ಹೊಸ ಬೆಳಕು ಮತ್ತು ಇತರ ಕಥೆಗಳು/ಹೊಸ ಬೆಳಕು

ವಿಕಿಸೋರ್ಸ್ದಿಂದ

ಹೊಸ ಬೆಳಕು.



ಗರ್ಲ್ಸ್ ಹಾಯ್ ಸ್ಕೂಲಿನಲ್ಲಿ ಕ್ಲಾಸುಗಳು ನಡೆದಿದ್ದುವು. 'ಶಾಲೆ' ಎಂದಮೇಲೆ ಕೇಳುವುದೇನು ? ಅಲ್ಲಿ ಸಂತೆಯ ಗದ್ದಲ ಕೂಡುವುದು ಖಂಡಿತ. ಶಾಲೆಯ ಹುಡುಗರೆಂದರೆ ಶುದ್ದ ಮಂಗಗಳು ! ಅದರಲ್ಲಿಯೂ ಹುಡುಗಿಯರ ಶಾಲೆ, ' Two watches two ladies never agree' ಎಂದು ಬಲ್ಲವರು ಹೇಳುತ್ತಾರೆ; ಅದು ಹದಿನಾರಾಣೆ ನಿಜ. ಎಳೆಯ ಹುಡುಗರ ಮನಸ್ಸಿಗೆ ಒಂದು ದಿಗ್ಟಂಧನವಿರುವುದಿಲ್ಲ. ಅದು ಕೇವಲ ಗಾಳಿಪಟ, ಮನಸ್ಸಿಗೆ ಬಂದಂತೆ ಹಾರಾಡುವುದು, ಅದಕ್ಕೆ ಮೇರೆ ಇಲ್ಲ, ಸೀಮೆ ಇಲ್ಲ. ಆದರೆ ಆ ಗಾಳಿಪಟಕ್ಕೆ ಸರಿಯಾದ ಸೂತ್ರವಿದ್ದರೆ.... !

ಲೀಲಾಬಾಯಿ ದೇಶಪಾಂಡೆಯವರು ಆ ಶಾಲೆಯ ಹುಡುಗಿಯರಿಗೆ ಭದ್ರವಾದ ಸೂತ್ರದಂತಿದ್ದರು. ಮ್ಯಾಟ್ರಿಕ್ ಕ್ಲಾಸಿಗೆ ಲೀಲಾಬಾಯಿಯವರು ಇಂಗ್ಲಿಶ್ ಕಲಿಸುತ್ತಿದ್ದರು. ಎಳ್ಳುಬಿದ್ದ ಸಪ್ಪಳವೂ ಸ್ಪಷ್ಟವಾಗಿ ಕೇಳಿಸುವಷ್ಟು ಶಾಂತತೆ ಅಲ್ಲಿ ನೆಲಸಿತ್ತು. ಕ್ಲಾಸಿನಲ್ಲಿಯ ಎಂಬತ್ತು ಹೆಣ್ಣು ಕಣ್ಣುಗಳು, ಸಿಂಗದ ಕೈಗೆ ಬಿದ್ದ ಹರಿಣಾಂಗನೆಯ ನೆನಪು ಮಾಡಿಕೊಡುತ್ತಿದ್ದುವು. ಆ ಹುಡುಗಿಯರು ಉಳಿದಾವ ಮಾಸ್ತರರಿಗೂ ಅಂಜುತ್ತಿರಲಿಲ್ಲ- ಜಪಾನು

ಜಗತ್ತನ್ನೇ ಗೆಲ್ಲುವ ಭಾಷೆಯಾಡುತ್ತಿತ್ತು; ಆದರೆ ಆಟಮಿನ ದರ್ಶನವಾದ ಕ್ಷಣ, ಬಿಳಿಯ ಧ್ವಜವೇರಿಸಿ ದಾಸ್ಯ ಒಪ್ಪಿಕೊಂಡು ಬಿಟ್ಟಿತಲ್ಲವೇ ? ಲೀಲಾಬಾಯಿಯವರು ಈ ವಿಷಯದಲ್ಲಿ 'ಆಟಮ್' ಗೆ ಪೂರ್ಣ ಸರಿಹೋಲುತ್ತಿತಿದ್ದರು. ಹುಡುಗಿಯರು ಇತರ ಮಾಸ್ತರರ ಎದುರಿನಲ್ಲಿ ಗುಡುಗಾಡುತ್ತಿದ್ದವರು, 'ಲೀಲಾಬಾಯಿ ದೇಶಪಾಂಡೆ B. A. ( Hons. ) B. T. (I Class)' ಎಂದಾಕ್ಷಣ ತಲೆ ಕೆಳಗೆ ಹಾಕುತ್ತಿದ್ದರು.

ಲೀಲಾಬಾಯಿಯವರು ಅಷ್ಟೊಂದು ಉಗ್ರವಾಗಿರಲಿಲ್ಲ. ಕ್ಲಾಸಿನ ಹುಡುಗಿಯರ ಮೇಲೆ ತಮ್ಮ ಸ್ವಾಮಿತ್ವ ಸ್ಥಾಪಿಸಿದ್ದು ಕೇವಲ ತಮ್ಮ ಗಾಂಭಿರ್ಯಪೂರ್ಣ ಮುಖಮುದ್ರೆಯಿಂದ; ಮಿತಭಾಷಣದಿಂದ, ತಮ್ಮ ತೇಜಸ್ಸಿನಿಂದ ತುಂಬಿದ ಸುಂದರ ಮುಖದಿಂದ. ನಿಜವಾಗಿಯೂ ಲೀಲಾಬಾಯಿಯವರ ಮುಖದಷ್ಟು ಸುಂದರ ಮುಖ, ಆ ಊರಮಟ್ಟಿಗಾದರೂ ನೋಡಲು ಸಿಕ್ಕಲಾರದು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ತುಂಬುಗೆನ್ನೆ, ಮಾಟವಾದ ಹಣೆ, ಹಣೆಯ ಸುತ್ತು ಇಳಿಬಿದ್ದ ರೇಶಿಮೆಯಂತಿರುವ ಅವರ ಉಂಗುರುಗೂದಲು, ಪುಷ್ಟವಾಗಿ ಬೆಳೆದಿರುವ ಎದೆ, ಆ ಆಕರ್ಷಕವಾದ ಕಣ್ಣುಗಳು, ಪುಟಗೊಟ್ಟ ಚಿನ್ನದಂತಿರುವ ಮೈಬಣ್ಣ-ಇವೆಲ್ಲ ಅವರನ್ನು ಬೇಲೂರಿನ ಶಿಲಾಬಾಲಿಕೆಗೆ ಹೋಲಿಸಹಚ್ಚುತ್ತಿದ್ದುವು. ಲೀಲಾಬಾಯಿಯವರ ವಯಸ್ಸು ಮೂವತ್ತನ್ನು ದಾಟಿದ್ದರೂ, ಅದೇ ಅರಳಿದ ಚೆನ್ನೈದಿಲೆಯಂತೆ ಕಂಗೊಳಿಸುತ್ತಿದ್ದಿತು ಅವರ ದೇಹಸೌಂದರ್ಯ. ಜಾರ್ಜೆಟ್ ಸೀರೆ ಉಟ್ಟು ಅವರು ಕ್ಲಾಸಿನಲ್ಲಿ ಬಂದರೆ, ಅವರ ಪ್ರತಿ ಅಂಗಾಂಗದ ಏರು ಇಳಿವು, ಸೌಂದರ್ಯ ಪೂರ್ಣವಾಗಿ ಕಂಗೊಳಿಸುತ್ತಿದ್ದವು. ಇದೇ ಅವರ ವೈಶಿಷ್ಟ, ನೋಡುವವರನ್ನು ಬೆರಗುಗೊಳಿಸುತ್ತಿತ್ತು. ಅವರು ಕೇವಲ ದೈಹಿಕ ಸೌಂದಯ್ಯದಲ್ಲಿಯಷ್ಟೇ ಮೊದಲ ಕ್ರಮಾಂಕ ಪಡೆದಿರಲಿಲ್ಲ; ಬದ್ಧಿವತ್ತೆಯೂ ಅದರ ಜತೆಯಲ್ಲಿ ಸೇರಿಕೊಂಡಿತ್ತು.

ಕ್ಲಾಸಿನಲ್ಲಿ ಬಂದವರೇ ಲೀಲಾಬಾಯಿ ಕಥೆಯೊಂದನ್ನು ಓದಿ ತೋರಿಸಹತ್ತಿದರು. ಪುಸ್ತಕದ ಹೆಸರು “Fairy tales from Turkey” ಕತೆಯ ಹೆಸರು 'God's Gift' (ದೇವರ ಕೊಡುಗೆ) ಎಂದು. ಕತೆ ಸರಾಗವಾಗಿ ಓಡುತ್ತಿತ್ತು. ಆದರೆ ನಡುವೆ ಒಂದು ಶಬ್ದ ಬಂತು. ಒ೦ದರೆನಿಮಿಷ ಲೀಲಾಬಾಯಿಯವರು ಓದನ್ನು ನಿಲ್ಲಿಸಿದರು. ಸರಾಗವಾಗಿ ಸಾಗುವ ನದಿಗೆ ಆಣೆಕಟ್ಟು ಕಟ್ಟಿದಂತಾಯ್ತು. ಹೆಚ್ಚಾದ ನೀರು ಹೊರಚೆಲ್ಲಲೇ ಬೇಕಲ್ಲವೇ ? ಆ ಶಬ್ದಗಳ ಮೇಲಿಂದ ಅಲುಗದ ಅವರ ಕಣ್ಣುಗಳಂಚಿನಲ್ಲಿ ನೀರಹನಿಗಳು ಕಾಣಿಸಿಕೊಂಡುವು. ಮುಂದೆ ಕುಳಿತ ಹುಡುಗಿಯರಿಗೆ ಅದು ಕಾಣಿಸದೆ ಹೋಗಲಿಲ್ಲ. ಹುಡುಗಿಯರು ಏನೋ ' ರಹಸ್ಯ ' ಎಂದು ಮನದಲ್ಲಿಯೆ ತಿಳಿದುಕೊಂಡರು. ಆದರೆ ಒಳಗಣ ಧ್ವನಿಗೆ ಹೊರಬರುವುದು ಸಾಧ್ಯವಿರ ಲಿಲ್ಲ. ಲೀಲಾಬಾಯಿಯವರ ಗಾಂಭೀರ್ಯದ ಬೇಲಿಯೇ ಅಷ್ಟು ಭದ್ರವಾಗಿತ್ತು, ತಡೆಹಿಡಿದ ವಾಕ್ಯ ಅಷ್ಟೊಂದು ಗಹನವಾಗಿರಲಿಲ್ಲ.

