ನಿನಗೆ ನನಗೆ ಬೇರೊಂದು ಠಾವುಂಟೇ?
ನೀನು ಕುರಣಿಯೆಂಬುದ ನಾನು ಬಲ್ಲೆನು
ನೀನಿರಿಸಿದ ಗತಿಯೊಳಗೆ ಇಪ್ಪಳಾನಯ್ಯ
ನೀನೇ ಬಲ್ಲೆ ಚೆನ್ನಮಲ್ಲಿಕಾರ್ಜುನಾ.
ನಟ್ಟದೃಷ್ಟಿಯಿಂದ ನೋಡುತ್ತಿದ್ದ ಇಷ್ಟಲಿಂಗದ ರೂಪಿನಲ್ಲಿ ಮಿಂಚು ಹೊಳೆದು ಅದು ಕಣ್ಣಿನಲ್ಲಿ ಬಂದು ಅಡಗಿದಂತಾಯಿತು. ಮತ್ತೆ ನೋಡಿದಳು: ತನ್ನ ಚೈತನ್ಯದ ಬೆಳಗೆಲ್ಲವೂ ಸಿಡಿದು ಹೋಗಿ ಕರಸ್ಥಲದ ಕುರುಹಿನಲ್ಲಿ ಲೀನವಾದಂತಾಯಿತು. ಮಲ್ಲಿಕಾರ್ಜುನನೇ ಅದರಿಂದ ಮೇಲೆದ್ದು ಬಂದು ತನ್ನ ಚೈತನ್ಯದ ಕೈಯನ್ನು ಚಾಚಿ, ಅವಳನ್ನು ಸ್ವೀಕರಿಸಿದಂತಾಯಿತು:
'ಇದೇ ನನ್ನ ನಿಜವಾದ ಮದುವೆ. ದೀಕ್ಷೆಯೆಂಬ ಮದುವೆಯಲ್ಲಿ ಗುರು ನನ್ನನ್ನು ಧಾರೆಯೆರೆದು ಕೊಟ್ಟಿದ್ದಾನೆ ಲಿಂಗವೆಂಬ ಪತಿಗೆ. ಹೀಗಿರುವಾಗ ಇನ್ನೆಂತಹ ಮದುವೆ; ಹೌದು ಹಾಡಿದಳು:
ಗುರುವೆ ತೆತ್ತಿಗನಾದ, ಲಿಂಗವೇ ಮದುವಣಿಗನಾದ;
ಆನು ಮದುವಣಗಿತ್ತಿಯಾದೆ....
ವಚನ ಅಷ್ಟಕ್ಕೇ ನಿಂತಿತು. ಆ ಮಾತಿನ ಆನಂದದ ಅನುಭವದಲ್ಲಿ ಮನಸ್ಸು ಪರವಶವಾಯಿತು. ತನ್ನ ಮುಂದಿದ್ದ ಸಮಸ್ಯೆಯೆಲ್ಲಾ ಕರಗಿಹೋದಂತಾಗಿ, ತಾನು ವಿಶ್ವಚೈತನ್ಯದ ಮಹಾವಧುವೆಂಬ ಭಾವನೆಯಿಂದ ಪುಳಕಿತಗೊಂಡಳು.
ಪೂಜೆಯ ನಂತರ ಇದುವರೆಗಿನ ತನ್ನ ವಚನಗಳನ್ನೆಲ್ಲಾ ನೋಡಿದಳು. ಅವುಗಳನ್ನು ಗುರುಗಳಿಗೆ ತೋರಿಸಬೇಕೆಂಬ ಕುತೂಹಲ ಆಕೆಗೆ. ಮಧ್ಯಾಹ್ನ ಕಳೆದು ಹೊತ್ತು ಇಳಿಮುಖವಾಗುವುದನ್ನೇ ನೋಡುತ್ತಿದ್ದಳು. ಲಿಂಗಮ್ಮನ ಒಪ್ಪಿಗೆಯನ್ನು ಪಡೆದು ಹೊರಟಳು ಮಠದ ಕಡೆಗೆ.
ಮನೆಯನ್ನು ಬಿಟ್ಟು ನಾಲ್ಕಾರು ಹೆಜ್ಜೆ ನಡೆಯುವಷ್ಟರಲ್ಲಿ ದೂರದಲ್ಲಿದ್ದ ಸಿಹಿನೀರಿನ ಬಾವಿಯ ಕಟ್ಟೆಯ ಬಳಿ ನಾಲ್ಕಾರು ಹೆಂಗಸರು ನಿಂತು ಮಾತನಾಡುತ್ತಿರುವುದು ಕಣ್ಣಿಗೆ ಬಿದ್ದಿತು. ಅವರಲ್ಲಿ ಒಬ್ಬಳು ತನ್ನತ್ತ ಕೈ ತೋರಿಸಿ ಏನನ್ನೋ ಇನ್ನೊಬ್ಬಳಿಗೆ ಹೇಳುತ್ತಿರುವಂತೆ ತೋರಿತು.
ಊರಿನ ಪ್ರಮುಖವಾದ ಸಿಹಿನೀರಿನ ಬಾವಿಗಳಲ್ಲಿ ಅದೊಂದು. ಆ ಬಾವಿಯ ಬಳಿಯಲ್ಲಿ ಹೆಂಗಸರ ಕಾಡುಹರಟೆ ನಡೆಯುತ್ತಿದ್ದುದೇನೂ ಆಕೆಗೆ ಹೊಸದಲ್ಲ. ವ್ಯರ್ಥವಾಗಿ ಇನ್ನೊಬ್ಬರ ನಿಂದೆಯಲ್ಲಿ ತೊಡಗಿರುತ್ತಿದ್ದ ಆ ಹೆಂಗಸರ ಗುಂಪನ್ನು ಕಂಡು ಮಹಾದೇವಿ ಎಷ್ಟೋ ಸಾರಿ ಮರುಗಿದ್ದಳು. ಮುಖ್ಯ ರಸ್ತೆಯ