ವಿಷಯಕ್ಕೆ ಹೋಗು

ಹೊಸ ಬೆಳಕು ಮತ್ತು ಇತರ ಕಥೆಗಳು/ಕೆಳಗಿನ ನೆರಳು

ವಿಕಿಸೋರ್ಸ್ದಿಂದ

90944ಹೊಸ ಬೆಳಕು ಮತ್ತು ಇತರ ಕಥೆಗಳು — ಕೆಳಗಿನ ನೆರಳು೧೯೫೨ಶ್ರೀ ವೆ. ಮುಂ. ಜೋಶಿ

ಕೆಳಗಿನ ನೆರಳು.


"ಟಪ್...ಟಪ್...ಟಪ್...."

ಟಾಯಿಪಿನ ಸಪ್ಪಳ ಅಲ್ಲಲ್ಲಿ ಕೇಳಬರುತ್ತಿತ್ತು. ಆದರೂ ಆಫೀಸಿನ ಉಳಿದೆಲ್ಲ ಕಾರಕೂನರು, ಒಂದೆಡೆಯಲ್ಲಿ ಕಲೆತು ಹರಟೆಯಾಡುತ್ತಿದ್ದರು, ಸಾಮಾನ್ಯವಾಗಿ ಆಫೀಸಿನಲ್ಲಿ ಹರಟೆಯೆಂದರೆ-ಸಿನಿಯಾರಿಟಿ ಗ್ರೇಡ್, ಸಸ್ಪೆಂಡ, ವಾರ್ನಿಂಗ-ಇತ್ಯಾದಿಗಳು. ಆದರೆ ಇಂದಿನ ಹರಟೆ ತುಂಬಾ ವಿಚಿತ್ರ ರೀತಿಯದಾಗಿತ್ತು.

ವಿಷಯ ಕಡೂರ ಸುಬ್ಬಣ್ಣನದಾಗಿತ್ತು. ಅವನ ಜತೆಯಲ್ಲಿ ವಾಸಂತಿಯ ಹೆಸರೂ ಕೇಳಬರತೊಡಗಿತ್ತು.

"ಪಾಪ ಸುಬ್ಬನದೇನು ತಪ್ಪು. ಹೆಣ್ಣಿನ ಬಾಣಕ್ಕೆ ಬಲಿ ಬೀಳದ ಶುಕಮುನಿಗಳು ಈಗಿನ ದಿವ್ಸದಲ್ಲಿ ಸಿಕ್ತಾರೆಯೇ? "
"ಸರಿಯಯ್ಯಾ ಸುಬ್ಬ ಅವಳ ಪಾಶದಲ್ಲಿ ಸಿಲುಕಿದ್ದರೂ, ತಾನಿನ್ನೂ ಪವಿತ್ರನಾಗಿಯೇ ಇದ್ದೆನೆ, ಅಂತ ಹೇಳ್ತಾನಯ್ಯಾ"
"ಇದರಲ್ಲಿ ಸತ್ಯ ಇದ್ದರೂ ಇರಬಹುದು. "
"ಏನಯ್ಯ ನೀನು ಕಣಿ ಹೇಳೋರ ಹಾಗೇ ಹೇಳ್ತಾ ಇದೀಯ. "
"ನಾನು ಕಣಿ ಹೇಳುವವನಲ್ಲ, ನಾನು ಕವಿಯಾಗಿದ್ದೇನೆ. ರವಿ ಕಾಣದ್ದನ್ನೂ ಕವಿ ಕಾಣುತ್ತಾನೆ ಎಂಬ ಮಾತು ನಿನಗೆ ಗೊತ್ತಿಲ್ಲವೇ ?"
"ಓಹೋ, ನೀನು ಕವಿ ಬೇರೆ ಆಗಿಬಿಟ್ಟಿದ್ದೀಯಾ ? ನೀನು ಯಾವಾಗಿನಿಂದ ಬರಿಯೋಕೆ ಪ್ರಾರಂಭಿಸಿದ್ದಿ?"
"ಅಯ್ಯೋ ಇವನು ಬರೀತಾ ಇರೋದು ನಿಂಗೆ ಗೊತ್ತಿಲ್ಲವೇ ? ಬರದೂ ಬರದೂ ೩-೪ ಡಿಸ್ಪ್ಯಾಚ್ ಬುಕ್ ತೀರಿಸಿ ಬಿಟ್ಟಿದ್ದಾನಲ್ಲಾ.”

ಈ ಮಾತಿನ ಜತೆಯಲ್ಲಿ ನಗುವಿನ ದೊಡ್ಡ ತೆರೆ ಅಲೆ ಅಲೆಯಾಗಿ ಆಫೀ ಸಿನ ಗೋಡೆಗಳಿಗೆ ಅಪ್ಪಳಿಸಿ ಸ್ಫೋಟವಾಯಿತು. ನಗುವಿನ ರಭಸ ಕಡಿಮೆಯಾದಂತೆ ಮತ್ತೆ ಮಾತಿಗೆ ಪ್ರಾರಂಭವಾಯಿತು.

ಪಾಪ, ವಾಸಂತಿಯದಾದರೂ ತಪ್ಪೇನು ? ಅವಳು 'Virgin Widow' ವಯಸ್ಸಿಗೆ ಬರೋ ಮೊದಲೇ ವಿಧವೆಯಾದವಳು. ಅವಳದೂ ಜೀವ. ಅವಳಿಗೂ ಆಶೆ ಆಕಾಂಕ್ಷೆ, ಇಚ್ಛೆಗಳಿರುವುದು ಸ್ವಾಭಾವಿಕ."

"ಓಹೋ, ಪ್ರಗತಿಶೀಲ ಸಾಹಿತಿಗಳೇ, ತಮ್ಮ ಅಭಿಪ್ರಾಯ ಹೊರಗೆ ಹೋಗಿ ವ್ಯಕ್ತ ಮಾಡಿ.”

"ಪಟ್, ಪಟ್, ಪಟ್ " –ಚಪ್ಪಲಿನ ಸಪ್ಪಳ ಅವರ ಹರಟೆಗೆ ತಡೆಮಾಡಿತು. ವಾಸಂತಿ ಮ್ಲಾನವದನಳಾಗಿ, ಆಫೀಸಿನಲ್ಲಿ ಬಂದು ನೇರಾಗಿ ಟಾಯಿಪ ಟೇಬಲ್ಲಿನ ಹತ್ತಿರ ಬಂದು ಕುಳಿತಳು. ಒಂದೆಡೆಯಲ್ಲಿ ಕಲೆತ ಕಾರಕೂನರು ತಮ್ಮ ತಮ್ಮ ಜಾಗೆಗೆ ತೆರಳಿದರು. ಅವರ ಪಿಸುಮಾತುಗಳು ವಾಸಂತಿಯ ಹೃದಯಕ್ಕೆ ಕಾದ ಕಬ್ಬಿಣದಿಂದ ಬರೆ ಕೊಡುತ್ತಿರುವಂತೆ ಭಾಸವಾಯಿತು. ತನ್ನ ವಿಷಯದ ಕಲ ಮಾತುಗಳು ಮಂದಿಯ ಬಾಯಲ್ಲಿ ಮೂಡಿದಂದಿನಿಂದ, ಅವಳು ಒಂದು ವಾರ ರಜೆ ಪಡೆದುಕೊಂಡು ಮನೆಯಲ್ಲಿಯೇ ಕುಳಿತುಕೊಂಡಿದ್ದಳು. ಜನತೆಯ ಎದುರು ತನ್ನ ಮುಖವನ್ನು ತೋರಿಸುವುದಕ್ಕೂ ಅವಳು ನಾಚಿದ್ದಳು, ಅಂಜಿದ್ದಳು. ಜಗತ್ತಿನಲ್ಲಿದ್ದ ಸನಾತನ ಶೃಂಖಲೆಯನ್ನು ಮುರಿದು ಮುಂದಡಿಯನ್ನು ಇಡುವೆನೆಂದು ದೃಢಸಂಕಲ್ಪವನ್ನು ಮಾಡಿಕೊಂಡ ವಾಸಂತಿ ಇಂದು ಪ್ರತಿಯೊಬ್ಬರಿಗೂ ಅಂಜುತಿದ್ದಳು. ತನ್ನ ಮುಖವನ್ನು ಮೇಲಕ್ಕೆತ್ತಿ ನಡೆಯಲೂ ಅವಳಿಗೆ ಧೈರ್ಯವಾಗುತ್ತಿರಲಿಲ್ಲ. ಆಫೀಸಿನಲ್ಲಿದ್ದ ೩೦ ಮಂದಿ ಕಾರಕೂನರ ದೃಷ್ಟಿ ತನ್ನೆಡೆಗೆಯೇ ಇದೆ ಎಂಬುದು, ತಾನು ಕೆಳಮುಖ ಹಾಕಿದ್ದರೂ, ಅವಳಿಗೆ ಚನ್ನಾಗಿ ಗೊತ್ತಿತ್ತು, ನಖಶಿಖಾಂತ ಬೆವೆತು ಹೋದ ವಾಸಂತಿಗೆ ಏನು ಮಾಡಬೇಕೆಂಬುದೇ ತಿಳಿಯದಾಯಿತು. ಸುಮ್ಮನೇ ಕೂಡುವದಕ್ಕಿಂತಲೂ ಏನಾದರೂ ಮಾಡಬೇಕೆಂದು ಟಾಯಿಪಿನ ರಾಡರನ್ನು ಅತ್ತಿಂದಿತ್ತ ತಿರುಗಿಸಿ, ಅದನ್ನು ಸರಿಪಡಿಸತೊಡಗಿದಳು. ಇಂಥ ಕೆಲಸದಲ್ಲಿ ನಿಮಗ್ನಳಾಗಿ ತನ್ನಷ್ಟಕ್ಕೆ ತಾನು ಯಾವದೋ ನಿರ್ಜನ ಪ್ರದೇಶದಲ್ಲಿದ್ದೇನೆ ಎಂಬ ಭಾವನೆಯನ್ನು ಕ್ಷಣಕಾಲವಾದರೂ ಮನಸ್ಸಿನಲ್ಲಿ ತಂದುಕೊಂಡಳು. ಅವಳಿಗೆ ಈ ಮೂವತ್ತು ಕಾರ ಕೂನರ ಭೇದಕ ದೃಷ್ಟಿಯು ಅಷ್ಟೊಂದು ಮಹತ್ವವೆನಿಸಲಿಲ್ಲ. ಅದು ಕೇವಲ ಬರಲಿರುವ ದೊಡ್ಡ ಬಿರುಗಾಳಿಯ ಮೊದಲ ಸೆಳಕು-ಬಿರುಗಾಳಿಯ ಭಯಾನಕ ಸ್ವರೂಪ-ಧರ್ಮ ಮಾರ್ತಂಡ ಗೋಪಾಲ ಸ್ವಾಮಿಯವರು: ಅಬ್ಬಾ, ಗೋಪಾಲಸ್ವಾಮಿಯವರ ಹೆಸರು ಕೇಳಿದಾಕ್ಷಣ, ವಾಸಂತಿಯು ಬೆವರಿನ ಸುರಿಮಳೆಯಲ್ಲಿ ತೊಯ್ದು ಹೋದಳು. ಕೈಯಿಂದ ಟಾಯಿಪಿನ ರಾಡರ ತಿಕ್ಕುತಿದ್ದ ಹಾಗೆಯೇ ವಾಸಂತಿ ವಿಚಾರಿಸಹತ್ತಿದಳು.

