ವಿಷಯಕ್ಕೆ ಹೋಗು

ಹೊಸ ಬೆಳಕು ಮತ್ತು ಇತರ ಕಥೆಗಳು/ನಡುವಿನ ಪರದೆ

ವಿಕಿಸೋರ್ಸ್ದಿಂದ

90949ಹೊಸ ಬೆಳಕು ಮತ್ತು ಇತರ ಕಥೆಗಳು — ನಡುವಿನ ಪರದೆ ೧೯೫೨ಶ್ರೀ ವೆ. ಮುಂ. ಜೋಶಿ

ನಡುವಿನ ಪರದೆ.


ದ್ವಿತೀಯ ಮಹಾಯುದ್ಧ ಮುಕ್ತಾಯವಾದ ಕಾಲವದು. ಯುದ್ಧವೇನೋ ಮುಗಿದಿದ್ದರೂ, ಮಲಾಯಾದಲ್ಲಿಯ ಪರಿಸ್ಥಿತಿ ಮಾತ್ರ ತೀರಗಂಭೀರವಾಗಿತ್ತು. ಯುದ್ಧ ಕೈದಿಗಳೆಷ್ಟೋ ವಧಸ್ಥಂಭವನ್ನೇರುತ್ತಿದ್ದ ಭೀಕರದೃಶ್ಯ ಅಲ್ಲಲ್ಲಿ ಕಾಣುತ್ತಿತ್ತು. ಆಹಾರ ಧಾನ್ಯಗಳ ಕೊರತೆಯೊಂದು ಕಡೆ ಈ ಹಗ್ಗದೆಳೆದಾಟದಲ್ಲಿ ಮಲಾಯಾ ನುಚ್ಚುನೂರಾಗುತ್ತಿತ್ತು.

ಮಲಾಯಾದ ರಾಜಧಾನಿಯಾದ ಕೋಲಾಲಂಪೂರದ 72 I.G.H. (ಇಂಡಿಯನ್ ಜನರಲ್ ಹಾಸ್ಪಿಟಲ್)ನಲ್ಲಿ 'A' ವಾರ್ಡಿನಲ್ಲಿ ಕ್ಯಾಪ್ಟನ್ ರಾಮನ್ ನಾಯರ್ ತಮ್ಮ ಮಂಚದಮೇಲೆ ಅಸ್ವಸ್ಥ ಚಿತ್ತರಾಗಿ ಕುಳಿತಿದ್ದರು. ಅದೇ ಆಗಲೇ ಡಾಕ್ಟರರು ಬಂದು ಅವರ ನಾಡಿಯನ್ನು ಪರೀಕ್ಷಿಸಿ, ಹಾಸ್ಪಿಟಲಿನಿಂದ ನಾಳೆ ಬಿಡುಗಡೆಯಾಗುವ ವಿಚಾರ ತಿಳಿಸಿ ಹೋಗಿದ್ದರು. ಜ್ವರದಿಂದ ಮುಕ್ತರಾದಾಗ ಜನರಿಗೆಲ್ಲ ಆನಂದವಾಗುತ್ತದೆ. ಆದರೆ ರಾಮನ್ ನಾಯರರಿಗೆ ಮಾತ್ರ ಬೇಜಾರವಾಯಿತು. ಅವರಿಗೆ ಹಾಸ್ಪಿಟಲ್ ಬಿಡುವ ಮನಸ್ಸೇ ಇರಲಿಲ್ಲ. ಮರುಳುಗಾಡಿನಲ್ಲಿ ಇರುಳೂ ಹಗಲೂ ನಡೆಯುವವನಿಗೆ ಎಲ್ಲಿಯೊ ತಣ್ಣೀರ ಸೆಲೆ ಸಿಕ್ಕಷ್ಟು ಆನಂದ, ರಾಮನ್ ನಾಯರರಿಗೆ ಹಾಸ್ಪಿಟಲಿನಲ್ಲಿ ಆಗಿತ್ತು. ಆದರೆ, ಆಗ ತಾನೆ ಡಾಕ್ಟರರು ತಿಳಿಸಿದ ಬಿಡುಗಡೆಯ ಸುದ್ದಿ ಅವರ ಕರುಳನ್ನೇ ಕತ್ತರಿಸಿ ಬಿಟ್ಟಿತ್ತು. ಯಕ್ಷನನ್ನು ಅವನ ಪ್ರಿಯತಮೆಯಿಂದ ದೂರ ಮಾಡಿದ ಪಾಪದಷ್ಟು ದೊಡ್ಡ ದೋಷವನ್ನು ರಾಮನ್‌ರು ಮನಸ್ಸಿನಲ್ಲಿಯೇ-ಡಾಕ್ಟರರ ಮೇಲೆ ಹೊರಿಸಿದರು. ಇದೇ ವಿಚಾರಗಳ ಗೊಂದಲದಲ್ಲಿ ಸಿಲುಕಿದಾಗಲೇ, ಎದುರು ಗೋಡೆಯ ಮೇಲಿನ ಗಡಿಯಾಳ 'ಢಣ್' ಎಂದು ಗಂಟೆ ಬಾರಿಸಿ, ತನ್ನ ಕರ್ತವ್ಯ ನೆರವೇರಿಸಿತು.

ಆ ಸಪ್ಪುಳದಿಂದ ನಾಯರರಿಗೆ ಮತ್ತಿಷ್ಟು ನೋವಾಯಿತು. 'ಡಾಕ್ಟರರಂತೆಯೆ ಈ ಯಂತ್ರವೂ ಕಠೋರವಾಗಿದೆಯೋ?' ಎಂದಂದುಕೊಂಡರು. "ಅಬ್ಬಾ! ಆರುವರೆ ಗಂಟೆ. ಇನ್ನು ಕೇವಲ ೧೪ ತಾಸುಗಳಷ್ಟೇ ಇಲ್ಲಿರುವುದು. ಅಷ್ಟೇ ಸಹವಾಸ!" ಎಂದು ದೀರ್ಘಶ್ವಾಸ ಬಿಟ್ಟು, ಮಂಚದಿಂದ ಕೆಳಗಿಳಿಯುವ ಮೊದಲೇ, ಅವರ ಮನಸೆಳೆದ ನರ್ಸ್ ಜಾನಕೀ ಮೆನನ್ ಒಳಗೆ ಬಂದಳು. ಅವಳು ಬಂದುದನ್ನು ನೋಡಿ ರಾಮನ್, ತಮ್ಮ ಕಾಲುಗಳನ್ನು ಮತ್ತೆ ಮಂಚದ ಮೇಲೆಳೆದುಕೊಂಡರು. ಜಾನಕಿ ಒಳಗೆ ಬಂದವಳೇ, ರಾಮನ್ ಹಿಸ್ಟರಿ ಶೀಟನ್ನು ಕೈಯಲ್ಲಿ ತೆಗೆದುಕೊಂಡು, ಬಾಟ್ಲಿಯಿಂದ ಗ್ಲಾಸಿನಲ್ಲಿ ಔಷಧ ಸುರಿದು, ಅದನ್ನು ರಾಮನ್ ರ ಕೈಯಲ್ಲಿ ಕೊಡುತ್ತ ನಗುಮುಖದಿಂದ "ತೆಗೆದುಕೊಳ್ಳಿ! ಈಗ ತುಂಬಾ ಹುಶಾರಿಯಾಗಿದ್ದೀರಿ!" ಎಂದು ಹೇಳಿ, ಅವರ ಹಿಸ್ಟರೀ ಶೀಟನ್ನು ತುಂಬಲು ತೊಡಗಿದಳು. ರಾಮನ್‌ರು ಮಾತ್ರ ಕೈಯಲ್ಲಿ ಗ್ಲಾಸನ್ನ ಹಿಡಿದುಕೊಂಡು ಮೌನರಾಗಿ ಅವಳನ್ನೇ ದೃಷ್ಟಿಸಹತ್ತಿದರು.

ದುಂಡು ಮುಖ, ಕೊರೆದ ಕಣ್ಣು, ಹಳದಿ ಕೂಡಿದ ಬಿಳಿಯ ಮೈಬಣ್ಣ, ಉಂಗುರುಗೂದಲು, ಪುಷ್ಟ ಎದೆ, ಬ್ರಹ್ಮ ಪ್ರಮಾಣಬದ್ಧ ಪಡಿಯಚ್ಚಿನಲ್ಲಿ ಎರಕ ಹೊಯ್ದು ಸೌಂದರ್ಯದ ಗೊಂಬೆಯಾಗಿದ್ದಳು ಜಾನಕಿ. ಜಾನಕಿಯಲ್ಲಿಯ ಈ ನಿಸರ್ಗದತ್ತ ಸೌಂದರ್ಯ, ರಾಮನ್‌ರ ದೃಷ್ಟಿಯನ್ನು ಬೇರೆ ಕಡೆಗೆ ಸರಿಸಲು ಆಸ್ಪದ ಕೊಡಲಿಲ್ಲ. “ಅಯ್ಯೋ ! ಇಂಥವಳ ಜತೆಯಲ್ಲಿ ಕೇವಲ ೧೪ ತಾಸುಗಳಷ್ಟೇ ಅವಧಿಯ ಸಹವಾಸವೇ?” ಎಂದು ಮರುಗಿದರು.

