ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಕದಳಿಯ ಕರ್ಪೂರ


ಭವಿ ಎಂಬುದ ತೊಡೆದು, ಭಕ್ತೆಯೆಂದೆನಿಸಿದೆ ಗುರುವೆ,
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕ್ಕೆ ಕೊಟ್ಟ
ಗುರುವೇ ಶರಣು, ಶರಣು.</<poem>

ಆನಂದ ಉಕ್ಕಿಹರಿಯಿತು. ಅದನ್ನು ಮತ್ತೆಮತ್ತೆ ಹೇಳಿಕೊಂಡಳು. ಪೂಜೆಯ ನಂತರ ಅದನ್ನು ಓಲೆಗರಿಯ ಮೇಲೆ ಬರೆದಿಟ್ಟಳು.

ಸಂಜೆ ಮಠದಲ್ಲಿ ಅದನ್ನು ಗುರುಗಳ ಮುಂದೆ ಹೇಳಿದಳು. ಗುರುಲಿಂಗರು ಸಂತೋಷಪರವಶರಾದರು. ತಮ್ಮ ನಿರೀಕ್ಷೆ ಸಫಲವಾಗುತ್ತದೆಂಬ ನಂಬಿಕೆ ದೃಢವಾಯಿತು ಹೇಳಿದರು:

“ನಿಜ, ಮಗಳೇ, ನಾನು ಅಂದು ಮಾಡಿದ ದೀಕ್ಷೆಯ ಅರ್ಥವನ್ನು ಸುಂದರವಾಗಿ ಹೊರಹೊಮ್ಮಿಸಿದ್ದೀಯ.... ಅಲ್ಲದೆ ನಿನ್ನ ವಚನಕ್ಕೆ ಆ ಅಂಕಿತ ತುಂಬಾ ಚೆನ್ನಾಗಿ ಒಪ್ಪುತ್ತದೆ.”

“ನೀವೇ ಅದನ್ನು ಸೂಚಿಸಿದ್ದಿರಿ, ಗುರುಗಳೇ, ಚೆನ್ನಮಲ್ಲಿಕಾರ್ಜುನನ ಚೆನ್ನಸತಿಯಾಗೆಂದು. ಆ ಮಾತು ನನ್ನ ಮನಸ್ಸಿನಲ್ಲಿ ಉಳಿದಿತ್ತು. ಇಂದು ಅದು ಈ ವಚನದ ಅಂಕಿತವಾಗಿ ಪರಿಣಮಿಸಿತು.”

“ಈ ಅಂಕಿತದಿಂದ ನೂರಾರು ವಚನಗಳನ್ನು ಬರೆದು ನಿನ್ನ ಭಕ್ತಿ ಹೃದಯದ ಅನುಭವವನ್ನು ಕನ್ನಡ ಮಾತುಗಳಲ್ಲಿ ಒಡಮೂಡಿಸು, ತಾಯಿ.”

“ತಮ್ಮ ಆಶೀರ್ವಾದದಿಂದ ಆ ನಮ್ರ ಪ್ರಯತ್ನವನ್ನು ಮಾಡುತ್ತೇನೆ, ಗುರುಗಳೇ.” ವಿನೀತಳಾಗಿ ಹೇಳಿದಳು.

ಆಗಲೇ ಸಂಧ್ಯಾಕಾಲ ಮೀರಿ ಕತ್ತಲು ಆವರಿಸತೊಡಗಿತ್ತು. ಮಠದ ಆವರಣದಲ್ಲಿರುವ ತಪೋವನದ ಶಿಲಾಪೀಠದ ಮೇಲೆ ಕುಳಿತಿದ್ದರು ಗುರುಲಿಂಗರು ಮತ್ತು ಮಹಾದೇವಿ. ಅನೇಕ ದಿನಗಳಿಂದ ಹಿಡಿದಿದ್ದ ಮಳೆ ಇಂದು ಬಿಡುವು ಕೊಟ್ಟು ಆಕಾಶ ತಿಳಿಯಾಗಿತ್ತು. ತೋಟದ ಮರಗಳ ಮರೆಯಲ್ಲಿ ಸೂರ್ಯ ಮರೆಯಾಗಿ, ಪಡುವಣ ದಿಗಂತದ ಕೆಂಪು ಬಣ್ಣವು ಆಕಾಶದಲ್ಲಿ ಚದುರಿದ್ದ ಮೋಡಗಳಿಗೆಲ್ಲಾ ತನ್ನ ಕ್ರಾಂತಿಯನ್ನಿತ್ತು ಮತ್ತೆ ಅದನ್ನು ಹಿಂದಕ್ಕೆ ಪಡೆಯುತ್ತಿತ್ತು. ಕ್ರಮೇಣ ಕತ್ತಲೆ ಆಕ್ರಮಿಸಿಕೊಳ್ಳುತ್ತಿತ್ತು.

ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ತಮ್ಮ ಮನೆಗೆ ಹಿಂದಿರುಗುತ್ತಿದ್ದುವು. ಭೋರೆಂದು ಬೀಸುವ ಆಷಾಢದ ಶೀತಲವಾದ ಗಾಳಿ ಇಂದು ಮಂದಮಾರುತವಾಗಿತ್ತು. ಮಹಾದೇವಿಯ ಮನಸ್ಸಿನಂತೆಯೇ ಪ್ರಕೃತಿಯೂ ಪ್ರಸನ್ನವಾಗಿ ನಗುತ್ತಿತ್ತು.