"––ಗೋಪಾಲ ಸ್ವಾಮಿಯವರಿಗೆ–– ಸರಕಾರ 'ಧರ್ಮಮಾರ್ತಂಡ' ಎಂಬ ಬಿರುದು ಕೊಟ್ಟಿದೆ. ಅವರ ದೃಷ್ಟಿಯಲ್ಲಿ ನಾನು ಮಾಡಿದ್ದು-ಮಾಡಿದ್ದು ಅಲ್ಲ; ಮಾಡಬೇಕೆನ್ನುವದು ಅಧರ್ಮದ ಕೆಲಸ. ಆದರೆ ನಾನು ಮಾಡುತ್ತಿರುವದು ಅನ್ಯಾಯವೇ ? ಛೇ, ನನ್ನ ಮನೋದೇವತೆ ನನಗೆ ಧೈರ್ಯ ಕೊಡುತ್ತಿದ್ದಾಳೆ. ಒಂದು ವೇಳೆ ಧೈರ್ಯದಿಂದ ಈ ಕೆಲಸವನ್ನು ಮಾಡಿಬಿಟ್ಟರೆ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ರುದ್ರ ದೃಷ್ಟಿಯಲ್ಲಿ ನಾವಿಬ್ಬರೂ ಸುಟ್ಟು ಭಸ್ಮವಾಗಬಹದು. ನಾನು ಸುಟ್ಟರೂ ಅಡ್ಡಿ ಇಲ್ಲ. ನನ್ನ ಸುಬ್ಬಗೂ ಸುಖವಾಗಿರಬೇಕೆಂಬುದೇ ನನ್ನ ಆಶೆ- "

ವಾಸಂತಿ ಇನ್ನೂ ಏನೇನನ್ನೋ ವಿಚಾರಿಸುವದರಲ್ಲಿದ್ದಳು. ಆದರೆ ಕಾರಕೂನರಲ್ಲಿ ಮಾತಿನ ಗೋಜೆ ಒಮ್ಮೆಲೇ ಹೆಚ್ಚಾಯಿತು. ವಾಸಂತಿ ತಿರುಗಿ ನೋಡಿದಳು. ಆಫೀಸಿನ ತಲೆ ಬಾಗಿಲಿನಿಂದ ಸುಬ್ಬಣ್ಣ ಒಳಗೆ ಬರತೊಡಗಿದ್ದ. ರಾಜದರ್ಬಾರಿನಲ್ಲಿ ಅರಸು ಬರಹತ್ತಿದನೆಂದರೆ ಭಟ್ಟಂಗಿ ಹೆಳವರ ಹೊಗಳಿಕೆಗೆ ಪ್ರಾರಂಭವಾಗುತ್ತದೆ. ಹಾಗೆಯೇ ಕುಳಿತ ಕಾರಕೂನರು, ಸುಬ್ಬಣ್ಣನಿಗೆ ಒಂದೊಂದೇ ಶಬ್ದವನ್ನಾಡುತ್ತಿದ್ದರು. ಆದರೆ ಅದು ಹೋಗಳಿಕೆಯದಾಗಿರಲಿಲ್ಲ,

"ಓಹೋ ಸುಬ್ಬಣ್ಣನವರೇ, ಧನ್ಯನಾದಗಳು. ನೀವಿಬ್ಬರೂ ಸುಖವಾಗಿರಬೇಕೆಂಬುದೇ ನನ್ನ ಆಶೆ."
"ಸುಬ್ಬಣ್ಣ, ನಿನ್ನ ಧೈರ್ಯಕ್ಕೆ ನಾನು ಮೆಚ್ಚಿದೆ. ನಾವೆಲ್ಲರೂ ಪ್ರಗತಿಶೀಲರಾಗಬೇಕು."
"ಹೌದು. ವಿಧವೆ ಸುಂದರ ಸುರೂಪಿಯಾಗಿದ್ದರೆ ಮಾತ್ರ ನಾನೂ ಪ್ರಗತಿಶೀಲರ ಬಳಗಕ್ಕೆ ಸೇರಬಯಸುತ್ತೇನೆ."
"ಲೋ ಸುಬ್ಬ, ಈ ಕಣ್ಣುಮುಚ್ಚಾಲೆಯ ಆಟ ಬಿಟ್ಟು, ಬೆಳಕೀಗೆ ಬಾರೋ ಹೀಗೆ"

ಸುಬ್ಬಣ್ಣ ಯಾರಿಗೂ ಉತ್ತರ ಕೊಡಲಿಲ್ಲ. ಕೊಡುವ ಸ್ಥಿತಿಯಲ್ಲಿಯೂ ಇರಲಿಲ್ಲ. ನೇರಾಗಿ ತನ್ನ ಟೇಬಲ್ಲಿನತ್ತ ನಡೆದು ತನ್ನ ಖುರ್ಚಿಯಬಳಿ ಸಾರಿದ. ಒಂದು ಸಲ ಆಫೀಸಿನಲ್ಲಿಯ ಕಾರಕೂನರ ಮುಖಗಳನ್ನು ದೃಷ್ಟಿಸಿದ. ಆಗ ಅವನಿಗೆ ಕಂಡಿದ್ದು ಎಲ್ಲರ ಪ್ರಶ್ನಾರ್ಥಕ ಮುದ್ರೆ, ತಾನು ತಪ್ಪಿತಸ್ಥನಲ್ಲ ಎನ್ನುವದು ಸುಬ್ಬನಿಗೆ ಗೊತ್ತಿದ್ದರೂ, ಮಂದಿಯ ಬಾಯಿ ಅವನನ್ನು ತಪ್ಪಿತಸ್ಥನನ್ನಾಗಿ ನಿರ್ಣಯಿಸಿತ್ತು. ನಾಲ್ಕು ಜನ ಒಬ್ಬನನ್ನು ಹುಚ್ಚನೆಂದು ಕರೆದು ಹಾಗೆ ಅವನನ್ನು ಕಾಣತೊಡಗಿದರೆ, ಅವನು ಎಷ್ಟೋ ಸರಿ ಇದ್ದರೂ, ಸ್ವಲ್ಪಾದರೂ ಹುಚ್ಚು ಕಳೆ ಅವನ ಮುಖದ ಮೇಲೆ ಪಸರಿಸುತ್ತದೆ. ಇದೊಂದು ಸ್ವಾಭಾವಿಕ ಮಾನಸಿಕ ರೋಗ, ಸುಬ್ಬನೂ ಒಬ್ಬ ಸಾಮಾನ್ಯ ಮನುಷ್ಯ. ಇಂಥ ಮಾನಸಿಕ ರೋಗದಿಂದ ಮುಕ್ತನಾಗುವದು ಸುಲಭ ಸಾಧ್ಯವಿದ್ದ ಮಾತಲ್ಲ ತಾನು ಮಾಡುತ್ತಿರುವ ಕೆಲಸ ಯೋಗ್ಯವಲ್ಲವೆಂದು ಹೇಳಿ ಹೀಯಾಳಿಸುವ ಜನಕ್ಕೆ ಉತ್ತರ ಕೊಡಬೇಕೆಂದು ಒಂದುಸಲ ಸುಬ್ಬ ಯೋಚಿಸಿದ. ಆದರೆ ಬಾಯಿಯೇ ಏಳಲಿಲ್ಲ. ಹಾಗೆಯೇ ಖುರ್ಚಿಯಲ್ಲಿ ಕುಳಿತುಕೊಂಡ, ಈಗ ಮಾತನಾಡಿ ಫಲವೇನು, ಅದೂ ಸಂಬಂಧವಿಲ್ಲದವರ ಜತೆಯಲ್ಲಿ ಮಾತನಾಡಿ ಫಲವೇನು ? ತನ್ನ ನಡಾವಳಿಯ ಬಗ್ಗೆ ವಿಚಾರಿಸುವ ಧರ್ಮಮಾರ್ತಂಡ ಗೋಪಾಲಸ್ವಾಮಿಯವರಿಗೆ ಧೈರ್ಯವಾಗಿಯೇ ಹೇಳುವದನ್ನು ಹೇಳಿದರಾಯಿತು ಎಂದು ವಿಚಾರಿಸಿ ಟೇಬಲ್ಲಿನ ಮೇಲಿದ್ದ ಕಾಗದರಾಶಿಗೆ ಕೈ ಹಾಕಿದ.