ಜಾನಕಿ ತನ್ನ ಕೆಲಸ ಮುಗಿಸಿ ರಾಮನ್‌ರತ್ತ ನೋಡಿದಳು. ಕೈಯಲ್ಲಿಯ ಗ್ಲಾಸು ಹಾಗೆಯೇ ಇದೆ. ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತದೆ. ತನ್ನನ್ನೇ ನೋಡುತ್ತಿದ್ದಾರೆ. ಅವಳಿಗೇಕೋ ರಾಮನ್‌ರ ಇಂದಿನ ಸ್ಥಿತಿಯನ್ನು ನೋಡಿ ತುಂಬ ಆಶ್ಚರ್ಯವಾಯಿತು. 'ನಿತ್ಯವೂ ನಗುಮುಖದಿಂದ ಔಷಧಿ ಕುಡಿಯುವವರು, ಇಂದೇಕೆ ಹೀಗೆ?'––ಎಂದು ಯೋಚಿಸಿದಳು.

ಮುಂದೆ ತಾನೇ ತನ್ನ ಕೈಗಳಿಂದ, ಬಲುಮೆ ಮಾಡಿ ಕಾಮನ್‌ರಿಗೆ ಔಷಧ ಕುಡಿಸಿದಳು. ಸನಿಯದ ಖುರ್ಚಿಯನ್ನು ಬದಿಯಲ್ಲಿಯೇ ಸರಿಸಿ ಕುಳಿತುಕೊಳ್ಳುತ್ತ ಕೇಳಿದಳು:

“ಏಕೆ? ಇಂದೇಕೆ ಹೀಗೆ ಮಾಡುತ್ತಿದ್ದೀರಿ?” “ಮನಸ್ಸಿನಲ್ಲಿದ್ದುದನ್ನು ಈಗ ಹೇಳಿಬಿಡಲೇ?.” ಎಂದು ರಾಮನ್ ಒಂದು ಸಲ ಯೋಚಿಸಿದರು. ಆದರೆ ತಾನು ಕ್ಯಾಪ್ಟನ್! ಈ ನರ್ಸ್ ಒಂದು ವೇಳೆ ಒಪ್ಪದಿದ್ದರೆ, ತನ್ನ ಗೌರವಕ್ಕೆ ಧಕ್ಕೆ! ಏನಾದರೂ ಉತ್ತರ ಕೊಡಲೇ ಬೇಕಲ್ಲವೆಂದು ರಾಮನ್ರು ಉತ್ತರಿಸಿದರು:

"ನಾಳೆ ಬೆಳಿಗ್ಗೆ ೮|| ಗಂಟೆಗೆ, ಡಾಕ್ಟರರು ನನ್ನನ್ನು ಬಿಡುಗಡೆ ಮಾಡುತ್ತಾರೆ. ಈಗೇನೋ- ನಾನು ಪೂರ್ಣ ಗುಣಮುಖವಾಗಿದ್ದೆನಂತೆ!”

"ಥ್ಯಾಂಕ್ಸ್ ಗಾಡ್! ಅಭಿನಂದನೆಗಳು ! ನೋಡಿ, ಇದು ನನ್ನ ಕೈಗುಣ. ನನ್ನ ಉಪಚಾರವೇ ನಿಮ್ಮನ್ನಿಷ್ಟು ಬೇಗ ವಾಸಿ ಮಾಡಿತು.” ನಗುತ್ತಲೇ ಜಾನಕಿ ಇವೆಲ್ಲ ಮಾತುಗಳನ್ನು ನುಡಿದುಬಿಟ್ಟಳು. ಅವಳ ಕಣ್ಣುಗಳಲ್ಲಿ ಸಂತೋಷ ಕುಣಿಯುತ್ತಿತ್ತು. ಆಗಿನ ಅವಳ ಮುಖಚರ್ಯೆ ನೋಡಿ ರಾಮನ್ ಭೂಮಿಗೆ ಕುಸಿದು ಬಿದ್ದರು. “ನಾನು ಅಪೇಕ್ಷಿಸಿದ ಪ್ರತಿಕ್ರಿಯೆಗೂ ಇದಕ್ಕೂ ಏನೂ ಸಂಬಂಧವಿಲ್ಲವಲ್ಲಾ! ನಾನು ದೂರವಾಗುತ್ತಿದ್ದೇನೆ ಎಂಬುದನ್ನು ಕೇಳಿ, ಇವಳು ವ್ಯಸನಪಡಬಹುದೆಂದು ತಿಳಿದಿದ್ದೆ. ಛಿ! ಸ್ತ್ರೀಯರೆಲ್ಲ ಕಪಟಗಳೇನೋ!” ಎಂದು ವಿಚಾರಿಸುತ್ತಲೇ ರಾಮನ್:

"ಸರಿ, ನೀನು ನನ್ನ ಉಪಚಾರ ತುಂಬ ಮಾಡಿದ್ದೀ, ನಿನಗೇನಾದರೂ ಪ್ರತಿಫಲ ನಾನು ಕೊಡಲೇ ಬೇಕು. ಹೇಳು ಏನು ಬೇಕು? ಮತ್ತೆ ನಿನ್ನ-ನನ್ನ ಭೆಟ್ಟಿ ಎಂದೋ- "ಜಾನಕಿ ತತ್‌ಕ್ಷಣ ರಾಮನ್‌ರ ಬಾಯ ಮೇಲೆ ಕೈ ಇರಿಸುತ್ತ ಉತ್ತರಿಸಿದಳು:

"ಹಾಂ, ಹಾಗೆ ಹೇಳಬೇಡಿ! ಆಶೆ ಅಮರವಾಗಿದೆ. ನಿಮ್ಮಿಂದ ನಾನು ಯಾವ ಪ್ರತಿಫಲದ ಅಪೇಕ್ಷೆಯನ್ನೂ ಮಾಡುವುದಿಲ್ಲ. ಮೇಲಾಗಿ ನೀವು ನನ್ನ ಪ್ರಾಂತದವರೇ ! ನಿಮ್ಮ ಬಗ್ಗೆ ನನಗೆ ಸ್ವಕೀಯ ಭಾವನೆ ಉತ್ಪನ್ನವಾಗಿದೆ.”

ಜಾನಕಿಯ ಕೊನೆಯ ಮಾತುಗಳಿಂದ ರಾಮನ್‌ರಿಗೆ ತಡೆಯಲಾಗಲಿಲ್ಲ. ಇಲ್ಲಿಯ ವರೆಗಿನ ತಮ್ಮ ಜೀವಮಾನದಲ್ಲಿ ಹೆಣ್ಣಿನ ಸಂಬಂಧವನ್ನೇ ಅರಿಯದ ರಾಮನ್, ಆ ಮಾತುಗಳಿಂದ, ತಮ್ಮನ್ನು ತಾವೇ ಮರೆತುಹೋದರು. ಜಾನಕಿಯ “ಸ್ವಕೀಯ ಭಾವನೆ” ಈ ಶಬ್ದದ ಜತೆಯಲ್ಲಿ ಮಂಚದಿಂದೆದ್ದು ಜಾನಕಿಯನ್ನು ಬರಸೆಳೆದು ಬಿಗಿದಪ್ಪಿ ಮುದ್ದಿಸಿಬಿಟ್ಟರು. ಸೈನಿಕವೃತ್ತಿಯ ಸಂಯಮನರಹಿತ ನಿರ್ಭಿತ ಜೀವಿ!

ಒಂದು ಕ್ಷಣದಲ್ಲಿ ಏನೋ ಭೂಕಂಪವಾದಂತಾಯಿತು ರಾಮನ್‌ರ ತೋಳಸೆರೆಯಿಂದ ತಪ್ಪಿಸಿಕೊಂಡ ಜಾನಕಿ, ಕೆಂಪಾಗಿ ಹೋಗಿದ್ದಳು. ಅವಳ ತುಟಿ ಥಳಥರ ನಡುಗುತ್ತಿದ್ದುವು. ಅವಳು ಏನನ್ನೋ ಹೇಳಬಯಸುತ್ತಿದ್ದಳು; ಆದರೆ ಮಾತನಾಡಲಾಗಲಿಲ್ಲ. ಒಂದು ದೃಷ್ಟಿಯನ್ನು ರಾಮನ್‌ರತ್ತ ಬೀರಿ, ಮಿಂಚಿನ ವೇಗದಿಂದ ಕೋಣೆಯಿಂದ ಮಾಯವಾದಳು.

