನಲ್ಲ. ಹೊರಟೆವು. ಆ ವೇಳೆಗೆ ಸರಿಯಾಗಿ ನಮ್ಮ ಭಾವನವರ ಆಳು ಬಂದ. ನಮ್ಮ ಸ್ನೇಹಿತನ ಅತ್ತೆಯು ಅವನನ್ನು ಕುರಿತು "ಎಲೊ ನಿಮ್ಮ ಒಡೆಯನೋರ ಭಾಮೈದ ಬಂದಿದ್ದಾರೆ. ಗಾಡಿ ಕಟ್ಟಿಕೊಂಡು ಹೊಳೆಯವರಿಗೆ ಬಿಟ್ಟು ಬಾ" ಎಂದರು. ನಮ್ಮ ಭಾವನವರು ಎದುರಿಗೆ ಇದ್ದಿದ್ದರೆ, ಆ ರೀತಿ ಹೇಳಲು ಅವರಾರಿಗೂ ಧೈರ್‍ಯವುಂಟಾಗುತ್ತಿರಲಿಲ್ಲ. ಯಾತಕ್ಕೆಂದರೆ ನಮ್ಮ ಭಾವನವರಿಗೆ ಎತ್ತು ಎಂದರೆ ಪ್ರಾಣ, ಪ್ರಾಣವನ್ನಾದರೂ ಕೊಡುತ್ತಾರೆಯೇ ಹೊರತು, ಕೆಲಸ ತಪ್ಪಿಸಿ ಅವರು ಎತ್ತನ್ನು ಕಳುಹಿಸುವವರಲ್ಲ. ಆದುದರಿಂದ ನಾನು "ಎತ್ತೂ ಬೇಡ, ಗಾಡಿಯೂ ಬೇಡ, ನಡೆದುಕೊಂಡೇ ಹೋಗುತ್ತೇನೆ” ಎಂದೆ. ಇನ್ನಿಬ್ಬರು ನೆಂಟರು ಇದ್ದರಲ್ಲಾ, ಅವರಲ್ಲಿ ಒಬ್ಬರು ಮುದುಕರು. ಅವರು “ಬರಲಯ್ಯ ಗಾಡಿ, ನಿಮ್ಮಪ್ಪನ ಗಂಟೇನ್ಲೋಗೋದು, ಕೂತ್ಕಂಡೋಗೋಣ" ಎಂದರು. ದಾಕ್ಷಿಣ್ಯ; ಸುಮ್ಮನಾದೆ.

ಗಾಡಿಯನ್ನು ಕೂಡಿಕೊಂಡು ಅವನು ಬರುವ ವೇಳೆಗೆ ಸುಮಾರು ೮ ಘಂಟೆಯಾಯಿತು. ದೊಡ್ಡ ಎತ್ತುಗಳನ್ನು ಉಳುವುದಕ್ಕೆ ಹೂಡಿದ್ದುದರಿಂದ ಗಾಡಿಗೆ ಒಂದು ಜೊತೆ ಹೋರಿಗಳನ್ನು ಕಟ್ಟಿದ್ದ. ಅವುಗಳಿಗೆ ಗಾಡಿ ಎಳೆದು ಅನುಭವವಿರಲಿಲ್ಲ. ನಾವು ಹೋಗುತ್ತಿದ್ದ ರಸ್ತೆಯೊ-ಅದು ರಸ್ತೆಯೇ ಅಲ್ಲ-ಬೋರೆಯ ಮೇಲೂ ಹೊಲದ ಮೇಲೂ ಸವೆದುಹೋಗಿದ್ದ ಒಂದು ಗಾಡಿಯ ಚಾಡು, ಗಾಡಿಯಲ್ಲಿದ್ದವರು ನಾವು ೩ ಜನ, ಗಾಡಿ ಹೊಡೆಯುತ್ತಿದ್ದವನೊಬ್ಬ; ಒಟ್ಟು ನಾಲ್ಕು ಜನ. ಆದರೆ ಗಾಡಿಗೆ ಏನಾದರೂ ಸಮತೂಕ ಬರಲಿಲ್ಲ. ನಾನು ಸ್ವಲ್ಪ ದಪ್ಪ ಆಸಾಮಿ. ನಮ್ಮ ನೆಂಟರೊಬ್ಬರು ಮುದುಕರು, ಮತ್ತೊಬ್ಬ ಹುಡುಗ; ಗಾಡಿಯವನೊಬ್ಬ ಹುಡುಗ, ಎತ್ತು ಚಂಗನೆ ಹಾರಿತು. ಹಾಗೂ ಹೀಗೂ ಸ್ವಲ್ಪ ದೂರ ಹೋದಮೇಲೆ ಸುಮ್ಮನೆ ನಿಂತು ಬಿಟ್ಟಿತು. ಎಷ್ಟು ಹೊಡೆದರೂ ಪ್ರಯೋಜನವಾಗಲಿಲ್ಲ. ಕಾಲು ಘಂಟೆಯಮೇಲೆ ತಾನೇ ಎದ್ದಿತು. ಅದು ನಮ್ಮ ಭಾವನವರ ಪ್ರೀತಿಯ ಎತ್ತು, ಅದನ್ನು ಅವರು ಹೊಸದಾಗಿ ತರುವಾಗ ನಡೆದ ವಿಷಯ ಜ್ಞಾಪಕ ಬಂದು ನನಗೆ ನಗು ಬಂದಿತು. ಎತ್ತನ್ನು ಹೊಡೆದುಕೊಂಡು ಬರುತ್ತಿದ್ದಾಗ, ದಾರಿಯಲ್ಲಿ ಬರುತ್ತಿದ್ದ ಒಬ್ಬ ಮುದುಕರು ಅವರನ್ನು ಕುರಿತು "ಏನಯ್ಯ, ಹೋರಿಗರುಗಳಿಗೆ ಏನು ಕೊಟ್ಟೆ. ಚೆನ್ನಾಗಿದೆ" ಎಂದರು. ನಮ್ಮ ಭಾವನವರು "೨೬೦ ರೂಪಾಯಿ ಕೊಟ್ಟಿ, ಚೆನ್ನಾಗಿಲ್ಲದೆ ಏನು? ನೋಡಿ ಹೇಗೆ ಮೆಲುಕು ಹಾಕುತ್ತವೆ?” ಎಂದರು. ಮುದುಕರು ನಗುತ್ತಾ “ಮೆಲಕುಹಾಕೋದೊಂದೇ ಅಲ್ಲಯ್ಯ, ಸಗಣೀನೂ ಹಾಕುತ್ತವೆ" ಎಂದರು. ನಮ್ಮ ಭಾವನವರ ಮುಖ ಪೆಚ್ಚಾಯಿತು. ಆ ಮೆಲುಕು ಮತ್ತು ಸಗಣಿ ಹಾಕುತ್ತಿದ್ದ ಜೋಡಿ ಇವು.

