ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೯೮
ಕದಳಿಯ ಕರ್ಪೂರ


ಅರಮನೆಗೆ ಹೋಗಿ ಏನು ಮಾಡುವುದು, ಹೇಗೆ ವರ್ತಿಸುವುದು ?'

`ಈ ಸಂಸಾರ ಬೇಡಬೇಡವೆಂದರೂ ಇದು ಮತ್ತೆ ಮತ್ತೆ ನನ್ನನ್ನು ಬೆನ್ನಟ್ಟಿ ಬಂದು ಕಾಡುತ್ತಿದೆ. ನನ್ನ ಒಡೆಯ ಚೆನ್ನಮಲ್ಲಿಕಾರ್ಜುನನನ್ನು ದೂರದೂರ ಮಾಡುತ್ತಿದೆ :

ಸಂಸಾರವೆಂಬ ಹಗೆಯಯ್ಯ ತಂದೆ !
ಎನ್ನ ವಂಶ ವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ !
ಎನ್ನುವನರಸಿಯಸಿ ಹಿಡಿದು ಕೊಲ್ಲುತ್ತಿದೆಯಯ್ಯ !
ನಿಮ್ಮ ಮರೆವೊಕ್ಕೆ ಕಾಯಯ್ಯ !
ಎನ್ನಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಾ.

`ನನ್ನನ್ನು ಸಂಪೂರ್ಣವಾಗಿ ನಿನಗೆ ಒಪ್ಪಿಸಿಕೊಂಡಿದ್ದೇನೆ. ನನ್ನನ್ನು ಕೊಲ್ಲು ಅಥವಾ ಕಾಯಿ, ಅದು ನಿನಗೇ ಸೇರಿದ್ದು. ಬಸವಣ್ಣನವರು ಹೇಳುವಂತೆ ನೀನೊಲಿದರೆ ಕೊರಡು ಕೊನರುತ್ತದೆ. ನೀನೊಲಿದರೆ ಬರಡು ಹಯನಾಗುತ್ತದೆ. ನೀನೊಲಿದರೆ ವಿಷವೆಲ್ಲ ಅಮೃತತ್ವದ ಕಡೆಗೆ ಕೊಂಡೊಯ್ಯುವ ಹೊಣೆ ನನ್ನ ಪತಿಯಾದ ನಿನ್ನದು. ಅದನ್ನು ನಂಬಿ ಲೋಕ ವಿರುದ್ಧವಾದ ಈ ವರ್ತನೆಯಲ್ಲಿ ತೊಡಗಿದ್ದೇನೆ. ಇದರಿಂದ ನನ್ನನ್ನು ಪಾರುಮಾಡು, ದೇವ' ಎಂದು ತನ್ನ ಪತಿಗೆ ಸಂಪೂರ್ಣವಾಗಿ ಶರಣಾಗತಳಾದಳು ಶರಣಸತಿ ಮಹಾದೇವಿ.

ತಂದೆತಾಯಿಗಳಿಂದ ಬೀಳ್ಕೊಂಡು ಮೇನೆಯಲ್ಲಿ ಕುಳಿತು ಕೊಳ್ಳುವಾಗಲಂತೂ, ಅದುವರೆಗೆ ತಡೆದಿದ್ದ ದುಃಖ ಉಕ್ಕಿಬಂತು. ಓಂಕಾರ ತನ್ನ ಹೃದಯದ ತಳಮಳವನ್ನು ಅಡಗಿಸಿಕೊಂಡು ಗಂಭೀರನಾಗಿ ನಿಂತಿದ್ದ. ಆದರೆ ಲಿಂಗಮ್ಮನ ದುಃಖ ತಡೆಯಲಾರದುದಾಗಿತ್ತು. ಮಹಾದೇವಿ ತನ್ನ ದುಃಖವನ್ನು ಅಡಗಿಸಿಕೊಂಡು ತಾಯಿಯನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಳು.

``ಸಮಾಧಾನ ಮಾಡಿಕೋ ಅವ್ವಾ, ನಾನೆಲ್ಲಿ ಹೋಗುತ್ತೇನೆ. ಒಂದಲ್ಲ ಒಂದು ದಿನ ನನ್ನನ್ನು ಹೀಗೆ ಗಂಡನ ಮನೆಗೆ ಕಳುಹಿಸಿಕೊಡಲೇಬೇಕಾಗಿತ್ತು ತಾನೇ. ಹಾಗೇ ಎಂದು ಭಾವಿಸಿ ಸಮಾಧಾನ ಮಾಡಿಕೊಳ್ಳಿ.

``ಹಾಗಲ್ಲ ಮಗಳೇ... ನೀನು ಗಂಡನ ಮನೆಗೆ ಹೋಗುತ್ತಿದ್ದರೆ, ಆ ದುಃಖದಲ್ಲಿ ಒಂದು ಸಮಾಧಾನವಾದರೂ ಇರುತ್ತಿತ್ತು. ಆದರೆ... ಆ ಅರಮನೆಯಲ್ಲಿ ನಿನ್ನ ಗತಿಯೇನು ? ನೋಡಿದ ಜನರೇನೆಂದಾರು ? ಇದು ಲೋಕವಿರುದ್ಧವಾದ ನಡೆಯಲ್ಲವೇ? ಲಿಂಗಮ್ಮನ ದುಃಖದಲ್ಲಿ ಮಗಳ ಗೌರವದ ರಕ್ಷಣೆಯ ವೇದನೆಯಿತ್ತು.