ಧರ್ಮ ಮಾರ್ತಂಡ ಗೋಪಾಲ ಸ್ವಾಮಿಯವರ ಬಗ್ಗೆ ಮನಸ್ಸಿನಲ್ಲಿ ವಿಚಾರಿಸುತ್ತಿರುವಾಗಲೇ, ಸುಬ್ಬ ಮೈ ತುಂಬ ಬೆವೆತು ಹೋದ, ಕೆಲಸದ ಕಡೆಯ ಲಕ್ಷವೆಲ್ಲಿಯೋ ಹೋಯಿತು. ಹಾಗೇ ಕೈಯಲ್ಲಿದ್ದ ಕಾಗದದ ಮೇಲೆ ಕಣ್ಣನಿಟ್ಟು ವಿಚಾರಿಸತೊಡಗಿದ.

––ತಾನೂ ಧರ್ನು ಮಾರ್ತಂಡ ಗೋಪಾಲಸ್ವಾಮಿಯವರ ಊರಿನವನೇ, ತಾನೂ ಅವರ ಮಗಳೂ-ವನಜಾಕ್ಷಿ-ಕೂಡಿ ಲೋವ್ಹರ್ ಸೆಕೆಂಡರಿವರೆಗೂ ಕೂಡಿ ಕಲಿತವರು. ಅವರ ಮಗಳು-ವನಜಾಕ್ಷಿಯ ಜತೆಯಲ್ಲಿ, ಎಷ್ಟೋ ಸಲ, ತಾನು ಚಿಕ್ಕವನಿರುವಾಗಲೇ ಗೋಪಾಲ ಸ್ವಾಮಿಯವರ ಮನೆಗೆ ಹೋಗಿ ಬರುತ್ತಿದ್ದ. ಆಗಿನಿಂದಲೇ ಗೋಪಾಲ ಸ್ವಾಮಿಯವರ ಕಠೋರ ಧಾರ್ಮಿಕತೆಯ ಅರಿವು ತನಗಾಗಿದೆ. ಊರಲ್ಲಿ ಯಾವದೇ ಧಾತ್ಮಿಕ ಕಾರ್ಯಗಳಾದರೆ, ಅವೆಲ್ಲವೂ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ನೇತ್ರತ್ವದಲ್ಲಿಯೇ ಜರುಗಬೇಕು. ಮೈಸೂರಿನ ಸಂಸ್ಕೃತಿ ಸಂರಕ್ಷಣ ಸಂಘಕ್ಕೆ ಗೋಪಾಲಸ್ವಾಮಿಯವರೇ ಮೊದಲಿನಿಂದಲೂ ಅಧ್ಯಕ್ಷರಾಗಿದ್ದರು. ಮುಂದೆ ಅವರು ತಮ್ಮ ಊರಿಂದ ಚನ್ನಪಟ್ಟಣ ತಾಲ್ಲೂಕು ಆಫೀಸರರಾಗಿ ವರ್ಗಾ ಯಿಸಲ್ಪಟ್ಟರು. ಆಗಲೇ ಅವರ ಮಗಳು ವನಜಾಕ್ಷಿ ತಂದೆಯ ಜತೆಯಲ್ಲಿ ಚನ್ನಪಟ್ಟಣಕ್ಕೆ ತೆರಳಿದಳು ವನಜಾ ಸ್ವಭಾವತಃ ಮುದ್ದು ಹುಡುಗಿ, ಕಪಟವನ್ನರಿಯದ ಮುಗ್ಧ, ಸ್ವಭಾವ ಸ್ವಲ್ಪ ಹುಡುಗಾಟದ್ದಾದರೂ ಸಾಕ್ಷಾತ್ ದಯೆಯ ಮೂರ್ತಿಯಾಗಿದ್ದಳು. ಮುಂದೆ ತಾನು ತನ್ನ ಊರಲ್ಲಿಯೇ ಕಲಿತು ಮ್ಯಾಟ್ರಿಕ್ ಪರೀಕ್ಷೆಗೆ ಕಟ್ಟಿ ಪಾಸಾದೆನು. ನವಕರಿ ಸಿಗದ ದಿನದಲ್ಲಿ ಪಾಸಾದರೇನು, ಬಿಟ್ಟರೇನು, ತನಗೆ ತಂದೆ ತಾಯಿಗಳೂ ಇರಲಿಲ್ಲ ಪಿತ್ರಾರ್ಜಿತ ಆಸ್ತಿಯೂ ಇರಲಿಲ್ಲ. ತಾನು ವಾರದ ಮನೆಯ ಅನ್ನವನ್ನುಂಡೇ ಮ್ಯಾಟ್ರಿಕ್ ಪರೀಕ್ಷೆಯವರೆಗೆ ಕಲಿತಿದ್ದೆ. ಧರ್ಮಮಾರ್ತಂಡ ಗೋಪಾಲಸ್ವಾಮಿಯವರಲ್ಲಿಯೂ ಕೆಲದಿನ ಉಂಡು ಅವರಿಗೂ ಋಣಿಯಾಗಿದ್ದೆ. ಶಾಲೆ ಕಲಿಯುವದು ಮುಗಿದ ಮೇಲೆ ಅನ್ನ ಹಾಕುವವರಾರು? ಆಗ ತನಗೆ ಮತ್ತೆ ನೆನಪಾದದ್ದು ಚನ್ನಪಟ್ಟಣದ ತಾಲ್ಲೂಕು ಆಫೀಸರ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು.-

ನವಕರಿಗಾಗಿ ಧರ್ಮಮಾರ್ತಂಡ ಗೋಪಾಲ ಸ್ವಾಮಿಯವರ ಕಡೆಗೆ ಬಂದೆ, ಆಗ-

"ಏನು ನೌಕರಿಗಾಗಿ ಬಂದೆಯಾ? ಯಾರು ನೀನು?" ವಾರದಲ್ಲಿ ಒಂದು ಸಲ ಅನ್ನವನ್ನಿಕ್ಕುತ್ತಿದ್ದರೂ ತನ್ನ ನನಪನ್ನೇ ಮರೆತು ಹೋದ ಗೋಪಾಲಸ್ವಾಮಿಯವರು ಗಂಭೀರವಾಗಿ ತನಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ತಾನು–

"ಹೌದು ಸ್ವಾಮಿ, ತಾವು ನನ್ನನ್ನು ಮರೆತಿರಬಹುದು ನಾನು ನಿಮ್ಮಲ್ಲಿ ವಾರದ ಊಟಮಾಡಿ, ವಿದ್ಯಾರ್ಜನೆ ಮಾಡಿದ ಬಡ ಹುಡುಗ ಸುಬ್ಬ."

"ಇದ್ದಿತು, ನನಗೆ ಜ್ಞಾಪಕವಿಲ್ಲ"
"ಸರಿಯಾಗಿದೆ. ಗಾಂಧಿ ನೆಹರೂರವರನ್ನು ಎಲ್ಲರೂ ಗುರುತಿಸುತ್ತಾರೆ. ಆದರೆ ಅವರು ಎಲ್ಲರನ್ನು ಗುರಿತುಸುವದು ಸಾಧ್ಯವೇ? ಅದು ಅವರ ತಪ್ಪಲ್ಲ."
"ಅದೆಲ್ಲ ಇರಲಿ, ನೀನ, ಮ್ಯಾಟಿಕ ಪರೀಕ್ಷೆಯಲ್ಲಿ ಪಾಸಾಗಿದ್ದೀಯಾ? ಚೆನ್ನಾದ ನಡತೆಯ ಬಗ್ಗೆ ಸರ್ಟಿಫಿಕೇಟ ತಂದೀದಿಯಾ? "
"ನನ್ನನ್ನು ತಾವೇ ಬಲ್ಲಿರಿ ಎಂದು ಎಲ್ಲಿಯೂ ಒಳ್ಳೇ ನಡತೆಯ ಸರ್ಟಿಫಿಕೇಟು ದೊರಕಿಸುವ ಗೋಜಿಗೆ ಹೋಗಲಿಲ್ಲಮೇಲಾಗಿ ಕಾಗದದ ಮೇಲೆ ಯಾರಾದರೂ ಬರೆದು ಕೊಟ್ಟಷ್ಟಕ್ಕೇ ನಡತೆ ಸರಿಯಾಗಿರುತ್ತೆ ಎಂದು ನನ್ನ ನಂಬಿಕೆ ಇಲ್ಲ."
"ಓಹೋ, ಇಷ್ಟುದ್ದದ ಮಾತೇ. ಇರಲಿ, ನಿನ್ನ ನಡತೆ ಸರಿಯಾಗಿರುವ ಬಗ್ಗೆ ಇಬ್ಬರು ಸದ್ಧಹಸ್ಪರ ಸರ್ಟಿಫಿಕೀಟುಗಳನ್ನು ಹಾಜರಪಡಿಸು. ಮುಂದೆ ವಿಚಾರಿಸುವಾ?"

ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರ ನಿಶ್ವಯ ಸ್ವರದ ಉತ್ತರ ಕೇಳಿ ತಾನು ನಿರಾಶನಾಗಿ ಹೊರಳಿ ಜಡವಾದ ಹೆಜ್ಜೆಯನ್ನು ಹಾಕಿ ಹಿಂದೆ ಹೊರಳುವದರಲ್ಲಿದ್ದೆ. ಅಷ್ಟರಲ್ಲಿ ಸ್ವಾಮಿಯವರ ಮಗಳು ವನಜಾಕ್ಷಿ ಕಮಲದ ಹೂಗಳನ್ನು ಕೈಯಲ್ಲಿರಿಸಿಕೊಂಡು ಒಳಗಿನಿಂದ ಬಂದು

"ಸುಬ್ಬಾ- ಏಯ್ ಸುಬ್ಬಾ ಯವಾಗ ಬಂದೆ. ಮ್ಯಾಟ್ರಿಕ್ ಪಾಸಾದೆ ಅಂತೆ, ನಾನೂ ಪಾಸಾದೆ."

"ವನಜಾ" ಗೋಪಾಲಸ್ವಾಮಿಯವರು ಗುಡುಗಿದರು. ತಾಲ್ಲೂಕು ಆಫೀಸರನ ಮಗಳು ಒಬ್ಬ ಸಾಮಾನ್ಯ ಮನುಷ್ಯ- ಅದೂ ನವಕರಿ ಕೇಳಲು ಬಂದವನ ಜತೆಯಲ್ಲಿ ಮಾತನಾಡುತ್ತಿರವದು ಅವರಿಗೆ ಸರಿಬರಲಿಲ್ಲವೇನೋ? ವನಜಾ ಒಂದು ಸಲ ತಂದೆಯ ಕಡೆ ಹೊರಳಿ ನೋಡಿ:"ಅಪ್ಪಾ, ಸುಬ್ಬಾ ಇವನು" ಅವಳ ವಾಕ್ಯ ಪೂರ್ತಿ ಮುಗಿಯುವ ಮೊದಲೇ ಗೋಪಾಲಸ್ವಾಮಿಯು ಉತ್ತರಿಸಿದ್ದರು.