ಒಬ್ಬ ಕುರುಬರ ಹುಡುಗ ನೀರು ಕುಡಿಯುವುದಕ್ಕಾಗಿ ಬಾವಿಯಲ್ಲಿ ಇಳಿಯುತ್ತಾನೆ. ಅಲ್ಲಿ ಒಬ್ಬ ಕುರೂಪಿಯಾದ ರಾಕ್ಷಸಿ ಕಾಣಿಸಿಕೊಳ್ಳುತ್ತಾಳೆ. ಅವಳ ಒಂದು ಕೈಯಲ್ಲಿ ಒಬ್ಬ ಸುಂದರ ಯುವಕ, ಇನ್ನೊಂದು ಕೈಯಲ್ಲಿ ಒಬ್ಬ ಸುಂದರ ಯುವತಿ. ಆ ರಾಕ್ಷಸಿಗೆ ತಾನು ತುಂಬಾ ಸುಂದರಿ ಎನ್ನುವ ಹೆಮ್ಮೆ ಇರುತ್ತದೆ; ಅಲ್ಲಿ ನೀರು ಕುಡಿಯುವುದಕ್ಕೆ ಬಂದವರನ್ನೆಲ್ಲ, 'ಯಾರು ಸುಂದರರು?' ಎಂದು ಕೇಳುತ್ತಿರುತ್ತಾಳೆ. ಎಲ್ಲರೂ ಸತ್ಯ ಹೇಳುತ್ತಾರೆ, ಆ ರಾಕ್ಷಸಿಯ ಕೋಪಕ್ಕೆ ಬಲಿ ಬೀಳುತ್ತಾರೆ. ಈಗ ಕುರುಬರ ಹುಡುಗನಿಗೂ ಅದೇ ಪ್ರಶ್ನೆ ಕೇಳುತ್ತಾಳೆ ಆ ರಾಕ್ಷಸಿ: “Which of us is the more beautiful: this youth, this girl or, I,” (ನಮ್ಮಲ್ಲಿ ಯಾರು ಸುಂದರರು ? ಈ ಯುವಕನೋ ? ಈ ಯುವತಿಯೋ ಅಥವಾ ನಾನೋ?)

ಕುರುಬರ ಹುಡುಗ ಪೇಚಿನಲ್ಲಿ ಬೀಳುತ್ತಾನೆ. ಸತ್ಯ ಹೇಳಿದರೆ ಸಾಯುತ್ತಾನೆ; ಸುಳ್ಳಾಡಿದರೆ, ಮರಣಕ್ಕಂಜಿ ಸುಳ್ಳಾಡಿದ ಪಾಪ ಬರುತ್ತದೆ. ಆದರೂ ಹುಡುಗ ವಿಚಾರವಂತ, ವಿಚಾರಿಸಿ ಉತ್ತರ ಹೇಳಿಯೂ ಬಿಡುತ್ತಾನೆ:

""Whomsoever the heart loves is beautiful" (ಒಳ ಹೃದಯದಿಂದ ಪ್ರೀತಿಸಲ್ಪಟ್ಟ ವಸ್ತು ಸುಂದರವಾಗಿರುತ್ತದೆ.)

ಅವನು ಕೊಟ್ಟ ಉತ್ತರ ಸುಂದರವಾಗಿತ್ತು, ಆದರೆ ಆ ವಾಕ್ಯ ಲೀಲಾಬಾಯಿಯವರನ್ನು ಯೋಚನೆಗೆ ಈಡು ಮಾಡಿತ್ತು. ಅದೊಂದೇ ವಾಕ್ಯ ಅವರನ್ನು ತಡೆಹಿಡಿದು ನಿಲ್ಲಿಸಿತ್ತು. ಆ ಸ್ತಬ್ಧತೆ, ಅವರ ಗಾಂಭಿರ್ಯದ ಶಿಥಿಲತೆಗೆ ಎಡೆಮಾಡಿಕೊಟ್ಟಿತು. ಆ ಶಿಥಿಲತೆಯ ಉಪಯೋಗ ಪಡೆದುಕೊಂಡು, ಮೂಲೆಯಲ್ಲಿ ಕುಳಿತ ಕಿಡಿಗೇಡಿ ಮೇರಿ ಡಿಸೋಝಾ ಎದ್ದು ನಿಂತು ಪ್ರಶ್ನೆಯನ್ನು ಕೇಳಿದಳು:

"ಮ್ಯಾಡಮ್, ಒಂದು ಪ್ರಶ್ನೆ."
"ಕೇಳು” ಪುಸ್ತಕದತ್ತ ಇದ್ದ ಮುಖವನ್ನು ಮೇಲಕ್ಕೆತ್ತದೆ ಲೀಲಾಬಾಯಿ ಉತ್ತರಿಸಿದಳು. "ಪ್ರೇಮವಿವಾಹದ ನಂತರ ಗಂಡನಿಗೆ ಏನೋ ಆಗಿ ಅವನು ಕುರೂಪಿಯಾಗುತ್ತಾನೆ, ಆದರೆ Whomsoever the heart loves 1s beautiful ಎಂಬ ವಾಕ್ಯದ ಪ್ರಕಾರ ಆಗಲೂ ಆ ಹೆಂಡತಿಗೆ ಆ ವಿಕೃತ ಗಂಡ ಸುಂದರನಾಗಿಯೇ ಕಾಣುತ್ತಾನೆಯೇ ?"

ತಾರುಣ್ಯದ ಹೊಸ್ತಿಲಲ್ಲಿ ಆಗಲೇ ಕಾಲಿರಿಸಿದ ಕ್ಲಾಸಿನ ಹುಡುಗಿಯರಿಗೆ ಈ ತಮ್ಮ ಲೀಲಾಬಾಯಿಯವರ ಮೇಲಿನದೇ ಆದ ಪ್ರೇಮದೃಷ್ಟಾಂತ, ಅವರಲ್ಲಿ ತಡೆಹಿಡಿಯುವಷ್ಟು ನಗೆಯನ್ನು ಬರಿಸಿತು, ತತ್ ಕ್ಷಣ ಕ್ಲಾಸಿನಲ್ಲಿ ಗೇರುಸೊಪ್ಪೆಯ ಧಬಧಭೆಯ ಸಪ್ಪಳವಾಯಿತು ಅದು ಆ ಹುಡುಗಿಯರ ನಗು. ಲೀಲಾಬಾಯಿಯವರ ಮುಖ ಉಗ್ರವಾಯಿತು. ಗೌರವಾಗಿದ್ದ ಅವರ ಮುಖ ಮತ್ತಿಷ್ಟು ಬಣ್ಣ ಕಟ್ಟಿತು, ಕಿಡಿಕಿಡಿಯಾಗಿ ಒದರಿದರು: “Silence” (ಶಾಂತರಾಗಿರಿ).

–-ಧಬಧಭೆಯ ಪ್ರವಾಹವನ್ನು ಮಣ್ಣಿನ ಒಡ್ಡಿನಿಂದ ತಡೆಯಬಹುದೇ? ಲೀಲಾಬಾಯಿಯವರಿಗೆ ತಮ್ಮ ಐದು ವರುಷಗಳ ಸರ್ವಿಸಿನಲ್ಲಿ ಇಂತಹ ಪರಿಸ್ಥಿತಿಯನ್ನು ಎದುರಿಸುವುದು ಇದೇ ಮೊದಲು. ಹೊಸತಾಗಿ ಬಂದ ಅನುಭವ, ಮನುಷ್ಯನ ಹೃದಯವನ್ನು ಕಲಕಿಸಿ ಬಿಡುತ್ತದೆ ಕೈಯಲ್ಲಿರುವ ಪುಸ್ತಕವನ್ನು ಮುಚ್ಚಿ ಕ್ಲಾಸಿನಿಂದ ಹೊರಗೆ ನಡೆದು ಬಿಟ್ಟರು. ಕ್ಲಾಸಿನಲ್ಲಿ ಮತ್ತೆ ಸ್ಮಶಾನ ಶಾಂತತೆ ವ್ಯಾಪಿಸಿತು. ನೀರನ್ನು ತಡೆಹಿಡಿದರೆ ಅದರ ಅಬ್ಬರ ಹೆಚ್ಚು. ನಡುವಿನ ಅಡ್ಡ ಗೋಡೆಯನ್ನೇ ಕೆಡವಿದಾಗ ? ಕ್ಲಾಸಿನಲ್ಲಿಯ ನಗು ಎಲ್ಲಿಯೋ ಮಾಯವಾಯಿತು; ಅದರೆಡೆಯಲ್ಲಿ ಯಾವುದೋ ಅಂಜಿಕೆ ವ್ಯಾಪಿಸಿತ್ತು. ಆದರೂ ಮೇರಿ ಡಿಸೋಝಾನ ಧೈರ್ಯಕ್ಕೆ ತಲೆದೂಗಿದರು. ಹೌದು, ಧೈರ್ಯವೇ ಸರಿ, ಲೀಲಾಬಾಯಿಯವರ ಸಂಸಾರದ ಮಾತನ್ನೇ ಉದಾಹರಣೆಯಾಗಿ ತೆಗೆದುಕೊಂಡು ಪ್ರಶ್ನೆಯನ್ನು ಕೇಳುವುದೆಂದರೆ ಸಾಮಾನ್ಯವೇ !

ಕ್ಲಾಸಿನಿಂದ ಹೊರಬಿದ್ದವರೇ ಲೀಲಾಬಾಯಿಯವರು, ನೇರವಾಗಿ ಟೀಚರ್ಸ್ ರೂಮಿನಲ್ಲಿ ಬಂದು ಕುಳಿತರು. ಅವರ ಮನಸ್ಸಿಗೆ ಶಾಂತಿಬೇಕಿತ್ತು. ಕ್ಲಾಸಿನಲ್ಲಿಯ ಘಟನೆ, ಅವರ ಮಾನಸಿಕ ಸರೋವರದ ಸ್ತಬ್ಧ ನೀರನ್ನು ಕಲಕಿಸಿತ್ತು. ಏನು ಮಾಡಿದರೂ ಮನಸ್ಸಿನ ಅಸ್ವಸ್ಥತೆ ಮಾಯ ವಾಗಲಿಲ್ಲ ಹಾಗೆಯೇ ಎದ್ದು ತಣ್ಣೀರಿನಿಂದ ಮುಖ ತೊಳೆದುಕೊಂಡು, ತಲೆಗೂದಲನ್ನು ಸರಿಪಡಿಸುವುದಕ್ಕಾಗಿ ಕನ್ನಡಿಯ ಎದುರು ಬಂದು ನಿಂತರು. ತಮ್ಮ ಮುಖ ನೋಡಿ ತಾವೇ ದಿಗ್ಗಾಂತರಾದರು. ಅವರ ಮುಖದಿಂದ ಲಾವಣ್ಯ ಹೊರಸೂಸಿದಂತೆ ಕಾಣಿಸತೊಡಗಿತು. ಆದರೆ ಆ ಸುಂದರ ಪ್ರತಿಬಿಂಬವನ್ನು ಅವರಿಗೆ ನೋಡಲಾಗಲಿಲ್ಲ. ಅದು ತನ್ನ ಸದ್ಯಸ್ಥಿತಿಯನ್ನು ಅಣಕಿಸುವಂತೆ ತೋರಿತು. ಮನದ ಮೇಲೆ ಮಿದುಳಿನ ಸ್ವಾಮಿತ್ವ, ತಪ್ಪಿತೇನೋ! ಇಲ್ಲವಾದರೆ ಅವರು ತಮ್ಮ ಪ್ರತಿಬಿಂಬಕ್ಕೆ ಅಣಕಿಸಿ ದೂರ ಸರಿಯುತ್ತಿರಲಿಲ್ಲ. ಪಾಪ, ನಿರ್ಜಿವ ಕನ್ನಡಿ ! ಆದರೂ ಸೇಡು ತೀರಿಸಿಕೊಳ್ಳುವುದರಲ್ಲಿ ಕಡಿಮೆ ಇರಲಿಲ್ಲ. ಪುನಃ ಅಣಕಿಸಿಯೇ ಬಿಟ್ಟಿತು. ಲೀಲಾಬಾಯಿಯವರು ತಮ್ಮ ಸ್ಥಿತಿ ತೀರ ಅಸ್ವಸ್ಥವಾದಾಗ, ಆರಾಮ ಖುರ್ಚಿಯಲ್ಲಿ ಕುಳಿತು, ಮುಖದ ಮೇಲೆ ಅದೇ ಪುಸ್ತಕವನ್ನು ತೆರೆದು ಇಡಹೋದರು. ದುರ್ದೈವಕ್ಕೆ ಅದೇ ಪಾಠ ತೆರೆಯಬೇಕೇ, ಅದೇ ಕುಣಿಯಬೇಕೇ ?

