ಹೊಸ ಬೆಳಕು ಮತ್ತು ಇತರ ಕಥೆಗಳು/ವಿಜ್ಞಾನದ ವಿಷ

ವಿಕಿಸೋರ್ಸ್ದಿಂದ

ಹೊಸ ಬೆಳಕು ಮತ್ತು ಇತರ ಕಥೆಗಳು  (೧೯೫೨)  by ಶ್ರೀ ವೆ. ಮುಂ. ಜೋಶಿ
ವಿಜ್ಞಾನದ ವಿಷ

ವಿಜ್ಞಾನದ ವಿಷ

ನಗರ ಸಭಾಭವನದ ಅಟ್ಟ ಕಿಕ್ಕಿರಿದು ತುಂಬಿ ಹೋಗಿತ್ತು. ಒಳಗೂ ಹೊರಗೂ ಸ್ವಯಂಸೇವಕರ ಓಡಾಟ ನಡೆದಿತ್ತು. ಭವನದ ಹೊರಅಂಗಳದಲ್ಲಿ, ೧-೬ ಧ್ವನಿವಾಹಕ ಕರ್ಣಗಳು ಕಂಗೊಳಿಸುತ್ತಿದ್ದುವು. ಆ ಊರ ಪ್ರತಿಷ್ಠಿತ ಕಾರಖಾನೆದಾರರ ಕಾರುಗಳು, ಬದಿಯ ಆವಾರಿನಲ್ಲಿ ಸಾಲಾಗಿ ಶಿಸ್ತಿನಲ್ಲಿ ನಿಂತಿದ್ದುವು. ಈ ಎಲ್ಲ ಸಂಭ್ರಮ ಯಾವುದಕ್ಕೋಸ್ಕರ–– ಎಂಬುದು ನೋಡುವವನಿಗೆ ಒಮ್ಮೆಲೆ ತಿಳಿಯುವಂತಿತ್ತು. ಹೌದು! ಪರೀಕ್ಷೆಯ ಫಲಿತಾಂಶ ನೋಡಿ ಬಂದ ವಿದ್ಯಾರ್ಥಿಯ ಮುಖದ ಮೇಲಿನ ಕಳೆಯಿಂದ, ಅವನ ಪರಿಣಾಮವನ್ನು ಗುರುತಿಸುವುದು ಕಠಿಣವಲ್ಲ! ಹಾಗೆಯೇ, ಈ ಸಭಾಭವನದಲ್ಲಿ ನಲಿಯುತ್ತಿದ್ದ ಸಂಭ್ರಮ ಯಾರದೋ ಸ್ವಾಗತಕ್ಕಾಗಿ-ಎಂದು ಊಹಿಸುವುದು ಸುಲಭ ಸಾಧ್ಯವಾದ ಮಾತು.

ಆ ಊಹೆ ಸಂಪೂರ್ಣ ನಿಜ. ಅದೇ ಊರಿನ ಒಬ್ಬ ಮನುಷ್ಯ ಪರದೇಶಕ್ಕೆ ಹೋಗಿ, ಯ೦ತ್ರೀಕರಣ ವಿದ್ಯೆಯಲ್ಲಿ ಹೊಸ ಸಂಶೋಧನೆಯನ್ನು ಮಾಡಿ, ಆ ವರುಷದ ವಿಶೇಷ ಪ್ರಾಯಿಜ್ ಒಂದನ್ನು ಗಳಿಸಿದ್ದ. ಆ ವಿಜ್ಞಾನಿಯೆಂದರೆ ಆ ಊರ ರಾಜು. ಆ ತಾಲ್ಲೂಕಿನ ಒಂದು ಸಣ್ಣ ಹಳ್ಳಿಯ ಶಾಲಾ ಮಾಸ್ತರನ ಮಗ ರಾಜು.

ಆದರೆ ಇಂದು ಅವನು ಒಬ್ಬ ಶಾಲಾ ಮಾಸ್ತರನ ಮಗ ರಾಜು ಎಂದು ಎಣಿಸಲ್ಪಡುತ್ತಿರಲಿಲ್ಲ- ಒಬ್ಬ ಪ್ರಸಿದ್ಧ ವಿಜ್ಞಾನಿ ಎಂದು ಪ್ರಾಯಿಜ್ ಗಳಿಸಿಕೊಂಡ ಮಹಾ ವ್ಯಕ್ತಿ ಎಂದು! ಕರ್ನಾಟಕಕ್ಕೂ ಬೇರೆ ಪ್ರಾಂತಕ್ಕೂ ಒಂದು ಉಪಯುಕ್ತ ಹೊಸ ಮಶಿನ್‌ನ್ನು ಕಂಡುಹಿಡಿದ ಸಂಶೋಧಕನೆಂದು.

ಒಂದು ನಿಮಿಷದಲ್ಲಿ ೨೦೦ ಬೀಡಿಗಳನ್ನು ಕಟ್ಟುವ ಯಂತ್ರವನ್ನು ರಾಜು ಕಂಡುಹಿಡಿದಿದ್ದ ಅಬ್ಬಾ ! ಒಂದು ನಿಮಿಷದಲ್ಲಿ ೨೦೦ ಬೀಡಿಗಳನ್ನು ಕಟ್ಟುವ ಯಂತ್ರವನ್ನು ಕಂಡುಹಿಡಿಯುವುದು ಸಾಮಾನ್ಯ ವಿಷಯವೇ?

ಈ ಜಿಲ್ಲೆಯ ಎಲ್ಲ ಬೀಡಿ ಕಾರಖಾನೆಯ ಭಂಡವಲುದಾರರು ರಾಜನನ್ನ ಹಾಡಿ ಹೊಗಳಿದ್ದರು. ಉದಾರಹಸ್ತದಿಂದ ಸಹಾಯ ಮಾಡಲು ತಮ್ಮ ಇಚ್ಛೆಯನ್ನು ಪ್ರಕಟಿಸಿದ್ದರು. ರಾಜನ ಸ್ವಾಗತಕ್ಕಾಗಿ ನಡೆದ ವೆಚ್ಚವನ್ನೆಲ್ಲ ಬೀಡಿಕಾರಖಾನೆಯ ಬಂಡವಾಳದಾರರು ವಹಿಸಿದ್ದರು. ಅಂತೂ ರಾಜನನ್ನು ಸ್ವಾಗತಿಸುವುದಕ್ಕಾಗಿ ಇವರೆಲ್ಲರೂ ಆತುರರಾಗಿಬಿಟ್ಟಿದ್ದರು.