ದಾರಿಯಲ್ಲಿ ಬೇಕಾದಷ್ಟು ಹಳ್ಳತಿಟ್ಟುಗಳಿದ್ದುವು. ನಮ್ಮ ಮುದಿ ನೆಂಟರು ತಮ್ಮ ಬಾಲ್ಯದಲ್ಲಿ ಯಾವಾಗಲೋ ಒಂದು ಸಲ ಗಾಡಿಯಿಂದ ಬಿದ್ದು, ಬೆನ್ನು ಮೂಳೆಗೆ ಅಪಾಯವನ್ನು ತಂದುಕೊಂಡಿದ್ದರಂತೆ. ಈಚೆಗೆ ಅವರು ಗಾಡಿಯಲ್ಲಿ ಕೂರುವುದೆಂದರೆ ಒಂದು ಅಶ್ವಮೇಧವನ್ನು ಮಾಡಿದಂತೆ. ಗಾಡಿ ಸ್ವಲ್ಪ ಓರೆಯಾದರೆ ತೀರಿತು. ಲೊ ಲೋ ಲೋ ಎಂದು ಹೇಳುತ್ತಾ ಕೆಳಕ್ಕೆ ಧುಮುಕಿಯೇ ಬಿಡುತ್ತಿದ್ದರು. ನಾವು ೨ ಮೈಲು ಹೋಗುವುದರೊಳಗಾಗಿ ೫ ಸಲ ಕೆಳಕ್ಕೆ ಧುಮುಕಿದರು. ಅವರ ಅವಸ್ಥೆಯನ್ನು ನೋಡಿ ನನಗೆ ತಡೆಯಲಾರದಷ್ಟು ನಗು ಬಂದಿತು.

ಇನ್ನು ೧/೨ ಮೈಲು ಹೋಗಿದ್ದರೆ, ಹೊಳೆ ಸಿಕ್ಕುವುದರಲ್ಲಿದ್ದಿತು. ಎದುರಿಗೆ ರಸ್ತೆಯಲ್ಲಿ ಯಾರೋ ಒಬ್ಬರು ಕೆಂಪು ಶಾಲನ್ನು ಹೊದೆದುಕೊಂಡು ಕೊಡೆಯನ್ನು ಬಿಚ್ಚಿ ಹಿಡಿದುಕೊಂಡು ಬರುತ್ತಿದ್ದರು. ಅವರನ್ನು ಎತ್ತು ಗಳು ನಮಗಿಂತ ಮುಂಚಿತವಾಗಿಯೇ ನೋಡಿಬಿಟ್ಟವು. ಆ ಎತ್ತುಗಳಿಗೆ ಕೆಂಪು ಶಾಲನ್ನು ಕಂಡರೆ ಮರಣ ಭಯ. ಕೇಳಬೇಕೆ? ನಾಗಾಲೋಟದಲ್ಲಿ ಓಡಲು ಪ್ರಾರಂಭಿಸಿಬಿಟ್ಟವು. ಪಾಪ; ನಮ್ಮ ಮುದುಕರಿಗೆ ಗಾಡಿಯಿಂದ ಧುಮುಕುವುದಕ್ಕೆ ಕೂಡ ಅವಕಾಶವಾಗಲಿಲ್ಲ. ಆಳು ಹಗ್ಗವನ್ನು ಎಷ್ಟು ಜಗ್ಗಿ ಹಿಡಿದರೂ ಎತ್ತುಗಳು ಸ್ವಾಧೀನಕ್ಕೆ ಬರಲಿಲ್ಲ. ನಮ್ಮ ಮುದುಕರು ನಾರಾಯಣ, ಕೃಷ್ಣ, ರಾಮಚಂದ್ರ ಎಂದು ಪದೇ ಪದೇ ಹೇಳತೊಡಗಿದರು. ಕೃಷ್ಣನಾಗಲಿ, ರಾಮಚಂದ್ರನಾಗಲಿ ಎತ್ತಿನ ವೇಗವನ್ನು ತಡೆಯಲಿಲ್ಲ. ಗಾಡಿಯು ಇನ್ನೂ ೪ ಉರುಳು ಉರುಳುವುದರೊಳಗಾಗಿ, ನಾವೆಲ್ಲ ನೆಲದ ಮೇಲಿದ್ದೆವು. ಒಂದು ಎತ್ತು, ಹಗ್ಗವನ್ನು ಕಿತ್ತುಕೊಂಡು ಓಡಿ ಹೋಯಿತು; ಮತ್ತೊಂದು ಗಾಡಿಯ ಬಳಿ ನಿಂತಿತು. ಗಾಡಿಯು ಮಗುಚಿಕೊಂಡಿತು. ದೇವರ ದಯದಿಂದ ಯಾರಿಗೂ ಏನೂ ಪೆಟ್ಟಾಗಲಿಲ್ಲ. ನಾವೆಲ್ಲ ಸೇರಿ ದಾರಿಯಲ್ಲಿ ಹೋಗುತ್ತಿದ್ದ ೨-೩ ಜನರ ಸಹಾಯದಿಂದ ಗಾಡಿಯನ್ನು ಮೇಲಕ್ಕೆ ಎತ್ತಿ, ಓಡಿಹೋಗಿದ್ದ ಎತ್ತನ್ನು ಹಿಡಿದು ತಂದು ಕಟ್ಟಿ ಗಾಡಿಯನ್ನು ಹಿಂದಕ್ಕೆ ಹೊಡೆದು ಕಳುಹಿಸಿದೆವು.

ಮತ್ತೊಂದು ವಿಷಯವನ್ನು ಹೇಳುವದನ್ನ ಮರತೆ. ನಿಮಗೆ ಆಶ್ಚರ್ಯವಾಗಬಹುದು. ನನ್ನ ಜೊತೆಯಲ್ಲಿದ್ದರಲ್ಲಾ ಮುದುಕರು, ಅವರು ಇದುವರೆಗೆ ಹರಿಗೋಲನ್ನೇ ನೋಡಿರಲಿಲ್ಲ. ಹಳ್ಳಿಯಲ್ಲಿದ್ದುಕೊಂಡು ಹರಿಗೋಲನ್ನೇ ನೋಡಿಲ್ಲವೆಂದರೆ ನಿಮಗೆ ಆಶ್ಚರ್‍ಯವಾಗದೆ ಮತ್ತೇನು ?

