ಹೊಸ ಬೆಳಕು ಮತ್ತು ಇತರ ಕಥೆಗಳು/ಹೊಗೆಯಿಂದ ಹೊರಗೆ

ವಿಕಿಸೋರ್ಸ್ದಿಂದ

ಹೊಸ ಬೆಳಕು ಮತ್ತು ಇತರ ಕಥೆಗಳು  (೧೯೫೨)  by ಶ್ರೀ ವೆ. ಮುಂ. ಜೋಶಿ
ಹೊಗೆಯಿಂದ ಹೊರಗೆ

ಹೊಗೆಯಿಂದ ಹೊರಗೆ.

ದಿಲ್ಲಿ ರೆಫ್ಯೂಜಿ (ನಿರ್ವಾಸಿತ) ಕ್ಯಾಂಪಿನಲ್ಲಿ ಜಸವಂತಸಿಂಗ, ತೋಟ ಒಂದರಲ್ಲಿ ಗಿಡಬಳ್ಳಿಗಳಿಗೆ ನೀರನ್ನು ಹಣಿಸತೊಡಗಿದ್ದ. ಅಂದೇ ದಿಲ್ಲಿಯ ಆಲ್ ಇಂಡಿಯಾ ರೇಡಿಯೋದ ಅಸಿಸ್ಟಂಟ ಸ್ಟೇಶನ ಡಾಯರೆಕ್ಟರರು ಆ ಕ್ಯಾಂಪಿಗೆ ಸಂದರ್‍ಶನವೀಯುವವರಿದ್ದರು. ಸರದಾರ ದಯಾಲಸಿಂಗ, ಕ್ಯಾಂಪಿನ ಮ್ಯಾನೇಜರರು ಎಲ್ಲ ನಿರ್ವಾಸಿತರನ್ನು ಕರೆದು ಸಭೆ ಕೂಡಿಸಿ ಅವರಿಗೆ ಅಚ್ಚ ಕಟ್ಟಾಗಿಯೂ ಓರಣವಾಗಿಯೂ ಇರಲು ತಿಳಿಸಿದ. ಒಬ್ಬ ರಿಫ್ಯೂಜಿ ಕೇಳಿದ:

"ಏನು ಸರದಾರರೇ, ಮನೆ ಮಠಗಳನ್ನೇ ತೊರೆದು ಬೀದಿ ಬೀದಿ ಅಲೆಯುವ ನಮ್ಮಂಥವರು, ಎಷ್ಟು ಅಚ್ಚುಕಟ್ಟಾಗಿ ಇದ್ದರೇನು ಬಿಟ್ಟರೇನು?" ಅದಕ್ಕೆ ದಯಾಲಸಿಂಗ ಕಳಕಳಿಯಿಂದ ಉತ್ತರಿಸಿದರು.

"ನೋಡು, ನೀವು ದುಃಖಿಗಳಿರೋದು ನಿಜ. ಅಚ್ಚುಕಟ್ಟಾಗಿರೋದಕ್ಕೆ, ಸೂಟು ಬೂಟುಗಳೇ ಇರಬೇಕೆಂದರ್ಥವಲ್ಲ. ಇದ್ದುದರಲ್ಲಿಯೇ ಸ್ವಲ್ಪ ಚನ್ನಾಗಿರೋದು, ಇದರಿಂದ ನಿಮಗೇನೇ ಲಾಭ,"

"ಲಾಭ? ಅದೆಂಥ ಲಾಭ? "

"ಹೌದಪ್ಪ ಹೌದು, ಲಾಭ, ಲಾಟ್ರಿ ಹತ್ತೋದಕ್ಕೂ ಭಾಗ್ಯ ಬೇಕಾಗುತ್ತದೆ. ಡಾಯರೆಕ್ಟರರ ಇವತ್ತಿನ ಸಂದರ್ಶನವು ಇಂದು ಲಾಟ್ರಿ ಇದ್ದ ಹಾಗೆಯೇ, "

"ಸರದಾರರೇ, ಏನು ಅದು ಬಾಯಿ ಬಿಚ್ಚಿ ಹೇಳಬಾರದೇ? "

ದಯಾಲಸಿಂಗ ನಿಧಾನವಾಗಿ ಉತ್ತರಿಸಿದರು: "ಇವತ್ತು ಬರೋ ಡಾಯರೆಕ್ಟರ ಗಂಭೀರಸಿಂಗ ಈಗ ನಿಪುತ್ರಿಕರಾಗಿದ್ದಾರೆ. ತುಂಬಾ ಶಿರಿವಂತರು ಹಾಗೇ ತುಂಬಾ ಬುದ್ಧಿವಂತರು. ಅವರೂ ಪಶ್ಚಿಮ ಪಂಜಾಬದವರೇ, ಅಲ್ಲಿ ಅವರ ಮಗ ಹೊಸದಾಗಿ ನಡೆದ ಈ ಕುರುಕ್ಷೇತ್ರ ಚಟುವಟಿಗೆಯಲ್ಲಿ ಬಲಿ ಹೋಗಿದ್ದಾನೆ. ಅದಕ್ಕೆಯೇ ಇವರಿಗೂ ನಿರ್ವಾಸಿತರ ಮೇಲೆ ತುಂಬ ಮಮತೆ. ತಮ್ಮಿಂದಾದಷ್ಟು ಸೇವೆ ಅವರಿಗೆ ಸಲ್ಲಿಸಬೇಕೆನ್ನುವದು ಅವರ ಇಚ್ಛೆ."

ಆ ನಿರ್ವಾಸಿತ ಕೇಳಿದ: "ಹಾಗಾದರೆ ಇಂದು ಅವರು ಎಲ್ಲರಿಗೂ ತಮ್ಮ ಟ್ರೆಝರಿಯಲ್ಲಿಯ ಹಣವನ್ನು ಎಲ್ಲ ನಿರಾಶ್ರಿತರಿಗೆ ಹಂಚುತ್ತಾರೆಯೇ?"

"ಇಲ್ಲಾ ಮಹಾಸ್ವಾಮಿ, ಅವರೀಗ ದತ್ತು ತೆಗೆದುಕೊಳ್ಳಬೇಕೆಂದು ಇಲ್ಲಿ ಕ್ಯಾಂಪಿಗೆ ಬರುವವರಿದ್ದಾರೆ, ತಮಗೆ ಮನಸ್ಸಿಗೆ ಬಂದ ಹುಡುಗನನ್ನು ಅವರು ದತ್ತು ತೆಗೆದುಕೊಳ್ಳುವವರಿದ್ದಾರೆ. ಅದಕ್ಕೆ ಇದೊಂದು ಲಾಟ್ರಿ ಅಂತ ಹೇಳಿದ್ದು"

ನಿರ್ವಾಸಿತ ಅತ್ಯಾನಂದದಿಂದ ಕೂಗಿದ: "ದೇವರೇ, ನೀನೇ ಅವರ ಬಾಯಲ್ಲಿ ಹೋಗಿ ಕುಳಿತು ನನ್ನನ್ನಾರಿಸಪ್ಪ, ನನ್ನ ಮನೆಯ ಹತ್ತಿರವೇ ಒಂದು ಗುರುದ್ವಾರಾ ಕಟ್ಟಿಸ್ತೇನೆ."

ಆ ನಿರ್ವಾಸಿತನ ಮಾತಿಗೆ ಎಲ್ಲರೂ ಗೊಳ್ಳನೆ ನಕ್ಕುಬಿಟ್ಟರು. ಆ ನಗುವಿನಲ್ಲಿ ಭಾಗವಹಿಸದೇ ಕುಳಿತವನೆಂದರೆ ಜಸವಂತಸಿಂಗನೇ. ಅವನ ಈ ಉದಾಸೀನತೆಗೆ ಒಂದು ಪ್ರಬಲ ಕಾರಣವಿತ್ತು.