ನಗರ ಸಭಾಭವನದ ಎದುರಿನ ಮತ್ತೊಂದು ಬೀದಿಯಲ್ಲಿ ನಿಂತ ಜನತಂಡವನ್ನು ನೋಡಿದಾಗ, ಆಂಗ್ಲ ಗಾದೆಯ ಮಾತೊಂದು ನೆನಪಿಗೆ ಬರುತ್ತಿತ್ತು: "ಮಿತ್ರರನ್ನು ಗಳಿಸಿಕೊಂಡವರಿಗೆ ಕೆಲ ಶತ್ರುಗಳಿರುವುದೂ ಸ್ವಾಭಾವಿಕ" ಎಂದು ಆ ಬೀದಿಯ ತುಂಬ ಕೆಲವು ಕೂಲಿ ಜನ ಮಾತ್ರ ಕರೀಪತಾಕೆಯನ್ನು ಹಿಡಿದುಕೊಂಡು, ನಿಷೇಧಪ್ರದರ್ಶನಕ್ಕಾಗಿ ಕಾದು ಕುಳಿತಿದ್ದರು. ಅವರೆಲ್ಲ ಬೀಡಿ ಕಾರಖಾನೆಯಲ್ಲಿ ದುಡಿಯುವ ಕೂಲಿಜನ. ಬೀಡಿ ಕಟ್ಟುವ ಹೊಸ ಯಂತ್ರ ಬಂದು ೧೫ ದಿನಗಳಾದುವು. ಇವರೆಲ್ಲ ಅಂದಿನಿಂದ ನಿರುದ್ಯೋಗಿಗಳಾಗಿದ್ದರು. ಅವರೆಲ್ಲರ ಹಸಿದ ಹೊಟ್ಟೆ ಅವರ ಮುಖದ ಮೇಲೆ ಯಾವುದೊ ಒಂದು ವೈಶಾಚಿಕ ಉಗ್ರ ಕಳೆಯನ್ನು ತಂದಿರಿಸಿತ್ತು. ಅವರ ಗಂಟಲು ಮಳೆಗಾಲದಲ್ಲಿ ರಭಸದಿಂದ ಹರಿಯುವ ಹಳ್ಳದಂತೆ ಕರ್ಕಶವಾದ ಕೇಕೆ ಹಾಕುತ್ತಿದ್ದುವು.

"ಬೀಡಿ ಕಟ್ಟುವ ಯಂತ್ರವನ್ನು ಹುಡುಕಿದ ರಾಜು ಮನುಷ್ಯನಲ್ಲ-- ಪಶು, ರಾಕ್ಷಸ ! ಅವನಿಗೆ ಧಿಕ್ಕಾರ!"

ಪೋಲಿಸ ಪಡೆ ಬರುವ ಮೊದಲೇ ಅವರ ಈ ಅಬ್ಬರ ನೋಡುವ ಹಾಗಿತ್ತು. ಪೋಲೀಸರ ಎರಡು ಮೋಟರ್ ಲಾರಿಗಳು ಬಂದಾಕ್ಷಣ ಕರಿಯ ಪತಾಕೆಯ ಜನ ಬೆದರಿತು. ಈ ಯಾಂತ್ರಿಕ ಯುಗದಲ್ಲಿ ಕೇವಲ ಸಿಟ್ಟಿಗೆ ಮಹತ್ವವಿಲ್ಲ; ಕೇವಲ ಶಕ್ತಿಗೆ ಮಹತ್ವವಿಲ್ಲ; ಬಾಹು ಬಲದ ಕಾಲ ಹಿಂದೆ ಹೋಯಿತು. ಇಂದು ಯಾಂತ್ರಿಕ ಯುಗ, ಇಲ್ಲವಾದರೆ–– ?

ಇಲ್ಲವಾದರೆ ೨೫ ಪೋಲೀಸರು ೫-೬ ನೂರು ಜನರನ್ನು ಚದರಿಸುವದೆಂದರೆ? ಹೌದು. ಅವರಲ್ಲಿ ಬಂದೂಕುಗಳಿದ್ದುವು. ಅವೂ ಒಂದು ಯಾಂತ್ರಿಕ ಸಾಧನಗಳು. ಒಬ್ಬ ಮನುಷ್ಯ ಬಹಳವಾದರೆ ಇಬ್ಬರನ್ನು ತಡೆಹಿಡಿದು ನಿಲ್ಲಿಸಬಹುದು. ಆದರೆ ಯಂತ್ರ ಸಾಮರ್ಥ್ಯವಿದ್ದಾಗ-- ? ೫೦ ಜನರ ಕೆಲಸ, ಯಂತ್ರವಿದ್ದವನೊಬ್ಬ ಮಾಡಬಲ್ಲ. ಉಳಿದ ೪೯ ಜನರು--?

ಇದೇ ಬಗೆಹರಿಯದ ಸಮಸ್ಯೆಯನ್ನು ಬೀಡಿ ಕೂಲಿಕಾರರ ಕರಿಯ ಪತಾಕೆ ಚಟಪಟಿಸಿ ಜಗತ್ತಿಗೆ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಮತ್ತೆ ಕೂಲಿಕಾರರು ಕೇಕೆ ಹೊಡೆದರು:

"ರಾಜು ಮನುಷ್ಯನಲ್ಲ-ಅವನು ಪಶು, ರಾಕ್ಷಸ, ದಿಕ್ಕಾರ !"

ಆದರೆ ಈ ಕೂಗು ರಾಜುವಿನ ಕಿವಿಯನ್ನು ಮುಟ್ಟುವಂತಿರಲಿಲ್ಲ. ಕೇವಲ ಯಾಂತ್ರಿಕ ಸಾಧನವೇ ಅದನ್ನು––?

ನೀರಿನ ಪ್ರವಾಹಕ್ಕೆ ಎಷ್ಟು ಒಡ್ಡು ಕಟ್ಟಿದರೇನಾಯಿತು? ಅದು ಎಲ್ಲಿಯೋ ಸೆಲೆಯ ರೂಪವಾಗಿ ಹೊರಬರುತ್ತದೆ.

ಆ ಕೂಲಿಕಾರರ ತಂಡದಲ್ಲಿದ್ದ ಸುಬ್ಬಮ್ಮ ಸೆಲೆಯ ರೂಪವಾಗಿಯಾದರೂ ಆ ಪಡೆಯ ಗೋಡೆಯನ್ನೂ ಮುರಿದು ಒಳಹೋಗಬಯಸುತ್ತಿದ್ದಳು.

ಆದರೆ ಸಭಾಭವನದಲ್ಲಿ ಕೇವಲ ಆಮಂತ್ರಿತರಿಗಷ್ಟೆ ಪ್ರವೇಶವಿತ್ತು. ಉಳಿದವರಿಗೆ-ಯಾಂತ್ರಿಕ ಸಾಧನಗಳ ಮೂಲಕ-ರಾಜುವಿನ ಭಾಷಣವನ್ನು ಹೊರಗಿನಿಂದಲೇ ಕೇಳುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಆದರೂ ಸುಬ್ಬಮ್ಮ ಗೇಟಿನ ಬಳಿ ನಿಂತಿದ್ದ ಪೋಲಿಸ ಹವಾಲ್ದಾರನನ್ನು ಅಂಗಲಾಚಿ ಬೇಡಿಕೊಂಡಳು:

"ಅಣ್ಣಾ, ಈ ಮುದುಕಿ ಅಷ್ಟು ಒಳಗೆ ಹೋಗಿ ನೋಡಿ ಬರ್ತಾಳಪ್ಪಾ!"