ರಾಮನ್‌ರಿಗೆ ಒಂದು ಕ್ಷಣ ಏನೂ ತಿಳಿಯದಾಯಿತು. ತಾನು ಅವಳ ಬಗ್ಗೆ ತಪ್ಪು ಅರ್ಥ ಮಾಡಿಕೊಂಡೆನೆ? ಛೇ! ನನ್ನಲ್ಲಿ ತಮ್ಮ ಬಗ್ಗೆ ಸ್ವಕೀಯ ಭಾವನೆ ಹುಟ್ಟಿದೆ ಎಂದು ಹೇಳುವಾಗ, ಅವಳು ತನ್ನ ಕಡೆಗೆ ಪ್ರೇಮಪೂರ್ಣ ಕಟಾಕ್ಷವನ್ನು ಬೀರಲಿಲ್ಲವೇ? ಹಾಗಾದರೆ…… ಕೋಪಿಸಿಕೊಂಡು ಹೊರಟು ಹೋದಳೇಕೆ? ಇರಬಹುದು, ವೇಳೆ ಕಾಲ ನೋಡದೆ ತಾನು ಅವಳನ್ನು ಚುಂಬಿಸಿದೆನೆಂದು ಇರಬಹುದು. ಆದರೆ ಅವಳು ತನ್ನನ್ನು ಪ್ರೇಮಿಸುತ್ತಾಳೆ. ಇಲ್ಲವಾದರೆ ತನ್ನನ್ನು ಈ ಪರಿಯಾಗಿ ೨೧ ದಿನ ಹಗಲು ರಾತ್ರಿ ಉಪಚರಿಸುತಿರಲಿಲ್ಲ” ಎಂದು ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಳ್ಳಲು ಹವಣಿಸಿದರು.

ನಿಂತುಕೊಂಡೇ ವಿಚಾರ ಮಾಡುತ್ತಿದ್ದ ರಾಮನ್ ಒಂದು ದೀರ್ಘ ಶ್ವಾಸ ಬಿಟ್ಟು, ಮಂಚದ ಮೇಲೆ ಪವಡಿಸಿದರು. ಮತ್ತೆ ಗೋಡೆಯ ಮೇಲಿದ್ದ ಗಡಿಯಾರ ಗಂಟೆಯನ್ನು ಬಾರಿಸಿತು. ರಾಮನ್‌ರ ಮೈ ಮತ್ತೆ ಬೆವರಿತು. ತಮ್ಮ ಬಿಡುಗಡೆಯ ವೇಳೆಯನ್ನು ನಿರೀಕ್ಷಿಸುತ್ತ, ನಿದ್ರೆ ಬಾರದಿದ್ದರೂ ಕಣ್ಣನ್ನು ಮುಚ್ಚಿಕೊಂಡೇ ಮಲಗಿದರು.

ಕ್ಯಾಪ್ಟನ್ ರಾಮನ್ ನಾಯರ್, ಬಾಥೂ ರೋಡಿನಲ್ಲಿಯ ತಮ್ಮ ಕ್ವಾರ್ಟರ್‍ಸ್ ದಲ್ಲಿ ಉದಾಸ ಚಿತ್ತರಾಗಿ ಶತಪಧ ಹಾಕುತ್ತಿದ್ದರು. ಹಾಸ್ಪಿಟಲಿನಿಂದ ಹೊರಬಂದು ಎರಡು ದಿನಗಳಾಗಿದ್ದರೂ, ಅವರಿಗೆ ಹೊಸ ವಾತಾವರಣ ಅಷ್ಟು ಬೇಗ ಹಿಡಿಯಲಿಲ್ಲ. ಕೋಣೆಯಲ್ಲಿ ಇನ್ನೂ ಶತಪಥ ನಡೆದೇ ಇತ್ತು. ಮಿಲ್ಟ್ರೀ ಬೂಟ್ಸಿನ ಖಣ್ ಖಣ್ ಸಪ್ಪುಳವಷ್ಟೇ, ಶಬ್ದ ಮಾಡಿ ಶಾಂತತೆಯನ್ನು ಕೆಡಿಸುತ್ತಿತ್ತು. ರಾಮನ್‍ರಿಗೆ ತಮ್ಮ ಹೃದಯದ ಮೇಲೆ, ಕನ್ನ ಕೊರೆವ ಕಳ್ಳ ಹಾರೆಕೋಲಿನಿಂದ ಬಡಿದಂತೆ-ಆ ಶಬ್ದ ಭಾಸವಾಗುತ್ತಿತ್ತು. ನಡೆದಾಡುತ್ತಿರುವಂತೆಯೆ ರಾಮನ್ ತಮ್ಮ ಬಲದ ಕಿಸೆಯಿ೦ದ ಪ್ಲೇಯರ್ಸ್ ನೇವಿಕಟ್ ತೆಗೆದು ಬಾಯಲ್ಲಿರಿಸಿ, ಹೊಗೆಯಾಡಿಸತೊಡಗಿದರು. ಕೋಣೆಯ ತುಂಬೆಲ್ಲ ಹೊಗೆ ತುಂಬತೊಡಗಿತ್ತು. ಅದೇ ಆಗ ಜಾನಕಿಯಿಂದ ಬಂದ ಪತ್ರವಂತೂ ರಾಮನ್ ರ ಒಳ ಹೃದಯದಲ್ಲಿ ಪ್ರಚ೦ಡ ಹೊಗೆ ಎಬ್ಬಿಸಿಬಿಟ್ಟಿತ್ತು. ರಾಮನ್‍ರು ಮತ್ತೊಮ್ಮೆ ಆ ಪತ್ರವನ್ನು ಓದಲು ತೊಡಗಿದರು.

72 I. G. H.
Kaula Lumpur,


"ಕ್ಯಾ ರಾಮನ್ ನಾಯರರಿಗೆ–

ವಂದನೆಗಳು. ತಾವು ಹಾಸ್ಪಿಟಲಿನಿಂದ ಬಿಡುಗಡೆಯಾಗಿ ಹೋಗುವಾಗ, ನಾನು ತಮ್ಮನ್ನು ಕಾಣಲಿಲ್ಲ. ಕಾಣಲಿಕ್ಕೇಕೋ ಮನಸ್ಸು ಹಿಂಜರಿಯಿತು. ನೀವು ನನ್ನನ್ನು ಚುಂಬಿಸಿದಿರಿ. ಸ್ನಾನ ಮಾಡದೆ ದೇವರನ್ನು ಮುಟ್ಟುವುದು ಪಾಪವೆಂದೇ ನನ್ನ ಭಾವನೆ. ನಾನೂ ಹೆಣ್ಣು. ಈಗಿರುವ ನನ್ನ ಬಾಳು ಅಪೂರ್ಣವೆಂಬುದು ನನಗೆ ಗೊತ್ತಿದೆ. ನನಗೂ ಮದುವೆಯಾಗಬೇಕೆ೦ಬ ಹ೦ಬಲವಿದೆ. ಸುಖವಾಗಿ ಸಂಸಾರ ಸಾಗಿಸಬೇಕೆಂಬ ಸ್ವಪ್ನವನ್ನೂ ಕಾಣುತ್ತಲಿದ್ದೇನೆ.