ಸರದಾರ ದಯಾಲಸಿಂಗನ ಹುಕುಮಿನಂತೆ ಎಲ್ಲರೂ ತಂತಮ್ಮ ಕೆಲಸದಲ್ಲಿ ತೊಡಗಿದರು. ಜಸವಂತಸಿಂಗ ಮಾತ್ರ ತನ್ನ ಜಾಗೆ ಬಿಟ್ಟು ಕದಲಲಿಲ್ಲ. ಒಂದು ಸಲ ದಯಾಲಸಿಂಗ ಜಸವಂತಸಿಂಗನಿಗೆ ಮೃದುಸ್ವರದಲ್ಲಿ ವಿನಂತಿಸಿಕೊಂಡ, ಪ್ರಯೋಜನವಾಗಲಿಲ್ಲ. ಜಸವಂತಸಿಂಗ ಬಾಯಲ್ಲಿ ಹುಲ್ಲು ಕಡಿಯನ್ನು ಕಚ್ಚಿಕೊಂಡು ಅದನ್ನು ಅತ್ತಿತ್ತ ತಿರುವಾಡುತ್ತ ಹಾಗೇ ಕುಳಿತುಕೊಂಡ. ದಯಾಲಸಿಂಗನಿಗೆ ತುಂಬಾ ಸಿಟ್ಟು ಬಂದಿತು. ಆದರೂ ಆ ಸಿಟ್ಟನ್ನು ಯಾವದೇ ನಿರ್ವಾಸಿತನ ಮೇಲೆ ಪ್ರಯೋಗಿಸುವ ಹಾಗಿರಲಿಲ್ಲ. ಕ್ಯಾಂಪಿನ ನಿಯಮಗಳೇ ಹಾಗಿದ್ದುವು. ಮೊದಲೇ ದುಃಖದಿಂದ ಬಳಲುವ ಜನರಮೇಲೆ ರೇಗಾಡಿ ಅವರ ದುಃಖವನ್ನು ದ್ವಿಗುಣಿತ ನಡುವದು ಒಳ್ಳೆಯದಲ್ಲವೆಂದು ಆ ರೀತಿ ವರಿಷ್ಠರು ನಿಯಮಗಳನ್ನು ಮಾಡಿದ್ದರು. ಒಂದೊಂದು ಸಲ ದಯಾಲಸಿಂಗನ ಸಿಟ್ಟು ಆ ನಿಯಮಗಳನ್ನು ಉಲ್ಲಂಘಿಸಿತ್ತು. ಎಷ್ಟೋ ನಿರ್ವಾಸಿತರು ಅವನ ಸಿಟ್ಟಿನ ಪ್ರಸಾದವನ್ನು ಪಡೆದಿದ್ದರು. ಆದರೆ ಇಂದು ಮಾತ್ರ ದಯಾಲಸಿಂಗನಿಗೆ ತನ್ನ ಸಿಟ್ಟನ್ನು ಹಿಂದೂಡಲೇ ಬೇಕಾಗಿತ್ತು. ಏಕೆಂದರೆ ಡಾಯರೆಕ್ಟರ ಗಂಭೀರಸಿಂಗರು ಸಂದರ್ಶನವನ್ನೀಯುವವರಿದ್ದರು. ಎಲ್ಲಿಯಾದರೂ ತನ್ನ ಸಿಟ್ಟು ಅವರ ಕಿವೀವರೆಗೂ ಹೋಗಿ ಮುಟ್ಟಿದರೆ ತನ್ನಗತಿ ಏನು ಎನ್ನುವ ಭೀತಿ ಅವನಿಗಿತ್ತು. ಅದಕ್ಕೆ ದಯಾಲ, ಜಸವಂತ ಸಿಂಗನ ಜತೆಯಲ್ಲಿ ಮೃದುಸ್ವರದಲ್ಲಿಯೇ ಮಾತಿಗಾರಂಭಿಸಿದ:

"ಏನು ಯೋಚನೆ ಮಾಡುತ್ತಿದ್ದೀ ಜಸವಂತ?"
"ಎಲ್ಲರನ್ನು ಕಳೆದುಕೊಂಡವ ಮತ್ತೇನನ್ನು ಯೋಚಿಸಬೇಕು?
"ಹೌದಪ್ಪ…… ಹೊಟ್ಟೆನೋವು ಬಂದವನಿಗೆ ಅದರ ದುಃಖ ಗೊತ್ತಿರುತ್ತೆ. ಬೇರೆಯವರಿಗೆ ಅದರ ನೋವು ತಿಳಿಯಬಹುದೇ?"
"……" ಜಸವಂತಸಿಂಗ ನಿರುತ್ತರನಾಗಿದ್ದ.

ಮತ್ತೆ ದಯಾಸಿಂಗ ಮಾತನಾಡಿಸಿದ: "ನೋಡು ಇಂದು ಅವರು ನಮ್ಮ ಕ್ಯಾಂಪ ನೋಡಲು ಬರುವವರಿದ್ದಾರೆ. ಹೋಗು, ಅಚ್ಚುಕಟ್ಟಾಗಿ ಇರು, ಅಚ್ಚುಕಟ್ಟಾಗಿ ಇರೋದರಿಂದ ಮನುಷ್ಯ ತುಂಬಾ ಚುರುಕಾಗಿ ಕಾಣುತ್ತಾನೆ. ಚುರುಕ ಹುಡುಗ ಸುಂದರವಾಗಿ ಕಾಣುತ್ತಾನೆ. ಹುಡುಗನನ್ನೇ ಗಂಭೀರಸಿಂಗ ದತ್ತು ತೆಗೆದುಕೊಳ್ಳುತ್ತಾರೆ. ಕಡೆಗೆ ನಮ್ಮ ಜಸವಂತಸಿಂಗ ನಮ್ಮನ್ನು ಗುರುತಿಸುವದಕ್ಕೂ ಬರಲಾರ, ಹಃ ಹ!!" ಎಂದು ಉಬ್ಬಿಸುವ ಸ್ವರದಲ್ಲಿ ದಯಾಲಸಿಂಗ ನುಡಿದ.

"ಹ್ಞೂ!" ಜಸವಂತನ ನಿರಾಶಯುಕ್ತ ಹೂಂಕಾರ ದಯಾನ ಮಾತಿಗೆ ಉತ್ತರರೂಪವಾಗಿ ದೊರೆಯಿತು. ದಯಾಲ ಮೆಲ್ಲಗೆ ಹೇಳಿದ"

"ನೀನು ತುಂಬಾ ಹುಚ್ಚ ನೋಡು."
"ನಮ್ಮ ಜನವೆಲ್ಲ ಹುಚ್ಚೇ."
"ಏನೋ........"
"ನನಗನಿಸಿತು."
"ನಿಜ, ಹುಚ್ಚನಿಗೆ ಎಲ್ಲರೂ ಹುಚ್ಚಾಗಿಯೇ ಕಾಣುತ್ತಾರೆ."
"ನಾನು ಹುಚ್ಚನಾಗುವದು ಸಾಧ್ಯವಿಲ್ಲಾ."
"ಹುಚ್ಚನಲ್ಲದೇ ಮತ್ತೇನು?"
"ಅಧೇಗೆ?
"ಮನೆಗೆ ಬರೋ ಮಹಾಲಕ್ಷ್ಮೀನ್ನ ಸ್ವಾಗತ ಮಾಡಲಿಕ್ಕೂ ಬರೋದಿಲ್ಲಾ? "
"ಯಾವ ಮಹಾಲಕ್ಷ್ಮಿ"
"ರಾತ್ರಿಯಿಂದ ಬೆಳಗಿನವರೆಗೆ ರಾಮಾಯಣ ಕೇಳಿ, ರಾಮ ಸೀತಾಳಿಗೆ ಏನಾಗಬೇಕು ಎಂದು ಕೇಳಿದ ಹಾಗೆ ಪ್ರಶ್ನೆ ಮಾಡುತ್ತೀಯಲ್ಲಪ್ಪಾ."
"ನಿಮ್ಮ ಮಾತಿನ ಅರ್ಥವೇ ನನಗಾಗೋದಿಲ್ಲ."