ಪೋಲಿಸ ಹವಾಲ್ದಾರ ಮೊದಲು ನಕ್ಕು ಬಿಟ್ಟ. ಆದರೆ ಒಮ್ಮೆಲೆ ಸುಬ್ಬಮ್ಮನ ಗುರುತು ಹತ್ತಿತು. ಕುತೂಹಲಿಯಾಗಿ ಕೇಳಿದ: "ಅಲ್ಲ… ಸುಬ್ಬಮ್ಯಾ! ನಿನ್ನ ಮಗ ಭಾಂವಿ ಬಿದ್ದು ಸತ್ತು ನಾಲ್ಕು ದಿನಾ ಆತು ! ಈಗ ಸಭಾದಾಗಿನ ಮಂದಿನ್ನ ನೋಡ್ಲಾಕ ಬಂದೀಯಲ್ಲವ್ವಾ?"

ಮುದುಕಿ ಸುಬ್ಬಮ್ಮನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಅವಳ ಕಂಠದಿಂದ ಮಾತೇ ಹೊರಡಲಿಲ್ಲ. ಅವಳ ದುಃಖವನ್ನು ಕಂಡು ಮರುಗಿದ ಪೋಲಿಸ ಹವಾಲ್ದಾರನೇ ಮತ್ತೆ ಮಾತನಾಡಿಸಿದ:

"ಇರಲಿ ಬಿಡು, ಯಾಕ ಅಳೋದು ! ಎಲ್ಲಾ ಮಾಡಸೋ೦ವ ಪರಮಾತ್ಮ! ನಾವು, ನೀವು ಯಾರು? ಅದರ ಇಂವ ಭಾಂವಿ ಯಾಕ ಬೀಳಬೇಕಾಗಿತ್ತು? ಬೀಡಿ ಕಾರಖಾನ್ಯಾಗಿನ ನೌಕರಿ ಹೋದರ, ಮತ್ತೆಲಾ'ದರೂ ನೋಡಬೇಕಾಗಿತ್ತು? ಸಂಗಾಟಲೇ ಹೋಗಿ ಜೀವಾನs ಕೊಡಬೇಕೇನು?"

ಅವನ ಕೊನೆಯ ಮಾತು ಮುಗಿಯುವ ಮೊದಲೇ ಸುಬ್ಬಮ್ಮ ಅವನನ್ನು ಅಪ್ಪಿಕೊಂಡು ಹುಚ್ಛ ಹಿಡಿದವರಂತೆ ದೊಡ್ಡ ಧ್ವನಿ ತೆಗೆದು ಅಳತೊಡಗಿದಳು. ಕೂಡಿದ ಜನರಲ್ಲಿ ತನ್ನ ಸ್ಥಾನಮಾನಕ್ಕೆ ಕುಂದೆಲ್ಲಿ ಬರುವುದೋ ಎಂದು ಆ ಪೊಲಿಸನಿಗೆ ನಾಚಿಕೆ ತಾಗಿರಬೇಕು. ಅದರಿಂದಲೇ ಅವನು ಸುಬ್ಬಮ್ಮನನ್ನು ಹೊರಶಬ್ದಗಳಿಂದ ಸಾ೦ತ್ವನಗೊಳಿಸಿ, ಮತ್ತೆ ಕೈಯಲ್ಲಿ ಲಾಠಿಯನ್ನು ಹಿಡಿದು ಗೇಟಿನತ್ತ ನಡೆದ.

ಆಧಾರವಾಗಿ ನಿಂತ ಹವಾಲ್ದಾರ ದೂರಕ್ಕೆ ಹೋದರೂ ಸುಬ್ಬಮ್ಮನಿಗೆ ದುಃಖವೆನಿಸಲಿಲ್ಲ. ಅವಳ ಜೀವನಾಧಾರವಾಗಿದ್ದ ಮಗನೇ ನಿರುದ್ಯೋಗಿಯಾಗಿ ಭಾಂವಿ ಬಿದ್ದು ಸತ್ತುಹೋಗಿದ್ದ. ಆ ದುಃಖದ ಮುಂದೆ ಕ್ಷಣಕಾಲ ಸಂತೈಸುವವ ದೂರಹೋದ ದುಃಖ ಎಲ್ಲಿಯದು?

ಕುರುಡನು ಧರಿಸಿದ ಅಂಗಿಯ ಮೇಲೆ ಮಸಿ ಸುರುವಿ, 'ನಿನ್ನ ಅಂಗಿ ಕಪ್ಪಾಯಿತು.' ಎಂದು ಕೂಗಿದರೆ, ಕುರುಡನಿಗೆ ದುಃಖವೇ? ಕಣ್ಣಿಲ್ಲದ ದುಃಖದ ಮುಂದೆ, ಕರಿಯದು ಬಿಳಿಯದು--ಒಂದೇ ಅವನಿಗೆ.

ಮುದುಕಿ ಸುಬ್ಬಮ್ಮನೂ ಕಣ್ಣೊರಸಿಕೊಳ್ಳುತ್ತ ಗೇಟಿನ ಹತ್ತಿರ ಬಂದು ನಿಂತಳು. ಮುದುಕಿ ಎಂದು ಪೊಲಿಸರಾರೂ ಅವಳ ಗೋಜಿಗೆ ಹೋಗಲಿಲ್ಲ. ಸುಬ್ಬಮ್ಮ ಗೇಟಿಗೆ ಬಂದ ಮೂರು ನಿಮಿಷಗಳಲ್ಲಿಯೇ ಎರಡು ಮೂರು ಕಾರುಗಳು ಬಂದುವು. ಮೂರನೆಯ ಕಾರಿಗೆ ಮೇಲುಹೊದಿಕೆ ಇರಲಿಲ್ಲ. ಆ ಕಾರಿನಲ್ಲಿಯೇ ರಾಜು ವಿರಾಜಮಾನನಾಗಿದ್ದ. ರಾಜನ ಕಾರು ಗೇಟಿಗೆ ಬರುತ್ತಲೂ ನಗರಸಭೆಯ ಪ್ರತಿಷ್ಠಿತ ಜನ ಅವನಿಗೆ ಹೂವಿನ ಹಾರ ಹಾಕಿ ಕೆಳಗಿಳಿಸಿ ಅವನನ್ನು ಸಭಾಭವನದತ್ತ ಕರೆದುಕೊಂಡು ನಡೆದರು. ಆಗಲೂ ಮುದುಕಿ ಸುಬ್ಬಮ್ಮ ಗೇಟಿನ ಬಳಿಯಲ್ಲಿಯೇ ನಿಂತಿದ್ದಳು. ರಾಜ ಹಾದು ಹೋಗುವಾಗ, ಅವನನ್ನು ಸುಬ್ಬಮ್ಮ ತೀರ ಹತ್ತಿರದಿಂದ ನೋಡಿದಳು.