"ನನಗೆ ಅರ್ಥವಾಯ್ತು. ಸುಬ್ಬನೇ, ನೌಕರೀ ಕೇಳೋಕೆ ಬಂದೀದಾನೆ." ಹುಡುಗಾಟಿಕೆಯ ಸ್ವರದಲ್ಲಿ ತ೦ದೆಗೆ ವನಜಾ ಒತ್ತಾಯಪಡಿಸಿದಳು. "ಹಾಗಾದರೆ ನಿನ್ನ ಆಫೀಸಿನಲ್ಲಿ ಕೊಟ್ಟು ಬಿಡಪ್ಪಾ."

ಅವಳ ಮಾತು ಮುಗಿಯುವ ಮೊದಲೇ ದರಿದ್ರ ದಯಾಸಂಘದ ಜನ, ಧರ್ಮಮಾರ್ತಂಡರು ಹಣ ಸಹಾಯ ಕೇಳಲು ತಮ್ಮ ಸಮಿತಿಯ ಹಣದ ಪೆಟ್ಟಿಗೆಯನ್ನು ಮುಂದೊಡ್ಡಿದರು.

ಪೆಟ್ಟಿಗೆಯತ್ತ ಲಕ್ಷವಿಲ್ಲದವರಂತೆ ಧರ್ಮಮಾರ್ತಂಡ ಗೋಪಾಲಸ್ವಾಮಿ ಯವರು ಕೂಗಿದರು:

"ಸುಬ್ಬ, ಈಗ ನಿರುದ್ಯೋಗಿಯಾಗಿದ್ದೀಯೋ?"
"ಹೌದು, ನಿಜಕ್ಕೂ.... " ತಾನು ಉತ್ತರಿಸಿದ್ದು.
"ಹಾಗಾದರೆ ನಾಳಿನಿಂದ ರೇಶನಿಂಗ ಆಫೀಸಿನಲ್ಲಿ ಕೆಲಸಕ್ಕೆ ಬಾ. ಹುಕುಮನ್ನು ನಾಳೆ ಕೊಡುವೆ. ಅಪಾಯಂಟಮೆಂಟ ನಾಳಿನಿಂದಲೇ ಮಾಡುವೆ. "

ನಿರುತ್ಸಾಹದಲ್ಲಿ ಒಮ್ಮೆಲೆ ಆಶೆ-ಗೆರಸೊಪ್ಪೆಯ ಧಬಧಬೆಯಂತೆ ಹರಿದು ಬಂದಂತಾಯಿತು. ಒಮ್ಮೆಲೇ ಓಡಿಹೋಗಿ ಧರ್ಮಮಾರ್ತಂಡರ ಕಾಲುಗಳಿಗೆ ನಮಸ್ಕರಿಸಿ ತಾನು ಬಾಗಿಲ ಹೊರಗೆ ಬಿದ್ದ. ಹೊರಗೆ ಬೀಳುವಾಗಲೇ ಧರ್ಮ ಮಾರ್ತಂಡರ ಕೆಲ ಮಾತು ಕೇಳಿಸಿತ್ತು.

"ನೀವು ದರಿದ್ರ ದಯಾ ಸಂಘ ಅಂತಾ ಫಂಡ ಜಮಾ ಮಾಡುತ್ತೀರಿ. ಆದರೆ ನಾನು ದರಿದ್ರರಿಗೆ ನೌಕರಿ ಕೊಟ್ಟು ಉದ್ಧರಿಸುತ್ತೇನೆ. ಫಂಡು ಕೊಟ್ಟು ದುದರಕಿಂತಲೂ ಹೆಚ್ಚು ಕೆಲಸ ನಾನೀಗ ಮಾಡುತ್ತಿದ್ದೇನೆ. "

ಮುಂದೆ ನವಕರಿಯೂ ದೊರೆಯಿತು. ಧರ್ಮಮಾರ್ತಂಡರು ತಮ್ಮ ನವಕರರ ಜತೆಯಲ್ಲಿ ಹೆಚ್ಚು ಮಾತಾಡುತ್ತಲೂ ಇರಲಿಲ್ಲ. ವನಜಾ ಕಾಲೇಜ ಕಲಿಯಲು ಬೆಂಗಳೂರನ್ನು ಸೇರಿದಳೆಂದು ಜನರ ಬಾಯಿಂದ ತಿಳಿಯಿತು. ಏಕೆಂದರೆ, ಅವರ ಮನೆಗೆ ಹೋಗಲು ಯಾವ ಕಾರಕೂನನಿಗೂ ಧೈರ್ಯವಾಗುತ್ತಿರಲಿಲ್ಲ. ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ಶಿಸ್ತೆ ಆ ರೀತಿ ಯದಾಗಿತ್ತು. ಆಫೀಸಿನಲ್ಲಿ ಕಂಡಕ್ಟ ಸರ್ಟಿಫಿಕೇಟ ಹಾಜರಪಡಿಸಲಿಲ್ಲದವನೆಂದರೆ ತಾನೊಬ್ಬನೇ. ಅದನ್ನು ಹಾಜರ ಪಡಿಸದಿದ್ದರೂ ತನ್ನಲ್ಲಿ ಯಾವ ದುರ್ಗುಣಗಳೂ ಇರಲಿಲ್ಲ. ತನ್ನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದ ಬಾಲವಿಧವೆ ವಾಸಂತಿ–"

"ಗರ್‌ರ್, ಗಕ್ಕ”

ಸುಬ್ಬ ಒಮ್ಮೆಲೇ ಸಾವರಿಸಿಕೊಂಡದ್ದನು. ಆಫೀಸಿನ ಹೊರ ಆವಾರದಲ್ಲಿ ಧರ್ಮಮಾರ್ತಂಡ ಗೋಪಾಲಸ್ವಾಮಿಯವರ ಕಾರು ಬಂದು ನಿಂತ ಸಪ್ಪಳವದು. ಆ ಕಾರಿನ ಸಪ್ಪಳದ ಜತೆಯಲ್ಲಿಯೇ, ಆಫೀಸಿನ ತುಂಬೆಲ್ಲ ರುದ್ರಗಂಭೀರ ಪರಿಸ್ಥಿತಿ ನೆಲಸಿತು. ಟಾಯಿಪಿಸ್ಟರು ಟಾಯಿಪ ಮಾಡುವದರಲ್ಲಿ ತೊಡಗಿದರು. ಜವಾನರು ಕೈಯಲ್ಲಿದ್ದ ಬೀಡಿ ತುಂಡುಗಳನ್ನೆಸೆದು, ಸಾವರಿಸಿಕೊಂಡು ಎದ್ದುನಿಂತರು. ಗುಮಾಸ್ತರೆಲ್ಲ ತಮ್ಮೆದುರಿನ ಕಾಗದದ ರಾಶಿಯಲ್ಲಿ ಕೈ ಹಾಕಿ ತುಂಬುಕೆಲಸದಲ್ಲಿ ತೊಡಗಿದ ಭಾವವನ್ನು ಮುಖದ ಮೇಲೆ ತಂದಿರಿಸಿದರು. ಆಫೀಸಿನ ತುಂಬೆಲ್ಲ ಸ್ಮಶಾನಶಾಂತಿ ವ್ಯಾಪಿಸಿತು. ಬಿರುಗಾಳಿಯ ಪೂರ್ವದಲ್ಲಿಯ ಶಾಂತತೆಯ ನೆನಪನ್ನು ಮಾಡಿಕೊಡುತ್ತಿತ್ತು ಈ ಸ್ಮಶಾನಶಾಂತತೆ.

ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರು ಆಫೀಸಿನು ಮಧ್ಯದಿಂದ ಹಾಯ್ದು ನೇರಾಗಿ ತಮ್ಮ ಕೋಣೆಗೆ ಹೋದರು. ಆ ರುದ್ರಗಂಭೀರ ಮೂರ್ತಿ ಕೋಣೆ ಸೇರುವವರೆಗೂ ಎಲ್ಲ ಕಾರಕೂನರ ಕೈಗಳು ನಡುಗುತ್ತಲೇ ಇದ್ದವು.

"ಟ್ರಿನ್.....ಟ್ರಿನ್.... ಟ್ರಿನ್...." ಗೋಪಾಲಸ್ವಾಮಿಯವರ ಕೋಣೆಯೊಳಗಿಂದ ಕರೆಯುವ ಗಂಟೆಯ ಸಪ್ಪಳವಾಯಿತು. ಕೂಡಲೇ ಆಫೀಸು ಜವಾನ ಕೊಣೆಯನ್ನು ಪ್ರವೇಶಿಸಿದ. ಆಫೀಸಿನಲ್ಲಿದ್ದ ಮೂವತ್ತು ಗುಮಾಸ್ತೆಯರ ಕಣ್ಣು ಜವಾನನು ತಿರುಗಿ ಬರುವದನ್ನು ನಿರೀಕ್ಷಣೆ ಮಾಡತೊಡಗಿದವು. ಆಫೀಸ ಜವಾನ ಒಮ್ಮೆ ಹೊರಗೆ ಬಂದು, ಸುಬ್ಬನ ಬಳಿ ಸಾರಿ "ಸಾಹೇಬರು ತಮ್ಮನ್ನು ಕರೆದಿದ್ದಾರೆ” ಎಂದು ಹೇಳಿದ. ಆದರ ನಿರೀಕ್ಷಣೆಯಲ್ಲಿಯೇ ಇಬ್ಭ ಸುಬ್ಬಣ್ಣ ನಿರ್ವಿಕಾರನಾಗಿಯೇ ಕೋಣೆಯನ್ನು ಪ್ರವೇಶಿಸಿದನು.