"ನೀನು ಒಳ್ಳೆ ಚುರುಕಾಗಿ ಕಂಡುಬಿಟ್ಟರೆ ಡಾಯರೆಕ್ಟರು ನಿನ್ನನ್ನೇ ದತ್ತಕ ತೆಗೆದುಕೊಳ್ಳಲಿಕ್ಕಿಲ್ಲವೇ? ದತ್ತಕ ತೆಗೆದುಕೊಂಡ ಮೇಲೆ, ಈ ಹಾಳು ಜೀವನದಿಂದ ನೀನು ಮುಕ್ತನಾಗುವದಿಲ್ಲವೇ? "ಈ ಮಾತನ್ನು ಕೇಳಿ ಜಸವಂತಸಿಂಗ ಗಹಿಗಹಿಸಿ ನಕ್ಕುಬಿಟ್ಟ. ಆ ನಗೆಯಲ್ಲಿ ನಿರಾಶೆ ತುಂಬಿ ತುಳುಕುತ್ತಿತ್ತು. ನಗುವಿನ ಕೊನೆಯಲ್ಲಿ ಜಸವಂತ ಸಿಂಗ ಹೇಳಿದ:

"ನೀವು ನನಗೆ ಹೇಳುವ ಮಾತು ಕೇಳಿ ನನಗೊಬ್ಬರಾದರೂ ಹಿತಚಿಂತಕರು ಸಿಕ್ಕರಲ್ಲವೆಂದು ಆನಂದವಾಯಿತು. ಆದರೆ ಜಗತ್ತಿನಲ್ಲಿ ನಾಲ್ಕುದಿನ ಬಾಳಬೇಕೆನ್ನುವವರಿಗೆ ಹಿತಚಿಂತಕರ ಅವಶ್ಯಕತೆ. ದಿನಗಳನ್ನು ಎಣಿಕೆ ಹಾಕುತ್ತಿದ್ದವನಿಗೆ ಅದರ ಆವಶ್ಯಕತೆ ಎಲ್ಲಿ?"

ಭರ್ತಿ ಯೌವನದ ವಯಸ್ಸಿನಲ್ಲಿದ್ದ ಜಸವಂತಸಿಂಗನ ಮರಣದ ಮಾತುಗಳನ್ನಾಡುವದನ್ನು ನೋಡಿ ದಯಾಲಸಿಂಗನಿಗೆ ಆಶ್ಚರ್ಯವಾಯಿತು. ಯುವಕರು ಮರಣದ ಮಾತನ್ನಾಡುವದು ಪಾಪವೆಂದೇ ದಯಾಲನ ಅಭಿಪ್ರಾಯವಾಗಿತ್ತು. ಮೇಲಾಗಿ ತಾವು ಶೀಖರಜಾತಿಯಲ್ಲಿ ಹುಟ್ಟಿದ್ದೇವೆ. ಸಿ೦ಹರಿದ್ದಂಥ ತಾವು ಸುಲಭವಾಗಿ ಸಾಯತಕ್ಕದ್ದಲ್ಲ. ಜಸವಂತನ ಇಂಥ ಮಾತು ಕೇಳಿ, ನಿಜಕ್ಕೂ ದಯಾಲನಿಗೆ ಕರುಣೆಯಾಯಿತು. ನಿರ್ವಾಸಿತ ಕ್ಯಾಂಪಿನಲ್ಲಿ ಬಂದ ಎಲ್ಲರೂ ತಮ್ಮ ದುಃಖಾಂತ ಕತೆಗಳನ್ನು ದಯಾಲನ ಮುಂದೆ ಹೇಳಿದ್ದರು. ಆದರೆ ಜಸವಂತಸಿಂಗ ಯಾವಾಗಲೂ ಬಾಯನ್ನೇ ಬಿಡುತ್ತಿರಲಿಲ್ಲ. ಯಾವಾಗಲೂ ಉದಾಸೀನನಾಗಿಯೇ ಇರುತ್ತಿದ್ದ. ಆತನ ಉದಾಸೀನತೆಯ ಹಿಂದೆ ಯಾವದೋ ದುಃಖವಿರಲೇಬೇಕು ಎಂದು ದಯಾಲ ತಿಳಿದುಕೊಂಡ. ಅದಕೆ ಆತನ ಹಿಂದಿನ ಕತೆಯನ್ನು ತಿಳಿದು ಇದ ಕುತೂಹಲದಿಂದ ದಯಾಲ ಒತ್ತಾಯ ಪಡಿಸತೊಡಗಿದ.

"ನಿನ್ನ ಈ ಉದಾಸೀನತೆಗೆ ಕಾರಣವೇನು? ನಿನ್ನ ಹಿಂದಿನ ಕತೆಯನ್ನಾದರೂ ಹೇಳು.... ”
"ಅದು ಕಥೆಯಲ್ಲ. ಅದೊಂದು ನರಕಯಾತನೆ... ಆದರೆ ಅದೆಲ್ಲ ಈಗೇಕೆ?"
"ಬೇಡ, ಈಗಲೇ ಹೇಳಿಬಿಡು. ನೀನಂತೂ ಮರಣದ ಮಾತನ್ನಾಡುತ್ತಿರುತ್ತಿ ಯಾವಾಗ ಏನಾಗುವಿ ಎಂಬುದು ನಿನಗೇ ಗೊತ್ತಿಲ್ಲ. ಅದರ ಮೊದಲು ನಿನ್ನ ಕತೆಯನ್ನು ನನ್ನೆದುರು ಹೇಳಿಡು... "
"ನಿಜ ನನ್ನ ಕತೆ ಯಾರಿಗಾದರೂ ಹೇಳಲೇಬೇಕು....... ನನ್ನ ದುಃಖವಾದರೂ ಕಡಿಮೆಯಾದೀತು.”
"ಹೌದು. ಬೇಗ ಹೇಳಿ ಮುಗಿಸು, ”

ಜಸವಂತಸಿಂಗ ಕತೆ ಹೇಳಲುತೊಡಗಿದ:

"ಗುರುದಾಸಪೂರವೇ ನನ್ನೂರು. ನಾನು ... ನಮ್ಮ ತಾಯಿ....ನನ್ನ ತಂಗಿ... ರೂಪಕೌರ...."