ನೋಡುತ್ತಿರುವಂತೆ ಅವಳಲ್ಲಿ ಮಾತೃಭಾವನೆ ಜ್ವಾಲಾಮುಖಿಯಂತೆ ಸ್ಫೋಟವಾಯಿತು. ರಾಜ ಸಭಾಭವನವನ್ನು ಸೇರಿದರ, ಮುದುಕಿ ಸುಬ್ಬಮ್ಮ ನಿಂತಲ್ಲಿಯೇ ನಿಂತು ಕಣ್ಣು ಮುಚ್ಚಿಕೊಂಡಳು. ಅವಳಿಗೆ ತನ್ನ ದುಃಖ ಎಲ್ಲಿಯೋ ಮಾಯವಾದಂತೆ ಭಾಸವಾಯಿತು. ದು:ಖದ ಎಡೆಯಲ್ಲಿ ಮೇರೆ ಮೀರಿದ ಆನಂದ, ಸಂತೋಷ ನಲಿಯತೊಡಗಿತು. ಮುಟ್ಟಿದಂತೆಯೇ ಅವಳ ಮನಸ್ಸು ಅವಳನ್ನು ಭೂತ ಕಾಲಕ್ಕೆ ಸೆಳೆದೊಯ್ದಿತು. ಸುಬ್ಬಮ್ಮ ತನ್ನ ಹಿಂದಿನ ದಿನಗಳನ್ನು ಜ್ಞಾಪಿಸಿ ವಿಚಾರಿಸತೊಡಗಿತು.

--ಆ ಹಳ್ಳಿಯಲ್ಲಿ ಒಬ್ಬ ಸಾಲೆಯ ಮಾಸ್ತರರ ಮನೆಯ ಬದಿಯಲ್ಲಿಯೇ ತಾನು ತನ್ನ ಗಂಡನೊಂದಿಗೆ ಇದ್ದಳು. ತನ್ನ ಗಂಡ ಕುಲಕರ್ಣಿಕೆಯನ್ನು ಕಳೆದುಕೊಂಡ ಕುಲಕರ್ಣಿಯಾಗಿದ್ದ. ಮಂದಿಯ ಹೊಲ ಲಾವಣಿ ಹಿಡಿದು ಮಾಡಿ ದುಡಿದು ಮನೆಯನ್ನು ನಡೆಯಿಸಿದ್ದ. ಹೀಗಾಗಿ ತಾನೂ ಬಡವಿ, ಮಾಸ್ತರರೂ ಹೇಳಿಕೊಳ್ಳುವಷ್ಟು ಸಿರಿವಂತರಲ್ಲ. ಮುಂದೆ ಆ ಮಾಸ್ತರರ ಹೆಂಡತಿಯ ಪ್ರಸೂತಿಯ ದಿನ--ಅಯ್ಯೋ, ಅದು ಅವರ ಜೀವನದಲ್ಲಿ ಬಂದ ಬಿರುಗಾಳಿ--ದೊಡ್ಡ--ಸೂಲಗಿತ್ತಿಯ ಕೆಲಸಕ್ಕೆ ತಾನೇ ನಿಂತುಕೊಂಡಿದ್ದಳು. ಆದರೆ ದುರ್ದೈವ! ಮಾಸ್ತರರ ಹೆಂಡತಿ ಸುಸೂತ್ರಳಾಗಿ ಹಡೆದಳೇನೋ ನಿಜ; ಆದರೆ ಹಡೆದ ಬೇನೆಯಿಂದ ಮೂರನೆಯ ದಿನವೇ ಮರಣಹೊಂದಿದಳು. ಅವಳಿಗಿಂತಲೂ ಒಂದು ವರುಷ ಮೊದಲು ತನ್ನ ಹೆರಿಗೆಯಾಗಿತ್ತು. ತಾನೂ ಗಂಡುಮಗನನ್ನು ಹಡೆದಿದ್ದಳು. ಆ ಮಗುವಿಗೆ ಅದೇ ವರುಷ ತುಂಬುತ್ತಿತ್ತು. ಅಂತಹ ಆಪತ್ಕಾಲದಲ್ಲಿಯೂ ತಾನು ತನ್ನ ಮಗುವನ್ನು ಬದಿಗಿರಿಸಿ ಮಾಸ್ತರನ ಮಗನಿಗೆ ತನ್ನ ಎದೆಹಾಲನ್ನು ಕುಡಿಸಿದಳು.

ತನ್ನ ಹಾಲಿನಿಂದಲೇ ಆ ಮಗು ದೊಡ್ಡದಾಯಿತು. ಮುಂದೆ ಆ ಮಗು ೧೭ ವರುಷದವನಾಗುವ ವರೆಗೂ ತಾನೇ ತಾಯಿಯಾಗಿದ್ದಳು. ಮುಂದೆ ಮಾಸ್ತರರಿಗೆ ಯಾವುದೋ ಲಾಟ್ರಿಯಲ್ಲಿ ಅಪಾರ ಹಣ ದೊರಕಿತು. ಅವರು ಹಳ್ಳಿ ಬಿಟ್ಟು ಮಗನ ಮುಂದಿನ ಶಿಕ್ಷಣಕ್ಕಾಗಿ ಮುಂಬಯಿಗೆ ಹೋದರು. ಅಂದೇ ಅವರ ತಮ್ಮ ಪರಿಚಯ ಮರೆತುಹೋಯಿತು. ಜೀವನವೂ ಒಂದು ಪ್ರವಾಹ, ಬಿರುಗಾಳಿ ಬಿಟ್ಟಾಗ ದೋಣಿಗಳು ಒಂದೆಡೆಯಲ್ಲಿ ಸೇರಿ ಒಬ್ಬರೊಬ್ಬರ ಸಹಾಯ ಬಯಸುತ್ತವೆ, ಮತ್ತೆ ಬಿರುಗಾಳಿ ನಿಂತಿತೆಂದರೆ, ಅವು ತಮ್ಮ ತಮ್ಮ ಹಾದಿ ಹಿಡಿಯುತ್ತವೆ, ಬಿರುಗಾಳಿಯಲ್ಲಿ ಬೆಳೆದ ಪರಿಚಯ ಬರೀ ಗಾಳಿಯ ಹಾಗೆ?