ಆದರೆ ನನ್ನ ಇತಿಹಾಸದ ಹಿನ್ನೆಲೆ ತುಂಬ ಗಂಭೀರವಾಗಿದೆ. ಅದರ ಪರಿಣಾಮವಾಗಿಯೇ ನಾನು ನರ್ಸ್‌ವೃತ್ತಿಯನ್ನು ಕೈಕೊಂಡೆ. ಈ ಐದು ವರ್ಷಗಳ ನರ್ಸ್‌ವೃತ್ತಿಯಲ್ಲಿ, ನನಗೆ ಕೆಲಸದಲ್ಲಿ ಸಂಬಂಧಬರುತ್ತಿದ್ದ ಗಂಡಸರನ್ನೆಲ್ಲ ನಾನು ಪರೀಕ್ಷಿಸುತ್ತಿದ್ದೆ. ಎಲ್ಲರೂ ನನ್ನ ಸೌಂದರ್ಯವನ್ನು ಕೊಂಡಾ ಡುತ್ತಿದ್ದರು. ಎಲ್ಲರೂ ಕೇವಲ ಭ್ರಮರವೃತ್ತಿಯವರಾಗಿಯೆ ಕಂಡರು. ಈ ನರ್ಸ್ ವೃತ್ತಿಯನ್ನು ನಾನು ಬಹಳೇ ಜಾಗ್ರತೆಯಿಂದ ನಡೆಸಿಕೊಂಡು ಬಂದಿದ್ದೇನೆ. ಯಾರಿಗೂ ನನ್ನ ಮೈಯ್ಯನ್ನು ಮುಟ್ಟಲು ಅವಕಾಶ ಕೊಡಲಿಲ್ಲ. ಈ ನನ್ನ ಕಟ್ಟಳೆಯನ್ನು ಮುರಿದವರು ನೀವೇ. ಮೇಲಧಿಕಾರಿಗಳ ಬಳಿ ಹೋಗಿ ಈ ನಿಮ್ಮ ಕೃತಿಯನ್ನು ದೂರಬಹುದಾಗಿತ್ತು. ಆದರೆ ನಿಮ್ಮ ಬಗ್ಗೆ ನನ್ನಲ್ಲಿ ಬೆಳೆದ ಆತ್ಮೀಯ ಭಾವನೆ, ನನಗೆ ಹಾಗೆ ಮಾಡಿಸಕೊಡಲಿಲ್ಲ. ನನ್ನ ದುರ್ಬಲತೆಯನ್ನು ನಾನು ಹಳಿದುಕೊಂಡರೂ, ಒಂದು ಮನಸ್ಸು ಮಾತ್ರ "ಭಲೇ" ಎಂದು ಹೇಳಿತು. ತಮ್ಮ ಜತೆಯಲ್ಲಿ ಮದುವೆಯಾಗಲು ನಾನೂ ಹಾತೊರೆಯುತ್ತಿದ್ದೇನೆ. ಆದರೂ ಪ್ರೇಮವಿವಾಹವಾಗುವ ಮೊದಲು, ಇಬ್ಬರೂ ಪರಸ್ಪರರು ಪರಸ್ಪರರನ್ನು ಅರಿಯಬೇಕು. ಇಲ್ಲವಾದರೆ––

ಪ್ರತಿಯೊಬ್ಬರ ಜೀವನ ಏನೂ ಅಡೆ-ತಡೆ ಇಲ್ಲದೆ ನಡೆಯುವುದು ಅಸಾಧ್ಯ: ಕೆಲ-ಕೆಲವರ ಜೀವನದಲ್ಲಿ ತುಂಬ ದುರ್ಗಮ ಮಾರ್ಗಗಳು ಬರುತ್ತವೆ. ನಾನೂ ನಿಮ್ಮೂರಿನವಳೇ. ಟ್ರಿಚ್ಚಿಯಲ್ಲಿ ಕ್ಯಾಂಟೋನ್‌ಮೆಂಟಿನ ಬೀದಿಯಲ್ಲಿಯೇ ನಮ್ಮ ಮನೆ. ಒಂದೇ ಊರವರಾದುದರಿಂದ, ನಡೆದುಹೋದ ಮಾತನ್ನು ಈಗ ಬಿಚ್ಚಿಡುವುದು ಸರಿಯಲ್ಲ. ಇಂದಿಲ್ಲ ನಾಳೆ ಅದು ತಮಗೆ ಗೊತ್ತೇ ಆಗಬಹುದು. ಕೂಡುವ ಮೊದಲೇ ಆಡುವುದು ಒಳಿತು. ಕೂಡಿದ ಮೇಲಿನ ಕಾಡಾಟ ಒಳ್ಳೆಯದಲ್ಲ–-ಒಂದೇಮಾತಿನಲ್ಲಿ ಹೇಳಿ ಮುಗಿಸುತ್ತೇನೆ; ನನ್ನ ತಂದೆಯ ಸಾಲಕ್ಕಾಗಿ ಪಠಾಣನೊಬ್ಬ ನನ್ನನ್ನು........ಮುಂದೆ ನನ್ನ ತಂದೆಯ ಸಾವು--ನನ್ನ ಪ್ರಸೂತಿ–-ಆ ಕೂಸಿನ ಸಾವು--ನನ್ನ ಕಲಂಕ-ಇವೇ ನನ್ನನ್ನು ಊರು ಬಿಡಿಸಲು ಕಾರಣವಾದುವು. ನರ್ಸ್‌ವೃತ್ತಿಯನ್ನು ಕೈಕೊಂಡೆ. ಈ ಐದು ವರ್ಷಗಳಲ್ಲಿ ನಡೆದು ಹೋದ ಮಾತುಗಳನ್ನು ಮರೆತುಹೋದೆ. ಈಗ ಮದುವೆಯ ಮಾತು ಬಂದಾಗ ಅದರ ನೆನಪೂ ಬರುತ್ತದೆ. 'ನಡೆದುಹೋದ ಮಾತು ನನ್ನ ಸುಂದರ ಭವಿಷ್ಯಕ್ಕೆ ಮಾರಕವಾಗಿ ಪರಿಣಮಿಸಿದರೆ!'-– ಎಂದು ಧೈರ್ಯವಾಗಿ-ಸತ್ಯವಾಗಿ ತಮ್ಮ ಮುಂದೆ ಈ ಮಾತುಗಳನ್ನು ಹೇಳಿಬಿಡುತ್ತಿದ್ದೇನೆ. ತಮಗೆ ತಿಳಿದಂತೆ ಉತ್ತರ ಬರೆಯಿರಿ. ಹೆಚ್ಚಿಗೆ ಬರೆಯಲು ಮತ್ತಾವ ಸಮಾಚಾರವೂ ಇಲ್ಲ. ತಾವು ಉದಾರಬುದ್ಧಿಯಿಂದ ನನ್ನನ್ನು ಕ್ಷಮಿಸಿ ಸ್ವೀಕರಿಸಿದರೆ, ನಾನು ಸಂಪೂರ್ಣ ನಿಮ್ಮವಳು...

-ಜಾನಕಿ "

ಓದು ಮುಗಿಸಿದೊಡನೆಯೇ ರಾಮನ್ ಪತ್ರವನ್ನು ಕೈಯಲ್ಲಿಯೇ ಮಡಿಸಿದರು. ಇನ್ನು ಜಗತ್ತಿನಲ್ಲಿರುವುದೇ ಬೇಡವೆಂದೆಣಿಸಿದರು. ಆ ದುಂಡುಮುಖದ-ಆ ಸೌಂದರ್ಯದ ಹಿಂದೆ ಇಂಥ ಕಪ್ಪು ಕಲೆ ಇರಬಹುದೆಂದು ರಾಮನ್ ತಿಳಿದಿರಲಿಲ್ಲ. ಪ್ರೇಮ ತೋರಿಸಿ ಕುತ್ತಿಗೆ ಕೊಯ್ದಷ್ಟು ಸಿಟ್ಟು ರಾಮನ್‌ರಿಗೆ ಬಂದುಬಿಟ್ಟಿತ್ತು. ಆ ಸಿಟ್ಟಿನ ರಭಸದಲ್ಲಿ 'ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ! ನಮ್ಮಿಬ್ಬರ ನಡುವೆ ಇನ್ನು ಯಾವ ಸಂಬಂಧವೂ ಇಲ್ಲ!' ಎಂದು ಅವಳಿಗೆ ಪತ್ರ ಬರೆದು ತಿಳಿಸಿಯೂ ಬಿಟ್ಟಿದ್ದರು.

ರಾಮನ್ ಕಣ್ಣು ಮುಚ್ಚಿ ಹಾಗೆಯೆ ಖುರ್ಚಿಯಲ್ಲಿ ಕುಳಿತರು. ಮತ್ತೆ ಆ ದುಂಡು ಮುಖ, ಕೊರೆದ ಕಣ್ಣು, ಹಳದಿ ಮಿಶ್ರಿತ ಗೌರವರ್ಣ, ಉಂಗುರು ಗೂದಲು ಕಾಣಿಸತೊಡಗಿದವು. ಅಂಜಿ ಒಮ್ಮೆ ಕಣ್ಣು ತೆರೆದರು--ಪ್ರಣಯ ಭಂಗದ ಸ್ಮ್ರತಿ ಅವರನ್ನು ಎಚ್ಚರಿಸಲಿಲ್ಲ.

"ಮೇ ಆಯ್ ಕಮಿನ್ ” ಎಂಬ ಮೇಜರ್ ಡಕ್ಸ್‌ಬರಿಯ ಕೂಗು ಅವರನ್ನೆಚ್ಚರಿಸಿತು.