ಜಸವಂತಸಿಂಗನ ತಂದೆ ಗುರುದಾಸಪೂರ ಜಿಲ್ಲೆಯ ಒಂದು ಹಳ್ಳಿಯ ಜಮೀನುದಾರನಾಗಿದ್ದ. ಆದರೆ ಅವರು ಯಾರಿಗೋ, ಸಾಲದಲ್ಲಿ ಜಾಮೀನುದಾರನಾಗಿ ತನ್ನ ಜಮೀನುಗಳನ್ನೆಲ್ಲ ಕಳೆದುಕೊಂಡಿದ್ದ. ಜಮೀನು ಕಳೆದುಕೊಂಡ ನಂತರ ಅವನು ತನ್ನ ಹೆಂಡತಿಯೊಡನೇ ಗುರುದಾಸಪೂರಕ್ಕೆ ಬಂದು ನೆಲಿಸಿದ. ಅಲ್ಲಿಯೇ ಯಾವದೋ ಒಂದು ಅಂಗಡಿಯಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ನಿಂತುಕೊಂಡ. ಆನಂತರವೇ ಜಸವಂತಸಿಂಗ, ರೂಪಕೌರರು ಹುಟ್ಟಿದ್ದು. ಜಸವಂತಸಿಂಗನಿಗಿಂತಲೂ ರೂಪಕೌರ ೩ ವತರುಷ ಚಿಕ್ಕವಳು. ಅವಳು ಒಂದು ವರುಷದವಳಿರುವಾಗಲೇ ತಂದೆ ಕಾಲವಾಗಿದ್ದರು. ಮುಂದೆ ಈ ಮಕ್ಕಳಿಬ್ಬರ ಭಾರ ತಾಯಿಯ ಮೇಲೆ ಬಿತ್ತು. ಆ ಮನೆ ಈ ಮನೆ ಯಲ್ಲಿ ಬೀಸು, ಅಡಿಗೆ, ದುಡಿತ ಮಾಡಿ ಇಬ್ಬರನ್ನೂ ಬೆಳಿಸಿದಳು. ಬಡತನವಿದ್ದರೂ ಮಕ್ಕಳಿಬ್ಬರೂ ಲಕ್ಷಣವಾಗಿ ಬೆಳೆದಿದ್ದರು.

"ರಾಜ್ಯಸಿರಿವಳಿದೊಡೆ ಪೂರ್ವಗುಣವುಳಿವುದೇ" ಎ೦ದು ರಾಘವಾಂಕ ಹೇಳಿದ ಹಾಗೆ, ಈ ಕುಟುಂಬಕ್ಕೆ ಈಗ ಬಡತನ ಬಂದಿತ್ತು. ಇಲ್ಲವಾದರೆ ಜಮೀನುದಾರರ ಮನೆಯಲ್ಲಿಯೇ ಬೆಳೆಯುತ್ತಿದ್ದುವು ಹುಡುಗರು. ರೂಪಕೌರಳಂತೂ ಹೆಸರಿಗೆ ತಕ್ಕ ಹಾಗೇ ಬೆಳೆದಿದ್ದು, ಸಾವಿರ ಜನ ಹೆಂಗುಸರಲ್ಲಿ ಅವಳನ್ನು ಒಮ್ಮೆಲೆ ಗುರುತಿಸುವದು ಅತಿ ಸುಲಭವಾದ ಮಾತಾಗಿತ್ತು. ಅವಳ ಆ ರಾಶಿ ಕೂದಲು, ಅವಳ ತುಂಬು ಮೈ ಕೈ, ಪ್ರಮಾಣಬದ್ಧ ಸ್ತನ, ಇವೆಲ್ಲ ಅವಳ ಸುಂದರ ಮೈ ಬಣ್ಣಕ್ಕೆ ಮೆರುಗು ಕೊಟ್ಟಿತ್ತು.

೧೯೪೬ ನೇ ಇಸವಿ ಕೊನೆಯಲ್ಲಿ ಪಂಜಾಬದಲ್ಲಿ ಪ್ರಾರಂಭವಾಯಿತು ಕುರುಕ್ಷೇತ್ರದ ಕದನ. ನಿರಪರಾಧಿ ಜೀವಿಗಳೆಷ್ಟೋ ಈ ಬೆಂಕಿಯಲ್ಲಿ ಸುಟ್ಟುಭಸ್ಮವಾದುವು. ಜಸವಂತ ತನ್ನ ತಾಯಿಯನ್ನೂ ತಂಗಿಯನ್ನೂ ಕರೆದುಕೊಂಡು ಭಾರತದ ಕಡೆ ನಡೆದ. ಪಾಕಿಸ್ತಾನದ ಗಡಿಯನ್ನು ಬಿಟ್ಟು ಭಾರತದ ಗಡಿ ಸೇರುವವರೆಗೂ ಆತನಿಗೆ ನೆಮ್ಮದಿ ಇರಲಿಲ್ಲ.

ಫ್ರಂಟಿಯರ ಎಕ್ಸ್‌ಪ್ರೆಸ್‌ ಪೇಶಾವರದಿಂದ ಬೊ೦ಬಾಯಿಗೆ ಹೋಗುವ ಈ ಗಾಡಿಯಲ್ಲಿ ಗುರುದಾಸಪೂರದಿಂದ ಕುಳಿತವರೆಂದರೆ ಜಸವಂತಸಿಂಗ, ಅವನ ತಾಯಿ, ಅವನ ತಂಗಿ ರೂಪಕೌರ. ಗಾಡಿ ಗುರುದಾಸಪೂರ ಸ್ಟೇಶನ ಬಿಟ್ಟಿತು. ಗಾಡಿಯ ಸಪ್ಪಳದಷ್ಟೇ, ಜಸವಂತನ ಎದೆ ಹೊಡೆದುಕೊಳ್ಳುತ್ತಿತ್ತು. ಒಂದೊಂದು ಸಲ ತುಂಬಾ ಧೈರ್ಯವನ್ನು ತಂದುಕೊಳ್ಳುತಿದ್ದ. ಗಾಡಿಯಲ್ಲಿದ್ದವರ ಸಂರಕ್ಷಣೆಗಾಗಿ ಬಲೂಚ ರೆಜಿಮೆಂಟ ಸುಸಜ್ಜಾಗಿ ಗಾರ್ಡನ ಬದಿ ಡಬ್ಬಿಯಲ್ಲಿ ಕುಳಿತಿತ್ತು.

ಗಾಡಿ ಗುರುದಾಸಪೂರದ ಮುಂದಿರುವ ಮೊದಲನೇ ಹಳ್ಳಿಯ ಸ್ಟೇಶನ್ನಿಗೆ ಹಠಾತ್ತಾಗಿ ನಿಂತುಹೋಯಿತು. ಫ್ರಂಟಿಯರ ಎಕ್ಸ್‌ಪ್ರೆಸ್ ಅಲ್ಲಿ ಮೊದಲೆಂದೂ ನಿಲ್ಲುತ್ತಿರಲಿಲ್ಲ. ಗಾಡಿ ನಿಂತಾಕ್ಷಣ, ಜಸವಂತಸಿಂಗ ಯೋಚನೆಯಲ್ಲಿ ಮುಳುಗಿದ. ತಂಗಿ ರೂಪಕೌರ ಗಾಬರಿಯಾಗಿ ಬಿಟ್ಟಳು. ಅವರು ಯೋಚಿಸುತ್ತಿರುವ ಮೊದಲೇ ಎರಡು ಮೂರು ರಾಯಫಲ್ಲಿನ ಸಪ್ಪಳ ಕೇಳಿಸಿತು. ಆ ಸಪ್ಪಳದ ಜತೆಯಲ್ಲಿ ಜನತಂಡದ ಜಯಜಯಕಾರ ಕೇಳಿಸಿತು.