ಮುಂದೆ ಊರಲ್ಲಿ ದೊಡ್ಡ ಬರಗಾಲ ಬಿದ್ದಿತು. ಮೇವು ಇಲ್ಲದ್ದರಿಂದ ಜನ ಬ೦ದ ದರಕ್ಕೆ ದನಗಳನ್ನು ಮಾರಿ ಪಟ್ಟಣ ಸೇರತೊಡಗಿದರು. ತನ್ನ ಗಂಡ ಅದೇ ಕಾಲಕ್ಕೆ ಸಾಯಬೇಕೇ? ಆ ದುಃಖ ಬೇರೆ. ಆದರೆ ದುಃಖವೆಂದು ಅಳುತ್ತ ಕೂತರೆ ಎರಡು ಜೀವಗಳ ಹೊಟ್ಟೆ ತುಂಬಬೇಕಲ್ಲ! ತಾನೂ ತನ್ನ ಮಗನನ್ನು ಕರೆದುಕೊಂಡು ಧಾರವಾಡವನ್ನು ಸೇರಿದಳು. ಆದರೆ ತನ್ನ ಮಗನನ್ನು ಮೊದಲಿನಿಂದಲೂ ಹೊಲಗೆಲಸಕ್ಕೆ ಹಚ್ಚಿದ್ದರಿಂದ ಅವನನ್ನು ಸಾಲೆಗೇ ಕಳಿಸಿರಲಿಲ್ಲ. ಧಾರವಾಡದಲ್ಲಿ ಇಂಥವನಿಗೆ ಉದ್ಯೋಗ ಸಿಗಬೇಕೆಲ್ಲಿ? ಗಿರಣಿಯ ಹೊರತು ಗತಿ ಇರಲಿಲ್ಲ. ಆದರೆ ಧಾರವಾಡದಲ್ಲಿ ಗಿರಣಿಗಳೂ ಇರಲಿಲ್ಲ. ಹೀಗಾಗಿ ಕಡೆಗೆ ತನ್ನ ಜಾತಿಯವರು ಮಾಡದ ಉದ್ಯೋಗಕ್ಕೆ ಮಗ ಕೈ ಹಾಕಿದ. ಅದೇ, ಬೀಡಿ ಕಾರಖಾನೆಯಲ್ಲಿ ಬೀಡಿ ಕಟ್ಟುವ ನೌಕರಿಯನ್ನು ಸಂಪಾದಿಸಿದ. ಬೀಡಿ ಕಟ್ಟುವುದರಲ್ಲಿ ಆತ ನಿಪುಣನಾದ. ದಿನಕ್ಕೆ ೨ ಸಾವಿರ ಬೀಡಿ ಕಟ್ಟುವಷ್ಟು ಅವನು ತರಬೇತು ಹೊಂದಿದ. ಅವನ ಸಂಪಾದನೆಯಲ್ಲಿ ತಮ್ಮಿಬ್ಬರ ಹೊಟ್ಟೆ ತುಂಬುತ್ತಿತ್ತು. ಆದರೆ ಬೀಡಿ ಕಟ್ಟುವ ಯಂತ್ರ ಬಂದಂದಿನಿಂದ ಅವನು ನಿರುದ್ಯೋಗಿಯಾದ, ಎಲ್ಲಿಯೂ ಗತಿಗಾಣದವನಾದ. ತನ್ನೊಬ್ಬನದೇ ಅಲ್ಲ; ಅದರ ಜತೆಯಲ್ಲಿ ತನ್ನ ತಾಯಿಯ ಹಸಿದ ಹೊಟ್ಟೆಯೂ ಅವನಿಗೆ ಭೂತಾಕಾರವಾಗಿ ಕಂಡಿರಬೇಕು--ಕಡೆಗೆ ಬಳಲಿ ಬೆಂಡಾಗಿ ಬಾಂವಿಯಲ್ಲಿ ಬಿದ್ದ--ಅಯ್ಯೋ ಮಶಿನ್ನು; ಅದನ್ನು ಹುಡುಕಿದ ಪಶು, ರಾಕ್ಷಸ ಅವನಿಗೆ ಧಿಕ್ಕಾರ! ಹಾಲಿಗಾಗಿ ಮೊಲೆ ಕೊಟ್ಟರೆ ರಕ್ತ ಹೀರಬೇಕೇ?–

ಮುದುಕಿ ಸುಬ್ಬಮ್ಮ ಕಣ್ಣು ತೆರೆದಳು. ಅವಳ ಕಣ್ಣೆದುರಿನಲ್ಲಿ ರಾಜನಂಥ ಅಸಂಖ್ಯ ರಾಕ್ಷಸರು ಅವಳನ್ನು ಹಿಡಿಯಲು ಬಂದಂತೆ ಭಾಸವಾಯಿತು. ಒಮ್ಮೆಲೆ ಹೌಹಾರಿದವಳಂತೇ ಚೀರಿಬಿಟ್ಟಳು.

"ಪಶು-ರಾಕ್ಷಸ–ಧಿಕ್ಕಾರ!....

ಮದುಕಿಯ ಚೀತ್ಕಾರ ದೂರ ನಿಂತಿದ್ದ, ಕೂಲಿಕಾರರ ತಂಡವನ್ನು ಕೆರಳಿಸಿತು. ಮತ್ತೆ ಅದೇ ಘೋಷಣೆ ಕೇಳಿಸಿತು.

"ಪಶು ರಾಕ್ಷಸ- ಧಿಕ್ಕಾರ”

ಪೋಲಿಸರ ಪಡೆ ಆ ತಂಡದತ್ತ ಧಾವಿಸಿತು. ಕ್ಷಣಮಾತ್ರದಲ್ಲಿ ಮತ್ತೆ ಶಾಂತತೆ ನೆಲಸಿತು. ಯಾಂತ್ರಿಕ ಸಾಧನದ ಬಲದ ಮೇಲೆಯೇ ಆ ಶಾಂತಿ ನೆಲಸಿತ್ತು. ಆದರೆ ಅದು ಸ್ಮಶಾನ ಶಾಂತಿಯಾಗಿ ಕಾಣುತ್ತಿತ್ತು. ಪೋಲಿಸ ಹವಾಲ್ದಾರ ಮುದುಕಿಯ ಹತ್ತಿರ ಬಂದು ಅವಳನ್ನು ಎಚ್ಚರಿಸಿದ:

"ಏ ಮುದಕೀ ಎತ್ತಾಗ ನೋಡತಿ? ಆ ಕೊಳವಿ ಕಡೆ ನೋಡು, ಒಳಗ ಮಾತಾಡಿದ್ದು ಇಲ್ಲಿ ಕೇಳಸ್ತೈತಿ!"

ಸುಬ್ಬಮ್ಮ ನಿರ್ಜಿವ ಯಂತ್ರದಂತೆ ತನ್ನ ಕಿವಿಗಳನ್ನು ಧ್ವನಿವಾಹಕ ಕರ್ಣಗಳತ್ತ ಹೊರಳಿಸಿದಳು.