ಸದ್ಯದ ಪರಿಸ್ಥಿತಿಯಲ್ಲಿ ಏಕಾಂತಬಯಸುತ್ತಿದ್ದ ರಾಮನ್ ರಿಗೆ ಮೇಜರ್ ಡಕ್ಸ್‌ಬರಿಯ ಆಗಮನ ಅಷ್ಟು ಸರಿಬರಲಿಲ್ಲವಾದರೂ, ಅದನ್ನು ಹೊರಗೆ ತೋರಗೊಡುವಂತಿರಲಿಲ್ಲ. ಏಕೆಂದರೆ ಮೇಜರ್ ಡಕ್ಸ್‌ಬರೀ, ಕೋಲಾಲಂಪೂರದ ಸ್ಟೇಶನ್ ಏರಿಯಾ ಕಮಾಂಡರ್, ಮೇಲಾಗಿ ಸಯಾಮ್ ರೇಲ್ವೆ ಪ್ರಿಝನರ್ಸ್ ವಿಚಾರಣೆಯ ಮಿಲ್ಟ್ರೀ ಟ್ರಿಬ್ಯೂನಿನಲ್ಲಿಯ ನ್ಯಾಯಾಧಿಪತಿ.

“ಕಮಿನ್ ಸರ್” ಎಂದು ಮೇಲೆಮೇಲೆ ನಗು ತೋರಿಸುತ್ತಾ ರಾಮನ್ ಡಕ್ಸ್‌ಬರಿಯನ್ನು ಸ್ವಾಗತಿಸಿದರು.

"ನಿಮಗಾಗಿ ಒಂದು ಹೊಸ ಸಂತೋಷದ ಸುದ್ದಿಯನ್ನು ತಂದಿದ್ದೇನೆ" ಎನ್ನುತ್ತಾ ಡಕ್ಸ್‌ಬರಿ, ಬದಿಯ ಖುರ್ಚಿಯ ಮೇಲೆ ಕುಳಿತುಕೊಂಡರು. "ಹಾಗಾದರೆ ಮೊದಲು ಇದನ್ನು ತೆಗೆದುಕೊಳ್ಳಿ!" ಎಂದು ರಾಮನ್ ನಾಯರ್.

ತನ್ನ ಆರ್ಡರ್ಲಿಯ ಕಡೆಯಿಂದ ಸ್ಕಾಚ್ ಬೀರ್ ತರಿಸಿ ಗ್ಲಾಸಿನಲ್ಲಿ ಹಾಕಿಕೊಟ್ಟರು. ಮಲಾಯಾದಲ್ಲಿ ಬೀರ್ ಕುಡಿಯುವುದೆಂದರೆ, ಹಿಮಾಲಯದಲ್ಲಿ ಕುಳಿತು ಚಹ ಕುಡಿದಷ್ಟು ಆನಂದ. ಡಕ್ಸ್‌ಬರೀ ಕೈಯಲ್ಲಿ ಗ್ಲಾಸನ್ನು ತೆಗೆದುಕೊಂಡು:

"ನೋಡಿ, ನಾನು ಇದೀಗ ಕಮಾಂಡ್ ಎಚ್. ಕ್ಯೂ. ಹೆಡ್ ಕ್ವಾರ್ಟರಿನಿಂದ ಬರುತ್ತಿದ್ದೇನೆ. ಅಲ್ಲಿ ಇಂದೇ ಆರ್ಡರ್ ಹೊರಟಿದೆ: ನಿಮ್ಮನ್ನು 'ಮೇಜರ್' ಪದವಿಗೆ ಏರಿಸಲಾಗಿದೆ. ಧನ್ಯವಾದಗಳು." ಎಂದು ತಿಳಿಸಿದರು. ಜಾನಕಿಯ ವಿಷಯದಿಂದ ವ್ಯಗ್ರವಾದ ರಾಮನ್‌ರ ಮನಸ್ಸು, ತಮಗೆ ಮೇಜರ್ ಹುದ್ದೆ ದೊರಕಿದ್ದಕ್ಕೆ ಪ್ರಸನ್ನವಾಯಿತು. "ಓ ಥ್ಯಾಂಕ್ಸ್ ಮಚ್" ಎಂದು ಹೇಳಿ ರಾಮನ್‌ರು ಮತ್ತೆ ಬೀರ್ ಬಾಟಲಿಗೆ ಕೈ ಹಾಕಿದರು. ಡಕ್ಸ್‌ಬರೀಯವರು ಮತ್ತೊಂದು ಗ್ಲಾಸನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾ"

"ಇನ್ನೂ ಮುಂದೆ ನೋಡಿ: ಮೇಜರ್ ಪದವಿಯಷ್ಟಕ್ಕೇ ಮುಗಿಯಲಿಲ್ಲ. ನೀವು ನಾಳೆಯಿಂದ ಸಯಾಮ್ ರೇಲ್ವೆ ಪ್ರಿಝನರ್ಸ್ ವಿಚಾರಣೆಯ ಮಿಲ್ಟಿ ಟ್ರಿಬ್ಯೂನಿನಲ್ಲಿಯ ಒಬ್ಬ ಮೆಂಬರು" ಎಂದು ಹೇಳಿದರು. ಇದನ್ನು ಕೇಳಿಯಂತೂ ರಾಮನ್‌ರು ಅವಾಕ್ಕಾದರು. ಇಷ್ಟೊಂದು ಮಹತ್ವದ ಕೆಲಸ, ತಮ್ಮ ಪಾಲಿಗೆ ಇಷ್ಟು ಬೇಗ ಬರುವುದೆಂದು ಅವರು ತಿಳಿದಿರಲಿಲ್ಲ. ಆದರೇನು ಗ್ರಹಗಳೇ ಒಳಿತಾದಾಗ ಎಲ್ಲವೂ ಸಾಧ್ಯ––