"ಹಸಕೆ ಲಿಯೆ ಪಾಕಿಸ್ತಾನ,
ಲಢಕೆ ಲೇಂಗೆ ಹಿಂದುಸ್ತಾನ"

ಬಲೂಚರೆಜಿಮೆಂಟಿನ ನಾಲ್ಕರಷ್ಟು ಬೆಳೆದಿತ್ತು ಹೊರಗಿನ ಜನಸಮ್ಮರ್ದ. ಪ್ರತಿ ಡಬ್ಬಿಯಲ್ಲಿ ಕೆರಳಿದ ಜನಸಮೂಹ ಧಾವಿಸತೊಡಗಿತು. ಜಸವಂತಸಿಂಗ, ತಾಯಿ ತಂಗಿಯನ್ನು ಕರೆದುಕೊಂಡು ಹಿಂದಿನ ಬಾಗಿಲಿನಿಂದ ಇಳಿದು ಹೊರಬಿದ್ದ. ದಿಕ್ಕುಗಾಣದವರಂತೆ ಮೂರೂ ಜನ ಹತ್ತಿರವಿದ್ದ ಅಡವಿಯತ್ತ ಧಾವಿಸತೊಡಗಿದರು. ಹತ್ತಿರವೇ ಇದ್ದ ರೈಲಿನ ತಾರು ಕಂಬಕ್ಕೆ ಎಡವಿ ತಾಯಿ ಬಿದ್ದು ಬಿಟ್ಟಳು. ಮುಂದೆ ಓಡುತ್ತಿರುವ ಜಸವಂತನಿಗೆ ಅದು ಬೇಗ ಗೊತ್ತಾಗಲಿಲ್ಲ. ಗೊತ್ತಾದಾಗ ಹಿಂದೆ ಹೊರಳಬೇಕೆನ್ನುವಷ್ಟರಲ್ಲಿ ಜನ ಸಮ್ಮರ್ದ ಓಡುವದನ್ನು ನೋಡಿ ಹಾಗೇ ಮುಂದೆ ಓಡಿದ. ಆದರೆ ಅವನು ಅಡವಿಯಲ್ಲಿ ಬೇರೆ ದಿಕ್ಕನ್ನು ಹಿಡಿದು ಓಡಿದ, ರೂಪಕೌರ ತಂಗಿ ಮತ್ತೊಂದು ದಿಕ್ಕಿಗೆ ಓಡಿದಳು.

ಇಬ್ಬರೂ ಅಲ್ಲಿಂದ ಜೀವಸಹಿತ ಪಾರಾದರೇನೋ. ಆದರೆ ಇಬ್ಬರೂ ಬೇರ್ಪಡಿಸಲ್ಪಟ್ಟರು. ತಾಯಿಯ ಗತಿ ಏನೂ ತಿಳಿಯಲಿಲ್ಲ.


"..... ನಾನು ಅಲೆಅಲೆಯುತ್ತ ಈಗ ಈ ನಿರ್ವಾಸಿತರ ಕ್ಯಾಂಪಿಗೆ ಬಂದೆ. ನನ್ನ ತಂಗಿ ರೂಪಕೌರ ಎಲ್ಲಿಯೋ. ನನ್ನ ತಾಯಿಯಂತೂ ಈಗ ಇರುವದು ಸಾಧ್ಯವಿಲ್ಲಾ. ಆದರೆ ಉಳಿದಿರುವ ತಂಗಿಯ ಭೆಟ್ಟಿಯು ಆಗಲಿಲ್ಲವಲ್ಲಾ ಎಂದು ಮಿಡುಕುತ್ತಿದ್ದೇನೆ. ಅಯ್ಯೋ.....” ಜಸವಂತಸಿಂಗ ತನ್ನ ಕತೆ ಹೇಳುತ್ತಿರುವಂತೆ ಬಿಕ್ಕಿ ಬಿಕ್ಕಿ ಅಳತೊಡಗಿದ್ದ.

ಅವನ ಹೆಗಲ ಮೇಲೊಂದು ಕೈ ಸಾಂತ್ವನದಿಂದ ಆಡತೊಡಗಿತು. ಮ್ಯಾನೇಜರ ದಯಾಲನೂ ಬೆಚ್ಚಿ ಹಿಂದೆ ಹೊರಳಿ ನೋಡಿದ. ಅವನಿಗೂ ಆಶ್ಚರ್ಯವಾಯಿತು.

ರೆಡಿಯೋದ ಸ್ಟೇಶನ ಡಾಯರೆಕ್ಟರ ಗಂಭೀರ ಸಿಂಗ ತಮ್ಮ ಪತ್ನಿಯೊ೦ದಿಗೆ ಆಗಲೇ ಬಂದು ಹಿಂದೆ ನಿಂತು ಎಲ್ಲ ಕತೆಯನ್ನು ಕೇಳತೊಡಗಿದ್ದರು.

ಕತೆ ಮುಗಿದಾಕ್ಷಣ ಡಾಯರೆಕ್ಟರ ಗಂಭೀರಸಿಂಗರ ಪತ್ನಿ ಜಸವಂತನ ಹೆಗಲಮೇಲೆ ಕೈಯಾಡಿಸಿ ಮೃದುಸ್ವರದಲ್ಲಿ ಸಾಂತ್ವನಗೊಳಿಸ ತೊಡಗಿದರು. ಹಾಗೆ ಕೈಯಾಡಿಸುತ್ತಿರುವಂತೆ ಅವರ ಕಣ್ಣಂಚಿನಲ್ಲಿ ನೀರು ಕಾಣಿಸಿಕೊಂಡಿತು. ತನ್ನ ಸತಿಯತ್ತ ಹೊರಳಿ---

"ನೋಡಿ, ನನ್ನ ಕಳೆದು ಹೋದ ಮಗ ಸಿಕ್ಕಷ್ಟು ಆನಂದವಾಗಿದೆ ನನಗೆ"
"ನನಗೆ ಅಂತ ಏಕೆ ಹೇಳುತ್ತೀ, ನಮಗೆ ಅಂತ ಹೇಳು"



ಜಸವಂತಸಿಂಗ ಈಗ ನಿರ್ವಸಿತರ ಕ್ಯಾಂಪಿನಲ್ಲಿಲ್ಲ. ಅವನನ್ನು ಈಗಾಗಲೇ ಗಂಭೀರಸಿಂಗರು ತಮ್ಮ ಪುತ್ರನನ್ನಾಗಿ ಸ್ವೀಕರಿಸಿ ಬಿಟ್ಟರು. ಗಂಭೀರಸಿಂಗ ಮತ್ತು ಅವರ ಪತ್ನಿ ಇಬ್ಬರೂ ತಮ್ಮ ಗತಿಸಿದ ಮಗನನ್ನು ಮರೆತು ಇವನನ್ನೇ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನೆಂದು ಭಾವಿಸಿ ಇರತೊಡಗಿದರು. ಆ ಮರುವಿನಲ್ಲಿ ಅವರಿಗೆ ಆನಂದ ಲಭಿಸುತ್ತಿದ್ದರೂ ಜಸವಂತಸಿಂಗನ ಉದಾಸೀನ ಮುಖಮುದ್ರೆಯನ್ನು ನೋಡಿ ಮಮ್ಮಲ ಮರಗುತ್ತಿದ್ದರು. ತಂಗಿಗಾಗಿ ಪಡುತ್ತಿದ್ದ ಅವನ ದುಃಖದ ಅರಿವು ಆ ದಂಪತಿಗಳಿಗಿಬ್ಬರಿಗೂ ಆಗುತ್ತಿತ್ತು. ಆದರೆ……?