"Whomsoever the heart loves is beautiful ”

ಆದರೆ ಈ ಸಲ ಲೀಲಾಬಾಯಿಯವರಿಗೆ ಸಿಟ್ಟು ಬರಲಿಲ್ಲ. ತೆರೆದ ಪುಸ್ತಕದಿಂದ ಮುಖವನ್ನು ಮುಚ್ಚಿಕೊಂಡರು.

ನಿದ್ದೆ ಬಾರದಾಗ ಕಣ್ಣನ್ನು ಮುಚ್ಚಿ ಮಲಗಿದರೆ ? -ಧಿಯೇಟರಿನಲ್ಲಿ ದೀಪವಾರಿಸಿದಂತೆ ಚಿತ್ರಪಟ ಸುರುವಾಗಿ ಬಿಡುತ್ತದೆ. ಲೀಲಾಬಾಯಿಯವರ ಸ್ಮೃತಿಪಟಲದ ಮೇಲೆ ಅವರ ಗತ ಜೀವನದ ಚಿತ್ರಪಟ ಸುಳಿಯತೊಡಗಿತು,

"-–ಆ ಘಟನೆ-ಮಧುರ ರಸನಿಮಿಷ ! ಹಾಯಸ್ಕೂಲಿನಲ್ಲಿ ತಾವು ಮ್ಯಾಟ್ರಿಕಿನಲ್ಲಿ ಕಲಿಯುವ ದಿನ. ತಮ್ಮ ಕ್ಲಾಸಿನ ದೇಶಪಾಂಡೇ ಮಾಸ್ತರರು ತಾವು ಅವರ ಪವಿತ್ರ ಪ್ರೇಮಪಾಶದಲ್ಲಿ ಸಿಲುಕಿದ್ದು. ಆ ಘಟನೆ ಮದುವೆಯಲ್ಲಿ ಪರಿಣಮಿಸಿತು. ನೋಡಿದ ಜನರೆಲ್ಲ “ಲಕ್ಷ್ಮೀನಾರಾಯಣ ಜೋಡಿ, ರಾಧಾ-ಕೃಷ್ಣರ ಜೋಡಿ” ಎಂದು ಬೆರಳು ಕಚ್ಚುತ್ತಿದ್ದರು. ತಾವು ಊರಲ್ಲಿ ಸಾಯಂಕಾಲ ತಿರುಗಾಡಿ ಮನೆಗೆ ಬಂದರೆ, ಮನೆಯಲ್ಲಿಯ ಕೆಲಸಗಿತ್ತಿ, ದೃಷ್ಟಿ ತೆಗೆದು ಬೆಂಕಿಯಲ್ಲಿ ಸಾಸಿವೆಕಾಳು ಒಗೆದರೆ, ಮನೆಯಲ್ಲಿ ಕಾಲಿಡಲಾಗದಷ್ಟು ಹೊಲಸು ವಾಸನೆ ಬರುತ್ತಿತ್ತು. ದೇಶಪಾಂಡೇ ಮಾಸ್ತರರು ಆದರ್ಶವಾದಿಗಳು, ತುಂಬಾ ಬುದ್ಧಿವಂತರು, ಸುಂದರರು, ಅವರಿಗೆ ಸಮೀಪದ ಬಳಗದವರಾರೂ ಇರಲಿಲ್ಲ. ತನ್ನ ಸಹೃದಯಪೂರಿತ ಪ್ರೇಮ, ಅವರ ರುಕ್ಷ ಜೀವನದಲ್ಲಿ ಗಂಗೆಯ ಮಹಾಪೂರದಷ್ಟು ಸ್ವಾರಸ್ಯವನ್ನು ಹುಟ್ಟಿಸಿತ್ತು. ಅರೆನಿಮಿಷವಾದರೂ ಅವರು ತನ್ನನ್ನು ಬಿಟ್ಟು ಕದಲುತ್ತಿರಲಿಲ್ಲ. ತಾನಾದರೂ ಎಲ್ಲಿ ? ಎರಡೂ ಕೈಗಳೂ ಕೂಡಿದಾಕ್ಷಣವೇ ಚಪ್ಪಾಳೆಯಲ್ಲವೇ? ತನ್ನ ಮನೆ––ಮನೆ ಅಲ್ಲ––ನಂದನ ವನ ! ಆ ಸುಖ ಆ ಶಾಂತಿ––

––ಆದರೆ ಆ ಸುಖ ಶಾಂತಿ, ಬಿರುಗಾಳಿಯ ಪೂರ್ವದ ಚಿಹ್ನೆಯೆಂದು ಆಗ ತನಗೆಲ್ಲಿ ಅರಿವಿತ್ತು ? ಹಗಲು ಹೋದಾಕ್ಷಣ ರಾತ್ರಿಯಾಗುವುದು ಸೃಷ್ಟಿಯ ನಿಯಮ ಸರಿ. ಆದರೆ, ಬಂದ ಆ ಕಾಳರಾತ್ರಿ ಮತ್ತೆ ಸರಿಯದೆ ನಿಂತರೆ ? ತನ್ನ ಜೀವನದಲ್ಲಿ ಮತ್ತೆ ಹಗಲು ಯಾವಾಗ ? ಹತ್ತು ವರ್ಷದ ಹಿಂದಿನ ಪ್ರಸಂಗ: ಮದುವೆಯಾಗಿ ಮೂರು ವರ್ಷವೂ ಆಗಿರಲಿಲ್ಲ. ಆ ಸುಡುಗಾಡು ಗೋಕಾಕ ಪ್ರವಾಸ....... ಮೋಟಾರಿನ ಅಪಘಾತ ! ಒಂದು ಕಾಲು, ಒಂದು ಕೈ, ಮುಖಕ್ಕೆ ಗಾಯ ! ತನ್ನ ಗಂಡನಿಗಾದ ಈ ದೈನ್ಯಾವಸ್ಥೆ-ಒಂದು ಸಲ ತನ್ನ ಮನದಲ್ಲಿ, ಆತ್ಮಹತ್ಯೆಯ ವಿಚಾರವೂ ಬಂದಿತ್ತು. ಅಪಾಯದಿಂದ ಗುಣವಾಗದಿದ್ದರೆ ಬಾಂವಿ ಬೀಳುವೆನೆಂದು ಶಪಥವನ್ನು ಮಾಡಿದ್ದೆ. ಆದರೆ ವಿಸ್ಮೃತಿ ಮಾನಸಿಕ ರೋಗಕ್ಕೊಂದು ರಾಮಬಾಣ ಔಷಧವೆಂದು, ಆನಂತರ ತಿಳಿಯಿತು. ಪ್ರೇಮದ ಉದ್ವೇಗ ಬರಬರುತ ಕಡಿಮೆಯಾಗತೊಡಗಿತು. ಗಂಡನ ಕುಂಟು ದೇಹ, ವಿಕೃತ ಮುಖ –– ಛೇ, ಏನೋ ಒಂದು ತರದ ಜುಗುಪ್ಪೆ ಹುಟ್ಟಿಸಿತು. ಬರಬರುತ್ತ ಅವರ ವಿಷಯದಲ್ಲಿ ಅನಾದರ ಹೆಚ್ಚತೊಡಗಿತು ಮುಖ ನೋಡುವುದಕ್ಕೆ ಮನಸ್ಸಾಗಲಿಲ್ಲ-ಮೈ ಮುಟ್ಟುವುದಂತೂ ಬೇರೆ ಉಳಿಯಿತು. ಯಾವ ಸುಖಸಂಪತ್ತುಗಳಿದ್ದರೇನು?––ಆ ಹಸಿವು! ಹಸಿವನ್ನು ಹಿಂಗಿಸಿಕೊಳ್ಳಬಹುದಿತ್ತು; ಆದರೆ ಹುಲಿ ಹಸಿದರೆ––"

ಭವಿಷ್ಯದ ಭೀಕರ ಭೂತ ಅವಳ ಮ೦ದೆ ಥೈ ಥೈ ಕುಣಿದಾಡತೊಡಗಿತು. ತಾಸು ಮುಗಿದ ಗಂಟೆಯ ಸಪ್ಪಳವೂ ಅವಳಿಗೆ ಕೇಳಿಸಲಿಲ್ಲ. ಟೀಚರ್ಸ್ ರೂಮಿನಲ್ಲಿ ಇತರ ಮಾಸ್ತರರು ಬಂದ ಸಪ್ಪುಳವಾದಾಗಲೇ ಅವಳಿಗೆ ಎಚ್ಚರು ಬಂದಿತು. ಲೀಲಾಬಾಯಿ. ಮುಖದ ಮೇಲಿನ ಪುಸ್ತಕವನ್ನು ತೆಗೆದು ದೂರ ಸರಿಸಿದಳು. ಎದುರಿನಲ್ಲಿಯೇ ಮುಜುಮ್‍ದಾರ ಮಾಸ್ತರರು ನಿಂತಿದ್ದರು. ತಮ್ಮನ್ನು ನೋಡಿದಾಗ ಮಾತನಾಡಿಸದೇ ಇರುವುದು ಸಭ್ಯತನಕ್ಕೆ ಸಲ್ಲದ ವಿಷಯವೆಂದು, ಮುಜುಮ್‍ದಾರರು “ಏನು ಮನೆಯಲ್ಲಿ ನಿದ್ರೆ ಆಗಲಿಲ್ಲವೇ ? ” ಎಂದು ತಮ್ಮ ಸರಲ-ಹಾಸ್ಯಯುಕ್ತ-ಶೈಲಿಯಲ್ಲಿ ಕುಶಲ ಪ್ರಶ್ನೆ ಮಾಡಿದರು.

ಲೀಲಾಬಾಯಿಯವರು ತಮ್ಮನ್ನು ಸಾವರಿಸಿಕೊಂಡು ಏಳಲಿಲ್ಲ; ಕುಳಿತಲ್ಲಿಯೇ ಕುಳಿತು "ಹೌದು" ಎಂದರು. ಮಾತು ಮುಗಿದೊಡನೆಯೆ ಮುಜುಮ್‍ದಾರರು ಬೇರೆಯ ಕಡೆಗೆ ಹೊರಳಿದರು. ಆದರೆ ಲೀಲಾಬಾಯಿಯವರ ದೃಷ್ಟಿ ಅವರ ಮೇಲಿಂದ ಕದಲಲಿಲ್ಲ. ಬಿಕ್ಕೆ ಬೇಡುವವನಿಗೆ ಪಕ್ವಾನ್ನದ ಎಲೆಯನ್ನು ಮುಂದೆ ಮಾಡಿದರೆ ! ಹೌದು, ಒಂದು ವಿಷಯದಲ್ಲಿ ಲೀಲಾಬಾಯಿಯವರು ಬಿಕ್ಕೆಯವರೇ ಆಗಿದ್ದರು ಗಂಡನ ವಿಕೃತ ಮುಖ, ಕುಂಟು ದೇಹ ಅವರಲ್ಲಿ ಜುಗುಪ್ಪೆ ಹುಟ್ಟಿಸಿತ್ತು.