"ಇದೇನು ಸ್ವಾಮಿ, ಹರಿಗೋಲನ್ನೇ ನೋಡಿಲ್ಲವೆ. ವಯಸ್ಸು ಆಗಲೆ ೬೦ ಆಗಿದೆ. ನೀವೇನು ನ್ಯೂಯಾರ್ಕ್ ಅಥವ ಲಂಡನ್ ನಗರದಲ್ಲಿ ವಾಸಮಾಡಿದವರೊ" ಎಂದೆ. ಮುದುಕರು "ನ್ಯೂಯಾರ್ಕು ಕಾಣೆ, ಲಂಡನ್ನೂ ಕಾಣೆ. ನಮ್ಮ ಊರು ಬಿಟ್ಟು ನಾನು ಇದುವರೆಗೆ ಹೊರಕ್ಕೆ ಹೊರಟವನಲ್ಲ" ಎಂದರು. ಸ್ವಲ್ಪ ಹೊತ್ತಿನ ಮೇಲೆ "ಏನಯ್ಯ ಹರಿಗೋಲು ಹೇಗಿದೆ? ಅದರಲ್ಲಿ ಕುಳಿತರೆ ಸರಿಯಾಗಿ ಆಚೆ ದಡಕ್ಕೆ ತಲುಪುತ್ತೇವೆಯೆ? ನೀರಲ್ಲಿ ದುರ್ಮರಣವುಂಟಾಗಿ ಗತಿಯಿಲ್ಲದೆ ಅಂತರ ಪಿಶಾಚಿಯಾಗಿ ತಿರುಗಬೇಕಾದೀತು” ಎಂದರು. ನಾನು "ಏನೂ ಭಯವಿಲ್ಲ ಬನ್ನಿ" ಎಂದೆ. ಹೊಳೆಯ ದಡಕ್ಕೆ ಹೋದೆವು. ತಂಗಾಳಿ ಬಹಳ ವೇಗದಿಂದ ಹೊಳೆಯ ಮೇಲೆ ಬೀಸಿ, ಮೈಯನ್ನು ಕಡಿಯುತ್ತಲಿದ್ದಿತು. ಕಲ್ಲಿನ ಒಂದು ಚಿಕ್ಕ ದೇವಸ್ಥಾನವು ದಡದಲ್ಲಿದ್ದು, ಅದರಲ್ಲಿ ೨-೩ ಜನರು ಮಾತ್ರ ಕುಳಿತುಕೊಳ್ಳಲು ಅವಕಾಶವಿದ್ದಿತು. ನಾವು ಹೋಗುವ ವೇಳೆಗೆ ಅದರಲ್ಲಿ ಯಾರೋ ಕುಳಿತಿದ್ದರು. ಬಲಗಡೆ ನದಿಗೆ ಅಣೆಕಟ್ಟನ್ನು ಹಾಕಿದೆ. ನೀರು ಆಳವಾಗಿ ಸಮುದ್ರದಂತೆ ವಿಶಾಲವಾಗಿ ತೋರುತ್ತಿದೆ. ದೇವಸ್ಥಾನದ ಮುಂದುಗಡೆ ನದಿಯಿಂದ ತೆಗೆದ ಕಾಲುವೆ ಹರಿಯುತ್ತಿದೆ. ಮುಂದುಗಡೆ ನದಿ, ಬಲಗಡೆ ಅಣೆಕಟ್ಟು; ಎಡಗಡೆ ನದಿ, ಹಿಂದೆ ಕಾಲುವೆ. ಸನ್ನಿವೇಶವೇನೋ ಬಹಳ ಚೆನ್ನಾಗಿದ್ದಿತು. ಆದರೆ ನಮ್ಮ ಮನಸ್ಸು ಆ ಸನ್ನಿವೇಶದ ಸುಖವನ್ನು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಪ್ರವಾಹದಿಂದ ವಿಸ್ತಾರವಾದ ನದಿಯು ೩ ಫರ್ಲಾಂಗಿನಷ್ಟು ಅಗಲವಾಗಿದ್ದಿತು. ಹರಿಗೋಲು ಎದುರು ದಡದಲ್ಲಿ ಚಿಕ್ಕ ಹಕ್ಕಿಯಂತೆ ಕಾಣುತ್ತಿದ್ದಿತು. ಗಾಳಿಯು ಬೋರೆಂದು ಬೀಸುತ್ತಿದ್ದುದರಿಂದ ನದಿಯಲ್ಲಿ ದೊಡ್ಡ ದೊಡ್ಡ ತೆರೆಗಳೆದ್ದು, ದಡವನ್ನು ಬಡಿಯುತ್ತಿದ್ದುವು. ಆ ಗಾಳಿಯು ನಿಲ್ಲುವವರೆಗೆ, ಹರಿಗೋಲು ಈಚೆ ದಡಕ್ಕೆ ಬರುವ ಸಂಭವವಿರಲಿಲ್ಲ. ಬಿರುಗಾಳಿಯು ಯಾವಾಗ ನಿಲ್ಲುತ್ತದೆಯೋ ಬಲ್ಲವರಾರು? ಒಂದು ದಿವಸವೆಲ್ಲಾ ಅದು ವೇಗವಾಗಿ ಬೀಸಿದರೂ, ಅದನ್ನು ಬೇರೆ ಯಾರೂ ಶಿಕ್ಷಿಸುವಂತೆ ಇಲ್ಲ. ಶಿಕ್ಷೆಯು ಯಾವಾಗಲೋ ಗಾಳಿಯ ಮಗನಾದ ಹನುಮಂತನಿಗೆ ಆಗಿ, ಅವನ “ಸೋಟೆಯ ಉರಗಾಯಿತೇ” ಹೊರತು, ಗಾಳಿಗೆ ಏನೂ ಆಗಲಿಲ್ಲ. ಗಂಟೆ ೯-೧೦-೧೧-೧೨ ಆಯಿತು. ಹರಿಗೋಲು ಬರಲೇ ಇಲ್ಲ. ಹೊರಡುವಾಗ ನಮ್ಮ ಸ್ನೇಹಿತನ ಹೆಂಡತಿ “ಸ್ವಲ್ಪ ಕಾಫಿ ತಿಂಡಿ ಮಾಡಿಕೊಂಡು ಹೋಗಿ" ಎಂದಿದ್ದರು. ಪುಣ್ಯಾತ್ಗಿತ್ತಿ ಅಷ್ಟು ಹೇಳಿದ್ದೆ ಸಾಕು ಎಂದು ನಾವು ತಿಂದಿದ್ದರೆ ಚೆನ್ನಾಗಿತ್ತು. "ಅರ್ಧ ಗಂಟೆಯೊಳಗೆ ಹೊಳೆ ದಾಟಿಬಿಡುತ್ತೇವೆ" ಎಂದು ಹೆಮ್ಮೆಯಿಂದ ಹೊರಟುಬಿಟ್ಟೆವು. ಹೊಟ್ಟೆ ಹಸಿವು ಪ್ರಾರಂಭವಾಯಿತು. ನೋಡಿಕೊಳ್ಳಿ ಯಾವುದು ಬೇಕಾದರೂ ತಡೆಯ ಬಹುದು. ಹೊಟ್ಟೆ ಹಸಿವು ಮಾತ್ರ ತಡೆಯುವುದಕ್ಕೆ ಆಗುವುದಿಲ್ಲ. ಅದಕ್ಕೇ ವಿಶ್ವಾಮಿತ್ರನಂತಹ ಋಷಿಯೂ ಕೂಡ ನಾಯಿಯ ಮೂಳೆ ಕಡಿದ. ನನ್ನ ಚೀಲದಲ್ಲಿ ಎರಡು ಮಾವಿನ ಹಣ್ಣುಗಳನ್ನು ಇಟ್ಟಿದ್ದೆ. ಅವನ್ನು ತೆಗೆದೆ. ಮುದುಕರಿಗೆ ಒಂದು ಕೊಡೋಣ ಅಂದರೆ ಬೇಡವೆಂದುಬಿಟ್ಟರು. ನಾನೂ ನನ್ನ ಜೊತೆಯಲ್ಲಿದ್ದ ಮತ್ತೊಬ್ಬ ಹುಡುಗನೂ ಒಂದೊಂದು ಹಣ್ಣನ್ನು ತಿಂದೆವು. ಆದರೆ ರಾವಣನ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎಂದಂತಾಯಿತು ಅದು. ಆ ಒಂದು ಹಣ್ಣನ್ನು ತಿಂದಮೇಲೆ ಹಸಿವು ಇನ್ನೂ ಹೆಚ್ಚಾಗಲು ಪ್ರಾರಂಭಿಸಿತು.