ರಾಜನ ಭಾಷಣ ಅಲ್ಲಿ ಕೇಳುತ್ತಿತ್ತು : "ನಾನು ಈಗ ದೊಡ್ಡ ವಿಜ್ಞಾನಿಯಾಗಿ ಬಂದಿಲ್ಲ, ದೊಡ್ಡ ಸಂಶೋಧಕನಾಗಿ ಬಂದಿಲ್ಲ; ನಿಮ್ಮ ಊರವನಾಗಿ ಬಂದಿದ್ದೇನೆ. ನಿಮ್ಮವನಾಗಿ ಬಂದಿದ್ದೇನೆ. ನಮ್ಮ ಪ್ರಾಂತದವರು ಪರರಿಗೆ ಉಪಕಾರ ಮಾಡುವುದರಲ್ಲಿ ಹೆಸರಾಗಿದ್ದಾರೆ. ಈಗ ನಾನು ಹೊಸಯಂತ್ರದ ರಚನೆಯನ್ನು ಕಂಡು ಹಿಡಿದು ಪರರಿಗೆ ಉಪಕಾರ ಮಾಡಿದ್ದೇನೆ. ನಾನು ಕೂಡ ಇಂಥದೇ ಉಪಕಾರದ ಮೇಲೆ ಬೆಳೆದು ಇಂದು ಈ ಉನ್ನತ ಪದವಿಗೇರಿದ್ದೇನೆ. ನಾನು ನನ್ನ ಆತ್ಮವೃತ್ತ ಹೇಳುತ್ತ ಕೂಡ್ರುವದಿಲ್ಲ, ಆದರೂ ನನ್ನ ಜೀವನದಲ್ಲಿ ನಡೆದ ಒಂದು ಭಾಗ ಹೇಳಲೇಬೇಕು. --ನಾನು ಹುಟ್ಟಿ ಮೂರು ದಿನಗಳಲ್ಲಿಯೇ ನನ್ನ ತಾಯಿಯನ್ನು ಕಳೆದುಕೊಂಡೆ. ಆಗ ನೆರೆಮನೆಯ ಹೆಣ್ಣು ಮಗಳೊಬ್ಬಳು--ಅವಳ ಹೆಸರು ಸುಬ್ಬಮ್ಮ--ತನ್ನ ಒಂದು ವರುಷದ ಮಗುವನ್ನು ಬದಿಗಿರಿಸಿ ಆ ಮಗುವಿಗೆ ಅರೆಹೊಟ್ಟೆಯುಣಿಸಿ, ನನಗೆ ತನ್ನ ಎದೆ ಹಾಲುಣಿಸಿ ಬೆಳಸಿದಳು.–– "

ಸುಬ್ಬಮ್ಮನ ಕಣ್ಣುಗಳಲ್ಲಿ ನೀರು ಧಾರಾಳವಾಗಿ ಹರಿಯತೊಡಗಿತು. ಅವಳ ಸತ್ತ ಮಗುವಿನ ಭೂತ ಅವಳ ಎದುರು ನಿಂತು ಕೂಗಾಡತೊಡಗಿದಂತೆ ಭಾಸವಾಯಿತು. ಆ ಭೂತ ಕೂಗಿ ಕಿರುಚಿ ಹೇಳುತ್ತಿತ್ತು: "ಅವ್ವಾ, ನೀನು ಸ್ವಂತ ಮಗನಿಗೆ ಹಾಲುಣಿಸಲಿಲ್ಲ. ಒಂದು ಹಾವಿಗೆ ಹಾಲು ಹಾಕಿದಿ ! ಹಲ್ಲು ಕೀಳಿಸುವ ಸಾಮರ್ಥ್ಯವು ಇದ್ದರಷ್ಟೇ ಹಾವಿಗೆ ಹಾಲೆರೆಯಬೇಕು? ನೀನು ಬಡವಿ, ಪರೋಪಕಾರ ಮಾಡಲು ಹೊರಟೆ! ನೀನು ಕುಡಿಸಿದ ಹಾಲಿನಿಂದ ಪುಷ್ಟಗೊಂಡ ಘಟಸರ್ಪ ನನ್ನನ್ನು ಕಚ್ಚಿತು! ಇನ್ನು ನಿನ್ನನ್ನೂ ಕಚ್ಚುತ್ತದೆ. ಎಚ್ಚರ! ಸೇಡು! ಸೇಡು!! ನೀನು ಈಗ ಸೇಡು ತೀರಿಸಿಕೂಂಡರೆ ನನಗೆ ಸಮಾಧಾನ!"

ಸುಬ್ಬಮ್ಮನ ಕಣ್ಣುಗಳು ಇದ್ದುದಿದ್ದಂತೆಯೇ ಕೆಂಪಾದುವು. ಕ್ಷಣ ಕಾಲ ಅವಳ ಮುಖದ ಮೇಲಿಂದ ಪೈಶಾಚಿಕ ನಗುವೊಂದು ಮಿನುಗಿ ಮಾಯವಾತು. ಆ ನಿರಾಶೆಯ ನಗುವಿನಲ್ಲಿಯೇ "ಸೇಡು" ಎಂದುಸುರಿದಳು. ಆಗ ಮುದುಕಿಯ ಮುದುಡಿಯಾದ ಮುಖದಲ್ಲಿಯೂ ಉಗ್ರ ಕಳೆ ಕುಣಿದಾಡತೊಡಗಿತು. ಒಮ್ಮೆ ಎದೆಯ ಮೇಲೆ ಸೆರಗಿನ ಒಳಗೆ ಕೈಯಾಡಿಸಿ, ಸಮಾಧಾನದ ಒಂದು ದೀರ್ಘಶ್ವಾಸವನ್ನು ಬಿಟ್ಟಳು. "--ಆ ಸುಬ್ಬಮ್ಮ–-" ಲಾವುಡ್ ಸ್ಪೀಕರಿನಲ್ಲಿ ಕೇಳುತ್ತಿದ್ದ ರಾಜನ ಭಾಷಣ ಸುಬ್ಬಮ್ಮನನ್ನು ಎಚ್ಚರಿಸಿತು. ಸುಬ್ಬಮ್ಮ ಮತ್ತೆ ಧ್ವನಿವಾಹಕ ಕರ್ಣದತ್ತ ಕಿವಿಯನ್ನು ಹೊರಳಿಸಿದಳು. ರಾಜನ ಭಾಷಣ ನಡೆದೇ ಇತ್ತು.

"--ಆ ಸುಬ್ಬಮ್ಮ ನನ್ನನ್ನು ಈಗ ಮರೆತಿರಬಹುದು. ಆದರೆ ನಾನು ಅವಳನ್ನು ಮರೆಯುವುದು ಅಸಾಧ್ಯ. ಸ್ವಂತದ ಹಿತದ ಕಡೆಗೆ ಹೆಚ್ಚ ಲಕ್ಷಕೊಡದೆ ಪರೋಪಕಾರ ಧರ್ಮವನ್ನು ಪರಿಪಾಲಿಸಿದ ಸಾಧ್ವಿಯನ್ನು ಮರೆಯುವದೆಂತು ಸಾಧ್ಯ? ಅವಳನ್ನು ಈಗ ಯಾರಾದರೂ ಕರೆದು ತಂದರೆ, ನಾನು ಅವಳ ಕಾಲಿಗೆ ಬಿದ್ದು, ಧನ್ಯನಾಗುವೆ...."