ಬೇಡದ ವಸ್ತುವನ್ನು ಆಹಾರದ ತಟ್ಟೆಯಲ್ಲಿ ಬಡಿಸಿದರೆ, ಕೆಲ ಹುಡುಗರು ಅದನ್ನು ಮುಟ್ಟುವುದಿಲ್ಲ. ಪಾಲಿಗೆ ಬಂದದ್ದೇ ಪಂಚಾಮೃತವೆನ್ನುವ ಸ್ವಭಾವ ಇವರದಲ್ಲ. ಕಾಜಿನ ಭರಣಿಯಲ್ಲಿ ತೆಗೆಯಲು ಬಾರದ ಹಾಗೆ ಭದ್ರವಾಗಿರಿಸಿದ ಹೋಳಿಗೆಯನ್ನು ಕಂಡಾದರೂ ಸಂತೋಷಪಟ್ಟಾರು; ಆದರೆ ಎಲೆಯಲ್ಲಿ ಬಡಿಸಿದ್ದನ್ನು ಕೈಯಿಂದ ಮುಟ್ಟರು. ಇಂಥವರ ಸಾಲಿಗೇ ಲೀಲಾಬಾಯಿಯವರೂ ಸೇರಿದ್ದರು––ಆದರೆ ತೀರ ಹಸಿವಾದಾಗ––ಉಪವಾಸದಿಂದ ಸಾಯುವ ಜನರೂ ಇದ್ದಾರೆ; ಅಥವಾ ಭರಣಿಯನ್ನು ಒಡೆದು ಹೋಳಿಗೆಗೆ ಕೈ ಹಾಕುವ ಸಾಹಸಿಗಳೂ––

ಹತ್ತು ನಿಮಿಷಗಳ ಸೂಟಿ ಮುಗಿಯಿತು. ಶಾಲೆಯ ಜವಾನ ಘಂಟೆ ಬಾರಿಸಿ ತನ್ನ ಕರ್ತವ್ಯವನ್ನು ನೆರವೇರಿಸಿದ. ಎಲ್ಲ ಮಾಸ್ತರರೂ ತಮ್ಮ ಕ್ಲಾಸಿಗೆ ಹೋದರು. ಆದರೆ ಲೀಲಾಬಾಯಿಯವರು ತಲೆ ನೋಯುತ್ತದೆಂದು ಹೇಳಿ, ಮನೆಯ ದಾರಿ ಹಿಡಿದರು. ನಡಿಗೆ ಮಾತ್ರ ಸಾವಧಾನವಾಗಿ ಸಾಗುತ್ತಿತ್ತು; ಶೀಘ್ರತೆ ಆ ನಡಿಗೆಯಲ್ಲಿ ಬರಲು ಸಾಧ್ಯವಿರಲಿಲ್ಲ. ಶೀಘ್ರತೆಗೆ ಆಮಂತ್ರಣ ಕೊಡಲು ಮನೆಯಲ್ಲಿ ಆಕರ್ಷಕತೆ ಇರಲಿಲ್ಲ. ಲೀಲಾಬಾಯಿಯವರ ದಾಂಪತ್ಯ ಜೀವನದಲ್ಲಿ ಒಂದು ಬದಿ ಕಮರಿ ಹೋದಂತೆ ಭಾಸವಾಗು ತಿತ್ತು. ದಾರಿಯುದ್ದಕ್ಕೂ ನಡೆಯುತ್ತಿರುವಂತೆ ತಲೆತು೦ಬ ಯೋಚನೆಗಳೇ!

"ಗಂಡನ ಅಪಘಾತದ ನಂತರ ಅವರು ಕೂಡಿಸಿಟ್ಟ ನಿಧಿಯಿಂದ ಕಾಲೇಜು ಕಲಿತಳು. ಬಿ. ಎ. ಆಯಿತು; ಬಿ. ಟಿ. ಯೂ ಆಯಿತು. ಮನೆಯಲ್ಲಿ ಕೂಡಿಸಿದ ನಿಧಿಯ ತೀರಿತು. ಆದರೂ ಒಂದು ವೃತ್ತಿಗೆ ಮಾರ್ಗವಾಯಿತು. ಕೆಲಸವೂ ಸಿಕ್ಕಿತು. ಕೈತುಂಬ ಸಂಬಳವೂ ಸಿಗತೊಡಗಿತು. ಇದೆಲ್ಲ ಮಾಡಿದ್ದು ಯಾರು ? ಅವರು ! ಹೌದು ಮಾಡಿದರೇನಾಯಿತು? ಅವರು ತನಗೆ ಕಲಿಸಿದರೇನಾಯಿತು ? ತಾವು ಇನ್ನು ದುಡಿದು ತರುವುದು ಸಾಧ್ಯವಿಲ್ಲವೆಂದು ಮನದಟ್ಟಾದ ಮೇಲೆಯೇ ತನಗೆ ಕಲಿಸಿದ್ದಾರೆ. ಇದರಲ್ಲಿ ಯಾವ ಪಾರಮಾರ್ಥ ? ಪಾರಮಾರ್ಥ ಇಲ್ಲವೇ ಇಲ್ಲ ! ಸ್ವಾರ್ಥವೇ ತುಂಬಿದೆ ! ತಮ್ಮ ಹೊಟ್ಟೆ ಪಾಡಿಗಾಗಿ ಈ ಪಾರಮಾರ್ಥದ ಸೋಗನ್ನು ಧರಿಸಿದ್ದಾರೆ - ನಾನು ಈ ಸೋಗಿಗೆ ಮರುಳಾಗಿ, ಈ ಕುಂಟ ವ್ಯಕ್ತಿಯನ್ನು ಆಮರಣ ಸಾಕಲೇ ? ಅದರಿಂದ ತನಗಾವ ಸುಖ ? ಸುಖ ಒಂದೇ. ಅ೦ಗಹೀನ ಗಂಡನ ದರ್ಶನ--ಆ ವಿಕೃತ ಮುಖದ ದರ್ಶನ."

ಲೀಲಾಬಾಯಿಯವರು ಇನ್ನೂ ವಿಚಾರಿಸುತ್ತಲೇ ಇದ್ದರು. ಆದರೆ ಬದಿಯಲ್ಲಿ ಕಾರು ಬಂದು ನಿಂತಿತು ಒಳಗಿನಿಂದಲೇ ಕಾರಿನ ಡ್ರಯವ್ಹರ್ ಕೂಗಿ ಹೇಳಿದ:

"ಬಾಯಿಯವರೇ, ಒಂದು ಬದಿಯಿಂದ ಹೋಗಿರಿ, ರಸ್ತೆಯ ನಡುವೇ ಹೊಂಟೀರಲ್ಲ!"

ಲೀಲಾಬಾಯಿಯವರಿಗೆ ಆಗಲೇ ಎಚ್ಚರುಬಂದದ್ದು. ಮುಖ ಮೇಲಕ್ಕೆತ್ತಿ ನೋಡಿದರು. ಕಾರಿನಲ್ಲಿ ಕುಳಿತು ಒಂದು ಜೊತೆ ವಾಯುವಿಹಾರಕ್ಕೆ ಹೊರಟಿತ್ತು. ಕೈಗೆ ಕೈ, ಮೈಗೆ ಮೈ ಅಂಟಿಸಿಕೊಂಡು ಕುಳಿತ ಆ ದೃಶ್ಯವನ್ನು

ಲೀಲಾಬಾಯಿಯವರಿಂದ ನೋಡಲಾಗಲಿಲ್ಲ. ಅವರ ಹೊಟ್ಟೆಯಲ್ಲಿ ಕರಳು ಕಿತ್ತು ಬಂದಂತಾಯಿತು. ಲೀಲಾಬಾಯಿ, ದಾರಿಯ ಒಂದು ಬದಿಗೇನೋ ಸರಿದರು; ಆದರೆ ಮನಸ್ಸು ದಂಪತಿಗಳತ್ತಲೇ ಇತ್ತು. ಅವರ ಒಳಗಿನ ಹಸಿವು ಪ್ರಜ್ವಲಿತವಾಗತೊಡಗಿತು, ಆದರೆ ಊಟ ಉಣ್ಣುವವನ ತಟ್ಟೆಯತ್ತ ನೋಡಿದರೆ, ಹಸಿವು ಹಿಂಗಬಹುದೇ?

ಲೀಲಾಬಾಯಿಯವರು ಮನೆಯ ಬಾಗಿಲಿಗೆ ಬಂದಾಕ್ಷಣ, ಮನೆಯ ಕೆಲಸಗಿತ್ತಿ ಸ್ವಾಗತಿಸಿದಳು. ಲೀಲಾಬಾಯಿಯವರು ನೇರವಾಗಿ ತಮ್ಮ ಕೋಣೆಗೆ ನಡೆದರು. ದೇಶಪಾಂಡೆ ಮಾಸ್ತರರು ಚಕ್ರದ ಕುರ್ಚಿಯಲ್ಲಿ ಕುಳಿತವರು, ತಮ್ಮ ಹೆಂಡತಿ ಬಂದದ್ದನ್ನು ತಿಳಿದು, ಒಂದೇ ಕೈಯಿಂದ ಕುರ್ಚಿಯ ಗಾಲಿಯನ್ನು ತಿರುಗಿಸಿಕೊಳ್ಳುತ್ತ, ಕೋಣೆಗೆ ಬಂದರು. ಕೆಲಸಗಿತ್ತಿ ಅವರಿಗೆ ಸಹಾಯಮಾಡಿ, ಅವರನ್ನು ಬಾಯಿಯವರ ಕೋಣೆಗೆ ಕಳಿಸಿ ತನ್ನ ಕೆಲಸಕ್ಕೆ ––ಅಡುಗೆಯ ಮನೆಯ ಕಡೆಗೆ-- ನಡೆದಳು. ಗಂಡ ತನ್ನ ಕೋಣೆಯಲ್ಲಿ ಬಂದದ್ದನ್ನು ನೋಡಿ ಲೀಲಾಬಾಯಿಗೆ ತುಂಬ ಆಶ್ಚರ್ಯವಾಯಿತು. ಗಂಡಹೆಂಡಿರ ಕೋಣೆಗಳು ಬೇರೆಯಾಗಿ ಬಹು ದಿನಗಳಾಗಿದ್ದುವು. ಈಗ ೭-೮ ದಿನಗಳಿಂದ ಲೀಲಾಬಾಯಿ ತನ್ನ ಗಂಡನ ಮುಖ ನೋಡುವುದನ್ನೂ ತಪ್ಪಿಸಿಕೊಂಡಿದ್ದಳು. ಹೆಂಡತಿಯ ಮನೋಗತವನ್ನು ಅನುಭವಗಳ ಮೇಲಿಂದ ಅರಿತ ದೇಶಪಾಂಡೇ ಮಾಸ್ತರರೂ, ಹೆಂಡತಿಯ ಮನಸ್ಸಿಗೆ ಬಾರದ ಕೆಲಸಕ್ಕೆ ಕೈ ಹಾಕುತ್ತಿರಲಿಲ್ಲ. ಪರಾವಲಂಬಿಗೆ ಹೊಟ್ಟೆ ತುಂಬಿದರಾಯಿತು; ಅದೇ ದೊಡ್ಡದು !

ದೇಶಪಾಂಡೆ ಮಾಸ್ತರರು ಒಳಗೆ ಬಂದ ಕೂಡಲೆ, ಒಂದು ಸಲ ಲೀಲಾಬಾಯಿ ಅವರೆಡೆಯಲ್ಲಿ ತೀಕ್ಷ್ಣದೃಷ್ಟಿ ಬೀರಿ ಗುಡುಗಿದರು:

"ಏನು ಬೇಕಾಗೇದ ನಿಮಗ ? ಒಳಗ ಕೆಲಸದಾಕಿ ಇದ್ದಾಳ ! ಏನಾದರೂ ಬೇಕಾದರೆ ಅಲ್ಲೇ ಇಸಕೊಳ್ಳಿರಿ !”