ಸುಮಾರು ಎರಡು ಗಂಟೆಯ ವೇಳೆಗೆ ಎದುರು ದಡದಲ್ಲಿ ಹರಿಗೋಲನ್ನು ಮೇಲಕ್ಕೆ ಎಳೆಯಲು ಪ್ರಾರಂಭಿಸಿದರು. ಪಟ್ಟಣಗಳಲ್ಲಿದ್ದುಕೊಂಡು ಸೇತುವೆಯ ಮೇಲೆ ನಡೆಯುವವರಿಗೆ ಹರಿಗೋಲನ್ನು ಮೇಲಕ್ಕೆ ಎಳೆದರೆಂದರೆ, ಅರ್ಥವೇ ಆಗುವುದಿಲ್ಲ. ಮೇಲಕ್ಕೆ ಎಂದರೆ ಎಲ್ಲಿಗೆ ಆಕಾಶಕ್ಕೋ?” ಅಂತ ಕೇಳಿದ ನಮ್ಮ ಸ್ನೇಹಿತ ಒಬ್ಬ. ಪ್ರವಾಹದ ಕಾಲದಲ್ಲಿ ದೋಣಿಯಾಗಲಿ ಹರಿಗೋಲಾಗಲಿ ನಾವು ಒಂದು ದಡದಲ್ಲಿ ಎಲ್ಲಿ ಬಿಡುತ್ತೇವೆಯೋ ಅದೇ ನೇರದಲ್ಲಿ ಎದುರು ದಡವನ್ನು ಸೇರುವುದಿಲ್ಲ. ಅಂಬಿಗರು ಈಚೆ ದಡದಲ್ಲಿ ಬಿಟ್ಟ ನೇರದಿಂದ, ಸುಮಾರು ಒಂದು ಫರ್ಲಾಂಗು, ಎರಡು ಫರ್ಲಾಂಗು ಕೆಳಗಡೆ ಎದುರು ದಡವನ್ನು ಸೇರುತ್ತದೆ. ಅದಕ್ಕಾಗಿ ಅಂಬಿಗರು ಹರಿಗೋಲನ್ನು ಎರಡು ಫರ್ಲಾಂಗ್ ಮೇಲಕ್ಕೆ ಎಳೆದು ಬಿಡುತ್ತಾರೆ. ಆದರೂ ಕೂಡ ಅದು ಅವರು ಹೊರಟ ನೇರದಿಂದ ಎರಡು ಫರ್ಲಾಂಗ್ ಕೆಳಕ್ಕೆ ಸೇರುತ್ತದೆ.

ಹರಿಗೋಲಿನ ಕಡೆ ನೋಡಿ ನೋಡಿ ನಮಗೆ ತಲೆನೋವು ಹತ್ತಿಬಿಟ್ಟಿತು. ಕಣ್ಣು ಉರಿಯುವುದಕ್ಕೆ ಪ್ರಾರಂಭಿಸಿತು. ಸ್ವಲ್ಪ ಹೊತ್ತಿನೊಳಗೆ ದೂರದಲ್ಲಿ ನದಿಯಲ್ಲಿ ಯಾವುದೋ ಕಪ್ಪಾಗಿ ಚಲಿಸುವಂತೆ ಕಂಡಿತು. ಹರಿಗೋಲು ಹೊರಟಿತು. ಈಚೆಯ ದಡವನ್ನು ಸೇರಿತು. ಹರಿಗೋಲನ್ನೇ ನೋಡಿಲ್ಲವೆಂದು ಹೇಳುತ್ತಿದ್ದ ನಮ್ಮ ಮುದುಕರಿಗೆ ಅದನ್ನು ತೋರಿಸಿದೆ.

ಗಾಳಿಯು ಇನ್ನೂ ಬೀಸುತ್ತಲೇ ಇದ್ದಿತು. ಅಲೆಗಳು ಭಯಂಕರವಾಗಿ ಏಳುತ್ತಿದ್ದುವು. ಹರಿಗೋಲನ್ನು ಆಗಲೇ ಎದುರು ದಡಕ್ಕೆ ಬಿಡಲು ಅಂಬಿಗರು ಇಷ್ಟಪಡಲಿಲ್ಲ. ನಮ್ಮ ಮನಸ್ಸಿನಲ್ಲಿ, ಹರಿಗೋಲಿನಲ್ಲಿ ಕುಳಿತು ಬಿಟ್ಟರೆ ಸಾಕು. ಆಚೆ ದಡಕ್ಕೆ ಹೋಗುತ್ತೆ ಎಂದು. ಅಂಬಿಗರು ೮ ಜನ ರಿದ್ದರು; ಕೊನೆಗೆ ಅವರಿಗೆ ಸಿಟ್ಟು ಹತ್ತಿತು. ನಮ್ಮ ಹಿಂಸೆಯನ್ನು ತಾಳ ಲಾರದೆ ಒಬ್ಬ ಅಂಬಿಗನು “ಬನ್ನಿ ಇವತ್ತಿಗೆ ನಿಮಗೆ ನೂರು ವರ್ಷ ತುಂಬಿತು" ಎಂದನು. ನಾವು ನೂರಾದರೂ ತುಂಬಲಿ ಇನ್ನೂರಾದರೂ ತುಂಬಲಿ; ಅವನು ಅಷ್ಟು ಹೇಳಿದುದೇ ಸಾಕೆಂದು ಹರಿಗೋಲಿನಲ್ಲಿ ಕುಳಿತುಬಿಟ್ಟೆವು.

ಹರಿಗೋಲು ಹೊರಟಿತು. ಅಂಬಿಗರು ಬಹಳ ವೇಗವಾಗಿ ಹುಟ್ಟಿಹಾಕುತ್ತಿದ್ದರು. ಒಂದು ನಿಮಿಷದೊಳಗೆ ಅವರ ದೇಹವೆಲ್ಲಾ ಬೆವರಿತು. ಅವರ ಚಟುವಟಿಕೆಯನ್ನು ನೋಡಿ ನನ್ನ ಬೇಸರಿಕೆಯು ಮಾಯವಾಯಿತು, ಅವರಲ್ಲಿ ಒಂದು ವಿಧವಾದ ಉತ್ಸಾಹವೂ ಕಾತರತೆಯೂ ಇದ್ದಿತು. ಕೆಲವೆಡೆ ಹರಿಗೋಲು ಪ್ರವಾಹದ ಮತ್ತು ಹುಟ್ಟೆಯ ಏಟುಗಳ ಸಮಾನ ವೇಗಕ್ಕೆ ಸಿಕ್ಕಿ, ಮುಂದಕ್ಕೆ ಹೋಗದೆ ನಿಂತುಬಿಡುತ್ತಿದ್ದಿತು. ಮತ್ತೆ ಕೆಲವು ಕಡೆ ಸುಳಿಗೆ ಸಿಲುಕಿ ಗಿರ್‍ರೆಂದು ತಿರುಗುತ್ತಿದ್ದಿತು. ಒಂದೊಂದು ಕಡೆ ಅಲೆಯೊಂದಿಗೆ ಮೇಲಕ್ಕೆದ್ದು ಕೆಳಕ್ಕೆ ಬೀಳುತ್ತಿದ್ದಿತು. ಅರ್ಧ ನದಿಯನ್ನು ದಾಟಿದ ಮೇಲೆ, ಅಂಬಿಗರ ಗಾಬರಿಯು ಹೆಚ್ಚಾಯಿತು. ಅವರು ಎಷ್ಟು ಜೋರಾಗಿ ಹುಟ್ಟಿ ಹೊಡೆದರೂ ಹರಿಗೋಲು ಕೆಳಮುಂದಾಗಿ ಹೋಗುತ್ತಿದ್ದಿತೇ ಹೊರತು, ಎದುರು ದಡವನ್ನು ಸೇರುವ ಸೂಚನೆ ತೋರಲೇ ಇಲ್ಲ. ಅಂಬಿಗರು ಪಟ್ಟ ಶ್ರಮವು ವ್ಯರ್ಥವಾಯಿತು. ಅಷ್ಟರಲ್ಲಿ ಒಬ್ಬ ಅಂಬಿಗನು "ಆ ಬಂಡೆಯ ಕೆಳಕ್ಕೆ ಹೋದರೆ ಹರಿಗೋಲು ನಮ್ಮ ಸ್ವಾಧೀನಕ್ಕೆ ಬರುವು ದಿಲ್ಲ. ಆ ತಿರುವಿನಲ್ಲಿ ಬಂಡೆಯ ಮೇಲಿನಿಂದ ಕೆಳಕ್ಕೆ ಉರುಳಿಬಿಡುತ್ತದೆ" ಎಂದನು. ಈ ಮಾತನ್ನು ಕೇಳಿ ಹರಿಗೋಲಿನಲ್ಲಿದ್ದವರೆಲ್ಲಾ ನಡಗಲು ಪ್ರಾರಂಭಿಸಿದರು. ಮುದುಕರಂತೂ “ನನಗೊತ್ತಯ್ಯ ಹರಿಗೋಲು ಅಂದ್ರೆ ಹೀಗೇ ಆಗುತ್ತೆ ಅಂತ. ಈ ನೀರಲ್ಲಿ ನನಗೆ ದುರ್ಮರಣವಾಗುವಂತೆ ವಿಧಿಯು ಬರೆದಿದ್ದರೆ ಯಾರೇನು ಮಾಡಲಾದೀತು" ಎಂದರು. ನನಗೂ ಕೂಡ ಅಂಬಿಗರು ಹರಿಗೋಲೇರುವಾಗ ನಿಮಗೆ ೧೦೦ ವರ್ಷ ತುಂಬಿತೆಂದು ಹೇಳಿದ ಮಾತು ಜ್ಞಾಪಕಕ್ಕೆ ಬಂದಿತು.