ಸುಬ್ಬಮ್ಮನ ಹತ್ತಿರವೇ ನಿಂತಿದ್ದ ಪೋಲೀಸ ಹವಾಲ್ದಾರ, ರಾಜನ ಭಾಷಣ ಕೇಳುತ್ತಿರುವಂತೆ ಸ್ಪಂಭೀಭೂತನಾದ, "ಈ ಮುದುಕಿಯನ್ನೇ ಇವರು ಹೊಗಳುತ್ತಿದ್ದಾರಲ್ಲ--ಇವಳನ್ನೇ ಒಯ್ದು ಅವರ ಮುಂದೆ ನಿಲ್ಲಿಸಿದರೆ ತನ್ನ ಶೀಘ್ರ ಕರ್ತವ್ಯಕ್ಕೆ ಅಧಿಕಾರಿಗಳು ಮೆಚ್ಚಿಯಾರು!" ಎಂದು ತನ್ನಷ್ಟಕ್ಕೆ ವಿಚಾರಿಸಿ, ಆ ಮುದುಕಿಯ ಬಳಿ ಸಾರಿ ಮೃದುವಾಗಿ ಮಾತಾಡಿದ;

"ಸುಬ್ಬಮ್ಮಾ, ನೋಡು, ಸಾಹೇಬರು ಏನು ಮಾತಾಡಿದರು ಕೇಳಿದ್ಯಾ?"

"ಕೇಳಿದ್ನೆಪಾ!" ನಿರ್ವಿಕಾರಳಾಗಿ ಮುದುಕಿ ಉತ್ತರಿಸಿದಳು.

"ನೀನs ಏನು ಸುಬ್ಬಮ್ಮಾ, ಸಾಹೇಬರನ್ನ ಸಣ್ಣಾಕಿರ್ತಾ ಸಾಕಿದಾಕಿ?"

"ಹೌದಪಾ!"

ಉತ್ತರವನ್ನು ಕೇಳಿದ ಪೋಲಿಸ ಹವಾಲ್ದಾರನ ಆನಂದಕ್ಕೆ ಮೇರೆಯೇ ಉಳಿಯಲಿಲ್ಲ. ಮತ್ತೆ ಕೇಳಿದ:

"ನಡೀ ಸುಬ್ಬಮ್ಮಾ, ಒಳಗ ನಡಿ| ಅವರ ದರ್ಶನ ಮಾಡಿಸು ಅಂತ ಕೇಳತಿದ್ದೆಲ್ಲ. ಮಾಡಿಸ್ತೀನಿ ನಡಿ!"

ಸುಬ್ಬಮ್ಮನಿಗೆ ಅದು ಬೇಕಾಗಿರಲಿಲ್ಲ. ಆದರೆ ಮರುಕ್ಷಣದಲ್ಲಿಯೇ ಮಗನ ಭೂತ “ಸೇಡು” ಎಂದು ಹೇಳಿದಂತೆ ಭಾಸವಾಯಿತು. ಸುಬ್ಬಮ್ಮ ಮತ್ತೆ ಎದೆಯ ಮೇಲಣ ಸೆರಗಿನ ಒಳಗೆ ಕೈಯಾಡಿಸಿ ನಿನ್ನ ಉಪಕಾರ ಭಾಳ ಆತಪಾ!” ಎಂದು ಪೋಲಿಸ ಹವಾಲ್ದಾರನ ಸಂಗಡ ಒಳಗೆ ನಡೆದಳು.

ಸಭಾಭವನದಲ್ಲಿ ಕಾಲಿಟ್ಟೊಡನೆಯ ಮುದುಕಿ ಸ್ಥಂಭಿತಳಾದಳು. ಸೂಟು-ಬೂಟಿನಲ್ಲಿ ಕುಳಿತ ಸಭಿಕರು ತಿರಸ್ಕೃತ ದೃಷ್ಟಿಯಿಂದ ಮುದುಕಿಯನ್ನು ದೃಷ್ಟಿಸತೊಡಗಿದರು. ಅದೇ ಆಗ ರಾಜನ ಭಾಷಣ ಮುಗಿದಿತ್ತು. ಅಧ್ಯಕ್ಷರು ಹೂವಿನ ಹಾರ ಹಾಕುವವರಿದ್ದರು. ಅಷ್ಟರಲ್ಲಿ ಪೋಲಿಸ ಹವಾಲ್ದಾರ ಕೂಗಿ ಹೇಳಿದೆ:

""ಸಾಹೇಬರs, ಸುಬ್ಬಮ್ಮ ಬಂದಾಳರೀ… ನೀವು ಇದೇ ಈಗ ಕರೆದುಕೊಂಡು ಬಂದರ--ಅಂತ ಹೇಳಿದ್ದಿರಿ. ಅದಕ್ಕೆ ಕರಕೊಂಡು ಬಂದೀನರಿ"

ಸಭಿಕರೆಲ್ಲರೂ ಗಹಿಗಹಿಸಿ ನಕ್ಕರು. ಸುಬ್ಬಮ್ಮನ ಕಂಗಾಲ ಸ್ಥಿತಿಗೆ ಆ ನಗು ಇಮ್ಮಡಿ ಮುಮ್ಮಡಿಯಾಗುತ್ತಿತ್ತು, ಸುಬ್ಬಮ್ಮನ ಮೈಮೇಲಿನ ವಸ್ತ್ರಗಳು ದರಿದ್ರತೆಯ ಪತಾಕಗಳಂತೆ ಗಾಳಿಗೆ ಹಾರಾಡುತ್ತಿದ್ದುವು. ಅಧ್ಯಕ್ಷರು ಮೂಗು ಮುರಿದರು. ಸಭಿಕರೆಲ್ಲರೂ ಮತ್ತೊಮ್ಮೆ ತಿರಸ್ಕಾರ ಮಿಶ್ರಿತ ನಗೆಯನ್ನು ನಕ್ಕರು. ಆ ನಗೆ ಸಭಾಭವನದ ತುಂಬ ಪ್ರತಿಧ್ವನಿಸಿತು.

ಆ ಅಟ್ಟಹಾಸದ ನಗು ಸುಬ್ಬಮ್ಮನಿಗೆ ತನ್ನ ಹೃದಯವನ್ನು ಇರಿದು ಹೋದಂತೆ ಭಾಸವಾಯಿತು. ಒಂದುಸಲ ತೀಕ್ಷ್ಣದೃಷ್ಟಿಯಿಂದ ರಾಜುವನ್ನು ನೋಡಿದಳು.

ರಾಜ ಏಳಬಯಸುತ್ತಿದ್ದರೂ, ಜನತೆಯ ನಗು ಅವನನ್ನು ಹಿಂದಕ್ಕೆ ಎಳೆಯತು. ತಮ್ಮಿಬ್ಬರಲ್ಲಿಯ ಅ೦ತರವನ್ನು ಅವನ ಮನಸ್ಸು ಅಳೆಯತೊಡಗಿತ್ತು

ರಾಜುವಿನ ಹೇಡಿತನ ಸುಬ್ಬಮ್ಮನ ಲಕ್ಷಕ್ಕೆ ಬಾರದೆ ಹೋಗಲಿಲ್ಲ. ಯಾವುದೋ ಒಂದು ಪಾಶವೀಧೈರ್ಯ ಅವಳಲ್ಲಿ ಸಂಚಾರವಾಯಿತು. ಕರ್ಕಶನಗುವಿನ ಮಧ್ಯದಲ್ಲಿಯೇ, ೪-೫ ಹೆಜ್ಜೆ ಸಭಾಸ್ಥಾನದಲ್ಲಿ ಮುಂದೆ ಸರಿದಳು. ಅವಳಿಗೆ ತಿಳಿಯದ ಹಾಗೆ ಅವಳ ಕೈ ಎದೆಯ ಮೇಲಣ ಸೆರಗಿನವರೆಗೆ ಹೋಯಿತು. ಅಲ್ಲಿಂದ ಅವಳ ಕೈಗೆ ಬಂದುದು ಗೇಣುದ್ದದ ಚೂರಿ.