"ನನಗೇನೂ ಬೇಡ ! ಒಂದೇ ಒಂದು ಪ್ರಾರ್ಥನೆ ಕೇಳು ! ” ಒಂದು ಕೈಯಿಂದ ಕೋಣೆಯ ಬಾಗಿಲನ್ನು ಮುಚ್ಚುತ್ತಲೇ ದೀನಸ್ವರದಲ್ಲಿ ದೇಶಪಾಂಡೆಯವರು ಉತ್ತರಿಸಿದರು.

ದೇಶಪಾಂಡೆಯವರು ಬಾಗಿಲನ್ನು ಮುಚ್ಚುತ್ತಿದ್ದುದನ್ನೂ “ ಒಂದು ಪ್ರಾರ್ಥನೆ ” ಎಂದು ಕೇಳಿಕೊಳ್ಳುತ್ತಿರುವುದನ್ನೂ ನೋಡಿ, ಲೀಲಾಬಾಯಿಯವರ ಹೆಣ್ಣಹೃದಯ ಅಂಜಿತು. ಆದರೆ ಅಂಗಹೀನತೆಯನ್ನು ನೋಡಿ ಧೈರ್‍ಯದಿಂದಲೇ ಪುನಃ ಕೇಳಿದರು:

"ಏನು ? ಬೇಗ ಹೇಳಿ ಮುಗಿಸಿರಿ ! ನನಗೆ ತುಂಬಾ ಕೆಲಸವಿದೆ.

೭ ಘಂಟೆಗೆ ರೇಡಿಯೋದಲ್ಲಿ ನನ್ನ ಲೆಕ್ಟರ್ ಇದೆ. ನನಗೆ ಹೋಗಲೇಬೇಕಾಗಿದೆ!"

"ಇನ್ನು ಮತ್ತೆ ತೊಂದರೆ ಕೊಡಬಯಸುವುದಿಲ್ಲ. ಶಾಂತವಾಗಿ ಕೇಳು!”
“ನೋಡು, ಒಬ್ಬರ ಮೇಲೆ ಭಾರವಾಗಿರೋದು ಚೆನ್ನಾದುದಲ್ಲ ! ”
“ಅದಕ್ಕೇನು ಮಾಡಬೇಕಂತೀರಿ ? "
ನಾನು ಸರಿಯಾಗಿದ್ದಾಗಿನ ದಿನಗಳನ್ನು ಜ್ಞಾಪಿಸಿಕೊಳ್ಳು ! ”
ವಿಧವೆ ಆದವಳು ತನ್ನ ತುರುಬಿದ್ದಾಗಿನ ದಿನಗಳನ್ನು ಜ್ಞಾಪಿಸಿಕೊಂಡು ಅತ್ತರೇನು ಬರೋದು ?”
“ನೀನು ಹೇಳುವುದು ನಿಜ; ಆದರೆ ನನ್ನ ಅಪಘಾತವಾದ ಮೇಲೆ ನಾನು ಆಸ್ಪತ್ರೆಯಲ್ಲಿದ್ದೆ. ನೀನು ನನಗಾಗಿ ೩-೩|| ತಿಂಗಳು ಕಣ್ಣೀರನ್ನು ಕೋಡಿಯಾಗಿ ಹರಿಸಿದ್ದೆ. ಆ ಅಪಾಯದಿಂದ ನಾನು ಜೀವದಿಂದ ಉಳಿಯದಿದ್ದರೆ, ಭಾಂವಿಯಲ್ಲಿ ಬಿದ್ದು ಸಾಯುವೆನೆಂದು ಪಣ ತೊಟ್ಟಿದ್ದೆ. "
“ನೀವನ್ನೋದೇನು ? ನಾನು ಈಗ ಹೋಗಿ ಭಾಂವಿಯಲ್ಲಿ ಬೀಳಲ್ಯಾ? "
“ತ್ರಿಕಾಲಕ್ಕೂ ಆಗದು !"
"ಮತ್ತೇನು ? "
“ಅಂದಿನ ಪ್ರತಿಜ್ಞೆ ಜ್ಞಾಪಿಸಿಕೊ. ಇಂದಿನ ನಿನ್ನ ನಡತೆಯನ್ನು ದಯವಿಟ್ಟು ವಿಮರ್ಶಿಸಿ ನೋಡು ! ”
“ಸೆರೆಯ ಮಬ್ಬಿನಲ್ಲಿ ಮನುಷ್ಯ ಏನೇನೋ ಒದರಾಡುತ್ತಾನೆ. ಏರು ಜವ್ವನವೂ ಒಂದು ಮಾದಕ ಪೇಯ. ಪ್ರೇಮಭರದಲ್ಲಿಯ ಪ್ರತಿಜ್ಞೆ ಅದು. ಒಬ್ಬ ಮನುಷ್ಯ ಸತ್ತಾಗ, ಎದೆ ಎದೆ ಬಡೆದುಕೊಂಡು ಅಳುವ ಅವನ ಬಳಗವೇ ಅವನ ವರ್ಷಶ್ರಾದ್ಧದ ದಿನ ನಗುತ್ತ ಕೆಲೆಯುತ್ತ ಊಟ ಮಾಡುವುದನ್ನು ನಾವು ನೋಡುತ್ತಿಲ್ಲವೇ ?"

"ನೀನು ಪುತಿಜ್ಞೆ ಮಾಡಿದ್ದಕ್ಕೂ ನನ್ನ ಅಭ್ಯಂತರವಿಲ್ಲ. ಅದರಂತೆ ನಡೆಯಬೇಕೆನ್ನುವಷ್ಟು ಮೂರ್ಖನೂ ನಾನಲ್ಲ ! - ನನಗಾವ ಬೇರೆ ಬಳಗವೂ ಇಲ್ಲ. ನಿನ್ನನ್ನೇ ನಂಬಿದ್ದೇನೆ ! "

"ನಿಮ್ಮನ್ನು ನಡುನೀರಿನಲ್ಲಿ ಬಿಡಲಿಲ್ಲವಲ್ಲಾ, ಉಪವಾಸ ಕೆಡವಿದ್ದೇನೆಯೇ ? »"
"ಹೊಟ್ಟೆ ಹೇಗೋ ತುಂಬುತ್ತದೆ; ಆದರೆ ಸ್ವಾರಸ್ಯವಿಲ್ಲ ! ಸಂಸಾರರಥದ ಒಂದು ಗಾಲಿ ಮುರಿಯಿತು. ಆ ಗಾಲಿಯನ್ನು ಬೈದೇನು ಪ್ರಯೋಜನ ? ಸರಿಯಾಗಿದ್ದಷ್ಟೂ ದಿನ ರಥ ಎಳೆಯಿತು; ನಡುವೆ ಮುರಿದದ್ದು

ಅದರ ದೋಷವೇ ? "

"ಮುರಿದ ಗಾಲಿಯನ್ನು ಬೀಸಾಡಿ, ಬೇರೆ ಗಾಲಿ––"

ಅರ್ಧಕ್ಕೆ ಗಾಬರಿಯಾಗಿ ಲೀಲಾಬಾಯಿ ತಡೆಹಿಡಿದರು. ದೇಶಪಾಂಡೆಯವರು "ಹೌದು ಹೊಸ ಗಾಲಿ ಹಾಕಬೇಕು; ಆದರೆ ಮೊದಲಿನ ಗಾಲಿಯನ್ನು ಬೀಸಾಟದ ನಂತರ. ನಾನು ನನ್ನ ಕರ್ತವ್ಯವನ್ನು ನೆರವೇರಿಸಿದೆ. 'ಗಂಡ ಕುಂಟನಾಗಿ ಹೆಂಡತಿಯನ್ನು ಬಿಕ್ಕೆಗೆ ಕಳಿಸಿದ' ಎಂಬ ಲೋಕಾಪವಾದ ಬಾರದ ಹಾಗೆ, ನಾನು ನಿನಗೆ ಕಲಿಸಿದೆ, ಒಂದು ಮಾರ್ಗಕ್ಕೆ ಹಚ್ಚಿದೆ. ಈಗ ನನಗೆ ಓಡಾಡಲೂ ಆಗದು; ನೀನೇ ಬಾಂವಿಯ ವರೆಗೆ––"

ಗದ್ಗದ ಕಂಠದಿಂದ ವಾಕ್ಯವನ್ನು ಅರ್ಧಕ್ಕೆ ಮುಗಿಸಿ, ದೇಶಪಾಂಡೆಯವರು ಖೋಲಿಯಿಂದ ಹೊರಗೆ ನಡೆದರು. ಲೀಲಾಬಾಯಿಯವರು ತಮ್ಮ ಕೋಣೆಯಲ್ಲಿ ಕದಲದೇ ನಿಂತರು. ಗಂಡನ ಕೊನೆಯ ವಾಕ್ಯ ಅವರನ್ನು ವಿಚಾರಕ್ಕೆ ಗುರಿ ಮಾಡಿತು. ವಿಚಾರಿಸತೊಡಗಿದರು:––

ಹಳೆಯ ಗಾಲಿ––ಬಾಂವಿಗೆ––ಛೇ, ಮಾರ್ಗದಲ್ಲಿಯ ಮುಳ್ಳನ್ನು ತೆಗೆಯುವದಕ್ಕೆ ವೇಳೆ ಹತ್ತದು; ಆದರೆ ತಾನು ವಿಧವೆಯಾದ ಮೇಲೆ, ಬೇರೆ ಸದ್ಗೃಹಸ್ಥರು ನನ್ನನ್ನು ಮದುವೆಯಾಗಲು ಮುಂದೆ ಬರುವರೇ ? ಯಾರಾದರೂ ಬಂದರೆ, ಅವರೆಲ್ಲರೂ ಚಾರಿತ್ರ ಶುದ್ಧವಿಲ್ಲದವರೆಂದು ನಿರ್ದಾಕ್ಷಿಣ್ಯವಾಗಿ ಹೇಳಬಹುದು-ಹೌದು ! ಎಸೆದ ಎಂಜಲೆಲೆಯನ್ನು ತಿನ್ನಲು ಸಾಕಿದ ನಾಯಿಗಳೆಲ್ಲಿ ಬರುತ್ತವೆ ? ಬೀಡಾಡಿ ನಾಯಿಗಳೇ––'