ಗುಮಾಸ್ತರ ತಂಡವೆಲ್ಲ ಕಾಲುಸಪ್ಪಳವನ್ನೇನೂ ಮಾಡದೆ ಹಾಗೆಯೇ ಖೋಲಿಯ ಹೊರಬದಿಗೆ ಕೂಡಿತು. ನಡೆಯುವ ಗಲಾಟೆಯ ಬಗ್ಗೆ ಕುತೂ ಹಲಿತವಾಗಿತ್ತು ಆ ತಂಡ, ವಾಸಂತಿಗೆ ಕೂತಲ್ಲಿಂದಲೇ ಒಳಗಿನ ಸಂಭಾಷಣೆ ಕೇಳುತ್ತಿತ್ತು.

ಕೋಣೆಯಲ್ಲಿ ಸಾಹೇಬರು ಗಂಭೀರ ಧ್ವನಿಯಲ್ಲಿ ಮಾತನಾಡಲು ಪ್ರಾರಂಭಿಸಿದರು:

“ನೀನು ಎಲ್ಲಿಂದ ಬಂದೆ, ಹೇಗೆ ಬಂದೆ, ಗೊತ್ತಿದೆಯೆ?”
"ಗೊತ್ತಿದೆ.”
"ಮಾರುತ್ತರ ಕೊಡ್ತೀಯಾ?"
"ನಿರುದ್ಯೋಗಿಯಾಗಿ, ಮೈಮೇಲೆ ಅರಿವೆ ಇಲ್ಲದೇ ನೌಕರೀ ಕೇಳಲು ಬಂದಿದ್ದೆ."
"ತಾವು ದೊಡ್ಡ ಮನಸ್ಸು ಮಾಡಿ ನೌಕರಿ ಕೊಟ್ಟಿರಿ ತಮಗೆ ನಾನು ಉಪಕೃತ"
"ಆ ಉಪಕಾರದ ಪ್ರತಿಫಲವನ್ನು ಈ ರೀತಿಯಲ್ಲಿ ತೀರಿಸುವಿಯಾ?”
"ನಾನು ಯಾವ ಅನ್ಯಾಯವನ್ನೂ ಮಾಡಿಲ್ಲ"
"ಇನ್ನೂ ಏನನ್ಯಾಯವಾಗುವುದು ಉಳಿದಿದೆ? ನಾನಿರುವ ಆಫೀಸಿನಲ್ಲಿ ಇಂಥವರಿಗೆ ಎಡೆ ಇಲ್ಲಾ"
"ಅಷ್ಟು ದೂರ ಹೋಗಿ ನನ್ನ ಹೊಟ್ಟೆಯ ಮೇಲೆ ಕಾಲಿಡಬೇಡಿ"
"ಹಾಗಾದರೆ ನಾನು ಹೇಳಿದಂತೆ ನಡೆಯುತ್ತೀಯಾ?"
"ತಮ್ಮ ಆಜ್ಞೆ ಏನು?"
"ನೀನೂ ವಾಸಂತಿ ಇಬ್ಬರೂ ಇನ್ನೂ ಅನೀತಿಯಮಟ್ಟವನ್ನು ದಾಟಿಲ್ಲವೆಂದು ನಾನು ಭಾವಿಸುತ್ತೇನೆ."
"ದೇವರಸಾಕ್ಷಿಯಾಗಿ ನಾವಿನ್ನೂ ಅನೀತಿಯ ಮಟ್ಟವನ್ನು ದಾಟಿಲ್ಲ--ಆದರೆ–-”
"ಆದರೆ ಗೀದರೆ ಬೇಕಿಲ್ಲ. ನೀನು ಅವಳನ್ನು ಲಗ್ನವಾಗುವ ಮಾತನ್ನು ಮರೆತುಬಿಡು. ನಮ್ಮ ಧರ್ಮ ಅಚ್ಚಳಿಯದೆ ಬೆಳೆದು ಬಂದ ರೀತಿಯಲ್ಲಿ ಉಳಿಯಬೇಕು."

"ಆದರೆ ನಾವಿಬ್ಬರೂ ಲಗ್ನದ ವಚನದಿಂದ ಬಂಧಿತರಾಗಿದ್ದೇವೆ. ನಮ್ಮಿಬ್ಬರಲ್ಲಿ ಮಾನಸ ವಿವಾಹ ಯಾವಾಗಲೋ ನಡೆದು ಹೋಗಿದೆ. ಕೇವಲ ದೈಹಿಕ ಸಂಬಂಧಕ್ಕಾಗಿ ನಾಲ್ಕು ಜನರ ಕಣ್ಣೆದುರಿನಲ್ಲಿ ಲಗ್ನವನ್ನು ಮಾಡಬೇಕಾಗಿದೆ ಅಷ್ಟೆ."

"ಧರ್ಮಭ್ರಷ್ಟ! ನನ್ನೆದುರಿನಲ್ಲಿ ಇವೆಲ್ಲ ಮಾತನಾಡ್ತೀಯಾ? ಧರ್ಮಲಂಡರಿಗೆ ನನ್ನ ಆಫೀಸಿನಲ್ಲಿ ಪ್ರವೇಶವಿಲ್ಲ. ಇಂದೇ, ಇದೇ ಹೊತ್ತಿಗೆ ಹೊರಬೀಳು, ನಿನ್ನ ನೌಕರೀ ಇಂದೇ ಮುಕ್ತಾಯ. ಇಷ್ಟೇ ಅಲ್ಲ ಕೇಳು. ನಿನ್ನದು ಬ್ಯಾಡ್ ಕಾಂಡಕ್ಟ ಅಂತ ಜಾಹೀರಪಡಿಸುವೆ. ಮತ್ತೆಲ್ಲಿಯೂ ನಿನಗೆ ನೌಕರಿ ಸಿಕ್ಕದು. ಹೊಟ್ಟೆಗೆ ಕೂಳಿಲ್ಲದೆ ಚಡಪಡಿಸಿ ಸಾಯು. ಧರ್ಮಲಂಡರಿಗೆ ಇದೇ ಶಿಕ್ಷೆ"

"ಧರ್ಮಲಂಡ ನಾನಲ್ಲ--ಆದರೆ--ಇರಲಿ. ಈಗ ನಾನು ನಿಮ್ಮ ನವಕರನಲ್ಲ. ಹೇಳಬೇಕೆಂದರೆ ಬೇಕಾದಷ್ಟನ್ನೂ ಹೇಳಬಹುದು. ಆದರೆ ನಿಮ್ಮ ಜತೆಯಲ್ಲಿ ಮಾತನಾಡುವ ಇಚ್ಛೆ ನನಗಿಲ್ಲ. ಧರ್ಮದ ಹೆಸರಿನಲ್ಲಿ ನೂರಾರು ಜನರನ್ನು ಅಧರ್ಮಕ್ಕೆ ಎಳೆಯುತ್ತಿದ್ದೀರಿ."

"Shut up. Get out."
"ಬರುವೆ, ನಮಸ್ಕಾರ!"

ಸುಬ್ಬ ಸಾಹೇಬರ ಕೋಣೆಯಿಂದ ಹೊರಬರುವ ಸದ್ದನ್ನು ಕೇಳಿ, ಹೊರಗೆ ಕೂಡಿದ ಗುಮಾಸ್ತರ ತಂಡ ಮತ್ತೆ ಚದುರಿತು. ಸುಬ್ಬ ನೇರಾಗಿ ಆಫೀಸಿನ ತಲೆಬಾಗಿಲಿಗೆ ಬಂದು ಎಲ್ಲರಿಗೂ ಅಲ್ಲಿಂದಲೇ ನಮಸ್ಕರಿಸಿ ಹೊರಬಿದ್ದು ಹೋದ.

ಟಾಯಿಪು ಯಂತ್ರದ ಮೇಲೆ ಗದ್ದವನ್ನು ಆನಿಸಿಕೊಂಡು ಕುಳಿತ ವಾಸಂತಿಗೆ ತನ್ನ ಕತ್ತನ್ನು ಮೇಲಕ್ಕೆತ್ತುವ ಧೈರ್ಯವಾಗಲಿಲ್ಲ. ಅವಳ ಕಣ್ಣೊಳಗಿನ ಹನಿಗಳು ಮಾತ್ರ ಟಾಯಿಪ ಯಂತ್ರವನ್ನು ತೋಯಿಸಿ ಒದ್ದೆಮಾಡಿಬಿಟ್ಟಿತ್ತು.