ಅಂಬಿಗರು ಮತ್ತಷ್ಟು ಜೋರಿನಿಂದ ಹುಟ್ಟೆ ಹೊಡೆಯಲು ಪ್ರಾರಂಭಿಸಿದರು. ಒಬ್ಬನು ಸಿಟ್ಟಿನಿಂದ ನಮ್ಮ ಕಡೆ ತಿರುಗಿ “ಪಾಪಿಗಳಿರಾ ನೋಡಿ, ಗಾಳಿಯಿಲ್ಲ ಗಾಳಿಯಿಲ್ಲ ಬಿಡು ಎಂದು ಬಡ್ಕೊಂಡ್ರೆಲ್ಲ. ಈಗ್ನಮ್ಮ ಕಷ್ಟ ನೋಡಿ” ಎಂದು ಬೈದನು. ಹರಿಗೋಲಿನಲ್ಲಿರುವಾಗ ಅಂಬಿಗನ ಹತ್ತಿರ, ಕ್ಷೌರ ಮಾಡುತ್ತಿರುವಾಗ ಹಜಾಮನ ಹತ್ತಿರ, ಕೇಸು ನಡೆಯುತ್ತಿರುವಾಗ ಲಾಯರ ಹತ್ತಿರ ವಿರೋಧವನ್ನು ಕಟ್ಟಿಕೊಳ್ಳುವುದು ತರವಲ್ಲ. ಆದುದುರಿಂದ ನಾವಾರೂ ಮಾತನಾಡಲಿಲ್ಲ.

ಭಯಂಕರವಾದ ಬಿರುಗಾಳಿ ಎದ್ದಿತು. ಕರಿಯ ಮೋಡವು ಆಕಾಶವನ್ನೂ ಭೂಮಿಯನ್ನೂ ಒಂದುಮಾಡಿ, ಮಧ್ಯಾಹ್ನವೇ ರಾತ್ರೆಯಂತೆ ತೋರಿತು. ಮೋಡಗಳು ಕ್ರೂರವಾದ ಧ್ವನಿಯಿಂದ ಗುಡುಗುತ್ತಿದ್ದುವು. ಈಶಾನ್ಯ ದಿಕ್ಕಿನಲ್ಲಿ ಮಿಂಚು ಸಹಸ್ರನಾಲಗೆಯ ಹಾವುಗಳಂತೆ ಮೋಡವನ್ನು ಕಚ್ಚುತ್ತಿದ್ದಿತು. ಸಿಡಿಲು ಪ್ರಳಯ ಕಾಲದ ಸಿಡಿಲಿಗೆಣೆಯಾಗಿದ್ದಿತು. ಮೃತ್ಯುವು ಅಸಂಖ್ಯಾತವಾದ ಬಾಯಿಗಳಿಂದ ನಮ್ಮನ್ನು ನುಂಗುವುದಕ್ಕೆ ಬರುತ್ತಿರುವಂತೆ ತೋರಿತು. ನಮ್ಮ ಹರಿಗೋಲು ಅಲೆಗಳಿಗೂ ಸುಳಿಗಳಿಗೂ ಸಿಕ್ಕಿ ಬುಗರಿಯಂತೆ ಗಿರಗಿರನೆ ತಿರುಗುತ್ತಿದ್ದಿತು. ಸುತ್ತಲೂ ಆಕಾಶವು ಭರಣಿಯ ಮುಚ್ಚಲದಂತೆ ನಮ್ಮ ಮೇಲೆ ಕವಿದುಕೊಂಡು, ನಾವು ನದಿಯ ಮೇಲೆ ಸೆರೆಯಾಳುಗಳಾದಂತೆ ತೋರುತ್ತಿದ್ದಿತು. ಮಂತ್ರದಿಂದ ಮುಗ್ಧರಾದವರಂತೆ ಅಂಬಿಗರು ಹುಟ್ಟಿಯನ್ನು ಹರಿಗೋಲಿನಲ್ಲಿಟ್ಟು ನಿರಾಶರಾಗಿ ನಿಂತು ಬಿಟ್ಟರು. ಹರಿಗೋಲು ವಾಯುವೇಗದಿಂದ ಬಂಡೆಯ ಕಡೆಗೆ ಹೊರಟಿತು. ನಾವು ಅಪಾಯದಿಂದ ದೂರವಾಗಿದ್ದಿದ್ದರೆ ಪ್ರಕೃತಿಯ ಅದೊಂದು ಬೆಡಗಿನ ಕ್ರೂರ ಮುದ್ರೆಯ ಆ ಆನಂದವನ್ನು ನಾವು ಅನುಭವಿಸಬಹುದಾಗಿದ್ದಿತು. ಕಣ್ಣಿಗೆ ಕಾಣುವವರೆಗೆ ಕೆಂಪಾದ ನೀರು; ನೋಡುವುದಕ್ಕೆ ಅವ್ಯವಸ್ಥಿತವಾಗಿ ತೋರುತ್ತಿದ್ದರೂ ಕ್ರಮವರಿತು ನೆಗೆಯುತ್ತಿದ್ದ ಅಲೆಗಳ ಒಟ್ಟು ಗರ್ಜನೆಯಿಂದ ಹೊರಡುತ್ತಿದ್ದ ಒಂದು ಬಗೆಯ ಗಾನ, ರಾಶಿರಾಶಿಯಾಗಿ ತೇಲಿಹೋಗುತ್ತಿದ್ದ ಬಿಳಿಯ ನೊರೆಯ ಗುಂಪುಗಳು, ಕಣ್ಣಿಗೆ ತೋರುವವರೆಗೆ ಒಂದೇ ಸಮನಾಗಿ ಹರಿಯುತ್ತಾ ಸಮುದ್ರದ ಜ್ಞಾಪಕವನ್ನು ತರುತ್ತಿದ್ದ ನದಿಯ ನೀರಿನ ರಾಶಿ. ಇವುಗಳೆಲ್ಲ ಉಳಿದ ವೇಳೆಯಲ್ಲಾದರೆ ನಮಗೆ ಅತ್ಯಂತ ಆನಂದವನ್ನೇ ಕೊಡುತ್ತಿದ್ದುವು. ಆದರೆ ಆಗ ಅವುಗಳನ್ನು ಕುರಿತು ಯೋಚಿಸುವುದು, ಮರಣ ದಂಡನೆಗೆ ಗುರಿಮಾಡಲ್ಪಟ್ಟವನು ತನ್ನ ಆಯುಷ್ಯದ ವಿಷಯದಲ್ಲಿ ಜ್ಯೋತಿಷ್ಯವನ್ನು ಕೇಳಿ ದಂತೆಯೇ ಆಗುತ್ತಿದ್ದಿತು. ಮುಂದೆ ಅಪಾಯದ ಗಾಬರಿಯಿಂದ ನಾವು ಅರ್ಧ ಸತ್ತವರಾಗಿದ್ದೆವು. ನದಿಯ ನೀರು ಮಹಾಕಾಳಿಯು ಈಜುತ್ತಿದ್ದ ತಳವಿಲ್ಲದ ರಕ್ತದ ಸಮುದ್ರದಂತೆ ತೋರಿತು. ಅಲೆಗಳ ಕುಣಿತವು ಪ್ರಳಯ ಕಾಲದ ಈಶ್ವರನ ನಾಟ್ಯದಂತೆ ತೋರಿತು. ನಾವು ಕುಳಿತಿದ್ದ ಹರಿಗೋಲೇ ನಮ್ಮನ್ನು ಕೃತಾಂತನ ಊಳಿಗಕ್ಕೆ ಸಾಗಿಸುವ ವಾಹಕವಾಗಿತ್ತು. ಆದದ್ದಾಯಿತು. ದೇವರೇ ಗತಿ ಎಂದು ನಾವು ನಿರಾಶರಾಗಿ ಬಂದದ್ದನ್ನು ಅನುಭವಿಸಲು ಸಿದ್ದರಾದೆವು.