––ತಾನು ವಿಧವೆಯಾದರೆ, ತನ್ನ ಸೌಂದರ್ಯಕ್ಕೆ ಮರುಳಾಗಿ ಮುಜುಮ್‍ದಾರರು ತನ್ನನ್ನು ಛೇ, ಅವರು ಈಗಾಗಲೇ ಸಪತ್ನೀಕರು !––ವಿಚಾರ ಮಾಡುತ್ತಿರುವಂತೆ ಲೀಲಾಬಾಯಿಯವರ ಕಣ್ಣ ಮುಂದೆ ಮುಜುಮ್‍ ದಾರ್ ಮಾಸ್ತರರ ಚಿತ್ರ ಸುಳಿಯಿತು; ಸಾಕ್ಷಾತ್ ಮದನನ ಮೂರ್ತಿ! ಎತ್ತರದ ನಿಲುವು, ಹರವಾದ ಎದೆ, ಮುಗುಳು ನಗೆಯ ಮುಖ, ನಿಷ್ಕಪಟ ಹೃದಯ. ಮುಜುಮದಾರರು ಆ ಶಾಲೆಗೆ ಬಂದು ಕೇವಲ ನಾಲ್ಕು ತಿಂಗಳಾಗಿದ್ದುವು. ಅವರ ಮನೆತನದ ಸ್ಥಿತಿ ಲೀಲಾಬಾಯಿಯವರಿಗಷ್ಟೇ ಅಲ್ಲ; ಉಳಿದಾವ ಮಾಸ್ತರರಿಗೂ ತಿಳಿದಿರಲಿಲ್ಲ. ಆದರೆ ಅವರ ಪತ್ನಿ ಸುಶಿಕ್ಷಿತೆ ಎಂಬುದನ್ನು ಅವರ ಬಾಯಿ೦ದಲೇ ಕೇಳಿದ್ದರು. ಮುಜುಮ್‍ದಾರರ ಪತ್ನಿ M.B.B.S. ಕೋರ್ಸಿಗೆ ಹೋಗಿ ಮೂರು ವರುಷ ಕಲಿತು ಅರ್ಧಕ್ಕೆ ತಿರುಗಿ ಬಂದಿದ್ದರಂತೆ. ' ಹಾಗೇಕೆ ?' ಎಂದು ಒಂದು ಸಲ ಲೀಲಾಬಾಯಿಯವರು ಕೇಳಿದ್ದರು. "ನಾನು ಲಗ್ನವಾದ ಮೇಲೆಯೇ ಅವಳನ್ನು ಡಾಕ್ಟರ್ ಕೋರ್ಸಿಗೆ ಕಳಿಸಿದ್ದೆ.” ಎಂದು ಮುಜುಮ್‍ದಾರ್ ಮಾಸ್ತರರು ಉತ್ತರಿಸಿದ್ದರು. ಹಾಗಾದರೆ ಪೂರ್ತಿಯಾಗಿ ಕಲಿಸಲಿಲ್ಲವೇಕೆ ? ” ಎಂದು ಮರುಪ್ರಶ್ನೆ ಕೇಳಿದ್ದರು.

“ ತೊಟ್ಟಿಲು ಕಟ್ಟುವ ಸಮಯ––"

ಅರ್ಧಕ್ಕೆ ಮಾತು ನಿಲ್ಲಿಸಿ ಮುಜುಮ್ದಾರರು ಮನೆಯ ಕಡೆ ತೆರಳಿದ್ದರು.

ಶಾಲೆ ಬಿಟ್ಟಾಕ್ಷಣ ಮುಜಮ್‌ದಾರರು ಉಳಿದೆಲ್ಲ ಮಾಸ್ತರರಂತೆ ಟೀಚರ್ಸ್ ರೂಮಿನಲ್ಲಿ ಹರಟೆ ಹೊಡೆಯುವುದಕ್ಕೆ ಕೂಡುತ್ತಿರಲಿಲ್ಲ. ಶಾಲೆ ಬಿಟ್ಟ ಗಂಟೆಯಾದಾಕ್ಷಣ, ಮನೆಯಕಡೆ ತೆರಳುತ್ತಿದ್ದರು “ ಅಬ್ಬಾ, ಏನದು ಪತ್ನಿ ಪ್ರೇಮ ? ” ಎಂದು ಲೀಲಾಬಾಯಿಯವರಿಂದ ಹಿಡಿದು ಎಲ್ಲ ಮಾಸ್ತ್ರರರೂ ಅವರನ್ನು ಚೇಷ್ಟೆ ಮಾಡುತ್ತಿದ್ದರು. ಒಂದು ದಿನ ಲೀಲಾಬಾಯಿ ಧೈರ್ಯಮಾಡಿ ಅವರನ್ನು ಕೇಳಿಯೇ ಬಿಟ್ಟಿದ್ದರು:

"ನೀವು ಇಷ್ಟು ಪತ್ನಿಯ ಮೇಲೆ ಪ್ರೇಮ ಮಾಡುತ್ತೀರಲ್ಲಾ ! ಅವಳು ಅಷ್ಟು ಸುಂದರಿಯಾಗಿದ್ದಾಳೆಯೇ? ”
"ಹೌದು, ನನ್ನ ದೃಷ್ಟಿಯಲ್ಲಂತೂ ಅವಳನ್ನು ಸರಿಹೋಲುವವರು ಯಾರೂ ಇಲ್ಲ ! ”

ಮುಜುಮ್ದಾರರ ಉತ್ತರ ಕೇಳಿ ಲೀಲಾಬಾಯಿ ಒಳಗೊಳಗೇ ನಿರಾಶರಾಗಿ ಬಿಟ್ಟಿದ್ದರು. ಆದರೂ ಮುಜುಮ್‌ದಾರರ ಬಗೆಯ ಹುಚ್ಚು ಅವರ ತಲೆಯಿಂದ ಮಾಯವಾಗಿರಲಿಲ್ಲ. ಈಗಂತೂ ಗಂಡನ ಮಾತಿನಿಂದ ಅದು ಮತ್ತಷ್ಟು ಕೆರಳತೊಡಗಿತು. ಮತ್ತೆ ವಿಚಾರಿಸತೊಡಗಿದರು:

––ತಾನು ವಿಧವೆಯಾದ ಮೇಲೂ ಮುಜುಮ್‌ದಾರರು ತನ್ನನ್ನು ವರಿಸುವುದು ಸಾಧ್ಯವಿಲ್ಲ- ಬೇರೆ ಮಾರ್ಗ ತಾನಾಗಿಯೇ ಈ ದೇಹ ಅವರಿಗೆ–– ಆಹುದು––! ಪಕ್ವಾನ್ನದ ತಾಟನ್ನು ಬಡಿಸಿದರೆ, ಬೇಡವೆನ್ನುವ ಜನರಿದ್ದಾರೆಯೇ ?

"ಇಲ್ಲ” ಎಂದು ಅವರ ಮನಸ್ಸೇ ಉತ್ತರಿಸಿತು.

ಅವರ ಮನಸ್ಸು ಕೂಡ ಲಂಚ ತಿಂದ ಗುಮಾಸ್ತನ ಹಾಗೆ ಆಗಿತ್ತು. ಮತ್ತೆ ಮತ್ತೆ ವಿಚಾರಮಾಡಿ ಕೊನೆಯ ನಿರ್ಧಾರಕ್ಕೆಯೆ ಬಂದರು.

ನೀಲಿ ಕಾಗದದ ಮೇಲೆ ನಕ್ಷೆ ತಯಾರಿಸಿದ ನಂತರ, ಮನೆ ಕಟ್ಟುವುದಕ್ಕೇನು ತಡ ? ಅದರಲ್ಲಿ ಏನಾದರೂ ಸಂಭವಿಸಿದರೆ, ಹೆಸರು ಹೇಳಲಿಕ್ಕಾದರೂ ಗಂಡನ ಇರುವು ಅವಶ್ಯವೆಂಬುದನ್ನು ನಿರ್ಧರಿಸುವುದಕ್ಕೂ ಅವರು ಮರೆಯಲಿಲ್ಲ.

ಲೀಲಾಬಾಯಿ ಒಂದುಸಲ ಕೈಗಡಿಯಾರವನ್ನು ನೋಡಿಕೊಂಡರು. ಆರು ಹೊಡೆದಿತ್ತು. ಅಂದು ರೇಡಿಯೊದಲ್ಲಿ ತಮ್ಮ ಭಾಷಣವಿದ್ದುದನ್ನು ಜ್ಞಾಪಿಸಿಕೊಂಡು, ಮನೆಯಿಂದ ಹೊರಬಿದ್ದರು. ಅಂದೇ ತಮ್ಮ ಜತೆಯಲ್ಲಿ ರೆಡಿಯೋ ಸ್ಟೇಶನಿಗೆ ಬರಲು ಮುಜುಮ್‌ದಾರರನ್ನು ಕರೆದಿದ್ದರು. ಆದರೆ ಮುಜುಮ್‌ದಾರರ ಪತ್ನಿಯನ್ನು ಅಂದು ತವರ್ಮನೆಗೆ ಕಳಿಸುವುದಕ್ಕಾಗಿ ಸ್ಟೇಶನ್ನಿಗೆ ಅದೇ ವೇಳೆಗೆ ಹೋಗಬೇಕಾಗಿದ್ದುದರಿಂದ, ಕೊಂಚ ನೊಂದುಕೊಂಡಿದ್ದರು. ಅವರ ಜತೆಯಲ್ಲಿ ಬರೀ ಅಡ್ಡಾಡಿದುದರಿಂದಲೇ ಎಷ್ಟೋ ಶಾಂತಿ ಸಿಕ್ಕುತ್ತಿತ್ತು ಲೀಲಾಬಾಯಿಯವರಿಗೆ.

ರೇಡಿಯೋ ಕೇ೦ದ್ರ ತಲ್ಪಲು ಲೀಲಾಬಾಯಿಯವರಿಗೆ ತಡಹಿಡಿಯಲಿಲ್ಲ. ಅವರು ಅಲ್ಲಿಗೆ ಹೋದಾಗ ಆರುವರೆ ಹೊಡೆದಿತ್ತು. ಇನ್ನೂ ಅರ್ಧ ಗಂಟೆ ಕಾಲವಿದ್ದುದರಿಂದ, ಲೀಲಾಬಾಯಿ ಕೇಂದ್ರದ (Retiring Room)

ವಿಶ್ರಾಂತಿಕೋಣೆಯಲ್ಲಿ ಹೋಗಿ ಕುಳಿತರು. ಅಲ್ಲಿ ಅವರ ಬದಿಯಲ್ಲಿಯೇ ಒಬ್ಬ ಕುರುಡಿಯೂ ಕುಳಿತಿದ್ದಳು. ಕುರುಡಿಯಾಗಿದ್ದಳಿಷ್ಟೇ ಅಲ್ಲ; ಮುಖವೂ ಸುಂದರವಾಗಿರಲಿಲ್ಲ. ಅಲ್ಲಲ್ಲಿ ಕಪ್ಪು ಕಲೆಗಳಿದ್ದುವು.

ಅವಳ ಬದಿಯಲ್ಲಿಯೇ ಹನ್ನೊಂದು ವರುಷದ ಹುಡುಗನಿದ್ದ. ಇಂಥವಳ ಬದಿಯಲ್ಲಿ ಕೂಡಲು ಲೀಲಾಬಾಯಿಯವರಿಗೆ ಕೊಂಚ ಕಡಿಮೆತನ ಎನಿಸಿತು. ಏನೋ ಒಂದು ವಿಧವಾದ ಜುಗುಪ್ಪೆಯುಂಟಾಯಿತು. ಅವರನ್ನು ಎಲ್ಲಕ್ಕೂ ಮಿಗಿಲಾಗಿ ಆಶ್ಚರ್ಯಗೊಳಿಸಿದ್ದು ಆ ಕುರುಡಿಯ ತುಂಬುಹೊಟ್ಟೆ.