ಮುಂದೆ ಜಸವಂತನ ವಿದ್ಯಾಭ್ಯಾಸ ಅಡೆತಡೆಯಿಲ್ಲದೆ ಸಾಗುತ್ತಿತ್ತು. ಆದರೂ ತಂಗಿ ರೂಪಕೌರಳ ನೆನಹು ಅವನನ್ನು ಒಮ್ಮೊಮ್ಮೆ ತೀರ ಹುಚ್ಚನನ್ನಾಗಿ ಮಾಡಿಬಿಡುತ್ತಿತ್ತು.

ಉತ್ತರ ಹಿಂದುಸ್ಥಾನದಲ್ಲಿ ರಕ್ಷಾಬಂಧನದ ಹಬ್ಬಕ್ಕೆ ವಿಶೇಷ ಮಹತ್ವ. ಆ ಹಬ್ಬವೂ ತನ್ನ ನಿಯಮಿತ ಕಾಲಕ್ಕೇನೇ ಬಂದಿತು. ದೆಹಲಿಯಲ್ಲಿ ಪ್ರತಿ ಮನೆಯಲ್ಲಿ ಹಬ್ಬ ಒಳ್ಳೆ ವಿಜೃಂಭಣೆಯಿಂದ ಸಾಂಗವಾಗತೊಡಗಿತ್ತು. ಮನೆಮನೆಯಲ್ಲಿ ತಂಗಿ ಅಣ್ಣನಿಗೆ ರಕ್ಷಾಬಂಧನ ಕಟ್ಟುತ್ತಿರುವ ದೃಶ್ಯ ನೋಡುತ್ತಿದ್ದ ಜಸವಂತಸಿಂಗನಿಗೆ ದುಃಖ ಉಮ್ಮಳಿಸಿ ಬಂದಿತು. ಆ ದುಃಖದ ಭರದಲ್ಲಿ ಮನೆಗೆ ಬಂದವನೇ ಮೂರ್ಛೆ ಬಂದು ಬಿದ್ದು ಬಿಟ್ಟ.

ಗಂಭೀರಸಿಂಗರ ಪತ್ನಿ ಕೂಡಲೇ ಡಾಕ್ಟರರನ್ನು ಕರೆಸಿ ಉಪಚರಿಸಿದಳು. ಜಸವಂತಸಿಂಗನಿಗೆ ಮೈ ಮೇಲೆ ಪರಿವೆಯೇ ಉಳಿದಿರಲಿಲ್ಲ. ನಡುನಡುವೆಯೇ ಬಡಬಡಿಸುತ್ತಿದ್ದ.

"ರೂಪಕೌರ, ನನ್ನ ನಿನ್ನ ಭೆಟ್ಟಿ ಇನ್ನೆಂದು? ನನಗೆ ನಿನ್ನನ್ನು ಕಾಪಾಡಲಿಕ್ಕಾಗಲಿಲ್ಲ. ನಾನು ಸಾಯುವದೇ ಲೇಸು.”

ಅವನು ಬಡಬಡಿಸುವದನ್ನು ಕಂಡು ಗಂಭೀರಸಿಂಗರ ಪತ್ನಿ ಗಾಬರಿಯಾಗಿ ಬಿಟ್ಟಳು. ಡಾಕ್ಟರರನ್ನು ಅಂಗಲಾಚಿ ಬೇಡಿಕೊಂಡಳು. ಡಾಕ್ಟರು ಅವನನ್ನು ತಪಾಸಿಸಿ–--

"ಮನಸ್ಸಿನ ಮೇಲೊಂದು ದೊಡ್ಡ ಪೆಟ್ಟು ಬಿದ್ದಿವೆ. ಮಾನಸ ಶಾಸ್ತ್ರಜ್ಞರಿಂದ ಸಲಹೆಯನ್ನು ಪಡೆದುಕೊಳ್ಳಿರಿ ” ಎಂದು ಹೇಳಿ ಹೊರಟುಹೋದರು.

ಕೂಡಲೆ ಗಂಭೀರಸಿಂಗರ ಪತ್ನಿ ಮಾನಸ ಶಾಸ್ತ್ರಜ್ಞರನ್ನು ಕರೆಸಿಕೊಂಡರು. ಅವರು ಪರಿಸ್ಥಿತಿಯನ್ನು ಕೂಲಂಕಷವಾಗಿ ನಿರೀಕ್ಷಿಸಿ, ಅವನ ಪ್ರೀತಿಯ ಓಘವನ್ನು ಮತ್ತೊಂದು ಬದಿಗೆ ಎಳಿಸಿ, ಮೊದಲಿನ ಪ್ರೀತಿಯನ್ನು ಮರೆಸುವಹಾಗೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ಆ ದಿನ ರಾತ್ರಿ ಗಂಡ ಹೆಂಡರಿಬ್ಬರೂ ಯೋಚಿಸತೊಡಗಿದರು. ಗಂಭೀರಸಿಂಗ ತಮ್ಮ ಪತ್ನಿಗೆ ಸೂಚನೆ ಮಾಡಿದರು.

"ನೋಡು, ಬೇಗ ಅವನ ಮದುವೆ ಮಾಡಿ ಬಿಡೋಣ.”
"ಅಂದರೆ, ಅವನು ತನ್ನ ತಂಗಿಯನ್ನು ಮರೆಯಬಹುದೇ?"
“ಮರೆಯುವದು ಸಾಧ್ಯವಾಗುತ್ತೆ.”
"ಅಧೇಗೆ ?"

"ನೀನು ಈ ಮನೆಗೆ ಬರೋ ಮೊದಲು ನಾನು ನನ್ನ ತಾಯಿಯ ಸಾವಿಗೆ ತುಂಬಾ ಕಳವಳಪಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮಾಡಿದ್ದೆ, ಆದರೆ……"

"ಆದರೆ ಮುಂದೇನು ?"

"ಆದರೆ ಅಷ್ಟರಲ್ಲಿ ನನ್ನ ಮದುವೆ ಆಯಿತು. ನೀನು ಬಂದೆ. ನಿನಗೆ ನಾನು ಮಾರು ಹೋಗಿಬಿಟ್ಟೆ."

"ಆತ್ಮಹತ್ಯೆಯಿಂದ ನಿಮ್ಮನ್ನು ಉಳಿಸಿದವಳು ನಾನೇನೋ?"

"ನಿಜಕ್ಕೂ."

ಗಂಭೀರಸಿಂಗರ ಪತ್ನಿ ಆ ಮಾತಿಗೆ ಉಬ್ಬಿ ಹೋಗಿದ್ದರು. ಮತ್ತೆ ಗಂಭೀರಸಿಂಗರೇ ಹೇಳಿದರು:

"ಅವನ ಮದುವೆಯಾಗಿ ಬಿಟ್ಟಿತೆಂದರೆ, ಹೊಸ ಸಂಸಾರದ ಹುರುಸಿನಲ್ಲಿ ತನ್ನ ತಂಗಿಯನ್ನು ಸಾವಧಾನವಾಗಿ ಮರೆಯುತ್ತ ಹೋಗುತ್ತಾನೆ. ಮುಂದೆ ಎಲ್ಲವೂ ಸುರಳೀತವಾಗಿ ಸಾಗುತ್ತದೆ." ಸಂಕಟ ನಿವಾರಣೆಯ ಸೂಚನೆ, ಗಂಭೀರಸಿಂಗರ ಪತ್ನಿಗೆ ಸಮ್ಮತವಾಯಿತು.