ಒಮ್ಮಿಂದೊಮ್ಮೆ ಅಂಬಿಗರು ಹೋ ಹೋ ಎಂದರು. ಅವರ ಮುಖದಲ್ಲಿ ಪೂರ್ಣವಾದ ನಿರಾಶೆಯ ಗಾಬರಿಯೂ ತೋರಿತು. ಎಲ್ಲರೂ ನದಿಯ ಮೇಲುಗಡೆಗೆ ನೋಡಲು ಪ್ರಾರಂಭಿಸಿದೆವು. ನಾವಲ್ಲಿ ಕಂಡುದು ನಮ್ಮ ದೇಹದ ರಕ್ತವನ್ನು ತಣ್ಣಗೆ ಮಾಡಿತು. ನಾಲಗೆಯು ಒಣಗಿಹೋಯಿತು. ಮುಖದ ಕಾಂತಿಯು ಹೀನವಾಯಿತು. ಯಮನು ಭಯಂಕರವಾದ ನೂರಾರು ಕೊಂಬೆಗಳ ಮರದ ರೂಪವನ್ನು ಧರಿಸಿ ನಮ್ಮ ಕಡೆಗೆ ಧಾವಿಸಿ ಬರುತ್ತಿದ್ದನು. ಆ ಮರವು ನದಿಯ ಒಂದು ದಡದಿಂದ ಮತ್ತೊಂದು ದಡದವರೆಗೆ ವ್ಯಾಪಿಸಿದ್ದಂತೆ ಕಂಡಿತು. ಅದಕ್ಕೇನಾದರೂ ಹರಿಗೋಲು ಸಿಕ್ಕಿಬಿಟ್ಟರೆ, ತಲೆಕೆಳಗಾಗಿ ನಾವೆಲ್ಲರೂ ನೀರಿನ ಪಾಲಾಗುವುದರಲ್ಲಿ ಸಂದೇಹವಿರಲಿಲ್ಲ. ಮರದಿಂದ ತಪ್ಪಿಸಿಕೊಂಡು ಹರಿಗೋಲನ್ನು ಬೇರೆ ಕಡೆಗೆ ತಿರುಗಿಸಬಹುದೆಂಬ ನಂಬಿಕೆಯು ಅಂಬಿಗರಲ್ಲಿ ಯಾರಿಗೂ ಇರಲಿಲ್ಲ. ಹರಿಗೋಲು ಅವರ ಸ್ವಾಧೀನ ತಪ್ಪಿಹೋಗಿದ್ದಿತು. ನಮ್ಮ ಪಾಪಕರ್ಮವೇ ಮೂರ್ತಿವೆತ್ತಂತೆ ಮರವು ಹರಿಗೋಲಿಗಿಂತಲೂ ಅಲ್ಲ ಮಿಂಚಿಗಿಂತಲೂ ವೇಗವಾಗಿ ಬರುತ್ತಿದ್ದಿತು. ನಾವೆಲ್ಲರೂ ಯಮನ ಲೋಕಕ್ಕೆ ಟಿಕೆಟ್ ಪಡೆದುಕೊಂಡು ಆಗಿದ್ದಿತು. ಟ್ರೇನು ಹತ್ತುವುದು ಮಾತ್ರಾ ಬಾಕಿ; ಟ್ರೇನೂ ಎದುರಿಗೇ ಬರುತ್ತಿದೆ ಎಂದುಕೊಂಡೆವು. ನಮ್ಮ ಮುದುಕರು, “ನೀರಿನಲ್ಲಿ ಸತ್ತವರಿಗೆ ಕರ್ಮಾಂತರವಿಲ್ಲ. ಮೋಕ್ಷವಿಲ್ಲ. ಅಂತರಪಿಶಾಚಿಯಾಗಿ ಅಲೆಯುತ್ತಿರಬೇಕು. ಮದುವೆಗೆ ಬಂದು ದುರ್ಮರಣವನ್ನು ಕಂಡಂತೆ ಆಯಿತು” ಎಂದು ನಿಟ್ಟುಸಿರುಬಿಟ್ಟರು.