ಸುಬ್ಬನಿಗೆ ಬೆಂಗಳೂರು ಹೊಸದು. ಆದರೂ ಅಲೆ ಅಲೆಯುತ್ತಾ ಬೆಂಗಳೂರಿಗೆ ಬಂದು ಒಂದು ವಾರ ಸಂದಿದೆ. ಬೆಂಗಳೂರು ಅವಾಢವ್ಯವಾಗಿ ಬೆಳೆದಿದ್ದರೂ, ಸ್ನೇಹ ಪರಿಚಯವೇನೂ ಇಲ್ಲದ ಸುಬ್ಬನಿಗೆ ನೌಕರಿ ಸಿಗಬೇಕೆಲ್ಲಿ? ತಾನು ಬೆಂಗಳೂರಿಗೆ ಬಂದು, ಅಲ್ಲಿ ಉದ್ಯೋಗವನ್ನು ಸಂಪಾದಿಸಿಕೊಂಡು, ವಾಸಂತಿಯನ್ನು ಕರೆಸಿ ಲಗ್ನ ಮಾಡಿ ಸುಖವಾಗಿರೋಣ ಎಂಬ ಕಲ್ಪನೆಯ ಕನಸಿನಲ್ಲಿ ಸುಬ್ಬ ಬೆಂಗಳೂರನ್ನು ಸೇರಿದ್ದ. ಆದರೆ ಇಂದು ಏಳು ದಿನಗಳಿಂದ ಅಲೆಯುತ್ತಿದ್ದ ಸುಬ್ಬನಿಗೆ ಬೆಂಗಳೂರಿನ ಕಹೀ ಅನುಭವ ಬಂದು ಹೋಗಿತ್ತು. ಬಸವನ ಗುಡಿ, ರಸೆಲ್ ಮಾರ್ಕೆಟ, ಮಲ್ಲೇಶ್ವರಂ, ಶ್ರೀರಾಮಪುರ, ಎಲ್ಲವನ್ನೂ ಕಾಲ್ನಡಿಗೆಯಲ್ಲಿಯೇ ಸುತ್ತು ಹಾಕಿದ್ದನು. ನೌಕರಿ ಎಲ್ಲಿಯೂ ಸಿಕ್ಕಿರಲಿಲ್ಲ. ಕ್ಯಾಂಟೋನಮೆಂಟಿನ ಬೀದಿಬೀದಿಯನ್ನು ಅಲೆದರೂ ಒಂದೇ ಉತ್ತರ ಸಿಕ್ಕಿತು. ಈ ೬ ದಿನಗಳಲ್ಲೂ ಕೂಡಿಸಿಟ್ಟ, ಚಿಕ್ಕ ಕೈಗಂಟು ತೀರಿ ಹೋಯಿತು. ಇಂದು ಅವನು ಒಂದು ದೃಢ ನಿರ್ಧಾರಕ್ಕೆ ಬಂದು ಬಿಟ್ಟ. ಉಲ್ಸೂರ ಕಡೆಗೆ ಕಾಲ್ನಡಿಗೆಯಿಂದಲೇ ನಡೆದ. ಮೈಮೇಲಿನ ಬಟ್ಟೆಗಳೆಲ್ಲ ಮಾಸಿವೆ. ತಲೆಯ ಕೂದಲು ಕೆದರಿ ಹೋಗಿವೆ. ಕ್ಯಾಂಟೋನಮೆಂಟಿನಲ್ಲಿ ಅವನೊಬ್ಬ ತಮಿಳು ಕೂಲಿಯವನಾಗಿ ಕಾಣತೊಡಗಿದ್ದ, ದಾರಿಯಲ್ಲಿ ಸಿಕ್ಕ ಜನ ಹಾಗೆ ತಿಳಿದು ಕೂಲಿಯನ್ನಾದರೂ ಕೇಳಿದರೆ ಅವರ ಕೂಲಿಯವನಾಗಲು ಸುಬ್ಬ ಈಗ ತಯಾರು ಆಗಿದ್ದ. ಆದರೆ ಬೆಂಗಳೂರಲ್ಲಿ ಕೂಲಿಯವರ ಸಂಖ್ಯೆಯು ಅತಿ ಮಿತಿಯಾಗಿ ಬೆಳೆದು ಬಿಟ್ಟಿತ್ತು. ಸುಬ್ಬ ಉಲ್ಸೂರ್ ಟ್ಯಾಂಕನ್ನು ಮುಟ್ಟಬೇಕಾದರೆ ಸಂಜೆ ೫-೫|| ಹೊಡೆದುಹೋಗಿತ್ತು. ಹೊಟ್ಟೆಯಲ್ಲಿ ಆಹಾರವಿಲ್ಲದ್ದರಿಂದ ಮೊದಲೇ ತುಂಬಾ ದಣಿವಾಗಿತ್ತು. ಬದಿಯ ಹುಲ್ಲಿನ ಮೇಲೆ ಹಾಯಾಗಿ ಒರಗಿದ. ದಣಿವಾಗಿದ್ದರಿಂದ ಒಂದು ಕಡೆ ತುಂಬಾ ನಿದ್ರೆ ಬರುತ್ತಿತ್ತು. ಆದರೆ ಬರೀ ಹೊಟ್ಟೆ ಆ ನಿದ್ರೆಯನ್ನು ಹೊಡೆದು ಹೊರಗೆ ಹಾಕುತ್ತಿತ್ತು. ಈ ದ್ವಂದ್ವದಲ್ಲಿ ಸುಬ್ಬ ಮಾತ್ರ ಗಾಸಿಯಾಗಿ ಬಿಟ್ಟಿದ್ದ. ಹಾಗೇ ಕಣ್ಣು ಮುಚ್ಚಿಕೊಂಡ. ಅವನ ಮನಸ್ಸು ಮಾತ್ರ ವಿಚಾರಿಸತೊಡಗಿತು.

“–ತಾನು ಬಾಲವಿಧವೆ ವಾಸಂತಿಗೆ ವಚನ ಕೊಟ್ಟು ಬಂದಿದ್ದಾನೆ. ಅದರಂತೆ ನಡೆಯದಿದ್ದರೆ ತಾನು ವಚನಭ್ರಷ್ಟ. ಇದೆಲ್ಲ ಅನಿಷ್ಟಕ್ಕೆ ಕಾರಣ

ರಾರು ತಾನೇ–ಛೇ, ಅಲ್ಲ-ವಾಸಂತಿಯೋ-ಅವಳೂ ಅಲ್ಲ ಹಾಗಾದರೆ ಈ ಅನಿಷ್ಟಕ್ಕೆ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು !-ಗೋಪಾಲಸ್ವಾಮಿ ಧರ್ಮಮಾರ್ತಂಡ-"

ಸಿಟ್ಟಿನ ಭರದಲ್ಲಿ ಸುಬ್ಬ “ಧರ್ಮ ಮಾರ್ತಂಡ”ರ ಹೆಸರಿನಿಂದ ಹಲ್ಲು ಕಡಿಯುವಾಗ ಅವನ ನಾಲಿಗೆ ಆ ಹಲ್ಲುಗಳ ನಡುವೆ ಸಿಕ್ಕು ಗಾಸಿಯಾಯಿತು. ಸುಬ್ಬ ನಕ್ಕ ಮಾತ್ರ. ಬಡವರ ಸಿಟ್ಟೆಂದರೆ ಹೀಗೆ. ಸುಬ್ಬ ತನ್ನ ಹಿಂದಿನ ದಿನಗಳನ್ನು ನೆನಿಸುವದನ್ನು ಒಮ್ಮೆಲೆ ನಿಲ್ಲಿಸಬೇಕಾಯಿತು---ಅದಕ್ಕೆ ಕಾರಣವೆಂದರೆ, ನವಯುವಕನೊಬ್ಬ ಅವನ ಎದುರಿನಲ್ಲಿ ಬರತೊಡಗಿದ್ದ. ಆ ನವಯುವಕ ತೀರ ಹತ್ತಿರ ಬಂದಾಗ, ಸುಬ್ಬ ಎದ್ದು ನಿಂತ.

“I can use him as my tool” ಎಂದು ಆ ವ್ಯಕ್ತಿ ತನ್ನಷ್ಟಕ್ಕೆ ತಾನೇ ಪುಟುಪುಟಿಸಿದ “ಏನಯ್ಯಾ, ತುಂಬಾ ದಣಿದಿದ್ದೀಯಾ?”
“ ಹೌದು ಸ್ವಾಮಿ, ನನಗೆ ತುಂಬಾ ದಣಿವು. ಏಳು ದಿನಗಳಿಂದ ಒಪ್ಪತ್ತೇ ಊಟ ಮಾಡುತ್ತಿದ್ದೇನೆ."
"ನಿಮ್ಮ ಊರು ಯಾವುದು?"
"ಬಡವರಿಗೆಲ್ಲ ಊರು ಇರ್‍ತಾವೇ?"
"ಊರಿಲ್ಲದಿದ್ದರೂ ಹೆಸರಾದರೂ ಇದೆ ಅಲ್ಲವೇ?"
"ನನ್ನ ಹೆಸರು ಸುಬ್ಬ."
"ಬೆಂಗಳೂರಿಗೆ ಬಂದು ಬಹಳ ದಿನವಾಯ್ತೋ?"
"ಇಲ್ಲಾ ಸ್ವಾಮಿ, ಏನಾದರೂ ಉದ್ಯೋಗ ದೊರಕಿಸಿಕೊಳ್ಳೋಣ ಅಂತಾ ಈಗ ಬಂದಿದ್ದೀನಿ.”
"ಸರಿ ಒಳ್ಳೇದಾಯ್ತು. ಇನ್ನೂ ಏನೂ ಉದ್ಯೋಗ ದೊರಕಿಲ್ಲವಷ್ಟೇ?"
"ಇಲ್ಲ ಸ್ವಾಮಿ."
"ಹಾಗಾದರೆ ನಮ್ಮಲ್ಲಿ ಒಂದು ಕೆಲ್ಸ ಆಗಬೇಕಾಗಿದೆ ಮಾಡುವಿಯಾ?"
"ದೇವರೇ ನನ್ನ ಹತ್ತಿರ ನಿಮ್ಮನ್ನು ಕಳಿಸಿದ್ದಾನೆ."
"ನಿನಗೆ ಕೈತುಂಬಾ ಹಣ ಕೊಡುವೆ. ನೀನು ಪ್ರಾಮಾಣಿಕನಾಗಿ ಕೆಲ್ಸ ಮಾತ್ರ ಮಾಡಬೇಕು."

ಪ್ರಾಮಾಣಿಕನಾಗಿರಬೇಕು ಎಂದಾಕ್ಷಣವೇ ಮೊದಲು ಸುಬ್ಬ ಅಂಜಿದ. ಒಮ್ಮೆ ಆ ಯುವಕನನ್ನು ನಖಶಿಖಾಂತ ದೃಷ್ಟಿಸಿದ.

ಅಂದವಾಗಿ ಬಾಚಿದ ತಲೆ, ಕುತ್ತಿಗೆಯಲ್ಲಿ ಟಾಯ್, ಸರ್ಜ ಸೂಟ ಬೂಟು ಇವುಗಳಿಂದ ಅಲಂಕೃತವಾದ ಯುವಕನನ್ನು ನೋಡಿ ಸುಬ್ಬನ ಸಂದೇಹ ಮಾಯವಾಯಿತು. ಪ್ರಾಮಾಣಿಕನಾಗಿರಬೇಕು ಎಂಬುವದರ ಅರ್ಥ, ಕಳ್ಳರು ತಮ್ಮ ಜತೆಯ ಕಳ್ಳರ ಜತೆಯಲ್ಲಿ ಪ್ರಾಮಾಣಿಕರಾಗಿರುತ್ತಾರೆ ಎಂಬ ಮಾತನ್ನು ಸುಬ್ಬ ಕೇಳಿದ್ದ. ಆ ಸಂದೇಹ ಅವನನ್ನು ಆಮಾತಿಗೆ ಹಚ್ಚಿತ್ತು.