ಬೀರ್ ಕುಡಿದು ಮುಗಿದ ನಂತರ ಇಬ್ಬರೂ ಸಿಗರೇಟನ್ನು ಹಚ್ಚಿದರು. ಕೈಯಲ್ಲಿದ್ದ ಕೊರೆದ ಕಡ್ಡಿಯನ್ನು ಒಗೆಯುತ್ತಾ ಡಕ್ಸ್‌ಬರಿ "ಸರಿ, ನಾನಿನ್ನು ಹೊರಡುತ್ತೇನೆ; ಈ ಫಾಯಿಲು ತೆಗೆದುಕೊಳ್ಳಿ! ಸಯಾಮ ರೇಲ್ವೆಯ ಮೇಜರ್ ಓಸಾಕಾ ಅವರ ವಿಚಾರಣೆಯ ಫಾಯಿಲು! ಚೆನ್ನಾಗಿ ಅಭ್ಯಾಸ ಮಾಡಿರಿ! ಅದರ ಜತೆಯಲ್ಲಿಯೇ ಇದೂ ಒಂದು ಫಾಯಿಲು: ಶ್ರೀಮತಿ ಓಸಾಕಾ ಅವರಿಗೆ ಸಂಬಂಧಿಸಿದುದು. ಇಬ್ಬರದೂ ನಾಳೆಯ ವಿಚಾರಣೆಯ ಕೊನೆಯ ದಿನ " ಎಂದು ಹೇಳಿ ಕೋಣೆಯಿಂದ ಹೊರಬಿದ್ದರು. ಈ ಓಸಾಕಾ ದಂಪತಿಗಳು, ಶತ್ರುಗಳಾದ ಜಪಾನಿಗಳೆಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಒಂದು ಕ್ಷಣದ ಪೂರ್ವದಲ್ಲಿಯೆ ಉದಾಸೀನ ಚಿತ್ತರಾಗಿದ್ದ ರಾಮನ್ ನಾಯರರ, ಒಮ್ಮೆಲೇ ಉಲ್ಲಸಿತರಾದರು. ಫಾಯಿಲುಗಳನ್ನು ಕೈಯಲ್ಲಿ ತೆಗೆದುಕೊಳ್ಳುತ್ತಾ "ಇನ್ನು ಜಾನಕಿಯನ್ನು ಸಹಜವಾಗಿ ಮರೆಯಬಹುದು. ಬೇರೆಯ ಕೆಲಸದಲ್ಲಿ ಮನಸ್ಸು ತೊಡಗಿತೆಂದರೆ ತಾನೇ ಮರೆಯುತ್ತದೆ. ಆದರೂ ಜಾನಕಿ ತನ್ನ ಜೀವಮಾನದಲ್ಲಿ ಬಂದ ಮೊದಲನೆಯ ಹೆಣ್ಣು; ಅದೇ ಹುಣ್ಣಾಗಿ ಪರಿಣಮಿಸಿತು. ಹಾಯ್!" ಎಂದು ಮನಸ್ಸಿನಲ್ಲಿಯೇ ವಿಚಾರಿಸುತ್ತಾ, ಫಾಯಿಲಿನ ಪುಟಗಳನ್ನು ಒಂದೊಂದಾಗಿ ತೆರೆಯತೊಡಗಿದರು. ಫೆಯಿಲು ಶ್ರೀಮತಿ ಓಸಾಕಾನ ಕೇಸಿನದಾಗಿತ್ತು. ಅದನ್ನು ಸಂಪೂರ್ಣವಾಗಿ ಓದಲು ರಾಮನ್‌ರಿಗೆ ಸುಮಾರು ಎರಡು ಗಂಟೆ ಹಿಡಿಯಿತು. ಓದನ್ನು ಮುಗಿಸಿದ ನಂತರ ರಾಮನ್ ನಾಯರು ಮನಸ್ಸಿನಲ್ಲಿಯೇ ವಿಚಾರಿಸತೊಡಗಿದರು: “ಅಬ್ಬಾ ಹೆಣ್ಣೇ? ಹೆಣ್ಣು ಹೀಗೂ ಇರಬಹುದೇ? ಹೆಣ್ಣಲ್ಲ, ಪಿಶಾಚಿ! ಅವಳು ಸಿಂಗಾಪೂರಕ್ಕೆ ಬಂದದ್ದು, ೧೯೪೦ ರಲ್ಲಿ. ಅಲ್ಲಿ ಕೆಲಸ ಮಾಡುತ್ತಿದ್ದುದು ವೆಸ್ಟರ್ನ್ ಹಾಟೇಲಿನಲ್ಲಿ "ಸರ್‍ವ್ಹರ್" ಎಂದು. ಮುಂದೆ ಕ್ಯಾಪ್ಟನ್ ಗಿಬ್ಸನ್‌ನ ಜತೆಯಲ್ಲಿ ಪ್ರಣಯ. ಗಿಬ್ಸನ್‌ ಅವಳ ಪ್ರಣಯಜಾಲದಲ್ಲಿ ಬಲಿಬಿದ್ದ ಮೊದಲನೆಯಬೇಟಿ---ಎಂದು ಈ ಫೈಲು ಹೇಳುತ್ತಿದೆ. ಆದರೆ ಈ ಮೊದಲೆಷ್ಟೋ? ಗಿಬ್ಸನ್‌‌ನ ತರುವಾಯ ಮತ್ತೆ ಮೂವರು ಬ್ರಿಟಿಶ್‌ ಆಫೀಸರರು! ಇದೇನು? ಆ ಬ್ರಿಟಿಶ್ ಆಫೀಸರನ ಜತೆಯಲ್ಲಿ ಅರ್ಧ ನಗ್ನಾವಸ್ಥೆಯ ಚಿತ್ರ! ಎಲ್ಲಕ್ಕೂ ಮಿಗಿಲಾದ ಆಶ್ಚರ್ಯವೆಂದರೆ, ಇವಳು ಗಂಡನಿಂದ ದೂರವಿದ್ದು ೩ ವರುಷಗಳ ಮೇಲೆ ಮಗು ಒಂದು ಹುಟ್ಟಿದೆ. ಅದು ಗಿಬ್ಸನ್‌‌ನದು ಎಂದು ಅವಳೇ ಒಪ್ಪುತ್ತಾಳೆ. ಆ ಮಗು ಸತ್ತಿತಂತೆ, ಇವಳೇ ಕೊಂದಿರಬಹುದೆಂದು ಗಿಬ್ಸನ್‌ ಸಂದೇಹಪಡುತ್ತಾನೆ. ಮುಂದೆ ೧೯೪೪ರಲ್ಲಿ ಸಿಂಗಾಪೂರ ಜಪಾನಿಗಳ ಕೈವಶವಾದೊಡನೆ, ಮತ್ತೆ ಓಸಾಕಾನನ್ನು ಕೂಡಿಕೊಂಡಿದ್ದಾಳೆ. ಪಾಪ, ಅವನಿಗೆ ಇದೆಲ್ಲವೂ ಗೊತ್ತಿಲ್ಲವೇನೋ ? ಗೊತ್ತಿದ್ದರೆ ಗುಂಡಿಕ್ಕಿ ಕೊಲ್ಲುತ್ತಿದ್ದನೇನೋ? ಶ್ರೀಮತಿ ಓಸಾಕಾ ಇದೆಲ್ಲವನ್ನೂ ಮಾಡಿದ್ದು ದೇಶದ ಸಲುವಾಗಿ ಎಂದೇ? ಗೂಢಚಾರಿಣಿ, ದೇಶಭಕ್ತಿ––ಶೀಲ ಶಬ್ದದ ಸುಳಿವೇ ಇವರಲ್ಲಿಲ್ಲವೇನೋ! ಅದರಲ್ಲಿ ಹೆಣ್ಣುಗಳಿಗೇನು? ದೇಶಭಕ್ತಿಯ ಹೆಸರಿನಲ್ಲಿ ತಮ್ಮ ಸ್ವೈರಾಚಾರದ ವರ್ತನೆಗೆ ಇಂಬುಗೊಡುತ್ತಾರೆ. ಪಾಪ! ಓಸಾಕಾನಿಗೆ ಇದರ ಸುಳಿವೇ ತಿಳಿಯದು. ನಾಳೆ ಕೋರ್ಟಿನಲ್ಲಿ ಇದನ್ನೆಲ್ಲ ಅವನೆದುರು ಓದಿ ತಿಳಿಸಿ ಬಿಡುತ್ತೇನೆ ನೋಡುವಾ, ಏನಾಗುದದೋ!" ಎಂದು ಮತ್ತೊಂದು ಫಾಯಿಲಿಗೆ ಕೈ ಹಾಕಿದರು:


ಎರಡನೆಯ ದಿನ ಸಾಯಂಕಾಲ ಮೇಜರ್ ರಾಮನ್ ನಾಯರು ವಿಚಾರಣೆಯನ್ನು ಮುಗಿಸಿ, ತನ್ನ ಕೋಣೆಗೆ ಬಂದರು. ಇಂದು ನಿನ್ನೆಗಿಂತಲೂ ಅವರು ಹೆಚ್ಚು ಅಸ್ವಸ್ಥರಾಗಿದ್ದರು. ಮತ್ತೆ ಸಿಗರೇಟನ್ನು ಹಚ್ಚಿಕೊಂಡು ಆರಾಮ ಖುರ್ಚಿಯಲ್ಲಿ ಪವಡಿಸಿ ವಿಚಾರಿಸತೊಡಗಿದರು.

"ಟ್ರಿಬ್ಯೂನಿನಲ್ಲಿ ಶ್ರೀಮತಿ ಓಸಾಕಾಳ ಕರಾಳ ಕೃತ್ಯವನ್ನು ಮೇಜರ್ ಓಸಾಕಾನ ಎದುರಿನಲ್ಲಿ ಓದಿ ಹೇಳಿದರೂ ಅವನೆಷ್ಟು ಸ್ತಬ್ಬನಾಗಿದ್ದನಲ್ಲ? 'ನಿನ್ನ ಹೆಂಡತಿ ೪-೬ ಜನರ ಜತೆಯಲ್ಲಿ ಸಂಬಂಧವಿಟ್ಟಿದ್ದಳು!' ಎಂದು ತಿಳಿಸಿದರೂ, ಅವನು ಶಾಂತಚಿತ್ತನಾಗಿರಬೇಕೆ?-- ಆಯಿತು, ನಾಳೆಗೆ ಅವನು ಗಲ್ಲಿಗೆ ಹೋಗುತ್ತಾನಲ್ಲ... ಅದಕ್ಕೆ ಅವನು ಅಷ್ಟೊಂದು ಉದಾಸೀನವೃತ್ತಿಯನ್ನು ತಳೆದಿರಬೇಕು!” ತಮ್ಮಷ್ಟಕ್ಕೆ ತಾವೇ ರಾಮನ್‌ರು ಸಮಾಧಾನ ಪಡಿಸಿಕೊಂಡರು.