ಅಂಬಿಗರಲ್ಲೊಬ್ಬನು “ಹುಟ್ಟಿ ಹಾಕಿ ನೋಡೋಣ, ಕಾವೇರಿ ತಾಯಿಯ ದಯ” ಎಂದನು. ವಿದ್ಯುತ್ ದೇಹದಲ್ಲಿ ಪ್ರವಹಿಸಿದಂತೆ ಅಂಬಿಗರೆಲ್ಲರೂ ಹುಟ್ಟೆಗಳನ್ನು ಕೈಗೆ ತೆಗೆದುಕೊಂಡರು. ಮರವು ಯಾವ ನೇರದಲ್ಲಿ ಬರುವುದೆಂಬುದನ್ನು ಹೇಳಲು ಸಾಧ್ಯವಿರಲಿಲ್ಲ. ಪ್ರವಾಹದ ವೇಗದಿಂದ ಅದು ಒಂದು ಸಲ ಈ ಕಡೆಗೂ ಮತ್ತೊಂದು ಸಲ ಆ ಕಡೆಗೂ ತಿರುಗುತ್ತಿತ್ತು. ಅಂಬಿಗರು ಹರಿಗೋಲನ್ನು ಒಂದು ಕಡೆಗೆ ನಡೆಸಿದರು. ಮರವು ನಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ನಾವೆಲ್ಲರೂ ಎದುರಿಗೆ ಬರುತ್ತಿರುವ ಮೃತ್ಯುವನ್ನು ಎದುರುಗೊಳ್ಳಲಾರದೆ ಕಣ್ಣನ್ನು ಮುಚ್ಚಿದೆವು. ಮರದ ಒಂದು ಕೊಂಬೆಯ ತುದಿಯು ಹರಿಗೋಲಿಗೆ ತಗುಲಿತು. ಒಮ್ಮಿಂದೊಮ್ಮೆ ಹರಿಗೋಲು ಗಿರ್‍ರೆಂದು ತಿರುಗಿತು. ನಾವೆಲ್ಲರೂ ಹರಿಗೋಲಿನಲ್ಲಿ ಸೋರೆಯ ಬುರುಡೆಗಳಂತೆ ಉರುಳಾಡಿದೆವು. ಅಂಬಿಗರು "ಕಾವೇರಿ ತಾಯಿಯು ಈ ಸಲ ಕಾಪಾಡಿದಳು" ಎಂದರು. ಸಾಯುವುದಕ್ಕಾಗಿ ಕಣ್ಣನ್ನು ಮುಚ್ಚಿದ್ದ ನಾನು, ಯಮಲೋಕದಿಂದ ಹಿಂದಿರುಗಿ ಬಂದವನಂತೆ ಕಣ್ಣನ್ನು ಬಿಟ್ಟಿ. ದೂರದಲ್ಲಿ ಮರವು ದೊಡ್ಡ ಭೂತದಂತೆ ತೇಲಿಹೋಗುತ್ತಿದ್ದಿತು.

ಈ ಅಪಾಯದಿಂದ ತಪ್ಪಿಸಿಕೊಂಡುದರೊಡನೆ, ಅಂಬಿಗರಿಗೆ ಮತ್ತೆ ಜೀವದ ಆಸೆಯುಂಟಾಯಿತು. ಅವರು ಮನಸ್ಸು ಮಾಡಿ ಹುಟ್ಟೆ ಹೊಡೆದರು. ನೀರಿನಲ್ಲಿ ಮುಚ್ಚಿಹೋಗಿದ್ದ ಗಿಡಗಳ ಮೇಲೆ ಕುಣಿಯುತ್ತಾ ಹರಿಗೋಲು ದಡವನ್ನು ಸೇರಿತು. ದಡವನ್ನು ಎಂದರೆ, ಎದುರು ದಡವನ್ನಲ್ಲ. ನಾವು ಯಾವ ದಡದಿಂದ ಹೊರಟಿದ್ದೆವೋ ಆ ದಡವನ್ನು, ಭೂಮಿಯು ಗುಂಡಾಗಿದೆ ಎಂಬ ಮಾತು ಅನುಭವಕ್ಕೆ ಬಂದಂತಾಯಿತು.

ಹರಿಗೋಲನ್ನು ಮತ್ತೆ ಬಿಡೆಂದು ಅಂಬಿಗರಿಗೆ ಹೇಳಲು ನಮಗಾರಿಗೂ ಧೈರವಿರಲಿಲ್ಲ. ಸಾಯಂಕಾಲ ೬ ಗಂಟೆಯ ವೇಳೆಗೆ ಆಕಾಶವು ನಿರ್ಮಲವಾಯಿತು. ಮೋಡಗಳೆಲ್ಲ ಚೆದುರಿಹೋದುವು. ಭೂಮಿಯು ಬೆಳದಿಂಗಳ ವಸನವನ್ನು ತೊಟ್ಟಳು. ನದಿಯು ಶಾಂತವಾಯಿತು. ಮಧ್ಯಾಹ್ನ ಆ ನದಿಯನ್ನು ಕಂಡ ನಾವು ಅದೂ ಇದೂ ಎರಡೂ ಒಂದೇ ಎಂದು ನಂಬಲಾರದೆ ಹೋದೆವು. ಈ ಸೌಮ್ಯ, ಆ ರೌದ್ರ; ಈ ಶಾಂತತೆ, ಆ ಘರ್ಜನೆ; ಸ್ವರ್ಗಲೋಕದ ದೇವಿಯಂತೆ ನಡೆವ ಈ ಗಂಭೀರ ನಡಿಗೆ, ಪ್ರಳಯಕಾಲದ ಕಾಳಿಯ ಕ್ರೌರ್‍ಯದಂತಹ ಆ ನರ್ತನ; ಈ ಶುಭ್ರವಾದ ಜೊನ್ನೊಸರುವ ತಿಂಗಳಿನ ಬಿಳಿಯ ಸೀರೆ, ಆ ರಕ್ತವು ತೊಟ್ಟಿಕ್ಕುತಿರುವ ಭಯಂಕರವಾದ ಮಲಿನ ವಸನ; ನಲ್ಲನ ಕೊರಗನ್ನು ನಗಿಸುವ ಮುಗುಳುನಗೆಯ ಬೆಳದಿಂಗಳನ್ನು ಪಸರಿಸುವ ನದಿಯ ಈಗಿನ ಬೆಡಗು, ಗಂಡನನ್ನೇ ನುಂಗುವಂತೆ ಕ್ರೌರ್‍ಯವನ್ನು ತೋರಿಸುವ ಆಗಿನ ನದಿಯ ಘರ್ಜನೆ--ಪರಸ್ಪರ ವಿರುದ್ಧವಾದ ಈ ಎರಡು ರೂಪವನ್ನೂ ಒಂದೇ ನದಿಯು ತೋರುವುದೆಂದು ಹೇಗೆ ತಾನೆ ನಂಬಲಾದೀತು!

