ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೪
ಕದಳಿಯ ಕರ್ಪೂರ

ಸಾವಿಲ್ಲದ, ಕೇಡಿಲ್ಲದ, ರೂಹಿಲ್ಲದ ಚೆಲುವಂಗಾನೊಲಿದೆನವ್ವ |
ಎಡೆಯಿಲ್ಲದ ಕಡೆಯಿಲ್ಲದ, ತೆರಹಿಲ್ಲದ, ಕುರುಹಿಲ್ಲದ
ಚೆಲುವಂಗಾನೊಲಿದೆ ಎಲೆ ಅವ್ವ; ನೀನು ಕೇಳಾ ತಾಯೇ!
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು
ಕುಲ ಸೀಮೆಯಿಲ್ಲದ ನಿಸ್ಸೀಮ ಚೆಲುವಂಗೆ ನಾನೊಲಿದೆ,
ಇದು ಕಾರಣ ಚೆನ್ನ ಮಲ್ಲಿಕಾರ್ಜುನ ಚೆಲುವ ಗಂಡನೆನಗೆ;
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು.

ಮತ್ತೆ ಮತ್ತೆ ಈ ವಚನವನ್ನು ಹೇಳಿಕೊಂಡಳು. ಓಲೆಗರಿಯಲ್ಲಿ ಇದನ್ನು ಬರೆದಳು. ಮತ್ತೆಮತ್ತೆ ಓದಿದಳು. ತನ್ನ ಪತಿಯ ಸಾಕ್ಷಾತ್ ಸ್ವರೂಪವೇ ಅಲ್ಲಿ ಒಡಮೂಡಿದಂತೆ ತೋರಿತು. 'ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು' ಎಂಬಮಾತು ಆ ಸ್ಥಿತಿಯಲ್ಲಿಯೂ ಅವಳಿಗೆ ಸ್ವಲ್ಪ ನಗುವನ್ನು ತಂದಿತು. ತನ್ನ ಹೃದಯದ ಭಾವನೆಗಳನ್ನು ಈ ಮಾತು ಚೆನ್ನಾಗಿ ಅಭಿವ್ಯಕ್ತಗೊಳಿಸುತ್ತದೆಯೆಂಬ ತೃಪ್ತಿಯೂ ಮೂಡಿತು.

'ಹೌದು, ಈ ಸಾವ ಕೆಡುವ ಗಂಡರನ್ನೊಯ್ದು ಒಲೆಯೊಳಕ್ಕೆ ಇಕ್ಕಬೇಕು. ನನ್ನ ಅಂತರಂಗದಲ್ಲಿಯೇ ಇರುವ ಗಂಡ, ನನ್ನ ಮನವನ್ನು ಮಾರುಗೊಂಡಿದ್ದಾನೆ. ನನ್ನ ತನುವನ್ನು ಸೂರೆಗೊಂಡಿದ್ದಾನೆ. ಎನ್ನ ಸುಖವನೊಪ್ಪುಗೊಂಡಿದ್ದಾನೆ. ಎನ್ನಿರವನಿಂಬುಗೊಂಡಿದ್ದಾನೆ...' ಎಂದು ಮುಂತಾಗಿ ಆಲೋಚಿಸುತ್ತಿದ್ದಂತೆಯೇ ಮತ್ತೆ ಓಲೆಗರಿಯ ಮೇಲೆ ಕೈ ಓಡಿತು. ವಚನ ಸಿದ್ಧವಾಗಿತ್ತು.

ಎನ್ನ ಮನ ಮಾರುಗೊಂಡನವ್ವ!
ಎನ್ನ ತನುವ ಸೂರೆಗೊಂಡನವ್ವ!
ಎನ್ನ ಸುಖವನೊಪ್ಪುಗೊಂಡನವ್ವ!
ಎನ್ನಿರವನಿಂಬುಗೊಂಡನವ್ವ!
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು!

'ಚೆನ್ನಮಲ್ಲಿಕಾರ್ಜುನನನ್ನು ಒಲಿದ ದೇಹ ಪರಗಂಡರನ್ನು ಸ್ಮರಿಸಿಕೊಳ್ಳಲಾರದು. ಅವರನ್ನು ಸೋಂಕಲಾರದು. ಅವರ ಬಳಿ ಸುಳಿಯಲಾರದು. ನನ್ನ ಪಾಲಿಗೆ ಚೆನ್ನಮಲ್ಲಿಕಾರ್ಜುನನಲ್ಲದವರ ಎದೆಯಲ್ಲಿ ಮುಳ್ಳುಂಟೆಂದು ಭಾವಿಸುತ್ತೇನೆ:

ಎರದ ಮುಳ್ಳಿನಂತೆ ಪರಗಂಡರೆನಗವ್ವ!
ಸೋಂಕಲಮ್ಮೆ ಸುಳಿಯಲಮ್ಮೆ;