ಇದನ್ನೆಲ್ಲ ವಿಚಾರಿಸುವ ಮೊದಲೇ ಸುಬ್ಬನ ಕೈಯಲ್ಲಿ ೧೦ರ ೫ ನೋಟುಗಳು ಬಂದವು. ಕೂಡಲೇ ಅವನ ಕಾಲುಗಳನ್ನು ಹಿಡಿದು ಅವನ ಉಪಕಾರವನ್ನು ಸ್ಮರಿಸಲಾ ಎಂದು ವಿಚಾರಿಸಿದ.

ಬಂದ ಯುವಕ ಸುಬ್ಬನಿಗೆ ತನ್ನನ್ನು ಹಿಂಬಾಲಿಸುವದಕ್ಕೆ ಹೇಳಿ ಟಾರ್ ರೋಡಿಗೆ ಇಳಿದ. ಇಬ್ಬರೂ ಬೆಂಗಳೂರ ಕ್ಯಾಂಟೋನ್‍ಮೆಂಟಿನ ಬಸ್ಸನ್ನು ಹಿಡಿದರು. ಬಸ್ಸು ರಸೆಲ್ ಮಾರ್ಕೆಟಿನ ಸ್ಟಾಂಡಿಗೆ ಬರುವದರಲ್ಲಿ ರಾತ್ರಿ ೮|| ಹೊಡೆದು ಹೋಗಿತ್ತು. ಬಸ್ಸಿನಿಂದ ಕೆಳಗಿಳಿಯುವ ಮೊದಲು ಸುಬ್ಬ ಆ ಯುವಕನಿಗೆ ತನ್ನ ಹೊಟ್ಟೆ ಹಸಿವಾದುದರ ಬಗ್ಗೆ ಹೇಳಿಕೊಂಡಿದ್ದ. "ಮನೆಯನ್ನಾದರೂ ಮುಟ್ಟುವಾ ನಡೆ. ಮಹಾರಾಜನ ಹಾಗೆ ಊಟ ಮಾಡಿ ವಿಶ್ರಾಮ ತೆಗೆದುಕೊಳ್ಳುವಿಯಂತೆ" ಎಂದು ಆ ಯುವಕ ಉತ್ತರಿಸಿವ. ಸುಬ್ಬ ನೇರವಾಗಿ ಯುವಕನನ್ನು ಹಿಂಬಾಲಿಸಿದ.

ಯುವಕ ರಸೆಲ್ ಮಾರ್ಕೇಟಿಗೆ ಬಂದು ಕೆವ್ಹಲರೀ ರೋಡಿಗೆ ಇಳಿದು, ಮುಂದೆ ಕಿರಿದಾದ ಓಣಿಯಲ್ಲಿ ಒಳನಡೆದು, ಮುಂದೆ ಆ ಕಿರಿದಾದ ಓಣಿಯಲ್ಲಿಯೇ ಒಂದು ದೊಡ್ಡ ಮನೆಗೆ ಬಂದು ನಿಂತ. ಮನೆಯ ಮುಂಬಾಗಿಲ ಹಾಕಿದ್ದಿತು. ಯುವಕ ಜವಾನನ ಹೆಸರನ್ನು ಕೂಗಿದ, ಜವಾನ ಬರುವ ಅವಧಿಯೊಳಗೇ ಸುಬ್ಬಣ್ಣ ಪ್ರಶ್ನಿಸಿದ:

"ರಾಯರೇ, ಇದು ತಮ್ಮ ಮನೆಯೇ?"

"ಹಾಗೇ ಅನ್ನಬಹುದು. ಕೆಲವೊಂದು ಕೆಲಸದ ಸಲುವಾಗಿ ಈ ಮನೆಯನ್ನು ಬಾಡಿಗೆಯಿಂದ ಹಿಡಿದಿದ್ದೇನೆ. ಒಂದು ತಿಂಗಳಾಯಿತು. ನನ್ನ ಸ್ವಂತ ಮನೆ ಸಿಟಿಯಲ್ಲಿದೆ."

ಯುವಕನ ಉತ್ತರದಿಂದ ಸುಬ್ಬನಿಗೆ ಸಮಾಧಾನವಾಗಲಿಲ್ಲ ಊರಲ್ಲೊಂದು ಮನೆ, ಕ್ಯಾಂಟೋನಮೆಂಟನಲ್ಲೊಂದು. ಒಂದೂ ತಿಳಿಯಲಿಲ್ಲ ಎಂದು ತನ್ನಷ್ಟಕ್ಕೆ ತಾನೇ ತಲೆ ತುರಿಸಿಕೊಂಡ.

ಅಷ್ಟರಲ್ಲಿ ಜವಾನ ಬಂದು ಬಾಗಿಲನ್ನು ತೆಗೆದ. ಮನೆಯಲ್ಲಿ ಯಾವ ಓರಣವೂ ಇರಲಿಲ್ಲ. ಹೊಸದಾಗಿಯೇ ಬಾಡಿಗೆ ಹಿಡಿದಿದ್ದು ಎಂದು ಅದರೊಳಗಿನ ವ್ಯವಸ್ಥೆಯಿಂದ ತಿಳಿಯಬಹುದಿತ್ತು. ಯುವಕ ತನ್ನ ಜವಾನನಿಗೆ ಸುಬ್ಬನ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಹೇಳಿ, ತಾನು ಒಳಗೆ ಹೋದ.

ಜವಾನ ತುಂಬ ಮುದುಕನಾಗಿದ್ದ. ಸುಬ್ಬನನ್ನು ಒಂದು ಖೋಲಿಯಲ್ಲಿ ಬರಹೇಳಿ, ಅವನ ಊಟದ ತಟ್ಟೆಯನ್ನು ಅಣಿಮಾಡತೊಡಗಿದ.


ರಾತ್ರಿ ಹತ್ತು ಹೊಡೆದು ಹೋಗಿತ್ತು. ಸುಬ್ಬ ಎಷ್ಟೋ ದಿನಗಳ ನಂತರ ಹೊಟ್ಟೆ ತು೦ಬ ಊಟ ಕಂಡಿದ್ದ, ಏಳು ದಿನಗಳ ದಣಿವಿನ ಮೇಲೆ ಮೃಷ್ಟಾನ್ನ ಭೋಜನ ಸಿಕ್ಕಿದ್ದರಿಂದ ಅವನು ಕೂತಲ್ಲಿಯೇ ತೂಕಡಿಸತೊಡಗಿದ್ದ. ಹಾಗೇ ತೂಕಡಿಸುತ್ತಿರುವಂತೆ ಮಹಡಿಯ ಮೇಲಿಂದ ಯುವಕನ ಕೂಗು ಕೇಳಿಬಂತು, " ಸುಬ್ಬಾ, ಏ ಸುಬ್ಬಾ."

ಸುಬ್ಬ ಮೆಟ್ಟಿಲುಗಳನ್ನೇರಿ ಮೇಲೆ ನಡೆದ. ಒಂದು ಕೋಣೆಯಲ್ಲಿ ಯುವಕ ಕೂತಿದ್ದ. ಸುಬ್ಬ ಹೋಗಿ ಅವನೆದುರು ನಿಂತ.

ಯುವಕ ಸಾವಧಾನವಾಗಿ ಹೇಳತೊಡಗಿದ:"ನಾನು ನಿನ್ನನ್ನು ಕರೆದು ತಂದದ್ದು ಒಂದು ದೊಡ್ಡ ಕೆಲಸಕ್ಕೆ. ಇಂಥ ಕೆಲಸ ಮಾಡಲು ಅತಿಬಡವ, ಅತಿ ಪ್ರಾಮಾಣಿಕನಿರಬೇಕು. ನಿನ್ನಲ್ಲಿ ಎರಡನ್ನೂ ಕಂಡೆ. ನಿನ್ನಿಂದ ಆಗಬೇಕಾದ ಕೆಲಸ ಸ್ವಲ್ಪ ಕಠಿಣವಿದೆ. ಅದಕ್ಕೆ ನಿನ್ನ ಬೇಡಿಕೆ ಎಷ್ಟು ಹೇಳು."

"ಕೆಲಸವಾದರೂ ಏನು ಹೇಳಿ?"

"ಕೆಲಸ ಕಡೆಗೆ, ಮೊದಲು ಹಣವೆಷ್ಟು ಬೇಕು ಕೇಳು?"

"  ?"

"ಆಯಿತು; ೫೦೦ ರೂಪಾಯಿ ಕೊಡುತ್ತೇನೆ. ಎಲ್ಲಿಯೂ ಬಾಯಿ ಬಿಡಬೇಡ."

೫೦೦ ರೂಪಾಯಿ ಎಂದ ಕೂಡಲೇ ಸುಬ್ಬ ಗಗನಕ್ಕೆಯೇ ಹಾರಿಹೋದ. ಆ ಉತ್ಸಾಹದಲ್ಲಿ "ಕೆಲಸವೇನು, ಬೇಗ ಹೇಳಿ" ಎಂದ.