“ಇಂತಹ ಅಸಡ್ಡಾಳ ದೇಹದ ಜತೆಯಲ್ಲಿ ರಮಮಾಣನಾದ ಆ ಪುರುಷನೆಷ್ಟು ಸುಂದರನಿರಬಹುದು ? ” ಎಂದು ಮನದಲ್ಲಿಯೇ ವಿಚಾರಿಸಿ ನಕ್ಕರು. ಅವರಿಗೆ ಒಮ್ಮೆಲೇ ಬೀರಬಲ್ಲನ ಕಥೆಯ ನೆನಪಾಯಿತು. ಆ ಕತೆ “ ಲೈಂಗಿಕ ತೃಪ್ತಿ” ಎಂದು ತಮಗೆ ಕೂಗಿ ಹೇಳಿದಂತೆ ಭಾಸವಾಯಿತು. ಲೀಲಾಬಾಯಿಯವರು ಅಂಜಿದರು. ತಾನೂ ಆ ವಿಷಯದಲ್ಲಿ ತಾನೂ--ಛೇ, ಹುಲಿ ಹಸಿದರೆ--

ಆ ಹೆಂಗುಸು ಕುರುಡಿಯಾಗಿದ್ದರೂ, ತೊಟ್ಟ ಬಟ್ಟೆಗಳು ಮಧ್ಯಮ ವರ್ಗದವರಿಗೆ ಒಪ್ಪುವಂಥವುಗಳಾಗಿದ್ದುವು. ಆ ಬಟ್ಟೆಗಳಿಗಾದರೂ ಕಿಮ್ಮತ್ತು ಕೊಡಲೆಂದು ಲೀಲಾಬಾಯಿ ಆ ಕುರುಡಿಯನ್ನು ಮಾತನಾಡಿಸಿದರು:

"ಅಕ್ಕಾ, ನಿನ್ನ ಹೆಸರೇನು ?"
"ನನ್ನದೇ ? ಸುಲೋಚನೆ.

ಹೆಸರು ಕೇಳಿ ಲೀಲಾಬಾಯಿಯವರು ಅವಾಕ್ಕಾದರು. 'ಹೆಸರು ಭೀಮಸೇನ, ನೋಡುವುದಕ್ಕೆ ನರಪೇತಲು' ಎಂದಂತಾಯಿತಲ್ಲ ?-ಎಂದು ಉಕ್ಕಿ ಬರುವ ನಗುವನ್ನು ತಡೆದು ಮತ್ತೆ ಕೇಳಿದರು:

"ಇಲ್ಲಿಗೇಕೆ ಬಂದಿರಿ ?"
"ಹಾಡು : ಹೇಳುವುದಕ್ಕೆ ಬಂದಿದ್ದೆ. ಈಗ ಟಾ೦ಗಾ ಬಂದಾಕ್ಷಣ ಹೋಗುತ್ತೇವೆ"
"ಸಂತೋಷ, ಕಣ್ಣು ಕೊಡದಿದ್ದರೂ ದೇವರು ಸಂಗೀತ ಕಲೆ ಕೊಟ್ಟಿದ್ದಾನೆ. ದೇವರು ದೊಡ್ಡವ! ಹೊಟ್ಟೆ ಪಾಡಿಗೆ ಏನಾದರೂ ಕಲೆ ಕೊಟ್ಟಿದ್ದಾನೆ!"

ಕುರುಡಿ ಸಿಡುಕಿನ ಧ್ವನಿಯಲ್ಲಿ ನುಡಿದಳು:

"ನೀವು ಅನ್ಯಥಾ ಭಾವಿಸಿಕೊಳ್ಳಬೇಡಿ. ನಾನು ಹೊಟ್ಟೆ ಪಾಡಿಗೆ ನನಗೆ ಕೈತುಂಬ ಸಂಬಳ ತರುವ ಗಂಡನಿದ್ದಾನೆ.

ನಾನು ಗರತಿ, ಹಾಡುವ ಬೀದಿಯ ಹೆಣ್ಣಲ್ಲ; ನಾನು ಹುಟ್ಟುಗುರುಡಿಯಲ್ಲ !” ಎಂದು ಉತ್ತರಿಸಿ, ಹುಡುಗನ ಆಧಾರದಿಂದ ಕೋಣೆಬಿಟ್ಟು ಹೊರಟು ನಡೆದಳು.

ಕುರುಡಿಯ ಉತ್ತರ ಕೇಳಿ ಲೀಲಾಬಾಯಿಯವರು ಒಂದುಸಲ ನಕ್ಕುಬಿಟ್ಟರು. 'ಕುರುಡಿಗೂ ಕೈತುಂಬ ಸಂಬಳ ತರುವ ಗಂಡನಿದ್ದಾನೆಯೇ ? ಹಾಗಾದರೆ ಅವನು ಇವಳಿಗಿಂತಲೂ ಹೆಚ್ಚು ಕುರೂಪಿಯಾಗಿರಲಿಕ್ಕೆ ಸಾಕು !?' ಎಂದೆಂದುಕೊಂಡರು.


ರೇಡಿಯೋ ಕಾರ್ಯಕ್ರಮ ಮುಗಿಸಿ ಲೀಲಾಬಾಯಿಯವರು ಹೊರಗೆ ಬಂದರು. "ಇನ್ನೆಲ್ಲಿ ?" ಎಂದು ಅವರ ಮನಸ್ಸು ಕೇಳಿತು. "ಖಂಡಿತವಾಗಿ ಈಗಲೇ ಮನೆಗೆ ಹೋಗುವುದು ಬೇಡ !” ಎಂದುಕೊಂಡರು ಕೂಡಲೇ ಮುಜುಮ್‌ದಾರರ ನೆನಪು ಬಂದಿತು ಸದಾಶಿವನಿಗೆ ಅದೇ––

ಒಂದು ಸಲ ಲೀಲಾಬಾಯಿಯವರ ಕಣ್ಣೆದುರಿನಲ್ಲಿ ಆ ಕುರುಡಿಯ ಚಿತ್ರ ಸುಳಿಯಿತು. ಅವಳ ಆ ತುಂಬು ಗರ್ಭಿಣಿಯ ಚಿನ್ಹೆ, ಆ ಚಿತ್ರ ಮರೆಯಾದಂತೆ ಅವರ ಸುಪ್ತ ಕಾಮ ಕೆರಳಿತು. ಕುರುಡಿಯ ಕೂಡ ತನ್ನ ಹಸಿವನ್ನು––

ಮುಜುಮ್‌ದಾರರ ಪತ್ನಿ, ಅಂದೇ ತವರುಮನೆಗೆ ಹೋಗುತ್ತಾರೆಂಬ ಮಾತು ಅವರಿಗೆ ಗೊತ್ತಿತ್ತು. ಅವರು ಹೇಳಿದ ಪ್ರಕಾರ, ಈ ಹೊತ್ತಿಗೆ ಮುಜುಮ್‌ದಾರರು ಮನೆಯಲ್ಲಿ ಏಕಾಕಿ, ತಮ್ಮ ಮನಸ್ಸಿನಲ್ಲಿಯ ನಿರ್ಧಾರವನ್ನು ಜ್ಞಾಪಿಸಿಕೊಂಡರು, ಆ ನಿರ್ಧಾರಕ್ಕೂ ಮುಜುಮ್‌ದಾರರ ಪತ್ನಿಯು ತವರುಮನೆಯ ಪ್ರಯಾಣಕ್ಕೂ ಸರಿಹೋದದ್ದನ್ನೂ ಜ್ಞಾಪಿಸಿಕೊಂಡು, ಸಂತೋಷಪಟ್ಟರು. 'ಕೆಲಸಗಳು ಪೂರ್ತಿಯಾಗುವಂತಿದ್ದರೆ ಈ ರೀತಿ ಶುಭಶಕುನಗಳು ಜರಗುತ್ತವೆ !' ಎಂದು ಸಂತಸಬಟ್ಟರು. ಲೀಲಾಬಾಯಿಯವರು ಈಗ ಮನೆಯ ಕಡೆ ಹೊರಟಿರಲಿಲ್ಲ. ಅವರ ಕಾಲುಗಳು ಮುಜುಮದಾರರ ಮನೆಯತ್ತ ಸಾಗಿದ್ದುವು. ನಡೆಯುತ್ತಿದ್ದಂತೆಯೇ ಒಂದು ಸಲ ಲೀಲಾಬಾಯಿಯವರು, ತಮ್ಮ ಪರ್ಸನ್ನು ತೆಗೆದು, ಒಳಗನ್ನಡಿಯಲ್ಲಿ ತಮ್ಮ 'ಮುಖ ನೋಡಿಕೊಂಡರು. ತಮ್ಮ ಸೌಂದರ್ಯಕ್ಕೆ ತಾವೇ ಮರುಳಾದರು.

––ರಸಭರಿತ ತೊಂಡೆದುಟಿ, ಬಾಗಿದ ಹುಬ್ಬು, ನೀಲ ಕಣ್ಣು, ತುಂಬುಗಲ್ಲ––

'ಇಂತಹ ಸೌಂದರ್ಯ ತಾನಾಗಿಯೇ ಬಂದರೆ, ನಿರಾಕರಿಸುವ ಮೂರ್ಖರೂ ಇದ್ದಾರೆಯೇ ?' ಎಂದು ಒಂದು ಸಲ ತಮ್ಮನ್ನೇ ಕೇಳಿಕೊಂಡರು. ಈ ವಿಚಾರಗಳು ಮುಗಿಯುವ ಮೊದಲೇ ಅವರು, ಮುಜುಮ್‍ದಾರರ ಮನೆಯ ಮುಂಬಾಲಿಗೆ ಬಂದುಬಿಟ್ಟಿದ್ದರು.

ಮನೆ ಮಾಳಮರಡಿಯ ಕೊನೆಯ ಭಾಗದಲ್ಲಿ. ಮುಜುಮ್‌ದಾರರದೇ ಕೊ‍‍ನೆಯ ಮನೆ. ಆಗಲೇ ಕತ್ತಲೆ ಪಸರಿಸಿತ್ತು. ಮುಜುಮ್‍‌ದಾರರ ಮನೆಯ ಬಾಗಿಲು ಹಾಕಿತ್ತು. ಲೀಲಾಬಾಯಿಯವರೇನೋ ಬಾಗಿಲವರೆಗೆ ಬಂದರು, ಆದರೆ ಕೂಗಿ ಬಾಗಿಲು ತೆಗೆಸುವ ಧೈರ್ಯವಾಗಲಿಲ್ಲ. ಎದೆ ಬಡಿದುಕೊಳ್ಳುತ್ತಿತ್ತು, ಬೆವರು ಬಿಡಹತ್ತಿತು.

ಕೂಗಿ ಬಾಗಿಲು ತೆಗೆಸುವ ಧೈರ್ಯವಾಗದ್ದರಿಂದ, ಅವರು ಬದಿಯ ಕಿಡಿಕಿಯ ಬಳಿ ಸಾರಿದರು. ಒಳಗೆ ದೀಪ ಉರಿಯುತ್ತಿತ್ತು. ಒಳಗಿನ ದೃಶ್ಯ ನೋಡಿ ಲೀಲಾಬಾಯಿಯವರ ಪಿತ್ತ ನೆತ್ತಿಗೇರಿತು.