ಕಾವೇರಿ ನದಿಯು ಕೋಪವಡಗಿದ ಹೆಂಡತಿಯ ನಗೆಯಂತೆ, ಈ ಸೌಮ್ಯ ರೂಪದಿಂದ, ಸರಸದಿಂದ ಕರೆಯುವಾಗ ಯಾರು ತಾನೆ ಅದರ ಪ್ರಭಾವವನ್ನು ತಪ್ಪಿಸಿಕೊಳ್ಳುವುದಕ್ಕೆ ಆಗುತ್ತದೆ. ಬೆಸ್ತರು “ಮಹಾತಾಯಿ ಶಾಂತಳಾದೆಯಾ? ನಿನ್ಮಕ್ಕಳ್ಮೇಲೆ ಇಂತಹ ಕ್ರೌರ್ಯವನ್ನ ತೋರಿಸಬಹುದೆ? ನಾವು ಮಾಡಿದ ಯಾವ ಪಾಪಕ್ಕೆ ಇದು ಪ್ರಾಯಶ್ಚಿತ್ತ" ಎಂದು ಅಡ್ಡಬಿದ್ದರು. ಅನಂತರ ಹರಿಗೋಲಿನಲ್ಲಿ ಕುಳಿತುಕೊಂಡು "ಬನ್ನಿ" ಎಂದು ನಮ್ಮನ್ನು ಕರೆದರು. ನಮ್ಮ ಮಾವ ಮುದುಕರು ಹರಿಗೋಲನ್ನು ಕಂಡುದು ಇದೇ ಮೊದಲು. ಈ ಮೊದಲಿನ ಅನುಭವವೇ ಅವರಿಗೆ ಸಾಕಾಯಿತು. ಮಧ್ಯಾಹ್ನದ ಭಯವೂ ನೀರಿನ ಅಪಮೃತ್ಯುವೂ, ಅಂತರ ಪಿಶಾಚಿಯ ದೃಶ್ಯವೂ ಅವರ ಕಣ್ಣಿನಿಂದ ಮರೆಯಾಗಿರಲಿಲ್ಲ. ಅವರು ಅದನ್ನು ನೆನಸಿಕೊಂಡೇ ಇನ್ನೂ ನಡುಗುತ್ತಿದ್ದರು. ಅವರು ಇಗೋ ಪುಣ್ಯಾತ್ಮ ನಿನಗೆ ದೊಡ್ಡ ನಮಸ್ಕಾರ. ಈ ಕಾವೇರಿ ತಾಯಿಯ ತಂಟೆ ಬೇಡ. ಹರಿಗೋಲಿನ ಸಹವಾಸ ಮೊದಲೇ ಬೇಡ. ಮದುವೆಯ ಸುಖವನ್ನು ಇಲ್ಲಿಯೇ ಕಂಡಂತೆ ಆಯಿತು. ಈ ವೃದ್ಧಾಪ್ಯದಲ್ಲಿ ದೇವರು ಕೊಟ್ಟ ರಾಗಿ ಅಂಬಲಿ ಕುಡಿದುಕೊಂಡು, ಮನೆಯಲ್ಲಿ ಬೆಂಕಿಯ ಮುಂದೆ ಬೆಚ್ಚಗೆ ಕುಳಿತಿರುವುದನ್ನು ಬಿಟ್ಟು, ಈ ಮಳೆ, ಗಾಳಿ, ಛಳಿಯಲ್ಲಿ ಹೊಡೆಸಿಕೊಳ್ಳುವುದು ಯಾವ ಹಣೆಬರಹ. ವಧೂವರರಿಗೆ ಇಲ್ಲಿಂದಲೇ ಆಶೀರ್ವಾದ ಮಾಡಿ, ಹೀಗೆಯೇ ಹಿಂದಿರುಗುತ್ತೇನೆ" ಎಂದರು. ಅಂತೂ ಅವರನ್ನೂ ಸಮಾಧಾನಮಾಡಿ ಹರಿಗೋಲಿಗೆ ಕೂರಿಸಿದ್ದಾಯಿತು. ಯಾವ ತೊಂದರೆಯೂ ಇಲ್ಲದೆ ಎದುರು ದಡವನ್ನು ಸೇರಿದೆವು. ಆ ಕಡೆ ನಿಂತಿದ್ದ ನಮ್ಮ ನೆಂಟರೆಲ್ಲಾ ನಮ್ಮನ್ನು ನೋಡಿ ನಕ್ಕರು. ಹರಿಗೋಲು ಒಂದು ಸಲ ಅರ್ಧ ನದಿಗೆ ಬಂದು ಹಿಂದಕ್ಕೆ ಹೋದುದನ್ನು ಕಂಡು ಅವರ ಆನಂದಕ್ಕೆ ಪಾರವಿಲ್ಲದಂತಾಯಿತಂತೆ. ಮರವು ತೇಲಿ ಬಂದಾಗ, ನಾವು ಕಿರಚಿದ ಕೂಗು ನದಿಯ ಆಚೆ ತೋಪಿನಲ್ಲಿ ಪ್ರತಿಧ್ವನಿತವಾಯಿತಂತೆ. ಒಬ್ಬನು “ಯಾರೂ ಕಾಣದ ಮಹಾ ಹೊಳೆಯೊ?" ಎಂದನು. ಮತ್ತೊಬ್ಬನು “ಇಂತಹ ಹೊಳೆಯನ್ನು ನಾನು ಹತ್ತು ಸಲ ಈಜಿಕೊಂಡೇ ದಾಟಿದ್ದೇನೆ" ಎಂದನು. ಮತ್ತೊಬ್ಬನು ನನ್ನ ಹೆಗಲಿನ ಮೇಲೆ ಕೈಯಿಟ್ಟು “ಅಲ್ಲವೊ ನಿನಗೆ ಈಜು ಬರುತ್ತೆ, ಅರ್ಧ ಹೊಳೆಗೆ ಬಂತೆಲ್ಲಾ ಹರಿಗೋಲು, ಆಗ ಬಿದ್ದು ಈಜಿಬಿಡೋಕೆ ಆಗಲಿಲ್ಲವೇ?” ಎಂದನು. ಉಳಿದವರೆಲ್ಲಾ ಹೇಳಿದ್ದು ಹೋಗಲಿ ಅಂದರೆ, ನಮ್ಮ ಭಾವನೂ ಕೂಡ "ಏನು ಮಹಾ ಹೊಳೆಯೋ” ಅಂದ. ನಾನು ಕೋಪದಿಂದ "ಹೌದಯ್ಯ ಹೊಳೆಯಲ್ಲಿ ದೊಡ್ಡ ಪ್ರವಾಹದಲ್ಲಿ ನೀರು ಕುಡಿದು, ನಿಮಗೂ ನಿಮ್ಮ ಮನೆಯ ಗೋಡೆಗಳಿಗೂ ಅಭ್ಯಾಸವಾಗಿದೆ. ಆದರೆ ನಾವಿದ್ದಂತೆ ಮಧ್ಯಾಹ್ನ ನೀವು ಮೃತ್ಯುಮುಖದಲ್ಲಿ ನಿಂತಿದ್ದರೆ, ಆಗ ಗೊತ್ತಾಗುತ್ತಿತ್ತು. ನಿಮಗೆ ಅಳು, ನಮಗೆ ನಗು. ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ ಸಂಕಟ” ಎಂದೆ. ನಮ್ಮ ಮುದುಕರು ಕೋಪದಿಂದ “ದೊಡ್ಡ ಪ್ರವಾಹದಲ್ಲಿ ಈ ಊರು ಪೂರ್ಣವಾಗಿ ಕೊಚ್ಚಿ ಹೋಗಿದ್ದರೆ, ನಮಗೆ ಈಗ ಬರೋ ಕಷ್ಟವೇ ತಪ್ಪುತಿತ್ತು” ಎಂದು ಘರ್ಜಿಸಿದರು.

ಮದುವೆಯು ಎಲ್ಲಾ ಮದುವೆಗಳಂತೆ ವೈಭವದಿಂದ ಜರುಗಿತು. ಅದರಲ್ಲಿ ವಿಶೇಷವೇನೂ ಇರಲಿಲ್ಲ. ಆದರೆ ನಾನು ಹೋದದ್ದರಲ್ಲಿ ಮಾತ್ರ ವಿಶೇಷವಿತ್ತು. ಅದನ್ನು ನಿಮಗೆ ಹೇಳಿದ್ದೇನೆ.