ಮರುದಿನ ಮೂಡಿತು, ಕೋಲಾಲಂಪೂರದ ಸೆಂಟ್ರಲ್ ಜೈಲಿನಲ್ಲಿ ಮೇಜರ್ ಓಸಾಕಾನನ್ನು ಗಲ್ಲಿಗೇರಿಸುವ ದಿನವದು. ಎಲ್ಲ ಅಧಿಕಾರಿಗಳೂ ಅಲ್ಲಿ ಹಾಜರ್ ಇದ್ದರು. ರಾಮನ್‌‌ರೂ ಅಲ್ಲಿ ಉಪಸ್ಥಿತರಿದ್ದರು. ನಡೆದ ಸಂಸ್ಕಾರಗಳಿಗೆಲ್ಲ ಹಾಜರ್ ಇರುವುದು ಅವರ ಕರ್ತವ್ಯವೇ ಆಗಿತ್ತು. ಮುಂಜಾನೆ ೮-೩೦ ಕ್ಕೆ ಗಲ್ಲು ಎಂದರೆ ೮ ಘಂಟಿಗೆ ಮೇಜರ್ ಓಸಾಕಾನನ್ನು ಗಲ್ಲಿನ ಸ್ಥಳಕ್ಕೆ ತರಲಾಯಿತು. ಪದ್ಧತಿಯ ಪ್ರಕಾರ ರಾಮನ್ ನಾಯರರು ಮೇಜರ್ ಓಸಾಕಾನನ್ನು ಕೇಳಿದರು:

"ನಿಮ್ಮ ಕೊನೆಯ ಇಚ್ಛೆಯನ್ನು ಹೇಳಬಯಸುವಿರಾ?"

"ಹೇಳ ಬಯಸುತ್ತೇನೆ; ಆದರೆ ನೀವು ಅದನ್ನು ನಡೆಯಿಸಗೊಡಲಾರಿರಿ!"

"ಹೇಳಿ ನೋಡಿ! ಸಾಧ್ಯವಾಗುವಂತಿದ್ದರೆ, ಕಾಯಿದೆ ಅನುಕೂಲವಾಗಿದ್ದರೆ, ನಿಮ್ಮಿಚ್ಛೆಯನ್ನು ನಡೆಸುತ್ತೇವೆ. ಶಿಕ್ಷೆಯನ್ನು ರದ್ದು ಮಾಡಿ——ಎಂದು ಮಾತ್ರ ಕೇಳಬೇಡಿ!"

"ಹಾಗೆ ಹೇಳಬೇಡಿ, ನಾನು ನಿಷ್ಪೋನ್ ದೇಶದವ; ಕೊಟ್ಟ ಶಿಕ್ಷೆಯನ್ನು ನಗುಮುಖದಿಂದ ಸ್ವಾಗತಿಸುತ್ತೇನೆ!"

"ಹಾಗಾದರೆ ಮತ್ತೇನು? ಹೇಳಿ ತ್ವರೆಮಾಡಿ!"

"ಕೊನೆಯ ಸಲ, ನನ್ನ ಮುದ್ದು ಹೆಂಡತಿಯನ್ನು ನೋಡಬಯಸುತ್ತೇನೆ. ಒಂದು ಸಲ ಅವಳ ಮೈಮೇಲೆ ಕೈಯಾಡಿಸಲು ನನಗೆ ಐದು ನಿಮಿಷ ಅವಕಾಶ ಕೊಡಿರಿ!"

ಮೇಜರ್ ಓಸಾಕಾನ ಕೊನೆಯ ಇಚ್ಛೆಯನ್ನು ಕೇಳಿ, ರಾಮನರಿಗೆ ಮೂರ್ಛೆಯೇ ಬಂದಂತಾಯಿತು. ಮೂರು ನಾಲ್ಕು ಜನರ ಜತೆಯಲ್ಲಿ ಸಂಬಂಧವಿಟ್ಟ ಹೆಂಡತಿಯ ಮೇಲೆ ಇಷ್ಟೊಂದು ಪ್ರೇಮವೇ? ಓಸಾಕಾನ ರೀತಿ ಅವರಿಗೆ ವಿಚಿತ್ರವಾಗಿ ಕಾಣಿಸಿತು. ಆದರೂ ಕೇಳಿದರು:

"ನಿನಗೆ ಹುಚ್ಚೇನಾದರೂ ಹಿಡಿದಿದೆಯೇ ?"
"ಏಕೆ ?"
"ವ್ಯಭಿಚಾರಿಣಿ ಹೆಂಡತಿಯ ಮೇಲೆ ಇಷ್ಟೊಂದು ಪ್ರೇಮವೇ?"

"ನಾನು ಅಧಿಕಾರದಲ್ಲಿದ್ದರೆ ತಮ್ಮನ್ನು--ಇರಲಿ, ಆ ಪವಿತ್ರ ಹೆಣ್ಣನ್ನು ವ್ಯಭಿಚಾರಿ ಎಂದು ಕರೆಯಬೇಡಿ! ಸಿಂಗಾಪೂರ ದ್ವೀಪ ೧೫ ದಿನಗಳಲ್ಲಿ ಕೈವಶವಾಗುವುದಕ್ಕೆ ಕಾರಣರಾದವರಲ್ಲಿ, ನನ್ನ ಹೆಂಡತಿಗೇ ಪ್ರಥಮಸ್ಥಾನ ಸಲ್ಲುತ್ತದೆ!"

"ಅದೆಲ್ಲ ನಿಜ, ಆದರೆ ಅವಳು ಬೇರೆ ಬೇರೆ ೪-೫ ಜನರ ಜತೆಯಲ್ಲಿ ಸಂಬಂಧ ಬೆಳೆಸಿದ್ದಕ್ಕಾಗಿ ನೀನೇನು ಹೇಳುತ್ತಿ?"

"ದೇಶದ ಸಲುವಾಗಿ ದುಡಿಯುವಾಗ ದೇಹದ ಪರಿವೆಯನ್ನೇ ಅವಳಿಡಲಿಲ್ಲ! ಜೀವವನ್ನೇ ತೃಣಸಮಾನ ಬಗೆದ ನಮಗೆ--ಅವಳಿಗೆ--ದೇಹದ ಬೆಲೆ ಎಷ್ಟು? ಅವಳು ಬೇರೆಯವರ ಜತೆಯಲ್ಲಿ ಸಹವಾಸ ಬೆಳಸಿದ್ದು ನಿನ್ನೆಯೇ ನನಗೆ ಗೊತ್ತಾಯಿತೆಂದು ತಾವು ಬಗೆದಿರಬಹುದು. ನನಗೆ ಅವಳಿಂದ ಆಗ ದಿನದಿನವೂ ಕಾಗದ ಬರುತ್ತಾ ಇತ್ತು. ಆಗಿನಿಂದಲೇ ನನಗೆ ಎಲ್ಲ ಸಂಗತಿಯ ಅರಿವಿದೆ. ಅವಳಿಗೆ ಅಷ್ಟೊಂದು ಪ್ರೀತಿ ಆ ಸಹವಾಸ ಬೆಳಿಸಿದವರ ಮೇಲಿದ್ದರೆ, ಆ ಬ್ರಿಟಿಶ್ ಆಫೀಸರನಿಂದ ಹುಟ್ಟಿದ ಕೂಸನ್ನು ನಾಯಿಯ ಗರ್ಭವೆಂದು ಅವಳು ಸ್ವಂತ ಕೈಯಿಂದ ಕೊಲ್ಲುತ್ತಿರಲಿಲ್ಲ!”

ಮೇಜರ್ ರಾಮನ್ ನಾಯರ್ ಬೆಪ್ಪರಾಗಿ ಬಿಟ್ಟರು. ಅವರ ಕಣ್ಣೆದುರಲ್ಲಿ ಜಾನಕಿಯ ಮೂರ್ತಿ ಬಂದು ನಿಂತು, ತಮಗೆ ಛೀ ಹಾಕುತ್ತಿರುವ೦ತೆ ಭಾಸವಾಯಿತು. ಮನದೊಳಗಿನ ಅವಳ ಮೂರ್ತಿ, ಗುಡುಗಾಡಿ ಹೇಳಿದಂತೆ ಭಾಸವಾಗತೊಡಗಿತು.

"ನೋಡಿ, ಈಗಲಾದರೂ ಪಾಠ ಕಲಿಯಿರಿ. ಈ ಓಸಾಕಾನಷ್ಟು ನೀವು ಮುಂದೆ ಹೋಗಿರಿ-ಎಂದು ನಾನು ಹೇಳುವುದಿಲ್ಲ. ಬೇರೆಯವರ ಪಾಪಕ್ಕಾಗಿ ಮತ್ತೊಬ್ಬರನ್ನು ಹಳಿಯಬೇಡಿ! ತಂದೆಯ ಸಾಲಕ್ಕಾಗಿ ಪಠಾಣನೊಬ್ಬ ನನ್ನಂಥ ಅಬಲೆಯನ್ನು ಬಲಾತ್ಕರಿಸಿದ್ದು ನನ್ನ ತಪ್ಪೇ? ವಿಚಾರ ಮಾಡಿ!"

