ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ದಿಗಂಬರದ ದಿವ್ಯಾಂಬರೆ
೧೪೧


``ತಾವು ಹಾಗೆ ಹೇಳಬಾರದು, ಗುರುದೇವ. ನಿಮ್ಮ ಪಾದದ ಧೂಳಿಯಾಗಿ ನಾನು ಸಾಧನೆಯಲ್ಲಿ ಯಶಸ್ಸನ್ನು ಪಡೆಯುವಂತೆ ಹರಸಿರಿ. ನನ್ನ ಪತಿಯನ್ನು ಕೂಡಿಕೊಳ್ಳುವಂತೆ ಆಶೀರ್ವದಿಸಿರಿ.

ಈ ವೇಳೆಗೆ ಲಿಂಗಮ್ಮ ಓಡಿಬಂದಳು. ಹಿಂದೆಯೇ ಓಂಕಾರ ಬರುತ್ತಿದ್ದ. ಅವರ ಹಿಂದೆ ಶಂಕರಿ, ಅವಳ ತಾಯಿ, ದಾಕ್ಷಾಯಿಣಿ, ಕಾತ್ಯಾಯಿನಿ ಇವರು ಬರುತ್ತಿದ್ದರು. ಎಲ್ಲರಿಗಿಂತಲೂ ಕೊನೆಯಲ್ಲಿ ಅಡಗಿಕೊಂಡು ಎಂಬಂತೆ ಬರುತ್ತಿದ್ದಳು ರಸವಂತಿ.

ಆತುರದಿಂದ ಬಂದು ಉದ್ವೇಗದಿಂದ ಏದುತ್ತ ಲಿಂಗಮ್ಮ, ಮಹಾದೇವಿಯ ಬಳಿಗೆ ಹೋಗಿ ನಿಂತು, ಅಡಿಯಿಂದ ಮುಡಿಯವರೆಗೂ ನೋಡುತ್ತ ಹೇಳಿದಳು: ``ಎಂತಹ ಕೆಲಸ ಮಾಡಿಬಿಟ್ಟೆ ಮಗಳೆ.... ಸದ್ಯ ಈಗ ಇಷ್ಟಾದರೂ ಬಟ್ಟೆ ಹಾಕಿಕೊಂಡಿದ್ದೀಯಲ್ಲ... ಹೀಗೇಕೆ ಮಾಡಿದೆ, ಮಗಳೆ ?

``ನಾನೇನು ಮಾಡಿದೆನವ್ವಾ ?

``ಇನ್ನೂ ಕೇಳುತ್ತೀಯ ? ಹೆಂಗಸಿಗೆ ಇರುವುದೇ ಮಾನ; ಅದನ್ನು ಬಿಟ್ಟು.... ಮಧ್ಯದಲ್ಲಿಯೇ ಗುರುಗಳು ಆ ಮಾತನ್ನು ತಡೆದರು. ಗಂಭೀರ ಧ್ವನಿಯಿಂದ ಹೇಳಿದರು : ``ಲಿಂಗಮ್ಮ, ಮಹಾದೇವಿಯ ತಾಯಿ ನೀನು. ಅದಕ್ಕನುಗುಣವಾದ ರೀತಿಯಲ್ಲಿ ಮಾತನಾಡಬೇಕು. ನಿನ್ನ ಮಗಳು ಮಾನವನ್ನು ಬಿಟ್ಟಿಲ್ಲ ; ಹೆಣ್ಣುಕುಲಕ್ಕೆ ಮಾನವನ್ನು ತಂದಿದ್ದಾಳೆ, ತನ್ನ ವೈರಾಗ್ಯದ ಮೂಲಕ. ಹೆಣ್ಣು ಬೊಂಬೆಯಲ್ಲವೆಂಬುದನ್ನು ಪ್ರಪಂಚಕ್ಕೆ ಸಾರಿದ್ದಾಳೆ. ವಿಷಯವೇನೆಂಬುದನ್ನು ಅರಿತು ಮಾತನಾಡಬೇಕು.

ಗುರುಗಳ ಕಠೋರವಾಣಿಯಿಂದ ಲಿಂಗಮ್ಮ ಬೆಚ್ಚಿದಳು. ಓಂಕಾರ ಮಾತನ್ನು ಆಡದೆ ಮೌನವಾಗಿ ನಿಂತಿದ್ದ. ಮಹಾದೇವಿ ಮುಂದೆ ಬಂದು ಇಬ್ಬರಿಗೂ ನಮಸ್ಕರಿಸುತ್ತಾ ``ಅಪ್ಪಾ, ನಾನು ತಪ್ಪು ಮಾಡಿದ್ದರೆ ಕ್ಷಮಿಸು. ಅವ್ವಾ, ನನ್ನ ಅಪರಾಧವನ್ನು ಮರೆತುಬಿಡು. ಇನ್ನು ನನಗೆ ಹೋಗಲು ಅನುಮತಿಯನ್ನು ಕೊಡಿ.

ತಂದೆತಾಯಿಗಳಿಬ್ಬರೂ ಬೆಚ್ಚಿದರು.

``ಇದೇನು ಮಗಳೇ, ಹೀಗೆ ಹೇಳುತ್ತಿ ? ಎಲ್ಲಿಗೆ ಹೋಗುತ್ತಿ ? ಹುಚ್ಚು ಗಿಚ್ಚು ಹಿಡಿದಿಲ್ಲವಷ್ಟೆ? ಎಂದು ಕೇಳಿದಳು ಲಿಂಗಮ್ಮ.