ಜಸವಂತಸಿಂಗನ ಮದುವೆ ಮಾತಿಗೆ ಪ್ರಾರಂಭವಾಗುತ್ತಿರುವ ಮೊದಲೇ ಗಂಭೀರಸಿಂಗರಿಗೆ ದಿಲ್ಲಿಯಿಂದ ನಾಗಪೂರಕ್ಕೆ ವರ್ಗವಾಯಿತು. ನಾಗಪೂರಕ್ಕೆ ಬಂದ ಒಂದೆರಡು ತಿಂಗಳಲ್ಲಿಯೇ ಗಂಭೀರಸಿಂಗರು ಜಸವಂತಸಿಂಗನ ಮದುವೆ ಮಾಡಲು ಪ್ರಯತ್ನಿಸತೊಡಗಿದರು ಒಂದು ದಿನ ಮಧ್ಯಾನ್ಹ ಊಟವಾದ ನಂತರ ಗಂಡಹೆಂಡರಿಬ್ಬರೂ ಮದುವೆಯ ಬಗ್ಗೆ ಮಾತನಾಡುತ್ತಿರುವಾಗಲೇ ಜಸವಂತನೂ ಒಳಗೆ ಬಂದು ನಿಂತ.

ಗಂಭೀರಸಿಂಗರು ಅವನನ್ನು ಹತ್ತಿರ ಕರೆದು "ಮಗೂ, ನೀನಿನ್ನು ದೊಡ್ಡವನಾದೆ. ನಿನ್ನ ಮದುವೆ ಈಗಲೇ ಮಾಡುವದು ಒಳಿತು."

“........” ಜಸವಂತಸಿಂಗ ನಿರುತ್ತರನಾದ. ಅವನ ಮೌನವನ್ನು ಗಂಭೀರಸಿಂಹರು ಸಮ್ಮತಿಯ ಸೂಚನೆಯಂದು ಅರ್ಥ ಮಾಡಿಕೊಂಡು ಮುಂದೆ ಹೇಳಿದರು: "ಹೆಣ್ಣು, ನೋಡೋಣವೇ?"

"ಹೆಣ್ಣು" ಗಾಬರಿಗೊಂಡ ಸ್ವರದಲ್ಲಿ ಜಸವಂತಸಿಂಗ ಮುಂದೆ ಹೇಳ ತೊಡಗಿದ:

"ಹೆಣ್ಣು ಗೊತ್ತುಪಡಿಸುವದಕ್ಕೆ ಪರವಾ ಇಲ್ಲ, ಆದರೆ ನನ್ನದೊಂದು ವಿಜ್ಞಾಪನೆ ಕೇಳಿಕೊಳ್ಳುವಿರಾ?"

"ಅಗತ್ಯವಾಗಿ ಮಗೂ."

ನೀವು ನನ್ನನ್ನು ದತ್ತ ತೆಗೆದುಕೊಂಡಿರಿ. ಬೀದಿಯಲ್ಲಿ ಬಿದ್ದವನನ್ನು ಮೇಲಕ್ಕೆತ್ತಿ ಹಿಡಿದಿರಿ. ಅದರಂತೆ ನಾನೂ ಒಬ್ಬ ಬೀದಿಯಲ್ಲಿ ಬಿದ್ದವಳನ್ನೇ ಮೇಲಕ್ಕೆತ್ತಿ ಹಿಡಿಯಬೇಕೆಂದು ಆಸೆ."

ಜಸವಂತಸಿಂಗನ ಮಾತಿನ ಅರ್ಥ ದಂಪತಿಗಳಿಬ್ಬರಿಗೂ ಆಗಲಿಲ್ಲ. ಗಂಭೀರಸಿಂಗರೇ ಮತ್ತೆ ಕೇಳಿದರು:

"ಬಿಡಿಸಿ ಹೇಳು ಮಗೂ."
"ಬೀದಿಯಲ್ಲಿ ಬಿದ್ದವಳೆಂದರೆ, ತಪ್ಪು ಅರ್ಥ ಮಾಡಿಕೊಳ್ಳಬೇಡಿ. ನನ್ನ ಹಾಗೆ ಮನೆ ಮಾರು ತಪ್ಪಿಸಿಕೊಂಡು ನಿರ್ವಾಸಿತಳಾದಂಥ ಹುಡುಗಿಯನ್ನೇ ನೋಡಿ ನನ್ನ ಮದುವೆ ಮಾಡಿ ಎಂದಿಷ್ಟೇ ಅರ್ಥ."

ದಂಪತಿಗಳಿಬ್ಬರೂ ಅವನ ಮಾತನ್ನು ಕೇಳಿ, ಅವನಿಗೆ ತನ್ನ ಸಮ್ಮತಿಯನ್ನು ಸೂಚಿಸಿದರು. ಜಸವಂತನ ಮನ ನೋಯಿಸದ ಹಾಗೇ ನಡೆದುಕೊಳ್ಳುವದೆಂದು ಅವರು ನಿರ್ಧರಿಸಿದ್ದರು. ಮಾರನೇ ದಿನವೇ ಗಂಭೀರಸಿಂಗರ ನಿರ್ವಾಸಿತ ಕ್ಯಾಂಪಿನಲ್ಲಿ ಕನ್ಯಾನ್ವೇಷಣೆಗಾಗಿ ಜಬಲ್ಪೂರಕ್ಕೆ ನಡೆದರು. ಶೀಖರಲ್ಲಿ ಲಗ್ನವಾಗುವವರೆಗೂ ಗಂಡು ಹೆಣ್ಣನ್ನು ನೋಡುವಂತಿರುವದಿಲ್ಲ. ಅದಕ್ಕಾಗಿ ಜಸವಂತಸಿಂಗ ಗಂಭೀರಸಿಂಗರ ಜತೆಯಲ್ಲಿ ಹೋಗದೇ ನಾಗಪೂರದಲ್ಲಿಯೇ ಉಳಿದುಕೊಂಡ.

ಗಂಭೀರಸಿಂಗರ ಮನೆಯಲ್ಲಿ ಮಂಗಲವಾದ್ಯಗಳು ಮೊಳಗತೊಡಗಿದ್ದವು. ಜಸವಂತಸಿಂಗನ ಮದುವೆಗೆ ಒಂದು ವಿಶೇಷ ಮಹತ್ವ ಬಂದಿತ್ತು. ಇಷ್ಟು ದೊಡ್ಡ ಮನೆತನಸ್ಥವನಾಗಿದ್ದರೂ ಒಬ್ಬ ನಿರ್ವಾಸಿತ ಹುಡಿಗೆಯ ಜತೆಯಲ್ಲಿ ಅವನು ಮದುವೆಗೆ ಒಪ್ಪಿದ್ದೇ ಒಂದು ವಿಶೇಷ ಕಾರಣ. ಮದುವೆಗೆ ಬಂದ ಮಹನೀಯರೆಲ್ಲರೂ "ಇದೊಂದು ಉದ್ಧಾರದ ಕಾರ್ಯ" ಎಂದು ಕೊಂಡಾಡಿದರು. ಮದುವೆ ಮನೆಯಲ್ಲಿ ಎಲ್ಲರೂ ಆನಂದಭರಿತರಾಗಿದ್ದರು. ಗಂಭೀರಸಿಂಗರ ಪತ್ನಿ ಯಾವಾಗಲೂ ಜಸವಂತನ ಬಳಿಯಲ್ಲಿಯೇ ನಿಂತು ಆತನನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲವಿದ್ದರೂ ಜಸವಂತಸಿಂಗನ ಕಣ್ಣುಗಳಲ್ಲಿ ನೀರು ಧಾರೆಯಾಗಿ ಹರಿಯತೊಡಗಿತ್ತು. ಅದನ್ನು ನೋಡಿದ ಗಂಭೀರಸಿಂಗರ ಪತ್ನಿ ಮಗನಿಗೆ "ಮಗೂ, ಇಂದು ಶುಭ ದಿನ. ಹೀಗೆ ಅಮಂಗಲವಾಗಿ ಕಣ್ಣೀರನ್ನು ತೆಗೆಯಬಾರದು."