ಹೆಚ್ಚು ಹೊತ್ತು ಸ್ವಪ್ನ ಸಮಾಧಿಯಲ್ಲಿರಲು ರಾಮನ್ ನಾಯರಿಗೆ ವೇಳೆ ಇರಲಿಲ್ಲ. ಸ್ಥಿತಪ್ರಜ್ಞರಂತೆ ಮೇಜರ್ ಓಸಾಕಾನ ಇಚ್ಛೆಯನ್ನು ತಮ್ಮ ಸಹೋದ್ಯೋಗಿಗಳ ಜತೆಯಲ್ಲಿ ಆಲೋಚಿಸಿ, ಅವನ ಕೊನೆಯಾಶೆ ಪೂರೈಸುವದು– ಎಂದು ನಿರ್ಧರಿಸಿದರು. ಕೂಡಲೆ, ಅವರಪ್ಪಣೆಯಂತೆ ಶ್ರೀಮತಿ ಓಸಾಕಾ ಉದಾಸೀನ ಮುದ್ರೆಯಿಂದ ಆ ಸ್ಥಳಕ್ಕೆ ಬಂದಳು. ಅವಳು ಬಂದುದೇ ತಡ; ಓಸಾಕಾ ಅವಳನ್ನು ತೆಕ್ಕೆಮುಕ್ಕೆಯಾಗಿ ಅಪ್ಪಿಕೊ೦ಡ. ಇಬ್ಬರೂ ಹುಚ್ಚು ಹಿಡಿದವರಂತೆ ನಗಲು ತೊಡಗಿದರು. ಆ ನಗು ರೋದನದ ನಾಂದಿಯಾಗಿ ಪರಿಣಮಿಸಿತು. ವೇಳೆಯಾದ್ದರಿಂದ ರಾಮನ್ ಇಬ್ಬರನ್ನೂ ಬೇರ್ಪಡಿಸಹೋದರು. ಆಗ ಅವರ ಕಣ್ಣಲ್ಲಿ ಮೊದಲ ಹನಿ ಮೂಡಿತು. ಆ ಹನಿ ಮುಂದೆ ಹಳ್ಳದ ರೂಪವಾಗಿ ಹರಿಯತೊಡಗಿತು. ಓಸಾಕ, ರಾಮನ್‌‌ರ ಈ ಸ್ಥಿತಿಯನ್ನು ಗಮನಿಸಿ ಅವರಿಗೆ:

ನಿಮ್ಮ ಉಪಕಾರ ತುಂಬಾ ಆಯಿತು. ನೀವು ನನ್ನ ಸಲುವಾಗಿ ದುಃಖ ಪಡಬೇಡಿ. ನಮ್ಮಿಬ್ಬರ ಪ್ರೇಮ ನೋಡಿ ನಮ್ಮನ್ನು ಹುಚ್ಚರೆಂದು ಹಳಿಯಬೇಡಿ. ನೀವಿನ್ನೂ ಒಂದು ಶತಮಾನ ಹಿಂದಿದ್ದೀರಿ! ಇರಲಿ, ನೀವು ನಿಮ್ಮ ಕರ್ತವ್ಯ ನೆರವೇರಿಸಬಹುದು." ಎಂದು ಹೇಳಿ ಗಲ್ಲಿನ ಕಟ್ಟಿಯನ್ನೇರಿದ.



ಗಲ್ಲಿನ ಕೆಲಸ ಮುಗಿಸಿಕೊಂಡು ಹೊರಬರಲು ರಾಮನ್ ನಾಯರರಿಗೆ ಒಂದು ತಾಸು ಹಿಡಿಯಿತು. ಅದನ್ನು ಮುಗಿಸಿ ಹೊರಬಂದ ರಾಮನ್, ತಮ್ಮ ಜೀಪ್ ಕಾರನ್ನು ಏರಿದರು. ಡ್ರಾಯವ್ಹರ್ ಕೇಳಿದ:

"ಸರ್, ಹೆಡ್ ಕ್ವಾರ್ಟರಿನ ಕಡೆ ಒಯ್ಯಲಾ?"
"ಬೇಡ, 72 I.G.H. ದ ಕಡೆಗೆ ನಡೆ.”

ಡ್ರಾಯವ್ಹರ್ ೧೫ ನಿಮಿಷದಲ್ಲಿ ರಾಮನ್‌‌ರನ್ನು ಹಾಸ್ಪಿಟಲಿಗೆ ತಂದುಮುಟ್ಟಿಸಿದ. ರಾಮನ್ ಕಾರಿನಿಂದ ಇಳಿದವರೇ, ಜಾನಕಿಯ ರೂಮನ್ನು ಸೇರಿದರು. ಜಾನಕಿ ಅದೇ ತನ್ನ ನೈಟ್ ಡ್ಯೂಟಿಯನ್ನು ಮುಗಿಸಿ ಬಂದು, ಸ್ನಾನಮಾಡಿ ಮೈಯ ಬಟ್ಟೆಗಳನ್ನು ಬದಲಾಯಿಸುತ್ತಿದ್ದಳು. ಇಂತಹ ಸ್ಥಿತಿಯಲ್ಲಿ ತಾನಿದ್ದಾಗ, ರಾಮನ್‌ರು ತನ್ನ ಕೋಣೆಯಲ್ಲಿ ಬಂದುದನ್ನು ನೋಡಿ ಒಮ್ಮೆಲೇ ನಡುವಿನ ವರದೆಯನ್ನು ಸರಿಸಿದರು. ಒಂದು ನಿಮಿಷ ಸ್ತಬ್ಧತೆ ಆವರಿಸಿತ್ತು. ಜಾನಕಿ ಪತ್ತಲವನ್ನು ಸುತ್ತಿಕೊಳ್ಳುತ್ತಲೇ ಪರದೆಯ ಮರೆಯಿಂದಲೇ ಕೇಳಿದಳು:

"ಏಕೆ? ಮತ್ತೆ ಹಾಸ್ಪಿಟಲಿಗೆ ಬಂದಿರಿ? ಆರೋಗ್ಯ ಚೆನ್ನಾಗಿದೆಯಷ್ಟೇ?"

"ಆಗ ಬಂದದ್ದು ಆರೋಗ್ಯ ಸರಿಪಡಿಸಿಕೊಳ್ಳುವುದಕ್ಕೆ; ಈಗ ಬಂದು ತಲೆ ಸರಿಪಡಿಸಿಕೊಳ್ಳುವುದಕ್ಕೆ! ನನ್ನ ದೇವರ ಹತ್ತಿರ ಬಂದಿದ್ದೇನೆ!"


"ಅಂಜಬೇಡ; ಸ್ನಾನ ಮಾಡದೆ ದೇವರನ್ನು ಮುಟ್ಟುವ ಸಾಹಸ ನಾನಿನ್ನು ಮಾಡಲಾರೆ! ಸ್ನಾನ ಮಾಡುವುದಕ್ಕೇ ಬಂದಿದ್ದೇನೆ ಈಗ!"

ಜಾನಕಿ ಮುಖವನ್ನು ಮೇಲಕ್ಕೆತ್ತಿದಳು. ರಾಮನ್‌‌ರಲ್ಲಿಯ ಪಶ್ಚಾತ್ತಾಪದ ಮುದ್ರೆ, ಪರದೆಯ ಮರೆಯಿಂದ ಅವಳಿಗೆ ಕಾಣುತ್ತಿತ್ತು. ಆನಂದದಿಂದಲೇ ಈ ಕೇಳಿದಳು:

"ಮೇಜರ್ ರಾಮನ್ ರು ಈ ಮಾತನ್ನು ಆಡುತ್ತಿದ್ದಾರೆಯೇ?"

"ಮೇಜರ್ ರಾಮನ್‌ನಲ್ಲ. ಜಾನಕಿಪತಿ ರಾಮನ್ ಹೇಳುತ್ತಿದ್ದಾನೆ!" ರಾಮನ್‌ರ ಈ ಮಾತಿನ ಕೊನೆಯೊಂದಿಗೆ, ಜಾನಕಿ ಹೊರಬಂದು ರಾಮನ್‌‌ರನ್ನು ಅಂತಃಕರಣಪೂರ್ವಕವಾಗಿ ಸ್ವಾಗತಿಸಿದಳು.

ಅವರಿಬ್ಬರ ನಡುವಿನ ಪರದೆ ಆಗಲೇ ಸರಿದು ಹೋಗಿತ್ತು.