ಇದ್ದಕ್ಕಿದ್ದಂತೆಯೇ ಸಭೆಯಲ್ಲಿ ಶಾಂತತೆ ವ್ಯಾಪಿಸಿತು ಸುಬ್ಬಮ್ಮ ಒಮ್ಮೆಲೇ ಚೀರಿದಳು :

"ಹಾವಿಗೆ ಹಾಲುಣಿಸಿದೆ! ನೀನು ಯಂತ್ರವನ್ನು ಹುಡುಕಿ ನನ್ನ ಮಗನನ್ನು ಕೊಂದೆ! ನಾನು ನಿನಗೆ ಹಾಲಿಗಾಗಿ ಮೊಲೆ ಕೊಟ್ಟರೆ, ನೀನು ನನ್ನ ರಕ್ತಹೀರಿದೆ! ಹಿಡೀ, ನಾನೂ ಸೇಡು ತೀರಿಸಿಕೊಳ್ಳುತ್ತೇನೆ!" ಆ ವಾಕ್ಯ ಮುಗಿಯುವ ಮೊದಲೇ ಕೈಯಲ್ಲಿಯ ಚೂರಿಯನ್ನು ರಾಜನತ್ತ ಸುಬ್ಬಮ್ಮ ಬೀಸಾಡಿದಳು. ಹೇಳಿ ಕೇಳಿ ಅವಳು ಮುದುಕಿ; ಗುರಿತಪ್ಪಿತು ರಾಜ ಕುಳಿತ ಖುರ್ಚಿಯ ಮೇಲ್ಬಾಗಕ್ಕೆ ಅದು ಬಡಿದಿತ್ತು.

ಸಭೆಯಲ್ಲಿ ಒಂದೇ ಕೋಲಾಹಲವೆದ್ದಿತು. ಸುಬ್ಬಮ್ಮನನ್ನ ಕರೆದು ತಂದ ಪೋಲೀಸ ಹವಾಲ್ದಾರನೇ ಅವಳನ್ನು ಬಂಧಿಸಿ, ಅವಳ ಕೈಗೆ ಬೇಡಿತೊಡಿಸಿ, ಅವಳನ್ನು ಹೊರಗೆ ಕರೆದುಕೊಂಡು ನಡೆದ. ಸುಬ್ಬಮ್ಮ ಮತ್ತೆ ಚೀರಿದಳು.

"ಪಶು- ರಾಕ್ಷಸ, ಧಿಕ್ಕಾರ ! ” ಸುಬ್ಬಮ್ಮನನ್ನು ಸಭಾಭವನದಿಂದ ಹೊರಗೆ ಕರೆದೊಯ್ದ ಬಳಿಕ, ಸಭೆಯಲ್ಲಿಯ ಕೋಲಾಹಲ ಮಾಯವಾಯಿತು, ಆದರೆ ರಾಜ ದಂಗುಬಡೆದವನಂತೆ ಕುಳಿತುಬಿಟ್ಟಿದ್ದ. ರಾಜ ಅಪಾಯದಿಂದ ಪಾರಾದ ಬಗ್ಗೆ ಜನ ಅವನಿಗೆ ಅಭಿನಂದನೆಗಳನ್ನು ಅರ್ಪಿಸುತ್ತಿದ್ದರು. ಆದರೆ ರಾಜನ ಕಿವಿ... ? ತನ್ನ ಕಣ್ಣೆದುರಿನಲ್ಲಿ ಸುಬ್ಬಮ್ಮನಂತಹ ಸಹಸ್ರಾರು ಮುದುಕಿಯರು ತನ್ನತ್ತ ಕೈ ಮಾಡಿ ಅತ್ತು ಕರೆಯುತ್ತಿರುವಂತೆ ರಾಜನಿಗೆ ಭಾಸವಾಗ ತೊಡಗಿತು. ರಾಜುವಿನ ಹೃದಯದಲ್ಲಿಯ ಹೊಯ್ದಾಟ ಆ ಸಹಸ್ರಾರು ಮುದುಕಿಯರ ಭೀಕರ ಕೂಗಿಗೆ ಹೆಚ್ಚಾಯಿತು. ಅದೇ ಹುಚ್ಚಿನಲ್ಲಿ ರಾಜ ತನ್ನ ಖುರ್ಚಿಯನ್ನು ಬಿಟ್ಟೆದ್ದ. ಜನ ಅವನನ್ನೇ ದಿಟ್ಟಿಸತೊಡಗಿದರು. ರಾಜನ ಕಣ್ಣೆದುರಿನಲ್ಲಿ ಮತ್ತೆ ನಿರುದ್ಯೋಗಿ ಪುತ್ರರನ್ನು ಕಳೆದುಕೊಂಡ ಮುದುಕ ಮಾತೆಯರ ಭೀಕರ ತಂಡ ಕಾಣಿಸಿದಂತೆ ಭಾಸವಾಯಿತು. ಆಗ ಪೂರ್ಣ ಎಚ್ಚರದಪ್ಪಿದ ರಾಜ, ಟೇಬಲ್ಲಿನ ಮೇಲಿರಿಸಿದ ಯಂತ್ರದ ಮಾದರಿಯನ್ನು ತನ್ನ ಎಡಗಾಲ ಬೂಟಿನಿಂದ ಒದೆದು ಬಿಟ್ಟ. ಯಂತ್ರ ಮುರಿದು ತುಂಡುತುಂಡಾಗಿ ಬಿದ್ದಿತು. ಕೂಡಿದ ಜನ ದಿಗ್ಗಾಂತರಾದರು. ಆ ಮಶಿನ್ನಿನ ಬಿದ್ದ ತುಂಡುಗಳು ಗಹಗಹಿಸಿ ನಕ್ಕು, ತನ್ನನ್ನು ಅಣಕಿಸುವಂತೆ ಭಾಸವಾಯಿತು.

"ಪಶು, ರಾಕ್ಷಸ– ಧಿಕ್ಕಾರ!" ಬಿದ್ದ ತುಂಡುಗಳ ಸಪ್ಪಳದಲ್ಲಿ ಈ ಶಬ್ದಗಳು ರಾಜನ ಕಿವಿಗೆ ಕೇಳಿಸುತ್ತಿದ್ದುವು.