––ಮುಜುಮ್‌ದಾರರು ಮಂಚದಮೇಲೆ ಒಂದು ಹೆಣ್ಣಿನ ತಲೆಹಿಡಿದು ಅವಳಿಗೆ ಕಪ್ಪಿನಲ್ಲಿ ಏನೋ ಕುಡಿಸುತ್ತಿದ್ದರು. “ಹೆಂಡತಿಯನ್ನು ತವರ್ಮನೆಗೆ ಕಳಿಸಿ ಇತ್ತ ಈ ವ್ಯವಹಾರವೇ ? ” ಎಂದು ಲೀಲಾಬಾಯಿಯವರಿಗೆ ಮೊದಲು ಸಿಟ್ಟು ಬಂತು. ತದನಂತರ ಬಂದದ್ದು ಸವತಿ ಮಾತ್ಸರ್ಯದ ಸಿಟ್ಟು. ಆದರೆ ಮಾಡಬೇಕೇನೆಂಬುದು ತಿಳಿಯಲಿಲ್ಲ. ಅಲ್ಲಿಯೇ ನಿಂತರು. ಒಳಗೆ ಸಂಭಾಷಣೆಗೆ ಮೊದಲಾಯಿತು. ಲೀಲಾಬಾಯಿ ಜಾಗ್ರತೆಯಿಂದ ಲಾಲಿಸಹತ್ತಿದರು. "ನೀವೆಷ್ಟು ನನ್ನ ಸೇವೆ ಮಾಡುತ್ತಿದ್ದೀರಿ ? "

"ಮತ್ತಾರು ಮಾಡಬೇಕು ಹೇಳು ? !”
"ಶಾಲೆಯಲ್ಲಿ ದಿನವೂ ದಣಿದು ಬರುತ್ತೀರಿ; ಮತ್ತೆ ಮನೆಯಲ್ಲಿ ನನ್ನ ಸೇವೆ ! ಅಡಿಗೆಯವಳನ್ನಾದರೂ ಇಡಿರಿ ಎಂದರೆ ಅದಕ್ಕೂ ನೀವು ಒಪ್ಪೋದಿಲ್ಲ!"
"ಈ ಮನೆಯಲ್ಲಿ ನಮ್ಮಿಬ್ಬರ ನಡುವೆ ಮತ್ತೊಂದು ಹೆಣ್ಣು ಬೇಡ ನೋಡು!"
"ಒಂದು ಮಾತು ಕೇಳಲೇ"
"ಏನು ?"
"ಕುರುಡು ಹೆಂಡತಿ ಎಂದು ನಿಮಗೆ ಎಂದಾದರೂ ನನ್ನ ಬಗ್ಗೆ ಜುಗುಪ್ಸೆ ಹುಟ್ಟುತ್ತದೆಯೇ ? ”

ಲೀಲಾಬಾಯಿಯವರ ಹೃದಯದಲ್ಲಿ ಕಾದ ಕಬ್ಬಿಣ ರಸ ಸುರುವಿದಂತಾಯಿತು, ಕಿಟಕಿಯಲ್ಲಿ ಸ್ವಲ್ಪ ನಿರೀಕ್ಷಿಸಿ ನೋಡಿದರು. ಹೌದು ಅದೇ ಕುರುಡಿ! ರೇಡಿಯೋ ಸ್ಟೇಶನ್ನಿನಲ್ಲಿ ಭೆಟ್ಟಿಯಾದವಳು ! ಅದೇ ಕುರೂಪ ಮುಖದ ಹೆಣ್ಣು, ಆದರ ಅದೇನು ? ಆ ದೃಶ್ಯ ನೋಡಿಯಂತೂ ಲೀಲಾಬಾಯಿ ಬೆರಗಾದರು.

ಮುಜುಮದಾರರು ಆ ಕುರುಡಿಯನ್ನು ಬರಸೆಳೆದು ಬಿಗಿದಪ್ಪಿ ಕೇಳಿದರು: “ ನನ್ನ ಸುಲೂ, ಇಂದೇಕೆ ಹೀಗೆ ಪ್ರಶ್ನೆ ಮಾಡುತ್ತಿ ? ”

"ನನ್ನ ಸ್ವಾಮಿ, ನನಗೆ ಹೆದರಿಕೆಯಾಯಿತು. ನನ್ನ ರೂಪ ನೋಡಿ ಜನ ನಿಂದಿಸುತ್ತಾರೆ. ಅದರ ಪರಿಣಾಮದಿಂದ––”

ಅವಳ ತಲೆಯ ಮೇಲೆ ಕೈಯಾಡಿಸುತ್ತ ಮುಜುಮ್ದಾರರು ನುಡಿದರು:

"ಹುಚ್ಚೀ, ಪ್ರೇಮ ರೂಪದ ಮೇಲೆ ಅವಲಂಬಿಸಿದೆಯೇ? ನೀನು ಕಲಿತವಳು, Whomsoever the heart loves is beautiful, ಮೇಲಾಗಿ ನೀನೇನು ಹುಟ್ಟು ಕುರೂಪಿಯೇ ? ನೀನು ಡಾಕ್ಟರ್ ಆಗಿದ್ದರೆ, ಹೆಮ್ಮೆ ನನ್ನ ಪಾಲಿಗೆ ಬರುತ್ತಿತ್ತು. ಆದರೆ ಆ ಎಕ್ಸಪೆರಿಮೆಂಟಿನಲ್ಲಿ ಮುಖದ ಮೇಲೆ ಆಸಿಡ್ ಬಿದ್ದು ನೀನು ಕುರುಡಿಯಾದರೆ, ಅದು ನಿನ್ನ ತಪ್ಪೇ ?"

"ನಾನು ಧನ್ಯೆ ! - ಏಳೇಳು ಜನ್ಮದಲ್ಲಿ ನೀವೇ ನನ್ನ ಪತಿದೇವರಾಗಿರಿ, ಎಂದು ಬೇಡಿಕೊಳ್ಳುತಿದ್ದೇನೆ; ಆದರೂ ಜನ ನಿಂದೆಗೆ."

“ ಹೌದು ನನಗೆ ಗೊತ್ತು! ಅದಕ್ಕೇ ನಾನು ಮನೆಗಾರನ್ನೂ ಕರೆತರುವುದಿಲ್ಲ. ಇಂದೆಯೆ ನನ್ನ ಶಾಲೆಯಲ್ಲಿಯ ಒಬ್ಬ ಸಹೋದ್ಯೋಗಿನಿ, ತನ್ನ ಜತೆ ಯಲ್ಲಿ ರೇಡಿಯೋ ಕೇಂದ್ರಕ್ಕೆ ಬರಹೇಳಿದ್ದಳು, ಆದರೆ ನಿನ್ನ ಹಾಡೂ ಇದ್ದುದರಿಂದ, ಅವಳಿಗೆ 'ಹೆಂಡತಿಯನ್ನ ತವರ್ಮನೆಗೆ ಕಳಿಸುವುದಿದೆ' ಎಂದು ಸುಳ್ಳಾಡಿ ತಪ್ಪಿಸಿಕೊಂಡೆ. "ಸಮಾಜದ ನಿಂದೆ ನನಗೆ ಬೇಡವಾಗಿತ್ತು. ಕೇವಲ ನೀನೇ ನನ್ನ ಪ್ರಾಣ ” ಎಂದು ಮತ್ತೆ ಬಿಗಿದಪ್ಪಿದರು.

ಹೊರಗೆ ನಿಂತು ನೋಡುತ್ತಿದ್ದ ಲೀಲಾಬಾಯಿಯವರ ಗಲ್ಲಗಳು ಒದ್ದೆಯಾಗಿದ್ದುವು. ಕೈಯಲ್ಲಿಯ ಕರವಸ್ತ್ರವೂ ಒದ್ದೆಯಾಗಿತ್ತು. ಕಣ್ಣಲ್ಲಿ ನೀರು ಹರಿಯುತ್ತಲೇ ಇತ್ತು. ಹೊಸ ನೀರು ಹಳೆಯ ನೀರನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಅಲ್ಲಿಂದ ಸರಿದು ರೋಡಿಗೆ ಬಂದರು. ಚೌಕಿಗೆ ಬಂದಾಗ ಮನೆತನಕ ನಡೆದುಕೊಂಡು ಹೋಗುವಷ್ಟು ಅವರಲ್ಲಿ ತಾಳ್ಮೆ ಉಳಿದಿರಲಿಲ್ಲ. ಟಾಂಗಾ ಗೊತ್ತು ಮಾಡಿದರು.


ಲೀಲಾಬಾಯಿ ಮನೆಗೆ ಬಂದಾಗ, ಕೆಲಸಗಿತ್ತಿ ಬಾಗಿಲನ್ನು ಮುಂದೆ ಮಾಡಿ ತನ್ನ ಮನೆಗೆ ಹೋಗಿದ್ದಳು. ಲೀಲಾಬಾಯಿ ನೇರವಾಗಿ ಗಂಡನ ಕೋಣೆಗೆ ಹೋದರು. ದೇಶಪಾಂಡೆಯವರು ಮಂಚದ ಮೇಲೆ ಮಲಗಿದ್ದರು. ಸಮೀಪದಲ್ಲಿಯೇ ದೀಪ ಉರಿಯುತ್ತಿತ್ತು. ಆ ಬೆಳಕಿನಲ್ಲಿ ಗಂಡನ ದೀನಮುದ್ರೆಯನ್ನೊಮ್ಮೆ ನೋಡಿದರು. ಒಳಗಿನ ಅಂತಃಕರಣ ಉಕ್ಕಿಬಂತು. ಹೋದವರೇ ಗಂಡನ ಪಾದದಡಿಯಲ್ಲಿ ಬಿದ್ದರು. ಅಳು ಜ್ವಾಲಾಮುಖಿಯಂತೆ ಸ್ಫೋಟವಾಯಿತು. ದೇಶಪಾಂಡೆಯವರು ಒಮ್ಮೆಲೆ ಎಚ್ಚೆತ್ತು ಎದ್ದು ಕುಳಿತರು. ತಮ್ಮ ಬದಿಯಲ್ಲಿ ಹೆಂಡತಿ ಕುಳಿತು ಅಳುತ್ತಿರುವುದನ್ನು ನೋಡಿದರು, ಆಶ್ಚರ್ಯವಾಯಿತು. ಲೀಲಾಬಾಯಿಯವರು ಬಿಕ್ಕುತ್ತ "ನನ್ನನ್ನು ಕ್ಷಮಿಸಿರಿ!” ಎಂದು ಉಸುರಿದರು.

ಒಂದು ಕೈಯಿಂದ ಅವಳ ತಲೆಗೂದಲನ್ನು ನೇವರಿಸುತ್ತಾ “ ಕ್ಷಮೆ ಯಾಕೆ ? ” ಎಂದು ಕೇಳಿದರು. ಎಷ್ಟೋ ವರುಷಗಳ ನಂತರದ ಸ್ಪರ್ಶ, ಇಬ್ಬರಲ್ಲಿಯೂ ಹೊಸ ಸುಖದ ಕಲ್ಪನೆ ತಂದುಕೊಡುತ್ತಿತ್ತು. ಲೀಲಾಬಾಯಿ

ಎದ್ದು ಕುಳಿತು ಮೆಲ್ಲಗೆ ಎಂದಳು:

“ನನ್ನ ಜೀವನಕ್ಕೆ ಜ್ವರ ಬಂದಿತ್ತು"
"ಜ್ವರ ಬಂದಾಗ ಜನ ಔಷಧಿ ತೆಗೆದುಕೊಳ್ಳುತ್ತಾರೆ !"
"ಹೌದು ನನಗೂ ಔಷಧಿ ಸಿಕ್ಕಿತು. ತುಂಬಾ ಕಹಿ ಇತ್ತು ಜ್ವರವಾಸಿಯಾಯಿತು ! ”
“ಔಷಧಿ ಕಹಿಯಾಗಿಯೇ ಇರುವುದು ! ಮೇಲೆ ಸಕ್ಕರೆ ತಿನ್ನುತ್ತಾರೆ !”
"ನನಗೆ ಸಕ್ಕರೆ ಬೇಡ !”
"ಮತ್ತೇನು ? "
"ಬೆಲ್ಲ..."

ಉರಿಯುತ್ತಿದ್ದ ದೀಪವನ್ನು ಲೀಲಾಬಾಯಿ ಸಣ್ಣಗೆ ಮಾಡಿದರು. ಅಲ್ಲಿ ಪಸರಿಸಿದ ನಸುಗತ್ತಲೆ, ಅವರ ಸಂಸಾರಕ್ಕೆ ಹೊಸ ಬೆಳಕು ಕೊಟ್ಟಿತು.