ಆ ಯುವಕ ಸಮಾಧಾನವಾಗಿಯೇ ಹೇಳತೊಡಗಿದ: "ನಾನು ಕಾಲೇಜಿನಲ್ಲಿ ಓದುತ್ತಿದ್ದೇನೆ. ನಾನು ಆಗರ್ಭ ಶ್ರೀಮಂತ, ಅಲ್ಲಿ ಒಬ್ಬ ಸಹಾಧ್ಯಾಯಿನಿಯ ಜತೆಯಲ್ಲಿ ಪ್ರಣಯ ಬೆಳೆಯಿತು. ಆ ಪ್ರಣಯ, ಆ ಹುಡುಗಿ ಗರ್ಭವತಿಯಾಗುವವರೆಗೂ ಸಾಗಿತು ಗರ್ಭ ನಿರೋಧಕ್ಕಾಗಿ ಎಷ್ಟು ಔಷಧಿಗಳನ್ನು ಬಳಿಸಿದರೂ, ಪರಿಣಾಮ ಸರಿಯಾಗಲಿಲ್ಲ. ಅವಳು ನಿನ್ನೆಯೇ ಗಂಡು ಕೂಸನ್ನು ಹೆತ್ತಿದ್ದಾಳೆ. ಅಷ್ಟರ ಸಲುವಾಗಿ ಕ್ಯಾಂಟೋನಮೆಂಟಿನಲ್ಲಿ ಈ ಮನೆಯನ್ನು ಬಾಡಿಗೆಗಾಗಿ ತೆಗೆದುಕೊಂಡಿದ್ದೇನೆ. ಈಗ ಅವಳು, ಆ ಕೂಸು ಈ ಬದಿಕೋಣೆಯಲ್ಲಿದ್ದಾಳೆ, ನಿನ್ನ ಮುಖ್ಯ ಕೆಲಸವೆಂದರೆ ಆ ಕೂಸನ್ನು ಇಂದು ರಾತ್ರಿ ಎಲ್ಲಿಯಾದರೂ ದೂರ ಒಯ್ದು ಎಸೆದು ಬಿಡುವದು––"

ಕೇಳುತ್ತಿರುವಂತೆ ಮೈ ತುಂಬ ಬೆವೆತ ಸುಬ್ಬ ಒಮ್ಮೆಲೆ, "ಜೀವಂತ ಕೂಸನ್ನು ಒಗೆಯುವದು ನನ್ನಿಂದಾಗದ ಮಾತು" ಎಂದು ಹೇಳಿದ.

"ಕೂಸು ಜೀವಂತವಿಲ್ಲ. ಅದು ಭೂಮಿಯ ಮೇಲೆ ಬರುತ್ತಲೂ ಅದರ ತಾಯಿ ಅದರ ಕತ್ತನ್ನು ಹಿಸುಕಿದ್ದಾಳೆ. ನಿನ್ನ ಕೆಲಸ ಇನ್ನೂ ಸುಲಭ. "

"......"

"ಏಕೆ ಸುಮ್ಮನೇ ನಿಂತೆ? ೫೦೦ ರೂಪಾಯಿ ಕಡಿಮೆ ಬೀಳುತ್ತಿದ್ದರೆ ಇದೊಂದು ನೂರು, "೬೦೦ ರೂಪಾಯಿಗಳು ಸುಬ್ಬನ ಕಿಸೆ ಸೇರಿದವು. ಸುಬ್ಬ ಮುಗ್ಧನಾಗಿ ನಿಂತುಬಿಟ್ಟ. ಒಂದೆಡೆ ಪಾಪ, ಇನ್ನೊಂದೆಡೆ ೬೦೦ ರೂಪಾಯಿಗಳ ನೋಟು. ಇವುಗಳ ನಡುವೆ ಸುಬ್ಬ ಪೇಚಾಡತೊಡಗಿದ್ದ.

ಸುಬ್ಬನ ಮೂಕವೃತ್ತಿ ಸಮ್ಮತಿಯನ್ನು ಸೂಚಿಸತೊಡಗಿತು. ಯುವಕ ಸುಬ್ಬನಿಗೆ ಒಳಬರಹೇಳಿದ.

ಖೋಲಿಯಲ್ಲಿ ಒಳಸೇರುವಾಗ ಆ ಹೆಣ್ಣು ಗೋಡೆಯ ಕಡೆಗೆ ಮಾರಿ ಮಾಡಿ ಮಂಚದ ಮೇಲೆ ಕುಳಿತಿದ್ದಳು. ಸುಬ್ಬ ಒಳಗೆ ಬಂದು ಮರದಲ್ಲಿಟ್ಟ ಕೂಸನ್ನು ನೋಡಿದ. ನಿಷ್ಕಪಟ ಶಿಶು ಸತ್ತು ಬಹಳ ಹೊತ್ತಾಗಿತ್ತು. ಸುಬ್ಬಣ್ಣ ಶಿಶುವನ್ನು ಕೈಯಲ್ಲೆತ್ತಿದ. ಇನ್ನು ಖೋಲಿಯಿಂದ ಹೊರಡುವದರಲ್ಲಿದ್ದು ಅಷ್ಟರಲ್ಲಿ ಆ ಹೆಣ್ಣು ಕೂಗಿತು. "ಒಮ್ಮೆ ಆ ಮಗುವಿನ ಮಾರಿ ನೋಡಿಕೊಳ್ತೇನೆ." ಸುಬ್ಬನು ತಿರುಗಿದ. ಆ ಹೆಣ್ಣ ಮುಖ ತಿರುಗಿಸಿದಳು. ಇಬ್ಬರೂ ಒಬ್ಬರನ್ನೊಬ್ಬರು ನೋಡಿದರು. ಆ ಕ್ಷಣವೇ ಆ ಹೆಣ್ಣು ಒಮ್ಮೆಲೆ ಕಿರುಚಿ ತನ್ನ ಮುಖವನ್ನು ಮುಚ್ಚಿಕೊಂಡಿತು.

"ಅಯ್ಯೋ, ಎಲ್ಲವೂ ಘಾತವಾಯಿತು."

ಯುವಕ ಒಮ್ಮೆಲೆ ಅವಳನ್ನು ತಬ್ಬಿ "ವನಜಾ, ವನಜಾಕ್ಷಿ, ಇದೇನ. ಒಮ್ಮೆಲೇ ಹೀಗೆ ಕಿರುಚಿಕೊಂಡೆ."

ವನಜಾಕ್ಷಿ ಮುಚ್ಚಿದ ಮುಖವನ್ನು ತೆಗೆಯಲಿಲ್ಲ ಸುಬ್ಬನೇ ಉತ್ತರಿಸಿದ: "ಧರ್ಮ ಮಾರ್ತಂಡ ಗೋಪಾಲಸ್ವಾಮಿಯವರ ಮಗಳು ವನಜಾಕ್ಷಿ, ತನ್ನ ತಂದೆಯ ಹೆಸರಿಗೆ ಕಲಂಕ ಹತ್ತಬಹುದೆಂದು ಅ೦ಜಿರಬಹುದು. ಇಲ್ಲಿಯವರೆಗೆ ಎಲ್ಲವೂ ಗುಪ್ತವಿದೆ. ನಾನೂ ಬಾಯಿ ಬಿಡಲಾರೆ, ನಾನು ಉಂಡು ಮನೆಯ ಗಳವನ್ನೆಣಿಸಲಾರೆ. ನಿಮ್ಮಿಂದ ೬೦೦ ರೂಪಾಯಿ ಇಸಿದುಕೊಂಡು ನಿಮ್ಮ ಪಾಪದಲ್ಲಿ ಈಗ ಪಾಲುಗಾರನಿದ್ದೆನೆ. ಎಲ್ಲಿಯೂ ಬಾಯಿ ಬಿಡಲಾರೆ"

ಸುಬ್ಬಣ್ಣ ಅಲ್ಲಿ ನಿಲ್ಲದೆ ಕೂಸಿನ ಹೆಣ ಚೀಲದಲ್ಲಿರಿಸಿ ಹೊರಗೆ ನಡೆದುಬಿಟ್ಟ.


ಚನ್ನಪಟ್ಟಣದ ರೇಶನಿಂಗ ಆಫೀಸಿನಲ್ಲಿ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ತಮ್ಮ ಎಲ್ಲ ಕಾರಕೂನರ ಎದುರಿನಲ್ಲಿ ಅಂದಿನ ತಾಯಿನಾಡು ದಿನಪತ್ರಿಕೆಯನ್ನು ಓದಿ ತೋರಿಸಹತ್ತಿದ್ದರು.

"ಬೆಂಗಳೂರಿನ ಉಲ್ಸೂರ ಹತ್ತಿರ ಒಬ್ಬ ಮನುಷ್ಯ ವ್ಯಭಿಚಾರದಿಂದ ಹುಟ್ಟಿದ ಕೂಸನ್ನು ಕೊಂದು ಕೆರೆಯಲ್ಲಿ ಒಗೆಯಲು ಬಂದಾಗ ಪೋಲೀಸರು ಅವನನ್ನ ಹಿಡಿದರು. ಹೆಚ್ಚಿನ ತಪಾಸಣಿಯಲ್ಲಿ ಅವನು ಚನ್ನಪಟ್ಟಣದ ಒಬ್ಬ ಗುಮಾಸ್ತನೆಂದೂ, ಅವನ ನಡತೆ ಸರಿಯಾಗಿರದ್ದಕ್ಕೆ ಅವನನ್ನು ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ಡಿಸ್‌ ಮಿಸ್ ಮಾಡಿದ್ದರೆಂದೂ ಗೊತ್ತಾಗಿದೆ. ಅವನನ್ನು ಜೈಲಿಗೆ ಕರೆದೊಯ್ಯಲಾಯಿತು."

ಓದು ಮುಗಿಸಿದ ಧರ್ಮಮಾರ್ತಂಡ ಗೋಪಾಲಸ್ವಾಮಿಯವರು ಒಂದು ಸಲ ಗಹಗಹಿಸಿ ನಕ್ಕರು. ಆಗ ಅವರ ನಗು ಅಲೆ ಅಲೆಯಾಗಿ ಆಫೀಸಿನ ತುಂಬೆಲ್ಲ ಪ್ರತಿಧ್ವನಿಸಿತು. ಟಾಯಿಪ ಟೇಬಲ್ಲಿನ ಮೇಲೆ ಕುಳಿತ ವಾಸಂತಿಯ ಮೈಮೇಲೆ ಧರ್ಮಮಾರ್ತಂಡ ಗೋಪಾಲ ಸ್ವಾಮಿಯವರ ಕರೀ ನೆರಳು ಬಿದ್ದಿತ್ತು. ಗೋಪಾಲಸ್ವಾಮಿಯವರ ಕೆಳಗಿನ ನೆರಳು ವಾಸಂತಿಯ ಭವಿಷ್ಯವನ್ನೇ ಹಾಳುಮಾಡಿತ್ತು.