ಜಸವಂತಸಿಂಗನಿಗೆ ದುಃಖ ಒಮ್ಮೆಲೇ ಉಕ್ಕಿ ಬಂತು. ದುಃಖಿತನಾಗಿಯೇ ಹೇಳಿದ: "ಕೊನೆಗೂ ನನ್ನ ತಂಗಿ ನನಗೆ ಪತ್ತೆಯಾಗಲಿಲ್ಲ. ಅವಳಿದ್ದಿದ್ದರೆ ತನ್ನ ಅಣ್ಣನ ಲಗ್ನದಲ್ಲಿ ಎಷ್ಟು ಕುಣಿಯುತ್ತಿದ್ದಳೋ, ಎಷ್ಟು ಆನಂದ ಪಡುತ್ತಿದ್ದಳೋ, ನನ್ನ ತಂಗಿ ರೂಪಕೌರ–ತುಂಬಾ......." ಜಸವಂತಸಿಂಗನ ಕಂಠ ಗದ್ಧರಿಸಿತು. ತಾಯಿ ಸಂತೈಸತೊಡಗಿದಳು.

ಅಷ್ಟರಲ್ಲಿಯೇ ಲಗ್ನದ ಮಂಟಪದಿಂದ ಕರೆ ಬಂದಿತು. ಗಂಭೀರಸಿಂಗರು ಕೂಗಿ ಹೇಳಿದರು: "ಮುಹೂರ್ತ ಮಿಕ್ಕುವದರಲ್ಲಿದೆ. ಬೇಗ ಬನ್ನಿ" ತಾಯಿ ಜಸವಂತನನ್ನು ಲಗ್ನಮಂಟಪಕ್ಕೆ ಕರೆತಂದಳು. ಮನೆಯ ಮುಂದೆ ಹಾಕಿದ ಭವ್ಯ ಹಂದರದಲ್ಲಿ ೫೦೦ಕ್ಕೆ ಮೇಲ್ಪಟ್ಟು ಜನ ನೆರೆದಿದ್ದರು. ಡಾಯರೆಕ್ಟರರ ಮಗನ ಮದುವೆ ಎಂದಮೇಲೆ ಕೇಳುವದೇನಿದೆ.

ಜಸವಂತಸಿಂಗ ಒಂದುಸಲ ಆ ಜನಸಮ್ಮರ್ದದತ್ತ ದಿಟ್ಟಿಸಿ ನೋಡಿದ. ಅವನ ವ್ಯಾಕುಲಚಿತ್ತ ತಂಗಿ ಅಲ್ಲಿ ಎಲ್ಲಾದರೂ ಇರಬಹುದೇ ಎಂದು ಹುಚ್ಚು ಭರವಸೆ ಅವನಿಗೆ ಹುಟ್ಟಿಸಿತ್ತು. ದಂಗೆಯಲ್ಲಿ ಅಡವಿಪಾಲಾದವನು ಈವರೆಗೆ ಬರಬೇಕಾದರೆ ಸಾಕಾದಾಗ, ತಂಗಿ, ಅವಳೊಂದು ಹೆಣ್ಣು ಚಿಗರೆ ಯಾರ ಕೈಗೆ ಬಿದ್ದಿತೋ ಎಂದು ತನ್ನ ಮನಸ್ಸಿನ ಹುಚ್ಚುತನವನ್ನು ಸುಧಾರಿಸಿಕೊಂಡು ಮಂಟಪದತ್ತ ನಡೆದ.

ಮಂಟಪದಲ್ಲಿ ಹುಡುಗಿಯು ಬಂದಳು. ಜಬ್ಬಲಪೂರ ನಿರ್ವಸಿತರ ಕ್ಯಾಂಪಿನ ಮ್ಯಾನೇಜರನೇ ಅವಳಿಗೆ ತಂದೆಯಾಗಿ ಬಂದಿದ್ದ.

ಇಬ್ಬರ ನಡುವೆ ಅಂತರಪಟ ಹಿಡಿದು ಗುರು ಮಂತ್ರೋಚ್ಚರಣೆ ಮಾಡತೊಡಗಿದ. ಮಂತ್ರ ಮುಗಿದಾಕ್ಷಣ ಅ೦ತರಪಟ ಬದಿಗೆ ಸರಿಯಿತು. ವಧು ಜಸವಂತಸಿಂಗನ ಕೊರಳಲ್ಲಿ ಹಾರ ಹಾಕಲ, ಕತ್ತನ್ನು ಮೇಲಕ್ಕೆತ್ತಿದಳು. ಜಸವಂತ ಅವಳನ್ನು ನೋಡಿದಾಕ್ಷಣ ಕೈಯಲ್ಲಿಯ ಮಾಲೆಯನ್ನ ಕಿತ್ತೆಸೆದು ಅವಳನ್ನು ಅಪ್ಪಿಕೊಂಡು "ನನ್ನ ತಂಗಿ ರೂಪ, ರೂಪಕೌರ" ಎಂದು ಕೂಗುತ್ತ ಹುಚ್ಚೆದ್ದವರಂತೆ ಕೊಗಾಡತೊಡಗಿದ.

ತುಂಬಿದ ಜನವೆಲ್ಲ ಆಶ್ಚರ್ಯದಿಂದ ಸ್ತಬ್ಧರಾದರೆ, ಒಮ್ಮೆಲೆ ಶಾ೦ತಿ ನಲಿಸಿತು.

ರೂಪಕೌರ ಅಣ್ಣನನ್ನು ಅಪ್ಪಿ ಅಳುತ್ತ "ನನ್ನ ಅಣ್ಣ ಸಿಕ್ಕ." ಎಂದಳು.

ಇಬ್ಬರ ಕಣ್ಣುಗಳಲ್ಲಿ ಆನಂದಬಾಷ್ಪಗಳು ಕೋಡಿಯಾಗಿ ಹರಿಯತೊಡಗಿತು. ಗಂಭೀರಸಿಂಗರ ಪತ್ನಿ ರೂಪಕೌರಳ ಬೆನ್ನಮೇಲೆ ಕೈಯಾಡಿಸುತ್ತ "ನೀನು ಸೊಸೆಯಾಗಿ ಈ ಮನೆಯಲ್ಲಿ ಬರಹೊರಟಿದ್ದೆ. ಆದರೆ ಈಗ ಮಗಳಾಗಿ ಬಾ" ಎಂದು ಹೇಳಿ ಅವಳನ್ನು ಅಪ್ಪಿಕೊಂಡಳು.



ಬಳಿಯಲ್ಲಿಯೇ ಲಗ್ನದ ಸವಿತ್ರ ಅಗ್ನಿ ಕುಂಡ ಉರಿಯುತ್ತಿತ್ತು. ಅದರ ಹೊಗೆಗೆ ಇಬ್ಬರ ಕಣ್ಣಲ್ಲಿ ನೀರು ಸುರಿಯಹತ್ತಿದವು.

ಇಬ್ಬರೂ ಹೊಗೆಯಿಂದ ಹೊರಗೆ ಬಂದರು. ಅವರ ಜೀವನದಲ್ಲಿಯ ಹೊಗೆ ಮಾಯವಾಗಿತು.